ವಿಮೋಚಕಿಯ ಕನಸುಗಳು: ಮರೆಮಾಚಲಾದ ಮೊದಲ ಶಿಕ್ಷಕಿಯ ಮರುನೆನಕೆ


 ಎಚ್.ಜಯಪ್ರಕಾಶ್ ಶೆಟ್ಟಿ


ಸೆಪ್ಟೆಂಬರ್ ಬರುತ್ತಿದ್ದಂತೆಯೇ ಶಿಕ್ಷಕರುಗಳಲ್ಲನೇಕರು ತಾವು ಗುಜರಾಯಿಸಿದ ಅರ್ಜಿಗಳ ಬೆನ್ನುಹತ್ತಿ ಶಿಕ್ಷಕರ ದಿನದ ಪ್ರಶಸ್ತಿಯ ಸಂಭ್ರಮಕ್ಕೆ ಹಾತೊರೆಯುತ್ತಾರೆ. ಈ ಲಾಬಿ ಮಾಡಲಾರದವರು ಕ್ಯಾಲೆಂಡರಿನಲ್ಲಿ ನಮೂದಿತವಾದ ಶಿಕ್ಷಕರ ದಿನದಂದು ನಿಗದಿತ ವ್ಯಕ್ತಿಯ ಗುಣಗಾನ ಮಾಡಿ ದೇಶ ಅಂದರೇನು, ಶಿಕ್ಷಣ ಅಂದರೇನು ಅಂತ ತಮ್ಮ ಮಕ್ಕಳಿಂದ ತಾವೇ ಹೇಳಿಸಿಯೋ, ಇಲ್ಲ ತಾವೇ ಹೇಳಿಯೋ ಆ ದಿನದ ಜವಾಬ್ದಾರಿ ತೀರಿತೆಂದುಕೊಳ್ಳುತ್ತಾರೆ. ಹೀಗೆಲ್ಲಾ ನಮ್ಮ ಶಿಕ್ಷಕರು ತಮ್ಮ ದಿನವಾಗಿ ನೆನೆಸಿಕೊಳ್ಳುತ್ತಿರುವುದು ಜಾಗತಿಕ ಶಿಕ್ಷಕರ ದಿನವನ್ನಲ್ಲ. ತಳಸಮುದಾಯಗಳ ಶಿಕ್ಷಣಕ್ಕೆ ಜೀವತೇದ ಮಹಾತ್ಮರನ್ನು ಕುರಿತ ದಿನವನ್ನೂ ಅಲ್ಲ. ಭಾರತೀಯ ತತ್ವಶಾಸ್ತ್ರ ಕ್ಷೇತ್ರಕ್ಕೆ ಅಪ್ರತಿಮಕಾಣಿಕೆ ಸಲ್ಲಿಸಿದವರೆಂದೇ ಕೀರ್ತಿಸಲ್ಪಟ್ಟು ಸ್ಥಾಪಿತರಾದ ಸರ್ವಪಳ್ಳಿ ರಾಧಾಕೃಷ್ಣನ್ ಹುಟ್ಟಿದ್ದೆನ್ನಲಾದ ದಿನವನ್ನು!

ವಾಸ್ತವಿಕವಾಗಿ ಈ ದಿನಕ್ಕೂ, ಅದನ್ನಾಚರಿಸುವ ತಳಸಮುದಾಯದ ಹಿನ್ನೆಲೆಯ ಶಿಕ್ಷಕರು ಮತ್ತು ಮಕ್ಕಳಿಗೂ ಯಾವುದೇ ನಂಟಿಲ್ಲ. ಅದಲ್ಲದೆ ರಾಧಾಕೃಷ್ಣನ್ radhakrishnan-sarvepalliಭಾರತೀಯ ತತ್ವಶಾಸ್ತ್ರ ಕ್ಷೇತ್ರದ ಅಧ್ಯಯನದ ದಿಕ್ಕುತಪ್ಪಿಸಿದವರಲ್ಲೊಬ್ಬರೆನ್ನುವ ಆಪಾದನೆ ಇದೆ. ಈ ಕ್ಷೇತ್ರದಲ್ಲಿನ ಅವರ ಕೊಡುಗೆ ಮತ್ತು ಪ್ರತಿನಿಧಿಸಿದ ಆಲೋಚನಾಪರಂಪರೆ ಈ ದೇಶದ ಸಾಮಾನ್ಯರ ಪರವಾದುದಲ್ಲವೆಂಬ ಚರ್ಚೆಗಳಿವೆ. ವ್ಯಕ್ತಿಬದುಕಿನ ನೆಲೆಯಲ್ಲೂ ಅವರ ಆದರ್ಶಗಳ ಪಾರದರ್ಶಕತೆಯ ಕುರಿತು ಪ್ರಶ್ನೆಗಳಿವೆ. (ಉದಾಹರಣೆಗೆ ಅವರದೇ ಹತ್ತಿರದ ಬಂಧು ಎಸ್.ಗೋಪಾಲ್ ಅವರ ಪುಸ್ತಕವನ್ನಾಧರಿಸಿ ಪ್ರಜಾವಾಣಿಯಲ್ಲಿ ಪ್ರಕಟವಾದ ಪಂಪಪ್ರಶಸ್ತಿ ಪುರಸ್ಕೃತ ವಿಮರ್ಶಕ ಜಿ.ಎಚ್.ನಾಯಕರ ಲೇಖನವನ್ನು  ಗಮನಿಸಿ). ಇಲ್ಲಿಯ ಪ್ರಶ್ನೆ ರಾಧಾಕೃಷ್ಣನ್ ಅವರ ತಾತ್ವಿಕವಿಚಾರಗಳ ಗುಣಮಟ್ಟ ಮತ್ತು ಜೀವಪರತೆಯ ಕುರಿತಷ್ಟೇ ಅಲ್ಲ. ಅಕ್ಷರಸಂಸ್ಕೃತಿಯ ನಿರಂತರ ಒಡನಾಟದಲ್ಲಿದ್ದು, ಆಧುನಿಕಕಾಲದ ಸಾಂಸ್ಥಿಕಶಿಕ್ಷಣದ ಅನುಕೂಲ ಬಾಚಿಕೊಳ್ಳಲು ಹಾದಿ  ಬದಲಾಯಿಸಿದ ಪಾರಂಪರಿಕ ನೆಲೆಯಿಂದಲೇ ಆಧುನಿಕ ಮಾದರಿಯನ್ನು ಆಯ್ದುಕೊಳ್ಳುವ ಅಥವಾ ಮಾದರಿಗಳ ಆಯ್ಕೆಯಲ್ಲಿಯೂ ’ವಿಪ್ರಹಸ್ತೇನ ಅಕ್ಷರಂ’ ಎಂಬ ಮಾತಿಗೇ ಜೋತುಬೀಳುವ ಔಚಿತ್ಯವೇನು ಎನ್ನುವುದು. ಯಾಕೆಂದರೆ ಆಧುನಿಕ ಕಾಲವೇ ಮಾದರಿಗಳ ಆಯ್ಕೆಗೆ ವಿಸ್ತಾರವಾದ ಹರವನ್ನು ನಿರ್ಮಿಸಿದೆ. ಜೀವಪ್ರೀತಿ, ಸಾಮಾನ್ಯರಪರ ನಿಲುವುಗಳ ಹಿನ್ನೆಲೆಯ ಅನೇಕ ಮಾದರಿಗಳನ್ನು ಕೊಟ್ಟಿದೆ. ತಳಸಮಾಜವನ್ನು, ಅದರಲ್ಲಿಯೂ ಮುಖ್ಯವಾಗಿ ಚರಿತ್ರೆಯುದ್ದಕ್ಕೂ ಅಕ್ಷರದ ಪಾಲಿಗೆ ಅಸ್ಪೃಶ್ಯರೆನಿಸಿದ ಮಹಿಳೆಯರನ್ನು ಶಿಕ್ಷಣದ ಮೂಲಕ ಮೇಲೆತ್ತಲು ಹಠತೊಟ್ಟ ಮಾದರಿಗಳಿವೆ. ಈ ಹರವನ್ನು ಹೀಗೆ ಕೆದಕಿದಾಗಷ್ಟೇ ನಮಗೆ ಮಹಾತ್ಮಾ ಜ್ಯೋತಿಭಾ ಪುಲೆ ಮತ್ತವರ ಪತ್ನಿ ಸಾವಿತ್ರಿಬಾಯಿ ಪುಲೆ ತರಹದ ಅನೇಕ ಮಾದರಿಗಳು ಸಿಗುತ್ತವೆ.

ಸಾವಿತ್ರಿಬಾಯಿಪುಲೆ ಅವರಂತೂ ನಿಜಾರ್ಥದಲ್ಲಿ ಶಿಕ್ಷಕಿ. ಇದು ಕೇವಲ ಭಾವನಾತ್ಮಕ ನಿರಾಕರಣೆ ಮತ್ತು ಸ್ವೀಕಾರದ ಮಾತಲ್ಲ. ಈ ಅತ್ಯುಚ್ಚ ಗೌರವಕ್ಕೆ ಆಕೆಯ ಬದುಕು ಅರ್ಹವೂ ಆಗಿದೆ. ಆದರೆ ಸ್ಥಾಪಿತ ಹಿತಾಸಕ್ತಿಗಳಿಂದ ಕಥಿಸಲ್ಪಟ್ಟ ಭಾರತೀಯ ಶಿಕ್ಷಣದ ಚರಿತ್ರೆ ಸಾವಿತ್ರಿಬಾಯಿಯ ಜೀವಕರುಣೆಯ ಹೋರಾಟದ ಬದುಕನ್ನೇ ನಾಪತ್ತೆಗೊಳಿಸಿದೆ. ಹೀಗಾಗಿ ನಮ್ಮದೇ ಮಾದರಿ ನಮಗೆ ಅಪರಿಚಿತವಾಗುಳಿದಿದೆ. ಆದರೆ ತಳಮೂಲದ ಕಣ್ಣುಗಳ ಹುಡುಕಾಟಕ್ಕೆ ಈ ಉಪೇಕ್ಷಿತ ಮಾದರಿಗಳು ಈಗೀಗ ಎಟುಕುತ್ತಿರುವುದು ಸಂತಸದ ಸಂಗತಿ. ಇದು ಕನ್ನಡದಲ್ಲೂ ಸಂಭವಿಸುತ್ತಿದೆ. ಇಂಗ್ಲೀಷ್ ಕೃತಿಯ ಕನ್ನಡಾನುವಾದ ರೂಪದ ‘ವಿಮೋಚಕಿಯ ಕನಸುಗಳು’ ಆ ಸಂತಸಕ್ಕೊಂದು ಸಾಕ್ಷಿಯನಿಸಿ, ಚರಿತ್ರೆಯ ಉದ್ದೇಶಿತ ಉಪೇಕ್ಷೆಯು ಮರೆಮಾಚಿದ ಸಾವಿತ್ರ್ರಿಬಾಯಿಯ ಬದುಕನ್ನು ಆಪ್ತವಾಗಿಯೇ ತೆರೆದಿಡುವ ಕನ್ನಡದ ಮಹತ್ವದ ಕೃತಿಯನಿಸಿದೆ.

ನಮ್ಮ ಶಿಕ್ಷಣದಲ್ಲಿ ನಾವು ಕಲಿಯುತ್ತಾ ಬಂದ ವಿಮೋಚಕರ ಸರದಿಯ ಆರಂಭ ನೆಲದಿಂದಲ್ಲ, ಆಕಾಶದಿಂದಾಗುತ್ತದೆ.  ಸಮೂಹದ ಉದ್ಧಾರಕ್ಕೆಂದು ಹುಟ್ಟಿಬಂದ ಅವತಾರ ಪುರುಷರನ್ನೇ ಆಮದು ಮಾಡಿಕೊಡುತ್ತಾ ಬಂದ ಈ ಕ್ರಮ, ಚರಿತ್ರೆಯ ಕುರಿತ ಚಿಕಿತ್ಸಕದೃಷ್ಟಿಯ ನಮ್ಮದೇ ಕಾರಣಕ್ಕೆ ನಮಗೆ ಆಪ್ತವಾಗಬೇಕಿದ್ದ ಮಾದರಿಗಳನ್ನು ಸಿಕ್ಕದಂತೆ ಮುಚ್ಚಿಟ್ಟಿದೆ. ಹೀಗಾಗಿ ಈ ದೇಶದ ಶಮಣಪರಂಪರೆ, ಸಿದ್ಧರು, ನಾಥರು, ತತ್ವಪದಕಾರರಾಗಲೀ, ಜನಸಮೂಹದ ಕಾವ್ಯಗಳಾಗಲೀ ನಮ್ಮವೆನಿಸಿಯೇ ಇಲ್ಲ. ಬದಲಿಗೆ ದ್ವೈತಾದ್ವೈತ ಹಾಗೂ ವಿಶಿಷ್ಟಾದ್ವೈತಗಳನ್ನು ಪ್ರಸಾರಿಸಿ ಆತ್ಮವೆಂಬ ಗೂಟಕ್ಕೆ ಬಿಗಿದಿಟ್ಟವರನ್ನೇ ನಮ್ಮ ಬಿಡುಗಡೆಯ ಹರಿಕಾರರಾಗಿ ಓದಿಕೊಳ್ಳುತ್ತಾ ಬಂದಿದ್ದೇವೆ. ಅದ್ವಯವನ್ನು ದಾಟಿದ ಸಂತರನ್ನಾಗಲೀ, ಯುದ್ಧಕ್ಕೆ ಹೊರತಾದ ಬದುಕು ಕಲಿಸಿದ ನಮ್ಮದೇ ಜನಕಾವ್ಯಗಳನ್ನಾಗಲೀ, ನಮ್ಮದೆಂಬ ಆತ್ಮೀಯತೆಯಲ್ಲಿ ನಾವು ಮಾತನಾಡಿಸಿಯೇ ಇಲ್ಲ.

ನಮ್ಮೀ ವಿಸ್ಮೃತಿಯ ಉಪೇಕ್ಷೆಗೆ ಗುರಿಯಾದವರಲ್ಲಿ ಸಾವಿತ್ರಿಬಾಯಿಪುಲೆ ಅವರೂ ಒಬ್ಬರು. ಸನಾತನ ಮನಸ್ಸುಗಳಿಂದ ಕಲ್ಲೇಟು, savithri bai puleಸೆಗಣಿಯೇಟು ತಿಂದರೂ, ತಾವು ಹುಟ್ಟುಹಾಕಿದ್ದ ‘ಸತ್ಯಶೋಧಕ ಸಮಾಜ’ದ ಧ್ಯೇಯೋದ್ದೇಶಕ್ಕೆ ಬದ್ಧರಾಗಿ, ಅಂಚಿನ ಅಸ್ಪೃಶ್ಯರು ಮತ್ತು ಮಹಿಳೆಯರಿಗೆ ಅಕ್ಷರದ ಅನ್ನ ಬಡಿಸಿದ ಈ ಹೋರಾಟಗಾರ್ತಿ ಸಾವಿತ್ರಿಯನ್ನು ಘೋರ ವಿಸ್ಮೃತಿಯಿಂದ ಹೊರತರುವ ಯತ್ನದ ಭಾಗವಾಗಿಯೇ ‘ವಿಮೋಚಕಿಯ ಕನಸುಗಳು’ ಮೈತಳೆದಿದೆ. ಆದರಿದು ಕೇವಲ ಸಾವಿತ್ರಿಬಾಯಿಯ ವೈಭವೀಕರಣವಲ್ಲ. ಇಲ್ಲಿ ಸಾವಿತ್ರಿ ಬೇರಲ್ಲ. ಜ್ಯೋತಿಬಾ ಬೇರೆಯಲ್ಲ. ಇನ್ನೂ ಖಚಿತವಾಗಿ ಅದು ಸಾವಿತ್ರಿ ಜ್ಯೋತಿಬಾರನ್ನೂ ಮೀರಿ, ವಿಚಾರ ಮತ್ತು ವಿದ್ಯಮಾನದ ನಿರೂಪಣೆ. ತಳಸಮುದಾಯದ ಶತಮಾನಗಳ ಅಕ್ಷರದ ಹಸಿವೇ ಆ ವಿದ್ಯಮಾನ. ಹಾಗಾಗಿ ಅದು ಸಾವಿತ್ರಿಬಾಯಿಗಿಂತಲೂ ಸಾವಿತ್ರಿಯ ಬೆನ್ನಿಗಿದ್ದ ಜ್ಯೋತಿಬಾ ಹಾಗೂ ಸಮೂಹದ ಆಕಾಂಕ್ಷೆಯ ಸ್ಥೂಲ ಅನಾವರಣವುಳ್ಳ ಸಮೂಹಸಂಬಂಧದ ಕೃತಿ. ಅಕ್ಷರದ ಹಸಿವಿನಿಂದ ಹುಟ್ಟಿದ ವಿವೇಕ ಮತ್ತು ವಿಚಾರವನ್ನು ಸಮೂಹದ ಸಂಪತ್ತಾಗಿಸಲು ಕ್ರಮಿಸಿದ ಪೆಡಸು ಹಾದಿಯನ್ನು ನಿರೂಪಿಸುತ್ತಲೇ ನಮಗೆ ನಮ್ಮನ್ನೇ ಕಾಣಿಸುವ ಕೃತಿ. ಇತ್ತೀಚೆಗೆ ‘ಎದೆಗೆ ಬಿದ್ದ ಅಕ್ಷರ’ ಎಂಬ ಹೆಸರಲ್ಲಿ ದೇವನೂರ ಮಹಾದೇವ ಅವರ ಕೃತಿಯೊಂದು ಹೊರಬಂತು. ಅದು ಅಕ್ಷರ ಎದೆಗೆ ಬಿದ್ದುದರಿಂದಲೇ ಹುಟ್ಟಿದ ಕೃತಿ. ಬಿದ್ದ ಮಳೆಯನ್ನು ಹಿಡಿದಿಟ್ಟು ಫಲಕೊಡುವ ಎರೆಮಣ್ಣಿನಂತೆ ಎದೆ ಕೊಟ್ಟ ಫಲ. ಆದರೆ ಈ ದೇಶದ ಸಾಮಾನ್ಯರಿಗೆ ಎರೆಮಣ್ಣಿನ ಮೇಲೆ ಬೀಳುವ ಮಳೆಯಂತೆ ಅಕ್ಷರ ದಕ್ಕಿಯೂ ಇಲ್ಲ, ದಕ್ಕುತ್ತಲೂ ಇಲ್ಲ. ಬೀಳುವ ಮಳೆಗೆ ಚಪ್ಪರವಿಕ್ಕಿ ಕೊಟ್ಟ ಬರಗಾಲದ ಉಡುಗೊರೆಯಂತೆ ಎದೆಗೆ ಬೀಳುವ ಅಕ್ಷರವನ್ನೇ ಕಸಿದು ಬತ್ತಿಸಿದ ಎದೆಯೊರತೆಯ ಕರಾಳಗತ ಮತ್ತು ಸಹಜಮಳೆಯನ್ನೇ ಆಮ್ಲೀಯಗೊಳಿಸಿ ಕೆಡಿಸಿದಂತೆ ಎದೆಗೆ ಬೀಳುವ ಅಕ್ಷರವನ್ನೇ ಕಂಟ್ಯಾಮಿನೇಟೆಡ್ ಆಗಿಸಿದ ವರ್ತಮಾನದ ವಂಚನೆ ಎರಡಕ್ಕೂ ಅವರು ಬಲಿಯಾಗಿದ್ದಾರೆ.

ಎದೆಯೊರತೆ ಜಿನುಗಿಸುವ ಅಕ್ಷರವೆಂಬ ಸತ್ಯ ಈ ದೇಶದ ಸಾಮಾನ್ಯರಿಗೆ ಸಮಾನ, ಸರಳ, ಸಹಜವಾಗಿsavitri-bai ದಕ್ಕಿಯೇ ಇಲ್ಲ. ದೇಶದ ಸಾಮಾನ್ಯರ ಮೇಲೆ ಸಾಂಪ್ರದಾಯಿಕ ಮನಸ್ಸುಗಳ ಯಾಜಮಾನ್ಯ ಸ್ಥಾಪಿತವಾದದ್ದೇ ಜ್ಞಾನದ ಮೇಲಿನ ಈ ಹಿಡಿತದಿಂದ. ಆದರೆ ಆಧುನಿಕ ಭಾರತ ಜ್ಞಾನದ ಮೇಲಿನ ಸಾಂಪ್ರದಾಯಿಕ ಒಡೆತನಕ್ಕೆ ಅರ್ಥಪೂರ್ಣ ಪ್ರತಿರೋಧವನ್ನು ಒಡ್ಡುತ್ತಲೇ ಬಂದಿದೆ. ಈ ಪ್ರತಿರೋಧದ ಸೇನಾನಿಗಳು ಅನೇಕರು. ಆದರೆ ತರ್ಕಬದ್ಧ ನೆಲೆಯಲ್ಲಿ ಆರಂಭದ ಸೇನಾನಿಗಳೆನಿಸಿದವರು ಪುಲೆ ದಂಪತಿಗಳೇ. ಅವರ ಈ ಹೋರಾಟ ನಿರಾಯಾಸವಾದುದಲ್ಲ. ಶಾಲೆ ತೆರೆದು ಶಿಕ್ಷಕಿಯಾಗಿ ದುಡಿದ ತಪ್ಪಿಗಾಗಿಯೇ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ತ ದೇವತಾ’ ಎನ್ನುವವರಿಂದಲೇ ಸಾವಿತ್ರಿಬಾಯಿಪುಲೆ ಸೆಗಣಿ ಮತ್ತು ಕಲ್ಲೇಟು ತಿನ್ನುತ್ತಾಳೆ! ಸಮಾಜಕ್ಕೆ ಹೆದರಿ ಜ್ಯೋತಿಬಾರವರ ತಂದೆ ಜ್ಯೋತಿಬಾರನ್ನೇ ಮನೆಯಿಂದ ಹೊರಹಾಕುತ್ತಾನೆ. ‘ಬ್ರಾಹ್ಮಣರ ಆದೇಶ ಪಾಲಿಸು’ವಂತೆ ತಮ್ಮನೇ ಸಾವಿತ್ರಿಬಾಯಿಗೆ ಆದೇಶಿಸುತ್ತಾನೆ. ಆದರೆ ಶಿಕ್ಷಣವನ್ನು ಅಕ್ಷರಾಭ್ಯಾಸಕ್ಕಿಂತ, ಸಾಮಾಜಿಕ-ಸಾಂಸ್ಕೃತಿಕ ಬದಲಾವಣೆಗಾಗಿ ತಳಸಮುದಾಯದವರ ಮನಸ್ಸನ್ನು ಪ್ರಜ್ವಲಿಸುವಂತೆ ಮಾಡುವ ಮೂಲಭೂತ ಕೆಲಸವೆಂದೇ ನಂಬಿದ ಪುಲೆ ದಂಪತಿಗಳು ಯಾವುದಕ್ಕೂ ಹೆದರದೆ ಸವಾಲುಗಳನ್ನು ಅವಕಾಶಗಳಂತೆ ಹಾದುಬರುತ್ತಾರೆ. ಎದೆಗೆ ಬೀಳುವ ಅಕ್ಷರವನ್ನು ಬಲಾತ್ಕಾರವಾಗಿ ತಡೆಯುವ ಕೈಗಳಿಗೆ ಪ್ರತಿಯಾಗಿ ‘ಸತ್ಯಶೋಧಕ ಸಮಾಜ’ ಸಂಘಟಿಸಿ ಸಾಮಾನ್ಯರಲ್ಲಿ ಅರಿವಿನ ದೀಪಹಚ್ಚಲು ಹೆಣಗುತ್ತಾರೆ. ಈ ಹೋರಾಟದಲ್ಲಿ ಗಂಡನಿಗೆ ನೆರಳಾಗಿ ನಿಲ್ಲುವ ಸಾವಿತ್ರಿಬಾಯಿಯ ಬದುಕಿನ ಮುಖ್ಯ ಘಟನೆಗಳೇ ‘ವಿಮೋಚಕಿಯ ಕನಸುಗಳು’ ಕೃತಿಯ ಒಳತಿರುಳು. ಆಕೆ ಶಾಲೆಗೆಂದು ಹೊರಡುವಲ್ಲಿ ವಹಿಸುತ್ತಿದ್ದ ಮುಂಜಾಗರೂಕತೆ ಮತ್ತು ಅಂತಿಮವಾಗಿ ತೋರಿದ ದಿಟ್ಟತನದ ಕುರಿತು ಬರೆಯುತ್ತಾ, ಅವರು ಪ್ರತಿದಿನ ಹಳೆಯ ಸೀರೆಯನ್ನು ಉಟ್ಟು ಶಾಲೆಗೆ ಬರುತ್ತಿದ್ದರು. ನಂತರ ಮಲಿನಗೊಂಡ ಸೀರೆಯನ್ನು ಬದಲಾಯಿಸಿಕೊಳ್ಳುತ್ತಿದ್ದರು. ಕಡೆಗೆ ಒಂದು ದಿನ ದೌರ್ಜನ್ಯದಿಂದ ಬೇಸತ್ತ ಸಾವಿತ್ರಿಬಾಯಿ ದಾರಿಯಲ್ಲಿ ಕಲ್ಲೆಸೆಯುತ್ತಿದ್ದ ಯುವಕನೊಬ್ಬನ ಕೆನ್ನೆಗೆ ಬಾರಿಸಿಯೇ ಬಿಟ್ಟರು. ನಂತರದ ದಿನಗಳಲ್ಲಿ ನಿದಾನಕ್ಕೆ ಪರಿಸ್ಥಿತಿ ಸುಧಾರಿಸತೊಡಗಿತು. ಮುಂದೆ ಜವಾನನೊಬ್ಬನನ್ನು ಅಂಗರಕ್ಷಕನಾಗಿ ನೇಮಿಸಲಾಯಿತು(ವಿಮೋಚಕಿಯ ಕನಸುಗಳು, ಪು.38) ಎನ್ನುವ ವಿವರಗಳನ್ನು ದಾಖಲಿಸುತ್ತದೆ. ಹೀಗೆ ಸರಣಿಯಂತೆ ತೆರೆದುಕೊಳ್ಳುವ ವಿವರಗಳಲ್ಲಿ ಸಾಮಾನ್ಯರ ಶಿಕ್ಷಣಕ್ಕೆ  ಆ ತಾಯಿ ಪಟ್ಟ ಪಾಡಿದೆ. ಶಿಕ್ಷಕಿಯಲ್ಲಿರಬೇಕಾದ ಧೈರ್ಯ ಮತ್ತು ಚತುರಮತಿತ್ವದ ಸಾಕ್ಷಿಯಿದೆ. ಚರಿತ್ರೆ ಮತ್ತು ವರ್ತಮಾನದ ಸರಿಯಾದ ವಿವರಣೆಯಲ್ಲಿ ಸವರ್ಣಿಯ ಸಮಾಜದ ಆದೇಶಗಳ ಅನಾಹುತವನ್ನು ಅರಿತ ವಿವೇಕವಿದೆ. ಹೀಗೆ ಕೃತಿ ಈ ದೇಶದ ಸಾಮಾನ್ಯರ ‘ಎದೆಗೆ ಬಿದ್ದ ಅಕ್ಷರ’ದ ಹಿಂದಿನ ರೋಚಕ ಕತೆಯಂತೆಯೇ ತೆರೆದುಕೊಳ್ಳುತ್ತದೆ.

ಪುಲೆ ದಂಪತಿಯ ಹೆಚ್ಚುಗಾರಿಕೆ ಅವರು ತೆರೆದ ಶಾಲೆ ಮತ್ತು ಕಲಿಸಿದ ಅಕ್ಷರವಷ್ಟೇ ಅಲ್ಲ. ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎಂಬ ಅಕ್ಷರದ ಮೇಲಿನ ಒಡೆತನದ ಪರಂಪರೆಯೂ ಅವರದಲ್ಲ. ಅವರಿಗೆ ಸಾಮಾಜಿಕ ಜಾಗೃತಿ ಮುಖ್ಯವಾಗಿತ್ತು. ಅಕ್ಷರದ ಮೂಲಕ ಒಂದು ಜೀವನಕ್ರಮದ ಮೇಲೆ ಆಚ್ಛಾದಿಸಿಕೊಂಡಿದ್ದ ‘ಹೆಜಿಮನಿ’ಯನ್ನು ಹೋಗಲಾಡಿಸುವ ಗುರಿಯಿತ್ತು. ಇದಕ್ಕೆಂದೇ ಅವರು ಎಲ್ಲಾ ವಿಧವಾದ ದಮನಿತ ಜಾತಿಗಳನ್ನು ಸ್ತ್ರೀ-ಶೂದ್ರ-ಅತಿಶೂದ್ರ ವೇದಿಕೆಯಡಿ ಒಂದುಗೂಡಿಸಿ ಸಾಮಾಜಿಕ-ಸಾಂಸ್ಕೃತಿಕ ರ್ಯಾಡಿಕಲಿಸಂ ಚಳುವಳಿಯನ್ನು ಹುಟ್ಟುಹಾಕಿ(ವಿಮೋಚಕಿಯಕನಸುಗಳು ಪು.28) ಎಚ್ಚರದ ದಾರಿಯೊಂದನ್ನು ನಿರ್ಮಿಸಲು ಶ್ರಮಿಸಿದರು. ಜಾತಿ ಸಮಾಜವನ್ನು ವರ್ಗಸಮಾಜಕ್ಕಿಂತ ಭಿನ್ನವೂ ಅಪಾಯಕಾರಿಯೂ ಆಗಿ ಗುರುತಿಸಿದ್ದ ಪುಲೆ, ಜಾತಿಸಮಾಜದ ಸಾಮಾಜಿಕ ಹೈರಾರ್ಕಿಯ ಬದಲಾವಣೆಗೆ ಯಜಮಾನ್ಯದ ಮೂಲಬೇರುಗಳನ್ನೇ ಕದಲಿಸಬೇಕೆಂಬುದನ್ನು ಬಲ್ಲವರಾಗಿದ್ದರು. ಯಥಾಸ್ಥಿತಿ ವಾದಿಗಳ ಯಶಸ್ಸು ಜ್ಞಾನಕ್ಷೇತ್ರದ ಮೇಲಿನ ಅದರ ಹಿಡಿತ ಹಾಗೂ ಮಹಿಳಾ ಸಮುದಾಯದ ಮೇಲಿನ ನಿಯಂತ್ರಣದಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸಿದ್ದರು. ಕಳಂಕಿತವಾದ ಈ ಅಪಾಯಕಾರಿ ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತಿಪದ್ಧತಿ-ಫ್ಯೂಡಲ್ ವ್ಯವಸ್ಥೆಯಂತಹ ರೋಗಕ್ಕೆ ಶಿಕ್ಷಣವನ್ನೇ ಔಷಧಿಯೆಂದು ನಿರ್ಧರಿಸಿದ್ದ ಅವರು, ಈ ಕ್ಷೇತ್ರದ ಬಂಧ ವಿಮೋಚನೆಗೆ ಜೀವಮಾನವಿಡೀ ಶ್ರಮಿಸಿದರು. ಹಾಗಾಗಿ ಪುಲೆ ದಂಪತಿ ಶಾಲೆ ಮತ್ತು ಕಲಿಕೆಯಿಂದಾಚೆಗೂ ವಿಸ್ತರಿಸಿಕೊಂಡರು.

ಇದರ ಭಾಗವಾಗಿಯೇ ದಮನಿತರಿಗೆ ಶಾಲೆ ತೆರೆಯುವ ಜೊತೆಗೆ ವಿವಾಹಬಾಹಿರ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನೂ, mahatma-jyoti-rao-phuleವಿವಾಹಬಾಹಿರ ಮಕ್ಕಳಿಗೆ ಶಿಶುಕೇಂದ್ರ ಗಳನ್ನೂ ಸ್ಥಾಪಿಸಿದರು. ವಿಧವಾ ಕೇಶಮುಂಡನವನ್ನು ಕ್ಷೌರಿಕರ ಸಂಘಟನೆಯ ಪ್ರತಿಭಟನೆ ಮೂಲಕ ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪುವಂತಹ ಜ್ಞಾನ ಪ್ರಕ್ರಿಯೆಯನ್ನು ಬುದ್ಧಿಪೂರ್ವಕವಾಗಿ ವಿರೋಧಿಸುವ ಹಿಂದೂ-ಬ್ರಾಹ್ಮಣ್ಯದ ರಾಷ್ಟ್ರೀಯವಾದದ ಕುತಂತ್ರಗಳನ್ನು ಉತ್ಕೃಷ್ಟವಾಗಿ ಅನಾವರಣಗೊಳಿಸಿದ ಮತ್ತು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ ಅಕ್ಷರಕ್ರಾಂತಿಯನ್ನು ಸಾಧಿಸಿದ ಮಹಾತ್ಮಪುಲೆ ಆಧುನಿಕ ಭಾರತದ ಮೊದಲ ಕ್ರಾಂತಿಕಾರಿ(ವಿ. ಕನಸುಗಳು ಪು.29)ಎಂದೇ ಕೃತಿ ಗುರುತಿಸುತ್ತದೆ. ‘ಮಾನವೀಯವಾದ, ದಯೆಯುಳ್ಳ, ಒಳಗೊಳ್ಳುವಿಕೆಯ ಜಗತ್ತನ್ನು ಕಟ್ಟುವ ಕುರಿತು ಹೊಂದಿದ ನಂಬಿಕೆ ಮತ್ತು ಬದ್ಧತೆಯ ಕಾರಣಕ್ಕಾಗಿ ಮತ್ತು ‘ಯಜಮಾನ್ಯವನ್ನು ಜಾತಿಯೊಂದಿಗೆ ಸಮೀಕರಿಸಿ ಚಿಂತಿಸಿದ’ ಕಾರಣಕ್ಕಾಗಿ ಕೃತಿ ಸಾವಿತ್ರಿಬಾಯಿಪುಲೆ ಅವರನ್ನು 19ನೇ ಶತಮಾನದ ಸಮಾಜಸುಧಾರಣೆಯ ಮುಂಚೂಣಿಯಲ್ಲಿದ್ದ ಏಕೈಕ ಮಹಿಳಾ ಚಿಂತಕಿಯಾಗಿ ಗುರುತಿಸುತ್ತದೆ. ಈ ಗುರುತಿಸುವಿಕೆಗೆ ಐತಿಹಾಸಿಕ ಮಹತ್ವದ ಜೊತೆಗೆ ವರ್ತಮಾನದ ಪ್ರಸ್ತುತತೆಯೂ ಇದೆ. ಯಾಕೆಂದರೆ ಸಾಮಾನ್ಯರ ಮತ್ತು ಮಹಿಳೆಯರ ಶಿಕ್ಷಣಕ್ಕೆ ಸಂಬಂಧಿಸಿ ಸನಾತನ ಪ್ರತಿಗಾಮಿ ಮನಸ್ಸುಗಳ ಅಸಹನೆಯ ಉದಾಹರಣೆಗಳು ನಮಗೆ ಇಂದಿಗೂ ಸಿಗುತ್ತಿವೆ. ‘ಎದೆಗೆ ಬಿದ್ದ ಅಕ್ಷರ’ ಓದಿದ ಮಹಿಳೆಯರನ್ನು ಕೇಂದ್ರೀಕರಿಸಿದ ವಿ.ಆರ್.ಭಟ್ಟರ ಟ್ವಿಟರ್ ಮೆಸೇಜ್ ಮಹಿಳಾಶಿಕ್ಷಣದ ವಿರುದ್ಧದ ಸನಾತನಿಗಳ ಸಿಟ್ಟಿನ ಇತ್ತೀಚೆಗಿನ ಕಚ್ಚಾ ಸ್ಯಾಂಪಲ್. ಇದಕ್ಕಿಂತ ಭಿನ್ನವಲ್ಲದ ಕಲಾತ್ಮಕತೆಯ ಹೆಸರಿನ ಅಭಿವ್ಯಕ್ತಿಗಳಿಗೂ ಕೊರತೆಯಿಲ್ಲ. ಈ ಕಾದಂಬರಿಗಳಿರಲಿ, ಟ್ವಿಟ್ ಗಳಿರಲಿ, ಸಾವಿತ್ರಿಬಾಯಿ ಮೇಲೆ ಸೆಗಣಿ ಎರಚಿದ ಕೈಗಳಿರಲಿ ಎಲ್ಲವೂ ಹೆಣ್ಣು ಮಕ್ಕಳ ಓದಿನ ಕುರಿತ ನೈತ್ಯಾತ್ಮಕ ಅಭಿವ್ಯಕ್ತಿಗಳೇ. ಇವು ಆಕಸ್ಮಿಕಗಳಲ್ಲ. ಅವುಗಳಿಗೆ ಪುರಾತನ ಬೇರುಗಳಿವೆ. ಇನ್ನೂ ಜೀವಂತವಿರುವ ಈ ನೈತ್ಯಾತ್ಮಕತೆ ಪುಲೆದಂಪತಿಯ ದೂರಗಾಮಿ ಚಿಂತನೆಯ ಮಹತ್ವವನ್ನು ಮತ್ತಷ್ಟು ನಿಖರಗೊಳಿಸುತ್ತವೆ.

ಪುಲೆಯವರ ಸೋಷಿಯಲ್ ಆಕ್ಟಿವಿಸಂನ ಭಾಗವಾಗಿದ್ದ ಈ ತಾಯಿ ಶಿಕ್ಷಣವನ್ನೇ ಕುರಿತು ಬರೆದ ಕೆಲವು ಕವಿತೆಗಳನ್ನೂ  ಒಳಗೊಳ್ಳುವ ಮೂಲಕ ಶಿಕ್ಷಕಿ ಸಾವಿತ್ರಿಬಾಯಿಯ ಜೊತೆಗೆ ಕವಯಿತ್ರಿ, ಹೋರಾಟಗಾರ್ತಿ ಸಾವಿತ್ರಿಯ ಪರಿಚಯವೂ ಈ ಕೃತಿಯಲ್ಲಿದೆ. ಸಾಮಾಜಿಕ ಜಾಗೃತಿಯ ಚಟುವಟಿಕೆಗಳ ಹಿಂದಿನ ಆಕೆಯ ತುಡಿತಗಳ ದಾಖಲೆಯಂತಿರುವ ಆಕೆಯ ಕವಿತೆಗಳಲ್ಲಿ, ’ನೆನಪಿರಲಿ ಬಲಿರಾಜನ ರಾಜ್ಯಭಾರದಲ್ಲಿ ನಮ್ಮ ದಿವ್ಯವಾದ ಧ್ವಜಸ್ತಂಭವು ಸುರುಳಿ ಬಿಚ್ಚಿಕೊಂಡು ಪ್ರಜ್ವಲವಾಗಿ ಬೆಳಗುತ್ತದ’ ಎನ್ನುವ ಸಾಂಸ್ಕೃತಿಕ ಚರಿತ್ರೆಯ ನೆನಪಿಸುವಿಕೆ ಇದೆ. ‘ವಾಮನ’ನ ಯಜಮಾನ್ಯ ತೊಡೆದು ಹಾಕುವ ಆಶಯದೊಂದಿಗೆ ”ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಶಿಕ್ಷಿತರಾಗಿ ಕಟ್ಟುಪಾಡುಗಳನ್ನು ಚೂರು ಚೂರು ಮಾಡಿ- ಸ್ವತಂತ್ರರಾಗಿ’ ಎಂಬ ಉಲ್ಲಂಘನೆಯ ಕರೆಯೂ ಇದೆ. ಪರಿಸ್ಥಿತಿಗನುಗುಣವಾಗಿ ತಳಸಮುದಾಯದವರ ವಿಮೋಚನೆಯ ದಾರಿಯಾಗಿ ಇಂಗ್ಲೀಷ್ ಶಿಕ್ಷಣವನ್ನು ಸ್ವಾಗತಿಸುವ ಸಾವಿತ್ರಿಬಾಯಿ, ’ಇಂಗ್ಲೀಷ್ ತಾಯಿಯ ಬಾಗಿಲಲ್ಲಿ ಮನು ಸತ್ತಿದ್ದಾನೆ’ ಎಂದೇ ಬರೆಯುತ್ತಾರೆ. ಕವನಗಳಲ್ಲಿ ಆವರ್ತನಗೊಳ್ಳುವ ಈ ಇಂಗ್ಲೀಷ್ ಸ್ವಾಗತ, ಗುಣಗಾನದ ಹಿಂದೆ ಧಮನಿತರ ಬಿಡುಗಡೆಯ ತೀವ್ರವಾದ ತುಡಿತವಿದೆ. ಈ ಅರಿವಿಲ್ಲವಾದರೆ ಬೋಳಾಗಿ ಅವರನ್ನೂ ಜ್ಯೋತಿಬಾಪುಲೆಯವರನ್ನೂ ಇಂಗ್ಲೀಷರ ಏಜೆಂಟರಾಗಿಯೇ ಪರಿಭಾವಿಸುವ ತಪ್ಪೂ ನಮ್ಮಿಂದಾಗಬಹುದು. ಸಾಂಪ್ರದಾಯಿಕ ಶಕ್ತಿಗಳು ಇವತ್ತಿಗೂ ಅಂಬೇಡ್ಕರ್ ಮೇಲೆ ಮಾಡುತ್ತಿರುವ ಆಪಾದನೆಯನ್ನೇ ಪುಲೆದಂಪತಿಯ ಮೇಲೂ ಹೊರಿಸುವ ಅಪಾಯ ನಮ್ಮಿಂದಾಗಬಹುದು.

ಈ ಕೃತಿ ಓದುತ್ತಿದ್ದಂತೆಯೇ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ಅತುಲ್‌ಪೇಟೆ ನಿರ್ದೇಶನದ ‘ಸತ್ಯಶೋಧಕ್’ ಹೆಸರಿನ ಮರಾಠೀ ನಾಟಕವನ್ನೇ ಮತ್ತೆ ಕಂಡಂತೆನಿಸಿತು. ವರ್ಣಶ್ರೇಷ್ಠರ ಯಜಮಾನಿಕೆಗೆ ಎದುರಾಗಿ ವಸಾಹತುಶಾಹಿ ಆಡಳಿತದ ಬೆಂಬಲದಲ್ಲಿ ಶಾಲೆ ಆರಂಭಿಸಿದ ಜ್ಯೋತಿಬಾ ಪುಲೆ ದಂಪತಿ ಅನುಭವಿಸುವ ಕಿರುಕುಳಗಳ ಸರಣಿಯನ್ನೇ ಕೇಂದ್ರೀಕರಿಸಿದ ಈ ನಾಟಕ ಮಹಾರಾಷ್ಟ್ರದ ಭಂಗಿ ಕಾರ್ಮಿಕರೇ ಕೂಡಿಕೊಂಡು ಆಡಿದ ಪ್ರಯೋಗ. ಜ್ಯೋತಿಬಾಗೆ ಬೆನ್ನೆಲುಬಾಗಿ ನಿಲ್ಲುವ ಸಾವಿತ್ರಿಬಾಯಿ ಶಿಕ್ಷಕಿಯಾಗಿ ರೂಪುಗೊಳ್ಳುವುದು ನಾಟಕದ ಮುಖ್ಯ ಬೆಳವಣಿಗೆಗಳಲ್ಲೊಂದು. ದೇಶದ ಮೊದಲ ಶಿಕ್ಷಕಿಯಾಗಿ ಸೇವೆಗೆ ನಿಂತ ತಪ್ಪಿಗೆ ಅನುಭವಿಸಬೇಕಾಗಿ ಬಂದ ಸಂಕಟ ಮತ್ತು ಸವಾಲುಗಳನ್ನು ಎದುರಿಸಿದ ಆಕೆಯ ಧೈರ್ಯ ಮತ್ತು ಜಾಣ್ಮೆ ಇವೆಲ್ಲವನ್ನೂ ನಾಟಕ ಅಚ್ಚುಕಟ್ಟಾಗಿಯೇ ತೆರೆದಿಡುತ್ತದೆ. ಇಲ್ಲಿ ಧೃತಿಗೆಡದೆ ಸಮುದಾಯದ ಏಳಿಗೆಗಾಗಿ ಹಟತೊಟ್ಟು ನಿಲ್ಲುವ ಪುಲೆ ದಂಪತಿ ಅರಿವಿನ ಬೆಳಕು ಬಿತ್ತುವ ಬೀಜಗಳಂತೆ ಹೊಳೆಯುತ್ತಾರೆ. ತಳಸಮಾಜ ಅವರನ್ನು ನಿಧಾನವಾಗಿ ಅಂತರಂಗದಿಂದ ಪ್ರೀತಿಸಲಾರಂಭಿಸುವುದನ್ನು ನಾಟಕ ಸೊಗಸಾಗಿಯೇ ಮನವರಿಕೆ ಮಾಡಿಕೊಡುತ್ತದೆ. ಆದರೆ ಈ ಕಥಾಸರಣಿಯನ್ನು ಮೀರಿ, ಸಾಮಾನ್ಯರ ಹಾಗೂ ಹೆಮ್ಮಕ್ಕಳ ಶಿಕ್ಷಣಕ್ಕಾಗಿ ಹಿರಿಯರು ನಡೆಸಿದ ಹೋರಾಟದ ಚರಿತ್ರೆಯ ತುಂಡೊಂದರಂತೆ ಇರುವ ದೃಶ್ಯವೊಂದು ಆ ನಾಟಕದಲ್ಲಿತ್ತು. ಅಚ್ಚಳಿಯದೆ ನನ್ನಲ್ಲಿ ಉಳಿದಿರುವ ಆ ದೃಶ್ಯದಲ್ಲಿ ಕತ್ತಲಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಬೆನ್ನಿಗೇರಿಸಿಕೊಂಡ ಮೂಟೆಯೊಂದಿಗೆ ಕಳ್ಳನಂತೆ ಒಳಪ್ರವೇಶಿಸುತ್ತಾನೆ. ಆ ಕಡೆ ಈ ಕಡೆ ನೋಡಿ ಆತ ಇಳಿಸುವ ಮೂಟೆ ಮತ್ತು ಆತನನ್ನು ಪುಲೆದಂಪತಿ ಬೆರಗು ಮತ್ತು ಆತಂಕದಿಂದ ನೋಡುತ್ತಾರೆ. ಈ ಪರಿವೆಯಿಲ್ಲದೆ ನೋಡನೋಡುತ್ತಿದ್ದಂತೆಯೇ ಅದನ್ನು ತೆರೆದು ಹುದುಗಿಸಿ ತಂದಿದ್ದ ತನ್ನ ಪುಟ್ಟಮಗಳನ್ನು ಪುಲೆದಂಪತಿ ಕೈಗೊಪ್ಪಿಸಿ, ಆತ ಆಕೆಯ ಶಿಕ್ಷಣಕ್ಕಾಗಿ ಬೇಡುತ್ತಾನೆ. ಇದಷ್ಟೇ ಆ ದೃಶ್ಯ. ಪ್ರಾಯಶಃ ಇದು ಈ ದೇಶದ ಸಾಮಾನ್ಯರು, ಅದರಲ್ಲಿಯೂ ಸಮಸ್ತ ಹೆಮ್ಮಕ್ಕಳು ತಮ್ಮ ಶಿಕ್ಷಣದ ಚರಿತ್ರೆಯಾಗಿ ನೆನಪಿಡಬೇಕಾದ ದೃಶ್ಯ. ಆದರೆ ಈಗ ಆರಾದಿಸಲಾಗುತ್ತಿರುವ ಶಿಕ್ಷಕರ ದಿನಾಚರಣೆಯ ಮಾದರಿಯೊಳಗೆ ಈ ಚರಿತ್ರೆಯನ್ನು ಹುಡುಕಿಕೊಳ್ಳಲು ಸಾಧ್ಯವಿದೆಯೇ ಎಂದು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಸಾವಿತ್ರಿಬಾಯಿ ಪುಲೆ ಅವರ ಬದುಕನ್ನು ಆತ್ಮೀಯವಾಗಿ ಪರಿಚಯಿಸುವ ಕೃತಿಯೊಂದನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನಕ್ಕೂ, ಶ್ರಮವಹಿಸಿ ಕನ್ನಡಕ್ಕೆ ಅನುವಾದಿಸಿದ ಬಿ.ಶ್ರೀಪಾದ ಭಟ್ಟರಿಗೂ, ಇಂಗ್ಲೀಷ್ ಕೃತಿಯ ಮೂಲ ಆವೃತ್ತಿಗೆ ಕಾರಣರಾದ ಬೃಜ್ ರಂಜನ್ ಮಣಿ ಹಾಗೂ ಪಮೇಲಾ ಸರ್ದಾರ್ ಅವರಿಗೂ ಸಾವಿತ್ರಿತಾಯಿಯ ಹೆಸರಲ್ಲಿ ಪ್ರೀತಿಯ ಸಲಾಮುಗಳನ್ನು ಹೇಳಲೇಬೇಕಿದೆ.

Leave a Reply

Your email address will not be published. Required fields are marked *