ನ್ಯಾಯ ಸಿಗುವವರೆಗೆ, ಸ್ಥೈರ್ಯ ಕುಗ್ಗದ ಹಾಗೆ…

ಸ್ನೇಹಿತರೆ,

ಸಾಕ್ಷಿಯಾಗಬೇಕಿದ್ದ ನವೀನ್ ಸೂರಿಂಜೆಯವರನ್ನು ದಕ್ಷಿಣ ಕನ್ನಡದ ಪೋಲಿಸರು ಮತ್ತು ಅಲ್ಲಿಯ ರಾಜಕೀಯ ಪಟ್ಟಭದ್ರರು ಬೇಕಂತಲೇ ಆರೋಪಿಪಟ್ಟಿಯಲ್ಲಿ ಸೇರಿಸಿ ಈಗ ಬಂಧನಕ್ಕೂ ಕಾರಣರಾಗಿದ್ದಾರೆ. ಇವರು ನ್ಯಾಯಾಲಯದ ದಿಕ್ಕು ತಪ್ಪಿಸಿರುವುದು ಬಹುಶಃ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಸಾಬೀತಾಗಬಹುದು. ಆದರೆ, ಇಷ್ಟಕ್ಕೂ ಒಬ್ಬ ನಿರಪರಾಧಿಯ ಬಂಧನವಾದರೂ ಏಕಾಗಬೇಕು?

ನೆನ್ನೆ ರಾಜ್ಯದ ಅನೇಕ ಕಡೆ ನವೀನ್ ಸೂರಿಂಜೆಯ ಬಂಧನವನ್ನು ವಿರೋಧಿಸಿ ಪ್ರತಿಭಟನೆಗಳು ಜರುಗಿವೆ. ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರರು ಇಂದೂ ಸಹ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳಾಗಲಿವೆ ಎಂದಿದ್ದಾರೆ. ನೆನ್ನೆ ಜನಶ್ರೀ ಚಾನಲ್‌ನಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು ಈ ಪ್ರತಿಭಟನೆ ಮುಂದುವರೆಯುತ್ತದೆ ಮತ್ತು ನವೀನರ ಹೆಸರನ್ನು ಚಾರ್ಜ್‍ಷೀಟ್‌ನಿಂದ ಕೈಬಿಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ. ಅದೊಂದು ಉತ್ತಮ ನಿರ್ಧಾರ. ಇದು ಕೇವಲ ಒಂದು ದಿನದ ಪ್ರತಿಭಟನೆಗೆ ಮುಗಿಯಬಾರದು. ಇದರ ತಾರ್ಕಿಕ ಅಂತ್ಯ ಇರುವುದು ನಿರಪರಾಧಿಯ ಹೆಸರು ಆರೋಪ ಪಟ್ಟಿಯಿಂದ ಕೈಬಿಡುವುದರಲ್ಲಿ, ಮತ್ತು ಇಂತಹ ಅವಘಡಕ್ಕೆ ಮತ್ತು ಕುತಂತ್ರಕ್ಕೆ ಕಾರಣರಾದವರಿಗೆ ಶಿಕ್ಷೆ ಆಗುವುದರಲ್ಲಿ.

ಇಂದಿನ ಪತ್ರಿಕೆಗಳ ವಾಚಕರವಾಣಿಯಲ್ಲಿ ರಾಜ್ಯದ ಅನೇಕ ಪ್ರಮುಖ ಪ್ರಗತಿಪರ ಲೇಖಕಿಯರು ನವೀನರ ಬಂಧನಕ್ಕೆ ಆಘಾತ ವ್ಯಕ್ತಪಡಿಸಿ ಕಟುಮಾತುಗಳಲ್ಲಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲಾ ಪ್ರಗತಿಪರರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಅದು ಕೊಡಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವವರು, ನ್ಯಾಯದ ಪರ ನಿಲ್ಲುವವರು, ಎಲ್ಲರೂ ನವೀನರ ಪರ ನಿಲ್ಲಬೇಕಿದೆ. ಈಗ ನಮ್ಮನ್ನು ಆಳುತ್ತಿರುವುದು ಅತಿ ಭ್ರಷ್ಟ, ಸಂವೇದನೆಯನ್ನೇ ಕಳೆದುಕೊಂಡ ಸರ್ಕಾರವೇ ಆಗಿದ್ದರೂ, ಅದರ ಮೇಲೆ ಒತ್ತಡ ತರಲೇಬೇಕಿದೆ. ಅದು ಪತ್ರರೂಪದಲ್ಲಾಗಿರಬಹುದು, ಪ್ರತಿಭಟನೆಯಾಗಿರಬಹುದು, ಗಣ್ಯರು ನೇರವಾಗಿ ಗೃಹಮಂತ್ರಿ ಮತ್ತು ಮುಖ್ಯಮಂತ್ರಿಗೆ ದೂರವಾಣಿ ಮೂಲಕ ಮಾತನಾಡುವುದಾಗಿರಬಹುದು; ಎಲ್ಲರೂ ಅವರವರ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.

ಮತ್ತು, ಇಲ್ಲ್ಲಿ ನವೀನ್ ಸೂರಿಂಜೆ ಕೇವಲ ನಿಮಿತ್ತ ಮಾತ್ರ. ಮುಂದೆ ಹೀಗಾಗದಂತೆ, ನಿರಪರಾಧಿಗಳನ್ನು ಪೋಲಿಸರು ಮತ್ತು ಪಟ್ಟಭದ್ರರು “ಫಿಕ್ಸ್” ಮಾಡುವುದಕ್ಕೆ ಭಯ ಪಡುವಂತಹ ವಾತಾವರಣ ನಾವು ನಿರ್ಮಿಸಿಕೊಳ್ಳುವುದಕ್ಕೆ ಈ ಪ್ರಯತ್ನ ಬಹಳ ಮುಖ್ಯವಾಗಿದೆ. ಹಾಗಾಗಿ ಸದರಿ ಪ್ರಕರಣದಲ್ಲಿ  ಕೋರ್ಟ್‌ನಿಂದ ಛೀಮಾರಿ ಆದರೆ ಮಾತ್ರ ಸಾಲದು.  ತಪ್ಪು ಎಸಗಿರುವ ಅಧಿಕಾರಿಗಳಿಗೆ, ಮಾನವ ಹಕ್ಕುಗಳನ್ನು ದಮನ ಮಾಡಿದವರಿಗೆ ಶಿಕ್ಷೆ ಮತ್ತು ಸೇವೆಯಿಂದ ವಜಾ ಮಾಡಿಸುವವರೆಗೆ ಈ ಹೋರಾಟ ಮುಂದುವರೆಯಬೇಕಿದೆ.

ನವೀನ್ ಕೇವಲ ಜೀವನೋಪಾಯಕ್ಕೆ ದುಡಿಯುವ  ಪತ್ರಕರ್ತನಲ್ಲ, ಜೊತೆಜೊತೆಗೆ ಸಮಾಜಮುಖಿಯಾಗಿ ಚಿಂತಿಸುವ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಸಹ ಎನ್ನುವುದು ನಮ್ಮ ವರ್ತಮಾನ.ಕಾಮ್‌ನ ಓದುಗ ಬಳಗಕ್ಕೆ ಗೊತ್ತಿರುವ ಸಂಗತಿಯೇ. ಹಾಗಾಗಿ, ನವೀನ್ ಸೂರಿಂಜೆಯ ನೈತಿಕ ಸ್ಥೈರ್ಯ ಕುಗ್ಗದ ಹಾಗೆ ನೋಡಿಕೊಳ್ಳುವುದು ಈ ಸಮಾಜದ ಕರ್ತವ್ಯವಾಗಿದೆ. ನಾವೆಲ್ಲರೂ ನಮ್ಮನಮ್ಮ ನೆಲೆಯಲ್ಲಿ ಇದನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ವರ್ತಮಾನದ ಓದುಗ ಬಳಗವೂ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ ಎನ್ನುವ ನಂಬಿಕೆ ನನ್ನದು. ನಿಮ್ಮೆಲ್ಲರ ಬೆಂಬಲ ಮತ್ತು ಪಾಲ್ಗೊಳ್ಳುವಿಕೆ ಅತ್ಯವಶ್ಯ. ದಯವಿಟ್ಟು ಇಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಸಿಕ್ಕ ವೇದಿಕೆಗಳಲ್ಲಿ ಧ್ವನಿಯೆತ್ತಿ ಜನಾಭಿಪ್ರಾಯ ರೂಪಿಸಬೇಕೆಂದೂ, ಆ ಮೂಲಕ ನಮ್ಮೆಲ್ಲರ ಒಡನಾಡಿ ನವೀನರ ಪರ ನಿಲ್ಲಬೇಕೆಂದು ಈ ಮೂಲಕ ನಿಮ್ಮೆಲ್ಲರನ್ನು ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ದಿ

8 thoughts on “ನ್ಯಾಯ ಸಿಗುವವರೆಗೆ, ಸ್ಥೈರ್ಯ ಕುಗ್ಗದ ಹಾಗೆ…

  1. prasad raxidi

    ಈ ಬಗ್ಗೆ ಮೀಡಿಯಾದಲ್ಲಿ ಹೋರಾಟ ಸಾಲದು ಬೀದಿಗಿಳಿಯಬೇಕು, ಇದು ಈಗಿರುವ ಮತ್ತು ಮುಂದೆ ಬರಲಿರುವ ಸರ್ಕಾರಕ್ಕೂ ಪಾಠವಾಗಬೇಕು..( ಉತ್ತಮ ಸರ್ಕಾರ…ಲೊಳಲೊಟ್ಟೆ)..

    Reply
  2. anand prasad

    ಸಂವಿಧಾನಬಾಹಿರ ಶಕ್ತಿಗಳು ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣ ಹೊಂದಿರುವುದೇ ಪತ್ರಕರ್ತ ನವೀನರ ಬಂಧನಕ್ಕೆ ಮೂಲ ಕಾರಣ. ಕೇಸರಿ ಶಕ್ತಿಗಳ ವಿರುದ್ಧ ನವೀನರು ವರದಿಮಾಡುವ ಧೈರ್ಯ ತೋರಿಸಿರುವುದೇ ಅವರು ಮಾಡಿರುವ ಘನ ಅಪರಾಧ. ಈ ರಾಜ್ಯದ ಪೊಲೀಸ್ ಇಲಾಖೆಯ ಮೇಲೆ ಗೃಹ ಇಲಾಖೆಯ ಹಿಡಿತಕ್ಕಿಂತ ಹೆಚ್ಚಾಗಿ ಕೇಸರಿ ಶಕ್ತಿಗಳ ಹಿಡಿತ ಮೇಲುಗೈ ಸಾಧಿಸಿದೆ ಎಂಬುದನ್ನು ನವೀನರ ಬಂಧನ ಮೇಲ್ನೋಟಕ್ಕೆ ತೋರಿಸುತ್ತಿದೆ. ಹಿಂದೆ ಕರಾವಳಿ ಅಲೆ ಪತ್ರಿಕೆಯ ಸಂಪಾದಕರ ಬಂಧನವಾದಾಗಲೂ ಇದು ಸಾಬೀತಾಗಿದೆ. ರಾಜ್ಯದ ಗೃಹ ಇಲಾಖೆಯನ್ನು ವಿಸರ್ಜಿಸಿ ಅದರ ಉಸ್ತುವಾರಿಯನ್ನು ಅಧಿಕೃತವಾಗಿ ಕೇಸರಿ ಶಕ್ತಿಗಳಿಗೆ ಕೊಡುವುದು ಒಳ್ಳೆಯದು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾರದ ಗೃಹ ಇಲಾಖೆ ಇದ್ದರೇನು, ಬಿಟ್ಟರೇನು? ಕೇಸರಿ ಶಕ್ತಿಗಳ ಕಾಲಬುಡದಲ್ಲಿ ಬಿದ್ದು ನರಳುತ್ತಿರುವ ರಾಜ್ಯ ಸರ್ಕಾರ ಸಂವಿಧಾನದ ಮೂಲಭೂತ ಆಶಯಗಳನ್ನು ಗಾಳಿಗೆ ತೂರುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.

    Reply
  3. nagraj.harapanahalli

    ಬಿಜೆಪಿ ಸರ್ಕಾರದ ಮಂತ್ರಿಗಳ ಮನಸ್ಥಿತಿ , ಅವರ ಗುಪ್ತ ಅಜೆಂಡಾ ಕ್ಕೆ ನವೀನ ಬಂಧನ ಸಾಕ್ಷಿ . 60 ರಿಂದ 90 ದಿನದ ಅಧಿಕಾರ ಅವಧಿ. ಪ್ರಗತಿಪರರಿಗೆ ಇಷ್ಟು ಕಷ್ಟ ಕೊಡದಿದ್ದರೆ ಹೀಗೆ. ಇದು ನೀರೀಕ್ಷಿತ . ಸ್ವಲ್ಪ ತಡ ವಾಗಿದೆ ಅಷ್ಟೇ .

    Reply
  4. nagraj.harapanahalli

    ಬಿಜೆಪಿ ಸರ್ಕಾರದ ಮಂತ್ರಿಗಳ ಮನಸ್ಥಿತಿ , ಅವರ ಗುಪ್ತ ಅಜೆಂಡಾ ಕ್ಕೆ ನವೀನ ಬಂಧನ ಸಾಕ್ಷಿ . 60 ರಿಂದ 90 ದಿನದ ಅಧಿಕಾರ ಅವಧಿ. ಪ್ರಗತಿಪರರಿಗೆ ಇಷ್ಟು ಕಷ್ಟ ಕೊಡದಿದ್ದರೆ ಹೇಗೆ. ಇದು ನೀರೀಕ್ಷಿತ . ಸ್ವಲ್ಪ ತಡ ವಾಗಿದೆ ಅಷ್ಟೇ . ಬಿಜೆಪಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರಿಂದ ಬಿಜೆಪಿ ಸೋಲು ಕಾಣಲಿದೆ . ಇದು ಕರ್ನಾಟಕಕ್ಕೇ ಯಡಿಯೂರಪ್ಪ ಮಾಡಲಿರುವ ದೊಡ್ಡ ಉಪಕಾರ. ಅಧಿಕಾರದ ರುಚಿ ಕಳೆದುಕೊಳ್ಳಲಿರುವ ಯುವ ಮಂತ್ರಿ ಗಳು ಶಾಸಕರಾಗಿ ಸಹ ವಿಧಾನಸೌದದ ಮುಖ ನೋಡಲಾರರು . ಚುನಾವಣ ಪ್ರಚರದ ವೇಳೆ ಕೆಲ ಸಚಿವರಿಗೆ ಮೆಟ್ಟಿನ ಪೂಜೆ ಸಹ ಆಗಲಿದೆ . ನೋಡ್ತಾ ಇರಿ . ಬಿಜೆಪಿ ಯಿಂದ 10 ಜನ ಶಾಸಕರು ಗೆದ್ದು ಬಂದರೆ ಹೆಚ್ಚು . ಯಡಿಯುರಪ್ಪ ಆ ಕೆಲಸವನ್ನು ಕೆಜಿಪಿ ಮೂಲಕ ಮಾಡಿ ರಾಜ್ಯಕ್ಕೆ ಉಪಕಾರ ಮಾಡಲಿದ್ದಾರೆ .

    Reply
  5. Nagaraju

    ಇದರಲ್ಲಿ ಪತ್ರಕರ್ತ ಸಂಘಟನೆಗಳು ಮಾತ್ರವೇ ಪಾಲುಗೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಆಗಲಾರದು. ಏಕೆಂದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಮಾಧ್ಯಮ ಕ್ಷೇತ್ರವನ್ನು ಆದಷ್ಟೂ ಭ್ರಷ್ಟವಾಗಿಸುವುದಕ್ಕೆ ಯಡಿಯೂರಪ್ಪ ಮತ್ತು ಬಿಜೆಪಿ ತುಂಬ ಹಣವನ್ನು ಚೆಲ್ಲಿದೆ. ಮಾಧ್ಯಮ ಕ್ಷೇತ್ರದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಇರುವವರನ್ನು ತನ್ನ ಋಣದಲ್ಲಿ ಇಟ್ಟುಕೊಂಡಿದೆ ರಾಜ್ಯದ ಬಿಜೆಪಿ. ಆದ್ದರಿಂದ ಎಲ್ಲ ಪ್ರಗತಿಪರ ಸಂಘಟನೆಗಳೂ ಬೀದಿಗೆ ಇಳಿದು ಪ್ರತಿಭಟನೆ ನಡೆಸಬೇಕು.

    Reply
  6. Nagaraju

    ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಷ್ಟೇ ಅಲ್ಲ, ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ. ಫಿರ್ಯಾದಿಯನ್ನೇ ಅಪರಾಧಿಯಾಗಿ ಪರಿಗಣಿಸಿ ಶಿಕ್ಷಿಸುವ ಸರ್ವಾಧಿಕಾರ ಪ್ರವೃತ್ತಿಯನ್ನು ತೀವ್ರ ಹೋರಾಟದಿಂದಲೇ ಎದುರಿಸುವುದು ಅನಿವಾರ್ಯ. ಹಣ ಚೆಲ್ಲಿದರೆ ಚುನಾವಣೆ ಗೆಲ್ಲಬಹುದು ಎಂಬ ಭಾವನೆ ಈಗ ಬಿಜೆಪಿಗೆ ಇದೆ. ಯಡಿಯೂರಪ್ಪ ಆಪರೇಷನ್ ಕಮಲದಲ್ಲಿ ಯಶಸ್ಸು ಗಳಿಸಿದ್ದೂ ಹಣ ಬಲದಿಂದ. ಜನತೆಯನ್ನು ಕೊಳ್ಳಬಹುದು ಎಂಬ ಧೋರಣೆ ಇರುವ ೀ ಪರಿಸ್ಥಿತಿ ಪ್ರಜ್ಞಾವಂತರಿಗೆ ಸವಾಲು.

    Reply
  7. Jayapal Hiriyalu

    ಒತ್ತಡ ಮತ್ತ ತೀವ್ರವಾದ focused ಹೋರಾಟ ಮಾತ್ರ ಈ ಸರ್ಕಾರಗಳಿಗೆ ಬುದ್ಧಿ ಕಲಿಸುವುದಕ್ಕೆ ಸಾಧ್ಯ. ನವೀನ್ ಶೀಘ್ರ ಬಿಡುಗಡೆಯಾಗಲಿ…

    Reply

Leave a Reply

Your email address will not be published. Required fields are marked *