Daily Archives: October 15, 2011

ಯಡ್ಡ್‌ಯೂರಪ್ಪ ಬಂಧನ – ವ್ಯವಸ್ಥೆ ಸುಧಾರಿಸುತ್ತಿರುವ ಭ್ರಮೆ ಬೇಡ

-ರವಿ ಕೃಷ್ಣಾ ರೆಡ್ಡಿ

ಒಂದೆರಡು ತಿಂಗಳ ಹಿಂದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ ವಿಚಾರಣಾಧೀನ ಕೈದಿಗಳಾಗಿ ಬಂಧಿತರಾಗಿದ್ದು, ಈಗ ಯಡ್ದ್‌ಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಬಂಧನಕ್ಕೊಳಗಾಗಿರುವುದು, ಇವು ಯಾವುವೂ ಅನಿರೀಕ್ಷಿತವಾಗಿಲ್ಲ. ಆದರೆ ಇದು ಇಷ್ಟು ತಡವಾಗಿ ಆಗುತ್ತಿರುವುದೇ ಒಂದು ಅವಮಾನ. ಇನ್ನೂ ಹತ್ತು-ಹಲವಾರು ಶಾಸಕರು/ಸಂಸದರು/ಸಚಿವರು/ಮಾಜಿ ಸಚಿವರು/ಮುಖ್ಯಮಂತ್ರಿಗಳೂ ಬಂಧನಕ್ಕೆ ಮತ್ತು ವಿಚಾರಣೆಗೊಳಪಡದೇ ಇರುವುದೇ ಸದ್ಯಕ್ಕೆ ಆತಂಕಕಾರಿ ವಿಷಯ. ಆ ಆತಂಕಗಳು ಬೇಗ ನಿವಾರಣೆಯಾಗಿ ಭ್ರಷ್ಟರೆಲ್ಲರಿಗೂ ಶಿಕ್ಷೆಯಾದರೆ ಮಾತ್ರ ಆ ಆತಂಕ ಕಮ್ಮಿಯಾಗಬಹುದು.

ಈ ಸಂದರ್ಭದಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಸರಿ ಹೋಗುತ್ತಿದೆ ಎಂಬ ಭ್ರಮೆಗಳನ್ನು ನಾವು ಇಟ್ಟುಕೊಳ್ಳುವುದು ಬೇಡ. ಇತ್ತೀಚೆಗೆ ಬಂಧನಕ್ಕೊಳಗಾಗುತ್ತಿರುವ ಯಾವ ರಾಜಕಾರಣಿಗೂ, ಆತನ ಮನೆಯವರಿಗೂ, ಆತನ ಹಿಂಬಾಲಕರಿಗೂ, ಇದೊಂದು ಅವಮಾನದ ಪ್ರಶ್ನೆ; ನಾವು ತಪ್ಪಿಮಾಡಿದೆವು; ಮುಂದಕ್ಕಾದರೂ ತಿದ್ದಿಕೊಳ್ಳಬೇಕು, ಎಂಬ ಭಾವನೆ ಹುಟ್ಟಿದೆ/ಹುಟ್ಟುತ್ತದೆ ಎಂಬ ಅವಾಸ್ತವಿಕೆ ಕಲ್ಪನೆಗಳನ್ನು ನಾವು ಇಟ್ಟುಕೊಳ್ಳಬಾರದು. ಇವೆಲ್ಲಾ ತಾತ್ಕಾಲಿಕ ರಾಜಕೀಯ ಅಥವ ವೈಯಕ್ತಿಕ ಬದುಕಿನ ಹಿನ್ನಡೆ ಎಂದು ಅವರು ಭಾವಿಸುತ್ತಿದ್ದಾರೆಯೇ ಹೊರತು ಬೇರೆ ರೀತಿ ಅವರ್ಯಾರೂ ಪರಿಭಾವಿಸುತ್ತಿಲ್ಲ.. ಬಹುಶಃ ಕರ್ನಾಟಕದ ಜನಸಾಮಾನ್ಯರೂ ಸಹ ಮೆರೆದವರ ಅಹಂಕಾರಕ್ಕೆ ಪೆಟ್ಟು ಬಿತ್ತು ಎಂದು ಬಾವಿಸುತ್ತಿದ್ದಾರೆಯೇ ಹೊರತು, ಇಡೀ ಸಮಾಜ ತನ್ನ ನಡೆಯನ್ನು ಬದಲಾಗಿಸಿಕೊಳ್ಳಬೇಕು, ಈ ಭ್ರಷ್ಟಾಚಾರ ಒಂದು ಕೆಟ್ಟ ಮೌಲ್ಯ ಮತ್ತು ಅದನ್ನು ತಾವೂ ಪ್ರತಿರೋಧಿಸಬೇಕು ಎಂಬ ತೀರ್ಮಾನಕ್ಕೆ/ಹಂತಕ್ಕೆ ಬಂದಿದೆ ಎಂದು ನನಗನ್ನಿಸುವುದಿಲ್ಲ. ಹಗಲುದರೋಡೆ ಕಮ್ಮಿಯಾಗಬಹುದು. ಆದರೆ ದರೋಡೆ ಕೆಟ್ಟದ್ದು ಎಂಬ ಮೌಲ್ಯ ಪುನ: ಮುಂಚೂಣಿಗೆ ಬಂದಿದೆ ಎನ್ನುವುದನ್ನು ನಾನು ಒಪ್ಪಲಾರೆ.

ಬಿಜೆಪಿಯ ನಡವಳಿಕೆಯನ್ನೇ ಗಮನಿಸಿ. ಆ ಪಕ್ಷದ ಮುಖಂಡರೆಲ್ಲ ಒಬ್ಬೊಬ್ಬರಾಗಿ ಬಂಧನಕ್ಕೊಳಗಾಗುತ್ತಿದ್ದು, ಆ ಬಂಧಿತರ ಮೇಲಿನ ಆರೋಪಗಳೆಲ್ಲ ಮೇಲ್ನೋಟಕ್ಕೆ ಸಾಬೀತಾಗುವಷ್ಟು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಆ ಪಕ್ಷದ ರಾಜ್ಯ ನಾಯಕತ್ವ ಈಗಲೂ ಅವರ ಪರ ವಹಿಸಿಯೇ ಮಾತನಾಡುತ್ತಿದೆ. ಐದಾರು ಶಾಸಕರು ಬಂಧಿತರ ಜೊತೆಗೆ ಜೈಲಿನ ಬಾಗಿಲಿನ ತನಕ ಹೋಗಿ ಬೀಳ್ಕೊಟ್ಟು ಬರುತ್ತಾರೆ. ಕೇಂದ್ರ ನಾಯಕತ್ವ ಅವರ ಪರ ನಿಲ್ಲುತ್ತೇವೆ ಎನ್ನುತ್ತದೆ. ದೇಶದ ಎರಡನೇ ದೊಡ್ಡ ಪಕ್ಷಕ್ಕೆ ತನ್ನ ಪಕ್ಷದಲ್ಲಿನ ಭ್ರಷ್ಟರನ್ನು disown ಮಾಡಬೇಕು ಎನ್ನುವ ಭಾವನೆಯೇ ಬರುತ್ತಿಲ್ಲ. ತನ್ನ ಪಕ್ಷದ ಸ್ಥಿತಿಯನ್ನೇ ಲೇವಡಿ ಮಾಡುವಂತಿದೆ ಅದ್ವಾನಿಯವರ ಇತ್ತೀಚಿನ ರಥಯಾತ್ರೆ.

ಇನ್ನು, ಲೋಕಾಯುಕ್ತರ ವರದಿಯನ್ನು ಒಪ್ಪಿಕೊಳ್ಳಲಾಗದ ಬಿಜೆಪಿ ಸರ್ಕಾರ ತಾಂತ್ರಿಕ ಕಾರಣಗಳ ಮೊರೆ ಹೋಗಿದೆ. ಇದು ದಾರಿ ತಪ್ಪಿಸುವ ಭ್ರಷ್ಟ ನಡವಳಿಕೆ. ಆದರೆ, ಸರ್ಕಾರದ ಈ ಭಂಡ ತೀರ್ಮಾನಕ್ಕೆ ಜನರ ಮತ್ತು ರಾಜಕಾರಣಿಗಳ ಪ್ರತಿಕ್ರಿಯೆ ನೋಡಿ. ಇಂದು ಈ ವಿಷಯದ ಬಗ್ಗೆ ಸಂತೋಷ ಹೆಗಡೆಯವರು ಮಾತನಾಡಿರುವುದು ಬಿಟ್ಟರೆ ಮಿಕ್ಕ ಯಾವ ಜನಪ್ರತಿನಿಧಿಗಳೂ, ನಾಗರಿಕ ಸಮಾಜದ ನಾಯಕರೂ, ಗಟ್ಟಿಯಾಗಿ ಮಾತನಾಡಿದ್ದು ಕಾಣಿಸುತ್ತಿಲ್ಲ. ಈ ವರದಿಯ ಮಂಜೂರಾತಿಗೆ ಆಗ್ರಹಿಸಿ ಜನಾಂದೋಲನ ರೂಪಿಸಬೇಕಿದ್ದ ಕಾಂಗ್ರೆಸ್‍ ತನ್ನ ಜವಾಬ್ದಾರಿಯನ್ನೇ ಮರೆತಿದೆ. ಇನ್ನು ಆ ಕೆಲಸ ಜೆಡಿಎಸ್ ಮಾಡಲಾರದು. ಮಿಕ್ಕವರೆಲ್ಲ ಕರ್ನಾಟಕದ ಮಟ್ಟಿಗೆ ನಗಣ್ಯ ಮತ್ತು ಅವರು ಸಶಕ್ತ ಜನಾಂದೋಲನ ರೂಪಿಸುವ ಸ್ಥಿತಿಯಲ್ಲಾಗಲಿ, ಜನ ಅದಕ್ಕೆ ಬೆಂಬಲಿಸುವ ಪರಿಸ್ಥಿತಿಯಾಗಲಿ ಕರ್ನಾಟಕದಲ್ಲಿಲ್ಲ.

ಇವೆಲ್ಲವನ್ನೂ ನೋಡಿದರೆ, ಯಡ್ಡ್‌ಯೂರಪ್ಪನವರ ಬಂಧನ ಈ ವ್ಯವಸ್ಥೆ ಸುಧಾರಿಸುತ್ತಿರುವ ಲಕ್ಷಣ ಎಂದೇನೂ ನನಗೆ ಅನ್ನಿಸುತ್ತಿಲ್ಲ. ಇದು ಕೆಲವೇ ಕೆಲವು ದಡ್ಡ ಅಥವ ಅಹಂಕಾರಿ ಭ್ರಷ್ಟರಿಗೆ ಆದ ಹಿನ್ನಡೆ ಅಷ್ಟೇ. ಇದು ಸಮಾಜದಲ್ಲಿನ ಭ್ರಷ್ಟಾಚಾರಕ್ಕೆ ಆದ ಹಿನ್ನಡೆ ಅಲ್ಲ.

ಇವತ್ತಿನ ವಿಷಯದ ಮಟ್ಟಿಗೆ ಹೇಳುವುದಾದರೆ, ಕೃಷ್ಣಯ್ಯ ಶೆಟ್ಟಿಯ ನಡವಳಿಕೆ ಮಾನಗೇಡಿಯದ್ದು. (ಇನ್ನು ಯಡ್ಡ್‌ಯೂರಪ್ಪನವರ ಇಂದಿನ ನಗುಮೊಗ ಬಹುಶ: ಆ ವ್ಯಕ್ತಿಗೆ ತಾನು ಚರಿತ್ರೆಯಲ್ಲಿ ದಾಖಲಾಗುತ್ತಿದ್ದೇನೆ ಎಂಬ ಹೆಮ್ಮೆಯಲ್ಲಿ ಇರುವ ಹಾಗೆ ತೋರುತ್ತಿತ್ತು. ಈ ವ್ಯಕ್ತಿಯ ಮಾನಸಿಕ ಸ್ಥಿತಿ ಖಂಡಿತವಾಗಿ ಸಹಜವಾಗಿದ್ದಂತಿಲ್ಲ.) ಕೃಷ್ಣ್ಯಯ್ಯ ಶೆಟ್ಟಿಗೆ ಯಾರೋ ತನಗೆ ವಂಚನೆ ಮಾಡಿದ ಹಾಗೆ ಎನ್ನಿಸಿರಬಹುದೇ ಹೊರತು ಅವರಿಗೆ ತಾನೊಬ್ಬ ಪ್ರಜಾಪ್ರತಿನಿಧಿಯಾಗುವ ಅರ್ಹತೆಯಿಲ್ಲ ಕ್ಷುದ್ರ ವಂಚಕ ಎಂಬ ತಿಳಿವಳಿಕೆಯೇ ಇದ್ದಂತಿಲ್ಲ. ಯಡ್ಡ್‌ಯೂರಪ್ಪನವರ ಸರ್ಕಾರದಲ್ಲಿ ಎಲ್ಲರಿಗಿಂತ ಮೊದಲು ಜೈಲು ಸೇರಬೇಕಾಗಿದ್ದರೆ ಅದು ಶೆಟ್ಟಿಯೇ ಆಗಿದ್ದರು. ಆದರೆ ನಮ್ಮ ಪೋಲಿಸ್-ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳು-ಕಾನೂನು-ವಿರೋಧ ಪಕ್ಷಗಳು, ಇವು ಯಾವುವೂ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ ನೀಡಿದ ಕೇಸಿಗೆ ಸಂಬಂಧಿಸಿದಂತೆ ತಮ್ಮ ಕಾರ್ಯ ಸಂಪೂರ್ಣವಾಗಿ ನಿರ್ವಹಿಸಲೇ ಇಲ್ಲ. ಆಗಲೇ ಶೆಟ್ಟಿಯ ಬಂಧನವಾಗಿ ಶಿಕ್ಷೆಯಾಗಿದ್ದರೆ ಇವತ್ತಿನ ಈ ಮಹಾದ್ರೋಹಗಳು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಎಲ್ಲರಿಗಿಂತಲೂ ಮೊದಲು ಬಂಧನವಾಗಿ, ಶಿಕ್ಷೆಯೂ ಪಡೆಯಬೇಕಿದ್ದ ವ್ಯಕ್ತಿಯ ಆ ಹಗರಣ ಮರೆತುಹೋಗಿರುವುದೇ ಒಂದು ಅವಮಾನ. ಆ ಮನುಷ್ಯ ಅಂತಹುದರಲ್ಲೆಲ್ಲ ಬಚಾವಾಗಿ ಬಂದ ಭಂಡತನವೇ ನಮ್ಮ ರಾಜಕೀಯ ನಾಯಕರಿಗೆ ಇನ್ನೂ ಹೆಚ್ಚಿನ ಭಂಡರೂ ಭ್ರಷ್ಟರೂ ಆಗುವುದಕ್ಕೆ ಧೈರ್ಯ ಕೊಟ್ಟಿತು ಎನ್ನಿಸುತ್ತದೆ. ಆ ಹಗರಣದ ಬಗ್ಗೆ 2009ರಲ್ಲಿ ಬರೆದ ಈ ಲೇಖನ ಈಗಲೂ ಪ್ರಸ್ತುತ ಎಂದು ಇಲ್ಲಿ ಕೊಡುತ್ತಿದ್ದೇನೆ.

ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ…
[ವಿಕ್ರಾಂತ ಕರ್ನಾಟಕದ ಆಗಸ್ಟ್ 7, 2009ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.]

ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಒಳಗೆ ಮತ್ತು ಅದರ ಸುತ್ತಮುತ್ತ ನಡೆದ ಹಗರಣಗಳನ್ನು ನೆನಪಿಸಿಕೊಳ್ಳಿ… ಹೇಗೆ ತಾನೆ ಅಷ್ಟು ಸುಲಭವಾಗಿ ನೆನಪಾದೀತು? ಇಲ್ಲ, ನಾನು Public memory is short ಎಂಬ ಗಾದೆಯ ಆಧಾರದ ಮೇಲೆ ನಿಮ್ಮನ್ನು ಚುಡಾಯಿಸುತ್ತಿಲ್ಲ. ನಿಜಕ್ಕೂ ನಮಗೆ ಗೊತ್ತಾದ, ಜನಮಾನಸಕ್ಕೆ ಗಂಭೀರ ಎನ್ನಿಸಿದಂತಹ, ಸರ್ಕಾರವೆ ಬೀಳುವಂತಹ ಹಗರಣಗಳು ನಡೆದದ್ದು ಕಮ್ಮಿಯೆ. ಛಾಪಾ ಕಾಗದದ ಹಗರಣ, ಅಕ್ಕಿ ಹಗರಣ,… ದೊಡ್ಡ ಹಗರಣಗಳನ್ನು ನೆನಪಿಸಿಕೊಳ್ಳುತ್ತ ನನ್ನ ನೆನಪೂ ಅಲ್ಲಿಗೇ ನಿಲ್ಲುತ್ತದೆ.

ಈಗ ಕಳೆದ ಹತ್ತೇ ವರ್ಷಗಳಲ್ಲಿ ಶ್ರೀಮಂತಿಕೆಯ ಅನೇಕ ಮಜಲುಗಳನ್ನು ದಾಟಿದ ಕರ್ನಾಟಕದ ರಾಜಕಾರಣಿಗಳ ವಿಚಾರಕ್ಕೆ ಬರೋಣ. ಇವತ್ತಿನ ಯಾವುದೆ ಪ್ರಸಿದ್ಧ ರಾಜಕಾರಣಿಯನ್ನು, ಶಾಸಕನನ್ನು, ಮಂತ್ರಿಯನ್ನು ತೆಗೆದುಕೊಂಡರೂ ಅವರು ತಾವು ರಾಜಕೀಯಕ್ಕೆ ಅಥವ ಅಧಿಕಾರಕ್ಕೆ ಬರುವ ಮೊದಲು ಇದ್ದ ಆರ್ಥಿಕ ಸ್ಥಿತಿಯಲ್ಲಿ ಇವತ್ತು ಇಲ್ಲ. ಇಲ್ಲಿ ಬೆರಳೆಣಿಕೆಯಷ್ಟು ಅಪವಾದಗಳಿರಬಹುದು. ಅವನ್ನು ಸದ್ಯದ ಚರ್ಚೆಯಲ್ಲಿ ಉಪೇಕ್ಷಿಸೋಣ. ಇವತ್ತು ಕನಿಷ್ಠ ಹತ್ತಿಪ್ಪತ್ತು ರಾಜಕಾರಣಿಗಳಾದರೂ ಒಬ್ಬೊಬ್ಬರೂ ಸಾವಿರ ಕೋಟಿಗಿಂತ ಬೆಲೆ ಬಾಳುತ್ತಾರೆ. ಒಂದಿಬ್ಬರು (ವ್ಯಕ್ತಿ ಅಥವ ಕುಟುಂಬಗಳು) ಡಾಲರ್ ಲೆಕ್ಕದಲ್ಲೂ ಬಿಲಿಯನೇರ್‌ಗಳಾಗಿರಬಹುದು (ಸುಮಾರು 5000 ಕೋಟಿ ರೂಪಾಯಿ.) ಇನ್ನು ರೂಪಾಯಿ ಬಿಲಿಯನೇರ್ (ಶತಕೋಟಿ) ಗಳಂತೂ ಸುಲಭವಾಗಿ ನೂರು ದಾಟಬಹುದು. ಇವರಲ್ಲಿ ಬಹುಪಾಲು ಜನ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಒಂದಷ್ಟು ಜನ ಆಗರ್ಭ ಶ್ರೀಮಂತರೂ ಇರಬಹುದು. ಆದರೆ ಅವರ ಉದ್ದಿಮೆ ಅಥವ ಆದಾಯಗಳು ನೂರಾರು ಕೋಟಿ ಮುಟ್ಟುವ ಹಾಗೇನೂ ಇದ್ದಿರಲಾರದು.

ಇಷ್ಟಾದರೂ, ಅದು ಹೇಗೆ ನಮ್ಮ ಹಾಲಿ-ಮಾಜಿ ಶಾಸಕರು, ಮಂತ್ರಿಗಳು, ಸಂಸದರು ಈ ಪರಿಯಲ್ಲಿ ಶ್ರೀಮಂತರಾದರು? ಆಗುತ್ತಿದ್ದಾರೆ? ಯಾವುದೊ ಸರ್ಕಾರಿ ಯೋಜನೆಯಲ್ಲಿ ಅಥವ ಇನ್ಯಾವುದೊ ಇಲಾಖೆಯಲ್ಲಿ ಜನರ ದುಡ್ಡಿಗೆ ಮೋಸ ಮಾಡಿದ್ದಾರೆ ಎಂದು ಹೇಳೋಣ ಎಂದರೆ, ಅಂತಹ ಹಗರಣಗಳೂ ಕಾಣಿಸುತ್ತಿಲ್ಲ. ಹಾಗಾದರೆ, ಇನ್ಯಾವ ಪವಾಡಗಳನ್ನು ಮಾಡಿ, ಜಾದೂ ಮಾಡಿ, ಇವರು ಇಷ್ಟು ಹಣ ಗಳಿಸಿದ್ದು, ಗಳಿಸುತ್ತಿರುವುದು?

ಮಾರ್ಥಾ ಸ್ಟುವರ್ಟ್ ಎನ್ನುವ ಅಮೆರಿಕನ್ ಮಹಿಳೆ ಇವತ್ತು ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಸಂಪತ್ತಿನ ಒಡತಿ. ಹಲವು ಪುಸ್ತಕಗಳನ್ನು ಬರೆದಿರುವ, ಟಿವಿಯಲ್ಲಿ ಟಾಕ್ ಷೋ ನಡೆಸುತ್ತಿದ್ದ, ಮ್ಯಾಗಝೀನ್ ಒಂದರ ಮತ್ತು ಹಲವಾರು ವ್ಯವಹಾರ-ಉದ್ದಿಮೆಗಳ ಒಡತಿಯೂ ಆಗಿರುವ ಈಕೆ ಅಮೆರಿಕದ ಪ್ರಸಿದ್ಧ ಹೆಂಗಸರಲ್ಲಿ ಒಬ್ಬಳು. ಫ್ಯಾಷನ್ ಉದ್ದಿಮೆಯಲ್ಲೂ ದೊಡ್ಡ ಹೆಸರು. 1999ರಲ್ಲಿ ಷೇರು ಮಾರುಕಟ್ಟೆಗೆ ಬಿಟ್ಟ ತನ್ನ ಕಂಪನಿಯ ಷೇರುಗಳ ಲೆಕ್ಕಾಚಾರದಲ್ಲಿ ರಾತ್ರೋರಾತ್ರಿ ಬಿಲಿಯನೇರ್ ಸಹ ಆಗಿದ್ದಳು. ಆದರೆ ನಾನು ಈಗ ಪ್ರಸ್ತಾಪಿಸಲಿರುವುದು ಆಕೆಯ ಸಾಧನೆ ಅಥವ ಯಶಸ್ಸುಗಳ ಕತೆಯನ್ನಲ್ಲ. ತನ್ನ ಯಶಸ್ಸಿನ ಉತ್ತುಂಗದಲ್ಲಿ, ಸಾವಿರಾರು ಕೋಟಿಗಳ ಒಡತಿಯಾಗಿದ್ದ ಸಮಯದಲ್ಲಿ, ಕೇವಲ 20 ಲಕ್ಷ ರೂಪಾಯಿಯ ನಷ್ಟ ಸರಿದೂಗಿಸಿಕೊಳ್ಳಲು ಆಕೆ ಒಂದು ತಪ್ಪು ಮಾಡಿದಳು. ಅದಕ್ಕಾಗಿ 2004 ರಲ್ಲಿ ಐದು ತಿಂಗಳು ಜೈಲಿನಲ್ಲಿದ್ದಳು. ಬಿಡುಗಡೆಯಾದ ನಂತರ ಮತ್ತೆ ಐದು ತಿಂಗಳು ತನ್ನದೆ ಮನೆಯಲ್ಲಿ ಗೃಹಬಂಧನದಲ್ಲಿದ್ದಳು ಮತ್ತು ಆ ಸಮಯದಲ್ಲಿ ಆಕೆಯ ಕಾಲಿಗೆ ಆಕೆ ಯಾವ ಸಮಯದಲ್ಲಿ ಎಲ್ಲಿ ಇದ್ದಾಳೆ ಎಂದು ಟ್ರ್ಯಾಕ್ ಮಾಡಬಲ್ಲ ಎಲೆಕ್ಟ್ರಾನಿಕ್ ತಾಯಿತವೊಂದನ್ನು ಕಟ್ಟಲಾಗಿತ್ತು. ಅದಾದ ನಂತರವೂ ಆಕೆ ಐದು ವರ್ಷಗಳ ಕಾಲ ಯಾವುದೆ ಕಂಪನಿಯ ಮುಖ್ಯಸ್ಥೆ ಆಗದಂತೆ ಅಥವ ಯಾವುದೆ ಕಂಪನಿಯ ನಿರ್ದೇಶಕ ಹುದ್ದೆ ಒಪ್ಪಿಕೊಳ್ಳಲಾಗದಂತೆ ನಿರ್ಬಂಧ ಹೇರಲಾಯಿತು. ಈಗಲೂ ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಆಸ್ತಿಯ ಒಡತಿಯಾಗಿರುವ ಈ ಪ್ರಸಿದ್ಧ ಮಹಿಳೆಗೆ ಕಳೆದ ವರ್ಷ ತಾನೆ ಬ್ರಿಟಿಷ್ ಸರ್ಕಾರ ತನ್ನ ದೇಶಕ್ಕೆ ವೀಸಾ ಸಹಾ ನಿರಾಕರಿಸಿತ್ತು.

ಇಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು?

ಷೇರು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಕಂಪನಿಗಳು ತಮ್ಮ ಹಿರಿಯ ಅಧಿಕಾರಿಗಳಿಗೆ, ಮುಖ್ಯ ನೌಕರರಿಗೆ, ಮತ್ತು ನಿರ್ದೇಶಕ ಮಂಡಳಿಯ ನಿರ್ದೇಶಕರಿಗೆ ಕೇವಲ ಸಂಬಳವನ್ನಷ್ಟೆ ಅಲ್ಲದೆ ಬೋನಸ್ ರೀತಿಯಲ್ಲಿ ಒಂದಷ್ಟು ಷೇರುಗಳನ್ನೂ ನೀಡಿರುತ್ತದೆ. ಇದು ಸಾವಿರಗಳಿಂದ ಲಕ್ಷಗಳನ್ನು ದಾಟುತ್ತದೆ; ಅವರವರ ಯೋಗ್ಯತೆಯ ಮೇಲೆ. ತಮ್ಮದೇ ಕಂಪನಿಯ ಆ ಷೇರುಗಳನ್ನು ಕಂಪನಿಯ ಲಾಭನಷ್ಟದ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಯಾವಾಗಲೆಂದರೆ ಆಗ ಮಾರಾಟ ಮಾಡುವ ಹಾಗೆ ಇಲ್ಲ. ‘ಕಂಪನಿ ಈ ತ್ರೈಮಾಸಿಕದಲ್ಲಿ ಲಾಭ ಮಾಡಿದೆ, ಆ ವಿಚಾರ ಇನ್ನೂ ಹೊರಗಿನವರಿಗೆ ಗೊತ್ತಿಲ್ಲ, ಗೊತ್ತಾದ ನಂತರ ಷೇರುಗಳ ಬೆಲೆ ಮೇಲೆ ಹೋಗುತ್ತದೆ, ಲಾಭ ಮಾಡಿಕೊಳ್ಳಲು ಇದೇ ಸಮಯ, ಹಾಗಾಗಿ ಒಂದಷ್ಟು ಷೇರುಗಳನ್ನು ಈಗಿನ ಕಮ್ಮಿ ಬೆಲೆಗೆ ಕೊಂಡುಕೊಳ್ಳೋಣ,’ ಎಂದೆಲ್ಲ ಲೆಕ್ಕ ಹಾಕಿ ಅವರು ತಕ್ಷಣವೆ ಷೇರುಗಳನ್ನು ಕೊಳ್ಳುವ ಹಾಗೆ ಇಲ್ಲ. ಅದೇ ರೀತಿ ತಮ್ಮ ಕಂಪನಿ ನಷ್ಟದ ಹಾದಿಯಲ್ಲಿರುವ ಲಕ್ಷಣಗಳು ಗೊತ್ತ್ತಾದರೆ ಮತ್ತು ಅವರಿಗೆ ಗೊತ್ತಿರುವ ವಿಚಾರಗಳು ಬಹಿರಂಗವಾದ ಮೇಲೆ ಅವರ ಕಂಪನಿಯ ಷೇರಿನ ಬೆಲೆ ಇಳಿಯುತ್ತದೆ ಎನ್ನುವ ಸೂಕ್ಷ್ಮಗಳು ಗೊತ್ತಾದಾಗಲೂ ತಮ್ಮಲ್ಲಿರುವ ಷೇರುಗಳನ್ನು ಕೂಡಲೆ ಮಾರುವ ಹಾಗೂ ಇಲ್ಲ. ಅದು ಅನೈತಿಕ. ತಮ್ಮ ಸ್ಥಾನದ ಬಲದಿಂದ ತಮಗೆ ಗೊತ್ತಾದ ವಿಚಾರವೊಂದನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಹೀನ, ಮೌಲ್ಯರಹಿತ, ಅನೈತಿಕ ನಡವಳಿಕೆ (Unethical) ಅದು. ಕಂಪನಿಯೊಂದರ ಷೇರುಗಳನ್ನು ಕೊಂಡುಕೊಂಡಿರುವ ಸಾರ್ವಜನಿಕರಿಗೆ ಎಸಗುವ ಮಹಾವಂಚನೆ. ಅದನ್ನು ಬ್ಯುಸಿನೆಸ್ ಪ್ರಪಂಚದ ಪರಿಭಾಷೆಯಲ್ಲಿ Insider Trading ಎನ್ನುತ್ತಾರೆ. ಯಾರಾದರೂ ಹಾಗೆ ಮಾಡಿದ್ದು ಸಾಬೀತಾದರೆ ಅದೊಂದು ಕ್ರಿಮಿನಲ್ ಅಪರಾಧ. ಅದಕ್ಕೆ ಜೈಲು ಶಿಕ್ಷೆಯೂ ಆಗುತ್ತದೆ.

ಮಾರ್ಥಾ ಸ್ಟುವರ್ಟ್ ಎಸಗಿದ ಅಪರಾಧವೂ ಅದೇನೆ. 2001ನೇ ಇಸವಿಯ ಸುಮಾರಿನಲ್ಲಿ ಇಮ್ಕ್ಲೋನ್ ಎನ್ನುವ ಕಂಪನಿಯ ಬೋರ್ಡಿನಲ್ಲಿ ಆಕೆ ನಿರ್ದೇಶಕಿ ಆಗಿದ್ದಳು. ಅದೊಂದು ದಿನದ ಮೀಟಿಂಗ್‌ನಲ್ಲಿ ಆ ಕಂಪನಿಯ ವೈದ್ಯಕೀಯ ಉತ್ಪನ್ನವೊಂದಕ್ಕೆ ಸರ್ಕಾರದ ಪರವಾನಗಿ ಸಿಕ್ಕಿಲ್ಲ ಎಂಬ ವಿಚಾರ ಆಕೆಗೂ ಸೇರಿದಂತೆ ಆ ಕಂಪನಿಯ ಮುಖ್ಯ ಮಂದಿಗೆಲ್ಲ ಗೊತ್ತಾಯಿತು. ಅದರಲ್ಲಿ ಒಂದಷ್ಟು ಜನ ಅಂದೇ ತಮ್ಮ ಷೇರುಗಳನ್ನು ಮಾರಿಕೊಂಡರು. ತನಗೆ ಆಗಬಹುದಾಗಿದ್ದ 45 ಸಾವಿರ ಡಾಲರ್‌ಗಳ ನಷ್ಟವನ್ನು ನಿವಾರಿಸಿಕೊಳ್ಳಲು ಸ್ವತಃ ಬಿಲಿಯನೇರ್ ಆಗಿದ್ದ ಮಾರ್ಥಾಳೂ ಆ ಕಂಪನಿಯ ತನ್ನ ಷೇರುಗಳನ್ನು ಮಾರಿಬಿಡಲು ಕೂಡಲೆ ತನ್ನ ಏಜೆಂಟನಿಗೆ ತಿಳಿಸಿದಳು. ಮಾರನೆಯ ದಿನ ಆ ಕಂಪನಿಯ ಉತ್ಪನ್ನಕ್ಕೆ ಪರವಾನಗಿ ಸಿಕ್ಕಿಲ್ಲದ ವಿಚಾರ ಬಹಿರಂಗವಾಯಿತು. ಒಂದೇ ದಿನದಲ್ಲಿ ಆ ಕಂಪನಿಯ ಷೇರುಗಳ ಬೇಲೆ ಶೇ.18 ರಷ್ಟು ಬಿದ್ದು ಹೋಯಿತು. ಅಂದಿನ ಹಿಂದಿನ ದಿನ ಕೆಲವು Insiders ತಮ್ಮ ಷೇರುಗಳನ್ನು ಮಾರಾಟ ಮಾಡಿರುವ ವಿಚಾರ ನಂತರದ ದಿನಗಳಲ್ಲಿ ಬಯಲಿಗೆ ಬಂತು. ಮಾರ್ಥಾ ಏನೇನೊ ನಾಟಕ ಆಡಿದಳು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಕೆಯಿಂದಾಗಲಿಲ್ಲ. ತನ್ನ ಆ ಅನೈತಿಕ ಕೃತ್ಯಕ್ಕೆ ಈಗಲೂ ಆಕೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ದುಡ್ಡಿನ ವಿಚಾರದಲ್ಲಿ ಅದೊಂದು ಸಣ್ಣ ಮೊತ್ತದ ತಪ್ಪು. ಆದರೆ ಮೌಲ್ಯ, ನೀತಿ, ಮತ್ತು ನೈತಿಕತೆಯ ದೃಷ್ಟಿಯಿಂದ ಅದೊಂದು ಗಂಭೀರ ಅಪರಾಧ. ತಮ್ಮ ಸ್ಥಾನಬಲವನ್ನು ಸ್ವಂತಲಾಭಕ್ಕೆ ಬಳಸಿಕೊಳ್ಳುವ ಹೀನಾತಿಹೀನ ನಡವಳಿಕೆ. (ನಮ್ಮಲ್ಲಿ ಕೆಲವರಿಗೆ ಈ ಪದಬಳಕೆ ಮತ್ತು ಈ ಅಭಿಪ್ರಾಯ ಕಠೋರವೆಂದೂ, ಮಾರ್ಥಾ ಸ್ಟುವರ್ಟ್ ಮಾಡಿದ್ದು ಅಂತಹ ದೊಡ್ಡ ತಪ್ಪೇನೂ ಅಲ್ಲವೆಂದೂ ಅನ್ನಿಸಿದರೆ, ಹಾಗೆ ಅನ್ನಿಸುವುದು ಅಸಹಜ ಎಂದೇನೂ ನಾನು ಭಾವಿಸುವುದಿಲ್ಲ. ದುರದೃಷ್ಟಕರ ವಾತಾವರಣ ಇದು. ಅದಕ್ಕೆ ಕಾರಣಗಳನ್ನು ನ್ಯಾಯ-ಮೌಲ್ಯ-ನೈತಿಕತೆಯನ್ನು ನಮ್ಮಲ್ಲಿ ಪರಿಭಾವಿಸಿರಬಹುದಾದ ಮತ್ತು ಶಿಕ್ಷಣದ ಗುಣಮಟ್ಟದ ನೆಲೆಯಲ್ಲಿ ಗುರುತಿಸಬೇಕು.)

ಈಗ, ಮಾರ್ಥಾ ಸ್ಟುವರ್ಟ್‌ಳ ಹಗರಣವನ್ನು ಮೂಲವಾಗಿ ಇಟ್ಟುಕೊಂಡು ನಮ್ಮಲ್ಲಿ ಒಂದೆರಡು ವಾರದ ಹಿಂದೆ ತಾನೆ ಬಯಲಿಗೆ ಬಂದ ಕೃಷ್ಣಯ್ಯ ಶೆಟ್ಟಿ ಮತ್ತು ಶಿಡ್ಲಘಟ್ಟ ಭೂಹಗರಣವನ್ನು ವಿಶ್ಲೇಷಿಸೋಣ. ಸರ್ಕಾರದಲ್ಲಿ ಯಾವಯಾವ ಯೋಜನೆಗಳು ಯಾವಯಾವ ಸ್ಥಳದಲ್ಲಿ ಎಂತಹ ಸಮಯದಲ್ಲಿ ಅನುಷ್ಠಾನಕ್ಕೆ ಬರಲಿವೆ ಎನ್ನುವ ವಿಚಾರಗಳು ಕೆಲವು ಹಿರಿಯ ಅಧಿಕಾರಿಗಳಿಗೂ, ಮಂತ್ರಿಗಳಿಗೂ, ಮುಖ್ಯಮಂತ್ರಿಗಳಿಗೂ, ಅವರ ಹಿಂಬಾಲಕರಿಗೂ, ಮತ್ತು ಒಂದಷ್ಟು ಶಾಸಕರಿಗೂ ನಿಖರವಾಗಿ ಗೊತ್ತಾಗುತ್ತದೆ. ತಕ್ಷಣವೆ ಈ ಗುಂಪಿನಲ್ಲಿರುವ ಖದೀಮರು ಯೋಜನೆಯೊಂದು ಅನುಷ್ಠಾನಕ್ಕೆ ಬರಲಿರುವ ಸುತ್ತಮುತ್ತಲ ಸ್ಥಳವನ್ನು ತುಂಬ ಅಗ್ಗವಾಗಿ ರಾತ್ರೋರಾತ್ರಿ ತಮ್ಮ ಸಂಬಂಧಿಗಳ ಹೆಸರಿನಲ್ಲಿ, ಹಿಂಬಾಲಕರ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ, ಕೊಂಡುಕೊಂಡುಬಿಡುತ್ತಾರೆ. ನಂತರ ಅದೇ ಜಮೀನನ್ನು ತಮ್ಮದೆ ಸುಪರ್ದಿಯಲ್ಲಿರುವ ಸರ್ಕಾರಕ್ಕೆ ಅಸಹಜವಾದ ಬೆಲೆಗೆ, “ಮಾರುಕಟ್ಟೆ ಬೆಲೆ” ಎಂಬ ಹೆಸರಿನಲ್ಲಿ ಮಾರಿಬಿಡುತ್ತಾರೆ. ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು, ಗೃಹಮಂಡಳಿ ಭೂಸ್ವಾಧೀನಗಳ ಜಮೀನೆಲ್ಲ ಸ್ವಾಧೀನದ ಸಮಯಕ್ಕೆ ಈ ಖದೀಮ ಗುಂಪಿನವರದೇ ಆಗಿರುತ್ತದೆ. ಮತ್ತೆ ಎಷ್ಟೋ ಸಲ ಸರ್ಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರುವುದೆ ಕೆಲವು ಪಟ್ಟಭದ್ರರ ಜಮೀನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಇರುವ ಕಾರಣದಿಂದ. ಶಿಡ್ಲಘಟ್ಟದಲ್ಲಾಗಿದ್ದೂ ಇದೆ. ಅಣ್ಣನ ಇಲಾಖೆಗೆ ಜಮೀನು ಬೇಕಾದ ವಿವರ ತಮ್ಮನಿಗೆ ತಿಳಿಸಲಾಯಿತು ಅಥವ ಗೊತ್ತಾಯಿತು. ಮಂತ್ರಿಯ ತಮ್ಮ ಸ್ವತಃ ತಾನೇ ಹೋಗಿ ವ್ಯಾಪಾರಕ್ಕೆ ನಿಂತರು. ರೈತನಿಂದ ಆರು ಕಾಸಿಗೆ ಕೊಂಡು ಅರವತ್ತು ಕಾಸಿಗೆ ಅಣ್ಣನ ಇಲಾಖೆಗೆ ಮಾರಿದರು. ನೈತಿಕತೆ ಮತ್ತು ಅಧಿಕಾರದುರುಪಯೋಗದ ಹಿನ್ನೆಲೆಯಿಂದ ಇದನ್ನು ನೀವು ಗಮನಿಸದೆ ಹೋದರೆ ಈ ಇಡೀ ಪ್ರಕರಣದಲ್ಲಿ ತಪ್ಪಾದರೂ ಎಲ್ಲಿದೆ?

ಇಂತಹ ಅನೈತಿಕ ಕೆಲಸಗಳನ್ನು ಮಾಡುವ Insiderಗಳನ್ನು ದಾಖಲೆಯ ಸಮೇತ ಕಂಡುಹಿಡಿಯುವಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಜೊತೆಗೆ, ಇಂತಹ ಕೃತ್ಯಗಳು ಅನೈತಿಕ ಹಾಗೂ ಶಿಕ್ಷಿಸಲು ಅರ್ಹವಾದವು ಎಂದು ನಮ್ಮ ಬಹುಸಂಖ್ಯಾತ ಸಮಾಜ ಇನ್ನೂ ಭಾವಿಸಿಲ್ಲ. ಹಾಗಾಗಿ ಇಂತಹುದೆ ಹಗಲುದರೋಡೆಗಳು ಕಳೆದ ಹತ್ತಿಪ್ಪತ್ತು ವರ್ಷಗಳ “ಅಭಿವೃದ್ಧಿ ಶಕೆ”ಯಲ್ಲಿ ನಿರ್ಬಾಧಿತವಾಗಿ ನಡೆದುಕೊಂಡು ಬರುತ್ತಿವೆ. ಈ ಭೂವ್ಯವಹಾರಗಳು ಅಧಿಕಾರಸ್ಥರು ಅಕ್ರಮವಾಗಿ ಹಣ ಮಾಡುವ ಒಂದು ಮಾರ್ಗವಷ್ಟೆ. ತಮ್ಮ ಸ್ಥಾನಬಲವನ್ನು Unethical ಆಗಿ ಬಳಸಿಕೊಂಡು ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳದೆ ದುಡ್ಡು ಮಾಡುವ ಅನೇಕ ಮಾರ್ಗಗಳು ಸರ್ಕಾರದ ಒಳಗೆ ಮತ್ತು ಹೊರಗೆ ಇವೆ. ಹಾಗಾಗಿಯೆ, ಸಿಕ್ಕಿಹಾಕಿಕೊಳ್ಳುವಂತಹ ಹಗರಣಗಳನ್ನು ಮಾಡದೆ ಇವತ್ತಿನ ನಮ್ಮ ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗದ ಖದೀಮತನದಿಂದ ಕೋಟ್ಯಾಂತರ ದುಡ್ಡು ಮಾಡುತ್ತಲೆ ಇದ್ದಾರೆ. ಅದೇ ದುಡ್ಡಿನ ಬಲದಿಂದ ಪ್ರಜಾಪ್ರಭುತ್ವವನ್ನು ಮತ್ತು ಸಮಾಜದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಲೆ ಹೋಗುತ್ತಿದ್ದಾರೆ.

ವಿಪರ್ಯಾಸವೇನೆಂದರೆ, ಇದನ್ನೆಲ್ಲ ಘಟ್ಟಿಸಿ ಕೇಳಬೇಕಾದ, ಜನತೆಯನ್ನು Educate ಮಾಡಬೇಕಾದ ವಿರೋಧಪಕ್ಷದವರೂ ಅದೇ ಮಾರ್ಗದಲ್ಲಿ ಸಾಗಿ ಬಂದಿದ್ದಾರೆ.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಶೋಭಾಕರಂದ್ಲಾಜೆ.ಕಾಮ್)

ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ

-ರೂಪ ಹಾಸನ

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಸರ್ಕಾರ ನಾಡಿನ ಜನರಿಗೆ ವಿಶೇಷ ಕೊಡುಗೆಯೊಂದನ್ನು ನೀಡಲು ಸಿದ್ಧತೆ ನಡೆಸಿದೆ. ಅದು ದಿಢೀರನೆ ರೂಪುಗೊಂಡ ಉಡುಗೊರೆಯಲ್ಲ. ವರ್ಷ ವರ್ಷವೂ ಇಷ್ಟಿಷ್ಟೆಂದು ಸದ್ದಿಲ್ಲದೇ ನೀಡುತ್ತ ಬಂದಿರುವ ಉಡುಗೊರೆಯಾಗಿದ್ದು, ಈ ಬಾರಿ ಅದು ಮೇಲ್ನೋಟಕ್ಕೆ ಕಾಣುವಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ಈ ಉಡುಗೊರೆಯ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗುವ ಸಾಧ್ಯತೆ ಇದ್ದು, ಅದರ ಪರಿಣಾಮದಿಂದ ಕನ್ನಡಕ್ಕೆ ಶಿಕ್ಷಣದಲ್ಲಿ ಉಳಿಗಾಲವೇ ಇಲ್ಲದಂತೆ ಸರ್ವನಾಶವಾಗುವಂತ ಕಾಲ ಸನ್ನಿಹಿತವಾಗಿದೆ.

ಇದೇ ಅಕ್ಟೋಬರ್ 28 ರೊಳಗೆ, ಐವರಿಗಿಂತಾ ಕಡಿಮೆ ಮಕ್ಕಳಿರುವ 617 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆ ಪ್ರದೇಶದ ಸುತ್ತಮುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಉತ್ತಮ ಸಾರಿಗೆ ಸಂಪರ್ಕ, ಜನವಸತಿ ಹಾಗೂ ಸಂಪನ್ಮೂಲ ಹೊಂದಿರುವ ಶಾಲೆಗಳಿಗೆ ವಿಲೀನಗೊಳಿಸುವಂತೆ  ಆದೇಶ ಹೊರಡಿಸಿರುವ ಸರ್ಕಾರ ಒಂದು ವೇಳೆ ಆ ಪ್ರದೇಶದ ಸುತ್ತಮುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಶಾಲೆಗಳು ಖಾಸಗಿ ಶಾಲೆಯಾದರೂ ಸರಿ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಹಾಗೆಯೇ ಮುಂದುವರೆಸಬೇಕು ಎಂದು ರಿಯಾಯಿತಿಯನ್ನೂ ಕೊಟ್ಟಿದೆ! ಶಾಲಾ ವಿಲೀನ ಸಮಿತಿಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಚಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಹಾಗೇ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿದ ಕೂಡಲೆ ಹತ್ತಕ್ಕಿಂತಾ ಕಡಿಮೆ ಮಕ್ಕಳಿರುವ 2557 ಶಾಲೆಗಳನ್ನು ಕೂಡ ಪಕ್ಕದ ಶಾಲೆಗಳಿಗೆ ವರ್ಗಾಯಿಸಲು ಕ್ರಮ ಕೈಗೊಂಡಿದೆ.

ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲೆ ಇದ್ದರೂ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಹೆಚ್ಚಾಗಿ ಬಡ ಹಾಗೂ ಕೆಳ ಸ್ತರದ ಮಕ್ಕಳು ಮಾತ್ರ. ಅದರಲ್ಲೂ ಹೆಚ್ಚಿನವರು ಹೆಣ್ಣುಮಕ್ಕಳೆಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಆ ಶಾಲೆಗಳೂ ಮುಚ್ಚಲ್ಪಟ್ಟರೆ ದೂರದ ಸರ್ಕಾರಿ ಶಾಲೆಗಳಿಗೆ ಅಥವಾ ದುಬಾರಿ ವಂತಿಗೆ ಹಾಗೂ ಫೀಸು ನೀಡಿ, ಖಾಸಗಿ ಶಾಲೆಗೆ ಕಳಿಸಲು ಸಾಧ್ಯವಾಗದೇ ಇಂತಹ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಉಚಿತ ಹಾಗೂ ಕಡ್ಡಾಯ ಶಿಕ್ಷಣದ ನಿಯಮವಿದ್ದರೂ ಇಂದಿಗೂ ಲಕ್ಷಾಂತರ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ಹೊರಗೇ ಇದ್ದಾರೆ. ಗ್ರಾಮೀಣ ಭಾಗದಲ್ಲಿ ಮೊದಲಿಗೇ ಶಾಲೆಗಳು ದೂರ ದೂರದಲ್ಲಿದ್ದು, ಇನ್ನೂ ಹೀಗೆ ಶಾಲೆಗಳನ್ನು ಮುಚ್ಚುತ್ತ ಹೋದರೆ ಎಲ್ಲರಿಗೂ ಶಿಕ್ಷಣ ಎಂಬ ಸಾಮಾಜಿಕ ನ್ಯಾಯದ ಮೂಲ ಕಲ್ಪನೆಯೇ ಬುಡ ಮೇಲಾಗುತ್ತದೆ.

ಶಿಕ್ಷಣವನ್ನು ಸಾರ್ವತ್ರಿಕವಾಗಿ, ಉಚಿತವಾಗಿ ಮತ್ತು ಕಡ್ಡಾಯವಾಗಿ ನೀಡಬೇಕೆಂಬ ನಿಯಮ ಸಂವಿಧಾನದಲ್ಲಿಯೇ ಸೂಚಿತವಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕೆಂದು 1993 ರಲ್ಲಿ ಸರ್ವೋಚ್ಚ ನ್ಯಾಯಾಲಯ ಘೋಷಿಸಿದ ನಂತರ ಈ ತೀರ್ಪಿನ ಆಧಾರವಾಗಿ ಸಂವಿಧಾನದ 86ನೇ ತಿದ್ದುಪಡಿಯಲ್ಲಿ ಈ ನಿಯಮವನ್ನೂ ಸೇರಿಸಿಕೊಂಡು, ಜೀವಿಸುವ ಹಕ್ಕಿನ ಜೊತೆಗೆ ಶಿಕ್ಷಣ ಪಡೆಯುವುದನ್ನೂ ಮೂಲಭೂತ ಹಕ್ಕೆಂದು ಹೇಳುವ ಹೊಸ ಪರಿಚ್ಛೇದ 21-ಎ ಯನ್ನು ಸೇರಿಸಲಾಗಿದೆ. ಈ ನಿಯಮ ಹಾಗೂ ನೂತನವಾಗಿ 2009ರಲ್ಲಿ ರೂಪಿತವಾದ ಶಿಕ್ಷಣ ಹಕ್ಕು ಕಾಯ್ದೆ [ಆರ್.ಟಿ.ಇ./RTE]ಯಡಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸಬೇಕು. ಅದರಂತೆ 6-14 ವರ್ಷ ವಯಸ್ಸಿನವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಹಾಗೂ ಮಗುವಿನ ವಾಸಸ್ಥಳದ ಹತ್ತಿರದಲ್ಲಿಯೇ ಶಿಕ್ಷಣವನ್ನು ಸರ್ಕಾರವೇ ನೀಡಬೇಕು. ಈ ಕಾಯ್ದೆಯ ಮೂಲ ನಿಯಮವನ್ನೇ ನಮ್ಮ ರಾಜ್ಯ ಸರ್ಕಾರ ಗಾಳಿಗೆ ತೂರಿ ನಿರಂತರವಾಗಿ ಶಾಲೆಗಳನ್ನು ಮುಚ್ಚುತ್ತಿರುವುದೇ ಸಂವಿಧಾನಕ್ಕೆ ವಿರುದ್ಧವಾದುದು.

ಈ ಶಾಲೆ ಮುಚ್ಚುವ ಕ್ರಿಯೆಯನ್ನು ಸರ್ಕಾರ ನಾಜೂಕಾದ ಭಾಷೆಯಲ್ಲಿ ಶಾಲೆ ಜೋಡಣೆ ಎಂದು ಕರೆಯುತ್ತಿದೆ. ನಿಜವಾಗಿ ನೋಡಿದರೆ ಇದು ಅಧಿಕೃತವಾಗಿ ಮತ್ತು ಶಾಶ್ವತವಾಗಿ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯೇ ಆಗಿದೆ. ಇಂತಹ ಶಾಲಾ ವಿಲೀನ ಕೆಲಸವು ನಿರಂತರ ಪ್ರಕ್ರಿಯೆ ಯಾಗಿದ್ದು ಅದನ್ನು ನಿಯತಕಾಲಿಕವಾಗಿ ಮಾಡಲಾಗುತ್ತದೆಂಬ ಎಚ್ಚರಿಕೆಯನ್ನೂ ಸರ್ಕಾರಿ ಆದೇಶದಲ್ಲಿ ಸೇರಿಸಲಾಗಿದೆ. ಹೀಗಾಗಿ ಇದು, ಸರ್ಕಾರಿ ಶಾಲೆಗಳೆಲ್ಲ ಮುಚ್ಚುವವರೆಗೂ ನಿರಂತರವಾಗಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯೆಂದು ನಾವು ತಣ್ಣಗೆ ಕುಳಿತಿರಬೇಕು!

ಇದು ದಿಢೀರನೆ ಈ ವರ್ಷ ತೋರಿರುವ ಹೊಸ ಸಮಸ್ಯೆಯಲ್ಲ. ಈಗಾಗಲೇ ಕಳೆದೊಂದು ದಶಕದಿಂದ ಸದ್ದಿಲ್ಲದೇ 10500 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಕಳೆದ 2009-2010ರಲ್ಲಿ 485 ಶಾಲೆಗಳನ್ನು ಮುಚ್ಚಲಾಗಿತ್ತು. ಅದರ ಹಿಂದಿನ ವರ್ಷ 500 ಶಾಲೆಗಳು ಮುಚ್ಚಿವೆ. ಶಾಲೆ ಮುಚ್ಚಲ್ಪಡುವ ಪ್ರಮಾಣ ಇನ್ನು ಮುಂದೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಮುಂದಿನ 10-15 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳೆಲ್ಲ ಮುಚ್ಚಲ್ಪಡುವುದು ನಿರ್ವಿವಾದ. ಬಹುಶಃ ಸರ್ಕಾರಕ್ಕೆ ಬೇಕಾಗಿರುವುದೂ ಇದೇ! ಮಾತೃಭಾಷಾ ಶಿಕ್ಷಣಕ್ಕೆ ಆಧ್ಯತೆ ನೀಡುತ್ತೇವೆ ಎಂದು ಹೇಳುತ್ತಿರುವ ನಮ್ಮ ಸರ್ಕಾರದ ಶಿಕ್ಷಣ ಖಾಸಗಿಕರಣ ಹಾಗೂ ಆಂಗ್ಲಭಾಷಾ ಪ್ರೀತಿಯ ಗೋಪ್ಯ ಪ್ರಣಾಳಿಕೆ ಈಗ ನಿಧಾನಕ್ಕೆ ಬೆಳಕಿಗೆ ಬರುತ್ತಿದೆಯಷ್ಟೇ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ, ಹಳ್ಳಿಗಳಲ್ಲೂ ತಲೆ ಎತ್ತಿರುವ  ಖಾಸಗಿ ಶಾಲೆಗಳಲ್ಲಿ ಈ ಮಕ್ಕಳು ದಾಖಲಾಗುತ್ತಿರುವುದು. ಅವುಗಳೆಲ್ಲ ಆಂಗ್ಲ ಮಾಧ್ಯಮ ಶಾಲೆಗಳೆಂದು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. 1994 ರಿಂದ ಈಚೆಗೆ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆಗೆ ಅವಕಾಶ ನೀಡಬಾರದೆಂಬ ಸರ್ಕಾರಿ ಆದೇಶವಿದೆ. ಆದರೆ ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದಿರುವ ಸಾವಿರಾರು ಶಾಲೆಗಳು ಬೋಧಿಸುತ್ತಿರುವುದು ಆಂಗ್ಲ ಮಾಧ್ಯಮದಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ಗುಟ್ಟು. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಹಾಗೂ ಸರ್ಕಾರದ ವಿವಿಧ ಹಂತದ ಅಧಿಕಾರಶಾಹಿಯ ನಡುವೆ ಅನೂಚಾನವಾಗಿ ನಡೆದು ಬಂದಿರುವ ಕೊಡು-ಕೊಳುವ ಒಳ ಒಪ್ಪಂದದಿಂದ ಹಾಗೂ ಹೆಚ್ಚಿನ ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರೂ ಮಠಾಧೀಶರು, ರಾಜಕಾರಣಿಗಳು, ಪ್ರತಿಷ್ಠಿತ ಅಧಿಕಾರಿಗಳು ಆಗಿರುವುದರಿಂದ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪರಿಸ್ಥಿತಿ ಇದಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅನುಮತಿ ಪಡೆದ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ಬೋಧಿಸದಂತೆ ತಡೆಯುವ ನೈತಿಕಶಕ್ತಿ ಹಾಗೂ ಇಚ್ಛಾಶಕ್ತಿಯನ್ನೇ ಕಳೆದುಕೊಂಡಿರುವ ನಮ್ಮ ಸರ್ಕಾರ, ಈಗ ಸರ್ಕಾರಿ ಶಾಲೆಗಳನ್ನೇ ಮುಚ್ಚುತ್ತಾ ಲಕ್ಷಾಂತರ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಮೂಲಕ, ಅವರ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದೆ.

ಮಕ್ಕಳ ಸೃಜನಶೀಲ-ಗುಣಾತ್ಮಕ ಶಿಕ್ಷಣದ ಕುರಿತು ಯೋಚಿಸುವ ಯಾವುದೇ ಸರ್ಕಾರ ಪ್ರಾಥಮಿಕ ಹಂತದಲ್ಲಾದರೂ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಸಾಮಾಜಿಕ ಅಸಮಾನತೆಯ ಮೂಲ ಬೇರುಗಳಿರುವುದು ಅಸಮಾನ ಶಿಕ್ಷಣದ ಹಂಚಿಕೆಯಿಂದಾದ್ದರಿಂದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ಯಾವುದೇ ಬೇಧವಿಲ್ಲದೇ ಎಲ್ಲರಿಗೂ ಸಮಾನವಾದ ಶಾಲಾ ವ್ಯವಸ್ಥೆಯನ್ನು ರೂಪಿಸಬೇಕು. ಇದನ್ನು ಸಾಧ್ಯವಾಗಿಸಲು ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ತುರ್ತಾಗಿ ಜಾರಿಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಷ್ಟೇ ಈಗ ಉಳಿದಿರುವ ದಾರಿ. ನಮ್ಮ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳು, ಶಿಕ್ಷಕರು, ಜನರೆಲ್ಲರೂ ಒಂದಾಗಿ ಕನ್ನಡ ಶಾಲೆಗಳನ್ನು ಉಳಿಸಲು, ಪ್ರತಿಯೊಂದು ಮಗುವಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಸಾರ್ವತ್ರಿಕವಾಗಿ ನೀಡುವಂತೆ ಸರ್ಕಾರದ ಮೇಲೆ ನೈತಿಕ ಒತ್ತಡವನ್ನು ತರಲು ಈಗಲಾದರೂ ಒಂದು ತೀವ್ರ ತೆರನಾದ ಜನಾಂದೋಲನವನ್ನು ರೂಪಿಸದಿದ್ದರೆ, ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಕನ್ನಡ ಮರೆಯಾಗಿ ಆಡು ಭಾಷೆಯಾಗಿ ಮಾತ್ರ ನಮ್ಮೊಂದಿಗಿರುತ್ತದಷ್ಟೇ. ಜೊತೆಗೆ ಲಕ್ಷಾಂತರ ಮಕ್ಕಳು ಮೂಲಭೂತ ಶಿಕ್ಷಣದ ಹಕ್ಕನ್ನು ಕಳೆದುಕೊಂಡು ಬೀದಿಪಾಲಾಗುತ್ತಾರೆ.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ವೆಬ್‌ಸೈಟ್)