Monthly Archives: January 2014

AAP ಮತ್ತು ಕಮ್ಯುನಿಷ್ಟರು : ಮಾರ್ಕ್ಸ್ ಯಾವಾಗಲೂ ಸರಿ

– ಬಿ.ಶ್ರೀಪಾದ ಭಟ್

“ಬಂಡವಾಳಶಾಹಿಯು ಎಷ್ಟೇ ಆಧುನಿಕಗೊಂಡರೂ ಅದು ಮತ್ತೆ ಫ್ಯಾಂಟಸಿ ಮತ್ತು ಪುರಾತನ ಆಚರಣೆಗಳಿಂದ,ಮಿಥ್‌ಗಳಿಂದ ತೊಳೆಯಲ್ಪಡುತ್ತದೆ.ಅದು ತಾನು ಸಾಧಿಸಿದ ಅಭಿವೃದ್ಧಿಯ ಕುರಿತಾಗಿ ಎಷ್ಟೇ ಜಂಬಪಟ್ಟರೂ ಕಡೆಗೆ ಅದು ತನ್ನ ಸ್ಥಾನದಲ್ಲಿ ಪ್ರಸ್ತುತವಾಗಿ ಉಳಿಯಲು ಪ್ರತಿಕ್ಷಣ Karl-Marxಹೋರಾಡಬೇಕಾಗುತ್ತದೆ. ಕಡೆಗೆ ಬಂಡವಾಳಶಾಹಿಯ ಮಿತಿ ಬಂಡವಾಳಶಾಹಿಯೇ. ತನ್ನ ವರ್ತಮಾನವನ್ನು ಪುನಸೃಷ್ಟಿಸಲು ವಿಫಲವಾಗುವ ಈ ಬಂಡವಾಳಶಾಹಿಯು ಭವಿಷ್ಯವನ್ನು ಸೃಷ್ಟಿಸಲು ಸಹ ಸಂಪೂರ್ಣವಾಗಿ ವಿಫಲವಾಗುತ್ತದೆ.” -ಕಾರ್ಲ ಮಾರ್ಕ್ಸ

7 ನೇ ಅಕ್ಟೋಬರ್ 1862 ರಂದು ಲಂಡನ್‌ನಿಂದ ಕಾರ್ಲ ಮಾರ್ಕ್ಸ ತನ್ನ ಸ್ನೇಹಿತ ಏಂಗೆಲ್ಸ್‌ಗೆ ಬರೆದ ಪತ್ರದ ಸಾರಾಂಶ:

Dear Engels,

The  landlord  came to see me on Monday and told me that, after having forborne so long, he would hand things over to his  land agent, unless I paid him within the shortest possible time. And that means putting the  broker  in. I likewise — oddly enough on the same day — got a final demand for the rates, as well as letters from the  épiciers, most of them acquainted with the  landlord, threatening to prosecute me and withhold  provisions.
Might you perhaps be able to do something in this way, using Borkheim as  escompteur  so as to stave off the crisis? Of the £10, I paid 6 to the piano man, a nasty brute who wouldn’t have hesitated to bring me before the  County Court. With 2 of the pounds I redeemed things that were in pawn and put what was left at my wife’s disposal.
I assure you that if it wasn’t for  family difficulties, I would far rather move into a  model lodging house than be constantly squeezing your purse.
Salut.
Your
K. M.

ಇದು ಏನನ್ನು ಹೇಳುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ.

ಏಕೆಂದರೆ ಮೇಲಿನ ಮಾತುಗಳೆಲ್ಲ ನೆನಪಾಗಲು ಕಾರಣ ಇತ್ತೀಚಿನ ಆಮ್ ಆದ್ಮಿ ಪಕ್ಷದ ಗೆಲುವಿನ ನಂತರ ಬಹುತೇಕ ಜನರು ಮಾರ್ಕ್ಸಿಸ್ಟರನ್ನು, ಕಮ್ಯುನಿಷ್ಟ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ ಎಂದು ಗೆಳೆಯರೊಬ್ಬರು ವಿವರಿಸಿದರು. arvind-kejriwal-delhi-electionsಅದ್ಯಾಕೆ ಹೀಗೆ ಎಂದು ಪ್ರಶ್ನಿಸಿದಾಗ ಅದು ಹಾಗೆಯೇ, ಆಮ್ ಆದ್ಮಿ ಪಕ್ಷದ ಸರಳತೆ, ಕೇವಲ ಒಂದು ವರ್ಷದಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದ ಆಮ್ ಆದ್ಮಿ ಪಕ್ಷ, ದಿನನಿತ್ಯ ಏರುತ್ತಿರುವ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಇವೆಲ್ಲವನ್ನು ಕಮ್ಯುನಿಷ್ಟರ ಕಳೆದ ಅರವತ್ತು ವರ್ಷಗಳ ಹೋರಾಟಕ್ಕೆ ಹೋಲಿಸುತ್ತ ಮಾರ್ಕ್ಸಿಸ್ಟರನ್ನು ಗೇಲಿ ಮಾಡಲಾಗುತ್ತಿದೆ, ಎಂದು ವಿವರಿಸುತ್ತಿದ್ದರು. ಇದು ನಿಜ. ಮೊನ್ನೆ ಕಿರಿಯ ಮಿತ್ರನೊಬ್ಬ ಕಮ್ಯುನಿಷ್ಟರನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ. ಅವರನ್ನು ಹಳೇ ತಲೆಮಾರಿನವರು, ಜಡ್ಡುಗಟ್ಟಿದವರು ಎಂದು ಜರೆಯುತ್ತಿದ್ದ.

ಇನ್ನು “ಆಮ್ ಆದ್ಮಿ ಪಕ್ಷ”ಕ್ಕೆ ಬಂದರೆ ಇಂದು ಆ ಪಕ್ಷದ ನಾಯಕರ ಸರಳತೆ ಬಹಳಷ್ಟು ಪ್ರಶಂಸೆಗೊಳಗಾಗುತ್ತಿದೆ. ಇದು ಸಹಜವೇ. ಆ ಸರಳತೆ ಇಂದಿನ ತುರ್ತು ಅಗತ್ಯಗಳಲ್ಲೊಂದಾಗಿತ್ತು. ಆದರೆ ಆಮ್ ಆದ್ಮಿ ಪಕ್ಷವನ್ನು ಹೊಗಳುವ ಭರದಲ್ಲಿ ಕಮ್ಯುನಿಷ್ಟರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಟೀಕಿಸುತ್ತಿರುವವರಿಗೆ ಏನು ಹೇಳುವುದು? ಅವರ ಬಗ್ಗೆ ಮರುಕ ಹುಟ್ಟುತ್ತದೆ.

ಈ ಟೀಕಾಕಾರರು ಇಂಡಿಯಾದ ಕಮ್ಯುನಿಷ್ಟ್ ಪಕ್ಷಕ್ಕಾಗಿ, ಸಮತಾವಾದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎಸ್.ವಿ.ಘಾಟೆ, ಪೂಚಲಪಲ್ಲಿ ಸುಂದರಯ್ಯ, ಮಾಕಿನೇನಿ ಬಸವಪುನ್ನಯ್ಯ, ಡಾಂಗೆ, ಬಿ.ಟಿ.ರಣದಿವೆ, ಎ.ಕೆ.ಗೋಪಾಲನ್, ದಾಮೋದರನ್, ಕ್ರಿಷ್ಣ ಪಿಳ್ಳೆ, ಪಿ.ಸಿ.ಜೋಶಿ, ಇನ್ನೂ ಮುಂತಾದ ಮಾರ್ಕ್ಸಿಸ್ಟ್ ನಾಯಕರನ್ನು ಮತ್ತೊಮ್ಮೆ ಅರ್ಥಪೂರ್ಣವಾಗಿ, ಸಮಗ್ರವಾಗಿ, ಸಾವಧಾನದಿಂದ ಅಧ್ಯಯನ ಮಾಡಲಿ. ಸಮಾಜವಾದದ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಈ ನಾಯಕರು ಎಂತಹ ಆದರ್ಶವಾದಿಗಳು. ಎಂತಹ ಸರಳ ಜೀವಿಗಳು. ಇವರು ಜೈಲಿಗೆ ಹೋಗಿ ಬಂದದ್ದು ಎಷ್ಟು ಸಲವೋ, ಪೋಲೀಸರ ಏಟು ತಿಂದದ್ದು ಎಷ್ಟು ಸಲವೋ ಲೆಕ್ಕವೇ ಇಲ್ಲ. ಎಲ್ಲವೂ ಆದರ್ಶ ಸಮಾಜದ ಕನಸಿಗಾಗಿ, ಸಮಾನತೆಗಾಗಿ. ವೈಯುಕ್ತಿಕ ಬದುಕಿಗಾಗಿ ಕೂಡಿಟ್ಟದ್ದು ಇಲ್ಲವೇ ಇಲ್ಲ. ನಿಸ್ವಾರ್ಥವಾಗಿ ಬದುಕಿದರು. Manik_Sarkarಇದನ್ನು ಅರಿಯದೆ ಕಳೆದ ಅರವತ್ತು ವರ್ಷಗಳಲ್ಲಿ ಕಮ್ಯನಿಷ್ಟರು ಏನು ಮಾಡಿದರು ಎಂದು ಪ್ರಶ್ನಿಸುವುದು ಅಮಾನವೀಯತೆ ಮತ್ತು ಮೂರ್ಖತನ. ಈ ಮಾನವತಾವಾದಿಗಳ ಪ್ರಾಮಾಣಿಕತೆ ಮತ್ತು ಸರಳತೆ ಇಂದಿಗೂ ಕಮ್ಯುನಿಷ್ಟ್ ಪಕ್ಷದಲ್ಲಿ ಜೀವಂತವಾಗಿದೆ. ಕೆಳ ಮಧ್ಯಮವರ್ಗದವರಂತೆ ಸರಳವಾಗಿ ಬದುಕುತ್ತಿರುವ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ತೊಂಬತ್ತರ ಇಳಿ ವಯಸ್ಸಿನಲ್ಲಿ ರಿಕ್ಷಾದಲ್ಲಿ ಅಡ್ಡಾಡುವ ಕೇರಳದ ಮಾಜಿ ಮುಖ್ಯಮಂತ್ರಿ ಅಚ್ಯತನಂದನ್ ಇಂದಿಗೂ ಜ್ವಲಂತ ಸಾಕ್ಷಿ. ಗುಜ್ರಾಲ್ ಸರ್ಕಾರದಲ್ಲಿ ದೇಶದ ಗೃಹ ಮಂತ್ರಿಯಾಗಿದ್ದ ಇಂದ್ರಜಿತ್ ಗುಪ್ತ ವಾಸಿಸುತ್ತಿದ್ದದ್ದು ಔಟ್ ಹೌಸ್‌ನಲ್ಲಿ. ಇಂತಹ ನೂರಾರು ಉದಾಹರಣೆಗಳಿವೆ. ಇಂದಿಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನ, ಆತನ ಕಾರ್ಯಕರ್ತರ ಮಾಸಿಕ ವೇತನ ತೀರಾ ಕಡಿಮೆ. ಆ ವೇತನವನ್ನು ಬರೆಯಲು ಕೂಡಾ ನಾಚಿಕೆ ಮತ್ತು ಕೀಳರಿಮೆ ಉಂಟಾಗುತ್ತದೆ. ತಿಂಗಳಿಗೆ ಅರವತ್ತು, ಎಪ್ಪತ್ತು ಲಕ್ಷದಷ್ಟು ಸಂಬಳಗಳನ್ನು ತೆಗೆದುಕೊಳ್ಳುವ ಜನ ತಿಂಗಳಿಗೆ ಕವಡೆಯಷ್ಟನ್ನೂ ಕೂಡಿಡದ, ಪ್ರತಿ ತಿಂಗಳೂ ಬಾಡಿಗೆಗಾಗಿ, ವಿದ್ಯುತ್ ಬಿಲ್‌ಗಾಗಿ, ರೇಷನ್‌ಗಾಗಿ ಕಷ್ಟಪಡುವ ಈ ಪ್ರಾಮಾಣಿಕ ಹೋರಾಟಗಾರರನ್ನು ಟೀಕಿಸುವುದು ನಿಜಕ್ಕೂ ಅವಿವೇಕತನ ಮತ್ತು ಜೀವವಿರೋಧಿ ವರ್ತನೆ.

ಕಮ್ಯುನಿಷ್ಟ್ ಸರ್ಕಾರಗಳ ಸಾಧನೆಗಳೇನು, ಅವರು ಮಾಡಿದ್ದೇನು ಅದನ್ನೆಲ್ಲ ಅಕಡೆಮಿಕ್ ಆಗಿಯೇ ಚರ್ಚಿಸಬೇಕಾಗುತ್ತದೆ. ರಸ್ತೆಯ ಮೇಲಲ್ಲ. ಇಲ್ಲಿ ಅವರು ಅನೇಕ ಬಾರಿ ಸೋತಿದ್ದಾರೆ, ಕೆಲವು ಕಡೆ ಗೆದ್ದಿದ್ದಾರೆ. ಅದನ್ನು ಯಾವುದಕ್ಕೆ ಮಾನದಂಡವಾಗಿ ಬಳಸಗಾಗುತ್ತದೆ?

ಇನ್ನು ಕಮ್ಯುನಿಷ್ಟರು ಕಾರ್ಮಿಕರಿಗೆ ಮೋಸ ಮಾಡಿದರು, ಅವರನ್ನು ಬೀದಿಗೆ ತಳ್ಳಿದರು ಎಂದು ಅರ್ಥಹೀನವಾಗಿ ವಾದಿಸುವವರು ದಯವಿಟ್ಟು ನನ್ನೊಂದಿಗೆ ಮಾತನಾಡಿ. ಏಕೆಂದರೆ ಕಳೆದ ಇಪ್ಪತ್ತು ವರ್ಷಗಳ ಕಾಲ ಮ್ಯಾನೇಜ್‌ಮೆಂಟ್ ಮತ್ತು ಕಾರ್ಮಿಕರೊಂದಿಗೆ ಕೆಲಸ ಮಾಡಿರುವ ನನ್ನಂತಹವರಿಗೆ ಇದರ ಪೂರ್ಣ ಪಾಠಗಳು, ವಿವರಗಳು ಸಂಪೂರ್ಣವಾಗಿ ಗೊತ್ತು. ನಾವೆಲ್ಲ ಇದರ ಭಾಗಿಗಳು ಮತ್ತು ಸಾಕ್ಷೀದಾರರು. ಅನಗತ್ಯವಾಗಿ ತಿಳುವಳಿಕೆ ಇಲ್ಲದೆ ಟೀಕಿಸುವವರು ತಮ್ಮನ್ನು ತಾವು ದಯನೀಯವಾಗಿ ಬಯಲುಗೊಳಿಸಿಕೊಳ್ಳುತ್ತಾರೆ. ಏಕೆಂದರೆ ಇವರು ನೆನಪಿಡಬೇಕಾಗಿರುವುದು ಸತ್ಯಕ್ಕೆ ನೂರಾರು ಮುಖಗಳಿರುತ್ತವೆ. ನಾನು ನೋಡಿದ್ದು, ಕಂಡಿದ್ದಷ್ಟೇ ಸತ್ಯವಲ್ಲ. ಇದು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಹೌದು ಕಮುನಿಷ್ಟರ ಜಡತ್ವವನ್ನು ವಿಮರ್ಶಿಸೋಣ. ಅವರ ಹಲವಾರು ಕೂಪಮಂಡೂಕತೆಯ, ಓಬಿರಾಯನ ಕಾಲದ ಚಿಂತನೆಗಳು ಇಂದು ಚರ್ಚೆಗೊಳಬೇಕಾಗಿವೆ. ನನ್ನ ಅನೇಕ ಕಾಮ್ರೇಡ್ ಮಿತ್ರರು ಇದಕ್ಕೆ ಹಿಂಜರಿಯುತ್ತಿಲ್ಲ.

“Why Marx is right ?” ಎನ್ನುವ ತನ್ನ ಪುಸ್ತಕದಲ್ಲಿ ಚಿಂತಕ ಟೆರಿ ಈಗಲ್ಟನ್ ಹೇಳುತ್ತಾನೆ:

“ಮಾರ್ಕ್ಸವಾದದ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಪ್ರಚಲಿತವಿರುವ ಪ್ರಮುಖ ಟೀಕೆ ’ಮಾರ್ಕ್ಸವಾದದ ಕಾಲ ಮುಗಿದಿದೆ. ಇದು ತನ್ನ ಪ್ರಸ್ತುತತೆಯನ್ನು ಅಷ್ಟೋ ಇಷ್ಟೋ ಉಳಿಸಿಕೊಂಡಿರುವುದು ಕಾರ್ಖಾನೆಗಳ ಆ ಗಲೀಜಿನ ಇಕ್ಕಟ್ಟಾದ ವರ್ಕಶಾಪ್‌ಗಳಲ್ಲಿ, ಹಸಿವಿನ ಆಕ್ರಂದತೆಯಲ್ಲಿ, ಕಲ್ಲಿದ್ದಲಿನ ಕಗ್ಗತ್ತಲೆಯ ಗಣಿಗಾರಿಕೆಯಲ್ಲಿ, ಅಲ್ಲಿನ ಚಿಮ್ನಿಗಳು ಹೊರಸೂಸುವ ದಟ್ಟವಾದ ಕಪ್ಪು ಹೊಗೆಯಲ್ಲಿ, ವಿಶಾಲವಾಗಿ ವ್ಯಾಪಿಸಿಕೊಂಡಿರುವ ದಾರಿದ್ರ್ಯತೆಯಲ್ಲಿ, ಕಡೆಗೆ ಆದರೆ ಪ್ರಮುಖವಾಗಿ ದುಡಿಯುವ ವರ್ಗಗಳ ಬಳಿ ಮಾತ್ರ. ಆದರೆ ಮೇಲ್ಮುಖವಾಗಿ ಅತ್ಯಂತ ಕಿಪ್ರಗತಿಯಲ್ಲಿ ಬೆಳೆಯುತ್ತಿರುವ ವರ್ಗರಹಿತ ವ್ಯವಸ್ಥೆಯಲ್ಲಿ, ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಸಮಾಜದಲ್ಲಿ, ಕೈಗಾರಿಕೋತ್ತರದ ಇಂದಿನ ಕಾಲಘಟ್ಟದಲ್ಲಿ ಈ ಮಾರ್ಕ್ಸವಾದವು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಅದರ ಪ್ರಭಾವ ಶೂನ್ಯ. ಆದರೆ ಕೇವಲ ಕರ್ಮಠ ಎಡಪಂಥೀಯ ಚಿಂತನೆಗಳಲ್ಲಿ ಮುಳುಗಿರುವವರಲ್ಲಿ ಮಾತ್ರ ಈ ಮಾರ್ಕ್ಸವಾದದ ಕುರಿತಾದ ಹಪಾಹಪಿತನವಿದೆ. ಇವರಿಗೆ ಜಗತ್ತು ನಾಗಲೋಟದಲ್ಲಿ ಬೆಳೆಯುತ್ತ ಮತ್ತೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತಿರುವುದರ ವಾಸ್ತವತೆಯೇ ಅರಿವಿಲ್ಲ.’

“ಮಸಲ ಮೇಲಿನ ಮಾತುಗಳನ್ನು ನಂಬಬಹುದಾದರೆ ಇನ್ನು ಈ ಮಾರ್ಕ್ಸವಾದದ ಕಾಲ ಮುಗಿದುಹೋಗಿದೆ ಎನ್ನುವ ಚಿಂತನೆಗಳು, ಪ್ರಚಾರಗಳು ನಮ್ಮ ಎಲ್ಲಾ ಮಾರ್ಕ್ಸಿಸ್ಟರ ಕಿವಿಗೆ ಅತ್ಯಂತ ಸುಶ್ರಾವ್ಯವಾದ ಸಂಗೀತದಂತೆ ಕೇಳಿಸತೊಡಗಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಇನ್ನಾದರೂ ಈ ಮಾರ್ಕ್ಸಿಸ್ಟರು ಪಿಕೆಟಿಂಗ್‌ಗಳು, ಪ್ರತಿಭಟನೆಗಳು, ಹರತಾಳಗಳನ್ನು ಮಾಡುವ ಕರ್ಮಕಾಂಡಕ್ಕೆ ಸಂಪೂರ್ಣ ವಿರಾಮ ಕೊಟ್ಟು ಕಂಗಾಲಾದ ಸ್ಥಿತಿಯಲ್ಲಿರುವ ತಮ್ಮ ಮನೆಗಳಿಗೆ ಮರಳಿ ಹೆಂಡತಿ ಮಕ್ಕಳೊಂದಿಗೆ ಸಂಜೆಯ ವೇಳೆಯ ಪ್ರಶಾಂತತೆಯನ್ನು ಅನುಭವಿಸಬಹುದು. ಆ ಕಮಿಟಿ ಮೀಟಿಂಗ್‌ಗಳಿಗೆ ಸಂಪೂರ್ಣ ತಿಲಾಂಜಲಿಯನ್ನು ಕೊಡಬಹುದು. ಮಾರ್ಕ್ಸಿಸ್ಟರು ತಮ್ಮನ್ನು ಈ ಮಾರ್ಕ್ಸಿಸ್ಟರ ಸ್ಥಿತಿಯಿಂದ, ಬಂಧನದಿಂದ ಬಿಡುಗಡೆಯನ್ನು ಬಯಸಿದ್ದರು. ಏಕೆಂದರೆ ಈ ಮಾರ್ಕ್ಸವಾದದ ರೀತಿಯು ಬುದ್ಧಿಸಂಗಿಂತಲೂ, ಬಂಡವಾಳವಾದದ ರೀತಿಗಿಂತಲೂ ಸಂಪೂರ್ಣ ಭಿನ್ನ. ಒಂದು ರೀತಿ ಈ ಮಾರ್ಕ್ಸಿಸ್ಟರು ವೈದ್ಯರ ತರಹ. ಈ ವೈದ್ಯರುಗಳು ಮೆಡಿಸಿನ್ ಅನ್ನು ಅಧ್ಯಯನ ಮಾಡಿ ಅದನ್ನು ತಮ್ಮ ಬಳಿಗೆ ಬಂದಂತಹ ರೋಗಿಗಳ ಮೇಲೆ ಪ್ರಯೋಗಿಸಿ ಅವರ ಕಾಯಿಲೆಗಳನ್ನು ಗುಣಪಡಿಸಿದ ನಂತರ ಆ ರೋಗಿಗೆ ಆ ಸದರಿ ವೈದ್ಯರ ಅವಶ್ಯಕತೆ ಇರುವುದಿಲ್ಲ ಮತ್ತು ವೈದ್ಯರೊಂದಿಗಿನ ರೋಗಿಯ ಸಂಬಂಧ ಮುಗಿದುಹೋಗುತ್ತದೆ. ಅದೇ ಮಾದರಿ ಈ ಮಾರ್ಕ್ಸಿಸ್ಟರದ್ದು ಸಹ. ಒಮ್ಮೆ ಗುರಿಗಳನ್ನು ತಲುಪಿದ ನಂತರ ಇವರ ಅವಶ್ಯಕತೆಯಿರುವುದಿಲ್ಲ. ಈ ಅವಶ್ಯಕತೆಯೇ ಇಲ್ಲವೆಂದಾದ ಮೇಲೆ ಚೆಗವೇರಾನ ಪೋಸ್ಟರುಗಳ ಅವಶ್ಯಕತೆಯೂ ಇರುವುದಿಲ್ಲ.”

“ಮಾರ್ಕ್ಸವಾದದ ಕುರಿತಾಗಿ ಎರಡನೇ ಪ್ರಮುಖ ಟೀಕೆ ’ಮಾರ್ಕ್ಸಿಸಂ ತನ್ನ ಪಠ್ಯಗಳಲ್ಲಿ, ಬೌದ್ಧಿಕ ಚಿಂತನೆಗಳ ಮಟ್ಟದಲ್ಲಿ ಅತ್ಯಂತ ಪ್ರಖರವಾಗಿಯೂ, ಪ್ರಗತಿಪರವಾಗಿಯೂ, ಆಕರ್ಷಕವಾಗಿಯೂ ಮಿಂಚುತ್ತಿರುತ್ತದೆ. ಆದರೆ ವ್ಯಾವಹಾರಿಕವಾಗಿ, ಕಾರ್ಯರೂಪದಲ್ಲಿ ಅದು ಭಯೋತ್ಪಾದನೆ ರೂಪದಲ್ಲಿ, ಊಹಿಸಲಾಗದ ಮಟ್ಟದಲ್ಲಿ ಬಲತ್ಕಾರದ ಪ್ರಕ್ರಿಯೆಯಲ್ಲಿ ನಿರಂತರವಾಗಿರುತ್ತದೆ. ಮಾರ್ಕ್ಸಿಸಂ ಎಂದರೆ ಸ್ವಾತಂತ್ಯ್ರಹೀನ ಸ್ಥಿತಿ. ಪಶ್ಚಿಮದ ಬುದ್ಧಿಜೀವಿಗಳಿಗೆ, ಅಧ್ಯಾಪಕರಿಗೆ ಈ ಮಾರ್ಕ್ಸಿಸಂ ಅಪ್ಯಾಯಮಾನವಾಗಿಯೂ, ಒಂದು ರೀತಿಯಲ್ಲಿ ಅಂಗೈಯ್ಯಲ್ಲಿನ ಅರಮನೆಯಂತೆ ಕಂಗೊಳಿಸುತ್ತಿರುತ್ತದೆ. ಆದರೆ ಲಕ್ಷಾಂತರ ಬಡವರಿಗೆ, ಕೆಳವರ್ಗಗಳಿಗೆ ಮಾರ್ಕ್ಸಿಸಂ ದಾರಿದ್ರ್ಯದ, ಚಿತ್ರಹಿಂಸೆಯ, ಬಲತ್ಕಾರದ ಶೋಷಣೆಯ ಸ್ಥಿತಿಯಾಗಿರುತ್ತದೆ. ಇದನ್ನು ಅರಿತೂ ಮಾರ್ಕ್ಸಿಸಂ ಅನ್ನು ಬೆಂಬಲಿಸುತ್ತಾರೆಂದರೆ ಅವರೆಲ್ಲ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆಂದೇ ಅರ್ಥ. ಇವರು ಅಭಿವೃದ್ಧಿಪರವಾದ ಮಾರ್ಕೆಟ್ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ತಯಾರಿದ್ದಾರೆಂತಲೇ ಅರ್ಥ.’

“ಒಂದಂತೂ ನಿಜ. ಆಧುನಿಕ ಬಂಡವಾಳಶಾಹಿ ಸಮಾಜವು ಮಾವೋನ ಚೀನಾದಂತೆ, ಸ್ಟಾಲಿನ್ನಸ ಸೋವಿಯತ್ ಒಕ್ಕೂಟದಂತೆ ಅಸಹ್ಯ ಹುಟ್ಟಿಸುವ ಜೀತದ, ಕ್ರೌರ್ಯದ, ಹಿಂಸೆಯ ಫಲರೂಪ. ಈ ಬಂಡವಾಳಶಾಹಿ ವ್ಯವಸ್ಥೆಯು ಸಹ ರಕ್ತ ಮತ್ತು ಕಣ್ಣೀರಿನಿಂದ ಬಂಧಿಸಲ್ಪಟಿದೆ. 19ನೇ ಶತಮಾನದ ಅಂತ್ಯದ ವೇಳೆಗೆ ಲಕ್ಷಾಂತರ ಇಂಡಿಯನ್ನರು, ಆಫ್ರಿಕನ್ನರು, ಕೊರಿಯನ್ನರು, ರಶ್ಯನ್ನರು ಹಸಿವಿನಿಂದ, ದಾರಿದ್ರ್ಯದಿಂದ, ಕ್ಷಾಮದಿಂದ ಸತ್ತಿದ್ದರೆ ಅದು ಈ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯಿಂದ. ನಿಜ ಈ ಮುಕ್ತ ಆರ್ಥಿಕ ವ್ಯವಸ್ಥೆಯ ಬಂಡವಾಳಶಾಹಿ ಸ್ವರೂಪವು ಕೆಲವು ವಲಯಗಳಲ್ಲಿ ಧೃಡತೆಯನ್ನು, ಅಭಿವೃದ್ಧಿಯನ್ನು, ಸುಖದ ಅನುಭವವನ್ನು ತುಂದುಕೊಟ್ಟಿದೆ. ಅದೂ ಸಹ ಮಾವೋನ ಚೀನಾದಂತೆ, ಸ್ಟಾಲಿನ್ನನ ಸೋವಿಯತ್‌ನಂತೆ. ಆದರೆ ಇದನ್ನು ಮನುಷ್ಯರ ಪ್ರಾಣದ ಮೇಲೆ ಒತ್ತೆ ಇಟ್ಟು ಸಾಧಿಸಲಾಯಿತು. ಇವೆರೆಡೂ ಸಿದ್ಧಾಂತಗಳು ನರಮೇಧದ, ಕ್ಷಾಮದ ಜೊತೆಜೊತೆಗೆ ಸುಖದ ಲೋಲುಪ್ತತೆಯನ್ನು ಹುಟ್ಟುಹಾಕಿತು. ಇದರ ಫಲವೇನೆಂದರೆ ಮುಂದಿನ ವರ್ಷಗಳಲ್ಲಿ ಇಡೀ ವಿಶ್ವವೇ ನಾಶವಾಗುವ ಸ್ಥಿತಿಗೆ ತಲುಪಿದೆ.

“ಅತ್ಯಂತ ಕಳೆಗೆಟ್ಟ, ಶಕ್ತಿಹೀನ ಸ್ಥಿತಿಯಲ್ಲಿ ಸೋಶಿಯಲಿಸಂನ್ನು ಸಾಧಿಸಲಾಗುತ್ತದೆ ಎಂದು ಮಾರ್ಕ್ಸ ಊಹಿಸಿರಲಿಲ್ಲ. ಅಷ್ಟೇಕೆ ಬೋಲ್ಷೆವಿಕ್ ನಾಯಕತ್ವವಾಗಲೀ, ಲೆನಿನ್, ಟ್ರಾಟಸ್ಕಿ ತರಹದ ನಾಯಕರಿಗೂ ಸಹ ಈ ಮಾದರಿಯ ಕಮ್ಯುನಿಸಂನ್ನು ಊಹಿಸಿರಲಿಲ್ಲ. ಅಲ್ಪ ಪ್ರಮಾಣದ ಸಂಪತ್ತನ್ನು ಎಲ್ಲರಿಗೂ ಒದಗುವಂತೆ ಪುನರೂಪಿಸುವ ಪ್ರಕ್ರಿಯೆಯೇ ಅಸಮರ್ಥವಾದದ್ದೆಂದು ಮಾರ್ಕ್ಸವಾದಿಗಳಿಗೆ ಅರಿವಾಗಲಿಲ್ಲ. ಸ್ವತಃ ಮಾರ್ಕ್ಸ ಹೇಳಿದಂತೆ ಇಂತಹ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಸಾಧಿಸುವುದೆಂದರೆ ಹಳೇ ಯುಗದ ಹೆಳವಂಡಗಳು ಪುನಃ ಜನ್ಮ ತಾಳಿದಂತಷ್ಟೇ. ಇದರಿಂದ ಕ್ಷಾಮವು ಸಹ ಸಮಾಜವಾದದ ಹೆಸರಿನಲ್ಲಿ ಸಾರ್ವಜನೀಕರಣಗೊಳ್ಳುತ್ತದೆ. ಕೆಳಮಟ್ಟದಿಂದ ಸಂಪತ್ತನ್ನು ಕ್ರೋಢೀಕರಿಸುವುದೆಂದರೆ ಲಾಭದ ತುತ್ತತುದಿಯನ್ನು ತಲುಪುವುದಷ್ಟೆ. ಈ ತುತ್ತತುದಿಯನ್ನು ಯಾವ ವೇಗದಲ್ಲಿ ಸಾಧಿಸುತ್ತೇವೆಯೋ ಅದೇ ವೇಗದಲ್ಲಿ ನಾವು ಲಕ್ಷಾಂತರ ದಾರಿದ್ರ್ಯವನ್ನು ಹುಟ್ಟುಹಾಕಿರುತ್ತೇವೆ. ತಳಮಟ್ಟದಿಂದ ಆರ್ಥಿಕತೆಯ ಪ್ರಗತಿಯನ್ನು ಸಾಧಿಸುವುದೆಂದರೆ ಅದು ಅತ್ಯಂತ ನೋವಿನ, ಅಪಾರ ಶ್ರಮದ ಕೆಲಸ. ಈ ಕಷ್ಟ, ಕಾರ್ಪಣ್ಯಗಳಿಗೆ ಬಹುಸಂಖ್ಯಾತ ಜನತೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ಇದನ್ನು ಪ್ರಜಾಪ್ರಭುತ್ವದ ತಳಹದಿಯಲ್ಲಿ, ಸಮಾಜವಾದದ ನೆಲೆಯಲ್ಲಿ ಜನತೆಯು ಸ್ವಯಂಸೇವಕರಾಗಿ ಸಾಧಿಸಲು ವಿಫಲವಾದಾಗ ಪ್ರಭುತ್ವವು ಅಧಿಕಾರಯುಕ್ತದ, ಉಕ್ಕಿನ ಹಿಡಿತದ ಶೈಲಿಯಲ್ಲಿ ಸಾಧಿಸಲು ಮುಂದಾಗುತ್ತದೆ. ರಷ್ಯಾದ ಬೋಲ್ಷೆವಿಕ್ ವ್ಯವಸ್ಥೆಯನ್ನೇ ಮಿಲಿಟರೀಕರಣಗೊಳಿಸಿದ್ದು ಇದಕ್ಕೆ ಒಂದು ಉತ್ತಮ ಉದಾಹರಣೆ.”

ಕಮ್ಯುನಿಷ್ಟರನ್ನು ಟೀಕಿಸುವವರು ಟೆರಿ ಈಗಲ್ಟನ್ನನ ಮೇಲಿನ ಪುಸ್ತಕವನ್ನು ಖಂಡಿತ ಓದಲೇಬೇಕು. ಕನಿಷ್ಟ ಪೂರ್ವಗ್ರಹಗಳಿಂದಾದರೂ ಹೊರಬರಬಹುದು. ನಂತರ ಮಾರ್ಕ್ಸನನ್ನು ಅಮೂಲಾಗ್ರವಾಗಿ, ಹೊಸ ನೋಟದಲ್ಲಿ ಓದಲಿ.

ನಿಜ. ಜಾಗತೀಕರಣದ ನಾಗಲೋಟದ ಇಂದಿನ ಸಂದರ್ಭದಲ್ಲಿ ನಮ್ಮ ಎಡಪಂಥೀಯರು ಮಾರ್ಕ್ಸವಾದವನ್ನು ಹೊಸ ನೋಟದಲ್ಲಿ, ಹೊಸ ದಿಕ್ಕಿನಲ್ಲಿ ಅರ್ಥೈಸಬೇಕಾಗಿತ್ತು. ತಮ್ಮ ಹಳೆಯ ನುಡಿಕಟ್ಟುಗಳನ್ನು ಬದಲಿಸಿಕೊಳ್ಳಬೇಕಾಗಿತ್ತು. ಈ ಹೊಸ ನುಡಿಕಟ್ಟುಗಳು ಮಾರ್ಕ್ಸವಾದದಲ್ಲಿ ತನಗೆ ತಾನೇ ತೆರೆದುಕೊಳ್ಳುತ್ತವೆ. ಆದರೆ ನಮ್ಮ ಒಳಗಣ್ಣುಗಳು ತೆರೆದುಕೊಳ್ಳಬೇಕು. ಆದರೆ ನಮ್ಮ ಕಮ್ಯುನಿಷ್ಟರು ಇಂದು ತಮ್ಮ ಒಳಗಣ್ಣುಗಳನ್ನು ತೆರೆಯಲು ನಿರಾಕರಿಸುತ್ತಿರುವುದು Globalizationಒಂದು ಕಾಲದಲ್ಲಿ ಕಮ್ಯುನಿಷ್ಟರೊಂದಿಗೆ ಗುರುತಿಸಿಕೊಂಡಿದ್ದ ನಮ್ಮಂತಹವರಿಗೆ ನಿಜಕ್ಕೂ ವ್ಯಥೆಯೆನಿಸುತ್ತದೆ. ಏಕೆಂದರೆ ಜಾಗತೀಕರಣದ ಪ್ರಲೋಭನೆಗಳು ನಮ್ಮ ಬದುಕಿನ ನೈತಿಕತೆ ಹಾಳು ಮಾಡಿರುವುದು ನಿಜ. ಏಕೆಂದರೆ ನಾವೆಲ್ಲ ಈ ಜಾಗತೀಕರಣವನ್ನು ಕೊಳ್ಳುಬಾಕ ಸಂಸ್ಕೃತಿಗೆ ತೆರೆದ ಹೆಬ್ಬಾಗಿಲೆಂದು ತಪ್ಪಾಗಿ ಪರಿಗಣಿಸಿ ಹಿಗ್ಗಾಮುಗ್ಗಾ ಮುಕ್ಕತೊಡಗಿದ್ದೇ ಈ ಅಜೀರ್ಣಕ್ಕೆ ಕಾರಣ. ಆದರೆ ಇದೇ ಜಾಗತೀಕರಣವನ್ನು ಬಳಸಿಕೊಂಡು ನಮ್ಮ ತಳಸಮುದಾಯಗಳಲ್ಲಿ ಆರ್ಥಿಕವಾಗಿ ಬಲು ದೊಡ್ಡ ಚಲನಶೀಲತೆಯನ್ನು ತಂದುಕೊಡಬಹುದು, ಅಸ್ಪೃಶ್ಯತೆಯನ್ನು ಸಹ ಕ್ರಮೇಣವಾಗಿ ಅಳಸಿಹಾಕಬಹುದು ಎನ್ನುವ ಸಾಧ್ಯತೆಗಳನ್ನು ಕುರುಡಾಗಿ ನಿರಾಕರಿಸುತ್ತಿದ್ದಾರೆ ನಮ್ಮ ಎಡಪಂಥೀಯರು. ಮರಳಿ ಇದು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದೆಲ್ಲ ಹೇಳುತ್ತಿದ್ದಾರೆ, ಆದರೆ ಇದು ನಿಜಕ್ಕೂ ತಪ್ಪು. ಏಕೆಂದರೆ ಈಗಲ್ಟನ್ ಹೇಳುವಂತೆ ಭವಿಷ್ಯದಲ್ಲಿ ಉಂಟಾಗುವ ಬದಲಾವಣೆಯು ಇಂದಿನ ವ್ಯವಸ್ಥೆಯೊಂದಿಗೆ ಸಂಪೂರ್ಣ ಕಡಿತಗೊಂಡಿರುವಂತಾದ್ದಲ್ಲ ಅಥವಾ ಇಂದಿನ ವ್ಯವಸ್ಥೆಯ ಮುಂದುವರಿಕೆಯೂ ಅಲ್ಲ. ಅನೇಕ ಬಾರಿ ಮಾರ್ಕ್ಸ ಕಂಡುಕೊಂಡಿರುವಂತೆ “ಸಮಾಜವಾದವನ್ನು ಜಾರಿಗೊಳಿಸಬೇಕಾದರೆ ಮೊದಲು ಬಂಡವಾಳಶಾಹಿಯು ಚಾಲ್ತಿಯಲ್ಲಿರಬೇಕು”. ಇದನ್ನು ಜಗತ್ತಿನ ಯಾವುದೇ ಎಡಪಂಥೀಯ ರಾಜಕಾರಣಿಗಳು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಅಷ್ಟೇಕೆ ನಮ್ಮ ಮಾರ್ಕ್ಸಿಸ್ಟರು ಆರ್ವೆಲ್‌ನ ಮಾಸ್ಟರ್ ಪುಸ್ತಕ “1948 1984″ ಕಾದಂಬರಿಯನ್ನು ಓದಲು ಸಹ ನಿರಾಕರಿಸುತ್ತಾರೆ!! ಅದು ವಿಚಿತ್ರ್ಯವೇ ಸರಿ!! ನೆನಪಿರಲಿ ಹೆಗೆಲ್‌ನ ಚಿಂತನೆಗಳಿಗೆ ಬಂಡಾಯವಾಗಿಯೇ ಮಾರ್ಕ್ಸ ಚಿಂತಿಸಿದ್ದಲ್ಲವೇ ? ಆದರೆ ಹೆಗೆಲ್‌ನ “antithesis dialectics” ಅನ್ನು ಇಂದಿಗೂ ಚರ್ಚಿಸಲಾಗುತ್ತಿದೆ. ಮಾರ್ಕ್ಸನ ಮೆಟೀರಿಯಲಿಸ್ಟಿಕ್ ಫಿಲಾಸಫಿ ಮತ್ತು ಹೆಗೆಲ್‌ನ ಆಧ್ಯಾತ್ಮದ ಕಾನ್ಸೆಪ್ಷನ್ ಎರಡನ್ನೂ ನಿರಾಕರಿಸಲು ಸಾಧ್ಯವಿಲ್ಲವಲ್ಲವೇ??

 

ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

– ಶರ್ಮಿಷ್ಠ 

ರವಿ ಕೃಷ್ಣಾರೆಡ್ಡಿಯವರ ಲೇಖನ “ವರ್ತಮಾನ.ಕಾಮ್ ನ 2013 ಭೂತಕಾಲ” ಓದುವಾಗ ನನಗನ್ನಿಸಿದ್ದು…

ದೆಹಲಿಯಲ್ಲಿ ನಡೆದಂತಹ ಪವಾಡಸದೃಶ ಘಟನೆ ನನ್ನ ಪ್ರಕಾರ ನಮಗೆ ಅನಿವಾರ್ಯವಾಗಿ, ಅಗತ್ಯವಾಗಿಯೂ ಬೇಕು. ಆದರೆ ನಮ್ಮಲ್ಲಿ ಮನಸ್ಸುಗಳು ಮುಕ್ತವಾಗಿ ಆಲೋಚಿಸುವುದನ್ನೇ ಕಳೆದುಕೊಂಡಿರುವಾಗ ಇದು ಸಾಧ್ಯನಾ? arvind-kejriwal-delhi-electionsಕರ್ನಾಟಕದಲ್ಲಿ ನೀವು ಒಂದೋ ಎಡ ಅಥವಾ ಬಲ ಪಂಥೀಯರಾಗಿರಲೇ ಬೇಕು. ನೀವು ಗುರುತಿಸಿಕೊಳ್ಳದಿದ್ದರೂ ನಿಮ್ಮ ಸುತ್ತಲಿನ ಜನ ಇದೆರಡರಲ್ಲಿ ಒಂದಕ್ಕೆ ನಿಮ್ಮನ್ನು ಸೇರಿಸಿ, ನಿಮ್ಮನ್ನು ಹಿಗ್ಗಾಮುಗ್ಗಾ ಎಳೆದಾಡುತ್ತಾರೆ. ನಿಮ್ಮ ಒಲವು ಎಡ ವಿಚಾರಗಳ ಕಡೆಗಿದ್ದರೆ ಸಾಕು, ಅನಾವಶ್ಯಕ ನಿಮ್ಮ ಮೇಲೇ ದ್ವೇಷ ಸಾಧಿಸುತ್ತಾರೆ. ಕಾರಣವೇ ಇಲ್ಲದೆ ನಿಮ್ಮ ಬಳಿ ಮಾತು ಬಿಡುತ್ತಾರೆ, ನಿಮ್ಮ ನೆರಳು ಕಂಡರೂ ಸಾಕು ರೇಗುತ್ತಾರೆ. ಒಟ್ಟಿನಲ್ಲಿ ನಿಮ್ಮ ವಿಚಾರಗಳು ಸರಿಯಿಲ್ಲ.

ಬಲಪಂಥೀಯರೆಂದರೆ ವಿಶ್ವಾಸವಿಲ್ಲದ ಯುವಜನತೆ ಎಡಪಂಥೀಯರೆಡೆಗೆ ಹೋಗೋಣ ಎಂದರೆ ಅಲ್ಲಿರುವುದೆಲ್ಲ ಬರಿಯ ಮುಖವಾಡ, ಹಿಪೋಕ್ರಸಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಯಾರನ್ನು ಆದರ್ಶ ಅಂಥ ಹೇಳೋಣ? ಆದರ್ಶ ಎನ್ನುವುದು ಅದು ಆದರ್ಶ ಅನ್ನೋದಕ್ಕೆ ನಮಗೆ ಆದರ್ಶಯುತವಾಗಿರಬೇಕೇ ಹೊರತು, ಬೇರೆಯವರ ಅನುಕರಣೆ ಅಲ್ಲ. ಅವರು ಆದರ್ಶವಾಗಿದ್ದರೆ ಎಷ್ಟು, ಬಿಟ್ಟರೆ ಎಷ್ಟು. ಆದರೂ ಕೆಲವೊಮ್ಮೆ ನಾವು ನಮ್ಮ ಹೋರಾಟದಲ್ಲಿ ಸೋಲು ಅನುಭವಿಸುವಾಗ ಜೀವಚೈತನ್ಯ ನೀಡುವುದಕ್ಕಾದರೂ ಆದರ್ಶಪ್ರಾಯ ವ್ಯಕ್ತಿಯೊಬ್ಬ ಸಂತೈಸಲು ಬೇಕಾಗುತ್ತದೆ. ನಮ್ಮ ನಡೆಗೆ ಜೀವ ತುಂಬಲು…

ಜಿಎಸೆಸ್ ತೀರಿಹೋದಾಗ ನನಗನ್ನಿಸಿತ್ತು, ಆದರ್ಶ ಗುರುಪರಂಪರೆಯ ಕಾಲ ಇನ್ನಿಲ್ಲ… Tumkur-VC-Sharma-with-Governorಹಿಂದಿನ ಗುರುಗಳು ಆದರ್ಶಯುತವಾದ ವಿದ್ಯಾರ್ಥಿವೃಂದವನ್ನು ಬೆಳೆಸಿದಂತೆ ಈಗ ಬೆಳೆಸುವವರು ಯಾರಿದ್ದಾರೆ? ಆ ಗುರುವಿನ ಪಟ್ಟಕ್ಕೆ ನಾವು ಬೆಲೆತೆತ್ತು ಹೋಗುತ್ತಿರುವಾಗ, ವಿಸೀ ಪದವಿ ನಡೆಯುತ್ತಿರುವುದು ಆಯ್ಕೆಯಲ್ಲ, ಅನಧಿಕೃತ “ಬಿಡ್” ಅನ್ನುವುದು ಎಲ್ಲರಿಗೂ ಗೊತ್ತಿರುವಾಗ ಆದರ್ಶಯುತ ವಿದ್ಯಾರ್ಥಿವೃಂದ ಬೆಳೆಸೋದು ಸಾಧ್ಯನಾ? ಕಾಲೇಜುಗಳಲ್ಲೇ ವಿದ್ಯಾರ್ಥಿ ಚುನಾವಣೆ ಮೂಲಕ ರಾಜಕೀಯ ಕಾಲಿಟ್ಟು ವಿದ್ಯಾರ್ಥಿ ಸಮುದಾಯವನ್ನೇ ಒಡೆಯುತ್ತಿದೆ. ಸಮಾರಂಭದಲ್ಲಿ ನಮ್ಮ ಅಧ್ಯಾಪಕರ ಆಯ್ಕೆ ಕಾಲೇಜಿಗೆ ಫಂಡ್ ಕೊಡಬಲ್ಲ ಲಂಚಕೋರ ರಾಜಕಾರಣಿಯೇ ಹೊರತು ಆದರ್ಶ ವ್ಯಕ್ತಿ ಅಲ್ಲ.

ಒಳ್ಳೆಯ ಶಿಷ್ಯ ಪರಂಪರೆಯನ್ನು ಕಟ್ಟಬಲ್ಲ ತಾಕತ್ತಿರುವ ಅಧ್ಯಾಪಕರನ್ನು ನಾವು ನಕ್ಸಲ್ ಬೆಂಬಲಿಗ ಎನ್ನುವ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಿಯಾಗಿದೆ. ಸೆಕ್ಯುಲರ್‌ಗಳು ಎನಿಸಿಕೊಂಡಿರುವವರು ತಪ್ಪು ಯಾರು ಮಾಡಿದರೂ ತಪ್ಪು ಎನ್ನೋ ಧೋರಣೆ ಬಿಟ್ಟು ಯಾವುದೋ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರನ್ನು ಹೆಚ್ಚು ಹೆಚ್ಚು ತಯಾರು ಮಾಡುತ್ತಿದ್ದಾರೆ. ಅದಕ್ಕೆ ಕರ್ನಾಟಕದ ಯುವಜನತೆ ಮೋದಿಯ ಚುಂಗು ಹಿಡಿದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಮೋಡಿ ಆಗುತ್ತಿಲ್ಲ.

ಒಮ್ಮೆ ಟಿ.ಪಿ. ಅಶೋಕ ಸಮಾರಂಭವೊಂದರಲ್ಲಿ ಹೇಳಿದ್ದರು `ಲೆಟ್ ಅಸ್ ಅಗ್ರೀ ಟು ಡಿಸಗ್ರೀ’. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ.

ಯಾದವ್ ತರದ ಒಳ್ಳೆಯ ಆದರ್ಶ ಪ್ರೋಪೆಸರ್ ಇಲ್ಲಾ ಅಂಥಲ್ಲ ಅಂಥವರನ್ನು ಸರ್ಕಾರದ ಅಧೀನದಲ್ಲಿರುವ ವಿವಿಗಳು ಕೈಕಟ್ಟಿ ಕೂರಿಸಿವೆ. ಅಥವಾ ಸಾಧ್ಯತೆ ಇರುವವರು ಮುಂದೆ ಬರುತ್ತಿಲ್ಲ.

ಒಳ್ಳೆಯ ಪತ್ರಕರ್ತರು ಅಂಥ ಇದ್ದರೆ ಅವರು ಬಹುಶ ಮಾಧ್ಯಮದಲ್ಲಿ ಉಳಿಯುವುದಿಲ್ಲ. ಒಳ್ಳೆಯ ಆದರ್ಶಗಳಿದ್ದರೆ, ನೀವು ಅನ್‌ಫಿಟ್ ಟು ಬಿಕಮ್ ಜರ್ನಲಿಸ್ಟ್.

ಒಳ್ಳೆಯ ಲಾಯರ್ ಅಂಥ ಯಾರಿದ್ದಾರೆ. ಇದ್ದಾರೆ ಒಬ್ಬರು ಮುಕ್ತ, ಮಹಾಪರ್ವದ ಟಿ..ಎನ್. ಸೀತಾರಾಂ ಅಷ್ಟೆ. ಸಂತೋಷ ಹೆಗ್ಡೆಯವರು ಅಷ್ಟು ಕಷ್ಟಪಟ್ಟು ತಯಾರಿಸಿದ ಲೋಕಾಯುಕ್ತ ವರದಿಯನ್ನು ಲೀಕ್ ಮಾಡಿದಾಗ, Santosh_Hegdeಅವರು ಗಳಗಳನೆ ಅತ್ತರಲ್ಲ ಯಾರಿಂದ ಏನು ಮಾಡಲಿಕ್ಕಾಯ್ತು. ಈ ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಹಕ್ಕಿದೆ? ಒಂದು ಪಿಐಎಲ್‌ಗೆ ಲಕ್ಷಗಟ್ಟಲೆ ಸುರಿಯಬೇಕಾಗಿರುವಾಗ ಯಾರು ತಾನೇ ಮುಂದೆ ಬಂದು ಜನಪರ ಹೋರಾಟಗಳನ್ನು ಮಾಡುತ್ತಾರೆ. ನಮ್ಮಲ್ಲಿ ಪಠ್ಯಪುಸ್ತಕದಲ್ಲಿ ಜಾತಿ ಹೆಸರಲ್ಲಿ‍, ಇನ್ನು ಯಾವುದೋ ಹೆಸರಲ್ಲಿ ಎಷ್ಟೆಷ್ಟೂ ಗಲಾಟೆಗಳಾಗುತ್ತದೆ. ಆದರೆ ಯಾರದರೂ ಕಾನೂನನ್ನು ಗಂಭೀರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರಾ?

ಕೆಲವೊಮ್ಮೆ ಹೋರಾಟಗಾರರು ತಮ್ಮ ಅಹಿಂದ, ದಲಿತ, ಅಲ್ಪಸಂಖ್ಯಾತ ಧೋರಣೆಯಿಂದ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಬಹುಸಂಖ್ಯಾತರ ಬೆಂಬಲ ಕಳೆದುಕೊಂಡು ಸಮಾಜವನ್ನು ಇನ್ನೂ ಛಿದ್ರ ಛಿದ್ರ ಮಾಡುತ್ತದೆ ಅಷ್ಟೆ.

ಏನು ಬರೆದರೂ ಏನು ಸಾಧ್ಯವಿಲ್ಲ. ಎಲ್ಲ ಅಕ್ಷರ ಕಸ ಎನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ. sowjanya-heggadeಸೌಜನ್ಯಾ ಪರ ಹೋರಾಟ. ಎಲ್ಲರು ಎಷ್ಟು ದನಿಯೆತ್ತಿದರೂ ಏನೂ ಸಾಧ್ಯವಾಗಲಿಲ್ಲ. ಈ ರೀತಿಯ ಘಟನೆ ಮನಸ್ಸನ್ನು ಮತ್ತೆ ಮತ್ತೆ ಕುಗ್ಗಿಸುತ್ತೆ. ಆ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕೆ ಆಗಲೇ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಬಲಿದಾನ ಅನಿವಾರ್ಯ ಎಂದು ಹಿಂದೂ ಪರ ಸಂಘಟನೆಗಳು ಕೈಕಟ್ಟಿ ಕುಳಿತವು. ಆದರೆ ಅವಳು ನಮ್ಮ ಮನೆ ಮಗಳಾಗಿದ್ದರೆ…

ಇದನ್ನೆಲ್ಲಾ ಯಾರ ಹತ್ತಿರ ಹೇಳಬೇಕು, ಈ ಅಕ್ಷರ ಕಸ ಯಾಕೆ ಬೇಕು… ಐಯಾಮ್ ಫ್ರಸ್ಟ್ರೇಟೆಡ್.

ನನ್ನ ದೇಹ ಗಂಡಾದರೂ, ನನ್ನ ಮನಸ್ಸು ಮಾತ್ರ ಹೆಣ್ಣು…

– ಸುಮಾ ಮುದ್ದಾಪುರ್
ಪತ್ರಿಕೋದ್ಯಮ ವಿದ್ಯಾರ್ಥಿ

“ನಾನು ಹೀಗೆ ಅಂತ ನಮ್ಮ ಮನೆಯವರಿಗೆ ಗೊತ್ತು. ಆದರೆ ಈ ಕೆಲಸ ಮಾಡ್ತಾ ಇದಿನಿ ಅಂತ ಗೊತ್ತಿಲ್ಲ. ನಾನು ಈ ಕೆಲಸ ಮಾಡ್ತಾ ಇದೀನಿ ಅಂತ ಗೊತ್ತಾದರೆ ನನಗೆ ಮದುವೆ ಮಾಡ್ತಾರೆ. ನನಗೆ ಬೇರೆ ಹುಡುಗಿನ ಮದುವೆ ಆಗಿ ಅವಳ ಜೀವನ ಹಾಳು ಮಾಡೊಕೇ ಇಷ್ಟ ಇಲ್ಲ. ಏಕೆ ಅಂದ್ರೆ ನಾನು ಒಬ್ಬ ಗಂಡಾಗಿದ್ರೂ ಕೂಡ ಹುಡುಗಿಯ ಮೇಲೆ ಆಗಲಿ ಅವಳ ದೇಹದ ಮೇಲೆಯಾಗಲಿ ಆಸೆ ಇಲ್ಲ. ಆ ರೀತಿಯ ಭಾವನೆಗಳು ಕೂಡ ಹುಟ್ಟುವುದಿಲ್ಲ. male-female-transgender-symbolsನನಗೆ ಹುಡುಗಿಯರನ್ನ ನೊಡಿದ್ರೆ ಏನೂ ಅನ್ನಿಸುವುದಿಲ್ಲ. ಅವರ ಮೇಲೆ ಪ್ರೀತಿ ಹುಟ್ಟಲ್ಲ. ಆದರೆ ನನಗೆ ನಾನು ಇಷ್ಟ ಪಡುವ ಹುಡುಗನ ಮೇಲೆ ಪ್ರೀತಿ ಹುಟ್ಟುತ್ತದೆ. ಅವನ ದೇಹದ ಮೇಲೆ ಆಸೆಯಾಗುತ್ತೆ. ನಾನೇನು ಮಾಡ್ಲಿ ಇದು ನನ್ನ ತಪ್ಪಲ್ಲ, ನನ್ನ ಮನಸ್ಸಿನ ತಪ್ಪು. ಆದರೆ ಎಲ್ಲಾರು ನಾನು ತಪ್ಪು ಮಾಡುತ್ತಾ ಇದ್ದೆನೆ ಅನ್ನೋ ರೀತಿಯಲ್ಲಿ ಮಾತಾಡ್ತಾರೆ. ನಾನು ಇರೋದೇ ಹೀಗೆ. ನನ್ನ ದೇಹ ಗಂಡಾದರೂ, ನನ್ನ ಮನಸ್ಸು ಮಾತ್ರ ಹೆಣ್ಣು…”

ಹೀಗೆ ನನ್ನ ಜೊತೆ ಮಾತಾಡಿದವರು ಲಕ್ಷಣ್. ಮೂಲತಃ ಹಾವೇರಿಯವರು. ಇವರು ಸರಕಾರೇತರ ಸಂಸ್ಥೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುವವರು. ಡಿಸೆಂಬರ್ 11, 2013 ರಂದು ಸುಪ್ರೀಮ್ ಕೋರ್ಟ ಇಂಡಿಯನ್ ಪೀನಲ್ ಕೋಡ್‌ನ 377 ಸೆಕ್ಷನ್ ಪ್ರಕಾರ ಸಲಿಂಗರತಿ (‍ಸಲಿಂಗ ಕಾಮ) ಕಾನೂನು ಬಾಹಿರ ಎಂದು ಘೋಷಿಸಿದೆ. Supreme_court_of_indiaಈ ತೀರ್ಪಿನ ಬಗ್ಗೆ ಸರಕಾರೇತರ ಸಂಸ್ಥೆಯಾದ ಎ.ಎಲ್.ಎಫ್ ನಲ್ಲಿ ಚರ್ಚೆಯನ್ನು ಆಯೋಜಿಸಿದ್ದರು. ಅಲ್ಲಿಗೆ ಲಕ್ಷಣ್ ಬಂದಿದ್ದರು. ನಾನು ಕೂಡ ಅಲ್ಲಿಗೆ ಹೋಗಿದ್ದೆ. ಆಲ್ಲಿ ಲಕ್ಷಣ್ ಅವರ ಪರಿಚಯ ಆಯಿತು.

ಅವರು ಹೇಳುತ್ತಾರೆ ಸಲಿಂಗ ಕಾಮ ಅನ್ನುವುದು ಇತ್ತೀಚೆಗೆ ಬಂದಿರುವುದಲ್ಲ. ಇದು ಅನಾದಿ ಕಾಲದಿಂದಲೂ ಇದೆ. ಸ್ವತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿ ಪದ್ದತಿ ಜಾರಿಯಲ್ಲಿತ್ತು. ಆಗ ಮನುಷ್ಯರನ್ನು ಕೊಂಡುಕೊಂಡು ಅವರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದರು. ಅದು ಹೆಂಗಸು ಗಂಡಸನ್ನು, ಗಂಡಸು ಹೆಂಗಸನ್ನು ಅಲ್ಲ. ಗಂಡು ಗಂಡನ್ನೆ, ಹೆಣ್ಣು ಹೆಣ್ಣನ್ನೆ ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಈ ಪುರುಷರು ತಮ್ಮ ಅಸ್ಥಿತ್ವದ ಉಳಿವಿಗಾಗಿ, ಪುರುಷ ಪ್ರಧಾನ ಸಮಾಜದ ನಿಮಾಣಕ್ಕಾಗಿ ಹೆಣ್ಣು ಗಂಡನ್ನು, ಗಂಡು ಹೆಣ್ಣನ್ನು ಕಾಮಿಸುವುದೇ ನೈಸರ್ಗಿಕ. ಹೆಣ್ಣು ಹೆಣ್ಣನ್ನು, ಗಂಡು ಗಂಡನ್ನು ಕಾಮಿಸುವುದು ಅನೈಸರ್ಗಿಕ ಎಂದು ಸಾರುತ್ತಾ ಬಂದರು. ಇವರು ಹೇಗೆ ಹೇಳುತ್ತಾರೆ ಯಾವುದು ನೈಸರ್ಗಿಕ ಯಾವುದು ಅನೈಸರ್ಗಿಕ ಎಂದು? ಪ್ರಕೃತಿಯಲ್ಲಿ ನೈಸರ್ಗಿಕ ಮತ್ತು ಅನೈಸರ್ಗಿಕ ಗಳನ್ನು ಗುರುತಿಸಿದವರು ಯಾರು?

ಸಲಿಂಗ ಕಾಮ ತಪ್ಪು ಎನ್ನುವುದು ಸಮಾಜದಲ್ಲಿ ಭದ್ರವಾಗಿ ಬೇರೂರಿ ಬಿಟ್ಟಿದೆ. sex-edಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತಾಡುವುದೇ ತಪ್ಪು, ಹಾಗೇ ಮಾತಾಡಿದರೆ ಅದು ಅನಾಚಾರ ಎಂದು ಭ್ರಮಿಸಲಾಗಿತ್ತು. ಹಲವು ಶತಮಾನಗಳ ಮಡಿವಂತಿಕೆಯ ಫಲವಾಗಿ, ಹಾಗೂ ಮಿಕ್ಕವರು ಏನೆಂದುಕೊಳ್ಳುತ್ತಾರೋ ಎಂಬ ಭೀತಿಯಿಂದ, ಜನರು ತಮ್ಮ ವೈಯಕ್ತಿಕ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು ದೊಡ್ಡ ಅಪರಾಧ ಎಂದು ಭಾವಿಸಿದ್ದ ಸಮಾಜ ಅಥವಾ ಜನರು ಇಂದು ಮುಕ್ತವಾಗಿ ಮಾತನಾಡುವುದನ್ನು ಕಲಿತಿದ್ದಾರೆ.

ಅದರಲ್ಲೂ ಇತ್ತೀಚಿಗಿನ 15-20 ವರ್ಷಗಳಿಂದ ಸಲಿಂಗ ಕಾಮದ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಲೈಂಕತೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ ಜನರು. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಎಷ್ಟರ ಮಟ್ಟಿಗೆ ಸಮಂಜಸ ಎಂದು ಅವರು ನನಗೆ ಪ್ರಶ್ನೆ ಹಾಕಿದರು. ನನಗೆ ಏನು ಹೇಳುಬೇಕು ಅನ್ನುವುದೇ ತೋಚಲಿಲ್ಲ.

“ಸುಪ್ರೀಂ ಕೋರ್ಟ್‌ನ ಈ ತೀರ್ಪು ಬರುವುದಕ್ಕೂ ಮುಂಚೆ ಪೋಲಿಸರಿಂದ ಒಂದು ಹಂತದ ವರೆಗಿನ ಹಿಂಸೆಯಾಗುತ್ತಿತ್ತು. ಆದರೆ ಈ ತೀರ್ಪು ಬಂದ ನಂತರ ಪೋಲಿಸರ ಹಾವಳಿ ಇನ್ನೂ ಹೆಚ್ಚಾಗಿದೆ. ಅವರುಗಳು ನಮ್ಮ ಮೇಲೆ ನಡೆಸುವ ದೈರ್ಜನ್ಯಕ್ಕೆ ನಾವು ಕುಸಿದು ಹೋಗಿದ್ದೆವೆ. ಲೈಂಗಿಕ ಕಾರ್ಯಕರ್ತರಿಗೆ/ರ್ತೆಯರಿಗೆ ಹೆಚ್.ಐ.ವಿ ಬಗ್ಗೆ ಮಾಹಿತಿ ನೀಡಿ ಅವರಿಗೆ ಉಚಿತವಾಗಿ ಕಾಂಡೋಮ್ ಅನ್ನು ವಿತರಿಸುವುದು ಮತ್ತು ಸ್ವಚ್ಛತೆಯ ಬಗ್ಗೆ ಅವರಿಗೆ ಮಾಹಿತಿ ನೀಡುವುದು ನಮ್ಮ ಕೆಲಸ. Transexual, transgenders and Aravani gay men in Tamil Nadu, Indiaಹೀಗೆ ಇತ್ತೀಚೆಗೆ ಸಂಜೆ ಹೊತ್ತು ನಮ್ಮ ಕೆಲಸದಲ್ಲಿ ನಾವು ನಿರತರಾಗಿದ್ದಾಗ ಇಬ್ಬರು ಪೋಲಿಸರು ಬಂದು ನಮ್ಮ ಬ್ಯಾಗ್ ಚೆಕ್ ಮಾಡಿ ಅದರಲ್ಲಿ ಇದ್ದ ಕಾಂಡೋಮ್‌ಗಳನ್ನು ನೋಡಿ ಕೇಳಿದರು ಏನಿದು ಎಂದು. ನಾವು ಮಾಡುತ್ತಿರುವ ಕೆಲಸದ ಬಗ್ಗೆ ಮತ್ತು ನಮ್ಮ ಸಂಸ್ಥೆಯ ಬಗ್ಗೆ ಎಲ್ಲವನ್ನು ತಿಳಿಸಿ ಹೇಳಿದೆವು. ಆದರೆ ಆ ಪೋಲಿಸರು ನಮ್ಮ ಮಾತುಗಳನ್ನು ಕೇಳದೆ (ನಂಬದೆ) ನಮ್ಮ ಬ್ಯಾಗ್‌ನಲ್ಲಿದ್ದ ಕಾಂಡೋಮ್ ಗಳನ್ನೆಲ್ಲ ಸುಟ್ಟು ಹಾಕಿ ನಮಗೆಲ್ಲ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದರು. “ನೀವು ಯಾಕೆ ಹೀಗೆ ನಡೆದುಕೊಳ್ಳುತ್ತಿರಿ. ನೀನು ಒಬ್ಬ ಗಂಡಸಾಗಿ ಗಂಡಿನ ತರ ನಡೆದುಕೊ. ಹೆಂಗಸಿನ ಹಾಗೆ ಯಾಕೆ ನಡೆದುಕೊಳ್ಳುತ್ತೀಯ” ಎಂದು ಅವರು ನನ್ನನ್ನು ಕೇಳಿದರು. ಅದಕ್ಕೆ ನಾನು ಹೇಳಿದೆ, “ನಾನು ನೋಡಲಿಕ್ಕೆ ಗಂಡಿನ ಹಾಗೆ ನಿಮಗೆ ಕಾಣಬಹುದು. ಆದರೆ ಏನು ಮಾಡುವುದು ಸಾರ್, ನನ್ನ ಒಳಗಡೆ ಮನಸ್ಸು ಅನ್ನುವುದು ಒಂದು ಇದೆಯಲ್ಲ, ಅದು ಹೆಣ್ಣಿನ ಭಾವನೆಗಳನ್ನು ಹೊಂದಿದೆ. ಆ ಮನಸ್ಸಿಗೆ ನಾನು ಗಂಡಸಿನ ಹಾಗೆ ಇರು ಅಂತ ಎಷ್ಟು ಹೇಳಿದರು ಆ ಮನಸ್ಸು ಕೇಳುತ್ತಿಲ್ಲ. ಏನು ಮಾಡಲಿ ಸಾರ್ ಇದು ನನ್ನ ತಪ್ಪ?” ಎಂದು ಕೇಳಿದೆ. ಆದರೆ ಆ ಪೋಲಿಸ್ ಇದನ್ನೆಲ್ಲ ಕೇಳಿ ನನಗೆ ಪಾಠ ಹೇಳೋಕೆ ಬರ್‍ತೀಯಾ ಅಂತಾ ಇನ್ನಷ್ಟ ಹೊಡೆದ್ರು.

“ಏನು ಮಾಡುವುದು ಮೇಡಂ, ನಾವುಗಳು ಈ ಸಮಾಜಕ್ಕೇ ಒಂದು ಪ್ರಶ್ನೆ. ಅತ್ತಾ ಗಂಡಿನ ಹಾಗೆ ಇರೋಕೆ ಅಗ್ತಾ ಇಲ್ಲ. ಇತ್ತಾ ಹೆಣ್ಣಿನ ಹಾಗೇ ಇರೋಕೂ ಆಗ್ತಾ ಇಲ್ಲ. ಗಂಡಿನ ದೇಹ ಹೊತ್ತು, ಹೆಂಗಸಿನ ಮನಸು ಹೊಂದಿ ಈ ಸಮಾಜದಲ್ಲಿ ನಾವು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ. ಎಲ್ಲರ ಹಾಗೆ ಸಹಜ ಜೀವನ ನಡೆಸಲು ಆಗದೆ ಈ ಸಮಾಜದಲ್ಲಿ ದಿನ ನಿತ್ಯ ಹೋರಾಟ ನಡೆಸುತ್ತಿದ್ದೇವೆ. ನಾವುಗಳು ಕೂಡ ನಿಮ್ಮೆಲ್ಲರ ಹಾಗೆ ಮನುಷ್ಯರು. ಅದರಲ್ಲೂ ಮನಸ್ಸು ಇರುವ ಮನುಷ್ಯರು. ನಮಗೂ ಬದುಕಲು ಬಿಡಿ,” ಎಂದರು.

ಇದನ್ನೆಲ್ಲ ಕೇಳಿ ನನಗೆ ತುಂಬ ನೋವಾಯಿತು. ಲೈಂಗಿಕತೆ ಮತ್ತು ಲೈಂಗಿಕ ಆಸಕ್ತಿ ಅನ್ನುವುದು ಬಹಳ ಸಂರ್ಕೀವಾದ ವಿಷಯ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ ಎಲ್ಲರಿಗೂ ತಿಳಿದ ವಿಷಯ, ಅಂತೆಯೇ ಸಲಿಂಗಿಗಳ ಪರಸ್ಪರ ಆಕರ್ಷಣೆಯೂ, ಅಸ್ತಿತ್ವದಲ್ಲಿರುವ ಸಂಗತಿಯೇ. ಹೇಗೆ ಎಲ್ಲಾ ಬಣ್ಣದ ಜನರು ಈ ಪ್ರಪಂಚದಲ್ಲಿ ಇದ್ದಾರೋ, ಹಾಗೇಯೇ ಜನರ ಲೈಂಗಿಕತೆಯೂ ಭಿನ್ನವಾಗಿ ಇರುವುದರಲ್ಲಿ ಆಶ್ಚರ್ಯವೇನು ಇಲ್ಲ. ಈ ಪುರುಷ ಪ್ರಧಾನ ಸಮಾಜದ ನಿರ್ಮಿತ ಮೌಲ್ಯಗಳನ್ನು ಬದಲಾಯಿಸಬೇಕು.

ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮಾತ್ರ ಪ್ರಜಾಪ್ರಭುತ್ವ ಪದ್ದತಿಯ ಸಮಾಜಕ್ಕೆ ಶೋಭೆ ತರುವಂತಹದಲ್ಲ.

ವರ್ತಮಾನ.ಕಾಮ್‌ನ 2013 ಭೂತಕಾಲ


– ರವಿ ಕೃಷ್ಣಾರೆಡ್ಡಿ


 

2012 ಆರಂಭವಾದಾಗ ನಮ್ಮ ಆಶಾವಾದಗಳು ಆಕಾಶದಲ್ಲಿ ಹಾರುತ್ತಿದ್ದವು. ಆ ವರ್ಷದ ಆರಂಭದಲ್ಲಿ ನಾನು ಬರೆದ “2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ” ಎಂಬ ಲೇಖನದಲ್ಲಿ ಅದಕ್ಕೆ ಕಾರಣಗಳನ್ನು ನೀವು ಗುರುತಿಸಬಹುದು. ಹಾಗೆ ನೋಡಿದರೆ 2012 ರಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಲಿಲ್ಲ. ಆದರೆ ಮುಂದಿನ ವರ್ಷ, ಅಂದರೆ 2013 ರಲ್ಲಿ, ಈ ದೇಶ ಪಡೆದುಕೊಂಡ ತಿರುವುಗಳ ಬೀಜಗಳೆಲ್ಲ 2012 ರಲ್ಲಿ ಬಿತ್ತಲ್ಪಟ್ಟವು ಎನ್ನುವುದನ್ನು ನಾವು ಮರೆಯಬಾರದು.

2013 ಈ ದೇಶವಾಸಿಗಳಲ್ಲಿ ಹೊಸ ಹುಮ್ಮಸ್ಸನ್ನು, ಕನಸನ್ನು, ಧೈರ್ಯವನ್ನು, ನಗುವನ್ನು, (ಬಹುಶಃ ಒಂದಷ್ಟು ಭ್ರಮೆಗಳನ್ನೂ) ತುಂಬಿದೆ. ಆದರೆ ಕರ್ನಾಟಕದ ರಾಜಕೀಯದ ವಿಚಾರಕ್ಕೆ ಹೇಳುವುದಾದರೆ, ramya-siddaramaiahಭ್ರಷ್ಟ ಬಿಜೆಪಿ ವಿರುದ್ಧ ಭ್ರಷ್ಟ ಕಾಂಗ್ರೆಸ್ ಬಂದು ಕುಳಿತಿದೆ. ಒಂದೇ ಸಮಾಧಾನ ಎಂದರೆ ಸಿದ್ಧರಾಮಯ್ಯನವರು ಯಡ್ಡಯೂರಪ್ಪನವರಲ್ಲ ಎನ್ನುವುದು. ಆದರೆ ಸರ್ಕಾರ ಕೇವಲ ಸಿದ್ಧರಾಮಯ್ಯ ಅಲ್ಲ ಎನ್ನುವುದನ್ನು ನಾವು ನೆನಪಿಡಬೇಕು. 2014 ರ ಮೊದಲನೆಯ ದಿನವೇ ಈ ಸರ್ಕಾರ ಕಳಂಕಿತರನ್ನು, ಭ್ರಷ್ಟರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳ ಹೊರಟಿದೆ. ಭ್ರಷ್ಟ ಯಡ್ಡಯೂರಪ್ಪ ಭ್ರಷ್ಟ ಬಿಜೆಪಿಗೆ ಮರಳಲಿದ್ದಾರೆ. ಜೆಡಿಎಸ್ ಒಡೆಯಲು ಕಾಲ ದೂರವಿಲ್ಲ. (ಇಂತಹುದನ್ನೆಲ ಊಹಿಸಿಯೇ ನಾನು 2013 ರ ಬಗ್ಗೆ ವರ್ಷದ ಹಿಂದೆ “2013 – ಕರ್ನಾಟಕದಲ್ಲಿ ಮೌಲ್ಯಗಳು ಪಾತಾಳದ ತಳ ಕಾಣಲಿರುವ ವರ್ಷ…” ಲೇಖನ ಬರೆದದ್ದು.)

ದೆಹಲಿಯ ಜನತೆ ತಿಂಗಳ ಹಿಂದೆ ಮಾಡಿದ ಪವಾಡಸದೃಶ ಮಾದರಿಯ ಕಾರ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತಹುದೇ ಪರ್ಯಾಯವೊಂದನ್ನು 2013 ರ ಮೊದಲಾರ್ಧದಲ್ಲಿ ಇಲ್ಲಿ ಕಟ್ಟಿಕೊಳ್ಳಲು ಸೋತ ಕರ್ನಾಟಕ 2014 ರ ನಂತರವಾದರೂ ಆ ನಿಟ್ಟಿನಲ್ಲಿ ನಡೆಯಲಿದೆಯೇ ಎನ್ನುವುದನ್ನು ನಾವು ನೋಡಬೇಕಿದೆ. ನೋಡುವುದಕ್ಕಿಂತ ಹೆಚ್ಚಾಗಿ ನಾವೇ ಸಾಧ್ಯ ಮಾಡಿಕೊಳ್ಳಬೇಕಿದೆ.

ಇಲ್ಲಿ ಒಂದು ವಿಷಯ ಹೇಳಿ ವರ್ತಮಾನ.ಕಾಮ್‌ನ ವಿಷಯಕ್ಕೆ ಬರುತ್ತೇನೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಹಿಂದೆ ಅನೇಕ ಅಂಶಗಳು ಮತ್ತು ದೀರ್ಘಕಾಲದ ಹೋರಾಟಗಳಿವೆ. manishsisodia-yogendrayadav-arvindkejriwal-prashantbhushan“ಭ್ರಷ್ಟಾಚಾರದ ವಿರುದ್ಧ ಭಾರತ” ಹೋರಾಟದ ಹಿನ್ನೆಲೆ ಅದರ ನಾಯಕರಿಗಿತ್ತು. ಅರವಿಂದ್ ಕೇಜ್ರಿವಾಲ್ ಹತ್ತು ವರ್ಷಕ್ಕೂ ಮಿಗಿಲಾಗಿ “ಪರಿವರ್ತನ್” ಸಂಸ್ಥೆಯನ್ನು ನಡೆಸುತ್ತ, ಆಂದೋಳನಗಳನ್ನು ರೂಪಿಸುತ್ತ, ಭ್ರಷ್ಟಾಚಾರದ ವಿರುದ್ದ ಹೋರಾಡುತ್ತ ಬಂದವರು. ಪ್ರಶಾಂತ್ ಭೂಷಣ್ ಸುಪ್ರೀಮ್‌ಕೋರ್ಟ್‌ನ ಹೆಸರಾಂತ ನ್ಯಾಯವಾದಿ ಮತ್ತು ಜನಪರ ಹೋರಾಟಗಾರ. ನಮ್ಮ ರಾಜ್ಯದ ಹಿರೇಮಠರು ನಡೆಸುತ್ತಿರುವ ಅನೇಕ ಮೊಕದ್ದಮೆಗಳನ್ನು ಇವರು ಉಚಿತವಾಗಿ ವಾದಿಸಿ ನಡೆಸಿಕೊಡುತ್ತಿದ್ದಾರೆ. ಯೋಗೇಂದ್ರ ಯಾದವ್ ದೇಶದ ಪ್ರಜ್ಞಾವಂತರ ನಂಬಿಕೆ ಉಳಿಸಿಕೊಂಡಿರುವ ಬದ್ಧತೆಯುಳ್ಳ ಚಿಂತಕ. ಮನೀಷ್ ಸಿಸೋಡಿಯ ಮತ್ತು ಶಜಿಯಾ ಇಲ್ಮಿ ಪತ್ರಕರ್ತರಾಗಿ ಹೆಸರಾದವರು. ಕುಮಾರ್ ವಿಶ್ವಾಸ್ ಹಿಂದಿಯ ಯುವತಲೆಮಾರಿನ ಹೆಸರಾಂತ ಕವಿ. ಇವರೆಲ್ಲರ ಜೊತೆಗೆ ಲಕ್ಷಾಂತರ ಜನರ ನಿಸ್ವಾರ್ಥ ಶ್ರಮ, ಮತ್ತು ದೇಶವಿದೇಶಗಳಲ್ಲಿಯ ಲಕ್ಷಾಂತರ ಜನರ ಧನಸಹಾಯ ದೆಹಲಿಯಲ್ಲಿ ಆ ಪಕ್ಷವನ್ನು ಎರಡನೆ ಅತಿದೊಡ್ಡ ಪಕ್ಷವಾಗಿಸಿತು. ಕರ್ನಾಟಕದಲ್ಲಿ ಆ ತರಹದ ವಾತಾವರಣವಿದೆಯೆ? ಸಂಗಯ್ಯ ಹಿರೇಮಠರು ಖಂಡಿತವಾಗಿ ಕೇಜ್ರಿವಾಲರಿಗಿಂತ ಹಿರಿಯರು ಮತ್ತು ಇತಿಹಾಸ ಹೊಂದಿರುವವರು. sr-hiremathಅವರನ್ನು ಬಿಟ್ಟರೆ ಮೇಲಿನ ಜನಕ್ಕೆ ಹೋಲಿಸಲು ಕರ್ನಾಟಕದಲ್ಲಿ ಯಾರಿದ್ದಾರೆ? ನಮ್ಮ ರಾಜ್ಯದ ಯಾವ ನ್ಯಾಯವಾದಿಯನ್ನು ನಾವು ಪ್ರಶಾಂತ್ ಭೂಷಣರಿಗೆ ಹೋಲಿಸೋಣ? ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನು ಯೋಗೇಂದ್ರ ಯಾದವರಿಗೆ ಹೋಲಿಸೋಣ? ಯಾವ ಪತ್ರಕರ್ತರನ್ನು ಸಿಸೋಡಿಯ ಮತ್ತು ಇಲ್ಮಿಗೆ ಹೋಲಿಸೋಣ? ಯಾವ ಕವಿ-ಸಾಹಿತಿಯಲ್ಲಿ ಕುಮಾರ್ ವಿಶ್ವಾಸನನ್ನು ಕಾಣೋಣ? ಅಂತಹ ವ್ಯಕ್ತಿಗಳು ಇರಬಹುದು ಮತ್ತು ಇದ್ದಾರೆ. ಆದರೆ ಅವರ್‍ಯಾರಿಗೂ ಈ ಹೋರಾಟಗಳು ಬೇಕಿಲ್ಲ. ಜನರೇನೋ ಸಿದ್ಧವಿದ್ದಾರೆ. ಆದರೆ ಜನರ ಮುಂದೆ ಅಗತ್ಯ ವಿಚಾರಗಳನ್ನು ಪ್ರತಿಪಾದಿಸಬಲ್ಲ, ನೆಲದ ಮೇಲೆ ಮಲಗಲು, ದೈಹಿಕ ಶ್ರಮ ಹಾಕಲು, ಹಗಲು-ರಾತ್ರಿ ಹೋರಾಡಲು, ಪೋಲಿಸರಿಂದ ಬಂಧನಕ್ಕೊಳಗಾಗಲು, ಗೆಲುವಿಗಿಂತ ಮೊದಲು ಸೋಲಲು, ಗೌರವ ಪಡೆಯುವುದಕ್ಕಿಂತ ಮೊದಲು ವಿನಾಕಾರಣ ಅವಮಾನಕ್ಕೊಳಗಾಗಲು ಸಿದ್ಧವಿರುವವರು ಕರ್ನಾಟಕದಲ್ಲಿ ಎಲ್ಲಿದ್ದಾರೆ, ಎಷ್ಟಿದ್ದಾರೆ? ಕರ್ನಾಟಕ ಅಂತಹವರನ್ನು ಕಂಡುಕೊಂಡ ದಿನ ಇಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗುತ್ತದೆ. (ಆದರೆ ಅದಕ್ಕಿಂತ ಮೊದಲೇ ಅಧಿಕಾರದ ಹಪಾಹಪಿಯ, ಹಸುವಿನ ವೇಷದಲ್ಲಿರುವ ಹುಲಿಗಳು, ಜನಪರ ಕಾಳಜಿಗಳಿಲ್ಲದಿದ್ದರೂ ಸಹ ಒಳ್ಳೆಯವರು, ಯೋಗ್ಯರು ಎಂದು ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಬಲ್ಲ ತಾಕತ್ತಿರುವ ಸ್ವಕೇಂದ್ರಿತ ವ್ಯಕ್ತಿಗಳು ಈಗಾಗಲೆ ಮುನ್ನೆಲೆಗೆ ಬರಲು ಸಿದ್ಧವಾಗುತ್ತಿರುವ ಮಾಹಿತಿ ಇದೆ. ಇದೇನಾದರೂ ಆದರೆ ಕರ್ನಾಟಕ ಆ ಅವಕಾಶವನ್ನೂ ಕಳೆದುಕೊಳ್ಳುತ್ತದೆ.)

ವರ್ತಮಾನ.ಕಾಮ್‌ಗೂ 2013 ಪ್ರಮುಖ ವರ್ಷವೇ. ನಾನು ಚುನಾವಣೆಗೆ ಸ್ಪರ್ಧಿಸಿದ ಕಾರಣವಾಗಿ ಇದು ಒಂದೆರಡು ತಿಂಗಳು ಸೊರಗಿದ್ದು ನಿಜ. ಆದರೆ ನಮ್ಮ ಬಳಗದ ಪ್ರಯತ್ನ ಅದನ್ನು ನಿಲ್ಲಲು ಬಿಡಲಿಲ್ಲ. courtesy-announcementಸಾಮುದಾಯಿಕ ಪ್ರಯತ್ನ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಮೊದಲಿನಿಂದ ನಮ್ಮ ಜೊತೆಗಿದ್ದ ಕೆಲವು ಲೇಖಕರು ಈ ವರ್ಷ ಬರೆಯುವುದನ್ನು ನಿಲ್ಲಿಸಿದರು ಇಲ್ಲವೇ ಕಡಿಮೆ ಮಾಡಿದರು. ಹಲವರಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾದದ್ದು ಮುಖ್ಯ ಕಾರಣ. ಇನ್ನು ಕೆಲವರು ಯಾಕೆ ನಿಲ್ಲಿಸಿದರು ಎಂದು ಅವರು ಹೇಳಲಿಲ್ಲ, ನಾನು ಕೇಳಲಿಲ್ಲ. ಆದರೆ, ಅಷ್ಟೇ ಸಂಖ್ಯೆಯಲ್ಲಿ ಹೊಸಬರು ಬಂದರು. ಇನ್ನೂ ಹೆಚ್ಚಿನ ಬದ್ದತೆಯಿಂದ ಕೆಲವರು ಬರವಣಿಗೆಯನ್ನು ಹೆಚ್ಚು ಮಾಡಿದರು. ಕಳೆದ ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ವರ್ತಮಾನ.ಕಾಮ್ ಪಡೆದುಕೊಂಡಿತು. ಇದರಲ್ಲಿ ನಮ್ಮಲ್ಲಿ ಇಲ್ಲಿಯವರೆಗೆ ಒಂದೇ ಒಂದು ಲೇಖನವನ್ನು ಬರೆದವರಿಂದ ಹಿಡಿದು, ಓದುಗರು, ಪ್ರತಿಕ್ರಿಯಿಸಿದವರು, ಫೇಸ್‌ಬುಕ್‌ನಲ್ಲಿ ಲೈಕ್/ಷೇರ್ ಮಾಡಿದವರು, ಹೀಗೆ ಎಲ್ಲರ ಪಾಲೂ ಇದೆ.

ಹಾಗೆಯೇ ವರ್ತಮಾನ.ಕಾಮ್ ಬಳಗ “ದಲಿತರು ಮತ್ತು ಉದ್ಯಮಶೀಲತೆ” ವಿಚಾರವಾಗಿ dalit-entrepreneurship-16ಹಾಸನದಲ್ಲಿ ಮತ್ತು ತುಮಕೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಈ ಕಾರ್ಯಕ್ರಮಗಳು ಅನೇಕ ಕಡೆ ಹೇಗೆ ಸಕಾರಾತ್ಮಕವಾಗಿ ಪ್ರತಿಫಲಿಸುತ್ತಿವೆ ಮತ್ತು ಕೆಲವರನ್ನು ಹೇಗೆ ಕ್ರಿಯಾಶೀಲಗೊಳಿಸುತ್ತಿದೆ ಎಂದು ನನಗೆ ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರ ಅರಿವಿಗೆ ಬಂದಿದೆ ಮತ್ತು ಅದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಇದರ ಜೊತೆಗೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಮತ್ತು ಮಂಗಳೂರಿನಲ್ಲಿ ನಡೆದ “ಜನ-ನುಡಿ” ಕಾರ್ಯಕ್ರಮಗಳನ್ನೂ ವರ್ತಮಾನ.ಕಾಮ್ ಬೆಂಬಲಿಸಿತ್ತು.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ಗೆ ಬೀಳುವ ನನ್ನ ಶ್ರಮದ ಬಗ್ಗೆಯೂ ಒಂದು ಮಾತು. ಈಗ್ಗೆ ಸುಮಾರು ಒಂದು ವರ್ಷದಿಂದ-ಚುನಾವಣೆಯ ಸಂದರ್ಭ ಹೊರತುಪಡಿಸಿ- ನಮ್ಮಲ್ಲಿ ಬರುವ ಎಲ್ಲಾ ಲೇಖನಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿ, ವ್ಯಾಕರಣ ಮತ್ತು ಕಾಗುಣಿತಗಳನ್ನು ಪರಿಷ್ಕರಿಸಿ, ಸೂಕ್ತ ಫೋಟೋಗಳನ್ನು ಆಯ್ದು, ಪುಟವಿನ್ಯಾಸ ಮಾಡಿ, ಪೋಸ್ಟ್ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ನನ್ನ ಎಚ್ಚರದ ಸ್ಥಿತಿಯ ಸರಾಸರಿ vartamaana-2-years-smallಶೇ.10-15 ಭಾಗ ವರ್ತಮಾನ.ಕಾಮ್‌ಗೇ ಪ್ರತಿದಿನ ವಿನಿಯೋಗವಾಗುತ್ತಿದೆ. ಇದನ್ನೇ ನಾನು ಪ್ರತಿದಿನವೂ ಮಾಡಲಾಗುವುದಿಲ್ಲ. ಈ ಮೊದಲು ಇದೇ ಕೆಲಸಕ್ಕೆ ಒಬ್ಬರನ್ನು ನೇಮಿಸಿಕೊಂಡಿದ್ದೆ. ವರ್ಷದಿಂದ ಆ ಸಹಾಯವೂ ಇಲ್ಲ. ನಮ್ಮ ಬಳಗದ ಇಬ್ಬರು-ಮೂವರು ಮೊದಲ ವರ್ಷ ಈ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದರು. ಅದರಲ್ಲಿ ಕೆಲವರಿಗೆ ಈ ಒಂದು ವರ್ಷದಿಂದ ಕೆಲವು ಗಂಭೀರ ವೈಯಕ್ತಿಕ-ತಾಂತ್ರಿಕ-ನೌಕರಿ ಸಂಬಂಧಿತ ಸಮಸ್ಯೆಗಳಿಂದಾಗಿ ಈ ಕೆಲಸವನ್ನು ಹಂಚಿಕೊಳ್ಳಲಾಗುತ್ತಿಲ್ಲ. ನನಗೂ ಸಹ ಮುಂದಿನ ದಿನಗಳಲ್ಲಿ ಇಷ್ಟೆಲ್ಲ ಸಮಯವನ್ನು ವಿನಿಯೋಗಿಸಲು ಆಗುವುದಿಲ್ಲ. ಹಾಗೆಂದು ವರ್ತಮಾನ.ಕಾಮ್‌ ಯಾವುದೇ ರೀತಿಯಲ್ಲಿ ನಿಧಾನಗೊಳ್ಳುವ ಪ್ರಮೇಯವೇ ಇಲ್ಲ. ಇಲ್ಲಾ ಸಹಾಯಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಲಾಗುವುದು, ಇಲ್ಲದಿದ್ದರೆ ಬಳಗವನ್ನು ವಿಸ್ತರಿಸಲಾಗುವುದು. ಬರಹ/ನುಡಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಗೊತ್ತಿರುವ ಮತ್ತು ಒಂದು ಬ್ಲಾಗ್ ಪೋಸ್ಟ್ ಮಾಡುವುದು ಹೇಗೆಂದು ಗೊತ್ತಿರುವ ಯಾರಾದರೂ ಈ ಕೆಲಸ ಹಂಚಿಕೊಳ್ಳಲು ಅರ್ಹರು. ವಾರಕ್ಕೆ ಒಂದೆರಡು ದಿನ, ಕನಿಷ್ಟ ಒಂದು ಗಂಟೆ ವರ್ತಮಾನ.ಕಾಮ್‌ಗೆ ಕೊಡಬಲ್ಲವರು ಮುಂದೆ ಬಂದರೆ ಸಹಾಯವಾದೀತು. ಸಂಪರ್ಕಿಸುವುದು ಹೇಗೆಂದು ನಿಮಗೆ ಗೊತ್ತು.

ಕೊನೆಯದಾಗಿ, ನಾನು ಎರಡು ವರ್ಷದ ಹಿಂದೆ, 2002 ರ ಆರಂಭದ ಲೇಖನದಲ್ಲಿ ಬರೆದಿದ್ದ ಈ ಕೊನೆಯ ಪ್ಯಾರಾ ಇವತ್ತಿಗೂ ಸೂಕ್ತವಾಗಿದೆ ಎಂದು ಭಾವಿಸಿ ಅದರೊಂದಿಗೆ ಕೊನೆ ಮಾಡುತ್ತೇನೆ.

“ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ‘ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ.’ ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?”

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.