ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ತುಳುನಾಡಲ್ಲಿ ಯಾರೂ ಇಲ್ಲವೇ?

– ತೇಜ ಸಚಿನ್ ಪೂಜಾರಿ

ಬಾಲ್ಯದ ಒಂದು ನೆನಹು ಇತ್ತೀಚೆಗೆ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ನಮ್ಮ ಹಳ್ಳಿಗಳಲ್ಲಿ ವರ್ಷಂಪ್ರತಿ ಬಹು ಸಂಭ್ರಮದಿಂದ ನಡೆಯುತ್ತಿದ್ದ ದೇವಿ ಮಹಾತ್ಮೆ ಯಕ್ಷಗಾನವನ್ನು ವೀಕ್ಷಿಸಲು ನಾವು ಗೆಳೆಯೋರೋಪಾದಿಯಾಗಿ ತೆರಳುತ್ತಿದ್ದೆವು. ಇಡೀ ರಾತ್ರಿ ಜರುಗುತ್ತಿದ್ದ ಬಯಲಾಟದ ವೀಕ್ಷಣೆಯ ಸಲುವಾಗಿ ಊರಿನ ಅಷ್ಟೂ ಮಂದಿ ಅಲ್ಲಿ ಹಾಜರಿರುತ್ತಿದ್ದರು. ತುಳುವರಿಗೆ ದೇವಿ ಮಹಾತ್ಮೆ ಒಂದು ಮನೋರಂಜನೆಯಲ್ಲ. ಅದೊಂದು ಆರಾಧನೆ; ಒಂದು ಹರಕೆ. ಹೀಗಾಗಿ ತಮ್ಮೆಲ್ಲಾ ತುರ್ತುಗಳನ್ನು ಬದಿಗಿರಿಸಿ ನಮ್ಮವರು ಭಕ್ತಿಭಾವಗಳೊಂದಿಗೆ ಬಯಲಾಟಕ್ಕೆ ಹೋಗುತ್ತಿದ್ದರು. ನಮಗೂ ಸಂಭ್ರಮವೇ. ಹಾಗೆ, ಗೆಳೆಯರೆಲ್ಲಾ ಸೇರಿ ಪೋಕರಿತನಗಳನ್ನು ಮೆರೆದು, ಅಲ್ಲಿರುತ್ತಿದ್ದ ಪುಗ್ಗೆ ಚುರುಮುರಿ ಸಂತೆಗಳನ್ನು ಸುತ್ತಿ ಕೊನೆಗೆ ಅಮ್ಮನ ಮಡಿಲು ಸೇರುತಿದ್ದೆವು. ಅಷ್ಟೊತ್ತಿಗೆ ಆಟವೂ ಕೂಡಾ ರಂಗೇರಿ ಸಹೃದಯಿಗಳ ಮನದಲ್ಲಿ ರಸಭಾವಗಳು ಓಕುಳಿಯಾಡುತ್ತಿರುತ್ತಿದ್ದವು. ನಮಗೋ ನಿಧಾನವಾಗಿ ನಿದ್ದೆಯ ಸಪಳ. ಹಾಗೆಯೇ ತೂಕಡಿಸುತ್ತಿದ್ದ ನಮ್ಮನ್ನು ಮತ್ತೆ ಮತ್ತೆ ಎಬ್ಬಿಸಿ ಚಹಾ ಕುಡಿಸಿ ಎನೇನೋ ಸುಳ್ಳುಗಳನ್ನು ಹೇಳುತ್ತಾ ಅಮ್ಮಾ, “ನೋಡು ಈಗ ಸ್ವಲ್ಪ ಹೊತ್ತಲ್ಲೇ ಮಹಿಷಾಸುರ ಬರುತ್ತಾನೆ. ಅಲ್ಲಿವರೆಗೆ ನಿದ್ದೆ ಬೇಡ ಮಗೂ! ಮತ್ತೆ ಮನೆಗೆ ಹೋಗೋಣವಂತೆ,” ಅನ್ನುತ್ತಿದ್ದಳು. ಕೊನೆಗೂ ಮಹಿಷಾಸುರ ಬರುತಿದ್ದ. ಆಟದಲ್ಲಿ ಆತನೆ ಬರುವಿಕೆಯೇ ಒಂದು ವಿಶೇಷ. ಅದೆಲ್ಲೋ ದೂರದಿಂದ ವಿಕಾರವಾಗಿ ಬೊಬ್ಬಿರಿಯುತ್ತಾ, ಧೂಪದ ಪುಡಿಯನ್ನು ದೀವಿಟಿಗೆಯತ್ತ ಎಸೆದು ಬೆಂಕಿಯ ಉಂಡೆಗಳನ್ನು ಎಬ್ಬಿಸುತ್ತಾ ಬರುತಿದ್ದ ಆತ ಅಲ್ಲಿಯವರೆಗೆ ಶಾಂತವಾಗಿರುತಿದ್ದ ಸಭೆಯನ್ನು ಒಮ್ಮಗೆ ಅಲ್ಲೋಲ ಕಲ್ಲೋಲ ಮಾಡುತಿದ್ದ. ಆರ್ಭಟ, ರಣಕೇಕೆಗಳು, ವಾದ್ಯ ಹಿಮ್ಮೇಳಗಳ ವೇಗ, ಸಿಡಿಮದ್ದಗಳ ಸದ್ದು ನಮ್ಮನ್ನೆಲ್ಲಾ ಹೆದರಿಸುತಿದ್ದವು. ಅಂತೂ ಇಂತೂ ಹತ್ತಿಪ್ಪತ್ತು ನಿಮಿಷಗಳ ಕಾಲ ವಿಜೃಂಭಿಸಿ ನಿಧಾನವಾಗಿ ಮಹಿಷಾಸುರ ರಂಗಸ್ಥಳ ಪ್ರವೇಶಿಸುತಿದ್ದ. ಅದು ನಮ್ಮ ಪಾಲಿಗೆ ಯಕ್ಷಗಾನದ ಅಂತ್ಯ. ತರುವಾಯ ನಾವು ಅಪ್ಪ ಅಮ್ಮನ ಜೊತೆಗೆ ಮನೆಗೆ ಹಿಂತಿರುಗುತಿದ್ದೆವು. ನಮ್ಮ ಹಾಗೆಯೇ ಬಹುತೇಕ ಸಭಿಕರು “ಮಹಿಷಾಸುರ ರಂಗಸ್ಥಳ ಪ್ರವೇಶ”ದ ನಂತರ ಮನೆ ನಿದ್ದೆಯ ಮೊರೆ ಹೋಗುತಿದ್ದರು. ಇಂತಹ ಪ್ರವೃತ್ತಿಗಳು ಮತ್ತೆ ಮತ್ತೆ ಪುನಾರಾವರ್ತನೆಯಾಗುತ್ತಿದ್ದವು. ಶ್ರೀದೇವಿಯು ಮಹಿಷಾಸುರನನ್ನು ಎದುರಿಸುವ, ವಧಿಸುವ ಕಾರ್ಯದಲ್ಲಿ ಆಕೆಗೆ ಉಪಸ್ಥಿತಿಯ ಬೆಂಬಲ ನೀಡಲು ಅಲ್ಲಿರುತ್ತಿದ್ದುದು ಕೆಲವೇ ಕೆಲವು ಮಂದಿ. ನಮಗೋ ಮಹಿಷಾಸುರನ್ನು ಸ್ವಾಗತಿಸುವುದೊಂದೇ ಸಂಭ್ರಮ. ಮತ್ತೆ ಭರ್ಜರಿ ನಿದ್ದೆ.

ಮಂಗಳೂರಿನಲ್ಲಿ ಸದ್ಯ ನಡೆಯುತ್ತಿರುವುದು ಇದೇ. ನಮ್ಮವರು ತಮ್ಮ ಮನ ಮನೆಗಳಿಗೆ ಮಹಿಷಾಸುರನನ್ನು ಒಳಬಿಟ್ಟಿದ್ದಾರೆ. ಬಿಟ್ಟು ಮಲಗಿದ್ದಾರೆ. ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ಯಾರೂ ಇಲ್ಲ. ಧರ್ಮಸಂಘರ್ಷಗಳು, ಕೋಮು ಜ್ವಾಲೆಗಳು, ಮೌಡ್ಯ ಆಚರಣೆಗಳು, ಜಾತಿ ದ್ವೇಷ-ದೌರ್ಜನ್ಯಗಳು, ಅಸಹಿಷ್ಣುತೆ-ಅಹಂಕಾರಗಳು ಹೀಗೆ ಒಂದೋ ಎರಡೋ! ನಾನಾ ನಮೂನೆಯ ರಕ್ಕಸ ಪ್ರವೃತ್ತಿಗಳು ತುಳುನಾಡನ್ನು ಪೂರ್ತಿಯಾಗಿ ಆವರಿಸಿವೆ. ನಮ್ಮದೋ ಗಾಡ ನಿದ್ದೆ. ಮಹಿಷಾಸುರನ ಅಟ್ಟಹಾಸ ನಡೆಯುತ್ತಲೇ ಇದೆ. ಆತನನ್ನು ಧಿಕ್ಕರಿಸ ಹೊರಟವರೇ ಬಂಧನಕ್ಕೊಳಗಾಗುತಿದ್ದಾರೆ. ಸಾಕ್ಷಾತ್ ದೈವವೇ ಆಘಾತಗೊಂಡಿದೆ!

ಘಟನೆ ಯಾ ಪ್ರವೃತ್ತಿಗಳಿಗೆ ವಿಮರ್ಷೆಯ ನೆಪದಲ್ಲಿ ಯಾವುದೋ ವ್ಯಕ್ತಿ ಅಥವಾ ಸಂಘಟನೆಯನ್ನು ದೂಷಿಸುವುದು ಸಾಮಾನ್ಯ. ಆ ಧರ್ಮದ ಈ ಧರ್ಮದ ಕೋಮುವಾದಿಗಳನ್ನೋ, ಸಂಸ್ಥೆ-ಫ್ರಂಟ್ಗಳನ್ನೋ ನಾವೂ ಟೀಕಿಸಿಯಾಗಿದೆ. ಆದಾಗ್ಯೂ ಅಸಹನೆ ನಿಂತಿಲ್ಲ, ಹಿಂಸೆಯೂ ನಿಂತಿಲ್ಲ. ನಿಲ್ಲುವುದೂ ಇಲ್ಲಾ. ಏಕೆಂದರೆ ರಾಕ್ಷಸನ ಪ್ರವೇಶವನ್ನು ಬೆರಗಿನಿಂದ ನೋಡಿದ ನಾವು ನಂತರದಲ್ಲಿ ಪೂರ್ತಿಯಾಗಿ ನಿಷ್ಕ್ರಿಯಯರಾಗಿದ್ದೆವೆ. ನಮ್ಮೂರಲ್ಲಿ ನಡೆಯುತ್ತಿರುವ ಅಷ್ಟೂ ಅಸಹ್ಯಗಳ ಹೊಣೆಯನ್ನು ನಾವೇ ಹೊರಬೇಕಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಹಿಂಸೆಯನ್ನು ವಿಶ್ಲೇಷಿಸುತ್ತಾ ನೋಮ್ ಚಾಮ್ಸ್ಕಿಯವರು ಒಂದೆಡೆ, “ಆತ್ಮಹತ್ಯಾ ಬಾಂಬರುಗಳು ಅಥವಾ ತುಪಾಕಿಗಳ ಸದ್ದುಗಳು ನನ್ನಲ್ಲಿ ಆತಂಕವನ್ನು ಉಂಟುಮಾಡುತಿಲ್ಲ. ಆದರೆ, ತನ್ನ ಮಗುವಿನ ಸೌಖ್ಯವನ್ನು ಬಯಸುವ ಸಹಜ ಪ್ರಾಮಾಣಿಕ ಹಾಗೂ ಹಿಂಸಾವಾದಿಯಲ್ಲದ ತಾಯೊಬ್ಬಳು, ತನ್ನ ಇದಿರ ಗುಂಪಿನ ಮಗುವಿನ ಹತ್ಯೆಗೆ ಒಳಗೊಳಗೆ ಸಮ್ಮತಿಸುತ್ತಾಳಲ್ಲ ಅದು ಆತಂಕವನ್ನುಂಟುಮಾಡುತ್ತದೆ” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಇದು ಪ್ಯಾಲೆಸ್ತೇನಿ ಮಗುವಿನ ಸಾವನ್ನು ಸ್ವೀಕರಿಸುವ ಇಸ್ರೇಲಿ ತಾಯಿಗೂ, ಹಿಂದೂ ಯಾ ಮುಸಲ್ಮಾನ ಮಗುವಿನ ಹತ್ಯೆಗೆ ಸಮ್ಮತಿಸುವ ಹಿಂದೂ ಯಾ ಮುಸಲ್ಮಾನ ತಾಯಿಗೂ, ಸಮಾನವಾಗಿ ಒಪ್ಪುತ್ತದೆ. ಇದು ಅಸಹಿಷ್ಣು ವ್ಯವಸ್ಥೆಯನ್ನು ಕುರಿತಂತೆ ಸಾಮಾನ್ಯ ಪ್ರಜಾಸಮೂಹದಲ್ಲಿ ನೆಲೆಸಿರುವ ಒಂದು ಬಗೆಯ ಸ್ವೀಕರಣೆಯ ಭಾವವನ್ನು ಪ್ರತಿನಿಧಿಸುತ್ತದೆ. ಅಂತಹ ಒಂದು ಮೌನಸಮ್ಮತಿ ಅಥವಾ ನಿರ್ಲಿಪ್ತತೆಯ ನಿಲುವು ನಮ್ಮಲ್ಲೂ ಇದೆ. ಅದುವೇ ಮಹಿಷಾಸುರ ಸೃಷ್ಟಿಸೋ ಬೆಂಕಿಯುಂಡೆಗಳ ಮೂಲದ್ರವ್ಯವಾದ ಧೂಪದ ಪುಡಿ.

ಮಂಗಳೂರಿನ ಸದ್ಯದ ಸಂಕಟಗಳಿಗೆ ಒಂದು ನಿರ್ದಿಷ್ಟ ಗುಂಪು ಅಥವಾ ಓರ್ವ ವ್ಯಕ್ತಿ ಕಾರಣವೇ? ಅಷ್ಟಕ್ಕೂ ಅಸಹಿಷ್ಣು ಪ್ರವಚನಗಳಿಗೆ ಬಲಿ ಬೀಳಲು ಮಂಗಳೂರಿಗರು ಅಪ್ರಾಜ್ಞರೇ? ಹಿಂಸಾರತಿಯ ಬಾಹ್ಯ ಸಂಸ್ಕ್ರತಿಯೊಂದರ ಹೊಡೆತಕ್ಕೆ ಸಿಲುಕಲು ತುಳುವರಲ್ಲಿ ಸಹಿಷ್ಣು ಸಾಂಸ್ಕೃತಿಕ ಪರಂಪರೆಯೇ ಇಲ್ಲವೇ? ಇವೆಲ್ಲಾ ಪ್ರಶ್ನೆಗಳಿಗೂ ಸಿಗುವುದು ಕೇವಲ ನೇತ್ಯಾತ್ಮಕ ಉತ್ತರಗಳು. ನಮ್ಮಲ್ಲಿ ಒಳ್ಳೆಯ ಶಿಕ್ಷಣ ಇದೆ. ಜನರು ಪ್ರಾಜ್ಞರು. ನೆಲೆಸಿರುವ ಅಷ್ಟೂ ಸಮುದಾಯಗಳನ್ನು ಗೌರವಿಸುವ ಉಪಚರಿಸುವ ಸಹಿಷ್ಣು ಸಾಂಸ್ಕೃತಿಕ ಪರಂಪರೆಯೂ ಇದೆ. ಕ್ರಿಶ್ಚಿಯನ್ನರು ಬೆಳೆದು ಬ್ಯಾರಿಗಳಿಂದ ಮಾರಲ್ಪಟ್ಟು ಹಿಂದೂ ಮುಡಿಯಲ್ಲಿ ಘಮಿಸುವ ಮಲ್ಲಿಗೆಯ ಪರಿಮಳವಿದೆ. ಸಾಮರಸ್ಯದ ಬಲಿಷ್ಟ ನೆಲೆಗಟ್ಟಿದೆ. ತುಳು ಭಾಷೆಯ ಬಲೀಂದ್ರ ಪಾಡ್ದನದಲ್ಲಿ ಬರುವ ಕಥೆಯಲ್ಲಿ, ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ ಎಂದು ಬಲಿ ಚಕ್ರವರ್ತಿಯು ವಾಮನನ್ನು ಕೇಳಿದನಂತೆ. ಆಗ ವಾಮನನು,
“ದೇವೆರೆಗು ದೇವಾಲ್ಯೊ,
ದೈವೋಳೆಗು ಬದಿಮಾಡ,
ಬೆರ್ಮೆರೆಗು ಸಾನ,
ನಾಗೆರೆಗ್ ಬನ,
ಜೈನೆರೆ ಬಸ್ತಿ,
ಬ್ಯಾರಿಳೆ ಪಲ್ಲಿ,
ಕುಡುಂಬೆರೆ ಇಂಗ್ರೇಜಿ ಕಟ್ಟಾವ”
ಅನ್ನುತ್ತಾನೆ. (ದೇವರಿಗೆ ದೇವಾಲಯ, ನಾಗದೇವರಿಗೆ ಬನ, ಜೈನರಿಗೆ ಬಸದಿ, ಬ್ಯಾರಿಗಳಿಗೆ ಮಸೀದಿ ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ಕಟ್ಟಿಸುತ್ತೇನೆ) ಇದು ತುಳುವರ ಸಾಂಸ್ಕೃತಿಕ ಶ್ರೀಮಂತಿಕೆಯ, ಸಾಮರಸ್ಯದ ಆಳವನ್ನು ಸಂಕೇತಿಸುತ್ತದೆ. ಹೀಗೆ ಶಿಕ್ಷಣ, ಪ್ರಜ್ಞೆ ಹಾಗೂ ಸಹಿಷ್ಣು-ಪರಂಪರೆಯ ಇಂತಹ ಬಲಿಷ್ಟ ಹಿನ್ನೆಲೆ ಇದ್ದರೂ ಮಂಗಳೂರಿನಲ್ಲಿ ಹಲವು ಅಸಹಜತೆಗಳು ಯಾಕೆ ನೆಲೆಸಿವೆ? ಇದಕ್ಕೆ ಉತ್ತರ ತುಳುವರ ನಿರ್ಲಿಪ್ತತೆ ಅಥವಾ ನಿಷ್ಕ್ರಿಯತೆ ಹಾಗೂ ಮಂಗಳೂರು ಪ್ರಾಂತ್ಯದಲ್ಲಿ ಸದ್ಯ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯ ಪ್ರವೃತ್ತಿಗಳಲ್ಲಿ ಇದೆ.

ಅನಾಹುತಗಳನ್ನು ಸೃಷ್ಟಿಸುವ ಎಷ್ಟೇ ಬಲಶಾಲಿ ಶಕ್ತಿಗಳಿರಲಿ, ಜಾಗರೂಕ ಜನರಿದ್ದಲ್ಲಿ ಅವುಗಳಿಗೆ ವೈಫಲ್ಯವೇ ಖಚಿತ ಸಂಗಾತಿ. ತುಳುವರ ಸದ್ಯದ ಅನಿವಾರ್ಯತೆ ಇದೇ ಆಗಿದೆ. ಅದು ಮಹಿಷಾಸುರನ ಪ್ರವೇಶದ ನಂತರವೂ ಇರುವ, ಉಳಿಯುವ “ಜಾಗರಣೆ”. ದುಷ್ಟತೆಯ ವಿರುದ್ಧ ಧಿಕ್ಕಾರದ ಕೂಗಿಗೆ ಮೂಡುವ ಜೈಕಾರ. ದೈವಕ್ಕೆ ಉಪಸ್ಥಿತಿಯ ಸಹಯೋಗ. ರಾಕ್ಷಸಿ ಪ್ರಜ್ಞೆಯೊಂದರ ವಿರುಧ್ಧ ನಡೆಯ ಹೊರಟ ಪತ್ರಕರ್ತ ನವೀನ್ ಸೂರಿಂಜೆ ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಅನಾಚಾರಗಳನ್ನು ಎಸಗುತ್ತಿರುವ ಮಹಿಷಾಸುರನ ಅಟ್ಟಹಾಸವನ್ನು ನಾವಿಂದು ಕೊನೆಗೊಳಿಸುವ ಅವಶ್ಯಕತೆಯಿದೆ. ನಾವೇ ಮುಂದಡಿಯಿಟ್ಟು ಹೊರಟಲ್ಲಿ ದೈವವೂ ನಮಗೆ ಸಹಯೋಗ ನೀಡುತ್ತದೆ. ದೇವಿ ಮಹಾತ್ಮೆಗೆ ನಾವೇ ಶುಭ ಅಂತ್ಯವನ್ನು ಬರೆಯಬೇಕಿದೆ.

3 thoughts on “ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ತುಳುನಾಡಲ್ಲಿ ಯಾರೂ ಇಲ್ಲವೇ?

  1. anand prasad

    ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಿದ್ದರೂ ಇಲ್ಲಿನ ಜನರಲ್ಲಿ ಮೂಢ ನಂಬಿಕೆಗಳು ಮಿತಿಮೀರಿವೆ. ವೈಚಾರಿಕವಾಗಿ ಇಲ್ಲಿನ ಜನ ಮುಂದುವರಿದಿಲ್ಲ. ಇದುವೇ ಸಮಸ್ಯೆಯ ಮೂಲ. ಇಲ್ಲಿನ ಶಾಲಾ ಕಾಲೇಜುಗಳಲ್ಲಿ ವೈಚಾರಿಕತೆಯನ್ನು ಬೆಳೆಸುವ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ಬೆಳೆಸಬೇಕಾದರೆ ಶಾಲೆ ಕಾಲೇಜುಗಳಲ್ಲಿ ವೈಚಾರಿಕತೆಯ ಬಗ್ಗೆ ಒಲವುಳ್ಳ, ವೈಜ್ಞಾನಿಕ ಮನೋಭಾವ ಉಳ್ಳ ಶಿಕ್ಷಕರು, ಪ್ರಾಧ್ಯಾಪಕರು ಇರಬೇಕು. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಲೇಜುಗಳಿದ್ದರೂ ವೈಚಾರಿಕವಾಗಿ ಬೆಳೆದ ಪ್ರಾಧ್ಯಾಪಕರ ಸಂಖ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆರೆಳೆಣಿಕೆಯಲ್ಲೂ ಸಿಗಲಿಕ್ಕಿಲ್ಲ. ಹೀಗಾಗಿ ಇಲ್ಲಿ ವಿಧ್ಯಾರ್ಥಿಗಳು ವೈಚಾರಿಕವಾಗಿ ಬೆಳೆಯುವ ವಾತಾವರಣ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಸತತವಾಗಿ ನಡೆಯುತ್ತಿದೆ. ಜಿಲ್ಲೆಯ ಜನ ಈ ಚಟುವಟಿಕೆಯಲ್ಲಿ ಮಾತ್ರ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ನಾನಾ ಸಂಘಟನೆಗಳು, ಬ್ಯಾಂಕುಗಳು, ಸಂಸ್ಥೆಗಳು, ಖಾಸಗಿ ಉದ್ಯಮಗಳು ಮೊದಲಾದವುಗಳ ಸಿಬ್ಬಂದಿ ದೇವಾಲಯದ ಜೀರ್ಣೋದ್ಧಾರದ ಕೆಲಸಕ್ಕೆ ಕರಸೇವಕರಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವುದು ಕಂಡುಬರುತ್ತದೆ. ಈ ಕೆಲಸದಲ್ಲಿ ಭಾಗವಹಿಸಿದರೆ ದೇವರ ಕೃಪೆ ತಮ್ಮ ಮೇಲೆ ಇರುತ್ತದೆ ಎಂಬ ಸ್ವಾರ್ಥಭರಿತ ನಂಬಿಕೆಯೇ ಇದಕ್ಕೆ ಕಾರಣ. ಆದರೆ ದೇಶ ಕಟ್ಟುವ ಯಾವುದೇ ಚಟುವಟಿಕೆಯಲ್ಲಿ ಇದೇ ಶ್ರದ್ಧೆಯಿಂದ ಜನ ಭಾಗವಹಿಸುವುದಿಲ್ಲ.

    ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪತ್ರಕರ್ತರು ಕೇಸರೀಕರಣಗೊಂಡವರೇ ಆಗಿದ್ದಾರೆ. ಹೀಗಾಗಿ ಪ್ರತಿಗಾಮಿತನ ಇಡೀ ಮಾಧ್ಯಮ ಕ್ಷೇತ್ರವನ್ನು ಆವರಿಸಿದೆ. ಹೀಗಾಗಿ ಕೇಸರಿ ಶಕ್ತಿಗಳ ದೌರ್ಜನ್ಯಗಳನ್ನು ವಿರೋಧಿಸುವ ಮನಸ್ಸು ಕೂಡ ಮಾಧ್ಯಮ ಮಂದಿಗೆ ಇಲ್ಲ. ಒಳಗಿಂದೊಳಗೆ ನವೀನರ ಬಂಧವನ್ನು ಸಮರ್ಥಿಸುವ, ಅದಕ್ಕಾಗಿ ಖುಷಿಪಡುವ ಕೇಸರಿ ಪತ್ರಕರ್ತರಿಗೂ ಕೊರತೆ ಇಲ್ಲ. ಅಲ್ಲದೆ ಮಂಗಳೂರು ಹೋಂ ಸ್ಟೇ ದಾಳಿಯನ್ನು ಸಮರ್ಥಿಸಿ ಮಾತನಾಡುವ ಜನಸಾಮಾನ್ಯರಿಗೂ ಇಲ್ಲಿ ಕೊರತೆ ಇಲ್ಲ. ನವೀನರ ಮೇಲೆ ಇನ್ನೂ ಯಾವ ಯಾವ ರೀತಿಯ ಕೇಸುಗಳನ್ನು ಹಾಕಬಹುದು ಎಂದು ಸಂಶೋಧನೆಯೂ ಈಗ ನಡೆಯುತ್ತಿದೆ ಎಂದು ಕರಾವಳಿ ಅಲೆ ಪತ್ರಿಕೆ ವರದಿ ಮಾಡಿದೆ. ಇದಕ್ಕಾಗಿ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ನವೀನರ ಮೇಲೆ ಯಾವುದಾದರೂ ದೂರು ಇದೆಯೋ ಎಂದು ಹುಡುಕುವ ಕೆಲಸ ಭರದಿಂದ ಕೇಸರಿ ದಂಡನಾಯಕರ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಪತ್ರಿಕೆ ತಿಳಿಸಿದೆ. ಮಹಿಷಾಸುರರನ್ನು ಜಿಲ್ಲೆಯ ಜನ ಬೆಂಬಲಿಸುತ್ತಿರುವ ಕಾರಣವೇ ಅವರು ಅಟ್ಟಹಾಸ ಮೆರೆಯಲು ಕಾರಣವಾಗಿದೆ. ಹೀಗಾಗಿ ಜಿಲ್ಲೆಯಿಂದ ಹೊರಗೆ ರಾಜ್ಯದಲ್ಲಿ ಬಂಧನ ವಿರೋಧಿಸಿ ಹೆಚ್ಚಿನ ಪ್ರತಿಭಟನೆ ನಡೆಯಬಹುದೇ ಹೊರತು ಜಿಲ್ಲೆಯಲ್ಲಿ ನಡೆಯುವ ಸಂಭವ ಇಲ್ಲ. ಫ್ಯಾಸಿಸ್ಟ್ ಸರ್ಕಾರಗಳು ಎಷ್ಟೇ ಪ್ರತಿಭಟನೆ ಮಾಡಿದರೂ ಅದನ್ನು ಲೆಕ್ಕಿಸುವುದಿಲ್ಲ. ಮಾಧ್ಯಮಗಳ ಹಾಗೂ ಜನತೆಯ ಸಂವಿಧಾನಿಕ ಹಕ್ಕನ್ನು ರಕ್ಷಿಸುವ ಏಕೈಕ ಆಶಾಕಿರಣ ಇಂಥ ಸಂದರ್ಭದಲ್ಲಿ ನ್ಯಾಯಾಂಗ ಮಾತ್ರ. ಸ್ಥಳೀಯ ಜಿಲ್ಲಾ ನ್ಯಾಯಾಂಗ ಕೇಸರೀಕರಣಗೊಂಡಿದೆ ಎಂಬ ಸಂಶಯ ಅದರ ನಡವಳಿಕೆಯನ್ನು ನೋಡುವಾಗ ಯಾರಾದರೂ ಊಹಿಸಬಹುದು. ಏಕೆಂದರೆ ಸ್ಥಳೀಯ ನ್ಯಾಯಾಲಯ ಈ ಹಿಂದೆ ಕರಾವಳಿ ಅಲೆ ಸಂಪಾದಕರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು, ಆದರೆ ಬಂಧನವನ್ನು ರಾಜ್ಯ ಹೈಕೋರ್ಟ್ ಕಾನೂನುಬಾಹಿರ ಎಂದು ಛೀಮಾರಿ ಹಾಕಿ ಸರ್ಕಾರಕ್ಕೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಇದೇ ರೀತಿಯ ಪರಿಸ್ಥಿತಿ ಈಗಲೂ ಇರುವುದನ್ನು ಕಾಣಬಹುದು. ನವೀನರು ಸೆಪ್ಟೆಂಬರ್ 26ರಂದೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯ ಅದನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸ್ಥಳೀಯ ನ್ಯಾಯಾಂಗವೂ ಕೇಸರೀಕರಣಗೊಂಡಿದೆ ಎಂಬ ಸಂಶಯವನ್ನು ಮೂಡಿಸಿದರೆ ಅಚ್ಚರಿ ಇಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಗೃಹ ಇಲಾಖೆ ಮಧ್ಯ ಪ್ರವೇಶ ಮಾಡಿ ಮಾಧ್ಯಮದ ಮೂಲಭೂತ ಸಂವಿಧಾನಿಕ ಹಕ್ಕನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕಾದ ಅಗತ್ಯ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಗಮನ ಸೆಳೆಯುವ ಕೆಲಸ ರಾಜ್ಯ ಕಾಂಗ್ರೆಸ್ ನಾಯಕರು ಮಾಡಬೇಕಾಗಿದೆ. ಇದು ವಿರೋಧ ಪಕ್ಷವಾಗಿ ಮಾಧ್ಯಮದ ಮೂಲಭೂತ ಹಕ್ಕನ್ನು ರಕ್ಷಿಸುವ ಅವರ ಕರ್ತವ್ಯವೂ ಆಗಿದೆ.

    Reply
  2. ashok kumar Valadur

    ತುಂಬಾ ಒಳ್ಳೆಯ ಬರಹ. ಮಹಿಸಾಸುರ ಧಮನ ನಮ್ಮಿಂದಲೇ ಆಗಬೇಕೆಂಬುದನ್ನು ನಾವು ಸಂಪೂರ್ಣ ಮರೆತ ಸ್ಥಿತಿಯಲ್ಲಿದ್ದೇವೆ. ಇನ್ನೂ ಕೂಡ ಯಾವುದೋ ದೇವಿ ಉದ್ಭವಕ್ಕೆ ಕಾದು ಕೂತಂತಿದೆ ಇಂದಿನ ನಮ್ಮ ಸ್ಥಿತಿ. ಸಚಿನ್ ಪೂಜಾರಿ ಯವರೇ ಸಕಾಲಿಕ ಲೇಖನ.

    Reply

Leave a Reply

Your email address will not be published. Required fields are marked *