ಸೋತು ಗೆದ್ದ ಹಳೆಯ ಜಾತ್ಯಾತೀತ ಪಕ್ಷವೊಂದರ ಕಥೆ, ವ್ಯಥೆ?

– ಬಿ.ಶ್ರೀಪಾದ ಭಟ್

ಕಟ್ಟ ಕಡೆಗೂ ಕಾಂಗ್ರೆಸ್ ಗೆದ್ದಿದೆ. ತಾನು ಗೆದ್ದಿದ್ದು ನಿಜವೇ ಎಂದು ಖಾತರಿಪಡಿಸಿಕೊಳ್ಳಲು ಪದೇ ಪದೇ ಮೈ ಚಿವುಟಿಕೊಳ್ಳುತ್ತಿದೆ. ಕಷ್ಟಪಟ್ಟು, ಅಯಾಸದಿಂದ ಬೆಟ್ಟವನ್ನೇರಿದ ರೀತಿಯಲ್ಲಿ ಸುಧಾರಿಸಿಕೊಳ್ಳುತ್ತಿದೆ. ಕಳೆದು ಏಳು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟಿದ, ಹೆಚ್ಚೂ ಕಡಿಮೆ ಆತ್ಮವಂಚನೆಯ ಮಟ್ಟಕ್ಕೆ ತಳ್ಳಲ್ಟಟ್ಟಿದ್ದ ಈ ಕಾಂಗ್ರೆಸ್ ಪಕ್ಷ, ಮತ್ತು ಕಳೆದ ಏಳು ವರ್ಷಗಳಲ್ಲಿ ಯಾವುದೇ ಸೈದ್ಧಾಂತಿಕ ಬದ್ಧತೆಗಳಿಲ್ಲದ, ಭವಿಷ್ಯದ ಕುರಿತಾದ ನಿಖರವಾದ ವ್ಯಾಖ್ಯಾನಗಳಿಲ್ಲದ, ಆಧುನಿಕ ಕರ್ನಾಟಕದ ರೂಪುರೇಷಗಳ ಬಗೆಗೆ ಕೊಂಚವೂ ತಿಳುವಳಿಕೆಗಳಿಲ್ಲದ ಈ ಕಾಂಗ್ರೆಸ್‌ನ ನೇತಾರರ ಪ್ರತಿಯೊಂದು ಮಾತುಗಳು ನಗೆಪಾಟಲಿಗೀಡಾಗುತ್ತಿತು, ತಿರಸ್ಕಾರಕ್ಕೆ ಗುರಿಯಾಗುತ್ತಿತ್ತು. ಬಿಜೆಪಿಯ ಕಡು ಭ್ರಷ್ಟಾಚಾರದ ಆಡಳಿತಕ್ಕೆ, ಅವರ ದುರಹಂಕಾರದ, ಮತಾಂಧತೆಯ ಬಿರುಗಾಳಿಗೆ, ಮತೀಯ ರಾಷ್ತ್ರೀಯತೆಗೆ ಈ 125 ವರ್ಷಗಳ ಇತಿಹಾಸವಿರುವ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಬಳಿ ನೇರವಾಗಿ ಮುಖಾಮುಖಿಯಾಗುವಂತಹ ಯಾವುದೇ ಬಗೆಯ ಬೌದ್ಧಿಕ ಗಟ್ಟಿತನದ ಕಸುವಿನ ಶಕ್ತಿಯಾಗಲೀ, ರಾಜಕೀಯ ಮುತ್ಸದ್ದಿತನವಾಗಲೀ, ಒಂದು ಕಾಲಕ್ಕೆ ತಮಗೆ ಊರುಗೋಲಾಗಿದ್ದ ಸಮಾಜವಾದದ ಹತಾರಗಳಾಗಲಿ ಇರಲೇ ಇಲ್ಲ. ಹಾಗೂ ಹೆಚ್ಚೂ ಕಡಿಮೆ ಅದರ ಆಸ್ತಿತ್ವವೇ ನಾಶವಾಗಿತ್ತು.

ಇಂತಹ ದಿಕ್ಕೆಟ್ಟ ಸ್ಥಿತಿಯಿಂದ ಹಠಾತ್ತಾಗಿ ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ತಲುಪಿದ ಈ ಕಾಂಗ್ರೆಸ್‌ಗೆ ಈ ಕ್ಷಣಕ್ಕೆ ತನ್ನ Siddaramaiahಈ ಗೆಲುವಿನ ಕಾರಣಕ್ಕೆ ಹರ್ಷೋದ್ಗಾರದಿಂದ ಕುಣಿದಾಡುವಂತಹ ಸ್ಥಿತಿಯೇನು ಇಲ್ಲದಿದ್ದರೂ, ಮಂದಹಾಸ ಬೀರುತ್ತಾ, ಮುಗುಳುನಗೆಯಿಂದ ವಿ ಆಕಾರದಲ್ಲಿ ಕೈಯನ್ನು ಎತ್ತಬಹುದು ಯಾವ ಮುಲಾಜಿಲ್ಲದೆ. ಏಕೆಂದರೆ ಬೇರೆಯವರ ಮಾತು ಬಿಡಿ, ತಮ್ಮ ಗೆಲುವೆನ್ನುವ ಗೆಲುವು ಹೆಚ್ಚೂ ಕಡಿಮೆ ಋಣಾತ್ಮಕ ಮತಗಳಿಂದ ಬಂದಿದ್ದು, ಈ ಗೆಲುವು ಕೋಮುವಾದಿ, ಭ್ರಷ್ಟ ಬಿಜೆಪಿ ವಿರುದ್ಧದ ಆಡಳಿತ ವಿರೋಧ ಅಲೆಯ ಮೇಲೆ ತೇಲಿ ಬಂದಿದ್ದು ಎಂದು ಸ್ವತಃ ಕಾಂಗ್ರೆಸ್ಸಿಗರಿಗೇ ಗೊತ್ತು. ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಪುಂಡಾಟಿಕೆಯಿಂದ, ವಿಷಮಯವಾದ ಹಿಂದುತ್ವದ ಅಜೆಂಡಾದಿಂದ ಅಲ್ಲಿನ ಜನತೆ ಸಂಪೂರ್ಣ ರೋಸಿ ಹೋಗಿದ್ದು ಆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಿದ್ದಕ್ಕೆ ಮೂಲಭೂತ ಕಾರಣ. ಇದೇ ಮಾತನ್ನು ಹೈದರಾಬಾದ್ ಕರ್ನಾಟಕ, ಬಿಜಾಪುರ, ಬಾಗಲಕೋಟೆ ಹಾಗೂ ಇತರೇ ಜಿಲ್ಲೆಗಳಿಗೂ ಅನ್ವಯಿಸುತ್ತದೆ. ಇವೆಲ್ಲ ಕಾಂಗ್ರೆಸ್‌ನ್ನು ಕೈ ಹಿಡಿದೆತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಬೆರಳಣಿಕೆಯಷ್ಟು ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೇ ಬಹುಪಾಲು ಕಾಂಗ್ರೆಸ್ಸಿಗರು ಬಿಜೆಪಿಯ ವಿರೋಧಿ ಅಲೆಯ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುತ್ತವೆ ಎಂಬ ಆತ್ಮ ವಿಶ್ವಾಸದಿಂದ, ಅತ್ಯಂತ ನಿರ್ಲಕ್ಷ್ಯ ಮತ್ತು ಉಢಾಫೆಯಿಂದಲೇ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದರು.

ಹಾಗೆಯೇ ಕರ್ನಾಟಕವನ್ನು ದೇಶದಲ್ಲಿಯೇ ಭ್ರಷ್ಟ ರಾಜ್ಯವನ್ನಾಗಿಸಿದ, ಮುಖ್ಯಮಂತ್ರಿ, ಮಂತ್ರಿ, ಶಾಸಕರು ಭ್ರಷ್ಟಾಚಾರದ ಅಪಾದನೆಯ ಮೇಲೆ ಜೈಲು ಸೇರಬೇಕಾದಂತಹ ದುರಂತಕ್ಕೆ ತಳ್ಳಲ್ಪಟ್ಟ, ಕರ್ನಾಟಕವನ್ನು ದಿನನಿತ್ಯ ಹಗರಣಗಳ ಗೂಡನ್ನಾಗಿಸಿದ, ಹಿಂದುತ್ವದ ಅಜೆಂಡವನ್ನು ಅತ್ಯಂತ ನೀಚ ಮಟ್ಟದಲ್ಲಿ ಪ್ರಯೋಗಿಸಿ ಅಲ್ಪಸಂಖ್ಯಾತರ ಜೀವನವನ್ನು ನರಕವನ್ನಾಗಿಸಿದ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲು, ಸಂಘ ಪರಿವಾರವನ್ನು ಕಸದ ಬುಟ್ಟಿಗೆ ತಳ್ಳಲು ಕನ್ನಡದ ಪ್ರಜ್ಞಾವಂತ ಜನತೆ ನಿರ್ಧಾರ ಮಾಡಿಯಾಗಿತ್ತು. ಇದಕ್ಕೆ ಪರ್ಯಾಯ ಪಕ್ಷದ ಅವಶ್ಯಕತೆಯಾಗಿ ಮೂಡಿ ಬಂದದ್ದೇ ಕಾಂಗ್ರೆಸ್. ಏಕೆಂದರೆ ಕನ್ನಡಿಗರು ತಂದೆ, ಮಕ್ಕಳ ಪಕ್ಷ ಮತ್ತವರ ಆಸ್ತಿಯಂತಾಗಿರುವ ಜನತಾ ದಳವನ್ನು ನಂಬಲು ಸುತಾರಾಂ ಸಿದ್ಧರಿರಲಿಲ್ಲ. ಅವರ ಎಲ್ಲಾ ರಾಜಕೀಯ ನಡೆಗಳೂ, ಪಟ್ಟುಗಳೂ ಸ್ವಹಿತಾಸಕ್ತಿಯ, ಕುಟಂಬದ ನೆಲೆಯಲ್ಲಿಯೇ ನಿರ್ಧರಿಲ್ಪಡುತ್ತವೆ. ಅಲ್ಲದೆ ಸರ್ವಜನರನ್ನೂ ತುಳಿಯುವ, ಹತ್ತಿಕ್ಕುವ ಈ ಕುಟುಂಬದ ಸರ್ವಾಧಿಕಾರದ ಧೋರಣೆಯ ಗುಣಗಳನ್ನು ಕನ್ನಡಿಗರು ೨೦೦೮ರಲ್ಲಿಯೇ ತಿರಸ್ಕರಿಸಿದ್ದರು. ಇನ್ನು ಹಾಳೂರಿಗೆ ಉಳಿದವನೇ ರಾಜ ಎಂಬಂತೆ ಅನಿವಾರ್ಯವಾಗಿ ಪರಿಗಣಿತವಾಗಿದ್ದು ಈಗಾಗಲೇ ಸೋತು ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷ. ಅಲ್ಲದೆ ಎಷ್ಟೇ ಭ್ರಷ್ಟಗೊಂಡರೂ ಕಾಂಗ್ರೆಸ್‌ನೊಳಗಿರುವ ಜಾತ್ಯಾತೀತತೆಯ ಮೂಲ ಸೆಲೆ ಇನ್ನೂ ಬತ್ತಿರಲಿಲ್ಲ ಎನ್ನುವ ಜನರ ನಂಬಿಕೆ ಹಾಗೂ ಏನಿಲ್ಲದಿದ್ದರೂ ಸಂಘ ಪರಿವಾರದ ಮತಾಂಧತೆ ಮತ್ತು ಧರ್ಮದ ಆಧಾರದ ಮೇಲಿನ ಸಮಾಜವನ್ನು ಛಿದ್ರವಾಗಿಸುವ ಅತಿರೇಕ ಘಟನೆಗಳು ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ನಡೆಯಲಾರವು ಎನ್ನುವ ವಿಶ್ವಾಸವು ಪ್ರಜ್ಞಾವಂತ, ಪ್ರಗತಿಪರ ಕನ್ನಡಿಗರು ಕಾಂಗ್ರಸ್‌ನ ಪರ ನಿಲ್ಲಲು ಮುಖ್ಯ ಕಾರಣವಾಗಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕವನ್ನು ನರಕವನ್ನಾಗಿಸಿದ್ದರು ಈ ಮತಾಂಧ, ಭ್ರಷ್ಟ ಸಂಘ ಪರಿವಾರದವರು.

ಈ ಎಲ್ಲ ಹಿನ್ನೆಲೆಯಲ್ಲಿ ಇಂದಿನ ರಾಜಕಾರಣವನ್ನು ಅವಲೋಕಿಸಿದಾಗ ಇಂದಿನ 2013 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ, ಮೂವತ್ತು ವರ್ಷಗಳಷ್ಟು ಹಿಂದಿನ 1983 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ ಬಹಳ ಸಾಮ್ಯತೆಗಳಿವೆ. ಆಗ ಸಂಜಯ್ ಬ್ರಿಗೇಡ್ ಗುಂಪಿಗೆ ಸೇರಿದ್ದ, ಅಪಕ್ವ ರಾಜಕಾರಣಿಯಾಗಿದ್ದ ಗುಂಡೂರಾವ್ ನೇತೃತ್ವದಲ್ಲಿ ಅಂಧಾದುಂಧಿ, ಭ್ರಷ್ಟ, ಕ್ಲಬ್ ಮಟ್ಟದ ಆಡಳಿತ ನೀಡಿದ್ದ ಕಾಂಗ್ರೆಸ್ ಪಕ್ಷವು ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗಿತ್ತು. ಕಂಡ ಕಂಡಲ್ಲಿ ಜನತೆ ಕಾಂಗ್ರೆಸ್ಸಿಗರನ್ನು ಉಗಿಯುತ್ತಿದ್ದರು. ಕಾಂಗ್ರೆಸ್‌ನ್ನು ಕಸದ ಬುಟ್ಟಿಗೆ ಎಸೆಯಲು ಕನ್ನಡಿಗರು ತುದಿಗಾಗಲಲ್ಲಿ ನಿಂತಿದ್ದರು. ಕಾಂಗ್ರೆಸ್ ಪಕ್ಷದ ಆಗಿನ ಸ್ಥಿತಿಯು ಇಂದಿನ ಬಿಜೆಪಿ ಸ್ಥಿತಿಯಂತಿತ್ತು. ಆಗ ಉತ್ತುಂಗ ಸ್ಥಿತಿಯಲ್ಲಿದ್ದ ರೈತ ಚಳುವಳಿ, ದಲಿತ ಚಳುವಳಿ ಮತ್ತು ಪ್ರಜ್ಞಾವಂತರ ಪತ್ರಿಕೆಯಾದ ಲಂಕೇಶ್ ಪತ್ರಿಕೆಯ ಸಂಯುಕ್ತ ಮತ್ತು ಸತತ ಹೋರಾಟದ ಫಲವಾಗಿ ಕಾಂಗ್ರೆಸ್ ಧೂಳೀಪಟವಾಗಿತ್ತು. ಸಂಭಾವಿತರಂತೆ ಕಂಗೊಳಿಸುತ್ತಿರುವ ಈಗಿನ ಬಹುಪಾಲು ಕಾಂಗ್ರೆಸ್ ರಾಜಕಾರಣಿಗಳು ಆಗ ವಿಲನ್‌ಗಳಾಗಿ ಮೂಲೆಗುಂಪಾಗಿದ್ದರು. ಅದರ ಫಲವಾಗಿಯೇ ಕರ್ನಾಟಕ ರಾಜಕೀಯದಲ್ಲಿ ಹೊಸ ಪಲ್ಲಟ,ಹೊಸ ಯುಗ ಪ್ರಾರಂಭವಾಗಿತ್ತು. ಆಗ ಈ ಹೊಸ ಯುಗದ ನಾಯಕರಾಗಿ, ಬದಲಾವಣೆಯ ಹರಿಕಾರರಾಗಿ ಮೂಡಿಬಂದಿದ್ದು ಎಂ.ಪಿ.ಪ್ರಕಾಶ್, ಸಿಂಧ್ಯ, ಜೆ.ಹೆಚ್.ಪಟೇಲ್, ನಜೀರ್ ಸಾಬ್, ಬಿ.ರಾಚಯ್ಯ, ಜಾಲಪ್ಪ, ಜೀವಿಜಯ, ದೇವೇಗೌಡ, ಬಿ.ಎಲ್.ಗೌಡ, ಲಕ್ಮೀಸಾಗರ್, ಬಂಗಾರಪ್ಪ, ವೈ.ಕೆ.ರಾಮಯ್ಯ, ಬೈರೇಗೌಡ, ಸಿದ್ದರಾಮಯ್ಯ, ಬಿ.ಆರ್.ಯಾವಗಲ್, ಎಂ.ಚಂದ್ರಶೇಖರ್ ಮುಂತಾದ ಜನತಾ ಪರಿವಾರದ ರಾಜಕಾರಣಿಗಳು. ಇವರೆಲ್ಲರೂ ಶಾಸಕರಾಗಿ ಆಯ್ಕೆಯಾಗಿದ್ದು ಕರ್ನಾಟಕದಲ್ಲಿ ಆಗ ತಂಗಾಳಿಯನ್ನು ಬೀಸಿದಂತಿತ್ತು. ಆಗ ಒಂದು ಬಗೆಯ ಹೊಸ ಗುಣಲಕ್ಷಣಗಳು ನಿಧಾನವಾಗಿ ಮೈದಾಳುತ್ತಿತ್ತು. ಆದರೆ ಚಲಾವಣೆಯಲ್ಲಿ ಇಲ್ಲದ, ಕುತಂತ್ರ ರಾಜಕಾರಣಿ ರಾಮಕೃಷ್ಣ ಹೆಗಡೆ ದೆಹಲಿಯಿಂದ ನೇರವಾಗಿ ಕರ್ನಾಟಕದ ಮೇಲೆರೆಗಿ ಬಿಲ ಹೊಕ್ಕ ಹಾವಿನಂತೆ ಜನತಾ ಪರಿವಾರದಲ್ಲಿ ಸೇರಿಕೊಂಡು, ಭಟ್ಟಂಗಿ, ಜಾತಿವಾದಿ ಪತ್ರಕರ್ತರ ಕುಮ್ಮಕ್ಕಿನಿಂದ ಮುಖ್ಯಮಂತ್ರಿಯೂ ಆಗಿ ಬಿಟ್ಟರು.

ಆದರೂ ಸಹ ಎಂಬತ್ತರ ದಶಕದ ಜನತಾ ಪರಿವಾರದ ಆಡಳಿತದಲ್ಲಿ ಕಂಡುಬಂದ, ಜಾರಿಗೊಂಡ ಹೊಸ ಸಂಕೇತಗಳು, ಅನೇಕ ಗುಣಾತ್ಮಕ ಬದಲಾವಣೆಗಳನ್ನು ನಾವು ಮರೆಯುವಂತಿಲ್ಲ. ಸೀಮಿತ ನೆಲೆಯಲ್ಲಿಯೇ ಆದರೂ ರಾಜ್ಯದ ಆಡಳಿತವು ವಿಕೇಂದ್ರೀಕರಣಗೊಂಡಿದ್ದು ಈ ಜನತಾ ಪರಿವಾರದ ಕಾಲಘಟ್ಟದಲ್ಲಿ. ಭಿನ್ನವಾದ ರಾಜಕೀಯ ಮಾದರಿಗೆ ಜನತಾ ಪರಿವಾರ ಉದಾಹರಣೆಯಂತಿದ್ದದ್ದೂ ಸಹ ನಿಜ.ಹೊಸ ನುಡಿಕಟ್ಟಿನ ಬಳಕೆಗಾಗಿ ಹೊಸ ವೇದಿಕೆಗಳು ನಿರ್ಮಾಣಗೊಂಡಿದ್ದೂ ನಿಜ. ಆದರೆ ಇದೇ ಪರಿವಾರದ ಆಡಳಿತದ ಕಾಲಘಟ್ಟದಲ್ಲಿ ನಡೆದ ಕುದುರೆಮೋತಿ ಸ್ವಾಮಿ ಅತ್ಯಾಚಾರ, ಬೆಂಡಿಗೇರಿ ಪ್ರಕರಣ, ಬದನವಾಳು ಪ್ರಕರಣಗಳು ಶೋಷಿತ ವರ್ಗಗಳನ್ನು, ತಳ ಸಮುದಾಯಗಳನ್ನು ಅತಂತ್ರ ಸ್ಥಿತಿಗೆ, ಮತ್ತಷ್ಟು ದಯನೀಯ ಸ್ಥಿತಿಗೆ ತಳ್ಳಿತು. ಅನೇಕ ಭೂ ಹಗರಣಗಳು ಬಯಲಿಗೆ ಬಂದವು. ಹೆಗಡೆಯ ಕಾಲದಲ್ಲೇ ಬೆಂಗಳೂರು ನಗರ ತನ್ನ ಹಸಿರು ಪಟ್ಟಿಯನ್ನು ಕಳೆದುಕೊಂಡು ರಾಕ್ಷಸ ರೂಪದಲ್ಲಿ ಬೆಳದದ್ದು. ಈ ರಿಯಲ್ ಎಸ್ಟೇಟ್‌ನ ಭೂಗತ ವ್ಯವಹಾರಕ್ಕೆ ಆಗಲೇ ನಾಂದಿ ಹಾಡಿದ್ದು. ಇಂತಹ ಸ್ಥಿತ್ಯಂತರ ಕಾಲದಲ್ಲಿ ಹೆಗಡೆಯವರ ಗುಳ್ಳೇನರಿಯ ತಂತ್ರಗಳು, ಆಸೆಬುರುಕತನ, ಜಾತೀಯತೆಯ ಪ್ರಯೋಗಗಳು, ಇಂದಿನ ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಅಪಾದನೆಗಳಿಗೆ ಸಾಮ್ಯತೆ ಇರುವ ಆಗಿನ ಹೆಗಡೆಯವರ ಮೇಲಿನ ಭ್ರಷ್ಟಾಚಾರದ ಆರೋಪಗಳು, ರಶೀದ್ ಕೊಲೆ ಪ್ರಕರಣ, ಒಳ ಜಗಳ, ತನ್ನೊಳಗೆ ಹರಡಿಕೊಂಡಿದ್ದ ಜಾತೀಯತೆಯ ರೋಗ ಮುಂತಾದ ಅನಿಷ್ಟಗಳೆಲ್ಲ ಜನತಾ ಪಕ್ಷಕ್ಕೇ ಉರುಳಾಗಿದ್ದು ಹಾಗೂ ನಂತರ ನಡೆದದ್ದೆಲ್ಲಾ ಇಂದು ಇತಿಹಾಸ.

ಮೂವತ್ತು ವರ್ಷಗಳ ನಂತರ 1983 ರಲ್ಲಿ ಜನತಾ ಪರಿವಾರ ನಿಂತ ನೆಲೆಯಲ್ಲಿ ಇಂದು ೨೦೧೩ರಲ್ಲಿ ಕಾಂಗ್ರೆಸ್ ಬಂದು ನಿಂತಿದೆ. ಮೇಲ್ನೊಟಕ್ಕಂತೂ ಈ ಬಾರಿ ಆಯ್ಕೆಯಾದ ಬಹುಪಾಲು ಕಾಂಗ್ರೆಸ್ ಶಾಸಕರನ್ನು ಆ ಕಾಲದ ಜನತಾ ಪರಿವಾರದ ನಾಯಕರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ಕಾಂಗ್ರೆಸ್ ಪಕ್ಷದ ಬಲು ದೊಡ್ಡ ಮಿತಿ ಹಾಗು ಸರಿಯಾಗಿ ಮಟ್ಟ ಹಾಕದಿದ್ದರೆ ಪಕ್ಷಕ್ಕೇ ಮುಂದೆ ಉರುಳಾಗುವ ಸಾಧ್ಯತೆಗಳಿವೆ. ಆದರೆ ಇದನ್ನು ಹೊರತುಪಡಿಸಿ ಇಂದು ಬದಲಾವಣೆಯ ಜವಬ್ದಾರಿಯನ್ನು, ಹಿಂದುಳಿದ ವರ್ಗಗಳ ಮತ್ತು ದಲಿತರ ನಡುವೆ ಹೊಸ ಧ್ರುವೀಕರಣದ ಆಶಯಗಳನ್ನು, ಕರ್ನಾಟಕವನ್ನು ಮತೀಯವಾದದ, ಹಿಂದುತ್ವದ ಫೆನೆಟಿಸಂನಿಂದ ಬಿಡುಗಡೆಗೊಳಿಸುವ ಅತ್ಯಂತ ಭಾರವಾದ ಆದರೆ ಅತ್ಯಂತ ಗುರುತರವಾದ ಜವಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಈಗಿನ ಕಾಂಗ್ರೆಸ್ ಪಕ್ಷ ಇದನ್ನೆಲ್ಲ ಹೇಗೆ ನಿಭಾಯಿಸುತ್ತದೆ?? ಕರ್ನಾಟಕವನ್ನು ಪ್ರಗತಿಪರ, ಜಾತ್ಯಾತೀತ ರಾಜ್ಯವಾಗಿ ಕಟ್ಟುವ ಸುವರ್ಣಾವಕಾಶವನ್ನು ಪಡೆದುಕೊಂಡ ಕಾಂಗ್ರೆಸ್‌ನ ನಾಯಕರಲ್ಲಿ ಬಳಿ ಕನಿಷ್ಟ ಇವುಗಳ ಕುರಿತಾಗಿ ಕನಸುಗಳಿವೆಯೇ?? ಕನಸುಗಳಿದ್ದರೆ ಅದನ್ನು ಅನುಷ್ಟಾನಗೊಳಿಸಲು ಇಚ್ಛಾಶಕ್ತಿಯ ಕ್ರೋಢೀಕರಣ ಯಾವ ಮಟ್ಟದಲ್ಲಿದೆ?? ಕ್ರೂರ ಮತ್ತು ಅರಾಜಕತೆಯಿಂದ ಕೂಡಿದ ವ್ಯವಸ್ಥೆಯನ್ನು ಸಹನೀಯಗೊಳಿಸಲು ಒಗ್ಗಟ್ಟಾಗಿ ದುಡಿಯುವ ಧೃಢ ಸಂಕಲ್ಪವನ್ನು ಹೊಂದಿದ್ದಾರೆಯೇ?? ಸಂಘ ಪರಿವಾರದ ಕ್ರೂರ ಸಂತತಿಗಳನ್ನು ಹೆಕ್ಕಿ, ಹೆಕ್ಕಿ ತೆಗೆದು ಶಿಕ್ಷೆಗೆ ಗುರಿಪಡಿಸುತ್ತೇವೆ, ಕರ್ನಾಟಕವನ್ನು ಉಸಿರುಗಟ್ಟಿಸುತ್ತಿರುವ ಭ್ರಷ್ಟಾಚಾರ ಮತ್ತು ಅಪಾಯಕಾರಿ ಹಿಂದುತ್ವದ ಕಬಂಧ ಬಾಹುಗಳಿಂದ ಬಿಡುಗಡೆಗೊಳಿಸುತ್ತೇವೆ ಎಂದು ತುಂಬಾ ಸೂಕ್ಷ್ಮಮತಿಗಳಾಗಿ, ಪ್ರಜ್ಞಾಪೂರ್ವಕವಾಗಿ ಕಾಂಗ್ರೆಸ್ಸಿಗರು ಪಣ ತೊಡಬಲ್ಲರೇ?? ಭೀಕರ ವಾಸ್ತವತೆಯನ್ನು ಮುಖಾಮುಖಿಯಾಗುವ ಎದೆಗಾರಿಕೆ ಮತ್ತು ಮಾನಸಿಕ ಸಿದ್ದತೆಯನ್ನು ಕರ್ನಾಟಕದ ಜನತೆಯ ಮುಂದೆ ಪ್ರಾಮಾಣಿಕವಾಗಿ ನಿವೇದಿಸಿಕೊಳ್ಳಬಲ್ಲರೇ ಈ ಕಾಂಗ್ರೆಸ್ಸಿಗರು?? ಇಂದು ಓಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಸಂಪೂರ್ಣ ಬೆಂಬಲ ಗಳಿಸಿ ಆ ಮೂಲಕ ತನ್ನ ಹಳೇ ಓಟ್ ಬ್ಯಾಂಕ್ ಅನ್ನು ಮರಳಿ ಗಳಿಸಿರುವ ಕಾಂಗ್ರೆಸ್ ಈ ಓಟ್ ಬ್ಯಾಂಕ್ ಅನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ, ತನ್ನ ಅವಕಾಶವಾದಿತನದ ಮುಖವಾಡ ಕಳಚಿ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯಬಲ್ಲದೇ?? ಅಲ್ಲದೆ ಮುಖ್ಯವಾಗಿ ಈ ಕಾಂಗ್ರೆಸ್ ಡಿ.ಕೆ.ಶಿವಕುಮಾರ್, ದೇವರಾಜ್ ರಂತಹ ಹಾಗೂ ಇನ್ನಿತರ ಅವಾಂತಕಾರಿ ರಾಜಕಾರಣಿಗಳನ್ನು ಹೇಗೆ ನಿಭಾಯಿಸುತ್ತದೆ??

ಕೊನೆಯದಾಗಿ, ಈಗಿನ ಚುನಾವಣಾ ಫಲಿತಾಂಶಗಳು ಕರ್ನಾಟಕ ರಾಜಕೀಯವನ್ನು ಒಂದು ನಿರ್ಣಾಯಕ ಹಂತದಲ್ಲಿ ತಂದು ನಿಲ್ಲಿಸಿದೆ. ಅದೇನೆಂದರೆ ಇನ್ನು ಮುಂದಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣವು ತನ್ನ ಪಕ್ಕದ ತಮಿಳುನಾಡು, ಕೇರಳದ ಜಾಡಿಗೆ ಹೊರಳುತ್ತಿದೆ ಎಂಬುದು. ಈ ಅವಕಾಶವಾದಿ, ಭ್ರಷ್ಟ ಕೆಜೆಪಿ ಪಕ್ಷ ಸಂಪೂರ್ಣವಾಗಿ ಮುಗ್ಗರಿಸಿ ನಾಮಾವಶೇಷವಾಗಿದೆ. ಇನ್ನು ಭವಿಷ್ಯದಲ್ಲಿ ತಂದೆ ಮಕ್ಕಳ ಪಕ್ಷ ಜನತಾ ದಳದ ಪ್ರಭಾವ ಮತ್ತು ಬಲಾಬಲ ಮತ್ತಷ್ಟು ಕುಗ್ಗುವ ಸಾಧ್ಯತೆಗಳಿವೆ. ಕಡೆಗೆ ತಮಿಳುನಾಡಿನ ಡಿ.ಎಂ.ಕೆ ಮತ್ತು ಏಐಡಿಎಂಕೆ, ಕೇರಳದ ಯುಡಿಎಫ್ ಮತ್ತು ಎಲ್‌ಡಿಫ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು. ಅದಕ್ಕೆ ೨೦೧೩ರ ಚುನಾವಣೆ ಮುನ್ನುಡಿಯನ್ನು ಬರೆದಂತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸುಳ್ಳು ಮಾಡಲು ಮುಂದಿನ ಐದು ವರ್ಷಗಳ ಅವಕಾಶವಿದೆ.

ಮೇಲಿನ ಸಾಧ್ಯತೆಗಳನ್ನು ಸುಳ್ಳು ಮಾಡಲು ಇಂದಿನ ಚುನಾವಣೆಯಲ್ಲಿ ನಮ್ಮ ಪ್ರೀತಿಯ, ಪ್ರಗತಿಪರ ನಾಯಕ ಪುಟ್ಟಣ್ಣಯ್ಯ ಗೆದ್ದಿದ್ದಾರೆ. ಇದು ಭವಿಷ್ಯದ ಕುರಿತಾಗಿ ಹೊಸ ಭರವಸೆ. ಲೋಕಸತ್ತಾ ಪಕ್ಷದಿಂದ ಸ್ಪಧಿಸಿದ್ದ ರವಿ ಕೃಷ್ಣಾರೆಡ್ಡಿ 6596 ರಷ್ಟು ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿಯೂ, ಅಶ್ವಿನ್ ಮಹೇಶ್ 11915 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿಯೂ, ಶಾಂತಲಾ ದಾಮ್ಲೆ 9071 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದು ಇವರೆಲ್ಲ ಹಣ ಹಂಚದೆ, ಬದಲಾಗಿ ಜನತೆಯಿಂದಲೇ ಹಣ ಪಡೆದು ಪ್ರಾಮಾಣಿಕ ಚುನಾವಣೆ ನಡೆಸಿದವರು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಲೋಕಸತ್ತಾ ಪಕ್ಷ, ಮತ್ತು ಕಮ್ಯುನಿಷ್ಟ್ ಪಕ್ಷ ಇವರೆಲ್ಲರೂ ಒಗ್ಗಟ್ಟಾಗಿ ಧ್ರವೀಕರಣಗೊಳ್ಳಬೇಕಾಗಿದೆ. ಆ ಮೂಲಕ ಪರ್ಯಾಯ ರಾಜಕಾರಣಕ್ಕೆ ಒಂದು ಮುನ್ನುಡಿಯನ್ನು ಬರೆಯಬಾರದೇಕೆ??

ಇದು ಕತ್ತಲ ದಾರಿಯೇ ನಿಜ, ಆದರೆ ಇಚ್ಛಾಶಕ್ತಿಯ ಬಲ, ಪ್ರಾಮಾಣಿಕತೆಯ, ನೈತಿಕತೆಯ ಬಲ ಎಂದಿಗೂ ಬೆಳಕಿನ ಹಣತೆಗಳೇ. ಇದನ್ನು ಹಚ್ಚಬೇಕಷ್ಟೇ.

13 thoughts on “ಸೋತು ಗೆದ್ದ ಹಳೆಯ ಜಾತ್ಯಾತೀತ ಪಕ್ಷವೊಂದರ ಕಥೆ, ವ್ಯಥೆ?

  1. Ananda Prasad

    ಸಭ್ಯ, ಸುಸಂಸ್ಕೃತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಧಾರಣೆ ತರಬಲ್ಲಂಥ ಜನ ರಾಜಕೀಯಕ್ಕೆ ಬರುವುದು ಬೇಡ ಎಂಬುದು ನಮ್ಮ ಮತದಾರರ ಅಭಿಪ್ರಾಯ ಎಂದು ಈ ಚುನಾವಣೆಯ ಫಲಿತಾಂಶದಿಂದ ಕಂಡುಬರುತ್ತಾ ಇದೆ. ನಾವು ಕೆಸರಿನಲ್ಲೇ ಇರುತ್ತೇವೆ, ಅದರಿಂದ ಮೇಲೆ ಬರುವ ಇಚ್ಛಾಶಕ್ತಿ ನಮ್ಮಲ್ಲಿ ಇಲ್ಲ ಎಂಬುದು ನಮ್ಮ ಮತದಾರರ ಅಭಿಪ್ರಾಯ ಎಂಬುದು ಈ ಚುನಾವಣೆಯಿಂದ ಕಂಡುಬರುತ್ತದೆ. ಲೋಕಸತ್ತಾ ಪಕ್ಷದಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನೂ ಚುನಾವಣೆಯಲ್ಲಿ ಗೆಲ್ಲಿಸಲಿಲ್ಲ ಎಂದರೆ ನಮ್ಮ ಜನರಿಗೆ ಪ್ರಾಮಾಣಿಕ, ಜವಾಬ್ದಾರಿಯುತ, ಸುಧಾರಣೆ ತರಬಲ್ಲಂಥ ಜನ ರಾಜಕೀಯಕ್ಕೆ ಬರುವುದು ಬೇಡವಾಗಿದೆ ಎಂದಲ್ಲವೇ ಅರ್ಥ? ಸಾಂಪ್ರದಾಯಿಕತೆಯಿಂದ ಹೊರತಾಗಿ ಚಿಂತಿಸುವ ಪ್ರವೃತ್ತಿಯೇ ನಮ್ಮ ಜನರಲ್ಲಿ ಇಲ್ಲ. ಹೀಗಾಗಿಯೇ ನಮಗೆ ಪಾಶ್ಚಾತ್ಯ ದೇಶಗಳಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತಿಲ್ಲ. ನಮ್ಮ ಜನರ ಮಾನಸಿಕ ಸ್ಥಗಿತತೆಯೇ ಇದಕ್ಕೆ ಕಾರಣ. ಹೀಗಾದರೆ ಇನ್ನು ಸಾವಿರ ವರ್ಷಗಳು ಕಳೆದರೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕೆಸರಿನ ಕೊಳಚೆಯ ಕೂಪದಿಂದ ಮೇಲಕ್ಕೆ ಏಳಲಾರದು.

    Reply
  2. Srini

    Agree with Anand. It is very sad to see Loksatta not opening the tally this time. However, they got some good vote share (very respectable). They should continue what they are doing and I am sure they start opening the tally very soon.

    I am very happy to see 2 biggest idiots of Karnataka politics loosing heavily – Renukacharya & Eshwarappa. That shows intelligence side of our voters as well.

    Also victory Haladi Srinivas Shetty in Kundapur shows money can’t. He won as an independent candidate without spending any. Paksha mukyavalla, Vyakti mukhya.

    Finally, victory of Mr.Sureh Kumar (rajaji Nagar) shows if you work, people respect you. He was the only sensible person in the past government.

    Reply
  3. Sandy

    ಸುಮಾರು 24 ಕ್ಷೆತ್ರಗಳಲ್ಲಿ ಸ್ಪರ್ದಿಸಿದ ಏಸ್ ಡಿ ಪಿ ಐ (Social Democratic Party of India – SDPI) ಒಂದು ಕಡೆ 2ನೆ ಸ್ಥಾನ, 4 ಕಡೆ 3ನೇ ಸ್ಥಾನ ಮತ್ತು 4 ಕಡೆಗಳಲ್ಲಿ 4ನೇ ಸ್ಥಾನ ಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದೆ ಅಲ್ಲದೆ ಒಟ್ಟಾಗಿ ಸುಮಾರು ೧ ಲಕ್ಷಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಡಿದೆ. ಮುಂದಿನ ದಿನಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ರೈತರು, ಪ್ರಗತಿಪರರು, ಒಟ್ಟಾಗಿ ನಿಂತು ಪರ್ಯಾಯ ನೀಡಬೇಕಾದ ಅವಶ್ಯಕತೆ ಕರ್ನಾಟಕದಲ್ಲಿ ಇದೆ.

    Reply
    1. Malathi

      DAYAMAADI SDPI, KDF, POPULAR FRONT, PDP MODALADA KOMUVAADIGALANNU VARTHAMAANAKKE SERISABEDI. RSS BJP VHP GALASTE APAAYAKAARIGALU IVARU. KERALADALLI POPULAR FRONT MUGDHARA MANASSU KEDISI AYUDHA TARABETHI NEEDUTTA IDE. IVUGALELLA SAMAAJASEVEYA MUKHA HOTTA GOMUKHA VYAGHRAGALU. BHAYOTPAADAKARA GURUGALU

      Reply
  4. bhatmahesht

    ಹೆಗಡೆಯವರು ಜಾತಿವಾದಿಗಳಾಗಿದ್ದರೇ… ಹೆಗಡೆಯವರು ಬೆಳೆಸಿದ ಅವರ ಜಾತಿಯ ಲೀಡರ್ ಗಳನ್ನು ಮತ್ತು ಅವರ ಜಾತಿಯವರಿಗೆ ಯಾರ್ಯಾರಿಗೆ ಅನುಕೂಲ ಮಾಡಿಕೊಟ್ಟರು ಎನ್ನುವುದನ್ನು ಹೆಸರಿಸಿ.

    Reply
  5. ವಿಜಯ್

    ತಿಮ್ಮನಿಗೆ ಹಸು ಎಂಬ ವಿಷಯದ ಕುರಿತಾಗಿ ಮಾತ್ರ ಬರೆಯಲು ಬರುತ್ತಿತ್ತಂತೆ. ಒಮ್ಮೆ ವಿಮಾನದ ಬಗ್ಗೆ ಬರೆಯಿರಿ ಎಂದರಂತೆ. ತಿಮ್ಮ ಬರೆಯಲು ಪ್ರಾರಂಭ ಮಾಡಿದ ‘ ವಿಮಾನ ಆಕಾಶದಲ್ಲಿ ಹಾರಾಡುತ್ತದೆ. ತುಂಬಾ ಎತ್ತರದಲ್ಲಿ ಹಾರಾಡುತ್ತದೆ.ತುಂಬಾ ಎಂದರೆ ನಮ್ಮ ಕರೆಂಟಿನ ಕಂಬಕ್ಕಿಂತಲೂ ಸಾಕಷ್ಟು ಪಟ್ಟು ಎತ್ತರದಲ್ಲಿ. ಕರೆಂಟಿನ ಕಂಬಕ್ಕೆ ಕೆಲವರು ಹಸುವನ್ನು ಕಟ್ಟಿ ಹಾಕುತ್ತಾರೆ. ಹಸು ಒಂದು ಸಾಕುಪ್ರಾಣಿ.ಸಾಧು ಪ್ರಾಣಿ ಕೂಡ ಹೌದು. ಅದು ನಮಗೆ ಹಾಲನ್ನು ಕೊಡುತ್ತದೆ..’ ಹೀಗೇ ತಿಮ್ಮನಿಗೆ ಏನೇ ಕೇಳಿದರೂ ವಿಷಯ ವಿವರಣೆ ಬಂದು ಮುಟ್ಟುವುದು, ಸುತ್ತುವುದು ಹಸುವಿನ ಕಾಲಿಗೆ ಆಗಿತ್ತು.

    ಈ ಲೇಖಕರ ವರ್ತಮಾನದಲ್ಲಿಯ ಯಾವುದೇ ಲೇಖನ ಓದಿದರೂ ನನಗೆ ನೆನಪಿಗೆ ಬರುವುದು ಈ ಪ್ರಸಂಗ..ಒಂದೇ ಬದಲಾವಣೆಯೆಂದರೆ ಈ ಲೇಖನದಲ್ಲಿ ಮೋದಿ ಪ್ರಸ್ತಾಪ ಇಲ್ಲದಿರುವುದು. ಈ ಸಲ ನಾನು ಮತ್ತು ನನ್ನ ಸಾಕಷ್ಟು ಸ್ನೇಹಿತರು ಮತ ಹಾಕಿದ್ದು ಕಾಂಗ್ರೆಸ್ ಅಭ್ಯರ್ಥಿಗೆ. ಆದರೆ ಈ ಲೇಖಕರು ಹೇಳಿದ ‘ಪ್ರಜ್ಞಾವಂತ, ಪ್ರಗತಿಪರ’ ಇನ್ನೇನೊ ಭಾವನೆಗಳಿಂದಲ್ಲ. ಭೃಷ್ಟಗೊಂಡ ಬಿಜೆಪಿಗೆ ಒಂದು ಸಲ ಬುದ್ಧಿ ಕಲಿಸಬೇಕು ಎಂಬ ಸಿಂಪಲ್ ಅಜೆಂಡದಿಂದ. ಲೇಖಕರು ಬಿಜೆಪಿ ಸೋಲಿಗೆ ಕಾರಣ ಹುಡುಕುವಲ್ಲಿ ತಮ್ಮ ಎಂದಿನ ಕಲ್ಪನಾ ವಿಲಾಸ ಹರಿಬಿಟ್ಟಿದ್ದಾರೆ.

    Reply
  6. B.Sripad Bhat

    ಈ ಜನಗಳ ದುರಹಂಕಾರ,ಹಮ್ಮುಗಳಿಗೆ ಕೊನೆಯೇ ಇಲ್ಲವೇ ??? ತಾನು ಓಟು ಹಾಕಿದ್ದನ್ನು ಹೆಮ್ಮೆಯಿಂದ ಮತ್ತು ಇದನ್ನೊಂದು ಘನಕಾರ್ಯವೆಂಬಂತೆ ಹೇಳಿಕೊಳ್ಳುವುದನ್ನು ಏನಂತ ಅರ್ಥೈಸುವುದು. ಈ ಜನಗಳಿಗೆ ಸಂವೇದನಶೀಲ ಪದಬಳಕೆಗಳೇ ಅಪಥ್ಯ. ತಾನೊಬ್ಬ ಸುಶಿಕ್ಷಿತನೆಂಬಂತೆ,ಜ್ನಾನಿಯೆಂಬಂತೆ ತೋರಿಸಿಕೊಳ್ಳುವ ಈ ಜನಗಳು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳಲು ಸಹ ನಿರಾಕರಿಸುತ್ತಾರೆ. ಮತ್ತೊಬ್ಬನನ್ನು ಟೀಕಿಸುವ ಭರದಲ್ಲಿರುವ ಈ ಜನಗಳಿಗೆ ಓದುವಿಕೆಯ ಸೂಕ್ಶ್ಮತೆಯೇ ಪ್ರಶ್ನಾರ್ಹ

    Reply
    1. ವಿಜಯ್

      ಇದು ನನಗೆ ಮಾಡಿದ ಮರುಪ್ರತಿಕ್ರಿಯೆ ಇರಬಹುದು ಎಂದು ತಿಳಿದುಕೊಂಡು ಉತ್ತರಿಸುತ್ತಿದ್ದೇನೆ.
      ‘ಈ ಜನಗಳ ದುರಹಂಕಾರ,ಹಮ್ಮುಗಳಿಗೆ ಕೊನೆಯೇ ಇಲ್ಲವೇ ???’
      ಇಲ್ಲಿ ನಾನು ಯಾವುದರ ಬಗ್ಗೆ ದುರಹಂಕಾರ ಮತ್ತು ಹಮ್ಮು ತೋರಿಸಿದೆನೆಂದು ಗೊತ್ತಾಗಲಿಲ್ಲ. ತಿಳಿಸಿದರೆ ತಿದ್ದಿಕೊಳ್ಳುತ್ತೇನೆ!.

      ‘ ತಾನು ಓಟು ಹಾಕಿದ್ದನ್ನು ಹೆಮ್ಮೆಯಿಂದ ಮತ್ತು ಇದನ್ನೊಂದು ಘನಕಾರ್ಯವೆಂಬಂತೆ ಹೇಳಿಕೊಳ್ಳುವುದನ್ನು ಏನಂತ ಅರ್ಥೈಸುವುದು.’

      ಮತ ಹಾಕುವುದು ಘನ ಕಾರ್ಯವೆ.. ಪ್ರಜಾಪ್ರಭುತ್ವದ ಪ್ರಕಾರ!. ಯಾರಿಗೆ ಹಾಕಿದೆ ಎಂದು ಹೇಳುವುದು ಗೌಪ್ಯತೆಯ ಪ್ರಕಾರ ತಪ್ಪಿರಬಹುದು..ಬೆಂಬಲಿಸಿದೆವು ಎನ್ನುವ ಪದ ಬಳಸಬೇಕಿತ್ತೇನೊ. ಮತ ಹಾಕಿದ್ದನ್ನು ಹೇಳುವ ಅವಶ್ಯಕತೆ ಯಾಕೆ ಬಂತೆಂದರೆ ಕಾಂಗ್ರೆಸಿಗೆ ಓಟು ಹಾಕಿದವರೆಲ್ಲ ನೀವು ಹೇಳುವಂತಹ ‘ಸಂವೇದನಶೀಲ,ಪ್ರಗತಿಪರ,ಪ್ರಜ್ಞಾವಂತ’ ಮನಸ್ಥಿತಿಯವರಲ್ಲ,ನಿಮ್ಮ ಕಣ್ಣಿಗೆ ಢಾಳಾಗಿ ಕಂಡಂತಹ, ಯಾವತ್ತೂ ಕಾಣುವಂತಹ, ಕರ್ನಾಟಕದ ತುಂಬ ಹರಡಿಕೊಂಡಂತಹ ‘ಬಿಜೆಪಿ, ಸಂಘಪರಿವಾರದ ‘ಮತಾಂಧತೆಯ ನರಕ’ ಅವರ ಕಣ್ಣಿಗೆ ಕಂಡು ಬಂದು, ಬಿಜೆಪಿಯ ವಿರುದ್ಧ ಅವರು ಮತ ಹಾಕಲಿಲ್ಲ..ಬದಲಾಗಿ ಹೆಚ್ಚಿನವರು ಮತ ಹಾಕಿದ್ದು ಕರ್ನಾಟಕ ಬಿಜೆಪಿಯ ಬ್ರಷ್ಟಾಚಾರಕ್ಕೆ ಬೇಸತ್ತು , ಪಾಠ ಕಲಿಸುವ ಉದ್ದೇಶದಿಂದ ಎಂದು.

      ‘ ಈ ಜನಗಳಿಗೆ ಸಂವೇದನಶೀಲ ಪದಬಳಕೆಗಳೇ ಅಪಥ್ಯ. ‘

      ನನ್ನ ಸಂವೇದನಶೀಲತೆಯ ಪದರು ಸ್ವಲ್ಪ ದಪ್ಪವಿರಬಹುದು. ಆದರೆ ನನಗಿರುವುದು ಒಂದೇ ಪದರಿನ ಸಂವೇದನಶೀಲತೆ. ಹಲವು ಪದರುಗಳುಳ್ಳ, ಹಲವು ‘ಪ್ರಯಾರಿಟಿ’ ಗಳನ್ನುಳ್ಳ ಸಂವೇದನಾಶೀಲತೆ ನನಗಿಲ್ಲ. ಇಷ್ಟಾಗಿಯೂ ನನಗೆ ಸಂವೇದನಾಶೀಲತೆಯೇ ಇಲ್ಲ ಎಂದು ನಿಮಗನಿಸಿದರೆ ನನಗೆ ಬೇಸರವೇನಿಲ್ಲ. ಹೇಳಬೇಕಾದಂತಹುದೆಲ್ಲವನ್ನು ಢಾಳಾಗಿ ಬರೆದಂತಹ ಲೇಖನ ಓದಲು ಮತ್ತೆ ಎಂತಹ ಸೂಕ್ಷ್ಮತೆ ಇರಬೇಕೊ ಅರ್ಥವಾಗಲಿಲ್ಲ.

      Reply
    2. ವಿಜಯ್

      ‘ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಪುಂಡಾಟಿಕೆಯಿಂದ, ವಿಷಮಯವಾದ ಹಿಂದುತ್ವದ ಅಜೆಂಡಾದಿಂದ ಅಲ್ಲಿನ ಜನತೆ ಸಂಪೂರ್ಣ ರೋಸಿ ಹೋಗಿದ್ದು ಆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಿದ್ದಕ್ಕೆ ಮೂಲಭೂತ ಕಾರಣ. ಇದೇ ಮಾತನ್ನು ಹೈದರಾಬಾದ್ ಕರ್ನಾಟಕ, ಬಿಜಾಪುರ, ಬಾಗಲಕೋಟೆ ಹಾಗೂ ಇತರೇ ಜಿಲ್ಲೆಗಳಿಗೂ ಅನ್ವಯಿಸುತ್ತದೆ.’
      ‘ಏನಿಲ್ಲದಿದ್ದರೂ ಸಂಘ ಪರಿವಾರದ ಮತಾಂಧತೆ ಮತ್ತು ಧರ್ಮದ ಆಧಾರದ ಮೇಲಿನ ಸಮಾಜವನ್ನು ಛಿದ್ರವಾಗಿಸುವ ಅತಿರೇಕ ಘಟನೆಗಳು ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ನಡೆಯಲಾರವು ಎನ್ನುವ ವಿಶ್ವಾಸವು ಪ್ರಜ್ಞಾವಂತ, ಪ್ರಗತಿಪರ ಕನ್ನಡಿಗರು ಕಾಂಗ್ರಸ್‌ನ ಪರ ನಿಲ್ಲಲು ಮುಖ್ಯ ಕಾರಣವಾಗಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕವನ್ನು ನರಕವನ್ನಾಗಿಸಿದ್ದರು ಈ ಮತಾಂಧ, ಭ್ರಷ್ಟ ಸಂಘ ಪರಿವಾರದವರು.’
      ‘ಹಿಂದುತ್ವದ ಅಜೆಂಡವನ್ನು ಅತ್ಯಂತ ನೀಚ ಮಟ್ಟದಲ್ಲಿ ಪ್ರಯೋಗಿಸಿ ಅಲ್ಪಸಂಖ್ಯಾತರ ಜೀವನವನ್ನು ನರಕವನ್ನಾಗಿಸಿದ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲು, ಸಂಘ ಪರಿವಾರವನ್ನು ಕಸದ ಬುಟ್ಟಿಗೆ ತಳ್ಳಲು ಕನ್ನಡದ ಪ್ರಜ್ಞಾವಂತ ಜನತೆ ನಿರ್ಧಾರ ಮಾಡಿಯಾಗಿತ್ತು.’

      ಈ ಸ್ವ ಕಲ್ಪಿತ ‘ಮೂಲಭೂತ ಕಾರಣ’ವನ್ನು ಸಮರ್ಥಿಸಲು ನಿಮ್ಮಲ್ಲಿ ಅಂಕಿ-ಅಂಶಗಳಿವೆಯೆ? ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಗೆ ಕಡಿಮೆ ಮತ ಬಿಳಲು ಬೃಷ್ಟಾಚಾರ, ದುರಾಡಳಿತದ ಜೊತೆಗೆ, ಯಾರೊ ಒಬ್ಬರನ್ನು ತೃಪ್ತಿ ಮಾಡಲು ತಮ್ಮವರೊಬ್ಬರನ್ನು ಕಾರಣವಿಲ್ಲದೇ ಮುಖ್ಯಮಂತ್ತಿ ಪಟ್ಟದಿಂದ ಇಳಿಸಿದರು ಎಂಬುದು ಕೂಡ ಕಾರಣ ಎಂದು ನಾನು ಬರೆದರೆ ತಪ್ಪಾಗುತ್ತದೆಯೆ? ಇದನ್ನು ಒಪ್ಪುವಂತೆ ಉಳಿದ ಭಾಗಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಕೆ.ಜಿ.ಪಿ ಸಾಧನೆ ನಗಣ್ಯ. ಕರಾವಳಿ ಭಾಗದಲ್ಲಿ ಬಿಜೆಪಿ ಹೋದ ಚುನಾವಣೆಗಿಂತ (೨೦೦೮) ಶೆ.೭ ರಷ್ಟು ಕಡಿಮೆ ಮತ ತೆಗೆದುಕೊಂಡಿದೆ..ಕಾಂಗ್ರೆಸ ಮತಗಳಿಕೆಯ ಪ್ರಮಾಣ ಕೇವಲ ಶೆ.೧.೨ ರಷ್ಟು ಹೆಚ್ಚಾಗಿದೆ. ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿ ಶೆ.೧೪ ರಷ್ಟು ಕಡಿಮೆ ಮತ ತೆಗೆದುಕೊಂಡರೆ, ಕಾಂಗ್ರೆಸ್ ಗಳಿಕೆ ಶೆ.೨ ರಷ್ಟು. . ಹೈದರಾಬಾದ್-ಕರ್ನಾಟಕದಲ್ಲಿ, ಮುಂಬಯಿ-ಕರ್ನಾಟಕದಲ್ಲಿ ಬಿಜೆಪಿ+ಕೆಜೆಪಿ+ಬಿಎಸ್ಆರ ಪಕ್ಷಗಳ ಒಟ್ಟು ಮತಗಳಿಕೆ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚೆ ಇದೆ. ಕರ್ನಾಟಕ ರಾಜ್ಯಾದಂತ ತೆಗೆದುಕೊಂಡರೆ ಕಾಂಗ್ರೆಸ್ ಮತ ಗಳಿಕೆಯ ಹೆಚ್ಚಳ ಶೆ ೨.೨ ರಷ್ಟು ಮಾತ್ರ. ನಿಮ್ಮ ಮಾತೇ ಸತ್ಯವಾಗಿದಿದ್ದರೆ ಬೇರೆ ಎಲ್ಲಿ ಅಲ್ಲದಿದ್ದರೂ ಕರಾವಳಿಯಲ್ಲಿ ಜನ ಕಮ್ಯೂನಿಷ್ಟ ಅಭ್ಯರ್ಥಿಗಳನ್ನು ಆರಿಸಬೇಕಿತ್ತು, ಇಲ್ಲವೆಂದಾದರೆ ಉತ್ತಮ ಬೆಂಬಲವನ್ನಾದರೂ ಕೊಡಬೇಕಿತ್ತು. ಕರಾವಳಿಯಲ್ಲಿ ಕಮ್ಯೂನಿಷ್ಟರ ಮತಗಳಿಕೆಯನ್ನು ನೀವೇ ಪರೀಶಿಲಿಸಬಹುದು.

      Reply
  7. Prasad

    ಲೇಖಕರ ದೃಷ್ಟಿಯಲ್ಲಿ ಒಂದೇ ಬಾಂಬಿನಲ್ಲಿ ಹತ್ತಾರು ಜನರನ್ನು ಕೊಲ್ಲುವ ಇಸ್ಲಾಮಿ ಭಯೋತ್ಪಾದನೆಗಿಂತ, ಹಿಂದುಗಳನ್ನು ರಕ್ಷಿಸುವ, ನಮ್ಮ ಪವಿತ್ರ ಗೋವುಗಳನ್ನು ರಕ್ಷಿಸುವ ಸಂಘ ಪರಿವಾರ ಹಾನಿಕರ. ರಾಜ್ಯದಲ್ಲಿ ದೊಡ್ಡ ಸಮಸ್ಯೆ ಸಂಘ ಪರಿವಾರ.

    ಇಂದು ದೇಶದ ಯಾವುದೇ ಭಾಗದಲ್ಲಿ ಇಸ್ಲಾಮಿ ಭಯೋತ್ಪಾದಕರು ನಿರಾತಂಕವಾಗಿ ಬಾಂಬ್ ಇಡುತ್ತಾರೆ ಎಂದಾದರೆ, ಭಯೋತ್ಪಾದಕರ ಬೇರುಗಳು ಈ ದೇಶದ ಎಲ್ಲ ಭಾಗಗಳಲ್ಲಿ ಎಷ್ಟು ಹಬ್ಬಿ ಹೋಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ಅದನ್ನು ತಡೆಗಟ್ಟುವ ಬಗ್ಗೆ ಒಂದು ವಾಕ್ಯವೂ ತಮ್ಮ ಲೇಖನದಲ್ಲಿಲ್ಲ. ಅಂದರೆ ಭಯೋತ್ಪಾದನೆ ದೇಶದ ಸಮಸ್ಯೆಯೇ ಅಲ್ಲ. ಸಂಘ ಪರಿವಾರದವರು ಎಷ್ಟು ಅಮಾಯಕರ ಪ್ರಾಣ ತೆಗೆದಿದ್ದಾರೆ?

    ಸಮಾಜದ ಒಂದು ವರ್ಗಕ್ಕೆ ಗೋಹತ್ಯೆ ಒಪ್ಪಿಗೆ ಇದ್ದ ಮಾತ್ರಕ್ಕೆ ಎಲ್ಲರೂ ಒಪ್ಪಬೇಕೆನ್ದೇನಿಲ್ಲ. ಇಂದಿಗೂ ಗೋವನ್ನು ದೇವರು ಎನ್ನುವ ಕೋಟ್ಯಂತರ ಮಂದಿ ಈ ದೇಶದಲ್ಲಿದ್ದಾರೆ. ಲೇಖಕರ ದೃಷ್ಟಿಯಲ್ಲಿ ಸಂಘ ಪರಿವಾರದ ನಿಲುವೆಲ್ಲ ಪ್ರಜಾಪ್ರಭುತ್ವ ವಿರೋಧಿ. ಹಿಂದೂಗಳ ಭಾವನೆಗಳಿಗೆ ಬೆಲೆ ಇಲ್ಲ. (ಲೇಖನದಲ್ಲಿ ಎಲ್ಲೂ ಗೋ ಹತ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ, ಆದರೆ ಸಂಘ ಪರಿವಾರದ ಮೂಲ ಗುರಿ ಗೋ ಸಂರಕ್ಷಣೆ)

    ಈ ದೇಶದ ಸದನದಲ್ಲಿ ‘ವಂದೇ ಮಾತರಂ ‘ ಗೀತೆಗೆ ಗೌರವ ಕೊಡುವುದಿಲ್ಲ ಎಂದು ನಿರ್ಭಯವಾಗಿ ಒಬ್ಬ ಮುಸ್ಲಿಂ ಸಂಸದ ಲೋಕಸಭೆಯಲ್ಲಿ ಹೇಳುತ್ತಾನೆ ಎಂದರೆ, ಅಲ್ಪಸಂಖ್ಯಾತರಿಗೆ ಇದಕ್ಕಿಂತ ಇನ್ನೆಷ್ಟು ಸ್ವಾತಂತ್ರ್ಯ ಕೊಡಲಿಕ್ಕೆ ಸಾಧ್ಯ? ಭಾರತ ಬಿಟ್ಟು ಮುಸ್ಲಿಮೇತರ ಯಾವುದೇ ರಾಷ್ಟ್ರದಲ್ಲಿ ಇದನ್ನು ಸಹಿಸುತ್ತಿದ್ದರ? ಇದಕ್ಕಿಂತ ಹೆಚ್ಚು ಸ್ವಾತಂತ್ರ್ಯ ಸಿಗಲಿಕ್ಕೆ ಸಾಧ್ಯವೇ? ಮುಸ್ಲಿಂ ಸಮುದಾಯದಲ್ಲಿ ಸಾಮರಸ್ಯಕ್ಕೆ ಅವಕಾಶವಿದ್ದಲ್ಲಿ ಹಿಂದುಗಳಿಗೆ ಪವಿತ್ರವಾದ ಗೋವನ್ನು ಹತ್ಯೆ ಮಾಡದಿರುವ ಒಂದೇ ಒಂದು ತ್ಯಾಗಕ್ಕೆ ಸಿದ್ದರಾಗಬಹುದಿತ್ತು. ನಿಮ್ಮ ವರ್ತಮಾನದ ಇತರೆ ಲೇಖನಗಳಲ್ಲಿ “ಗೋಹತ್ಯ ನಿಷೇಧ ಅಲ್ಪಸಂಖ್ಯಾತರ ಹೊಟ್ಟೆಗೆ ಹೊಡೆಯುವ ಕ್ರಮ” ಎಂದು ಬರೆದಿದ್ದೆರಿ. ಈ ದೇಶದಲ್ಲಿ ಗೋಭಕ್ಷಣೆ ಇಲ್ಲದೆ ಯಾರೂ ಹೊಟ್ಟೆ ತು೦ಬಿಸಿಕೊಲ್ಲುವುದಿಲ್ಲವೆ ?

    ಎಲ್ಲದಕ್ಕೂ ಸಂಘ ಪರಿವಾರದ ದೂಷಣೆ ಮಾಡುವ ಮುನ್ನ ಒಮ್ಮೆ ಆರ್ ಎಸ್ ಎಸ್ ಭೈಟಕ್ ಗಳಿಗೆ ಭೇಟಿ ಕೊಟ್ಟು ನೋಡಿ, ಅಲ್ಲಿ ಏನು ಹೇಳಿಕೊಡುತ್ತಾರೆ ಅಂತ ತಿಳಿಯುತ್ತೆ. ಅಲ್ಲಿ ಯಾವುದೇ ಧರ್ಮವನ್ನು ಹೀಯಾಳಿಸುವುದು ಇಲ್ಲ, ಗಲಭೆಗಳಿಗೆ ಪ್ರಚೋದನೆಯನ್ನು ಕೊಡುವುದಿಲ್ಲ.

    Reply
  8. Vasanth

    ಹೌದು ಸ್ವಾಮಿ ಆರ್ ಎಸ್ ಎಸ್ ಜನ ಯಾವುದೇ ಧಮ‍‍್ವನ್ನು ದ್ವೇಸಿಸುವುದಿಲ್ಲ. ಅದರೆ ಪ್ರಚೋದಿಸುತ್ತಾರೆ. ಗಾಂಧಿಯನ್ನು ಕೊಂದವರು ಮುಸ್ಲಿಂರಲ್ಲ ಸ್ವಾಮಿ. ಇದೇ ಆರ್ ಎಸ್ ಎಸ್ ಜನ. ಈ ದೇಶದ ಮುಸ್ಲಿಂರು ಯಾವುದೇ ಭಯೋತ್ಪಾದನೆಯಲ್ಲಿ ತೊಡಗಿಲ್ಲ. ಅದರೆ ನಿಮ್ಮ ಸಂಘ ಪರಿವಾರಿಗಳು ಈ ದೇಶದಲ್ಲಿ ದ್ವೇಸದ ಜ್ವಾಲೆಯನ್ನು ಪಸರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಏಕೆ ಬಾಬರೀ ಮಸೀದಿಯನ್ನು ಕೆಡೆವಿದ್ದು. ಒಂದೇ ಉದಾಹರಣೆ ಸಾಕು ಈ ಸಂಘ ಪರಿವಾರಿಗಳ ಕುತಂತ್ರಕ್ಕೆ.

    Reply
  9. NagarajaM

    My understanding is it was Hindu Maha Sabha ad not RSS, mainly due to handing over big chunk of our Mother land to create Muslim country on both sides of us. Mahatma Gandhi had appealed Jinnah to become PM, he declined and wanted pound of flesh. In fact Gandhi stayed over at Shimla on 15 Aug 1947,
    not participating in festivities. Pakistan was declared Independent the previous day itself. Division was done on arbitrary lines. Those who did this fled from
    India the very next day. All this is part of History.

    Reply

Leave a Reply

Your email address will not be published. Required fields are marked *