ರಾಜಕೀಯ ಪಕ್ಷಗಳಿಗೆ ಕೊಪ್ಪಳದ ಫಲಿತಾಂಶ ಕೊಟ್ಟ ಸಂದೇಶ

-ಚಿದಂಬರ ಬೈಕಂಪಾಡಿ

ಕೊಪ್ಪಳ ವಿಧಾನ ಸಭೆಯ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಬೀಗುತ್ತಿದೆ, ಕಾಂಗ್ರೆಸ್ ತನ್ನ ಸೋಲನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕಾಗಿದೆ. ಜೆಡಿಎಸ್ ಇಲ್ಲಿ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವಂತೆ ಪ್ರತಿಕ್ರಿಯೆಸಿದೆ. ಇಲ್ಲಿ ಕರಡಿ ಸಂಗಣ್ಣ ಗೆದ್ದಿರುವುದಕ್ಕೆ ಬಿಜೆಪಿ ಮನೆಯೊಳಗೆ ಹಲವು ಮಂದಿ ತಾವೇ ಕಾರಣವೆಂದು ಹೇಳಿಕೊಳ್ಳುತ್ತಿದ್ದಾರೆ. ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಗೆಲುವೆಂದು ಬಣ್ಣಿಸುವ ಜಾಣ್ಮೆಯನ್ನೂ ತೋರಿಸಿದ್ದಾರೆ.

ಕೊಪ್ಪಳ ಉಪಚುನಾವಣೆಯನ್ನು ಬಿಜೆಪಿಗೆ ಗೆಲ್ಲಲೇ ಬೇಕಾಗಿತ್ತು, ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷ. ಚುನಾವಣೆಗೂ ಮೊದಲು ಬಿಜೆಪಿಯೊಳಗೆ ಕೊಪ್ಪಳ ಉಪಚುನಾವಣೆ ನಾಯಕತ್ವ ಯಾರ ಹೆಗಲಿಗೆ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ಮುಖ್ಯಮಂತ್ರಿ ಸದಾನಂದ ಗೌಡರ ನಡುವೆ ಆಂತರಿಕ ಯುದ್ಧವೇ ನಡೆದಿತ್ತು. ಆದರೆ ತಮ್ಮೊಳಗಿನ ವೈಮನಸ್ಸನ್ನು ತಾವೇ ಬಗೆಹರಿಸಿಕೊಂಡು ಕೊಪ್ಪಳ ಗೆಲುವಿಗೆ ಮುಂದಾದರು.

ಕೊಪ್ಪಳ ಉಪಚುನಾವಣೆ ಫಲಿತಾಂಶವನ್ನು ಬಿಜೆಪಿ ತನ್ನ ಸ್ವಸಾಮರ್ಥ್ಯವೆಂದು ಭ್ರಮೆಪಟ್ಟುಕೊಳ್ಳಬಾರದು. ಹಾಗೆಯೇ ಕಾಂಗ್ರೆಸ್ ಇಲ್ಲಿನ ಸೋಲನ್ನು ಸುಲಭವಾಗಿ ಮರೆಯಬಾರದು. ಜೆಡಿಎಸ್ ನಿರ್ಲಿಪ್ತವಾಗಿ ಕುಳಿತುಕೊಳ್ಳುವಂತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಕೊಪ್ಪಳದಲ್ಲಿ ಸಮರ್ಥವಾಗಿ ಹೋರಾಟ ಮಾಡಲಾಗದೆ ಸೊರಗಿತು. ಹಣಬಲ, ಹೆಂಡದ ಬಲದಿಂದ ಬಿಜೆಪಿ ಗೆಲುವು ಸಾಧಿಸಿತು ಎಂದು ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಹೇಳಿರುವುದು ತಾನು ಹಣ ಚೆಲ್ಲಲಿಲ್ಲ ಎನ್ನುವ ಅರ್ಥ ಕೊಡುತ್ತದೆ ಹೊರತು ವಾಸ್ತವ ಅದಲ್ಲ.

ಕರಡಿ ಸಂಗಣ್ಣ ಅವರನ್ನು ಅಲ್ಲಿನ ಮತದಾರರು ಮತ್ತೊಮ್ಮೆ ವಿಧಾನ ಸಭೆಗೆ ಕಳುಹಿಸಿ ಹಿಟ್ನಾಳ್, ಪ್ರದೀಪ್ ಗೌಡರನ್ನು ಕೈಬಿಟ್ಟಿರುವುದಕ್ಕೆ ಸಂಗಣ್ಣ ಅವರ ಮೇಲಿನ ವಿಶ್ವಾಸವೂ ಕಾರಣವಿರಬಹುದು. ಹಾಗೆಯೇ ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಚುನಾವಣೆ ಗೆಲ್ಲುವುದನ್ನೇ ಮರೆತು ಬಿಟ್ಟಿರುವುದು ಕೂಡಾ ಸಂಗಣ್ಣ ನಗೆಬೀರಲು ಕಾರಣ. ಸಹಜವಾಗಿಯೇ ಬಿಜೆಪಿಗೆ ಗೆಲ್ಲುವ ಎಲ್ಲಾ ಅನುಕೂಲತೆಗಳು ಇದ್ದವು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಸಮರ್ಥ ನಾಯಕತ್ವದ ಮೂಲಕ ಜನಮನ ಗೆಲ್ಲಲು ವಿಫಲವಾಗಿದೆ. ಎಲ್ಲಾವರ್ಗದ ಜನ  ಒಪ್ಪುವ ನಾಯಕತ್ವ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎನ್ನುವುದು ಈ ಉಪಚುನಾವಣೆಯ ಮೂಲಕ ಅನಾವರಣಗೊಂಡಿದೆ.

ಯಡಿಯೂರಪ್ಪ ಮಾಜಿಯಾಗಿದ್ದರೂ ಹಾಲಿಯಷ್ಟೇ ಪವರ್ಫುಲ್ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೆ ರವಾನಿಸಿದ್ದಾರೆ. ಕನರ್ಾಟಕದಲ್ಲಿ ಯಡಿಯೂರಪ್ಪರನ್ನು ಹೊರಗಿಟ್ಟು ಬಿಜೆಪಿ ರಾಜಕೀಯ ಮಾಡುವಂತಿಲ್ಲ ಎನ್ನುವುದನ್ನು ಕೊಪ್ಪಳದ ಗೆಲುವು ನಿರೂಪಿಸಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಇಲ್ಲಿಯ ಗೆಲುವನ್ನು ಬಿಜೆಪಿ ಸಕರ್ಾರದ ಹೆಗಲಿಗೆ ಹಾಕಿ ಬುದ್ಧಿವಂತಿಕೆ ತೋರಿಸಿದ್ದಾರೆ.

ಜೆಡಿಎಸ್ನ ಪರಮೋಚ್ಛನಾಯಕ ದೊಡ್ಡ ಗೌಡರು ಕೊಪ್ಪಳದ ಫಲಿತಾಂಶವನ್ನು ಮೊದಲೇ ಊಹಿಸಿದವರಂತೆ ದೂರವೇ ಉಳಿದುಕೊಂಡು ತಮ್ಮ ಚಾಣಾಕ್ಷತೆಯನ್ನು ಪ್ರದಶರ್ಿಸಿದ್ದಾರೆ. ಕೊಪ್ಪಳ ಸಂಗಣ್ಣ ಅವರ ಕರ್ಮಭೂಮಿ ಎನ್ನುವ ಕಾರಣಕ್ಕೆ ದೇವೇಗೌಡರು ಸುಮ್ಮನಾದರೆಂದು ಭಾವಿಸುವಂತಿಲ್ಲ ಅಥವಾ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಗೆಲ್ಲುವ ಕಸುಬುಗಾರಿಕೆ ಗೊತ್ತಿಲ್ಲರಲಿಲ್ಲ ಅಂದುಕೊಳ್ಳುವಂತಿಲ್ಲ. ಕಾಂಗ್ರೆಸ್ ಪಕ್ಷ ಸರಣಿ ಸೋಲು ಅನುಭವಿಸಿತ್ತಿದ್ದರೂ ಆ ಪಕ್ಷದವರು ಜೆಡಿಎಸ್ ಜೊತೆ ಕೈಜೋಡಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಪಾಠ ಕಲಿಸಲು ಗೌಡರು ಈ ನಡೆ ಅನುಸರಿಸಿದ್ದಾರೆ.

ಬಿಜೆಪಿಯನ್ನು ಕಾಂಗ್ರೆಸ್, ಜೆಡಿಎಸ್ ಸಮಾನ ದೂರದಲ್ಲಿಟ್ಟು ರಾಜಕೀಯ ಮಾಡುತ್ತಿವೆ. ಅಂತೆಯೇ ಬಿಜೆಪಿ ಕೊಡಾ ಈ ಪಕ್ಷಗಳನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ನಂಬಿ ರಾಜಕೀಯ ಮಾಡುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಕಲಹದ ಲಾಭ ಪಡೆಯುವುದು ಕಾಂಗ್ರೆಸ್ ಮತ್ತು ಜೆಡಿಎಸ್ನ ಉದ್ದೇಶವಾಗಿರಬಹುದು. ಆದರೆ ಈ ಪಕ್ಷಗಳಿಗೆ ಬಿಜೆಪಿಯೊಳಗೆ ಅದೆಷ್ಟೇ ಕಿತ್ತಾಟವಿದ್ದರೂ ಚುನಾವಣೆ ಕಾಲದಲ್ಲಿ ಪಕ್ಷವನ್ನು ಮುಂದಿಟ್ಟುಕೊಂಡು ನಾಯಕರು ಮತಯಾಚಿಸುತ್ತಾರೆ ಎನ್ನುವ ಅರಿವು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಗೊತ್ತಿದೆ. ಆದರೂ ಒಣಪ್ರತಿಷ್ಟೆ ವಿಶೇಷವಾಗಿ ಕಾಂಗ್ರೆಸ್ ನಾಯಕರನ್ನು ಆವರಿಸಿಬಿಡುತ್ತದೆ, ಆದ್ದರಿಂದಲೇ ಈ ಪಕ್ಷದ ನಾಯಕರು ತಮ್ಮತಮ್ಮೊಳಗೇ ಸ್ವಯಂ ನಾಯಕತ್ವವನ್ನು ಆವಾಹಿಸಿಕೊಂಡು ಓಡಾಡುತ್ತಿರುತ್ತಾರೆ.

ಕೆಪಿಸಿಸಿ ನಾಯಕರಾದವರಿಗೆ ಮಾತ್ರ ಚುನಾವಣೆ ಗೆಲ್ಲಿಸುವ ಜವಾಬ್ದಾರಿ ಎನ್ನುವಂತೆ ಈ ಪಕ್ಷದ ಉಳಿದ ನಾಯಕರು ವರ್ತಿಸುವುದರಿಂದ ಚುನಾವಣೆ ಕಣದಲ್ಲಿ ಹಿನ್ನಡೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕುವುದು ಸುಲಭದ ಕೆಲಸವಲ್ಲ ಎನ್ನುವುದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮನವರಿಕೆ ಮಾಡಿಕೊಳ್ಳಲು ಕೊಪ್ಪಳ ಉಪಚುನಾವಣೆ ಫಲಿತಾಂಶ ಅವಲೋಕಿಸಬೇಕಾಗಿದೆ. ಅಲ್ಲಿನ ಮತದಾರರ ಅಂಕೆ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಗೆ ಸುಮಾರು ಅರ್ಧದಷ್ಟು ಮತದಾರರು ವಿರೋಧವಿರುವುದು ಗೋಚರಿಸುತ್ತದೆ. ಕರಡಿ ಸಂಗಣ್ಣ ಅವರನ್ನು 60,405 ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್  ಅಭ್ಯರ್ಥಿ ಬಸವರಾಜ್ ಹಿಟ್ನಾಳ್ ಪರ 47,917 ಮಂದಿ ಮತ ಚಲಾಯಿಸಿದ್ದಾರೆ. ಪರಾಜಿತ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡರನ್ನು 20,719 ಮಂದಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಒಟ್ಟು ಮತಗಳು ಗೆದ್ದ ಅಭ್ಯರ್ಥಿಗಿಂತಲೂ ಹೆಚ್ಚು. ಈ ಲೆಕ್ಕಾಚಾರ ಬಿಜೆಪಿಗೂ ಮುಂದಿನ ನಡೆ ಹೇಗಿಡಬೇಕೆನ್ನುವುದಕ್ಕೆ ದಿಕ್ಸೂಚಿಯಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಯೋಚಿಸಿದರೆ ಬಿಜೆಪಿ ಮುನ್ನಡೆಗೆ ಕಾರಣಗಳು ಅರ್ಥವಾಗಿಬಿಡುತ್ತವೆ. ಚುನಾವಣೋತ್ತರ ಮೈತ್ರಿಯ ಅನಿವಾರ್ಯತೆಯನ್ನು ಕೊಪ್ಪಳ ಉಪಚುನಾವಣೆ ಈ ಪಕ್ಷಗಳ ಮುಂದಿಟ್ಟಿದೆ. ಹಾಗೆಯೇ ಬಿಜೆಪಿ ಆಂತರಿಕ ಕಿತ್ತಾಟಗಳಿಂದ ನಲುಗಿದರೆ ಭವಿಷ್ಯ ಏನಾಗಬಹುದು ? ಎನ್ನುವ ಒಳಮರ್ಮವನ್ನು ಅರಿತುಕೊಳ್ಳಲು ಅವಕಾಶವಾಗಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಲ್ಲಾ ಪಕ್ಷಗಳು ತಾಲೀಮು ನಡೆಸಬೇಕಾಗಿರುವುದರಿಂದ ತಾವು ಯಾವ ಸ್ತರದಲ್ಲಿದ್ದೇವೆ ಎನ್ನುವುದನ್ನು ನೋಡಿಕೊಳ್ಳಲು ಇದು ಸಕಾಲ. ಗುಜರಾತ್ ಮಾದರಿ ಅಭಿವೃದ್ಧಿ ಮಾಡುವ ಕನಸು ಬಿತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಬಿಜೆಪಿ ಸಾರಥಿಯಾಗಿ ಕರ್ನಾಟಕವನ್ನು ಮುನ್ನಡೆಸಲು ಕೊಪ್ಪಳ ಉಪಚುನಾವಣೆ ಫಲಿತಾಂಶ ಪ್ರೇರಣೆಯಾಗಿದೆ. ಅಂತೆಯೇ ಕಾಂಗ್ರೆಸ್, ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುನ್ನುಡಿಯಾಗಿದೆ.

1 thought on “ರಾಜಕೀಯ ಪಕ್ಷಗಳಿಗೆ ಕೊಪ್ಪಳದ ಫಲಿತಾಂಶ ಕೊಟ್ಟ ಸಂದೇಶ

  1. vaijanath hiremath

    ಮಾನ್ಯರೇ, ಏನೇ ಆಗಲಿ ಕೊಪ್ಪಳ ಉಪಚುನಾವಣೆ ಫಲಿತಾಂಶವನ್ನು ಮೀಡಿಯಾ/ಪ್ರೆಸ್ ಗಳು ಸರಿಯಾದ ದಿಕ್ಕಿನಲ್ಲಿ ವಿಶ್ಲೇಷಣೆ ಮಾಡದೇ ಆಯಾ ವರದಿಗಾರರ ಇಲ್ಲವೇ ಕೆಲ ಪೂರ್ವಾಗ್ರಹ ಪೀಡಿತ ವಿಶ್ ರಂತಹ ಸಂಪಾದಕರ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡಿರುವುದು ನಿಜಕ್ಕೂ ಕನ್ನಡ ಪತ್ರಿಕೋದ್ಯಮದ ಇತಿಹಾಸಕ್ಕೆ ಹೊಲಿಸಿದರೆ ತೀವ್ರ ನಾಚಿಕೆಗೇಡು. ವಾಸ್ತವ ಬಿಟ್ಟು ತಮ್ಮ ತೆವಲುಗಳು ತೀರಿಸಿಕೊಳ್ಳಲೋಸುಗ ವಿಶ್ಲೇಷಣೆ ಮಾಡಿದ್ದನ್ನು ಎಲ್ಲೆಡೆ ಕಂಡೆವು. ಆದರೆ ಕೊಪ್ಪಳದಲ್ಲಿ ಕೈ ಮತ್ತು ಜೆಡಿಎಸ್ ಒಂದಾಗಿದ್ದರೆ ಅಂತಾ ಎಳಿಯೋದನ್ನು ನೋಡಿದರೆ ಇವರಿಗೆ ಇನ್ನೊಂದು ಮುಗ್ಗುಲಿನಿಂದ ವಿಶ್ಲೇಷಣೆಯೇ ಗೊತ್ತಿಲ್ಲ ಅಂತನನ್ನಬೇಕು ಯಾಕೆ ಬಿಜೆಪಿ-ಜೆಡಿಎಸ್ ಮತಗಳು ಒಂದುಕಡೆಯಾದರೆ ಕಾಂಗ್ರೆಸ್ ಪರಿಸ್ಥಿತಿ ಏನು ಆಗಬಹುದು? ಅನ್ನೋದನ್ನ ಯಾರೂ ವಿಶ್ಲೇಷಣೆಗೆ ಹೋಗುತ್ತಿಲ್ಲವೇಕೆ? ಯಾಕೀ ಲಂಪಟತನ? ಿನ್ನೊಂದು ವಿಷಯ ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಮಾತ್ರ ಮಾಜಿ ಪ್ರಧಾನಿ/ಮಾಜಿ ಸಿ.ಎಂ.ಗಳು ಮಾತ್ರ ಹಾಲಿಯವರೊಂದಿಗೆ ನಾಯಕತ್ವ ವಹಿಸಬಹುದು ಆದರೆ ಯಡ್ಡಿ ನಾಯಕತ್ವ ಅಂತಂದ್ರೆ ಕೆಲವರಿಗೆಕೆ ಸ್ವಮೂತ್ರ ಪಾನದ ಮುಖಾರವಿಂದ ವದನವಾಗೋದು ಇಲ್ಲವೇ ಹಯವದನವಾಗೋದು? ಅದರಲ್ಲೂ ಬಿಜೆಪಿಯ ಻ಡ್ಡವಾಣಿ, ಅನಂತಿ, (ಬಸಂತಿ?) ಇತರೆಗಳೂ ಸಹಾ ಅವರು ಹಂಗೇಕೆ ಇವರು ಹಿಂಗೇಕೆ…?ಅನ್ನೊ ಪ್ರಶ್ನೆಗಳಿಗೆ ಉತ್ತರವೇ ಇಲ್ಲ ಅಲ್ಲವಾ ತಪ್ಪಾಯ್ತು ತಿದ್ಕೊತೀವಿ ಅಂತನ್ನೋದು ಯಾವಾಗ ಮಾರಾಯ್ರೆ ಮಂಡೆ ಬಿಸಿಯಾಯ್ತು ಊಟವಿಲ್ಲದೇ —-> 😉

    Reply

Leave a Reply

Your email address will not be published.