Daily Archives: November 17, 2012

ನವೀನ್ ಸೂರಿಂಜೆ: ಜಾಮೀನು ನಕಾರ

 

 

 

 

 

 

 

 

 

 

 

ವರ್ತಮಾನ ಓದುಗರಿಗೆ ನಿರಾಶೆಯ ಸುದ್ದಿ ಇದೆ. ನಮ್ಮ ಬಳಗದ ಬರಹಗಾರ ಮತ್ತು ಕಸ್ತೂರಿ ನ್ಯೂಸ್ 24 ವರದಿಗಾರ ಮತ್ತಷ್ಟು ದಿನಗಳನ್ನು ಬಂದೀಖಾನೆಯಲ್ಲಿಯೇ ಕಳೆಯಬೇಕಾಗಿದೆ. ಮಂಗಳೂರಿನ ನ್ಯಾಯಾಲಯ ಶನಿವಾರ ಸೂರಿಂಜೆಗೆ ಜಾಮೀನು ನೀಡಲು ನಿರಾಕರಿಸಿದೆ. ವರದಿಗಾರನನ್ನು ಜೈಲಿನ ಹೊರಗೆ ಭೇಟಿಯಾಗುವ ನಿರೀಕ್ಷೆಯಲ್ಲಿದ್ದ ಬಳಗದ ಗೆಳೆಯರಿಗೆ ನಿರಾಶೆಯಾಗಿದೆ.

ವಿಚಿತ್ರ ನೋಡಿ. ಬಂಧನವಾದ ದಿನ, ಸುದ್ದಿವಾಹಿನಿಗಳು ಬಂಧನದ ಸುದ್ದಿಯನ್ನು ಬಿತ್ತರಿಸಿದವು. ನವೀನ್ ಕೆಲಸ ಮಾಡುವ ವಾಹಿನಿ ದಿನವಿಡೀ ಅದೇ ಸುದ್ದಿಯನ್ನು ಬಿತ್ತರ ಮಾಡಿ ನೋಡುಗರಲ್ಲಿ ಪೊಲೀಸರು ಅಮಾಯಕನ ವಿರುದ್ಧ ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದರ ವಿರುದ್ಧ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ನವೀನ್ ಕೆಲಸ ಮಾಡುವ ವಾಹಿನಿಯೂ ಸೇರಿದಂತೆ, ಎಲ್ಲಾ ವಾಹಿನಿಗಳೂ ಈ ಪ್ರಕರಣವನ್ನೇ ಮರೆತುಬಿಟ್ಟರೇ ಎಂಬ ಪ್ರಶ್ನೆ ಕಾಡುತ್ತದೆ.

ಜಾಮೀನು ಅರ್ಜಿ ವಿಚಾರಣೆಗೆ ಬಂದ ಸುದ್ದಿಯೂ ಇಲ್ಲ, ವಿಚಾರಣೆ ಮುಂದೂಡಿದ ಸುದ್ದಿಯೂ ಇಲ್ಲ, ಕೊನೆಗೆ ಜಾಮೀನು ತಿರಸ್ಕೃತವಾದ ವರ್ತಮಾನವನ್ನೂ ಜನರಿಗೆ ತಲುಪಿಸುತ್ತಿಲ್ಲ. ಕೋಮುವಾದಿ ಗ್ಯಾಂಗ್ ನ ಪಡ್ಡೆ ಹುಡುಗರು ಹೋಮ್ ಸ್ಟೇ ಮೇಲೆ ದಾಳಿ ಮಾಡಿದಾಗಿನ ದೃಶ್ಯಗಳು ನಮ್ಮಲ್ಲಿಯೇ ಮೊದಲು ಬಿತ್ತರಗೊಂಡದ್ದು, ನಮ್ಮಲ್ಲೇ ಮೊದಲು ‘exclusive’ ಸುದ್ದಿ ತೋರಿಸಿದ್ದು ಎಂದೆಲ್ಲಾ ಬೀಗುವ ಚಾನೆಲ್ ನೇತಾರರು, ಅದೇ ಸುದ್ದಿ ತರಲು ಹೋಗಿದ್ದೇ ಅಪರಾಧವೆಂಬಂತೆ ಬಿಂಬಿಸಿ ಪೊಲೀಸ್ ವ್ಯವಸ್ಥೆ ವರದಿಗಾರನ್ನು ಬಂಧನದಲ್ಲಿಟ್ಟಿರುವಾಗ ಸುಮ್ಮನಾಗಿಬಿಟ್ಟರೆ?

ಹೋಮ್ ಸ್ಟೇ ಮೇಲೆ ದಾಳಿ ಮಾಡಿದ ಹುಡುಗರ ಮೇಲೆ ಪೊಲೀಸರು ಯಾವ್ಯಾವ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೋ, ಅದೇ ಕಾಯ್ದೆಗಳ ಅಡಿಯಲ್ಲಿಯೇ ಆ ಸುದ್ದಿಯನ್ನು ವರದಿ ಮಾಡಲು ಹೋದ ನವೀನ್ ನ್ನು ಬಂಧಿಸಿದ್ದಾರೆ. ಎಂಥ ವಿಚಿತ್ರ ನೋಡಿ, ನವೀನ್ ವಿರುದ್ಧ, ಕಳ್ಳತನದ ಪ್ರಕರಣವೂ ಇದೆ. ಇಡೀ ಘಟನೆಯಲ್ಲಿ ಎದ್ದು ಕಾಣುವುದು, ಪೊಲೀಸರ ಕುಕೃತ್ಯ.

ಈ ಹಿಂದೆ, ಒಂದು ಪಬ್ ಮೇಲೆ ಇದೇ ಮಂಗಳೂರಿನಲ್ಲಿ ಇಂಥದೇ ಗ್ಯಾಂಗ್ ನ ಹುಡುಗರಿಂದ ದಾಳಿಯಾಗಿತ್ತು. ಆಗಲೂ ದಾಳಿಯ ದೃಶ್ಯಗಳು ಎಲ್ಲಾ ಚಾನೆಲ್ ಗಳಲ್ಲೂ ಬಿತ್ತರಗೊಂಡವು. ಆದರೆ ಆ ಸಂದರ್ಭದಲ್ಲಿ, ಘಟನೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಕೇಸು ದಾಖಲಿಸುವ ಉತ್ಸಾಹವನ್ನು ಪೊಲೀಸರು ತೋರಿಸಿರಲಿಲ್ಲ. ಆದರೆ ಈ ಪ್ರಕರಣದಲ್ಲಿ, ಇಂತಹ ಘಟನೆ ವರದಿ ಮಾಡಿದ್ದರಿಂದಲೇ ಮಂಗಳೂರಿನ ಮರ್ಯಾದೆ ಹೋಯಿತು ಎಂದು ವರದಿಗಾರನ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದಾರೆ.

ಈ ಬಗ್ಗೆ ಪತ್ರಕರ್ತ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿ ಬರಬಹುದು. ಕಾರ್ಯನಿರತ ಪತ್ರಕರ್ತರ ಸಂಘದ ಮುಖಂಡರು ನವೀನ್ ವಿರುದ್ಧ ದಾಖಲಾಗಿರುವ ದೂರನ್ನು, ಆರೋಪ ಪಟ್ಟಿಯನ್ನು ಹಿಂತೆಗೆದುಕೊಳ್ಳುವ ತನಕ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದರು. ಅವರ ಹೋರಾಟ ಇನ್ನೂ ಜಾರಿಯಲ್ಲಿದೆ ಎಂದು ನಂಬೋಣವೆ?

ಇಂತಹ ಪ್ರಕರಣ ಅದೆಷ್ಟು ಭವಿಷ್ಯದ ಪತ್ರಕರ್ತರಲ್ಲಿ ಆತಂಕ ಸೃಷ್ಟಿಸಿದೆ ಎಂಬ ಅಂದಾಜು ಆಳುವ ವರ್ಗಕ್ಕೆ ಇದ್ದಂತಿಲ್ಲ. ಈಗಷ್ಟೆ ಪತ್ರಿಕೋದ್ಯಮ ಓದಿಕೊಂಡು ಕೆಲಸ ಹುಡುಕುತ್ತಿರುವವರು, ಸುದ್ದಿ ಮಾಡಿದ ಕಾರಣಕ್ಕೆ ಸುಳ್ಳು ಕೇಸು ಹಾಕಿಸಿಕೊಂಡು ಜೈಲಿಗೆ ಹೋಗಾಬೇಕಾ? ಹಾಗಿದ್ದರೆ ನಾವ್ಯಾಕೆ ಈ ಕ್ಷೇತ್ರಕ್ಕೆ ಬರೋದು? – ಇಂತಹ ಪ್ರಶ್ನೆಗಳನ್ನು ಹಾಕಿಕೊಂಡು ಗೊಂದಲದಲ್ಲಿ ಕುಳಿತಿದ್ದಾರೆ. ಅಷ್ಟೇ ಅಲ್ಲ, ಸೂಕ್ಷ್ಮ ಮನಸ್ಸಿನ ಪೋಷಕರು ಕೂಡಾ ತಮ್ಮ ಮಕ್ಕಳನ್ನು ಪತ್ರಿಕೋದ್ಯಮ ಅಧ್ಯಯನಕ್ಕೆ ಕಳುಹಿಸುವುದರ ಬಗ್ಗೆ ಮರುಚಿಂತನೆ ಮಾಡುತ್ತಿದ್ದಾರೆ.