ಬುರ್ಖಾ ಚರ್ಚೆ: ಸುಧಾರಣೆ ಅನ್ನೋದು ನಿರಂತರ ಆಗುವ ಪ್ರಕ್ರಿಯೆ…

– ಶರಣ್

ದಿನೇಶ್ ಅಮಿನ್ ಮಟ್ಟು ಅವರು ಮಂಗಳೂರಿನ ಭಾಷಣದಲ್ಲಿ ಮುಖ್ಯವಾಗಿ ಮಾತನಾಡಿದ್ದು ‘ರಿಲೆ’ ಮುಂದುವರಿಯಬೇಕು ಎಂದು. ಸದ್ಯದ ಬರಹಗಾರರು ರಿಲೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳುತ್ತಲೇ, ಅವರು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದು, “ಇದಕ್ಕೆ ಬಹಳ ಮುಖ್ಯ ಕಾರಣನೂ ಇದೆ. ಬಾಬರೀ ಮಸೀದಿ ಧ್ವಂಸದ ನಂತರ ಎದ್ದ ಹಿಂದುತ್ವದ ಅಲೆ ಅಬ್ಬರದಲ್ಲಿ ಇವರ ಧ್ವನಿಗಳು ಉಡುಗಿ ಹೋಯಿತು”. dinesh-aminmattuದಿನೇಶ್ ನೂರಾರು ಯುವಕರ ಗೌರವ ಮತ್ತು ಮೆಚ್ಚುಗೆ ಪಡೆಯುವುದೇ ಇಂತಹ ಒಳನೋಟಗಳಿಂದ. ಈ ಭಾಷಣದ ನಂತರ ನಡೆದ ಚರ್ಚೆಗಳಲ್ಲಿ ಈ ದನಿ ಉಡುಗಿ ಹೋಗಲು ಕಾರಣವಾದ ಸಂಗತಿಗಳ ಬಗ್ಗೆ ಉಲ್ಲೇಖ ನೆಪಮಾತ್ರಕ್ಕೂ ಇರಲಿಲ್ಲ. (ನನ್ನ ಗಮನಕ್ಕೆ ಬಾರದೆ ಚರ್ಚೆಯಾಗಿದ್ದರೆ, ಈ ವಾಕ್ಯವನ್ನು ಮಾರ್ಪಾಟು ಮಾಡಿಕೊಂಡು ಓದಬಹುದು).

ಸದ್ಯದ ಬರಹಗಾರರನ್ನು ಮಸೀದಿ ಧ್ವಂಸ ಪ್ರಕರಣ, ಗಲಭೆ, ಗುಜರಾತ್ ಹಿಂಸಾಚಾರ, ಮೋದಿಯ ಪಟ್ಟ – ಎಂಬೆಲ್ಲಾ ಬೆಳವಣಿಗೆಗಳು ಘಾಸಿಗೊಳಿಸಿವೆ. ಈ ಘಟನೆಗಳು ಈ ದೇಶದ ಉದಾರವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಡುವ ಬಹುಸಂಖ್ಯಾತ ಕೋಮಿಗೆ ಸೇರಿದವನ ಮೇಲೆ ಮಾಡುವ ಪರಿಣಾಮಕ್ಕಿಂತ ಘೋರ ಪರಿಣಾಮವನ್ನು ಅಲ್ಪಸಂಖ್ಯಾತ ಕೋಮಿನ ಅದೇ ತೆರೆನ ವ್ಯಕ್ತಿತ್ವದ ಮೇಲೆ ಮಾಡಬಲ್ಲವು. ಆತನನ್ನು (ಅಲ್ಪಸಂಖ್ಯಾತ ಸಮುದಾಯದ) ಅತೀವ ಅಸಹಾಯಕತೆಗೆ, ಅಭದ್ರತೆಗೆ ತಳ್ಳುತ್ತವೆ. ಬಹುಸಂಖ್ಯಾತ ಕೋಮಿನ ಯುವಕನಿಗೆ ಇಂತಹ ಘಟನೆಗಳಿಂದ ಅದೆಷ್ಟೇ ಆಕ್ರೋಷ ಉಕ್ಕಿ ಬಂದರೂ, ಅಭದ್ರೆತೆ ಕಾಡುವ ಸಾಧ್ಯತೆಗಳು ಕಡಿಮೆ.

ಬಹುಸಂಖ್ಯಾತ ಸಮುದಾಯದ ಹುಡುಗನೊಬ್ಬ ಎಂಥಹದೇ ಕೇಸಿನ ಮೇಲೆ ಜೈಲುಪಾಲಾದರೂ, ಈ ದೇಶದ ಮಾಧ್ಯಮ ಅವನನ್ನು ‘ಉಗ್ರ’ ಎಂದು ಕರೆಯುವುದಿಲ್ಲ ಎಂಬ ಗ್ಯಾರಂಟಿ ಅವನ ಕುಟುಂಬಕ್ಕಿದೆ. ಆದರೆ ಅಲ್ಪಸಂಖ್ಯಾತ ಹುಡುಗನ ಪರಿಸ್ಥಿತಿ ಹಾಗಿರುವುದಿಲ್ಲ. ಪತ್ರಿಕಾಲಯದಲ್ಲಿ ರಾತ್ರಿ ಪಾಳಿ ಮುಗಿಸಿ ಮನೆಗೆ ಬಂದು ಮಲಗಿದ್ದರೆ, ಬೆಳಗಿನ ಜಾವ ಯಾರೋ ನಾಲ್ವರು ಬಾಗಿಲು ನೂಕಿ ಜೀಪಿನಲ್ಲಿ ಹಾಕಿಕೊಂಡು ಹೋಗುತ್ತಾರೆ. ಮಾರನೆಯ ದಿನ ಕುಖ್ಯಾತ ಉಗ್ರನ ಬಂಧನವಾಗಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತವೆ. ಅವನೊಂದಿಗೆ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರೇ “ಅವನು ಮೊದಲಿನಿಂದಲೂ ಹಾಗೇ. ಈಗ ಬಹಿರಂಗ ಆಗಿದೆ ಅಷ್ಟೆ…” ಎಂದು ಮಾತನಾಡುತ್ತಾರೆ. ಮತ್ತೊಬ್ಬ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನಿ ಹುದ್ದೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತಾಗುವ ತನಕ ಅವರ ಕುಟುಂಬ, ಸ್ನೇಹಿತರು, ಆತ್ಮೀಯರು ಅನುಭಿಸಿದ ಯಾತನೆಗೆ ಪರಿಹಾರ ಇದೆಯೆ?

ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ವಿವಿಧ ಮಾಧ್ಯಮಗಳು ಸಮೀಕ್ಷೆModi-selfie ನಡೆಸಿ ವರದಿ ಮಾಡುತ್ತಿದ್ದರೆ, ಅಲ್ಟಸಂಖ್ಯಾತ ಸಮುದಾಯದ ಮಿತ್ರನೊಬ್ಬ ಒಂದೊಂದು ಚಾನೆಲ್ ನ ವರದಿ ಬಂದಾಗಲೂ ಮಾನಸಿಕವಾಗಿ ಕುಗ್ಗುತ್ತಿದ್ದ. ಮಾತಿನ ಮೂಲಕ ತನ್ನೊಳಗಿನ ಆತಂಕ, ಸಂಕಟ ವ್ಯಕ್ತಪಡಿಸುತ್ತಿದ್ದ. ಇವೆಲ್ಲಾ ಸಮೀಕ್ಷೆಗಳು ಸುಳ್ಳಾಗಬಹುದು ಎಂಬ ನಿರೀಕ್ಷೆ ಅವನಲ್ಲಿತ್ತು. ಚುನಾವಣಾ ಆಯೋಗ ಮತಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿದಾಗ ಮಾತು ನಿಲ್ಲಿಸಿಬಿಟ್ಟ. ಯಾವುದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುತ್ತಾನೆ. ಅವನನ್ನು ಇತರರು ಪುಕ್ಕಲ ಎಂದು ಮೂದಲಿಸಿ ಸುಮ್ಮನಾಗುವುದು ಸುಲಭ. ಆದರೆ ಅವನ ವರ್ತನೆ ಪ್ರಾಮಾಣಿಕವಾಗಿದೆ. ನಾಟಕೀಯ ಅಲ್ಲ. ಆ ಕಾರಣಕ್ಕಾಗಿಯೇ ಅವನ ಆತಂಕಗಳಿಗೆ ಇತರರು ಮಿಡಿಯಬೇಕಿದೆ.

ಈ ದೇಶದ 110 ಕೋಟಿ ಜನರ ಪ್ರತಿನಿಧಿಯಾಗಲು ಬಯಸಿ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸಿ ಹೋದ ಕಡೆಯಲ್ಲೆಲ್ಲ, ಅಲ್ಲಿನ ಸ್ಥಳೀಯ ಸಮುದಾಯದವರು ಕೊಡುವ ಪೇಟ, ಪಗೋಡ, ಮುಂಡಾಸು, ಟೋಪಿ..ಇತರೆ ಎಲ್ಲವನ್ನೂ ಸ್ವೀಕರಿಸಿ ಸಂತೋಷದಿಂದ ಧರಿಸುವ ವ್ಯಕ್ತಿ ಒಂದು ಸಮುದಾಯದ ಉಡುಗೆಯನ್ನು ನಿರಾಕರಿಸಿದಾಗ ಆ ಸಮುದಾಯ ಹೇಗೆ ಪ್ರತಿಕ್ರಿಯಿಸಬೇಕು? ಪಟ್ಟಕ್ಕೆ ಬಂದ ನಂತರ ತರುವಾಯ ದೇಶದ ಎಲ್ಲ ಸಣ್ಣ ಪುಟ್ಟ ಆಗು-ಹೋಗುಗಳಿಗೂ ಟ್ವೀಟ್ ಮಾಡುವ ಪ್ರಧಾನಿಗೆ ಪುನಾದಲ್ಲಿ ಸ್ಕಲ್ ಕ್ಯಾಪ್ ಹಾಕಿಕೊಂಡು ಸಂಜೆಯ ಪ್ರಾರ್ಥನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕನನ್ನು ಕೆಲ ಹುಡುಗರು ನಡುಬೀದಿಯಲ್ಲಿಯೇ ಹೊಡೆದು ಸಾಯಿಸಿದ ಘಟನೆಗೆ ಪ್ರತಿಕ್ರಿಯಿಸಬೇಕು ಎನಿಸುವುದೇ ಇಲ್ಲ. ಮುಜಾಫರ್ ನಗರದ ಗಲಭೆಗಳು ನೆನಪಾಗುವುದೇ ಇಲ್ಲ. ಅಕ್ಷರಶಃ ಒಂದು ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯ ಈ ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಪ್ರಧಾನಿಯ ಆಳ್ವಿಕೆಯಲ್ಲಿ, ಅಭದ್ರತೆಗೆ ಒಳಗಾಗುವುದು ಸಹಜ ತಾನೆ?

ಈ ಮಧ್ಯೆ ಪ್ರಗತಿಪರರು ಎನಿಸಿಕೊಂಡು ಅಲ್ಟಸಂಖ್ಯಾತರ ಸಖ್ಯಗಳಿಸಿದ್ದ ಅನೇಕರು, “ನೋಡಿ ಮೋದಿ, ಚುನಾವಣೆ ಘೋಷಣೆ ಆದಾಗಿನಿಂದಲೂ ಒಮ್ಮೆಯೂ ಧರ್ಮ, ಕೋಮು, ಹಿಂದೂ ರಾಷ್ಟ್ರ..ಎಂದೆಲ್ಲಾ ಮಾತನಾಡಲೇ ಇಲ್ಲ…” ಎಂದು ನಮೋ ನಾಮವನ್ನು ಜಪಿಸಲು ಆರಂಭಿಸದರು. ಆದರೆ ಬಹುಸಂಖ್ಯಾತ ಹಿಂದೂಗಳ ಶ್ರದ್ಧಾ ಕೇಂದ್ರವಾದ ವಾರಣಾಸಿಯನ್ನು ತನ್ನ ಕ್ಷೇತ್ರವನ್ನಾಗಿ ಆರಿಸಿಕೊಳ್ಳುವ ಮೂಲಕ ದೇಶಾದ್ಯಂತ ತಾನು ಬಯಸುತ್ತಿರುವುದು ಧರ್ಮದ ಆಧಾರದ ಮೇಲಿನ ಮತ ವಿಭಜನೆಯನ್ನು ಎಂದು ತುಂಬಾ ನಯವಾಗಿ ಸಾರಿದ್ದ. guj-violence(ಇದು ಕೂಡ, ದಿನೇಶ್ ಅಮಿನ್ ಮಟ್ಟು ಅವರು ತಮ್ಮ ಒಂದು ಭಾಷಣದಲ್ಲಿ ಹೇಳಿದ್ದು). ಜೊತೆಗೆ ನಿಲ್ಲಬಹುದಾಗಿದ್ದ ಸೋಕಾಲ್ಡ್ ಪ್ರಗತಿಪರರು ದೂರವಾಗುತ್ತಿದ್ದಾರೆ ಎಂದೆನಿಸಿದಾಗ ಅಭದ್ರತೆ ಜೊತೆಗೆ ಒಂಟಿತನ ಕೂಡಾ ಕಾಡುತ್ತದೆ.

ಇನ್ನು ಮಾಧ್ಯಮಗಳಂತೂ (ಕೆಲವನ್ನು ಹೊರತುಪಡಿಸಿ) ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಸದಬುಟ್ಟಿಗೆ ಹಾಕಿ ಗದ್ದುಗೆ ಹಿಡಿದವರ ಚಾಕರಿಗೆ ನಿಂತಿವೆ. ಹಾಗಾದರೆ, ಇವರ ದನಿ ಉಡುಗದೆ ಇನ್ನೇನು ಮಾಡೀತು? ಬುರ್ಖಾ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಅಲ್ಟಸಂಖ್ಯಾತ ಸಮುದಾಯದ ಸ್ನೇಹಿತನ ಪ್ರಶ್ನೆ ಮಾಡಿ, ಆತನಲ್ಲಿರಬಹುದಾದ ಮೂಲಭೂತವಾದಿ ಮೌಲ್ಯಗಳನ್ನು ಬಹಿರಂಗಗೊಳಿಸಿ ಸಾಧಿಸುವುದೇನೂ ಇಲ್ಲ. ಈ ದೇಶದ ಬಹುಸಂಖ್ಯಾತ ಸಮುದಾಯವಾಗಿದ್ದರೂ, ಅಕ್ಷರ ಜ್ಞಾನ, ಉದ್ಯೋಗ, ಸಂಪಾದನೆ ಎಲ್ಲದರಲ್ಲೂ ಮುಂದೆ ಇದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ಸಮಾಜ ಸುಧಾರಕರು ಅನಾದಿ ಕಾಲದಿಂದ ಆಗಾಗ ಬಂದು ಬುದ್ಧಿವಾದ ಹೇಳಿದ್ದರೂ ಇಂದಿಗೂ ಹಿಂದೂಗಳು ಅಸ್ಪೃಶ್ಯತೆಯನ್ನು ಜಾರಿಯಲ್ಲಿಟ್ಟುಕೊಂಡೇ ಇದ್ದಾರಲ್ಲ. ಮೊನ್ನೆ ಮೊನ್ನೆ ತನಕ (ಕೆಲವು ದಶಕಗಳ ಹಿಂದಿನ ತನಕ), ಈ ಸಮುದಾಯದಲ್ಲಿ ಸತೀ ಪದ್ಧತಿ ಜಾರಿಯಲ್ಲಿತ್ತಲ್ಲ! (ಉರಿವ ಬೆಂಕಿಯಲ್ಲಿ ಜೀವಂತವಾಗಿ ಸುಡುವ ದೃಶ್ಯ ಕಲ್ಪಿಸಿಕೊಂಡರೆ ಎದೆ ಝಲ್ ಎನ್ತುತ್ತದೆ.) ಅವರೇ ಇನ್ನೂ ಸುಧಾರಣೆ ಆಗಿಲ್ಲ.

ಹಾಗಂತ ತನ್ನ ತಟ್ಟೆಯಲ್ಲಿ ಸತ್ತ ಕತ್ತೆಯನ್ನಿಟ್ಟುಕೊಂಡು, ಪಕ್ಕದವರ ಎಲೆಯಲ್ಲಿರುವ ನೊಣದ ಬಗ್ಗೆ ಮಾತನಾಡಬಾರದು ಎಂದಲ್ಲ. ಇಷ್ಟೆಲ್ಲಾ ದಾರ್ಶನಿಕರು ಬಂದು ಹೋದನಂತರವೂ ಕತ್ತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲದಿರುವಾಗ, ಅಂತಹ ಸುಧಾರಣೆಯ ಪ್ರಕ್ರಿಯೆಗಳು ಕಾಲಕಾಲಕ್ಕೆ ನಡೆಯದೆ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕಾಗುತ್ತದೆ. ನಿನಗಾದರೂ ಊಟಮಾಡಲು ತಟ್ಟೆ ಸಿಕ್ಕಿದೆ ಪಕ್ಕದವನಿಗೆ ಇನ್ನೂ ಎಲೆಯೇ ಗತಿ ಎಂದು ತಿಳಿಯಬೇಕಲ್ಲ.

ಬದಲಾವಣೆ ಸಾಧ್ಯವೇ ಇಲ್ಲ ಎಂದೇನಲ್ಲ. ಸತಿ ಪದ್ಧತಿ ನಿಂತಿರುವುದು ಬದಲಾವಣೆ ಸಾಧ್ಯ ಎನ್ನಲು ಒಂದು ಉದಾಹರಣೆ. Manual-scavengingಅದೇ ರೀತಿ, ಕೆಲವು ಆಚರಣೆ, ಸಂಪ್ರದಾಯಗಳ ಹಾಗೂ ಕೆಲವು ಸಮುದಾಯಗಳ ವಿಚಾರದಲ್ಲಿ ಹೆಚ್ಚು ಸಮಯ ಬೇಕಾಗಬಹುದು. ಅದಕ್ಕೆ ವಿಚಾರವಂತಿಕೆ, ಶಿಕ್ಷಣ, ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ವೈಜ್ಞಾನಿಕ ಆಲೋಚನ ಕ್ರಮ ಎಲ್ಲವೂ ಕಾರಣ. ಇವೆಲ್ಲವೂ ಹೇರಳವಾಗಿರುವ ಜಾತಿಯ ಮನೆಗಳಲ್ಲಿಯೇ ಇನ್ನೂ ಬದಲಾವಣೆ ಆಗಿಲ್ಲ. ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿ ಕೆಲ ಮುಂದುವರಿದ (ಸಾಮಾಜಿಕ ಮತ್ತು ಆರ್ಥಿಕವಾಗಿ) ಜಾತಿಗಳ, ಉಪಜಾತಿಗಳ ಗುಂಪುಗಳು ಚಾಲ್ತಿಯಲ್ಲಿರುವುದು ಇದಕ್ಕೆ ಸಾಕ್ಷಿ.

ಅಭದ್ರತೆ ಕಾಡಬಹುದಾದ ಯಾವ ಸನ್ನಿವೇಶ ಇಲ್ಲದಿದ್ದರೂ, ಮುಂದುವರಿಗೆ ಸಮುದಾಯದವರು ತಮ್ಮ ಐಡೆಂಟಿಟಿಗಾಗಿ ಒಂದು ಜಾತಿಯ ಹೆಸರಿನಲ್ಲಿ ಗುಂಪುಗೂಡುವುದು ಸಾಮಾನ್ಯವಾಗಿರುವಾಗ, ತೀವ್ರ ಅಭದ್ರತೆಯಿಂದ ಬಳಲುತ್ತಿರುವ ಸಮುದಾಯಗಳಿಗೆ ಹೆಚ್ಚೆಚ್ಚು ಸಂಘಟಿತರಾಗುವುದು ಅನಿವಾರ್ಯವಾಗಿ ಕಾಣಬಹುದು. ಹೀಗೆ ರೂಪ ಪಡೆದುಕೊಂಡ ಗುಂಪುಗಳಿಗೆ, ಸಮಾಜ, ಧರ್ಮ, ಸಂಪ್ರದಾಯದ ಸುಧಾರಣೆಗಿಂತ ತಮ್ಮ ಮುಂದಿನ ಜನಾಂಗದ ಭದ್ರತೆ ಹೆಚ್ಚು ಮುಖ್ಯವಾಗುತ್ತದೆ. ಆ ಕಾರಣಕ್ಕಾಗಿಯೇ ಅವರಿಗೆ ಬುರ್ಖಾದ ವಿವಾದಕ್ಕಿಂತ ಶಿಕ್ಷಣ ಬೇಕು, ಉದ್ಯೋಗ ಬೇಕು, ಆಶ್ರಯಕ್ಕೆ ಮನೆ ಬೇಕು ಎಂದು ವಾದ ಮುಂದಿಡುತ್ತಾರೆ. ಅವೆಲ್ಲವೂ ದಕ್ಕದ ತನಕ ಧಾರ್ಮಿಕ ಸುಧಾರಣೆ ಬಗ್ಗೆ ಚಿಂತಿಸಲು ಸಾಧ್ಯವಾಗದೇ ಹೋಗಬಹುದು. ಒಟ್ಟಿನಲ್ಲಿ ಇದು ಆಗುವ ಪ್ರಕ್ರಿಯೆ. ಮಾಗುವ ಪ್ರಕ್ರಿಯೆ. ಅಷ್ಟೆ. ಇಲ್ಲಿ ಗುರಿ ಎನ್ನುವುದು ಇರುವುದಿಲ್ಲ. ಕೆಲವರು ಸ್ವಲ್ಪ ಮುಂದೆ ಇರಬಹುದು. ಮುಂದೆ ಸಾಗಿರುವವರು ಹಿಂದಿನವರನ್ನು ನೋಡಿ ನೀನಿನ್ನೂ ಅಲ್ಲಿಯೇ ಇದೀಯಲ್ಲ ಎಂದು ಮೂದಲಿಸುವುದಕ್ಕಿಂತ, ಆದಷ್ಟು ಬೇಗೆ ನನ್ನೊಂದಿಗೆ ಬಾ ಎಂದು ಉತ್ತೇಜಿಸಬೇಕಷ್ಟೆ.

3 thoughts on “ಬುರ್ಖಾ ಚರ್ಚೆ: ಸುಧಾರಣೆ ಅನ್ನೋದು ನಿರಂತರ ಆಗುವ ಪ್ರಕ್ರಿಯೆ…

 1. Mahesh

  ಪ್ರತಿಶತ ೯೭ ರಷ್ಟು ಮುಸ್ಲಿಮರೇ ತುಂಬಿರುವ ಟರ್ಕಿ ದೇಶದಲ್ಲಿ ೧೯೨೩ ರಲ್ಲೇ ಕಾನೂನಿನ ಮುಖಾಂತರ ಬುರ್ಖಾ ನಿಷೇಧ ಮಾಡಲಾಯಿತು. ಇದರಿಂದಾಗಿ ಆ ದೇಶದ ಮಹಿಳೆಯರ ಸ್ಥಿತಿಗತಿಯಲ್ಲಿ, ಸಾಮಾಜಿಕ ಸ್ಥಿತಿಯಲ್ಲಿ, ಇಸ್ಲಾಂ ಧರ್ಮದ ಅಸ್ತಿತ್ವದಲ್ಲಿ ಯಾವ ಬದಲಾವಣೆಗಳಾದವು ಎನ್ನುವುದನ್ನು ಪರೀಕ್ಷಿಸುವುದು ಒಳಿತು. ಬುರ್ಖಾ ನಿಷೇಧದಿಂದ ಆ ದೇಶದ ಮಹಿಳೆಯರ ಸ್ಥಿತಿಗತಿಗಳಲ್ಲಿ ಒಳ್ಳೆಯದಾಗಿದೆಯೇ ಅಥವಾ ಕೆಟ್ಟದಾಗಿದೆಯೇ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಪರೀಕ್ಷಿಸಿ. ಜಗತ್ತಿನ ಬಹಳ ಕಡೆಯಲ್ಲಿರುವ ಮುಸ್ಲಿಮರಂತೆ ಟರ್ಕಿ ದೇಶದ ಮುಸ್ಲಿಮರೂ ಅಭದ್ರತೆಯ ಭಾವನೆ ಹೊಂದಿದ್ದಾರೆಯೇ ? ಟರ್ಕಿ ದೇಶದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳೆಷ್ಟು ?

  Reply
 2. Salam Bava

  ಅಮೀನರ ಭಾಷಣದ ಅನಂತರ ಕೆಲವಾರು ಪ್ರತಿಕಿಯೆ – ಅತಿಕ್ರಿಯೆ ಎಲ್ಲಾ ಬರುತ್ತಾ ಇದೆ . ಶರಣ್ ಮತ್ತು ಕುಕ್ಕಿಲರವರು ಮಾತ್ರ ನನಗೆ ತಿಳಿದ ಮಟ್ಟಿಗೆ ಅತ್ಯಂತ ವಸ್ತು ನಿಷ್ಠ ವಾಗಿ ಪ್ರತಿಕಯಿಸಿದ್ದಾರೆ. ಒಬ್ಬರಂತೂ ತುರ್ಕಿಯನ್ನು ತುರುಕ್ಕಿದ್ದಾರೆ . ಕರಾವಳಿಯ ಮುಸಲ್ಮಾನರ ತಲ್ಲಣಕ್ಕೂ ತುರುಕರಿಗೂ ಎತ್ತಣ ಸಂಭಂದ ?ಅದೂ ಸಹಾ ಅವರು update ಆಗದೆ ೧೦ ವರ್ಷದ ಹಿಂದಿನ ಸುದ್ದಿಯನ್ನು ತೇಲಿ ಬಿಟ್ಟೀದ್ದಾರೆ . ಶರಣ್ ರವರ ಲೇಖನ ಅವರು ಮುಸ್ಲಿಮರ ಕುರಿತಾಗಿ ತುಂಬಾ study ಮಾಡಿ ಸಿದ್ದ ಪಡಿಸಿದ ಹಾಗಿದೆ. ಇನ್ನು ಒಬ್ಬ ಮರಿ ಸಾಹಿತಿ ತಾನೂ ಮುಂದಿನ ಬೊಳುವಾರು ,ರಹಮತ್ ,ಅಥವ ಕಟ್ಪಾಡಿ ಆಗಬೇಕೆಂಬ ಹುಮ್ಮಸ್ಸಿನಲ್ಲಿ ತಮ್ಮ ಸಮುದಾಯದ ಕುರಿತು ಚರ್ವಿತ ಚರ್ವಣ ವನ್ನೇ ಬಡಿಸುತ್ತಾರೆ ,ಅವರಿಗೇ ಕೆಲವರು ಜೈ ಹಾಕಿದಾಗ ಇನ್ನೂ ಉಬ್ಬಿ ಮತ್ತೆ ಸವಕಲು ನಾಣ್ಯದ ಚಲಾವಣೆಗೆ ಮುಂದಾಗುತ್ತಾರೆ . ಒಬ್ಬ ಲೇಖಕ ,ಒಬ್ಬ ಒಳ್ಳೆಯ ಓದುಗನಾಗಿರಬೇಕು . ಷೇಕ್ಸಪಿಯರ್ ,ಕಾಮುವಿನಿಂದ ಹಿಡಿದು ಎಲ್ಲಾ ಭಾರತೀಯ ಸಾಹಿತ್ಯವನ್ನು ಅಭ್ಯ್ಯಸಿಸಬೇಕು . ಇಲ್ಲವಾದರೆ ಇಂಥಾ ರದ್ದಿಯೇ ಗತಿ .
  ಪ್ರಖ್ಯಾತ ಲೇಖಕ ,ಜಾ ತ್ಯಾತೀತವಾದಿ ಚಿಂತಕ ಹಸ್ಸನ್ ಸುರೂರು ರವರು INDIAS MUSLIM SPRING ಎಂಬ ತುಂಬಾ ಪುಸ್ತಕದಲ್ಲಿ ಭಾರತೀಯ ಮುಸ್ಲಿಮರ ನ್ಯೆಜ್ಯ ಜೀವನದ ಚಿತ್ರಣ ಕೊಟ್ಟಿದ್ದಾರೆ . ಅದನ್ನು ಓದಿದರೆ ನಮ್ಮ ಅರಿವು ಹೆಚ್ಚಾಗಬಹುದು !

  Reply
 3. ಮಹೇಶ

  ಸಲಾಮ್ ಬಾವಾರವರೇ, 1923 ರಲ್ಲಿ ಬುರ್ಖಾ ನಿಷೇಧ ಮಾಡಲಾದ ಟರ್ಕಿ ದೇಶದಲ್ಲಿ 2010 ರಲ್ಲಿ ಬುರ್ಖಾ ನಿಷೇಧವನ್ನು ವಾಪಸ್ ತೆಗೆದುಕೊಳ್ಳಲಾಯಿತು. ಟರ್ಕಿ ದೇಶದಲ್ಲಿ ಧಾರ್ಮಿಕ ಭಯೋತ್ಪಾದನಾ ಘಟನೆಗಳು ಬೆರಳೆಣಿಕೆಗೂ ಸಿಗದಷ್ಟು ವಿರಳವಾಗಿದೆ. ಇನ್ನು ಮಹಿಳೆಯರ ಸ್ವಾತಂತ್ರ್ಯ , ಡಾಮೆಸ್ಟಿಕ್ ವಯೋಲೆನ್ಸ್, ಸಾಕ್ಷರತೆ ಮೊದಲಾದವುಗಳನ್ನು ನಿರ್ಧರಿಸುವ ಹ್ಯೂಮನ್ ಡೆವಲಪ್ ಮೆಂಟ್ ಇಂಡೆಕ್ಸ್ 0.75 ರ ಆಸುಪಾಸು , ಅಂದರೆ ತಕ್ಕ ಮಟ್ಟಿಗೆ ಹೆಚ್ಚಿನ ಮಟ್ಟದಲ್ಲೇ ಇದೆ. ಬುರ್ಖಾ ನಿಷೇಧ ತೆರವುಗೊಳಿಸಿದ ನಂತರ ನಡೆಯುವ ಘಟನೆಗಳು ಈ ರೀತಿಯಲ್ಲಿ ಸಾಗುತ್ತಾ ಇವೆ.
  2012 ರಲ್ಲಿ ಗರ್ಭಪಾತ ಮತ್ತು ಸಿಸೇರಿಯನ್ ಗಳನ್ನು ನಿಷೇಧಿಸುವ ಮಾತನ್ನು ಟರ್ಕಿ ದೇಶದ ಪ್ರಧಾನಿಗಳು ಆಡುತ್ತಾರೆ
  http://www.reuters.com/article/2012/06/03/us-turkey-abortion-idUSBRE85207520120603

  2013 ರಲ್ಲಿ ಒಂದೇ ಹಾಸ್ಟೆಲ್ ನಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಿಗೆ ಇರುವುದನ್ನು ಟರ್ಕಿ ದೇಶದ ಪ್ರಧಾನಿಗಳು ಪ್ರಬಲವಾಗಿ ಟೀಕಿಸುತ್ತಾರೆ
  http://www.thedailybeast.com/witw/articles/2013/11/12/turkey-s-erdogan-condemns-coed-dormitories.html

  2014 ರಲ್ಲಿ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ನಗಬಾರದೆಂದು ಟರ್ಕಿಯ ಉಪ ಪ್ರಧಾನಿಗಳು ಅಪ್ಪಣೆ ಕೊಡಿಸುತ್ತಾರೆ.
  http://rt.com/news/176648-turkey-laughter-women-scandal/

  Reply

Leave a Reply to AndrewPap Cancel reply

Your email address will not be published.