Daily Archives: January 2, 2013

ನವೀನ್ ಮೇಲಿನ ಆರೋಪಗಳನ್ನು ಕೈಬಿಡಲು ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಮಿತ್ರರೇ,

ಅನೇಕ ನಿರಪರಾಧಿಗಳು ಜೈಲಿಗೆ ಹೋಗುತ್ತಾರೆ. ಬಹುಪಾಲು ಜನರದು ಸುದ್ದಿಯೇ ಆಗುವುದಿಲ್ಲ. ಅನೇಕ ಮುಗ್ಧರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳಾಗುತ್ತವೆ. ಎಲ್ಲವೂ ವರದಿಯಾಗುವುದಿಲ್ಲ ಮತ್ತು ಅವೆಲ್ಲದಕ್ಕೂ ಜನ ಒಂದೇ ರೀತಿ ಸ್ಪಂದಿಸುವುದಿಲ್ಲ. ದೇಶ ಈಗ ತಾನೆ ಅನ್ಯಾಯಕ್ಕೊಳಗಾದವಳ ಪರವಾಗಿ ಸಕಾರಣವಾಗಿ ಸ್ಪಂದಿಸಿ ಈ ದೇಶದಲ್ಲಿ ಎಲ್ಲವೂ ನಷ್ಟವಾಗಿಲ್ಲ ಎಂದು ನಿರೂಪಿಸಿದೆ.

ನವೀನ್ ಸೂರಿಂಜೆಯ ಹಾಗೆ ಅನೇಕ ನಿರಪರಾಧಿಗಳು ಜೈಲಿನಲ್ಲಿರಬಹುದು. ಆದರೆ ನಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನವೀನ್‌ಗೆ ಆಗಿರುವ-ಆಗುತ್ತಿರುವ ಅನ್ಯಾಯ ನಮಗೆಲ್ಲ ತಿಳಿದಿದೆ. ಹಾಗಾಗಿ ನವೀನ್‌ ಪರವಾಗಿ ಹೋರಾಡುವುದು ನಮ್ಮ ಆತ್ಮಸಾಕ್ಷಿಯ ಪ್ರಶ್ನೆ. ಅವರ ಪರವಾಗಿ ಎತ್ತುವ ಧ್ವನಿ ಕೇವಲ ಅವರೊಬ್ಬರ ಪರ ಅಲ್ಲ; ಬದಲಿಗೆ ಅವರಂತಹ ಎಲ್ಲಾ ನಿರಪರಾಧಿಗಳ ಪರವಾಗಿಯೂ ಆಗಿರುತ್ತದೆ.

ಕಳೆದ ಎರಡು ತಿಂಗಳಿನಿಂದ ರಾಜ್ಯದ ನೂರಾರು ಲೇಖಕರು, ಪತ್ರಕರ್ತರು, ಹೋರಾಟಗಾರರು, ಸಮಾಜಮುಖಿಗಳು, naveen-soorinjeಪ್ರಜಾಪ್ರಭುತ್ವವಾದಿಗಳು, ನವೀನ್‌ ಸೂರಿಂಜೆಗೆ ಆಗುತ್ತಿರುವ ಅನ್ಯಾಯವನ್ನು ತಾವು ಯಾವ ರೀತಿ ಪ್ರತಿಭಟಿಸುವುದು ಎಂದು ಗೊತ್ತಾಗದೇ ತೊಳಲಿದ್ದಾರೆ. ಅದರಲ್ಲಿ ನಾನು, ನೀವು, ಎಲ್ಲರೂ ಇದ್ದೇವೆ. ಆದರೆ ನಮ್ಮೆಲ್ಲರಿಗೂ ನ್ಯಾಯಾಲಯದಲ್ಲಿಯೇ ಇದು ಇತ್ಯರ್ಥವಾಗಿ ಬೇಗ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿತ್ತು. ರಾಜ್ಯದ ಉಚ್ಚ ನ್ಯಾಯಾಲಯದಲ್ಲಿಯೂ ನವೀನ್ ಎಂಬ ಪತ್ರಕರ್ತನಿಗೆ–ಘಟನೆಯನ್ನು ಕೇವಲ ವರದಿ ಮಾಡುವ ಕರ್ತವ್ಯ ನಿಭಾಯಿಸಿದಾತನಿಗೆ–ಜಾಮೀನು ಸಿಗದೇ ಹೋಯಿತು. ನಮಗೆಲ್ಲರಿಗೂ ಈಗ ಅನ್ನಿಸಿರುವ ಹಾಗೆ, ಈಗ ಇದು ನ್ಯಾಯಾಲಯದಲ್ಲಿ ತೀರ್ಮಾನವಾಗುವ ವಿಷಯವಾಗಿ ಉಳಿದಿಲ್ಲ. ಸರ್ಕಾರ ಈ ಕೂಡಲೇ ತನ್ನ ಪೋಲಿಸರು ಹೊರಿಸಿರುವ ಸುಳ್ಳು ಆರೋಪಗಳನ್ನು ಕೈಬಿಡುವಂತೆ ಮಾಡಿದರೆ ಮಾತ್ರ ಇಲ್ಲಿ ನವೀನ್ ಜೈಲಿನಿಂದ ಹೊರಗೆ ಬರುತ್ತಾರೆ. ಆಗುತ್ತಿರುವ ಅನ್ಯಾಯ ನಿಲ್ಲುತ್ತದೆ.

ಹಾಗಾಗಿ ಈಗ ನಾವೆಲ್ಲರೂ ಹೋರಾಟ ಮಾಡಲೇಬೇಕಿದೆ. ಈ ವಿಷಯದ ಮೇಲೆ ಸರ್ಕಾರದ ಮೇಲೆ ಒತ್ತಡ ತರುವ, ನಾಡಿನ ಜನತೆಗೆ ವಿಷಯ ಮುಟ್ಟಿಸುವ, ಆಗಿರುವ ಅನ್ಯಾಯವನ್ನು ತಿಳಿಸಿ ಜನಾಭಿಪ್ರಾಯ ರೂಪಿಸುವ ಸಮಯ ಬಂದಿದೆ. ಇಷ್ಟು ದಿನ ನವೀನ್ ಬಂಧನವನ್ನು ವಿರೋಧಿಸಿ ತಾವೇನು ಮಾಡಬಹುದು ಎಂದುಕೊಂಡವರಿಗೆಲ್ಲ, ಈ ಹೋರಾಟದಲ್ಲಿ ಪಾಲ್ಗೊಳ್ಳಲು ಸಂದರ್ಭ ಬಂದಿದೆ.

ಈಗಾಗಲೆ ನಾನು ಒಂದಷ್ಟು ಹಿರಿಯ ಪತ್ರಕರ್ತರ ಜೊತೆ, ಸಂಘಟನೆಗಳ ಜೊತೆ, ಸಮಾನ ಮನಸ್ಕರ ಜೊತೆ ಮಾತನಾಡಿದ್ದೇನೆ. ನಾವೊಂದಷ್ಟು ಜನ ಈ ಶನಿವಾರದಿಂದ (5-1-2013) ಬೆಂಗಳೂರಿನಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ನಮ್ಮ ಜೊತೆ ನೂರಾರು ಜನರು ಭಾಗಿಯಾಗುವ ವಿಶ್ವಾಸ ಇದೆ. ನಾಡಿನ ಹಿರಿಯ ಲೇಖಕರು, ಪತ್ರಕರ್ತರು, ಸಂಘಟನೆಗಳು, ಮೌಲ್ಯಾಧಾರಿತ ರಾಜಕಾರಣಿಗಳು, ಹೋರಾಟಗಾರರು, ಅಲ್ಲಿಗೆ ಬಂದು ಈ ಹೋರಾಟಕ್ಕೆ ಬೆಂಬಲಿಸಲಿದ್ದಾರೆ.

ನಾಳೆ ಮತ್ತು ನಾಡಿದ್ದು ಇದೇ ವಿಚಾರವಾಗಿ ಒಂದೆರಡು ಸಭೆಗಳಾಗಲಿವೆ. ಸಮಾನಮನಸ್ಕರ ಒಂದು ವೇದಿಕೆ ರಚನೆಯಾಗಿ ಅದರ ಆಶ್ರಯದಲ್ಲಿ ಈ ಹೋರಾಟ, ಜಾಗೃತಿ, ಉಪವಾಸ ಸತ್ಯಾಗ್ರಹ ನಡೆಯಲಿದೆ. ಹೆಚ್ಚಿನ ವಿವರಗಳು ಒಂದೆರಡು ದಿನಗಳಲ್ಲಿ ನೀಡಲಾಗುತ್ತದೆ.

ಈ ಸತ್ಯಾಗ್ರಹದಲ್ಲಿ ಕೇವಲ ಬೆಂಗಳೂರಿನಲ್ಲಿರುವವರು ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಿಂದಲೂ ಅನ್ಯಾಯವನ್ನು ವಿರೋಧಿಸುವ ಮನಸ್ಥಿತಿಯುಳ್ಳ ಎಲ್ಲರೂ ಬಂದು ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ