Daily Archives: October 2, 2011

ಜೀವನದಿಗಳ ಸಾವಿನ ಕಥನ – 5

-ಡಾ.ಎನ್.ಜಗದೀಶ್ ಕೊಪ್ಪ

ಆಧುನಿಕ ಜಗತ್ತನ್ನು ಅಭಿವೃದ್ಧಿಯ ಯುಗ ಎಂದು ಕರೆಯುತ್ತಿರುವ ಈ ಸಂದರ್ಭದಲ್ಲಿ “ಅಭಿವೃದ್ಧಿ” ಕುರಿತಂತೆ ನಿರ್ವಚಿಸುತ್ತಿರುವ ಕ್ರಮ ಕೂಡ ವಿವಾದಕ್ಕೆ ಒಳಗಾಗಿದ್ದು ಈ ಕುರಿತ ನಮ್ಮ ಗ್ರಹಿಕೆ ಬದಲಾಗಬೇಕಾಗಿದೆ. ಎಲ್ಲವನ್ನೂ ವಿಶಾಲ ದೃಷ್ಟಿಕೋನದಿಂದ ನೋಡುವ ಬದಲು, ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ, ಗ್ರಹಿಸುವ ನೆಲೆಗಟ್ಟು ಇದೀಗ ಅತ್ಯಗತ್ಯವಾಗಿದೆ. ವರ್ತಮಾನದ ಅರ್ಥಶಾಸ್ತ್ರ ಪರಿಭಾಷೆಯಲ್ಲಿ ವ್ಯವಹರಿಸುತ್ತಿರುವ ಜಗತ್ತು, ಸಾಮಾಜಿಕ ಹಾಗೂ ಚಾರಿತ್ರಿಕ ದೃಷ್ಟಿಕೋನದಿಂದಲೂ ತನ್ನನ್ನು ತಾನು ವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.

ಜಗತ್ತಿನ ಯಾವುದೇ ರಾಷ್ಟ್ರವಿರಲಿ, ನದಿಗಳ ಇಂದಿನ ನೈಜಸ್ಥಿತಿಯನ್ನು ಅರಿತಾಗ ನಮ್ಮ ಅಭಿವೃದ್ಧಿ ಕುರಿತಂತೆ ಗ್ರಹಿಕೆಯ ನೆಲೆಗಟ್ಟು ಖಂಡಿತಾ ಬದಲಾಗಬೇಕೆನಿಸುತ್ತದೆ. ಯಾಕೆಂದರೆ, ಯಾವ ಅಡೆ-ತಡೆ ಇಲ್ಲದೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳೆಂಬ ತಡೆಗೋಡೆ ನಿರ್ಮಾಣವಾಗುತ್ತಿದ್ದಂತೆ ನದಿಪಾತ್ರದ ಪರಿಸರವಷ್ಟೇ ಅಲ್ಲ, ನದಿಗಳ ಮೂಲ ಸ್ವರೂಪ ಹೇಳ ಹೆಸರಿಲ್ಲದಂತೆ ನಾಶವಾಯಿತು. ಅಣೆಕಟ್ಟುಗಳ ನಿರ್ಮಾಣದಿಂದಾಗಿ ಜಗತ್ತಿನಾದ್ಯಂತ ಬಹುತೇಕ ನದಿಗಳಿಗೆ ಸಮುದ್ರ ಸೇರುವ ಸಾಧ್ಯತೆ ಇಲ್ಲವಾಯಿತು. ಅಮೆರಿಕದಲ್ಲಿ ಹರಿಯುವ ಕೊಲರಾಡೊ ನದಿ 1960ರಿಂದೀಚೆಗೆ ತನ್ನ ಸುದೀರ್ಘ 50 ವರ್ಷಗಳಲ್ಲಿ ಪ್ರವಾಹ ಬಂದಾಗ ಎರಡು ಬಾರಿ ಸಮುದ್ರ ಸೇರಿದ್ದು ಬಿಟ್ಟರೆ, ಉಳಿದಂತೆ ಅಣೆಕಟ್ಟುಗಳ ಕೆಳಭಾಗದಲ್ಲೇ ಬತ್ತಿ ಹೋಗುತ್ತಿದೆ. ಇದು ಅಮೆರಿಕಾದ ನದಿಯೊಂದರ ವಸ್ತು ಸ್ಥಿತಿ ಮಾತ್ರವಲ್ಲ, ಜಗತ್ತಿನ ಎಲ್ಲಾ ನದಿಗಳ ಶೋಚನೀಯ ಸ್ಥಿತಿಯೂ ಇದೇ ಆಗಿದೆ.

ಅಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು, ಅವುಗಳ ಇಕ್ಕೆಲಗಳ ಮುಖಜಭೂಮಿಯಲ್ಲಿ ಮಣ್ಣಿನ ಫಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೆ ನದಿಗಳಲ್ಲಿ ಮೀನುಗಾರಿಕೆಯನ್ನೇ ಕುಲ ಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೆರಿಕಾದಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ, ಶತಮಾನದ ಹಿಂದೆ 1200 ಕುಟುಂಬಗಳಿದ್ದ ಕಿಕಾಪೂ ಜನಾಂಗ, ಈಗ 40 ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ಡೆ-ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ.

ಜಗತ್ತಿನ ಯಾವುದೇ ನದಿಯಿರಲಿ, ಪ್ರತಿ ನದಿಗೂ ಹರಿಯುವಿಕೆಯಲ್ಲಿ, ನೀರಿನ ಗುಣದಲ್ಲಿ, ಉದ್ದ-ವಿಸ್ತಾರದಲ್ಲಿ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಕೆಲವು ನದಿಗಳು ಕೆಂಪಾಗಿ ರಭಸದಿಂದ ಹರಿಯುವ ಗುಣ ಹೊಂದಿದ್ದರೆ, ಇನ್ನು ಕೆಲವು ನದಿಗಳು ಅತ್ಯಂತ ವಿಶಾಲವಾಗಿ (ಇವುಗಳ ಅಗಲ 2 ರಿಂದ 4 ಕಿ.ಮೀ.) ನಿಧಾನವಾಗಿ ಹರಿಯುವ ಗುಣ ಹೊಂದಿವೆ. ಭಾರತದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಗೆ ಇರುವ ವೇಗ, ಗಂಗೆ ಅಥವಾ ಕಾವೇರಿಗೆ ಇಲ್ಲ. ಇಂತಹ ವಿಶಿಷ್ಠ ಗುಣಗಳಿಗೆ ಅನುಗುಣವಾಗಿ ನದಿಪಾತ್ರದಲ್ಲಿ ಜೈವಿಕ ವೈವಿಧ್ಯತೆ, ಪರಿಸರ, ಕೃಷಿ ಚಟುವಟಿಕೆ ರೂಪುಗೊಂಡಿರುತ್ತದೆ.

ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣದಿಂದ ಆದ ಅತ್ಯಂತ ದೊಡ್ಡ ಅನಾಹುತವೆಂದರೆ, ಹಲವಾರು ಜಾತಿಯ ಮೀನುಗಳ ವಿನಾಶ. ವಂಶಾಭಿವೃದ್ಧಿಗಾಗಿ ನದಿಗಳಲ್ಲಿ ಸಾವಿರಾರು ಕಿ.ಮೀ. ಈಜಿ, ಮೊಟ್ಟೆ ಇಟ್ಟು ಮರಿ ಮಾಡುತ್ತಿದ್ದ ಮೀನುಗಳ ಸಂತತಿ ಹಾಗೂ ಸಮುದ್ರದ ಉಪ್ಪು ನೀರಿನಿಂದ ನದಿಗಳ ಸಿಹಿ ನೀರಿಗೆ ಆಗಮಿಸಿ, ವಂಶವನ್ನು ವೃದ್ಧಿಸುತ್ತಿದ್ದ ಅನೇಕ ಮೀನುಗಳ ಸಂತತಿ ಈಗ ಕೇವಲ ನೆನಪು ಮಾತ್ರ.

ಇತ್ತೀಚೆಗೆ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಕುರಿತಂತೆ ಗಂಭೀರ ಅಧ್ಯಯನ ನಡೆಯುತ್ತಿದ್ದು, ಸಂಗ್ರಹವಾದ ನೀರಿನ ಗುಣ, ಉಷ್ಣಾಂಶಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದು ದೃಢಪಟ್ಟಿದೆ. ಅಲ್ಲದೆ ಜಲಾಶಯದ ನೀರು ಹಲವಾರು ತಿಂಗಳ ಕಾಲ ಶೇಖರವಾಗುವುದರಿಂದ, ನೀರಿನ ಕೊಳೆಯುವಿಕೆಯ ಪ್ರಕ್ರಿಯೆಯಿಂದಾಗಿ ಅನೇಕ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.

ಸ್ಪೀಡನ್ ಮೂಲದ ಪರಿಸರ ತಜ್ಞರು, ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡಗಳು ಸೇರಿದಂತೆ ಜಗತ್ತಿನಾದ್ಯಂತ ನೂರಾರು ನದಿಗಳಲ್ಲಿ ಈ ಕುರಿತು ಅಧ್ಯಯನ ಕೈಗೊಂಡು, ನೀರಿನ ಮೂಲ ಗುಣದ ಬದಲಾವಣೆಯ ಬಗ್ಗೆ ಖಚಿತಪಡಿಸಿದ್ದಾರೆ. ಇದರಿಂದಾಗಿ ನಿಖರವಾದ ಪರಿಣಾಮ ಅರಿಯಬೇಕಾದರೆ ನಾವು ಕನಿಷ್ಠ 75 ರಿಂದ 90 ವರ್ಷ ಕಾಯಬೇಕು ಎಂದಿದ್ದಾರೆ. ಈಗಾಗಲೇ ಸಂಗ್ರಹವಾದ ನದಿನೀರಿನಲ್ಲಿರುವ ಖನಿಜಾಂಶಗಳು ಜಲಾಶಯದಲ್ಲಿ ಕರಗುವುದರಿಂದ ಲವಣಾಂಶ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಅಣೆಕಟ್ಟು ಮತ್ತು ಜಲಾಶಯಗಳಿಂದ ಆದ ಮತ್ತೊಂದು ನೈಸರ್ಗಿಕ ದುರಂತವೆಂದರೆ, ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋದ ಅರಣ್ಯ ಹಾಗೂ ಅಪರೂಪದ ಗಿಡ ಮೂಲಿಕೆಯ ಸಸ್ಯ ಸಂತತಿ. ಈಗಾಗಲೇ ವಿಶ್ವದಾದ್ಯಂತ 45 ಸಾವಿರ ಚ.ಕಿ.ಮೀ. ಅರಣ್ಯ ಪ್ರದೇಶ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಗಿದೆ.

ಶ್ರೀಲಂಕಾದಲ್ಲಿ ನಿರ್ಮಿಸಿದ 5 ಜಲಾಶಯಗಳಿಂದಾಗಿ 8 ಅಪರೂಪದ ಜೀವಿಗಳ ಸಂತತಿ ವಿನಾಶದ ಅಂಚಿಗೆ ತಲುಪಿವೆ. ಇವುಗಳಲ್ಲಿ ಕೆಂಪುಮೂತಿಯ ಲಂಗೂರ್(ಮಂಗ ಪ್ರಭೇದ) ಸಹ ಸೇರಿದೆ. ಜೊತೆಗೆ 800 ಆನೆಗಳಿಗೆ ವಲಸೆ ಹೋಗುವ ದಾರಿ ಬಂದ್‌ ಆಗಿ ಅವುಗಳು ಅತಂತ್ರವಾಗಿವೆ. ಇವು ಪರಿಸರ ಮತ್ತು ಪ್ರಾಣಿಗಳ ಕುರಿತ ಕತೆಯಾದರೆ, ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದ ಜನತೆಯ ನೋವು ಜಗತ್ತಿನಾದ್ಯಂತ ಅರಣ್ಯರೋದನವಾಗಿದೆ. ಇಂತಹ ಯೋಜನೆಗಳ ಫಲವಾಗಿ ಸ್ಥಳೀಯರನ್ನು ಒಕ್ಕಲೆಬ್ಬಿಸಿ, ಬೇರೆಡೆ ನಿವೇಶನ, ಭೂಮಿ ನೀಡಿದ್ದರೂ ಸಹ ಅವೆಲ್ಲಾ ಅರಣ್ಯ ಪ್ರದೇಶವೇ ಆಗಿವೆ. ಒಂದೆಡೆ ಹಿನ್ನೀರಿನಲ್ಲಿ, ಮತ್ತೊಂದೆಡೆ ಜನವಸತಿ ಪ್ರದೇಶದ ನೆಪದಲ್ಲಿ ಅರಣ್ಯ ಭೂಮಿಯ ವಿಸ್ತಾರ ಕುಗ್ಗುತ್ತಿದ್ದು, ಅರಣ್ಯಜೀವಿಗಳೆಲ್ಲಾ ನಾಡಿನತ್ತ ಮುಖಮಾಡತೊಡಗಿವೆ. ಇವುಗಳ ಜೊತೆ ನಿಸರ್ಗದ ಮಡಿಲಲ್ಲಿ, ಸ್ವಚ್ಛಂದವಾಗಿ ಧುಮ್ಮಿಕ್ಕಿ ಹರಿವ ನದಿಗಳ ಜಲಧಾರೆಯಿಂದ ಕಂಗೊಳಿಸುತ್ತಿದ್ದ ಜಲಪಾತಗಳೆಲ್ಲಾ ಈಗ ಕಣ್ಮರೆಯಾಗುತ್ತಿವೆ. ಮಳೆಗಾಲದಲ್ಲಿ ನದಿಯ ಪ್ರವಾಹದ ಪರಿಣಾಮ, ಜಲಾಶಯದಿಂದ ಬಿಡುಗಡೆಗೊಂಡ ನೀರಿನಿಂದಾಗಿ ಕೆಲವು ಕಾಲ ಜೀವಂತವಾಗಿರುವ ಇವು ಉಳಿದ ಋತುಮಾನಗಳಲ್ಲಿ ಅವಶೇಷಗಳಂತೆ ಕಾಣುತ್ತವೆ. ಇಂದು ಬಹುತೇಕ ಜಲಪಾತಗಳು ತಮ್ಮ ಹಿಂದಿನ ವೈಭವವನ್ನು ಕಳೆದುಕೊಂಡಿವೆ.

ಜಲಾಶಯಗಳ ನಿರ್ಮಾಣದಿಂದಾಗಿ ನದಿ ನೀರಿನಲ್ಲಿದ್ದ ಖನಿಜ ಮತ್ತು ಲವಣಾಂಶಗಳ ನಷ್ಟ ಮತ್ತೊಂದು ಬಗೆಯ ದುರಂತ. ಪರ್ವತ ಗಿರಿ ಶ್ರೇಣಿಗಳಿಂದ ಹರಿಯುತ್ತಿದ್ದ ನೀರಿನಲ್ಲಿದ್ದ ಖನಿಜ, ಲವಣಾಂಶಗಳು ಜಲಚರಗಳಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ನದಿ ತೀರಗಳಿಗೆ ಗಟ್ಟಿತನವನ್ನು ಒದಗಿಸಿ, ಭೂ ಸವೆತವನ್ನು ತಡೆಗಟ್ಟುತ್ತಿತ್ತು. ಯಾವಾಗ ಜಲಾಶಯಗಳು ನಿರ್ಮಾಣವಾದವೋ, ನದಿ ನೀರಿನ ಖನಿಜ, ಲವಣಾಂಶಗಳೆಲ್ಲಾ ಜಲಾಶಯದ ತಳಭಾಗ ಸೇರಿ, ಶೇಖರವಾಗುತ್ತಿರುವ ಹೂಳಿನಲ್ಲಿ ಮಿಶ್ರವಾಗಿ, ಸಿಹಿ ನೀರನ್ನು ಉಪ್ಪು ನೀರನ್ನಾಗಿ ಪರಿವರ್ತಿಸಿದವು. ಇದಲ್ಲದೆ ಅಣೆಕಟ್ಟು ನಿರ್ಮಾಣದಿಂದ ನದಿಯ ತೀರಗಳು ಶಿಥಿಲಗೊಂಡವಲ್ಲದೆ, ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಹೊರಬಿಟ್ಟ ನೀರಿನ ಜೊತೆ ಹೂಳೂ ಸೇರಿ ನದಿಯ ಇಕ್ಕೆಲಗಳ ಫಲವತ್ತಾದ ಭೂಮಿಯನ್ನು ಚೌಳುಭೂಮಿಯನ್ನಾಗಿ ಮಾಡಿದವು. ಅಣೆಕಟ್ಟು ನಿರ್ಮಾಣಕ್ಕೆ ಮೊದಲು ನದಿಗಳು ನೀರಿನ ಜೊತೆ ತಂದು ಹಾಕುತ್ತಿದ್ದ ಮೆಕ್ಕಲು ಮಣ್ಣಿನಿಂದ ಈ ಭೂಮಿಗಳು ವಂಚಿತವಾದವು.

ಅಮೆರಿಕಾದ ಕೊಲರಾಡೊ ನದಿಗೆ ಕಟ್ಟಿದ ಹೂವರ್ ಅಣೆಕಟ್ಟಿನ ಜಲಾಶಯದ ಕೆಳಭಾಗದ 145 ಕಿ.ಮೀ. ಉದ್ದಕ್ಕೂ 110 ದಶಲಕ್ಷ ಕ್ಯೂಬಿಕ್ ಮೀಟರ್ ಸವಕಲು ಮಣ್ಣು ಸಮುದ್ರ ಸೇರಿದೆ. ಅಲ್ಲದೆ ನದಿಯ ಆಳ ಕೇವಲ 12 ಅಡಿಗೆ ಸೀಮಿತಗೊಂಡಿದೆ. ಈಜಿಪ್ಟ್‌ನ ನೈಲ್ ನದಿ ಅಲ್ಲಿನ ಕೃಷಿಕರ ಪಾಲಿಗೆ ವರದಾನವಾಗಿತ್ತು. ಪ್ರತಿ ವರ್ಷ ಪ್ರವಾಹದ ವೇಳೆ ಅದು ಹೊತ್ತು ತರುತ್ತಿದ್ದ ಫಲವತ್ತಾದ ಮೆಕ್ಕಲು ಮಣ್ಣು ಕೃಷಿ ಚಟುವಟಿಕೆಗೆ ಯೋಗ್ಯ ಗೊಬ್ಬರದಂತೆ ಬಳಕೆಯಾಗುತ್ತಿತ್ತು. ಆದರೆ ಈ ನದಿಗೆ ನಾಸರ್ ಅಣೆಕಟ್ಟು ನಿರ್ಮಾಣವಾದ ನಂತರ, ನದಿ ನೀರಿನಲ್ಲಿ ಹರಿಯುವ ಖನಿಜ, ಲವಣಾಂಶದ ಬದಲು, ಜಲಾಶಯದ ನೀರಿನಲ್ಲಿರುವ ಅಲ್ಯುಮಿನಿಯಂ ಮತ್ತು ಕಬ್ಬಿಣಾಂಶ ರೈತರ ಕೃಷಿಭೂಮಿಗೆ ಜಮೆಯಾಗತೊಡಗಿವೆ. ಕೃಷಿ ಭೂಮಿಯಲ್ಲಿನ ಈ ಅಂಶಗಳನ್ನು ತಗ್ಗಿಸಲು ರೈತರು ವಿವಿಧ ರಾಸಾಯನಿಕಗಳನ್ನು ಬಳಸುತ್ತಾ ಬಸವಳಿದಿದ್ದಾರೆ. ಭೂಮಿ ಕೂಡ ಬಂಜರಾಗಿ ಪರಿವರ್ತನೆಯಾಗುತ್ತಿದೆ.

ಅಮೆರಿಕಾದಲ್ಲಿ ಹರಿಯುವ ಮಿಸಿಸಿಪ್ಪಿ ನದಿಗೆ ಮಿಸ್ಸಾರಿ ಎಂಬಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ, 1953ರಿಂದ ಇಲ್ಲಿಯವರೆಗೆ ಈ ಅಣೆಕಟ್ಟಿನ ಪ್ರಭಾವದಿಂದಾಗಿ ಲೂಸಿಯಾನ, ಅಂದರೆ ಜಲಾಶಯದ ಕೆಳಗಿನ ಪ್ರಾಂತ್ಯದಲ್ಲಿ, ಜಲಾಶಯದಿಂದ ಬಿಡುಗಡೆ ಮಾಡಿದ ನೀರಿನ ರಭಸಕ್ಕೆ 10 ಸಾವಿರ ಹೆಕ್ಟೇರ್ ಭೂಮಿ ನದಿ ನೀರಿನಲ್ಲಿ ಕೊಚ್ಚಿಹೋಗುವುದರ ಜೊತೆಗೆ ಇದರಲ್ಲಿ ಅರ್ಧದಷ್ಟು ಭೂಮಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದಿದೆ.

ಸಹಜವಾಗಿ ಸಮುದ್ರ ಸೇರುತ್ತಿದ್ದ ನದಿಗಳ ಸಹಜ ಪ್ರಕ್ರಿಯೆ ಸ್ಥಗಿತಗೊಂಡ ನಂತರ, ಅನೇಕ ಕಡಲ ತೀರಗಳು ತಮ್ಮ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಂಡು ವಿಕೃತ ರೂಪ ತಾಳಿವೆ. ಇವುಗಳ ಸೌಂದರ್ಯೀಕರಣಕ್ಕಾಗಿ ಸರಕಾರಗಳು ಕೋಟ್ಯಾಂತರ ಡಾಲರ್ ವ್ಯಯ ಮಾಡುತ್ತಿವೆ.

(ಮುಂದುವರಿಯುವುದು)