Daily Archives: January 12, 2013

ಹಾಸನದ “ಜನತಾ ಮಾಧ್ಯಮ”ದ ಆರೋಗ್ಯಕರ ಪ್ರಯೋಗಗಳು

– ಮಂಜುನಾಥ ಹಂದ್ರಂಗಿ

ಹಾಸನ ಮೂಲದ “ಜನತಾ ಮಾಧ್ಯಮ” ದಿನಪತ್ರಿಕೆಗೆ ರಾಜ್ಯ ಪತ್ರಿಕೋದ್ಯಮ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ರೈತ ಸಂಘದ ಹೋರಾಟದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪತ್ರಿಕೆ ಇದು. ಕಾಲ ಕಾಲಕ್ಕೆ ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಇದು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ಮಂಜುನಾಥ ದತ್ತ ಮತ್ತು ಆರ್. ಪಿ. ವೆಂಕಟೇಶಮೂರ್ತಿಯವರ ನೇತೃತ್ವದಲ್ಲಿ ಪತ್ರಿಕೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿದಿದೆ. ಅನೇಕ ಬಾರಿ ಪತ್ರಿಕೆಯ ನೇತಾರರು ಬೀದಿಗಿಳಿದು ಹೋರಾಡಿದ್ದಾರೆ, ಹಲವರನ್ನು ಹೋರಾಟಕ್ಕೆ ಹಚ್ಚಿದ್ದಾರೆ.

ಒಂದು ಪತ್ರಿಕೆ ಸಮಾಜ ಮುಖಿಯಾಗಿ ಇರಬೇಕಾದದ್ದೇ ಹೀಗೆ. ಇತ್ತೀಚೆಗೆ ಈ ಪತ್ರಿಕೆ ಕೆಲವು ಪ್ರಯೋಗಗಳನ್ನು ಮಾಡಿತು. ನವೆಂಬರ್ 14 ರಂದು ಮಕ್ಕಳ ದಿನಾಚರಣೆಗೆಯಂದು “ವಿಶೇಷ ಸಂಚಿಕೆ” ಹೊರತಂದಿತು. ಅನೇಕ ಮಕ್ಕಳು ಭಾರತದ ಬಗ್ಗೆ ತಮ್ಮ ಕನಸುಗಳನ್ನು ಮತ್ತು ಆ ಭವ್ಯ ಕನಸುಗಳನ್ನು ನನಸು ಮಾಡಲು ಬೇಕಾದ ಕ್ರಮಗಳನ್ನು ಕುರಿತು ಬರೆದಿದ್ದರು. ಲೇಖಕಿ ಮತ್ತು ಕವಿ ರೂಪಾ ಹಾಸನ ಅವರು ಈ ವಿಶೇಷ ಸಂಚಿಕೆಯನ್ನು ಅತಿಥಿ ಸಂಪಾದಕರಾಗಿ ಜತನದಿಂದ ಸಿದ್ಧ ಪಡಿಸಿದ್ದರು. ಪತ್ರಿಕೆ ಅಷ್ಟಕ್ಕೆ ನಿಲ್ಲಲಿಲ್ಲ, ಇದೇ ಸಂಬಂಧ ಒಂದು ಕಾರ್ಯಕ್ರಮವನ್ನೂ ಏರ್ಪಡಿಸಿ, ಮಕ್ಕಳು ತಾವು ಬರೆದದ್ದನ್ನು ಸಭೆಯ ಮುಂದೆ ಮಂಡಿಸಲು ಅವಕಾಶ ಮಾಡಿಕೊಟ್ಟಿತು.

ಮಕ್ಕಳ ಆಲೋಚನೆಗಳು ಕೆಲವರನ್ನು ದಂಗು ಬಡಿಸಿತು. ಮಕ್ಕಳ ಮಾತುಗಳಿಗೆ ಕಿವಿ ಕೊಡುವವರೇ ಇಲ್ಲದಾಗ, ಇಂತಹದೊಂದು ಅವಕಾಶ ಜನಮನ್ನಣೆ ಗಳಿಸಿತು.

ಇದೇ ಗಣರಾಜ್ಯೋತ್ಸವ ದಿನದಂದು ಈ ಪತ್ರಿಕೆ ಪೌರಕಾರ್ಮಿಕರನ್ನು ಕೇಂದ್ರವನ್ನಾಗಿಟ್ಟುಕೊಂಡು ವಿಶೇಷ ಸಂಚಿಕೆ ರೂಪಿಸುವ ಬಗ್ಗೆ ಪ್ರಕಟಣೆ ನೀಡಿದೆ. ಪೌರಕಾರ್ಮಿಕರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯ. ಇದೇ ಗುಂಪಿಗೆ ಸೇರಿದೆ ಮಲ ಹೊರುವವರ ಸ್ಥಿತಿ ಶೋಚನೀಯ. ದಿನ ಬೆಳಗ್ಗೆ ಸಂಡಾಸಿಗೆ ಹೋಗುವ ಪ್ರತಿ ಮನುಷ್ಯ ಯಾರಿಗಾದರೂ ಆಜೀವ ಪರ್ಯಂತ ಋಣಿಯಾಗಿರಬೇಕಾಗಿದೆ ಎಂದರೆ ಅವರು ಈ ಜನ. ದಿನಕ್ಕೆ ಮೂರ್‍ನಾಲ್ಕು ಹೊತ್ತು ತಿಂದು, ಕಕ್ಕಸ್ಸು ಗುಂಡಿ ತುಂಬಿಸಿ, ಅದನ್ನು ಬರಿದು ಮಾಡಲು, ನೂರೋ, ಇನ್ನೂರಕ್ಕೋ ಯಾರನ್ನೋ ಕರೆತಂದು, ಗುಂಡಿಗಿಳಿಸಿ, ಮೇಲೆ ಮೂಗು ಮುಚ್ಚಿಕೊಂಡು ನಿಂತುಕೊಳ್ಳುವ ಎಲ್ಲರಿಗೂ ಸಾಯುವವರೆಗೂ ಕಾಡಲೇಬೇಕಾದ ಗಿಲ್ಟ್ ಇಂದಿಗೂ ಜಾರಿಯಲ್ಲಿರುವ “ಮ್ಯಾನುಯೆಲ್ ಸ್ಕ್ಯಾವೆಂಜಿಂಗ್!!”

ಈ ಬಗ್ಗೆ ಒಂದು ವಿಶೇಷ ಸಂಚಿಕೆ ತರಲು ಉದ್ದೇಶಿಸಿರುವ ಜನತಾ ಮಾಧ್ಯಮ ಪತ್ರಿಕೆ ಅಭಿನಂದನಾರ್ಹ.

ಇಷ್ಟೇ ಅಲ್ಲ, ಇತ್ತೀಚೆಗೆ ಪತ್ರಿಕೆ ಇನ್ನೊಂದು ಅಂಕಣದ ಬಗ್ಗೆ ಪ್ರಕಟಣೆ ನೀಡಿದೆ. ಅದರ ಹೆಸರು “ದೂರು ಕಾರ್ನರ್”. Janatha-Madhyama-vartamaanaಅನ್ಯಾಯ, ಅಕ್ರಮ, ಅತ್ಯಾಚಾರ..ಹೀಗೆ ಯಾವುದೇ ಸಂಕಷ್ಟಕ್ಕೆ ತುತ್ತಾದವರು ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಳ್ಳಬಹುದು. ಅವರು ತಮ್ಮ ದೂರು ದಾಖಲಿಸುವಾಗ ಸ್ವವಿವರ ನೀಡಬೇಕಾದರೂ, ಅವರ ಗುರುತನ್ನು ಗೋಪ್ಯವಾಗಿಡಲಾಗುವುದು ಎಂದು ಪತ್ರಿಕೆ ಭರವಸೆ ನೀಡಿದೆ. ಎಷ್ಟೋ ಬಾರಿ ಅನ್ಯಾಯ, ಅಕ್ರಮಗಳಾದ ಸಂದರ್ಭದಲ್ಲಿ ನೋವುಂಡವರಿಗೆ ನೆರವಾಗಬೇಕಾದ ಪೊಲೀಸ್ ಇಲಾಖೆ ಕುರುಡಾಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದೆ ಎನಿಸುತ್ತಿದೆ.

ಎಷ್ಟೋ ಬಾರಿ ಸಣ್ಣ ಪತ್ರಿಕೆಗಳಲ್ಲಿ ನಡೆಯುವ ಇಂತಹ ಪ್ರಯೋಗಗಳು ಸೀಮಿತ ಪ್ರದೇಶದ ಆಚೆಗೆ ಗೊತ್ತೇ ಆಗುವುದಿಲ್ಲ.