ಅಭದ್ರತೆಯಿಂದ ಸೃಷ್ಟಿಯಾದ ಮುಸ್ಲಿಮ್ ಪ್ರತಿರೋಧ ಹಾಗೂ ಮುಸ್ಲಿಮ್ ಮೂಲಭೂತವಾದ


-ಇರ್ಷಾದ್ ಉಪ್ಪಿನಂಗಡಿ


 

ಮಂಗಳೂರಿನಲ್ಲಿ ಅಭಿಮತ ಸಂಘಟನೆಯ ವತಿಯಿಂದ ನಡೆದ ಜನನುಡಿ ಸಾಹಿತ್ಯ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು “ಸಮಕಾಲಿನ ಸವಾಲುಗಳು ಹಾಗೂ ಐಕ್ಯತೆಯ ಅಗತ್ಯತೆ” ವಿಚಾರಗೋಷ್ಠಿಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ “ಬಹುಸಂಖ್ಯಾತರೆಂಬ ಅಹಮ್ಮಿನಿಂದ ಹಿಂದೂ ಕೋಮುವಾದ ಸೃಷ್ಟಿಯಾದರೆ ಮುಸ್ಲಿಮ್ dinesh-amin-umapathiಕೋಮುವಾದ ಅಭದ್ರತೆಯಿಂದ ಸೃಷ್ಟಿಯಾಗಿದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ದಿನೇಶ್ ಅಮೀನ್ ಮಟ್ಟು ಅವರ ಈ ಅಭಿಪ್ರಾಯವನ್ನು ಕರಾವಳಿ ಭಾಗದ ಒಬ್ಬ ಮುಸಲ್ಮಾನನಾಗಿ, ಸಂಘಪರಿವಾರದ ಮಿತಿಮೀರಿದ ಕೋಮುವಾದಿಗಳಿಂದ ಕರಾವಳಿ ಭಾಗದ ಮುಸ್ಲಿಮರು ಎದುರಿಸಿದ ಹಾಗೂ ಎದುರಿಸುತ್ತಿರುವ ಅನ್ಯಾಯ, ಆತಂಕ, ಅಪಾಯದ ತಕ್ಕಮಟ್ಟಿನ ಅರಿವಿದ್ದುಕೊಂಡು ಹೇಳೋದಾದರೆ ದಿನೇಶ್ ಅಮೀನ್ ಮಟ್ಟು ಅವರ ಮಾತನ್ನು ಒಂದು ದೃಷ್ಟಿಕೋನದಲ್ಲಿ ನಾನು ಒಪ್ಪಿಕೊಳ್ಳುತ್ತೇನೆ. ಬಹುಸಂಖ್ಯಾತ ಸಂಘಪರಿವಾರದ ವ್ಯವಸ್ಥಿತ ಷಡ್ಯಂತರದ ಭಾಗವಾಗಿ ನಡೆದ ಬಾಬರೀ ಮಸೀದಿ ಧ್ವಂಸದ ನಂತರದ ದಿನಗಳಲ್ಲಿ ದೇಶದ ಅಲ್ಪಸಂಖ್ಯಾತರಾಗಿರುವ ಮುಸ್ಲಿಮ್ ಸಮುದಾಯದಲ್ಲಿ ಅಭದ್ರತಾ ಭಾವನೆ ಹೆಚ್ಚಾಗತೊಡಗಿದ್ದಂತೂ ನಿಜ. ಇದರ ನಂತರ 2002 ರಲ್ಲಿ ಗುಜರಾತ್ ಗಲಭೆಯಲ್ಲಿ ನಡೆದ ನರ ಹತ್ಯೆ, ಮುಸ್ಲಿಮರ ಮಾರಣ ಹೋಮ ದೇಶದ ಮುಸ್ಲಿಮ್ ಸಮಾಜವನ್ನು ಮತ್ತಷ್ಟು ಅಭದ್ರತೆ, ಆಂತಕಕ್ಕೆ ದೂಡಲು ಕಾರಣವಾಯಿತು.

ನಾನು ವಿದ್ಯಾರ್ಥಿಯಾಗಿದ್ದಾಗ ನಾನು ಸೇರಿದಂತೆ ನಮ್ಮ ಮುಸ್ಲಿಮ್ ಗೆಳೆಯರು ಕಾಲೇಜು ಕ್ಯಾಂಪಸ್ ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಭಯದಿಂದಲೇ ನಡೆದಾಡುತ್ತಿದ್ದೆವು. ಕೈಗೆ ಕೆಂಪು ನೂಲು ಕಟ್ಟಿ ಹಣೆಗೆ ಉದ್ದನೆಯ ನಾಮ ಹಾಕಿದವರನ್ನು ಕಂಡರೆ ನಮಗೆ ಭಯ ಆಗುತ್ತಿತ್ತು. ಆ ಸಂದರ್ಭಗಳಲ್ಲಿ ನಾವು ಮುಸ್ಲಿಮರಲ್ಲೂ ತಮ್ಮ ಆತ್ಮರಕ್ಷಣೆಗಾಗಿ ಯಾವುದಾದರೂ ಸಂಘಟನೆ ಬರಲಿ ಎಂದು ಮಾತನಾಡುಕೊಳ್ಳುತ್ತಿದ್ದೆವು. inidan-muslim-womanಇದು ನಾನೂ ಒಳಗೊಂಡತೆ ಕರಾವಳಿ ಭಾಗದ ಸಾಕಷ್ಟು ಯುವ ಮನಸ್ಸುಗಳ ನಿರೀಕ್ಷೆಯಾಗಿತ್ತು. ಈ ಆತಂಕದ ನಡುವೆಯೂ ಕರಾವಳಿ ಭಾಗದ ಬಹುತೇಕ ಯುವಕರು ಕೋಮುವಾದಿಗಳಾಗಿರಲಿಲ್ಲ. ಧಾರ್ಮಿಕತೆಯೂ ಈ ಯುವಕರಲ್ಲಿ ಇರಲಿಲ್ಲ. ಇವರೆಲ್ಲಾ ಮಸೀದಿಯ ಕಡೆ ಮುಖಮಾಡುತಿರುತ್ತಿದ್ದುದೇ ಅಪರೂಪಕ್ಕೊಮ್ಮೆ. ಸುಮಾರು ಹತ್ತು ವರ್ಷಗಳ ಹಿಂದೆ ಮಸೀದಿಗೆ ಪ್ರತಿನಿತ್ಯ ಆಜಾನ್ ಕರೆ ಆಗುವಾಗ ಯಾರಾದರೂ ಯುವಕ ಮಸೀದಿಗೆ ನಮಾಜ್ ಮಾಡಲೆಂದು ಹೋಗುತ್ತಿದ್ದರೆ ಆತನನ್ನು ಆತನ ಇತರ ಸ್ನೇಹಿತರು ಗೇಲಿ ಮಾಡುತ್ತಿದ್ದದ್ದನ್ನೂ ನಾನು ಕಣ್ಣಾರೆ ಕಂಡಿದ್ದೆ. ಆದರೆ ಬರಬರುತ್ತಾ ಈ ಚಿತ್ರಣ ಬದಲಾಗತೊಡಗಿದ್ದನ್ನು ಸೂಕ್ಷವಾಗಿ ಗಮನಿಸುತ್ತಾ ಹೋದಾಗ, ಮಸೀದಿಗೆ ಹೋಗುತ್ತಿರುವ ಆ ಯುವಕನನ್ನು ತಮಾಷೆ ಮಾಡುತ್ತಿದ್ದ ಆತನ ಮುಸ್ಲಿಮ್ ಸ್ನೇಹಿತರು ಪ್ರತಿನಿತ್ಯ ಬೆಳಿಗ್ಗೆ 5 ಘಂಟೆಗೆ ಎದ್ದು ಮಸೀದಿಯ ಮುಂಜಾನೆಯ ನಮಾಜ್‌ಗೆ ಸರದಿಯ ಮುಂದಿನ ಸಾಲಲ್ಲಿ ನಿಂತು ನಮಾಜ್ ಮಾಡತೊಡಗಿದರು. ದೇವರು, ಧರ್ಮ, ಆಚಾರ ವಿಚಾರ, ಮುಸ್ಲಿಮ್ ಸಮುದಾಯದ ಪರಿಸ್ಥಿತಿ ಇಂಥಹಾ ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳತೊಡಗಿದರು. ಯಾವತ್ತೂ ಗೆಳೆಯರು ಸೇರಿಕೊಂಡು ಇನ್ನಿತರ ವಿಚಾರಗಳ ಕುರಿತಾಗಿ ಹರಟೆ ಹೊಡೆಯುತ್ತಿದ್ದರೆ ನಂತರದ ದಿನಗಳಲ್ಲಿ ಅಲ್ಲಿ ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಕಾರ, ಅದಕ್ಕಾಗಿ ತಮ್ಮಲ್ಲಿ ಆಗಬೇಕಾದ ಧಾರ್ಮಿಕ ಬದಲಾವಣೆ ಈ ವಿಚಾರಗಳ ಕುರಿತಾಗಿ ಮಾತನಾಡಗೊಡಗಿದರು. ಇಂಥಹಾ ಬದಲಾವಣೆ ಕಾರಣ ಏನೆಂದು ಆತನಲ್ಲಿ ಕೇಳಿದರೆ ಆತನ ಈ ಬದಲಾವಣೆಗೆ ಕಾರಣ ಹಿಂದೂ ಕೋಮುವಾದದ ಹೊಡೆತ. ಸಂಘಪರಿವಾರದ ಆತಂಕ, ಭಯ. ಅಲ್ಪಸಂಖ್ಯಾತನಾಗಿ ತನ್ನ ಮೇಲೆ ಒಂದಲ್ಲಾ ಒಂದು ಕಾರಣದಿಂದ ನನ್ನ ಮೇಲೆ ಸಂಘಪರಿವಾರದಿಂದ ಅನ್ಯಾಯದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ದೌರ್ಜನ್ಯವಾಗಬಹುದು ಎಂಬ ಆತಂಕ ಹಾಗೂ ಅಭದ್ರತೆಯ ಭಾವನೆ. ಪರಿಣಾಮ ಇದು ಸಿಮಿ , ಕೆ.ಎಫ್.ಡಿ ಅಥವಾ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಂತಹಾ ಮುಸ್ಲಿಮ್ ಪ್ರತಿರೋಧಿ ಮೂಲಭೂತವಾದಿ ಗುಂಪುಗಳ ಹುಟ್ಟಿಗೆ ಕಾರಣವಾಗಿರುವುದು ಗಮನಾರ್ಹ ಅಂಶ.

ಇಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಹೇಳಿದಂತೆ ಅಭದ್ರತೆ ಮುಸ್ಲಿಮ್ ಸಮಾಜದಲ್ಲಿ ಮೂಲಭೂತವಾದದ ಹುಟ್ಟಿಗೆ ಕಾರಣವಾಯಿತು ನಿಜ. ಆದರೆ ಭಾರತದಲ್ಲಿ ಮುಸ್ಲಿಮ್ ಸಮಾಜದಲ್ಲಿರುವ ಅಭದ್ರತೆ ಕೇವಲ ಪ್ರತಿರೋಧದ ಮೂಲಭೂತವಾದದ ಹುಟ್ಟಿಗೆ ಕಾರಣವಾಯಿತೇ ಹೊರತು ಮುಸ್ಲಿಮ್ ಸಮಾಜದಲ್ಲಿರುವ ಅಘೋಷಿತ ಮೂಲಭೂತವಾದದ ಹುಟ್ಟಿಗೆ ಕಾರಣವಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವುದು jamat-mangaloreಕ್ರಿಯೆಗೆ ಪ್ರತಿಕೃಯೆ ಕೊಡುವಂತಹಾ ಮೂಲಭೂತವಾದಿಗಳಿಗಿಂತ ಅಪಾಯಕಾರಿಯಾಗಿರುವುದು ನೂತನವಾದಿಗಳ ರೂಪದಲ್ಲಿ ಮುಸ್ಲಿಮ್ ಸಮಾಜದಲ್ಲಿ ಪರಿಪೂರ್ಣ ಇಸ್ಲಾಮ್ ಜಾರಿಗೆ ತರಲು ಕೆಲಸ ಮಾಡುತ್ತಿರುವಂತಹಾ ಮೂಲಭೂತವಾದ. ಭಾರತದಲ್ಲಿ ಸಂಘಪರಿವಾರ ಇಲ್ಲಿಯ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಸುವಂತಹಾ ದಾಳಿಯನ್ನು ಎದುರಿಸಲು ಹುಟ್ಟಿದಂತಹಾ ಸಂಘಟನೆಗಳ ಪ್ರತಿರೋಧದ ಮನಸ್ಥಿತಿಗಿಂತ ಅಪಾಯಕಾರಿಯಾಗಿರುವುದು ಪೂರ್ಣ ಇಸ್ಲಾಮ್ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವ, ಶರಿಯಾ ಕಾನೂನು ಪ್ರಪಂಚದಾಧ್ಯಂತ ಜಾರಿಯಾಗಬೇಕೆಂದು ಬಯಸುವ ಅಂತರಾಷ್ಷ್ರೀಯ ಮಟ್ಟದಲ್ಲಿ ಮುಸ್ಲಿಮ್ ಸಹೋದರತ್ವಕ್ಕೆ ಒತ್ತು ನೀಡುವ ವಹಾಬಿಸಂ, ಜಮಾತೇ ಇಸ್ಲಾಮೀ, ಅಹ್ಲೇ ಹದೀಸ್, ತಬ್ಲೀಗ್ ಜಮಾತ್ ನಂತಹಾ ಮೂಲಭೂತವಾದಿ ಮನಸ್ಥಿತಿ.

1950 ರಲ್ಲಿ ಹುಟ್ಟಿದ ಮೌದೂದಿ ಚಿಂತನೆಯ ಜಮಾತೇ ಇಸ್ಲಾಮಿ ಚಳುವಳಿಯನ್ನು ಸುಮಾರು ಹದಿನೈದು ವರ್ಷಗಳ ವರ್ಷಗಳ ಹಿಂದಿನ ವರೆಗೂ ಮುಸ್ಲಿಮ್ ಸಮಾಜ ಒಪ್ಪಿಕೊಂಡಿರಲಿಲ್ಲ. ಮುಸ್ಲಿಮ್ ಸಮಾಜದ ಜನರು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದ ಧಾರ್ಮಿಕ ಆಚರಣೆಯಲ್ಲಿ ಪ್ರಾದೇಶಿಕ ಸಂಸ್ಕೃತಿಯ ಮಿಲನವಿತ್ತು. ಇಸ್ಲಾಮ್ ಹಾಗೂ ಇತರ ಧರ್ಮಗಳ ನಡುವಿನ ಸೌಹಾರ್ದದ ಕೊಂಡಿಯಂತಿದ್ದ ದರ್ಗಾ ಸಂಸ್ಕೃತಿಯ ಪರ ಒಲವು ಮುಸ್ಲಿಮ್ ಸಮಾಜದಲ್ಲಿ ಹೇರಳವಾಗಿತ್ತು. ತಮ್ಮದೇ ಆದ ರೀತಿಯಲ್ಲಿ ಅವರು ಧರ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಮುಸ್ಲಿಮ್ ಸಮಾಜದಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದ ಜಮಾತೇ ಇಸ್ಲಾಮೀ ಮೂಲಭೂತವಾದಿಗಳು ಮುಸ್ಲಿಮ್ ಸಮಾಜಕ್ಕೆ ಅಸ್ಪೃಶ್ಯರಂತಿದ್ದರು. ಯಾಕೆಂದರೆ ಜಮಾತ್ ದರ್ಗಾಸಂಸ್ಕೃತಿಯನ್ನು ಒಪ್ಪುತ್ತಿರಲಿಲ್ಲ. ಕಾರಣ ಅದು ಪರಿಪೂರ್ಣ ಇಸ್ಲಾಮ್ ಮಾದರಿ ಅಲ್ಲ ಎಂಬ ವಾದವನ್ನು ಮಾಡುತ್ತಿದ್ದರು. ಹಿಂದೂ-ಮುಸ್ಲಿಮ್ ಜೊತೆಗೂಡುವಿಕೆಗೆ ಕಾರಣವಾದ ದರ್ಗಾ ಸಂಸ್ಕೃತಿಯ ಸೌಹಾರ್ದತೆ ನಿಜವಾದ ಸೌಹಾರ್ದತೆ ಅಲ್ಲ ಎಂಬುವುದಾಗಿದೆ ಜಮಾತ್ ವಾದ. ಭಾರತೀಯ ಮುಸ್ಲಿಮರು ಅನುಸರಿಸುತ್ತಾ ಬಂದಿರುವ ಧಾರ್ಮಿಕತೆಯನ್ನು ಜಮಾತ್ ಒಪ್ಪುತ್ತಿರಲಿಲ್ಲ. ಅದಕ್ಕೆ ಬದಲಾಗಿ ಮೌದೂದಿ ಸಿದ್ದಾಂತದ ಇಸ್ಲಾಮ್ ಮಾತ್ರ ನಿಜವಾದ ಇಸ್ಲಾಮ್ ಎಂಬ ವಾದ ಇವರದ್ದಾಗಿತ್ತು. ಇವರು ಶರೀಯಾ ಕಾನೂನೇ ಎಲ್ಲದಕ್ಕೂ ಪರಿಹಾರ ಎನ್ನುವವರು. ಪ್ರಪಂಚದಲ್ಲಿ ಸಂಪೂರ್ಣ ಪರಿಪೂರ್ಣ ಇಸ್ಲಾಮ್ ಧರ್ಮ ನೆಲೆಗೊಳ್ಳಬೇಕು ಎಂದು ಬಯಸುವವರು. ಸಂಘಪರಿವಾರ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಾ ಬಂದಂತಹಾ ಸಂಧರ್ಭದಲ್ಲೂ ಅದಕ್ಕೆ ಪ್ರತಿರೋಧದ ಬದಲಾಗಿ ಸಂಘಪರಿವಾರದ ಜನರಿಗೆ ಇಸ್ಲಾಮ್ ಭೋಧನೆ ಮಾಡಿ ಅವರನ್ನು ಮುಸ್ಲಿಮ್ ಆಗಿ jamatಪರಿವರ್ತನೆ ಮಾಡಬೇಕು ಎಂಬ ವಾದವನ್ನು ಮಂಡಿಸುವವರು. ಈ ರೀತಿಯ ಮೂಲಭೂತವಾದಿ ಹಿನ್ನೆಲೆ ಹೊಂದಿರುವ ಜಮಾತೇ ಇಸ್ಲಾಮೀ ಯಂತಹಾ ಸಂಘಟನೆ ಸಂಘಪರಿವಾರ ಸಾಮಾನ್ಯ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಿದಾಗ ಅವರ ಪರವಾಗಿ ನಿಲ್ಲುತ್ತಿರಲಿಲ್ಲ. ಜೊತೆಗೆ ಇಂಥಹಾ ಸಂದರ್ಭದಲ್ಲಿ ಅಸಂಘಟಿತ ಮುಸ್ಲಿಮರು ತೋರಿಸುತ್ತಿದ್ದ ಪ್ರತಿರೋಧವನ್ನೂ ಒಪ್ಪುತ್ತಿರಲಿಲ್ಲ. ಬದಲಾಗಿ ಸಂಘಪರಿವಾರದ ದೌರ್ಜನ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸುವುದರ ಬದಲಾಗಿ ಮುಸ್ಲಿಮರು ಧಾರ್ಮಿಕವಾಗಿ ಪೂರ್ಣ ಪ್ರಮಾಣದ ಇಸ್ಲಾಮ್ ಒಪ್ಪಿಕೊಳ್ಳಬೇಕು ಎಂಬ ನಿಲುವನ್ನು ಹೊಂದಿದೆ.

ಇವರ ಕಾರ್ಯಕ್ರಮಗಳಿಗೆ ಪ್ರಖರ ಹಿಂದುತ್ವವಾದಿಗಳನ್ನೂ ಆಹ್ವಾನಿಸುತ್ತಾರೆ. ಪೇಜಾವರ ಸ್ವಾಮಿಯಂತಹಾ ಬ್ರಾಹ್ಮಣ್ಯತೆಯ ಪ್ರತಿಪಾದಕರನ್ನೂ ಆಹ್ವಾನಿಸುತ್ತಾರೆ. ದೇವರು, ಧರ್ಮದಲ್ಲಿ ಹೆಚ್ಚಾಗಿ ನಂಬಿಕೆ ಇಡದಂತಹಾ, ಹಿಂದುತ್ವ ವಿಚಾರಧಾರೆಗಳಿಗೆ ವಿರೋಧಿಯಾಗಿರುವಂತಹಾ ಪ್ರಗತಿಪರ ಚಿಂತಕರನ್ನೂ ಹಾಗೂ ಇನ್ನಿತರ ಎಡಪಂಥೀಯ ಚಿಂತಕರನ್ನೂ ಆಹ್ವಾನಿಸುತ್ತಾರೆ. ಇವರ ಈ ಆಹ್ವಾನದ ಹಿಂದಿನ ಉದ್ದೇಶ ಒಂದು ತಮ್ಮ ಮೌದೂದಿ ಸಿದ್ದಾಂತದ ಪ್ರಚಾರವಾದರೆ ಇನ್ನೊಂದೆಡೆಯಲ್ಲಿ ತಮ್ಮ ಮೂಲ ಸಿದ್ದಾಂತವನ್ನು ಮರೆಮಾಚುವುದಾಗಿದೆ. ಸ್ವತಹಃ ಶರಿಯಾ ಆಧಾರಿತ ಇಸ್ಲಾಮ್ ರಾಷ್ಟ್ರ ನಿರ್ಮಾಣದ ಒಳ ಅಜೆಂಡಾವನ್ನು ಮರೆಮಾಚಿ ಹಿಂದುತ್ವವಾದಿಗಳ ದಾಳಿಗೆ ಪ್ರತಿರೋಧಿಯಾಗಿ ಹುಟ್ಟಿಕೊಂಡಿರುವ ಮುಸ್ಲಿಮ್ ಸಂಘಟನೆಗಳನ್ನು ಮೂಲಭೂತವಾದಿ ಸಂಘಟನೆಗಳಂತ್ತೆ ಚಿತ್ರಿಸಿ devanurತಾನು ಮುಸ್ಲಿಮ್ ಸಮಾಜದ ಸಾಮಾಜಿಕ ಪರಿವರ್ತನೆಗೆ ಹುಟ್ಟಿಕೊಂಡ ಸಂಘಟನೆ ಎಂದು ಬಿಂಬಿಸಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆ. ಈ ಒಳಮರ್ಮವನ್ನು ಅರಿತ ಹಿರಿಯ ಸಾಹಿತಿ ದೇವನೂರು ಮಹಾದೇವ ’ಜಮಾತ್ ಮುಸ್ಲಿಮರ ಆರ್.ಎಸ್.ಎಸ್’ ಎಂದು ಕರೆದಿದ್ದರು. ಆರ್.ಎಸ್.ಎಸ್ ಸಂಘಟನೆ ಹೇಗೆ ಹಿಂದುತ್ವದ ಹೆಸರಲ್ಲಿ ಮನುಸ್ಮೃತಿ ಆಧಾರಿತ ಬ್ರಾಹ್ಮಣ್ಯ ಸಮಾಜವನ್ನು ಕಟ್ಟ ಹೊರಟಿದೆಯೋ ಅದೇ ರೀತಿಯಲ್ಲಿ ಜಮಾತ್ ನಂತಹಾ ಮೂಲಭೂತವಾದಿಗಳು ಮಾಡಹೊರಟಿರುವುದು ಅದನ್ನೇ. ಅದಕ್ಕಾಗಿ ಬಾಂಗ್ಲಾ ಮಾದರಿಯಲ್ಲಿ ಅಗತ್ಯ ಸಂಧರ್ಭದಲ್ಲಿ ಶಶ್ತ್ರಾಸ್ತವನ್ನೂ ಬಳಸಿಕೊಂಡು ತನ್ನ ಉದ್ದೇಶ ಈಡೇರಿಸುತ್ತದೆ ಎಂಬುವುದೇ ಅಪಾಯಕಾರಿ.

ಇದೇ ಮಾದರಿಯಲ್ಲಿ ಅಹ್ಲೇ ಅದೀಸ್, ಸಲಫೀ, ತಬ್ಲೀಗ್ ಜಮಾತ್ ನಂತಹಾ ಮೂಲಭೂತವಾದಿಗಳು ಕೆಲಸ ಮಾಡುತ್ತಿದ್ದಾರೆ. ನಾನು ಈ ಹಿಂದೆ ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ನನ್ನ ಸ್ನೇಹಿತರಾದ ಸಲಫಿ ಮಿತ್ರರ ವರ್ತನೆಯನ್ನು ಗಮನಿಸುತ್ತಿದ್ದಾಗ ಅಲ್ಲಿ ನನಗೆ ಮತ್ತೊಂದು ಮೂಲಭೂತವಾದದ ಅರಿವಾಯಿತು. ಕರಾವಳಿಯ ಕೋಮುಗಲಭೆಗಳ ಕುರಿತಾಗಿ ನಾವು ಚರ್ಚೆ ಮಾಡುತ್ತಿದ್ದಾಗ ಅವರೆಲ್ಲಾ ಇಲ್ಲಿ ಹುಟ್ಟಿಕೊಂಡಿರುವ ಮುಸ್ಲಿಮ್ ಪ್ರತಿರೋಧವನ್ನು ಖಂಡಾತುಂಡವಾಗಿ ವಿರೋಧಿಸುತ್ತಿದ್ದರು. ಈ ರೀತಿಯ ಪ್ರತಿರೋಧವೇ ಪ್ರಪಂಚಕ್ಕೆ ಇಸ್ಲಾಮ್ ಪ್ರಚಾರಕ್ಕೆ ತಡೆಯೆಂಬುವುದು ಅವರ ವಾದವಾಗಿತ್ತು. ಆದರೆ ಇವರೂ ಪೂರ್ಣ ಪ್ರಮಾಣದ ಇಸ್ಲಾಮ್ ಜಾರಿಗೆ ಬರಬೇಕು ಎಂಬ ನಿಲುವುಳ್ಳವರಾಗಿದ್ದರು. ಪ್ರತಿಯೊಬ್ಬ ಮುಸ್ಲಿಮನಲ್ಲಿ jamate-mangaloreಅವರ ನಿಲುವಿನ ವಹಾಬಿ ಇಸ್ಲಾಮಿನ ಪ್ರತಿರೂಪ ಕಾಣಬೇಕೆಂದು ಬಯಸುವವರಾಗಿದ್ದರು. ತಮ್ಮ ಮುಂದೆ ಮಾತನಾಡಲು ಸಿಕ್ಕ ಹಿಂದೂ ಅಥವಾ ಇತರ ಧರ್ಮೀಯರಿಗೆ ಅಬ್ಬಬ್ಬಾ ಎನ್ನುವಷ್ಟು ವಹಾಬಿಸಂ ಪ್ರಭಾವಿತ ಇಸ್ಲಾಮ್ ಧರ್ಮದ ಕುರಿತಾಗಿ ಭೋಧನೆ ಮಾಡಿ ಅವರ ಮನಪರಿವರ್ತನೆ ಮಾಡಲು ಪ್ರಯತ್ನಿಸುವ ಇವರು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ತಮ್ಮ ತಮ್ಮ ಕಚೇರಿಗಳಲ್ಲಿ ನೀಡುತ್ತಿದ್ದ ಸಿಹಿತಿಂಡಿ ಪೊಟ್ಟಣಗಳನ್ನೂ ಸ್ವೀಕಾರ ಮಾಡುತ್ತಿರಲಿಲ್ಲ. ಕಾರಣ ಮೂರ್ತಿ ಪೂಜಾ ಆರಾಧಕರ ಹಬ್ಬಗಳಿಗೆ ಶುಭಾಶಯವನ್ನು ಕೋರುವುದು ಹಬ್ಬದ ಉಡುಗೊರೆಗಳನ್ನು ಪಡೆದುಕೊಳ್ಳುವುದು ಶಿರ್ಕ್ (ಅಧಾರ್ಮಿಕ) ಎಂಬ ಕಾರಣಕ್ಕಾಗಿ. ಇಷ್ಟೇ ಅಲ್ಲ ಈ ಮೂಲಭೂತವಾದಿಗಳು ದರ್ಗಾ ಸಂಸ್ಕತಿಯನ್ನು ಕಟುವಾಗಿ ವಿರೋಧಿಸುತ್ತಾರೆ. ಕಾರಣ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಎಲ್ಲಾ ಧರ್ಮಗಳ ಸಹಭಾಗಿತ್ವ ಇದೆ ಹಾಗೂ ಇತರ ಧರ್ಮಗಳ ಧಾರ್ಮಿಕ ಆಚರಣೆಯ ಪ್ರಭಾವವಿದೆ ಎಂಬುವುದಕ್ಕಾಗಿ. ಈ ಕಾರಣದಿಂದಲೇ ಬಾಬಾ ಬುಡನ್ ಗಿರಿ ವಿವಾದದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ನಿಲುವಿಗೆ ಸಲಫಿವಾದಿಗಳ ಬೆಂಬಲವಾಗಿತ್ತು. ಈ ಮೂಲಭೂತವಾದಿಗಳ ಅನುಯಾಯಿಗಳ ಕೆಲವೊಂದು ನಿಲುವುಗಳನ್ನು ನೋಡಿದರೆ ನಿಮಗೂ ಆಶ್ವರ್ಯವಾಗಬಹುದು. ಸಾಮಾನ್ಯ ಮುಸ್ಲಿಮರನ್ನು ಇಸ್ಲಾಮ್ ಅನುಯಾಯಿಗಳು ಎಂದು ಈ ಮೂಲಭೂತವಾದಿಗಳು ಒಪ್ಪುವುದಿಲ್ಲ. ಇವರ ಪ್ರಕಾರ ಸಾಮಾನ್ಯ ರೀತಿಯಲ್ಲಿ ಧರ್ಮಾಚರಣೆ ಮಾಡುವ ಮುಸ್ಲಿಮರು ಕಾಫಿರ್ ಗಳೆಂದು ಅವರನ್ನು ಮರಳಿ ಪೂರ್ಣ ಇಸ್ಲಾಮ್ ಗೆ ಕರೆತರಬೇಕೆಂಬ ವಾದವನ್ನು ಮಾಡುತ್ತಾರೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಸಲಫಿ ಮುಖಂಡರೊಬ್ಬರು ಸಲಫಿ ವಿಚಾರಗಳ ಕುರಿತಾದ ಚರ್ಚೆಯ ಸಂದರ್ಭದಲ್ಲಿ ತನ್ನ ಹೆತ್ತವರನ್ನೇ ’ಕಾಫಿರ್ ಆಗಿ ಮೃತಪಟ್ಟರು’ ಎಂದು ಅಭಿಪ್ರಾಯಪಟ್ಟಿದ್ದರು. ಯಾಕೆಂದರೆ ಅವರು ಸಾಯುವ ಮೊದಲು ಪೂರ್ಣ ಇಸ್ಲಾಮ್ ಅಡಿಸ್ಥಾನದಲ್ಲಿ ಧರ್ಮಾಚರಣೆ ಮಾಡಿಲ್ಲ ಎಂಬ ಕಾರಣಕ್ಕಾಗಿ. ಇದರ ಜೊತೆಗೆ ಸಲಫಿ ವಾದಿಗಳು ಅಂತರಾಷ್ಟ್ರೀಯ ಮುಸ್ಲಿಮ್ ಸಹೋದರತೆಯಲ್ಲಿ ಒಲವನ್ನು ಹೊಂದಿದವರು ಬಹುತ್ವದ ಪ್ರತೀಕವಾಗಿರುವ ದರ್ಗಾಗಳನ್ನು ಒಡೆದು ಹಾಕಬೇಕೆಂದೂ ಹೇಳುವ ಇವರು ಸೂಫಿ ಚಿಂತನೆಯ ಕಟುವಿರೋಧಿಗಳು. PFI-eventಈ ಮೂಲಭೂತವಾದಿಗಳ ಆಗಮನದ ನಂತರವೇ ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾ ಧರಿಸುವ ಮಾದರಿಯಲ್ಲಿ ಇನ್ನಷ್ಟು ಬಿಗಿ ಬದಲಾವಣೆಗಳು ಬಂದವು. ಮನೆಗಳಲ್ಲಿ ಟಿವಿ ನೋಡುವುದು ಕೂಡಾ ಧರ್ಮವಿರೋಧಿ ಎಂಬ ವಾದವನ್ನು ಮಂಡಿಸುವ ಸಲಫೀ ಅನುಯಾಯಿಗಳಿದ್ದಾರೆ. ಇವರಂತೆಯೇ ತಬ್ಲೀಗ್ ಜಮಾತ್ ವಹಾಬಿ ಚಳುವಳಿಗಳ ಜೊತೆಗೆ ಗುರುತಿಸಿಕೊಂಡಿರುವ ಇನ್ನಿತರ ಮೂಲಭೂತವಾದಿಗಳು ಹೆಡೆಯೆತ್ತದೆ ಮಲಗಿರುವ ಹಾವುಗಳು. ತಮ್ಮನ್ನು ನೂತನವಾದಿಗಳು, ಆಧುನಿಕವಾದಿಗಳಂತೆ ಬಿಂಬಿಸುತ್ತಾ ಸಮಾಜದಲ್ಲಿ ಸೌಮ್ಯವಾದಿಗಳಂತೆ, ಮುಸ್ಲಿಮ್ ಸಮಾಜದ ಸುಧಾರಕರೆಂದು ಬಿಂಬಿತರಾಗುತ್ತಿದ್ದಾರೆ. ಈ ಪೂರ್ಣ ಪ್ರಮಾಣದ ಇಸ್ಲಾಮ್ ವಹಾಬಿಸಂ ಇಸ್ಲಾಮ್ ಸಮಾಜದೊಳಗಡೆ ನುಸುಳಿಸಿದ ನಂತರವೇ ಇಸ್ಲಾಮ್ ರಾಷ್ಷ್ರಗಳಲ್ಲಿ ಅಂತರಾಷ್ಷ್ರೀಯ ಸಹೋದರತ್ವ ಅಂಜೆಡಾವನ್ನು ಹೊಂದಿರುವ ಇಸ್ಲಾಮಿಕ್ ಭಯೋತ್ಪಾದನೆ ಹುಟ್ಟಿಗೆ ಕಾರಣವಾಯಿತು.

ಬಹುಸಂಖ್ಯಾತ ಕೋಮುವಾದದ ದಾಳಿಯ ವಿರುದ್ಧ ಸಂಘಟಿತವಾದಂತಹಾ ಭಾರತೀಯ ಅಲ್ಪಸಂಖ್ಯಾತರ ಪ್ರತಿರೋಧ, ಇಸ್ರೇಲಿ ದೌರ್ಜನ್ಯದ ವಿರುದ್ಧ ನಡೆಯುತ್ತಿರುವ ಹಮಾಸ್ ಹೋರಾಟ, ಅಮೇರಿಕಾ ಸಾಮ್ರಾಜ್ಯಶಾಹಿಗಳ ಯುದ್ದ ನೀತಿಯ ವಿರುದ್ಧದ ಇರಾಕಿನ ಕೆಲ ಗುಂಪುಗಳ ಪ್ರತಿರೋಧಕ್ಕೂ, ಪಾಕಿಸ್ಥಾನ, ಬಾಂಗ್ಲಾದೇಶ, ಸಿರಿಯಾ ಸೇರಿದಂತೆ ಕೆಲವೊಂದು ಮುಸ್ಲಿಮ್ ರಾಷ್ಷ್ರಗಳಲ್ಲಿ ಶರಿಯಾ ಆಧಾರಿತ ರಾಷ್ಟ್ರ ನಿರ್ಮಾಣ ಆಗಬೇಕು, ದೇಶದ ಆಡಳಿತ ಧಾರ್ಮಿಕತೆಯ ನೆಲೆಗಟ್ಟಿನಲ್ಲೇ ಇರಬೇಕು ಎಂದು ಶಶ್ತ್ರಾಸ್ತ್ರ ಎತ್ತಿ ರಕ್ತ ಹರಿಸುವ ಮೂತಭೂತವಾದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈ ರೀತಿಯ ಮೂಲಭೂತವಾದ ಪಾಕಿಸ್ತಾನದಂತಹಾ ಮುಸ್ಲಿಮ್ ರಾಷ್ಷ್ರದಲ್ಲಿ ಕಂದಮ್ಮಗಳನ್ನು ಕೊಂದು ರಕ್ತದೋಕುಳಿ ಹರಿಸಿದ ತಾಲಿಬಾನ್ ಭಯೋತ್ಪಾದಕರನ್ನು ಹುಟ್ಟುಹಾಕುತ್ತದೆ. ಈ ಮೂಲಭೂತವಾದ ಅಭದ್ರತೆಯಿಂದ ಸೃಷ್ಟಿಯಾದುದಲ್ಲ. ಬದಲಾಗಿ ಜನಸಾಮಾನ್ಯರನ್ನು Hindu Samajotsavಅಭದ್ರತೆಯತ್ತ ದೂಡುತ್ತಿದೆ. ಇನ್ನೂಂದು ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಸಂಘಪರಿವಾರದ ಪ್ರತಿರೋಧಕ್ಕಾಗಿ ಹುಟ್ಟಿಕೊಂಡಿರುವ ಸಂಘಟನೆಗಳಲ್ಲೂ ಈ ರೀತಿಯ ವಹಾಬಿ, ಜಮಾತ್, ಅಹ್ಲೇ ಹದೀಸ್ ಸಿದ್ದಾಂತವಾದಿಗಳ ಮೂಲಭೂತವಾದ ನುಸುಳಿಕೊಂಡು ಅಲ್ಲೂ ಪ್ರತಿರೋಧದ ಸ್ವರೂಪಗಳಲ್ಲಿ ಬದಲಾವಣೆಯಾಗುತ್ತಿರುವುದನ್ನು ನಾವು ಅಂದಾಜಿಸಬಹುದಾಗಿದೆ. ಇದು ಮತ್ತಷ್ಟು ಅಪಾಯಕಾರಿ. ಭಾರತದಲ್ಲಿ ಅಭದ್ರತೆಯಿಂದ ಹುಟ್ಟಿದ ಪ್ರತಿರೋಧಿ ಮೂಲಭೂತವಾದ ಸ್ವರೂಪದಲ್ಲೂ ಬದಲಾವಣೆಯಾಗುತ್ತಿದೆ. ಸಂಘಪರಿವಾರಕ್ಕೆ ಪ್ರತಿರೋಧಿಯಾಗಿ ಹುಟ್ಟಿದ ಮೂಲಭೂತವಾದಿ ಸಂಘಟನೆ ಎನ್.ಡಿ.ಎಫ್ ಸೇರಿದವರು ಎನ್ನಲಾದ ಕಾರ್ಯಕರ್ತರು ಕೇರಳದಲ್ಲಿ ಅಧ್ಯಾಪಕನೊಬ್ಬ ಪ್ರವಾದಿ ಮುಹಮ್ಮದ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕಾಗಿ ಕೈ ಕಡಿಯುತ್ತಾರೆ (ಇದು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ನೈಜ್ಯ ಆಶಯಕ್ಕೆ ವಿರೋಧವಾದ ಕ್ರಿಯೆ.) ಹೆಣ್ಮಕ್ಕಳ ಬುರ್ಖಾ ವಿಚಾರ ಬಂದಾಗಲೂ ಈ ಮನಸ್ಥಿತಿಯ ಜನರು ಪ್ರತಿಕ್ರಿಯಿಸುವ ರೀತಿ ಅಷ್ಟೇ ತೀವ್ರವಾಗಿರುತ್ತದೆ. ಇನ್ನು ಮುಸ್ಲಿಮ್ ಪ್ರಗತಿಪರ ಚಿಂತನೆಯ ಸಾಹಿತಿಗಳಾದ ತಸ್ಲೀಮಾ ನಸ್ರೀನಾ, ಸಾರಾ ಅಬೂಬಕ್ಕರ್, ಬೊಳುವಾರು ರಂತವರನ್ನು ಇಸ್ಲಾಮ್ ವಿರೋಧಿಗಳಂತ್ತೆ ಸಮುದಾಯದೊಳಗೆ ಚಿತ್ರಿಸುತ್ತಿರುವರು ಇದೇ ಮನಸ್ಥಿತಿಯ ಮೂಲಭೂತವಾದಿಗಳು.

ಸಂಘಪರಿವಾರಕ್ಕೆ ಪ್ರತಿರೋಧ ವ್ಯಕ್ತಪಡಿಸುವುದರ ಜೊತೆಗೆ ಧರ್ಮಾಂಧತೆ ಕೂಡಾ ಈ ಮೂಲಭೂತವಾದಿಗಳಲ್ಲಿ ತೀವ್ರಗೊಳ್ಳುತ್ತಿರುವುದಕ್ಕೆ ಅಭದ್ರತೆ ಕಾರಣವಲ್ಲ ಎಂಬುವುದಂತೂ ಸ್ಪಷ್ಟ. ಈ ನಿಟ್ಟಿನಲ್ಲಿ ಮುಸ್ಲಿಮ್ ಮೂಲಭೂತವಾದವನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ನಮ್ಮ ಮುಂದಿದೆ.

ಒಟ್ಟಿನಲ್ಲಿ ಭಾರತದಲ್ಲಿ ಜನಸಾಮಾನ್ಯರು ನಂಬಿಕೆ ಇಟ್ಟುಕೊಂಡಿರುವ ಇಸ್ಲಾಮ್ ಧರ್ಮ ಯಾವತ್ತೂ ಧರ್ಮಾಂಧತೆಯ ಹಾದಿಯನ್ನು ತುಳಿದಿಲ್ಲ. ತನ್ನ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮದ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದೆ. ಇಂಥಹಾ ಸಂಧರ್ಭದಲ್ಲಿ ಸಂಘಪರಿವಾರದ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಅಟ್ಟಹಾಸವನ್ನು ಭಾರತೀಯ ಮುಸ್ಲಿಮರು ಹಾಗೂ ಇಲ್ಲಿಯ ಜ್ಯಾತ್ಯತೀತ ಶಕ್ತಿಗಳು ಒಟ್ಟಾಗಿ ಜ್ಯಾತ್ಯತೀತ ರೀತಿಯಲ್ಲಿ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮಾಜ ಹಾಗೂ ಇತರ ಸಮಾಜದ ಪ್ರಗತಿಪರರು ಹಿಂದೂ ಕೋಮುವಾದವನ್ನು ಖಂಡಿಸುವುದರ ಜೊತೆಗೆ ಇಸ್ಲಾಮ್ ಸಮಾಜದೊಳಗೆ ಪರಿಪೂರ್ಣ ಇಸ್ಲಾಮ್ ಹೆಸರಲ್ಲಿ ನುಸುಳುತ್ತಿರುವ ಮೂಲಭೂತವಾದ ವಿರುದ್ಧ ಧ್ವನಿ ಎತ್ತಲೇಬೇಕಾಗ ಅಗತ್ಯ ಇದೆ.

24 comments

 1. ಹಿಂದೂ ಮೂಲಭೂತವಾದಕ್ಕೆ ಮುಸ್ಲಿಮರಷ್ಟು ತೀವ್ರವಾಗಿ ಕ್ರಿಶ್ಚಿಯನ್ನರು ಪ್ರತಿಕ್ರಿಯಿಸಿದಂತೆ ಕಾಣುವುದಿಲ್ಲ. ಇದು ಯಾಕಿರಬಹುದು?

  1. ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರ್ರಿಯ ಮಟ್ಟದಲ್ಲಿ ಇಪ್ಪತ್ತೈದು ವರ್ಷ ಗಳ ಪ್ರೋಗರಾಂ ಹಾಕಿ ಕೊಂಡು ಗೆದ್ದಲಿನತೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ . ಅವರು ಎಂದು ರೆಯಾಕ್ಷನಲ್ ಕಾರ್ಯಗಳನ್ನು ಮಾಡುವುದಿಲ್ಲ .
   ರೆಫೆರೆನ್ಸೆ ಬೇಕಾದರೆ ನೆಟ್ ನಲ್ಲಿ ” ಜೋಶ್ವ ಪ್ರೋಗಾಂ ” ಮತ್ತು ” ಜೋಶ್ವ ಡೈಲಿ ರಿಪೋರ್ಟ್ ಓದುತ್ತಿರಿ .
   ೧೯೭೫ – ೨೦೦೦ ೧೦೦% ಸಕ್ಸೆಸ್ಸ್ ಎಂದಿದ್ದಾರೆ ೨೦೦೦ – ೨೦೨೫ ಫಾಸ್ಟ್ ಪ್ರೋಗ್ರೆಸ್ಸಿಂಗ್ ಎಂದಿದ್ದಾರೆ .

 2. ಸುಂದರರಾಜ್ ಅವರೇ ನಿಮ್ಮ ಪ್ರಶ್ನೆಯ ಉದ್ದೇಶ ಅರಿವಾಗುತ್ತಿಲ್ಲ. ಮೇಲಿನ ಲೇಖನದಲ್ಲಿ ಮೊದಲಿನಿಂದಲೂ ಕಡೆ ವರೆಗೂ ಧಾರ್ಮಿಕ ಮೂಲಭೂತವಾದದ ಬಗ್ಗೆ ಇರ್ಷಾದ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಾವು ನೋಡಬೇಕಾದದ್ದೂ ಈ ದಿಕ್ಕಿನಲ್ಲಿಯೇ. ಹಿಂದೂ ಧರ್ಮದ ಮೂಲಭೂತವಾದಕ್ಕೆ ನೇರವಾಗಿ ಬಲಿಯಾಗಿದ್ದು ಮುಸ್ಲಿಮರೇ, ಕ್ರಿಶ್ಚಿಯನ್ನರಲ್ಲ. ಹಿಂದೂ ಮೂಲಭೂತವಾದಿಗಳು ಕ್ರಿಶ್ಚಿಯನ್ನರನ್ನು ಒಪ್ಪಿಕೊಂಡಷ್ಟು ಸರಳವಾಗಿ ಮುಸ್ಲಿಮರನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಕ್ರಿಶ್ಚಿಯನ್ನರು ಮುಸ್ಲಿಮರಷ್ಟು ನೋವು ಅನುಭವಿಸಿಲ್ಲ.

 3. ಹಿಂದೂ ಹೆಸರಿನ ಮೂಲಭೂತವಾದವಿರಲಿ ಇಸ್ಲಾಂ ಹೆಸರಿನ ಮೂಲಭೂತವಾದವಿರಲಿ ಎಲ್ಲ ಮೂಲಭೂತವಾದಗಳಿಗೂ ಮೂರು ಸ್ವರೂಪಗಳಿವೆ 1. ಪರಧರ್ಮ ಮತ್ತು ಪರಧರ್ಮೀಯರ ಬಗ್ಗೆ ದ್ವೇಷ 2. ತಮ್ಮದೇ ಧರ್ಮದಲ್ಲಿರುವ ಒಳ ವಿಮರ್ಶಕರ ಬಗ್ಗೆ, ಆಧುನಿಕ- ಪ್ರಗತಿಪರರ ಧೋರಣೆಯವರ ಬಗ್ಗೆ, ಕಠಿಣವಾಗಿ ಧರ್ಮಾಚರಣೆಗಳನ್ನು ಆಚರಿಸದವರ ಬಗ್ಗೆ ದ್ವೇಷ. 3. ಸ್ತ್ರೀ ಶೋಷಣೆ. ಮೂಲಭೂತವಾದ ಇನ್ನೊಂದು ಧರ್ಮಕ್ಕೆ ಮಾತ್ರವಲ್ಲ ಸ್ವಧರ್ಮಕ್ಕೂ ಅಪಾಯಕಾರಿ. ಹಾಗಾಗಿ ಅಲ್ಪಸಂಖ್ಯಾತರ ಮೂಲಭೂತವಾದದ ಬಗ್ಗೆ ಮೃದು ಧೋರಣೆ ತಾಳಬೇಕೆನ್ನುವ ದಿನೇಶ್ ಅಮೀನ್ ಮಟ್ಟು ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇರ್ಷಾದರ ಲೇಖನ ಹಲವು ಹೊಸವಿಷಯಗಳನ್ನು ತಿಳಿಸಿದೆ. ಇಸ್ಲಾಂ ಮತೀಯರಲ್ಲೂ ಹಲವಾರು ಧೋರಣೆಯುಳ್ಳವರೂ ಇದ್ದಾರೆ ಅದೇ ರೀತಿ ಮತಸೌಹಾರ್ದತೆಯನ್ನು ತೋರಿಸಿಕೊಂಡು ಒಳಗೊಳಗೆ ತಮ್ಮ ಮತವನ್ನು ಮೂಲಭೂತವಾದದತ್ತ ಕರೆದೊಯ್ಯುವವರೂ ಇದ್ದಾರೆ ಎಂಬುದು ಆತಂಕಕಾರಿ ವಿಷಯ. ‘ನೀವು ಆಧುನಿಕರಾಗಬೇಡಿ. ಬಾಹ್ಯ ಆಚರಣೆಗಳಲ್ಲಿ ಚಾಚೂ ತಪ್ಪದೆ ನಮ್ಮ ಧರ್ಮಾಚರಣೆಗಳನ್ನು ಆಚರಿಸಿ’ ಎನ್ನುವವರೇ ತಮ್ಮ ಮತದಲ್ಲಿರುವ ಉದಾರ-ಬಹುಮುಖಿ ಚಿಂತನೆಗಳು ನಾಶವಾಗಲು, ತಮ್ಮ ಮತೀಯರು ಏಕ ಚಿಂತನೆಯಲ್ಲಿ ಕ್ರೋಢೀಕರಣಗೊಳ್ಳಲು ಕೊನೆಗೆ ಪರಧರ್ಮೀಯರ ಮೇಲೆ ದಾಳಿ ಮಾಡಲು, ಭಯೋತ್ಪಾದನೆ ಹರಡಲು ಕಾರಣರಾಗುತ್ತಾರೆ. (ತಾಲಿಬಾನ್ ಹಾಗೆ). ಹಿಂದಿನ ಲೇಖನದ ಪ್ರತಿಕ್ರಿಯೆಯಲ್ಲಿ ಒಬ್ಬರು ಹಿಂದೂ ಧರ್ಮದಲ್ಲಿ ಒಂದೇ ದೇವರು, ತತ್ವ, ಸಿದ್ಧಾಂತಗಳಿಲ್ಲವೆಂದೂ ಟೀಕಿಸಿದ್ದರು. (ಹೀಗೆ ಅನೇಕತೆ, ಭಿನ್ನತೆಗಳಿರುವುದರಿಂದಲೇ ಹಿಂದೂ ಧರ್ಮ ಯಾವತ್ತೂ ಮೂಲಭೂತವಾಗಿ ಉಳಿಯುವುದು ಕಷ್ಟ ಮತ್ತು ಉದಾರ ಆಧುನಿಕ ದೃಷ್ಟಿಕೋನಗಳಿಗೆ ತೆರೆದುಕೊಳ್ಳುತ್ತದೆ ಎಂಬುದೂ ಧನಾತ್ಮಕ ಅಂಶ). ಇಸ್ಲಾಂ ಧರ್ಮದಲ್ಲೂ ಬಹುಮುಖಿ ಉದಾರವಾದಿ ಸಿದ್ದಾಂತಗಳಿರಬಹುದು. ಆದರೆ ಹಾಗೆ ಚಿಂತಿಸುವುದೇ ಧರ್ಮ ವಿರೋಧಿ ಎಂದು ಕೆಲವರು ಮುಸ್ಲಿಮರು ಪ್ರತಿಪಾದಿಸುವುದರಿಂದಲೇ ತಮ್ಮ ಧರ್ಮದ ಒಳ ವಿಮರ್ಶೆ ವಿಶ್ಲೇಷಣೆಗಳನ್ನೂ ಅವರು ಸಹಿಸುವುದಿಲ್ಲ.

 4. ಹ್ಹಾ ಹ್ಹಾ ಹ್ಹಾ…. ತಂತ್ರಗಾರಿಕೆಯೋ ಅಥವಾ ಕುತ್ರಂತ್ರಗಾರಿಕೆಯೋ, ಲೇಖಕರ ಬುದ್ದಿವಂತಿಕೆಯನ್ನು ಮೆಚ್ಚೆಲೇಬೇಕು. ಕೋಮುವಾದದಿಂದ ಆರಂಭಿಸಿ, ಅದನ್ನು ಮೂಲಭೂತವಾದಕ್ಕೆ ಸಮೀಕರಿಸಿ, ಆ ಮಧ್ಯೆ ಈ ವಿಷಯಕ್ಕೆ ಸಂಬಂಧಿಸಿಲ್ಲದ ಸಂಘ-ಸಂಸ್ಥೆಗಳನ್ನು ಎಳೆತಂದು ಮುಖ್ಯವಿಷಯದಿಂದ ಓದುಗರನ್ನು ದಾರಿತಪ್ಪಿಸುವ ಪ್ರಯತ್ನ ಬಹಳ ಚೆನ್ನಾಗಿ ಮಾಡಿದ್ದಾರೆ. ವಾಸ್ತವದಲ್ಲಿ ಮೂಲಭೂತವಾದ ಬೇರೆ ವಿಷಯ; ಮೂಲಭೂತವಾದ ಎಲ್ಲರಲ್ಲೂ ಇದೆ, ಕಮ್ಯುನಿಸ್ಟರಲ್ಲೂ, ಹಿಂದುತ್ವವಾದಿಗಳಲ್ಲೂ, ಸಮಾಜವಾದಿಗಳಲ್ಲೂ, ಲೋಹಿಯಾವಾದಿಗಳಲ್ಲೂ ಹಾಗೂ ಲೇಖಕರು ಅಂದಂತೆ ಇಸ್ಲಾಮೀವಾದಿಗಳಲ್ಲೂ ಇದೆ. ಆ ಮೂಲಭೂತವಾದವೇ ಆಯಾಯ ಚಳುವಳಿಗಳನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡುತ್ತದೆ. ಪ್ರತಿ ವ್ಯಕ್ತಿಗೂ ತನ್ನದೇ ಆದ ಸಿದ್ದಾಂತವನ್ನು ನಂಬುವ, ಪ್ರಚಾರಮಾಡುವ ಹಾಗೂ ಅನುಸರಿಸುವ ಎಲ್ಲಾ ಸ್ವಾತಂತ್ರ್ಯವನ್ನು ಸಂವಿಧಾನ ಭಾರತ ಎಲ್ಲಾ ಪ್ರಜೆಗಳಿಗೂ ನೀಡುತ್ತದೆ. ನೀವು ಉಲ್ಲೇಖಿಸಿದ ಸಂಘ-ಸಂಸ್ಥೆಗಳು ಅವುಗಳನ್ನೇ ಮಾಡುತ್ತಿರುವುದು, ನಿಮ್ಮ ಕೆಂಪುಕಾಮಾಲೆ ಪೀಡಿತ ಕಣ್ಣಿಗೆ ಬಿಳಿಬಣ್ಣವೂ ಕೆಂಪಾಗಿ ಕಾಣುವುದು ಆಶ್ಚರ್ಯವಲ್ಲ ಬಿಡಿ.

  ಜಮಾತೆ ಸಂಘಟನೆಯ ಬಗ್ಗೆ ನೀವು ವಿವರಿಸಿರುವುದನ್ನು ನೋಡಿ ಆ ಸಂಸ್ಥೆಯ ಮೇಲೆ ಅಭಿಮಾನ ಹೆಚ್ಚಾಯಿತೆ ವಿನಹ ನೀವು ಭಾವಿಸಿದಂತೆ ದ್ವೇಷ ಉಂಟಾಗಲಿಲ್ಲ. ಒಂದು ಪಾಯಿಂಟ್ ನಲ್ಲಿ ಲೇಖಕರು ಕೂಡಾ ಜಮಾತೆ ಸಂಸ್ಥೆಯನ್ನು ಪ್ರಚಾರಮಾಡುವುದಕ್ಕಾಗಿಯೇ ಈ ಲೇಖನ ಬರೆದ್ದುದಾಗಿಯೂ ಅನಿಸಿತು. ಜಮಾತೆಯನ್ನು ಆರ್ ಎಸ್ ಎಸ್ ಗೆ ಸಮೀಕರಿಸುವುದರಿಂದ, ಆರ್ ಎಸ್ ಎಸ್ ನ ಒಳ್ಳೆಯ ಕೆಲಸಗಳನ್ನು ಬಲ್ಲ ಜನ ಇನ್ನೂ ಹೆಚ್ಚು ಅದನ್ನು ಇಷ್ಟಪಡಬಹುದು.-) ಆ ಸಂಘದ ಅಂತರ್ಧರ್ಮೀಯ ಕಾರ್ಯಕ್ರಮಗಳನ್ನು ನಾನೂ ಗಮನಿಸಿದ್ದೇನೆ, ತನ್ನ ಸೈದ್ದಾಂತಿಕ ಚೌಕಟ್ಟಿನೊಳಗಿದ್ದುಕೊಂಡು ಅದು ಪ್ರಗತಿಪರವಾಗಿರುವುದನ್ನು ಕಂಡು ಇತರ ಸೈದ್ದಾಂತಿಕ ಮೂಲಭೂತವಾದಿಗಳಿಗೆ ಸಂಕಟವಾಗುವುದು ಹೊಸವಿಚಾರವೇನಲ್ಲ. ಇನ್ನು ಎಲ್ಲರೂ ತಮ್ಮಂತೆ ಕಮ್ಯುನಿಸ್ಟ್ ಗಳಾಗಬೇಕೆಂದು ಬಯಸುವುದು ತಪ್ಪೇನಲ್ಲ, ಆದರೆ ಬೇರೆಯವರು ಆ ರೀತಿ ಬಯಸಬಾರದೆಂದು ಭಾವಿಸುವುದು ಲೇಖಕರೊಳಗಿನ ಚೈನಾ-ಕೋರಿಯಾ ಮಾದರಿಯ ಸರ್ವಾಧಿಕಾರವನ್ನು ನೆನೆಪಿಸುತ್ತದೆ.

  ಇನ್ನು ಪೇಜಾವರ ಶ್ರೀಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದನ್ನು ಕೋಮು-ಸೌಹಾರ್ದದ ಪ್ರಯತ್ನವನ್ನಾಗಿ ನೋಡದೆ, ಒಂದು ಅಪರಾಧವನ್ನಾಗಿ ಬಿಂಬಿಸುವುದು ಸೋಗಲಾಡಿತನವನ್ನು ಎತ್ತಿತೋರಿಸುತ್ತದೆ. ವಿಚಾರದ ಅಸ್ಪಷ್ಟತೆಯೋ, ಅಧ್ಯಯನದ ಕೊರತೆಯೋ, ಅದೇ ಲೇಖಕರು ಸ್ವಾಮೀಜಿಗಳನ್ನು ಆಹ್ವಾನಿಸುವ ಜಮಾತೆಯಂತ ಧಾರ್ಮಿಕ ಸಂಘಗಗಳನ್ನು ಕೋಮುವಾದದ ಜತೆಗೂ ತಳುಕು ಹಾಕುವುದು ಲೇಖಕರೊಳಗಿನ ದ್ವಂದ್ವವನ್ನು ಎತ್ತಿ ತೋರಿಸುತ್ತದೆ. ಎಟ್ ಲೀಸ್ಟ್, ಆ ಸಂಘಗಳಲ್ಲಿ ಇತರ ಸೈದ್ದಾಂತಿಕವಾದಿಗಳನ್ನು ಕರೆದು ಅವರ ಮಾತುಗಳನ್ನು ಕೇಳುವ, ಕೇಳಿಸುವ, ಚರ್ಚಿಸುವ ಹೃದಯವೈಶಾಲ್ಯತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಾದರೂ ಇದೆ, ಲೇಖಕರ ಕಮ್ಯುನಿಸ್ಟ್-ಬಳಗದ ತರಹ ಪ್ರಗತಿಪರರ ಮುಖವಾಡ ತೊಟ್ಟು, ಪ್ರಜಾಪ್ರಭುತ್ವವಾದಿಗಳ ವೇಷ ಧರಿಸಿ, ಸಮಾಜವಾದಿಯಾದ ದಿನೇಶ್ ಮಟ್ಟುರವರನ್ನು, ಜಾತ್ಯತೀತವಾದಿ ಅನಂತಮೂರ್ತಿಯವರಂತವರನ್ನು ತಮ್ಮ ರಾಜಕೀಯ ಏಜೆಂಡಾಕ್ಕಾಗಿ ಬಳಸುವುದಾಗಲಿ ಅಥವಾ ಇನ್ನಾವುದೇ infiltratory ರೀತಿಗಳಿಂದ ಕೆಲಸಮಾಡುತ್ತಿಲ್ಲವಲ್ವ?

  1. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಕೋಮುವಾದಿ ಸಂಘಟನೆ ಎಂದು ಕರೆಯುವುದರಲ್ಲಿ ಅರ್ಥವಿಲ್ಲ. ಭಾರತದ ಸಂವಿಧಾನ ಸೇರಿದಂತೆ ಕೆಲವೊಂದು ಗ್ರಂಥಗಳ ಅಧ್ಯಯನದ ಕೊರತೆಯು ಲೇಖಕರಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಹಿಂದೆ ಸಮಾಜದಲ್ಲಿ ಪ್ರಚಲಿತದಲ್ಲಿರಲು ಹವಣಿಸಲು ಯತ್ನಿಸಿ ಅಲ್ಪ ಸ್ವಲ್ಪ ಜ್ಞಾನ ಹೊಂದಿದ ಹಲವು ಮಂದಿ ಸಮಾಜದಲ್ಲಿ ತೆಗಳಿಕೆಯ ಬಳಿಕ ಅಧ್ಯಯನ ಕೈಗೊಂಡು ಬಳಿಕ ಉತ್ತಮ ಲೇಖಕರಾಗಿ ಸಮಾಜದಲ್ಲಿ ಗುರುತಿಸಿಕೊಂಡವರು ನಮ್ಮಲ್ಲಿದ್ದಾರೆ. ಮೇಲಿನ ಲೇಖನದಲ್ಲಿ ಲೇಖಕರು, ಯಾವುದೇ ಆಧಾರವಿಲ್ಲದ ಸಂಘಟನೆಯೊಂದರ ಮೇಲೆ ನೇರವಾಗಿ ಆರೋಪಗಳನ್ನು(ಆರ್.ಎಸ್.ಎಸ್ ಸಂಘಟನೆ ಹೇಗೆ ಹಿಂದುತ್ವದ ಹೆಸರಲ್ಲಿ ಮನುಸ್ಮೃತಿ ಆಧಾರಿತ ಬ್ರಾಹ್ಮಣ್ಯ ಸಮಾಜವನ್ನು ಕಟ್ಟ ಹೊರಟಿದೆಯೋ ಅದೇ ರೀತಿಯಲ್ಲಿ ಜಮಾತ್ ನಂತಹಾ ಮೂಲಭೂತವಾದಿಗಳು ಮಾಡಹೊರಟಿರುವುದು ಅದನ್ನೇ. ಅದಕ್ಕಾಗಿ ಬಾಂಗ್ಲಾ ಮಾದರಿಯಲ್ಲಿ ಅಗತ್ಯ ಸಂಧರ್ಭದಲ್ಲಿ ಶಶ್ತ್ರಾಸ್ತವನ್ನೂ ಬಳಸಿಕೊಂಡು ತನ್ನ ಉದ್ದೇಶ ಈಡೇರಿಸುತ್ತದೆ ಎಂಬುವುದೇ ಅಪಾಯಕಾರಿ) ಮಾಡಿದ್ದಾರೆ. ಇದಕ್ಕೆ ಲೇಖಕರ ಬಳಿ ಏನಾದರೂ ಪುರಾವೆಗಳಿದ್ದು, ಅದನ್ನು ಬಹಿರಂಗಗೊಳಿಸಿದರೆ ಒಳ್ಳೆಯದು.

 5. ಅಮೀನ್ ಮಟ್ಟುರವರ “ಬಹುಸಂಖ್ಯಾತರೆಂಬ ಅಹಮ್ಮಿನಿಂದ ಹಿಂದೂ ಕೋಮುವಾದ ಸೃಷ್ಟಿಯಾದರೆ ಮುಸ್ಲಿಮ್ ಕೋಮುವಾದ ಅಭದ್ರತೆಯಿಂದ ಸೃಷ್ಟಿಯಾಗಿದೆ” ಎಂಬ ವಿಚಾರವನ್ನು ದೇಶದ ಬಹುತೇಕ ವಿಚಾರವಾದಿಗಳು, ಬುದ್ಧಿಜೀವಿಗಳು, ಎಡಪಂಥಿಯರು ಆಯಾಯ ಸಂದರ್ಭಕ್ಕನುಸಾರವಾಗಿ ತಮ್ಮದೇ ಆದ ರೀತಿಯಲ್ಲಿ ದಾಖಲಿಸುತ್ತಾ ಬಂದಿದ್ದಾರೆ. ಇದೇನು ಹೊಸ ವಿಚಾರವಲ್ಲ. ಆದರೆ, ಸಮಸ್ಯೆ ಏನೆಂದರೆ ಇದೇ ವಿಚಾರಗಳನ್ನು ಇಂದು ಮುಸ್ಲಿಂ ಕೋಮುವಾದಿಗಳು ತಮ್ಮೆಲ್ಲ ಸಮಾಜಘಾತುಕ ಕೃತ್ಯಗಳಿಗೆ ಆತ್ಮರಕ್ಷಣೆಯ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಅಗತ್ಯ ಗಮನಿಸಬೇಕಾಗುತ್ತದೆ. ಇವರು ನಡೆಸುವ ಸಂಘಟನೆಗಳು ಸಮಾಜಸೇವೆಗಳಲ್ಲಿ ತೊಡಗಿಕೊಳ್ಳುತ್ತಲೇ `ಏಟಿಗೆ ಎದಿರೇಟು’ ಕೊಡುವ ಶೈತಾನಿ ಪಡೆಗಳನ್ನು ಕಟ್ಟುವ ಕೆಲಸ ಮಾಡುತ್ತಿವೆ. ಧರ್ಮದ ಹೆಸರು ಹೇಳಿ ಮುಸ್ಲಿಂ ಹುಡುಗಿಯರನ್ನು ಹಿಂಬಾಲಿಸುವ, ಆ ಮೂಲಕ ಅವರ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ನಡೆಸುವ ನೀಚ ಕೆಲಸ ಮಾಡುತ್ತಿವೆ. ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸದ ಈ ಸಂಘಟನೆಗಳು, ಜನರ ನೆಮ್ಮದಿಯ ಬದುಕಿಗೆ ಅಗತ್ಯವೇ ಇಲ್ಲದ ಭಾವನಾತ್ಮಕ ವಿಚಾರಗಳನ್ನು ಎತ್ತಿ ಅವರನ್ನು ಗೊಂದಲಗೊಳಿಸುತ್ತಿವೆ. ಹಿಂಸೆಗೆ ಪ್ರೇರೇಪಿಸುತ್ತಿವೆ. ಇದರಿಂದ ಕಳೆದುಕೊಳ್ಳೋದು ಮುಸ್ಲಿಂ ಸಮಾಜವೇ ಹೊರತು ಬೇರಾರು ಅಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಿಂದ ಜಮಾತೆ ಇಸ್ಲಾಂ ನಂತಹ ಸಂಘಟನೆಗಳು ಸೂಫಿ ಪ್ರಭಾವದ ಇಸ್ಲಾಮನ್ನು ಕಲುಷಿತ ಎಂದು ತಮಗೆ ತಾವೇ ಘೋಷಿಸಿ ಶುದ್ದ ಇಸ್ಲಾಮಿನ ಭ್ರಮೆಯನ್ನು ಜನರ ನಡುವೆ ಹರಿಯಬಿಡುತ್ತಿವೆ. ಇದು ಒಂದು ರೀತಿಯಲ್ಲಿ ಭಾರತೀಯರು ಕಟ್ಟ ಬಯಸುವ ಸೌಹಾರ್ದ ಅಪಾಯಕಾರಿ ಎಂಬುದನ್ನು ಗೆಳೆಯ ಇರ್ಶಾದ್ ಹೇಳಲು ಪ್ರಯತ್ನಿಸಿದ್ದಾರೆ.
  – ಸ್ವಾಲಿ

 6. ಮಾನ್ಯ ಇರ್ಶಾದ್ ರವರೇ, “ಓದುಗ” ರೊಬ್ಬರು ನಿಮ್ಮ ದ್ವಂದ್ವ ನೀತಿಯನ್ನು ಉತ್ತಮವಾಗಿ ವಿಮರ್ಶಿಸಿದ್ದಾರೆ,
  ತಾವು ಬರೆಯಿರಿ, ಇನ್ನೂ ಬರೆಯಿರಿ ಆದರೆ ತಮ್ಮ ಸೀಮಿತ ಅನುಭವದಿಂದಲ್ಲ, ಬದಲಾಗಿ ಆ ಅನುಭವದ ಜೊತೆಗೆ ಅಧ್ಯಯನವನ್ನು ಕೂಡ ಜೊತೆ ಸೇರಿಸಿ. ಯಾವುದೇ ಸಂಘಟನೆಗಳನ್ನು ದೂಷಿಸಿ, ಓದುಗರಿಗೆ ತಪ್ಪು ಮಾಹಿತಿ ನೀಡುವ ಮುಂಚೆ ತಾವು ಎಷ್ಟು ಸಮೀಪದಿಂದ ಅವುಗಳನ್ನು ನೋಡಿದ್ದಿರಿ,ಅಭ್ಯಾಸ ಮಾಡಿದ್ದೀರಿ, ಅವರ ಎಷ್ಟು ನಾಯಕರೊಂದಿಗೆ ಚರ್ಚಿಸಿದ್ದೀರಿ ಎಂದು ತಮ್ಮಲ್ಲಿಯೇ ಪ್ರಶ್ನಿಸಿ ಕೊಳ್ಳಿ. ದೂರದ ಬೆಟ್ಟ ನುಣ್ಣಗೆ ಕಾಣುವ ರೀತಿಯಲ್ಲಿ ಯಾವುದನ್ನು ಕೂಡ ನಾವು ಬಾಹ್ಯವಾಗಿ ನಿರ್ಧರಿಸುವಂತಿಲ್ಲ.ವರ್ತಮಾನ ಬಳಗದ ಓದುಗರು ಜವಾಬ್ದಾರಿಕ ಪ್ರಜ್ಞೆಯಿಂದ, ಮಾನವತೆಯ ಕೊಂಡಿಯಿಂದ ಬೆಸೆದಿರುವ, ನಿಸ್ವಾರ್ಥ ಸಾಮಾಜಿಕ ಕಳಕಳಿಯಿಂದ ಕೂಡಿರುವ ಲೇಖನಗಳನ್ನು ನೀರಿಕ್ಷಿಸುತ್ತಾರೋ ಹೊರತು ಯಾವುದೇ ಕೋಮುವಾದಿ ಪತ್ರಿಕೆಯ ದ್ವೇಷ ಕಾರುವ ಪತ್ರಿಕೆಯ ಲೇಖನದ ಪ್ರತಿರೂಪವನ್ನಲ್ಲ.
  ಮಾನವ ಸೇವೆ, ಸಮಾಜ ಸೇವೆ ಮಾಡುವ ಯಾವುದೇ ಕಾರ್ಯವನ್ನು ನೀವು ಪ್ರೋತ್ಸಾಹಿಸದಿದ್ದರೂ ಪರವಾಗಿಲ್ಲ, ಆದರೆ ಹಿಡನ್ ಅಜೆಂಡಾ ಎಂದು ದಾರಿ ತಪ್ಪಿಸುವ ಬದಲು , ಬರೆಯುವ ರಭಸದಲ್ಲಿ ತಮ್ಮ ಟೊಳ್ಳುತನ ಬಯಲಾಗದಂತೆ ಎಚ್ಚರ ವಹಿಸಿ.
  ನೈಜ ಮಾನವ ಪ್ರೇಮಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿರಿಸಿ, ಮಾನವತೆಯ ವಿರೋಧಿಗಳೊಡನೆ ಹೋರಾಡಬೇಕೆ ಹೊರತು ಪರಸ್ಪರ ಕಚ್ಚಾಟವಲ್ಲ.ಕಚ್ಚಾಟದಿಂದ ವೈರಿಗಳು ಪ್ರಯೋಜನ ಪಡೆಯುವುದರ ಜೊತೆಗೆ ಮಾಡಲ್ಪಟ್ಟಿರುವ ಸುಧಾರಣಾ ಕಾರ್ಯಗಳೂ ವ್ಯರ್ಥವಾಗುತ್ತವೆ .

 7. ಕೇವಲ ತಿಳಿಯುವ ಕುತೂಹಲದಿಂದ ಈ ಪ್ರಶ್ನೆ- ಇಸ್ಲಾಂ ಧರ್ಮದಲ್ಲಿ ಫತ್ವಾ ಹೊರಡಿಸುತ್ತಾರಲ್ಲ? ಈ ಫತ್ವಾ ಹೊರಡಿಸುವ ಅಧಿಕಾರ ಯಾರಿಗಿದೆ? ಇಸ್ಲಾಂ ಧರ್ಮ ವಿರೋಧಿ ಆಚರಣೆಗಳ ವಿರುದ್ಧ ಫತ್ವಾ ಹೊರಡಿಸುತ್ತಾರೆ ಮತ್ತು ಆ ಫತ್ವಾವನ್ನು ಇಸ್ಲಾಂ ಅನುಯಾಯಿಗಳು ಅನುಸರಿಸುತ್ತಾರೆ ಎಂದು ಕೇಳಿದ್ದೇನೆ ಸರಿಯೆ? (ಹಿಂದೆ ಇಸ್ಲಾಂ ವಿರೋಧಿಯಾಗಿ ಬರೆದುದಕ್ಕಾಗಿ ಸಲ್ಮಾನ್ ರುಶ್ದಿಯಂಥವರ ತಲೆಮೇಲೆ ಫತ್ವಾ ಹೊರಡಿಸಿದ್ದರು, ಹೀಗಾಗಿ ಅಂತಹವರು ಮರಣಭಯದಿಂದ ಜೀವಿಸಬೇಕಿತ್ತು. ಹಾಗಾಗಿ ಇಸ್ಲಾಂ ಬಗ್ಗೆ ಬರೆಯುವಾಗ ಜಾಗ್ರತೆ ವಹಿಸಬೇಕಾಗುತ್ತದೆ. ಆದುದರಿಂದಲೇ ಮುಸ್ಲಿಮರಲ್ಲಿ ಮುಕ್ತವಾಗಿ ಬರೆಯುವವರು ಅಪರೂಪ ಹಾಗೂ ಅವರು ಮಹಾನ್ ಧೈರ್ಯಶಾಲಿಗಳೆಂದೇ ಹೇಳಬಹುದು) ‘ಭಯೋತ್ಪಾದನೆಯನ್ನು ಇಸ್ಲಾಂ ಧರ್ಮ ಸಮರ್ಥಿಸುವುದಿಲ್ಲ, ಅದು ಇಸ್ಲಾಂ ವಿರೋಧಿ’ ಎನ್ನುತ್ತಾರೆ. ಮೊನ್ನೆಯ ತಾಲಿಬಾನ್ ದಾಳಿಯ ನಂತರ ಮುಸ್ಲಿಮರು, ಹಿಂದೂಗಳು, ಪ್ರಗತಿಪರರು ಎಲ್ಲರೂ ಭಯೋತ್ಪಾದಕರನ್ನು ಹಳಿಯುತ್ತಿದ್ದಾರೆ. ಈ ತಾಲಿಬಾನಿಗಳು ತಲೆಕೆಟ್ಟವರಾದರೂ ಇಸ್ಲಾಂ ಧರ್ಮಕ್ಕೆ ಸೇರಿದವರು, ಇಸ್ಲಾಂ ಹೆಸರಿನಲ್ಲಿ ( ಶರಿಯತ್ ಕಾನೂನು ಅನುಷ್ಠಾನ ಹಾಗೂ ಪರಿಶುಧ್ಧ ಇಸ್ಲಾಂ ಧರ್ಮಾಚರಣೆಗಳಿಗಾಗಿ) ಕುಕೃತ್ಯಗಳನ್ನೆಸಗುತ್ತ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು ತರುವವರು ಎಂಬುದು ಸರಿಯಷ್ಟೆ? ಈ ಭಯೋತ್ಪಾದಕರ ವಿರುದ್ಧ ಮುಸ್ಲಿಂ ಮೌಲಿಗಳು, ಮತಪಂಡಿತರು ಫತ್ವಾ ಹೊರಡಿಸಿದ್ದಾರೆಯೆ? ಇಲ್ಲವಾದರೆ ಯಾಕೆ ಹೊರಡಿಸಿಲ್ಲ? ಫತ್ವಾ ಹೊರಡಿಸುವ ಪ್ರಭಾವಶಾಲಿ ಅಸ್ತ್ರ ಇಸ್ಲಾಂ ಧರ್ಮದಲ್ಲಿರುವಾಗ ಮಾನವೀಯತೆಯ ರಕ್ಷಣೆಗಾಗಿ ಭಯೋತ್ಪಾದಕರ ವಿರುದ್ಧ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಸೇರುವವರ ವಿರುದ್ಧ ಅದನ್ನು ಬಳಸಬಾರದೆ?

  1. ಅನಿತಾ ಮೇಡಮ್/ ಸರ್,
   ಕುರಾನ್ ಅಥವಾ ಪ್ರವಾದಿ ಜೀವನದಲ್ಲಿ ಯಾವುದಾದರೂ ವಿಷಯಕ್ಕೆ ಸಂಬಂಧಿಸಿ ಸ್ಪಷ್ಟತೆ ಸಿಗದಿದ್ದಾಗ ತಮ್ಮ ಅಧ್ಯಯನ ಆಧಾರದಲ್ಲಿ ಒಬ್ಬ ವಿದ್ವಾಂಸ ನೀಡುವ ಅಭಿಪ್ರಾಯವೇ ಫತ್ವಾ. ಅದು ಯಾವುದೇ ಆಜ್ನೆಯಾಗಲಿ, ಅಥವಾ ಅದನ್ನು ಎಲ್ಲಾ ಮುಸ್ಲಿಮರು ಕಡ್ಡಾಯವಾಗಿ ಒಪ್ಪಲೇಬೇಕೆಂದೂ ಇಲ್ಲ.

   ಇನ್ನು ಭಯೋತ್ಪಾದನೆಯ ಬಗ್ಗೆ ಹೇಳುವುದಾದರೆ, ಅದಕ್ಕೆ ಯಾವ ಫತ್ವಾದ ಅಗತ್ಯನೂ ಇಲ್ಲ. ಕುರಾನಿನಲ್ಲಿ ಜಗತ್ತಿನಲ್ಲಿ ಅನ್ಯಾಯವಾಗಿ ಹತ್ಯೆಗೈಯ್ಯುವುದನ್ನು, ಕ್ಷೋಭೆಹರಡುವುದನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ. ನೆರೆಯವನು ಹಸಿದಿರುವಾಗ ಹೊಟ್ಟೆತುಂಬಿ ಉಣ್ಣುವಾತ ನೈಜ ಮುಸ್ಲಿಮನಾಗಲು ಸಾಧ್ಯವಿಲ್ಲವೆಂದೂ ಪ್ರವಾದಿ ಮುಹಮ್ಮದರು ತಿಳಿಸಿಕೊಟ್ಟಿದ್ದಾರೆ. ಇಂತಹ ಬಹಳಾರು ಮಾನವೀಯ ಹಾಗೂ ಸಮಾಜಮುಖಿ ನಿದರ್ಶನಗಳು ಅವರ ವಚನಗಳಲ್ಲಿ ಕಾಣಸಿಗುತ್ತದೆ. ಅದಾಗ್ಯೂ ಭಯೋತ್ಪಾದನೆಯ ವಿರುದ್ಧ ಬಹಳಾರು ಫತ್ವಾಗಳು ಹೊರಡಿವೆ.

   ಅಂದಹಾಗೇ ಫತ್ವಾಗಳು ಇಂದು ಅರ್ಥಕಳೆದುಕೊಂಡಿವೆಯೆಂದರೆ ಬಹುಷ ತಪ್ಪಾಗಲಾರದು. ಸಂಕುಚಿತ ಮನೋಭಾವದಿಂದ, ಅಧ್ಯಯನದ ಕೊರತೆಯಿಂದ, ಇನ್ನು ಕೆಲವೊಮ್ಮೆ ಅಮಿಷಕ್ಕೊಳಗಾಗಿಯೂ ಫತ್ವಾಗಳು ಹೊರಡುತ್ತವೆ. ಒಳ್ಳೆಯ ಫತ್ವಾಗಳು ಹೊರಡುತ್ತವೆ, ಆದರೆ ಅವುಗಳು ಟಿಆರ್ ಪಿ ಯನ್ನು ಹೆಚ್ಚಿಸಲಾರದವುದರಿಂದಾಗಿ ಮಾಧ್ಯಮಗಳಲ್ಲಿ ಸ್ಪೇಸ್ ಕೂಡಾ ಸಿಗದಿರುವುದನ್ನು ನಾವಿಲ್ಲಿ ಗಮನಿಸಬೇಕು.

 8. ಭಾರತದಲ್ಲಿ ಇತರ ಧರ್ಮದ ಧಾರ್ಮಿಕ ಪಂಡಿತರನ್ನು ಸಂವಾದಕ್ಕೆ ಆಹ್ವಾನಿಸಿ , ವೇದಿಕೆಯಲ್ಲಿ ಕೂರಿಸಿ ಧರ್ಮ ಪ್ರಚಾರ ನಡೆಸುವ ಮೌದೂದಿ ಸಿದ್ದಾಂತವಾದಿಗಳಾದ ಜಮಾತೇ-ಇ-ಇಸ್ಲಾಮಿ-ಹಿಂದ್ ಸ್ಥಾಪಕ ಮೌಲಾನ ಮೌದೂದಿ ಹೇಳ್ತಾರೆ. in our domin we neither allow any muslim to change his relidian nor allow any other religion to propagate its faith. ಬಾಂಗ್ಲಾದೇಶದಲ್ಲಿ ಜಮಾತೇ ಇಸ್ಲಾಮಿ ಸಂಘಟನೆಯ 125 ಉಗ್ರವಾದಿ ಸಂಘಟನೆಗಳು ಇಸ್ಲಾಮ್ ಶುದ್ದೀಕರಣ ಹಾಗೂ ಇಸ್ಲಾಮ್ ರಾಷ್ಷ್ರ ನಿರ್ಮಾದ ಹೆಸರಲ್ಲಿ ಅಲ್ಲಿಯ ಪ್ರಧಾನಿ ಶೇಕ್ ಅಸೀನಾರನ್ನು 2004 ಆಗಸ್ಟ್ 21 ರಂದು ಬಾಂಬ್ ಸ್ಟೋಟ ನಡೆಸಿ ಕೊಲೆಗೈಯಲು ಯತ್ನಿಸಿದ ಘಟನೆ ಸೇರಿದಂತ್ತೆ ಸಾಕಷ್ಟು ಹಿಂಸಾ ಕೃತ್ಯಗಳನ್ನು ನಡೆಸಿದೆ ಇಸ್ಲಾಮ್ ಹೆಸರಲ್ಲಿ. ಜಮಾತೇ ಉಗ್ರ ಸಂಘಟನೆಗಳು ನಡೆಸಿದ ಮಾರಣ ಹೋಮವನ್ನು ಖಂಡಿಸಿದ ಅಲ್ಲಿಯ ಪ್ರಗತಿಪರ ಮುಸ್ಲಿಮರನ್ನು ಬೇಟೆಯಾಡಿದೆ. ಹಿರಿಯ ಸಾಹಿತಿ ಅನಂತ್ ಮೂರ್ತಿ ಯವರು ವಿಧಿವಶರಾದಾಗ ಮಂಗಳೂರಿನಲ್ಲಿ ಭಜರಂಗದಳ ಹೇಗೆ ಪಟಾಕಿ ಸಿಡಿಸಿ ಸಂಭ್ರಮಿಸಿತೋ ಅದೇ ರೀತಿಯಲ್ಲಿ ಬಾಂಗ್ಲಾದಲ್ಲಿ ಜಮಾತೇ ಇಸ್ಲಾಮೀಕರಣವನ್ನು ಖಂಡಿಸಿ ಅದನ್ನು ವಿರೋಧಿಸುತ್ತಿದ್ದ ಹುಮಾಯೂನ್ ಆಜಾದ್ ಹುಜಿ ಉಗ್ರರು ನಡೆಸಿದ ಬಾಂಬ್ ದಾಳಿಯ ನಂತರ ಜರ್ಮನಿಯಲ್ಲಿ ಮೃತಪಟ್ಟಾಗ ಬಾಂಗ್ಲಾ ಜಮಾತ್ ಮದರಸಾಗಳಲ್ಲಿ ಆವರೊಬ್ಬ ಇಸ್ಲಾಮೀ ವಿರೋಧಿ ವ್ಯಕ್ತಿ ಸತ್ತರು ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಿಹಿ ತಿಂಡಿ ಹಂಚಿದ ಘಟನೆಯೂ ನಡೆದಿದೆ. ಭಾರತದಲ್ಲಿ ಮೌದೂದಿ ಸಿದ್ದಾಂತವಾದಿಗಳು ನಾವು ಇಸ್ಲಾಂ ಪ್ರಗತಿಪರರು ಎಂದು ಪೋಸ್ ಕೊಡುತ್ತಿದ್ದರೆ, ಅನ್ಯ ಧರ್ಮಿಯರ ಜೊತೆ ಸೌಹಾರ್ದಯುತ ಜೀವನ ನಡೆಸಲು ಜಮಾತ್ ಇಸ್ಲಾಮ್ ಪ್ರೇರಣೆ ನೀಡುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದರೆ ಬಾಂಗ್ಲಾದಲ್ಲಿ ಇದೇ ಮೌದೂದಿ ಅನುಯಾಯಿಗಳು ಹಿಂದೂ ಧರ್ಮೀಯರ ಹೊಸವರ್ಷದ ಹಬ್ಬದಾಚರಣೆಯ ಸಂಧರ್ಭದಲ್ಲಿ ಬಾಂಬ್ ದಾಳಿ ನಡೆಸಿ ಕ್ರೌರ್ಯ ಮೆರೆದ ಘಟನೆ ಹೇಗೆ ಮರೆಯಲು ಸಾಧ್ಯ. ಸಂಪೂರ್ಣ ಇಸ್ಲಾಂ ಪಾಲಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಜಮಾತ್ ಮೂಲಭೂತವಾದಿಗಳು ಬಾಂಗ್ಲಾದಲ್ಲಿ ಅಹಮ್ಮದೀಯ ಮುಸ್ಲಿಮರನ್ನು ಭೇಟೆಯಾಡುತ್ತಿರುವ ರೀತಿ ಭಯಹುಟ್ಟಿಸುವಂತಹದ್ದು. ಜಮಾತೇ ಇಸ್ಲಾಮೀ ಮುಸ್ಲಿಮರ ಆರ್.ಎಸ್.ಎಸ್ ಎಂಬುವುದು ಒಪ್ಪಲೇ ಬೇಕಾದ ವಿಚಾರ.

 9. ಮುಕ್ತಚಿಂತಕರೇ, ಹೆಸರನ್ನು ಮುಕ್ತಚಿಂತಕರೆಂದು ಇಟ್ಟುಕೊಳ್ಳುವುದರಿಂದ ಯಾರೂ ಮುಕ್ತಚಿಂತಕರಾಗುವುದಿಲ್ಲ, ಮುಕ್ತಚಿಂತನೆ ಚಿಂತನೆಯಲ್ಲಿ, ಮಾತಿನಲ್ಲಿ ಅಥವಾ ಬರಹದಲ್ಲಿ ಪ್ರತಿಫಲಿಸಬೇಕು. ಪೂರ್ವಾಗ್ರಹಪೀಡಿತ ಹಾಗೂ ಸಂಕುಚಿತ ಮನಸ್ಥಿತಿಯಲ್ಲಿದ್ದುಕೊಂಡು ದೇಶದಗಡಿಯನ್ನು ದಾಟಿ ಉದಾಹರಣೆಗಳನ್ನು ನೀಡಿದರೆ ಅದು ಮುಕ್ತಚಿಂತನೆಯಾಗುವುದಿಲ್ಲ, ಇಂತಹ ಪದಪ್ರಯೋಗಗಳ ಪ್ರಹಸನಗಳಿಂದಾಗಿಯೇ ಇವತ್ತು ಪ್ರಗತಿಪರತೆ, ಪ್ರಜಾಸತ್ತಾತ್ಮಕತೆ, ಜನಪರತೆ, ಹಕ್ಕುಗಳ ಹೋರಾಟ ಮುಂತಾದ ಅಮೂಲ್ಯ ಪದಗಳು ಸಮಾಜದಲ್ಲಿ ಅರ್ಥಕಳೆದುಕೊಂಡು ಹಾಸ್ಯಾಸ್ಪದವಾಗಿರುವುದು.

  ಅದಿರಲಿ, ಕಾರ್ಲ್ ಮಾರ್ಕ್ಸ್ ನಿಂದ ಆರಂಭವಾದ ಕಮ್ಯುನಿಸಮ್ ವಾದ ನಕ್ಸಲ್ ವಾದವನ್ನು ಹುಟ್ಟಿಹಾಕಿತು ಎಂದಮಾತ್ರಕ್ಕೆ ಮಾರ್ಕ್ಸ್ ಅನ್ನು ದೂರುವುದು ಸರಿಯೇ? ಅಥವಾ ಚೈನಾ-ಕೊರಿಯಾದಿ ರಾಷ್ಟ್ರಗಳ ಕಮ್ಯುನಿಸಮ್ ಸರ್ವಾಧಿಕಾರಕ್ಕೆ ತಾವು ಮಾರ್ಕ್ಸ್ ಅನ್ನು ದೂಷಿಸಬೇಕು ಅನ್ನುತ್ತಿರುವುದೇ? ಅಥವಾ ನೆರೆರಾಜ್ಯ ಕೇರಳ ಅಥವಾ ಪ,ಬಂಗಾಳದಲ್ಲಿ ನಡೆಯುವ ಪಾಲಿಟಿಕಲ್ ವಾಯಲೆನ್ಸ ಅನ್ನು ನೋಡಿ ಕರ್ನಾಟಕದ ಕಮ್ಯುನಿಸ್ಟರೂ ನಾಳೆ ಅದನ್ನೇ ಮಾಡುತ್ತಾರೆಂದು ತಾವು ಹೇಳುತ್ತಿರುವುದೆ?

  ತಮ್ಮಂತೆ ನಾನು ಬಾಂಗ್ಲದೇಶದ ಜಮಾತೆ ಸಂಘಟನೆಯ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಭಾರತ ಜಮಾತೆ ಸಂಘಟನೆಯ ಬಗ್ಗೆ ಅಧ್ಯಯನ ಮಾಡಿದ್ದೇನೆ, ಭಾರತದ ಜಮಾತೆ ಮೌದೂದಿಯನ್ನು ಸಿದ್ದಾಂತಪುರುಷನಿಗಿಂತ ಹೆಚ್ಚಾಗಿ ಸಂಘದ ಸ್ಥಾಪಕನಾಗಿ ನೋಡುತ್ತದೆ. ಭಾರತದ ಜಮಾತೆ ಬಹಳಾರು ವಿಷಯಗಳಲ್ಲಿ ಮೌದೂದಿಯನ್ನು ಯಾವತ್ತೋ ಮರೆತುಬಿಟ್ಟಿದೆ. ಬಾಂಗ್ಲ ಜಮಾತೆ, ಅಥವಾ ಪಾಕಿಸ್ಥಾನದ ಜಮಾತೆಗೆ ಭಾರತದ ಜಮಾತೆಗೆ ಸ್ಥಾಪನೆ-ಸಂಬಂಧಿತ ವಿಷಯಗಳನ್ನು ಹೊರತುಪಡಿಸಿ ಬೇರಾವುದೇ ಸಂಬಂಧವಿಲ್ಲವೆಂಬುವುದನ್ನೂ ನಾವಿಲ್ಲಿ ಗಮನದಲ್ಲಿಡಬೇಕು.

  ವಾಸ್ತವದಲ್ಲಿ ನಾವು ಇಸ್ಲಾಮ್ ಅನ್ನು ತಿಳಿದುಕೊಡಿರುವುದು ಮಾಧ್ಯಮಗಳಿಂದ ಅಥವಾ ಕೆಲವು ಮತಾಂಧ ಮುಸ್ಲಿಮರನ್ನು ನೋಡಿ ಅಥವಾ ಯಾರ್ಯಾರೋ ಬರೆದ ಪುಸ್ತಕಗಳನ್ನು ಓದಿ. ಆ ಹಿನ್ನಲೆಯಲ್ಲಿ ಜಮಾತೆಯ ಹೆಸರಿನಲ್ಲಿ ಇಸ್ಲಾಮ್ ಎಂಬ ಪದಬಳಕೆಯಾಗಿರುವುದರಿಂದ ಜಮಾತೆ ಸಂಘ ಸಮಸ್ಯೆಯಾಗಿ ಕಾಣುವುದರಲ್ಲಿ ಸಂಶಯವಿಲ್ಲ. ಇಲ್ಲಿ ಮುಕ್ತಚಿಂತಕರ ಮನಸ್ಥಿತಿಯು ಲೈಂಗಿಕಹಿಂಸೆಗಳಿಗೆ ಹೆಣ್ಣನ್ನೇ ಹೊಣೆಗಾರಳನ್ನಾಗಿಸುವ ಪುರುಷಪ್ರಾಧಾನ್ಯ ಮನಸ್ಥಿತಿಗಿಂತ ಭಿನ್ನವಾಗಿಲ್ಲ ಎಂದು ಅನಿಸುತ್ತದೆ.

 10. ಓದುಗ ಎಂಬ ನಾಮಾಂಕಿತರಿಗೆ— ದೇಶದ ಹೊರಗಿನ ವಿದ್ಯಮಾನಗಳನ್ನು ಕುರಿತ ಉದಾಹರಣೆ ನೀಡಿದರೆ ಅದು ‘ಪ್ರಗತಿಪರತೆ’ ಎನಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಇದುವರೆಗೆ ಭಾರತದಲ್ಲಿ ನಡೆದ ಅನ್ಯ ಧರ್ಮೀಯರ ಉಗ್ರಗಾಮಿ ಚಟುವಟಿಕೆಗಳಿಗೆ ಜನ-ಧನ ಒದಗಿ ಬಂದದ್ದು ಎಲ್ಲಿಂದ? ಯಾವ ಧರ್ಮ/ಮತ/ಸಂಘಟನೆಯ ಆಧಾರದ ಮೇಲೆ? ಭಾರತದ ಕಮ್ಯುನಿಸ್ಟ್ ಪಕ್ಷಗಳು USSR ಒಂದಾಗಿ ಬಲಾಢ್ಯವಾಗಿದ್ದಾಗ ರಷ್ಯ ಕಡೆಗೆ ಮುಖ ಮಾಡಿ ಕುಳಿತಿದ್ದವು. ಈಗ ಚೀನಾ ಕಡೆ ನೋಡುತ್ತಿದ್ದಾರೆ. ಮಾವೋವಾದಿ ಸಂಘಟನೆಗಳ ಹೆಸರಿನಲ್ಲಿ. ಸರ್ಕಾರದ ಕಾರ್ಖಾನೆಗಳು, ಉದ್ದಿಮೆಗಳು ಒಂದೊಂದಾಗಿ ಬಾಗಿಲು ಮುಚ್ಚಿಕೊಳ್ಳುತ್ತಿರುವುದಕ್ಕೆ ಕಮ್ಯುನಿಸ್ಟ್ ಪಕ್ಷಗಳ ಕಾರ್ಮಿಕ ಸಂಘಟನೆಯೇ ಕಾರಣ. ನೀವು ಹೇಳಿದ ಈ ಒಂದು ಮಾತು ಸರಿ-“ನಮಗೆ ಇಸ್ಲಾಂ ಗೊತ್ತಿರುವುದು ಅವರಿವರು ಹೇಳಿದ್ದನ್ನು ಕೇಳಿಸಿಕೊಂಡು; ಅಲ್ಲಲ್ಲಿ ಓದಿದ್ದು “. ಈ ಮಾತು ಪ್ರಗತಿಪರರು ಎಂದು ಬೀಗುವ, ದಿನ ನಿತ್ಯ ಹಿಂದೂ ಧರ್ಮದ ಬಗ್ಗೆ ಆಧಾರವಿಲ್ಲದೆ ಅಪಪ್ರಚಾರ ಮಾಡುವವರಿಗೂ ಅನ್ವಯವಾಗುತ್ತದೆ. ಯಾವುದೋ ಕಥೆಗಳಲ್ಲಿ,ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಅಥವಾ ಯಾರೋ ಬುದ್ಧಿಜೀವಿ ಎನಿಸಿಕೊಂಡ ಮಹಾಶಯ ಹೇಳಿದ್ದನ್ನೇ ಅಮೃತವೆಂದು ಸ್ವೀಕರಿಸಿ ಹಾರುಡುವವರು ಮೂಲದ ಅಧ್ಯಯನ ಮಾಡುವ ಶ್ರಮ ತೆಗೆದುಕೊಳ್ಳುವುದಿಲ್ಲ. ಎಲ್ಲಾ ಸಭೆ, ಸಮಾರಂಭಗಳಲ್ಲಿ ಅದನ್ನೇ ಬ್ರಾಹ್ಮಣಶಾಹಿ, ವೈದಿಕಶಾಹಿ,ಪ್ರಗತಿವಿರೋಧಿ ಎಂದು ಪುಂಗಿ ಓದುತ್ತಿರುತ್ತಾರೆ. ಇಂದು ನಮ್ಮಲ್ಲಿರುವ ಹಲವಾರು ಜಾತಿಗಳಲ್ಲಿ ಬ್ರಾಹ್ಮಣ ಜಾತಿಯವರಷ್ಟು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು,ಹಿಂದಿನ ಕಟ್ಟುಪಾಡುಗಳಿಂದ ಬಿಡಿಸಿಕೊಂಡವರು ಬೇರೆ ಯಾರೂ ಇಲ್ಲ.

 11. ಓದುಗ ರ ಪ್ರತಿಕ್ರಿಯೆಗೆ ಸಹಮತ ಸೂಚಿಸುತ್ತಾ ಮುಕ್ತ ಚಿ೦ತಕ ಹಾಗೂ ಶ್ರೀರ೦ಗ ರವರ ಪ್ರತಿಕ್ರಿಯೆಗೆ, ಯಾವುದೇ ಒ೦ದು ವಿಷಯವನ್ನು ಅಥವಾ ಸ೦ಘಟನೆಯನ್ನು ದೂರಿ ಇಲ್ಲ ಸಲ್ಲದ ಮಾತನ್ನು ಪ್ರಕಟಿಸುವುದು ಖ೦ಡನೀಯ, ಯಾವುದೇ ಒ೦ದು ವಿಷಯವನ್ನು ಎತ್ತಿ ಅದರ ಬಗ್ಗೆ ಸರಿಯಾದ ಪರಿಜ್ಞಾನವಿಲ್ಲದೇ ಅದರ ಬಗ್ಗೆ ಅಧ್ಯಯನ ನಡೆಸದೇ ಅ೦ತರರಾಷ್ಟ್ರೀಯ ಮಟ್ಟದ ಸ೦ಘಟನೆಯ ಜೊತೆ ಸ೦ಭ೦ದವನ್ನು ಹೊ೦ದಿದೆಯೆ೦ಬ೦ತೆ ಜನರೆ ಮಧ್ಯೆ ಊಹಾಪೋಹಗಳನ್ನು ಸೃಷ್ಟಿಸುವುದು ಮೂರ್ಖತನದ ಪರಮಾವಧಿಯಾಗಿದೆ. ಬಾ೦ಗ್ಲಾದೇಶದ ಜಮಾತೆ ಇಸ್ಲಾಮೀಯ ಜೊತೆ ಭಾರತದ ಜಮಾತೆ ಇಸ್ಲಾಮಿಯನ್ನು ಏಕೆ ಜೋಡಿಸುತ್ತೀರಿ ಎ೦ದು ತಿಳಿಯುತ್ತಿಲ್ಲ, ಅಲ್ಲಿ ಭಯೋತ್ಪಾದನೆ ನಡೆದರೆ ಇಲ್ಲಿ ಕೂಡಾ ಅದಕ್ಕೆ ಪ್ರೇರಣೆ ನೀಡಲಾಗುತ್ತದೆ ಎ೦ದು ಹೇಳಿಕೊಳ್ಳುವುದು ನಿಜಕ್ಕೂ ಅಚ್ಚರಿಯ ಸ೦ಗತಿ. ಭಾರತದ ಜಮಾತೆ ಇಸ್ಲಾಮೀ ಕೈಗೊ೦ಡಿರುವ ಸಾಮಾಜಿಕ ಸಾಮೂಹಿಕ ಜನಪರ ಕಾರ್ಯಕ್ರಮಗಳನ್ನು ಮತ್ತು ಸಮಾಜದಲ್ಲಿ ಒಳಿತಿನ ಸ್ಥಾಪನೆ ಮತ್ತು ಕೆಡುಕು ಮುಕ್ತ ಸಮಾಜವನ್ನು ನಿರ್ಮಿಸಲು ಅದು ಹಮ್ಮಿಕೊ೦ಡಿರುವ ವಿವಿಧ ಕಾರ್ಯಕ್ರಮಗಳು ನಿಜಕ್ಕೂ ಮೆಚ್ಚುವ೦ತದ್ದು, ಆದುದರಿ೦ದ ಅದರ ಜನಪರ ಕಾರ್ಯಕ್ರಮಗಳನ್ನು ಸ್ವಲ್ಪ ಅಧ್ಯಯನ ನಡೆಸಿದರೆ ಚೆನ್ನ.

 12. Reader ಅವರಿಗೆ– ಇದೇ ‘ವರ್ತಮಾನ’ ಬ್ಲಾಗ್ ನಲ್ಲಿ ೧೮-೧೨-೧೪ರಂದು ಪ್ರಕಟವಾಗಿರುವ ‘ಉಗ್ರರಿಗೆ ಬಲಿಯಾದ ಮಕ್ಕಳಿಗೊಂದು ನಿಜವಾದ ಸಂತಾಪ’ ಎಂಬ ಲೇಖನ ಓದಿ ನೋಡಿ. ಆಗ ತಮಗೆ ಭಯೋತ್ಪಾದನೆಯ ಬೇರುಗಳು ಎಲ್ಲೆಲ್ಲಿ ಅಡಗಿರುತ್ತವೆ ಮತ್ತು ಅಡಗಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ ಎಂಬುದು ಮನವರಿಕೆ ಆಗಬಹುದು.

 13. ಸೂಫಿ ಸಂಪ್ರದಾಯದ ಪ್ರಭಾವದಿಂದ ಸಾಮಾನ್ಯ ಮುಸ್ಲಿಮರು ಪಾಲಿಸಿಕೊಂಡು ಬರುತ್ತಿರುವ ಸೌಹಾರ್ದಯುವ ಇಸ್ಲಾಮ್ ಆಚರಣೆಯನ್ನು ಒಪ್ಪಿಕೊಳ್ಳದೆ ಅದನ್ನು ಪರಿವರ್ತಿಸಿ ಅರೆಬಿಯನ್ ಇಸ್ಲಾಮ್ ಮನ್ನು ಮುಸ್ಲಿಮರ ಮೇಲೆ ಹೇರುವುದು ಜನಪರ ಕಾರ್ಯವೇ?
  ಶರಿಯಾದ ಆಧಾರದಲ್ಲಿ ಪ್ರಪಂಚ ನನಡೆಯಬೇಕು ಎಂದು ಬಯಸುವುದು ಅದಕ್ಕಾಗಿ ಕೆಲಸ ಮಾಡುವುದು ಜನಪರ ಕಾರ್ಯವೇ?
  ಲಾ ಇಲಾಹ ಇಲ್ಲಾಲ್ಲಾ ( ಅಲ್ಲಾನನ್ನು ಹೊರತು ಪಡಿಸಿ ಮತ್ತೊಂದು ದೇವನೇ ಇಲ್ಲ) ಎಂದು ಬಲವಾಗಿ ಪ್ರತಿಪಾದಿಸುವುದು ಜನಪರ ಕಾರ್ಯವೇ? ಇದಕ್ಕಿಂತ ದೊಡ್ಡ ಕೋಮುವಾದ ಮತ್ತೇನಿದೆ.
  ಸ್ಥಳೀಯ ಹಿಂದೂ ಸಂಪ್ರದಾಯದ ಜೊತೆಗೆ ಸೇರಿಕೊಂಡು ಅವರ ಸಂಪ್ರದಾಯವನ್ನೂ ತಮ್ಮ ಧಾರ್ಮಿಕ ಆಚರಣೆಯಲ್ಲಿ ಒಳಗೊರ್ಳಳಿಸಿಕೊಂಡು ನೈಜ್ಯ ಸೌಹಾರ್ದದಲ್ಲಿ ಬದುಕುವ ಜನರನ್ನು ಸಂಘಪರಿವಾರ ಮಾಡುವ ಘರ್ ವಾಪಾಸೀ ಮಾದರಿಯಲ್ಲೇ ಪೂರ್ಣ ಇಸ್ಲಾಮೀಕರಣ ಗೊಳಿಸುವುದು ಜನಪರ ಕಾರ್ಯವೇ?
  ಇಸ್ಲಾಮ್ ಧರ್ಮದ ಪುರೋಹಿತಶಾಹಿತ್ವವನ್ನು ಪ್ರಶ್ನಿಸಿದರು ಎಂಬ ಕಾರಣಕ್ಕಾಗಿ ಮಂಗಳೂರಿನಲ್ಲಿ ಸಾರಾ ಅಬೂಬಕ್ಕರ್ ಮೇಲೆ ಹಲ್ಲೆ ಯತ್ನ ನಡೆಸಿರುವುದು ಜಮಾತ್ ಜನಪರ ಕಾರ್ಯವೇ?
  ಹೆಣ್ಮಕ್ಕಳು ಬುರ್ಕಾದೊಳಗೆ ಇರಬೇಕೆಂದು, ಹೆಣ್ಣು-ಗಂಡು ಮಕ್ಕಳಿಗೆ ಕೋ ಎಜುಕೇಷನ್ ಬದಲಾಗಿ ಪ್ರತ್ಯೇಖ ಶಿಕ್ಷಣ ವ್ಯವಸ್ಥೆಯೇ ಅತ್ಯಾಚಾರ ನಿಯಂತ್ರಿಸಲು ಸಾಧ್ಯ ಎಂಬ ನಿಲುವನ್ನು ಹೊಂದಿರುವುದು ಜನಪರ ಚಿಂತನೆಯೇ?
  ಇಸ್ಲಾಂ ಧರ್ಮವೇ ಎಲ್ಲದಕ್ಕೂ ಪರಿಹಾರ, ಕುರಾನ್ ಎಲ್ಲದಕ್ಕೂ ಪರಿಹಾರ, ಇಸ್ಲಾಂ ರಾಷ್ರ್ಟ ಸ್ಥಾಪನೆಯೇ ನಮ್ಮ ಗುರಿ ಎಂದು ಅದಕ್ಕಾಗಿ ಗುಪ್ತವಾಗಿ ದಾವಾ ನಡೆಸುವುದುರ ಮೂಲಕ ಇಸ್ಲಾಮೀಕರಣ ಗೊಳಿಸುವುದು ಜನ ಪರ ಕಾರ್ಯವೇ?
  ಜಮಾತ್ ಕುರಿತಾಗಿ ಇಂತಹಾ ಇನ್ನಷ್ಟು ಅನುಮಾನಗಳಿಗೆ ಜಮಾತ್ ಸಂಘಟನೆಯನ್ನು ಸೂಕ್ಷವಾಗಿ ಗಮನಿಸಿದಾಗ ನನಗಂತ್ತೂ ಅದ ಜನಪರ ಸಂಘಟನೆ ಎಂದು ಹೇಳೋದಕ್ಕಿಂತ ಪಕ್ಕಾ ಮೂಲಭೂತವಾದಿ. ಹಾಗೂ ಆರ್.ಎಸ್.ಎಸ್ ತರ ಅಪಾಯಕಾರಿ ಸಂಘಟನೆ ಎಂಬುವುದು ನನ್ನ ಅಭಿಪ್ರಾಯ.

 14. ಮುಕ್ತಚಿಂತಕರೇ, ನಿಮ್ಮೊಳಗೆನೇ ಎಷ್ಟೊಂದು ವಿರೋಧಾಭಾಸಗಳಿವೆ. ಪ್ರಚಲಿತ ಸೂಫಿ ಸಂಪ್ರದಾಯವನ್ನು ಒಪ್ಪುವುದು ಒಪ್ಪದಿರುವುದು ವ್ಯಕ್ತಿಗಳಿಗೆ ಬಿಟ್ಟಿದ್ದು, ತನಗಿಷ್ಟವಾದ ವಿಚಾರಗಳನ್ನು ನಂಬುವ, ಪ್ರಚುರಪಡಿಸುವ ಸ್ವಾತಂತ್ರ್ಯ ಆಯಾಯ ವ್ಯಕ್ತಿಗಳಿಗೆ ಸೇರಿದ್ದು. ನೀವು ನಂಬುವ ಸೂಫಿ ಸಂಪ್ರದಾಯವನ್ನು ಎಲ್ಲರೂ ನಂಬಲೇಬೇಕು, ನೀವು ಬಯಸುವ ಸೌಹಾರ್ದ ಮಾದರಿಯನ್ನೇ ಎಲ್ಲರೂ ಅನುಸರಿಸಬೇಕೆಂದು ಬಯಸುವ ನಿಮ್ಮ ಮನಸ್ಥಿತಿಯನ್ನು ನಾನು ಹೇಗೆ ಅರ್ಥೈಸಲಿ? ತಾವು ತಮ್ಮ ವಿಚಾರದಲ್ಲಿ rigid, ಮೂಲಭೂತವಾದಿ ಆಗಿರಬಹುದಾದರೆ ಬೇರೆಯವರು ಯಾಕೆ ಆಗಿರಬಾರದು? ನಿಮ್ಮ ವಾದ ಬಹಳ funnyಯಾಗಿದೆ.

  ಮುಸ್ಲಿಮರಲ್ಲಿರುವ (ತಮಗನಿಸಿದ) ಕೆಡುಕುಗಳ ಹಾಗೂ ಮೌಢ್ಯಗಳ ಬಗ್ಗೆ ನೀವು ಧ್ವನಿಯೆತ್ತಬಹುದು, ಜಮಾತೆಯವರು ಎತ್ತಬಾರದು ಎಂಬ ನಿಮ್ಮ ನಿಲುವನ್ನು ನಾನು ಯಾವ ಫ್ಯಾಸಿಸ್ಟ್ ಗಳೊಂದಿಗೆ ಹೋಲಿಸಲಿ, ಮುಕ್ತಚಿಂತಕರೇ? ಇನ್ನು ತಸವ್ವುಫ್ (ಆಧ್ಯಾತ್ಮ) ವೆಂಬುವುದು ಸೂಫಿಗಳ ಸ್ವತ್ತಲ್ಲ, ದೇವನೂ ಯಾವ ಪುರೋಹಿತರ ಸ್ವತ್ತೂ ಅಲ್ಲ, ಕುರಾನ್ ಗ್ರಂಥ ಯಾವ ವಿದ್ವಾಂಸನ ಸ್ವತ್ತಲ್ಲ, ದೇವನನ್ನು, ತಸವ್ವುಫ್ ಅನ್ನು, ಕುರಾನ್ ಅನ್ನು ನೇರವಾಗಿ ವ್ಯಕ್ತಿಯೊಂದಿಗೆ ಕನೆಕ್ಟ್ ಮಾಡಿದ್ದೂ ಈ ಜಮಾತೆ ಸಂಸ್ಥೆ. ಮುಕ್ತವಾಗಿ ಚಿಂತಿಸುವ ತಮಗೆ ಆ ಕೆಲಸ ಬಹಳ ದೊಡ್ಡ ಅಪರಾಧವಾಗಿ ಯಾಕೆ ಕಾಣುತ್ತದೋ ನಾ ಕಾಣೆ, ತಾನು ಮುಕ್ತಚಿಂತಕನಾಗಿರಬೇಕು, ಬೇರಾರು ಮುಕ್ತರಾಗಿರಬಾರದೆಂದೇ?

  ಕಮ್ಯುನಿಸ್ಟರಿಗೆ ಸೌಹಾರ್ದವೆಂದರೆ ಧರ್ಮಗಳನ್ನು ಬಿಟ್ಟುಬಿಡುವುದು, ಹಿಂದೂಗಳಿಗೆ ಸೌಹಾರ್ದವೆಂದರೆ ಇತರರೂ ಹಿಂದೂಸಂಪ್ರದಾಯವನ್ನು ಅನುಸರಿಸುವುದು, ಮುಸ್ಲಿಮರಿಗೆ ಸೌಹಾರ್ದವೆಂದರೆ ಹಿಂದೂಗಳು ದರ್ಗಾಕ್ಕೆ ಬರುವುದು, ಕ್ರೈಸ್ತರಿಗೆ ಇನ್ನೇನೋ,. ಸೌಹಾರ್ದದ ಈ ಒಂದೇ ವ್ಯಾಖ್ಯಾನವನ್ನೇ ಎಲ್ಲರೂ ಅನುಸರಿಸಬೇಕು ಎಂದುಬಯಸುವ ತಮ್ಮ ಚಿಂತನೆಯನ್ನು ಯಾವ ಮೂಲಭೂತವಾದಕ್ಕೆ ಹೋಲಿಸಲಿ? If yu cant convince, then confuse ಎಂಬ ರೀತಿಯಲ್ಲಿ ಸೌಹಾರ್ದ, ಶರೀಯಾ, ಘರ್ ವಾಪಸಿ, ಹಲ್ಲೆ, ಹೇರಿಕೆ, ಗುಪ್ತದಾವಾ, ಇತ್ಯಾದಿ ಇತ್ಯಾದಿ ಪದಗಳನ್ನು ಬಳಸಿ ಓದುಗರನ್ನು ದಾರಿತಪ್ಪಿಸುವ ಪ್ರಯತ್ನ ಚೆನ್ನಾಗಿ ಮಾಡಿದ್ದೀರಿ. ಜಮಾತೆ ಸಂಸ್ಥೆಯನ್ನು ಅಧ್ಯಯಿಸಿದ ನಾನು ಅಥವಾ ಯಾರೂ ಇರಲಿ ನಿಮ್ಮ ಮಾತು ಪೂರ್ವಾಗ್ರಹಪೀಡಿತವಾದುದ್ದು ಎಂದು ಹೇಳದೆ ಬೇರೆ ವಿಧಿಯಿಲ್ಲ.

 15. ಗೌರವಾನ್ವಿತ ಶ್ರೀರಂಗರವರೇ, ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು. ಕಳೆದ ಕಮೆಂಟಿನಲ್ಲಿ ಪ್ರಗತಿಪರತೆಯ ಬಗ್ಗೆ ನನ್ನ ನಿಲುವು ಸಾಂದರ್ಭಿಕವಾದುದ್ದು. ಯಾವುದೇ ಮಾತನ್ನು ಹೇಳುವ ಅಥವಾ ಯಾರನ್ನಾದರೂ ವಿಮರ್ಶಿಸುವ ಮೊದಲು ಅಧ್ಯಯನದ ಮಹತ್ವವನ್ನು ಮನಗಾಣಿಸುವ ಉದ್ದೇಶದಿಂದ ಹೇಳಿದನಷ್ಟೆ. ಇನ್ನು ಉಗ್ರಗಾಮಿ ಚಟುವಟಿಕೆಗಳು ಹೆಚ್ಚು ಕಡಿಮೆ ಎಲ್ಲಾ ಧರ್ಮಾನುಯಾಯಿಗಳಲ್ಲಿವೆ, ಧರ್ಮವನ್ನು ನಂಬದವರೂ ಉಗ್ರಗಾಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದಿನ ವಾಯಲೆನ್ಸ್ ಗಳು ಮೇಲ್ನೋಟಕ್ಕೆ ಧಾರ್ಮಿಕವಾಗಿ ಕಂಡರೂ, ವಾಸ್ತವದಲ್ಲಿ ಅವುಗಳು ರಾಜಕೀಯವಾದುದು ಎಂದು ನನ್ನ ಅನಿಸಿಕೆ.
  “ಹಾಗಾದರೆ ಇದುವರೆಗೆ ಭಾರತದಲ್ಲಿ ನಡೆದ ಅನ್ಯ ಧರ್ಮೀಯರ ಉಗ್ರಗಾಮಿ ಚಟುವಟಿಕೆಗಳಿಗೆ ಜನ-ಧನ ಒದಗಿ ಬಂದದ್ದು ಎಲ್ಲಿಂದ? ಯಾವ ಧರ್ಮ/ಮತ/ಸಂಘಟನೆಯ ಆಧಾರದ ಮೇಲೆ?” ಎಂದು ಕೇಳಿದ್ದೀರಿ, ಇಲ್ಲಿ ’ಅನ್ಯಧರ್ಮೀಯರೆಂದರೆ” ಯಾರು ಎಂದು ಸ್ಪಷ್ಟಪಡಿಸಿರುತ್ತಿದ್ದರೆ ನಿಮ್ಮ ಪ್ರಶ್ನೆಯನ್ನು ಅರ್ಥೈಸಿಕೊಳ್ಳಲ್ಲು ಸ್ವಲ್ಪ ಅನುಕೂಲವಾಗುತ್ತಿತ್ತು. ನನ್ನ ತಿಳುವಳಿಕೆ ಪ್ರಕಾರ ಇಲ್ಲಿ ಯಾರು ಅನ್ಯರಲ್ಲ. ಎಲ್ಲರೂ ನಮ್ಮವರೇ, ಎಲ್ಲರೂ ಭಾರತೀಯರೇ. ದ್ರಾವಿಡರ ಪ್ರಕಾರ ಭಾರತಕ್ಕೆ ಅರ್ಯನರು ಅನ್ಯರು, ಆರ್ಯನರಿಗೆ ಮುಸ್ಲಿಮರು ಅನ್ಯರು, ಮುಸ್ಲಿಮರಿಗೆ ಕ್ರೈಸ್ತರು ಅನ್ಯರು….ಭಾರತವನ್ನು ನಿಜವಾಗಿ ಪ್ರೀತಿಸುವವರಿಗೆಯಾರೂ ಅನ್ಯರಲ್ಲ. ಈ ’ಅನ್ಯ’ಕರಣದ ಭಾವನೆಯೇ ಭಾರತವನ್ನು ದುರ್ಬಲವಾಗಿಸುತ್ತಿದೆಯೆಂದು ಕೆಲವೊಮ್ಮೆ ಅನಿಸುತ್ತದೆ.
  ದೇಶದ ಹಾಗೂ ದೇಶದ ಜನರ ಹಿತಚಿಂತನೆಗಿಂತ ಯಾರಿಗೆ ರಾಜಕೀಯ ಮುಖ್ಯವೋ, ಅವರು ಮಾತ್ರ ದೂಷಣೆ-ಪ್ರತಿದೂಷಣೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಮತ್ತು ಅದನ್ನು ’ವಿಮರ್ಶೆ’ ಎಂದು ಜನರನ್ನು ನಂಬಿಸುತ್ತಾರೆ. ನನಗದರಿಂದ ಯಾವುದೇ ವಿಶೇಷ ಪ್ರಯೋಜನಗಳು ಕಾಣುವುದಿಲ್ಲ. ನಮಗೆ ಬೇಕಾಗಿರುವುದು ಆರೋಗ್ಯಕರ ಸಂವಾದ.

 16. ಶ್ರೀರ೦ಗರವರಿಗೆ, ಭಯೋತ್ಪಾದನೆಯ ಬೇರು ಎಲ್ಲೆಲ್ಲಿ ಅಡಗಿದೆಯೆ೦ದು ನಿಮಗೆ ಪರಿಶೋಧಿಸಬೇಕಾದರೆ ದೂರವೇನು ಹೋಗುವ ಅಗತ್ಯವಿಲ್ಲ, ಭಾರತದಲ್ಲಿ ನಡೆದಿರುವ ಸ್ಪೋಟಗಳು ಅದು ಮಕ್ಕಾ ಮಸೀದಿ ಆಗಿರಬಹುದು, ಸಬರಮತಿ ಎಕ್ಸ್ ಪ್ರೆಸ್, ಭೋದ್ ಗಾಯಾ, ಸ೦ಜೋತ ಎಕ್ಸ್ ಪ್ರೆಸ್ ಅಥವಾ ಇನ್ನಿತರ ಎಲ್ಲ ಬಾ೦ಬ್ ಸ್ಪೋಟಗಳು ಯಾರ ನೆರಳಿನ ಕೆಳಗೆ ಆಗಿದೆವೆ೦ಬುದು ಎಲ್ಲರಿಗೂ ಚೆನ್ನಾಗಿ ತಿಳಿದ ವಿಚಾರ, ಹಾಗೂ ಕೆಲವೊ೦ದನ್ನು ಅಸೀಮಾನ೦ದ ಯಾವುದೇ ಸ೦ಕೋಚವಿಲ್ಲದೆ ಹೊರಗೆಡವಿದ್ದಾನೆ. ಮತ್ತು ಯಾವುದೇ ಭಯೋತ್ಪಾದನಾ ಚಟುವಟಿಕೆಗಳನ್ನು ಧರ್ಮದ ನೆರಳಿನಲ್ಲಿ ನಡೆಸಲಾಗುದಿಲ್ಲ. ಅದಕ್ಕೆ ಒ೦ದೋ ಸ್ವಾರ್ಥ ಹಿತಾಸಕ್ತಿ ಅಥವಾ ರಾಜಕೀಯ ಲಾಭ ಇವುಗಳೇ ಮುಖ್ಯ ಕಾರಣ ಹೊರತು ಯಾವುದೇ ಧರ್ಮದೊ೦ದಿಗೆ ಜೋಡಿಸುವುದು ಅರಿವಿನ ಕೊರತೆ ಎ೦ದಷ್ಟೆ ಹೇಳಿ ಸಮಾಧಾನಪಟ್ಟುಕೊಳ್ಳಬೇಕಾಗುತ್ತದೆ. ಭಯೋತ್ಪಾದನೆಯ ಕುರಿತು ಇಸ್ಲಾಮಿನ ವೀಕ್ಷಣೆ ಬಹಳ ಸ್ಪಷ್ಟ, ಪವಿತ್ರ ಕುರ್ ಆನಿನಲ್ಲಿ ಈ ರೀತಿ ಹೇಳಲಾಗಿದೆ,
  “ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವ ಕೋಟಿಯನ್ನೇ ವಧಿಸಿದ೦ತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದ೦ತೆ”(ಕುರಾನ್ 5:32)
  ಆದ್ದರಿ೦ದ ಯಾವುದೇ ಧರ್ಮಗ್ರ೦ಥವು ಒಬ್ಬನನ್ನು ಕೊಲೆಮಾಡಲು ಕಲಿಸಿಕೊಟ್ಟಿಲ್ಲ. ಅದು ಆ ವ್ಯಕ್ತಿಯ ಸ್ವಾರ್ಥ ಹಿತಾಸಕ್ತಿ ಕಾರಣ ಹೊರತು ಯಾವುದೇ ಧರ್ಮದ ಮೇಲೆ ಲೇಪ ಹಚ್ಚುವುದು ಸರಿಯಲ್ಲ. ಪ್ರತಿಯೊ೦ದು ಧರ್ಮದಲ್ಲಿ ಆಯಾಯ ಧರ್ಮ ಗ್ರ೦ಥವು ಕಲಿಸಿಕೊಟ್ಟಿರುವುದು ಅಹಿ೦ಸೆ, ಶಾ೦ತಿ ಮತ್ತು ಸಮಾಧಾನದಿ೦ದ ಕೂಡಿದ ಜೀವನ ಪದ್ದತಿ ಅದನ್ನು ಮನುಷ್ಯನು ಕೈಬಿಟ್ಟು ಸ್ವಾರ್ಥ ಲಾಭದ ಲಾಲಾಸೆಯ ಹಿ೦ದೆ ಓಡಿದಾಗ ಈ ಎಲ್ಲ ಸಮಸ್ಯೆಗಳು ಬರುವುದು ಸಹಜ. ಓರ್ವ ಭಯೋತ್ಪಾದಕನು ಯಾವುದೇ ಒ೦ದು ಧರ್ಮದ ಅನುಯಾಯಿಯಾಗಿದ್ದು ಇ೦ತಹ ನೀಚ ಕೃತ್ಯವನ್ನು ಮಾಡುವುದಾದರೆ ಅವನಿಗೆ ಆ ಧರ್ಮದಲ್ಲಿ ಯಾವುದೇ ಸ್ತಾನವಿಲ್ಲ, ಅವನು ಅಧರ್ಮಿ ಮತ್ತು ಅವನಿಗೆ ಈ ಭೂಮಿಯಲ್ಲಿ ಬದುಕುವ ಯಾವುದೇ ಹಕ್ಕಿಲ್ಲ.

 17. ಗೌರವಾನ್ವಿತ ಇರ್ಶಾದ್ ರವರಿಗೆ, ಕೆಲಸದ ನಿಬಿಢತೆಯಿ೦ದ ತಮ್ಮ ಲೇಖನಕ್ಕೆ ಪ್ರತಿಕ್ರಿಯಿಸಲು ತಡವಾಯ್ತು, ಆದರೂ ತಡವಾಗಿಯಾದರೂ ಕೆಲವೊ೦ದು ವಿಚಾರಗಳನ್ನು ಬರೆಯಬೇಕೆನಿಸಿತು, ಒಬ್ಬ ಲೇಖಕರು ಎ೦ಬ ನೆಲೆಯಲ್ಲಿ ಬಹಳ ಚಾನಾಕ್ಷತನದಿ೦ದ ವಿಷಯಗಳನ್ನು ತಿರುಚುವಲ್ಲಿ ಜಾಣ್ಮೆ ತೋರಿದ್ದೀರಿ.
  ಇಸ್ಲಾಮಿಗೆ ಪ್ರವೇಶವೆ೦ಬುವುದು ಸೈದ್ದಾ೦ತಿಕ ನೆಲೆಯಲ್ಲಿ ಒ೦ದು ಪ್ರಮಾಣವಚನದ (ದೇವನಲ್ಲದೆ ಅನ್ಯ ಅರಾಧ್ಯನಿಲ್ಲ ಮತ್ತು ಪ್ರವಾದಿ ಮುಹಮ್ಮದ್ ಅವನ ಸ೦ದೇಶವಾಹಕರು) ಮೂಲಕ ಪ್ರವೇಶಿಸುವುದಾಗಿದೆ.ಅದು ಹಲವಾರು ನೀತಿ ನಿಯಮಗಳನ್ನು ಒಳಗೊ೦ಡ೦ತಹ ಒ೦ದು ಪ್ರಕ್ರಿಯೆಗೆ ಸಹಿ ಹಾಕುವುದಕ್ಕೆ ಸಮಾನವಾಗಿದೆ. ಒಮ್ಮೆ ತಾನು ಅವುಗಳಿಗೆ ಬದ್ಧನಾಗಿದ್ದೇನೆ೦ದು ರುಜುವಾತು ಮಾಡಿದ ಮೇಲೆ ಆ ಸಿದ್ದಾ೦ತಕ್ಕೆ ಬದ್ಧವಾಗಿ ಜೀವನ ಸಾಗಿಸುವುದು ಅವನ ಕರ್ತವ್ಯ. ಕೇವಲ ತಾನು ಅರಿತೋ ಅರಿಯದೆಯೋ ತನ್ನ ತ೦ದೆ ತಾಯಿಗಳು ಒ೦ದು ಧರ್ಮಾನುಯಾಯಿಗಳು ಆದ ಮಾತ್ರಕ್ಕೆ ಅವನು ಆ ಸಿದ್ಧಾ೦ತಕ್ಕೆ ಬದ್ಧನಾಗಬೇಕೆ೦ದೇನಿಲ್ಲ. ಅ೦ದರೆ ನಿಜವಾದ ಎಲ್ಲ ಮೂಲಭೂತ ಆಚಾರ ವಿಚಾರ ಮತ್ತು ಆದರ್ಶಗಳನ್ನು ಅರಿತು ಅದರ೦ತೆ ಜೀವಿಸುವವನೆ ನಿಜವಾದ ಮುಸ್ಲಿಮ್. ಇಸ್ಲಾಮಿನ ಅರ್ಥವೇ ಶಾ೦ತಿ ಮತ್ತು ಸಮಾಧಾನದಿ೦ದ ಕೂಡಿದ ಜೀವನ ಪದ್ದತಿ.ಈ ವಿಶ್ವವನ್ನು ಮತ್ತು ಅದರಲ್ಲಿರುವ ಸಕಲ ಸೃಷ್ಟಿಗಳನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವ ಒಡೆಯನೂ ಪ್ರಭುವೂ ಪರಿಪಾಲಕನೂ ಆದ ಆ ಸೃಷ್ಟಿಕರ್ತನಿಗೆ ತನ್ನನ್ನು ಸಮರ್ಪಿಸುವವನೆ ನಿಜವಾದ ಮುಸ್ಲಿಮ್. ದಾಖಲೆಯಲ್ಲಿ ಮುಸ್ಲಿಮ್ ಎ೦ದು ಗುರುತಿಸಿಕೊ೦ಡು ಆದರ್ಶದಲ್ಲಿ ಇನ್ನೊ೦ದು ಆಚಾರ ವಿಚಾರವನ್ನು ಪಾಲಿಸಿ ತನಗಿಷ್ಟ ಬ೦ದ೦ತೆ ಬದುಕುವುದು ಅಥವಾ ತಾನೊಬ್ಬ ಮುಸ್ಲಿಮ್ ಆದರೆ ಇಸ್ಲಾಮಿನ ಎಲ್ಲ ಸಿದ್ಧಾ೦ತಗಳನ್ನು ತನಗೆ ಪಾಲಿಸಲು ಸಾಧ್ಯವಿಲ್ಲ, ಆದ್ದರಿ೦ದ ನಾನೊಬ್ಬ ಮೋಡರೇಟ್ ಮುಸ್ಲಿಮ್ ಎ೦ದು ಹೇಳುವುದಾದರೆ ಅ೦ಥಹ ಒ೦ದು ಕಾನ್ಸೆಪ್ಟ್ ಇಸ್ಲಾಮಿನಲ್ಲಿಲ್ಲ. ಅವನಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ ಮಾತ್ರವಲ್ಲ ಇಸ್ಲಾಮಿಗೆ ಅ೦ತಹ ಅನುಯಾಯಿಗಳ ಅಗತ್ಯವೂ ಇಲ್ಲ. ಏಕೆ೦ದ್ರೆ ಯಾವ ವಿಶ್ವಾಸವನ್ನು ಅರಬಿ ಪಾರಿಭಾಷಿಕದಲ್ಲಿ ಈಮಾನ್ (ಸತ್ಯವಿಶ್ವಾಸ) ಎ೦ದು ಹೇಳುತ್ತಾರೋ ಅದಕ್ಕೆ ಬದ್ಧನಾಗಿಲ್ಲದಿದ್ದಲ್ಲಿ ಅವನ ವಿಶ್ವಾಸವು ಕಪಟ (ಮುನಾಫಿಕ್) ವಿಶ್ವಾಸವಾಗಿದೆ.

  ಒ೦ದು ಕಡೆ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಪರ್ದಾ ಸ೦ಪ್ರದಾಯವನ್ನು ವಿರೋಧಿಸುವುದು ಇನ್ನೊ೦ದು ಕಡೆ ಅದೇ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡದ ಮತ್ತು ಪರ್ದಾ ಸ೦ಪ್ರದಾಯಕ್ಕೆ ಒತ್ತು ಕೊಟ್ಟು ಕಠಿಣ ನಿಲುವನ್ನು ತೋರುವ ಪುರೋಹಿತ ವರ್ಗವನ್ನು ಅನುಸರಿಸುವುದು ಇದು ಒ೦ದು ರೀತಿಯಲ್ಲಿ ದ್ವ೦ದ್ವ ಅಥವಾ ಇಬ್ಬಗೆಯ ನೀತಿಯಾಗಿದೆ. ಇದಕ್ಕೆ ಅರಬಿ ಪಾರಿಭಾಷಿಕದಲ್ಲಿ (ಕುರಾನಿನಲ್ಲಿ) ಮುದಬ್ ದಬೀನ್ ಎ೦ದು ಹೇಳಲಾಗಿದೆ.

  ಇನ್ನು ಶರೀಅ ಆಧಾರಿತ ಕಾನೂನನ್ನು ವಿರೋಧಿಸುವವರು ನಮ್ಮ ರಾಷ್ಟ್ರಪಿತ ಗಾ೦ಧೀಜಿಯನ್ನು ವಿರೋಧಿಸಿದ ಹಾಗೆ, ಏಕೆ೦ದ್ರೆ ಇಸ್ಲಾಮೀ ರಾಷ್ಟ್ರದ ಎರಡನೆ ಖಲೀಫ ಉಮರ್ (ರ) ರವರು ತಮ್ಮ ಆಢಳಿತಾವಧಿಯಲ್ಲಿ ದರಿದ್ರರು ಇರಲಿಲ್ಲ, ಮಾತ್ರವಲ್ಲ ತಾನೊಬ್ಬ ಆಡಳಿತಾಧಿಕಾರಿಯೆ೦ಬ ನೆಲೆಯಲ್ಲಿ ಊರಲ್ಲಿ ಎಲ್ಲೂ ಬಡವರಿಲ್ಲ ಎ೦ದು ಖಾತ್ರಿ ಪಡಿಸಲು ರಾತ್ರಿ ವೇಳೆಯಲ್ಲಿ ವೇಷ ಬದಲಿಸಿ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಆದ್ದರಿ೦ದಲೇ ಗಾ೦ದೀಜಿಯವರು ಉಮರ್ ರವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಉಮರ್ ರವರ ಆಡಳಿತವನ್ನು ನಾನು ಇಷ್ಟಪಡುತ್ತೇನೆ ಎ೦ದಿದ್ದರು. ವ್ಯಬಿಚಾರಿಯನ್ನು ಕಲ್ಲೆಸೆದು ಕೊಲ್ಲಬೇಕು ಎ೦ಬ ನಿಯಮ ಬರಬೇಕೆ೦ದು ಬಾಜಪ ಧುರೀಣ ಅಡ್ವಾನಿಯವರೆ ಹೇಳಿಕೆ ನೀಡಿದ್ದಾರೆ. ಕಳ್ಳತನ ಮಾಡಿದವನ ಕೈ ಕಡಿಯಬೇಕೆ೦ಬ ನಿಯಮವಿದ್ದರೆ ಕಳ್ಳತನವನ್ನು ಸ೦ಪೂರ್ಣವಾಗಿ ಅಳಿಸಬಹುದು. ಇದರಲ್ಲಿ ಯಾವುದು ತಪ್ಪಾಗಿ ಕಾಣಿಸುತ್ತದೆ ಎ೦ದು ವಿರೋಧಿಸುವವರು ಸ್ವತಹ ಆಲೋಚಿಸಿದರೆ ಸಾಕು.

 18. ಬೆಂಗಳೂರಿನಲ್ಲಿ ಮತ್ತೊಮ್ಮೆ ಮೂಲಭೂತವಾದಿಗಳ ವಿಧ್ವಂಸಕ ಕೃತ್ಯ ನಡೆದಿದೆ, ಸಾವು ನೋವುಗಳಿಗೆ ಕಾರಣವಾಗಿದೆ. ಮೂಲಭೂತವಾದವು ಸಮಾಜದ ಮೇಲೆ ಹಿಡಿತ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಬಹುಸಂಖ್ಯಾತ-ಅಲ್ಪಸಂಖ್ಯಾತ ಲೆಕ್ಕಾಚಾರ ನಡೆಸದೇ ಮೂಲಭೂತವಾದಿಗಳನ್ನು ವಿರೋಧಿಸೋಣ ಹಾಗೂ ವಿಧ್ವಂಸಕ ಕೃತ್ಯಗಳಿಂದ ಉಂಟಾದ ತಲ್ಲಣವನ್ನು ಕೋಮುಸೌಹಾರ್ದತೆಯ ಮೂಲಕ ಶಮನ ಮಾಡೋಣ.

 19. ವಿಪರ್ಯಾಸವೆಂದರೆ ಭಯೋತ್ಪಾದಕರೇ ಹೇಳುತ್ತಾರೆ ಮುಸ್ಲಿಮರಿಗೆ ಭಾರತ ಸುರಕ್ಷಿತವೆಂದು!

  1. ಮುಸಲ್ಮಾನರಿಗೆ ಭಾರತ ಸುರಕ್ಷಿತ ಎನ್ನಿಸಲು ಮುಖ್ಯ ಕಾರಣ ನೆಹರೂ ಕುಟುಂಬವು ಪ್ರತಿಪಾದಿಸಿ ಬೆಳೆಸಿದ ಸೆಕ್ಯೂಲರಿಸಂ. ವಿಲೇಜ್ ಇಡಿಯಾಸಿ ಆಗಿದ್ದ ಭಾರತವನ್ನು ಪ್ರಜಾಸತ್ತಾತ್ಮಕ ಸೆಕ್ಯೂಲರ್ ರಾಷ್ಟ್ರವಾಗಿ ಬೆಳೆಸಿದ ನೆಹರೂ ಅವರಿಗೆ ನಾವೆಲ್ಲರೂ ಋಣಿಗಳು.

 20. ಬೆಂಗಳೂರಿನಲ್ಲಿ ಮತ್ತೊಮ್ಮೆ ಮೂಲಭೂತವಾದಿಗಳ ವಿಧ್ವಂಸಕ ಕೃತ್ಯ ನಡೆದಿದೆ, ಸಾವು ನೋವುಗಳಿಗೆ ಕಾರಣವಾಗಿದೆ. ಮೂಲಭೂತವಾದವು ಸಮಾಜದ ಮೇಲೆ ಹಿಡಿತ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಬಹುಸಂಖ್ಯಾತ-ಅಲ್ಪಸಂಖ್ಯಾತ ಲೆಕ್ಕಾಚಾರ ನಡೆಸದೇ ಮೂಲಭೂತವಾದಿಗಳನ್ನು ವಿರೋಧಿಸೋಣ ಹಾಗೂ ವಿಧ್ವಂಸಕ ಕೃತ್ಯಗಳಿಂದ ಉಂಟಾದ ತಲ್ಲಣವನ್ನು ಕೋಮುಸೌಹಾರ್ದತೆಯ ಮೂಲಕ ಶಮನ ಮಾಡೋಣ.

Leave a Reply

Your email address will not be published.