ಜೀವನದಿಗಳ ಸಾವಿನ ಕಥನ – 23


– ಡಾ.ಎನ್.ಜಗದೀಶ್ ಕೊಪ್ಪ


ಬೃಹತ್ ಅಣೆಕಟ್ಟುಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಅಮೆರಿಕಾದ ನೆಲದಲ್ಲೆ ಅಣೆಕಟ್ಟು ಎಂಬ ಪರಿಕಲ್ಪನೆ  ಮನುಷ್ಯನ ಅವಿವೇಕಿತನದ ಪರಮಾವಧಿ ಎಂಬ ವಿವೇಕ ಮತ್ತು ಜ್ಞಾನ ಮೂಡಿದ್ದು ಅಚ್ಚರಿಯ ಸಂಗತಿಗಳಲ್ಲಿ ಒಂದು.

1980 ರ ದಶಕದ ವೇಳೆಗೆ ವಿಶ್ವ ವ್ಯಾಪಿಯಾಗಿ ವಿಸ್ತರಿಸಿದ ಅಣೆಕಟ್ಟುಗಳ ವಿರುದ್ಧದ ಆಂದೋಲನ 20 ನೇ ಶತಮಾನದ ಅಂತ್ಯದ ವೇಳೆಗೆ ಅಣೆಕಟ್ಟುಗಳನ್ನು ಪ್ರತಿಪಾದಿಸುತ್ತಾ ಬಂದಿದ್ದ ಬಹುರಾಷ್ಟ್ರೀಯ ಕಂಪನಿಗಳು, ವಿಶ್ವಬ್ಯಾಂಕ್ ಹಾಗೂ ಅವುಗಳ ಪ್ರತಿನಿಧಿಗಳನ್ನು ಮರುಚಿಂತನೆಗೆ ಹಚ್ಚಿದ್ದು  ಜಗತ್ತಿನ ಪರಿಸರವಾದಿಗಳ ಮಹತ್ವದ ವಿಜಯ ಎಂದು ವ್ಯಾಖ್ಯಾನಿಸಿದರೆ ಅತಿಶಯವಾಗಲಾರದು.

ಮನುಕುಲದ ಬಗ್ಗೆ, ಈ ನೆಲದ ಜೀವಜಾಲದ ಬಗ್ಗೆ ಅಪಾರ ಆಸಕ್ತಿ ಮತ್ತು ಕಾಳಜಿ ಹೊಂದಿದ್ದ ತಜ್ಞರು, ಚಿಂತಕರು ಇಂತಹ ಮಹನೀಯರು ತೋರಿದ ಹಾದಿಯಲ್ಲಿ ಎಲ್ಲಾ ರಾಷ್ಟ್ರಗಳಲ್ಲಿ ಜನಸಾಮಾನ್ಯರಿಗೆ ನದಿಗಳ ಕುರಿತು, ಪರಿಸರ ಕುರಿತು ಜಾಗೃತಿ ಉಂಟಾಯಿತು. ಇದರ ಪರಿಣಾಮ ಬೃಹತ್ ಅಣೆಕಟ್ಟುಗಳ ಭ್ರಮೆ ಎಲ್ಲೆಡೆ ಕಳಚಿ ಬಿದ್ದಿದೆ. ಆಧುನಿಕ ಜಗತ್ತಿಗೆ ಬೃಹತ್ ಯೋಜನೆಗಳು ಮಾದರಿಯಲ್ಲ ಎಂಬ ಸತ್ಯ ಅರಿವಾಗತೊಡಗಿದೆ. ಅಣೆಕಟ್ಟುಗಳ ನಿರ್ಮಾಣಕ್ಕೆ  ಆರ್ಥಿಕ ಸಹಾಯ ನೀಡುತ್ತಾ ಅವುಗಳ ಪಾಲಿಗೆ ತಾಯಿಯಂತೆ ಇದ್ದ ವಿಶ್ವಬ್ಯಾಂಕ್ ಕೂಡ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ಇದರಿಂದಾಗಿ ನಮ್ಮ ಜೀವನದಿಗಳಿಗೆ ಮರುಜೀವ ದೊರೆತಂತಾಗಿದೆ. ಇದಕ್ಕೆ ಕಾರಣವಾದ ಪ್ರತಿಭಟನೆಯ ಇತಿಹಾಸ ಇಲ್ಲಿದೆ.

ಜಗತ್ತಿನೆಲ್ಲೆಡೆ ಹರಿಯುವ ಜೀವನದಿಗಳಿಗೆ ಅಡ್ಡಲಾಗಿ ನಿರ್ಮಾಣ ಮಾಡುವ ಅಣೆಕಟ್ಟುಗಳ ಬಗ್ಗೆ ಪ್ರತಿಭಟನೆಯ ಕಿಡಿ ಹೊತ್ತಿಕೊಡಿದ್ದು, 1940ರ ದಶಕದ ಅಮೇರಿಕಾದ ಕ್ಯಾಲಿಪೋರ್ನಿಯಾದ ನೆಲದಲ್ಲಿ. ಅಲ್ಲಿನ ಕಾಡು ಮೇಡು ಹಾಗೂ ನದಿಗಳ ಕುರಿತಂತೆ ಅಪಾರ ಆಸಕ್ತಿ ತಾಳಿದ್ದ ಸಮಾನ ಮನಸ್ಕರ ಗುಂಪೊಂದು ಸಿಯೆರಾ ಕ್ಲಬ್ ಹೆಸರಿನ ಸಂಸ್ಥೆಯೊಂದನ್ನು ಜಾನ್ ಮ್ಯುಯರ್ ಎಂಬಾತನ ನೇತೃತ್ವದಲ್ಲಿ (1892) ಆರಂಭಿಸಿತ್ತು.

ಈತನ ನಿಧನದ ನಂತರ ಕ್ಲಬ್‌ನ ಚುಕ್ಕಾಣಿ ಹಿಡಿದ ಡೆವಿಡ್ ಬ್ರೌವರ್ ಅಮೇರಿಕಾ ಸರ್ಕಾರ  ಕೊಲರಾಡೊ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾದಾಗ, ಅಣೆಕಟ್ಟು ನಿರ್ಮಾಣದಿಂದ ನಿಸರ್ಗಕ್ಕೆ ಆಗುವ ಪರಿಣಾಮಗಳನ್ನು ಜನತೆಗೆ ವಿವರಿಸತೊಡಗಿದ. ಮುಂದೆ ಇದೊಂದು ಚಳುವಳಿಯಾಗಿ ಪರಿವರ್ತನೆಗೊಂಡಿತು. ಹಾಗಾಗಿ ಸಿಯೆರಾ ಕ್ಲಬ್‌ನ ಈ ಇಬ್ಬರು ಮಹನೀಯರನ್ನು ಅಮೇರಿಕಾ ಜನತೆ 20ನೇ ಶತಮಾನದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಂದು ಗುರುತಿಸಿ ಗೌರವಿಸಿದೆ.

ಅಮೇರಿಕಾ ಸರ್ಕಾರ ಕೊಲರಾಡೊ ನದಿಗೆ ಅಣೆಕಟ್ಟು ಕಟ್ಟಲು ರೂಪು ರೇಷೆಗಳನ್ನು ಸಿದ್ಧಪಡಿಸುತಿದ್ದಂತೆ ಡೆವಿಡ್ ಬ್ರೌವರ್ ತನ್ನ ಕ್ಲಬ್ ಸದಸ್ಯರು ಹಾಗು ಜನಸಾಮಾನ್ಯರನ್ನು ನದಿಯ ನೀರಿನಲ್ಲಿ ದೋಣಿಗಳ ಮೂಲಕ ಕೊಂಡೊಯ್ದು ಅಣೆಕಟ್ಟು ನಿರ್ಮಾಣದಿಂದ ಆಗುವ ಅನಾಹುತ ಮತ್ತು ಹಿನ್ನೀರಿನಿಂದ ಮುಳುಗಡೆಯಾಗುವ ರಾಷ್ಟ್ರೀಯ ಸ್ಮಾರಕ ಇವುಗಳ ಬಗ್ಗೆ ವಿವರಿಸಿ ಜನರಲ್ಲಿ ಜಾಗೃತಿ ಮೂಡಿಸಿದ. ಇಂತಹ ಒಂದು ಪ್ರಕ್ರಿಯೆಯನ್ನು ಊಹಿಸದ ಅಲ್ಲಿನ ರಾಜಕೀಯ ನಾಯಕರು ಮಾತ್ರವಲ್ಲದೆ, ಪತ್ರಿಕೆಗಳೂ ಈ ಅಚ್ಚರಿಯ ಬೆಳವಣಿಗೆಯಿಂದ ಬೆಚ್ಚಿಬಿದ್ದವು.

ಅಣೆಕಟ್ಟು ನಿರ್ಮಾಣ ಸರ್ಕಾರ  ಕುರಿತಂತೆ ಅಮೇರಿಕಾ ಫೆಡರಲ್ ಸರ್ಕಾರ  ಮುಚ್ಚಿಟ್ಟಿದ್ದ ಅನೇಕ ಸಂಗತಿಗಳನ್ನು ಬ್ರೌವರ್ ಕಿರು ಹೊತ್ತಿಗೆಯಲ್ಲಿ ಪ್ರಕಟಿಸಿ, ಅಲ್ಲಿ ಜನತೆ ಮತ್ತು ಸಂಸತ್ ಸದಸ್ಯರಿಗೆ ಹಂಚಿದ. ಇದರ ಪರಿಣಾಮ 1956ರಲ್ಲಿ ಅಣೆಕಟ್ಟು  ನಿರ್ಮಾಣದ ವಿರುದ್ಧ ಸದಸ್ಯರು ಮತ ಚಲಾಯಿಸಿ ಅಣೆಕಟ್ಟನ್ನು ತಡೆಹಿಡಿದರು. ಇದರಿಂದ ವಿಚಿಲಿತವಾಗದ ಅಮೇರಿಕಾ ಸರ್ಕಾರ ಅದೇ ನದಿಗೆ ಬೇರೆ ಬೇರೆ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗದಂತೆ ಅನೆಕಟ್ಟುಗಳ ನಿರ್ಮಾಣಕ್ಕೆ ಮುಂದಾಯಿತು. ವಿದ್ಯುತ್ ಉತ್ಪಾದನೆ ಹಾಗೂ ಅರಿಜೋನ ಪ್ರಾಂತ್ಯದ ನಗರಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ ಗ್ಲೇನ್ ಕ್ಯಾನಲ್ ಮತ್ತು ಪೋವೆಲ್ ಜಲಾಶಯಗಳ ಪ್ರಸ್ತಾವನೆಯನ್ನು ಜನತೆಯ ಮುಂದಿಟ್ಟಿತು. ಸರ್ಕಾರದ ಪ್ರಸ್ತಾವನೆಗೆ ಮರುಳಾಗದ ಪರಿಸರವಾದಿಗಳು, ಇವುಗಳ ನಿರ್ಮಾಣಕ್ಕೆ ಹೂಡುವ ಬಂಡವಾಳದ ಅರ್ಧ ವೆಚ್ಚದಲ್ಲಿ ಅಣುವಿದ್ಯುತ್ ಹಾಗೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದಿಸಬಹುದೆಂದು ಕರಪತ್ರಗಳ ಚಳುವಳಿಯನ್ನು ಪ್ರಾರಂಭಿಸಿದರು.

ಅಮೇರಿಕಾ ಪರಿಸರವಾದಿಗಳ ಅರ್ಥಪೂರ್ಣ ಚಳುವಳಿಯಿಂದಾಗಿ 1970ರ ದಶಕದ ವೇಳೆಗೆ ದೇಶಾದ್ಯಂತ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ವ್ಯಾಪಿಸತೊಡಗಿತು. ಇದೇ ಸಮಯಕ್ಕೆ ಅಲ್ಲಿನ ಪ್ರಸಿದ್ದ ಚಿಂತಕ ಡಾ. ಬ್ರೆಂಟ್ಬ್ಲಾ ಕ್ವೆಲ್ಡರ್ ಎಂಬಾತನ ನೇತೃತ್ವದಲ್ಲಿ “ಅಮೇರಿಕಾ ನದಿಗಳ ರಕ್ಷಣಾ ಪರಿಷತ್” ಎಂಬ ಮತ್ತೊಂದು ಪರಿಸರ ಸಂಘಟನೆ ಆರಂಭಗೊಂಡಿತು. ಈತನ ನೇತೃತ್ವದಲ್ಲಿ ಸತತ 13 ವರ್ಷಗಳ ಕಾಲ ಅಂದರೆ, 1970ರಿಂದ 1983ರ ವರೆಗೆ ನಡೆದ ಹೋರಾಟದಲ್ಲಿ ಅಮೇರಿಕಾದ 140 ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣ ಸ್ಥಗಿತಗೊಂಡವು.

1977ರಲ್ಲಿ ಅಮೇರಿಕಾದ ಅಧ್ಯಕ್ಷನಾಗಿ  ಶೆಂಗಾ ಬೆಳೆಯುತಿದ್ದ ಸಾಮಾನ್ಯ ರೈತನ ಮಗ ಜಿಮ್ಮಿಕಾರ್ಟರ್ ಆಯ್ಕೆಯಾದಾಗ ಬ್ಲಾಕ್ವೆಲ್ಡರ್ ಮತ್ತು ಆತನ ಸಂಗಡಿಗರು ಜಿಮ್ಮಿ ಕಾರ್ಟರ್‌ನನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಇವರ ನಿರೀಕ್ಷೆಗಳನ್ನು ಜಿಮ್ಮಿ ಕಾರ್ಟರ್ ಹುಸಿಗೊಳಿಸಲಿಲ್ಲ. ಅಧಿಕಾರ ಸ್ವೀಕರಿಸಿದ ತಕ್ಷಣ ಅಮೇರಿಕಾದಲ್ಲಿ ವಿವಾದಕ್ಕೆ ಒಳಾಗಾಗಿದ್ದ ಎಲ್ಲಾ 19 ಅಣೆಕಟ್ಟು ಯೋಜನೆಗಳನ್ನು ರದ್ದು ಪಡಿಸಿದ. ಇದಕ್ಕೆ ಜಿಮ್ಮಿ ಕಾರ್ಟರ್ ಕೊಟ್ಟ ಉತ್ತರ ಮಾರ್ಮಿಕವಾಗಿತ್ತು.  ನೀರಾವರಿ ಅಥವಾ ವಿದ್ಯುತ್ ಯೋಜನೆಗಳಿಂದ ಸಿಗುವ ಪ್ರತಿಫಲಗಳಿಗಿಂತ ನದಿಯ ಇಕ್ಕೆಲಗಳಲ್ಲಿರುವ ಜೀವಜಾಲದ ವ್ಯವಸ್ಥೆಗೆ ಬೆಲೆ ಕಟ್ಟಲಾಗದು ಎಂದು ಜಿಮ್ಮಿ ಕಾರ್ಟರ್ ಅಭಿಪ್ರಾಯ ಪಟ್ಟಿದ್ದ.

ಆದರೆ, 1981ರಲ್ಲಿ ಅಧಿಕಾರಕ್ಕೆ ಬಂದ ಪ್ಲೇ ಬಾಯ್ ಖ್ಯಾತಿಯ ರೋನಾಲ್ಡ್ ರೇಗನ್ ಮತ್ತೇ ಅಣೆಕಟ್ಟು ಹಾಗೂ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ. ಇದಕ್ಕಾಗಿ ಫಡರಲ್ ಸರ್ಕಾರದಿಂದ ಎರಡು ಶತಕೋಟಿ ಡಾಲರ್ ಹಣವನ್ನು ಸಹ ಮೀಸಲಾಗಿಟ್ಟ. ರೇಗನ್ ಇಲ್ಲೊಂದು ತನ್ನ ಚಾಣಾಕ್ಷತನವನ್ನು ತೋರಿದ್ದ. ಅದೇನೆಂದರೆ, ಅಣೆಕಟ್ಟುಗಳ  ನಿರ್ಮಾಣಕ್ಕೆ ಫೆಡರಲ್ ಸರ್ಕಾರದ ಜೊತೆಗೆ ಆಯಾ ರಾಜ್ಯಗಳು ಸಹ ಬಂಡವಾಳ ಹೂಡುವಂತೆ ಮಾಡಿ ಒಂದಿಷ್ಟು ಜವಾಬ್ದಾರಿ ಹಾಗೂ ತೊಂದರೆಗಳನ್ನು ವರ್ಗಾವಣೆ  ಮಾಡಿದ್ದ. ಇದರಿಂದಾಗಿ ಅಮೇರಿಕಾದಲ್ಲಿ ಅಣೆಕಟ್ಟುಗಳ ಬೇಡಿಕೆ ಕುಂಠಿತಗೊಂಡಿತು.

1991ರಲ್ಲಿ ಅಮೇರಿಕಾ ಅಧ್ಯಕ್ಷನಾಗಿ ಆಯ್ಕೆಯಾದ ಬಿಲ್ ಕ್ಲಿಂಟನ್ ಮಾಡಿದ ಮಹತ್ವದ ಕಾರ್ಯವೆಣದರೆ, ಅಣೆಕಟ್ಟುಗಳ ನಿರ್ಮಾಣಕ್ಕೆ ಮೀಸಲಿಡುತಿದ್ದ ಹಣದ ಪ್ರಮಾಣವನ್ನು ಕಡಿತಗೊಳಿಸಿ, ಪರಿಸರದ ರಕ್ಷಣೆಗೆ ನಿಧಿಯೊಂದನ್ನು ಸ್ಥಾಪಿಸಿದ. ಅಮೇರಿಕಾದಲ್ಲಿ ಹೀಗೆ ತಮ್ಮ ನಿರಂತರ ಹೋರಾಟದ ಮೂಲಕ ಜಾಗೃತಿಯುನ್ನುಂಟು ಮಾಡಿದ ಪರಿಸರವಾದಿಗಳು ಈಗ ಕಿರು ಅಣೆಕಟ್ಟುಗಳು ಹಾಗೂ ಅಂತರ್ಜಲ ಹೆಚ್ಚಿಸುವ ನೀರಿನ ಹೊಂಡಗಳ ಕುರಿತಂತೆ ಅಭಿಯಾನದ ಮೂಲಕ ಜನತೆಯನ್ನು ಎಚ್ಚರಿಸುತಿದ್ದಾರೆ. ಅಮೆರಿಕಾದಲ್ಲಿ ಹುಟ್ಟಿಕೊಂಡ ಅಣಕಟ್ಟುಗಳ ವಿರುದ್ದ ಚಳುವಳಿ ಅಲ್ಪಾವಧಿಯಲ್ಲೇ ಜಗತ್ತಿನಾದ್ಯಂತ ವಿಸ್ತರಿಸಿತು. ಪಶ್ಚಿಮದ ಆಸ್ಟ್ರೇಲಿಯ, ಹಂಗೇರಿ,  ಬಲ್ಗೇರಿಯ, ಅಂದಿನ ಚಕೊಸ್ಲೊವೇಕಿಯ ಗಣರಾಜ್ಯ ಮುಂತಾದ ರಾಷ್ಟ್ರಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಎಲ್ಲಾ ರಾಷ್ಟ್ರಗಳು ಪರಿಸರವಾದಿಗಳಿಂದ ತೀವ್ರವಾದ ಪ್ರತಿಭಟನೆ ಎದುರಿಸಬೇಕಾಯಿತು.

ಆಸ್ಟ್ರೇಲಿಯಾದ ತಾಸ್ಮೇನಿಯಾ ಪ್ರಾಂತ್ಯದಲ್ಲಿ ಪೆಡ್ಡರ್ ಎಂಬ ನಿಸರ್ಗದತ್ತ ಹಾಗೂ ಶುದ್ಧತಿಳಿನೀರಿನ, ಏಳು ಕಿಲೋಮೀಟರ್ ವ್ಯಾಪ್ತಿಯ ಸರೋವರವಿದೆ. ಇದರ ಪಕ್ಕದಲ್ಲೇ ಹರಿಯುವ ನದಿಯೊಂದಕ್ಕೆ ಅಣೆಕಟ್ಟು ನಿರ್ಮಾಣ ಮಾಡಿ, ಜಲಾಶಯದ ಜೊತೆ ಸರೋವರವನ್ನು ವಿಲೀನಗೊಳಿಸುವ ಯೋಜನೆಯನ್ನು ತಾಸ್ಮೇನಿಯಾ ಸರ್ಕಾರ ರೂಪಿಸಿತು. ಜೊತೆಗೆ ಗಾರ್ಡಾನ್ ನದಿಗೆ ಪ್ರಾಂಕ್ಲಿನ್ ಅಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆಗೆ ಮುಂದಾಯಿತು. ಈ ಎರಡು ಯೋಜನೆಗಳಿಗೆ ಆಸ್ಷ್ರೇಲಿಯಾ ಸರ್ಕಾರ ಅನುಮೋದನೆ ನೀಡಿ ಆರ್ಥಿಕ ನೆರವು ಸಹ ನೀಡಿತ್ತು. ಪ್ರಾಂಕ್ಲಿನ್ ಜಲಾಶಯದ ಹಿನ್ನೀರಿನಲ್ಲಿ 20 ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು, ಅಪರೂಪದ ಅಭಯಾರಣ್ಯ ಮುಳುಗಿಹೋಗುವುದನ್ನು ಅಲ್ಲಿ ಜನತೆ ಪ್ರತಿಭಟಿಸಿ ಉಳಿಸಿಕೊಂಡರು. ವೃತ್ತಿಯಲ್ಲಿ ವೈದ್ಯನಾಗಿದ್ದ ಬಾಬ್ ಬ್ರೌನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಅಧಿಕ ಪರಿಸರವಾದಿಗಳು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಪೆಡ್ಡರ್ ಸರೋವನ್ನು ಸಹ ಯಥಾಸ್ಥಿತಿಯಲ್ಲಿ ಉಳಿಸಿಕೊಂಡರು. ಇವರ ಈ ಹೋರಾಟ 32 ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ವಿರುದ್ದದ ಪ್ರತಿಭಟನೆಗೆ ಸ್ಪೂರ್ತಿಯಾಯಿತು.

ಹಂಗೇರಿಯಲ್ಲಿ ಆಡಳಿತದಲ್ಲಿದ್ದ ಕಮ್ಯೂನಿಷ್ಟ್ ಸರ್ಕಾರದ ವಿರುದ್ದ ಅಲ್ಲಿ ಜನತೆ ಅಣೆಕಟ್ಟುಗಳ ವಿಷಯದಲ್ಲಿ ದನಿಯೆತ್ತಿದ್ದು ಇಂದಿಗೂ ಅದೊಂದು ಕ್ರಾಂತಿಯ ಮೈಲಿಗಲ್ಲು. ಹಂಗೇರಿ ಹಾಗೂ ಇಂದಿನ ಸ್ಲೋವೇಕಿಯಾ ನಡುವೆ ಹರಿಯುತ್ತಿರುವ ನದಿಗೆ ಹಂಗೇರಿ ಸರ್ಕಾರ ನ್ಯಾಗಿಮಾರೊ ಎಂಬ ಸ್ಥಳದಲ್ಲಿ ಹಾಗೂ ಸ್ಲೋವೇಕಿಯಾ ಸರ್ಕಾರ ಗ್ಯಾಬಿಕ್ಕೋವ ಎಂಬ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದವು. ಈ ಯೋಜನೆಗೆ ವಿದ್ಯುತ್ ಅಭಾವ ಎದುರಿಸುತಿದ್ದ ಆಸ್ಟ್ರಿಯಾ ದೇಶ ಹಣ ವಿನಿಯೋಗಿಸಲು ಒಪ್ಪಿಗೆ ನೀಡಿತ್ತು. ಹಂಗೇರಿಯ 15 ಸಾವಿರ ಮತ್ತು ಸ್ಲೋವೇಕಿಯಾದ 10 ಸಾವಿರ ಜನರ ಪ್ರತಿಭಟನೆಗೆ ಮಣಿದ ಎರಡು ಸರ್ಕಾರಗಳು ಅಂತಿಮವಾಗಿ ಯೋಜನೆಯನ್ನು ಕೈಬಿಟ್ಟವು. 1980ರಲ್ಲಿ ಪ್ರಾರಂಭವಾದ ಈ ಹೋರಾಟ 1989ರಲ್ಲಿ ಮುಕ್ತಾಯವಾಯಿತು.

ಬಲ್ಗೇರಿಯಾ ರಾಷ್ಟ್ರದಲ್ಲಿ ಕೂಡ ಅಂದಿನ ಸೋವಿಯತ್ ರಷ್ಯಾ ನೆರವಿನಿಂದ ಅಲ್ಲಿ ಸರ್ಕಾರ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿತ್ತು. ಇವುಗಳಲ್ಲಿ ಎರಡು ಅಣೆಕಟ್ಟುಗಳು ಮುಕ್ತಾಯದ ಹಂತ ತಲುಪಿದ್ದವು. ನದಿಗಳ ರಕ್ಷಣೆಗಾಗಿ ಅಲ್ಲಿನ 30 ಸಾವಿರ ಜನತೆ ಬೀದಿಗಿಳಿದಾಗ, ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ  ಜಾರ್ಜಿಯಾದ ಗ್ರೀನ್ ಎಂಬ ಪರಿಸರ ಸಂಘಟನೆಯ ಬೆಂಬಲದಿಂದ ಬೃಹತ್ ಪ್ರತಿಭಟನೆ ನಡೆಸಿ ಕಾಮಗಾರಿಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಹೋರಾಟಕ್ಕೆ ಜಾರ್ಜಿಯಾದ 8 ಸಾವಿರ ಪರಿಸರವಾದಿಗಳು ಕೈಜೋಡಿಸಿದ್ದರು.

(ಮುಂದುವರೆಯುವುದು)

Leave a Reply

Your email address will not be published. Required fields are marked *