ವಾಹಿನಿಯೊಂದು ಖಾಸಗಿ ಬದುಕಿನಲ್ಲಿ ಎಷ್ಟರಮಟ್ಟಿಗೆ ಮಧ್ಯಪ್ರವೇಶಿಸಬಹುದು?

download                                                                        ಭಾರತೀದೇವಿ ಪಿ.

ಕಳೆದ ಕೆಲವು ದಿನಗಳಿಂದ ಎರಡು ಸುದ್ದಿಗಳು ನಮ್ಮ ಸುದ್ದಿವಾಹಿನಿಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿವೆ. ಒಂದು ರೈಲ್ವೆ ಸಚಿವ ಸದಾನಂದಗೌಡರ ಮಗ ಕಾರ್ತಿಕ್ ಗೌಡ ಮತ್ತು ಮೈತ್ರಿಯಾ ಮದುವೆ ವಿವಾದ, ಮತ್ತೊಂದು ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲಿನ ಆರೋಪ ಮತ್ತು ಅವರು ಇನ್ನಿತರರ ಮೇಲೆ ಆರೋಪ ಮಾಡುತ್ತಿರುವ ಪ್ರಕರಣ. ಎರಡನೇ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗದಂತೆ ತಡೆಯಾಜ್ಞೆ ತರಲಾಗಿದೆ.

ಈ ಬೆಳವಣಿಗೆ ಬಹಳ ಮುಖ್ಯ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಮೊದಲನೆಯದು, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಎರಡನೆಯದು ಮಾಧ್ಯಮಗಳು ವ್ಯಕ್ತಿಯ ಖಾಸಗಿ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಪ್ರವೇಶಿಸಬಹುದು ಎಂಬ ಪ್ರಶ್ನೆ. ಇವುಗಳ ಜೊತೆಗೆ ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಪ್ರಭಾವಿ ವ್ಯಕ್ತಿಗಳು ತಮ್ಮ ವಿರುದ್ಧದ ಸುದ್ದಿ ಪ್ರಸಾರವಾಗದಂತೆ ನೋಡಿಕೊಳ್ಳುತ್ತಾ ತಮ್ಮ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳದ ಹಾಗೆ ಹೇಗೆ ನೋಡಿಕೊಳ್ಳುತ್ತಿವೆ ಎಂಬುದು.

ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋಗಳಾಗಿದ್ದ ‘ಬದುಕು ಜಟಕಾಬಂಡಿ’, ‘ಇದು ಕತೆಯಲ್ಲ ಜೀವನ’ ಇವುಗಳಲ್ಲಿ ಯಾವ್ಯಾವುದೋ ಸಮಸ್ಯೆಗಳಿಗೆ ಸಿಲುಕಿದ ಜನ ಬರುತ್ತಿದ್ದರು, ಜೋರು ಜೋರು ಮಾತುಕತೆ ನಡೆಯುತ್ತಿತ್ತು, ನಿರೂಪಣೆ ಮಾಡುವವರು ಜೋರು ದನಿಯಲ್ಲಿ ಮಾತನಾಡಿ ತಮಗೆ ತೋರಿದ ಪರಿಹಾರ ನೀಡುತ್ತಿದ್ದರು, ಎಷ್ಟೋ ಸಲ ಕಟ್ಟಪ್ಪಣೆ ಹೊರಡಿಸಿದ್ದೂ ಇದೆ. ಇಲ್ಲಿ ತಮ್ಮ ಖಾಸಗಿ ಬದುಕನ್ನು ಪ್ರದರ್ಶನದ ಸರಕಾಗಿ ಒಡ್ಡಿಕೊಳ್ಳುತ್ತಿದ್ದವರು ಬಹುಪಾಲು ಕೆಳಮಧ್ಯಮವರ್ಗದವರು.

ಒಬ್ಬ ಪಿಕ್ ಪಾಕೆಟ್ ಮಾಡಿದ ಬಡ ಯುವಕನಿಗೆ ಸಾಯುವಂತೆ ಹೊಡೆಯುವ ನಮ್ಮ ವ್ಯವಸ್ಥೆ ಪ್ರಭಾವೀ ವ್ಯಕ್ತಿಗಳು ದೊಡ್ಡ ದೊಡ್ಡ ಅಪರಾಧ ಮಾಡಿದರೂ ಅವರಿಗೆ ವಿಶಿಷ್ಟ ‘ಇಮ್ಯುನಿಟಿ’ಯನ್ನು ನೀಡಿದೆ. ಕರಾವಳಿಯ ‘ಧರ್ಮಸಂರಕ್ಷಕರು’ ಎಂದು ಕರೆಸಿಕೊಳ್ಳುವವರೊಬ್ಬರು ತಮ್ಮ ವಿರುದ್ಧ ಸುದ್ದಿ ಬರೆದ ಟಾಬ್ಲಾಯ್ಡ್ ನ ಒಂದು ಪ್ರತಿಯೂ ಊರು ಸೇರದ ಹಾಗೆ ನೋಡಿಕೊಳ್ಳುತ್ತಾರೆ. ಅವರ ವಿರುದ್ಧ ಬರೆದ ಪತ್ರಿಕಾ ಕಚೇರಿ ಮೇಲೆ ಬೆಂಬಲಿಗರಿಂದ ದಾಳಿಯಾಗುತ್ತದೆ. ಉತ್ತರ ಕರ್ನಾಟಕದ ಸಚಿವರೊಬ್ಬರ ವಿರುದ್ಧ ಸುದ್ದಿ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಆ ಕ್ಷೇತ್ರದ ಹಲವು ಕಡೆ ವಿದ್ಯುತ್ ಸರಬರಾಜು ಹಠಾತ್ ಕಡಿತವಾಗುತ್ತದೆ.

ಒಬ್ಬ ಮನುಷ್ಯ ಹುಡುಗಿಯೊಬ್ಬಳನ್ನು ಛೇಡಿಸಿದರೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸುವುದನ್ನು ಜೂಮ್ ಮಾಡಿ ಪ್ರಸಾರ ಮಾಡುವ ವಾಹಿನಿಗಳು, ಅಂತಹ ಸನ್ನಿವೇಶ ನಡೆಯುವಂತೆ ಪರೋಕ್ಷ ಚಿತಾವಣೆ ಮಾಡುವವರು ಎಲ್ಲರೂ ಸೇರಿ ವ್ಯಕ್ತಿಯ ದೌರ್ಬಲ್ಯ ಮತ್ತು ಅಸಹಾಯಕತೆಯನ್ನು ಕೇವಲ ಮನೋರಂಜನೆಯ ಮಟ್ಟಕ್ಕೆ ಇಳಿಸಿದ್ದು ಒಂದು ಕಡೆ. ಜೊತೆಗೆ ಕೇವಲ ಒಂದು ಸುದ್ದಿಯಾಗಬಹುದಾದ ಘಟನೆಗಳನ್ನು ರಾತ್ರಿ ಮಲಗುವ ಮುನ್ನ ಕ್ರೈಂ ಸ್ಟೋರಿಯೋ ಅಥವಾ ಕ್ರೈಂ ನ್ಯೂಸಿನ ಹೆಸರಿನಲ್ಲೋ ವ್ಯಕ್ತಿಗಳ ಖಾಸಗಿ ಬದುಕಿನ ವಿವರಗಳೊಂದಿಗೆ ಕೆಟ್ಟ ಕುತೂಹಲದಿಂದ ನೋಡುವ ಜನ ಒಂದು ಕಡೆ. ಸಾರ್ವಜನಿಕವಾಗಿ ‘ಪೀಪಿಂಗ್ ಸಿಂಡ್ರೋಂ’ ಅನ್ನು ಎಲ್ಲೆಡೆ ಭಯಂಕರವಾಗಿ ಹಬ್ಬಿಸಿ ಇನ್ನೊಬ್ಬರ ಬದುಕಲ್ಲಿ ಅನಗತ್ಯ ಇಣಿಕುವ ಕೆಟ್ಟ ಚಾಳಿಯನ್ನು ಇವು ಹುಟ್ಟುಹಾಕಿವೆ.

ಇದರ ಜೊತೆಗೇ ಗಂಭೀರವಾಗಿ ತೆಗೆದುಕೊಳ್ಳಲೇಬೇಕಾದ ಒಂದು ಸಂಗತಿ ವಾಹಿನಿಗಳಲ್ಲಿ ನಡೆಯುವ ನ್ಯಾಯ ತೀರ್ಮಾನದ ವಿಷಯ. ಹಿಂದೊಮ್ಮೆ ಕಾಳಿಸ್ವಾಮಿ ವಂಚನೆ ಪ್ರಕರಣದಲ್ಲಿ ಬತ್ತಲಾದಾಗ ವಾಹಿನಿಯೊಂದು ‘ಜನತಾ ನ್ಯಾಯಾಲಯ’ವನ್ನೇ ರೂಪಿಸಿ ವಾದ, ಪ್ರತಿವಾದ ನಡೆಸಿ ತೀರ್ಪು ನೀಡಿ ಪಟ್ಟದಿಂದ ಇಳಿಸುವ ಕಾರ್ಯಕ್ರಮ ನಡೆಸಿತ್ತು. ಇತ್ತೀಚೆಗಂತೂ ವಾಹಿನಿಗಳು ಪರ್ಯಾಯ ನ್ಯಾಯಾಂಗವಾಗಿಯೇ ಕೆಲಸ ನಿರ್ವಹಿಸುತ್ತಿದೆಯೇನೋ ಎಂಬಂತೆ ವರ್ತಿಸುತ್ತಿವೆ. ಪೊಲಿಸ್ ಠಾಣೆಯಲ್ಲಿ ದಾಖಲಾಗುವ ಎಫ್ ಐ ಆರ್ ಒಂದಕ್ಷರ ಬಿಡದಂತೆ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ, ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಬೇಕಾದ ದಾಖಲೆಗಳು ಮಾಧ್ಯಮಗಳಲ್ಲಿ ಮೊದಲಿಗೇ ಬಿತ್ತರವಾಗುತ್ತವೆ. ನಿರೂಪಕರು ಪಾಟೀಸವಾಲು ನಡೆಸಿ ತೀರ್ಮಾನವನ್ನೂ ಕೊಟ್ಟುಬಿಡುತ್ತಾರೆ.

ರಿಯಾಲಿಟಿ ಶೋ ಒಂದರಲ್ಲಿ ಆರೋಪಿಯನ್ನು ವೇದಿಕೆಗೆ ಕರೆಸಿ ಮಾತಿಗೆ ಮಾತು ನಡೆದು ಸಾರ್ವಜನಿಕರೇ ಥಳಿಸಿರುವುದನ್ನು ನೋಡಿದ್ದೇವೆ. ಎಂತಹ ಆರೋಪಿಯೇ ಆಗಲಿ, ಕೊಲೆಗಡುಕನೇ ಆಗಲಿ ಅವನಿಗೆ ಗೌರವಯುತ0ವಾಗಿ ವಿಚಾರಣೆಗೆ ಒಳಗಾಗುವ ಹಕ್ಕು ಇದೆ. ಆರೋಪ ಸಾಬೀತಾದಾಗ ಅವನಿಗೆ ಅದಕ್ಕೆ ತಕ್ಕ ಕಠಿಣ ಶಿಕ್ಷೆಯನ್ನು ನ್ಯಾಯಾಂಗ ವಿಧಿಸುತ್ತದೆ. ಆದರೆ ಆರೋಪಿಯನ್ನು ತಮಗೆ ಮನಬಂದಂತೆ ಥಳಿಸುವ ಹಕ್ಕು ನಾಗರಿಕ ಸಮಾಜದಲ್ಲಿ ಸಾರ್ವಜನಿಕರಿಗೆ ಇರುವುದಿಲ್ಲ.

ಇವನ್ನೆಲ್ಲ ನೋಡಿದಾಗ ಮಾಧ್ಯಮಗಳ ಮಿತಿ ಮತ್ತು ವ್ಯಾಪ್ತಿ ಕುರಿತ ಪ್ರಶ್ನೆಗಳು ಏಳುತ್ತವೆ. 24×7 ಸುದ್ದಿ ವಾಹಿನಿಗಳ ಹಾವಳಿಯಲ್ಲಿ ಎಷ್ಟರಮಟ್ಟಿಗೆ ಬದುಕಿನ ಖಾಸಗಿತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ಯೋಚನೆ ಉಂಟಾಗುತ್ತದೆ. ಬೇರೊಬ್ಬರ ಬದುಕಿನ ವೈಯಕ್ತಿಕ ವಿವರಗಳು, ಪ್ರೀತಿಯ ಕನವರಿಕೆಗಳು, ನೋವಿನ ನರಳಾಟ ಇವನ್ನೆಲ್ಲ ಮನೆಮಂದಿಯೊಂದಿಗೆ ಕೂತು ನೋಡುವಾಗ ನಮಗೆ ಕನಿಷ್ಟ ಮಟ್ಟದ ಮುಜುಗರ, ದಾಕ್ಷಿಣ್ಯ ಆಗದಿದ್ದರೆ ಹೇಗೆ? ಜೊತೆಗೇ ಇವನ್ನೆಲ್ಲ ನೋಡುವಾಗ ಪ್ರಜಾಪ್ರಭುತ್ವದ ಅಂಗಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ಕಳವಳ ಮೂಡುತ್ತದೆ. ನಾಗರಿಕ ಸಮಾಜದ ಸುಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇವಕ್ಕೆ ಉತ್ತರ ಕಂಡುಕೊಳ್ಳಲೇಬೇಕಾದ ಘಟ್ಟದಲ್ಲಿ ನಾವಿದ್ದೇವೆ.

4 comments

  1. ಸರಳ ಉತ್ತಮ ಬರಹ. ಅಭಿನಂದನೆಗಳು, ಭಾರತಿ ಅವರಿಗೆ. ಇಂತಹ ಬರಹಗಳು ಹೆಚ್ಚು ಹೆಚ್ಚು ಜನರನ್ನು ತಲುಪುವಂತಾಗಬೇಕು. ಮಾಧ್ಯಮಗಳ ಬಗ್ಗೆ ವಿಮರ್ಶಕ ದೃಷ್ಟಿಕೋನ ಬೆಳೆಸುವ ಜರೂರತ್ತು ಇದೆ. ನಾನು ಇದನ್ನು ಶೇರ್ ಮಾಡುತ್ತೇನೆ.

  2. Channel chief editors/ managing director, have become paragon of all virtues, they can discuss any thing and everything on the earth, and can pass judgement.They are not sensative to the individual concerns.They are more worried about TTT RRR PPP.

  3. ಬರಹ ಸರಳವಾಗಿದೆಯಾದರೂ, ಲೇಖಕಿಯವರು ಎತ್ತಿರುವ ವಿಷಯ ಅತ್ಯಂತ ಸೂಕ್ಷ್ಮ ಹಾಗು ಗಂಭೀರವಾದದ್ದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಚಾಚಾರ ನಡೆಸಿ ತಮ್ಮ ಸ್ವಾರ್ಥಗಳನ್ನು ಈಡೆರಿಸುತ್ತಿರುವ ಮಾಧ್ಯಮಗಳಿಗೆ ಅಂಕುಶವಿರಬೇಕು. ಇದು ಸಮಯದ ಬೇಡಿಕೆಯಾಗಿದೆ. ಮಾಧ್ಯಮ ರಂಗದಲ್ಲಿದ್ದೂ ಇಂತಹ ಲೇಖನಗಳನ್ನೂ ಪ್ರೋತ್ಸಾಹಿಸುವ ವರ್ತಮಾನ.ಕಾಂನ ನಿಲುವು ಅಭಿನಂದನೀಯ.

Leave a Reply

Your email address will not be published.