ನಾವೆಲ್ಲ ಸೆಕ್ಯುಲರಿಸಂನಲ್ಲಿ ಇನ್ನೂ ಅಪ್ರೆಂಟಿಸ್‌ಗಳು


– ಬಿ. ಶ್ರೀಪಾದ ಭಟ್


ಬಿ.ಎಂ. ಬಶೀರ್ ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಆಡಿದ ಭಾಷಣದಲ್ಲಿ “ಬುರ್ಖಾ ಕುರಿತಾದ” ಮಾತುಗಳು ವಿವಾದಕ್ಕೆ ಈಡಾಗಿರುವುದು ನಿಜಕ್ಕೂ ಅನಗತ್ಯವಾಗಿತ್ತು. ಮೊದಲನೇಯದಾಗಿ ಈ “ಮುಸ್ಲಿಂ ಲೇಖಕರು” ಎಂದು ಅಸಂಬದ್ಧ, ಅರ್ಥಹೀನ ಹಣೆಪಟ್ಟಿಯನ್ನು ಒಪ್ಪಿಕೊಂಡಾಕ್ಷಣ ಮಿಕ್ಕವರೆಲ್ಲ “ಹಿಂದೂ ಲೇಖಕರು” ಮತ್ತು “ಇತರೇ ಧರ್ಮದ ಲೇಖಕರು” ಎನ್ನುವ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ ಮತ್ತು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ಇದರ ಕುರಿತಾಗಿ ತುಂಬಾ ಎಚ್ಚರದಿಂದ, basheer-book-release-dinesh-2ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಏಕೆಂದರೆ ಬಶೀರ್‌ರ ತೊಂದರೆ ಪ್ರಾರಂಭವಾಗುವುದೇ ಆವರು “ಮುಸ್ಲಿಂ ಲೇಖಕ” ಎನ್ನುವ ಹಣೆಪಟ್ಟಿಗೆ ಬಲಿಯಾಗಿದ್ದರಿಂದ. ಒಮ್ಮೆ ಬಲಿಯಾದ ನಂತರ ಇಡೀ ಧರ್ಮದ ಮೌಡ್ಯಕ್ಕೆ ಅವನೇ ಏಕಮಾತ್ರ ವಾರಸುದಾರನಗಿಬಿಡುವ ದುರಂತ ಇದು. ಇದು ಪ್ರತಿಯೊಬ್ಬ ಲೇಖಕನ ವಿಷಯದಲ್ಲೂ ನಿಜ. ಇಲ್ಲಿಯ ದುರಂತ ನೋಡಿ. ಈ “ಹಿಂದೂ ಲೇಖಕ/ಲೇಖಕಿ”ಯರು ಹಿಂದೂ ಧರ್ಮದ ಮೌಢ್ಯ ಆಚರಣೆಗಳನ್ನು ಟೀಕಿಸುತ್ತಲೇ “ಮುಸ್ಲಿಂ ಲೇಖಕ/ಲೇಖಕಿ” ಕಡೆಗೆ ತಿರುಗಿ ’ಕಮಾನ್, ನೀನು ನಿನ್ನ ಧರ್ಮದ ವಿರುದ್ಧ ಶುರು ಮಾಡು’ ಎಂದು ಆಹ್ವಾನ ಕೊಡುವ ಶೈಲಿಯಲ್ಲಿ ಬರೆಯುತ್ತಿರುವುದು, ಟೀಕಿಸುತ್ತಿರುವುದು ನನ್ನನ್ನು ದಂಗಾಗಿಸಿದೆ. ಡಿ.ಆರ್.ನಾಗರಾಜ್ ಹೇಳಿದ ಪಿತೃಹತ್ಯೆಯ ಸಿದ್ಧಾಂತವನ್ನು ಈ ನಮ್ಮ ಪ್ರಗತಿಪರ ಗೆಳೆಯ/ಗೆಳತಿಯರು ನಿಜಕ್ಕೂ ಅರ್ಥ ಮಾಡಿಕೊಂಡಿದ್ದಾರೆಂದು ನನಗೇಕೋ ಅನಿಸುತ್ತ್ತಿಲ್ಲ.

ನಾನು ಪ್ರಜ್ಞಾಪೂರ್ವಕವಾಗಿ ಸೆಕ್ಯುಲರ್ ಆಗುತ್ತಲೇ ನನ್ನೊಳಗೆ ಸಂಪೂರ್ಣ ಇಡೀ ಜಾತ್ಯಾತೀತತೆಯನ್ನು, ಈ ನಿಜದ ಸೆಕ್ಯುಲರ್ ಅನ್ನು ಮೈಗೂಡಿಸಿಕೊಳ್ಳುತ್ತಾ ಒಂದು ಸಹಜವಾದ ಸೆಕ್ಯುಲರ್ ಆದ, ಮಾನವತಾವಾದದ ಸ್ಥಿತಿಗೆ ತೆರಳುವುದು ಮತ್ತು ಅಲ್ಲಿಂದ ಮುಂದೆ ನಮ್ಮ ಸೆಕ್ಯುಲರ್ ನಡುವಳಿಕೆಗಳು ಸಹಜವಾಗಿಯೇ ಅಪ್ರಜ್ಞಾಪೂರ್ವಕವಾಗಿರುತ್ತವೆ ಮತ್ತು ಆಗಲೇ ನಾವು ನಿಜದ ಮಾನವರಾಗುವುದು. ಅಲ್ಲಿಯವರೆಗೆ ನಾವೆಲ್ಲಾ ಈ ಪ್ರಕ್ರಿಯೆಯಲ್ಲಿ ಕೇವಲ ಅಪ್ರೆಂಟಿಸ್‌ಗಳು ಮಾತ್ರ. ಹೌದು ಕೇವಲ Photo Captionಸೆಕ್ಯುಲರ್ ಅನ್ನು ಪಾಲಿಸುತ್ತಿರುವ ಅಪ್ರೆಂಟಿಸ್‌ಗಳು. ನಾವು ಚಾರ್ವಾಕರಾದಾಗಲೇ ನಮ್ಮ ವ್ಯಕ್ತಿತ್ವ ಸ್ವಲ್ಪ, ಸ್ವಲ್ಪವಾಗಿ ಗೋಚರಿಸುತ್ತದೆ. ಇದನ್ನು ನನ್ನ ಪ್ರಗತಿಪರ ಸ್ನೇಹಿತರು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಬೇಕು. ಸೆಕ್ಯುಲರ್‌ಗಳಾದ ನಾವೆಲ್ಲ ನಾವೆಷ್ಟು ನಿಜದ ಸೆಕ್ಯುಲರ್, ನಾನೆಷ್ಟು ನಿಜದ ಜಾತ್ಯಾತೀತ ಎಂದು ನಮ್ಮೊಳಗೆ ನಮ್ಮನ್ನು ಬಿಚ್ಚುತ್ತಾ, ಬಿಚ್ಚುತ್ತಾ ನಡೆದಾಗ ನಾವು ಶೇಕಡಾ ಇಪ್ಪತ್ತರಷ್ಟು ಮಾತ್ರ ಮುಂದುವರೆದಿರಬಹುದಷ್ಟೆ. ಇನ್ನೂ ಶೇಕಡಾ ಎಂಬತ್ತರಷ್ಟು ನಡೆಯನ್ನು ನಾವು ಕ್ರಮಿಸಬೇಕಾಗಿರುವ ಎಚ್ಚರ ನಮ್ಮಲ್ಲಿ ಇಲ್ಲದೇ ಹೋದರೆ ’ನಾನು ಮಾತ್ರ ಸೆಕ್ಯುಲರ್ ಮಾರಾಯ, ಆ ಬಶೀರ್ ನೋಡು ಅವನಿಗೆ ತನ್ನ ಧರ್ಮದ ಮೂಲಭೂತವಾದಿಗಳನ್ನು ಟೀಕಿಸುವ ದಮ್ಮೆಲ್ಲಿದೆ’ ಎನ್ನುವ ಅಹಂಕಾರಕ್ಕೆ ಬಲು ಸುಲಭವಾಗಿ ಬಲಿಯಾಗುತ್ತೇವೆ. ಏಕೆ ಗೊತ್ತೆ ಸ್ನೇಹಿತರೆ, ಸೆಕ್ಯಲರಿಸಂನಲ್ಲಿ ನಾವೆಲ್ಲ ಇನ್ನೂ ಅಪ್ರೆಂಟಿಸ್‌ಗಳು. ದೇಶವೊಂದರಲ್ಲಿ ಬಹುಸಂಖ್ಯಾತರಾದ, ಸೆಕ್ಯುಲರಿಸಂನಲ್ಲಿ ಅಪ್ರೆಂಟಿಸ್‌ಗಳಾದ ನಾವು,  ’ನಾವು ಮಾತ್ರ ನಿಜದ ಪಾತಳಿಯ ಮೇಲೆ ನಿಂತಿದ್ದೇವೆ’ ಎನ್ನುವ ಭ್ರಮೆಯಲ್ಲಿ ಅಲ್ಪಸಂಖ್ಯಾತ ಲೇಖಕ/ಲೇಖಕಿಯರನ್ನು ’ಇನ್ಯಾವಾಗ ಮಾರಾಯ ನೀನು ನಿನ್ನ ಕಪ್ಪೆಚಿಪ್ಪಿನಿಂದ ಹೊರಬರುವುದು’ ಎಂದು ಕೇಳುವಾಗ (ಹೌದು ಕೇಳಬೇಕು, ಖಂಡಿತ ಕೇಳಬೇಕು) ಮಾನವೀಯತೆಯನ್ನು, ವಿನಯವನ್ನು ಮರೆಯಯಬಾರದು. ಆದರೆ ಬಶೀರ್ ವಿಷಯದಲ್ಲಿ ನನ್ನ ಸ್ನೇಹಿತರು ಆ ಗಡಿಯನ್ನು ದಾಟಿದ್ದು ನನ್ನಲ್ಲಿ ಖೇದವನ್ನು ಉಂಟು ಮಾಡಿದೆ.

ಅತ್ಯಂತ ಸೂಕ್ಷ್ಮ, ಪ್ರಾಮಾಣಿಕ, ಪ್ರತಿಭಾವಂತರಾದ ಈ ಹೊಸ ತಲೆಮಾರು ಕಾಮ್ರೇಡ್‌ಶಿಪ್‌ಗೆ ಸಂಪೂರ್ಣ ತಿಲಾಂಜಲಿಯನ್ನು ಕೊಟ್ಟು ತನ್ನ ಸಹಚರರೊಂದಿಗೆ (ಎಷ್ಟೇ ಭಿನ್ನಮತವಿರಲಿ) ಬಹಿರಂಗವಾಗಿ ಜಗಳಕ್ಕೆ ಇಳಿಯುವುದನ್ನು ನಾನು ಒಪ್ಪಿಕೊಳ್ಳಲಾರೆ. ಹಾಗೆಯೇ ಬಶೀರ್‌ನ ಪ್ರತಿಕ್ರಿಯೆನ್ನು ಸಹ ನಾನು ಒಪ್ಪಿಕೊಳ್ಳುವುದಿಲ್ಲ. basheer-book-release-dinesh-3ಅದು ಅನೇಕ ಕಡೆ ವಾದಕ್ಕಾಗಿ ವಾದ ಹೂಡಿದಂತಿದೆ. ಇದನ್ನು ಬಶೀರ್ ಬರೆದಿದ್ದಾನೆಂಬುದೇ ನನಗೆ ಆಶ್ಚರ್ಯ. “ಬಶೀರ್, ನೀನು ಬರೆದ ನಿನ್ನದೇ ಲೇಖನದ ಕೆಲವು ಭಾಗಗಳನ್ನು ಸ್ವತಃ ನೀನೇ ತಿರಸ್ಕರಿಸು.”

ನಮ್ಮ ಚಿಂತನೆಗಳಲ್ಲಿ ಸ್ಪಷ್ಟತೆ, ವಿನಯ, ಸೌಹಾರ್ದತೆ ಮತ್ತು ಕಾಮ್ರೇಡ್‌ಗಿರಿಯನ್ನು ಒಳಗೊಳ್ಳದಿದ್ದರೆ, ಈ ಕ್ಷಣದ ರೋಚಕತೆಗೆ ಬಲಿಯಾಗದೇ ಬದುಕುವುದೇ ಕಷ್ಟವಾಗಿರುವ ಇಂದಿನ ದಿನಗಳಲ್ಲಿ ಕಡೆಗೆ ಎಲ್ಲ ಧರ್ಮದ ಮೂಲಭೂತವಾದದ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವ ಪ್ರಾಮಾಣಿಕ ನಡೆಗಳಿಂದ ಶುರುವಾಗುವ ನಮ್ಮ ದಾರಿಗಳು ಸುಲುಭವಾಗಿ ಹಾದಿ ತಪ್ಪುವುದಂತೂ ಖಂಡಿತ. ನಾನು ನನ್ನ ಆರಂಭದ ಕಮ್ಯನಿಷ್ಟ್ ಚಳುವಳಿಗಳಲ್ಲಿ ಭಾಗವಹಿಸಿ ಕಲಿತದ್ದು ಈ ಕಾಮ್ರೇಡ್‌ಗಿರಿಯನ್ನು. ಇದು ನಮ್ಮನ್ನು ಮತ್ತಷ್ಟು ಪಕ್ವಗೊಳಿಸುತ್ತದೆ. ಚಾರ್ವಾಕದೆಡೆಗಿನ ನಡೆಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಮತ್ತು ಮುಖ್ಯವಾಗಿ ನಮ್ಮ ಆತ್ಮದ ಸೊಲ್ಲು ಅಚ್ಚರಿ ಎನಿಸುವಷ್ಟು ನಮ್ಮಲ್ಲಿ ಖುಷಿಗೊಳಿಸುತ್ತಿರುತ್ತದೆ. ಹೌದು ಮೊದಲ ಬಾರಿಗೆ. ಈ ಮೊದಲ ಖುಷಿ ಎಂದಿಗೂ ಖುಷಿಯಲ್ಲವೇ?

24 comments

 1. ಬಹಳ ಪ್ರಬುದ್ಧವಾದ ಅಭಿಪ್ರಾಯ ಶ್ರೀಪಾದ್ ಭಟ್ ರವರೇ. ’ಮೂಲಭೂತವಾದ’ ಯಾರದೇ ಹೆಸರಿನಲ್ಲಿ ಅಥವಾ ಸಿದ್ದಾಂತಗಳ ಆಧಾರದಲ್ಲಿ ನಡೆಯಲಿ ಅದು ಖಂಡನೀಯ. ಒಟ್ಟಾರೆಯಾಗಿ ನಾವು ದಿನೇಶ್ ಮಟ್ಟುರವರಿಗೆ ಹಾಗೂ ಬಿ,ಎಮ್. ಬಶೀರರಿಗೆ ಥಾಂಕ್ಸ್ ಹೇಳಲೇಬೇಕು. ಮೊದಲು ಹಿಂದುತ್ವಮೂಲುಲಭೂತವಾದ ಗೂಡಾಗಿದ್ದ ಕರಾವಳಿ, ಅದಕ್ಕೆ ಪ್ರತಿಕ್ರಿಯೆಯಾಗಿ ಬೆಳೆದ ಮುಸ್ಲಿಮ್ ಮೂಲಭೂತವಾದವನ್ನು ಕಂಡಿದ್ದ ನನ್ನಂತವನಿಗೆ ಕಮ್ಯೂನಿಸ್ಟ್ ಮೂಲಭೂತವಾದ ಏನೆಂಬುವುದು ಲೈವ್ ಅನುಭವವಾಗಿರುವುದು ಈಗಲೇ, ಇಲ್ಲಿ ಬಹಳ ಸಣ್ಣ ಸಂಖ್ಯೆಯಲ್ಲಿರುವ ಇವರ ಮೂಲಭೂತವಾದದ ತೀಕ್ಷ್ಣತೆ ಇಷ್ಟಿದಿಯಾದರೆ, ಇನ್ನು ಕಮ್ಯುನಿಸ್ಟರು ಅಧಿಕಾರ ನಡೆಸುವ ಕೇರಳ, ಪ. ಬಂಗಾಳ, ಚೈನಾ, ಉ.ಕೊರಿಯ ದಲ್ಲಿ ಹೇಗಿರಬಹುದೆಂದು ಯೋಚಿಸಿದಾಗಲೇ ನಡುಕ ಹುಟ್ಟುತ್ತಿದೆ. ಸಾಮಾಜಿಕ ತಾಣಗಳಲ್ಲಾದ ಚರ್ಚೆಗಳನ್ನು ನೋಡಿದಾಗ ಒಂದು ಮಾತಂತು ಬಹಳ ಸ್ಪಷ್ಟ; ಕಮ್ಯುನಿಸ್ಟ್ ಮೂಲಭೂತವಾದಿಗಳಿಗೆ ಬುರ್ಖಾಕ್ಕಿಂತಲೂ ಹೆಚ್ಚು ನೋವಾಗಿರುವುದು ತಮ್ಮ ಸಿದ್ದಾಂತಗಳಿಗಿಂತ ಭಿನ್ನವಾಗಿ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸಿದ ಕಾಮ್ರೇಡ್ ಬಶೀರರ ಲೇಖನ.
  ಎಷ್ಟೆಂದರೂ ರಾಜಕೀಯ ಮಾಡುವವರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಯಾರನ್ನು ಬಲಿಪಶುಮಾಡಲು ಹಿಂಜರಿಯುದಿಲ್ಲ. ಇಲ್ಲಿಯೂ ಕೂಡಾ ದಿನೇಶ್ ಮಟ್ಟುರವರ ಸಾಮಾಜಿಕ ಪ್ರಾಮಾಣಿಕತೆಯನ್ನು ದುರುಪಯೋಗಿಸಿಕೊಂಡಿದ್ದಾರೆ. ಆದುದರಿಂದ ಸಮಾಜವಾದದಲ್ಲಿ ನಂಬಿಕೆಯಿರುವ, ಪ್ರಾಮಾಣಿಕ ಕಾಳಜಿಯಿರುವವರು ’ಪ್ರಗತಿಪರ/ಬುದ್ದಿಜೀವಿ/ಸೆಕ್ಯುಲರಿಸ್ಟ್’ ಗಳ ಮುಖವಾಡ ತೊಟ್ಟ ಎಲ್ಲಾ ಮೂಲಭೂತವಾದಿಗಳಿಂದ ಆದಷ್ಟು ದೂರವಿರುವುದು ಒಳಿತು.

 2. ಶ್ರೀಪಾದ್ ಭಟ್ ರ ಲೀಖನ ಮತ್ತು ಸಯಿಸರ ಪ್ರತಿಕ್ರಯ್ ಬೌದ್ದಿಕ ಪ್ರೌಡಿಮೆಯ ಪ್ರತೀಕ.ನಾನು ಸಹಾ ಕೆ೦ಬಾವುಟ, ಐಕ್ಯರ೦ಗ,ಮಾರ್ಕ್ಸ್ ಮತ್ತು ದಾಶ್ ಕ್ಯಾಪಿಟಲ್ ಓದಿ ಬೆಳೆದವನು.ಕರಾವಳಿ ಕರ್ನಾಟಕದಲ್ಲಿ ಅ೦ದು ಕಕ್ಕಿಲ್ಲಾಯ,ಕ್ರಷ್ಣ ಶೆಟ್ಟರು,ಮೂಸಬ್ಬ ಮತ್ತು ರಾಮಚ೦ದ್ರರಾವ್ ಮು೦ತಾದ ದೀಮ೦ತ ಕಮ್ಯುನಿಸ್ಟ ನಾಯಕರಿದ್ದರು.ಮುಸ್ಲಿರ ಒನ್ದು ದೊಡ್ಡ ಭಾಗ ಕಮ್ಯುನಿಸ್ಟ ಬೆ೦ಬಲಿಗರಾಗಿದ್ದರು.ಉಳ್ಲಾಲದಿ೦ದ ಶೆಟ್ಟರು ಮತ್ತು ರಾವ್ ರವರು ಕರ್ನ್ನಾಟಕ ಅಸೆ೦ಬ್ಲಿಗೆ ಆರಿಸಿ ಬರುತ್ತಿದ್ದರು.ಆದರೆ ಇ೦ದಿನ ಕಮ್ಯುನಿಸ್ಟರಿಗೆ ಅತ್ತ ಹಿ೦ದುಗಳೂ ಇತ್ತ ಮುಸ್ಲಿ೦ಗಳು ಬೆ೦ಬಲಕ್ಕಿಲ್ಲ.ಅ೦ದಿನ ಕಮ್ಯುನಿಸ್ಟರ ಇ೦ದಿನ ಪೀಳಿಗೆ ಸ೦ಘ ಪರಿವಾರದ ಮು೦ಚೂಣಿಯಲ್ಲಿದೆ.ಇದೆಲ್ಲಾದರಿ೦ದ ನಷ್ಟಕ್ಕೊಳಗಾದವರು ಮುಸ್ಲ೦ರು.
  ಇನ್ನು ಈಗಿನ ಯುವ ಕಮ್ಮುನಿಸ್ಟರ ನಿಲುವನ್ನು ಯಾರೂ ಪ್ರಶ್ಣಿಸಬಾರದು,ಅವರು ಹೇಳಿದ್ದೆ ವೇದ ವಾಕ್ಯ.ಟೀಕೆಗಳನ್ನು ಸಹಿಸುದಿಲ್ಲ,ಎಲ್ಲದರಲ್ಲೊ ಅಸಹನೆ.ಒರ್ವ ನಾಯಕ social media ದಲ್ಲಿ ಯಾವಾಗಲೂ ಬರೆಯುತ್ತಾರೆ,ಆದರೆ ಅವರ ನಿಲುವಿನ ಬಗ್ಗೆ ಪ್ರಶ್ಣಿಸಿದರೆ ನೀನು ನನ್ನ ತ೦ಟೆಗೆ ಬರಬೇಡ ಅ೦ತ ಜಬರಿಸುತ್ತಾರೆ.ಇನ್ನೊರ್ವ ಎಡಪ೦ಥಿಯ ಯುವ ಪತ್ರಕರ್ತ ಬರೆಯುತ್ತಾರೆ- ನಾನು ಮುಸ್ಲಿ೦ರ ಬಗ್ಗೆ ಜ್ಯೆಲಿನಲ್ಲಿರುವ ಕ್ಯೆದಿಗಳ ಮುಖಾ೦ತರ ಅನ್ವೇಷಣೆ ನಡಿಸಿದ್ದೀನೆ,ಬುರ್ಖಾವನ್ನು ಹೆ೦ಗಸರ ಮೇಲೆ ಬಲವ೦ತವಾಗಿ ಹೇರಲಾಗಿದೆ ಎ೦ದು.ಅವರ ಅನಿಸಿಕೆಯ ಪ್ರಕಾರ ಅವರು ಮುಸ್ಲಿ೦ರ ಪರವಾಗಿ ಸ೦ಘ ಪರಿವಾರದ ವಿರುದ್ದ ಹೋರಾಡುತ್ತಾರೆ,ಆದುದರಿ೦ದ ಮುಸ್ಲಿ೦ರು ಅವರು eene ಹೇಳಿದರೂ ಸಹಿಸಿ ಸುಮ್ಮನಿರಬೇಕು.
  ಇವರ secular ಬದ್ದತೆಯ ಬಗ್ಗೆ,ಪ್ರಾಮಾಣಿಕತೆಯ ಬಗ್ಗೆ ಯಾವುದೇ ಸ೦ಶಯವಿಲ್ಲ.ಆದರೆ ಎಲ್ಲರನ್ನೂ ದೂರ ಸರಿಸುವ ಒ೦ದು ತರಹದ arrogant ಮನೋಭಾವವೆ ಇ೦ದು ೫೦ ಜನರನ್ನು ಒಗ್ಗಟ್ಟಾಗಿಸಲು ಅವರಿಗೆ ಸಾದ್ಯವಾಗುತ್ತಿಲ್ಲ.
  ಜಾಗತಿಕ ಕಮ್ಯುನಿಸ೦ನ ಪತನಕ್ಕೆ ಯಾವುದೇ ಕಾರಣವಿರಬಹುದು,ಆದರೆ ಭಾರತದಲ್ಲಿ ಇವರ ಇ೦ದಿನ ಸ್ಠಿತಿಗೆ,ಬ೦ಗಾಳ ಕ್ಯೆಬಿಡಲು, ಕಾರಾಟ್ ರ೦ತವರ ಕಠಿಣ ದೋರಣ್,ರಾಜಿ
  ಮನೋಸ್ಥಿತಿಯ ಕೊರತೆಯೆ ಕಾರ ಣ .ಇನ್ನು ಕಮ್ಯುನಿಸ್ಟರಿಗೆ ಸಮಾಜದಲ್ಲಿ ಈಗಲೂ ಒ೦ದು ಗೌರವಯುತ ಸ್ಥ್ಹಾನ ಇರುವುದು ಶ್ರೀಮಾನ್ ಭಟ್ ರ೦ತ ಬುದ್ದಿ ಜೀವಿ,ಪ್ರಜ್ಣಾವ೦ತ
  ಎಡ ಪ೦ಥಿಯಾ ವಿಚಾರವಾದಿಗಳಿ೦ದಲೇ ಹೊರತು ರಾಜಕೀಯ ನೇತಾರರಿ೦ದಲ್ಲ.
  ಈ ಪ್ರತಿಕ್ರಯಯನ್ನು ನಾನು ಸ೦ತೋಷದಿ೦ದ ಬರೆಯುತ್ತಿಲ್ಲ,ವಿಶಾದದಿ೦ದ ಬರೆದ್ದಿದ್ದೀನೆ.

  1. ಸಲಾಂ ಭಾಯಿ, ಬೂರ್ಖಾ ಹಾಗೂ ಹಿಜಬ್ ವಿಷಯದ ಕುರಿತು ಇಲ್ಲಿ ಅನಾರೋಗ್ಯಕರ ಚರ್ಚೆ ನಡೆಯುತ್ತಿದೆ. ಇಸ್ಲಾಂ ಮತದ ಆಂತರಿಕ ವಿಷಯಗಳ ಬಗ್ಗೆ ಪ್ರಬುದ್ಧತೆ ಹಾಗೂ ಸಿದ್ಧತೆ ಇಲ್ಲದ ಜನರು ಬಾಯಿಗೆ ಬಂದ ಸಲಹೆ ಕೊಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಬೂರ್ಖಾ ಧರಿಸುವುದು ಬೇಡ ಅಂತ ಅನ್ನಿಸಿದರೆ ಅವರೇ ತಮ್ಮ ಕುಟುಂಬದವರೊಂದಿಗೆ ಹಿರಿಯರೊಂದಿಗೆ ಆ ವಿಷಯ ಪ್ರಸ್ತಾಪ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ. ಅಕಸ್ಮಾತ್ ಕೆಲವು ಮುಸ್ಲಿಂ ಮಹಿಳೆಯರಿಗೆ ಬೂರ್ಖಾಧಾರಿ ಮುಸ್ಲಿಂ ಆಗಿರುವುದು ಹಿಂಸೆ ಅಂತ ಅನ್ನಿಸಿದರೆ ಅವರು ಬೇರೆ ಮತಕ್ಕೆ ಮತಾಂತರ ಮಾಡಿಕೊಳ್ಳಬಹುದು. ಭಾರತದ ಸಂವಿಧಾನವು ಭಾರತದ ಪ್ರಜೆಗಳಿಗೆ ಮತಾಂತರದ ಸ್ವಾತಂತ್ರ್ಯವನ್ನು ಕೊಟ್ಟಿದೆ.

  2. ಬುರ್ಖಾದ ಚರ್ಚೆಯನ್ನು ಆರಂಭಿಸಿದ ದಿನೇಶ್ ಮಟ್ಟುರವರೇ ಬಷೀರರ ಲೇಖನದ ಓದಿ ಆಕ್ರೋಶಗೊಂಡಿರಲಿಕ್ಕಿಲ್ಲ, ಬದಲು ಅಭಿವ್ಯಕ್ತಿಯನ್ನು ಸ್ವಾತಂತ್ರ್ಯವನ್ನು ಗೌರವಿಸಿರಬಹುದು. ಆದರೆ ಮಾರ್ಕ್ಸ್ ಅನುಯಾಯಿಗಳ ಆಟಿಟ್ಯುಡ್ ಅಂತೂ ಚುನಾವಣಾ ಅವಧಿಯಲ್ಲಿ ನಮೋ ಬ್ರಿಗೇಡ್ ನ ಬಾಲಗೊಂಚಿಗಳಿಗಿಂತ, ಬುರ್ಖಾ ವಿಷಯದ ಇನ್-ಡೆಪ್ತ್ ತಿಳುವಳಿಕೆಯಿಲ್ಲದ ಮುಸ್ಲಿಮ್ ಸಂಪ್ರದಾಯಿ ಹುಡುಗರ ಪ್ರತಿಕ್ರಿಯೆಕ್ಕಿಂತ ಭಿನ್ನವಾಗಿರಲಿಲ್ಲ. ಅಭಿವ್ಯಕ್ತಿಯನ್ನು ಸ್ವಾತಂತ್ರ್ಯದ/ಹಕ್ಕಿನ ಬಗ್ಗೆ ದೊಡ್ಡ ದೊಡ್ಡ ಲೇಖನ, ಭಾಷಣಗಳನ್ನು ಬಿಗಿಯುವವರೇ, ಕೇವಲ ಭಿನ್ನಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದಕ್ಕೆ ಲೇಖಕರನ್ನು ಯಾವ ತರಹ ಧಾರ್ಮಿಕ ಮೂಲಭೂತವಾದಿಯೆಂಬ ಹಣೆಪಟ್ಟಿಯನ್ನು ಕಟ್ಟಿ ರೆಡಿಕ್ಯೂಲ್ ಮಾಡಿ, ವ್ಯವಸ್ಥಿತವಾಗಿ ಮೂಲೆಗುಂಪಾಗಿಸಿದರೆಂದೂ ಸಾಮಾಜಿಕ ತಾಣದಲ್ಲಿ ಕಾಣಬಹುದು. ಈಗ ಬಷೀರ್ ಸಾಮಾಜಿಕ ತಾಣದಲ್ಲಿ ಎಷ್ಟು ಸಂವೇದನಶೀಲರಾಗಿಯೂ ಬರೆದೂಕೊಂಡರೂ ಅದನ್ನು ಕೆಂಪುಕಾಮಾಲೆ ಕಣ್ಣಿನಿಂದ ಕಾಣಲಾಗುತ್ತಿದೆಯೆಂಬುವುದನ್ನು ಲೈಕ್ ಗಳ ಸಂಖ್ಯೆಯೇ ತಿಳಿಸುತ್ತದೆ.

   ಸಲಾಂ ಬವರವರೇ, ಕರಾವಳಿ ಕಮ್ಯುನಿಸ್ಟರ ಎಡವಟ್ಟುಗಳ ಮೇಲೆ ಬೆಳಕು ಚೆಲ್ಲಿದ್ದಕ್ಕೆ ಧನ್ಯಾವದ. ಈ ವಿಷಯಗಳು ನನಗೆ ತಿಳಿದಿರಲಿಲ್ಲ. ಕೆಲ ಮೂಲಭೂತವಾದಿಗಳಿಂದ ಕಮ್ಯುನಿಸ್ಟರ ಬಗ್ಗೆ ಭ್ರಮನಿರಸವಾಗುತ್ತಿದೆ. ಇಂಡಸ್ಟ್ರಿಯಲ್ ಆಕ್ಟ್ ನ ಸಡಿಲಿಕೆಯನ್ನು ಮುಂದುವರೆಸುವ ಸರಕಾರದ ಕ್ರಮವನ್ನು ಸೂಕ್ತವಾಗಿ ವಿರೋಧಿಸದೇ, ಇತರ ಎಲ್ಲಾರೂ ಮಾಡುವಂತಹ ಸಣ್ಣಪುಟ್ಟ ವಿಚಾರಗಳನ್ನು ಕೈಗೆತ್ತಿಕೊಂಡು ಹೋರಾಟವನ್ನು ಕೇವಲ ಭಾಷಣ, ಪ್ರತಿಭಟನೆಗಳಿಗೆ ಸೀಮಿತಗೋಳಿಸಿ ಇಡೀಯ ’ಕಾರ್ಮಿಕ’ ಇಷ್ಯುವನ್ನು ಸಂಕುಚಿತಗೊಳಿಸಿದ್ದಾರೆ.

 3. ಧಾರ್ಮಿಕ ಕಂದಾಚಾರಗಳು ಹಾಗೂ ಕಟ್ಟುಪಾಡುಗಳನ್ನು ಆಚರಿಸುವವರೇ ಬಿಡಬೇಕು ಎಂಬ ವಾದ ಮಾಡುತ್ತಾ ಹೋಗಿದ್ದರೆ ಸತಿ ಪದ್ಧತಿ, ಬೆತ್ತಲೆ ಪೂಜೆ, ಬಾಲ್ಯ ವಿವಾಹ ಮೊದಲಾದವುಗಳು ಇಂದಿಗೂ ವ್ಯಾಪಕವಾಗಿ ಇರುತ್ತಿದ್ದವು ಏಕೆಂದರೆ ಇವುಗಳನ್ನು ಅನುಸರಿಸುವವರು ತಾವಾಗಿಯೇ ಮಾಡುವುದು ಎಂಬ ಸಮರ್ಥನೆ ಇರುತ್ತದೆ. ಬಾಲ್ಯ ವಿವಾಹದಲ್ಲಿ ಕೂಡ ಯಾರ ಒತ್ತಾಯವೂ ಇರುವುದಿಲ್ಲ ಅವರಾಗಿಯೇ ಮಾಡಿಕೊಳ್ಳುತ್ತಾರೆ ಇದು ಅವರ ಇಚ್ಛೆ ಎಂದು ಬಿಟ್ಟುಬಿಡಬಹುದಲ್ಲವೇ? ಅರ್ಥವಿಲ್ಲದ ಆಚರಣೆಗಳು ತೊಲಗಬೇಕಾದರೆ ಅವುಗಳ ಬಗ್ಗೆ ಅವುಗಳನ್ನು ಆಚರಿಸುವವರಲ್ಲಿ ಮೊದಲಿಗೆ ಜಾಗೃತಿ ಮೂಡಿಸಬೇಕಾಗುತ್ತದೆ. ಆ ರೀತಿ ಜಾಗೃತಿ ಮೂಡಿಸುವ ಕೆಲಸ ಪ್ರಜ್ಞಾವಂತ ಚಿಂತಕರಿಂದ, ಮಾಧ್ಯಮಗಳಿಂದ ನಡೆಯಬೇಕಾಗುತ್ತದೆ. ಅಂಥ ಜಾಗೃತಿ ನಿರಂತರವಾಗಿ ನಡೆಯುತ್ತಾ ಇರಬೇಕಾಗುತ್ತದೆ ಹಾಗೂ ಕಾಲಕ್ರಮೇಣ ಅವುಗಳನ್ನು ಆಚರಿಸುವ ಜನರಲ್ಲಿ ವೈಚಾರಿಕ ಜಾಗೃತಿ ಮೂಡುತ್ತದೆ. ಅದು ಬಿಟ್ಟು ಜಾಗೃತಿ ಮಾಡುವುದೇ ಬೇಡ ಎನ್ನುವುದು ಉತ್ತಮ ನಾಗರಿಕ ಸಮಾಜದ ನಡೆಯಾಗುವುದಿಲ್ಲ. ಬುರ್ಖಾ ಧರಿಸದ ಹಿಂದೂ ಹೆಣ್ಣು ಮಕ್ಕಳು, ಕ್ರಿಶ್ಚಿಯನ್ ಹೆಣ್ಣು ಮಕ್ಕಳು ಆರಾಮವಾಗಿ ಓಡಾಡುತ್ತಿರುವಾಗ ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳು ಮಾತ್ರ ಬುರ್ಖಾ ಇಲ್ಲದಿದ್ದರೆ ಸುರಕ್ಷತೆ ಇಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ನಂಬಬಹುದು?

 4. ಬೂರ್ಖಾ ಧರಿಸುವುದನ್ನು ಹಿಂದೂ ಧರ್ಮದ ಸತಿ ದಹನದೊಂದಿಗೆ ಹೋಲಿಸುವುದು ಸರಿಯಲ್ಲ. ಏಕೆಂದರೆ ಸತಿ ದಹನದಲ್ಲಿ ಹೆಣ್ಣಿನ ಹತ್ಯೆ ನಡೆಯುತ್ತದೆ. ಬೂರ್ಖಾ ಧರಿಸಿದ ಕಾರಣಕ್ಕೆ ಯಾವೊಬ್ಬ ಮುಸ್ಲಿಂ ಮಹಿಳೆಯೂ ಜೀವ ತೆತ್ತಿಲ್ಲ!

  ಬೂರ್ಖಾ ಧಾರಣೆಯನ್ನು ಬೆತ್ತಲೆ ಪೂಜೆಗೆ ಹೋಲಿಸುವುದು ಸರಿಯಲ್ಲ. ಏಕೆಂದರೆ ಬೆತ್ತಲೆ ಪೂಜೆ ಕಾಮ ಪ್ರಚೋದಕ. ಬೂರ್ಖಾ ಧಾರಣೆ ಕಾಮ ಪ್ರಚೋದಕವಲ್ಲ. ನಾಡಿನಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನೇ ತೆಗೆದುಕೊಳ್ಳಿ. ಬೂರ್ಖಾ ಧರಿಸಿದ ಹೆಣ್ಣಿನ ಮೇಲೆ ಅತ್ಯಾಚಾರ ನಡೆದ ಸುದ್ದಿಯನ್ನು ಎಲ್ಲಾದರೂ ಕೇಳಿದ್ದೀರಾ?

  ಬೂರ್ಖಾ ಧಾರಣೆಯನ್ನು ಬಾಲ್ಯ ವಿವಾಹಕ್ಕೆ ಹೋಲಿಸುವುದು ಸರಿಯಲ್ಲ. ಏಕೆಂದರೆ ಬಾಲ್ಯ ವಿವಾಹದಲ್ಲಿ ಅಪ್ರಾಪ್ತ ವಯಸ್ಕರ ನಡುವೆ ಕಾಮವನ್ನು ಉತ್ತೇಜಿಸಲಾಗುತ್ತದೆ. ಅದರಿಂದ ಅಪ್ರಾಪ್ತ ವಯಸ್ಕರ ದೇಹ ಹಾಗೂ ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ. ಬೂರ್ಖಾ ಧಾರಣೆಯಿಂದ ಯಾವ ದೈಹಿಕ ಬದಲಾವಣೆಯೂ ಆಗುವುದಿಲ್ಲ.

  ಬೂರ್ಖಾ ಧಾರಣೆ ಮುಸ್ಲಿಮ್ ಮಹಿಳೆಯರಿಗೆ ಅಸಹನೀಯ ಅಂತ ನಿಜಕ್ಕೂ ಅನ್ನಿಸಿದಾಗ ಅವರು ಇಸ್ಲಾಂ ಮತ ತ್ಯಜಿಸಿ ಬೇರೆ ಮತ ಸೇರುತ್ತಾರೆ. ಆ ಸ್ವಾತಂತ್ರ್ಯವನ್ನು ಅವರಿಗೆ ಭಾರತದ ಸಂವಿಧಾನ ಹಾಗೂ ಇಸ್ಲಾಂ ಕೊಟ್ಟಿವೆ.

 5. ಆನಂದ ಪ್ರಸಾದರೆ ಉತ್ತಮ ಪ್ರತಿಕ್ರಿಯೆ. ನೀವು ಹೇಳಿದಂತೆ ಬುರ್ಖಾ ಇಲ್ಲದ ಹಿಂದು ಕ್ರಿಸ್ತಿಯನ್ ಮಹಿಳೆಯರು ಆರಾಮವಾಗಿ ಓಡಾಡಿಕೊಂಡಿದ್ದಾರೆ. ಇನ್ನೊಂದು ವಿಷಯವೇನಂದರೆ ನಾವು ನಮ್ಮ ಧಾರ್ಮೀಕ ಚಿಹ್ನೆಗಳನ್ನು ಹೊರಗಡೆ ತೊರಿಸಿಕೊಂಡರೆ ಪೀಡಕರಿಗೆ ಇನ್ನೂ ಗುರುತಿಸಲು ಅನುಕೂಲವಲ್ಲವೆ? ತಾವು ಯಾವ ಧರ್ಮಕ್ಕೆ ಸೇರಿದವರೆಂದು ಇವತ್ತಿನ ಹುಡುಗಿಯರನ್ನು ನೋಡಿದರೆ ತಿಳಿಯುವದೇ ಇಲ್ಲ. ಬುರ್ಖಾ ಹಾಕಿದರೇನೇ ಅವರು ಇಂಥ ಮತಕ್ಕೆ ಸೇರಿದವರೆಂದು ತಿಳಿದು ಇನ್ನೂ ತೊಂದರೆಗೆ ಒಳಗಾಗುತ್ತಾರೆ. ಸ್ನೇಹಿತರೇ ನಿಮ್ಮ ಅಭಿಪ್ರಾಯ ತಿಳಿಸಿ.

  1. ನೀವು ಹೀಗೆ ಹೇಳುತ್ತಿರುವವರು ನಿಮ್ಮ ಹಿಂದೂ ಮತಬಾಂಧವರಿಗೆ ಹೇಳಿ ಕರಿಮಣಿ, ಕಾಲುಂಗುರ, ಹಣೆಬೊಟ್ಟು ತ್ಯಜಿಸಿ ಅಂತ ವಾಳವಿ ಮೇಡಂ!

   1. ಆಧುನಿಕ ಹಿಂದೂ ಹುಡುಗಿಯರು ಇವನ್ನು ತೆಗೆದು ಎಷ್ಟೋ ಕಾಲವಾಯ್ತು ಶೆಟ್ಕರ್ ಸರ್.

 6. ‘ಹ್ಯೂಮನ್ ರೈಟ್ಸ್ ವಾಚ್’ ಸಂಸ್ಥೆಯು ನಡೆಸಿದ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿ ಎರಡು ಗಂಟೆಗಳಿಗೊಂದು ಅತ್ಯಾಚಾರ ಎಂಟು ಗಂಟೆಗಳಿಗೊಂದು ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಪಾಕಿಸ್ತಾನದಲ್ಲಿ ಬುರ್ಖಾ ಪದ್ಧತಿ ಇದೆ. ಬುರ್ಖಾ ಅತ್ಯಾಚಾರ ತಡೆಯುವುದಿದ್ದರೆ ಅಲ್ಲಿ ಅತ್ಯಾಚಾರಗಳೇ ನಡೆಯುತ್ತಿರಲಿಲ್ಲ. ಬುರ್ಖಾ ಅತ್ಯಾಚಾರ ತಡೆಯುತ್ತದೆ ಎಂದಾದರೆ ಎಲ್ಲ ಧರ್ಮಗಳ ಮಹಿಳೆಯರಿಗೂ ಇದನ್ನು ಧರಿಸಲು ಶಿಫಾರಸು ಮಾಡಬಹುದೆಂದು ಕಾಣುತ್ತದೆ.

 7. ಬೂರ್ಖಾ ಧಾರಣೆಯು ಅತ್ಯಾಚಾರವನ್ನು ತಡೆಯುತ್ತದೆ ಎಂದು ನಾನು ಹೇಳಿಲ್ಲ. ಬೂರ್ಖಾ ಧಾರಣೆಯನ್ನು ಸತಿ ದಹನ, ಬಾಲ ವಿವಾಹ, ಹಾಗೂ ಬೆತ್ತಲೆ ಪೂಜೆಗಳಿಗೆ ಹೋಲಿಸುವುದು ತಪ್ಪು ಎಂದು ಹೇಳಿದ್ದೇನೆ. ಪಾಕಿಸ್ತಾನದಲ್ಲಿ ಬೂರ್ಖ ಧಾರಿಗಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ನಿಜ, ಆದರೆ ಅತ್ಯಾಚಾರಕ್ಕೆ ಬೂರ್ಖಾ ಖಂಡಿತ ಕಾರಣವಲ್ಲ. ಬಹುಶ ಬೂರ್ಖಾ ಇಲ್ಲದಿದ್ದರೆ ಪಾಕಿಸ್ತಾನದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದವು ಎನ್ನಬಹುದು.

 8. ಇಡಿಯ ಜಗತ್ತು ಹೆಣ್ಮಕ್ಕಳು ಸುರಕ್ಷಿತವಾಗಿಲ್ಲ ಅಂತ ಬೊಬ್ಬೆ ಹೊಡಿಯುವುತ್ತಿರುವಾಗ ’….ಹೆಣ್ಮಕ್ಕಳು ಸುರಕ್ಷಿತವಾಗಿ ಓಡಾಡುತ್ತಿದ್ದಾರೆ’ ಎಂದು ಹೇಳುತ್ತಿರುವ ಆನಂದ ಪ್ರಸಾದರನ್ನು ಅಭಿನಂದಿಸಲೇಬೇಕು. ದೈಹಿಕವಾಗಿ ಲೈಂಗಿಕ ಹಲ್ಲೆಯಾದರೆ ಮಾತ್ರ ಅದು ಹೆಣ್ಣಿನ ಮೇಲೆ ಅತ್ಯಾಚಾರವೆಂದು ತಾವು ಭಾವಿಸಿದಂತಿದೆ. ಇದುವೇ ವ್ಯಕ್ತಿಯೊಬ್ಬನ ಪಾರಂಪರಿಕ ಪುರುಷ ಚೌವನಿಝಮ್ ಅನ್ನು ಪ್ರತಿಫಲಿಸುತ್ತಿದೆ. ಅದಿರಲಿ, ಮಾನಸಿಕ ಲೈಂಗಿಕ ಅತ್ಯಾಚಾರ ನಿಮಗಿದು ಗೊತ್ತಿದೆಯೋ ಇಲ್ಲವೋ, ಅದೇನೆಂದು ಹೆಣ್ಣಿಗೆ ಗೊತ್ತಿದೆ. ನಮ್ಮಂತಹ ’ಸಂಭಾವಿತ’ ಪುರುಷರ ಕಣ್ಣು ಸ್ತ್ರೀಯ ದೇಹದ ಯಾವ ಯಾವ ಭಾಗಗಳ ಮೇಲೆ ಹೇಗೆ ಹೇಗೆ ಬೀಳುತ್ತವೆಯೆಂದು, ಆ ನೋಟಗಳು ಎಂತಹ ಯಾತನೆಯನ್ನು ಹುಟ್ಟಿಸುತ್ತವೆಯೆಂದು ಹೆಣ್ಣೇ ಬಲ್ಲಳು. ಅದಕ್ಕಾವುದೇ ಕಾನೂನುಗಳಿಲ್ಲವಲ್ಲ, ಪಾಪ ಏನೂ ಮಾಡಲಿಕ್ಕಾಗುವುದಿಲ್ಲ. ಇದರರ್ಥ ನಾನು ಬುರ್ಖಾವನ್ನು ಸಮರ್ಥಿಸುತ್ತೇನೆಂದು ಭಾವಿಸಬೇಡಿ. ಬಹಳ ’ಮುಂದುವರಿದ’ ಯುರೋಪಾತ್ಯ ರಾಷ್ಟ್ರಗಳು ಸೇರಿದಂತೆ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಯುವಮಿತ್ರರಿದ್ದಾರೆ. ಅವರ ಜತೆ ಬಹಳ ಸಮಯವನ್ನೂ ಕಳೆದಿದ್ದೇನೆ. ಕಲಿತ ಬಹಳ ವಿಚಾರಗಳಲ್ಲೊಂದು ವಿಚಾರವೇನೆಂದರೇ, ಬಹುತೇಕ ಎಲ್ಲಾ ಗಂಡಸರು ಮೇಲ್ನೋಟಕ್ಕೆ ಎಷ್ಟೇ ದೊಡ್ಡ ಜಂಟಲ್ ಮೆನ್ ನಂತೆ ಒಬ್ಬ ಪುರುಷ ವರ್ತಿಸಲಿ, ಹೆಣ್ಣನ್ನು ಆತ ಹೇಗೆ ನೋಡುತ್ತಾನೆ ಎಂಬುವುದು. (ನಿಜಾರ್ಥದಲ್ಲಿ ಸಾಧುಸಂತರಾಗಿರುವವರನ್ನು ಬಿಟ್ಟು) ಖಂಡಿತವಾಗಿಯೂ ಈ ಓಪನ್ ಸೀಕ್ರೇಟ್ ಅನ್ನು ಗಂಡಸರು ಕಾನ್ಫೆಸ್ ಮಾಡಾಲಾರರು. ಪುರುಷನೆಲ್ಲೂ ಇರಲಿ, ಆತನ ಜಾತಿ ಒಂದೇ.
  ಪುರುಷಜಾತಿಯ ಈ ನೀಚನೋಟ ಬಲ್ಲವರೇ ಬಹುಷ: ಬುರ್ಖಾ, ಘೂಂಘಟ್, ಗೌನ್ ಗಳನ್ನು ಹೇರಿರಬಹುದು. ಒಂದು ಆಚರಣೆ ಇಷ್ಟೊಂದು ಪ್ರಬಲವಾಗಿ ಬೇರೂರಿಬೇಕಾದರೆ ಬಲವಾದ ಸಾಂಸ್ಕೃತಿಕ, ಮನೋವೈಜ್ನಾನಿಕ, ಅಥವಾ ಸಾಮಾಜಿಕ ಕಾರಣಗಳು ಇರುತ್ತವೆ. ಪುರುಷ-ಸ್ತ್ರೀ ಪೃಕೃತಿಸಹಜ ಆಕರ್ಷಣೆ, ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಲೈಂಗಿಕತೆ, ಮುಂತಾವುದುಗಳನ್ನು ಪರಿಗಣಿಸದೇ, ಒಂದು ವಸ್ತ್ರ ಸಂಸ್ಕೃತಿಗಾಗಿ ಸಣ್ಣ ಸಂಖ್ಯೆಯಲ್ಲಿರುವ ಧಾರ್ಮಿಕ ಮೂಲಭೂತವಾದಿಗಳತ್ತ ಬೆಟ್ಟು ಮಾಡಿ ರಾಜಕೀಯಕರಣಗೊಳಿಸಿ, ನಮ್ಮಲ್ಲಿ ಅಡಗಿರುವ ಕಲ್ಪ್ರಿಟ್ ಅನ್ನು ರಕ್ಷಿಸುತ್ತಿದ್ದೇವೆಯೋ ಅಥವಾ ವಾಸ್ತವಿಕತೆಗಳಿಂದ ಪಲಾಯನವಾದಿಗಳಾಗುತ್ತಿದ್ದೇವೆಯೋ ಎಂದು ಅನಿಸುತ್ತೆ.

 9. ಮನೋವಿಜ್ಞಾನದ ಪ್ರಕಾರ ಗಂಡು ಹಾಗೂ ಹೆಣ್ಣಿನ ನಡುವೆ ಬಲವಾದ ಆಕರ್ಷಣೆ ಇರುತ್ತದೆ. ಇದು ಪ್ರಕೃತಿ ನಿಯಮವೂ ಹೌದು. ಹೀಗಾಗಿ ಹೆಣ್ಣನ್ನು ಬೇರೆಯವರು ನೋಡಲೇಬಾರದು ಎಂದು ನಿರ್ಬಂಧ ವಿಧಿಸುವುದು ಪ್ರಕೃತಿವಿರೋಧವಾದೀತು. ಮನೋವಿಜ್ಞಾನದ ಪ್ರಕಾರ ವಿರುದ್ಧ ಲಿಂಗಿಗಳು ತಮ್ಮನ್ನು ನೋಡಿದಾಗ ಅದು ಗಂಡೇ ಆಗಿರಲಿ ಅಥವಾ ಹೆಣ್ಣೇ ಆಗಿರಲಿ ಅದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಸಂತೋಷವಾಗುತ್ತದೆ. ವಿರುದ್ಧ ಲಿಂಗಿಗಳು ನೋಡಿದ ಕೂಡಲೇ ಹಿಂಸೆಯಾಗುತ್ತದೆ ಎಂಬುದು ನಮ್ಮ ಸಾಂಪ್ರದಾಯಿಕ ಮನೋಭಾವದಿಂದ ರೂಪುಗೊಂಡದ್ದೇ ಹೊರತು ಸ್ವಾಭಾವಿಕವಾದದ್ದಲ್ಲ. ಚೆಲುವಾಗಿರುವ ಗಂಡನ್ನು ಹೆಣ್ಣು ಮಕ್ಕಳು ಹಾಗೂ ಚೆಲುವಾದ ಹೆಣ್ಣನ್ನು ಗಂಡುಮಕ್ಕಳು ನೋಡುವುದು ಅತ್ಯಂತ ಸಹಜ. ಇದರಿಂದ ಹಾನಿಯೇನೂ ಇಲ್ಲ. ಚೆಲುವನ್ನು ಪರದೆ ಹಾಕಿ ಮುಚ್ಚುವುದು ಹಾಗೂ ಯಾರೂ ನೋಡಬಾರದೆಂದು ವಿಧಿಸುವುದು ಸಂಕುಚಿತ ಮನೋಭಾವ ಹಾಗೂ ನಾಗರೀಕ ಸಮಾಜದ ಪದ್ಧತಿಗಳಿಗೆ ವಿರುದ್ಧವಾದದ್ದೆಂದು ಕಂಡುಬರುತ್ತದೆ.

  1. ಗಂಡು ಹೆಣ್ಣು ನಡುವಿನ ಆಕರ್ಷಣೆಗೆ ಬೂರ್ಖಾ ಎಂದಿಗೂ ಅಡ್ಡಿ ಬಂದಿಲ್ಲ! ಮುಸಲ್ಮಾನರ ಜನಸಂಖ್ಯೆ ವರ್ಷದಿಂದ ವರ್ಷ ಏರುತ್ತಲೇ ಇದೆ! ನಮ್ಮ ದೇಶದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲಿ. ಇನ್ನೈವತ್ತು ವರ್ಷಗಳಲ್ಲಿ ಯೂರೋಪಿನಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಲಿದ್ದಾರೆ. ಪಾಕಿಸ್ತಾನದಲ್ಲಿ ಬೂರ್ಖಾಧಾರಿಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಅಂತ ನೀವೇ ಹೇಳಿದ್ದೀರಿ!

   ಬೂರ್ಖಾ ಧಾರಣೆ ಬಗ್ಗೆ ಇಷ್ಟೆಲ್ಲಾ ನೆಗೆಟಿವಿಟಿವಿ? ನನಗೆ ಅರ್ಥವಾಗುತ್ತಿಲ್ಲ! :(((((((((((

 10. ಆನಂದ ಪ್ರಸಾದರೇ, ಬಹುಷ: ನಾನು ನನ್ನ ಮಾತನ್ನು ನಿಮಗೆ ಅರ್ಥ ಮಾಡಿಸುವಲ್ಲಿ ಎಡವಿದ್ದೇನೆ ಅಥವಾ ತಾವು ನನ್ನ ಮಾತನ್ನು ಅರ್ಥಮಾಡಿಕೊಂಡಿಲ್ಲ ಅಂತ ಅನ್ಸುತ್ತೆ. ನಾನು ಹೇಳಿರುವುದು ಪುರುಷವರ್ಗದ ಕೆಟ್ಟ ನೋಟದ ಬಗ್ಗೆ. ಅದನ್ನು ಅರ್ಥ ಮಾಡಿಕೊಂಡಿದ್ದರೆ ನೀವು- ….ನೋಟದಿಂದ ಮಹಿಳೆಯರಿಗೆ ಸಂತೋಷವಾಗುತ್ತದೆ….- ಎಂಬ ಅಪಾಯಕಾರಿ ಮಾತನ್ನು ನೀವು ಹೇಳುತ್ತಿರಲಿಲ್ಲ. ನಾನು ಪ್ರಬುದ್ಧ ಹೆಣ್ಣು ಗಂಡಿನ ಮನೋವಿಜ್ಞಾನವನ್ನು ಉಲ್ಲೇಖಿಸಿದ್ದರೆ ನೀವು ಮಕ್ಕಳಿಗೆ ಸೀಮಿತಗೊಳಿಸಿ ವಿಷಯದ ಗಂಭೀರತೆಯನ್ನೇ ಕಡಿಮೆಗೊಳಿಸಿದ್ದೀರಿ.

  ಚೆಲುವಾಗಿರುವ ಗಂಡನ್ನು ಹೆಣ್ಣು ಮಕ್ಕಳು ಹಾಗೂ ಚೆಲುವಾದ ಹೆಣ್ಣನ್ನು ಗಂಡುಮಕ್ಕಳು ನೋಡುವುದು ಅತ್ಯಂತ ಸಹಜವೆಂದಿದ್ದೀರಿ. ಹೌದು ಅದು ಸಹಜ, ಆದರೆ ನಮ್ಮ ಮಾಧ್ಯಮ, ಜಾಹೀರಾತು, ಮಾರುಕಟ್ಟೆ, ಫಿಲ್ಮ್ ಗಳು ಪ್ರತಿ ಕ್ಷಣ ’ಪುರುಷತ್ವ’ವನ್ನು ಚಾರ್ಜ್ (ಅದೂ ಸಹಜ??) ಮಾಡುತ್ತಿರುವ ಸನ್ನಿವೇಶದಲ್ಲಿ ನೀವಂದ ಸಹಜತೆಯನ್ನು ಬಾಕಿ ಉಳಿಸುತ್ತವೆಯೇ? ಎಲ್ಲಿ ಪ್ರಚೋದನಕಾರಿ ವಾತವರಣ ಇರುತ್ತದೋ ಅಲ್ಲಿ ಅಪರಾಧಗಳು ನಡೆಯುವ ಸಂಭವ ಹೆಚ್ಚಿರುತ್ತದೆ. ಯಾರೋ ಏನಕ್ಕೋ ಪ್ರಚೋದಿಸುತ್ತಾರೆ, ಯಾರೋ ಒಬ್ಬ ಪಿಶಾಚಿ ಪ್ರಚೋದನೆಗೊಳಗಾಗುತ್ತಾನೆ, ಯಾರೋ ಒಬ್ಬಳು ಬಲಿಪಶುವಾಗುತ್ತಾಳೆ. ಈ ’ಯಾರೋ’ ಒಬ್ಬಳಲ್ಲಿ ತಮ್ಮ ಮಗಳು ಆಗಬಾರದೆಂಬ ತಂದೆ-ತಾಯಿಯರ ಪ್ರೀತಿಯೂ ’ಪ್ರೆವೆನ್ಶನ್ ಇಸ್ ಬೆಟರ್ ದ್ಯಾನ್ ಕ್ಯೂರ್’ ಧೋರಣೆಯ ಮೂಲಕ ತಮ್ಮ ಮಕ್ಕಳಿಗೆ ಬುರ್ಖಾವನ್ನು ತೊಡಿಸುವುದನ್ನು ನಾನು ಕಂಡಿದ್ದೇನೆ. ಮುಸ್ಲಿಮ್ ಸಮುದಾಯವನ್ನು ಬಹಳ ಹತ್ತಿರದಿಂದ ನೋಡಿದ ಅನುಭವದಾಧರದಲ್ಲಿ ಹೇಳಬಲ್ಲೆನೆಂದರೆ, ಎಲ್ಲಾ ಮಹಿಳೆಯರೂ ಧಾರ್ಮಿಕ ಮೂಲಭೂತವಾದಿಗಳ ಪ್ರಭಾವದಿಂದಾಗಿ ಬುರ್ಖಾ ಹಾಕಿಕೊಳ್ಳುತಾರೆಂಬುವುದು ಬಲವಂತದಿಂದ ಹೇರಲಾಗುತ್ತಿರುವ ವಿಚಾರ.

  ಮಹಿಳೆಯ ದೇಹದ ಇಂಚು ಇಂಚನ್ನು ಸೌಂದರ್ಯದ ಹೆಸರಿನಲ್ಲಿ ವ್ಯಾಪಾರದ ವಸ್ತುವನ್ನಾಗಿ, ಆರ್ಟ್ ಹೆಸರಿನಲ್ಲಿ ಪುರುಷರ ಮನರಂಜಿಸುವ ವಸ್ತುವನ್ನಾಗಿಸಿದ ಸಂಧರ್ಭದಲ್ಲಿ ’ಆಧುನಿಕ’ ಪೌರುಷಭೂತವಾದಕ್ಕೆ, ಬಟ್ಟೆತೊಡುವುದು, ತೊಡಿಸುವುದು ಮುಂತಾದವುಗಳು ಸಾಂಪ್ರದಾಯಿಕ ಮನೋಭಾವನೆಯಾಗಿ ಕಾಣುವುದು ಕೂಡ ಸಂಪ್ರದಾಯವೇ, ಅದು ಹೊಸತೇನಲ್ಲ ಬಿಡಿ. ಆದರೆ ಒಂದು ವಿಷಯವನ್ನು ಮತ್ತೊಬ್ಬರಿಗೆ ತಿಳಿಹೇಳುವ ಹಕ್ಕು/ ಎಡುಕೇಟ್ ಮಾಡುವ ಹಕ್ಕು ಬುರ್ಖಾ ತೆಗೆಸುವವರಿಗೆ ಎಷ್ಟು ಇದೆಯೋ ಅದನ್ನು ಹಾಕಿಸುವವರಿಗೂ ಇದೆ. ಆದರೆ ಬಲವಂತವಾಗಿ ಬುರ್ಖಾವನ್ನು ಹಾಕಿಸುವುದು ಎಷ್ಟು ಖಂಡನೀಯವೋ ಅಷ್ಟೇ ಅದನ್ನು ತೆಗಿಸುವುದು ಕೂಡಾ; ವಸ್ತ್ರಪೋಲಿಸ್ ಗಿರಿಗೆ ವಿವಸ್ತ್ರಪೋಲಿಸ್ ಗಿರಿ ಪರಿಹಾರವಲ್ಲ.

 11. ಶ್ರೀಪಾದ ಸರ್ ನಿಮ್ಮ ಪ್ರತಿಕ್ರಿಯೆ ಯಾವತ್ತಿಗೂ ಸರಿಯಾಗಿಯೇ ಇರುತ್ತದೆ…. (ಕಾಂಚ ಐಲಯ್ಯನವರದ್ದೊಂದು ಬಿಟ್ಟು) ಖುಷಿಯಾಯ್ತು ಸರ್… ಬಹಳ ಅತ್ಯುತ್ತಮವಾದ ಬರಹ

 12. “ಬುರ್ಖಾ” ಒಂದು ಪ್ರತೀಕ ಮಾತ್ರ. ಅದರ ಹಿಂದಿನ ಹೆಣ್ಣಿನ ಶೋಷಣೆಯ ಬಗ್ಗೆ, ಅವಳನ್ನು ಸಾವಿರಾರು ವರ್ಷಗಳಿಂದ ಅಕ್ಷರದಿಂದ, ಜ್ಞಾನದಿಂದ ಮುಚ್ಚಿಡುತ್ತಿರುವ ಹಿಂದಿನ ಷಡ್ಯಂತ್ರದ ಬಗ್ಗೆ ಯಾರೂ ಚರ್ಚಿಸುತ್ತಲೇ ಇಲ್ಲ!! ಬರೀ ಕಪ್ಪು ಬಟ್ಟೆಯ ಬಗ್ಗೆಯೇ ಮಾತಾಡುತ್ತಿದ್ದಾರೆ…

 13. ಇಲ್ಲಿನ ಕೆಲವು ಪ್ರತಿಕ್ರಿಯೆಗಳು ನನ್ನ ಗೆಳೆಯರ ವಿರುದ್ಧ ತಿರುಗಿರುವುದನ್ನು ನಾನು ಒಪ್ಪುವುದಿಲ್ಲ. ನನ್ನ ಮುಸ್ಲಿಂ ಗೆಳೆಯ ಕಮ್ಯುನಿಷ್ಟ್ ಪಕ್ಷದ ನಾಯಕನಾಗಿ ಏಕಾಂಗಿಯಾಗಿ ಕರಾವಳಿ ಭಾಗದಲ್ಲಿ ಹೋರಾಡುತ್ತಿದ್ದಾನೆ.ಆತ ಸಂಘಟನಾತ್ಮಕವಾಗಿ ಇಡೀ ಕರಾವಳಿಯಲ್ಲಿ ಜನಪರ ಹೋರಾಟ ಕಟ್ಟಿರುವುದು ನಮಗೆಲ್ಲ ಮಾದರಿ. ಆತನ ಬದ್ಧತೆಯನ್ನು ಪ್ರಶ್ಶಿಸುವವರು ಅಜ್ನಾನಿಗಳಷ್ಟೆ.ಬದಲಾಗಿ ಆ ನನ್ನ ಗೆಳೆಯನೊಂದಿಗೆ ಹೋರಾಟದಲ್ಲಿ ಕೈ ಜೋಡಿಸಿ. ಹೊಸ ಯುವ ಪತ್ರಕರ್ತ ಗೆಳೆಯ ಸಹ ಮಹಾನ್ ಬದ್ಧತೆಯುಳ್ಳ ಯುವಕ.ಆತನೂ ಸಹ ಅತ್ಯಂತ ಪ್ರಾಮಾಣಿಕವಾಗಿ ಎಲ್ಲಾ ಮೂಲಭೂತವಾದಿಗಳ ವಿರುದ್ಧ ಚಿಂತಿಸುತ್ತಾನೆ.ಆತನ ಚಿಂತನೆಗಳಲ್ಲಿ ಪ್ರಬುದ್ಧತೆ ಇದೆ.ಆತನ ಸಾಮಾಜಿಕ ಕಳಕಳಿ ಹೊಸ ಯುವ ತಂಡವನ್ನು ಮುನ್ನಡೆಸುವಷ್ಟು ಕ್ಷಮತೆಯನ್ನು ಹೊಂದಿದೆ. ಇವರನ್ನು ವೈಯುಕ್ತಿಕ ಮಟ್ಟದಲ್ಲಿ ಟೀಕಿಸುವುದು ನಿಜಕ್ಕೂ ಅಮಾನವೀಯ ನಡುವಳಿಕೆ.ನಾನು ಈ ಟೀಕೆಗಳನ್ನು ವಿರೋಧಿಸುತ್ತೇನೆ.

  1. ಲೇಖಕರ ಈ ಮೇಲಿನ ಸಮಜಾಯಿಸಿಕೆ ನನ್ನ ಕಮೆ೦ಟಿನ ಕುರಿತಾಗಿದ್ದರೆ-ನಾನು ಯಾರನ್ನೊ ವ್ಯಯುಕ್ತಿಕವಾಗಿ ಟೀಕಿಸಿಲ್ಲ,ನೀವು ಹೇಳಿದ ಮಹನೀಯರ ವ್ಯೆಯುಕ್ತಿಕ ಪರಿಚಯ ಸಹಾ ನನಗಿಲ್ಲ.ಇನ್ನು ಅವರ ಲೇಖನಕ್ಕೆ ಪ್ರತಿಕಯಿಸಿದ್ದೇನೆ,ಅವರ ಬದ್ದತೆಯನ್ನು ಪ್ರಶ್ನಿಸಿಲ್ಲ. ಇನ್ನು public spaceನಲ್ಲಿ ಯಾರೂ ಟೀಕೆಗೆ ಆತೀತರಲ್ಲ,ಅದೂ ಒ೦ದು ಸಮುದಾಯದ ನ೦ಬಿಕೆಯನ್ನು ಗೇಲಿ ಮಾಡಿದರೆ! ಪ್ರಾಮಾಣಿಕವಾಗಿ ಚಿ೦ತಿಸಿದರೆ,ನೀವು ನನ್ನ ಟೀಕೆಯನ್ನಲ್ಲ,ಆ ಲೇಖನವನ್ನು ಅಮಾನವೀಯ ಎ೦ದು ಪ್ರತಿಕಯಿಸಬೇಕು.ಅಮೀನರ ಭಾಷಣದ ಅನ೦ತರ ಎಲ್ಲರೂ‘ಬುರ್ಖಾ‘ ವನ್ನು ಹಿಡಿದು ಮುಸ್ಲಿ೦ ಹೆ೦ಗಸರನ್ನು ನೂರಾರು ಬಾರಿ ಅಪಹಾಸ್ಯ ಮಾಡಿದಿರಿ.ಮುಸ್ಲಿ೦ರು ತು೦ಬಾ soft target,ಅವರು ಪ್ರತಿಕಯಿಸುದಿಲ್ಲ,ಅದೂ ಅಲ್ಲದೇ ಯಾವುದೆ ಸಾಮುದಾಯಿಕ ಬದ್ದತೆಯಿಲ್ಲದ ‘ನಾಮಕಾ ವಾಸ್“ಗಳನ್ನು ಸಹಾ ಉಪಯೋಗಿಸಿದರು,ಪಾಪ ಅವರಿಗೆ ಗೊತ್ತಿಲ್ಲ ತಾವೆಲ್ಲಾ use and throw ಎ೦ದು,

   1. ಸಲಾಂ ಬಾವ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.

    ಸಂಪಾದಕರು ಓದುಗರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಬೇಸರವಿದೆ. ನನ್ನ ಕೆಲವು ಕಮೆಂಟನ್ನು ಪ್ರಕಟಿಸಿ ನಂತರ ಕಾರಣ ಕೊಡದೆ ತೆಗೆದುಬಿಟ್ಟಿದ್ದಾರೆ.

Leave a Reply

Your email address will not be published.