Monthly Archives: January 2014

ಕಡಲ ಊರಿನ ಕಣ್ಣೀರ ಕಥೆಗಳು

– ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜು

ಕರಾವಳಿ ಮಹಿಳಾ ಲೋಕ ಕುರಿತಾಗಿ ನಮ್ಮ (ಬೆಂಗಳೂರಿನ “ಬದುಕು ಕಮ್ಯುನಿಟಿ ಕಾಲೇಜು” ವಿದ್ಯಾರ್ಥಿಗಳ) ಸಂಶೋಧನಾ ಪಯಣದಲ್ಲಿ ಒಂದೊಂದು ಹೆಣ್ಣಿನ ಒಡಲಾಳದಲ್ಲೂ ನೋವಿನ ಕಿಚ್ಚು ಬೆಸೆದ ಆಕ್ರೋಶದ ಧ್ವನಿ, ಗುಡುಗು-ಮಿಂಚುಗಳಂತೆ, ನೋವುಂಡವರ ಧ್ವನಿ ಎತ್ತರದ್ದು ಎಂಬುದು ಅರ್ಥವಾಗಿದ್ದು ಮಂಗಳೂರಿನಲ್ಲೇ.

ಕರಾವಳಿಯ ಮಹಿಳೆಯರ ಬಗ್ಗೆ ಒಂದಿಷ್ಟು ಕರುಣೆ ಕುತೂಹಲ ಹೊಂದಿದ್ದ ನಾವು, ಅವರಾಳದ ಬದುಕನ್ನು ಹತ್ತಿರದಿಂದ ನೋಡುವ ತವಕದಿಂದ ಅಲ್ಲಿಗೆ ಹೋಗಿದ್ದೆವು.

ಮೊದಲ ದಿನವೇ ನಾವು ಹೋಗಿದ್ದು “ಜನ ನುಡಿ”ಗೆ. ಅಲ್ಲಿ ಮಹಿಳೆಯರ ಮಾತು, ಅವರ ಧೈರ್‍ಯ, abhimatha-mangalooru-jananudi“ನಾವು ನೋವುಂಡವರು ಎಲ್ಲರಿಗಿಂತ ಶಕ್ತಿವಂತರು” ಎಂದು ನುಡಿದ ಮಾತುಗಳ ಕೇಳಿ ನಮ್ಮಗಳ ಬಗ್ಗೆಯೇ ಮರುಕ ಹುಟ್ಟಿತು. ನಮ್ಮಲ್ಲಿ (ಬಯಲುಸೀಮೆಯಲ್ಲಿ) ಒಂದು ಮಾತನ್ನಾಡಲೂ ಹಿಂದು ಮುಂದು ನೋಡುವ ಮಹಿಳೆಯರನ್ನು ನೋಡಿದ್ದ ನಮಗೆ ಮಂಗಳೂರಿನ ಮಹಿಳೆಯರ ಸವಾಲು ತುಂಬಿದ್ದ ಮಾತುಗಳು ನಮ್ಮ ಜಡ ಆತ್ಮಗಳಿಗೆ ಜೀವ ತುಂಬಿದಂತಾಗಿತು. ಕೋಮುವಾದ, ಜಾಗತೀಕರಣ ಭೂತಕ್ಕೆ ಬಲಿಯಾಗಿರುವ ತುಳುನಾಡ ಸಂಸ್ಕೃತಿಯ ಕುರಿತಾಗಿ ಹಲವಾರು ಮಹಿಳೆಯರನ್ನು, ಶ್ರೇಷ್ಟ ಬರಹಗಾರ್ತಿಯರನ್ನು ಮಾತನಾಡಿಸಿದೆವು. ಕೋಮುವಾದದ ವಿಷಬೀಜದ ಕರಾಳತೆ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಬೀರಿರುವ ದುಷ್ಪರಿಣಾಮದ ಕುರಿತಾಗಿ ಅನೇಕ ಕಡೆ ಚರ್ಚಿಸಿದೆವು. ಲೇಖಕಿ ಸಾರಾ ಅಬೂಬಕರ್, “ಮಂಗಳೂರಿನಲ್ಲಿ ಕೋಮುವಾದ ಇತ್ತೀಚಿನದು ನಾವು ಇಂದಿಗೂ ಹಿಂದೂ-ಮುಸಲ್ಮಾನರು ಒಟ್ಟಿಗೆ ಬದುಕುತ್ತೇವೆ. ನಮ್ಮ ಹೆಣ್ಣು ಮಕ್ಕಳು ವಿದ್ಯಾವಂತೆಯರು. ಇಲ್ಲಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ಇದೆ, ಇದು ಉತ್ತರ ಭಾರತಕ್ಕಿಂತ ಸ್ವಲ್ಪ ಮಟ್ಟಿಗೆ ಮಹಿಳೆಯರಿಗೆ ಹೆಚ್ಚು ಮಾನ್ಯತೆ ನೀಡುವ ಪ್ರದೇಶ. ಆದರೆ ಉತ್ತರ ಪ್ರದೇಶದಲ್ಲಿ ೧೮ ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಬಿಡುತ್ತಾರೆ, ಶಾಲೆಗೆ ಕಳಿಸುವುದಿಲ್ಲ. ನಮ್ಮಲ್ಲಿ ಅಂತ ಪದ್ಧತಿ ಇಲ್ಲ. ಮಹಿಳೆಯರು ಶಿಕ್ಷಿತರು, ಅಧಿಕಾರ ರಂಗದಲ್ಲೂ ಅವರೇ ಸ್ವತಹ ಆಡಳಿತ ನಿರ್ವಹಿಸುವಷ್ಟು ಸಬಲರು. ಅನೇಕ ಕಡೆ, ಸ್ಥಾನ ಹೆಂಡತಿಯದ್ದು ಆದರೆ ಗಂಡ ಅಧಿಕಾರ ನೆಡೆಸುತ್ತಾನೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ,” ಎಂದು ಅವರ ಹಲವಾರು ಅನುಭವಗಳನ್ನು ಹಂಚಿಕೊಂಡರು. ಅಲ್ಲಿನ ವಾತಾವರಣ ಗಮನಿಸಿದ ನನಗೆ ಅದು ಸತ್ಯವೆನಿತು.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಮುಟ್ಟಿದ್ದು ಅತ್ರಾಡಿ ಅಮೃತಾ ಶೆಟ್ಟಿಯವರ ನುಡಿಗಳು. “ನಾವು ತುಳುನಾಡಿನವರು, ಸೂಕ್ಷ್ಮ ಮನಸ್ಸಿನವರು, ಧರ್ಮದಿಂದ ಬಂದವರಿಗೆ ನಮ್ಮ ಎದೆಯಲ್ಲಿ ಜಾಗ ಕೊಡುತ್ತೇವೆ. ಅಧರ್ಮದಿಂದ ಬಂದವರಿಗೆ ಕತ್ತಿಯ ಮೊನೆಯಲ್ಲಿ ಉತ್ತರ ನೀಡುತ್ತೇವೆ. ತುಳುನಾಡ ಸಂಸ್ಕೃತಿ ಮಾತೃ ಪ್ರಧಾನವಾದದ್ದು. athradi-amrutha-shettyಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಇಲ್ಲಿ ಹೆಣ್ಣುಮಕ್ಕಳಾಗಲಿ ಎಂದು ಹರಕೆ ಹೊರುತ್ತಾರೆ, ಇಲ್ಲಿ ಹೆಣ್ಣು ಭ್ರೂಣ ಹತ್ಯೆಗಳಿರಲಿಲ್ಲ. ಇದು ಮಹಿಳೆಯರನ್ನು ಪೂಜಿಸುವ ನಾಡು. ಇಂತಹ ನಾಡಲ್ಲಿ ಸೌಜನ್ಯ ಕೊಲೆ ಪ್ರಕರಣ, ಒಂದು ಅವಮಾನಕರವಾದ ಪ್ರಕರಣ. ಇದಕ್ಕೆ ನ್ಯಾಯ ದೊರಕುವವರೆಗೂ ಈ ಪ್ರಕರಣವನ್ನು ಜೀವಂತವಾಗಿಡುತ್ತೇವೆ. ಬೇರಾವ ಹೆಣ್ಣು ಮಕ್ಕಳಿಗೂ ಇಂತ ಸಾವು-ನೋವು ಬರದಂತೆ ನೋಡಿಕೊಳ್ಳುತ್ತೇವೆ,” ಎಂದು ಶಪಥ ಮಾಡಿದರು. “ಕರಾವಳಿ ಕೆಲವು ವರ್ಷಗಳ ಹಿಂದೆ ಮಾನಸಿಕವಾಗಿ ಸಮೃದ್ಧವಾಗಿತ್ತು. ಆದರೆ ಇಂದು ಕೋಮುವಾದ, ಬಂಡವಾಳಶಾಹಿ ವ್ಯವಸ್ಥೆ, ಆಧುನಿಕರಣ ಮತ್ತು ರಾಜಕಾರಣದಿಂದ ಕಲುಷಿತವಾಗಿದೆ. ತುಳುನಾಡಿನವರಾದ ನಾವು ಸದಾ ತಲ್ಲಣಗಳೊಂದಿಗೆ, ಮತ್ತು ವೈರುಧ್ಯಗಳೊಂದಿಗೆ ಬದುಕುವವರು. ನಾವು ಗಟ್ಟಿಜನ. ಹೆಣ್ಣನ್ನು ಗೌರವಿಸುವ ಇಂತಹ ಪ್ರದೇಶದಲ್ಲಿ, ಸೌಜನ್ಯಳ ಮೇಲೆ ಆದ ಭೀಕರ ಅತ್ಯಾಚಾರ ಇಡೀ ತುಳುನಾಡಿನ ತಾಯಿ ಮನಸ್ಸುಗಳಿಗೆ ಆದ ಅತ್ಯಾಚಾರ. ಇಂತಹ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ನೇತ್ರಾವತಿ ನದಿಯಲ್ಲಿ ಹರಿಯುವ ನೀರು ಇಲ್ಲಿನ ಹೆಣ್ಣಿನ ರಕ್ತ ಮತ್ತು ಕಣ್ಣೀರು” ಎಂದು ತಿಳಿಸಿದ ಅವರು, “ನಾವು ಸದಾ ತಲ್ಲಣ್ಣಗಳೊಂದಿಗೇ ಬದುಕುವವರು. ಯಾವ ಹೋರಾಟಗಳಿಗೂ ಸಿದ್ಧರಿರುತ್ತೇವೆ,” ಎಂದರು.

ನನಗನ್ನಿಸಿದಂತೆ ಮಂಗಳೂರು ಒಂದು ಬೃಹತ್ ವ್ಯಾಪಾರ ಕ್ಷೇತ್ರ. ವ್ಯಾಪಾರದಲ್ಲಿ ಮೊಗವೀರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಸಹ ಆರ್ಥಿಕವಾಗಿ ಸ್ವತಂತ್ರಳಾಗಿರುತ್ತಾಳೆ. ಬೀಡಿ ಕಟ್ಟುವುದರ ಮೂಲಕವಾದರೂ ದುಡಿಯುತ್ತಾಳೆ. ಆದ್ದರಿಂದ ಇಲ್ಲಿ ಮಹಿಳೆಯನ್ನು ಕಟ್ಟಿಹಾಕುವ ಹುನ್ನಾರದಲ್ಲಿ ಇಂತಹ ಬೆದರಿಕೆ, ಅತ್ಯಾಚಾರ, ಕೋಮುಗಲಭೆಗಳೂ ಒಂದು ಭಾಗವಾಗಿ ಸದಾ ನೆಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಮಂಗಳೂರು ಹಿಂದುತ್ವದ ಪ್ರಯೋಗಶಾಲೆಯಾಗಿ ಮಾರ್ಪಾಡಾಗುತ್ತಿದ್ದು, ಇದರ ಕರಾಳಬಾಹು ಕರಾವಳಿಯ ಮಹಿಳೆಯರ ಮೇಲೆ ಭೀಕರವಾಗಿ ಚಾಚುತ್ತಿದೆ. mangalore-women-protestಬಾಯಲ್ಲಿ ಮಂಗಳೂರು ಮಹಿಳಾ ಪ್ರಾಧಾನ್ಯತೆಯ ನಾಡಾಗಿದ್ದರೂ, ಅದು ಆ ರೀತಿ ಉಳಿದಿಲ್ಲ. ಜೊತೆಗೆ ಆಧುನಿಕತೆಯ ಭೂತ ಕೆಲವು ಸಾಂಸ್ಕೃತಿಕ ಕುಲ-ಕಸುಬುಗಳನ್ನು ಬಲಿತೆಗೆದುಕೊಳ್ಳುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಬಲಹೀನರನ್ನಾಗಿಸಿ ಬಂಧನದಲ್ಲಿಡುತ್ತಿದೆ.

ನಾವು ಹಲವಾರು ಮಹಿಳೆಯರನ್ನು ಮಾತನಾಡಿಸಿದಾಗಲೂ, ಅವರೆಲ್ಲರ ಅಳಲು ಇದೇ ಆಗಿತ್ತು.

ಕರಾವಳಿಯ ಇಂದಿನ ಮಹಿಳೆಯರ ಬದುಕಿನ ಬಗ್ಗೆ ಮಾತನಾಡುತ್ತಾ ಗುಲಾಬಿ ಬಿಳಿಮಲೆಯವರು, “ಇಂದು ಕರಾವಳಿಯಲ್ಲಿಯೂ ಸಹ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ. ಕಾರಣ ಇತ್ತೀಚೆಗೆ ಇಲ್ಲೂ ಹೆಣ್ಣು ಭ್ರೂಣಹತ್ಯೆಗಳು ನೆಡೆಯುತ್ತಿವೆ. ಆದರೆ ವಿದ್ಯಾವಂತರಿರುವುದರಿಂದ ಇದು ಮೇಲ್ಮಟ್ಟಕ್ಕೆ ಕಾಣಿಸುವುದಿಲ್ಲ. ಹಾಗು ಮಂಗಳೂರು ಒಂದು ಕೃಷಿನಾಡು, ಕೃಷಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಬೃಹತ್ ಕೈಗಾರೀಕರಣದಿಂದಾಗಿ ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಲ್ಲದೆ ಹೆಚ್ಚುತ್ತಿರುವ ಕೋಮುವಾದ ನೇರವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಷ್ಟೇ ಆಗುತ್ತಿಲ್ಲ, ಅವರ ಸಾಗಾಣಿಕೆ ಕೂಡ ನಡೆಯುತ್ತಿದೆ. ಇದು ನಮ್ಮ ನಾಡಿಗೆ ತುಂಬ ಅವಮಾನಕರವಾದದ್ದು. ಆದರೆ ಸರ್ಕಾರ ಈಗಲೂ ಸಹ ಇದರ ಕುರಿತು ಸರಿಯಾದ ಕ್ರಮ ಕೈಗೊಂಡಿಲ್ಲ,” ಎಂದು ಹೇಳಿದ್ದು ಕೇವಲ ಅವರ ಅನುಭವ ಮಾತ್ರ ಆಗಿರಲಿಲ್ಲ. ಅದು ಅವರ ಒಡಲಾಳದ ನೋವಾಗಿತ್ತು.

ಕರಾವಳಿ ಮಾತೃಪ್ರಾಧಾನ್ಯತೆಯ ನಾಡಾಗಿದ್ದರೂ, ಅಲ್ಲಿಯೂ ಸಹ ಮಹಿಳೆಯರ ಮೇಲೆ ನೆಡೆಯುವ ಶೋಷಣೆಗೆ ಮಿತಿ ಇಲ್ಲ. ಇಂದು ಮಾತೃಪ್ರಾಧಾನ್ಯತೆ ಎಂಬುದು ಬರಿಯ ಹೆಸರಿಗೆ ಉಳಿದಿರುವುದು ಎಂಬುದು ಅಲ್ಲಿನ ಮಹಿಳಾ ಚಿಂತಕರ ಅಭಿಪ್ರಾಯವಾಗಿದೆ. ಸಾಂಸ್ಕೃತಿಕ ಮತ್ತು ವಿದ್ಯಾವಂತರ ನಾಡು ಎಂದೇ ಪ್ರಖ್ಯಾತವಾಗಿರುವ ತುಳುನಾಡು ಇಂದು ಕೋಮುವಾದ, ಜಾಗತೀಕರಣ, ಮತ್ತು ಬಂಡವಾಳಶಾಹಿಗಳ ವಿಕೃತ ಹಿಡಿತದಿಂದ ನಲುಗುತ್ತಿದೆ ಎಂಬುದು ಸತ್ಯ.

 

ಜನವರಿ 19 ರಂದು ಮೈಸೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” – ವಿಚಾರ ಸಂಕಿರಣ ಮತ್ತು ಸಂವಾದ

ಸ್ಣೇಹಿತರೇ,

ಇತರ ಸಮಾನಮನಸ್ಕ ಸಂಸ್ಥೆ ಮತ್ತು ಸಂಘಗಳ ಜೊತೆ ಸೇರಿ ವರ್ತಮಾನ.ಕಾಮ್ ನಡೆಸುತ್ತಿರುವ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕಿರಣ ಮತ್ತು ಸಂವಾದದ ಮೂರನೆಯ ಕಾರ್ಯಕ್ರಮ ಬರುವ ಭಾನುವಾರದಂದು (ಜನವರಿ 19, 2014) ಮೈಸೂರಿನಲ್ಲಿ ನಡೆಯಲಿದೆ. dailts-entrepreneurship-mysoreಈ ಸರಣಿಯ ಮೊದಲ ಕಾರ್ಯಕ್ರಮ ಹಾಸನದಲ್ಲಿ ನಡೆಯಿತು. ಎರಡನೆಯದನ್ನು ತುಮಕೂರಿನಲ್ಲಿ ಆಯೋಜಿಸಲಾಗಿತ್ತು. ಮೈಸೂರಿನ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ “ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ”ದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಆ ಕಾರ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ.

ಮೈಸೂರು ಮತ್ತು ಸುತ್ತಮುತ್ತಲಿನ ಆಸಕ್ತರು, ಲೇಖಕರು, ಉದ್ಯಮಿಗಳು, ಚಳವಳಿಯಲ್ಲಿ ಇರುವವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇವೆ.

ನಮಸ್ಕಾರ,
ಬಿ. ಶ್ರೀಪಾದ್ ಭಟ್ ಮತ್ತು ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್ ಪರವಾಗಿ

ಈದ್ ಮಿಲಾದ್, ಕ್ರಿಕೆಟ್ ಮ್ಯಾಚ್, ಧರ್ಮ ರಕ್ಷಣೆ

– ಮುನೀರ್ ಕಾಟಿಪಳ್ಳ

ಕುಳಾಯಿ ಮಂಗಳೂರು ನಗರ ಹೊರವಲಯದ ಗ್ರಾಮ. ಮಂಗಳೂರಿನ ಎಲ್ಲಾ ಊರುಗಳಂತೆ ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ವಾಸವಾಗಿದ್ದಾರೆ. 1990 ನೇ ಇಸವಿಯ ವರೆಗೆ ಇಲ್ಲಿ ಎಲ್ಲಾ ಧರ್ಮದವರು ಜೊತೆಯಾಗಿ ಅನೋನ್ಯತೆಯಿಂದ ಬದುಕುತ್ತಿದ್ದರು. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ನರು ಜೊತೆಯಾಗಿ ತಂಡ ಕಟ್ಟಿಕೊಂಡು ಅಂಡರ್ ಆರ್ಮ್ ಕ್ರಿಕೆಟ್ ಆಡುತ್ತಿದ್ದರು. ಕುಳಾಯಿ ಗ್ರಾಮ ಒಂದರಲ್ಲೇ ಎಂಟು-ಹತ್ತು ಇಂತಹ ಕ್ರಿಕೆಟ್ ತಂಡಗಳಿದ್ದವು. rural-cricket-indiaನ್ಯೂ ಸ್ಟಾರ್, ಅಜೇಯ, ಸೂಪರ್ ಸ್ಟಾರ್, ಫ್ರೆಂಡ್ ಸರ್ಕಲ್, ತರುಣ ವೃಂದ ಹೀಗೆ ಧರ್ಮದ ಸೋಂಕಿಲ್ಲದ ಹೆಸರುಗಳನ್ನು ಇಂತಹ ಕ್ರಿಕೆಟ್ ತಂಡಗಳು ಹೊಂದಿದ್ದವು. 90 ರ ದಶಕದ ಆರಂಭದ ನಂತರ ದ.ಕ. ಜಿಲ್ಲೆಯ ಎಲ್ಲೆಡೆ ಆದ ಬದಲಾವಣೆಗಳು ಕುಳಾಯಿಯಲ್ಲೂ ನಡೆಯಿತು. ಹಿಂದೂ, ಮುಸ್ಲಿಂ ಪ್ರಜ್ಞೆಗಳು ಜಾಗೃತವಾಯಿತು. ಒಂದೆರಡು ಸುತ್ತಿನ ಧರ್ಮ ಯುದ್ಧಗಳೂ ನಡೆದುಹೋದವು. ಒಂದಿಬ್ಬರು ಅಮಾಯಕರು ಧರ್ಮ ಯುದ್ಧದಲ್ಲಿ ಹುತಾತ್ಮರಾದರು. ಇದೆಲ್ಲದರ ಮಧ್ಯೆ ಕ್ರಿಕೆಟ್ ಆಟ, ಪ್ರತೀ ಭಾನುವಾರದ ಟೂರ್ನ್‌ಮೆಂಟ್ ತನ್ನದೇ ಹುಮ್ಮಸ್ಸಿನಲ್ಲಿ ಮುಂದುವರಿದಿತ್ತು. ಧರ್ಮ ಯುದ್ಧದ ನೆರಳು ಕ್ರಿಕೆಟ್ ತಂಡಕ್ಕೂ ಸೋಂಕತೊಡಗಿತು. ಧರ್ಮವನ್ನು ಪ್ರತಿನಿಧಿಸುವ ಹೆಸರಿನ ಕ್ರಿಕೆಟ್ ತಂಡಗಳೂ ರಚನೆಗೊಂಡವು. ಹಿಂದೂಗಳಷ್ಟೇ ಸದಸ್ಯರಾಗಿರುವ, ಮುಸ್ಲಿಮಷ್ಟೇ ಆಟ ಆಡುವ ಪರಿಶುದ್ಧ ತಂಡಗಳಾಗಿ ಕುಳಾಯಿಯ ತಂಡಗಳು ಪರಿವರ್ತನೆಗೊಂಡವು. ಭಾನುವಾರದ ಪಂದ್ಯಾಟಗಳಲ್ಲಿ ಹಿಂದೂ, ಮುಸ್ಲಿಂ ತಂಡಗಳು ಮುಖಾಮುಖಿಯಾದಾಗ, ಕ್ರಿಕೆಟ್ ಅಭಿಮಾನಿಗಳಲ್ಲಿ ಧರ್ಮ ಯುದ್ಧದ ಉದ್ವೇಗ. ಸಿಕ್ಸ್, ಫೋರ್ ಹೊಡೆದಾಗ, ವಿಕೆಟ್‌ಗಳು ಬಿದ್ದಾಗ ತಮ್ಮ ಧರ್ಮದ ತಂಡದ ಪರವಾಗಿ ಜಯ ಜಯಕಾರ.

ಇಂತಹ ಊರಿನಲ್ಲಿ ಎರಡು ತಂಡಗಳು ಬೆಟ್ ಕಟ್ಟಿ ಆಡಿದ ಕ್ರಿಕೆಟ್ ಆಟ ಈದ್ ಮಿಲಾದ್ ಹಬ್ಬ, ಅದರ ಮೆರವಣಿಗೆಯನ್ನು ಧರ್ಮಯುದ್ಧದ ಸಮೀಪಕ್ಕೆ ತಂದು ನಿಲ್ಲಿಸಿತು. ಒಂದು ತಂಡದ ಹೆಸರು ಓಂಶಕ್ತಿ. ಹೆಸರೇ ಸೂಚಿಸುವಂತೆ ಹಿಂದೂಗಳದ್ದು. ಮತ್ತೊಂದು ಗ್ರೀನ್ (ಹಸಿರು) ಸ್ಟಾರ್, ಹಸಿರು ಕೇಸರಿಗೆ ಎದುರಾಳಿಯಾಗಿ ಮುಸ್ಲಿಂ ಮೆರವಣಿಗೆಗಳಲ್ಲಿ ಬಳಕೆಯಾಗುವುದರಿಂದ ಗ್ರೀನ್ ಸ್ಟಾರ್ ಮುಸ್ಲಿಂ ಹದಿಹರೆಯದ ಕ್ರಿಕೆಟ್ ಆಟಗಾರರದ್ದು. ಈ ತಂಡಗಳ ಬೆಟ್ಟಿಂಗ್ ಕ್ರಿಕೆಟ್ ಆಟದಲ್ಲಿ ಗ್ರೀನ್ ಸ್ಟಾರ್ rural_cricketನಿರಂತರವಾಗಿ ಸೋತು ಕೆಲವು ಸಾವಿರ ಹಣ ಕಳೆದುಕೊಂಡಿತ್ತು. ಅರ್ಧ ದುಡ್ಡು ಪಾವತಿಸಿ ಇನ್ನು ಎರಡು, ಮೂರು ಸಾವಿರಕ್ಕೆ ಕೈ ಎತ್ತಿತ್ತು. ಹಣ ಪಾವತಿಗೆ ಸಂಬಂಧಿಸಿ ಹುಡುಗರ ಮಧ್ಯೆ ಸರಣಿ ಮಾತುಕತೆಗಳು ನಡೆದವು. ಇದೇ ಸಂದರ್ಭದಲ್ಲಿ ಕುಳಾಯಿಯಲ್ಲಿ ಈದ್ ಮಿಲಾದ್ ಆಚರಣೆಯ ಸಂಭ್ರಮ. ಎಲ್ಲಾ ಊರುಗಳಂತೆ ಒಂದು ವಾರ ರಾತ್ರಿ ಹೊತ್ತು ವಿವಿಧ ಕಾರ್ಯಕ್ರಮ, ಮಕ್ಕಳ ಹಾಡು, ಭಾಷಣ, ಕೊನೆಯ ದಿನ ಮಕ್ಕಳಿಂದ ಈದ್ ಮಿಲಾದ್ ಮೆರವಣಿಗೆ. ಈ ಬಾರಿಯ ಈದ್ ಮಿಲಾದ್ ಆಚರಣೆಗೆ ಪ್ರಭಾಕರ ಭಟ್‌ರ ಅಮೋಘ ಭಾಷಣದ ಸ್ಫೂರ್ತಿಯು ಇದ್ದುದರಿಂದ ತಯಾರಿ ಭರ್ಜರಿಯಾಗಿ ನಡೆದಿತ್ತು. ಎಲ್ಲೆಡೆ ಹಸಿರು ಬಾವುಟ, ತೋರಣಗಳು. ಈದ್ ಮಿಲಾದ್ ಮೆರವಣಿಗೆಯ ಹಿಂದಿನ ದಿನ ರಾತ್ರಿ ಗ್ರೀನ್ ಸ್ಟಾರ್, ಓಂಶಕ್ತಿ ತಂಡಗಳ ಕ್ರಿಕೆಟ್ ಬೆಟ್ಟಿಂಗ್ ಬಾಕಿ ಹಣದ ಮಾತುಕತೆ ಮುಂದುವರಿದಿದೆ. ಪಂಚಾತಿಕೆ ವಿಫಲವಾಗಿ ಗ್ರೀನ್ ಸ್ಟಾರ್‌ನ ಮುಸ್ಲಿಂ ಹುಡುಗನಿಗೆ ಓಂ ಶಕ್ತಿಯ ಹಿಂದೂ ಹುಡುಗರು ವಿಕೆಟ್‌ನಿಂದ ಬಡಿದು ತಲೆ ಒಡೆದಿದ್ದಾರೆ. ಪೆಟ್ಟು ತಿಂದವ ಆಸ್ಪತ್ರೆ ಸೇರಿದರೆ, ಸುದ್ದಿ ಮಸೀದಿ ತಲುಪಿದೆ. ಅಲ್ಲಿ ಮಕ್ಕಳ ಹಾಡಿನ ಸ್ಪರ್ಧೆಯಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರಲ್ಲಿ ಭಯ ಮೂಡಿದರೆ, ಯುವಕರಲ್ಲಿ ಆಕ್ರೋಶ. ತಮ್ಮವರಿಗೆ ಬಡಿದವರನ್ನು ಬಿಡಬಾರದು ಎಂಬ ಧರ್ಮರಕ್ಷಣೆಯ ಕಿಚ್ಚು. ಹಿರಿಯರ ಮಾತುಕೇಳದ ಗ್ರೀನ್ ಸ್ಟಾರ್‌ನ ಕೆಲ ಹುಡುಗರು ಹಸಿರು ತೋರಣ ಬಾವುಟಗಳ ಮಧ್ಯೆಯೇ ತಮ್ಮವನಿಗೆ ಹೊಡೆದವರನ್ನು ಹುಡುಕಾಡಲು ಹೊರಟಿದ್ದಾರೆ. ಅವರು ಅಡಗಿರಬಹುದಾದ ಮನೆಯ ಕದ ತಟ್ಟಿದ್ದಾರೆ. ಆವಾಜ್ ಹಾಕಿದ್ದಾರೆ. ಮಕ್ಕಳು, ಮಹಿಳೆಯರು ಭಯದಿಂದ ಮನೆ ಸೇರಿದ್ದಾರೆ.

ಬೆಳಿಗ್ಗೆಯಾದರೆ, ಮಿಲಾದ್ ಮೆರವಣಿಗೆ. ಅಷ್ಟರಲ್ಲಿ ಸುದ್ದಿ ವಾಟ್ಸಪ್, ಮೊಬೈಲ್ ಮೂಲಕ ಹತ್ತೂರು ತಲುಪಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಹಸಿರು ಬಾವುಟಗಳು ಸ್ವಲ್ಪ ಹೆಚ್ಚೇ ಉತ್ಸಾಹದಲ್ಲಿ ಹಾರಾಡತೊಡಗಿದೆ. ಹತ್ತಿರದ ಊರುಗಳ ಅಪರಿಚಿತ ಯುವಕರೂ ಧರ್ಮ ರಕ್ಷಣೆಗಾಗಿ ತಮ್ಮ ಊರಿನ ಮಿಲಾದ್ ಬಿಟ್ಟು ಕುಳಾಯಿಗೆ ಬಂದಿದ್ದಾರೆ. ಮಸೀದಿಯಿಂದ ನೂರಿನ್ನೂರು ಮೀಟರ್ ದೂರದ ಭಜನಾ ಮಂದಿರದ ಬಳಿಯೂ ಊರಿನ ಹಿಂದೂ ಯುವಕರ ಜೊತೆಗೆ ಅಪರಿಚಿತ ಧರ್ಮ ರಕ್ಷಕರ ದೊಡ್ಡ ದಂಡು ಸೇರಿದೆ. ಇನ್ನೇನು ಧರ್ಮಯುದ್ಧ ನಡೆಯಬೇಕು. ಊರಿಡೀ ಆತಂಕ, ಪೊಲೀಸ್ ಲಾಠಿ ಬೂಟುಗಳ ಕವಾಯತು, ಜೀಪುಗಳ ತಿರುಗಾಟ, Eid-e-Milad-mangaloreಈದ್ ಮಿಲಾದ್ ಮೆರವಣಿಗೆಯ ಸಂಭ್ರಮಕ್ಕಾಗಿ ಕಾದಿದ್ದ ಮುಸ್ಲಿಂ ಪುಟಾಣಿಗಳ ಕಣ್ಣಲ್ಲಿ ಸಣ್ಣ ಭಯ. ಮಿಲಾದ್ ಮೆರವಣಿಗೆ ಸಾಗುವಾಗ ರಸ್ತೆ ಬದಿಯ ತಮ್ಮ ಮನೆಯ ಮುಂದೆ ನಿಂತು ಸಿಹಿತಿಂಡಿ ಪಡೆದು ಶುಭಾಶಯ ಹೇಳುವ ಹಿಂದೂ ಮಕ್ಕಳು, ಮಹಿಳೆಯರು ಈ ಬಾರಿ ಮನೆಯ ಒಳಭಾಗಕ್ಕೆ ಸರಿದಿದ್ದರು. ಅಂತೂ ಪೊಲೀಸರ ಬಿಗಿ ಬಂದೋಬಸ್ತ್, ಮುಸ್ಲಿಂ ಮಸೀದಿ ಕಮಿಟಿಯವರ ಜವಾಬ್ದಾರಿಯುತ ನಡವಳಿಕೆಯಿಂದಾಗಿ ಆಕ್ರೋಶಿತ ಯುವಕರ ಗೊಣಗಾಟಗಳ ಮಧ್ಯೆ ಮುಖಾಮುಖಿ ತಪ್ಪಿದೆ. ಧರ್ಮಯುದ್ದವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ವಾರದ ನಂತರ ಮತ್ತೆ ಕ್ರಿಕೆಟ್ ಆಟ ಶುರುವಾಗುತ್ತದೆ. ಮುಂದೆ ಚುನಾವಣೆ ಬೇರೆ ನಡೆಯಲಿದೆ. ಮೋದಿಯೋ ಮತ್ತೊಬ್ಬನೋ ಪ್ರಧಾನಿ ಆಗಬೇಕಿದೆ. ಮಗದೊಬ್ಬನು ಸಂಸದನಾಗಬೇಕಿದೆ. ಹಾಗಾಗಿ ಧರ್ಮವನ್ನು ರಕ್ಷಿಸಬೇಕಿದೆ.

ಹಬ್ಬಗಳು ಮರಳಿ ಬರುತ್ತವೆ, ಮೆರವಣಿಗೆಗಳೂ ಸಹ. ಆದರೆ ಮಿಲಾದ್ ಸಂಭ್ರಮದಲ್ಲಿ ಅರಳಬೇಕಾಗಿದ್ದ ಆ ಮುಗ್ಧ ಮಕ್ಕಳ ನಗುವನ್ನು, ಸಂತೋಷವನ್ನು ಮರಳಿ ತರುವುದು ಯಾರು? ಇದು ಮಂಗಳೂರಿನ ಪ್ರತಿಯೊಂದು ಗ್ರಾಮದ ಸ್ಥಿತಿ… ಧರ್ಮ ರಕ್ಷಕರಿಂದ ಮಂಗಳೂರನ್ನು ಮುಕ್ತಿಗೊಳಿಸುವುದು ಹೇಗೆ?

ದೇಡ್ ಇಶ್ಕಿಯಾ : ಮನಸ್ಸು ಮಗುವಿನಂತಿದೆ, ಸ್ವಲ್ಪ ಹಸಿಹಸಿಯಾಗಿದೆ

– ಬಿ.ಶ್ರೀಪಾದ ಭಟ್

ಅಭಿಷೇಕ್ ಚುಬೆ ನಿರ್ದೇಶನದ “ದೇಡ್ ಇಶ್ಕಿಯಾ” ಸಿನಿಮಾ ನೋಡಲು ಹೋಗುವಾಗ ಮನಸ್ಸಿನಲ್ಲಿ ಅದರ ಮೊದಲ ಭಾಗ “ಇಶ್ಕಿಯಾ” ಚಿತ್ರದ ರೀಲುಗಳು ಕಾಡುತ್ತಿದ್ದವು. ವಿದ್ಯಾ ಬಾಲನ್‌ಳ oomph ಹಾಗೂ bold and lust ಅನ್ನು ಮೈಗೂಡಿಸಿಕೊಂಡಂತಹ ನಟನೆಯ ನೆನಪು ಎದೆಯನ್ನು ಬೆಚ್ಚಗಾಗಿಸುತ್ತಿತ್ತು. ರಾಹತ್ ಫತೇ ಅಲಿ ಖಾನ್ ಹಾಡಿದ ವಿಶಾಲ್ ಭಾರಧ್ವಾಜ್ ಭೈರವಿ ರಾಗದಲ್ಲಿ ಕಾಂಪೋಸ್ ಮಾಡಿದ ಹಾಡು “ದಿಲ್ ತೊ ಬಚ್ಚಾ ಹೈ ಜೀ, ಥೋಡ ಕಚ್ಚಾ ಹೈ ಜೀ” ನಾಲ್ಕು ವರ್ಷಗಳ ನಂತರವೂ ಕಾಡುತ್ತಿತ್ತು. ಮನಸ್ಸನ್ನು ತೇವಗೊಳಿಸುತ್ತಿತ್ತು.

ಇಶ್ಕಿಯಾದಲ್ಲಿನ ಗಲಭೆಗ್ರಸ್ಥ, rustic ಗೋರಖ್‌ಪುರನಿಂದ ನವಾಬರ ನಾಡಾದ ಅವಧ್‌ನ ಮಹಮುದಾಬಾದ್‌ಗೆ “ದೇಡ್ ಇಶ್ಕಿಯಾ” dedh-ishqiyaಸಿನಿಮಾ ಸ್ಥಳಾಂತರಗೊಂಡಿದೆ. ಇಲ್ಲಿ ಷೇರ್, ಶಾಯರಿ, ಮುಶಾಯರಿ, ಘಜಲ್‌ಗಳು ಮತ್ತು ಕವ್ವಾಲಿಗಳು ಅಚ್ಚರಿಗೊಳಿಸುವಷ್ಟರ ಮಟ್ಟಿಗೆ ಹೃದಯಂಗಮವಾಗಿವೆ. ನಮ್ಮನ್ನು ಬೆಂಬಿಡದೆ ನಶೆಯೇರಿಸುತ್ತವೆ. ಬಹಳ ವರ್ಷಗಳ ನಂತರ ಈ ಸಿನಿಮಾದಲ್ಲಿ ಉರ್ದು ಭಾಷೆ ತನ್ನೆಲ್ಲ ತಾಜಾತನದೊಂದಿಗೆ ನಮ್ಮನ್ನು ಬೆರಗುಗೊಳಿಸುತ್ತದೆ. ಮನಮುಟ್ಟುವ, ಚಕಿತಗೊಳಿಸು, ಅನೇಕ ಬಾರಿ ಧಿಗ್ಭಮೆಗೊಳಿಸುವಂತಹ ಸಂಭಾಷಣೆಯನ್ನು ಬರೆದ ವಿಶಾಲ್ ಭಾರದ್ವಜ್‌ಗೆ ಥಾಂಕ್ಸ್ ಹೇಳಲೇಬೇಕು. ಇಡೀ ಚಿತ್ರದ ಆತ್ಮ ಮತ್ತು ಶಕ್ತಿಯೇ ಈ ಬೆರಗುಗೊಳಿಸುವ ಸಂಭಾಷಣೆಗಳು .

ಕಲ್ಲೂಜಾನ್ ಮತ್ತು ಬಬ್ಬನ್ ಪಾತ್ರಗಳನ್ನು ತಮ್ಮ ಸ್ವಂತ ಕ್ಯಾರೆಕ್ಟರ್ ಆಗಿಯೇ ಘನೀಭವಿಸಿಕೊಂಡ ನಾಸಿರುದ್ದೀನ್ ಶಾ ಮತ್ತು ಅರ್ಶದ್ ವಾರ್ಸಿ ಇವರಿಬ್ಬರ ಕಾಮ್ರೇಡ್‌ಶಿಪ್ ಇಲ್ಲಿಯೂ ಗೆಲ್ಲುತ್ತದೆ. ಸಣ್ಣ ಮಟ್ಟದ thieves ಗಳಾದ ಇವರಿಬ್ಬರೂ ನವಾಬ್ ಮತ್ತವನ ಸೇವಕನ ವೇಷದಲ್ಲಿ ವಜ್ರದ ಹಾರದ ಕಳ್ಳತನಕ್ಕೆ ಕೈ ಹಾಕಿ ಪೋಲೀಸರ ಕೈಗೆ ಸಿಕ್ಕಿಕೊಂಡು ನಂತರ ಅಲ್ಲಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಇಬ್ಬರೂ ಬೇರ್ಪಡುತ್ತಾರೆ. ಮಹುಮುದಾಬಾದ್‌ನ ವಿಧವೆ ಬೇಗಂ ಬೇಗಂ ಪಾರ ( ಮಾಧುರಿ ದೀಕ್ಷಿತ್) ಏರ್ಪಡಿಸಿರುವ ಮುಶಾಯಿರದಲ್ಲಿ ಭಾಗವಹಿಸಲು ಚಾಂದ್‌ಪುರ್‌ನ ನವಾಬನ ವೇಷದಲ್ಲಿ ಬಂದಂತಹ ಕಲ್ಲೂಜಾನ್ ( ಶಾ) ನನ್ನು ಬಬ್ಬನ್ ( ವಾರ್ಸಿ) ಮುಖಾಮುಖಿಯಾಗುತ್ತಾನೆ. ಶಾಯರಿ, ಮುಶಾಯರಿಯ ಸ್ಪರ್ಧೆಯನ್ನು ಏರ್ಪಡಿಸಿ ಅದರಲ್ಲಿ ಗೆದ್ದವನನ್ನು ನಿಖಾ ಮಾಡಿಕೊಂಡು ಮುಂದೆ ಆತನನ್ನೇ ಮಹುಮುದಾಬಾದ್‌ನ ನವಾಬನನ್ನಾಗಿ ಪಟ್ಟಕ್ಕೇರಿಸುಬೇಕೆಂದು ಆಶಿಸಿದ ತನ್ನ ತೀರಿಕೊಂಡ ನವಾಬನಿಗೆ ವಾಗ್ದಾನ ನೀಡಿದ್ದ ಬೇಗಂ ಪಾರ ಸ್ವಯಂವರದ ರೂಪದಲ್ಲಿ ಆ ಸ್ಪರ್ಧೆಯನ್ನು ಏರ್ಪಡಿಸಿರುತ್ತಾಳೆ. ಆಕೆಯ ಸಹವರ್ತಿ, ಸೇವಕಿ, ಜೀವದ ಗೆಳತಿಯಾಗಿ ಮುನಿರಾ (ಹುಮಾ ಖುರೇಷಿ) ಈ ಸ್ವಯಂವರದ ಎಲ್ಲಾ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿರುತ್ತಾಳೆ.

ನಂತರ ಎರಡು ಗಂಟೆಗಳ ಕಾಲ ನಮ್ಮ ನಿರೀಕ್ಷೆಗೂ ಮೀರಿ ನಡೆಯುವ twists and turns ಗಳು ಇಡೀ ಚಿತ್ರದ ಕಥೆಯನ್ನು ಸ್ವಲ್ಪವೂ ನಿರಾಸೆಗೊಳಿಸದೆ Dedh-Ishqiya-Madhuri-Dixitಕ್ಲೈಮ್ಯಾಕ್ಸ್‌ಗೆ ತಲುಪಿಸುತ್ತವೆ. ಇಲ್ಲಿ ಅಪಹರಣವಿದೆ, ಪ್ರೇಮವಿದೆ, violence ಇದೆ, ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಳ್ಳುವಂತಹ ನೈಪುಣ್ಯತೆಯನ್ನು ಸಾಧಿಸಲು ನಿರ್ದೇಶಕ ಅಭಿಷೇಕ್ ಚುಬೆ ಯಶಸ್ವಿಯಾಗಿದ್ದಾನೆ. ಈ ಪಯಣದಲ್ಲಿ ಕಲ್ಲೂಜಾನ್ ಮತ್ತು ಬಬ್ಬನ್‌ರ ಕಾಮ್ರೇಡ್‌ಶಿಪ್‌ನಷ್ಟೇ ಮನೋಜ್ಞವಾದದ್ದು ಬೇಗಂ ಪಾರ ಮತ್ತು ಮುನೀರಾಳ ಕಾಮ್ರೇಡ್‌ಶಿಪ್. ಇವರಿಬ್ಬರ ಗೆಳತನದ ಅಪ್ತತೆಯ ದೃಶ್ಯಗಳು ಇಡೀ ಚಿತ್ರದ ಅದ್ಭುತ ಕ್ಷಣಗಳಲ್ಲೊಂದು. ಇದನ್ನು ಸಾಧ್ಯವಾಗಿಸಿದ್ದು ಮಾಧುರಿ ದೀಕ್ಷಿತ್ ಮತ್ತು ಹುಮಾ ಖುರೇಷಿ. ಬೇಗಂ ಪಾರ ಮತ್ತು ಮುನೀರಾ ಇಡೀ ಸಿನಿಮಾವನ್ನು ತಮ್ಮ ಹೆಗಲಿಗೇರಿಸಿಕೊಂಡದ್ದು ಹಿಂದಿ ಸಿನಿಮಾರಂಗದ ಇತ್ತೀಚಿನ ವರ್ಷಗಳ ಅಚ್ಚರಿಗಳಲ್ಲೊಂದು. ಮತ್ತೊಮ್ಮೆ ಫೆಮಿನಿಸಂ ಮೇಲುಗೈ ಸಾಧಿಸಿದೆ. ಹಾಗೆಯೇ ಲೋಕಲ್ ಶಾಸಕ, ಗ್ಯಾಂಗ್‌ಸ್ಟರ್, ಜಾನ್ ಮಹಮದ್‌ನ ಪಾತ್ರದಲ್ಲಿ ನಟಿಸಿರುವ ವಿಜಯ್ ರಾಜ್ ಮೇಲಿನ ಕಲಾವಿದರಿಗೆ ಸಮಸಮನಾಗಿ ಹೆಗಲು ಕೊಟ್ಟಿದ್ದಾನೆ. ಹಾಗೆಯೇ ನೂರ್ ಮಹಮ್ಮದ್ ಇಟಾವಿಯಾಗಿ ನಟಿಸಿದ ಮನೋಜ್ ಫಾವಾ ನಮ್ಮೆಲ್ಲರ ಮೆಚ್ಚುಗೆ ಗಳಿಸುತ್ತಾನೆ.

ಕಡೆಗೆ ಯಾವುದೇ ಬಗೆಯ ಮಹಾತ್ವಾಕಾಂಕ್ಷೆಯನ್ನು ತನ್ನೊಡಲೊಳಗೆ ಇಟ್ಟುಕೊಳ್ಳಲು ನಿರಾಕರಿಸುವ “ದೇಡ್ ಇಶ್ಕಿಯಾ” ಸಿನಿಮಾಕ್ಕೆ ಈ ಬಗೆಯ ನಿರಾಕರಣೆಯೇ ಒಂದು ಮಿತಿಯಾಗಿಬಿಟ್ಟಿದೆ. ಥಿಯೇಟರ್‌ನಿಂದ ಹೊರಬಂದ ನಂತರ ಈ ಸಿನಿಮಾ ಒಂದು ಭಾಷ್ಯೆಯಾಗಿ, ಒಂದು ಮೆಟಫರ್ ಆಗಿ, ಗುಂಗಾಗಿ, ಸದಾ ಹಿಂಬಾಲಿಸುವ ವಿಷಾದದ ಛಾಯೆಯಾಗಿ ನಮ್ಮನ್ನು ಕಾಡುವುದಿಲ್ಲ. ಆದರೆ ಆ ರೀತಿ ಕಾಡಲೇಬೇಕೆಂಬ ಹಠವಾದರೂ ಏಕಿರಬೇಕು, ಅಲ್ಲವೇ??

ಶಕ್ತಿಪ್ರದರ್ಶನ ಸಮಾವೇಶಗಳಿಗೆ ಜನರು ಮಣೆ ಹಾಕುವುದು ಬೇಡ

– ಪರಮೇಶ್ ಕುಂದೂರು

ಸಮಾವೇಶಗಳು ಜನಶಕ್ತಿಯ ಪ್ರದರ್ಶನ ಮಾಧ್ಯಮಗಳು. ಜನರ ಸಮಾವೇಶ ಮಾಡುವುದು ಸುಲಭದ ಮಾತಲ್ಲ. ಅಂತಿಂಥವರಿಂದ ಸಾಧ್ಯವೂ ಇಲ್ಲ. ಸುಲಭವಾಗಿ ಸಮಾವೇಶ ಮಾಡಬೇಕೆಂದರೆ ಅದು ರಾಜಕೀಯ ಪಕ್ಷಗಳು, ದೊಡ್ಡ ದೊಡ್ಡ ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಆ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಾಗಾರಗಳ ಸಮಾವೇಶ ಸಂಘಟಿಸುವುದು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.

ಬೃಹತ್ ಸಮಾವೇಶ ಸಂಘಟಿಸಿದರೆ, ಜನರು ಅಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಸೇರುತ್ತಾರೆ. ಹೆಚ್ಚಿನ ಜನ ಸೇರುವುದರಿಂದ ವಾಹನ ದಟ್ಟಣೆ ಹೆಚ್ಚಿ, sonia-rally-congressಸಾರಿಗೆ ವ್ಯವಸ್ಥೆ ಅಸ್ಥವ್ಯಸ್ಥಗೊಳ್ಳುತ್ತದೆ. ಒಂದು ವೇಳೆ ಅಂದು ದುರ್ಘಟನೆಗಳೇನಾದರೂ ಸಂಭವಿಸಿದರೆ, ಅಲ್ಲಿ ಉಂಟಾಗುವ ನಷ್ಟ, ನೋವುಗಳ ಸ್ಥಿತಿ ಲೆಕ್ಕಕ್ಕೆ ನಿಲುಕುವುದಿಲ್ಲ. ಈ ರೀತಿ ಇದ್ದಾಗ್ಯೂ ರಾಜಕಾರಣಿಗಳು, ಪಕ್ಷಗಳು ಪದೇ ಪದೇ ಜನಸಮಾವೇಶ ನಡೆಸುವುದು ಎಷ್ಟು ಸರಿ?

ಇಂದಿನ ದಿನಗಳಲ್ಲಿ ಸಮಾವೇಶಗಳು ಜನರಿಗೆ ಮೋಜು, ಮಸ್ತಿ ತಂದುಕೊಡುವ ಸಾಧನಗಳೂ ಆಗಿದ್ದು, ಅವರನ್ನು ದಾರಿ ತಪ್ಪಿಸುತ್ತಿರುವುದು ವಿಪರ್ಯಾಸ. ಬೃಹತ್ ಸಮಾವೇಶ ಸಂಘಟಿಸಲು ಕೋಟ್ಯಂತರ ರೂಪಾಯಿಗಳ ಖರ್ಚು ಬರುತ್ತದೆ. ಸಂಘಟಕರು ಈ ಹಣವನ್ನು ಕೂಡಿಸುವುದಾದರೂ ಎಲ್ಲಿಂದ? ಪ್ರಾಮಾಣಿಕವಾಗಿ ದುಡಿದು ಸಂಪಾದಿಸುವ ಹಣದಲ್ಲಿ ಈ ರೀತಿ ಹಣವನ್ನು ಮನಸಾ ಇಚ್ಛೆ ಖರ್ಚು ಮಾಡಲು ಸಾಧ್ಯವಿಲ್ಲ. ಹಾಗಾದರೆ ಅವರಿಗೆ ಹಣ ಬರುವುದಾದರೂ ಎಲ್ಲಿಂದ? ಅಷ್ಟಕ್ಕೂ ಪಕ್ಷಗಳು, ರಾಜಕಾರಣಿ ನಾಯಕರುಗಳು ಸೇರಿಸುವ ಬೃಹತ್ ಜನ ಸಮಾವೇಶಗಳಿಂದ ಸಮಾಜದಲ್ಲಿ ಆಗುವ ಬದಲಾವಣೆಗಳಾದರೂ ಏನು? ಯಶಸ್ಸು ಕಾಣುವ ಸಮಾವೇಶಗಳಲ್ಲಿ ಭಾಗಿಯಾಗುವ ಎಲ್ಲಾ ನಾಗರೀಕರೂ ಆ ನಾಯಕರಿಗೇಕೆ ಮತ ನೀಡುವ ಮೂಲಕ ತಮ್ಮ ಮನ್ನಣೆ ನೀಡಿ, ಬಹುಮತದಿಂದ ಗೆಲ್ಲಿಸುವುದಿಲ್ಲ?

ಅದೇನೇ ಇದ್ದರೂ ಈ ರೀತಿ ಪಕ್ಷಗಳು, ರಾಜಕೀಯ ನಾಯಕರೆನಿಸಿಕೊಂಡವರು ಸಂಘಟಿಸುವ ಸಮಾವೇಶದಲ್ಲಿ ಭಾಗಿಯಾಗಿ ಪ್ರದರ್ಶನಕ್ಕೆ ಬೆಂಬಲಿಸಿದರೆ ಆ ನಾಯಕರು ಮುಂದೆ ನಡೆಸಬಹುದಾದ ಭ್ರಷ್ಟಾಚಾರಕ್ಕೆ ನಾವು ಹಾದಿ ಮಾಡಿಕೊಟ್ಟಂತಾಗುವುದಿಲ್ಲವೆ?

ಹಲವಾರು ಪಕ್ಷಗಳು, ಪಕ್ಷಗಳಿಗೊಂದಿಷ್ಟು ನಾಯಕರುಗಳು, ಬಂಡೆದ್ದು ಬರುವ ನಾಯಕರುಗಳಿಗೆ ಹೊಸ ಪಕ್ಷಗಳು ಹೀಗೆ ಪ್ರಜಾಪ್ರಭುತ್ವದ ಪ್ರತಿನಿಧಿಗಳಾಗಲು ಹವಣಿಸುವ ನಾಯಕರುಗಳಿಗೇನೂ ಕಮ್ಮಿ ಇಲ್ಲ. ಇಂತಹ ನಾಯಕರು ತಮ್ಮ ಪ್ರತಿಷ್ಠೆ ಮೆರೆಯಲು, ಒಂದು ದಿನದ ಮಟ್ಟಿಗಾದರೂ ಜನರನ್ನು busstand-Blr-passengers-strandedಸಂಘಟಿಸಿ ಸಂಘಟನಾ ಶಕ್ತಿ ಪ್ರದರ್ಶಿಸುವ ಕಾರ್ಯ ನಡೆಸುತ್ತಲೇ ಇರುತ್ತಾರೆ.

ಇಂತಹ ಸಮಾವೇಶ ಸಂಘಟನೆ ಮಾಡುವುದು ರಾಜ್ಯಮಟ್ಟದ ಪ್ರಭಾವಿ ನಾಯಕರಾದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಮಾವೇಶದ ಸೇವೆಗಾಗಿ ಮೀಸಲಾಗಿಬಿಡುತ್ತದೆ. ಇದರಿಂದ ಬಸ್ಸುಗಳು ಓಡಾಡುವ ಪ್ರದೇಶಗಳಲ್ಲಿ ಅಂದು ಬಸ್ ಸೌಲಭ್ಯ ಇಲ್ಲವಾಗುತ್ತದೆ. ಆ ಮಾರ್ಗದ ಜನರ ಪಾಡು ದೇವರಿಗೇ ಪ್ರೀತಿ.

ಇಂತಹ ದುಂದುವೆಚ್ಚದ ಬದಲು, ರಚನಾತ್ಮಕ ಕಾರ್ಯಗಳನ್ನು ಕೈಗೊಂಡರೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಾದರೂ ಆಗುತ್ತವೆ. ಬಡ ಬಗ್ಗರಿಗಾಗಿ ಸರಳ ಯೋಜನೆಗಳನ್ನು ರೂಪಿಸಿದರೆ, ಸೀಮಿತ ವ್ಯಾಪ್ತಿಯಲ್ಲಿ ಜನ ಕಲ್ಯಾಣವನ್ನಾದರೂ ಮಾಡಬಹುದು.

ಕಳೆದ ಬಿಜೆಪಿ ಸರ್ಕಾರದ ಸಮಯದಲ್ಲಿ ಉಪಮುಖ್ಯ ಮಂತ್ರಿಗಳಾಗಿದ್ದ ಕೆ.ಎಸ್. ಈಶ್ವರಪ್ಪನವರು ಶಿವಮೊಗ್ಗದಲ್ಲಿ ನಡೆದ ಸಭೆಯೊಂದರಲ್ಲಿ ಕೆರೆಗಳ ಅಭಿವೃದ್ಧಿಗೆ ಒಂದು ವರ್ಷದ ಕ್ರಿಯಾಯೋಜನೆ ರೂಪಿಸಲು ಬೇಕಾಗುವ ಮೊತ್ತವನ್ನು ಕೇಳಿದ್ದರು. ಅಧಿಕಾರಿಗಳು 50 ಕೋಟಿ ರೂ. ಬೇಕಾಗಬಹುದು ಎಂದು ಹೇಳಿದಾಗ, ಅಷ್ಟು ಕಡಿಮೆ ಮೊತ್ತವಾದರೆ ನನ್ನ ಖಾತೆ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್)ಯಿಂದ ತೆಗೆದು ಯೋಜನೆ ರೂಪಿಸಿ ಎಂದು ಸಹಜವಾಗಿ ಅಧಿಕಾರಿಗಳಿಗೆ ಸೂಚಿಸಿದ್ದರು. ಪರಿಸ್ಥಿತಿ ಈ ರೀತಿ ಇರುವಾಗ, ಕೇವಲ ಒಂದು ದಿನದ ಶಕ್ತಿ ಪ್ರದರ್ಶನಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡುವುದು ನ್ಯಾಯವಲ್ಲ. ಮೇಲಾಗಿ ಪ್ರಜೆಗಳು ಪ್ರಜ್ಞಾವಂತರಾಗಿದ್ದು, ಅವರಿಗೆ ನಾಗರೀಕ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಸಾಮಾಜಿಕ ಕೆಲಸಗಳನ್ನು modi-bjp-rallyಕೈಗೊಂಡರೆ ಮತ್ತಷ್ಟು ಜಾಗೃತಿ ಮೂಡಿಸಿದಂತಾಗುತ್ತದೆ. ಜೊತೆಗೆ ಅಂತಹ ಸೇವೆ ನೀಡುವ ನಾಯಕರು ನಿಜವಾದ ನಾಯಕರಾಗಿ ಕಂಗೊಳಿಸುತ್ತಾರೆ.

ಸಮಾವೇಶ ಸಂಘಟನಾ ನಾಯಕರು ನೀಡುವ ಕರೆಯ ಮಾತ್ರಕ್ಕೆ ಜನರು ಸಮಾವೇಶಕ್ಕೆ ಬರುವುದು ಸುಳ್ಳು. ಅದಿರಲಿ, ತಮ್ಮ ತಮ್ಮ ಊರುಗಳಲ್ಲಿಯೇ ಜರುಗುವ ಜನ ಜಾಗೃತಿ, ಮಾಹಿತಿ ಪೂರ್ಣ ಸಭೆಗಳು, ಗ್ರಾಮಸಭೆಗಳಿಗೂ ಭಾಗವಹಿಸಲು ಆಗದ ನಮ್ಮ ಜನರು ಮಹಾನಗರ ಪ್ರದೇಶಗಳಲ್ಲಿ ಜರುಗುವ ಸಮಾವೇಶಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ನಾಯಕರು ಹೇಳುವ ಮಾತುಗಳನ್ನು ಕೇಳುತ್ತಾರೆಂದರೆ ಅದಕ್ಕಿಂತ ಆಶ್ಚರ್ಯ ಬೇರೊಂದಿರಲಾರದು.

ಜನರು ಕೆಲಸಕಾರ್ಯಗಳನ್ನು ಬಿಟ್ಟು, ಸಂಘಟಕರು ನೀಡುವ ಎಂಜಲು ಕಾಸಿಗೆ ಆಸೆಪಟ್ಟು ಇಂತಹ ಸಂಘಟನೆಗಳಲ್ಲಿ ಸೇರದೇ, ಅದನ್ನು ತಿರಸ್ಕರಿಸಬೇಕು. ಅಂತಹವರ ಕರೆಯನ್ನು ಮನ್ನಿಸಿ, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಮಾವೇಶಗಳಿಗೆ ಸೇರಿ, ಅವರನ್ನು ಬೆಂಬಲಿಸುವುದು ಭ್ರಷ್ಟಾಚಾರವನ್ನು ಬೆಂಬಲಿಸಿದಂತಾಗುತ್ತದೆಯಲ್ಲವೇ? ಅನಗತ್ಯ ಕೆಲಸ ಮಾಡಿ ನಾಯಕರಾಗಲು ಹವಣಿಸುವ ಮುಖಂಡರ ಮಾತಿಗೆ ಮಾನ್ಯ ಮಾಡದೇ, ಧಿಕ್ಕರಿಸಿದರೆ ಅಂತಹವರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಅವರು ಸರಿ ದಾರಿಗೆ ಬರಲು ಮಾರ್ಗಹಾಕಿಕೊಟ್ಟಂತಾಗುತ್ತದೆ.