Daily Archives: October 9, 2011

ಜೀವನದಿಗಳ ಸಾವಿನ ಕಥನ – 6

– ಡಾ.ಎನ್.ಜಗದೀಶ್ ಕೊಪ್ಪ

ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ನಡೆಯುವ ತೀವ್ರತರವಾದ ರಾಸಾಯನಿಕ ಕ್ರಿಯೆಯಿಂದಾಗಿ ನೀರಿನ ಗುಣಮಟ್ಟದ ಬದಲಾವಣೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಜಲಾಶಯಗಳಲ್ಲಿ ತಿಂಗಳು ಇಲ್ಲವೆ ವರ್ಷಾನುಗಟ್ಟಲೆ ಶೇಖರವಾಗುವ ನೀರು ಜಲಚರಗಳಿಗಷ್ಟೇ ಅಲ್ಲ, ಅದು ಕುಡಿಯಲು ಹಾಗೂ ಕೃಷಿಚಟುವಟಿಕೆಗೆ ಬಳಸುವ ಗುಣಮಟ್ಟ ಹೊಂದಿರುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

ಸಾಮಾನ್ಯವಾಗಿ ಜಲಾಶಯದಿಂದ ಬಿಡುಗಡೆಯಾಗಿ ಹರಿಯುವ ನೀರು ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಬೆಚ್ಚಗಿನ ಉಷ್ಣಾಂಶವನ್ನು ಹೊಂದಿರುತ್ತದೆ. ಈ ರೀತಿಯ ಪ್ರಕ್ರಿಯೆ ನೀರಿನಲ್ಲಿ ಬಿಡುಗಡೆಯಾಗುವ ಆಮ್ಲಜನಕದ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಈ ವ್ಯತ್ಯಾಸದಿಂದಾಗಿ ಸಿಹಿ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಿದ್ದ ಸೀಗಡಿ ಹಾಗೂ ಅನೇಕ ಜಲಚರ ಪ್ರಭೇದಗಳಿಗೆ ಮಾರಕವಾಗಿದೆ.

ಜಲಾಶಯದಲ್ಲಿ ಮೊದಲ ವರ್ಷ ಶೇಖರಗೊಳ್ಳುವ ನೀರು, ಅತ್ಯಂತ ಹೆಚ್ಚಿನ ರೀತಿಯಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಭೂಮಿ, ಅಲ್ಲಿನ ಅರಣ್ಯ ಪ್ರದೇಶ, ಗಿಡ-ಮರ, ನೀರಿನಲ್ಲಿ ಸತ್ತ ಪ್ರಾಣಿಗಳ ಅವಶೇಷಗಳ ಕೊಳೆಯುವಿಕೆಯಿಂದಾಗಿ ನೀರಿನಲ್ಲಿ ಅತ್ಯಧಿಕ ಮಟ್ಟದ ಮಿಥೇನ್ ಅನಿಲ ಮತ್ತು ಇಂಗಾಲಾಮ್ಲ ಬಿಡುಗಡೆಯಾಗುತ್ತದೆ.

1964ರಲ್ಲಿ ದಕ್ಷಿಣ ಅಮೆರಿಕಾದ ಬ್ರೊಕೊಪಾಂಡೊ ಎಂಬ ಅಣೆಕಟ್ಟು ನಿರ್ಮಾಣವಾದಾಗ, ಸುರಿನಾಮ್ ಪ್ರದೇಶದ 1,500 ಚ.ಕಿ.ಮೀ. ಮಳೆಕಾಡು ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಯಿತು. ಜಲಾಶಯದಲ್ಲಿ ಮೊದಲ ವರ್ಷ ಶೇಖರವಾದ ನೀರಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅತ್ಯಧಿಕ ಮಟ್ಟದಲ್ಲಿ ಉತ್ಪಾದನೆಯಾದ್ದರಿಂದ ನೀರಿನ ದುರ್ವಾಸನೆಯಿಂದಾಗಿ, ಮೊದಲ ಎರಡು ವರ್ಷಗಳ ಕಾಲ ಅಣೆಕಟ್ಟು ನಿರ್ವಹಣಾ ಸಿಬ್ಬಂಧಿ ಮುಖವಾಡ ತೊಟ್ಟು ಕಾರ್ಯ ನಿರ್ವಹಿಸಬೇಕಾಯಿತು. ಜೊತೆಗೆ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ಇಂಜಿನ್ನಿಗೆ ಕೊಳವೆ ಮೂಲಕ ನೀರು ಹಾಯಿಸಿದ ಪ್ರಯುಕ್ತ, ಕೊಳವೆ ಹಾಗೂ ಇಂಜಿನ್ಗಳು ತುಕ್ಕು ಹಿಡಿದು 1971 ರಲ್ಲಿ ಇವುಗಳ ದುರಸ್ತಿಗೆ 40 ದಶಲಕ್ಷ ಡಾಲರ್ ಹಣ ಖರ್ಚಾಯಿತು. ಇದು ಅಣೆಕಟ್ಟು ನಿರ್ಮಾಣ ವೆಚ್ಚದ ಶೇ.1.7 ರಷ್ಟಿತ್ತು. ನಂತರ ಜಲಾಶಯದ ಕೆಳಭಾಗದ 110 ಕಿ.ಮೀ. ದೂರದಲ್ಲಿ ಹರಿವ ನೀರಿನಲ್ಲಿ ಆಮ್ಲಜನಕ ಉತ್ಪತ್ತಿಯಾಗಿ ನೀರಿನ ಗುಣ ಮಟ್ಟ ಸುಧಾರಿಸಿತು.

ಇಂತಹದೇ ನೈಸರ್ಗಿಕ ದುರಂತ ಬ್ರೆಜಿಲ್‌ನಲ್ಲೂ ಸಹ ಸಂಭವಿಸಿತು. ಬಲ್ಖಿನಾ ಅಣೆಕಟ್ಟು ನಿರ್ಮಾಣದಿಂದಾಗಿ ಅಲ್ಲಿನ 2,250 ಚ.ಕಿ.ಮೀ. ಅರಣ್ಯ(ಮಳೆಕಾಡು) ಪ್ರದೇಶ ಜಲಾಶಯದಲ್ಲಿ ಮುಳುಗಿತು. ಇದರಿಂದಾಗಿ ಅಣೆಕಟ್ಟು ನಿರ್ವಹಣಾ ವೆಚ್ಚ ಶೇ. 9ರಷ್ಟು ಅಧಿಕಗೊಂಡಿತು.

ಅರ್ಜೆಂಟೈನಾ, ಪೆರುಗ್ವೆ ದೇಶಗಳ ನಡುವೆ ಯುಕ್ರಿಟಾ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಜಲಾಶಯದ ನೀರಿನ ರಾಸಾಯನಿಕ ಕ್ರಿಯೆಯಿಂದ 1,200ರಷ್ಟು ಜಲಚರ ಪ್ರಬೇಧಗಳು ಸತ್ತುಹೋದವು.  ಕೆನಡಾ, ಫಿನ್ಲ್ಯಾಂಡ್, ಥಾಯ್ಲೆಂಡ್ ದೇಶಗಳ ಜಲಾಶಯಗಳಲ್ಲಿ ಬೆಳೆದ ಮೀನುಗಳಲ್ಲಿ ಹೆಚ್ಚಿನ ಮಟ್ಟದ ಪಾದರಸದ ಅಂಶವಿರುವುದು ಕಂಡುಬಂದಿತು.

ಇವೆಲ್ಲವುಗಳಿಗಿಂತ ಗಂಭೀರ ಸಂಗತಿಯೆಂದರೆ, ಜಲಾಶಯದ ನೀರು ಆವಿಯಾಗುವಿಕೆಯ ಪ್ರಮಾಣ ಆತಂಕವನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಸೂರ್ಯನ ಪ್ರಖರ ಬಿಸಿಲಿನ ಶಾಖದಿಂದ ಜಲಾಶಯದ ನೀರು ಆವಿಯಾಗುವ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಜಗತ್ತಿನ ಎಲ್ಲಾ ಜಲಾಶಯಗಳಲ್ಲಿ ಶೇಖರವಾಗಿರುವ ನೀರಿನಲ್ಲಿ 170 ಘನ ಚ.ಕಿ.ಮೀ.ನಷ್ಟು ನೀರು ವಾರ್ಷಿಕವಾಗಿ ಆವಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಜಗತ್ತಿನಲ್ಲಿ ಬಳಕೆಯಾಗುತ್ತಿರುವ ಕುಡಿಯುವ ನೀರಿನ ಪ್ರಮಾಣದ ಶೇ.7 ರಷ್ಟು. ಈಜಿಪ್ಟ್ನ ನೈಲ್ ನದಿಯ ನಾಸರ್ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 11.2 ಘನ ಚ.ಕಿ.ಮೀ. ಅಂದರೆ ಈ ನೀರು ಆಫ್ರಿಕಾ ಖಂಡದ ಎಲ್ಲಾ ರಾಷ್ಟ್ರಗಳು ಗೃಹ ಬಳಕೆಗೆ ಉಪಯೋಗಿಸುತ್ತಿರುವ ಪ್ರಮಾಣದಷ್ಟು.

ಮೀನು ಸಂತತಿಯ ಅವಸಾನ

ಅಭಿವೃದ್ಧಿ ಯುಗದ ರಭಸದ ಬೆಳವಣಿಗೆಯಲ್ಲಿ, ನಮ್ಮಗಳ ಚಿಂತನಾ ಲಹರಿ ನಾಗಾಲೋಟದಲ್ಲಿ ಓಡುತ್ತಿರುವಾಗ, ಅಭಿವೃದ್ಧಿಯ ಯೋಜನೆಯಿಂದಾಗುವ ಸಾಫಲ್ಯದ ಜೊತೆ ಅನಾಹುತಗಳ ಕಡೆಗೂ ನಮ್ಮ ಗಮನವಿರಬೇಕು. ಜೀವಜಾಲದ ಸೂಕ್ಷ್ಮತೆಯನ್ನು ಸಾವಧಾನವಾಗಿ ಅವಲೋಕಿಸುವ ಗುಣವೇ ನಮ್ಮಿಂದ ದೂರವಾಗಿದೆ. ಅಣೆಕಟ್ಟು, ಜಲಾಶಯ, ಅವುಗಳಿಂದ ದೊರೆಯುವ ನೀರು, ವಿದ್ಯುತ್ ಮಾತ್ರ ನಮ್ಮ ಕೇಂದ್ರ ಗುರಿಯಾಗಿದೆ. ನದಿಯ ನೀರಿನ ಓಟಕ್ಕೆ ತಡೆಯೊಡ್ಡಿದ ಪರಿಣಾಮ ಸಾವಿರಾರು ಜಾತಿಯ ಮೀನುಗಳ ಸಂತತಿಗೆ ನಾವು ಅಡ್ಡಿಯಾಗಿದ್ದೇವೆ ಎಂಬ ಅಂಶವೇ ನಮಗೆ ಮರೆತು ಹೋಗಿರುವುದು ವರ್ತಮಾನದ ದುರಂತ.

ಅಮೆರಿಕಾದ ಕೊಲಂಬಿಯಾ ನದಿಯೊಂದರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮೊದಲು 10 ರಿಂದ 16 ದಶಲಕ್ಷದಷ್ಟಿದ್ದ ಸಾಲ್ಮನ್ ಜಾತಿಯ ಮೀನುಗಳ ಸಂಖ್ಯೆ ನಂತರದ ದಿನಗಳಲ್ಲಿ 1.5 ದಶಲಕ್ಷಕ್ಕೆ ಇಳಿಯಿತು. ಈ ನದಿಯುದ್ದಕ್ಕೂ 30 ಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಮೀನುಗಾರಿಕೆಯಿಂದ ದೊರೆಯುತ್ತಿದ್ದ 6.5 ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಹಲ್ಸಾ ಎಂಬ ಅಪರೂಪದ ಮೀನಿನ ಸಂತತಿ ಸೇರಿದಂತೆ ಮೊಸಳೆ, ಡಾಲ್ಫಿನ್, ಸೀಗಡಿ ಇವುಗಳ ಸಂತಾನೋತ್ಪತ್ತಿ ಕುಂಠಿತಗೊಂಡಿದೆ.

ಇವುಗಳ ಸಂತಾನೋತ್ಪತ್ತಿಗಾಗಿ ಹಾಗೂ ನದಿ ಮತ್ತು ಜಲಾಶಯಗಳ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಜಗತ್ತಿನ ಬಹುತೇಕ ರಾಷ್ಟ್ರಗಳು ವಾರ್ಷಿಕವಾಗಿ ಕೋಟ್ಯಾಂತರ ಹಣವನ್ನು ವ್ಯಯಿಸುತ್ತಿವೆ.

ಅಮೆರಿಕಾ ದೇಶವೊಂದೆ ಸಾಲ್ಮನ್ ಜಾತಿಯ ಮೀನಿನ ರಕ್ಷಣೆಗಾಗಿ ಕೊಲಂಬಿಯಾ ನದಿ ಪಾತ್ರದಲ್ಲಿ 350 ದಶಲಕ್ಷ ಡಾಲರ್ ಹಣವನ್ನು ಪ್ರತಿ ವರ್ಷ ಖರ್ಚು ಮಾಡುತ್ತಿದೆ.

ಸರಕಾರಗಳು ಏನೇ ಕಸರತ್ತು ನಡೆಸಿದರೂ ಮೀನುಗಳ ಸಂತಾನೋತ್ಪತ್ತಿ ಯೋಜನೆ ವಿಫಲವಾಗಿದೆ. ಸಮುದ್ರದ ಉಪ್ಪು ನೀರಿನಿಂದ ಹೊರ ಬರುತ್ತಿದ್ದ ಹಲವು ಜಾತಿಯ ಮೀನುಗಳು, 15 ದಿನಗಳ ಕಾಲ ಸತತವಾಗಿ ನದಿಗಳಲ್ಲಿ ಈಜಿ, ಸಿಹಿನೀರಿನಲ್ಲಿ ಸಂತಾನೋತ್ಪತ್ತಿ ನಡೆಸಿ ಮತ್ತೆ ತಮ್ಮ ಮರಿಗಳೊಂದಿಗೆ ಸಮುದ್ರ ಸೇರುತ್ತಿದ್ದವು. ಅವುಗಳ ಸರಾಗ ಹಾಗೂ ಸುದೀರ್ಘ ಪಯಣಕ್ಕೆ ಅಣೆಕಟ್ಟು ಅಡ್ಡ ಬಂದ ಪ್ರಯುಕ್ತ ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆಗೆ ಕುತ್ತು ಬಂದಿತು. ಕೆಲವು ರಾಷ್ಟ್ರಗಳಲ್ಲಿ ಅಣೆಕಟ್ಟು ಪ್ರದೇಶದ ಪಕ್ಕದಲ್ಲಿ ನದಿಗೆ ಬೈಪಾಸ್ ರೀತಿಯಲ್ಲಿ ಕೃತಕ ನದಿ ನಿರ್ಮಿಸಿ ಮೀನುಗಳ ಸಂತಾನೋತ್ಪತ್ತಿಗೆ ಪ್ರಯತ್ನಿಸಿದರೂ ಕೂಡ ಈ ಯೋಜನೆ ವಿಫಲವಾಯ್ತು.

ಇಷ್ಟೆಲ್ಲಾ ಅನಾಹುತಗಳ ಹಿಂದೆ, ಅಣೆಕಟ್ಟು ನಿರ್ಮಾಣಕ್ಕೆ ಮುನ್ನ, ಪರಿಸರದ ಮೇಲಿನ ಪರಿಣಾಮ, ಯೋಜನೆಯ ಸಾಧ್ಯತೆಗಳ ಬಗ್ಗೆ ಸಮೀಕ್ಷಾ ವರದಿ ತಯಾರಿಸುವ ಅಂತರಾಷ್ಟ್ರೀಯ ಮಾಫಿಯಾ ಒಂದಿದೆ. ಇದು ಬಹುರಾಷ್ಟ್ರ ಕಂಪನಿಗಳ, ಸಾಲನೀಡುವ ವಿಶ್ವಬ್ಯಾಂಕ್ನ ಕೈಗೊಂಬೆಯಂತೆ ವರ್ತಿಸುತ್ತಿದೆ.

ಪರಿಸರದ ಮೇಲಿನ ಪರಿಣಾಮ ಕುರಿತು ನಡೆಸಲಾಗುವ ಬಹುತೇಕ ಅಧ್ಯಯನಗಳು ಅಮೆರಿಕಾದ ಪ್ರಭಾವದಿಂದ ಪ್ರೇರಿತಗೊಂಡು, ಅಣೆಕಟ್ಟುಗಳ ನಿರ್ಮಾಣದಿಂದ ಆಗಬಹುದಾದ ವಾಸ್ತವ ಚಿತ್ರಣವನ್ನು ಮರೆಮಾಚಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಅಣೆಕಟ್ಟು ಕುರಿತಾದ ನೈಸರ್ಗಿಕ ಪರಿಣಾಮ ಹಾಗೂ ಸಾಧಕ-ಬಾಧಕ ಕುರಿತ ವರದಿ ನೀಡುವ ಹಾಗೂ ಅಣೆಕಟ್ಟು ನಿರ್ಮಾಣ ಕಾಮಗಾರಿ ಕುರಿತು ಸಲಹೆ ನೀಡುವ ವೃತ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದ ದಂಧೆಯಾಗಿ ಬೆಳೆದಿದೆ. 1990ರ ದಶಕದಲ್ಲಿ ಬ್ರಿಟೀಷ್ ಕನ್ಸಲ್ಟೆಂಟ್ ಬ್ಯೂರೊ ಎನ್ನುವ ಸಂಸ್ಥೆ 2.5 ಬಿಲಿಯನ್ ಡಾಲರ್ ಹಣವನ್ನು ಕೇವಲ ವರದಿ ಮತ್ತು ಸಲಹೆ ನೀಡುವುದರ ಮೂಲಕ ಗಳಿಸಿತ್ತು.

ಕಳೆದ ಒಂದು ದಶಕದಿಂದ ಅಣೆಕಟ್ಟು ಕಾಮಗಾರಿ ನಿರ್ವಹಿಸುವ ಬೃಹತ್ ಕಂಪನಿಗಳು ತಾವೇ ಇಂತಹ ಸಲಹಾ ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದು, ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ನೀಡುವ ವರದಿ ಅಣೆಕಟ್ಟು ನಿರ್ಮಾಣಕ್ಕೆ ಪೂರವಾಗಿರುತ್ತವೆ. ವರದಿಯಲ್ಲಿ ಕಾಣಿಸುವ ಮುಳುಗಡೆಯಾಗುವ ಪ್ರದೇಶ, ಅರಣ್ಯ, ಒಕ್ಕಲೆಬ್ಬಿಸುವ ಜನವಸತಿ ಪ್ರದೇಶ, ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ರೂಪಿಸುವ ಅಂದಾಜು ವೆಚ್ಚ ಇವೆಲ್ಲವೂ ನೈಜ ಸ್ಥಿತಿಯಿಂದ ದೂರವಾಗಿರುತ್ತವೆ. ಸರಕಾರಗಳು, ಅದರ ಮಂತ್ರಿಗಳು, ಅಧಿಕಾರಿಶಾಹಿ ಹೀಗೆ ಎಲ್ಲವನ್ನೂ, ಎಲ್ಲರನ್ನೂ ಏಕ ಕಾಲಕ್ಕೆ ನಿಭಾಯಿಸುವ ಕುಶಲತೆಯನ್ನು ಹೊಂದಿರುವ ಈ ಸಲಹಾ ಸಂಸ್ಥೆಗಳು, ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕಲೆಯನ್ನೂ ಸಹ ಕರಗತ ಮಾಡಿಕೊಂಡಿವೆ.

ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ, ಥಾಯ್ಲೆಂಡ್‌ನ ನ್ಯಾಮ್ ಚೋಆನ್ ಅಣೆಕಟ್ಟು ನಿರ್ಮಾಣದ ಸಮಯ ಜೈವಿಕ ಪರಿಸರ ನಾಶವಾಗುವ ಪ್ರಮಾಣ ಕುರಿತಂತೆ ನೀಡಿದ ವರದಿಯಲ್ಲಿ 122 ಜಾತಿ ವನ್ಯ ಮೃಗಗಳ ಸಂತತಿಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ ರಾಯಲ್ ಫಾರೆಸ್ಟ್ ಡಿಪಾರ್ಟ್‌ಮೆಂಟ್ ನಡೆಸಿದ ಸಮೀಕ್ಷೆಯಲ್ಲಿ 338 ಜೈವಿಕ ವೈವಿಧ್ಯತೆಗಳಿಗೆ ಅಪಾಯವಾಗುವ ಸೂಚನೆ ಕಂಡು ಬಂತು,.

ಭಾರತದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಈ ಮೂರು ರಾಜ್ಯಗಳಲ್ಲೂ ಹರಿಯುವ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದಕ್ಕೆ ವಿಶ್ವಬ್ಯಾಂಕ್ ಹಣಕಾಸಿನ ನೆರವು ನೀಡಿದೆ. ಅಣೆಕಟ್ಟು ನಿರ್ಮಾಣದ ನೈಸರ್ಗಿಕ ಪರಿಣಾಮ ಕುರಿತಂತೆ ವಿಶ್ವಬ್ಯಾಂಕ್ ತಾನೇ ನಿಯೋಜಿಸಿದ್ದ ಸಂಸ್ಥೆಯಿಂದ ವರದಿ ತಯಾರಿಸಿದ್ದು, ಈವರೆಗೆ ಈ ವರದಿಯನ್ನು ಸಾರ್ವಜನಿಕವಾಗಿ ಇರಲಿ ಭಾರತ ಸರಕಾರಕ್ಕೂ ನೀಡಿಲ್ಲ.

ಹೀಗೆ ಅಣೆಕಟ್ಟು ನಿರ್ಮಾಣದ ಹಿಂದೆ ಅಗೋಚರ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಎಲ್ಲಾ ಅಡೆ-ತಡೆಗಳನ್ನು ಧ್ವಂಸ ಮಾಡುವಷ್ಟು ದೈತ್ಯ ಶಕ್ತಿಯನ್ನು ಪಡೆದಿವೆ.

(ಮುಂದುವರಿಯುವುದು)

ಈ ಸರಣಿಯ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ