Monthly Archives: December 2014

ಭಯೋತ್ಪಾದಕ ಜ್ಯೋತಿಷಿಗಳ ವಿರುದ್ಧದ ಸಮರ ದೇಶದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ನಾಂದಿಯಾಗಲಿ…


– ಪ್ರಶಾಂತ್ ಹುಲ್ಕೋಡು


“…ಈ ದೇಶದ ಸಾಂಸ್ಕೃತಿಕ ಮರುಹುಟ್ಟಿಗಾಗಿ ರಮಣ ಮಹರ್ಷಿಯಂತಹ ಆಧ್ಯಾತ್ಮಿಕ ವ್ಯಕ್ತಿಗಳನ್ನೂ ಸಾರ್ವಜನಿಕ ಜೀವನಕ್ಕೆ ಅಹ್ವಾನಿಸಬೇಕು. ನಂಗೊತ್ತು ಈ ಮಾತುಗಳಿಂದ ನನ್ನ ಯುವ ಸ್ನೇಹಿತರು ಸಿಟ್ಟಿಗೇಳುತ್ತಾರೆ. ಆದರೂ ನಾನು ಅಂತಹದೊಂದು ಅ- ಸಂಪ್ರದಾಯಿಕ ಪ್ರಕ್ರಿಯೆಯನ್ನು ಶುರುಮಾಡಬೇಕಿದೆ. jp-jayaprakash-narayanನಾನು ನಿಮ್ಮನ್ನು ಪ್ರಚೋದಿಸಬೇಕು, ನಿಮ್ಮ ಆಲೋಚನೆಯನ್ನು ತಾಕಬೇಕು. ಹೀಗಾಗಿಯೇ ನಾನು ಇತ್ತೀಚೆಗೆ ರಮಣ ಮಹರ್ಷಿಗಳ ಬಗ್ಗೆ ನಿರಂತರವಾಗಿ ಹಾಗೂ ಪ್ರಜ್ಞಾ ಪೂರ್ವಕವಾಗಿ ಮಾತನಾಡುತ್ತಿದ್ದೇನೆ…’’

ಹೀಗಂತ ಹೇಳುತ್ತಿದ್ದರು ಜಯಪ್ರಕಾಶ್‍ ನಾರಾಯಣ್‍. ನಾನಿಲ್ಲಿ ಅವರು ಪ್ರತಿಪಾದಿಸಿದ ಸಿದ್ಧಾಂತ, ಅವರ ವಿಚಾರಗಳು, ಅವರ ಸಮಾಜ ಬದಲಾವಣೆಯ ಭಿನ್ನ ಕನಸಿನ ಹಾದಿ… ಮತ್ತಿತರ ವಿಚಾರಗಳ ಕುರಿತು ಹೇಳಲು ಹೋಗುವುದಿಲ್ಲ. ಯಾಕೆಂದರೆ, ಜೇಪಿ ಕುರಿತು ಇನ್ನೂ ಅರ್ಥ ಮಾಡಿಕೊಳ್ಳುವ ಹಂತದಲ್ಲಿ ನಾನಿದ್ದೇನೆ. ಆದರೆ, ನನ್ನಂತಹ ಯುವ ಮನಸ್ಸಿಗೂ ಜೇಪಿಯವರ ಈ ಮಾತು ತಾಕುತ್ತಿದೆ. ಒಂದಷ್ಟು ಹೊಳವುಗಳನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತಿದೆ. ನನ್ನ ಕೆಲವು ಸ್ನೇಹಿತರು ‘ಭಯೋತ್ಪಾದಕ ಜ್ಯೋತಿಷಿಗಳ’ ವಿರುದ್ಧ ಹೋರಾಟವನ್ನು ನಡೆಸಿದರು. ಆ ಮೂಲಕ ಬದಲಾಗುತ್ತಿರುವ ಕಾಲಘಟ್ಟದ ಸಂದರ್ಭದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲು ಮತ್ತು ತಮ್ಮ ದನಿಯನ್ನು ಜೀವಂತವಾಗಿ ಇಟ್ಟುಕೊಳ್ಳುವ ಬಗೆಯನ್ನು ಅವರು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಂಡುಬಂದರು. ನಾಲ್ಕು ಗೋಡೆಗಳ ನಡುವೆ ಕುಳಿತು ಸಿದ್ಧಾಂತಗಳನ್ನು ಒಣ ಒಣವಾಗಿ ಅರ್ಥಮಾಡಿಕೊಂಡು ಮಾತನಾಡುವವರಿಗಿಂತ ಇವರು ಹೆಚ್ಚು ಆಶಾವಾದಿಗಳಾಗಿ ಕಾಣುತ್ತಾರೆ. ಹೀಗಿದ್ದೂ, ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲೇಬೇಕು ಅನ್ನಿಸುತ್ತಿದೆ.

ನಮ್ಮಲ್ಲಿ ‘ಟಿವಿ ಜ್ಯೋತಿಷ್ಯ’ ಆರಂಭವಾಗಿರುವುದು ಉದಯ ಟೀವಿ ಎಂಬ ದ್ರಾವಿಡ ಚಳವಳಿಯ ನೆರಳಿನಲ್ಲಿ ಹುಟ್ಟಿಕೊಂಡ ಚಾನಲ್‍ ಮೂಲಕ. ನನ್ನದೇ ಬಾಲ್ಯದ ನೆನಪುಗಳನ್ನು ಇಟ್ಟುಕೊಂಡು ಹೇಳುವುದಾದರೆ, ಆ ಹೊತ್ತಿಗೆ ಬೆಳಗ್ಗೆ 7. 30ಕ್ಕೆ ಜೈನ್‍ ಎಂಬಾತ ಉದಯ ಟೀವಿಯಲ್ಲಿ ರಾಶಿ ಭವಿಷ್ಯ ಹೇಳುತ್ತಿದ್ದ. ಬೋರ್ಡಿಂಗ್‍ ಶಾಲೆಯಲ್ಲಿದ್ದ ನಾವುಗಳು ನಮ್ಮ ಕಲ್ಪನೆಯ ರಾಶಿಗಳನ್ನು ಗೊತ್ತು ಮಾಡಿಕೊಂಡು, ಆತ ಹೇಳುತ್ತಿದ್ದ ಭವಿಷ್ಯದ ಮೂಲಕ ದಿನವನ್ನು ಆರಂಭಿಸುತ್ತಿದ್ದೆವು. ಆದರೆ, ಅದು ಯಾವತ್ತೂ ಚಟವಾಗಲಿಲ್ಲ. ನಮ್ಮಲ್ಲಿ ಅನೇಕರು ಆತನ ಮಾತುಗಳ ಆಚೆಗೂ ನಮ್ಮದೇ ಭವಿಷ್ಯವಿದೆ ಎಂಬುದನ್ನು ಕಂಡುಕೊಂಡೆವು. ಆದರೆ, ಕೆಲವರು ಇವತ್ತಿಗೂ ಅವರದ್ದೇ ಆದ ರೀತಿಯಲ್ಲಿ ಭವಿಷ್ಯವನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಹಾಗಂತ ಅವರು ವೈಯುಕ್ತಿಕವಾಗಿ ಕೆಟ್ಟವರಾಗಿಲ್ಲ. jain-astrologerಜೀವನ ಮೌಲ್ಯಗಳನ್ನು ಹಗುರವಾಗಿಯೂ ತೆಗೆದುಕೊಂಡಿಲ್ಲ. ಆದರೆ, ಏನಾದರೂ ಸಮಸ್ಯೆ ಅಂತ ಬಂದರೆ ಅವರಿಗೆ ತಕ್ಷಣ ನೆನಪಾಗುವುದು ಜ್ಯೋತಿಷ್ಯ ಮತ್ತು ದೇವಸ್ಥಾನಗಳು.

ಅವತ್ತು ಒಂದು ಟೀವಿಯಲ್ಲಿ ಒಬ್ಬ ಜ್ಯೋತಿಷಿ ಒಂದು ಗಂಟೆ ಮಾತನಾಡಿದ ಪರಿಣಾಮವೇ ಇದಾದರೆ, ಇವತ್ತಿನ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಮನೋರಂಜನೆ, ಸುದ್ದಿ ಎರಡನ್ನೂ ಸೇರಿಸಿಕೊಂಡರೆ ಸುಮಾರು 15 ಚಾನಲ್‍ಗಳು, ಜತೆಗೆ ಕೇಬಲ್‍ ಟೀವಿಗಳು. ಹೀಗೆ ನಾನಾ ಮೂಲಗಳಿಂದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ಮನೆ ಬಾಗಿಲಿಗೂ ಜ್ಯೋತಿಷ್ಯ ತಲುಪಿದೆ. ಇದು ಅಪಾಯಕಾರಿ ಮತ್ತು ಗಂಭೀರ ಸಂಗತಿ. ಇದನ್ನು ವಿರೋಧಿಸಲು ಹೊರಡುವಾಗ ಒಂದು ಮಟ್ಟಿಗಿನ ಸಿದ್ಧತೆಯೂ ಬೇಕಿದೆ. ಜತೆಗೆ, ನಾವು ಹೇಳುವ ವಿಚಾರದಲ್ಲಿ ಜ್ಯೋತಿಷ್ಯದ ಅಪಾಯಕಾರಿ ನಡೆಗಳನ್ನು ಹೇಳುತ್ತಲೇ, ಅದರ ವ್ಯಾಪ್ತಿ ಒಳಗೆ ಇರುವವರ ಮನಸ್ಥಿತಿಯನ್ನು ಬದಲಾಯಿಸುವ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಇಲ್ಲಿ ಮನಸ್ಥಿತಿ ಎಂದರೆ, ಜೇಪಿಯವರ ‘ಇಡೀ ದೇಶದ ಸಾಂಸ್ಕೃತಿಕ ಮರು ಹುಟ್ಟು’ ಅಂತ ಅಂದುಕೊಳ್ಳಬಹುದಾ? ಆಲೋಚಿಸಬೇಕಿದೆ.

ಕಳೆದ ಇಷ್ಟು ವರ್ಷಗಳ ಅಂತರದಲ್ಲಿ ನಮ್ಮಲ್ಲಿ ನಡೆದ ಬಹುತೇಕ ಚಳವಳಿಗಳು ಅಪೂರ್ವ ಅನುಭವದ ಪಾಠಗಳನ್ನು ಬಿಟ್ಟುಹೋಗಿವೆ. ಈ ಪಾಠಗಳಲ್ಲಿ ಗೆಲುವಿಗಿಂತ ಜಾಸ್ತಿ ಸೋಲಿದೆ. ಅದು ರೈತ ಚಳವಳಿ ಇರಲಿ, ದಲಿತ ಚಳವಳಿಯಾಗಲಿ ಅಥವಾ ನಾವೇ ಹಿಂದೆ ಕಟ್ಟಿದ ವಿದ್ಯಾರ್ಥಿ ಚಳವಳಿಯನ್ನು ಇಟ್ಟುಕೊಂಡು ನೋಡಿದರೂ, ಸೋಲಿನ ಪಾಠಗಳು ದಂಡಿಯಾಗಿ ಸಿಗುತ್ತವೆ. ಒಂದು ಚಳವಳಿಯನ್ನು ಅದು ಬಿಡಿಬಿಡಿಯಾಗಿ ಆರಿಸಿಕೊಂಡ ವಿಚಾರಗಳು ಮತ್ತು ಅವುಗಳು ತಲುಪಿದ ತಾರ್ಕಿಕ ಅಂತ್ಯದ ಮೂಲಕ ನೋಡುವುದು ಒಂದು ಕ್ರಮ. ಇನ್ನೊಂದು ಈ ಬಿಡಿ ಬಿಡಿ ವಿಚಾರಗಳ ಮೂಲಕ ಇಡೀ ಚಳವಳಿ ಸಾಮಾಜಿಕವಾಗಿ ಮಾಡಿದ ಪರಿಣಾಮಗಳ ಒಟ್ಟು ಮೊತ್ತವನ್ನು ಅಳೆಯುವುದು ಮತ್ತೊಂದು ಕ್ರಮ. ಈ ಎರಡೂ ವಿಚಾರಗಳಲ್ಲೂ ಪ್ರಗತಿಪರ ಧಾರೆಯ ಚಳವಳಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಾಗಂತ ಇವು ಸಾಮಾಜಿಕ ಬದಲಾವಣೆ ಮಾಡಿಲ್ಲ ಅನ್ನುವಂತಿಲ್ಲ. ಆದರೆ, ಜನರ ಮನಸ್ಸಿನಲ್ಲಿ ಅವು ಬದಲಾವಣೆ ತರುವಲ್ಲಿ ಯಶಸ್ಸನ್ನು ಕಂಡಿಲ್ಲ tv9-media-astrologerಎಂಬುದನ್ನೂ ಗಮನಿಸಬೇಕಿದೆ.

ಇಲ್ಲಿ ಯಾಕೆ ಈ ವಿಚಾರವನ್ನು ಗಮನಿಸಬೇಕು ಎಂದರೆ, ಟೀವಿ ಜ್ಯೋತಿಷ್ಯಕ್ಕಿಂತ ಜ್ಯೋತಿಷ್ಯ ಹಳೆಯದು ಮತ್ತು ಹೆಚ್ಚು ಆಳವಾಗಿ ಬೇರು ಬಿಟ್ಟಿರುವ ಅಂಶ. ಜಾತಕ, ರಾಶಿಫಲ, ಗ್ರಹಗತಿ, ವಾಸ್ತು, ನಾಡಿ ಮತ್ತಿತರ ಸ್ವರೂಪಗಳಲ್ಲಿ ಜನರ ಅನಿಶ್ಚಿತತೆಗಳಿಗೆ ಪರ್ಯಾಯವಾಗಿ ನಿಂತಿವೆ. ಇಲ್ಲಿ ಅನಿಶ್ಚಿತತೆ ಎಂದರೆ, ಜೀವನದ ಕುರಿತು ಭಯವೂ ಆಗಿರಬಹುದು ಅಥವಾ ಅಂಧಕಾರವೂ ಆಗಿರಬಹುದು. ಇವುಗಳು ಸಾಮಾಜಿಕವಾಗಿ ಪರಿಣಾಮ ಬೀರುವ ಜತೆಗೆ ವೈಯುಕ್ತಿಕವಾಗಿಯೂ ಜನರನ್ನು ಮುಟ್ಟುತ್ತಿವೆ. ಸಾಮಾಜಿಕ, ಆರ್ಥಿಕ ಪಲ್ಲಟಗಳು ಎಂಥವರನ್ನೂ ಒಂದು ಕ್ಷಣಕ್ಕೆ ತಲ್ಲಣಗೊಳಿಸುತ್ತವೆ. ಈ ಸಮಯದಲ್ಲಿ ಸುಲಭವಾಗಿ, ಆ ಕ್ಷಣಕ್ಕೆ ಪರಿಹಾರ ನೀಡುವುದು ಈ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳು. ಹೀಗಾಗಿ, ಇವುಗಳನ್ನು ಅಷ್ಟು ಸುಲಭವಾಗಿ ಕಿತ್ತೆಸೆಯುವುದು ಕಷ್ಟದ ಕೆಲಸ. ಹಾಗಂತ, ಇದರೊಳಗೂ ತನ್ನವೇ ಆದ ಮಿತಿಗಳಿವೆ. ಜನರನ್ನು ತಮ್ಮ ಬಲೆಯಲ್ಲಿ ಹಿಡಿದಿಟ್ಟುಕೊಳ್ಳಲು ಹೆಣಗುತ್ತಿರುತ್ತವೆ. ಇಂತಹ ಸಮಯದಲ್ಲೇ ಕೆಲವು ಅತಿರೇಕಗಳೂ ನಡೆಯುತ್ತವೆ. ಅದಕ್ಕೆ ವರ್ತಮಾನದ ಉದಾಹರಣೆ, ಸಚ್ಚಿದಾನಂದ ಬಾಬುವಿನ ‘ರೇಪ್ ಸಿದ್ಧಾಂತ’.

ಈ ಟೀವಿ ಜ್ಯೋತಿಷ್ಯಕ್ಕಿರುವ ಮತ್ತೊಂದು ದೊಡ್ಡ ಮಿತಿ ಆರ್ಥಿಕ ಆಯಾಮದ್ದು. ಟೀವಿಗಳಿಗೆ ಗಂಟೆಗೆ ಇಷ್ಟು ಎಂದು ಹಣ ಕಟ್ಟುವ ಜ್ಯೋತಿಷಿಗಳು ಅಂತಿಮವಾಗಿ ಲಾಭ ಮತ್ತು ನಷ್ಟದ ಪರಿಕಲ್ಪನೆ ಒಳಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಟೀವಿಗಳಿಂದ ಸಿಗುವ ಜನಪ್ರಿಯತೆಯನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಿಮವಾಗಿ, ಸಮಸ್ಯೆಯನ್ನು ಹೇಳಿಕೊಂಡು ಬರುವ ಜನರು, ಸರಕುಗಳನ್ನು ಕೊಳ್ಳುವ ಗ್ರಾಹಕರಾಗಿಯೇ ಕಾಣುತ್ತಾರೆ. ಸುಳ್ಳಿನ ಆಸರೆಯಲ್ಲಿ ಯಾವ ಉದ್ಯಮಗಳು ತುಂಬಾ ದಿನ ನಡೆಯುವುದಿಲ್ಲ. ಅಲ್ಲಿಯೂ ಕೂಡ ಬೇಡಿಕೆ kickout-astrologersಮತ್ತು ಪೂರೈಕೆ ನೀತಿಗಳು ಕೆಲಸ ಮಾಡುತ್ತವೆ. ಗ್ರಾಹಕ ಮತ್ತೆ ಹೊಸ ಸರಕಿಗಾಗಿ ಮತ್ತು ಕಡಿಮೆ ಬೆಲೆಗಾಗಿ ಹಂಬಲಿಸುತ್ತಾನೆ. ಒಂದು ಹಂತ ದಾಟಿದ ನಂತರ ಜ್ಯೋತಿಷ್ಯೋದ್ಯಮಕ್ಕೂ ಸಂಕಷ್ಟ ಎದುರಾಗುತ್ತದೆ. ಅವತ್ತಿಗೆ ಇದಕ್ಕೊಂದು ಪರ್ಯಾಯ ಹುಡುಕಿ ಇಟ್ಟರೆ, ಖಂಡಿತಾ ಸಮಾಜದ ತಲ್ಲಣಗಳಿಗೆ ವೈಯುಕ್ತಿಕ ನೆಲೆಗಿಂತ ಸಾಮಾಜಿಕ ಆಯಾಮದ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರೂ ಆಲೋಚಿಸುವಷ್ಟು ಪ್ರಬುದ್ಧರಾಗುತ್ತಾರೆ ಎಂಬುದು ನಂಬಿಕೆ ಮತ್ತು ಆಶಯ.

ಇವತ್ತು ಸಾಮಾಜಿಕ ಜಾಲತಾಣದ ಗೋಡೆಗಳನ್ನು ಮೀರಿ, ‘ಭಯೋತ್ಪಾದಕ ಜ್ಯೋತಿಷಿ’ಗಳ ವಿರುದ್ಧ ಬೀದಿ ಸಮರಕ್ಕೆ ಇಳಿದಿರುವ ಕೆಲವು ಸ್ನೇಹಿತರು ಈ ಅಂಶಗಳನ್ನೂ ಒಳಗೊಳ್ಳಲಿ. ಆ ಮೂಲಕ ಅವರ ಹೋರಾಟ ತಾತ್ವಿಕ ಚಳವಳಿಯ ರೂಪ ಪಡೆಯಲಿ. ಅದಕ್ಕೆ ಸಮಾಜದ ಎಲ್ಲಾ ಸ್ಥರಗಳಿಂದ ಬೆಂಬಲ ಹರಿದು ಬರಲಿ. ಈಗಾಗಲೇ ನಿಡುಮಾಮಿಡಿ, ಮುರುಘ ಮಠ, ಸಾಣೇಹಳ್ಳಿಯಂತಹ ಮಠಗಳು ಈ ಹಾದಿಯಲ್ಲಿ ಆಶಯದಾಯಿಕ ಹೆಜ್ಜೆ ಹಾಕುತ್ತಿವೆ. ಈ ನೆಲೆಗೆ ಇನ್ನಷ್ಟು ಧಾರೆಗಳು ಸೇರಿಕೊಂಡರೆ, ಭವಿಷ್ಯದಲ್ಲಿ ‘ದೇಶದ ಸಾಂಸ್ಕೃತಿಕ ಪುನರಜ್ಜೀವನ’ಕ್ಕೆ ವೇದಿಕೆ ಸಿದ್ಧವಾಗುತ್ತದೆ. ಅದು ಇಲ್ಲಿಂದಲೇ ಶುರುವಾಗಲಿ.

ಬೆತ್ತಲಾದ ಮತಾಂಧ ಹಲ್ಲೆಕೋರ ‘ಮಲಿಕ್ ’


-ಇರ್ಷಾದ್ ಉಪ್ಪಿನಂಗಡಿ


 

 

‘ಮುಸ್ಲಿಮ್ ಮಹಿಳೆಯಾಗಿ ತುಂಡುಡುಗೆ ಧರಿಸಿದ್ದು ತಪ್ಪು’ ಎಂಬ ಕಾರಣಕ್ಕಾಗಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಗೌಹರ್ ಖಾನ್ ಮೇಲೆ ಮುಂಬೈನಲ್ಲಿ ನಡೆಯುತ್ತಿದ್ದ ರಿಯಾಲಿಟಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಸ್ಲಿಮ್ ಪ್ರೇಕ್ಷಕನೊಬ್ಬ ಹಲ್ಲೆ ನಡೆಸಿ ಮತಾಂಧತೆಯನ್ನು ಮೆರೆದಿರುವ ಘಟನೆ ಮುಸ್ಲಿಮ್ ಸಮಾಜದಲ್ಲಿ ಬುರ್ಖಾ ತೊಡದ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ‘ಧರ್ಮದಲ್ಲಿ ಯಾವುದೇ ಬಲವಂತವಿಲ್ಲ’ ಎಂಬುವುದನ್ನು ಜಗತ್ತಿಗೆ ಕಲಿಸಿಕೊಟ್ಟ Gauhar-slappedಧರ್ಮ ಇಸ್ಲಾಮ್. ಆ ಧರ್ಮದ ಹೆಸರಲ್ಲಿ ಮತಾಂಧ ಮುಹಮ್ಮದ್ ಅಕಿಲ್ ಮಲಿಕ್ ಮುಂಬೈನಲ್ಲಿ ಗೌಹಾರ್ ಖಾನ್ ಮೇಲೆ ‘ಅನ್ ಇಸ್ಲಾಮಿಕ್’ ಮಾದರಿಯ ವಸ್ತ್ರ ಧರಿಸಿದ್ದಾಳೆ ಎಂಬ ಕಾರಣವನ್ನು ಮುಂದಿಟ್ಟು ನಡೆಸಿರುವ ಹಲ್ಲೆ ಅಮಾನವೀಯ ಹಾಗೂ ಖಂಡನಾರ್ಹ. ಇಸ್ಲಾಮ್ ಧರ್ಮದಲ್ಲಿ ಮಹಿಳೆ ಪರ್ದಾ ಅಥವಾ ಬುರ್ಖಾ ಧರಿಸುವುದು ಒಂದು ಸಂಪ್ರದಾಯ. ಆದರೆ ಬುರ್ಖಾ ಧರಿಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಇಸ್ಲಾಮ್ ಧರ್ಮದಲ್ಲಿ ಕಡ್ಡಾಯ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡುವ ಮಹಿಳೆಯರ ಜೊತೆ ಜೊತೆಗೆ ತಮಗಿಷ್ಟವಾದ ವಸ್ತ್ರವನ್ನು ಧರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಕಷ್ಟು ಮುಸ್ಲಿಮ್ ಮಹಿಳೆಯರಿದ್ದಾರೆ. ಬಾಲಿವುಡ್ ನಲ್ಲೂ ಮಿಂಚಿದ ಮುಸ್ಲಿಮ್ ಮಹಿಳೆಯರು ನಮ್ಮ ಕಣ್ಣ ಮುಂದಿದ್ದಾರೆ. ಆದರೆ ಇಂದು ಬೆಳೆಯುತ್ತಿರುವ ಹಿಂದೂ, ಮುಸ್ಲಿಮ್ ಮೂಲಭೂತವಾದಿ ಸ್ಂಘಟನೆಗಳು ಗೌಹಾರ್ ಖಾನ್ ಅಥವಾ ದೀಪಿಕಾ ಪಡುಕೋಣೆಯಂತಹಾ ಸ್ತ್ರೀಯರು ಯಾವ ರೀತಿಯ ವಸ್ತ್ರ ಧರಿಸಬೇಕು, ಯಾವ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ನಿರ್ಧರಿಸುವ ಗುತ್ತಿಗೆ ಪಡೆದುಕೊಂಡತಿದೆ.

ಇದು ಕೇವಲ ಗೌಹಾರ್ ಖಾನ್ ಒಬ್ಬಳದ್ದೇ ವ್ಯಥೆ ಅಲ್ಲ. ಈ ಮೂಲಭೂತವಾಧಿ ಮತಾಂಧರ ಅನೈತಿಕ ಪೊಲೀಸರ ಕಣ್ಣಿಗೆ ನಿತ್ಯ ಗುರಿಯಾಗುತ್ತಿರುವ ಇಂಥಹಾ ಸಾಕಷ್ಟು ಮಹಿಳೆಯರಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಮಂಗಳೂರಿನ ಮುಸ್ಲಿಮ್ ಮಹಿಳೆ ಉಮ್ಮು ರಹೀಫ್ ರಹೀನ ಎಂಬುವವರು ತಮ್ಮ ಪೋಟೋವನ್ನು ಹಾಕಿದ್ದ ಕಾರಣಕ್ಕಾಗಿ ಮುಸ್ಲಿಮ್ ಮೂಲಭೂತವಾಧಿಗಳು ಆ ಮಹಿಳೆಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ರೀತಿ ಪರ ಪುರುಷರಿಗೆ ತಮ್ಮ ಮುಖವನ್ನು ತೋರಿಸಲು ಅವಕಾಶ ನೀಡುವುದು ಅಧಾರ್ಮಿಕ ಎಂದು ಅವರ ವಿರುದ್ಧ ಮುಗಿಬಿದ್ದಿದ್ದರು. ಹೀಗೆ ಮಹಿಳೆ ಪೇಸ್ ಬುಕ್ ನಲ್ಲಿ ತಮ್ಮ ಪೋಟೋ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ಅವರ ಮೇಲೆ ಮುಗಿಬಿದ್ದ ಇದೇ ಮತಾಂಧ ಯುವಕರು ತಮ್ಮ ಪೇಸ್ ಬುಕ್ ಮುಖಪುಟದಲ್ಲಿ ವಿವಿಧ ಭಂಗಿಗಳಲ್ಲಿ ಹತ್ತಾರು ಪೋಟೋಗಳನ್ನು ಹಾಕಿ ನೂರಾರು ಲೈಕ್ ಗಳನ್ನು ಕಾಮೆಂಟ್ ಗಳನ್ನು ಪಡೆದುಕೊಂಡಿದ್ದರು. ಹಾಗೆ ನೋಡಿದ್ದಲ್ಲಿ ಇಸ್ಲಾಮ್ ಧರ್ಮದಲ್ಲಿ ಪೋಟೋ ತೆಗೆಯುವುದು ಹಾಗೂ ಅದನ್ನು ಇಟ್ಟುಕೊಳ್ಳುವುದೇ ನಿಷಿದ್ದ. ಮುಸ್ಲಿಮ್ ಹಿರಿಯ ಧಾರ್ಮಿಕ ಪಂಡಿತರು ಇತ್ತೀಚಿನವರೆಗೂ ಸಭೆ ಸಮಾರಂಭಗಳಲ್ಲಿ ತಮ್ಮ ಪೋಟೋಗಳನ್ನು ತೆಗೆಯೋದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇಂದು ಅಂತಹ ಧಾರ್ಮಿಕ ಕಟ್ಟಲೆಯಿಂದ ಮುಸ್ಲಿಮ್ ಪುರುಷರು ಬದಲಾಗಿದ್ದಾರೆ. ಆದರೆ ಇದೇ ರೀತಿಯಲ್ಲಿ ಮಹಿಳೆಯರು ಬದಲಾವಣೆ ಬಯಸೋದನ್ನು ಮಾತ್ರ ಈ ಮೂಲಭೂತವಾಧಿ ಮನಸ್ಸುಗಳು ಸಹಿಸೋದಿಲ್ಲ.

ಕೆಲ ತಿಂಗಳ ಹಿಂದೆ ನಾನೊಂದು ವರದಿ ಮಾಡಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯೊಂದರಲ್ಲಿ ಪುಟಾಣಿ ಮುಸ್ಲಿಮ್ ಹೆಣ್ಣು ಮಕ್ಕಳು ಶಾಲಾ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡಬಾರದು ಎಂದು ಗ್ರಾಮದ ಮದರಸಾದ ಧಾರ್ಮಿಕ ಮುಖ್ಯ ಶಿಕ್ಷಕರೊಬ್ಬರು ಫತ್ವಾ ( ಅಭಿಪ್ರಾಯ) ಹೊರಡಿಸಿದ್ದರು. muslim-womanಯಾಕೆ ಮಕ್ಕಳು ಡ್ಯಾನ್ಸ್ ಮಾಡಬಾರದು ಎಂದು ಆ ಧಾರ್ಮಿಕ ಶಿಕ್ಷಕರಲ್ಲಿ ಕೇಳಿದ್ರೆ, ಅದು ಅಶ್ಲೀಲ ಹಾಗೂ ಧರ್ಮ ವಿರೋಧಿ ಎಂದಿದ್ದರು. ಆದರೆ ಪಾಪ ಆ ಹೆಣ್ಮಕ್ಕಳಲ್ಲಿ ಈ ಕುರಿತು ವಿಚಾರಿಸಿದಾಗ ಅವರು ಆಸೆಗಣ್ಣಿನಿಂದ ನಮಗೆ ಡ್ಯಾನ್ಸ್ ಮಾಡೋದಕ್ಕೆ ಇಷ್ಟ ಇದೆ ಆದರೆ ಮದರಸಾದ ಧಾರ್ಮಿಕ ಶಿಕ್ಷಕರು ಬೇಡ ಅಂದಿದ್ದಾರೆ ಎಂದು ಕಣ್ಣೀರು ಹಾಕಿದ್ರು. ಇಲ್ಲೂ ಧಾರ್ಮಿಕ ಕಟ್ಟಲೆಗಳು ಕೇವಲ ಹೆಣ್ಣಿಗೆ ಮಾತ್ರ ಸೀಮಿತ. ಮಂಗಳೂರಿನ ಅನೇಕ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೂಡಾ ಬಹುತೇಕ ಹೆಣ್ಮಕ್ಕಳು 8, 9 ನೇ ತರಗತಿಯ ನಂತರ ಶಾಲಾ, ಕಾಲೇಜು ವಾರ್ಷಿಕೋತ್ಸವದಲ್ಲಿ ನೃತ್ಯ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆತ್ತವರು ಅವಕಾಶ ನೀಡುವುದಿಲ್ಲ. ಆದರೆ ಅದೇ ಶಾಲೆಗಳಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಮುಸ್ಲಿಮ್ ಹುಡುಗರು ಮುಂಚೂಣಿಯಲ್ಲಿರುತ್ತಾರೆ.

ಧರ್ಮ ಸಂಸ್ಕೃತಿಯ ಹೆಸರಲ್ಲಿ ಹೆಣ್ಣಿನ ನಿಯಂತ್ರಣ ಕೇವಲ ಮುಸ್ಲಿಮ್ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಮಾಡಬಾರದು ಎಂದು ಫತ್ವಾ ಹೊರಡಿಸಿದರೋ , ಮುಸ್ಲಿಮ್ ಮಹಿಳೆ ಪೇಸ್ ಬುಕ್ ನಲ್ಲಿ ಪೋಟೋ ಹಾಕಿದಕ್ಕಾಗಿ ಅವರ ಮೇಲೆ ಮುಗಿಬಿದ್ದರೋ ಅಲ್ಲೇ ಹಿಂದೂ ಯುವಕ –ಯುವತಿಯರು ಪಬ್ ಹೋದದಕ್ಕಾಗಿ ಪಬ್ ಮೇಲೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಲಾಯಿತು, ಹೋಂ ಸ್ಟೇನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡಿದಕ್ಕಾಗಿ ಅವರ ಮೇಲೂ ಹಲ್ಲೆ ನಡೆಸಲಾಯಿತು.

“ಮಹಿಳೆ ಬುರ್ಖಾ ಧರಿಸಿ, ಲಜ್ಜೆಯಿಂದ ವರ್ತಿಸಿ ತನ್ನ ಪುರಷನ ಹಿಡಿತದೊಳಗೆ ಇರಬೇಕೇ ಹೊರತು, ಪೇಟೆಯ ವ್ಯಾಪಾರಿ, ಕಛೇರಿಯ ಗುಮಾಸ್ತೆ, ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಸೈನ್ಯದ ಸಿಪಾಯಿಯಾಗುವುದು ಆಕೆಯ ಸ್ಥಾನಮಾನವಲ್ಲ. ಬದಲಾಗಿ ಆಕೆಯ ನೈಜ್ಯ ಕಾರ್ಯಕ್ಷೇತ್ರ ಆಕೆಯ ಮನೆಯಾಗಿರಬೇಕು” ಎಂದು ಬಯಸುವ ಮತಾಂಧ ಮುಹಮ್ಮದ್ ಅಕಿಲ್  ಹಾಗೂ ಅದೇ ರೀತಿಯಲ್ಲಿ “ಮಹಿಳೆ ಅಚ್ಚ ಭಾರತೀಯ ನಾರಿಯ ರೀತಿಯಲ್ಲಿರಬೇಕು ಸ್ಕರ್ಟ್ ಪ್ಯಾಂಟು ಧರಿಸದಂತೆ ನಿಷೇಧ ಹೇರಬೇಕು. ಹೆಣ್ಣುಮಕ್ಕಳು ಶಾಲೆಯಲ್ಲಿ ಮೊಬೈಲ್ ಬಳಸದಂತೆ ನೋಡಬೇಕು. ಚಲನಚಿತ್ರಗಳಲ್ಲಿ ಮೈ ಕಾಣುವ ತುಂಡುಡುಗೆ ತೊಟ್ಟು ಐಟಮ್ ಹಾಡುಗಳಲ್ಲಿ ನರ್ತಿಸುವ ಮಹಿಳೆಯರೆಲ್ಲಾ ವೇಶ್ಯೆಯರು. ಇವರೆಲ್ಲಾ ಸಮಾಜವನ್ನು ಕುಲಗೆಡಿಸುತ್ತಾರೆ” ಎನ್ನುವ ಹಿಂದೂ ಮಹಾಸಭಾದ ಕಾರ್ಯದರ್ಶಿ ನವೀನ್ ತ್ಯಾಗಿ ಮನಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಎರಡೂ ಮೂಲಭೂತವಾದ ಅನಾದಿ ಕಾಲದಿಂದಲೂ ಹೆಣ್ಣನ್ನು ಶೋಷಣೆ ಮಾಡಿಕೊಂಡೇ ಬಂದಿದೆ. ಆಕೆಯನ್ನು ಕೇವಲ ಮಕ್ಕಳನ್ನು ಹಡೆಯುವ ಯಂತ್ರದಂತೆ ಪರಿಗಣಿಸಿದೆ. ಧರ್ಮ, ಸಂಸ್ಕೃತಿಯ ಹೆಸರಲ್ಲಿ ಆಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡೇ ಬಂದಿದೆ. ಆದರೆ ಇಲ್ಲಿ ಆನೆ ನಡೆದದ್ದೇ ದಾರಿಯೆಂಬುವಂತೆ ಪುರುಷ ಮಾಡಿದ್ದೇ ಧರ್ಮ ಆಡಿದ್ದೇ ಸಂಸ್ಕೃತಿ. ಯಾವಾಗ ಪುರುಷ ಪ್ರಧಾನ ಸಂಸ್ಕೃತಿ, ಧರ್ಮದ ಹಿಡಿತದಿಂದ ತಪ್ಪಿಸಿಕೊಂಡು ಹೊರಪ್ರಪಂಚಕ್ಕೆ ಕಾಲಿಟ್ಟ ಹೆಣ್ಣು ತನಗಿಷ್ಟ ಬಂದ ಉಡುಗೆ ತೊಡುತ್ತಾಳೋ, ತನಗಿಷ್ಟವಾದ ಸಂಗಾತಿಯ ಜೊತೆ ಪಬ್ ಗಳಿಗೆ ಹೋಗುತ್ತಾಳೋ ತನ್ನ ಸುಂದರವಾದ ಪೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕುತ್ತಾಳೋ, ಧರ್ಮ, ಸಂಸ್ಕೃತಿಯನ್ನು ಬದಿಗಿಟ್ಟು ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಾಳೋ ಆವಾಗ ಅದನ್ನು ಸಹಿಸಿಕೊಳ್ಳಲಾಗದ ಮುಹಮ್ಮದ್ ಅಕಿಲ್ ಮಲಿಕ್, ನವೀನ್ ತ್ಯಾಗಿ ಯಂತಹಾ ಮನಸ್ಥಿತಿಯ ಜನ ಮತ್ತೆ ಧರ್ಮ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಆಕೆಯ ಮೇಲೆ ದೌರ್ಜನ್ಯ ಎಸಗುತ್ತಾರೆ.

ಧಾರ್ಮಿಕ ಚೌಕಟ್ಟನ್ನು ಪಾಲಿಸಿ, ತಗ್ಗಿ ಬಗ್ಗಿ ನಡೆದ ಹೆಣ್ಣಿನ ಮೇಲೆನೂ ಪುರುಷ ಕಾಮುಕ ಕಣ್ಣುಗಳು ಮುಗಿಬಿದ್ದು ಅತ್ಯಾಚಾರ ನಡೆಸಿ ದೌರ್ಜನ್ಯ ಎಸಗಿ ಅದರಲ್ಲೂ ಹೆಣ್ಣಿನಲ್ಲೇ20090124pub4 ತಪ್ಪನ್ನು ಹುಡುಕಿದ ಇದೇ ಪುರುಷ ಪ್ರಧಾನ ಸಮಾಜ ಹೆಣ್ಣಿನ ವಸ್ತ್ರ ಸಂಹಿತೆಯ ಹೆಸರಲ್ಲಿ ಹಲ್ಲೆ ನಡೆಸಿ ಇನ್ನೊಂದು ರೀತಿಯ ದೌರ್ಜನ್ಯ ಎಸಗುತ್ತಾ ಬಂದಿದೆ. ಒಂದು ಮೂಲಭೂತವಾದ ಪಬ್, ಹೋಂ ಸ್ಟೇಗಳಿಗೆ ಯುವತಿಯರು ಹೋಗಬಾರದು, ತುಂಡುಡುಗೆ ಧರಿಸಬಾರದು ಎಂಬ ಉಪದೇಶ ನೀಡಿ ಅದನ್ನು ಪಾಲಿಸದವರ ಮೇಲೆ ಮುಗಿಬಿದ್ದರೆ ಇಲ್ಲಿ ಇನ್ನೊಂದು ಮೂಲಭೂತವಾಧ ಹೆಣ್ಮಕ್ಕಳು ನೃತ್ಯ ಮಾಡಬಾರದು, ಕಡ್ಡಾಯ ಬುರ್ಖಾ ಧರಿಸಬೇಕು, ಅನ್ಯ ಪುರುಷನ ಜೊತೆ ಸುತ್ತಾಡಬಾರದು ಎಂಬ ಫರ್ಮಾನನ್ನು ಹೊರಡಿಸಿದೆ. ಅದನ್ನು ಯಾರು ಪಾಲಿಸುತ್ತಿಲ್ಲವೋ ಅಂಥಹವರ ಮೇಲೆ ಧರ್ಮ, ಸಂಸ್ಕೃತಿಯ ಹೆಸರಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಸದ್ಯ ಇಲ್ಲಿ ನನಗೆ ಕಾಣುವ ಅಪಾಯವೆಂದರೆ ಇಂಥಹಾ ಹಲ್ಲೆಗಳು ಟ್ರೆಂಡ್ ಆಗಿ ಮಾರ್ಪಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಾಗೂ ನಾಗರಿಕ ಸಮಾಜ ಇಂಥಹಾ ನೀಚ ಮತಾಂಧರ ಕೃತ್ಯದ ವಿರುದ್ಧ ಪ್ರತಿಭಟಿಸಬೇಕಾಗಿದೆ. ಇದರ ಜೊತೆ ಜೊತೆಗೆ ಹೇಗೆ ಬೀದಿ ಕಾಮುಕರಿಗೆ ಹರಿಯಾಣದ ಸಹೋದರಿಯರು ಥಳಿಸಿ ತಕ್ಕ ಪಾಠ ಕಲಿಸಿದರೋ ಅದೇ ರೀತಿಯಲ್ಲಿ  ವಸ್ತ್ರ ಸಂಹಿತೆ, ಆಚಾರ ವಿಚಾರ ಹೇಗಿರಬೇಕೆಂದು ನಿರ್ಧರಿಸುವ ಈ ಅನೈತಿಕ ಪೊಲೀಸರಿಗೆ ತಕ್ಕ ಪ್ರತ್ಯುತ್ತರ ನೀಡಲು ಸ್ತ್ರೀ ಸಮಾಜ ಮುಂದಾಗಬೇಕಾಗಿದೆ. ಇಲ್ಲದಿದ್ದಲ್ಲಿ ಇನ್ನಷ್ಟು ಗೌಹಾರ್ ಖಾನ್ ಗಳು ಮಹಮ್ಮದ್ ಮಲಿಕ್ ಹಾಗೂ ನವೀನ್ ತ್ಯಾಗಿಯಂತಹಾ ಸಂಸ್ಕೃತಿ ರಕ್ಷಕರಿಂದ ದೌರ್ಜನ್ಯಕ್ಕೊಳಗಾಗುತ್ತಲೇ ಇರಬೇಕಾದ ಪರಿಸ್ಥಿತಿ ಮುಂದುವರಿಯತ್ತದೆ.

“ಹೇ ರಾಮ್!” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ


– ಪಾರ್ವತಿ ಪಿಟಗಿ


ಸಿಂಧ್ಯಾನಟ್ಟಿಯನ್ನು ನಿರ್ಮಲ ಗ್ರಾಮವನ್ನಾಗಿಸುವ ಉದ್ದೇಶದಿಂದ ಗ್ರಾಮದ ಎಲ್ಲ ಮನೆಗಳಲ್ಲೂ ಶೌಚಾಲಯಗಳಿರುವಂತೆ ಮಾಡಲು ಗ್ರಾಮ ಪಂಚಾಯತಿ ಹಟತೊಟ್ಟು ನಿಂತಿತ್ತು. ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿಯೊಂದು ಮನೆಯೂ ಶೌಚಾಲಯವನ್ನು ಹೊಂದಬೇಕಿತ್ತು. ಅದಕ್ಕಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಐದು ಸಾವಿರದ ನಾಲ್ಕುನೂರು ಹಾಗೂ ನಿರ್ಮಲ ಭಾರತ ಅಭಿಯಾಣ ಯೋಜನೆಯಲ್ಲಿ ನಾಲ್ಕುಸಾವಿರದ ಏಳನೂರು ರೂಪಾಯಿಗಳನ್ನು ಗ್ರಾಮ ಪಂಚಾಯಿತಿ ಫಲಾನುಭವಿಗಳಿಗೆ ನೀಡುತ್ತಿತ್ತು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಪಡೆಯಬೇಕಾದರೆ ಮೊದಲು ಉದ್ಯೋಗ ಚೀಟಿ ಹೊಂದಬೇಕಿತ್ತು. ಅಲ್ಲದೇ, ಸ್ವತ: ತಾವೇ ಶೌಚಾಲಯದ ಗುಂಡಿ ತೋಡಿ ಹಣ ಪಡೆಯಬಹುದಿತ್ತು.

ಮುದುಕ ಪತ್ರೆಪ್ಪನಿಗೆ ಪ್ರಾಥಮಿಕ ಶಾಲೆಯ ಈಶ್ವರ ಮಾಸ್ತರ ‘ನೋಡಪಾ ನಿನಗೂ ವಯಸ್ಸಾದು. ಇನ್ನ ಬರಬರತ ಕೈಕಾಲಾಗ ಶಕ್ತಿ ಇರೂದಿಲ್ಲಾ. ಸಂಡಾಸಕ್ಕ ಇನ್ನ ಎಷ್ಟ ದಿನಾ ಆ ಗುಡ್ಡದ ವಾರಿಗೆ ಹೊಕ್ಕಿ? ಈಗ ಕಣ್ಣ ಕಾಣುದಿಲ್ಲಾ, ಎಲ್ಲೆರ ಎಡವಿ ಹಾಕ್ಕೊಂಡ ಬಿದ್ದೆಂದ್ರ ಏನ ಮಾಡ್ತಿ?’ ಎಂದೆಲ್ಲ ತಿಳುವಳಿಕೆ ನೀಡಿ ಆತನೂ ಶೌಚಾಲಯವನ್ನು ಕಟ್ಟಿಕೊಳ್ಳುವಂತೆ ಮನವೊಲಿಸಿದ್ದರು. ಈಶ್ವರ ಮಾಸ್ತರ ಜನರ ಮನವೊಲಿಸುವುದಕ್ಕೂ ಕಾರಣವಿತ್ತು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಆ ಗ್ರಾಮದಲ್ಲಿ ಈ ವರ್ಷ ಇಂತಿಷ್ಟು ಶೌಚಾಲಯಗಳಾಗಬೇಕೆಂದು ಗುರಿ ನೀಡಲಾಗಿತ್ತು. ಅಷ್ಟೆಲ್ಲ ಶೌಚಾಲಯಗಳನ್ನು ಕಟ್ಟಿಸುವಂತೆ ಗ್ರಾಮಸ್ಥರಿಗೆ ತಿಳಿಹೇಳುವುದು ಕೇವಲ ಅವರೊಬ್ಬರಿಂದಷ್ಟೇ ಸಾಧ್ಯವಿರಲಿಲ್ಲ. ಹಾಗಾಗಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಆದೇಶದಂತೆ ಈ ಬಲವಂತದ ಮಾಘಸ್ನಾನ ಆ ಗ್ರಾಮದ ಎಲ್ಲ ಸರಕಾರಿ ನೌಕರರಿಗೂ ಅನ್ವಯಿಸುತ್ತಿತ್ತು. ಪ್ರತಿಯೊಬ್ಬ ಪ್ರಾಥಮಿಕ ಶಿಕ್ಷಕರ ಪಾಲಿಗೆ ಎರೆಡೆರಡು ಶೌಚಾಲಯಗಳನ್ನು ಕಟ್ಟಿಸುವ ಜವಾಬ್ದಾರಿ ಬಿದ್ದಿದ್ದರಿಂದ ಈಶ್ವರ ಮಾಸ್ತರ ಈ ನಿಟ್ಟಿನಲ್ಲಿ ಪತ್ರೆಪ್ಪನ ಮನವೊಲಿಸಿದ್ದ. ಹೇಳಿಕೇಳಿ ಮಾಸ್ತರು. ಅವರ ಪಾಠ ಪತ್ರೆಪ್ಪನಿಗೆ ನಾಟಿತ್ತು. gandhi-artಅದರ ಫಲವೇ ಅಂದು ಆತ ಶೌಚಾಲಯಕ್ಕೆಂದು ಅರ್ಜಿಕೊಡಲು ಮೊದಲು ಉದ್ಯೋಗ ಚೀಟಿಯನ್ನು ಪಡೆಯಲು ಬಂದಿದ್ದ.

ಪತ್ರೆಪ್ಪನ ಹೆಸರಿನಲ್ಲಿ ಉದ್ಯೋಗ ಚೀಟಿಯನ್ನು ಜನರೇಟ ಮಾಡುತ್ತಿದ್ದ ಸತೀಶ, ‘ಏನಪಾ ಯಜ್ಜಾ, ನರೇಗಾ ಸ್ಕೀಮಿನ್ಯಾಗ ಸಂಡಾಸ ಕಟ್ಟಗೊಂತೀಯಾ? ಕಟಗೋ ಕಟಗೋ. ನೀನು ಥೇಟ ಗಾಂಧಿ ಇದ್ದಂಗ ಅದಿ ನೋಡಪಾ’ ಎಂದಮಾತು ಅಲ್ಲಿಯ ಕೆಲವು ಸದಸ್ಯರ ಹಾಗೂ ಸ್ಟಾಫಿನ ಕಿವಿ ತಲುಪಿತ್ತು.

ಪತ್ರೆಪ್ಪ ಶೌಚಾಲಯದ ತಗ್ಗು ತೋಡಿ ಪಂಚಾಯತಿಯ ಸಲಹೆಯಂತೆ ಫೋಟೊ ತೆಗೆದುಕೊಂಡು ಬಂದ. ಅವನ ಹೆಸರಿನಲ್ಲಿ ನರೇಗಾ ಯೋಜನೆಯ ವೆಬ್‌ಸೈಟ್‌ನಲ್ಲಿ ಕೆಲಸ ಹಾಕಿ ಎನ್‌ಎಮ್‌ಆರ್‌ನ್ನು ಕೂಡ ಕಂಪ್ಯೂಟರ್ ಆಪರೇಟರ್ ಸತೀಶ ಜನರೇಟ ಮಾಡಿದ. ಮುಂದೆ ಪತ್ರೆಪ್ಪ ಶೌಚಾಲಯವನ್ನೂ ಕೂಡ ಕಟ್ಟಿಸಿದ. ಆಮೇಲೆ ಹೆಚ್ಚುಕಡಿಮೆ ಪ್ರತಿದಿನವೂ ಗ್ರಾಮ ಪಂಚಾಯತಿಗೆ ಹಣಕ್ಕಾಗಿ ಅಲೆದಾಡತೊಡಗಿದ. ಆದರೆ ಕೇಂದ್ರ ಸರಕಾರದಲ್ಲಿಯೇ ಈ ಯೋಜನೆಗೆಂದು ತೆಗೆದಿಟ್ಟ ಹಣದಲ್ಲಿ ಕೊರತೆ ಇದ್ದುದರಿಂದ ಬಿಲ್ಲನ್ನು ಪಾವತಿಸಲಾಗಲಿಲ್ಲ. ಹಣ ಜಮೆಯಾಗುವವರೆಗೂ ಪತ್ರೆಪ್ಪ ಅಲೆದಾಡಲೇಬೇಕಿತ್ತು. ಹೀಗೆ ಅಲೆದಾಡುವ ಪತ್ರೆಪ್ಪ ಪಂಚಾಯತಿಯ ಕಟ್ಟೆಯನ್ನು ಹತ್ತಿದರೆ ಸಾಕು ‘ಏ ಗಾಂಧಿ ಬಂದಾ ಗಾಂಧಿ ನೋಡ್ರೆಲ್ಲೆ’ ಎಂದೆಲ್ಲ ಗೇಲಿ ಮಾಡತೊಡಗಿದರು. ಒಟ್ಟಿನಲ್ಲಿ ಪತ್ರೆಪ್ಪನ ನಿಜನಾಮ ಅಳಿಸಿ ಆತ ಎಲ್ಲರ ಬಾಯಲ್ಲೂ ಗಾಂಧಿ ಆಗಿ ಮಾರ್ಪಟ್ಟ.

******

ಅಕ್ಟೋಬರ್ ಎರಡು ಇನ್ನೇನು ಒಂದು ವಾರವಿದೆ ಎನ್ನುವಾಗ ಸತೀಶ ಗಾಂಧಿ ಜಯಂತಿಯ ನೋಟೀಸ್ ತೆಗೆಯುತ್ತಿದ್ದ. ಅಲ್ಲಿದ್ದ ಸದಸ್ಯನೊಬ್ಬ ‘ಈ ಸಲಾ ಗಾಂಧಿ ಜಯಂತಿಗೆ ಏನಾರ ಸ್ಪೆಶಲ್ ಪ್ರೋಗ್ರಾಮ್ ಮಾಡಬೇಕು’ ಎನ್ನುತ್ತಲೇ ಅಲ್ಲಿದ್ದವರ ತಲೆಯಲ್ಲಿ ಒಮ್ಮೆಲೇ ಛಕ್ ಅಂತ ಪತ್ರೆಪ್ಪ ಗಾಂಧಿಯಾಗಿ ಹೊಳೆದುಬಿಟ್ಟ. ಮತ್ತೊಬ್ಬ ಸದಸ್ಯ, ‘ಪತ್ರೆಪ್ಪನ್ನ ಗಾಂಧಿನ್ನ ಮಾಡೂಣು.’ ಅಂದ. ವಿಷಯ ಬಲು ಮೋಜೆನ್ನಿಸಿ ‘ಆತು ಹ್ಯಾಂಗೂ ಪ್ರತ್ಯಕ್ಷ ಗಾಂಧಿಯಂಗ ಅದಾನಲ್ಲ’ ಎಂಬ ಉತ್ತರ ಉಳಿದವರಿಂದ ಹೊರಬಂತು. ಈ ವಿಚಾರ ಆಡಳಿತಮಂಡಳಿಯಲ್ಲಿಯೂ ಚರ್ಚಿತವಾಗಿ, ಅಕ್ಟೋಬರ್ ಎರಡರಂದು ಪತ್ರೆಪ್ಪನನ್ನು ಗಾಂಧಿಯನ್ನಾಗಿಸುವುದೆಂದು ತೀರ್ಮಾನವಾಗಿಬಿಟ್ಟಿತು.

ಎಂದಿನಂತೆ ಪಂಚಾಯತಿಗೆ ಬಂದ ಪತ್ರೆಪ್ಪನನ್ನು ಪಂಚಾಯತಿ ಸಿಬ್ಬಂದಿಯೊಬ್ಬ ‘ನೋಡಪಾ ಪತ್ರೇಸಿ, ನಿನಗ ಪಾಯಖಾನೆ ಬಿಲ್ಲಬರಬೇಕ ಹೌದಲ್ಲೊ?’ ಎಂದು ಕೇಳಿದ್ದೇ ತಡ, ‘ಹೌದ್ರಿಮತ್ತ, ನೀವ ಕಟ್ಟಸ ಕಟ್ಟಸ ಅಂತ ಗಂಟ ಬಿದ್ದ ಕಟ್ಟಾಕಹಚ್ಚೀರಿ. ಬಿಲ್ಲ ಕೊಡತೀವಿ ಅಂದ್ರಿ. ಈಗ ನೋಡಿದ್ರ ನಾ ಸಾಲಾ ಮಾಡಿ ಕಟ್ಟೀನಿ, ಆದ್ರ ಇನ್ನವರಿಗೂ ಬಿಲ್ಲ ಕೊಡವಲ್ಲರಿ. ಈಗ ದಿನಾ ಬೆಳಗ ಆದ್ರ ಸಾಕ ಮನಿಮುಂದ ಸಾಲಗಾರ ಬಂದ ನಿಂದರತಾರಾ.’

‘ಅದೆಲ್ಲಾ ಖರೆಪಾ ಆದ್ರ ಸರಕಾರದ ಖಜಾನೆಯಾಗ ರೊಕ್ಕ ಇಲ್ಲಾ. ಆದ್ರೂ ಒಂದ ಮಾತ ಹೇಳತೀನಿ ಕೇಳ. ಮೊದಲ ರೊಕ್ಕಾ ಜಮಾ ಆದ ಕೂಡಲೇ ತಾಬಡ ತೂಬಡ ನಿನ್ನ ಅಕೌಂಟಿಗೆ ರೊಕ್ಕಾ ಜಮಾಮಾಡಾಕ ಪ್ರಯತ್ನ ಮಾಡತೀವಿ.’

‘ಏನಂತ ಹೇಳ್ರಿ, ಹ್ಯಾಂಗಾರಾ ರೊಕ್ಕಾ ಬಂದ ಈ ಪಂಚಾಯತಿಗೆ ಎಡತಾಕೂದು ತಪ್ಪಿರ ಸಾಕಾಗೇತಿ.’

‘ಏನೂ ಇಲ್ಲಾ, ನೀ ಈ ಸಲಾ ಗಾಂಧಿ ಜಯಂತಿಗೆ ಗಾಂಧಿ ಆಗಿ ನಿಂದರಬೇಕ ನೋಡಪಾ.’

‘ಇಷ್ಟ ಹೌದಲ್ಲೊ, ಯಾಕ ಆಗವಲ್ಲತರಿ’ ಎನ್ನುವುದರೊಂದಿಗೆ ತನ್ನ ಒಪ್ಪಿಗೆ ಸೂಚಿಸಿದ ಪತ್ರೆಪ್ಪ.

ಗಾಂಧಿಯಾಗಬೇಕಿದ್ದರೆ ಮೊದಲು ಆತನ ತಲೆ ಕೂದಲವನ್ನೆಲ್ಲ ಬೋಳಿಸಬೇಕಿತ್ತು. ಹೇಗೆ ಮಾಡುವುದೆಂಬ ಅನುಮಾನ ಪತ್ರೆಪ್ಪನನ್ನು ಕಾಡಿದರೂ ಬಿಲ್ಲಿನ ಆಸೆಗಾಗಿ ಆತ ಗಾಂಧಿಯಾಗಲೇಬೇಕಿತ್ತು.

ನೀಟಾಗಿ ತಲೆಬೋಳಿಸಿಕೊಂಡು ಪಂಚಾಯತಿಗೆ ಬಂದ ಪತ್ರೆಪ್ಪನನ್ನು ಕಂಡು ಸದಸ್ಯರೊಬ್ಬರು ‘ಅಲಲಲಲ ಥೇಟ ಗಾಂಧೀನ ಆದಿ ನೋಡಪಾ, ನಾವು ಸಾಕ್ಷಾತ್ ಗಾಂಧಿನ್ನ ನೋಡಾಕತ್ತೀವಿ ಅಂದ್ರ ನಮ್ಮದೂ ಒಂದ ನಸೀಬನ ಅನ್ನು’ ಎಂದರು. ಮತ್ತೊಬ್ಬ ಸದಸ್ಯ, ‘ಎಲ್ಲೆಬಾಯಿ ತಗಿ ಹಲ್ಲ ಎಷ್ಟ ಅದಾವು ನೋಡುಣು?’ ಎಂದಾಗ ಪತ್ರೆಪ್ಪ ಗಟ್ಟಿಯಾಗಿ ಬಾಯಿ ಮುಚ್ಚಿಕೊಂಡ.

*****

ಗ್ರಾಮ ಪಂಚಾಯತಿಯವರ ಅಣತಿಯಂತೆ ಪತ್ರೆಪ್ಪ ಅಕ್ಟೋಬರ್ ಎರಡರಂದು ಚುಮುಚುಮು ನಸುಕಿನಲ್ಲಿಯೇ ಬಂದ. ಪಂಚಾಯತಿಯ ಧ್ವಜಸ್ಥಂಭದ ಕಸ ಸ್ವಚ್ಛಗೊಳಿಸುತ್ತಿದ್ದ ಸಿಪಾಯಿ ಮಲ್ಲೇಶಿ ‘ಏ ಬಂದಪಾ ಗಾಂಧಿ ಮಹಾತ್ಮಾ’ ಎಂದು ನಗತೊಡಗಿದ. ಸ್ವಲ್ಪ ಸಮಯದ ನಂತರ, ಪತ್ರೆಪ್ಪ ಒಂದುಮೂಲೆಯಲ್ಲಿ ಸುಮ್ಮನೇ ನಿಂತಿದ್ದನ್ನು ಕಂಡು ‘ಏ ಬಾರೋ ಗಾಂಧಿ ಅಜ್ಜಾ, ನೀ ಒಂದಿಷ್ಟು ಕಸಾ ಹೊಡಗಬಾ. ಗಾಂಧಿ ಅಂದ್ರ ಏನ ಅಂತ ತಿಳದಿ? ಗಾಂಧಿ ಅಜ್ಜಾ ಕೊಳಿಗೇರಿಗೂ ಹೋಗಿ ಸ್ವಚ್ಛ ಮಾಡಿ ಬಂದಾರಾ. ಬಾ ಬಾ’ ಎಂದು ಪತ್ರೆಪ್ಪನಿಗೆ ಕಸ ಗುಡಿಸಲು ಪೊರಕೆ ಕೊಟ್ಟ. ವಿಧಿಯಿಲ್ಲದೇ ಪತ್ರೆಪ್ಪ ಕಸಗುಡಿಸಿದ.

ಈ ಸಲ ವಿಶೇಷ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದರಿಂದ ಸದಸ್ಯರು ಹಾಗೂ ಸಿಬ್ಬಂದಿಯವರೆಲ್ಲ ಬೇಗನೇ ಬಂದರು. ಗಾಂಧಿಜಿಗೆ ತುಂಡು ಪಂಜೆಯನ್ನುಡಿಸಿ, ಕನ್ನಡಕ ಹಾಕಿ, ಕೈಯಲ್ಲೊಂದು ಕೋಲು ಕೊಟ್ಟರು. ರೆಡಿಯಾಗಿ ನಿಂತ ಪತ್ರೆಪ್ಪನನ್ನು ಅಚ್ಚರಿಯಿಂದ ‘ಅಯ್ಯ ಥೇಟ ಗಾಂಧಿ ಅಜ್ಜಾನ ಆಗ್ಯಾನ ನೋಡ್ರಿ’ ಎನ್ನತೊಡಗಿದರು. ಎಲ್ಲರಿಗೂ ತಾನೊಂದು ಪ್ರದರ್ಶನದ ಗೊಂಬೆ gandhi-art2ಆದುದಕ್ಕೆ ಪತ್ರೆಪ್ಪ ಮುಜುಗರಗೊಂಡ. ‘ಎಲ್ಲಾನೂ ರೆಡಿ ಆತಾ?’ ಎನ್ನುತ್ತ ಬಂದ ಅಧಿಕಾರಿಗಳಿಗೆ ‘ಎಲ್ಲಾನೂ ಬಿಡ್ರಿ ಸಾಹೇಬ್ರ ಮದಲ ನಮ್ಮ ಗಾಂಧಿನ್ನ ನೋಡ್ರಿ’ ಎಂದು ಪತ್ರೆಪ್ಪನನ್ನು ತೋರಿಸಿದರು. ಸಾಹೇಬರು ವೆರಿಗುಡ್ ಎನ್ನುವ ಮೊದಲೇ ಗಾಂಧಿ ’ನೋಡ್ರಿ ಸಾಹೇಬ್ರ ನನ್ನ ಬಿಲ್ಲ ಅಟು ಹ್ಯಾಂಗಾರ ಮಾಡಿ ಲಗೂಣ ಬರುವಂಗ ಮಾಡ್ರಿ’ ಎಂದು ಬೇಡಿಕೊಳ್ಳತೊಡಗಿದ. ’ಏ ಇಂದ ನೀ ಸುಮ್ಮನಿರಪಾ ನೀ ಯಾರ ಕಡೆನೂ ಏನೂ ಕೇಳಬಾರದೇನಪಾ. ಯಾಕಂದ್ರ ನೀ ಗಾಂಧೀ ಆಗಿ ನಿನಗ ಗೊತೈತಿ ಇಲ್ಲೊ?’ ಎಂದಾಗ, ಪತ್ರೆಪ್ಪ ’ಅಯ್ಯೊ ಸಾಹೇಬ್ರ ಬಿಲ್ಲಿನ ಸಮಂದ ಅಲ್ಲೇನ್ರಿ ನಾ ಗಾಂಧಿ ಆಗಿದ್ದು’ ಅನ್ನಲು ಹೋಗಿ ಸ್ವರ ಹೊರಬರದೇ ಪೆಚ್ಚಾಗಿ ನಿಂತುಕೊಂಡ.

ಗಾಂಧೀಜಿ ಫೋಟೊ ಪೂಜೆ ಮಾಡಿ ಹಿರಿಯ ಅಧಿಕಾರಿಗಳೊಬ್ಬರು ದೊಡ್ಡದಾಗಿ ಗಾಂಧೀಜಿ ಬಗ್ಗೆ ಭಾಷಣ ಬಿಗಿಯತೊಡಗಿದರು. ಗಾಂಧೀಜಿ ಪಟ್ಟಪಾಡನ್ನು ಒಂದೊಂದಾಗಿ ವಿವರಿಸುತ್ತಿದ್ದಂತೆ ಪತ್ರೆಪ್ಪನ ಮುಖದಲ್ಲಿ ಬೆವರಿಳಿಯತೊಡಗಿದರೆ, ಸದಸ್ಯರು ಈಗ ಅವರ ಕೈಗೆ ಸಿಕ್ಕ ಗಾಂಧಿ ಕಡೆಯಿಂದ ಏನೆಲ್ಲ ಮಾಡಿಸಬಹುದು ಎಂಬ ಲೆಕ್ಕ ಹಾಕತೊಡಗಿದ್ದರು. ಒಬ್ಬ ಆತನನ್ನು ಬರಿಗಾಲಲ್ಲಿ ನಡೆಸಿ ದಂಡಿಯಾತ್ರೆ ಮಾಡಿಸಬೇಕೆಂದುಕೊಂಡರೆ, ಮತ್ತೊಬ್ಬ ಆತನನ್ನು ಉಪವಾಸ ಸತ್ಯಾಗ್ರಹ ಮಾಡಿಸಬೇಕೆಂದುಕೊಂಡ. ಮಗದೊಬ್ಬ ಆತನ ಕೈಲಿಂದ ಚರಕ ನೂಲಿಸಬೇಕೆಂದ. ಅವನ ಅದೃಷ್ಟಕ್ಕೆ ಆತನಿಗೆ ಗುಂಡು ಹೊಡೆಯಿಸುವುದೆಂದು ಯಾರೂ ಯೋಚನೆ ಮಾಡಲಿಲ್ಲ.

ಅಧಿಕಾರಿಗಳ ಭಾಷಣ ಮುಗಿದ ನಂತರ, ಎಲ್ಲರಿಗೂ ಪೂರಿಬಾಜಿ ನೀಡಲಾಯಿತು. ಆದರೆ ಪತ್ರೆಪ್ಪ ಮಾತ್ರ ಉಪವಾಸ ಸತ್ಯಾಗ್ರಹಿ ಎಂದು ಭಾವಿಸಿ ಚಹಾಕೂಡ ಕುಡಿಯಲು ನೀಡಲಿಲ್ಲ. ಪತ್ರೆಪ್ಪ ಸಣ್ಣ ಧ್ವನಿಯಿಂದ ’ಯಾವ ಸುಖಕ್ಕ ನಾ ಗಾಂಧಿ ಆಗಿನೋ’ ಎನ್ನುವುದನ್ನು ಕೇಳಿಸಿಕೊಂಡ ಪಂಚಾಯತಿ ಸಿಬ್ಬಂದಿಯೊಬ್ಬ ’ಏ ಗಾಂಧಿ ಅಂದ್ರ ಸುಖಾ ಅಂತ ತಿಳದಿ ಏನ? ಗಾಂಧಿ ಅಂದ್ರನ ಕಷ್ಟಾ’ ಎಂದ.

ಪಂಚಾಯತಿಯ ಕಚೇರಿಯಿಂದ ಮೆರವಣಿಗೆ ಹೊರಟಿತು. ಸಮಯ ಆಗಲೇ ಹತ್ತುಗಂಟೆಯನ್ನು ಸಮೀಪಿಸುತ್ತಿತ್ತು. ಪತ್ರೆಪ್ಪನನ್ನು ಕಂಡ ಜನ ’ಅಬಬಬಬ ಪತ್ರೆಪ್ಪ! ಖರೆ ಖರೆ ಗಾಂಧಿ ಆಗ್ಯಾನ ನೋಡ್ರಿ’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ’ಫೋಟೊದನ್ನ ಗಾಂಧೀನ ಎದ್ದಬಂದಂಗ ಆಗೇತಿ,’ ’ಏ ಗಾಂಧಿ ಚಂದ ಆಗ್ಯಾನಾಬಿಡ’ ಎಂದೆಲ್ಲ ಜನರ ಬಾಯಿಯಲ್ಲಿ ಗಾಂಧಿ ನಲಿದಾಡತೊಡಗಿದರೆ ಪಂಚಾಯತಿಯ ಸಿಬ್ಬಂದಿ ಹಾಗೂ ಸದಸ್ಯರು ಹೆಮ್ಮೆಯಿಂದ, ’ನಮ್ಮ ಪಂಚಾಯ್ತಿ ಅಂದ್ರ ಏನ ತಿಳದೀರಿ? ಸಜೀವ ಗಾಂಧಿನ್ನ ಸೃಷ್ಟಿಮಾಡತೀವಿ ನಾವು’ ಎಂದು ಬೀಗತೊಡಗಿದರು.

ಮೆರವಣಿಗೆ ಕನ್ನಡ ಪ್ರಾಥಮಿಕ ಶಾಲೆಯನ್ನು ತಲುಪಿತು. ಅಲ್ಲಿ ಪತ್ರೆಪ್ಪನನ್ನು ಗಾಂಧೀಜಿ ಪುತ್ಥಳಿಯಂತೆ ನಿಲ್ಲಿಸಿಯೇಬಿಟ್ಟರು. ಮಕ್ಕಳೆಲ್ಲ ಗಾಂಧೀಜಿಗೆ ಕೈಮುಗಿದರು. ಶಾಲಾ ಮುಖ್ಯೋಪಾಧ್ಯಾಯರು ಸಾಕಷ್ಟು ಪರಿಣಾಮಕಾರಿಯಾಗಿ ಗಾಂಧೀಜಿಯವರ ಬಗ್ಗೆ ಭಾಷಣ ಮಾಡಿದರು. ಮಾತಿನ ಮಧ್ಯ ’ಈ ನಮ್ಮ ಗಾಂಧಿ ಈ ನಮ್ಮ ಗಾಂಧಿ’ ಎಂದು ಪತ್ರೆಪ್ಪನನ್ನು ತೋರಿಸುವಾಗ ಒಂದರೆಗಳಿಗೆ ಪತ್ರೆಪ್ಪನಿಗೆ ಹೆಮ್ಮೆ ಎನ್ನಿಸತೊಡಗಿತ್ತು. ಮಕ್ಕಳು ಕೂಡ ಅಲ್ಲಿ ಒಂಟಿಕಾಲಿನಲ್ಲಿ ನಿಂತಂತೆ ನಿಂತಿದ್ದ ಪತ್ರೆಪ್ಪನನ್ನು ಉದ್ದೇಶಿಸಿಯೇ ಗಾಂಧಿ ಗಾಂಧಿ ಎಂದು ಮಾತನಾಡತೊಡಗಿದ್ದರು.

ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಮುಗಿದ ನಂತರ, ಮೆರವಣಿಗೆ ಹೈಸ್ಕೂಲಿಗೆ ಹೊರಟಿತು. ನಿನ್ನೆಯಷ್ಟೇ ಜೋರಾಗಿ ಮಳೆಬಂದು ಹೋಗಿತ್ತಾದರೂ ಬಿಸಿಲು ಬಹಳ ತೀಕ್ಷ್ಣವಾಗಿತ್ತು. ನುಣ್ಣಗೆ ಬೋಳಿಸಿದ ತಲೆ, ತುಂಡು ಪಂಜೆಯಲ್ಲಿರುವ ಗಾಂಧೀಜಿ, ಪ್ರಾಥಮಿಕ ಶಾಲೆಯಿಂದ ದೂರದ ಹೈಸ್ಕೂಲು ತಲುಪುವುದರಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದು ಬಸವಳಿದ. ಕೈಯಲ್ಲಿ ಬರೀ ಒಂದು ಕೋಲನ್ನು ಮಾತ್ರ ಹೊಂದಿದ್ದ ಆತ ಆಗಾಗ ಬಗ್ಗಿ ಬಗ್ಗಿ ಪಂಚೆಯಿಂದಲೇ ಬೆವರು ಒರೆಸಿಕೊಳ್ಳುತ್ತಿದ್ದ. ಹಾಗೇ ಕೈಯಿಂದಲೇ abstract-art-sheepತಲೆ ಒರೆಸಿಕೊಳ್ಳುವಾಗ ಬೆವರಿಂದ ಕೈ ಜಾರುತ್ತಿತ್ತು.

ಹೈಸ್ಕೂಲಿನಲ್ಲಿಯೂ ಪತ್ರೆಪ್ಪನಿಗೆ ಅದೇ ಮರ್ಯಾದೆ ದೊರೆಯಿತು. ಆತನನ್ನು ಕೆಳಗೆ ಕುಳಿತುಕೊಳ್ಳಲೂ ಬಿಡಲಿಲ್ಲ. ಏನಾದರೂ ತಿನ್ನಲು ಕೂಡ ಕೊಡಲಿಲ್ಲ. ಈಗ ಪತ್ರೆಪ್ಪನ ಮೈ ಅಷ್ಟೇ ಅಲ್ಲ ಹೊಟ್ಟೆಯೂ ಚುರುಗುಟ್ಟತೊಡಗಿತ್ತು.

ಮುಂದೆ ಮೆರವಣಿಗೆ ಊರಿನ ಪ್ರಸಿದ್ಧ ಸ್ಥಳ ಮಾರಮ್ಮನ ದೇವಸ್ಥಾನಕ್ಕೆ ಬಂದಿತು. ಹತ್ತು ವರ್ಷಗಳಿಂದ ತನ್ನ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡದೇ ಇರುವ ಗಾಂಧಿ ಭಕ್ತ ಬಲವಂತಪ್ಪ ಪ್ರತಿವರ್ಷವೂ ದೇವಸ್ಥಾನದ ಆವರಣದಲ್ಲಿ ಗಾಂಧೀಜಿ ಚಿತ್ರಕ್ಕೆ ಪೂಜೆ ಸಲ್ಲಿಸಿ ದೊಡ್ಡದಾಗಿ ಫೋಟೊ ತೆಗೆಸಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆಲ್ಲ ಊಟಹಾಕುತ್ತಿದ್ದ. ಈ ಸಲ ಜೀವಂತ ಗಾಂಧೀಜಿಯ ಮೆರವಣಿಗೆಯಾಗಿದ್ದರಿಂದ ಒಂದಿಷ್ಟು ಹೆಚ್ಚು ಖರ್ಚು ಮಾಡಿ ಮೆರವಣಿಗೆಯನ್ನು ಮತ್ತಷ್ಟು ವಿಜೃಂಭಣೆಯಿಂದ ನೆರವೇರಿಸಲು ಪತ್ರಕರ್ತರಷ್ಟೇ ಅಲ್ಲದೆ ಹತ್ತಿರದ ಸಿಟಿ ಕೇಬಲ್ ಟಿವಿ ಮಾಧ್ಯಮದವರನ್ನೂ ಬಲವಂತ ಕರೆಸಿಕೊಂಡಿದ್ದ. ಗ್ರಾಮಕ್ಕೆ ಟಿವಿಯವರೂ ಬಂದ ಸುದ್ದಿ ಊರನ್ನೇ ಮುತ್ತಿಕೊಂಡಿತು. ಹೀಗಾಗಿ ಪ್ರತಿ ಸಲಕ್ಕಿಂತಲೂ ಹೆಚ್ಚು ಜನ ದೌಡಾಯಿಸಿ ಬಂದಿದ್ದರು. ಜೋಲು ಮೋರೆ ಹಾಕಿಕೊಂಡಿದ್ದ ಗಾಂಧಿ ಈಗ ನಿಚ್ಚಳವಾಗಿದ್ದ. ಪತ್ರೆಪ್ಪನನ್ನು ಎಲ್ಲರ ಮಧ್ಯ ನಿಲ್ಲಿಸಿದರು. ಅಧ್ಯಕ್ಷರು ಅವನ ಪಕ್ಕದಲ್ಲಿಯೇ ನಿಂತುಕೊಂಡು ಫೋಟೊ ತೆಗೆದುಕೊಳ್ಳುವುದಲ್ಲದೇ ಟಿವಿ ಮಾಧ್ಯಮದವರು ವಿಡಿಯೋ ಮಾಡಿಕೊಂಡರು.

ಅಧ್ಯಕ್ಷ ಬಲವಂತ ಈ ರೀತಿ ಪ್ರತಿವರ್ಷಕ್ಕಿಂತಲೂ ಜೋರಾಗಿ ಗಾಂಧಿ ಜಯಂತಿ ಆಚರಿಸಿಕೊಳ್ಳುತ್ತಿರುವುದು ಟಿ.ವಿ. ಮತ್ತು ಪೇಪರ್‌ಗಳಲ್ಲಿ ಬರುವ ವಿಷಯ ಅವನ ಆಜನ್ಮ ವೈರಿಯಾದ ಉಪಾಧ್ಯಕ್ಷ ಪುಂಡಲೀಕನನ್ನು ಕೆರಳಿಸಿತು. ಆತ ಇದೇ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮದನಳ್ಳಿಯವ. ಆತನಿಗೆ ಬಲವಂತ ಗಾಂಧೀಜಯಂತಿಯನ್ನು ಪಂಚಾಯತಿಯಲ್ಲಿ ಆಚರಿಸಿದ್ದಲ್ಲದೇ ಸಿಬ್ಬಂದಿಗಳನ್ನೆಲ್ಲ ಕರೆದುಕೊಂಡು ಮಾರಮ್ಮನ ದೇವಸ್ಥಾನದಲ್ಲಿ ಸ್ವಂತ ಖರ್ಚಿನಲ್ಲಿ ಆಚರಿಸುವ ವಿಷಯ ಎಳ್ಳಷ್ಟು ಹಿಡಿಸುತ್ತಿರಲಿಲ್ಲ. artಹೀಗಾಗಿ ಪುಂಡಲೀಕ ಮತ್ತು ಅವನ ಗುಂಪಿನವರು ಪಂಚಾಯತಿಯಲ್ಲಿ ಕಾರ್ಯಕ್ರಮ ಮುಗಿದ ತಕ್ಷಣ ತಮ್ಮ ಮನೆಗಳಿಗೆ ಸಾಗುತ್ತಿದ್ದರು. ಈ ಸಲ ಮಾತ್ರ ಪುಂಡಲೀಕನೂ ಸಹ ಮದನಳ್ಳಿಯಲ್ಲಿ ಸ್ಪರ್ಧೆಯ ಮೇಲೆ ಕಾರ್ಯಕ್ರಮವನ್ನಿಟ್ಟುಕೊಂಡ.

ಮಾರಮ್ಮನ ದೇವಸ್ಥಾನದಲ್ಲಿ ಕಾರ್ಯಕ್ರಮ ಮುಗಿದು ಮಧ್ಯಾಹ್ನದವರೆಗೂ ಸ್ವಲ್ಪವೂ ಕುಳಿತುಕೊಳ್ಳದೇ ಹಸಿವೆ ಹಾಗೂ ಬಿಸಿಲ ಬೇಗೆಯಿಂದ ತಳಮಳಿಸುತ್ತಿದ್ದ ಪತ್ರೆಪ್ಪ ಇನ್ನೇನು ಹೊಟ್ಟೆತುಂಬ ಊಟಮಾಡಿ ಮನೆಕಡೆಗೆ ಹೋಗಬಹುದೆಂಬ ಸಮಾಧಾನದ ನಿಟ್ಟುಸಿರು ಬಿಡುತ್ತಿರುವಾಗಲೇ ಪುಂಡಲೀಕನ ಗುಂಪಿನವರು ಬಂದವರೇ ಪತ್ರೆಪ್ಪ ಹಾಗೂ ಪಂಚಾಯತಿ ಸಿಬ್ಬಂದಿ ಮದನಳ್ಳಿಗೂ ಬರಬೇಕೆಂದು ಹಟತೊಟ್ಟರು. ಅಧ್ಯಕ್ಷ ಬಲವಂತ ‘ನಿಮ್ಮಷ್ಟಕ್ಕ ನೀವು ಮಾಡಕೋರಿ. ಈಗ ಊರತುಂಬ ಮೆರವಣಿಗೆ ಮಾಡಿವಲ್ಲಾ? ಮತ್ತ ಅಲ್ಲಿಗೂ ಹ್ಯಾಂಗ ಬರೂದು? ಅದಾನಲ್ಲ ನಿಮ್ಮೂರ ಚೇರಮನ್ ಅವನ್ನ ಕರಕೊಂಡ ಮಾಡಹೋಗ್ರಿ’ ಎಂದೆಲ್ಲ ಸಮಜಾಯಿಸುವುದರಲ್ಲಿ ಸ್ವತ: ಪುಂಡಲೀಕನೇ ಪ್ರತ್ಯಕ್ಷನಾಗಿ ‘ನೋಡಪಾ ನೀ ಒಬ್ಬ ಬಿಟ್ರಬಿಡು ಉಳದಾರು ನಮ್ಮೂರಿಗೂ ಬರಾಕಬೇಕು. ಯಾಕ ನಮ್ಮೂರು ಪಂಚಾಯ್ತಿಗೆ ಸಂಬಂಧಪಟ್ಟಿಲ್ಲನ? ಸರಳ ಈಗ ಎಲ್ಲಾರೂ ಬರಾಕಬೇಕ ನೋಡ್ರಿ. ಏ ನಡೀರಿ ಸಾಹೇಬ್ರ ನಡೀರಿ ನಡೀರಿ’ ಎಂದು ಜೋರುಮಾಡಿದ. ಸಾಹೇಬರು ‘ಏ ಪಂಚಾಯತಿಯೊಳಗ ಎಲ್ಲಾರೂ ಕೂಡಿ ಆಚರಿಸಿವಿ ಇಲ್ಲೊ? ಮುಗೀತ್ರೆಪಾ ಇನ್ನ.’ ಎಂದರು.

’ಹಂಗಾರ ನೀವು ಈ ಮಗನ ಕಾರ್ಯಕ್ರಮಕ್ಕ ಯಾಕಬಂದೀರಿ? ಪಂಚಾಯ್ತಾಗ ಮುಗದಿತ್ತಿಲ್ಲೊ? ತಣ್ಣಗ ಮನೀಗೆ ಹೋಗಬೇಕಿತ್ತಮತ್ತ? ಇಲ್ಲಿ ಕಾರ್ಯಕ್ರಮದ್ದ ಫೋಟೋನ ಪೇಪರಿನ್ಯಾಗ ಮತ್ತ ಟಿವಿನ್ಯಾಗ ಬರ್‍ತಾವು ಅನ್ನೂದು ನನಗ ಗೊತ್ತಿಲ್ಲಂತ ಮಾಡೀರೆನ? ಸುಮ್ಮನ ನಡೀರಿ ಅಲ್ಲೆ. ಏ ಬಾರಲೆ ಪತ್ರೇಸಿ. ನಿನ್ನ ದಂಡಿಯಾತ್ರಿ ಇನ್ನೂ ಮುಗದಿಲ್ಲಾ’ ಎಂದು ಪತ್ರೆಪ್ಪನನ್ನು ಜಗ್ಗಿದ ಕೂಡಲೇ ಪಾಪ ಮತ್ತೊಂದು ಕಿಲೋಮೀಟರ್ ಹಸಿದ ಹೊಟ್ಟೆಯಲ್ಲಿ ಉರಿವ ಬಿಸಿಲಲ್ಲಿ ನಡೆದು ಹೋಗುವುದನ್ನು ನೆನಪಿಸಿಕೊಂಡ ಪತ್ರೆಪ್ಪನ ಅಸಹನೆ ಉಕ್ಕಿಹರಿಯಿತು. ಪುಂಡಲೀಕ ಹಿಡಿದ ಕೈಯನ್ನು ಸಿಟ್ಟಿನಿಂದ ಕೊಸರಿಕೊಂಡವನೇ ’ಬ್ಯಾಡ್ರಿ ನನಗ ನಿಮ್ಮ ಯಾವ ಬಿಲ್ಲೂಬ್ಯಾಡಾ. ನಾ ಹ್ಯಾಂಗರ ಮಾಡಿ ದುಡದ ಸಾಲಾಮುಟ್ಟಸ್ತೀನಿ. ನನ್ನ ಕೈಬಿಟ್ಟು ಪುಣ್ಯಕಟ್ಟಗೋರಿ’ ಎಂದು ಕಿರುಚಿದ. ಅದೇ ಸಮಯಕ್ಕೆ ಪತ್ರೆಪ್ಪನನ್ನು ಹುಡುಕುತ್ತಾಬಂದ ಅವನ ಹೆಂಡತಿ ’ಎಲ್ಲೆ ಅದೀಯ ನಿನ ಮುದಕಾ? ಹೊಟ್ಟಿ ಖಬರ ಐತಿ ಇಲ್ಲೋ? ಅಡಿಗಿ ಆರಿ ಅರಗಾಲ ಆತು. ಈಗ ಬರತಿ ಆಗ ಬರತಿ ಅಂದ್ರ ಬರಲೇ ಇಲ್ಲಾ. ಉಪಾಸಾ ಇರಾಕ ನೀ ಏನ ಖರೆ ಖರೆನ ಗಾಂಧಿ ಅಂತ ತಿಳದಿಯನ ಮತ್ತ? ಬಾ ಇನ್ನ ಸಾಕ’ ಎಂದವಳಿಗೆ ನಿಜವಾದ ವಿಷಯ ತಿಳಿದು, ’ಅಯ್ಯ ನಿನಸುಡಲಿ ಯಾತಕಬೇಕ ಮಾರಾಯಾ ಅವರ ಬಿಲ್ಲು. ಸಾಕ ಬಾ ಇನ್ನ ಗಾಂಧಿ ಸೆಡಗರಾ’ ಎಂದು ಕೂಗಾಡತೊಡಗಿದಳು. ಆದರೂ ಪ್ರತಿಷ್ಠೆಯ ಕಿಚ್ಚನ್ನು ಹೊತ್ತಿಸಿಕೊಂಡಿದ್ದ ಪುಂಡಲೀಕ, ’ಅದ್ಹೆಂಗ ಆದೀತು? ಗಾಂಧಿ ಅಂದ್ರ ಎಲ್ಲಾರಿಗೂ ಗಾಂಧೀನ ಹೌದಲ್ಲೊ?’ ಎಂದು ದುಂಬಾಲುಬಿದ್ದ. ಕೋಪಗೊಂಡ ಅಧ್ಯಕ್ಷ, ’ನಿಮಗ ಬೇಕಾರ ನಿಮ್ಮೂರಾವನ್ನ ಗಾಂಧಿನ್ನ ಮಾಡ್ರಿ ಯಾರ ಬ್ಯಾಡಾ ಅಂತಾರಾ? ನಮ್ಮೂರ ಪತ್ರೆಪ್ಪನ್ನ ಯಾಕ ಕರಕೊಂಡ ಹೊಕ್ಕಿರಿ?’ ಎಂದ. ’ಅವಾ ಈ ಪಂಚಾಯ್ತಿಯವಾ ಅಂದ್ರ ನಮಗೂ ಸಂಬಂಧಪಡತಾನಾ’ ಎಂದೆಲ್ಲ ಪಟ್ಟುಬಿಡದೇ ಹಟಹಿಡಿದು ಕುಳಿತ ಪುಂಡಲೀಕನಿಗೆ ಎಲ್ಲರೂ ಮಣಿಯಲೇಬೇಕಾಯ್ತು.

ಪತ್ರೆಪ್ಪನ ದಂಡಿಯಾತ್ರೆ ನಡೆಯಿತು. ಅಧಿಕಾರಿಗಳೆಲ್ಲ ಊರ ಹಿರಿಯರೊಬ್ಬರ ಕಾರು ತರಿಸಿಕೊಂಡು ಮದನಳ್ಳಿ ತಲುಪಿದರು. ಆದರೆ ಪಾಪದ ಪತ್ರೆಪ್ಪ ಮಾತ್ರ ಆ ಊರ ಹುಡುಗರೊಂದಿಗೆ ದಂಡಿಯಾತ್ರೆ ಮಾಡಿಯೇ ಸಾಗಿದ. ಆತನ ಹೆಂಡತಿಯೂ ’ಭಾವಾಬಿಕನೇಸಿಗೂಳು ಎಲ್ಲಾ ಕೂಡಿ ನನ್ನ ಗಂಡನ್ನ ಏನಾರ ಮಾಡಿ ಇಟ್ಟಗಿಟ್ಟಾವ ಯವ್ವಾ’ ಎಂದು ಆ ಮೆರವಣಿಗೆಯೊಂದಿಗೇ ಸಾಗಿದಳು.

ಮದನಳ್ಳಿ ತಲುಪುವುದರಲ್ಲಿ ಪತ್ರೆಪ್ಪನ ಕೈಕಾಲುಗಳಲ್ಲಿನ ಶಕ್ತಿ ಉಡುಗಿತು. ಇಷ್ಟೊತ್ತಿನವರೆಗೂ ತೋರಿಕೆಗೆ ಹಿಡಿದ ಕೈಯಲ್ಲಿನ ಕೋಲು ಈಗ ನಿಜವಾಗಿಯೂ mahatma-gandhi-sketchಊರುಗೋಲಾಯಿತು.

ಮದನಳ್ಳಿಯಲ್ಲಿಯೂ ಟಿವಿ ಮಾಧ್ಯಮದವರು ಹಾಜರಿದ್ದರು. ಪುಂಡಲೀಕನಿಗೆ ಮತ್ತು ಅವನ ಗುಂಪಿನವರಿಗೆ ಸಿಂಧ್ಯನಟ್ಟಿಯವರಿಗಿಂತ ಹೆಚ್ಚು ಪ್ರಚಾರ ಸಿಗುವಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಾಗಾಗಿ ಅಲ್ಲಿಗಿಂತ ವಿಶೇಷವಾಗಿ ಅಂದರೆ ಗಾಂಧೀಜಿ ಕೈಗೆ ಪೊರಕೆ ಕೊಟ್ಟು ಊರು ಸ್ವಚ್ಛಗೊಳಿಸುವುದು ಮತ್ತು ರಘುಪತಿ ರಾಘವ ರಾಜಾರಾಮ್ ಎಂಬ ಪ್ರಾರ್ಥನೆಯನ್ನು ಅನ್ನಿಸುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಉಪಾಧ್ಯಕ್ಷ ಅವುಗಳನ್ನೆಲ್ಲ ಕಟ್ಟುನಿಟ್ಟಿನಿಂದ ಪತ್ರೆಪ್ಪನಿಗೆ ಹೇಳಿಕೊಟ್ಟು ’ನೀ ಚೊಲೋತಂಗ ಮಾಡು ಟಿವಿಯೊಳಗ ಎಲ್ಲಾ ಪೇಪರದಾಗೂ ನಮ್ಮೂರ ಸುದ್ದೀನ ಬರಲಿ. ಆಗ ನಿನ್ನ ಬಿಲ್ಲು ಬರೇ ಹತ್ತದಿನದಾಗ ಬರೂವಂಗ ಮಾಡತೀನಿ’ ಎಂದು ಬಳಲಿಬೆಂಡಾಗಿದ್ದ ಪತ್ರೆಪ್ಪನಿಗೆ ಮತ್ತೆ ಉತ್ಸಾಹ ತುಂಬಿದ. ಪತ್ರೆಪ್ಪ ಅನಿವಾರ್ಯವಾಗಿ ಪೊರಕೆ ಹಿಡಿದು ಬಹಳ ಆಯಾಸದಿಂದ ಒಂದಿಷ್ಟು ಜಾಗವನ್ನು ಸ್ವಚ್ಛಗೊಳಿಸಿದ. ಮುಂದೆ ಅವರು ಹೇಳಿಕೊಟ್ಟಂತೆ ಮೈಕ್ ಮುಂದೆ ನಿಂತು ರಘುಪತಿ ರಾಘವ ರಾಜಾರಾಮ್ ಪ್ರಾರ್ಥನೆಯನ್ನು ಹೇಳತೊಡಗಿದ. ಇದ್ದಕ್ಕಿದ್ದಂತೇ ಪತ್ರೆಪ್ಪನಿಗೆ ತಲೆ ಗಿಮ್ಮನೇ ತಿರುಗಿದಂತಾಗಿ ಕಣ್ಣಿಗೆ ಚಕ್ರಬಂದು ಕೈಯಲ್ಲಿನ ಕೋಲು ಜರೆದು ಕೆಳಗೆ ಬಿತ್ತು. ಅದರ ಹಿಂದೆಯೇ ಕೆಳಗೆ ಕುಸಿದ ಆತನ ಗಂಟಲಿನಿಂದ ’ಹೇ ರಾಮ್’ ಎಂಬ ಎರಡು ಶಬ್ದಗಳು ಕ್ಷೀಣವಾಗಿ ಹೊರಬಂದವು.

ಎರಡನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ


– ರವಿ


ವರ್ತಮಾನ.ಕಾಮ್ ಪ್ರಿಯ ಓದುಗರೇ,

ಇದೇ ಡಿಸೆಂಬರ್ 6 ಮತ್ತು 7 (ಶನಿವಾರ ಮತ್ತು ಭಾನುವಾರ) ದಂದು ಜನ ಸಂಗ್ರಾಮ ಪರಿಷತ್ ವತಿಯಿಂದ ರಾಣೆಬೆನ್ನೂರಿನಲ್ಲಿ jsp-ranebennur-announcement2ಎಸ್.ಆರ್.ಹಿರೇಮಠರ ನೇತೃತ್ವದಲ್ಲಿ 2ನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಣೆಬೆನ್ನೂರಿನಲ್ಲಿರುವ ಸಮಾಜ ಪರಿವರ್ತನ ಸಮುದಾಯದ “ಪರಿವರ್ತನ ಸದನ”ದಲ್ಲಿ ಈ ಶಿಬಿರ ನಡೆಯಲಿದೆ. ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ, ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳು, ಸಾಂಸ್ಕೃತಿಕ ಬಂಡಾಯ, ಚಳವಳಿಗಳು, ಸಾಹಿತ್ಯದಲ್ಲಿ ಬಂಡಾಯ, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮತ್ತು ತರಬೇತಿ, ಹಾಡು, ಆಟ, ಪಾಠ; ಹೀಗೆ ಅನೇಕ ವಿಷಯಗಳ ಬಗ್ಗೆ ಎಸ್.ಆರ್.ಹಿರೇಮಠರ ಆದಿಯಾಗಿ ಹಲವಾರು ಹೋರಾಟಗಾರರು, ಪ್ರಾಧ್ಯಾಪಕರು, ಲೇಖಕರು, ಹಾಡುಗಾರರು, ನಡೆಸಿಕೊಡಲಿದ್ದಾರೆ. ವೃಂದಚರ್ಚೆ ಮತ್ತಿತರ ಸಂವಾದಗಳ ಮೂಲಕ ಎಲ್ಲಾ ಶಿಬಿರಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ.

ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ. ಕೇವಲ ಮಾಹಿತಿ ಅಷ್ಟೇ ಅಲ್ಲ, ತಮ್ಮ ಊರು-ನಗರಗಳಲ್ಲಿ ಮುಂದಕ್ಕೆ ಹೇಗೆ ಶಿಬಿರಾರ್ಥಿಗಳು ಜನಪರ ಕಾರ್ಯಕ್ರಮಗಳನ್ನು, ಹೋರಾಟಗಳನ್ನು ರೂಪಿಸಬಹುದು, ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹಾಗೆಯೇ, ಶಿಬಿರ ಮುಗಿದ ನಂತರವೂ ಆಯೋಜಕರು ಶಿಬಿರಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಸಹಕಾರ ಮತ್ತು ಮಾರ್ಗದರ್ಶನ hiremath-jsp-workshopನೀಡುತ್ತಿರುತ್ತಾರೆ.

ಡಿಸೆಂಬರ್ 6, ಶನಿವಾರ ಬೆಳಗ್ಗೆ ಹತ್ತರ ಸುಮಾರಿಗೆ ಆರಂಭವಾಗುವ ಶಿಬಿರ ಭಾನುವಾರ ಸಂಜೆ ಐದರ ತನಕ ನಡೆಯಲಿದೆ. ರಾಣೆಬೆನ್ನೂರು ಒಂದು ರೀತಿಯಲ್ಲಿ ಇಡೀ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿದೆ. (ದಾವಣಗೆರೆಯಿಂದ ಮುವ್ವತ್ತು ಕಿ.ಮೀ. ಉತ್ತರಕ್ಕಿದೆ.) ರಾಜ್ಯದ ಬಹುತೇಕ ಭಾಗಗಳಿಂದ ನಾಲ್ಕೈದು ಗಂಟೆಗಳಲ್ಲಿ ಬಸ್ಸಿನಲ್ಲಿ ತಲುಪಬಹುದು. ಉತ್ತಮ ರೈಲು ಸಂಪರ್ಕವೂ ಇದೆ. ಶನಿವಾರ ರಾತ್ರಿ ವಸತಿ ಸೌಕರ್ಯವೂ ಇರುತ್ತದೆ. ಶನಿವಾರ ಬೆಳಗ್ಗೆಯಿಂದ ಭಾನುವಾರದ ಸಂಜೆಯ ತನಕ ಊಟ-ತಿಂಡಿ-ಚಹಾ ವ್ಯವಸ್ಥೆ ಇರುತ್ತದೆ. ಇವೆಲ್ಲವಕ್ಕೂ ಸೇರಿ ಶಿಬಿರ ಶುಲ್ಕ ಎಂದು ರೂ.500 ಇರುತ್ತದೆ.

ಶಿಬಿರದಲ್ಲಿ, ಎಸ್.ಆರ್.ಹಿರೇಮಠ್, ಪರಿಸರವಾದಿ ಯತಿರಾಜು, ಜನಸಂಗ್ರಾಮ ಪರಿಷತ್‌ನ ಕಾರ್ಯದರ್ಶಿ ದೀಪಕ್ ನಾಗರಾಜ್, ಸಂಘಟನೆಯ ಶಾಂತಲಾ ದಾಮ್ಲೆ, ತುಮಕೂರಿನ ಸಿಜ್ಞಾ ಎಂಬ ಯುವನಾಯಕತ್ವ ಶಿಬಿರಗಳನ್ನು ಆಯೋಜಿಸುವ ಸಂಸ್ಥೆಯ ಸಿಜ್ಞಾ ಸಿಂಧು ಸ್ವಾಮಿ, ನಾನು, ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ.

ಹೆಚ್ಚಿನ ವಿವರಗಳಿಗೆ ಪ್ರಕಾಶ್ ಹೂಗಾರ್ ಅವರನ್ನು 8867186343 ರಲ್ಲಿ ಸಂಪರ್ಕಿಸಿ.

ನಮ್ಮ ವರ್ತಮಾನ.ಕಾಮ್ ಅನ್ನು ನಿಯಮಿತವಾಗಿ ಓದುವ ಮತ್ತು ಬೆಂಬಲಿಸುವ ಯುವ ಪ್ರಜ್ಞಾವಂತರೂ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಮತ್ತು ರಹನಾತ್ಮಕವಾಗಿ ಪಾಲ್ಗೊಳ್ಳಲು ಬೇಕಾದ ಪೂರ್ವಸಿದ್ಧತೆ, ಪರಿಚಯ, ಅವಕಾಶಗಳನ್ನು ಈ ಶಿಬಿರ ಒದಗಿಸುತ್ತದೆ ಎಂದು jsp-ranebennur-announcement1ಭಾವಿಸುತ್ತೇನೆ.

ನಮಸ್ಕಾರ,
ರವಿ

[ಮೊದಲ ಶಿಬಿರದ ಸಂದರ್ಭದಲ್ಲಿ ಬರೆದಿದ್ದ ಟಿಪ್ಪಣಿ: ರಾಣೆಬೆನ್ನೂರಿನಲ್ಲಿ “ಯುವಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ]

ಕಸದ ಕರುಳುಬಳ್ಳಿಯೂ ಹೊಸಪೊರಕೆಯ ಮಡಿಯೂ

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಇತ್ತೀಚೆಗೆ ಯಾವ ಖಾಸಗಿ ಚಾನಲ್ ನೋಡಿದರೂ ಬೆನ್ನಿಕ್ಕಿ ನಡೆದುಹೋದ ಗಾಂಧೀ ಹೆಜ್ಜೆ, ಬೆಂಗಾಲಿಯ ಒಂದೆರಡು ಭಾಷಿಕ ತುಣುಕುಗಳ ಗೊಣಗಾಟ, ಕೊನೆಗೊಂದಿಷ್ಟು ಕಸಹೊಡೆದು ಕೈಗಾಡಿಯಲ್ಲಿ ತುಂಬಿಸಿ ಕಳುಹಿಸುವ ಶುದ್ಧೀಕರಣದ ದೃಶ್ಯವುಳ್ಳ ಸರ್ಕಾರಿ ಜಾಹೀರಾತು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ! ಪತ್ರಿಕೆಗಳಂತೂ ದಿನಂಪ್ರತಿ ಸ್ವಚ್ಛತೆಯ ಕಾರ್‍ಯಕ್ರಮಗಳನ್ನು ಬಿತ್ತರಿಸಿ ಪುಣ್ಯಕಟ್ಟಿಕೊಳ್ಳುತ್ತಿವೆ. ಕಸವೊಂದೇ ದೇಶದ ಸಮಸ್ಯೆ ಎನ್ನುವಂತೆ ಸೈಬರ್ ಸುಕುಮಾರ ಸುಕುಮಾರಿಯರು ಹೊಸ ಪೊರಕೆ ಹಿಡಿದು ’ನಗರದ ಬೀದಿ’ ಗುಡಿಸಿ ಕಸ ಎತ್ತಿದ ಸಾಕ್ಷಿಗಳನ್ನು ಮಾಧ್ಯಮಗಳಿಗೆ ಅಪ್‌ಲೋಡ್‌ಮಾಡಿ ದೇಶಸೇವೆಯ ಜಾಹೀರಾತು ಪಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳೋ, ತಾರೆಯರೋ, Swach-Bharat-photo-opsಸೆಲೆಬ್ರಿಟಿಗಳೋ ಆದ ಅಸಾಮಾನ್ಯರು ಕೋಟು ತೊಟ್ಟೇ ಕಸ ಗುಡಿಸುತ್ತಿದ್ದಾರೆ! ಕೈಗವಚ ತೊಟ್ಟು, ಬಟ್ಟೆಯ ಇಸ್ತ್ರಿಕಳೆಯದ ಎಚ್ಚರದಲ್ಲಿ ಉದ್ದನೆ ಹಿಡಿಕೆಯ ಪೊರಕೆ ಹಿಡಿದು ರಸ್ತೆಬದಿಗೆ ನೆಟ್ಟಗೆನಿಂತು ಕಸಹೊಡೆಯುವ ಈ ಅಭಿನಯವಂತೂ ಮಾಧ್ಯಮ ಬಕಾಸುರರ ಹಸಿವಿಂಗಿಸುತ್ತಿದೆ. ಕೆಲವೊಂದೆಡೆ ಕಸವಿಲ್ಲದೆ ಪೇಚಿಗೆಬಿದ್ದವರು ಕಸವನ್ನೇ ಆಮದು ಮಾಡಿಕೊಂಡು, ಗುಡಿಸಿ ಮುಗಿಸಿದ್ದನ್ನೂ ಕೆಲವು ಕಳ್ಳಗಣ್ಣುಗಳು ಸಣ್ಣಗೆ ಸುದ್ದಿಮಾಡಿವೆ. ಹೀಗೆ ಈಗ ಎಲ್ಲೆಡೆ ಕಸದ ಕಾರುಬಾರು. ‘ಕೆರೆಯ ನೀರನು ಕೆರೆಗೆ ಚಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬಂತೆ ದೇಶದ ಕಸವನ್ನು ದೇಶದೊಳಕ್ಕೇ ಸುರಿದ ದೇಶಸೇವೆಯದೇ ಸುದ್ದಿ. ಈ ಜಾದೂ ನೋಡಿ ಸಹಸ್ರಮಾನಗಳಿಂದ ಕಸಹೊಡೆಯುತ್ತಿರುವ ತಾಯಂದಿರು, ಕುತ್ತಿಗೆಗೆ ಕಟ್ಟಿಕೊಂಡ ಕರಟದಲ್ಲೇ ತಮ್ಮ ಎಂಜಲು ಬಚ್ಚಿಟ್ಟುಕೊಂಡು ತಮ್ಮನ್ನು ನಿಷೇಧಿಸಿದ ಬೀದಿಯನ್ನೇ ಗುಡಿಸಿದ ಬಹಿಷ್ಕೃತರು, ತಲೆಹೆಗಲುಗಳಲ್ಲಿ ಹುಟ್ಟಿದವರ ’ತಳದ ಕೊಳಕ’ನ್ನು ತಲೆಮೇಲೆ ಹೊತ್ತು ಸಾಗಿಸಿದ ದಲಿತರು, ತಿಪ್ಪೆಗುಂಡಿಯಲ್ಲಿ ಕೊಳೆತ ಕಸವನ್ನೇ ನೆಲದ ಹಸಿವಿಂಗಿಸುವ ಗೊಬ್ಬರವೆಂದು ಸಂಭ್ರಮಿಸಿ ಹೊತ್ತು ಬದುಕಿದ ನೆಲದಮಕ್ಕಳು ಬೆರಗಾಗಿದ್ದಾರೆ! ಶತಮಾನಗಳ ಇತಿಹಾಸದಲ್ಲಿ ಸಮೂಹದ ಎದೆಯ ದಾರಿದ್ರ್ಯದಿಂದ ಅವರ ಮೈಮೇಲಿನ ಬಟ್ಟೆ, ಕೈಯಲ್ಲಿಯ ಪೊರಕೆಗಳು ಹೊಸಮೆರುಗು ಹೊಸಹೆಸರು ಕಂಡಿಲ್ಲ. ಅವರೆತ್ತಿದ ಕಸದಮೇಲೆ ದೇಶಸೇವೆಯ ಫಲಕ ಜೋತಾಡಿಲ್ಲ. ಆದರೆ ಈಗ ಶಿಕ್ಷೆಯನ್ನೇ ಕರ್ತವ್ಯವೆಂದು ಬದುಕಿದ ಈ ಕಸದ ಕರುಳುಬಳ್ಳಿಯ ಒಡನಾಡಿಗಳನ್ನೇ ಕಸದ ಜಾದೂ ಕಿಚಾಯಿಸುತ್ತಿದೆ. ಪಾಪದ ಜೋಳಿಗೆಯಲ್ಲಿ ಪುಣ್ಯದ ಪುತ್ಥಳಿಗಳ ಈ ಹೊಸಕುಣಿದಾಟ ಅವರ ಹಣೆಯೊಳಗಿನ ಹಣೆಬರಹವನ್ನೇ ತಡಕಾಡಿಕೊಳ್ಳುವಂತೆ ಮಾಡಿದೆ.

ಈ ದೇಶದಲ್ಲಿ ಯಾವಾಗಲೂ ಹೀಗೆಯೇ. ಸಾಮಾನ್ಯರನ್ನು ಬದಿಗಿರಿಸಿ ಸಾಮಾನ್ಯವು ಸುದ್ದಿಯಾಗುತ್ತದೆ. ಯಾಕೆಂದರೆ ಪಶ್ಚಿಮದಲ್ಲಿ ಆಡಮ್‌ ಸ್ಮಿತ್‌ನ ದುಡಿಮೆಯ ವಿಂಗಡಣೆಸೂತ್ರಕ್ಕೆ ಮೊದಲೇ ಇಲ್ಲಿ ಅಚ್ಚುಕಟ್ಟಾದ ಜಾತಿಸೂತ್ರ ಜಾರಿಗೊಂಡಿತ್ತು. ಸೊಂಟಕ್ಕೆ ಉಡುದಾರ ಕಟ್ಟುವ ಮೊದಲೇ ಮೆದುಳಿಗೆ ಮೆತ್ತುವ ಈ ಜಾತಿಗುರುತು, SwachhBharath_Modiಊರಬೀದಿಯ ಕಸ ಎತ್ತುವುದರಿಂದ ಹಿಡಿದು ಕಟ್ಟಿಕೊಂಡ ಬಚ್ಚಲುಗುಂಡಿಯ ಸ್ವಚ್ಚಕ್ಕೆ ಯಾರನ್ನು ಹುಡುಕುವುದೆಂಬ ಪ್ರಶ್ನೆಯನ್ನೇ ನಾಪತ್ತೆಗೊಳಿಸಿತ್ತು. ಹೀಗೆ ಹೊರಬೇಕಾದವರು ಹೊತ್ತು, ಹೊತ್ತವರ ನೆತ್ತಿಮೇಲೆ ಕೂರುವವರು ಗಡದ್ದಾಗಿ ಕೂತು ನಿದ್ರಿಸುವ ನಿರುಮ್ಮಳತೆ ಈ ಧರ್ಮಸಾಮ್ರಾಜ್ಯದ ಸತ್ಯವಾಗಿತ್ತು. ವ್ಯತ್ಯಾಸವಾದರೆ ತಾನೇ ಮತ್ತೆ ಮತ್ತೆ ಬಂದು’ ಇರಬೇಕಾದುದನ್ನು ಇರುವಂತೆಯೇ ವ್ಯವಸ್ಥೆ ಮಾಡುವುದಾಗಿ ಆ ’ಆಚಾರ್ಯ’ನೂ ಹೇಳಿಹೋಗಿದ್ದ! ಇಂತಹ ಧರ್ಮಪಾಲನೆಯಿಂದ ಕಸ-ರಸಗಳೆಲ್ಲ ಸಲ್ಲಬೇಕಾದ ಜಾಗಕ್ಕೆ ಸಂದಾಯವಾಗುತ್ತಾ ಬಂದಿವೆ. ಹಾಗಾಗಿ ಇಲ್ಲಿ ಕಸತೆಗೆಯುವುದು ಸುದ್ದಿಯಲ್ಲ. ಕಸ ತೆಗೆಯುತ್ತೇವೆ ಎನ್ನುವುದೇ ಸುದ್ದಿ. ಗುಡಿಸಬಾರದವರು ಗುಡಿಸುವುದೇ ಸುದ್ದಿ. ಅದು ನಮ್ಮ ಜನಕ್ಕೆ ಸಿಕ್ಕ ತರಬೇತಿ. ಇಲ್ಲಿ ಜನ ತಮ್ಮ ಕಷ್ಟಕ್ಕೆ ತಲೆ ಕೆಡಿಸಿಕೊಂಡವರಲ್ಲ. ರಾಜರಿಗೆ, ಮೇಲ್ಜಾತಿಗೆ ಬೆವರು ಮೂಡಿದರೆ ಜನಕ್ಕೆ ಅದು ತಮ್ಮ ಚಿಂತೆಯಾಗುತ್ತದೆ. ಉದಾಹರಣೆಗೆ ’ಹರಿಶ್ಚಂದ್ರಕಾವ್ಯ’ದಲ್ಲಿ ದಿನವೂ ತಾವು ನಡೆಯುತ್ತಿರುವುದಕ್ಕೆ ಕೊರಗದ ಜನ ವಿಶ್ವಾಮಿತ್ರನಿಗೆ ಎಲ್ಲವನ್ನೂ(ಕೊನೆಗೆ ತಮ್ಮನ್ನೂ) ಧಾರೆಯೆರೆದು ’ತನ್ನ ಸತ್ಯ’ ಉಳಿಸಿಕೊಳ್ಳಲು ಹೊರಟ ಹರಿಶ್ಚಂದ್ರ ಬರಿಗಾಲಿನಿಂದ ಹೇಗೆ ನಡೆದಾನು ಎಂದು ಚಿಂತೆಗೆ ಬೀಳುತ್ತದೆ. ’ಹೂವಿನಂತಹ ಕಾಲಿರುವ ನೀನು ಬರಿಗಾಲಿನಿಂದ ಹೇಗೆ ನಡೆಯುತ್ತೀ’ ಎನ್ನುವುದು ಅವರ ಸಂಕಟವಾಗುತ್ತದೆ. ಹಾಗಾಗಿ ರಾಜಕುಮಾರರು ಜನರ ನಡುವೆ ಬಂದರೆ, ಸಿನಿಮಾ ನಟಿಗೆ ಹೆರಿಗೆಯಾದರೆ, ನಟರು ಕೈಕುಲುಕಿದರೆ, ಯಾರೋ ಮಂತ್ರಿ, ಅಧಿಕಾರಿ ಗುದ್ದಲಿ, ಪೊರಕೆಹಿಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ನಾವು ಸಂಕಟ, ಸಂತೋಷಕ್ಕೆ ಬಿದ್ದುಬಿಡುತ್ತೇವೆ! Swach-Bharat-photosದಿನಂಪ್ರತಿ ಪೊರಕೆ, ಗುದ್ದಲಿ ಹಿಡಿದವರನ್ನು ಮರೆತು ಬಿಡುತ್ತೇವೆ. ಪುರಾಣಕಾಲದ ನಮ್ಮೀ ಪ್ರವೃತ್ತಿಗೆ ಜನಾಡಳಿತದಲ್ಲೂ ಬಿಡುಗಡೆ ಸಿಕ್ಕಿಲ್ಲ. ಹೀಗಾಗಿ ಸೊಂಟದಿಂದ ಜಾರುವಂತಿರುವ ಜೀನ್ಸ್‌ಪ್ಯಾಂಟ್, ತೆಳುವಾದ ಟೀಶರ್ಟ್ ಹಾಕಿದ ಸುಶಿಕ್ಷಿತ(?) ಟೆಕ್ಕಿಗಳು ಕೈಬಾಯಿಗಳಿಗೆ ಮುಸುಕು ಹಾಕಿಕೊಂಡು ಕಪ್ಪನೆಯ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ತುಂಬಿಸುವ ಆಟವೂ ನಮಗೆ ದೇಶೋದ್ಧಾರದ ಬ್ರೇಕಿಂಗ್‌ ನ್ಯೂಸ್‌ಗಳಾಗುತ್ತವೆ. ಆದರೆ ಮ್ಯಾನ್ ಹೋಲ್‌ಗಳಲ್ಲಿ ಇಳಿದು ಯಾರೋ ಮಾಡಿದ ಹೊಲಸು ಎತ್ತುವ ಕೈಗಳು ಮುನುಷ್ಯರದ್ದೇ ಅನ್ನುವುದನ್ನು ಖಾತರಿಪಡಿಸಲು ಸಂವಿಧಾನದ ಕಲಂ ಓದಬೇಕಾಗುತ್ತದೆ!?

ಮನ ಮುಟ್ಟಿಕೊಂಡು ಮಲಮುಟ್ಟಲು ಹೇಸದ ಗಾಂಧಿ

ವರ್ತಮಾನದ ಕಸದ ಅಬ್ಬರಕ್ಕೆ ’ದೇಶದ ತಂದೆ’ ಎಂದೇ ಭಾವಿತನಾದ ಗಾಂಧಿಮುದ್ರೆಯೂ ಇದೆ. ಅದಲ್ಲದೆಯೂ ಕಸ, ಕೊಳಕು ಅಂದಾಗ ದೇವಾಲಯಕ್ಕಿಂತ ಶೌಚಾಲಯಕ್ಕೆ ಆದ್ಯತೆ ಎಂದ ಆ ಅರೆಬೆತ್ತಲೆ ಫಕೀರ ನೆನಪಾಗಿಯೇ ತೀರುತ್ತಾನೆ. ಆತನಾದರೋ ಅನಾದಿಯ ಯಾನದಲ್ಲಿ ನಮ್ಮ ನಡುವೆ ಕಾಣಿಸಿಕೊಂಡು ಇಲ್ಲವಾದವನು. ಇಲ್ಲ. ಆ ತಾತನನ್ನು ನಾವೇ ನಿವಾರಿಸಿಕೊಂಡೆವೆನ್ನಿ. ಸಾವಿಗೆ ಹೆದರದ ಈ ಫಕೀರ ಹಾಗೀಗೆಲ್ಲಾ ಸಾಯುವ ಅಸಾಮಿಯಲ್ಲ ಎಂಬುದು ಪುಕ್ಕಲು ಹಿಂಸಾವೀರರಾದ ನಮಗೆ ತಿಳಿದಿತ್ತು. ಹಾಗಾಗಿಯೇ ಆ ಬಡಕಲು ಜೀವದ ಗುಂಡಿಗೆಗೆ ಕಾಡುಪ್ರಾಣಿಗಳಿಗೆ ಗುರಿಯಿಡುವ ತುಪಾಕಿಯ ಸಿಡಿಗುಂಡನ್ನೇ ನುಗ್ಗಿಸುವ ವೀರನಿರ್ಧಾರ ಕೈಗೊಂಡು ಮುಗಿಸಿದ್ದು ಇತಿಹಾಸ. ಆದರೂ ನಮಗೆ ತಾತನನ್ನು ನೇಪಥ್ಯಕ್ಕೆ ಸರಿಸಲಾಗಿಲ್ಲ. ತಾತ ದೇಶದಾಚೆಗೂ ಬೆಳೆದು ನಿಂತುಬಿಟ್ಟಿದ್ದಾನೆ! ಹೋಗಲಿ ತಾತನ ಸಾವಿನ ಮಾತು ಯಾಕೆ? ಬದುಕಿನ ಬಗೆಗೆ ಮಾತಾಡೋಣ. ತಾತನೂ ಈ ಸ್ವಚ್ಚತೆಯ ಬಗೆಗೆ ಬಾರೀ ತಲೆ ಕೆಡಿಸಿಕೊಂಡಾತ. ಅಜ್ಜ ಯಾವುದನ್ನೇ ಆಗಲಿ ಹಚ್ಚಿಕೊಂಡ ಅಂದರೆ ಅದನ್ನು ಯಾವುದೇ ಪ್ರಚಾರವಿಲ್ಲದೆ ತಾನೇ ಮಾಡಲು ಇಳಿದು ಬಿಡುತ್ತಿದ್ದ. ಅಜ್ಜ ಅಲ್ಲವೇ? ಅವನ ವಯೋಮಾನ, ಪ್ರೀತಿ, ಕಕ್ಕುಲತೆಗಳೇ ಹಾಗೆ. ಕಕ್ಕುಲತೆಯೂ ಆತನಿಗೊಂದು ಹುಡುಕಾಟವೇ. ಯಾಕೆಂದರೆ ಆತನಿಗೆ ಬದುಕೇ ಪ್ರಯೋಗ. ಅಷ್ಟೇ ಯಾಕೆ ಕೊನೆಗೆ ಸಾವೂ ಕೂಡ ಆತನಿಗೂ, ದೇಶಕ್ಕೂ ಒಂದು ಪ್ರಯೋಗವೇ ಆಯಿತೆನ್ನಿ. ಈ ಅಜ್ಜನ ಬರಹಗಳನ್ನು ಕಲೆಹಾಕಿ ’ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಮಹಾತ್ಮಾಗಾಂಧಿ’ ಎನ್ನುವ ಸಂಕಲನವೊಂದನ್ನು ಹೊರತಂದ ರೋನಾಲ್ಡ್ ಡಂಕನ್, ಅಜ್ಜನ ಸಮಗ್ರವ್ಯಕ್ತಿತ್ವದೊಳಗೇ ಬೆರೆತುಹೋದ ಸ್ಚಚ್ಚತೆಯ ಕಾಳಜಿಗೊಂದು ಸಾಕ್ಷಿ ಒದಗಿಸುತ್ತಾನೆ.

ಡಂಕನ್ ಹೇಳಿರುವುದು ಗಾಂಧಿಯೊಂದಿಗೆ ಭಾಗವಹಿಸಿದ ಹಳ್ಳಿಯೊಂದರ ಸ್ವಚ್ಛತೆಯ ಅಭಿಯಾನದ ಕಥೆ. ಡಂಕನ್‌ಗೆ ಭಾರತದ ಮತ್ತೊಂದು ರೂಪವನ್ನೇ ಗಾಂಧಿ ತೋರಿದ್ದು ಈ ಹಳ್ಳಿಯಲ್ಲೇ. ಅದಾದರೋ ದಟ್ಟ ದಾರಿದ್ರ್ಯದ ಕುಗ್ರಾಮ. ಗಾಂಧೀಜಿ ಹೇಳುವಂತೆ ಅದು ತಾಜ್‌ಮಹಲಿನ ಸೌಂದರ್ಯವನ್ನರಸಿ ಬರುವವರು ಎಂದೂ ನೋಡಬಯಸದ ಭಾರತ. ಬಡ್ಡಿಯ ದಂದೆಕೋರರ ಕೈಗೆ ಸಿಕ್ಕಿ ಮುಂದಿನ ಮೂರು ಪೀಳಿಗೆ ತನಕ ಒತ್ತೆಯಾಳುಗಳಾಗಿರುವವರ ಭಾರತ. ಬಿತ್ತಿ ಬೆಳೆದುದೆಲ್ಲವೂ ಸಾಲನೀಡುವವರ, 200px-MKGandhi[1]ತೆರಿಗೆ ವಸೂಲಿಕಾರರ ಕೈವಶವಾಗುವುದನ್ನು ಕಾಣುತ್ತಾ ಬದುಕುತ್ತಿರುವ ಮಿಲಿಯಾಂತರ ಜನರ ಪ್ರತಿನಿಧಿಯಾದ ಭಾರತ. ಹೀಗೆ ಕರುಣೆತುಂಬಿದ ತಾಯ್ತನದಲ್ಲಿ ಆ ಗ್ರಾಮಬದುಕಿನ ಧಾರುಣತೆಯನ್ನು ಗಾಂಧಿ ಪರಿಚಯಿಸುತ್ತಿರುವ ಹೊತ್ತಲ್ಲಿಯೇ ನಡೆದ ಘಟನೆಯೊಂದು ಡಂಕನ್ ಪುಸ್ತಕದಲ್ಲಿದೆ. ಅಲ್ಲಿರುವ ಮಾಹಿತಿಯಂತೆ ಆ ಜೋಪಡಿಗಳಿಗೆಲ್ಲಾ ಇದ್ದುದು ಒಂದೇ ಬಾವಿ. ಅಂದು ಈ ಬಾವಿ ಪಕ್ಕದಲ್ಲೇ ನಾಲ್ಕೈದುಮಂದಿ ಕುಕ್ಕರುಗಾಲಲ್ಲಿ ಕೂತು ಬೆಳಗಿನ ದೇಹಬಾಧೆ ತೀರಿಸಿಕೊಳ್ಳುತ್ತಿದ್ದರು. ಅದಕ್ಕಿಂತ ಮುಂಚಿತವಾಗಿ ಹಾಗೆ ಮಾಡಿಟ್ಟುಹೋದವರ ಸಾಕ್ಷಿಗಳೂ ಅಲ್ಲಿದ್ದುವು. ಈ ದೃಶ್ಯದ ಎದುರಿಗೆ ನಿಂತ ಗಾಂಧಿ ಡಂಕನ್‌ಗೆ ಮಾಮೂಲಿ ಗಾಂಧೀ ಎನಿಸಲಿಲ್ಲ. ಅದನ್ನು ಡಂಕನ್ ಮಾತಿನಲ್ಲಿಯೇ ಹೇಳುವುದಾರೆ, “ಗಾಂಧೀಜಿ ಮಾತಿಲ್ಲದೆ ನಿಂತಿದ್ದರು. ಅವರ ಮುಖದಲ್ಲಿ ಅತೀವ ನಿರಾಸೆ, ಅನುಕಂಪ, ಯಾತನೆ. ಅವರು ಆ ಜನರಿಗೆ ಆರೋಗ್ಯಶಾಸ್ತ್ರದ ಬಗ್ಗೆ, ನೈರ್ಮಲ್ಯದ ಬಗ್ಗೆ ಲೆಕ್ಚರ್ ಕೊಡಲಿಲ್ಲ. ಈ ಜನರ ಹೀನಸ್ಥಿತಿಗೆ ತಾವೊಬ್ಬರೇ ಕಾರಣರೇನೋ ಎನ್ನುವಂತೆ ನಿಂತಿದ್ದವರು ಕೂಡಲೇ ಕೈಹಾಕಿದ್ದು ಇಂದು ನಾವು ನೀವು ಅಸಹ್ಯಪಡುವಂಥ ಕೆಲಸಕ್ಕೆ. ಅವರು ಆ ಹಳ್ಳಿಗರು ವಿಸರ್ಜಿಸಿದ್ದ ಮಲವನ್ನು ತಮ್ಮ ಕೈಯಿಂದಲೇ ತುಸು ದೂರ ಸರಿಸಿ ಮಣ್ಣಿನಿಂದ ಮುಚ್ಚಿದರು” (ಎಸ್. ದಿವಾಕರ, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ:೨೬/೧/೨೦೧೪.ಪು.೨). ಹೀಗೆ ಇದ್ದಕ್ಕಿದ್ದಂತೆ ಗಾಂಧಿ ಕಾರ್ಯಾಚರಣೆಗೆ ಇಳಿದಿದ್ದರು! ಮಹಾತ್ಮರೇ ತೊಡಗಿಕೊಂಡದ್ದನ್ನು ನೋಡಿದ ಡಂಕನ್ ತಾನು ತೊಡಗಿಕೊಂಡ. ಜೊತೆಗಿದ್ದ ಮಿಕ್ಕವರೂ ಸೇರಿಕೊಂಡರು. ಮೂರು ದಿನಗಳ ತನಕ ದೂರದಿಂದಲೇ ನೋಡುತ್ತಿದ್ದ ಹಳ್ಳಿಗರೂ ಸೇರಿಕೊಳ್ಳುವ ಮೂಲಕ ನಾಲ್ಕನೆಯ ದಿನಕ್ಕೆ ಇಡಿಯ ಊರೇ ಭಾಗವಹಿಸುವಂತಾಯ್ತು. ಇದನ್ನು ಕುರಿತು, “ಗಾಂಧೀಜಿಯ ನಿಸ್ವಾರ್ಥ ಸೇವೆ ಒಂದು ಶತಮಾನ ಕಾಲದಲ್ಲಿ ಒತ್ತಾಯವಾಗಲೀ, ಬೋಧನೆಯಾಗಲೀ ಸಾಧಿಸಲಾಗದ್ದನ್ನು ಒಂದು ಕ್ಷಣದಲ್ಲಿ ಸಾಧಿಸಿಬಿಟ್ಟಿತ್ತು” (ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ: ೨೬-೧-೧೪, ಪು.೨) ಎಂದು ಬರೆಯುತ್ತಾನೆ ಡಂಕನ್. ಯಾರನ್ನೂ ಕರೆಯದೆ ಯಾವ ಘೋಷಣೆಯನ್ನೂ ಮಾಡದೆ ಗಾಂಧೀ ಪಾಪಕ್ಕೆ ಪ್ರಾಯಶ್ಚಿತ್ತವನ್ನಷ್ಟೇ ಮಾಡಿಕೊಂಡಿದ್ದರು. ಅಲ್ಲಿ ಅಧಿಕಾರವಾಣಿ ಇರಲಿಲ್ಲ. ತಾಯ್ತನದ ಕೊರಗಿತ್ತು. ಗ್ರಾಮ ಬದುಕನ್ನು ಸರಿಪಡಿಸುವ ಆ ಕಾಯಕದಲ್ಲಿ ಭಾರತವನ್ನು ಕುರಿತ ಗ್ರಹಿಕೆಯ ಸ್ಪಷ್ಟತೆಯೂ ಇತ್ತು. ಅದು ಪ್ರವಾಸಿಗಳನ್ನು, ವ್ಯಾಪಾರಿ ದರೋಡೆಕೋರರನ್ನು ಆಕರ್ಷಿಸುವ ವರಸೆಯಾಗಿರಲಿಲ್ಲ. ಕಸ ಅಲ್ಲಿ ಜಾಹೀರಾತಿನ ಸರಕೂ ಅಲ್ಲ. ಅಲ್ಲಿ ಮಡಿಭಾವದ ಜೀವವಿರೋಧಿತನವನ್ನು ದಾಟಿ ಪಾಪದ ಹೊಣೆಹೊತ್ತವನ ಒಳಸಂಕಟವಷ್ಟೇ ಇತ್ತು.

ಗೋರಖ ತಿಪ್ಪೆಸ್ವಾಮಿಯರೂ, ಕತ್ತಲೆಯಲ್ಲಿ ಕರುಳು ತೊಳೆದ ಕನಕನೂ

ಕಸ, ತಿಪ್ಪೆ, ಹೊಲಸುಗಳ ನಿರೂಪಣೆಗೆ ಬೇರೆ ಮುಖಗಳೂ ಇವೆ. ಅವು ಕೇವಲ ಶಬ್ದಗಳಲ್ಲ. ಅಲ್ಲೊಂದು ಮಡಿವಾದಿ ತಾತ್ವಿಕತೆಯ ಒಡನಾಟ ಮತ್ತು ಜಗಳ ಇದೆ. ಎಲ್ಲಿ ಕಸ ಅಶುದ್ಧವೋ ಅಲ್ಲಿ ಕಸದ ಜೊತೆಗಿರುವ ಬೆವರಿನ ಜಗತ್ತು ಅಶುದ್ಧವೆನಿಸಿಕೊಳ್ಳುತ್ತದೆ. ಶುಚಿಯಾದ ಪರ್‍ಯಾಯವು ಶ್ರೇಷ್ಠರ ಹಕ್ಕಾಗುತ್ತದೆ. ಹೀಗೆ ಮಡಿಮೈಲಿಗೆಯ ಅತಿರೇಕದಲ್ಲಿ ಮಾಲಿನ್ಯದ ಕಣ್ಣೋಟಕ್ಕೆ ಗುರಿಯಾಗುವ ದೊಡ್ಡ ಸಮೂವು ಹೊರಗಿಡುವ ರಾಜಕಾರಣದಲ್ಲಿ ಬಯಲಿಗೆ ತಳ್ಳಲ್ಪಡುತ್ತದೆ. ಆದರೆ ಜನ ಹಾಗೂ ಜನರೇ ಕಟ್ಟಿಕೊಂಡ ನಡೆಕಾರ ಪರಂಪರೆಗಳು ಮಡಿವಾದದ ಅಪವಿತ್ರ ಸಂಕೇತವನ್ನು ಪವಿತ್ರೀಕರಿಸುವ ಮೂಲಕವೇ ಭಗ್ನಗೊಳಿಸಿವೆ. ರಾಜಪ್ರಭುತ್ವ ಮತ್ತು ಜಾತಿಪ್ರಭುತ್ವಗಳ ತಂತ್ರಗಳನ್ನು ಧಿಕ್ಕರಿಸಿವೆ. ಆ ಧಿಕ್ಕಾರದ ಭಾಗವಾಗಿಯೇ ಅಲ್ಲಿ ಕಸ, ತಿಪ್ಪೆಗುಂಡಿಗಳು ತ್ಯಾಜ್ಯವಾಗದೆ ಸೃಜನಶೀಲ ನೆಲೆಯೆನಿಸಿವೆ. ರೋಗಿಷ್ಟಮಡಿಗೆ ಎದುರಾಗಿ ಕಟ್ಟಿಕೊಂಡ ಸಾಂಸ್ಕೃತಿಕ ಪ್ರತಿರೋಧದ ಭಾಗವಾಗಿಯೇ ಈ ಜನಪಂಥಗಳ ಸಾಂಸ್ಕೃತಿಕನಾಯಕರುಗಳ ಹುಟ್ಟು, ಹೆಸರು ಮತ್ತು ಬದುಕುಗಳು ತಿಪ್ಪೆಯೊಂದಿಗೆ ಬೆಸೆದುಕೊಂಡಿವೆ. ಉದಾಹರಣೆಗೆ ಜನಸಮೂಹದ ಸಾಂಸ್ಕೃತಿಕನಾಯಕ ನಾಯಕನಹಟ್ಟಿಯ ತಿಪ್ಪೆಸ್ವಾಮಿಯ ಹೆಸರಲ್ಲೇ ತಿಪ್ಪೆ ಇದ್ದರೆ, ಗೋರಖನಾಥನ ಹುಟ್ಟೇ ಗೊಬ್ಬರದ ಗುಂಡಿಯಲ್ಲಂತೆ. ಇನ್ನು ಮಂಟೇದಲ್ಲಮನಲ್ಲಿ ’ಲಿಂಗ’ವೇ ಸಾವಿರವರ್ಷ ಚರ್ಮ ಹದಮಾಡಿದ ತೊಪ್ಪೆಗುಂಡಿಗೆ ಬಿದ್ದು ಪವಿತ್ರವಾಗುತ್ತದೆ! ತಿಪ್ಪೆ ತೊಪ್ಪೆಗಳು ಅಶುದ್ಧವೆಂಬ ಭಾವನೆಯೇ ಇರದ ನಡೆಕಾರ ಪರಂಪರೆಯ ದೊಡ್ಡಿವೆಂಕಟಗಿರಿಯಂತೂ ಯಾವುದಾದರೂ ತಿಪ್ಪೆಗುಂಡಿಯಲ್ಲೇ ಹಾಯಾಗಿ ನಿದ್ರಿಸುತ್ತಿದ್ದನಂತೆ. ಹೀಗೆ ಅವರು ನೆಲೆಸಿದ, ಅವರ ಲಿಂಗಗಳು ಮಿಂದೆದ್ದ ಈ ತಿಪ್ಪೆ-ತೊಪ್ಪೆಗಳು ನೆಲದ ಪಾಲಿಗೆ ಬಾರವಾಗದ ಗೊಬ್ಬರವೂ ಹೌದು. ಹಾಗಾಗಿಯೇ ಜನಪದ ಮನಸ್ಸು “ಕಸವು ಹೊಡೆದಾ ಕೈ ಕಸ್ತೂರಿ ನಾತವೂ ಬಸವಣ್ಣ ನಿನ್ನ ಸೆಗಣಿಯ ಬಳಿದ ಕೈ ಎಸಳ ಯಾಲಕ್ಕೀ ಗೊನಿನಾತ” ಎಂದೇ ಅದನ್ನು ವಾಸನೆ ಎನ್ನದೆ ಪರಿಮಳದ ಸರಕೆಂದಿದೆ. ಆದರೆ ಅಪವಿತ್ರವಾದುದನ್ನೇ ಪವಿತ್ರೀಕರಿಸುವ ಈ ಜನಪಂಥಗಳೊಳಗಿನ ಪರಿಶುದ್ಧತೆಯ ತಹತಹವೂ ತೀವ್ರತರವಾದುದು. ಈ ಶುದ್ಧತೆಯ ತಹತಹದಲ್ಲೂ ನೆಲದ ನಂಟಿಲ್ಲದ ಮಡಿವಾದಿ ಕೃತಕತೆಯ ಅಣಕವಿತ್ತು. ತಿಪ್ಪೆಯನ್ನು ಹಂಗಿಸಿ ದುಡಿಮೆಯ ಜಗತ್ತನ್ನು ಅಪಮಾನಿಸಿದ ಮಡಿತನಕ್ಕೆ ಎದುರಾಗಿ ತಮಗೆ ತಾವೇ ಪ್ರಾಮಾಣಿಕರಾಗುವ ಮಡಿ ಇತ್ತು. ಲೋಕದ ಕಸವನ್ನು ನೆಲದ ಗೊಬ್ಬರವಾಗಿ ಕಂಡ ಈ ನಡೆಕಾರರು ಒಡಲ ಕಸವನ್ನು ಲೋಕದ ಕೇಡಾಗಿಯೇ ಕಂಡವರು. ಹೀಗಾಗಿ ಒಡಲು ತುಂಬಿಕೊಂಡ ಪಾಪ ತೊಳೆಯದೆ ಬಹಿರಂಗದಲ್ಲಿ ಪೊರಕೆ ಹಿಡಿದು ಕಸರತ್ತು ಮಾಡುವುದು ಅವುಗಳಿಗೆ ಅಸಾಧ್ಯವಿತ್ತು.

ದಾಸನಾಗಿ ಮಡಿವಾದಿಗಳ ನಡುವಿದ್ದ ಕನಕನಿಗೆ ಸಂಬಂಧಿಸಿದಂತೆ ಈ ಅಂತರಂಗದ ಮಡಿಯನ್ನು ಕಥಿಸುವ ಸುಂದರವಾದ ಐತಿಹ್ಯವೊಂದಿದೆ. ಮಡಿಯ ಜಂಜಾಟಕ್ಕೆ ಎದುರಾಗಿ ಲೋಕದ ಸತ್ಯವನ್ನಿಟ್ಟು ತೂಗಿದ ಕನಕನ ಬಗೆಗೆ ಜನ ಕಟ್ಟಿಕೊಂಡ ಐತಿಹ್ಯವೊಂದರ ಮೇರೆಗೆ ಆತ ಪ್ರತಿದಿನ ಊರಮೇಲೆ ಹೋಗುತ್ತಿದ್ದವನು ಕತ್ತಲೆಯ ಹೊತ್ತಿಗೆ ಯಾವುದೋ ಒಂದು ಗೊತ್ತಾದ ನಿರ್ಜನಪ್ರದೇಶವನ್ನು ತಲುಪುತ್ತಿದ್ದ. ಜನಕ್ಕೆ ಸರಿರಾತ್ರಿ ಹೊತ್ತು ಕನಕ ಅಲ್ಲಿ ಏನು ಮಾಡುತ್ತಿರಬಹುದೆಂಬ ಕುತೂಹಲ. ನೋಡಿಯೇ ಬಿಡೋಣ ಎಂದು ತಲಾಷೆಗೆ ಇಳಿದವರು ಕಂಡದ್ದು ಕನಕನ ಅಸಾಧ್ಯ ಮಡಿ! ಅದೇನೆಂದರೆ ಸರಿರಾತ್ರಿಯ ಕತ್ತಲೆಗೆ ಊರೆಲ್ಲ ಮಲಗಿದ ಮೇಲೆ ಬಂದ ಕನಕ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ತನ್ನ ಹೊಟ್ಟೆಯೊಳಗಿನ ಕರುಳನ್ನೆಲ್ಲಾ ಹೊರಗೆ ಹಾಕಿ ತೊಳೆಯಲು ತೊಡಗಿದ. ಎಲ್ಲಾ ತೊಳೆದಾದ ಮೇಲೆ ಮತ್ತೆ ಒಳಕ್ಕೆ ಹಾಕಿಕೊಂಡು ಏನೂ ಆಗಿಲ್ಲವೆಂಬಂತೆ ಹೊರಟುಬಿಟ್ಟ! ಇಷ್ಟೇ. ಆದರೆ ವಿಚಿತ್ರವಾದ ಈ ಐತಿಹ್ಯದಲ್ಲಿ ಸಂದೇಶಗಳಿವೆ. ಸ್ವಚ್ಛಮಾಡಿಕೊಳ್ಳಬೇಕಾದುದು ನಮ್ಮ ನಮ್ಮ ಒಡಲು ಮತ್ತು ನಮ್ಮ ನಮ್ಮ ಸಮಾಜವನ್ನೇ ಎಂಬ ಸರಳಸತ್ಯವಿದೆ. ವ್ಯಕ್ತಿ ಮತ್ತು ಸಮಾಜ ತನ್ನ ಕರುಳಿಗೆ ಮೆತ್ತಿಕೊಂಡ ಕೊಳೆ ತೊಳಕೊಳ್ಳದೆ ಊರು ತೊಳೆಯುವ ಮಾತಿಗೆ ಅರ್ಥವೂ ಇಲ್ಲ ಎಂಬುದಿದೆ. ನಾವು ಆಚರಿಸುವ ಅಸೃಶ್ಯತೆ, ಜಾತಿ ಪದ್ಧತಿ, ಮಡಿ-ಮೈಲಿಗೆ, ಮೌಢ್ಯ, ಅನಾಚಾರ, ಅಧಿಕಾರಕ್ಕಾಗಿ ಕಂಡುಕೊಂಡ ಒಳದಾರಿಗಳು, ಇನ್ನಾರದೋ ಬದುಕನ್ನೇ ನಾಶಮಾಡಿದ್ದೂ.. ಹೀಗೆ ಬೆಳೆಯುತ್ತಲೇ ಹೋಗುವ ಕಿಲುಬನ್ನು ಹಾಗೆಯೇ ಉಳಿಸಿ ಹೊರಗೆ ಶುದ್ಧವಾಗುವುದು ಆತ್ಮವಂಚನೆಯ ಮಡಿಯಷ್ಟೇ. ತಳಮೂಲದ ಕನಕನಿಗೆ ಮೈತೊಳೆಯುವ ಕರ್ಮಠಮಡಿಗಿಂತ ಕರುಳುತೊಳೆದುಕೊಳ್ಳುವ ನೆಲಮೂಲದ ಸಹಜತೆ ಮುಖ್ಯವಾಗಿತ್ತು. ಯಾಕೆಂದರೆ ಆತ ಬಂದುದು ಬೆವರ ಲೋಕದಿಂದಲ್ಲವೆ?

ಗಾಂಧಿ ಅಸ್ಪೃಶ್ಯತೆಯನ್ನು ಪಾಪ ಎಂದರು. ಅಂಬೇಡ್ಕರ್ ಇದರ ಒಳಹೊರಗನ್ನೆಲ್ಲಾ ತನ್ನ ತೀಕ್ಷ್ಣತರ್ಕದ ಮೂಲಕ ತೆರೆದಿಟ್ಟರು. Manual-scavengingಈ ಕಳಂಕವನ್ನು ಮರೆತು ಸ್ವಚ್ಛತೆಯ ಬಗೆಗೆ ಗಾಂಧಿ ಹೇಳಿದ ಮಾತಿನ ಮೇಲುಹೊದಿಕೆಯನ್ನಷ್ಟೇ ಬಳಸಿದರೆ ಗಾಂಧಿಯನ್ನೇ ನಾಪತ್ತೆ ಮಾಡಿದಂತಾಗುತ್ತದೆ. ಇನ್ನು ಗಾಂಧೀ ಕಲ್ಪನೆಯ ಸ್ವಚ್ಛಭಾರತ ಗ್ರಾಮಭಾರತವೂ ಹೌದು. ಆದರೆ ನಾವು ತೆರೆದುಕೊಂಡಿರುವುದು ಮುಕ್ತಮಾರುಕಟ್ಟೆಗೆ. ಕರೆಯುತ್ತಿರುವುದು ನಗರವೆಂಬ ಆಧುನಿಕ ನರಕನಿರ್ಮಾಣದ ಹಣದ ಥೈಲಿಕಾರರನ್ನು. ನಿರ್ಮಿಸಲು ಹೊರಟಿರುವುದು ಸ್ಮಾರ್ಟ್‌ಸಿಟಿಗಳನ್ನು. ಹಾಗಾಗಿ ನಗರವನ್ನೇ ಗುಡಿಸಿ ಒರೆಸುತ್ತಿರುವ ನಮಗೆ ನಾವು ಕಟ್ಟುವ ಭಾರತದ ಕುರಿತ ಸ್ಪಷ್ಟತೆ ಇದೆಯೇ ಎಂಬುದನ್ನೂ ಕೇಳಿಕೊಳ್ಳಬೇಕಿದೆ. ಇನ್ನು ಶತಮಾನಗಳಿಂದ ಊರಹೊಲಸು ಬಳಿದು ನಮ್ಮ ಉಸಿರು ಸರಾಗಗೊಳಿಸಿದವರು ಹೇಗಿದ್ದಾರೆ? ನ್ಯಾಯ ಕೇಳುವುದಕ್ಕೂ (ಸವಣೂರಿನ ಭಂಗಿ ಕಾರ್ಮಿಕರು)ಮೈಮೇಲೆ ಮಲಸುರಿದುಕೊಳ್ಳುವ ಅವರ ವರ್ತಮಾನದ ಬದುಕಿಗೆ ನಾವೇನು ಮಾಡಿದ್ದೇವೆ? ಈ ಕುರಿತ ಆತ್ಮವಂಚನೆಯಿಲ್ಲದ ತರ್ಕವೂ ನಮಗೆ ಬೇಕಿದೆ. ಆಗ ನಾವು ತೆಗೆಯುವ ಕಸವೂ ಕಸ್ತೂರಿ ನಾತವನ್ನು ಬೀರೀತು.