ಅಭಿವೃದ್ಧಿ ಎನ್ನುವ ಮಿಥ್ ಮತ್ತು ಹಿಂದುತ್ವ ಎನ್ನುವ ವಾಸ್ತವ: ಇವೆರಡನ್ನೂ ಸಹಿಸಿಕೊಳ್ಳುತ್ತಿರುವ ಇಂಡಿಯಾ


– ಬಿ. ಶ್ರೀಪಾದ ಭಟ್


“ಐದು ದಶಕಗಳ ನಂತರ ಆರೆಸಸ್‌ಗೆ ಸಾವರ್ಕರ್ ಅವರ ಲೆಗಸಿಯನ್ನು ಮತ್ತೆ ಕೇಂದ್ರ ಸ್ಥಾನಕ್ಕೆ ತರುವ ಅವಕಾಶ ದೊರೆತಿದೆ. ಆದರೆ ಶೇಕಡಾ 80 ರಷ್ಟಿರುವ ಹಿಂದೂಗಳು ಈ ಹಿಂದೂ ಹಕ್ಕುಗಳ ಪಿತನನ್ನು ಸ್ವೀಕರಿಸುತ್ತಾರೋ ಅಥವಾ ತಿರಸ್ಕರಿಸುತ್ತಾರೋ? ಸಾಮಾನ್ಯ ಹಿಂದೂಗಳು ಸಾವರ್ಕರ್ ಅವರನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಾರೋ ಅಥವಾ ಸ್ವತಃ ಸಾವರ್ಕರ್ ಇತಿಹಾಸದ ಕತ್ತಲಲ್ಲಿ ಮಸುಕಾಗಿ ಕಾಣೆಯಾಗುತ್ತಾರೋ?

“ಇತ್ತೀಚೆಗೆ ನಾನು ನೋಡಿದ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಕೂರಿಸಿದ ಸಾವರ್ಕರ್ ಅವರ ಭಾವಚಿತ್ರವು ನೇರವಾಗಿ ಗಾಂಧಿಯ ಭಾವಚಿತ್ರವನ್ನು ದೃಷ್ಟಿಸುತ್ತಿರುವುದು ಕಂಡುಬಂತು. ಅದು ನನಗೆ ಹಿಂದ್ ಸ್ವರಾಜ್ ವಿರುದ್ಧ ಹಿಂದು ರಾಷ್ಟ್ರದ ರೂಪಕವಾಗಿಯೇ ಕಾಣಿಸುತ್ತಿತ್ತು.”

– ಅನನ್ಯ ವಾಜಪೇಯಿ

ಪ್ರತಿಯೊಬ್ಬ ಸೆಕ್ಯುಲರ್‌ವಾದಿಯು ತನ್ನದೇ ಆದ, ವ್ಯಕ್ತಿಗತವಾದ ಸೆಕ್ಯುಲರ್ ರಾಗದಲ್ಲಿ ತನ್ನ ಜೀವನಚರಿತ್ರೆಯನ್ನು ಹಾಡುತ್ತಿರುತ್ತಾನೆ ಎಂದು ಒಂದು ಕಡೆ ಶಿವ ವಿಶ್ವನಾಥನ್ ಬರೆಯುತ್ತಾರೆ. ಸ್ವತಃ ಹಿಂದೂ ಆದರೂ ತನ್ನ ಮನೆಯ ದೇವರ ಕೋಣೆಯಲ್ಲಿ ಬೈಬಲ್ ಅಥವಾ ಕುರಾನ್ ಅನ್ನು ಇಟ್ಟು ಪೂಜಿಸುವವನೂ ಒಬ್ಬ ಸೆಕ್ಯುಲರ್ ಎಂದು ಗುರುತಿಸಲ್ಪಡುತ್ತಾನೆ ಅಥವಾ ಹಾಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾನೆ. grass-map-indiaಮತ್ತೊಬ್ಬ ತನ್ನ ಸುತ್ತಲೂ ಮತೀಯವಾದ ತುಂಬಿದ್ದರೂ ತಾನು ಮಾತ್ರ ತನ್ನ ಸೆಕ್ಯುಲರ್ ತತ್ವಗಳನ್ನು ಬಿಡುವುದಿಲ್ಲ ಎಂದು ತನ್ನ ಸೆಕ್ಯುಲರ್ ತತ್ವವನ್ನು ಪ್ರತಿಪಾದಿಸುತ್ತಾನೆ ಎಂದು ಶಿವ ಹೇಳುತ್ತಾರೆ. ಇಲ್ಲಿನ ವೈಚಿತ್ರವೇನೆಂದರೆ ಖಾಸಗಿಯಾಗಿ ನನ್ನ ಬದುಕು ಎಷ್ಟರ ಮಟ್ಟಿಗೆ ಸೆಕ್ಯುಲರಿಸಂಗೆ ಹತ್ತಿರವಿದೆ ಮತ್ತು ಅಧಿಕೃತವಾಗಿ ಅಂದರೆ ಸಾರ್ವಜನಿಕವಾಗಿ ನಾನು ಹೇಗೆ ಸೆಕ್ಯುಲರ್ ಆಗಿ ಗುರುತಿಸಲ್ಪಡಲು ಬಯಸುತ್ತೇನೆ ಎನ್ನುವುದರ ಗ್ರಹಿಕೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಇವೆರೆಡೂ ಒಂದಕ್ಕೊಂದು ಹೇಗೆ ತಳುಕು ಹಾಕಿಕೊಂಡಿದೆ ಎನ್ನುವ ಗ್ರಹಿಕೆಯೂ ಕೂಡ. ಇಲ್ಲಿ ಅಧಿಕೃತವಾದ ಸಾರ್ವಜನಿಕವಾದ ಸೆಕ್ಯಲರಿಸಂ ನಿಜದ ಅರ್ಥದಲ್ಲಿ, ಎಲ್ಲವನ್ನೂ ಒಳಗೊಳ್ಳುವ ಆದರೆ ಸದಾ ಎಚ್ಚರದ ಸ್ಥಿತಿಯಲ್ಲಿ ಬಳಕೆಯಾಗದಿದ್ದರೆ ಅದು ಸೋತು ಹೋಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮೂಲಭೂತವಾದಿಗಳು, ಕೋಮುವಾದಿಗಳು ಬಹುಮತದಿಂದ ಅಧಿಕಾರಕ್ಕೆ ಬಂದಿರುವುದು ನಮ್ಮ ಕಣ್ಣೆದುರಿಗಿದೆ. ಎಡಪಂಥೀಯ ಒಲವುಳ್ಳ ಲೇಖಕರು, ಬುದ್ಧಿಜೀವಿಗಳು ವಿಜ್ಞಾನವನ್ನು ಕೇವಲ ಮೇಲ್ಮಟ್ಟದಲ್ಲಿ ಆಧರಿಸಿ ಚಿಂತಿಸಿದ ಸೆಕ್ಯುಲರಿಸಂನ ಬರಡುತನವೇ ಇದಕ್ಕೆ ಪೂರಕವಾಗಿ ಸಹಾಯ ಮಾಡಿವೆ ಎಂದು ಸೋಷಿಯಾಲಜಿಸ್ಟ್‌ಗಳು ಅಭಿಪ್ರಾಯ ಪಡುತ್ತಾರೆ. ಹಿಂದೂಯಿಸಂನ ಮೃದುತ್ವ, ಸಹನೀಯತೆ ಮಾಯವಾಗಿ ಹಿಂದುತ್ವದ ಫೆನಟಿಸಂ ಮೇಲುಗೈ ಸಾಧಿಸಲು ಕೇವಲ ಸಂಘಪರಿವಾರ ಮಾತ್ರವಲ್ಲ ಈ ಬರಡು ಸೆಕ್ಯುಲರಿಸಂ ಸಹ ಕಾರಣವೆಂದು ಅಭಿಪ್ರಾಯ ಪಡುತ್ತಾರೆ. ವಿಜ್ಞಾನವನ್ನು ಕೇವಲ ಅದರ ಪ್ರಸ್ತುತ ಸ್ವರೂಪದಲ್ಲಿರುವ ಮೆಥಡಾಲಜಿಯನ್ನಾಧರಿಸಿದ ಆಧ್ಯಯನಗಳ ಮೂಲಕ ಮಾತ್ರ ಅರಿತುಕೊಳ್ಳುವುದಲ್ಲ, ಜೊತೆಗೆ ಅದರ ಮೌನದ, ಮಾತನಾಡದ ಜ್ಞಾನವನ್ನೂ ಸಹ ಗ್ರಹಿಸಬೇಕೆಂದು ಶಿವ ಬರೆಯುತ್ತಾರೆ. ಹಾಗೆಯೇ ಸಾರ್ವಜನಿಕವಾಗಿ ಬಳಕೆಯಲ್ಲಿರುವ ನುಡಿಕಟ್ಟುಗಳ ಮೂಲಕ ಮಾತನಾಡುವುದು ಮಾತ್ರ ಸೆಕ್ಯುಲರಿಸಂ ಅನಿಸಿಕೊಳ್ಳುವುದಿಲ್ಲ. ಅದರ ಮೌನದ, ಮಾತನಾಡದ ಜ್ಞಾನವನ್ನೂ ಸಹ ಗ್ರಹಿಸಿದಾಗಲೇ ಇಡೀ ಸೆಕ್ಯುಲರಿಸಂನ ಅರ್ಥವಂತಿಕೆ ಜೀವಂತವಾಗಿರುತ್ತದೆ. ಅಲ್ಲಿ ನಮ್ಮ ವರ್ತನೆಗಳೇ ಮಾತನಾಡುತ್ತಿರುತ್ತವೆ. ಹೊಸ ವ್ಯವಸ್ಥೆಯನ್ನೇ ನಮಗರಿವಿಲ್ಲದಂತೆಯೇ ರೂಪಿಸುತ್ತಿರುತ್ತವೆ.

ಕೆಲವೇ ತಿಂಗಳುಗಳ ಹಿಂದೆ ಮೋದಿಯನ್ನು ಟೀಕಿಸಿದ ಸೆಕ್ಯುಲರ್ ಧ್ವ್ವನಿಗಳೇ ಇಂದು ಮೋದಿಯ ಪರವಾಗಿ ಪ್ರಶಂಸೆ ಮಾಡುತ್ತಿವೆ, ಮತ್ತು ಕುತೂಹಲವೆಂದರೆ ಹಿಂದೆ ಪ್ರಶಂಸಿಸುತ್ತಿದ್ದ ಬಲಪಂಥೀಯ ಧ್ವನಿಗಳು ಇಂದು ವಿಮರ್ಶೆ ಮಾಡುತ್ತಿವೆ. ಅನನ್ಯ ವಾಜಪೇಯಿ ಅವರು “ಇಂದು ಯಾರು ಸಂಘ ಪರಿವಾರದ ಪರ ಯಾರು ವಿರೋಧ ಎನ್ನುವ ಸ್ಪಷ್ಟತೆ ಕಾಣುತ್ತಿಲ್ಲ. ಇಂದು ನಿಜದ ಸುಧಾರಣಾವಾದಿಗಳು ಮತ್ತು ಸೆಕ್ಯುಲರ್‌ಗಳು ಮತ್ತು Advani-Rath-Yatraಮತೀಯವಾದಿ ಮತ್ತು ಬಹುಸಂಖ್ಯಾತ ತತ್ವವಾದಿಗಳ ನಡುವೆ ನೇರವಾದ ಮುಖಾಮುಖಿಯಾಗುವ ಕಾಲ ಬಂದಿದೆ” ಎಂದು ಹೇಳುತ್ತಾರೆ. ಇಂದು ಗುಜರಾತ್ ಹತ್ಯಾಕಾಂಡ ಹೆಚ್ಚೂ ಕಡಿಮೆ ಮರೆತು ಹೋಗಿದೆ. ಅದನ್ನು ಕುರಿತು ಮಾತನಾಡಿದಷ್ಟೂ ಇಂದು ನಮ್ಮ ಸೆಕ್ಯುಲರಿಸಂನ ಕ್ರೆಡಿಬಿಲಿಟಿ ಪ್ರಶ್ನಿಸಲ್ಪಡುತ್ತಿರುತ್ತದೆ. ಕೆಲವು ತಿಂಗಳುಗಳಷ್ಟು ಹಿಂದೆ ಮುಜಫರ್‌ನಗರದಲ್ಲಿ ನಡೆದ ಮತೀಯವಾದಿ ಹಿಂಸಾಚಾರ ಮತ್ತು ಜಾತಿ ಹಾಗು ಧರ್ಮಗಳ ಧೃವೀಕರಣ ಮತ್ತು ಇದರ ಅಪಾಯಕಾರಿ ಪರಿಣಾಮಗಳನ್ನು ಕುರಿತು ಇಂದು ಮಾತನಾಡಲು ಅವಕಾಶವೇ ಇಲ್ಲ. ಅದಕ್ಕೆ ವೇದಿಕೆಗಳೇ ಇಲ್ಲ. ಹೀಗೆಯೇ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮತೀಯವಾದಿ ಹಿಂಸಾಚಾರಗಳೂ ಕಾನೂನುಬದ್ಧವಾಗಿ ಶಿಕ್ಷೆಗೆ ಒಳಪಡುವದರಿಂದ ತಪ್ಪಿಸಿಕೊಳ್ಳುತ್ತಲೇ ಇರುತ್ತವೆ. ಕೆಲವೇ ತಿಂಗಳುಗಳಲ್ಲಿ ಅದು ಮುಗಿದ ಅಧ್ಯಾಯವಾಗಿ ಇತಿಹಾಸದ ಪುಟಗಳಲ್ಲಿ ಕರಗಿಹೋಗುತ್ತದೆ ಮತ್ತು ಅದರ ಕುರಿತು ಮಾತನಾಡಿದಷ್ಟೂ ಗೇಲಿಗೊಳಗಾಗುವುದಂತೂ ಗ್ಯಾರಂಟಿ. ಬರುವ ದಿನಗಳಲ್ಲಿ ಇದು ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ.

ಜಾಗತೀರಣದ ನಂತರ ಇಂಡಿಯಾದ ಸಾಮಾಜಿಕ-ರಾಜಕೀಯ ಚಿಂತನೆಗಳು ಮತ್ತು ಗ್ರಹಿಕೆಗಳು ವಿಚಿತ್ರ ರೀತಿಯ ಮಿಥ್‌ಗಳಿಗೆ ಬಲಿಯಾಗುತ್ತಿವೆ. ತೊಂಬತ್ತರ ದಶಕದಲ್ಲಿ ವಾಜಪೇಯಿಯವರು ಪಾರಿವಾಳದಂತೆ ಮತ್ತು ಅಡ್ವಾನಿ ಹದ್ದಿನಂತೆ ಗೋಚರಿಸಿದರೆ ಇಪ್ಪತ್ತೊಂದನೇ ಶತಮಾನದ ಹೊತ್ತಿಗೆ ಅಡ್ವಾನಿ ಪಾರಿವಾಳವಾಗಿ ಬದಲಾಗಿದ್ದರೆ ನರೇಂದ್ರ ಮೋದಿ ಹದ್ದಿನಂತೆ ಗೋಚರಿಸತೊಡಗಿದ್ದರು ಎಂದು ಪ್ರಮುಖ ಪತ್ರಕರ್ತ ಶಹಜತ್ ಬರೆದಿದ್ದರು. ಕೇವಲ ಒಂದು ದಶಕದ ನಂತರ ಇದೇ ಮೋದಿ ಪಾರಿವಾಳವೆಂದು ಪ್ರಶಂಸಿಸಲ್ಪಡುತ್ತಿದ್ದಾರೆ. ಎಂತಹ ಮಿಥ್‌ಗಳ, ಭ್ರಮೆಗಳ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ ಎಂದರೆ Manufacturing Consent ಎನ್ನುವ ಸಿದ್ಧಾಂತಕ್ಕೆ ನಾವಾಗಲೇ ಒಳಗಾಗಿಯೇ ವರ್ತಿಸತೊಡಗಿದ್ದೇವೆ. ದಿನನಿತ್ಯ ನಮ್ಮ ಒಪ್ಪಿಗೆಗಳು, ಅನುಮತಿಗಳನ್ನು ತಯಾರಿಸಿ ಕೊಡಲಾಗುತ್ತಿದೆ. ನಾವು ಅದನ್ನು ಗಿಳಿ ಪಾಠದಂತೆ ಒಪ್ಪಿಸುತ್ತಿದ್ದೇವೆ. ಬಡವರನ್ನು ಸುಲಿದು ಶ್ರೀಮಂತರಿಗೆ ಹಂಚುತ್ತಿರುವ ನರೇಂದ್ರ ಮೋದಿಯ ಕ್ರೌರ್ಯದ ಮನಸ್ಥಿತಿಯ ಈ ನವ ಉದಾರೀಕರಣದ ಮಾಡೆಲ್‌ನ ಅನುಮೋದನೆಯ ಪ್ರತೀಕವಾಗಿಯೇ ಇಡೀ ದೇಶವೂ ಚಿಂತಿಸುತ್ತಿದೆ ಎನ್ನುವುದು ಕೇವಲ ಮಿಥ್ ಮಾತ್ರವಲ್ಲ ಅದು Manufacturing Consent ಎನ್ನುವ ಸಿದ್ಧಾಂತದ ವ್ಯವಸ್ಥೆ ಜಾರಿಗೊಂಡಿದೆ ಎಂದರ್ಥ. ಇಲ್ಲಿ ಸರ್ವಾಧಿಕಾರದ ಆಡಳಿತದಲ್ಲಿ ಹಿಂಸೆಯ ಮೂಲಕ ಏನನ್ನು ಸಾಧಿಸಲಾಗುತ್ತದೆಯೋ ಅದನ್ನು ಪ್ರಜಾಪ್ರಭುತ್ವದ ಸಂದರ್ಭದಲ್ಲಿ ನಿರಂತರವಾದ ವ್ಯಾಪಕ ಪ್ರಚಾರದ ಮೂಲಕ, ಮರೀಚಿಕೆಗಳ ಮೂಲಕ ಸಾಧಿಸಲಾಗುತ್ತದೆ. ಏಕೆಂದರೆ ಇಂದು ಇದನ್ನು ಮೋದಿಯ ಮಾದರಿ ಎಂದೇ ಜನಪ್ರಿಯಗೊಳಿಸಲಾಗಿದೆ ನಮ್ಮ ಒಪ್ಪಿಗೆಯನ್ನೂ ತಯಾರಿಸುವುದರ ಮೂಲಕ. ಗುಜರಾತ್‌ನಲ್ಲಿ ಪ್ರಯೋಗಗೊಂಡ ಈ ಮಾಡಲ್ ಇಡೀ ದೇಶಕ್ಕೆ ಅನ್ವಯಗೊಳ್ಳಲಿದೆ manufacturing consent ನ ಮೂಲಕ. ಇದರ ಪ್ರಕಾರ ವಿವಿಧ ರೀತಿಯ ಭಿನ್ನಮತೀಯ ಧ್ವನಿಗಳನ್ನು ಕೇಳಿಸಿಕೊಳ್ಳುವುದಿಲ್ಲ. ಸರ್ವಾಧಿಕಾರದ ಆಡಳಿತದಲ್ಲಿ ಈ ಧ್ವನಿಗಳನ್ನು ಹತ್ತಿಕ್ಕಲಾಗುತ್ತದೆ ,ಆದರೆ ಪ್ರಜಾಪ್ರಭುತ್ವದಲ್ಲಿ ಈ ಧ್ವನಿಗಳನ್ನು ಸಂಪೂರ್ಣವಾಗಿ ಅಲಕ್ಷ ಮಾಡಲಾಗುತ್ತದೆ ಮತ್ತು ಸಂವಾದಗಳ ಅಳತೆಯನ್ನು ಮಿತಿಗೆ ಒಳಪಡಿಸಲಾಗುತ್ತದೆ. ಯಾವ ಪ್ರಮುಖವಾದ, ಪ್ರಚಲಿತ ಗಂಭೀರ ಸಂಗತಿಗಳ ಕುರಿತಾಗಿ ಜನರು ಚಿಂತಿಸಬೇಕಾಗುತ್ತದೆಯೋ (ಕೋಮುವಾದ, ಮತೀಯವಾದ, ಜಾತೀಯತೆ, ಇತ್ಯಾದಿ) ಅವುಗಳಿಂದಲೇ ಜನರ ಗಮನವನ್ನು ಬೇರೆಡೆ ಸೆಳೆದುಬಿಡುತ್ತಾರೆ.

ಉದಾಹರಣೆಗೆ ಪ್ರಧಾನಿಯಾಗಿ ತಮ್ಮ ಮೊದಲ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತmodi_amit_shah ಮೋದಿ “ಭಾರತ ದೇಶವು ತನ್ನ 1200 ವರ್ಷಗಳ ಗುಲಾಮಗಿರಿಯಿಂದ ಹೊರಬರಬೇಕು” ಎಂದು ಹೇಳುತ್ತಾರೆ. ಅಂದರೆ 200 ವರ್ಷಗಳ ಬ್ರಿಟೀಷರ ಆಡಳಿತ ಮತ್ತು 1000 ವರ್ಷಗಳ ಮಧ್ಯಯುಗೀನ ಕಾಲದ ಮೊಗಲರ, ಬಹುಮನಿಗಳ, ಶಾಗಳ ಆಡಳಿತವನ್ನು ಸಹ ಈ ಗುಲಾಮಗಿರಿಯಲ್ಲಿ ಸೇರಿಸುತ್ತಾರೆ. ಚುನಾವಣಾ ಗೆಲುವಿನ ನಂತರ ಈ ಮತೀಯವಾದದ ಕುರಿತಾಗಿ ಮೌನವಾಗಿರುವ ಮೋದಿ ತಮ್ಮ ಪ್ಲಾನ್ “ಎ” ನಲ್ಲಿ ಬಂಡವಾಳಶಾಹಿ ಆಧಾರಿತ ಆರ್ಥಿಕ ನೀತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಒಂದು ವೇಳೆ ಇದು ನಿರೀಕ್ಷಿತ ಯಶಸ್ಸನ್ನು ಕೊಡದಿದ್ದ ಪಕ್ಷದಲ್ಲಿ ತಮ್ಮ ಹಳೆಯದಾದ ಹಿಂದುತ್ವ, ಮತೀಯವಾದ ಎನ್ನುವ ಪ್ಲಾನ್ “ಬಿ” ಬಿಡುಗಡೆ ಮಾಡುತ್ತಾರೆ ಎಂದು ರಾಜಕೀಯ ವಿಜ್ಞಾನಿ ಕ್ರಿಸ್ಟೋಫರ್ ಜೆಫರಲಾಟ್ ಹೇಳುತ್ತಾರೆ. (ಮೊನ್ನೆ ನಡೆದ ಉಪ ಚುನಾವಣೆಗಳಲ್ಲಿ ಸೋಲುಂಡ ಬಿಜೆಪಿ ಈಗ ಪ್ಲಾನ್ ‘ಬಿ’ ಬಿಡುಗಡೆ ಮಾಡಬಹುದು. ಆದರೆ ಪ್ಲಾನ್ ‘ಬಿ’ ಕಾರಣದಿಂದಲೇ ಈ ಉಪಚುನಾವಣೆಗಳನ್ನು ಸೋತಿದ್ದು ಎಂದು ಬಿಜೆಪಿಗೆ ಮನವರಿಕೆಯಾದರೆ??)

ಬೆಳಗಿನ ಹೊತ್ತು ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ‘ಎಲ್ಲರ ಜೊತೆ, ಎಲ್ಲರ ವಿಕಾಸ’ ಎನ್ನುವ ಹೇಳಿಕೆಗಳನ್ನು ಕೊಡುತ್ತಾ ಜನಪ್ರಿಯರಾಗುತ್ತಿದ್ದರೆ ಸಂಘ ಪರಿವಾರ ಮತ್ತೊಂದು ಕಡೆ ಬಹುಸಂಖ್ಯಾತ ತತ್ವವನ್ನು ಉಗ್ರವಾಗಿ ಪ್ರತಿಪಾದಿಸುತ್ತಿದೆ, ಪ್ರತಿಯೊಂದು ರಾಜ್ಯಗಳಲ್ಲಿಯೂ ಅಲ್ಪಸಂಖ್ಯಾತರ ನಡುವೆ ಆಭದ್ರತೆಯನ್ನು ಹುಟ್ಟು ಹಾಕುತ್ತಿದೆ. ಧರ್ಮಗಳ, ಜಾತಿಗಳ ಧೃವೀಕರಣದ ಮುಜಫರ್ ನಗರದ ಮಾಡೆಲ್ ಇನ್ನಿತರ ರಾಜ್ಯಗಳಿಗೂ ವಿಸ್ತರಿಸಲಾಗುತ್ತಿದೆ. ಇದರ ನೇತೃತ್ವವನ್ನು ಸಹಜವಾಗಿಯೇ ಹಿಂದೂ ಮತ್ತು ಮುಸ್ಲಿಂ ನಡುವಿನ ಪಂದ್ಯದ ನುರಿತ, ಶ್ರೇಷ್ಠ ಆಟಗಾರ ಅಮಿತ್ ಷಾ ವಹಿಸಿಕೊಂಡಿದ್ದಾನೆ. ಸಂಘ ಪರಿವಾರದ ಮುಖಂಡನೊಬ್ಬ “ಇಂದು ಕಾಲ ಬದಲಾಗಿದೆ. ಮುಸ್ಲಿಂರು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಅವರಿಗೆ ಕೊಡುತ್ತಿದ್ದ ಮುಂಚಿನ ಸವಲತ್ತುಗಳು ಇನ್ನು ದೊರಕುವುದಿಲ್ಲ. ಇನ್ನು ಮುಂದೆ ಅವರು ಹಿಂದೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು” ಎಂದೇ ಎಚ್ಚರಿಸುತ್ತಾನೆ ಮತ್ತು ಇದು ಸಂಘ ಪರಿವಾರದ ಒಟ್ಟು ಭಾಷೆಯೂ ಹೌದು. ಮತ್ತು ಇಂದು ಸಂಘ ಪರಿವಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಅದರ ನಾಯಕ ಮೋದಿ “ಸಂಪೂರ್ಣ ಆಡಳಿತ, ಎಲ್ಲರ ವಿಕಾಸ” ಎಂದು ಹೇಳುತ್ತಾ, ಅಭಿವೃದ್ಧಿಯೇ ನಮ್ಮ ಮಾದರಿ ಎಂದು ಪ್ರತಿಪಾದಿಸುತ್ತಾರೆ. ಆದರೆ ತನ್ನದೇ ಸಂಘ ಪರಿವಾರದ ಹಿಂದುತ್ವದ ಪುನುರುಜ್ಜೀವನದ ಕುರಿತಾದ ಚಟುವಟಿಕೆಗಳನ್ನು ಟೀಕಿಸುವುದಿಲ್ಲ. ನಿಗ್ರಹಿಸುವುದಿಲ್ಲ. ಇದು ಪ್ಲಾನ್ ‘ಎ’ ಮತ್ತು ಪ್ಲಾನ್ ‘ಬಿ’ ಅನ್ನು ಸಮತೋಲನದಲ್ಲಿ ಕಾಯ್ದುಕೊಂಡುಬರುವ ಕಾರ್ಯಸೂಚಿಗಳು.

ಪ್ಲಾನ್ ‘ಬಿ’ಯಂತೆ ಆರೆಸಸ್‌ನ ಅಂಗ ಸಂಸ್ಥೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಯ ಅಧ್ಯಕ್ಷರಾದ ವೈ.ಸುದರ್ಶನ ರಾವ್ ಅವರನ್ನು Indian Council of Historical Research (ಐಸಿಎಚ್‌ಆರ್) ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅಧಿಕಾರ ವಹಿಸಿಕೊಂಡ ಮೊದಲನೇ ದಿನವೆ ಸುದರ್ಶನ್ ರಾವ್ ಹೇಳಿದ್ದು: “ಭಾರತದ ಇತಿಹಾಸವನ್ನು ನಾವು ಪುನರಚಿಸಲಿದ್ದೇವೆ.” ಮುಂದುವರೆದು ಈ ಸುದರ್ಶನ ರಾವ್ ಅವರು ‘ಈ ಸತ್ಯ ಸಂಗತಿಗಳನ್ನು ಬಯಲಿಗೆಳೆಯಲು ಮಹಾಭಾರತ ಮತ್ತು ರಾಮಾಯಣಗಳನ್ನು ಆಧಾರವಾಗಿ ಸಂಶೋಧನೆಗೆ ಬಳಸಿಕೊಳ್ಳಲಾಗುವುದು. ಇವೆರೆಡೂ ನಮಗೆ ಅಕರ ಗ್ರಂಥಗಳು’ ಎಂದು ಹೇಳಿದ್ದಾರೆ. ಇವರು ‘ನಾವು ಭಾಷೆ, ಸಂಸ್ಕೃತಿ, ಅವೈದಿಕತೆಯ ಆಚರಣೆಗಳು ಮತ್ತು ಇತಿಹಾಸಕ್ಕೆ ಗಮನವನ್ನು ಕೊಡುವುದಿಲ್ಲ. ಬದಲಾಗಿ ಆರ್ಯ ಸಂಸ್ಕ್ರತಿಯ ಕಾಲಘಟ್ಟವನ್ನು ಪ್ರಮುಖವಾಗಿ ಪರಿಗಣಿಸುತ್ತೇವೆ’ ಎಂದೇ ಹೇಳುತ್ತಾರೆ.

ಇಂದು ಸಂಘ ಪರಿವಾರವು ಇಂಡಿಯಾ ದೇಶವು ಮತ್ತೇನಲ್ಲದೆ ಹಿಂದೂ ದೇಶ ಎಂದು ಬಹಿರಂಗವಾಗಿಯೇ ಹೇಳಿಕೆಗಳನ್ನು ಕೊಡುತ್ತಿದೆ. bhagvat-gadkari-modiಅದರ ಮುಖ್ಯಸ್ಥ ಭಾಗವತ್ “ಹಿಂದುಸ್ತಾನವನ್ನು ಹಿಂದೂ ರಾಷ್ಟ್ರವೆಂದೇ ನೋಡಬೇಕು” ಎಂದು ಆದೇಶ ಕೊಡುತ್ತಾರೆ.ಅದನ್ನು ಸಮರ್ಥಿಸುವಂತೆಯೇ ಅಲ್ಪಸಂಖ್ಯಾತ ಖಾತೆಯ ನಜ್ಮಾ ಹೆಫ್ತುಲ್ಲ ಮಾತನಾಡುತ್ತಾರೆ. (ನಂತರ ಅದನ್ನು ನಿರಾಕರಿಸುತ್ತಾರೆ, ಅದು ಬೇರೆ ವಿಷಯ.) ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ದಿನನಿತ್ಯ ಮತೀಯವಾದಿ ಹೇಳಿಕೆಗಳನ್ನು ಕೊಡುತ್ತ ಬಹುಸಂಖ್ಯಾತರಲ್ಲಿ ಜನಪ್ರಿಯನಾಗುತ್ತಿದ್ದಾನೆ. (ಓದಿ ಲೇಖನ- ಬಹುಸಂಖ್ಯಾತ ತತ್ವ) ಆಸ್ತಿತ್ವದಲ್ಲೇ ಇಲ್ಲದ ’ಲವ್ ಜಿಹಾದ್’ ಮರುನವೀಕರಣಗೊಳ್ಳುತ್ತಿದೆ. ಮತ್ತೊಬ್ಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸಂವಿಧಾನದ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ ನೇರವಾಗಿ ಮುಸ್ಲಿಂ ಧರ್ಮದ ಮೇಲೆ ಅಪಾದನೆ ಮಾಡುತ್ತಾ ಮದರಸಾಗಳು ಭಯೋತ್ಪಾನೆ ಮತ್ತು ಲವ್ ಜಿಹಾದ್‌ಗಳಿಗೆ ತರಬೇತಿ ಕೊಡುತ್ತಿವೆ ಎಂದು ಬೇಜವಬ್ದಾರಿಯಿಂದ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಗೃಹಮಂತ್ರಿ ರಾಜನಾಥ್ ಸಿಂಗ್ ಇದರ ಕುರಿತಾಗಿ ಮುಗ್ಧತೆ ವ್ಯಕ್ತಪಡಿಸಿದ್ದಾರೆ. (ಅದರೆ ಈ ’ಲವ್ ಜಿಹಾದ್’ ಫೋಬಿಯಾ ಬಿಜೆಪಿಗೆ ಸರಿಯಾಗಿಯೇ ತಿರುಗೇಟು ನೀಡಿದಂತಿದೆ. ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲುಂಡು ಮುಖಭಂಗ ಅನುಭವಿಸುತ್ತಿದೆ.) ಸಂಘ ಪರಿವಾರದ ವಕ್ತಾರರು “ಒಂದು ಧರ್ಮದ ವ್ಯಕ್ತಿ ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಅದನ್ನು ಕೇವಲ ಕಾಕತಾಳೀಯವೆಂದು ತಿಳಿದುಕೊಳ್ಳಬಾರದು, ಅದು ಅತ್ಯಂತ ಗಂಭೀರವಾದ ಸಂಗತಿ ಎಂದೇ ಪರಿಗಣಿಸಲಾಗುತ್ತದೆ” ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಮಾತ್ರಕ್ಕೆ ಅವರಿಗೆ ನಮ್ಮ ಮಹಿಳೆಯರನ್ನು ಮುಟ್ಟಬೇಕೆಂದು ಅವರಿಗೆ ಸರ್ಟಿಫಿಕೇಟ್ ನೀಡಲಾಗಿದೆಯೇ ಎಂದು ಸಂಘ ಪರಿವಾರದ ಸಂಸದರೊಬ್ಬರು ಪ್ರಚೋದಿಸುವಂತೆ ಕೇಳುತ್ತಾರೆ. ಹಿಂದೂ ಯುವಕರು ಲವ್ ಜಿಹಾದ್ ಕುರಿತಾಗಿ ಎಚ್ಚರಿಕೆ ಇಂದ ಇರಬೇಕೆಂದು ಆದೇಶಿಸುತ್ತಾರೆ.

ಛತ್ತೀಸಗಡ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದವರನ್ನು ಮತ್ತು ಅವರ ಸ್ವಯಂಸೇವಾ ಸಂಸ್ಥೆಗಳನ್ನು ಮತ್ತು ಹಿಂದೂಗಳಲ್ಲದ ಸಮುದಾಯದವರನ್ನು ಬಸ್ತರ್‌ನ ಪ್ರದೇಶದಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ’ನಮ್ಮನ್ನು ಇಂಡಿಯಾದ ನೆಲದ ಮೇಲೆ ಕಾಲಿಡದಂತೆ ಹೇಗೆ ತಾನೆ ತಡೆಯಲು ಸಾಧ್ಯ? ಯಾವುದೇ ಧಾರ್ಮಿಕ ಮಿಶನರಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ’ ಎಂದು ಅವರ ನಾಯಕ ಅರುಣ್ ಪನ್ನಾಲಾಲ್ ಕೇಳುತ್ತಾರೆ. ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಈ ನಿಷೇಧವನ್ನು ಹೇರಲಾಗಿದೆ ಎಂದು ವಿಎಚ್‌ಪಿಯ ಬಸ್ತರ್ ವಿಭಾಗದ ನಾಯಕ ಸುರೇಶ್ ಯಾದವ್ ಹೇಳುತ್ತಾರೆ.

ಕೇಂದ್ರದ ಮಹಿಳಾ ಮತ್ತು ಸಮಾಜ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಭಾರತದಿಂದ ರಫ್ತಾಗುವ ಎಲ್ಲಾ ಬಗೆಯ ಮಾಂಸವು ನೇರವಾಗಿ ಪಕ್ಕದ ಇಸ್ಲಾಂ ರಾಷ್ಟ್ರಗಳಿಗೆ ಹೋಗುತ್ತದೆ. ಆ ದೇಶಗಳು ಆದನ್ನು ಮಾರಿ ಅದರ ವ್ಯಾಪಾರದಿಂದ ಬಂದ ದುಡ್ಡಿನಿಂದ ಶಸ್ತ್ರಾಸ್ತಗಳನ್ನು ಖರೀದಿಸಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಾರೆ, ಹೀಗಾಗಿ ಮಾಂಸದ ರಫ್ತನ್ನು ನಿಲ್ಲಿಸಿ ಎಂದು ಕರೆ ಕೊಟ್ಟಿದ್ದಾರೆ. ಜವಬ್ದಾರಿಯುತ ಮಂತ್ರಿಯೊಬ್ಬರ ಇಂತಹ ಬೇಜವಬ್ದಾರಿಯುತ ಹೇಳಿಕೆಗಳ ಪರಿಣಾಮಗಳನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಮತ್ತೊಂದು ಕಡೆ ಇಪ್ಪತ್ತೊಂದನೇ ಶತಮಾನದಲ್ಲಿ ದಲಿತ ನಾಯಕತ್ವ ಮತ್ತು ಅದರ ಚಿಂತಕರು ನಿಧಾನವಾಗಿ ಬಲಪಂಥೀಯ ತತ್ವದೆಡೆಗೆ ಚಲಿಸುತ್ತಿದ್ದಾರೆ RSS-mohanbhagwatಎಂದು ಚಿಂತಕರು ಅಭಿಪ್ರಾಯ ಪಡುತ್ತಿದ್ದಾರೆ. ಜಾತಿ ವಿನಾಶದ ಚಿಂತನೆಗಳಿಂದ ಜಾತಿಯ ಸೆಕ್ಯೂಲೀಕರಣ ಮತ್ತು ಹಿಂದೂಯಿಸಂನಿಂದ, ಮತಾಂತರದ ಚಳುವಳಿಯಿಂದ ಹೊರಬಂದು ಹಿಂದೂ ಐಡೆಂಟಿಟಿ ಕಡೆಗೆ ಚಲಿಸುತ್ತಿದ್ದಾರೆ ಎಂದು ಬುದ್ಧಿಜೀವಿಗಳು ಅಭಿಪ್ರಾಯ ಪಡುತ್ತಾರೆ. ಒಂದು ಕಾಲದಲ್ಲಿ ದಲಿತರು ಬೌಧ್ಧ ಧರ್ಮಕ್ಕೆ ಮತಾಂತರವಾಗಬೇಕೆಂದು ಪ್ರತಿಪಾದಿಸುತ್ತಿದ್ದ ದಲಿತ ನೌಕರರ ಸಂಘಟನೆಯ ಅಧ್ಯಕ್ಷ ಉದಿತ್ ರಾಜ್ ಇಂದು ಬಿಜೆಪಿ ಪಕ್ಷ ಸೇರಿದ್ದಾರೆ. ರಾಮ್‌ವಿಲಾಸ್ ಪಾಸ್ವಾನ್ ಬಿಜೆಪಿಯ ಸಹೋದ್ಯೋಗಿ. ಚಂದ್ರಬಾನು ಪ್ರಸಾದ ದಲಿತ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಲೇ ಅದರ ಮುಂದಿನ ತಾಣ ಬಿಜೆಪಿ ಎಂದು ನಂಬಿ ಅದರ ಕಡೆಗೆ ಚಲಿಸುತ್ತಿರುವಂತಿದೆ. ಉತ್ತರ ಪ್ರದೇಶದಲ್ಲಿ ಮುಜಫರ್ ನಗರ ಕೋಮುಗಲಭೆಗಳ ನಂತರ ಅಲ್ಲಿ ಮುಸ್ಲಿಂ ವಿರುದ್ಧ ದಲಿತರು ಎನ್ನುವ ಕಾಳಗದ ಭೂಮಿಕೆ ತಯಾರಾಗಿದೆ. ಅಲ್ಲಿನ ಗ್ರಾಮಗಳಲ್ಲಿ ಮೇಲ್ಜಾತಿಗಳ ಕ್ರೌರ್ಯ ಮತ್ತು ದೌರ್ಜನ್ಯ ವಿರೋಧಿ ಹೋರಾಟಗಳನ್ನು ಕೈ ಬಿಟ್ಟ ದಲಿತರು ಬಹುಸಂಖ್ಯಾತ ತತ್ವದ ಸಿದ್ಧಾಂತದಡಿಯಲ್ಲಿ ಹಿಂದೂಯಿಸಂನ ಕೊಡೆಯ ಅಡಿಯಲ್ಲಿ ಒಟ್ಟುಗೂಡುತ್ತಿದ್ದಾರೆ ಎನ್ನುವುದು ಮಾತ್ರ ಸತ್ಯ. ಇಡೀ ವಾತಾವರಣವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ ಆರೆಸಸ್ ಮತ್ತು ಬಿಜೆಪಿ ಅತ್ಯಂತ ಚಾಣಾಕ್ಷತನದಿಂದ ಯೋಜನೆಗಳನ್ನು ಹೆಣೆಯುತ್ತಿವೆ. ಮೇಲ್ಮುಖದಿಂದ ಕೆಳಮುಖದ ಚಲನೆಯ ಸಂಕೇತವಾಗಿ ಸರ್ವಜನದಿಂದ ಬಹುಜನದವರೆಗೆ ಎನ್ನುವ ಸ್ಲೋಗನ್‌ಗಳನ್ನು ಪ್ರಚಾರ ಮಾಡುತ್ತಿದೆ. ಅವರ ಮುಖ್ಯಸ್ಥ ಮೋಹನ್ ಭಾಗವತ್ ಮೊನ್ನೆ ಮೀಸಲಾತಿಯ ಪರವಾಗಿ ವಾದಿಸಿದ್ದಾರೆ. ಇದಕ್ಕಾಗಿ ದಲಿತರು ಹಿಂದುತ್ವದ ಅಡಿಯಲ್ಲಿ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ಆದೇಶಿಸಿದ್ದಾರೆ. ದಲಿತರ ವಿಮೋಚನೆ ಆಗದೆ ಭಾರತದ ವಿಮೋಚನೆ ಇಲ್ಲ ಎಂದು ಚಿಂತಿಸಿದ ಅಂಬೇಡ್ಕರ್ ತತ್ವಗಳು ಹಿನ್ನೆಲೆಗೆ ತಳ್ಳಲ್ಪಟ್ಟು ಬಹುಜನ ಎಂದರೆ ಹಿಂದುತ್ವದ, ಸವರ್ಣೀಯ ಸಮಾಜವನ್ನು ಒಪ್ಪಿಕೊಂಡ ಬಹುಸಂಖ್ಯಾತ ತತ್ವದ ಒಳಗಿರುವವರು ಎನ್ನುವ ಚಿಂತನೆ ಮತ್ತು ಸಂಘಟನೆ ಬಲಗೊಳ್ಳುತ್ತಿದೆ. ಹಿಂದೂ ಧರ್ಮ ಮತ್ತು ದಲಿತರ ನಡುವೆ ಯಾವುದೇ ಬಗೆಯ ಸಂಧಾನಗಳನ್ನು ತಿರರಸ್ಕರಿಸಿದ್ದ ಅಂಬೇಡ್ಕರ್ ಮತ್ತು ದಲಿತರ ಬದುಕಿನೊಂದಿಗೆ ಬಿಡಿಸಲಾಗದ ಸಂಬಂಧವನ್ನು ಹೊಂದಿದ್ದ ಅಂಬೇಡ್ಕರ್ ಚಿಂತನೆಯ ಬಲವಾದ ಕೊಂಡಿ ನಿಧಾನವಾಗಿ ಕಳಚಿಕೊಳ್ಳುತ್ತಿದೆಯೇ ಎನ್ನುವಂತಹ ಅನುಮಾನಗಳು ಬರುತ್ತಿವೆ. ಆದರೆ ಈ ಅಂಶಗಳನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾಗುತ್ತದೆಯೇನೋ.

ಸಂಘ ಪರಿವಾರದ ಎಲ್ಲಾ ಬಗೆಯ ಹಿಂಸಾತ್ಮಕ ಚಿಂತನೆಗಳು ಈ ಮೊದಲಿನಂತೆ ಸಮಾಜದ ಮೇಲೆ ನೇರವಾಗಿ ಹೇರಲ್ಪಡುವುದಿಲ್ಲ. ಬದಲಾಗಿ ಕಾನೂನು, ಕಟ್ಟಳೆಗಳ ಮೂಲಕ ಜಾರಿಗೊಳ್ಳಲ್ಪಡುತ್ತವೆ. ಇಲ್ಲಿ ಧಾರ್ಮಿಕ ನೆಲೆಯಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು,ರಾಜಕೀಯ ಚಟುವಟಿಕೆಗಳನ್ನು ಆರೆಸಸ್ ಮತ್ತು ಅದರ ಅಂಗ ಪಕ್ಷಗಳು ಪ್ರತ್ಯಕ್ಷವಾಗಿ ಜಾರಿಗೊಳಿಸುತ್ತಿದ್ದರೆ ನರೇಂದ್ರ ಮೋದಿ ಇದಕ್ಕೆ ಸಂಬಂದಪಟ್ಟಿಲ್ಲದವರಂತೆಯೇ ವರ್ತಿಸುತ್ತಿರುತ್ತಾರೆ.

ಆದರೆ ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿ ಸೋತು ಮುಖಭಂಗ ಅನುಭವಿಸಿರುವುದು ಮತ್ತು ಈ ಸೋಲು ಅದರ ಸ್ವಯಂಕೃತ ಅಪರಾಧಗಳ ಕಾರಣದಿಂದ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ಇದನ್ನು ಅಚ್ಚರಿಯ ಫಲಿತಾಂಶ ಎಂದಷ್ಟೇ ನಾವು ಅವಲೋಕಿಸಬೇಕೇನೋ. ಇದನ್ನೇ ಜನಮತ ಎಂದುಕೊಂಡರೆ ಅದು ಬಾಲಿಶತನವೇ ಸರಿ. ರಾಜಕೀಯ ವಿಶ್ಲೇಷಕರು ಮತೀಯವಾದಿ ಫೆನಟಿಸಂ ಅನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ಸಂಪೂರ್ಣವಾಗಿ ಒಪ್ಪಲು ಆಗದು, ಏಕೆಂದರೆ ಮುಜಫರ್ ನಗರದ ಘಟನೆಗಳು, ಧೃವೀಕರಣ ಇಂದಿಗೂ ಹಸಿಹಸಿಯಾಗಿದೆ. ಮತೀಯವಾದಿ ಸಂಸದರಾದ ಯೋಗಿ ಆದಿತ್ಯನಾಥ, ಸಾಕ್ಷಿ ಮಹರಾಜ್‌ರಂವರಿಗೆ ಪಾಠ ಕಲಿಸಿದೆ ಈ ಉಪಚುನಾವಣೆಯ ಫಲಿತಾಂಶಗಳು ಎಂದೂ ವಿಶ್ಲೇಷಿಸುತ್ತಾರೆ. ಆದರೆ ಇದೂ ಕೂಡ ಅರ್ಧಸತ್ಯವೇನೋ.

2 thoughts on “ಅಭಿವೃದ್ಧಿ ಎನ್ನುವ ಮಿಥ್ ಮತ್ತು ಹಿಂದುತ್ವ ಎನ್ನುವ ವಾಸ್ತವ: ಇವೆರಡನ್ನೂ ಸಹಿಸಿಕೊಳ್ಳುತ್ತಿರುವ ಇಂಡಿಯಾ

  1. M A Sriranga

    ಬಿ. ಶ್ರೀಪಾದ್ ಭಟ್ ಅವರಿಗೆ–>>>’ಇಲ್ಲಿ ಅಧಿಕೃತವಾದ ಸಾರ್ವಜನಿಕವಾದ ಸೆಕ್ಯುಲರಿಸಂ ,ನಿಜದ ಅರ್ಥದಲ್ಲಿ ಎಲ್ಲವನ್ನೂ ಒಳಗೊಳ್ಳುವ ಆದರೆ ಸದಾ ಎಚ್ಚರದ ಸ್ಥಿತಿಯಲ್ಲಿ ಬಳಕೆಯಾಗದಿದ್ದರೆ ಅದು ಸೋತುಹೋಗುತ್ತದೆ. ಅದಕ್ಕೆ ಸಾಕ್ಷಿಯಾಗಿ ……………. ‘>>> ೨೦೦೪ ರಿಂದ ೨೦೧೪ರ ತನಕ ಕೆಂದ್ರಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಯು ಪಿ ಎ ಸರ್ಕಾರದ ಮುಖ್ಯ ಅಂಗ ಪಕ್ಷವಾಗಿದ್ದ ಅದರಲ್ಲೂ ಭಾರತದ secularismನ icon ಎಂದೇ ಸುಮಾರು ಆರು ದಶಕಗಳಿಂದ ಬಿಂಬಿತವಾಗಿರುವ ಕಾಂಗ್ರೆಸ್ಸ್ ಪಕ್ಷ ‘ನಿಜದ ಅರ್ಥದಲ್ಲಿ’ ‘ಸೆಕ್ಯುಲರ್’ ಅಲ್ಲ ಎಂದು ತಾವು ಒಪ್ಪಿಕೊಂಡಹಾಗಾಯಿತು ಅಲ್ಲವೇ? ನಮ್ಮಲ್ಲಿರುವುದು secularism ಅಲ್ಲ; pseudo secularism ಎಂದು ಇಷ್ಟು ದಿನ ಹೇಳುತ್ತಿದ್ದವರನ್ನು ಕೆಲವು ಮಾಧ್ಯಮಗಳು, ಬುದ್ಧಿಜೀವಿಗಳು ಹಂಗಿಸುತ್ತಿದ್ದರು. ಇರಲಿ. ಇಂದು ತಮ್ಮ ಪ್ರಕಾರ ಒಂದು non secular ಪಕ್ಷ ಸಾಕಷ್ಟು ಬಹುಮತದಿಂದ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿದ್ದರೆ ಅದಕ್ಕೆ ಕಾರಣ ಭಾರತದ ಪ್ರಜೆಗಳು. ಅವರ ಹಕ್ಕನ್ನು, ನಿರ್ಧಾರವನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಗೌರವಿಸಲೇ ಬೇಕು; ಒಪ್ಪಲೇ ಬೇಕು. ಇದರ ಬಗ್ಗೆ ಬೇರೆ ಮಾತಿಲ್ಲ. ಅಗೌರವ ತೋರುವವರು ಪ್ರಜಾಸತ್ಮಕವಾದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದವರಾಗುತ್ತಾರೆ. ತಾವು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಬಗ್ಗೆ ಏಕ ಮುಖ ಅಭಿಪ್ರಾಯಗಳನ್ನು ಮಾತ್ರ ಹೊಂದಿದ್ದೀರಿ. ಇತರರ ಬಗ್ಗೆ ಏನೂ ಹೇಳಿಲ್ಲ. ತಮ್ಮ ಪ್ರಕಾರ secular ಆದ ಕಾಂಗ್ರೆಸ್ಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ (ಬೇರೆ ಪಕ್ಷಗಳ ಹಂಗಿಲ್ಲದೆ) ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವುದು ಕರ್ನಾಟಕದಲ್ಲಿ ಮಾತ್ರ. ಇನ್ನುಳಿದಂತೆ ಮಧ್ಯ,ಪೂರ್ವ,ಪಶ್ಚಿಮ,ಉತ್ತರ ಭಾರತದಲ್ಲಿ ಪೂರ್ಣ ಪ್ರಮಾಣದ ಕಾಂಗ್ರೆಸ್ಸ್ ಪಕ್ಷದ ಸರ್ಕಾರ ಎಲ್ಲಿದೆ ಎಂದು ಭೂತಗನ್ನಡಿ ಹಿಡಿದು ಹುಡುಕಬೇಕಾಗಿದೆ. ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಏಕೆ ಹೀಗೆ? ನಿನ್ನೆ ಮೊನ್ನೆ ನಡೆದ ಉಪಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಸದ್ಯ ಅಧಿಕಾರದಲ್ಲಿರುವ ಪಕ್ಷದ ಸರ್ಕಾರದ ಬಗ್ಗೆ ತಾವು ಆಗಲೇ ಭವಿಷ್ಯ ನುಡಿಯಲು ಪ್ರಾರಂಭಿಸಿದ್ದೀರಿ. ಇಷ್ಟು ಅವಸರ ಏಕೆ? ಕಳೆದ ಲೋಕಸಭೆಯ ಚುನಾವಣೆಯಲ್ಲಿ ತಮ್ಮಂತಹ ಬುದ್ಧಿಜೀವಿಗಳ, ಕೆಲವು ಮಾಧ್ಯಮಗಳ ಲೆಕ್ಕಾಚಾರ ತಪ್ಪಿತು ಎಂಬ ಅಸಮಾಧಾನವೇ?

    Reply
  2. Panini

    i dont know why people are considering by election s popularity centre. Most of the seats are for state assembly. For example in UP were BJP is not in power what benifit people will have electing MLA from BJP when SP in ruling the stae. For example for the LOK shabha by election held in Karnataka for Cikkamangaluru and Mandya constituency was won by congress does it indicate that UPA 2 had done tremendous work and was popular among people ?? So always by election are gauge to access the performance it always depends on ruling party in he state.

    Reply

Leave a Reply

Your email address will not be published. Required fields are marked *