Daily Archives: November 30, 2012

ಪ್ರಳಯ ಮತ್ತು ಟಿವಿ ಚಾನಲ್‌ಗಳ ಮಹಾದ್ರೋಹ

– ರಮೇಶ್ ಕುಣಿಗಲ್

ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಬಾಲಕಿಯೊಂದಿಗೆ ಇತ್ತೀಚೆಗೆ ಮಾತನಾಡುತ್ತಿದ್ದೆ. “ನೀನು ಮುಂದೆ ಏನು ಓದ್ತಿಯ? ನಿಂಗೆ ಏನು ಆಗಬೇಕು ಅಂತ ಆಸೆ?” ಎಂದು ಕೇಳಿದೆ. ಬಾಲಕಿ, “ನನಗೆ ಏನೂ ಆಸೆ ಇಲ್ಲ. ನಾನು ಏನೂ ಆಗೊಲ್ಲ” ಎಂದಳು. ಯಾಕಮ್ಮ ಎಂದರೆ, “ಡಿಸೆಂಬರ್‌ನಲ್ಲಿ ಪ್ರಳಯ ಆಗುತ್ತಲ್ಲ, ಆಮೇಲೆ ನಾವೆಲ್ಲಿ ಇರ್ತೀವಿ?” – ಉತ್ತರಿಸಿದಳು. ಗಾಬರಿಯಾಯಿತು.

ಟಿವಿ ಚಾನೆಲ್‌ಗಳು ಪ್ರಳಯದ ಭೀತಿ ಸೃಷ್ಟಿಸಿರುವ ಪರಿಣಾಮ ಇದು. ಟಿಆರ್‌ಪಿಗಾಗಿ ಪ್ರಳಯದ ಕೌಂಟ್‌ಡೌನ್ ಚಾನೆಲ್‌ಗಳಲ್ಲಿ ಆರಂಭವಾಗಿದೆ. ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ, ಅನೇಕ ರೋಗಿಗಳು ತಮ್ಮ ಆಪರೇಶನ್ ದಿನಾಂಕವನ್ನು ಮುಂದೂಡಿದ್ದಾರೆ. ಪ್ರಳಯ ಸಂಭವಿಸುವುದೇ ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾದರೂ ಏಕೆ ಎನ್ನುವುದು ಅವರ ವಾದ. ಒಂದು ಪಕ್ಷ ನಿಗದಿತ ದಿನದಂದು ಪ್ರಳಯ ನಡೆಯದೆ ಬದುಕುಳಿದರೆ ಚಿಕಿತ್ಸೆ ಮಾಡಿಸಿಕೊಂಡರಾಯಿತು – ಅವರ ಲೆಕ್ಕಾಚಾರ.

ಯಾವುದು ಸಾಧ್ಯ ಅಲ್ಲವೋ, ಯಾವುದು ಅಸತ್ಯವೋ.. ಅಂತಹವುಗಳನ್ನು ನಂಬಿಸುವುದು ಈ ಕಾಲದಲ್ಲಿ ಬಹು ಸಲೀಸು. ಪಂಡಿತ ಎಂದು ಕರೆಸಿಕೊಳ್ಳುವ ಒಬ್ಬನನ್ನು ತಂದು ಕೂರಿಸಿ ಅವನಿಂದ ಎಲ್ಲಾ ಸುಳ್ಳುಗಳನ್ನು, ಆಧಾರ ರಹಿತ ಮಾಹಿತಿಯನ್ನು ಬಿತ್ತರಿಸಿದರೆ ಸಾಕು, ಜನ ಬೇಸ್ತು ಬೀಳುತ್ತಾರೆ ಮತ್ತು ನಂಬುತ್ತಾರೆ.

ಇದೇ ರೀತಿ 1999 ರ ಅಂತ್ಯದಲ್ಲೂ ಪ್ರಳಯ ಆಗುತ್ತೆ ಅಂತ ನರೇಂದ್ರ ಎಂಬ ಪ್ರಳಯಾಂತಕ ಪುಸ್ತಕ ಬರೆದು ಪ್ರಚಾರ ಗಿಟ್ಟಿಸಿದ್ದರು. ‘ತರಂಗ’ ಎಂಬ ವಾರ ಪತ್ರಿಕೆ ಪ್ರಳಯದ ಬಗ್ಗೆ ವಿಶೇಷ ಸಂಚಿಕೆಯನ್ನು ಹೊರತಂದು ಲಾಭ ಮಾಡಿಕೊಂಡಿತ್ತು. ಅದರ ಪ್ರತಿಗಳು ನಿಗದಿತ ದರಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚಿನ ರೇಟಿಗೆ ಮಾರಾಟವಾಗಿದ್ದವು. ಆದರೆ ಪ್ರಳಯ ಆಯಿತೆ? ಊಹ್ಞುಂ. ಲಾಭ ಆಯಿತು – ’ತರಂಗ’ದ ಮಾಲೀಕರಿಗೆ.

ಸಾವಿನ ಬಗ್ಗೆ ಆತಂಕ ಇಟ್ಟುಕೊಂಡಿರುವ ಜನರಿಗೆ ಇಂತಹ ಸಂಗತಿಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ಲಾಭವನ್ನಾಗಿ ಪರಿವರ್ತಿಸುವ ಉದ್ದೇಶ ಈ ಚಾನೆಲ್‌ಗಳದ್ದು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕಾದ ಇವರು ಹೀಗೆ ಅಜ್ಞಾನದ ಕೂಪಕ್ಕೆ‍ ತಳ್ಳುತ್ತಿದ್ದಾರೆ.

ಈಗಷ್ಟೆ ಶಾಲೆಗೆ ಹೋಗುವ ಮಕ್ಕಳಲ್ಲೂ ಪ್ರಳಯದ ಭೀತಿ.ಇಂತಹ ಸುದ್ದಿಗಳ ಪರಿಣಾಮ ಏನು ಎನ್ನುವುದರ ಪ್ರಜ್ಞೆ ಕಿಂಚಿತ್ತೂ ಚಾನೆಲ್‌ನವರಿಗೆ ಇದ್ದಂತಿಲ್ಲ. ಸರ್ಜರಿ ಮುಂದೂಡಿದವರ ಆರೋಗ್ಯ ಸ್ಥಿತಿ ಎಷ್ಟು ಹದಗೆಟ್ಟೀತು ಎಂಬುದರ ಕಲ್ಪನೆಯೂ ಇವರಿಗೆ ಇದ್ದಂತಿಲ್ಲ.

ಇವರಿಗೆ ಜವಾಬ್ದಾರಿಯಿಂದ ವರ್ತಿಸುವಂತೆ ತಿಳಿಸುವವರಾರು?

ಪ್ರಜಾ ಸಮರ – 11 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

1980 ರಲ್ಲಿ ಪೆದ್ದಿಶಂಕರನ ಹತ್ಯೆಯಿಂದಾಗಿ ಮಹಾರಾಷ್ಟ್ರದಲ್ಲಿ ಹತ್ತಿಕೊಂಡ ನಕ್ಸಲ್ ಚಟುವಟಿಕೆ ಮತ್ತು ಹಿಂಸಾಚಾರದ ಕಿಡಿ ಮೂರು ದಶಕಗಳ ನಂತರವೂ ಆರದ ಬೆಂಕಿಯಾಗಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಗಡಿಭಾಗದ ಜಿಲ್ಲೆಗಳಾದ ಗಡ್‌ಚಿರೋಲಿ, ಚಂದ್ರಾಪುರ, ಗೊಂಡಿಯ ಮತ್ತು ಭಂಡಾರ ಜಿಲ್ಲೆಗಳಲ್ಲಿ ಇವೊತ್ತಿಗೂ ಹತ್ತಿ ಉರಿಯುತ್ತಿದೆ. ಇವುಗಳನ್ನು ನಕ್ಸಲ್ ಪೀಢಿತ ಜಿಲ್ಲೆಗಳೆಂದು ಅಲ್ಲಿನ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಗಡ್‌ಚಿರೋಲಿ ಜಿಲ್ಲೆಯ 120 ಆದಿವಾಸಿಗಳ ಹಳ್ಳಿಗಳನ್ನು ನಕ್ಸಲರ ತಾಣಗಳೆಂದು ಗುರುತಿಸಲಾಗಿದ್ದು ಈ ಪ್ರದೇಶಕ್ಕೆ ಪೊಲೀಸರು ಕಾಲಿಡಲು ಹೆದರುತ್ತಾರೆ. ಇಲ್ಲಿನ ಹಿಂಸಾಚಾರಕ್ಕೆ ಬಲಿಯಾದ ನಕ್ಸಲಿಯರು ಮತ್ತು ಪೊಲೀಸರಲ್ಲಿ ಶೇಕಡ ಎಂಬತ್ತರಷ್ಟು ಮಂದಿ ಸ್ಥಳಿಯ ಆದಿವಾಸಿಗಳಾದ ಗೊಂಡ ಮತ್ತು ಚೆಂಚು ಜನಾಂಗದವರಾಗಿದ್ದಾರೆ. ಹಿಂಸೆ ಹೇಗೆ ಹಲವು ರೂಪಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಇಲ್ಲಿನ ಜನರನ್ನು ಕಾಡುತ್ತಿದೆ ಎಂಬುದಕ್ಕೆ 1997 ರಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಆದಿವಾಸಿ ಜನಾಂಗದ ಪ್ರಭಾಕರ ಟೆಕವಾಡೆ ಮತ್ತು ಪಂಡುಅಲಂ ಇಬ್ಬರೂ ಬಾಲ್ಯದಿಂದಲೂ ಸಹಪಾಠಿಗಳು ಮತ್ತು ಗೆಳೆಯರು. ಮಹಾರಾಷ್ಟ್ರ ಸರ್ಕಾರ ಗಿರಿಜನ ಮಕ್ಕಳಿಗಾಗಿ ಗಡ್‌ಚಿರೋಲಿ ಜಿಲ್ಲೆಯ ಬ್ರಹ್ಮಗಡ್ ಎಂಬಲ್ಲಿ ಸ್ಥಾಪಿಸಿದ್ದ ಲೋಕ್ ಬಿರದಾರಿ ಎಂಬ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೂ ಒಟ್ಟಿಗೆ ಓದಿದವರು. ಶಿಕ್ಷಣದ ನಂತರ ಪಂಡು ಅಲಂ ಮಹರಾಷ್ಟ್ರ ಪೊಲೀಸ್ ಪಡೆಗೆ ಸೇರಿದ ನಂತರ ನಕ್ಸಲ್ ನಿಗ್ರಹ ಪಡೆ ಕೋಬ್ರಾ ತಂಡಕ್ಕೆ ಕಮಾಂಡೊ ಆಗಿ ನಿಯೋಜಿತನಾದರೆ, ಆತನ ಗೆಳೆಯ ಪ್ರಭಾಕರ ಟೆಕವಾಡೆ ನಕ್ಸಲ್ ಸಂಘಟನೆ ಸೇರಿ ದಳಂ ಹೆಸರಿನ ತಂಡವೊಂದರಲ್ಲಿ ಜುರು ಎಂಬ ಹೆಸರಿನಲ್ಲಿ ನಾಯಕನಾದ.

ತನ್ನ ಹುಟ್ಟೂರಾದ ಜಾಂಡಿಯ ಎಂಬ ಹಳ್ಳಿಗೆ ತನ್ನ ಸಂಬಂಧಿಕರ ಮದುವೆ ಬಂದಿದ್ದ ಪ್ರಭಾಕರ ಅಲಿಯಾಸ್ ಜುರು ಬಗ್ಗೆ ಅವನ ಒಂದು ಕಾಲದ ಗೆಳೆಯನೇ ಆದ ಪಂಡು ಆಲಂ ತಾನು ಸೇವೆ ಸಲ್ಲಿಸುತಿದ್ದ ಪೊಲೀಸ್ ಕಮಾಂಡೊ ಗುಂಪಿನ ಕೋಬ್ರಾ ಪಡೆಗೆ ಮಾಹಿತಿ ರವಾನಿಸಿ ಪ್ರಭಾಕರನನ್ನು ಗುಂಡಿಟ್ಟು ಕೊಲ್ಲಲು ಸಹಕರಿಸಿದ. ಇದಕ್ಕೆ ಪ್ರತಿಯಾಗಿ ನಕ್ಸಲರು ಪಂಡುವನ್ನು ನೆಲ ಬಾಂಬ್ ಸ್ಪೋಟಿಸುವುದರ ಮೂಲಕ ಕೊಂದು ಹಾಕಿದರು. ಈ ಇಬ್ಬರೂ ಬಾಲ್ಯದ ಗೆಳೆಯರು ಮೂರು ತಿಂಗಳ ಅವಧಿಯಲ್ಲಿ ಮೃತ ಪಟ್ಟಾಗ ಇವರುಗಳ ವಯಸ್ಸು ಮುವತ್ತೈದನ್ನು ದಾಟಿರಲಿಲ್ಲ.

ಇಂತಹ ಘಟನೆಗಳಲ್ಲದೆ, ಪೊಲೀಸ್ ಮಾಹಿತಿದಾರರೆಂದು ನಕ್ಸಲಿಯರ ಕೈಯಲ್ಲಿ ಮತ್ತು ನಕ್ಸಲ್ ಬೆಂಬಲಿಗರೆಂದು ಪೊಲೀಸರ ಹಿಂಸೆಯಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ಆದಿವಾಸಿಗಳು ಗಡ್‌ಚಿರೋಲಿ ಜಿಲ್ಲೆಯಲ್ಲಿ ಅಸುನೀಗುತಿದ್ದಾರೆ. ಇದನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ವತಃ ಒಪ್ಪಿಕೊಂಡಿದ್ದಾರೆ.

ನಿರಂತರ ಹಿಂಸಾತ್ಮಕ ಚಟುವಟಿಕೆಗಳ ಕಾರಣದಿಂದಾಗಿ ಮಹಾರಾಷ್ಟ್ರದ ಗೊಂಡಿಯ, ಗಡ್‌ಚಿರೋಲಿ, ಚಂದ್ರಾಪುರ, ಭಂಡಾರ ಜಿಲ್ಲೆಗಳಲ್ಲಿ ಯಾವುದೇ ಕೈಗಾರಿಕೆ ಅಥವಾ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗದೇ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿ ಉಳಿದಿವೆ. ಚಂದ್ರಾಪುರ ಜಿಲ್ಲೆಯಲ್ಲಿ ನೆರೆಯ ಛತ್ತೀಸ್‌ಗಡ ರಾಜ್ಯದಿಂದ ಬರುವ ಕಚ್ಛಾ ಕಲ್ಲಿದ್ದನ್ನು ಸಂಸ್ಕರಿಸುವ 24 ಕ್ಕೂ ಹೆಚ್ಚು ಘಟಕಗಳಿದ್ದು ಇವೆಲ್ಲವೂ ಬಹುತೇಕ ರಾಜಕಾರಣಿಗಳ ಒಡೆತನದಲ್ಲಿವೆ. ಇನ್ನೂ ಗ್ರಾಮೀಣಾಭಿವೃದ್ಧಿಯಂತೂ ಇಲ್ಲಿನ ಜನತೆಯ ಪಾಲಿಗೆ ಕನಸಿನ ಮಾತಾಗಿದೆ. ಮಹಾರಾಷ್ಡ್ರ ಮತ್ತು ಛತ್ತೀಸ್ ಗಡ ಗಡಿಭಾಗದ 231 ಹಳ್ಳಿಗಳ 40 ಚದುರ ಕಿಲೊಮೀಟರ್ ವ್ಯಾಪ್ತಿ ಪ್ರದೇಶವನ್ನು ರೆಡ್ ಏರಿಯಾ ಎಂದು ಘೋಷಿಸಲಾಗಿದೆ. ಈ ಪ್ರದೇಶಕ್ಕೆ ನಕ್ಸಲ್ ನಿಗ್ರಹ ಪಡೆ ಕೋಬ್ರಾ ಕೂಡ ಕಾಲಿಡಲು ಸಾಧ್ಯವಾಗಿಲ್ಲ. ಈ ಪ್ರದೇಶದ ಹಳ್ಳಿಗಳಲ್ಲಿ ಮಾವೋವಾದಿ ನಕ್ಸಲರಿಂದ ಜನಾತನ್ ಸರ್ಕಾರ ಎಂಬ ಪರ್ಯಾಯ ಸರ್ಕಾರ ಅಸ್ಥಿತ್ವದಲ್ಲಿದೆ. ಈ ಅರಣ್ಯ ಪ್ರದೇಶದಲ್ಲಿ ನಕ್ಸಲ್ ತರಬೇತಿ ಕೇಂದ್ರ, ಮದ್ದುಗುಂಡುಗಳ ತಯಾರಿಕಾ ಕೇಂದ್ರ, ಮತ್ತು ಮುದ್ರಣ ಘಟಕಗಳಿದ್ದು, ನಕ್ಸಲಿಯರೇ ಹಲವು ಹಳ್ಳಿಗಳಲ್ಲಿ ಶಾಲೆ ನಡೆಸುತಿದ್ದಾರೆ. ಗೊಂಡಿ ಭಾಷೆಗೆ ಲಿಪಿ ಇಲ್ಲದ ಕಾರಣ ತೆಲುಗು ಭಾಷೆಯಲ್ಲಿ ನಕ್ಸಲರು ಮಕ್ಕಳಿಗೆ ಶಿಕ್ಷಣ ನೀಡುತಿದ್ದಾರೆ.

ಗಡ್‌ಚಿರೋಲಿ ಜಿಲ್ಲೆಯಲ್ಲಿ ತಲಾ 10 ರಿಂದ 12 ಸದಸ್ಯರಿರುವ 20 ಕ್ಕೂ ಹೆಚ್ಚು ದಳಂ ಹೆಸರಿನ ತಂಡಗಳಿದ್ದು ಇವರಿಗೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಆದಿವಾಸಿ ಯುಕ, ಯುವತಿಯರು ಸಮವಸ್ತ್ರವಿಲ್ಲದೆ ನಕ್ಸಲ್ ಕಾರ್ಯಕರ್ತರಾಗಿ ದುಡಿಯುತಿದ್ದಾರೆ. ಈ ಪ್ರದೇಶದಲ್ಲಿರುವ ಮಾವೋವಾದಿ ಸಕ್ಸಲ್ ಸಂಘಟನೆಗೆ ಪ್ರಸಿದ್ಧ ಸಿಗರೇಟ್ ತಯಾರಿಕಾ ಕಂಪನಿಯಾದ ಐ.ಟಿ.ಸಿ. ಕಂಪನಿ ಒಡೆತನಕ್ಕೆ ಸೇರಿದ ಬಲ್ಲಾಪುರ್ ಕಾಗದ ತಯಾರಿಕಾ ಕಂಪನಿ ಮತ್ತು ಕಲ್ಲಿದ್ದಲು ಘಟಕಗಳು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸುತ್ತಿವೆ. ಅರಣ್ಯದ ನಡುವೆ ಇರುವ ನಕ್ಸಲ್ ತಂಡಗಳಿಗೆ ಧವಸ, ಧಾನ್ಯಗಳನ್ನು ಆದಿವಾಸಿಗಳು ನೀಡುತಿದ್ದಾರೆ. ನಕ್ಸಲ್ ಚಟುವಟಿಕೆಗೆ ಬೆಂಬಲ ನೀಡದಿರುವ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದರೂ ಸಹ ಆದಿವಾಸಿಗಳು ಅಸಹಾಯಕರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ನಕ್ಸಲಿಯರೇ ಆದಿವಾಸಿಗಳಿಗೆ ಆಪತ್‌ಬಾಂಧವರಾಗಿದ್ದಾರೆ. ಪೊಲೀಸರ, ಅರಣ್ಯಾಧಿಕಾರಿಗಳ ಮತ್ತು ದಲ್ಲಾಳಿಗಳ ಕಿರುಕುಳ ತಪ್ಪಿದೆ. ಆದಿವಾಸಿಗಳು ಸಂಗ್ರಹಿಸುವ ಅರಣ್ಯದ ಕಿರು ಉತ್ಪನ್ನಗಲಿಗೆ ಯೋಗ್ಯ ಬೆಲೆ ದೊರಕುತ್ತಿದೆ. ನಕ್ಸಲರ ಆರ್ಭಟಕ್ಕೆ ಹೆದರಿರುವ ಬೀಡಿ ತಯಾರಿಕೆಯ ಎಲೆಯಾದ ತೆಂಡು ಮತ್ತು ಕಾಗದ ತಯಾರಿಕೆಗೆ ಬಳಸಲಾಗುವ ಬಿದರಿನ ಬೊಂಬಿಗೂ ಸಹ ದಲ್ಲಾಳಿಗಳು ಉತ್ತಮ ಬೆಲೆ ನೀಡುತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆದಿವಾಸಿಗಳು ಸದ್ಯಕ್ಕೆ ಅಭಿವೃದ್ಧಿಯಿಂದ ವಂಚಿತರಾದರೂ ನಕ್ಸಲೀಯರ ನೆಪದಿಂದಾಗಿ ನೆಮ್ಮದಿಯಿಂದ ಇದ್ದಾರೆ. ಗಡ್‌ಚಿರೋಲಿ ಜಲ್ಲೆಯ ಎರಡು ತಾಲೂಕುಗಳಲ್ಲಿ ಜಮೀನ್ದಾರರ ವಶವಾಗಿದ್ದ 20 ಸಾವಿರ ಸಾವಿರ ಎಕರೆ ಕೃಷಿ ಭೂಮಿಯನ್ನು ವಾಪಸ್ ಪಡೆದು ಆದಿವಾಸಿಗಳಿಗೆ ಹಂಚಲಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಗಡ್‌ಚಿರೋಲಿ ಜಿಲ್ಲೆಯ ಅಹೇರಿ ತಾಲೂಕಿನ ಹಳ್ಳಿಯೊಂದರಲ್ಲಿ ಅರಣ್ಯಾಧಿಕಾರಿಗಳು ತನ್ನ ಅಪ್ಪನಿಗೆ ನೀಡುತಿದ್ದ ಕಿರುಕುಳ ಸಹಿಸಲಾಗದೆ ನಕ್ಸಲ್ ಸಂಘಟನೆಗೆ ಸೇರಿದ್ದ ಆದಿವಾಸಿ ಯುವತಿಯೊಬ್ಬಳು ಇಂದು ಈ ಪ್ರಾಂತ್ಯದ ಮಹಿಳಾ ಕಮಾಂಡರ್ ಆಗಿ ಬೆಳೆದು ನಿಂತಿದ್ದಾಳೆ. ಯಮುನಕ್ಕ ಎಂಬ ಹೆಸರಿನ ಈಕೆ ಆದಿವಾಸಿಗಳಿಗೆ ಕಿರುಕುಳ ನೀಡುವ ಅಧಿಕಾರಿಗಳನ್ನು ಹಿಡಿದು ತಂದು ಹಳ್ಳಿಗಳ ನಡುವಿನ ಮರಕ್ಕೆ ಕಟ್ಟಿ ಹಾಕಿ ಎಲ್ಲಾ ಹೆಂಗಸರಿಂದ ಮುಖಕ್ಕೆ ಉಗುಳಿಸುವ ಕಾರ್ಯಕ್ರಮ ಹಮ್ಮಿಕೊಂಡ ನಂತರ ಮಹಿಳೆಯರ ಮೇಲಿನ ಅಪರಾಧದ ಚಟುವಟಿಕೆ ಕೂಡ ಕಡಿಮೆಯಾಗಿದೆ.

ವರ್ತಮಾನದ ನಕ್ಸಲ್ ಇತಿಹಾಸದ ವಿಪರ್ಯಾಸವೆಂದರೆ, ಗಡ್‌ಚಿರೋಲಿ ಜಿಲ್ಲೆಯಷ್ಟೆ ಅಲ್ಲ, ಇಡೀ ದಂಡಕಾರಣ್ಯದಲ್ಲಿ ನಕ್ಸಲ್ ಚಟುವಟಿಕೆ ಈಗ ಆದಿವಾಸಿ ಯುವಕರ ಕೈಯಲ್ಲಿದೆ. ಕಳೆದ ಎರಡು ಮೂರು ದಶಕದಿಂದ ನಕ್ಸಲ್ ಹೋರಾಟದಲ್ಲಿ ಬೆಳೆದು ಬಂದ ಇವರೆಲ್ಲಾ ಈಗ ನಾಯಕರಾಗಿ ಹೊರ ಹೊಮ್ಮಿದ್ದಾರೆ. ವಾಸ್ತವವಾಗಿ ಇವರೆಲ್ಲಾ ಅನಕ್ಷಸ್ತರಾಗಿದ್ದು ನಕ್ಸಲ್ ಚಳುವಳಿಯ ಮೂಲ ತತ್ವ ಮತ್ತು ಸಿದ್ಧಾಂತಗಳಿಂದ ವಿಮುಖರಾಗಿದ್ದಾರೆ. ಒಂದು ಕಾಲದಲ್ಲಿ ಮಾವೋ, ಲೆನಿನ್, ಮಾರ್ಕ್ಸ್ ವಿಚಾಧಾರೆಗಳ ಆಧಾರದ ಮೇಲೆ ಹೋರಾಟವನ್ನು ಹುಟ್ಟು ಹಾಕಿದ ಆಂಧ್ರ ಮೂಲದ ಮಾವೋವಾದಿ ನಕ್ಸಲ್ ನಾಯಕರು ವೃದ್ಧಾಪ್ಯದಿಂದ ನಿವೃತ್ತಿ ಹೊಂದಿದ್ದಾರೆ, ಇಲ್ಲವೇ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ನಗರಗಳಲ್ಲಿ ಕುಳಿತು ಮಾವೋವಾದಿಗಳ ಹೋರಾಟವನ್ನು ಕುರಿತು ಇಲ್ಲವೇ ಅವರ ಪರವಾಗಿ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಕೂಡ ನಕ್ಸಲ್ ಬೆಂಬಲಿಗರ ಆತ್ಮವಂಚನೆಯ ಮಾತುಗಳಾಗಿ ಪರಿವರ್ತನೆ ಹೊಂದುತ್ತಿವೆ.

ಛತ್ತೀಸ್‌ಗಡ, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ಮುಂದುವರಿಸುತ್ತಿರುವ ಬುಡಕಟ್ಟು ಜನಾಂಗದ ನಾಯಕರು ಗಣಿ ಕಂಪನಿಗಳಿಂದ ಬೆದರಿಕೆಯ ಮೂಲಕ ಸಂಪಾದಿಸುತ್ತಿರುವ ಹಣದಲ್ಲಿ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಏಕೆಂದರೆ, ಇವರಿಗೆಲ್ಲಾ ನಕ್ಸಲ್ ಹೋರಾಟದ ಮೂಲ ಆಶಯವಾಗಲಿ, ಚಿಂತನೆಗಳಾಗಲಿ, ಇವುಗಳ ಗಂಧ-ಗಾಳಿ ಕೂಡ ತಿಳಿದಿಲ್ಲ. ತತ್ವ ಮತ್ತು ಸಿದ್ಧಾಂತ ಕೊರತೆಯಿಂದಾಗಿ ಗಡ್‌ಚಿರೋಲಿ ಜಿಲ್ಲೆಯಲ್ಲಿ ಇತೀಚೆಗಿನ ವರ್ಷಗಳಲ್ಲಿ ನಕ್ಸಲಿಯರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಾಗತೊಡಗಿದೆ.

2003 ಆಗಸ್ಟ್ 29 ರಂದು ಅರಣ್ಯದಲ್ಲಿ ಗಸ್ತು ತಿರುಗುತಿದ್ದ ಪೊಲೀಸ್ ಜೀಪನ್ನು ನೆಲಬಾಂಬ್ ಮೂಲಕ ಸ್ಪೋಟಿಸಿದರ ಪರಿಣಾಮ ಐವರು ಪೊಲೀಸರು ಮೃತಪಟ್ಟರು. 2004 ರ ಮಾರ್ಚ್ ತಿಂಗಳಿನಲ್ಲಿ ಚಂದ್ರಾಪುರ ಜಿಲ್ಲೆಯಲ್ಲಿ ಆಂಧ್ರ ಗಡಿಭಾಗಕ್ಕೆ ಸಮೀಪವಿರುವ ಮೊಕಾಡಿ ಎಂಬ ರೈಲ್ವೆ ನಿಲ್ದಾಣವನ್ನು ಸ್ಪೋಟಿಸಲಾಯಿತು. 2005 ರ ಪೆಬ್ರವರಿಯಲ್ಲಿ ಬ್ರಹ್ಮಘಡ್ ಪೊಲೀಸ್ ಠಾಣೆಯ ಪೊಲೀಸ್ ವಾಹನವನ್ನು ನೆಲಬಾಂಬ್ ಮೂಲಕ ಧ್ವಂಸಗೊಳಿಸಿದ್ದರಿಂದ ಏಳು ಮಂದಿ ಪೊಲೀಸರು ಮೃತಪಟ್ಟರೆ, ಅದೇ ವರ್ಷದ ಮೇ ತಿಂಗಳಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಗೊಂಡಿಯ ಜಿಲ್ಲೆಯಲ್ಲಿ ಇಬ್ಬರು ನಾಗರೀಕರು ಮತ್ತು ಐವರು ಪೊಲೀಸರು ಅಸುನೀಗಿದರು. 2009 ರ ಅಕ್ಟೋಬರ್ ತಿಂಗಳಿನಲ್ಲಿ ಗಡ್‌ಚಿರೋಲಿ ಅರಣ್ಯದ ಬಳಿ ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ನಸುಕಿನ ಜಾವ ನಡೆಸಿದ ಧಾಳಿಯಲ್ಲಿ ನಿದ್ರೆಯಲ್ಲಿದ್ದ ಸಿಬ್ಬಂದಿ ಸೇರಿದಂತೆ 17 ಮಂದಿ ಪೊಲೀಸರು ನಕ್ಸಲಿಯರ ಹಿಂಸೆಗೆ ಬಲಿಯಾದರು.

ಜಗತ್ತಿನಲ್ಲಿ ಹಿಂಸೆ ಎಂಬುದು ಅದು ಪೊಲೀಸರ ಕೃತ್ಯವಾಗಿರಲಿ ಅಥವಾ ನಕ್ಸಲಿಯರ ಕೃತ್ಯವಾಗಿರಲಿ ಅದು ಮನುಕುಲದ ವಿರೋಧಿ ನೀತಿ ಎಂಬುದನ್ನು ಮರೆಯಬಾರದು. ಇದನ್ನು ಪ್ರೋತ್ಸಾಹಿಸುವುದು ಇಲ್ಲವೇ ನಿಗ್ರಹದ ನೆಪದಲ್ಲಿ ಪರೋಕ್ಷವಾಗಿ ಮುಂದುವರಿಸುವುದು ಮನುಷ್ಯರು ಮಾಡಬಹುದಾದ ಕ್ರಿಯೆ ಅಲ್ಲ. ಇದನ್ನು ನಾಗರೀಕ ಜಗತ್ತು ಎಂದಿಗೂ ಸಮರ್ಥಿಸಿವುದಿಲ್ಲ, ಜೊತೆಗೆ ಸಮರ್ಥಿಸಲೂಬಾರದು.

(ಮುಂದುವರಿಯುವುದು)