ಹರಿಯುತ್ತಿರುವ  ರಕ್ತಕ್ಕೆ ಸಾಕ್ಷಿಯಾಗುತ್ತಿದೆ ಈ ಗೋಮಾತೆ……..


-ಇರ್ಷಾದ್


ಆ ಯುವಕನ  ಹೆಸರು ಅಬ್ದುಲ್ ಸಮೀರ್. ವಯಸ್ಸು 32. ಮದುವೆಯಾಗಿ ಐವರು  ಮಕ್ಕಳ ತಂದೆ. ಮಂಗಳೂರಿನಿಂದ ಕೇರಳದ ಕಣ್ಣೂರಿಗೆ  ಮೀನು ವ್ಯಾಪಾರ  ಮಾಡಿ ಜೀವನ ಸಾಗಿಸುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್  ಸಮೀರ್ ಇಂದು ಅಕ್ಷರಷಃ ಕೋಮ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವಚ್ಚವವಾಗಿ ಮಲಗಿದ್ದಾನೆ. ಈತನ ಈ ದಾರುಣ ಸ್ಥಿತಿ ಕಂಡು ಅಸಾಹಯಕರಾಗಿ ಪೋಷಕರು, ಹೆಂಡತಿ ಮಕ್ಕಳು ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಕಡುಬಡವರಾದ ಅಬ್ದುಲ್ ಸಮೀರ್  ಕುಟುಂಬ ಈಗಾಗಲೇ ಸುಮಾರು 3 ಲಕ್ಷ ರೂಪಾಯಿಯನ್ನು ಚಿಕಿತ್ಸೆಗಾಗಿ ವ್ಯಯ ಮಾಡಿದೆ. ಇಷ್ಟಾದರೂ ಗಂಬೀರವಾಗಿ  ಗಾಯಗೊಂಡಿರುವ ಅಬ್ದುಲ್ ಸುಧಾರಿಸಿಲ್ಲ.

ಅಂದಹಾಗೆ ಈತನ ಈ ಪರಿಸ್ಥಿತಿಗೆ ಕಾರಣರಾದವರು ಮಂಗಳೂರಿನ ಗೋರಕ್ಷಣೆಯ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಮತಾಂಧರು. go sagata_1ದಿನಾಂಕ 24-8-2014 ರಂದು ಅಬ್ದುಲ್  ಸಮೀರ್ ಹಾಗೂ ಇನ್ನಿಬ್ಬರು ದನ ವ್ಯಾಪಾರಿಗಳು ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಂದ 14 ದನಗಳನ್ನು  ಖರೀದಿ ಮಾಡಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಸುಮಾರು 30 ರಿಂದ 40 ಜನರನ್ನು ಒಳಗೊಂಡ ಹಿಂದೂಪರ ಸಂಘಟನೆಗಳ ತಂಡ ರಾತ್ರಿ ಸುಮಾರು 10.30 ಘಂಟೆಗೆ ಮಂಗಳೂರಿನ ಪಂಪ್ ವೆಲ್ ಎಂಬಲ್ಲಿ ಜಾನುವಾರು ಸಾಗಾಟ ವಾಹನವನ್ನು ಅಡ್ಡಗಟ್ಟಿದ್ದರು. ವಾಹನದಲ್ಲಿದ್ದ ಚಾಲಕ ಅಬ್ದುಲ್ ಸಮೀರ್, ಫಯಾಜ್ ಹಾಗೂ ಶೌಕತ್ ಎಂಬುವವರಿಗೆ ಹಿಗ್ಗಾಮುಗ್ಗಾ ಥಳಿಸಿದರು. ಚಾಲಕ ಅಬ್ದುಲ್ ಸಮೀರ್ ಅವರ ಹೊಡೆತಕ್ಕೆ  ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಎಲ್ಲಾ  ಆದ ನಂತರದಲ್ಲಿ ಸ್ಥಳಕ್ಕೆ ಬಂದ ಮಂಗಳೂರು ಗ್ರಾಮಾಂತರ ಪೊಲೀಸರು ಗಾಯಗೊಂಡ ದನದ ವ್ಯಾಪಾರಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರು. 14 ದಿನ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಸಮೀರ್ ಇನ್ನೂ ಕೋಮಾ ಸ್ಥಿತಿಯಿಂದ  ಸಂಪೂರ್ಣವಾಗಿ ಹೊರಬಂದಿಲ್ಲ. ಪುತ್ರನ  ಚಿಕಿತ್ಸೆಗಾಗಿ  ಅಬ್ದುಲ್  ಸಮೀರ್  ತಂದೆ  ಶೇಕ್ ಅಲೀ ತಮ್ಮ  ಪುತ್ರಿಯ ಮೈಮೇಲಿದ್ದ ಚಿನ್ನಾಭರಣವನ್ನು ಅಡವಿಟ್ಟು  ಈಗಾಗಲೇ  150000 ದುಡ್ಡು ಆಸ್ಪತ್ರೆಗೆ ಪಾವತಿ  ಮಾಡಿದ್ದಾರೆ, ಇನ್ನೂ  120000  ಹಣವನ್ನು ಪಾವತಿ  ಮಾಡಬೇಕಾಗಿದೆ.  ವೈದ್ಯರು  ಜೀವಕ್ಕೆ ಅಪಾಯವಿಲ್ಲ ಎಂದರೂ ಮತ್ತೆ ಸಮೀರ್ ಹಿಂದಿನಂತಾಗುವ ಯಾವುದೇ ಭರವಸೆಯನ್ನು ನೀಡಿಲ್ಲ. ಸಮೀರ್ ಕನಿಷ್ಠ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳುಗಳ  ಕಾಲಾವಕಾಶ ಬೇಕಾಗಬಹುದು.

ಇದು ಅಬ್ದುಲ್ ಸಮೀರ್ ಒಬ್ಬನ ವ್ಯಥೆ ಮಾತ್ರವಲ್ಲ. ಕರಾವಳಿಯ ಅವಳಿ  ಜಿಲ್ಲೆಯಗಳಲ್ಲಿ ಇದು ಸಾಮಾನ್ಯವಾಗುತ್ತಿದೆ. ಕರಾವಳಿ ಭಾಗದಲ್ಲಿ ಗೋಮಾತೆಯು ತನ್ನ  ಕಣ್ಣ ಮುಂದೆ ಹರಿದ ಸಾಕಷ್ಟು ನೆತ್ತರಿಗೆ ಸಾಕ್ಷಿಯಾಗಿದ್ದಾಳೆ. ಗೋ ಮಾತೆಯ ರಕ್ಷಣೆಯ ಹೆಸರಲ್ಲಿ  ಸ್ವಘೋಷಿತ ಗೋರಕ್ಷಕರು ಕಾನೂನು ಕೈಗೆತ್ತಿಕೊಂಡು ಸಿಕ್ಕಿದ್ದೇ ಅವಕಾಶ go sagata_2ಎಂಬಂತೆ ದನದ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ  ನಡೆಸಿ  ಕ್ರೌರ್ಯ  ಮೆರೆಯುತ್ತಿದ್ದಾರೆ. ಇವರ  ಪಾಲಿಗೆ ಗೋ ಕಳ್ಳರು, ಅಕ್ರಮ ದನ ಸಾಗಾಟಕರು, ಪರವಾನಿಗೆ ಹೊಂದಿರುವ ಜಾನುವಾರು ವ್ಯಾಪಾರಿಗಳು, ಎಲ್ಲರೂ ಒಂದೇ. ಒಮ್ಮೆ ತಮ್ಮ ಕೈಗೆ  ಸಿಕ್ಕಿಬಿದ್ದರೆ ಸಾಕು. ಗೋಮಾತೆಯ ರಕ್ಷಣೆಯ ಹೆಸರಲ್ಲಿ ಕ್ರೌರ್ಯದ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಈ ಮತಾಂಧರು ಅಂದು ಆದಿ ಉಡುಪಿಯಲ್ಲಿ ದನದ  ವ್ಯಾಪಾರಿ ಅಪ್ಪ –ಮಗನನ್ನು ಹಿಂಸಿಸಿ ಬೆತ್ತಲೆ ಮಾಡಿದ್ದರು. ಅದೇ ಮನಸ್ಥಿತಿಯ ಮತಾಂಧರು ಇಂದು ದನ ಸಾಗಾಟ ವಾಹನ ಚಾಲಕ ಅಬ್ದುಲ್ ಸಮೀರ್‌ನನ್ನು ಜೀವಚ್ಚವವನ್ನಾಗಿಸಿದರು. ಧರ್ಮದ ಹೆಸರಲ್ಲಿ ಅಮಾನವೀಯತೆ ಮೆರೆದಾಡುವ ಈ ಮತಾಂಧರು ಮೊದಲು ತಮ್ಮದೇ ಧರ್ಮ ಹಾಗೂ ಅದರ ಸದಾಶಯಗಳಿಗೆ ಧ್ವನಿಯಾದ ಆದರ್ಶ ಪುರುಷರುಗಳನ್ನು ತಿಳಿದುಕೊಳ್ಳಬೇಕು. ಇಂದು ಧರ್ಮಗಳ  ನಡುವೆ ವಿಷಬೀಜವನ್ನು ಬಿತ್ತಿ ಸಾವು ನೋವಿಗೆ ಕಾರಣವಾಗುತ್ತಿರುವ ಗೋ ರಕ್ಷಕರು ಗೋವಿನ ಕುರಿತಾಗಿ  ಹಿಂದೂ ಧರ್ಮಗ್ರಂಥಗಳು  ಹಾಗೂ  ಸ್ವಾಮೀ  ವಿವೇಕಾನಂದ,  ಭಗತ್ ಸಿಂಗ್  ಮೊದಲಾದರು  ಏನು ಹೇಳಿದ್ದಾರೆ ಎಂಬುವುದನ್ನು ಮೊದಲು  ತಿಳಿದುಕೊಳ್ಳಬೇಕಾಗಿದೆ.

ಸ್ವಾಮೀ ವಿವೇಕಾನಂದರು ಹೇಳುತ್ತಾರೆ “ಭಾರತದಲ್ಲಿ ಸನ್ಯಾಸಿ, ರಾಜ, ಅಥವಾ ಶ್ರೇಷ್ಟ ವ್ಯಕ್ತಿಯೊಬ್ಬನು ಮನೆಗೆ ಬಂದರೆ ಅವನ ಔತಣಕ್ಕಾಗಿ ಅತ್ಯುತ್ತಮವಾದ ಎತ್ತನ್ನು ಕೊಲ್ಲುತ್ತಿದ್ದರು ಎಂಬುವುದನ್ನು ನಾವು ವೇದದಲ್ಲಿ ಓದಿದ್ದೇವೆ. ಆದರೆ ಕಾಲ ಕ್ರಮೇಣ ನಮ್ಮದು ಕೃಷಿ ಪ್ರಾಧಾನ್ಯ ಜೀವನವಾಗಿದ್ದರಿಂದ ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕ್ರಮೇಣ ದನದ ಕುಲವೇ ನಾಶವಾಗುವುದೆಂದು swami-vivekananda-1ತಿಳಿದು ಗೋಹತ್ಯೆ ಮಹಾ ಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು. ಪಂಜಾಬಿನ ಹಲವು ಗ್ರಾಮಗಳಲ್ಲಿ ಹಂದಿಯನ್ನು ತಿನ್ನುವವರನ್ನು ಹಿಂದೂಗಳೆಂದು ಪರಿಗಣಿಸುವುದೇ ಇಲ್ಲ.” ( ವಿವೇಕಾನಂದರ  ಕೃತಿ ಶ್ರೇಣಿ 5-129 )

ಸ್ವಾಮಿ ವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಚರ್ಚೆ ನಡೆಸುವ ಈ ಸನ್ನಿವೇಶ ಗೋ ರಕ್ಷಣೆಯ ಹೆಸರಲ್ಲಿ ಮನುಷ್ಯ ಮನುಷ್ಯನ  ರಕ್ತ ಹೀರುವ ಮನಸ್ಥಿತಿಗೆ ಸುಲಭ ರೀತಿಯಲ್ಲಿ ಅರ್ಥವಾಗುವ ಪಾಠದಂತಿದೆ.

ಸ್ವಾಮೀವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಮಾತನಾಡುತ್ತಾ-

ಸ್ವಾಮೀಜಿ: ನಿಮ್ಮ  ಉದ್ದೇಶವೇನು ?

ಪ್ರಚಾರಕ : ನಮ್ಮ ದೇಶದ ಗೋ ಮಾತೆಯನ್ನು ಕಟುಕರ ಕೈಯಿಂದ ತಪ್ಪಿಸಿ ಕಾಪಾಡುತ್ತಿದ್ದೇವೆ. ಅಲ್ಲಲ್ಲಿ ದೊಡ್ಡಿಗಳು ಸ್ಥಾಪಿಸಲ್ಪಟ್ಟಿವೆ. ಅವುಗಳಲ್ಲಿ ಕಾಯಿಲೆಯ, ಕೈಲಾಗದ ಮತ್ತು ಕಟುಕರಿಂದ ಕೊಂಡು ತಂದ ಗೋ ಮಾತೆಯನ್ನು  ರಕ್ಷಿಸುತ್ತೇವೆ.

ಸ್ವಾಮೀಜಿ : ಇದು ಬಹಳ  ಒಳ್ಳೆಯ  ಕೆಲಸ; ತಮ್ಮ ಸಂಪಾದನೆಯ  ಮಾರ್ಗ ?

ಪ್ರಚಾರಕ: ದಯಾಪರರಾದ ತಮ್ಮಂಥವರು ಏನಾದರೂ ಕೊಡುತ್ತಾರೆಯಲ್ಲ, ಅದರಿಂದಲೇ ಸಭೆಯ ಈ ಕಾರ್ಯ ನಡೆಯುವುದು.

ಸ್ವಾಮೀಜಿ: ನಿಮ್ಮ ಹತ್ತಿರ  ಮೂಲಧನ ಎಷ್ಟು  ರೂಪಾಯಿ ಇದೆ?

ಪ್ರಚಾರಕ: ಮಾರವಾಡಿ ವರ್ತಕರು ಈ ಕಾರ್ಯಕ್ಕೆ ಒಳ್ಳೆಯ ಪೋಷಕರಾಗಿದ್ದಾರೆ. ಅವರು ಈ ಸತ್ಕಾರ್ಯಕ್ಕೆ ಬಹುದ್ರವ್ಯವನ್ನು ಕೊಟ್ಟಿದ್ದಾರೆ.

ಸ್ವಾಮೀಜಿ: ಹಿಂದೂಸ್ಥಾನದಲ್ಲಿ ಭಯಂಕರ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ  ಸಭೆ ಈ ದುರ್ಭಿಕ್ಷ ಕಾಲದಲ್ಲಿ ಏನಾದರೂ ಸಹಾಯ  ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನು?

ಪ್ರಚಾರಕ: ನಾವು ದುರ್ಭಿಕ್ಷ ಮೊದಲಾದುವುಗಳಲ್ಲಿ ಸಹಾಯ ಮಾಡುವುದಿಲ್ಲ . ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ: ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿರಲು, ಕೈಯಲ್ಲಾಗುತ್ತಿದ್ದರೂ ಇಂಥ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ತೋರುವುದಿಲ್ಲವೇ?

ಪ್ರಚಾರಕ:  ಇಲ್ಲ, ಜನರ ಕರ್ಮಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನರು ಸಾಯುತ್ತಾರೆ. ಹೀಗೆ ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲೂ ಕೆಲಸ ಮಾಡುವುದೇ ನಿಷ್ಪ್ರಯೋಜಕವೆಂದು ಒಟ್ಟಿಗೆನಿಶ್ಚಯಿಸಬಹುದು. ತಮ್ಮ ಪಶುರಕ್ಷಣೆಯ  ಕೆಲಸವೂ ಆ  ಮೇಲೆ ನಡೆಯುದಿಲ್ಲ.ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ  ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು  ಸಾಯುತ್ತವೆ. ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಅವಶ್ಯಕತೆಯಿಲ್ಲ  ಎಂದು  ಹೇಳಬಹುದು.

ಪ್ರಚಾರಕ: ತಾವು ಹೇಳುತ್ತಿರುವುದು ಸರಿ. ಆದರೆ ಹಸು ನಮಗೆ ‘ತಾಯಿ’ ಎಂದು ಶಾಸ್ತ್ರ  ಹೇಳುತ್ತದೆ.

ಸ್ವಾಮೀಜಿ: ಹಸು ತಮ್ಮ ತಾಯಿ ಎಂಬುವುದನ್ನು ನಾನು ವಿಲಕ್ಷಣವಾಗಿ ಅರ್ಥಮಾಡಿಕೊಂಡಿದ್ದೇನೆ- ಇಲ್ಲದಿದ್ದಲ್ಲಿ ಇಂಥ ಧನ್ಯರಾದ ಪುತ್ರರನ್ನೆಲ್ಲಾ ಇನ್ನು ಯಾರು ಹೆತ್ತಾರು?  (ವಿವೇಕಾನಂದ ಬಹುಮುಖಿ ಚಿಂತಕ ಪುಟ 43-44 )

ಇಷ್ಟೇ  ಅಲ್ಲ, ಹಿಂದೂ  ಧರ್ಮದ  ಧರ್ಮಶಾಶ್ತ್ರ  ಮನುಸ್ಮೃತಿಯಲ್ಲಿ ಗೋವಿನ ಕುರಿತು  ಅನೇಕ ಉಲ್ಲೇಖಗಳಿವೆ ಮನುಸ್ಮೃತಿ ಪ್ರಕಾರ-

ಚರಣಾಮನ್ನಮಚರಾ ದಂಷ್ಟ್ರಿಣಾಮಪ್ಯದಂಷ್ಟ್ರಿಣ:
ಅಹಾಸ್ತಾಶ್ಚ ಸಹಸ್ತಾನಾಂ ಶೂರಾಣಂ ಚೈವ ಭೀರವ:  ( ಮನುಸ್ಮೃತಿ 5:29)

ಅಂದರೆ ಚಲಿಸುವ ಪಶು ಪ್ರಾಣಿಗಳಿಗೆ ಚಲಿಸದಿರುವ ಹುಲ್ಲು- ಸಸ್ಯಗಳು ಆಹಾರಗಳು, ಕೋರೆ ದಾಡೆಗಳಿರುವ ಸಿಂಹ-ಹುಲಿಗಳಿಗೆ ಕೋರೆ ದಾಡೆಗಳಿರದ ಜಿಂಕೆ  ಇತ್ಯಾದಿಗಳು ಆಹಾರಗಳು, ಕೈಗಳಿರುವ ಮನುಷ್ಯರಿಗೆ ಕೈಗಳಿಲ್ಲದ ಪಶು ಪ್ರಾಣಿಗಳು ಆಹಾರಗಳು. ಹಾಗೂ  ಶೂರವಾದ, ಕ್ರೋರವಾದ ಪ್ರಾಣಿಗಳಿಗೆ ಸಾಧುವಾದ –ಭೀರುವಾದ ಪ್ರಾಣಿಗಳು  ಆಹಾರಗಳು.

ನಾತ್ತಾ ದುಷ್ಯತ್ಯದನ್ನಾದ್ಯಾನ್ಟ್ರಾನೋಹನ್ಯಹನ್ಯಪಿ
ಧಾತ್ರೈವ ಸೃಷ್ಟಾಹ್ಯಾದ್ಯಾಶ್ಚ  ಪ್ರಾಣಿನೋತ್ತಾರ  ಏವ ಚ (ಮನುಸ್ಮೃತಿ  5:30)

ಅಂದರೆ, “ಪ್ರತಿದಿನವೂ ತಿನ್ನಲಿಕ್ಕೆ ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾಧವಲ್ಲ. ಏಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸೃಷ್ಟಿ ಮಾಡಿದ್ದಾನೆ.” ಇನ್ನು ಯಜ್ಞ ಯಾಗಾಧಿಗಳಲ್ಲೂ ಪಶುವಧೆಯನ್ನು ಮಾಡಲಾಗುತ್ತಿತ್ತು ಎಂಬುವುದಕ್ಕೂ ಮನುಸ್ಮೃತಿಯಲ್ಲಿ  ಉಲ್ಲೇಖಗಳಿವೆ. ಯಜ್ಞಸ್ಯ ಭೂತ್ಯೈ ಸರ್ವಸ್ಯ ತಸ್ಮಾದ್ಯಜ್ಞೆ  ವಧೋವಧ (ಮನುಸ್ಮೃತಿ 5:39) ಯಜ್ಞಗಳಿಗೆಂದೇ ಪರಮಾತ್ಮನು ಈ ಪಶುಗಳನ್ನು ಸೃಷ್ಟಿ ಮಾಡಿದ್ದಾನೆ. ಈ ಎಲ್ಲವೂ ಯಜ್ಞದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ಞದಲ್ಲಿ ಮಾಡುವ ಪಶುವಧೆಯು  ಪಾಪಕರವಲ್ಲ”

ಗೋವಿನ ಕುರಿತಾದ ಧರ್ಮಗ್ರಂಥಗಳು, ಮಹಾನ್ ದಾರ್ಶನಿಕರು ಈ ವಿಚಾರಗಳನ್ನು ಇಂದು ಅರ್ಥೈಸಿಕೊಳ್ಳಲು ಮತಾಂಧರು ತಯಾರಿಲ್ಲ. ಯಾಕೆಂದರೆ ಅದನ್ನುSiddaramaiah ಪಾಲಿಸಿದರೆ ಮತಾಂಧರ ಉದ್ದೇಶ ಈಡೇರುವುದಿಲ್ಲ. ಪರಿಣಾಮ ಕರಾವಳಿಯಲ್ಲಿ ಗೋವಿನ ಹೆಸರಲ್ಲಿ ನೆತ್ತರು ಹರಿಯುತ್ತಿದೆ. ಇನ್ನೊಂದೆಡೆ ಈ ಮೂಕಪ್ರಾಣಿಯನ್ನು ಮಾರಾಟಕ್ಕಾಗಿ ಸಾಗಿಸುವ ರೀತಿಯೂ  ಅಮಾನವೀಯ. ಆ ಮೂಕ ಪ್ರಾಣಿಯ  ವೇದನೆ ಕಟುಕರ  ಎದೆಗೆ ನಾಟುತ್ತಿಲ್ಲ. ಇದಕ್ಕೆ  ಪರೋಕ್ಷವಾಗಿ  ಕಾರಣ ಗೋ ರಕ್ಷಕ ವೇಷದಲ್ಲಿರುವ ಮತಾಂಧರು ಎಂದರೆ ತಪ್ಪಾಗಲಾರದು. ಇವರ ಉಪಟಳ ಒಂದೆಡೆಯಾದರೆ  ವ್ಯಾಪಾರಿಯ ವ್ಯವಹಾರಿಕ ದೃಷ್ಠಿಕೋನವೂ ಈ ಪರಿಸ್ಥಿತಿಗೆ ಕಾರಣ. ರಾಜ್ಯದಲ್ಲಿ ಮತ್ತೆ  ಅಧಿಕಾರಕ್ಕೆ  ಬಂದ  ಕಾಂಗ್ರೆಸ್  ಸರ್ಕಾರದ ದಕ್ಷಿಣ  ಕನ್ನಡ ಜಿಲ್ಲೆಯ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿ ಮಾಧ್ಯಮದ ಮುಂದೆ  ನೀಡಿದ ಮೊದಲ ಹೇಳಿಕೆ “ನೈತಿಕ ಪೊಲೀಸ್ ಗಿರಿಯನ್ನು ನಮ್ಮ  ಸರ್ಕಾರ  ಯಾವತ್ತೂ  ಸಹಿಸೋದಿಲ್ಲ. ಎಲ್ಲಿ  ನೈತಿಕ ಪೊಲೀಸ್ ಗಿರಿ ನಡೆಯುತ್ತದೋ  ಆ ವ್ಯಾಪ್ತಿಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದಕ್ಕೆ ಹೊಣೆಯಾಗಿರುತ್ತಾರೆ.” ಮುಖ್ಯಮಂತ್ರಿ  ಸಿದ್ದರಾಮಯ್ಯ ಕೂಡಾ ಪದೇ ಪದೇ  ಇಂಥಹಾ  ಹೇಳಿಕೆಯನ್ನೇ ನೀಡುತ್ತಿರುತ್ತಾರೆ. ಆದರೆ ಇವರುಗಳ  ಹೇಳಿಕೆ  ಬರೀ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬಂದ  ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಭಯ ಕೋಮುಗಳ ನೈತಿಕ ಪೊಲೀಸರು ಬಾಲ ಮುದುಡಿ ಕೂತಿಲ್ಲ. ಗೋ ಸಾಗಾಟ ತಡೆ ಹೆಸರಲ್ಲಿ ಕಾನೂನು  ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ದಿನೇ  ದಿನೇ  ಹೆಚ್ಚಾಗುತ್ತಿದೆ ಕೆಲವೊಂದು  ಬಹಿರಂಗಗೊಳ್ಳುತ್ತದೆ  ಇನ್ನೂ  ಕೆಲವೂ ಅಲ್ಲೇ  ಮುಚ್ಚಿಹೋಗುತ್ತಿವೆ. ಹೀಗೆ ಗೋವಿನ ರಕ್ಷಣೆಯ ಹೆಸರಲ್ಲಿ ಅಂದು ಹಾಜಪ್ಪ ಹಸನಬ್ಬ ಇಂದು ಅಬ್ದುಲ್ ಸಮೀರ್ ಇನ್ನು ನಾಳೆ ಮತ್ತೊಬ್ಬ ಹೀಗೆ ಅವಮಾನಕ್ಕೊಳಗಾಗಿ, ಏಟು ತಿನ್ನುತ್ತಿದ್ದರೆ, ಗೋರಕ್ಷಣೆಯ ಹುಮ್ಮಸ್ಸಿನಿಂದ ಒಂದಿಷ್ಟು ಧರ್ಮದ ಅಮಲು ತುಂಬಲ್ಪಟ್ಟ ಹಿಂದುಳಿದ ವರ್ಗಗಳ ಯುವಕರು ಜೈಲು ಸೇರುತ್ತಾರೆ. ಬಹುಷಃ  ಇದು ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ.

ವೀರ ಭಗತ್‌ಸಿಂಗ್  ಹೇಳುತ್ತಾರೆ “ ಅರಳಿಮರದ ರೆಂಬೆಯೊಂದನ್ನು ಯಾರೋ ಮುರಿದರೆಂದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿಬಿಡುತ್ತದೆ.Bhagat-Singh ಮುಹಮ್ಮದೀಯರ ಕಾಗದದ ಪ್ರತಿಮೆ ತಾಜಿಯಾದ ಮೂಲೆಯೊಂದು ಮುಕ್ಕಾಗಿ ಬಿಟ್ಟಿತೂ ಅಲ್ಲಾಹುವಿಗೆ ಕೆಂಡದಂಥ ಕೋಪಬಂದುಬಿಡುತ್ತದೆ; ಅವನು  ಕಾಫಿರ ಹಿಂದುಗಳ ರಕ್ತದ ಹೊರತು ಇನ್ಯಾರಿಂದಲೂ ಸಮಾಧಾನಗೊಳ್ಳನು. ಇಲ್ಲಿ ಪವಿತ್ರ ಪಶುಗಳ ಹೆಸರಲ್ಲಿ ಮನುಷ್ಯರು ಒಬ್ಬರೊಬ್ಬರ ತಲೆ  ಒಡೆದುಕೊಳ್ಳುತ್ತಿದ್ದಾರೆ. ನಮ್ಮ ದೃಷ್ಟಿ ಧಾರ್ಮಿಕ ರಾಷ್ಟ್ರೀಯತೆಯಿಂದ ಮಸುಕಾಗಿದೆ”

 ಕರಾವಳಿಯಲ್ಲಿ  ನಿನ್ನ ರಕ್ಷಣೆಯ ಹೆಸರಲ್ಲಿ ಇನ್ನೆಷ್ಟು ಪ್ರಮಾಣದ  ರಕ್ತ ಹರಿಸುತ್ತಾರೂ  ಈ ಮತಾಂಧರು, ಓ ಗೋಮಾತೆಯೇ?

12 comments

 1. ಮತಾಂಧರ ಮೇಲೆ ಕಠಿಣ ಕಾನೂನು ಕ್ರಮವನ್ನು ತಕ್ಷಣ ತೆಗೆದುಕೊಳ್ಳತಕ್ಕದ್ದು.

 2. ಇದು ಇಲ್ಲಿಗೆ ನಿಲ್ಲುವುದಿಲ್ಲ… ಹಲ್ಲೆ ಮಾಡುವವರು ಯಾರದೋ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ಆಹಾರ ಮುಸ್ಲಿಮರದ್ದಲ್ಲ. ದಲಿತರು, ಆದಿವಾಸಿಗಳು, ಹಿಂದುಳಿದವರು, ಕ್ರೈಸ್ತರು ಇದನ್ನು ಸೇವಿಸುತ್ತಾರೆ.
  AKUPARA-the tortoise – on which Earth or Prithvi rests
  ANTELOPE— vehicle of Vayu and Chandra
  ARVA — mythical being half horse and half bird – one of the horses of the moon
  BUFFALO — vehicle of Yama
  CERBURA — the three headed infernal dog of the Krishna legend
  CROW — vehicle of Shani
  DOG and HORSE — vehicle of Shiva as Bhairava
  JAMBAVANT — the king of bears – ally of Rama
  MAKARA or JALAMPA — the mythical sea monster – vehicle of Varuna (god of water)
  MOUSE — vehicle of Ganesha
  NANDI — the bull – vehicle of Shiva and Parvati
  PARAVANI — the peacock – vehicle of Kartikeya
  PARROT — vehicle of Kamadeva
  RAM — the he-goat – vehicle of Agni
  SARAMA — dog of Indra
  SWAN — vehicle of Saraswati and Brahma
  TARKSHYA — winged horse personifying the sun
  TIGER and LION — vehicle of Parvati as Kali and Durga
  UCHCHAIH-SRAVAS — the eight headed king of horses produced during the churning
  of oceans
  ಇದುವರೆಗೆ ಇವುಗಳ ರಕ್ಷಣೆಗೆ ಇವರು ಮುಂದೆ ಬಂದದ್ದು ಇದೆಯೇ? ಗೋವಿನ ರಾಜಕೀಯ ಮುಗಿದರೆ ನಂತರ ಇದು ಪ್ರಾರಂಭ ಆಗಬಹುದು. ಕೊನೆಗೆ ಬ್ರಾಹ್ಮಣ ಸಸ್ಯಾಹಾರ ಎಲ್ಲರೂ ತಿನ್ನಬೆಕು… ಭಟ್ರ ಹೋಟೆಲು ಫುಲ್ ಊಟ… ಪೆಟ್ಟು ತಿನ್ನೂದು ಮತ್ತು ಜೈಲಿಗೆ ಹೋಗುವುದು ಕೆಳಜಾತಿಯವರು ಮತ್ತು ಮುಸ್ಲಿಮರು..ಅದನ್ನು ಇಬ್ಬರೂ ಸೇವಿಸುತ್ತಾರೆ

  1. ಆಹಾ! ಎಷ್ಟು ಚೆನ್ನಾಗಿ ಬ್ರಾಹ್ಮಣರ ಸಸ್ಯಾಹಾರ ಅಂತ ಅಪ್ಪಣೆ ಕೊಡಿಸಿದಿರಿ ಮಹಾಪ್ರಭುಗಳೇ..ಪ್ರಗತಿಪರರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ವತಃ ತಾವೇ ಅನುಭವಮಂಟಪಕ್ಕೆ ಹೋಗಿ ಬಂದಂತೆ, ಬಿಜ್ಜಳನ ಆಸ್ಥಾನದಲ್ಲಿದ್ದು ಬಂದಂತೆ ಅಪ್ಪಣೆ ಕೊಡಿಸುತ್ತಾರಲ್ಲಾ.. ಆ ಸಾಕ್ಷಾತ್ ಬಸವಣ್ಣನವರು ನಿಮಗೆ ಮಾಂಸಾಹಾರವನ್ನೇ ಉಣ್ಣಲು ಹೇಳಿದ್ದಾರೆಯೆ? ಸ್ವತಃ ಬ್ರಾಹ್ಮಣರು ವೈದಿಕ ವಿಧಾನದಲ್ಲಿ ಯಜ್ಞಪಶುವನ್ನು ಕೊಲ್ಲುವುದನ್ನು ಖಂಡಿಸಿದವರು ಬಸವಣ್ಣನವರು. ಕೇವಲ ಬ್ರಾಹ್ಮಣರು ಮಾತ್ರ ಸಸ್ಯಾಹಾರಿಗಳಲ್ಲ. ಇದು ಸುಳ್ಳು ಎನ್ನುವುದಾದರೆ ಅದನ್ನು ಸಾಕ್ಷ್ಯಾಧಾರಗಳ ಮೂಲಕ ನಿರೂಪಿಸಿ.

 3. ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿದಾಗ ಆಗುವ ಅನರ್ಥಗಳು ಹೀಗೇ ಇರುತ್ತವೆ. ಇರ್ಷಾದ್ ಅವರ ಲೇಖನದ ತಲೆಬರಹವೇ ವಿರೋಧಾಭಾಸದಿಂದ ಕೂಡಿದೆ. “ಹರಿಯುತ್ತಿರುವ ರಕ್ತಕ್ಕೆ ಸಾಕ್ಷಿಯಾಗುತ್ತಿದೆ ಈ ಗೋಮಾತೆ” ಎಂಬ ತಲೆಬರಹ ಓದಿ ವರ್ತಮಾನ ಜಾಲತಾಣ ಇದೀಗ ಭಿನ್ನಮತದ ಲೇಖನಗಳಿಗೂ ಒಂದು ಅವಕಾಶವನ್ನು ಕೊಡುತ್ತಿದೆಯೇನೋ ಎಂಬ ಕುತೂಹಲದಿಂದ ಓದಿದೆ. ಕೆಲವೇ ಕ್ಷಣಗಳಲ್ಲಿ ಭ್ರಮನಿರಸನವಾಯಿತು.

  ಕೆಲವು ದಿನಗಳ ಕೆಳಗೆ ಶೃಂಗೇರಿಯ ಚೆಕ್ ಪೋಸ್ಟ್ ಒಂದರಲ್ಲಿ ದನಸಾಗಿಸುವ ಕೆಲಸದಲ್ಲಿ ನಿರತನಾಗಿದ್ದ ಮುಸ್ಲಿಮ್ ಯುವಕ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ತುತ್ತಾದಾಗ “ಮಾಧ್ಯಮ ನ್ಯಾಯಾಲಯ” ದಲ್ಲಿ ಸರ್ಕಾರವನ್ನೇ ಆರೋಪಿ, ಅಪರಾಧಿ ಎಲ್ಲವನ್ನೂ ಮಾಡಿ “ತತ್ಕಾಲ್ ನ್ಯಾಯ” ಕೊಟ್ಟಿದ್ದ ಲೇಖನ ಕೂಡಾ ಇರ್ಷಾದ್ ಅವರೇ ಬರೆದದ್ದು ಎಂದು ನೆನಪಿನಲ್ಲಿದ್ದರೂ ಡಿಫರೆಂಟ್ ಆದ ಲೇಖನವನ್ನು ಅಪೇಕ್ಷಿಸಿ ಓದಹೊರಟ ನನ್ನ ಆಶಾವಾದಕ್ಕೆ ನಾನೇ ಬೈದುಕೊಂಡೆ.

  ಹೇಳಬಾರದು ಎಂದೆನಿಸಿದರೂ ನಮ್ಮ ಜಾನಪದರ ಲೋಕಜ್ಞಾನದ ಗಾದೆ ನೆನಪಿಗೆ ಬರುತ್ತದೆ “ದನ ತಿನ್ನುವವನಿಗೆ ಗೊಬ್ಬರದ ಆಣೆಯಂತೆ”

 4. ಮುಸ್ಲಿಮ್ ಮೂಲಭೂತವಾದವನ್ನು ಖಡಾಖಂಡಿತವಾಗಿ ವಿರೋಧಿಸುತ್ತೇನೆ. ಅಂದ ಮಾತ್ರಕ್ಕೆ ಹಿಂದೂ ಕೋಮುವಾದವನ್ನು ಒಪ್ಪಿಕೊಂಡಿದ್ದೇವೆ ಎಂಬ ತಪ್ಪುತಿಳುವಳಿಕೆ ಬೇಡ ಬಿ.ಎನ್.ಎಸ್. ನನ್ನ ಕಣ್ಣ ಮುಂದೆ ಇವೆರಡು ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಧನ್ಯವಾದಗಳು

  1. ಇರ್ಷಾದ್ ರವರೆ, ಮೂಲಭೂತವಾದದ ಬಗ್ಗೆ ನಿಮಗಿರುವ ವಿರೋಧವನ್ನು ನಾನು ಪ್ರಶ್ನಿಸುತ್ತಿಲ್ಲ. ನನ್ನ ಆಕ್ಷೇಪಣೆಯಿರುವುದು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಮೃತಿಗಳನ್ನೂ, ಶ್ರುತಿಗಳನ್ನೂ ಮತ್ತು ಸ್ವಾಮಿ ವಿವೇಕಾನಂದ, ಮತ್ತು ವಚನಕಾರರನ್ನು ಉದ್ಧರಿಸುವ ಕುಚೋದ್ಯ ಪ್ರವೃತ್ತಿಗೆ ಮಾತ್ರ.

   ಗೋಹತ್ಯೆ ಮಹಾಪಾಪ ಎಂದು ಸ್ವತಃ ಮಹಾತ್ಮ ಗಾಂಧಿ ಹೇಳಿದ್ದಾರೆ. ದಿನಬೆಳಗಾದರೆ ಗಾಂಧೀಜಿಯ ಜಪಮಾಡುವ, ಅಹಿಂಸೆ, ಸರ್ವಧರ್ಮ ಸಮಭಾವ ಎಂದೆಲ್ಲ ಪುಂಗಿ ಬಿಡುವ ಹುಸಿ ಜಾತ್ಯತೀತವಾದಿಗಳು, ಮಾಂಸಾಹಾರ (ವಿಶೇಷತಃ ಗೋಮಾಂಸ) ಭಕ್ಷಣೆಯ ಸಮರ್ಥಕರು, ಇದನ್ನೇಕೆ ಹೇಳುವುದಿಲ್ಲ? ಬಹುಸಂಖ್ಯಾತ ಕೋಮಿನ ಜನರಿಗೆ ಗೋಮಾಂಸ ಭಕ್ಷಣೆ ಸಮ್ಮತವಲ್ಲ ಎಂದು ತಿಳಿದಿದ್ದರೂ, ಪ್ರೋಟೀನ್, ಅವಶ್ಯಕ ಪೋಷಕಾಂಶಗಳಿಗೆ ಬದಲಿ ಮೂಲಗಳಿದ್ದರೂ ಗೋಮಾಂಸವೇ ಆಗಬೇಕು ಎನ್ನುವ ಹಟವೇಕೆ?

   ನನಗೆ ತಿಳಿದಿದೆ, ಈ ಚರ್ಚೆ ಇಲ್ಲಿಗೆ ನಿಲ್ಲುವುದಿಲ್ಲ ಎಂದು. ಆದರೆ ನಿಮ್ಮ ವಾದದ ಎಲ್ಲ ಪೊರೆಗಳು ಸತ್ಯವನ್ನು ಹೇಳುತ್ತಿಲ್ಲ. ಈ ಮಾತನ್ನು ಯಾವುದೇ ರಾಗದ್ವೇಷಗಳಿಲ್ಲದೆ ಒಮ್ಮೆ ಯೋಚಿಸಿ.

   1. ಇರ್ಶಾದ್, ಕೋಮುವಾದಿಗಳ ವಿರುದ್ಧ ನಿಮ್ಮ ಹೋರಾಟ ಸ್ತುತ್ಯರ್ಹ. ಆದರೆ ನಿಮ್ಮ ಪ್ರಗತಿಪರ ನಿಲುವನ್ನು ಸಮರ್ಥಿಸಿಕೊಳ್ಳಲು ಮನು ಸ್ಮೃತಿಯನ್ನು ಉಲ್ಲೇಖಿಸಿದ್ದು ನನಗೆ ಸರಿ ಕಾಣುತ್ತಿಲ್ಲ. ಮನು ಸ್ಮೃತಿಯು ಮನುವಾದಿಗಳ ಬೈಬಲ್. ಅದು ವೈದಿಕ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಅದರಿಂದ ನೀವು ದೂರವಿರುವುದು ಉತ್ತಮ. ಇಲ್ಲವಾದರೆ ನೀವೊಬ್ಬ ಮುಸಲ್ಮಾನ್ ಮುಖವಾಡದ ಮನುವಾದಿ ಎಂಬ ಅನುಮಾನ ದೃಢವಾಗುತ್ತದೆ.

  2. ಮೂಲಭೂತವಾದ ಎಂದರೆ ಏನು? ಎಂಬುವುದರ ವ್ಯಾಖ್ಯಾನ ನೀಡದೆ ಅದರ ಸರಿತಪ್ಪುಗಳ ಚರ್ಚೆ ಸಮಂಜಸವಲ್ಲ ನಿಜವಾಗಿ ಇಲ್ಲಿ ಮೂಲಭೂತವಾದಿಗಳು ಎಂಬ ಪದವನ್ನು ನಾವು ಅರ್ಥೈಸಿಕೊಂಡ ರೀತಿಯು ತಪ್ಪಾಗಿದೆಯೇ ವಿನಾ ಮೂಲಭೂತವಾದ ತಪ್ಪಲ್ಲ ವಾಸ್ತವದಲ್ಲಿ ಒಂದೊಮ್ಮೆ ಜನಗಳು ಅವರವರ ಧರ್ಮಗಳಲ್ಲಿ ಮೂಲಭೂತವಾದಿಗಳು ಅನಿಸಿಕೊಂಡರೆ ಪ್ರಾಯಶಹ ಸಮಾಜದಲ್ಲಿ ಸಮಸ್ಯೆಗಳೇ ಇರಲಾರದು ಯಾಕೆಂದರೆ ಯಾವುದೇ ಧರ್ಮದ ಮೂಲಭೂತ ಸಿದ್ದಾಂತಗಳು ಹಿಂಸೆ, ಕ್ರೌರ್ಯ,ಪರಧರ್ಮದಲ್ಲಿ ಸಹಿಷ್ಣುತೆ ಇಲ್ಲದಿರುವಿಕೆಯನ್ನು ಭೋದಿಸುವ ವಿಷಯಗಳನ್ನು ಹೊಂದಿದೆಯೆಂದು ನಾನು ಭಾವಿಸುವುದಿಲ್ಲ. ಯಾರಾದರೂ ತನ್ನ ಧರ್ಮದಲ್ಲಿ ಅಂತಹ ಸಂದೇಶಗಳು ಇವೆ ಎಂದು ತಿಳಿದಿದ್ದರೆ ಅದು ಆತನ ಅಜ್ಞಾನ ಅಥವಾ ಧಾರ್ಮಿಕ ತತ್ವಗಳನ್ನು ತಿಳಿಯುವಲ್ಲಿ ಆತನಿಗೆ ಸಂಭವಿಸಿದ ಎಡವಟ್ಟು ಅಲ್ಲವಾದಲ್ಲಿ ಆತನ ಸೀಮಿತ ಜ್ಞಾನದಿಂದ ಮಾಡಿಕೊಂಡ ಅನರ್ಥಗಳೇ ಕಾರಣವಾಗಿವೆ. ಧರ್ಮದ ಸಂದೇಶಕ್ಕೆ ವಿರುದ್ದವಾದ ಧಾರ್ಮಿಕ ಮತಿಭ್ರಾಂತಿಯನ್ನು ಧಾರ್ಮಿಕ ಮೂಲಭೂತವಾದ ಎಂದು ಹೆಸರಿಸುವುದು ಧರ್ಮಕ್ಕೆ ಮಾಡುವ ಅಪಚಾರವಾಗಿದೆ ಇಲ್ಲಿ ಧರ್ಮದ ಸಂದೇಶಗಳನ್ನು ಅರಿಯದ ಸ್ವಯಂ ತನ್ನನ್ನು ಮೇಧಾವಿಯೆಂದು ಬಗೆದ ಕೆಲ ಜನರಿಂದಲೇ ಇತ್ಯಾದಿ ಧರ್ಮದ ಬಗ್ಗೆ ಸಿಡುಕುತನ ಹಾಗೂ ಎಲ್ಲ ಸಮಸ್ಯೆಗಳಿಗೆ ಧರ್ಮ ಕಾರಣ ಎಂಬ ಪೂರ್ವಗ್ರಹತೆಗಳನ್ನು ಅವರಲ್ಲಿ ನಾವು ಕಾಣುತ್ತೇವೆ ಇತ್ಯಾದಿ ಜನಗಳು ಆಯಾ ಧರ್ಮದ ಸಂದೇಶಗಳನ್ನು ಒಮ್ಮೆಯಾದರೂ ಆರಂಭದಿಂದ ಅಂತ್ಯದವರೆಗೆ ಅರ್ಥಸಹಿತ ಅಧ್ಯಯನ ನಡೆಸಿರುವರೋ ಎಂಬ ಪ್ರಶ್ನೆಗೆ ಉತ್ತರ ಇಲ್ಲವೆಂದೇ ಆಗಿರುತ್ತದೆ. ಎಂದು ಮಾತ್ರವಲ್ಲ ಆ ಧರ್ಮಗ್ರಂಥವನ್ನು ಅದರ ಮೂಲಭಾಷೆಯಲ್ಲಿ ಸರಿಯಾದ ಉಚ್ಚಾರದಲ್ಲಿ ಪಟಿಸಲು ಸಾಧ್ಯವಿಲ್ಲದ ಪಟಿನ್ಗರು (ಅದು ಒಳ್ಳೆಯದಾಯಿತು ಇದು ತಪ್ಪಾದುದು ಇನ್ನೊಂದು ಸರಿಯಾದದ್ದೇ ಎಂಬಿತ್ಯಾದಿಯಾಗಿ) ಧಾರ್ಮಿಕ ಫತ್ವ (ತೀರ್ಪು) ನೀಡ ಹೊರಟಿರುವುದೇ ಸಮಾಜದ ಸಮಸ್ಯೆಯಾಗಿದೆ.ಈ ಸಮಸ್ಯೆ ಎಲ್ಲ ಧರ್ಮದಲ್ಲಿಯೂ ಇದೆ. ಈ ರೀತಿ ತಾನು ಮಾತಾಡುವ ವಿಷಯದಲ್ಲಿ ಸರಿಯಾದ ಜ್ಞಾನ ಇಲ್ಲದ ಅಥವಾ ಯಾರ ಸಂದೇಶವನ್ನು ಹೇಳಲಾಗುತ್ತದೋ ಆ ವ್ಯಕ್ತಿಯಲ್ಲಿ ಸರಿಯಾದ ಗೌರವ ವಿಶ್ವಾಸಗಳಿಲ್ಲದ ವ್ಯಕ್ತಿಗಳು ಆ ಬಗ್ಗೆ ಮಾತನಾಡುವುದೇ ವಿರೋಧಬಾಸವಾಗಿದ್ದು ಇದಕ್ಕೆ ಸಮಾನವಾದ ಇದರ ಒಂದು ಸಣ್ಣ ಉದಾಹರಣೆ ಎಂದರೆ ಅದು ಇತ್ತೀಚೆಗಿನ ಘಟನೆಯನ್ನು ಉದಾಹರಿಸಿ ಹೇಳುವುದಾದರೆ ಗಾಂಧೀ ಹಂತಕನ ಪರವಹಿಸುವ ಗಾಂಧಿ ವಿರೋಧಿ ಸೂಲಿಬೆಲೆಯು ಗಾಂಧೀಜಯಂತಿಗೆ ಆಹ್ವಾನಿತ ಭಾಷಣಗಾರನಾಗಿ ಕಂಡದ್ದಕ್ಕೆ ಸಮಾನ ಎನ್ನಬಹುದು.ಗಾಂಧಿಯ ಆದರ್ಶಗಳನ್ನು ಸರಿಯಾಗಿ ತಿಳಿಯದ,ಗೌರವಿಸದ,ಗಾಂಧೀ ತತ್ವಗಳಲ್ಲಿ ನಂಬಿಕೆಯಿಲ್ಲದವನ ಗಾಂಧಿ ಭಾಷಣ ಹೇಗಿರಬಹುದು ಅದನ್ನು ಸಂಯೋಜನೆ ಮಾಡಿದ ಮತಿಹೀನ ಸರಕಾರಕ್ಕಿರುವ ಅರಿವು ಇವೆಲ್ಲ ಇಲ್ಲಿ ಪ್ರಶ್ನಾರ್ಹವಾದಂತೆ ಧಾರ್ಮಿಕ ನಂಬಿಕೆ (ವಿಶ್ವಾಸ) ಅರಬಿ ಪಾರಿಭಾಶಿಕದಲ್ಲಿ (ಈಮಾನ್) ಇಲ್ಲದ ಜನಗಳ ಧಾರ್ಮಿಕ ವಿಧಿಯೂ ಅದೇ ರೀತಿ ಇರಬಹುದು.

   ವಾಸ್ತವದಲ್ಲಿ ಧರ್ಮದ ಅಚಲ ವಿಶ್ವಾಸಿಯಾದ ಒಬ್ಬ ಮುಸ್ಲಿಂ ಅದರ ಮೂಲಭೂತವಾದ ಸಿದ್ದಾಂತಕ್ಕೆ ಬದ್ದನಾಗಿ ಬದುಕುತ್ತಾನೆ ಆತನ ೫ ಹೊತ್ತಿನ ಪ್ರಾರ್ಥನೆ ಆತನು ತನ್ನ ಗಳಿಕೆಯಿಂದ ಕೊಡುವ ದಾನ ಆತನು ರಮದ್ಹಾನ್ ತಿಂಗಳಲ್ಲಿ ಕೈಗೊಳ್ಳುವ ಉಪವಾಸ ಹಾಗೆಯೆ ಆತನ ಹಜ್ ಯಾತ್ರೆ ಯಾರನ್ನೂ ನೋಯಿಸುವುದಿಲ್ಲ ಉಪದ್ರವಿಸುವುದೂ ಇಲ್ಲ ಅದೇ ರೀತಿ ಹಿಂದೂ ವ್ಯಕ್ತಿ ಇರಲಿ ಕ್ರೈಸ್ತನಿರಲಿ ಇನ್ನಾವ ಮತಾವಲಂಬಿ ಇದ್ದರೂ ಆತನು ಮೂಲಭೂತವಾಗಿ ಸರಿಯಿದ್ದಾಗ ಅಲ್ಲಿ ಸಮಸ್ಯೆಗಳೇ ಇರಲಾರದು.ಆದರೆ ಧರ್ಮದ ಮೂಲಭೂತ ಆಶಯಗಳಿಗೆ ವಿರುದ್ದವಾದ ಮತಿಬ್ರಾಂತಿಗೆ ಧರ್ಮದ ಲೇಪನ ಹಚ್ಚಿ ಧರ್ಮದ ಟೀಕೆ ಸಲ್ಲದು ಅದು ಆತನ ಧಾರ್ಮಿಕ ಅಜ್ಞಾನವನ್ನು ಮಾತ್ರ ಪ್ರದರ್ಶಿಸುವುದಾಗಿದೆ.

   1. ೨೦ ನೆಯ ಶತಮಾನದ ಆದಿಭಾಗದಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಒಂದು ಚರ್ಚ್ – Christian Fundamentalist movement – ಬೈಬಲ್ ನಲ್ಲಿ ಇರುವ ವಿಷಯಗಳನ್ನು ಹಾಗೇ ನಂಬುವ, ಪಾಲಿಸುವ ಉದ್ದೇಶದಿಂದ ಪ್ರೊಟೆಸ್ಟೆಂಟ್ ಪಂಥದೊಳಗೆ ಶುರುವಾದ ಒಂದು ಚಳುವಳಿ. ಇದರ ಯಥಾವತ್ ಅನುವಾದ ೨೦ ನೆಯ ಶತಮಾನದ ಭಾರತೀಯ ‘ಬಾಡಿಗೆ ಚಿಂತಕ’ರಿಗೆ ದಕ್ಕಿದ್ದು ‘ಮೂಲಭೂತವಾದ’ ಎನ್ನುವ ಹೆಸರಿನಲ್ಲಿ! ಅದೇ ಪದವನ್ನು ಬಳಸುತ್ತಾ ಕಡೆಗೆ ಪ್ರಚಲಿತ ದಿನಗಳಲ್ಲಿ ಯಾವುದೇ ಧರ್ಮದ ‘ಅತಿಸಾಂಪ್ರದಾಯಿಕತೆ’ ಯ ಅನುಯಾಯಿಗಳಿಗೆ ಈ ಬಿರುದನ್ನು ಕೊಡಲಾಗುತ್ತಿದೆ. ಸೋಜಿಗವೆಂದರೆ ಇಂಥದ್ದೇ ಮತ್ತೊಂದು ಪದ ‘ಸೆಕ್ಯುಲರಿಸಮ್’…ಈ ಪದಕ್ಕೆ ನಿಘಂಟಿನ ಅನುವಾದಕ್ಕೆ ಮೊರೆಹೋದರೆ ನಮಗೆ ದೊರೆಯುವ ಅರ್ಥ ‘ಭೌತಿಕ’ ಅಥವಾ ‘ಐಹಿಕ’ ಎನ್ನುವುದೇ! ನಾನು ಮೊಟ್ಟಮೊದಲಬಾರಿಗೆ ಈ ಪದಕ್ಕೆ ನಿಘಂಟಿನ ಅರ್ಥದ ವ್ಯಾಖ್ಯಾನ ಕೇಳಿದ್ದು ಆರೆಸ್ಸೆಸ್ ನ ಮೂರನೆಯ ಸರಸಂಘಚಾಲಕರಾದ ದಿ. ಬಾಳಾಸಾಹೇಬ್ ದೇವರಸ್ ಅವರ ೧೯೮೧ ರ ಭಾಷಣವೊಂದರಲ್ಲಿ!

   2. VERY TRUE DEAR KUKKAJE. EACH ONE OF US RESPECT ONE ANOTHER’

    S RELIGIOUS MATTERS AND IT WILL AUTOMATICALLY MAINTAIN HARMONY IN SOCIETY.

 5. ಇರ್ಶಾದ್, ಇವತ್ತಿನ ದಿನಪತ್ರಿಕೆಗಳನ್ನು ನೀವು ನೋಡಿರಬಹುದು. ನಿನ್ನೆ ಗೋಹತ್ಯೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಪುಸ್ತಕಗಳನ್ನು ಹಂಚುತ್ತಿದ್ದ ಒಬ್ಬನನ್ನು ಆ ಪ್ರದೇಶದ ಮಾಂಸದ ಅಂಗಡಿಯೊಂದರ ಕೆಲಸಗಾರರು ಹತ್ಯೆ ಮಾಡಲು ಯತ್ನಿಸಿದ್ದಾರೆ, ಆತ ಈಗ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ. ಈ ಘಟನೆ ಬಗ್ಗೆಯೂ ನೀವು ಬರೆಯಬೇಕು.

 6. ಮೂಲಭೂತವಾದ ತಪ್ಪಲ್ಲ

  ಮೂಲಭೂತವಾದ ಎಂದರೆ ಏನು? ಎಂಬುವುದರ ವ್ಯಾಖ್ಯಾನ ನೀಡದೆ ಅದರ ಸರಿತಪ್ಪುಗಳ ಚರ್ಚೆ ಸಮಂಜಸವಲ್ಲ ನಿಜವಾಗಿ ಇಲ್ಲಿ ಮೂಲಭೂತವಾದಿಗಳು ಎಂಬ ಪದವನ್ನು ನಾವು ಅರ್ಥೈಸಿಕೊಂಡ ರೀತಿಯು ತಪ್ಪಾಗಿದೆಯೇ ವಿನಾ ಮೂಲಭೂತವಾದ ತಪ್ಪಲ್ಲ ವಾಸ್ತವದಲ್ಲಿ ಒಂದೊಮ್ಮೆ ಜನಗಳು ಅವರವರ ಧರ್ಮಗಳಲ್ಲಿ ಮೂಲಭೂತವಾದಿಗಳು ಅನಿಸಿಕೊಂಡರೆ ಪ್ರಾಯಶಹ ಸಮಾಜದಲ್ಲಿ ಸಮಸ್ಯೆಗಳೇ ಇರಲಾರದು ಯಾಕೆಂದರೆ ಯಾವುದೇ ಧರ್ಮದ ಮೂಲಭೂತ ಸಿದ್ದಾಂತಗಳು ಹಿಂಸೆ, ಕ್ರೌರ್ಯ,ಪರಧರ್ಮದಲ್ಲಿ ಸಹಿಷ್ಣುತೆ ಇಲ್ಲದಿರುವಿಕೆಯನ್ನು ಭೋದಿಸುವ ವಿಷಯಗಳನ್ನು ಹೊಂದಿದೆಯೆಂದು ನಾನು ಭಾವಿಸುವುದಿಲ್ಲ. ಯಾರಾದರೂ ತನ್ನ ಧರ್ಮದಲ್ಲಿ ಅಂತಹ ಸಂದೇಶಗಳು ಇವೆ ಎಂದು ತಿಳಿದಿದ್ದರೆ ಅದು ಆತನ ಅಜ್ಞಾನ ಅಥವಾ ಧಾರ್ಮಿಕ ತತ್ವಗಳನ್ನು ತಿಳಿಯುವಲ್ಲಿ ಆತನಿಗೆ ಸಂಭವಿಸಿದ ಎಡವಟ್ಟು ಅಲ್ಲವಾದಲ್ಲಿ ಆತನ ಸೀಮಿತ ಜ್ಞಾನದಿಂದ ಮಾಡಿಕೊಂಡ ಅನರ್ಥಗಳೇ ಕಾರಣವಾಗಿವೆ. ಧರ್ಮದ ಸಂದೇಶಕ್ಕೆ ವಿರುದ್ದವಾದ ಧಾರ್ಮಿಕ ಮತಿಭ್ರಾಂತಿಯನ್ನು ಧಾರ್ಮಿಕ ಮೂಲಭೂತವಾದ ಎಂದು ಹೆಸರಿಸುವುದು ಧರ್ಮಕ್ಕೆ ಮಾಡುವ ಅಪಚಾರವಾಗಿದೆ ಇಲ್ಲಿ ಧರ್ಮದ ಸಂದೇಶಗಳನ್ನು ಅರಿಯದ ಸ್ವಯಂ ತನ್ನನ್ನು ಮೇಧಾವಿಯೆಂದು ಬಗೆದ ಕೆಲ ಜನರಿಂದಲೇ ಇತ್ಯಾದಿ ಧರ್ಮದ ಬಗ್ಗೆ ಸಿಡುಕುತನ ಹಾಗೂ ಎಲ್ಲ ಸಮಸ್ಯೆಗಳಿಗೆ ಧರ್ಮ ಕಾರಣ ಎಂಬ ಪೂರ್ವಗ್ರಹತೆಗಳನ್ನು ಅವರಲ್ಲಿ ನಾವು ಕಾಣುತ್ತೇವೆ ಇತ್ಯಾದಿ ಜನಗಳು ಆಯಾ ಧರ್ಮದ ಸಂದೇಶಗಳನ್ನು ಒಮ್ಮೆಯಾದರೂ ಆರಂಭದಿಂದ ಅಂತ್ಯದವರೆಗೆ ಅರ್ಥಸಹಿತ ಅಧ್ಯಯನ ನಡೆಸಿರುವರೋ ಎಂಬ ಪ್ರಶ್ನೆಗೆ ಉತ್ತರ ಇಲ್ಲವೆಂದೇ ಆಗಿರುತ್ತದೆ. ಎಂದು ಮಾತ್ರವಲ್ಲ ಆ ಧರ್ಮಗ್ರಂಥವನ್ನು ಅದರ ಮೂಲಭಾಷೆಯಲ್ಲಿ ಸರಿಯಾದ ಉಚ್ಚಾರದಲ್ಲಿ ಪಟಿಸಲು ಸಾಧ್ಯವಿಲ್ಲದ ಪಟಿನ್ಗರು (ಅದು ಒಳ್ಳೆಯದಾಯಿತು ಇದು ತಪ್ಪಾದುದು ಇನ್ನೊಂದು ಸರಿಯಾದದ್ದೇ ಎಂಬಿತ್ಯಾದಿಯಾಗಿ) ಧಾರ್ಮಿಕ ಫತ್ವ (ತೀರ್ಪು) ನೀಡ ಹೊರಟಿರುವುದೇ ಸಮಾಜದ ಸಮಸ್ಯೆಯಾಗಿದೆ.ಈ ಸಮಸ್ಯೆ ಎಲ್ಲ ಧರ್ಮದಲ್ಲಿಯೂ ಇದೆ. ಈ ರೀತಿ ತಾನು ಮಾತಾಡುವ ವಿಷಯದಲ್ಲಿ ಸರಿಯಾದ ಜ್ಞಾನ ಇಲ್ಲದ ಅಥವಾ ಯಾರ ಸಂದೇಶವನ್ನು ಹೇಳಲಾಗುತ್ತದೋ ಆ ವ್ಯಕ್ತಿಯಲ್ಲಿ ಸರಿಯಾದ ಗೌರವ ವಿಶ್ವಾಸಗಳಿಲ್ಲದ ವ್ಯಕ್ತಿಗಳು ಆ ಬಗ್ಗೆ ಮಾತನಾಡುವುದೇ ವಿರೋಧಬಾಸವಾಗಿದ್ದು ಇದಕ್ಕೆ ಸಮಾನವಾದ ಇದರ ಒಂದು ಸಣ್ಣ ಉದಾಹರಣೆ ಎಂದರೆ ಅದು ಇತ್ತೀಚೆಗಿನ ಘಟನೆಯನ್ನು ಉದಾಹರಿಸಿ ಹೇಳುವುದಾದರೆ ಗಾಂಧೀ ಹಂತಕನ ಪರವಹಿಸುವ ಗಾಂಧಿ ವಿರೋಧಿ ಸೂಲಿಬೆಲೆಯು ಗಾಂಧೀಜಯಂತಿಗೆ ಆಹ್ವಾನಿತ ಭಾಷಣಗಾರನಾಗಿ ಕಂಡದ್ದಕ್ಕೆ ಸಮಾನ ಎನ್ನಬಹುದು.ಗಾಂಧಿಯ ಆದರ್ಶಗಳನ್ನು ಸರಿಯಾಗಿ ತಿಳಿಯದ,ಗೌರವಿಸದ,ಗಾಂಧೀ ತತ್ವಗಳಲ್ಲಿ ನಂಬಿಕೆಯಿಲ್ಲದವನ ಗಾಂಧಿ ಭಾಷಣ ಹೇಗಿರಬಹುದು ಅದನ್ನು ಸಂಯೋಜನೆ ಮಾಡಿದ ಮತಿಹೀನ ಸರಕಾರಕ್ಕಿರುವ ಅರಿವು ಇವೆಲ್ಲ ಇಲ್ಲಿ ಪ್ರಶ್ನಾರ್ಹವಾದಂತೆ ಧಾರ್ಮಿಕ ನಂಬಿಕೆ (ವಿಶ್ವಾಸ) ಅರಬಿ ಪಾರಿಭಾಶಿಕದಲ್ಲಿ (ಈಮಾನ್) ಇಲ್ಲದ ಜನಗಳ ಧಾರ್ಮಿಕ ವಿಧಿಯೂ ಅದೇ ರೀತಿ ಇರಬಹುದು.

  ವಾಸ್ತವದಲ್ಲಿ ಧರ್ಮದ ಅಚಲ ವಿಶ್ವಾಸಿಯಾದ ಒಬ್ಬ ಮುಸ್ಲಿಂ ಅದರ ಮೂಲಭೂತವಾದ ಸಿದ್ದಾಂತಕ್ಕೆ ಬದ್ದನಾಗಿ ಬದುಕುತ್ತಾನೆ ಆತನ ೫ ಹೊತ್ತಿನ ಪ್ರಾರ್ಥನೆ ಆತನು ತನ್ನ ಗಳಿಕೆಯಿಂದ ಕೊಡುವ ದಾನ ಆತನು ರಮದ್ಹಾನ್ ತಿಂಗಳಲ್ಲಿ ಕೈಗೊಳ್ಳುವ ಉಪವಾಸ ಹಾಗೆಯೆ ಆತನ ಹಜ್ ಯಾತ್ರೆ ಯಾರನ್ನೂ ನೋಯಿಸುವುದಿಲ್ಲ ಉಪದ್ರವಿಸುವುದೂ ಇಲ್ಲ ಅದೇ ರೀತಿ ಹಿಂದೂ ವ್ಯಕ್ತಿ ಇರಲಿ ಕ್ರೈಸ್ತನಿರಲಿ ಇನ್ನಾವ ಮತಾವಲಂಬಿ ಇದ್ದರೂ ಆತನು ಮೂಲಭೂತವಾಗಿ ಸರಿಯಿದ್ದಾಗ ಅಲ್ಲಿ ಸಮಸ್ಯೆಗಳೇ ಇರಲಾರದು.ಆದರೆ ಧರ್ಮದ ಮೂಲಭೂತ ಆಶಯಗಳಿಗೆ ವಿರುದ್ದವಾದ ಮತಿಬ್ರಾಂತಿಗೆ ಧರ್ಮದ ಲೇಪನ ಹಚ್ಚಿ ಧರ್ಮದ ಟೀಕೆ ಸಲ್ಲದು ಅದು ಆತನ ಧಾರ್ಮಿಕ ಅಜ್ಞಾನವನ್ನು ಮಾತ್ರ ಪ್ರದರ್ಶಿಸುವುದಾಗಿದೆ.

Leave a Reply

Your email address will not be published.