ಎಲೆನಾರ್ ಕ್ಯಾಟನ್‌ಗೆ ಬೂಕರ್ ಪ್ರಶಸ್ತಿ


– ಡಾ.ಎಸ್.ಬಿ. ಜೋಗುರ


 

ಕೊನೆಯವರೆಗೂ ರೇಸಿನಲ್ಲಿದ್ದ ಭಾರತೀಯ ಮೂಲದ ಲೇಖಕಿ ಜುಂಪಾ ಲಹರಿ ತನ್ನ ಜೊತೆಗಿರುವ ಇತರೇ ಲೇಖಕಿಯರ ಹಾಗೆ ಬದಿಗೆ ಸರಿದು, ನ್ಯೂಝಿಲ್ಯಾಂಡ್ ಮೂಲದ ಎಲೆನಾರ ಕ್ಯಾಟನ್‌ಗೆ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಬಿಟ್ಟು ಕೊಡಬೇಕಾಯಿತು. ಆ ಮೂಲಕ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಲೇಖಕಿಯೊಬ್ಬಳು ಹೀಗೆ ತನ್ನ 28 ವರ್ಷ ವಯಸ್ಸಿನಲ್ಲಿ ಬೂಕರ್ ಪ್ರಶಸ್ತಿ ಮತ್ತು ಅದರ 50000 ಪೌಂಡ್ ಮೊತ್ತವನ್ನು ಜೇಬಿಗಿಳಿಸುವಂತಾದದ್ದು ಚಾರಿತ್ರಿಕ ದಾಖಲೆ. ಜುಂಪಾ ಲಹರಿಯ “ಲೋಲ್ಯಾಡ್” ಎನ್ನುವ ಕೃತಿ ಕೂಡಾ ಅಪಾರ ನಿರೀಕ್ಷೆಯನ್ನು ಹುಟ್ಟಿಸಿರುವುದು ಹೌದಾದರೂ ಅಂತಿಮವಾಗಿ ನಿರ್ಣಾಯಕರ ಆಯ್ಕೆಯಲ್ಲಿ ಪ್ರಶಸ್ತಿಗೆ ಅರ್ಹತೆಯನ್ನು Eleanor-Cattonಗಳಿಸಿಕೊಂಡ ಕೃತಿ ಎಲೆನಾರ್‌‍ಳ “ದ ಲುಮಿನರೀಸ್”. ತನ್ನ 25 ವರ್ಷದ ವಯಸ್ಸಿನಲ್ಲಿಯೇ ಬರವಣಿಗೆಯನ್ನು ಆರಂಭಿಸಿ ಅದಾಗಲೇ 2008 ರಲ್ಲಿ “ದ ರಿಹರ್ಸಲ್” ಎನ್ನುವ ಕಾದಂಬರಿಯನ್ನು ಬರೆದು ಜನಪ್ರಿಯಳಾದ ಎಲೆನಾರ್ ಈಗ ತನ್ನ ಬೃಹತ್ ಕಾದಂಬರಿ, ಸುಮಾರು 852 ಪುಟದ ’ದ ಲುಮಿನರೀಸ್’ ಕೃತಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದದ್ದರ ಬಗ್ಗೆ ಅಪಾರವಾದ ಸಂತಸವನ್ನು ವ್ಯಕ್ತ ಪಡಿಸುತ್ತಾ ಆಕೆ ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾಳೆ, “I have observed that male writers tend to get asked what they think and women what they feel.”

ಓರ್ವ ತತ್ವಜ್ಞಾನಿ ಹಾಗೂ ಗ್ರಂಥಪಾಲಕರ ಮಗಳಾದ ಎಲೆನಾರ್ ನಿರಂತರ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಈ ಹಂತವನ್ನು ತಲುಪಿದವಳು. ಹಿಡಿದ ಕೆಲಸವನ್ನು ಮಾಡಿ ಮುಗಿಸುವವರೆಗೂ ಸಮಾಧಾನ ಪಡದ ಅವಳು ಒಮ್ಮೊಮ್ಮೆ ಕೇವಲ ಎರಡೂವರೆ ಘಂಟೆಗಳ ಕಾಲ ಮಾತ್ರ ಮಲಗಿರುವದಿದೆ. ಪ್ರಶಸ್ತಿ ಬಂದ ಗಳಿಗೆಯಲ್ಲಿ ಮಾಧ್ಯಮದವರು ಆಕೆಯ ಸುತ್ತಲೂ ಮುಕುರಿರುವಾಗಲೂ.. ಪ್ರಶ್ನೆಗಳ ಸುರಿಮಳೆಯನ್ನು ಹರಿಸುತ್ತಿರುವಾಗಲೂ ಆಕೆ ನೋಟ್ ಮಾಡಿಕೊಳ್ಳಲು ಒಂದು ಕಾಗದದ ತುಂಡನ್ನು ಹುಡುಕುತ್ತಿರುವುದಿತ್ತು. ಎಲೆನಾರ್‌ಗೆ ತನ್ನ ಕೃತಿ ನಿಜವಾಗಿಯೂ ಮಹತ್ವಾಕಾಂಕ್ಷೆಯ ಕೃತಿ ಎಂದು ತಿಳಿದಿರುವುದಿತ್ತು. ಆದರೂ ವಿಮರ್ಶಕರಾಡುವ ಮಾತುಗಳು ಅವಳನ್ನು ಕೊಂಚ ಕುಗ್ಗಿಸಿರುವುದೂ ಇತ್ತು. ಹಾಗೆಂದು ಆಕೆ ಸುಮ್ಮನಿರುತ್ತಿರಲಿಲ್ಲ. ತನ್ನ ಕಾದಂಬರಿಯಲ್ಲಿ ತಾರ್ಕಿಕತೆಗಿಂತಲೂ ತಾತ್ವಿಕತೆ ಹೆಚ್ಚಿಗಿದೆ ಎನ್ನುವುದನ್ನು ಅನೇಕ ಸಾರಿ ಎಲೆನಾರ್ ಹೇಳಿಕೊಂಡಿರುವುದಿದೆ. ಆಕೆ ’ನನ್ನ ಪ್ರಶಸ್ತಿಯ ಬಗ್ಗೆ ನಾನು ಉತ್ತರಿಸುವ ಬದಲಾಗಿ ನನ್ನ ಕಾದಂಬರಿ ಉತ್ತರಿಸುವಂತಾದರೆ ಒಳ್ಳೆಯದು’ ಎನ್ನುತ್ತಾಳೆ.

ಈ ಕಾದಂಬರಿಯ ಕಥಾ ವಸ್ತು 1860 ರ ಸಂದರ್ಭದ ನ್ಯೂಝಿಲ್ಯಾಂಡನಲ್ಲಿ ಜರುಗಿದ ಗೋಲ್ಡ್ ರಶ್ ಘಟನೆಯನ್ನು ಆಧರಿಸಿದೆ. the-luminariesಭವಿಷ್ಯ ಮತ್ತು ದೈವದ ಒಡೆಯರಂತೆ ವರ್ತಿಸುವವರ ಬಗೆಗಿನ ಚಿತ್ರಣವಿರುವ ಈ ಕಾದಂಬರಿ ಏಕಕಾಲಕ್ಕೆ 12 ಕಡೆಗಳಲ್ಲಿ ಅದರ ಕತೆ ಆರಂಭವಾಗುವ ಬಗ್ಗೆ ಮಾಹಿತಿಗಳಿವೆ. ಈ ಪ್ರಶಸ್ತಿಯ ನಿರ್ಣಾಯಕರಲ್ಲಿ ಒಬ್ಬನಾದ ಸ್ಟುವರ್ಟ್ ಕೆಲ್ಲಿ ಹೇಳುವ ಹಾಗೆ “ನಾವು ನಿರೀಕ್ಷಿಸುವ ಹಾಗೆ ಈ ಕಾದಂಬರಿ ಸಾಗುವದಿಲ್ಲ ಎನ್ನುವುದೇ ಇದರ ಯಶಸ್ಸು. ಭವಿಷ್ಯ ಮತ್ತು ಬಂಡವಾಳಗಳ ನಡುವಿನ ಮೌಖಿಕ ಸಂಘರ್ಷವನ್ನು ಈ ಕಾದಂಬರಿಯಲ್ಲಿ ಆಕೆ ಚೆನ್ನಾಗಿ ಕಟ್ಟಿಕೊಟ್ಟಿದ್ದಾಳೆ. ತಾನು ಇದುವರೆಗೂ ಈ ಬಗೆಯ ಕಾದಂಬರಿಯನ್ನು ಓದಿಲ್ಲ,” ಎಂದು ಹೇಳುತ್ತಾನೆ. ಈ ಬೃಹತ್ ಕಾದಂಬರಿ ಎಲೆನಾರ್ ತನಗೆ ತಾನೇ ಹಾಕಿಕೊಂಡ ಪ್ರಶ್ನೆಗೆ ಉತ್ತರವಾಗಿ ಮೂಡಿಬಂದ ಕೃತಿ. ತನ್ನನ್ನು ಕಾಡಿದ ಪ್ರಶ್ನೆಗೆ ತಾನು ಎಷ್ಟರ ಮಟ್ಟಿಗೆ ಸಮರ್ಪಕವಾಗಿ ಉತ್ತರಿಸುವ ಯತ್ನ ಮಾಡಿರುವೆ ಎನ್ನುವುದನ್ನು ಕಾದಂಬರಿಯ ಓದುಗರೇ ನಿರ್ಣಯಿಸಬೇಕು ಎನ್ನುವ ಎಲೆನಾರ್ ಹೀಗೆ ಹೆಳುತ್ತಾಳೆ. “What I like about fiction most is that it resists closure and exists, if the reader is willing to engage, as a possible encounter – an encounter that is like meeting a human being.”

ಎಲೆನಾರ್ ಹುಟ್ಟಿದ್ದು ಕೆನಡಾದಲ್ಲಿ, ಬೆಳೆದದ್ದು ನ್ಯೂಝಿಲ್ಯಾಂಡಲ್ಲಿ, ಸದ್ಯ ವಾಸವಾಗಿರೋದು ಅಕ್‌ಲ್ಯಾಂಡಿನಲ್ಲಿ. 1985 ರ ಸಂದರ್ಭದಲ್ಲಿ ಕೆರಿ ಹ್ಯುಮ್ ಎನ್ನುವ ನ್ಯೂಝಿಲ್ಯಾಂಡ ಲೇಖಕಿ, ಎಲೆನಾರ್ ಹುಟ್ಟಿದ ವರ್ಷವೇ ತನ್ನ ಕೃತಿ “ದ ಬೋನ್ ಪೀಪಲ್” ಎನ್ನುವದಕ್ಕೆ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಪಡೆದಿರುವುದಿತ್ತು. ಸುಮಾರು 28 ವರ್ಷಗಳ ನಂತರ ಈಗ ಮತ್ತೆ ನ್ಯೂಝಿಲ್ಯಾಂಡ್ ಲೇಖಕಿ ಎಲೆನಾರ್ ಕ್ಯಾಟನ್‌ಗೆ ಆ ಪ್ರಶಸ್ತಿ ದಕ್ಕಿದೆ. ಪ್ರಶಸ್ತಿಯ ಮೊತ್ತ ಭಾರತೀಯ ಕರನ್ಸಿಯಲ್ಲಿ ಹೆಚ್ಚೂ ಕಡಿಮೆ 49 ಲಕ್ಷ ರೂಪಾಯಿಗಳು.

ಈ ಬಾರಿಯ ಬೂಕರ್ ಪ್ರಶಸ್ತಿಗೆ ಸ್ಪರ್ಧಿಸುವಲ್ಲಿ ಕೆಲವು ನಿರ್ಬಂಧಗಳಿದ್ದವು. ಇದು ಕೇವಲ ಕಾಮನವೆಲ್ತ್ ರಾಷ್ಟ್ರಗಳ ಲೇಖಕರಿಗೆ ಮಾತ್ರ ನಡೆದ ಸ್ಪರ್ಧೆ. ಬರುವ ವರ್ಷದಿಂದ ವಿಶ್ವದ ಎಲ್ಲ ರಾಷ್ಟ್ರಗಳ ಲೇಖಕರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎನ್ನುವದನ್ನು ಪ್ರಶಸ್ತಿ ಸಮಿತಿ ಹೇಳಿದೆ. 1969 ರಿಂದ ಆರಂಭವಾದ ಈ ಮ್ಯಾನ್ ಬೂಕರ್ ಪ್ರಶಸ್ತಿ ಬರಹಗಾರ ಮತ್ತು ಪ್ರಕಾಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿಯೇ ಆರಂಭವಾಯಿತು. ಈ ಬಾರಿಯ ಸ್ಪರ್ಧೆಯಲ್ಲಿ ಕೊನೆಯ ಸುತ್ತಿನಲ್ಲಿದ್ದ ಒಟ್ಟು ಕೃತಿಗಳು 12. ಅವುಗಳಲ್ಲಿ ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾದ ಕೃತಿ “ದ ಲುಮಿನರೀಸ್” ಎಂಬ ಎಲೆನಾರ್ ಕ್ಯಾಟನ್‌ರ ಕಾದಂಬರಿ.

Leave a Reply

Your email address will not be published.