Daily Archives: October 18, 2011

ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…

-ಶಿವಪುತ್ರ

“ಸರ್ಕಾರದ ಕೆಲಸ ದೇವರ ಕೆಲಸ” ಎಂದು ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಬರೆಸಿ ಹೋಗಿರುವ ಆ ಪುಣ್ಯಾತ್ಮ ಇಂದೇನಾದರೂ ಬದುಕಿದ್ದರೆ ಖಂಡಿತಾ ಅಲ್ಲೇ ಹೋಗಿ ನೇಣು ಹಾಕಿಕೊಳ್ಳುತ್ತಿದ್ದರೇನೋ? ಈ ಹಿಂದೆಯೂ ಸರ್ಕಾರಗಳು, ಸರ್ಕಾರ ನಡೆಸುವವರು ತಂತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಆದರೆ ಭ್ರಷ್ಟಾಚಾರವೇ ಆಳ್ವಿಕೆ ಎಂದುಕೊಂಡು ಸರ್ಕಾರ ನಡೆಸಿರುವ ಕೀರ್ತಿ ಮಾತ್ರ ಮಾಜಿ ಮುಖ್ಯಮಂತ್ರಿ ಹಾಲಿ ಖೈದಿ ನಂ. 10462 ಡಾ. ಯಡಿಯೂರಪ್ಪನವರಿಗೆ, ಮತ್ತವರ ಮಂತ್ರಿಮಂಡಲಕ್ಕೇ ಸೇರಬೇಕು!

ಬಿಜೆಪಿ ಸರ್ಕಾರದಲ್ಲಿ ಕಂಡು ಬಂದ ಸಾಲು ಸಾಲು ಹಗರಣಗಳಿಗೆ ಈಗ ಹೊಸ ಸೇರ್ಪಡೆ ಎಂದರೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು KIADBಯೊಂದಿಗೆ ಸೇರಿ ಮಾಡಿರುವ ಫೋರ್ಜರಿ ಭೂಹಗರಣ.

ವಾಸ್ತವವಾಗಿ, KIADB ಎನ್ನುವುದೇ ಸರ್ಕಾರದ ರಿಯಲ್ ಏಜೆಂಟ್ ಕಂಪನಿ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಶುರು ಆಗಿದ್ದು 1966ರಲ್ಲಿ. ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ಮಾಡುವುದಕ್ಕೆ ಮತ್ತು ಆ ಜಮೀನುಗಳನ್ನು ಕೈಗಾರಿಕೊದ್ಯಮಿಗಳಿಗೆ ಹಂಚುವುದಕ್ಕೆ ಇರುವುದು ಈ ಸಂಸ್ಥೆಯೆ. ಈ ಸಂಸ್ಥೆಗೆ ಪ್ರತ್ಯೇಕ ಕಾನೂನೂ ಇದೆ. ಕಳೆದ 50-60 ವರ್ಷಗಳಲ್ಲಿ ರಾಜ್ಯದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಅದು ಭೂಮಿ ಕಳೆದುಕೊಂಡವರಿಗೆ ಕೊಡುವ ಪರಿಹಾರ ಮತ್ತು ಪುನರ್‌ವಸತಿಯೂ ಮಾನವೀಯ ನೆಲೆಯಲ್ಲಿ ಇಲ್ಲ.

ಇನ್ನು, ಕೈಗಾರಿಕೆ ಸ್ಥಾಪಿಸುವ ಹೆಸರಿನಲ್ಲಿ ಅಕ್ವೈರ್​ ಮಾಡಿಕೊಂಡಿರುವ ಭೂಮಿಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಉದ್ದಿಮೆಗಳು ಆರಂಭವಾಗಿಲ್ಲ. ಬೆಂಗಳೂರು ಸುತ್ತಮುತ್ತ ಬಿಟ್ಟರೆ ಬೇರೆ ಕಡೆ ಸ್ವಾಧೀನ ಮಾಡಿಕೊಂಡಿರುವ ಪ್ರದೇಶಗಳು ಈಗಲೂ ಪಾಳು ಬಿದ್ದಿವೆ. ಶೇ.35 ರಷ್ಟು ಪ್ರದೇಶ ಖಾಲಿ ಇದ್ದರೆ, ಶೇ.25 ರಷ್ಟು ಮಾತ್ರ ಬಳಕೆ ಆಗುತ್ತಿವೆ. 30 ವರ್ಷದ ಹಿಂದೆ ಅಭಿವೃದ್ಧಿ ಪಡಿಸಿದ ಪ್ರದೇಶಗಳಲ್ಲಿ ಆರಂಭವಾಗಿರುವ ಶೇ.40ರಲ್ಲಿ ಶೇ.50 ಕೈಗಾರಿಕೆಗಳು ಈಗಾಗಲೇ ಮುಚ್ಚಿ ಹೋಗಿವೆ. ಆದರೂ ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದು ನಿಂತಿಲ್ಲ.

ಜೊತೆಗೆ ಲಂಚ ತೆಗೆದುಕೊಂಡು ಪ್ರೈಮ್ ಲ್ಯಾಂಡ್ ಅನ್ನು ಡಿನೋಟಿಫೈ ಮಾಡುವ, , ಕಳ್ಳ ದಾಖಲೆಗಳನ್ನು ಸೃಷ್ಟಿಸಿ ಇಲ್ಲದ ಜಮೀನಿಗೆ ಪರಿಹಾರದ ಹಣ ಹೊಡೆಯುವ,  ಒಂದು ವ್ಯವಸ್ಥಿತ ಜಾಲವೇ ಇಲ್ಲಿದೆ.

ಇಂತಹ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಜವಾಗಿಯೇ ಕೈಗಾರಿಕೆ ಸಚಿವರ ಅಧೀನದಲ್ಲಿ ಬರುತ್ತದೆ. ಹೀಗಾಗಿ ಆ ಸಚಿವರು ಹೇಳಿದುದನ್ನು ಮಂಡಳಿ ಪಾಲಿಸಬೇಕು. 80, 90ರ ದಶಕದಲ್ಲಿದ್ದ ಕೈಗಾರಿಕೆ ಮಂತ್ರಿಗಳು ಭೂಸ್ವಾಧೀನಕ್ಕೆ ಮತ್ತು ಅಲ್ಲಿಯ ಭ್ರಷ್ಟಾಚಾರಕ್ಕೆ ಅಂತಹ ಮಹತ್ವವನ್ನಾಗಲಿ ಪ್ರೋತ್ಸಾಹವನ್ನಾಗಲಿ ಕೊಟ್ಟಿರಲಿಲ್ಲ. ರಾಜ್ಯಕ್ಕೆ ಕೈಗಾರಿಕೆಗಳನ್ನು ತಂದು ರಾಜ್ಯವನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ನೈಜ ಕಾಳಜಿ ಮತ್ತು ತಾತ್ವಿಕತೆ ಅವರಲ್ಲಿತ್ತು. ಆದರೆ ಇತ್ತೀಚಿನ ದಶಕದಲ್ಲಿ ಆಗಿದ್ದೇ ಬೇರೆ. ಅನೈತಿಕ ಕಳ್ಳರು, ವಂಚಕರೆಲ್ಲ ಅಧಿಕಾರ ಸ್ಥಾನವನ್ನು ಹಿಡಿದಿದ್ದರ ಮತ್ತು ಅವರು ಸಿಕ್ಕಿಹಾಕಿಕೊಳ್ಳದ್ದರ ಪರಿಣಾಮ ಇದು.

‘ಅಭಿವೃದ್ಧಿ’ ಎನ್ನುವ ಆ ಬಡಪಾಯಿ ಪದವನ್ನು ಅದೆಷ್ಟು ಸಲ ಆಡಿದ್ದರೋ ಯಡಿಯೂರಪ್ಪನವರು? ಆದರೆ ಅವರು ಮತ್ತು ಅವರ ಪಟಾಲಂ ಸೇರಿ ‘ಅಭಿವೃದ್ಧಿ’ಯ ಹೆಸರಲ್ಲಿ ಮಾಡಿದ ಎಲ್ಲಾ ಭಾನಗಡಿಗಳು ಒಂದಲ್ಲಾ ಒಂದು ದಿನ ಬಯಲಾಗಲೇಬೇಕು.

ಈಗ, ತೀರಾ ಇತ್ತೀಚೆಗೆ ಬಯಲಾಗಿರುವ ಹಗರಣ ಮಾಜಿ ಮುಖ್ಯಮಂತ್ರಿಯವರು ರಾಜ್ಯದ ಕೈಗಾರಿಕಾ ‘ಪ್ರಗತಿ’ಯ ದೃಷ್ಟಿಯಿಂದ ವಿಶ್ವ ಹೂಡಿಕೆದಾರರ ಸಮಾವೇಶವನ್ನು ನಡೆಸಿದ್ದರ ಸುತ್ತ ನಡೆದಿರುವಂತಾದ್ದು. ಭಾರೀ ಪ್ರಚಾರ ಮಾಡಿ ನಡೆಸಿದ ಆ ಹೂಡಿಕೆದಾರರ ಸಮ್ಮೇಳನಕ್ಕೆ ಉತ್ಸುಕತೆಯಿಂದ ಆಗಮಿಸಿದ್ದ ನೂರಾರು ಕೈಗಾರಿಕೋದ್ಯಮಿಗಳಿಗೆ ‘ಚಂದ್ರನನ್ನೇ ತಂದಿಳಿಸುವ’ ಭರವಸೆಯನ್ನು ಸರ್ಕಾರ ನೀಡಿದ್ದರೂ ಕೊನೆಗೆ ಎಂಥಾ ಚೊಂಬುಗಳನ್ನೂ ನೀಡಲಾಗಿತ್ತು ಎನ್ನುವುದಕ್ಕೆ ಈಗ ದಾಖಲೆಗಳು ಸಿಗುತ್ತಿವೆ.

2010ರಲ್ಲಿ ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ದೊಡ್ಡ ದೊಡ್ಡ ಯೋಜನೆಗಳಿಗೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯ ಸುತ್ತಮುತ್ತ ಸುಮಾರು 6000 ಎಕರೆಗಳನ್ನು ಉದ್ಯಮಿಗಳಿಗೆ ಕೊಡುವ ಸಲುವಾಗಿ ಸರ್ಕಾರವು ಭೂಸ್ವಾಧೀನ ನಡೆಸಿದೆ ಎಂದು ಘೋಷಿಸಲಾಗಿತ್ತು. ಈ ಸಮ್ಮೇಳನದಲ್ಲಿ ಭಾಗವಹಿಸಿದ ಹಲವಾರು ಕಂಪನಿಗಳಲ್ಲಿ ‘ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಕೂಡಾ ಒಂದು. ಹೀಗೆ ಅಂದು ಉತ್ಸಾಹದಿಂದ ಭಾಗವಹಿಸಿದ್ದ ಈ ಕಂಪನಿಯ ಒಡೆಯ ಪಾಶ್  ಅವರಿಗೆ ಅಂದು ತಾವು ಎಂಥಾ ಗುಂಡಿಯಲ್ಲಿ ಬಿದ್ದಿದೆವು ಎಂಬ ಅನುಭವ ಇದೀಗ ಆಗುತ್ತಿದೆ. ತಾವು ಭಾರೀ ವಂಚನೆಗೊಳಗಾಗಿರುವ ಸಂಗತಿ ಪಾಶ್ ಅರಿವಿಗೆ ಬಂದು ಸರ್ಕಾರದಿಂದ ತಮಗಾದ ಅನ್ಯಾಯದ ವಿರುದ್ಧ ಯಡಿಯೂರಪ್ಪ ಹಾಗೂ ಮುರುಗೇಶ್ ನಿರಾಣಿಯವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ಬಗ್ಗೆ ತನಿಖೆ ನಡೆದಲ್ಲಿ ಕಟ್ಟಾ, ಗಾಲಿ ಜನಾರ್ಧನ ರೆಡ್ಡಿ, ಯಡ್ಡಿ ಜೊತೆ ನಿರಾಣಿಯವರೂ ‘ಕ್ಯೂ’ನಲ್ಲಿ ನಿಲ್ಲಬೇಕಾಗುತ್ತದೆ.

ಪ್ರಕರಣ ಏನು?
ಆಲಂ ಪಾಶಾ ಹುಟ್ಟುಹಾಕಿದ್ದ “ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೈಟ್ ಲಿಮಿಟೆಡ್” 1999ರಲ್ಲಿ ಬೆಂಗಳೂರಿನ ಇಂದಿರಾ ನಗರದಲ್ಲಿ ತನ್ನ ಕಛೇರಿಯನ್ನು ಸ್ಥಾಪಿಸಿಕೊಂಡಿತ್ತು. ಇದು ಮೂಲಸೌಕರ್ಯ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿಕೊಂಡು ಬರುತ್ತಿದೆ. ದೇವನಹಳ್ಳಿ ಬಳಿ ಇರುವ ಹಾರ್ಡ್‌ವೇರ್ ಪಾರ್ಕಿನಲ್ಲಿ ಒಟ್ಟು 26 ಎಕರೆ ಜಮೀನನ್ನು ಪಾಶಾ ಅವರ ಕಂಪನಿಗೆ ಕೊಡುವ ಕುರಿತು ಒಪ್ಪಂದವಾಗಿತ್ತು. ಈ ಕಂಪನಿ ತಾನು 600 ಕೋಟಿ ರೂಪಾಯಿ ಬಂಡವಾಳ ಹೂಡಿ ಆರ್ಥಿಕವಾಗಿ ಹಿಂದುಳಿದವರಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೊಳ್ಳುವ ಕುರಿತು ಮಾತುಕೊಟ್ಟಿತ್ತು. 700 ಚದರಡಿಯಿಂದ 1000 ಚದರಡಿ ವಿಸ್ತೀರ್ಣದಲ್ಲಿ 3000 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಇದು. ಈ ಕಾಮಗಾರಿಯಲ್ಲಿ 500 ಜನರಿಗೆ ಉದ್ಯೋಗ ಸಿಗುತ್ತದೆ ಎಂದೂ ತಿಳಿಸಲಾಗಿತ್ತು. ಈ ಯೋಜನೆಗೆ 2010ರ ಜೂನ್ 19ರಂದು ಅಂದಿನ ಸಿಎಂ ಯಡಿಯೂರಪ್ಪ ಅವರ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಒಪ್ಪಿಗೆ ದೊರೆತಿತ್ತು. (ಅದರ ದಾಖಲೆ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.) ಇದರ ನಂತರ ಸರ್ಕಾರಿ ಆದೇಶವೂ ಆಗಿ GO ಪ್ರತಿ ಆಲಂ ಪಾಶಾ ಅವರ ಕೈ ಸೇರಿತ್ತು. 2010ರ ಅಕ್ಟೋಬರ್ 10 ರಂದು ಇಎಂಡಿ ಡಿಪಾಜಿಟ್, ಅಪ್ಲಿಕೇಶನ್ ಕೂಡಾ ಪಾಶಾ ಅವರ ಕೈ ಸೇರಿತ್ತು.

ಆದರೆ ಅಸಲಿಯತ್ತು ಬೇರೆಯದೇ ಆಗಿತ್ತು. ಯಾವಾಗ ಪಾಶಾ ಅವರು ತಮ್ಮ ಕಂಪನಿಯ ಸುಪರ್ದಿಗೆ ಬಂದಿದೆಯೆಂದುಕೊಂಡ ಜಮೀನನ್ನು ನೋಡಲಿಕ್ಕೆಂದು ಅದೇ ತಿಂಗಳಲ್ಲಿ ಹೋದರೋ ಅಲ್ಲಿ ಅವರಿಗೆ ಆಘಾತವೇ ಕಾದಿತ್ತು. ಜಮೀನಿಗೆ ಮಾಲೀಕರೇ ಅಲ್ಲದಿರುವವರೆಲ್ಲಾ ಸುತ್ತುವರೆದು, ಈ ಜಮೀನಿನಲ್ಲಿ ನಮ್ಮ ಷೇರೂ ಇದೆ, ಇದಕ್ಕೆ ಪೋಡಿನೂ ಆಗಿಲ್ಲ, ಈ ಏರಿಯಾಕ್ಕೆ ಯಾರೂ ಬರಕೂಡದು ಎಂದು ಆವಾಜ್ ಹಾಕಿಬಿಟ್ಟರು! ಇದೇನಿದು ಹೀಗಾಯ್ತು ಎಂದು ತಲೆಬಿಸಿ ಮಾಡಿಕೊಂಡ ಆಲಂ ಪಾಶ KIADB ಅಧಿಕಾರಿಗಳನ್ನ ಕೇಳಿದರೆ ಅಧಿಕಾರಿಗಳೇ ಇವರಿಗೆ ಕ್ಲಾಸ್ ತೆಗೆದುಕೊಳ್ಳುವುದೇ? ಅದೂ ಬರೀ ಬಾಯಿ ಮಾತಲ್ಲಿ ಅಲ್ಲ. ಪಾಶಾ ಅವರನ್ನು ಕರೆದು ‘ನಿಮ್ಮ ಹೆಸರಿಗೆ ಇದ್ದ ಆ ಯೋಜನೆ ರದ್ದಾಗಿದೆ. ನೀವೇ ಆ ಪ್ರಾಜೆಕ್ಟ್ ಮುಂದುವರೆಸಲಿಕ್ಕೆ ಇಷ್ಟ ಇಲ್ಲ ಎಂದು ಪತ್ರ ಬರೆದಿದ್ದಿರಲ್ಲ, ನೋಡಿ ಇಲ್ಲಿ’ ಒಂದು ಪತ್ರವನ್ನು ನೀಡಿದರು. (ಅದರ ಪ್ರತಿ ಇಲ್ಲಿದೆ.)

ಈ ಪತ್ರವನ್ನು ನೋಡಿದ್ದೇ ಪಾಶಾ ಅವರಿಗೆ ಉಮ್ಮಳಿಕೆ ಬಂದಂಗಾಗಿತ್ತು. ಅರೆ, ಇದೇನಿದು?! ತಮ್ಮದೇ ಕಂಪನಿಯ ಲೆಟರ್‌ಹೆಡ್, ತಮ್ಮದೇ ಸಹಿ! ತಮ್ಮ ಕಣ್ಣುಗಳಳನ್ನು ತಮಗೇ ನಂಬಲಿಕ್ಕಾಗುತ್ತಿಲ್ಲ. ಇದೆಲ್ಲಾ ಹೇಗೆ ಸಾಧ್ಯ?

ಅದು ಫೋರ್ಜರಿ ಪತ್ರ! ಸಚಿವ ನಿರಾಣಿ ಮನೆಯಲ್ಲಿ ತಯಾರಾದದ್ದು!!

ಈ ಪತ್ರ ಜನವರಿ 20, 2011ರ ದಿನಾಂಕದಲ್ಲಿದೆ. ಅದರಲ್ಲಿ, “…ದೇವನಹಳ್ಳಿಯ ‘ವ್ಯಾಲ್ಯೂ ಹೋಮ್ಸ್’ ಯೋಜನೆಯನ್ನು ಮುಂದುವರೆಸಲು ನಮಗೆ ಇಚ್ಛೆ ಇಲ್ಲದಿರುವುದರಿಂದ ನಮಗೆ ನೀಡಿದ ಆ ಅನುದಾನವನ್ನು ರದ್ದುಗೊಳಿಸಲು ಕೋರುತ್ತೇವೆ. ” ಎಂದಿದೆ.

ಸಂಶಯವೇ ಬೇಡ ಅದು ಪಾಶಾ ಅವರದ್ದೇ ಸಹಿ!!

ಆದರೆ, ಅಲಂ ಪಾಶಾ ಅವರು ಹೇಳುವ ಪ್ರಕಾರ, ಇಂತಹ ಒಂದು ಪತ್ರವನ್ನು ಅವರು ಬರೆದೇ ಇರಲಿಲ್ಲ. ಅವರೆಂದೂ ಈ ಯೋಜನೆಯನ್ನು ಕೈ ಬಿಡುವ ಯೋಚನೆಯನ್ನೂ ಮಾಡಿರಲಿಲ್ಲವೆಂದ ಮೇಲೆ ಇಂತಹ ಪತ್ರವನ್ನು ಹೇಗೆ ಬರೆಯಲು ಸಾಧ್ಯ?

ಇದನ್ನು ನೋಡಿ ಇಲ್ಲಿ ನಡೆದಿರುವ ಮಸಲತ್ತನ್ನು ಗ್ರಹಿಸಿದ ಪಾಶಾ ಅವರು ಇದರ ಬೆನ್ನಟ್ಟಿ ಹೋದಾಗ ಕೆಲವು ವಿಷಯಗಳು ಮನದಟ್ಟಾದವು.

ಜನವರಿ 24, 2011ಕ್ಕೆ ಅಂದಿನ ಮುಖ್ಯಮಂತ್ರಿ ಹಾಗೂ ಹೈ ಪವರ್ ಕಮಿಟಿ ಅಧ್ಯಕ್ಷ ಯಡಿಯೂರಪ್ಪ, ಕೈಗಾರಿಕಾ ಮಂತ್ರಿ ಹಾಗೂ ಕಮಿಟಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಸಭೆಯೊಂದು ನಡೆದಿತ್ತು.  ಅಲ್ಲಿ ಕೆಲ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿತ್ತು. ಆ ನಿರ್ಣಯಗಳನ್ವಯ ತರಾತುರಿಯಲ್ಲಿ ಸರ್ಕಾರಿ ಆದೇಶಾನೂ ಹೊರಡಿಸಲಾಗಿತ್ತು. ಅದರ ಪ್ರಕಾರ:

  • ಯೋಜನೆ ಮುಂದುವರೆಸಲು ಕಂಪನಿಗೆ ಇಷ್ಟವಿಲ್ಲ
  • ಪಾಶ್ ಕಂಪನಿಗೆ ನೀಡಿದ್ದ ಯೋಜನೆ ಕೈ ಬಿಡಬೇಕು
  • ಮೊದಲು ಹೊರಡಿಸಿದ್ದ ಅದೇಶ ರದ್ದುಗೊಳಿಸುವುದು
  • ಪಾಶ್ ಕಂಪನಿಗೆ 26 ಎಕರೆ ಹಸ್ತಾಂತರ ಮಾಡಬಾರದು
  • ಕೆಐಎಡಿಬಿಗೆ ಸಮಿತಿ ಸೂಚನೆ ನೀಡುವುದು.

ಇಂಥದ್ದೊಂದು ಸಭೆ ನಡೆಯುವ ಮಾಹಿತಿ ಸ್ವತಃ ಆ ಯೋಜನೆಯಲ್ಲಿ ಪಾಲುದಾರನಾಗಿರುವ  ಕಂಪನಿಯ ಎಂ.ಡಿ.ಗೇ ಇರಲಿಲ್ಲ. ಇಷ್ಟಿದ್ದರೂ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯು ಇಡೀ ಯೋಜನೆಯನ್ನೇ ರದ್ದುಕೊಳಿಸಿತ್ತು.

ಹೀಗೆ ಸ್ವತಃ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರೇ ಖುದ್ದಾಗಿ ನಿಂತು ಜಾಗತಿಕ ಹೂಡಿಕೆದಾರರ ಸಮ್ಮೇಳನಲ್ಲಿ ಒಪ್ಪಿಗೆಯಾಗಿದ್ದ ಈ ಯೋಜನೆಯನ್ನು ಯಾವ ಕಾರಣಕ್ಕಾಗಿ ಹಾಗೂ ಯಾರ ಕಾರಣಕ್ಕೆ ಹಿಂತೆಗೆದುಕೊಳ್ಳಲು ವಾಪಾಸು ಪಡೆಯುವ ತಂತ್ರ ಮಾಡಿದರು, ಯಾರ ಭೂದಾಹ ಇಲ್ಲಿ ಕೆಲಸ ಮಾಡಿತ್ತು ಇವೆಲ್ಲಾ ಈಗ ತನಿಖೆಯಾಗಬೇಕಿದೆ.

ಹೀಗೆ ಯಾವುದೋ ಹಿತಾಸಕ್ತಿಯಿಂದ ಈ ಯೋಜನೆಯನ್ನು ರದ್ದು ಮಾಡಿರುವ ದೊಡ್ಡ ಮನುಷ್ಯರು ಅದನ್ನು ದಾಖಲೆ ಸಮೇತ ಮಾಡಬೇಕೆಂದು ಭಯಂಕರ ಬುದ್ಧಿ ಉಪಯೋಗಿಸಿ ಸೃಷ್ಠಿ ಮಾಡಿದ್ದೇ ಆ ಫೋರ್ಜರಿ ಲೆಟರ್. ಅದು ಬೇರೆಲ್ಲೂ ತಯಾರಾಗದೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರ ಮನೆಯಲ್ಲೇ ಯೋಜಿತಗೊಂಡು ತಯಾರಾಗಿದೆ ಎನ್ನುವುದು ಪಾಶಾ ಅವರ ಅಭಿಮತ. ಇಡೀ ರಾಜ್ಯದ ಅಧಿಕಾರವೇ ತಮ್ಮ ಕೈಯಲ್ಲಿರುವಾಗ ತಾವು ಏನೇ ಮಾಡಿದರೂ ಯಾರೂ ತಮ್ಮನ್ನು ಏನೂ ಮಾಡಲಾರರು ಎಂಬ ಧಾರ್ಷ್ಟ್ಯವೇ ಇವರನ್ನು ಹೀಗೆ ಮಾಡಿಸಿದೆ. ಪಾಶ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೈಟ್ ಲಿಮಿಟೆಡ್‌ನ ಲೆಟರ್ ಹೆಡ್‌ನ್ನು ಅಂತರ್ಜಾಲದ ಸಹಾಯದಿಂದ ಡೌನ್ ಲೋಡ್ ಮಾಡಿಕೊಳ್ಳಲಾಗಿದೆ. ಕಂಪನಿಯ ಎಂ.ಡಿ.ಪಾಶಾ ಅವರ ಸಹಿಯನ್ನು ಸ್ಕ್ಯಾನ್ ಮಾಡಿ, ಝೆರಾಕ್ಸ್ ಮಾಡ್ಕೊಂಡಿರುವ ಲೆಟರ್‌ನಲ್ಲಿ ಮ್ಯಾನುಯಲ್ ಟೈಪಿಂಗ್ ಮಾಡಲಾಗಿದೆ. ಆಲಂ ಪಾಶ ಅವರು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದಾರೆ ಎಂದು ಹೇಳುವ ಈ ಫೋರ್ಜರಿ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಜನವರಿ 24ರಂದು ನಡೆದ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮೇಲೆ ತಿಳಿಸಿದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಪತ್ರ ಉದ್ಯೋಗ ಮಿತ್ರ ಇಲಾಖೆ ಕೈ ಸೇರಿದ್ದು ಫೆ.1, 2011ಕ್ಕೆ. ಸರ್ಕಾರದ ನೋಂದಣಿ ಪುಸ್ತಕದಲ್ಲೇ ಉಲ್ಲೇಖ ಮಾಡಿ ಪತ್ರದ ಮೇಲೆ ಸೀಲು ಮತ್ತು ಡೇಟೂ ನಮೂದಾಗಿದೆ. ಅಂದರೆ  ಪತ್ರ ಕೈ ಸೇರುವ 7 ದಿವಸ ಮೊದಲೇ ಸರ್ಕಾರ ಪೂರ್ವನಿಯೋಜಿತವಾಗಿ ತೀರ್ಮಾನ ತೆಗೆದುಕೊಂಡಿರುವುದು ಸ್ಫಟಿಕ-ಸ್ಪಷ್ಟ.

ಇದೆಲ್ಲಾ ತಿಳಿದ ತಕ್ಷಣ ಕಂಪನಿ ತಕರಾರು ತೆಗೆಯಿತು. ಸರ್ಕಾರಕ್ಕೆ ಗಂಭೀರವಾಗಿ ಪತ್ರವನ್ನೂ ಬರೆಯಿತು.  ಈ ವಿಷಯ ರಾಜ್ಯಪಾಲರ ಮನೆಗೂ ಹೋಯಿತು. ಆಗ ದಿಗಿಲುಗೊಂಡ ಯಡಿಯೂರಪ್ಪ ಮತ್ತು ನಿರಾಣಿ ಇದೊಳ್ಳೆ ಕೆಲಸ ಕೆಟ್ಟಿತಲ್ಲಾ ಎಂದುಕೊಂಡು  ಇಡೀ ಪ್ರಕರಣಕ್ಕೆ ತೇಪೆ ಹಾಕುವ ಕೆಲಸ ಮಾಡಿದರು.

ಪಾಶ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿದ್ದ ಯೋಜನೆಯನ್ನು ಕೈ ಬಿಡುವ ಬಗ್ಗೆ ಹೊರಡಿಸಿದ್ದ 2ನೇ ಆದೇಶವನ್ನ ನಿರಾಣಿ ನೇತೃತ್ವದ ಅಧಿಕಾರಿಗಳ ತಂಡ ಹಿಂದಕ್ಕೆ ಪಡೆಯಿತು. ಯೋಜನೆ ಮಂಜೂರಾಗಿದೆ ಅಂತ ಮೊದಲೇ ಹೊರಡಿಸಿದ್ದ ಆದೇಶವನ್ನೇ ರೆಸ್ಟೋರ್ ಮಾಡಲಾಗುತ್ತದೆಯೆಂದೂ ಆದರೆ ಇದನ್ನು ಇನ್ನೊಮ್ಮೆ ನಡೆಯುವ ಹೈಪವರ್ ಕಮಿಟಿ ಸಭೆಯಲ್ಲಿ ಅಧಿಕೃತವಾಗಿ ಆದೇಶ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೂಚಿಸಿದರು.  ಅದರಂತೆ ಜೂನ್ 24, 2011 ರಂದು ನಡೆದ ಸಭೆಯಲ್ಲಿ ಕಂಪನಿ ಪ್ರತಿನಿಧಿಯೂ ಭಾಗವಹಿಸಿದ್ದರು. ಆದರೆ ಅವರು ಒಪ್ಪಿಕೊಂಡಿದ್ದ ಪ್ರಕಾರ ಹಳೆಯ ಆದೇಶಕ್ಕೆ ಮಾನ್ಯತೆ ನೀಡಲೇ ಇಲ್ಲ. ತಾವು ಮೊದಲ ಬಾರಿ ರದ್ದು ಮಾಡಿದ್ದಕ್ಕೆ ಕೊಟ್ಟ ಕಾರಣಗಳ ಬಗ್ಗೆಯಾಗಲಿ, ಪಾಶಾರವರು ಕೊಟ್ಟಿದ್ದ ಫೋರ್ಜರಿ ದೂರಿನ ಬಗ್ಗೆ ತನಿಖೆಯಾಗಬೇಕಾದ ಅಗತ್ಯತೆಯ ಬಗ್ಗೆಯಾಗಲಿ ತೀರ್ಮಾನ ಮಾಡಲಿಲ್ಲ. ಬಹುಶ: ಅಂತಹ ನ್ಯಾಯ ಮತ್ತು ನೈತಿಕತೆ ಆ ಸಭೆಯಲ್ಲಿದ್ದವರಿಗೆ ಶೂನ್ಯಪ್ರಮಾಣದಲ್ಲಿ ಇತ್ತು ಎನಿಸುತ್ತದೆ. ಈಗ ಈ ಯೋಜನೆ ಯಾವ ಹಂತದಲ್ಲಿ ಇದೆ ಎನ್ನುವುದೇ ಪಾಶಾರವರಿಗೆ ಗೊತ್ತಾಗುತ್ತಿಲ್ಲ. ಯಾಕೆಂದರೆ ಮೂಲಒಪ್ಪಂದವನ್ನು ಗೌರವಿಸಬೇಕೆಂಬ ಆದೇಶವನ್ನು ಸರ್ಕಾರ ratify ಮಾಡುತ್ತಿಲ್ಲ. KIADB ಜಮೀನು ಸ್ವಾಧೀನಕ್ಕೆ ಕೊಡುತ್ತಿಲ್ಲ.

ಹೀಗೆ ಮತ್ತೆ ತಮಗೆ ಅನ್ಯಾಯ ಮಾಡಿದ ಸರ್ಕಾರ ಮತ್ತು ಮುರುಗೇಶ್ ನಿರಾಣಿಯವರ ವಿರುದ್ಧ ಕಂಪನಿ ಈಗ ಕಾನೂನು ಸಮರ ಸಾರಿದೆ. ಇದಕ್ಕಾಗಿ ಅವರು ಸಾಕಷ್ಟು ದಾಖಲೆಗಳನ್ನೂ ಕಲೆ ಹಾಕಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆ ನಡೆದರೆ ನೇರವಾಗಿ ಮುರುಗೇಶ್ ನಿರಾಣಿಯವರನ್ನು ಮತ್ತು KIADBಯನ್ನು ಸುತ್ತಿಕೊಳ್ಳುವ ಈ ಫೋರ್ಜರಿ ಪ್ರಕರಣದಲ್ಲಿ ಭೂಹಗರಣದ ಮತ್ತಷ್ಟು ಸತ್ಯ ಮತ್ತು ನಮ್ಮನ್ನು ಆಳುತ್ತಿರುವ ಈ ಸರ್ಕಾರದ ಅಧಿಕೃತ modus operandi ಯೇ ಹೊರಬೀಳಬಹುದು.

ಆದರೆ, ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ರಾಜೀನಾಮೆ ನೀಡಿ, ಕೇವಲ ಒಬ್ಬ ಉಪಲೋಕಾಯುಕ್ತರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೋಕಾಯುಕ್ತ ಸಂಸ್ಥೆ ಈಗಾಗಲೆ ಅನೇಕ ಹಗರಣಗಳ ವಿಚಾರಣೆಯಲ್ಲಿ ತೊಡಗಿಕೊಂಡಿದೆ. ಬಹುಶಃ ಆ ಸಂಸ್ಥೆಯಲ್ಲಿರುವ  ಪ್ರಾಮಾಣಿಕ ಅಧಿಕಾರಿಗಳಿಗೆ ಇದು ಬಹಳ ವ್ಯಸ್ತ ಕಾಲ. ದಿನದ 24 ಗಂಟೆ ದುಡಿದರೂ ಅವರಿಗೆ ರಾಜ್ಯದ ಭ್ರಷ್ಟಾಚಾರದ ಮೇಲಿನ ಹಗರಣಗಳ ವಿಚಾರಣೆ ಮುಗಿಯುವುದೇ ಇಲ್ಲವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಸದರಿ ಪ್ರಕರಣದ ಮೇಲಿನ ವಿಚಾರಣೆಯನ್ನು ಅದು ಯಾವ ವೇಗದಲ್ಲಿ ನಡೆಸುತ್ತದೆ ಎನ್ನುವುದೇ ಸದ್ಯದ ಪ್ರಶ್ನೆ.

ರಥಯಾತ್ರೆ ಎಂಬ ವೃದ್ಧಾಪ್ಯದ ವ್ಯಸನ

-ಡಾ. ಎನ್.ಜಗದೀಶ್ ಕೊಪ್ಪ

ವ್ಯಯಕ್ತಿಕವಾಗಿ ಹಾಗೂ ತಾತ್ವಿಕವಾಗಿ ನಮ್ಮ ಸಿಟ್ಟು ಮತ್ತು ತಕಾರಾರುಗಳು ಏನೇ ಇರಲಿ ಭಾರತೀಯ ಜನತಾ ಪಾರ್ಟಿ ಎಂಬ ಪಕ್ಷದಲ್ಲಿ ಗೌರವಿಸಬೇಕಾದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು ವಾಜಪೇಯಿ, ಮತ್ತೊಬ್ಬರು ಎಲ್.ಕೆ.ಅಧ್ವಾನಿ. ಈ ಇಬ್ಬರು ಮಹನೀಯರು ತಮ್ಮ ತತ್ವ ಸಿದ್ಧಾಂತಗಳ ಜೊತೆಗೆ, ಸಾರ್ವಜನಿಕ ಬದುಕಿನಲ್ಲಿ ಒಬ್ಬ ರಾಜಕಾರಣಿಗೆ ಇರಬೇಕಾದ ಬದ್ಧತೆ, ಪ್ರಾಮಾಣಿಕತೆ, ಶುದ್ಧ ಚಾರಿತ್ರ್ಯ, ಇವುಗಳನ್ನು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದವರು.

ವಾಜಪೇಯಿ ಈ ದೇಶದ ಪ್ರಧಾನ ಮಂತ್ರಿಯ ಹುದ್ದೆ ಅಲಂಕರಿಸಿ ವೃದ್ಧಾಪ್ಯದ ಕಾರಣಕ್ಕಾಗಿ ರಾಜಕೀಯದಿಂದ ನಿವೃತ್ತಿಗೊಂಡಿದ್ದರೆ, ಕಳೆದ ಒಂದು ದಶಕದಿಂದ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾದ ಅಧ್ವಾನಿಯವರು ಇದೀಗ ತಮ್ಮ ಪಕ್ಷದಲ್ಲಿ ಹುದ್ದೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಬಿ.ಜೆ.ಪಿ. ಪಕ್ಷದ ವರ್ತಮಾನದ ವಾಸ್ತವ.

10 ವರ್ಷದ ಹಿಂದೆ “ಭಾರತ ಬೆಳುಗುತಿದೆ” ಎಂಬ ಘೋಷಣೆ ಇಟ್ಟುಕೊಂಡು ಎಷ್ಟೇ ಪ್ರಚಾರ ಮಾಡಿದರೂ ಎನ್.ಡಿ.ಎ. ಮೈತ್ರಿಕೂಟವನ್ನು ಭಾರತೀಯ ಮತದಾರ ತಿರಸ್ಕರಿಸಿ, “ಅಮ್ ಆದ್ಮಿ” ಎಂಬ ಘೋಷಣೆಗೆ ಒಲಿದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ. ಇದರಿಂದಾಗಿ ಮುಂದಿನ ಪ್ರಧಾನಿ ಎಂದು ಎಲ್ಲೆಡೆ ಪ್ರತಿಬಿಂಬಿಸಿದ್ದ ಅಧ್ವಾನಿ ಕನಸು ನುಚ್ಚು ನೂರಾಯಿತು. ಆದರೆ, ಅವರು ಎದೆಗುಂದಲಿಲ್ಲ. 84ರ ಈ ಇಳಿ ವಯಸ್ಸಿನಲ್ಲೂ ತಮ್ಮ ಆರೋಗ್ಯ ಮತ್ತು ತತ್ವ ಸಿದ್ದಾಂತಗಳನ್ನು ಕಾಪಾಡಿಕೊಂಡು ಬಂದು ಮತ್ತೊಮ್ಮೆ ರಥಯಾತ್ರೆ ಮೂಲಕ ಯುದ್ಧಕ್ಕೆ ಅಣಿಯಾಗಿದ್ದಾರೆ.

ಸೋಜಿಗದ ಸಂಗತಿಯೆಂದರೆ, ಪಕ್ಷಕ್ಕೆ ಮರಳಿರುವ ಉಮಾಭಾರತಿ ಹೊರತಪಡಿಸಿದರೆ, ಯಾವೊಬ್ಬ ರಾಷ್ಟ್ರೀಯ ನಾಯಕರು ಅಧ್ವಾನಿ ನಮ್ಮ ಪಕ್ಷದ ಮುಂದಿನ ಪ್ರಧಾನಿ ಎಂದು ಹೇಳಲು ಸಿದ್ಧರಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ತೆರೆಮರೆಯಲ್ಲಿ ಪ್ರಧಾನಿ ಹುದ್ದೆಗೆ ಪೈಪೋಟಿ ನಡೆಸಿರುವುದು ಅಧ್ವಾನಿಯವರಿಗೆ ನುಂಗಲಾರಾದ ತುತ್ತಾಗಿದೆ. ಯು.ಪಿ.ಎ. ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಎಂದು ಅವರು ಘೋಷಿಸಿಕೊಂಡಿದ್ದರೂ, ಇದು ತಮ್ಮ ಅಸ್ತಿತ್ವಕ್ಕಾಗಿ ಅಧ್ವಾನಿ ನಡೆಸಿರುವ ಹೋರಾಟ ಎಂಬುದನ್ನ ಎಲ್ಲರೂ ಬಲ್ಲರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಬಿ.ಜೆ.ಪಿ ಪಕ್ಷದಿಂದ ಕಿತ್ತುಕೊಂಡಿರುವ ನಮ್ಮ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲಾ  ಮುಖಂಡರ ಬಾಯಿಗೆ ಬೀಗ ಜಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಕರ್ನಾಟಕ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕ ತಲೆತಗ್ಗಿಸುವಂತಹದ್ದು.

ಇವತ್ತಿಗೂ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗಾಲಿ ಜನಾರ್ಧನರೆಡ್ಡಿ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ದು, ಕೃಷ್ಣಯ್ಯ ಶೆಟ್ಟಿ, ಮೊಕದ್ದಮೆ ಎದುರಿಸುತ್ತಿರುವ ಶಾಸಕ ಸಂಪಂಗಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸಲು ಸಿದ್ದವಾಗುತ್ತಿರುವ ಹಾಲಪ್ಪ, ಇವರನ್ನು ನೈತಿಕತೆಯ ಆಧಾರದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗದಿರುವ ಸ್ಥಿತಿಯಲ್ಲಿ ಪಕ್ಷ ಇರುವಾಗ ಭ್ರಷ್ಠಾಚಾರದ ಕುರಿತು ಬಿ.ಜೆ.ಪಿ ನಾಯಕರು ಮಾತನಾಡುವುದು ನಿಜಕ್ಕೂ ನಗೆಪಾಟಿಲಿನ ಸಂಗತಿ.

ಆರೋಪಿ ಮತ್ತು ಆಪಾದಿತ ಎಂಬ ಕಾನೂನಿನ ಪರಿಭಾಷೆಯ ಪದಗಳನ್ನು ರಕ್ಷಣೆಗೆ ಗುರಾಣಿ ಮಾಡಿಕೊಂಡಿರುವ ಬಿ.ಜೆ.ಪಿ ಪಕ್ಷ ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಎಂಬ ಅನೈತಿಕಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿ ಉಪಚುನಾವಣೆಗಳ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನ ಖರ್ಚು ಮಾಡಿಸಿದ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ. (ಕೊಪ್ಪಳ ಉಪಚುನಾವಣೆಗೆ ಖರ್ಚಾದ ಹಣದಮೊತ್ತ 65 ಲಕ್ಷ ರೂಪಾಯಿ, ಇದು ಚನಾವಣಾ ಆಯೋಗ ಸಿಬ್ಬಂದಿಗಾಗಿ ಖರ್ಚು ಮಾಡಿದ ಹಣ.)

ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯ ಬಿ.ಜೆ.ಪಿ. ನಾಯಕರು ನಮ್ಮ ಸಂವಿಧಾನದ ಮೂಲ ಆಧಾರಗಳಾದ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವವನ್ನು ಮರೆತು ರಾಜ್ಯದ ವಿ.ವಿ.ಗಳಿಗೆ ಉಪಕುಲಪತಿಗಳ ನೇಮಕ ಹಾಗೂ ಇತರೆ ಉನ್ನತ ಹುದ್ದೆಗಳ ನೇಮಕದಲ್ಲಿ ಒಂದೇ ಜಾತಿಗೆ ಪ್ರಾಧಾನ್ಯ ನೀಡಿದ್ದರ ಬಗ್ಗೆ ಜೊತೆಗೆ ಎಗ್ಗಿಲ್ಲದೆ ಮಠ ಮಾನ್ಯಗಳಿಗೆ ಪ್ರಸಾದದಂತೆ ರಾಜ್ಯ ಬೊಕ್ಕಸದ ಹಣವನ್ನು ಹಂಚಿದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳ್ಲಬೇಕಾಗಿದೆ.

ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪನವರ ನಂತರ, ಧಾರ್ಮಿಕ ನಾಯಕನ್ನು ಹೊರತು ಪಡಿಸಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಯಾವುದೇ ರಂಗದಲ್ಲಿ ಒಬ್ಬ ಗಣ್ಯ ವೈಕ್ತಿ ಬಿ.ಜೆ.ಪಿ ಸರ್ಕಾರಕ್ಕೆ ಏಕೆ ಸಿಗಲಿಲ್ಲ?

ಕರ್ನಾಟಕದ ಬೆಳವಣಿಗೆ ಕುರಿತು ಮೊದಲಿನಿಂದಲೂ ಅಸಮಾಧಾನ ವ್ಯಕ್ತ ಪಡಿಸಿದ ಏಕೈಕ ನಾಯಕರೆಂದರೆ ಎಲ್.ಕೆ. ಅಧ್ವಾನಿ ಮಾತ್ರ. ಅವರ ಮಾತಿಗೆ ಪಕ್ಷ ಮೊದಲೇ ಬೆಲೆ ನೀಡಿದ್ದರೆ, ಪಕ್ಷಕ್ಕೆ ಇಂದು ರಾಷ್ಟಮಟ್ಟದಲ್ಲಿ ಈ ರೀತಿಯ ಮುಜುಗರ ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ.

ಪಕ್ಷದ ರಾಷ್ಟೀಯ ಅಧ್ಯಕ್ಷರಾದ ನಿತೀನ್ ಗಡ್ಕರಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ರಾಜ್ಯ ನಾಯಕರ ಜೊತೆ ಚೌಕಾಶಿ ಶುರುವಿಟ್ಟುಕೊಂಡು ನಾಗಪುರದಲ್ಲಿ ತಮ್ಮ ಪುತ್ರನ ವಿವಾಹಕ್ಕೆ 13 ಕೋಟಿ ರೂ.ಹಣ ಖರ್ಚು ಮಾಡಿದಾಗಲೇ ಪಕ್ಷ ವಾಜಪೇಯಿ ಮತ್ತು ಅಧ್ವಾನಿ ಕಾಲದಲ್ಲಿ ಕಾಪಾಡಿಕೊಂಡು ಬಂದಿದ್ದ ನೈತಿಕತೆಯ ನೆಲೆಗಟ್ಟು ಕುಸಿದು  ಹೋಗಿದೆ ಎಂದು ನಾಗರೀಕರಿಗೆ ಮನದಟ್ಟಾಗಿ ಹೋಯಿತು.

ಇಂತಹ ದಯನೀಯ ಸ್ಥಿತಿಯಲ್ಲಿ ಮುಂದಿನ ಪ್ರಧಾನಿಯಾಗಲು ಹೊರಟಿರುವ ಪಕ್ಷದ ಹಿರಿಯ ನಾಯಕ ಅಧ್ವಾನಿಯವರ ಹಾದಿ ಸುಗುಮವಾಗಿಲ್ಲ. ಕಾಲ ಬದಲಾದಂತೆ ತಲೆಮಾರುಗಳ ಚಿಂತನೆ ಕೂಡ ಬದಲಾಗುತ್ತಿದೆ. ಈ ಕಟು ವಾಸ್ತವ ಸ್ಥಿತಿಯನ್ನು ಅಧ್ವಾನಿಯವರು ಜೀರ್ಣಿಸಿಕೊಳ್ಳಬೇಕಾಗಿದೆ.