ಚುನಾವಣೋತ್ತರ ಸಂದರ್ಭದಲ್ಲಿ “ವರ್ತಮಾನ.ಕಾಮ್”ನ ದಾರಿ…

ಸ್ನೇಹಿತರೇ,

ಕಳೆದ ಒಂದು-ಒಂದೂವರೆ ತಿಂಗಳು ದಿನಕ್ಕೆ ಸರಾಸರಿ ಏಳೆಂಟು ಕಿ.ಮೀ. ನಡೆದು, ನೂರಾರು ಜನರ ಕೈಕುಲುಕಿ, ಮಾತನಾಡಿಸಿ, ಕಷ್ಟಸುಖ ಹಂಚಿಕೊಂಡು, ಬೆವರು ಸುರಿಸಿ, ಕೊಬ್ಬು ಕರಗಿಸಿ, ಬಹಳ ಸಂತಸದಿಂದ ಕಳೆದೆ. ಜೊತೆಯಾದದ್ದು ಹಲವರು. ಹಣಸಹಾಯದಿಂದ ಹಿಡಿದು, ಸಾಧ್ಯವಾದಾಗಲೆಲ್ಲ ಜೊತೆಗೂಡಿ ಪ್ರಚಾರ ಮಾಡಿದ ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ಸುಮಾರು ನೂರಕ್ಕೂ ಹೆಚ್ಚು ಜನ ಕೂಡಿ ಸುಮಾರು ಐದೂವರೆ ಲಕ್ಷ ರೂಪಾಯಿಯಷ್ಟು ದೇಣಿಗೆ ನೀಡಿದ್ದಾರೆ. ನಾನು ನನ್ನ ಕಡೆಯಿಂದ ಸುಮಾರು ಮೂರ್ನಾಲ್ಕು ಲಕ್ಷ ರೂಪಾಯಿ ಹಾಕಿಕೊಂಡಿದ್ದೇನೆ.

ಬಿಟಿಎಮ್ ಲೇಔಟ್‌ನ 6596 ಮತದಾರರು ಯಾವುದೇ ಪ್ರಲೋಭನೆಗೊಳಗಾಗದೆ ಒಂದು ಗುಂಪಾಗಿ ಮತ ಹಾಕಿದ್ದಾರೆ BTMLayout-2013ಎಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಈ ಕ್ಷೇತ್ರದಲ್ಲಿ ನಡೆದ ಅಕ್ರಮ, ಆಮಿಷ, ಮತ್ತು ಜಾತಿರಾಜಕಾರಣದ ನಡುವೆಯೂ ಇಷ್ಟೊಂದು ಜನ ಅವೆಲ್ಲವನ್ನೂ ಮೀರಿ ವರ್ತಿಸಿದ್ದು ಪ್ರಶಂಸನೀಯ. ನಾನು ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಭಾಷಣಗಳಲ್ಲಿ ಹೇಳುತ್ತಿದ್ದಂತೆ, ನಮಗೆ ಬೀಳುವ ಪ್ರತಿಯೊಂದು ಮತವೂ ಅನಾಚಾರ-ಅಕ್ರಮದ ವಿರುದ್ಧ ಬಿದ್ದ ಮತ ಮತ್ತು ಅರ್ಹತೆ-ಪ್ರಾಮಾಣಿಕತೆಯ ಪರ ಬಿದ್ದ ಮತ, ಮತ್ತು ಒಂದೊಂದು ಮತವೂ ಮುಖ್ಯ. ಈ ಚುನಾವಣೆ ಇಲ್ಲಿಯ ಜನರಿಗೆ ಒಂದು ಹಂತದವರೆಗೆ ಜಾಗೃತಿ ಮೂಡಿಸಿದೆ ಮತ್ತು ಇಲ್ಲಿಯ ಅನೇಕ ಜನ ನಮ್ಮ ಹೋರಾಟವನ್ನು ಮತ್ತು ಪ್ರತಿಪಾದಿಸಿದ ವಿಚಾರಗಳನ್ನು ಮತ ಹಾಕದಿದ್ದರೂ ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮದು ಗೆಲುವೇ.

ಅಂದ ಹಾಗೆ, ಇಡೀ ಕ್ಷೇತ್ರದಲ್ಲಿ ನನ್ನಷ್ಟು ಸುತ್ತಾಡಿದ, ಜನರಿಗೆ ಮುಖ ತೋರಿಸಿದ, ಮತ್ತು ಮತದಾರರ ಕೈಯ್ಯಲ್ಲಿ ಬೈಯಿಸಿಕೊಂಡ ಇನ್ನೊಬ್ಬ ಅಭ್ಯರ್ಥಿ ಇಲ್ಲ. ಅವರು ಬೈದದ್ದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಖ ತೋರಿಸುವ ರಾಜಕಾರಣಿಗಳನ್ನು. ವಿಷಾದದ ಸಂಗತಿ ಏನೆಂದರೆ, ಹಾಗೆ ಬೈದ ಬಹುಪಾಲು ಜನ ಓಟು ಹಾಕಿರುವುದಿಲ್ಲ ಅಥವ ಮತ್ಯಾವುದೋ ಆಮಿಷಕ್ಕೆ ಒಳಗಾಗಿ ಅವರ ಬೈಗುಳಕ್ಕೆ ಅರ್ಹವಾಗಿದ್ದವರಿಗೇ ಮತ ಹಾಕಿರುತ್ತಾರೆ.

ನಾನು ಪ್ರತಿನಿಧಿಸಿದ್ದ ಲೋಕ್‌ಸತ್ತಾ ಪಕ್ಷ ಮಾಡಿದ ಪ್ರಚಾರ ಮತ್ತು ಪಾಲ್ಗೊಂಡ ರೀತಿ ಮುಂದಿನ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಚುನಾವಣಾ ರಾಜಕೀಯ ಹೇಗಿರುತ್ತದೆ Ravi-SripadBhat-Sriharshaಎನ್ನುವುದಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಿಸರ್ಗ ಅತ್ತಲೇ ಕ್ರಮಿಸುತ್ತಿದೆ. ಐದು ವರ್ಷದ ಹಿಂದೆ, ಸಾಂಕೇತಿಕವಾಗಿ ಎಂದು ಪ್ರತಿಭಟನೆಯ ಸ್ಪರ್ಧೆ ಮಾಡಿ, ಜನರಿಂದ ಹಣಸಂಗ್ರಹಿಸಿ, ಸಾಧ್ಯವಾದಷ್ಟು ಪ್ರಚಾರ ಮಾಡಿದವನು ಬಹುಶಃ ನಾನೊಬ್ಬನೆ. ಆದರೆ, ಈ ಸಲ ನಮ್ಮ ಪಕ್ಷದಿಂದಲೇ 24 ಜನ ಇದ್ದರು. ಮತ್ತು ಅದೇ ರೀತಿ ಮಾಡಿದ ಇತರೆ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಅನೇಕರಿದ್ದರು. ಇನ್ನೈದು ವರ್ಷಗಳಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮಂತೆ ಚುನಾವಣೆಗೆ ಸ್ಪರ್ಧಿಸುವ ಒಬ್ಬರಾದರೂ ಇರುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಅದು ಇತರೆ ಪಕ್ಷಗಳ ಮೇಲೆ ಮತ್ತು ಪ್ರತ್ರಿನಿಧಿಗಳಾಗಬೇಕೆಂದು ಬಯಸುವವರ ನಡವಳಿಕೆಗಳ ಮೇಲೆ ನೇರ ಪ್ರಭಾವ ಬೀರಲಿದೆ.

ಈ ಚುನಾವಣೆಯಲ್ಲಿ ನಮಗೆ ಗೆಲುವಿನ ಸಮೀಪ ಹೋಗಲಾಗಿಲ್ಲ. ಆದರೆ ನಾವು ಸರಾಸರಿ ಸುಮಾರು ಮೂರು ಸಾವಿರ ಓಟು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಸ್ಪರ್ಧಿಸಿದ ಎರಡು ಕಡೆ ಮೂರನೇ ಸ್ಥಾನದಲ್ಲಿದ್ದರೆ, ಬಹುತೇಕ ಕಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತರದ ಸ್ಥಾನದಲ್ಲಿದ್ದೇವೆ. ಇದು ಕಡಿಮೆ ಸಾಧನೆಯಲ್ಲ. ಇದನ್ನು ನಾವು ಹೆಚ್ಚುಹೆಚ್ಚು ಪ್ರಚುರಗೊಳಿಸಿದಷ್ಟೂ ಇಂತಹ ಪ್ರಯತ್ನಗಳಿಗೆ ಮುಂದಾಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಮತ್ತು ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೆ ಸ್ಫೂರ್ತಿಯೂ ಆಗುತ್ತದೆ.

ಚುನಾವಣೆಗೆ ಸಂಬಧಿಸಿದಂತೆ ಇನ್ನೊಮ್ಮೆ ಬರೆಯುತ್ತೇನೆ. ಈಗ ವರ್ತಮಾನ.ಕಾಮ್ ವಿಚಾರವಾಗಿ ಒಂದಿಷ್ಟು ಹಂಚಿಕೊಳ್ಳುತ್ತೇನೆ.

ನಿಮಗೆ ಗೊತ್ತಿದೆ, ಇಲ್ಲಿ ನಾನೂ ಸೇರಿದಂತೆ ನಮ್ಮ ಅನೇಕ ಬರಹಗಾರ ಮಿತ್ರರು ನಿರ್ಭಯ ಮತ್ತು ನಿರ್ಭೀತಿಯಿಂದ ನಮ್ಮ ವರ್ತಮಾನದ ಸಾಮಾಜಿಕ-ರಾಜಕೀಯ-ಮಾಧ್ಯಮ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕೆಂಬ ತುಡಿತದಲ್ಲಿ ಬರೆದಿದ್ದಾರೆ. ಬೇರೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗದ ಮತ್ತು ಚರ್ಚೆಯಾಗದ ವಿಷಯಗಳು ಇಲ್ಲಿ ಚರ್ಚೆಯಾಗಿವೆ. ಇದರಲ್ಲಿ ಕನಿಷ್ಟ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ನಿರ್ಬಂಧ ಹಾಕಿಕೊಳ್ಳಲಾಗುತ್ತದೆ. ಅದು, ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಕ್ಕೆ.

ನನಗೆ ಕಳೆದ ಒಂದೂವರೆ ತಿಂಗಳಿನಿಂದ ಈ ಮೂರ್ನಾಲ್ಕು ದಿನಗಳಿಂದ ಯೊಚಿಸಲು ಸಿಕ್ಕಷ್ಟು ಸಮಯ ಸಿಕ್ಕಿರಲಿಲ್ಲ. ನಿಮ್ಮಲ್ಲಿ ಈಗಾಗಲೆ ಕೆಲವರು ಗಮನಿಸಿರಬಹುದು. ರಾಜಧಾನಿಯ ಹಲವು ಪ್ರಮುಖ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನನ್ನ ಬಗ್ಗೆ (ವರ್ತಮಾನ.ಕಾಮ್‌ನ ಕಾರಣವಾಗಿ) ಸಿಟ್ಟಿದೆ. ನಾನು ಅಥವ ನಮ್ಮ ವರ್ತಮಾನ.ಕಾಮ್‌ನ ಲೇಖಕರು ಅವರನ್ನು ಅಥವ ಅವರ ಮಾಧ್ಯಮ ಸಂಸ್ಥೆಗಳನ್ನು ವಿಮರ್ಶಿಸಿದ್ದು ಮತ್ತು ಟೀಕಿಸಿದ್ದೇ ಅದಕ್ಕೆ ಬಹುತೇಕ ಕಾರಣ. ಅದರಲ್ಲಿ ನಮಗೆ ವೈಯಕ್ತಿಕ ದ್ವೇಷವೇನೂ ಇರಲಿಲ್ಲ. ತಪ್ಪಾಗಿದ್ದು ಸರಿಯಾಗಬೇಕು ಎನ್ನುವ ಸಕಾರಣವೇ ಆ ವಿಮರ್ಶೆಗಳಿಗೆ ಕಾರಣ. ಆದರೆ ವಿಮರ್ಶೆಗೊಳಪಟ್ಟವರು ಹಾಗೆ ಅಂದುಕೊಂಡಿಲ್ಲ. ಹಾಗಾಗಿಯೆ, ಚುನಾವಣೆಯ ಸಂದರ್ಭದಲ್ಲಿ ನನ್ನ ಹೆಸರು ಪ್ರಸ್ತಾಪವಾಗಬೇಕಿದ್ದ ಅನೇಕ ಕಡೆ ಅದು ಪ್ರಸ್ತಾಪವಾಗಿಲ್ಲ, ಮತ್ತು ಆದರೂ ಅದು ನಗಣ್ಯ ರೀತಿಯಲ್ಲಿ ಇರುತ್ತಿತ್ತು. ಯಾಕೆ ಯಾವ ಮಾಧ್ಯಮದಲ್ಲೂ (ಒಂದೆರಡು ಕಡೆ ಬಿಟ್ಟು) ನಿಮ್ಮ ಪ್ರಸ್ತಾಪವಿಲ್ಲ ಎಂಬ ಸ್ನೇಹಿತರ ಪ್ರಶ್ನೆಗಳನ್ನು ಕೇಳಿಕೇಳಿ ನನಗೆ ಸಾಕಾಗಿ ಹೋಗಿತ್ತು.

ಇದರಿಂದ ದೊಡ್ದ ಹೊಡೆತ ಬಿದ್ದದ್ದು ನಾನು ಪ್ರತಿಪಾದಿಸಬೇಕೆಂದುಕೊಂಡಿದ್ದ ವಿಚಾರಗಳಿಗೆ.

ಈಗ ನಾನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ತೊಡಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ಹೊರೆ ಅನಗತ್ಯ ಮತ್ತು ಅನಾನುಕೂಲಕರ. ವರ್ತಮಾನ.ಕಾಮ್‌ನಿಂದ ಹಣಕಾಸಿನ ನಷ್ಟವಿದೆಯೇ ಹೊರತು ನಮಗ್ಯಾರಿಗೂ ಲಾಭವಿಲ್ಲ. ಬದ್ದತೆಯ ಮತ್ತು ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಇದನ್ನು ನಿಭಾಯಿಸುತ್ತಿದ್ದೇವೆಯೇ ಹೊರತು ಇಲ್ಲಿ ಹಣ ಮಾಡುವ ಸಾಧ್ಯತೆಗಳೇ ಇಲ್ಲ. ಹೀಗಿರುವಾಗ, ಮಾಧ್ಯಮಕ್ಕೆ ಸಂಬಂಧಿಸಿದ ನಮ್ಮ ವಿಮರ್ಶೆಗಳು ಇಲ್ಲಿಯವರೆಗೆ ಬಹುಪಾಲು ಸಮಯದಲ್ಲಿ ವರ್ತಮಾನ.ಕಾಮ್‌‌ನ ಬೆಳವಣಿಗೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆಯೇ ಹೊರತು ಪರವಾಗಿ ಅಲ್ಲ. ಇಲ್ಲಿ ಲೇಖನ ಬರೆದರೆ ನಮ್ಮ ಲೇಖನಗಳು ಬೇರೆಡೆ ಪ್ರಕಟವಾಗುವುದಿಲ್ಲ ಮತ್ತು ಪ್ರಕಟಣೆಗೆ ಅವಕಾಶಗಳು ಸಿಗುವುದಿಲ್ಲ ಎನ್ನುವ ತನಕ ಯೋಚಿಸಿರುವ ಅನೇಕ ಮಿತ್ರರು ನಮಗೆ ಬರೆಯಲು ಹೋಗಲೇ ಇಲ್ಲ, ಮತ್ತು ಒಂದೆರಡು ಸಲ ಬರೆದವರು ಬರೆಯುವುದನ್ನೇ ನಿಲ್ಲಿಸಿದ ಉದಾಹರಣೆಗಳಿವೆ.

ಈ ಚುನಾವಣೆ ಆ ನಿಟ್ಟಿನಲ್ಲಿ ನನಗೆ ಪಾಠ ಕಲಿಸಿದೆ. ನಾವು ಒಂದು ಸಶಕ್ತ ಮಾಧ್ಯಮವಾಗದ ಹೊರತು ಅಂತಹ “ಧೈರ್ಯ” ಅನಗತ್ಯ. ಸಮಾಜ ಮತ್ತು ವರ್ತಮಾನ ತನಗೆ ಅಗತ್ಯವಾದದ್ದನ್ನು ಉಳಿಸಿಕೊಳ್ಳುತ್ತದೆ ಮತ್ತು ಬೇಡವಾದದ್ದನ್ನು ಬಿಸಾಕುತ್ತದೆ. ನಾವು ನಮ್ಮ ಗುರಿಯನ್ನು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಗೆ ಇಟ್ಟಿರುವ ಸಂದರ್ಭದಲ್ಲಿ ಮಾಧ್ಯಮಗಳಿಂದ “ಬಹಿಷ್ಕೃತ”ರಾಗುವುದು counter-productive. ಬರೆದರೆ ಮಾಧ್ಯಮಗಳ ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯುತ್ತೇವೆಯೇ ಹೊರತು ಅವರ ನಕಾರಾತ್ಮಕ ವಿಷಯಗಳನ್ನು ಎತ್ತಿ ತೋರಿಸಲು ಹೋಗುವುದಿಲ್ಲ. ಸಮುದಾಯಕ್ಕೆ ಆ ರಂಗದ ವಿಮರ್ಶೆ ಅಗತ್ಯವಿದೆ ಎಂದಾದಾಗ ಅದಕ್ಕೆ ಅನೇಕ ವೇದಿಕೆಗಳಿವೆ ಮತ್ತು ದಾರಿಗಳಿವೆ.

ಈ ವಾರ ಬಹುಶಃ ವರ್ತಮಾನ ಬಳಗದ ಹಲವು ಸ್ನೇಹಿತರನ್ನು ಮುಖತಃ ಭೇಟಿಯಾಗಲಿದ್ದೇನೆ. ಮತ್ತೆ ಎಂದಿನಂತೆ ನಿಯತಕಾಲಿಕವಾಗಿ ಲೇಖನಗಳನ್ನು ಪ್ರಕಟಿಸಲು ಮಾಡಬೇಕಾದ ಕೆಲಸಗಳ ಕಡೆ ಗಮನ ಕೊಡಲಿದ್ದೇವೆ. ವರ್ತಮಾನ.ಕಾಮ್‌ನ ಪ್ರಸ್ತುತತೆ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಬದಲಾದ ಸಂದರ್ಭದಲ್ಲಿ ಸ್ಪಷ್ಟವಾಗಬೇಕಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

15 thoughts on “ಚುನಾವಣೋತ್ತರ ಸಂದರ್ಭದಲ್ಲಿ “ವರ್ತಮಾನ.ಕಾಮ್”ನ ದಾರಿ…

  1. srinivas

    ಆತ್ಮೀಯರೇ, ನಾನು ವಿಜಯನಗರ ಕ್ಷೇತ್ರದ ಮತದಾರನಗಿದ್ದು ನನ್ನ ಮನೆಯವರ ಮತ್ತು ಹಲವು ಗೆಳೆಯರ ಮತಗಳನ್ನು ಲೋಕಸತ್ತಾ ಪಕ್ಷದ ಅಭ್ಯರ್ಥಿಗೆ ಹಾಕಿಸುವ ಕೆಲಸವನ್ನು ಮಾಡಿದೆ. ಈ ಪಕ್ಶದ ಬಗ್ಗೆ ನಾನು ಓದಿ ತಿಳಿದಿದ್ದೆ. ಈ ಸಲ ಗೆಲ್ಲುವುದಿಲ್ಲವೆo ದು ಗೊತ್ತಿದ್ದರೂ ಭವಿಷ್ಯದ ಪಕ್ಷವನ್ನು ಬೆಳೆಸಬೇಕೆನ್ನುವುದು ನನ್ನ ಉದ್ದೇಶವಾಗಿತ್ತು. ಸುಮಾರು ೭೮೦ ಮತಗಳು ಈ ಕ್ಷೇತ್ರದಲ್ಲಿ ಈ ಪಕ್ಷದ ಪರವಾಗಿ ಬಿದ್ದಿವೆ. ಆದರೆ ಈ ಕ್ಹೇತ್ರದ ಅಭ್ಯರ್ಥಿ ವಿದ್ಯಾವಂತರೇ ವಾಸಿಸುವ ಮುಖ್ಯವಾದ ರಸ್ತೆಗಳಿಗೆ ಒಮ್ಮೆಯೂ ಭೇಟಿ ಕೊಡಲಿಲ್ಲ. ಪಕ್ಷ ಕಟ್ಟುವ ರೀತಿ ಇದಲ್ಲ. ಸಂಬoದ ಪಟ್ಟವರ ಗಮನಕ್ಕಾಗಿ ಈ ಮಾತುಗಳು.

    Reply
  2. ವಿಜಯ್

    ರವಿ ..

    ಲೋಕಸತ್ತಾದ ಈ ಸಲದ ಸಾಧನೆ ಗಮನಾರ್ಹ. ಅಭಿನಂದನೆಗಳು. ಮುಂದಿನ ಚುನಾವಣೆಯಲ್ಲಿ ಇನ್ನೂ ಉತ್ತಮ ಸಾಧನೆ ಬರಬಹುದು, ಒಬ್ಬ ಅಭ್ಯರ್ಥಿಯಾದರೂ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯಿದೆ. ನನಗನಿಸುವಂತೆ ಓದು,ಬದ್ಧತೆ, ಪ್ರಾಮಾಣಿಕತೆ , ರಾಜಕೀಯಕ್ಕಿಳಿದು ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಆಸೆ ಇರುವ ನೀವು ಜಾತಿ,ಧರ್ಮದ ಕೆಸರೆರೆಚಾಟಕ್ಕಿಳಿಯಬಾರದು. ವರ್ತಮಾನದಲ್ಲಿ ಬಂದ, ‘ಪ್ರಗತಿಪರ, ಪ್ರಜ್ಞಾವಂತಿಕೆಯ ‘ ಹೆಸರಿನಲ್ಲಿ ಬರುವ ನಂಜು ತುಂಬಿದ ಲೇಖನಗಳು ನಿಮ್ಮ ಮತ ಗಳಿಕೆಗೆ ತಮ್ಮದೇ ಆದ ರೀತಿಯಲ್ಲಿ ಏಟು ಕೊಟ್ಟಿವೆ. ಸತ್ಯದ ಪರವಾದ , ನಿರ್ಲಿಪ್ತ ಧೋರಣೆಯ ಲೇಖನಗಳನ್ನು ಯಾರೂ ವಿರೋಧಿಸುವುದಿಲ್ಲ. ಆದರೆ stereotyped, biased ಲೇಖನಗಳು ತಮ್ಮದೇ ಪರಿಣಾಮ ಉಂಟು ಮಾಡುತ್ತವೆ. ಅಸಹ್ಯ ಹುಟ್ಟು ಹಾಕುತ್ತವೆ. ನಿಮ್ಮ ಬಗ್ಗೆ ಓದುಗರಿಗೆ ಒಂದು ರೀತಿಯ ಚಿತ್ರಣ ಕಟ್ಟಿಕೊಟ್ಟು, ನಿಮ್ಮ ರಾಜಕೀಯ ಪ್ರಗತಿಗೆ ಮಾರಕವಾಗುತ್ತವೆ. ಇದು ನನ್ನ ಅಭಿಪ್ರಾಯ

    Reply
    1. ಹಿತೈಷಿ

      ವಿಜಯ್ ಮಾತಿಗೆ ನನ್ನ ಸಹಮತವಿದೆ.
      ಇಂತ ಲೇಖನಗಳಿಂದ ನಿಮಗೆ ಉಪಯೋಗವಂತೂ ಐದು ಪೈಸೆಯದು ಆಗಲಿಕ್ಕಿಲ್ಲ ರವಿ. ನಿಮ್ಮಂತ ಜನಪರ ಕಾಳಜಿಯಿರುವವರು ಇಂತವರ ಮಧ್ಯೆ ಸಿಕ್ಕಿ ಬಾಡಿಹೋಗಬಾರದು

      Reply
  3. Ananda Prasad

    ‘ವರ್ತಮಾನ’ ಆರಂಭವಾದದ್ದೇ ಜನಪರ, ಪ್ರಗತಿಪರ, ಪ್ರಜಾಪ್ರಭುತ್ವವಾದಿ, ವೈಜ್ಞಾನಿಕ ಮನೋಭಾವ ಮೊದಲಾದ ಆಶಯಗಳನ್ನು ಎತ್ತಿ ಹಿಡಿಯಲು ಎಂಬುದು ಇದು ಆರಂಭವಾದ ಪೀಠಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ . ಈ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡು ಅಥವಾ ಅವುಗಳನ್ನೇ ಕೈಬಿಟ್ಟರೆ ವರ್ತಮಾನವನ್ನು ನಡೆಸುವುದರಲ್ಲಿ ಅರ್ಥವಿಲ್ಲ. ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡು ರಾಜಕೀಯ ಪ್ರಗತಿ ಸಾಧಿಸುವುದಕ್ಕಿಂತ ಆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸದಿದ್ದರೂ ಪರವಾಗಿಲ್ಲ. ರಾಜಕೀಯದಿಂದ ಹೊರತಾಗಿಯೂ ಜನಪರ ಸೇವೆ ಕೈಗೊಳ್ಳಲು ಬೇರೆ ಮಾರ್ಗಗಳಿವೆ.

    Reply
    1. ವಿಜಯ್

      ರವಿಯವರು ಹೇಳಿದ್ದು ‘ ಕನಿಷ್ಟ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ನಿರ್ಬಂಧ ಹಾಕಿಕೊಳ್ಳಲಾಗುತ್ತದೆ. ಅದು, ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಕ್ಕೆ.’ ‘ಈಗ ನಾನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ತೊಡಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ಹೊರೆ ಅನಗತ್ಯ ಮತ್ತು ಅನಾನುಕೂಲಕರ.’ ಮತ್ತು ನೀವು ಹೇಳುತ್ತಿರುವುದು ‘ಈ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡು ಅಥವಾ ಅವುಗಳನ್ನೇ ಕೈಬಿಟ್ಟರೆ ವರ್ತಮಾನವನ್ನು ನಡೆಸುವುದರಲ್ಲಿ ಅರ್ಥವಿಲ್ಲ’ ..ಹೀಗಿರುವಾಗ ನಾವು ಹೇಳುವುದೇನಿದೆ?. ಹನುಮಪ್ಪನೇ ಹಗ್ಗ ಕಡಿಯುತ್ತಿರುವಾಗ ಪೂಜಾರಿ ಶಾವಿಗೆ ಬೇಡಿದನಂತೆ ಎಂದಂತಾಯಿತು.

      Reply
  4. Ananda Prasad

    ನಮ್ಮ ಮಾಧ್ಯಮಗಳಿಗೆ ಸ್ವಚ್ಛ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು, ಅಂಥವರನ್ನು ನಾವು ಮಾಧ್ಯಮದ ಮೂಲಕ ಪ್ರೋತ್ಸಾಹಿಸಬೇಕು ಎಂಬ ಕಾಳಜಿ ಇಲ್ಲ. ಇದು ಕೇವಲ ‘ವರ್ತಮಾನ’ ವೆಬ್ಸೈಟ್ ಮಾಧ್ಯಮದ ಮಂದಿಯನ್ನು ಟೀಕಿಸಿದೆ ಎಂಬ ಕಾರಣದಿಂದ ರವಿಯವರಿಗೆ ಪ್ರೋತ್ಸಾಹ ಕೊಡಲಿಲ್ಲ ಎಂದೇನೂ ಅಲ್ಲ. ಮಾಧ್ಯಮದ ಮಂದಿ ಲೋಕಸತ್ತಾ ಪಕ್ಷವನ್ನು ಕರ್ನಾಟಕದಲ್ಲಿ ಮುನ್ನಡೆಸುತ್ತಿರುವ ಅಶ್ವಿನ್ ಮಹೇಶ್ ಅವರನ್ನೂ ಪ್ರೋತ್ಸಾಹಿಸಿದ್ದು ಕಂಡು ಬರಲಿಲ್ಲ. ಅಶ್ವಿನ್ ಮಹೇಶ್ ಅವರಂತೂ ಮಾಧ್ಯಮದ ಮಂದಿಯನ್ನು ಟೀಕಿಸಲು ಹೋದವರಲ್ಲ. ಮಾಧ್ಯಮದ ಮಂದಿ ಹೊಸ ಪಕ್ಷ ಕಟ್ಟಿದ ಅರವಿಂದ್ ಕೇಜ್ರಿವಾಲರನ್ನೂ ಪ್ರೋತ್ಸಾಹಿಸುವುದು ಕಂಡು ಬರುವುದಿಲ್ಲ. ಒಮ್ಮೆ ಇದೇ ಮಾಧ್ಯಮದ ಮಂದಿ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ನೇರ ಪ್ರಸಾರ ಮಾಡುತ್ತಿದ್ದವು. ಪಕ್ಷ ಕಟ್ಟಿ ರಾಜಕೀಯ ಹೋರಾಟ ಮಾಡುವಾಗ ಮಾತ್ರ ಇದೇ ಮಾಧ್ಯಮಗಳು ಅವರನ್ನು ಬೆಂಬಲಿಸುವುದನ್ನು ನಿಲ್ಲಿಸಿದವು. ಇದರರ್ಥ ಏನು? ಸ್ವಚ್ಛ ಜನ ರಾಜಕೀಯಕ್ಕೆ ಬರುವುದು ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗೆ ಮಾತ್ರ ಬೇಡವಾಗಿರುವುದಲ್ಲ ಇದು ಮಾಧ್ಯಮಗಳಿಗೆ ಮತ್ತು ಮಾಧ್ಯಮಗಳನ್ನು ನಡೆಸುತ್ತಿರುವ ಉದ್ಯಮಿಗಳಿಗೂ ಕೂಡ ಬೇಡವಾಗಿದೆ ಎಂದೇ ಅರ್ಥವಲ್ಲವೇ? ಇಂಥ ಉದ್ಯಮಿಗಳು ಒಂದು ದೇಶದಲ್ಲಿ ಇರುವಾಗ ಆ ದೇಶ ಉದ್ಧಾರ ಆಗುವುದಾದರೂ ಹೇಗೆ?

    Reply
    1. ವಿಜಯ್

      ಮಾಧ್ಯಮಗಳನ್ನು ದೂರುವ ಮೊದಲು ನಮ್ಮ ಬೆನ್ನನ್ನೇಕೆ ನಾವು ನೋಡಿಕೊಳ್ಳಬಾರದು?’ಸ್ವಚ್ಛ ಜನ’ ವೆಂದರೆ ಏನು, ಯಾರು ಎನ್ನುವುದಕ್ಕೆ ವಿವರಣೆ ನಾವು ಮೊದಲು ಕೊಟ್ಟುಕೊಳ್ಳಬೇಕು.
      ಸರಿ..ಸ್ವಚ್ಛ ಜನ ರಾಜಕೀಯಕ್ಕೆ, ಆಡಳಿತಕ್ಕೆ ಬರುವುದು ಮಾಧ್ಯಮಗಳಿಗೆ ಬೇಡವಾಗಿದೆ ಎಂದುಕೊಳ್ಲೋಣ..ಹಾಗಾದರೆ ಸ್ವಚ್ಛ ಜನ ಆಡಳಿತಕ್ಕೆ ಬರುವುದು ನಮ್ಮ ಪ್ರಗತಿಪರ,ಪ್ರಜ್ಞಾವಂತ ಎಂದು ಅಪಾದಿಸಿಕೊಳ್ಳುವ ಪ್ರಖ್ಯಾತ ಸಾಹಿತಿಗಳಿಗೆ ಕೂಡ ಬೇಡವಾಗಿದೆಯೆ? ಅವರೇಕೆ ಕಾಂಗ್ರೆಸ್ ಗೆ ಬೆಂಬಲ ನೀಡಿದರು? ಲೋಕಸತ್ತಾ ಅವರ ಕಣ್ಣಿಗೆ ಕಾಣಲಿಲ್ಲವೆ?

      Reply
      1. Ananda Prasad

        ಸ್ವಚ್ಛ ಜನ ಎಂದರೆ ಚುನಾವಣಾ ಆಯೋಗ ನಿಗದಿಪಡಿಸಿದ ಮಿತಿಯೊಳಗೆ ಚುನಾವಣಾ ಖರ್ಚನ್ನು ಮಿತಿಗೊಳಿಸಿ, ಪ್ರಾಮಾಣಿಕ ಮೂಲದಿಂದ ತಮ್ಮ ಚುನಾವಣಾ ಖರ್ಚನ್ನು ಸಂಗ್ರಹಿಸಿದ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಜವಾಬ್ದಾರಿಯುತ ಹಾಗೂ ವಿವೇಚನೆ ಉಳ್ಳ ಜನ ಎಂದು ಅರ್ಥ. ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರಿಗೆ ಸ್ವಚ್ಛ ಜನ ರಾಜಕೀಯಕ್ಕೆ ಬರುವುದು ಬೇಡವಾಗಿದೆ ಎಂದು ಹೇಳಲಾಗದು. ಸದ್ಯದ ತುರ್ತು ಇದ್ದದ್ದು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಕೋಮುವಾದಿ, ಧರ್ಮ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವ ಒಂದು ಪಕ್ಷವನ್ನು ಅಧಿಕಾರದಿಂದ ಹೊರಗಿಡುವುದೇ ಆಗಿತ್ತು. ಅದಕ್ಕನುಗುಣವಾಗಿ ಸದ್ಯದ ಅನಿವಾರ್ಯತೆಯಾಗಿ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜನತೆಗೆ ಕರೆ ನೀಡಿದ್ದು ಸಮಂಜಸವಾಗಿದೆ. ಲೋಕಸತ್ತಾ ಪಕ್ಷ 25 ಕ್ಷೇತ್ರಗಳಿಂದ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸಿದ ಕಾರಣ ಹಾಗೂ ಅದು ಹೊಸತಾಗಿ ಆರಂಭವಾದ ಪಕ್ಷ ಆದ ಕಾರಣ ಅದನ್ನು ಬೆಂಬಲಿಸಿದರೆ ಅತಂತ್ರ ವಿಧಾನಸಭೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇತ್ತು. ಸದ್ಯಕ್ಕೆ ರಾಜ್ಯಕ್ಕೆ ಒಂದೇ ಪಕ್ಷದ ಸ್ಥಿರ ಸರ್ಕಾರ ಅತೀ ಅಗತ್ಯವಾಗಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಇನ್ನಷ್ಟು ಅನೈತಿಕ ರಾಜಕೀಯ ನಡೆಯುವ ಸಾಧ್ಯತೆ ಇರುವುದರಿಂದ ಸಾಹಿತಿಗಳ ಹಾಗೂ ಪ್ರಗತಿಪರ ಚಿಂತಕರ ನಿಲುವು ಸಮರ್ಪಕವಾಗಿಯೇ ಇದೆ.

        Reply
        1. ವಿಜಯ್

          ಒಹ್ ಹೌದಾ?

          – ಸ್ವಚ್ಛ ಜನ ಆರಿಸಿ ಬರಬೇಕು ಎನ್ನುವ ನೀತಿ ಹೊಂದಿದ ಪ್ರಭಾವಿ ಗುಂಪಿನವರು ದೂರಗಾಮಿ ಉದ್ದೇಶ ಹೊಂದಿರುತ್ತಾರೆ.. ಸಧ್ಯದ ತುರ್ತನ್ನು ನೋಡಿ ಯಾರ್ಯಾರನ್ನೊ ಬೆಂಬಲಿಸುವುದಿಲ್ಲ ಎಂದು ನನ್ನ ಅನಿಸಿಕೆ. ನಮ್ಮಂತ ನಗಣ್ಯರು ಬಿಜೆಪಿಗೆ ಬೇಸತ್ತು, ತುರ್ತಿನಲ್ಲಿ ಇನ್ನೊಂದು ಪಕ್ಷ ಆರಿಸಿಕೊಳ್ಳುವುದು ದೊಡ್ಡ ವಿಷಯವಲ್ಲ..

          – ಈ ಸಾಹಿತಿಗಳು, ಪ್ರಗತಿಪರರು ಲೋಕಸತ್ತಾಕ್ಕೆ (೨೫ ಅಭ್ಯರ್ಥಿಗಳಾದರೂ ಸರಿಯೆ) ಬೆಂಬಲ ಕೊಟ್ಟು, ತಮ್ಮ ಜನಾನುರಾಗಿ ಗುಣದಿಂದ, ಜನಪ್ರಿಯತೆಯಿಂದ ಲೋಕಸತ್ತಾ ಅಭ್ಯರ್ಥಿಗಳು ಆರಿಸಿ ಬರುವಂತೆ ಮಾಡಿ, ನಂತರ ಅವರಿಂದ ಕಾಂಗ್ರೆಸ್ ಗೆ ಬೇಷರತ್ ಬೆಂಬಲ ಕೊಡುವಂತೆ ಮಾಡಬಹುದಿತ್ತಲ್ಲವೆ? ನೀವು ಹೇಳಿದಂತೆ ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಕೋಮುವಾದಿ, ಧರ್ಮ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವ ಒಂದು ಪಕ್ಷವನ್ನು ಅಧಿಕಾರದಿಂದ ಹೊರಗಿಡುವ ಆಸೆಯನ್ನು ಕೂಡ ಪೂರೈಸಿಕೊಳ್ಳಬಹುದಿತ್ತಲ್ಲವೆ? ಇದು ಅವರಿಂದ ಸಾಧ್ಯವಿತ್ತು..ಏಕೆಂದರೆ ಇವತ್ತು ಕಾಂಗ್ರೆಸ್ ನಿಚ್ಚಳ ಬಹುಮತ ಬರುವಂತೆ ಮಾಡಿದ್ದೆ ಈ ಪ್ರಗತಿಪರ ಸಾಹಿತಿಗಳ ಜನಪ್ರಿಯತೆ. ಇದೇ ಜಾದೂ ಇವರು ಲೋಕಸತ್ತಾದ ಜೊತೆ ಇದ್ದರೂ ಆಗುತ್ತಿತ್ತು. ಆಗ ನಿಮಗೆ ಅವರನ್ನು ಸಮರ್ಥಿಸಿಕೊಳ್ಳುವ ಪ್ರಮೇಯವೆ ಬರುತ್ತಿರಲಿಲ್ಲ.

          Reply
          1. Ananda Prasad

            ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರಿಗೆ ಹೊಸ ಪಕ್ಷವೊಂದನ್ನು ಗೆಲ್ಲಿಸುವ ಸಾಮರ್ಥ್ಯ ಇರುವುದಿಲ್ಲ. ಹಾಗಿದ್ದರೆ ಲಂಕೇಶ್ ಅವರು ಕಟ್ಟಿ ಎಲ್ಲ 224 ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಇಳಿಸಿದ ಪ್ರಗತಿರಂಗದಿಂದ ಕೆಲವರಾದರೂ ಗೆಲ್ಲಬೇಕಾಗಿತ್ತು. ಆವಾಗ ಕನಿಷ್ಠ ಸ್ಪರ್ಧೆಗೆ ನಿಂತ ಲಂಕೇಶರು ಸಹಿತ ಗೆಲ್ಲಲಿಲ್ಲ. ಮನೆಗೆ ಬೆಂಕಿ ಬಿದ್ದಾಗ ಅದರಿಂದ ಪಾರಾಗುವುದು ತುರ್ತು ಆದ್ಯತೆ ಆಗಿರುತ್ತದೆಯೇ ಹೊರತು ಬೆಂಕಿ ಬೀಳದಂತೆ ಹೇಗೆ ಮನೆಯನ್ನು ಕಟ್ಟಬೇಕು ಎಂಬ ಆಲೋಚನೆ ಅಲ್ಲ. ಹೀಗಾಗಿಯೇ ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳು ಕಾಂಗ್ರೆಸ್ ಬೆಂಬಲಿಸಲು ಜನತೆಗೆ ಮನವಿ ಮಾಡಿರಬಹುದು. ಹೊಸ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಇರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕಾದರೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಕಾರ್ಯಕರ್ತರು ಇರುತ್ತಾರೆ. ಹೊಸ ಸ್ವಚ್ಛ ಪಕ್ಷವೊಂದರಿಂದ ಅಭ್ಯರ್ಥಿಗಳು ಗೆಲ್ಲಬೇಕಾದರೆ ಒಂದು ಸಾಮೂಹಿಕ ಅಲೆಯನ್ನು ಅದರ ಪರವಾಗಿ ಸೃಷ್ಟಿಸಬೇಕಾಗುತ್ತದೆ. ಅಂಥ ಅಲೆಯನ್ನು ಸೃಷ್ಟಿಸದೆ ಹೋದಲ್ಲಿ ಮತದಾರರು ತಮ್ಮ ಮತ ಹೊಸ ಪಕ್ಷಕ್ಕೆ ಹಾಕಲು ಬಹುಶಃ ಇಷ್ಟಪಡುವುದಿಲ್ಲ. ಇದರ ಹಿಂದಿರುವ ಮನಶ್ಯಾಸ್ತ್ರ ಏನೆಂದರೆ ಸೋಲುವ ಅಭ್ಯರ್ಥಿಗೆ ಮತ ಹಾಕುವುದು ನಿರರ್ಥಕ ಎಂಬ ಸಾಮೂಹಿಕ ಭಾವನೆಯೇ ಆಗಿರುತ್ತದೆ. ಹೊಸ ಸ್ವಚ್ಛ ಪಕ್ಷದ ಪರವಾಗಿ ಸಾಮೂಹಿಕ ಅಲೆಯನ್ನು ಸೃಷ್ಟಿಸುವ ಸಾಮರ್ಥ್ಯ ಮಾಧ್ಯಮಗಳಿಗೆ ಇದೆ. ಹೀಗಾಗಿಯೇ ಮಾಧ್ಯಮಗಳ ನಿಷ್ಕ್ರಿಯತೆಯ ಬಗ್ಗೆ ಟೀಕಿಸಬೇಕಾಗಿರುವುದು. ಮಾಧ್ಯಮಗಳು ಸ್ವಚ್ಛ ಪಕ್ಷದ ಪರವಾಗಿ ಒಂದು ಅಲೆಯನ್ನು ಸೃಷ್ಟಿಸುವ ಕೆಲಸ ಮಾಡಿದರೆ ಹೊಸ ಪಕ್ಷದಿಂದ ಕನಿಷ್ಠ ಸಾಂಕೇತಿಕವಾಗಿಯಾದರೂ ಒಂದಿಬ್ಬರು ಗೆಲ್ಲುವ ಸಾಧ್ಯತೆ ಇರುತ್ತದೆ.

  5. Sanket Hosamani, Bijapur (Karnataka)

    madhyamagalu yara kaiyallive? avugalu bandavalashahigala kaigombegalu. madhyamagalu nimage prachara needalillavendu neevu avugalu maduva raadhatnagaligella kummakku kottantaguttade. moulyagalannu nambidavre adarinda hinde saridare moulyagale artha kaledukolluttave

    Reply
  6. prasad raxidi

    ನಮ್ಮ ಚುನಾವಣಾ ಪದ್ದತಿಯಲ್ಲೇ ಕೆಲವು ಸಮಸ್ಯೆಗಳಿವೆ. ಉದಾಹರಣೆಗೆ ಅನೇಕರು. ಬಿಜೆಪಿಯನ್ನು ತಮ್ಮ ಪ್ರಥಮ ಶತ್ರುವೆಂದೂ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಎರಡನೇ ಶತ್ರುವೆಂದೂ ಅಂದುಕೊಳ್ಳುತ್ತಾರೆ. ಆಗ ಯಾರು ಗೆಲ್ಲುವ ಸಾದ್ಯತೆ ಹೆಚ್ಚದೆಯೋ ಅಂತಹ ಪಕ್ಷಕ್ಕೆ ಮತ ನೀಡುತ್ತಾರೆ. ಗೆಲ್ಲು ಸಾದ್ತೆ ಕಡಿಮೆ ಇರುವ ಆದರೆ ತಮ್ಮಗೆ ಒಪ್ಪಿಗೆಯಾಗುವ ವ್ಯಕ್ತಿ ಅಥವಾ ಪಕ್ಷ ಇದ್ದರೂ ಮತನೀಡುವುದಿಲ್ಲ ಗ್ರಾಮೀಣ ಆದ್ದರಿಮದ ರವಿಯಂತವರು ಪಡೆಯುವ ಮತಗಳ ಪ್ರಮಾಣ ಒಂದು ಹಂತದ ವರೆಗೆ ಅವರ ಆಯ್ಕೆಯನ್ನು ಬಯಸುವವರ ಸಂಖ್ಯೆಗಿಂತ ತುಂಬ ಕಡಿಮೆ ಇರುತ್ತದೆ. ಆದರೆ ಈ ಪ್ರಯತ್ನಗಳು ಒಂದು ನಿರ್ದಿಷ್ಟ ರೂಪ ಪಡೆದು ಗೆಲುವಿನ ಸಾಧ್ಯತೆಯನ್ನು ಮತದಾರರ ಮುಂದಿಟ್ಟಾಗ ಪರಿಣಾಮ ಬೇರೆಯದೇ ಆಗಿರುತ್ತದೆ.(ಉದಾ: ಪುಟ್ಟಣ್ಣಯ್ಯ) ಅಲ್ಲಿಯವರೆಗೆ ತಾಳ್ಮೆ ಮತ್ತ ಹೋರಾಟವನ್ನು ಉಳಿಸಿಕೊಳ್ಳದೆ ಬೇರೆ ದಾರಿಇಲ್ಲ

    Reply
    1. prasad raxidi

      ಮದ್ಯದಲ್ಲಿ ಗ್ರಾಮೀಣ ಅನ್ನುವ ಪದ ತಪ್ಪಾಗಿ ಟೈಪ್ ಆಗಿದೆ ಕ್ಷಮಿಸಿ

      Reply
  7. ವಿಜಯ್

    @ಆನಂದಪ್ರಸಾದ್

    [ ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರಿಗೆ ಹೊಸ ಪಕ್ಷವೊಂದನ್ನು ಗೆಲ್ಲಿಸುವ ಸಾಮರ್ಥ್ಯ ಇರುವುದಿಲ್ಲ.]
    ಮತ್ತೆ ಈ ಪ್ರಗತಿಪರ ಚಿಂತಕರು ಬರೆದ ಸಾಕಷ್ಟು ಚುನಾವಣೋತ್ತರ ಲೇಖನಗಳಲ್ಲಿ ಇವರೆಲ್ಲ ಬೆಂಬಲಕ್ಕೆ ನಿಂತ ಉಲ್ಲೇಖ ಇದ್ದೇ ಇರುತ್ತಿತ್ತು..ಅದನ್ನು ಓದಿದವರಿಗೆ ಇವರು ಬೆಂಬಲಕ್ಕೆ ನಿಂತಿದ್ದೂ ಕೂಡ ಕಾಂಗ್ರೆಸ್ ಜಯಗಳಿಸಿದ್ದರಲ್ಲಿ ಬಹು ಮುಖ್ಯ ಪಾತ್ರ ವಹಿಸಿತ್ತು ಎಂಬಂತೆ ಅನಿಸುತ್ತಿತ್ತು. ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ..ನಿಜದಲ್ಲಿ ಇವರು ಕರೆ ಕೊಡುವುದು, ಮನವಿ ಮಾಡುವುದು ಸ್ವಂತ ಸಮಾಧಾನಕ್ಕೆ ಅಥವಾ ನಿಮ್ಮ ಪರವಾಗಿ ನಾವು ಕರೆ ಕೊಟ್ಟಿದ್ದೇವೆ..ಕೃಪೆ ಇರಲಿ ನಮ್ಮ ಮೇಲೆ ಅಂತ ಪರೋಕ್ಷವಾಗಿ ಹೇಳಲು ಅಂತಾಯಿತು. ಅಂದ ಮೇಲೆ ಆನಂದ ಪ್ರಸಾದ ಕರೆಕೊಡುವುದು, ವಿಜಯ್ ಕರೆಕೊಡುವುದು, ಈ ಪ್ರಗತಿಪರ ಚಿಂತಕ ಸಾಹಿತಿಗಳು ಕರೆ ಕೊಡುವುದು ಒಂದೇ ಎಂದಾಯಿತು. ವಿಷಯ ಹೀಗಿರುವಾಗ ನಮ್ಮ ಪ್ರಗತಿಪರ ಚಿಂತಕ ಸಾಹಿತಿಗಳು ಬರಡು ನೆಲದಂತಿರುವ ಆದರೆ ಸ್ವಚ್ಛ ಹಣೆಪಟ್ಟಿ ಹೊತ್ತ ಯಾವ ಪಕ್ಷದ ಪರವಾಗಿ ಕರೆ ಕೊಡುವುದಿಲ್ಲ.. ಬದಲಾಗಿ ಜಾಣತನದಿಂದ ಹಸಿರು ಸಿಗುವ ಜಾಗವನ್ನೇ ಹುಡುಕಿಕೊಳ್ಳುತ್ತಾರೆ..ಅಲ್ಲಿ ರಾಡಿ ಇದ್ದರೂ ಏನಾದರೂ ಸಬೂಬು ಹೇಳಿ ಸಮರ್ಥಿಸಿಕೊಳ್ಳುತ್ತಾರೆ. ಮೀಡಿಯಾದವರಿಗೆ ಹಣದ ಆಸೆ ಇದ್ದರೆ, ಇವರಿಗೆ ಅಲ್ಲಿ ಇಲ್ಲಿ ಸಿಗಬಹುದಾದ ಪೀಠದ ಆಸೆ ಇರುತ್ತೆ..ಅಷ್ಟೇ ವ್ಯತ್ಯಾಸ.

    [ಮನೆಗೆ ಬೆಂಕಿ ಬಿದ್ದಾಗ ಅದರಿಂದ ಪಾರಾಗುವುದು ತುರ್ತು ಆದ್ಯತೆ ಆಗಿರುತ್ತದೆಯೇ ಹೊರತು ಬೆಂಕಿ ಬೀಳದಂತೆ ಹೇಗೆ ಮನೆಯನ್ನು ಕಟ್ಟಬೇಕು ಎಂಬ ಆಲೋಚನೆ ಅಲ್ಲ.]
    ಪಾರಾಗಿ ಇದ್ದುದರಲ್ಲಿ ಗಟ್ಟಿ ಮುಟ್ಟಾದ ಮನೆಯ ಕಡೆಯೆ ಓಡಿ ಹೋಗಿದ್ದಾರೆ..ಜಾಣರು!

    Reply
  8. siddik ullal mangalore

    i think policy of SDPI < WPI AAM ADMI PARTY raith sanga AND LOKSATTA are mostly similer then why u r not making joint front

    Reply

Leave a Reply

Your email address will not be published. Required fields are marked *