ಅಭಿಮಾನಿಗಳು ಮತ್ತು ಅವತಾರಗಳು

-ಡಾ.ಎನ್.ಜಗದೀಶ್ ಕೊಪ್ಪ

ಇದು ನಾವು ಬದುಕುತ್ತಿರವ ವರ್ತಮಾನದ ಸಮಾಜದ ಅಧೋಗತಿಯೋ? ಅಥವಾ ನಮ್ಮ ಜನಸಾಮಾನ್ಯರ ವೈಚಾರಿಕ ಪ್ರಜ್ಞೆಯ ದಾರಿದ್ರ್ಯವೋ? ಅರ್ಥವಾಗುತ್ತಿಲ್ಲ.. ಕಳೆದ 21 ರ ಶುಕ್ರವಾರ ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕಿನಕೆರೆಯ 20 ಮಂದಿ ಗ್ರಾಮಸ್ಥರು, ಯಡಿಯೂರಪ್ಪ ಅಭಿಮಾನಿಗಳು ಎಂಬ ಬ್ಯಾನರ್ ಅಡಿಯಲ್ಲಿ ಅಲ್ಲಿನ ಮಣ್ಣನ್ನು ತಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಾಗಿಲಿನಲ್ಲಿ ಕಾದಿದ್ದರು.
ಯಡಿಯೂರಪ್ಪನವರ ಕೈಯಲ್ಲಿ ಆ ಮಣ್ಣನ್ನು ಮುಟ್ಟಿಸಿ ನಂತರ ಹಂಚಿಕೊಳ್ಳುವ ಬಯಕೆ ಅವರದಾಗಿತ್ತು (ಬಹುಶಃ ತಿನ್ನಲಿಕ್ಕೆ ಇರಬಹುದು). ಈ ಅಂಧಾಭಿಮಾನವನ್ನು ಹೇಗೆಂದು ವ್ಯಾಖ್ಯಾನಿಸಲಿ? ನಾಡಿನಲ್ಲಿ ಕಣ್ಣೆದುರೇ ಕರಗಿ ಹೋಗುತ್ತಿರುವ ವೈಚಾರಿಕ ಪ್ರಜ್ಞೆಯ ದುರಂತವೆನ್ನಲೆ?

ತಲೆಯೆತ್ತುತ್ತಿರುವ ಮೂರನೇ ದರ್ಜೆಯ ಸಂಸ್ಕೃತಿಯೆದುರಿನ ನಮ್ಮ ಅಸಹಾಯಕತೆ ಎನ್ನಬೇಕೆ?
ಇತ್ತೀಚಿನ ದಿನಗಳಲ್ಲಿ ಯಾವುದೇ ರಂಗದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿಗಳ ಪಾಲಿಗೆ ಅಭಮಾನಿಗಳು ಎಂಬ ಸಂಗತಿ ವಿಮೋಚನೆಯಾಗದ ಶಾಪದಂತಾಗಿದೆ, ತನ್ನ ಅಭಿಮಾನಿಗಳನ್ನು ದೇವರೆಂದು ಕರೆದ ತಮ್ಮ ಬದುಕಿನುದ್ದಕ್ಕೂ ಆರಾಧಿಸಿದ ಡಾ. ರಾಜ್ ಕುಮಾರ್ ರವರಿಗೆ ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಈ  ಅಭಿಮಾನಿಗಳು ಕೊಟ್ಟ ಬಳುವಳಿ ಎಂತಹದ್ದು ಎಂಬುದು ಕನ್ನಡಿಗರೆಲ್ಲಾ  ಬಲ್ಲ ಸಂಗತಿ. ರಾಜ್ ಕುಟಂಬಕ್ಕೆ ಅಂತಿಮ ಗೌರವ ಸಲ್ಲಿಸಲು ಬಿಡದ ಇಂತಹ ಅಭಿಮಾನಿಗಳು ಜಗತ್ತಿನಲ್ಲಿ ಯಾರಿಗೂ ಬೇಡ ಎಂದು ಆ ಕ್ಷಣದಲ್ಲಿ ಎಲ್ಲರಿಗೂ ಅನಿಸಿದ್ದು ನಿಜ.
ಅಭಿಮಾನವೆಂಬುದು ವ್ಯಕ್ತಿಯೊಬ್ಬನ ಅನನ್ಯ ಸಾಧನೆ ಕುರಿತಂತೆ ಜನ ಸಾಮಾನ್ಯರ ಅಂತರಂಗದ ಆರಾಧನೆ ಹೊರತು, ಅದು ಬಹಿರಂಗ ಪ್ರದರ್ಶನವಲ್ಲ. ಸಂಗೀತ, ನೃತ್ಯ,  ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಹೀಗೆ ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪೂರ್ವ ಸಾಧನೆ ಮಾಡಿದವರನ್ನು ಮೆಚ್ಚುವುದು, ಅವರ ಬದ್ಧತೆಯ ಬಗ್ಗೆ ಶ್ಲಾಘನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂಸ್ಕೃತಿಕ ಅಭಿರುಚಿ, ಇಂತಹ ಅಭಿಮಾನ ಸಾಧಕರಿಗೆ ತಾವು ಸಾಗುತ್ತಿರುವ ಮಾರ್ಗದಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ತಂದುಕೊಡುವಂತಹದ್ದು..
ಆದರೆ ಇಂದು ನಮ್ಮ ಮುಂದೆ ನಡೆಯುತ್ತಿರುವುದು ದಿಢೀರನೆ ಹುಟ್ಟಿಕೊಂಡ ಕಟೌಟ್ ಹಾಗೂ ಫ್ಲೆಕ್ಸ್ ಸಂಸ್ಕೃತಿಯ  ನಾಯಕರ ಕುರುಡು ಆರಾಧನೆ ಮಾತ್ರ. ಇದು ಸಾಮಾಜಿಕ ಬದುಕಿನ ಸ್ವಾಸ್ಥವನ್ನು ಕೆಡಿಸುವಂತಿದೆ. ಈ ಸಮಾಜಕ್ಕೆ, ಈ ನಾಡಿಗೆ, ಅಥವಾ ಈ ನೆಲಕ್ಕೆ ಈ ರೀತಿಯ ಹುಸಿ ಸಂಸ್ಕೃತಿಯ ನಾಯಕರ ಕೊಡುಗೆ ಏನು? ಅವರ ಅಭಿಮಾನಿಗಳು ಎನಿಸಿಕೊಂಡವರಿಗೂ ಸಹ ಉತ್ತರ ಗೊತ್ತಿಲ್ಲ. ಏಕೆಂದರೆ ಅಭಿಮಾನಗಳ ಸಂಘ ಎಂಬುದು ಕೆಲವರ ಪಾಲಿಗೆ ಲಾಭದಾಯಕ ದಂಧೆಯಾಗಿದೆ.
ಸುಮ್ಮನೆ ಹಾಗೆ ಈ ಪಟ್ಟಿ ಗಮನಿಸಿ, ಯಡಿಯೂರಪ್ಪ ಅಭಿಮಾನಿಗಳಸಂಘ, ವಿದಾನಸೌಧದ ಕಚೇರಿಯಲ್ಲಿ ಸಚಿವ ಸೋಮಣ್ಣ ಪಕ್ಷದ ಕಾರ್ಯಕರ್ತನಿಂದ ಚಪ್ಪಲಿ ಏಟು ತಿಂದದ್ದಕ್ಕೆ, ಪ್ರತಿಭಟಿಸುವ ಸಲುವಾಗಿ ಹುಟ್ಟಿಕೊಂಡ ಸೋಮಣ್ಣ ಅಭಿಮಾನಿಗಳ ಸಂಘ, ವರ್ತೂರು ಪ್ರಕಾಶ್ ಅಭಿಮಾನಿಗಳ ಸಂಘ, ರೇಣುಕಾಚಾರ್ಯ ಅಭಿಮಾನಿಗಳ ಸಂಘ (ಈ ಸಂಘ ಈ ಬಾರಿಯ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಬ್ಯಾನರ್ ಹಿಡಿದು  ಕಲಾವಿದರ ಜೊತೆ  ಸಾಗಿತು.) ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅಭಿಮಾನಿಗಳ ಸಂಘ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ, ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ, ಈ ಪಟ್ಟಿಯನ್ನು ನೀವು ರಾಜ್ಯದ ಎಲ್ಲಾ ಶಾಸಕರಿಗೆ, ಸಚಿವರಿಗೆ ಮತ್ತು ಸಂಸದರಿಗೂ ಅನ್ವಯಿಸಬಹುದು. ಯಾವ ಪುರುಷಾರ್ಥಕ್ಕೆ ಈ ಅಭಿಮಾನಿಗಳ ಸಂಘಗಳು?
ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲುಪಾಲಾದ ನಟನೊಬ್ಬನಿಗೆ ಗುಡಿ ಗೋಪುರಗಳ ಮುಂದೆ ಕಾಯಿ ಹೊಡೆದು ಕ ರ್ಪೂರ ಹಚ್ಚಿದ, ಕಣ್ಣೀರ ಧಾರೆ ಸುರಿಸಿದ ಅಭಿಮಾನಿಗಳನ್ನು ನೀವೆಲ್ಲಾ ಗಮನಿಸಿದ್ದೀರಿ ಇದು ಈ ನಾಡಿನ ಸಾಮಾಜಿಕ ಅಥವಾ ಸಾಂಸ್ಕೃತಿಕ ಲೋಕದ  ಬದುಕು ಅಧಃಪತನದ ಪಾತಾಳಕ್ಕೆ ಇಳಿದಿರುವ ಸಂಕೇತವೆ  ಎಂಬುದರ ಕುರಿತು ನಾಡಿನ ಎಲ್ಲಾ ಪ್ರಜ್ಞಾವಂತರು ಗಂಭೀರವಾಗಿ ಆಲೋಚಿಸಬೇಕಾದ ವಿಷಯ.
ಮನುಷ್ಯನೊಬ್ಬನ ವರ್ತನೆಯ  ತಿಕ್ಕಲುತನದ ಪರಮಾವಧಿ ಎನ್ನಬಹುದಾದ ಈ ಅತಿರೇಕ ಹುಟ್ಟಿಕೊಂಡದ್ದು ನಮ್ಮ ನೆರೆಯ ತಮಿಳುನಾಡಿನಲ್ಲಿ. 1950ರ ದಶಕದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯನ್ನು ರಾಮಸ್ವಾಮಿ ಪೆರಿಯಾರ್ ಹುಟ್ಟುಹಾಕಿದ ಸಂದರ್ಭದಲ್ಲಿ ಅವರ ಗರಡಿಯಲ್ಲಿ ಪಳಗಿ  ಪ್ರವರ್ಧಮಾನಕ್ಕೆ ಬಂದ ಸಿ.ಎನ್. ಅಣ್ಣಾದೊರೆ, ಮತ್ತು ಎಂ. ಕರುಣಾನಿಧಿ ತಮ್ಮ ಅಸ್ಖಲಿತ ಹಾಗೂ ಅದ್ಘುತ ತಮಿಳು ಭಾಷಣಗಳಿಂದ ಅಲ್ಲಿನ ಜನರ ಮನಗೆದ್ದರು, ಇದೇ ವೇಳೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಹೇರಿದ್ದನ್ನು ತೀವ್ರವಾಗಿ ಖಂಡಿಸಿ, ತಮಿಳು ಭಾಷೆ, ಸಂಸ್ಕೃತಿ ಬಗ್ಗೆ ಜನರಲ್ಲಿ ಅಭಿಮಾನ ಮೂಡಿಸಿದರು. ಜೊತೆಗೆ ಈ ಇಬ್ಬರು ನಾಯಕರು ತಮಿಳು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದರ ಮೂಲಕ ಚಳುವಳಿಯ ಸಂದೇಶಗಳನ್ನು ತಮಿಳರ ಮನಮುಟ್ಟುವಂತೆ ಮಾಡಿದರು. ಇವರ ಎಲ್ಲಾ ಸಿನಿಮಾಗಳಿಗೆ ಎಂ.ಜಿ.ರಾಮಚಂದ್ರನ್ ನಾಯಕನಾದದ್ದು ವಿಶéೇಷ. ಇದು ಅಲ್ಲಿನ ಜನರಲ್ಲಿ ನಾಯಕರ ಬಗ್ಗೆ ಅಭಿಮಾನ ಬೆಳೆಯಲು ಕಾರಣವಾಯಿತು. ಇವರ ಈ ಹೋರಾಟ 1967ರಲ್ಲಿ ತಮಿಳುನಾಡಿನಲ್ಲಿ ಪ್ರಪಥಮ ಬಾರಿಗೆ ಕಾಂಗ್ರೇಸೇತರ ಡಿ.ಎಂ.ಕೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿ, ಅಣ್ಣಾದೊರೆ ಮುಖ್ಯಮಂತ್ರಿಯಾದರು. ಆದರೆ ಕೇವಲ ಎರಡು ವರ್ಷದಲ್ಲಿ ಅಂದರೆ 1969ರಲ್ಲಿ ಅಣ್ಣಾದೊರೆ ಆಕಸ್ಮಿಕವಾಗಿ ನಿಧನರಾದಾಗ 26 ಮಂದಿ ತಮಿಳು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 12 ಮಂದಿ ಚಲಿಸುವ ರೈಲಿನಿಂದ ಬಿದ್ದು ಸಾವಿಗೆ ಶರಣಾಗಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಅಂದಿನ ಮದ್ರಾಸ್ ನಗರದ ಮೆರೀನಾ ಬೀಚ್ ಬಳಿ 14 ಲಕ್ಷ ಅಭಿಮಾನಿಗಳು ಸೇರಿದ್ದು ಇಂದಿಗೂ ವಿಶ್ವದಾಖಲೆ.

ಇದೇ ಪರಂಪರೆ 1987ರಲ್ಲಿ ನಟ ಹಾಗೂ ತಮಿಳುನಾಡಿನ  ಮುಖ್ಯಮಂತ್ರಿಯಾಗಿದ್ದ ಎಂ.ಜಿ.ರಾಮಚಂದ್ರನ್ ನಿಧನರಾದಾಗ ಮುಂದುವರೆದು 19 ಮಂದಿ ಆತ್ಮಹತ್ಯೆ ಮಾಡಿಕೊಡರು. ಇವರಲ್ಲಿ 7 ಮಂದಿ ಸೀಮೆಎಣ್ಣೆ ಸುರಿದುಕೊಂಡು ಸಾವನ್ನಪ್ಪಿದರು. ಇಂತಹ ಅತಿರೇಕದ ಅಭಿಮಾನ ಸಿನಿಮಾ ನಟರ ಮೂಲಕ ಮುಂದುವರಿದು, ಅದು ಕನರ್ಾಟಕದಲ್ಲೂ ಹುಚ್ಚು ಹೊಳೆಯಾಗಿ ಹರಿಯುತ್ತಾ ಇದೀಗ ನಮ್ಮ ನಟರುಗಳನ್ನು ಮತ್ತು ರಾಜಕೀಯ ನಾಯಕರನ್ನು ಆವರಿಸಿಕೊಂಡಿದೆ. ಅಭಿಮಾನಿ ಸಂಘವನ್ನು ನೇರವಾಗಿ ತಿರಸ್ಕರಿದ ಏಕೈಕ ದಕ್ಷಿಣಭಾರತದ ನಟನೆಂದರೆ, ಕಮಲ್ ಹಾಸನ್ ಮಾತ್ರ. ಇಂತಹ ವಿವೇಚನೆ ನಮ್ಮ ಜನಪ್ರತಿನಿಧಿಗಳಿಗೆ ಬರಬೇಕಾಗಿದೆ. ಜೊತೆಗೆ ಈ ಅಭಿಮಾನಿಗಳ ಅತಿರೇಕಗಳನ್ನು ರೋಚಕತೆಯಿಂದ ಬಿಂಬಿಸುವ ನಮ್ಮ ದೃಶ್ಯ ಮಾಧ್ಯಮಗಳು ಕೂಡ ಒಮ್ಮೆ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

2 thoughts on “ಅಭಿಮಾನಿಗಳು ಮತ್ತು ಅವತಾರಗಳು

  1. Ananda Prasad

    ನಮ್ಮ ಜನ ಗುಲಾಮಗಿರಿಯೆಡೆಗೆ ಸಾಗುತ್ತಿರುವುದರ ಸಂಕೇತ ಇಂಥ ಅಭಿಮಾನಿ ಸಂಘಗಳ ಅತಿರೇಕದ ವರ್ತನೆಗಳು. ಮಾನವ ಅಕ್ಷರಸ್ಥನೂ, ವಿದ್ಯಾವಂತನೂ ಆದಂತೆ ಇಂಥ ಅತಿರೆಕಗಳಿಂದ ಹೊರಬರಬೇಕಾಗಿತ್ತು, ಆದರೆ ಅದಕ್ಕೆ ವಿರುದ್ಧವಾದದ್ದು ಏಕೆ ಸಂಭವಿಸುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ.

    Reply
  2. puttalingaiah kuntanahalli

    ಜಗದೀಶ್‌ ಅವರಿಗೆ ಅಭಿನಂದನೆಗಳು. ಮಾಧ್ಯಮಗಳೆಲ್ಲಾ ಗೆದ್ದೆತ್ತಿನ ಬಾಲ ಹಿಡಿದು ಅಧಃಪತನ ಕಾಣುತ್ತಿವೆ. ಇಂತಹ ಕಾಲಘಟ್ಟದಲ್ಲಿ ಪ್ರಖರ ಸಿದ್ಧಾಂತವನ್ನು ಬಿಡಲೊಪ್ಪದ ನಿಮ್ಮಂತಹವರ ಧೈರ್ಯವನ್ನು ಮೆಚ್ಚಲೇಬೇಕು. ಜನರನ್ನು ತಲುಪುವ ಮಾಧ್ಯಮಗಳು ರಾಜಕಾರಣಿಗಳು ಹಾಗೂ ಕಾರ್ಪೋರೆಟ್‌ ಕುಳಗಳ ಪಾದತಳದಲ್ಲಿ ಗುಬ್ಬರ ಹಾಕಿಕೊಂಡು ಮಲಗಿಬಿಟ್ಟಿವೆ. ಇಂತಹ ಲೇಖನ ಪ್ರಕಟಿಸುವ ಮೂಲಕ ಎಚ್ಚೆತ್ತುಕೊಳ್ಳುತ್ತಾವೆಯೇ? ಇದನ್ನು ಮಾಡಲು ಸಾಧ್ಯವಿಲ್ಲದ ಈ ಮಾಧ್ಯಮಗಳು ನಮಗೆ ಬೇಕಾಗಿವೆಯೇ?…..

    Reply

Leave a Reply

Your email address will not be published.