ತಿರುವಿನಲ್ಲಿ ಕನ್ನಡ ಮಾಧ್ಯಮಲೋಕ


– ರವಿ ಕೃಷ್ಣಾರೆಡ್ದಿ


 

ನನ್ನ ಅನುಭವದಲ್ಲಿ ಮೊದಲ ಬಾರಿಗೆ ಕನ್ನಡ ಮಾಧ್ಯಮ ಲೋಕದ ಬಗ್ಗೆ ಆಶಾವಾದದಿಂದ ಬರೆಯುವ ಸಂದರ್ಭ ಬಂದಿದೆ ಎಂದು ಭಾವಿಸುತ್ತೇನೆ. ಕಳೆದ ಎಂಟತ್ತು ವರ್ಷಗಳಿಂದ ಕನ್ನಡ ಮಾಧ್ಯಮ ಜಗತ್ತು ಅಪ್ರಾಮಾಣಿಕತೆ, ವೃತ್ತಿಪರತೆಯ ಲೋಪ, ಭ್ರಷ್ಟಾಚಾರ, ಜನವಿರೋಧಿ ಪಿತೂರಿಕೋರ ನಿಲುವುಗಳು, ಮರೆತ ಪತ್ರಿಕೋದ್ಯಮದ ಉದ್ದೇಶ, ಇತ್ಯಾದಿಗಳಿಂದಾಗಿ ಪಾತಾಳ ತಲುಪಿದ್ದದ್ದು ಎಲ್ಲರಿಗೂ ಗೊತ್ತಿರುವುದೆ. ಆದರೆ, ತೀರಾ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವನತಿಯ ತುದಿಯಿಂದ ಮೇಲಕ್ಕೇರಲು ಮಾಧ್ಯಮರಂಗ ತಿರುವು ಪಡೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಇಂತಹ ಮಾತುಗಳನ್ನು ಆಡಲು ಬಹುಶಃ ನಾನು ಅವಸರಿಸುತ್ತಿದ್ದೇನೆ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಇದನ್ನು ನಾನು ಪತ್ರಕರ್ತರು ಅಥವ ಮಾಧ್ಯಮಸಂಸ್ಥೆಗಳ ಮಾಲೀಕರು ಪರಿವರ್ತನೆಗೊಂಡಿದ್ಡಾರೆ ಎನ್ನುವ ಹುಸಿ ಆಧಾರದ ಮೇಲೆ ಆಧರಿಸದೆ, ಬದಲಾಗುತ್ತಿರುವ ಮಾರುಕಟ್ಟೆ ಮತ್ತು ಮಾಧ್ಯಮಸಂಸ್ಥೆಗಳ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತಿರುವ ದೀರ್ಘಕಾಲೀನ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಿದ್ದೇನೆ.

ಮುದ್ರಣ ಮಾಧ್ಯಮದ ವಿಷಯಕ್ಕೆ ಬಂದರೆ, ಬಹುಶಃ ಕಳೆದ ಒಂದು ದಶಕದಲ್ಲಿ ಮೊದಲ ಬಾರಿಗೆ ಎಂಬಂತೆ ಎರಡು ದೊಡ್ಡ ಪತ್ರಿಕೆಗಳು ಜನಪರ ವಿಚಾರಗಳನ್ನು ರಾಜ್ಯದ ಓದುಗರ ಮುಂದಿಡಲು ಪೈಪೋಟಿ ನಡೆಸುತ್ತಿವೆ. kpscಕಳೆದ ಎರಡು-ಮೂರು ವಾರಗಳಿಂದ ಪ್ರಜಾವಾಣಿಯಲ್ಲಿ ಕೆಪಿಎಸ್‌ಸಿ ಹಗರಣದ ಬಗ್ಗೆ ರವೀಂದ್ರ ಭಟ್ಟರು ಸವಿಸ್ತಾರವಾಗಿ, ನಿರಂತರವಾಗಿ, ಅಂಕಿ-ಅಂಶಗಳ ಸಹಿತ ಬರೆಯುತ್ತಾ ಬಂದಿದ್ದಾರೆ. ಇಂದಿನದು 13ನೇ ಸರಣಿ ಲೇಖನ. ಮುಂದಿನ ದಿನಗಳಲ್ಲಿ ಕೆಪಿಎಸ್‌ಸಿಯಲ್ಲಿಯ ಅವ್ಯವಹಾರಗಳನ್ನು ತಕ್ಕಮಟ್ಟಿಗೆ ತಡೆಗಟ್ಟಲು ಮತ್ತು ಅಲ್ಲಿ ಸುಧಾರಣಾಕ್ರಮಗಳು (checks and balances) ಅನುಷ್ಠಾನಗೊಳ್ಳಲು ಬಹುಶಃ ಈ ಲೇಖನ ಮಾಲೆಯ ಪ್ರಭಾವ, ಅದು ಉಂಟುಮಾಡಿರುವ ಜಾಗೃತಿ, ಮತ್ತು ಅದು ರೂಪಿಸಿರುವ ಜನಾಭಿಪ್ರಾಯ ಮಿಕ್ಕೆಲ್ಲ ಒತ್ತಡಗಳಿಗಿಂತ ಹೆಚ್ಚಿನದು.

ಅದೇ ರೀತಿ ಬಹುಶಃ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿಯ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಜಾವಾಣಿ ಪ್ರಕಟಿಸುತ್ತ ಬಂದಿದೆ. ಇಲ್ಲಿಯವರೆಗೆ ಇಂತಹ 18 ಲೇಖನಗಳು ಈ ಮಾಲಿಕೆಯಲ್ಲಿ ಬಹುಶಃ ಆಯಾ ಜಿಲ್ಲಾ ವರದಿಗಾರರಿಂದ ಬರೆಸಲ್ಪಟ್ಟಿವೆ. ಈ ವರದಿಗಳು ಪ್ರಕಟವಾದ ಮೇಲೆ ಕೆಲವು ಕಡೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ವರದಿಯಾಗಿದೆ. ಒಟ್ಟಿನಲ್ಲಿ ಇಂತಹ ತನಿಖಾ ಮತ್ತು ವಿಶ್ಲೇಷಣಾ ವರದಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ ಎಂದು ಅನ್ನಿಸುತ್ತಿದೆ.

ಅದೇ ರೀತಿಯಲ್ಲಿ ವಿಜಯ ಕರ್ನಾಟಕವೂ ಹಲವು ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ. ಲೋಕಾಯುಕ್ತದ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಒಂದು ಬಗೆಯ activism ಇಲ್ಲಿ ಕಾಣಿಸುತ್ತಿದೆ. ಈ ಪತ್ರಿಕೆಗಳಲ್ಲಿ ಆಯಾಯ ಪತ್ರಿಕೆಯ ಫಲಶೃತಿ ಎಂಬ ತಲೆಬರಹದ ಲೇಖನಗಳು ಹೆಚ್ಚಾಗುತ್ತಿರುವುದು ಇವು ಮಾಡುವ ಫಾಲೋ‌ಅಪ್‌ ಸಫಲತೆಯನ್ನು ತೋರಿಸುತ್ತದೆ. ವಿಜಯ ಕರ್ನಾಟಕದ ಸಂಪಾದಕ ಸುಗತ ಶ್ರೀನಿವಾಸರಾಜು ತಾವು ಇಂಗ್ಲಿಷ್ ಪತ್ರಿಕೆಗಳಲ್ಲಿ ದುಡಿಯುತ್ತ ಗಳಿಸಿದ ವೃತ್ತಿಪರತೆ ಮತ್ತು ವಸ್ತುನಿಷ್ಠತೆಯನ್ನು ಇತ್ತೀಚಿನ ದಿನಗಳಲ್ಲಿ ಅಂತಹುದರ ಅವಶ್ಯಕತೆ ಕಾಣದಿದ್ದ ಕನ್ನಡದ ಯುವಪತ್ರಕರ್ತರಿಗೆ ಮನಗಾಣಿಸಿದರೆ ಅದೇ ದೊಡ್ಡ ಕಾಣಿಕೆಯಾಗುತ್ತದೆ. ಪತ್ರಕರ್ತರಿಗಿಂತ ಹೆಚ್ಚಾಗಿ propagandist ಗಳಾಗಿದ್ದ ಕೂಗುಮಾರಿಗಳ ಹಾವಳಿ ಇಂತಹ ದೊಡ್ದ ಪತ್ರಿಕೆಯಲ್ಲಿ ಕಡಿಮೆಯಾಗಿರುವುದು ಅಲ್ಪ ಬೆಳವಣಿಗೆvijaykarnataka-150713ಯೇನಲ್ಲ. ಹಾಗೆಯೇ, ಕನ್ನಡದ ನಾಲ್ಕು ದೊಡ್ಡ ದಿನಪತ್ರಿಕೆಗಳಲ್ಲಿ ಮೂರು ಯಾವುದೇ ರಾಜಕಾರಣಿಯ ಹಿಡಿತದಲ್ಲಿಲ್ಲದಿರುವುದು ಮುಂದಿನ ದಿನಗಳಲ್ಲಿ ಇವು ಇನ್ನೂ ಹೆಚ್ಚಿನ ಸ್ವತಂತ್ರತೆ ಮತ್ತು ಪಕ್ಷಾತೀತತೆಯಿಂದ ವರ್ತಿಸುತ್ತವೆ ಎಂದು ಆಶಿಸಬಹುದು. ಪ್ರಜಾವಾಣಿ ಮತ್ತು ವಿಜಯ ಕರ್ನಾಟಕದ ನಡುವಿನ ಪೈಪೋಟಿ, ವೈವಿಧ್ಯತೆ, ವೃತ್ತಿಪರತೆ ಇತರೆ ಪತ್ರಿಕೆಗಳ ಮೇಲೆಯೂ ಅವೂ ಹೆಚ್ಚು ಜನಪರವಾಗಿ ಮತ್ತು ಮುಕ್ತವಾಗಿ ಕೆಲಸ ಮಾಡಲು ಒತ್ತಡ ಹೇರುತ್ತದೆ ಎಂದೂ ಭಾವಿಸಬಹುದು.

ಇದೆಲ್ಲದರ ನಡುವೆ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಹಲವು ಮಾಜಿ ಅಧಿಕಾರಿಗಳಿಗೆ ಕನ್ನಡದ ಪತ್ರಿಕೆಗಳು ಜೀವನ ಚರಿತ್ರೆಯ ಅಂಕಣ ಭಾಗ್ಯ ಕೊಡುವಲ್ಲಿ ತೋರಿಸುತ್ತಿರುವ ಅತ್ಯುತ್ಸಾಹ ಒಳ್ಳೆಯ ಬೆಳವಣಿಗೆಯಲ್ಲ. ಅವರ ಅನುಭವ ಒಂದು ರೀತಿಯಲ್ಲಿ ಜನರಿಗೆ ಸರ್ಕಾರ ಹೇಗೆ ವರ್ತಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪರಿಚಯಿಸುತ್ತದೆ ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೇ ಹೀಗೆ ಜೀವನ ಚರಿತ್ರೆ ಹೇಳಲು ಅವಕಾಶ ಪಡೆದಿರುವ ಬಹುತೇಕರು ರಾಜಕೀಯ ಆಕಾಂಕ್ಷೆಗಳನ್ನುಳ್ಳವರು ಮತ್ತು ಈ ವೇದಿಕೆಗಳನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವುದರಲ್ಲಿ ಆಸಕ್ತರು. ಹಾಗಾಗಿಯೇ ಅವರ ಕತೆಗಳ ವಸ್ತುನಿಷ್ಠತೆ ಮತ್ತು ಸತ್ಯತೆ ಸಂದೇಹಾಸ್ಪದವಾದದ್ದು.

ಮತ್ತು, ಈ ಮಧ್ಯೆ ಯಾವ ಪತ್ರಿಕೆಯೆ ಯಾವೊಂದು ಪುರವಣಿಗಳೂ–ಭಾನುವಾರದ ಪುರವಣಿಗೆಗಳನ್ನೂ ಒಳಗೊಂಡು–ಓದಲೇಬೇಕೆಂಬ ರೀತಿಯಲ್ಲಿ ಇಲ್ಲ ಅನ್ನಿಸುತ್ತಿರುವುದಕ್ಕೆ ಕೇವಲ ನನ್ನೊಬ್ಬನ ಬದಲಾಗಿರಬಹುದಾದ ಓದಿನ ಆದ್ಯತೆ ಕಾರಣವೇ ಅಥವ ಬಹುತೇಕ ಓದುಗರಿಗೂ ಹಾಗೇ ಅನ್ನಿಸುತ್ತಿದೆಯೋ ಗೊತ್ತಿಲ್ಲ.

ಇನ್ನು, ಮುದ್ರಣ ಮಾಧ್ಯಮದ ಮೀಡಿಯೋಕರ್ ಮತ್ತು ಭ್ರಷ್ಟ ಪತ್ರಕರ್ತರುಗಳ ಬಗ್ಗೆ ಹೇಳಬಹುದಾದರೆ, ಮುಂದಿನ ಒಂದೆರಡು ವರ್ಷದಲ್ಲಿ ಈ ರಂಗದಲ್ಲಿ ಆಗಲಿರುವ consolidation ಯೋಗ್ಯರು ಮತ್ತು ಪ್ರಾಮಾಣಿಕರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ತಂದುಕೊಡುತ್ತದೆ ಎನ್ನುವ ವಿಶ್ವಾಸ ನನ್ನದು. paperಮುಂದಿನ ವರ್ಷಗಳಲ್ಲಿ ಕನ್ನಡದ ಕೆಲವು ದಿನಪತ್ರಿಕೆಗಳು ಕಣ್ಣುಮುಚ್ಚುವ ಸಾಧ್ಯತೆ ಇರುತ್ತದೆಯೆ ಹೊರತು ಈಗ ಸ್ಥಾಪಿತವಾಗಿರುವವರನ್ನು ಅಲ್ಲಾಡಿಸುವಂತಹ ಇನ್ನೊಂದು ಪತ್ರಿಕೆ ಬರುವ ಸಾಧ್ಯತೆ ನನಗೆ ಕಾಣುತ್ತಿಲ್ಲ. ಇಂಟರ್ನೆಟ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ಕ್ರಾಂತಿಯಿಂದಾಗಿ ಪ್ರಪಂಚದಾದ್ಯಂತ ಮುದ್ರಣ ಮಾಧ್ಯಮ ಮರುಅನ್ವೇಷಣೆಗೊಳಗಾಗುತ್ತಿದೆ. ಇನ್ನೊಂದೈದಾರು ವರ್ಷಗಳಲ್ಲಿ ಅದು ಕನ್ನಡಕ್ಕೂ ತಟ್ಟಲಿದೆ. Saturation ಹಂತ ತಲುಪಿರುವ ಈ ಉದ್ಯಮ mature ಆಗುವ ಮೂಲಕ ಮಾತ್ರ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಬಹುದಾಗಿದೆ.

ಇನ್ನು, ಕನ್ನಡದ ನ್ಯೂಸ್‌ಚಾನಲ್‌ಗಳ ವಲಯದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುತ್ತದೆ. ಒನ್‌ಇಂಡಿಯಾ-ಕನ್ನಡದಲ್ಲಿ ಅದರ ಸಂಪಾದಕರಾದ ಶಾಮ್‌ಸುಂದರ್‌ರವರು ಇದರ ಬಗ್ಗೆ ಇಲ್ಲಿ ಆಸಕ್ತಿಕರವಾಗಿ ಬರೆದಿದ್ದಾರೆ. ಆ ಲೇಖನಕ್ಕೆ ನಾನು ಕಳುಹಿಸಿರುವ ಪ್ರತಿಕ್ರಿಯೆಯಲ್ಲಿ ಅದರ ಇನ್ನೊಂದು ಮಗ್ಗಲನ್ನು ಈ ಬೆಳವಣಿಗೆಗಳು ಅದು ಹೇಗೆ ಗುಣಾತ್ಮಕವಾಗಿಯೂ ಇರಲಿವೆ ಎಂದು ಚರ್ಚಿಸಿದ್ದೇನೆ. ಅದರ ಪೂರ್ಣಪಾಠ ಇಲ್ಲಿದೆ:

ಶಾಮಸುಂದರ್‌ರವರೆ,

ನೀವು ಹೇಳಿದಂತೆ ಕನ್ನಡದ ನ್ಯೂಸ್ ಚಾನಲ್‌ಗಳಿಗೆ ಈಗ ಸಂಕ್ರಮಣದ ಸಮಯ. ನನ್ನ ಪ್ರಕಾರ ಈಗ ಇರುವ ಎಲ್ಲಾ ಚಾನಲ್‌ಗಳಿಗೂ ಬದುಕುವ ಮತ್ತು ಬೆಳೆಯುವ ಅವಕಾಶ ಮತ್ತು ಮಾರುಕಟ್ಟೆ ಇದೆ. ಆದರೆ, ಕೆಲವು ಮಾತ್ರ ಲಾಭದಾಯಕವಾಗಿ ಉಳಿದು, ಮಿಕ್ಕವು ನಷ್ಟಕ್ಕೆ ಈಡಾಗಿ ಅಳಿವಿನ ಅಂಚಿಗೆ ಬಂದಿರುವುದಕ್ಕೆ, ಆ ಮೂಲಕ ಅನೇಕ ನೌಕರರು ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಅವುಗಳ ಸ್ಥಾಪನೆಯಲ್ಲಿಯ ಮೂಲ ಉದ್ದೇಶ ಮತ್ತು ತದನಂತರ ಅವುಗಳ ನಿರ್ವಹಣೆಯಲ್ಲಿಯೇ ದೋಷಗಳಿರುವುದು.

ನೀವು ಲಾಭದಾಯಕವಾಗಿ ನಡೆಯುತ್ತಿರುವ ಕೆಲವು ಚಾನಲ್‌ಗಳನ್ನು ಹೆಸರಿಸಿ ಅವುಗಳ ಮಾಲೀಕರು ಯಾರೂ ಕನ್ನಡದವರಲ್ಲ ಎಂದಿರುವುದರಲ್ಲಿಯೇ ನಾವು ಆ ವಲಯದಲ್ಲಿ ಇಂದು ಕಾಣುತ್ತಿರುವ ಗೊಂದಲಗಳಿಗೆ ಉತ್ತರವಿದೆ. ಆ ಚಾನಲ್ ಸ್ಥಾಪಕರ ಮೂಲ ಉದ್ದೇಶ ಒಂದು ಲಾಭದಾಯಕ ವಾರ್ತಾವಾಹಿನಿಯನ್ನು ಕಟ್ಟುವುದು. ಆ ಉದ್ದೇಶ ಇರುವವರು ಒಂದು ಚಾನಲ್ ಕಟ್ಟಲು ಬೇಕಾದ ಅಗತ್ಯ ಬಂಡವಾಳದ ಜೊತೆಗೆ ಉತ್ತಮ ವೃತ್ತಿಪರ ನಿರ್ವಹಣಾಧಿಕಾರಿಗಳ ಕೈಗೆ ಅವುಗಳ ಉಸ್ತುವಾರಿ ಕೊಡುತ್ತಾರೆ. ಹಾಕಿರುವ ಬಂಡವಾಳಕ್ಕೆ ಮೋಸವಾಗದಂತೆ ಮತ್ತು ಚಾನಲ್ ಜನಪ್ರಿಯವಾಗಿ ಲಾಭದಾಯಕವಾಗಲು ಏನೇನು ನಿರ್ಧಾರಗಳು ಅಗತ್ಯವೋ ಅದೆಲ್ಲವನ್ನೂ ಅವರು ನಿರ್ಭಾವುಕವಾಗಿ ಕೈಗೊಳ್ಳುತ್ತಾರೆ. ಬೇರೆ ಕಡೆಯಿಂದ ಹೆಚ್ಚು ಸಂಬಳ ಕೊಟ್ಟು ಕರೆತರಬೇಕಾದ ಅವಶ್ಯಕತೆ ಬಿದ್ದರೆ ಕರೆತರುತ್ತಾರೆ, ಮತ್ತೆ ಅವರೇ ಹೊರೆ ಎನಿಸಿದರೆ ಕೂಡಲೆ ಮನೆಗೆ ಕಳುಹಿಸುತ್ತಾರೆ. ಆಗಾಗ ಖರ್ಚುಕಡಿತಕ್ಕೆ ಏನೇನು ಮಾಡಬೇಕೊ ಅದನ್ನು ಮಾಡುತ್ತಾರೆ ಮತ್ತು ಎಲ್ಲಿ ಹಣ ತೊಡಗಿಸಿದರೆ ಹೆಚ್ಚು ಉಪಯೋಗವಾಗುತ್ತದೆ ಎನಿಸುತ್ತದೆಯೋ ಅಲ್ಲಿ ತೊಡಗಿಸುತ್ತಾರೆ. ಅದೇ ರೀತಿ ಕಾರ್ಯಕ್ರಮಗಳ ವಿಷಯದಲ್ಲಿಯೂ ಹೆಚ್ಚಿನ ಗೊಂದಲಗಳಿಲ್ಲದೆ ಯಾವ ತರಹದ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗುತ್ತದೆ ಎನ್ನಿಸುತ್ತದೆಯೊ ಅಂತಹುದನ್ನು ಹೆಚ್ಚೆಚ್ಚು ವೃತ್ತಿಪರತೆಯಿಂದ ನೀಡುತ್ತ ಹೋಗುತ್ತಾರೆ. ಬೇರೆ ಭಾಷೆಗಳ ಯಶಸ್ವಿ ಕಾರ್ಯಕ್ರಮಗಳನ್ನು ನಕಲು ಮಾಡುವುದರಿಂದ ಹಿಡಿದು ಅವರ ಕಾರ್ಯನಿರ್ವಹಣೆಯ ತಂತ್ರಗಳನ್ನೂ ಇಲ್ಲಿಗೆ ತರುತ್ತಾರೆ.

ಆದರೆ ಕನ್ನಡದಲ್ಲಿ ನಷ್ಟದಲ್ಲಿ ನಡೆಯುತ್ತಿರುವ ಮತ್ತು ಮುಚ್ಚುವ ಹಂತಕ್ಕೆ ಬಂದಿರುವ ಚಾನಲ್‌ಗಳನ್ನು ನೋಡಿ. ಇವೆಲ್ಲವೂ ನಮ್ಮ ರಾಜ್ಯದ ರಾಜಕಾರಣಿಗಳಿಂದ ಆರಂಭಿಸಲ್ಪಟ್ಟಂತಹವು. ಈ ರಾಜಕಾರಣಿಗಳಲ್ಲಿ ಯಾರಿಗೂ ಮಾಧ್ಯಮ ರಂಗದ ಉದ್ದಿಮೆಯ ಪರಿಚಯ ಇರಲಿಲ್ಲ. ನಮ್ಮ ತುತ್ತೂರಿಯನ್ನು ಊದಿಕೊಳ್ಳಲು ನಮಗೂ ಒಂದು ಚಾನಲ್ ಇರಲಿ ಎಂದು ಚಾನಲ್ ಆರಂಭಿಸಿದವರೇ ಇವರೆಲ್ಲ. ಚಾನಲ್‌ಗಳ ಅರಂಭದ ಸಮಯದಲ್ಲಿ ಇವರ್ಯಾರಿಗೂ ಹಣದ ಕೊರತೆ ಇರಲಿಲ್ಲ. ಅಷ್ಟೇ ಅಲ್ಲ, ಒಂದು ಚಾನಲ್ ನಿಲ್ಲಲು ಎಷ್ಟು ದುಡ್ಡು ಮತ್ತು ದಿನ ಬೇಕಾಗುತ್ತದೆ ಎನ್ನುವ ಜ್ಞಾನವೂ ಇರಲಿಲ್ಲ. ಬಹುತೇಕ ಸಂದರ್ಭದಲ್ಲಿ ಅನೀತಿ ಮತ್ತು ಭ್ರಷ್ಟ ಮಾರ್ಗಗಳಿಂದ ಸಂಪಾದಿಸಿದ ದುಡ್ಡೇ ಆಗಿದ್ದರಿಂದ ಕಳೆದುಕೊಳ್ಳುತ್ತೇವೆಂಬ ಭಯವಾಗಲಿ, ಆರ್ಥಿಕ ಶಿಸ್ತಾಗಲಿ ಇರಲಿಲ್ಲ. ಜೊತೆಗೆ ತಾವೊ, ತಮ್ಮ ಪತ್ನಿಯರೊ, ತಮಗೆ ಬೇಕಾದ ಬೇನಾಮಿ ವ್ಯಕ್ತಿಗಳೊ ಅವುಗಳಿಗೆ ಮುಖ್ಯಸ್ಥರಾದರು. ಬಹುತೇಕ ಎಲ್ಲಾ ಸಂದರ್ಭದಲ್ಲಿ ಹೀಗೆ ಮುಖ್ಯಸ್ಥರಾದವರು ಅಂತಹ ಒಂದು ಸಂಸ್ಥೆ ನಡೆಸಲು ಅನರ್ಹರಾಗಿದ್ದರು. tv-mediaಇತ್ತೀಚೆಗೆ ಸ್ನೇಹಿತರೊಬ್ಬರು ಹೇಳಿದಂತೆ ಇಂತಹ ಹಲವರು ಕೊಳಕರೂ ಆಗಿದ್ದರು. ತೀರಾ ಅನೈತಿಕ ಕೆಲಸಗಳಿಗೆ ತಮ್ಮ ಮಾಲೀಕತ್ವ ಮತ್ತು ಮುಖ್ಯಸ್ಥ ಸ್ಥಾನಗಳನ್ನು ಬಳಸಿಕೊಂಡಿದ್ದರು. ಇವರಿಗೆ ಚಾನಲ್ ಉಸ್ತುವಾರಿ ತಮ್ಮ ತೆವಲುಗಳ ಪೂರೈಕೆಗೆ ಒಂದು ಆಸ್ಥಾನ. ಇಂತಹವರಿಗೆ ಒಂದು ಸಂಸ್ಥೆಯ ಉಳಿಯುವಿಕೆ ಹೇಗೆ ಮುಖ್ಯವಾಗುತ್ತದೆ?

ಇದರ ಜೊತೆಗೆ, ಈ ಚಾನಲ್‌ಗಳ ಬೇರೆ ಕಾರ್ಯಕ್ರಮಗಳು ಎಷ್ಟೇ ಚೆನ್ನಾಗಿದ್ದರೂ ವಾರ್ತೆ ಮತ್ತು ವಿಶ್ಲೇಷಣೆಯ ವಿಚಾರಕ್ಕೆ ಬಂದಾಗ ಜನರಿಗೆ ಇವುಗಳ ಮೇಲೆ ವಿಶ್ವಾಸ ಮೂಡಲೇ ಇಲ್ಲ. ಮಾಲೀಕನ ಬಗ್ಗೆ ಅಥವ ಆತನ ಪಕ್ಷದ/ನಾಯಕರ ಬಗ್ಗೆ ಅವರು ತೋರಿಸುತ್ತಿದ್ದ/ತೋರಿಸುತ್ತಿರುವ ಪಕ್ಷಪಾತಿತನ ಅವುಗಳನ್ನು ನೋಡುಗರ ಒಂದು ವಲಯಕ್ಕೆ ಸೀಮಿತಗೊಳಿಸಿಬಿಟ್ಟಿವೆ. ಹೀಗಿರುವಾಗ, ಅವುಗಳ ಮಾರುಕಟ್ಟೆ ವಿಸ್ತಾರವಾಗುವುದಾದರೂ ಹೇಗೆ? ಈ ಎಲ್ಲದರ ನಡುವೆ ಹಲವು ಚಾನಲ್‌ಗಳ ಕೆಲವು ನಿರೂಪಕರ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹವಾಗುತ್ತ ಹೋಯಿತು. ಕೆಲವರು ತಮ್ಮ ಹುದ್ದೆ ಅಥವ ಮುಖಪರಿಚಯವನ್ನು ಅನೈತಿಕವಾಗಿ ದುಡ್ಡುಮಾಡಿಕೊಳ್ಳುವ ಭ್ರಷ್ಟ ಮಾರ್ಗಗಳಿಗೂ ಬಳಸಿಕೊಂಡರು. ತಮ್ಮ ಅನೀತಿ, ವೃತ್ತಿಪರತೆ ಇಲ್ಲದಿರುವುದು, ತಲೆಗೇರಿಸಿಕೊಂಡ ಅಹಂಕಾರ, ಇವುಗಳಿಂದ ತಾವೂ ಕೆಟ್ಟಿದ್ದೂ ಅಲ್ಲದೆ ತಮ್ಮ ಚಾನಲ್‌ಗಳ ಉಳಿವಿಗೂ ಸಂಚಕಾರ ತಂದರು.

ಈಗ ಹೀಗೆ ನಷ್ಟದಲ್ಲಿರುವ ಚಾನಲ್‌ಗಳ ಕೆಲವು ಮಾಲೀಕರ ದುಡ್ಡಿನ ಮೂಲಗಳು ಬತ್ತಿವೆ. ವಿಧಿಯಿಲ್ಲದೆ ಮಾರಲು ನೋಡುತ್ತಿದ್ದಾರೆ. ಕೊಳ್ಳಲು ಇತರೆ ಭ್ರಷ್ಟ ರಾಜಕಾರಣಿಗಳು ಮುಂದೆ ಬರುತ್ತಿಲ್ಲ. ಉದ್ದಿಮೆ ಎಂದು ಪರಿಗಣಿಸಿ ಬರಬಹುದಾದವರಿಗೆ ಈ ಚಾನಲ್‌ಗಳ ಇತಿಹಾಸ ಸ್ಫೂರ್ತಿ ಹುಟ್ಟಿಸುತ್ತಿಲ್ಲ.

ನೀವು ಹೇಳಿದ ಹಾಗೆ, ಕಳೆದ ಆರೇಳು ವರ್ಷಗಳ ಸಂದರ್ಭದಲ್ಲಿ ಎಂತೆಂತಹವರೆಲ್ಲ ಸ್ಟಾರ್‌ಗಳಾಗಿಬಿಟ್ಟರು. ಸರಿಯಾಗಿ ಒಂದು ವಿಷಯದ ಬಗ್ಗೆ ಬರೆಯಲು ಮತ್ತು ಮಾತನಾಡಲು ಬಾರದವರೆಲ್ಲ ಜನಾಭಿಪ್ರಾಯ ರೂಪಿಸುವ ಮಹಾನುಭಾವರಾಗಿಬಿಟ್ಟ ದುರದೃಷ್ಟಕರ ಪರಿಸ್ಥಿತಿ ಉಂಟಾಯಿತು. ಒಳ್ಳೆಯ, ವೃತ್ತಿಪರ, ಕಾಳಜಿಯುಳ್ಳ, ಪ್ರಾಮಾಣಿಕ ಮತ್ತು ಅರ್ಹ ಪತ್ರಕರ್ತರು ತಮಗೆ ಸಲ್ಲದ ಜಾಗದಲ್ಲಿ ಕುಳಿತು ತಮ್ಮ ಮಿತಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಘನತೆಯನ್ನು ಈ ವೃತ್ತಿಗೆ ತರಲು ಶ್ರಮಪಡುತ್ತ ಹೋದರು. ಆದರೆ ಇಂತಹ ಸಂಕ್ರಮಣದ ಸಂದರ್ಭದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡ ಅಂತಹ ಜನಕ್ಕೆ ಹೆಚ್ಚಿನ ಅವಕಾಶಗಳು ಮತ್ತು ಜವಾಬ್ದಾರಿಗಳು ಸಿಗುತ್ತವೆ. ಲಾಭದಲ್ಲಿ ನಡೆಯುತ್ತಿರುವ ಚಾನಲ್‌ಗಳಲ್ಲಿದ್ದರೂ ವಿಶ್ವಾಸಾರ್ಹತೆ ಕಳೆದುಕೊಂಡ, ಭ್ರಷ್ಟ ಎಂದು ಪರಿಗಣಿಸಲ್ಪಟ್ಟ ಹಲವು ತಲೆಹರಟೆ ಜನ ಕೆಲಸ ಕಳೆದುಕೊಂಡಿದ್ದಾರೆ ಅಥವ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇದನ್ನು ಕೊಳೆ ತೊಳೆಯುವ ಸಮಯ ಎಂದೇ ನಾನು ಭಾವಿಸುತ್ತೇನೆ. ಈಗಿನ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಉಳಿಯುವ ಚಾನಲ್‌ಗಳು ಕನಿಷ್ಟ ಪಕ್ಷ ಅರ್ಹ ವ್ಯಕ್ತಿಗಳ ಉಸ್ತುವಾರಿಗೆ ಒಳಪಡುತ್ತವೆ ಮತ್ತು ಅವುಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವವರು ಒಂದಿಷ್ಟು ಪತ್ರಕರ್ತನ ಬದ್ಧತೆ, ಕಾಳಜಿ, ವಿದ್ಯಾರ್ಹತೆ ಮತ್ತು ವೃತ್ತಿಪರತೆಯ ಇತಿಹಾಸ ಹೊಂದಿರುತ್ತಾರೆ ಎನ್ನುವ ವಿಶ್ವಾಸ ನನ್ನದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

 

3 thoughts on “ತಿರುವಿನಲ್ಲಿ ಕನ್ನಡ ಮಾಧ್ಯಮಲೋಕ

 1. dhinkar

  ಅಂತೇ ಕಂತೆಗಳ ಸಂತೆಯ ಸುದ್ದಿ ಬಿತ್ತರಿಕೆಯಿಂದ ಕಂಗೆಟ್ಟು ಹೋಗಿರುವ ನಮಗೆ ಪರಭಾಷಾ ಚಲನಚಿತ್ರ ಉಣ್ಣ ಬಡಿಸಲು ಕೆಲವು ವಾಹಿನಿಗಳು ಕಾಯುತ್ತಿವೆ. ಕಾವಲು ಪಡೆ ಕೇವಲ ಕಾಸು ಮಾಡುವುದಕ್ಕೆ ಸೀಮಿತವೇ?? ಒಂದು ಕಾಲಕ್ಕೆ ಪತ್ರಿಕಾ ರಂಗಕ್ಕೆ ಕಾಲಿಟ್ಟು ಹೊಸ ಕ್ರಾಂತಿ ದೀಪ ಹಚ್ಚಿದಂತೆ ಕಂಡ “ವೀರ ವಿಜಯ”ನ ಹೊಸ ವಾಣಿ ಈಗ ಪೆಟ್ರೋಲ್ ಪಂಪ್ ನಲ್ಲಿ ಉಚಿತ. ಇದು ನಾ ಕಂಡ ಅತ್ಯಂತ ಕಠೋರ ಸತ್ಯ ಹಾಗೂ ನೀವು ಬರೆದಿರುವ ಅಂಕಣಕ್ಕೊಂದು ಕನ್ನಡಿ.

  Reply
 2. ಮರುಗಣ್ಣನವರ್, ಗೋಕಾಕ್

  ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ”ಕಪ್ರ”ದಲ್ಲಿ ತಮ್ಮ ವೃತ್ತಿ ಸಾಧನೆಗಳ ಬಗ್ಗೆ ಅಂಕಣ ಬರೆಯುತ್ತಿದ್ದಾರೆ. ಆಕೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಯಾಗಿ ಕತ೵ವ್ಯ ನಿವ೵ಹಿಸುತ್ತಿದ್ದ ವೇಳೆ ಪ್ರವಾಹದಿಂದ ಜನರ ಬದುಕೇ ಕೊಚ್ಚಿ ಹೋಗಿತ್ತು. ಪ್ರವಾಹಪೀಡಿತ ಹಣದ ದುರುಪಯೋಗ ಆರೋಪ ಕೇಳಿಬಂದಿತ್ತು. ಒಂದಿಬ್ಬರು ಪತ್ರಕತ೵ರನ್ನು ಹೊರತುಪಡಿಸಿದರೆ ಆ ಜಿಲ್ಲೆಯಲ್ಲಿದ್ದ ಬಹುತೇಕ ೆಲ್ಲ ಮುಖ್ಯಪತ್ರಿಕೆಗಳ ವರದಿಗಾರರಿಗೆ ಈ ಅಮ್ಮ ಪ್ರವಾಹದ ಹಣ ಹಂಚಿದ್ದರು ಎಂಬ ಆರೋಪವೂ ಇದೆ. ಅಧಿಕಾರಿಗಳು ಅವರ ಕತೆಗಳ ವಸ್ತುನಿಷ್ಠತೆ ಮತ್ತು ಸತ್ಯತೆ ಸಂದೇಹಾಸ್ಪದವಾದದ್ದು’ ಎಂದು ನೀವು ಹೇಳಿರುವ ಮಾತು ಶೇ. 100ರಷ್ಟು ಸತ್ಯ.

  Reply
 3. R. Ramesh

  maadhyama indu kavalu dariyallide. Bhrasta, kolaku manassina vyaktigalu ellinda tolagidare ondastu Ashaavada moodabahudu

  Reply

Leave a Reply

Your email address will not be published.