ಅಸಹ್ಯ ಹುಟ್ಟಿಸುವ ಕ್ರಿಮಿಯಾಗಿ ರೂಪಾಂತರಗೊಂಡ ಗ್ರೆಗರ್ ಸಂಸ


-ಬಿ. ಶ್ರೀಪಾದ್ ಭಟ್


 

ಕೆಲವೊಮ್ಮೆ ಚರಿತ್ರೆ ತೆವಳುತ್ತದೆ, ಬಸವನ ಹುಳುವಿನ ಹಾಗೆ; ನಿಧಾನಕ್ಕೆ ಚಲಿಸುವ ಉಡದ ಹಾಗೆ. ಕೆಲವೊಮ್ಮೆ ಚರಿತ್ರೆ ಹಾರುತ್ತದೆ, ಹದ್ದಿನ ಹಾಗೆ. ಮಿಂಚಿನ ಹಾಗೆ ಕಣ್ಕುಕ್ಕಿ ಮಾಯವಾಗುತ್ತದೆ.  – ಡಿ.ಆರ್.ನಾಗರಾಜ್

ಯಾವುದೇ ಸಿದ್ಧಾಂತಗಳಿಲ್ಲದ, ಆದರ್ಶಗಳಿಲ್ಲದ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ, ಸಂಪೂರ್ಣವಾಗಿ ಫ್ಯೂಡಲ್ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ರಾಜಕಾರಣಿಯೊಬ್ಬ ಸರ್ಕಾರವೊಂದರ ಪ್ರಮುಖ ಖಾತೆಗಳಾದ ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆಯ ನೇತೃತ್ವ ವಹಿಸಿಕೊಂಡಾಗ ಹಾಗೂ ಇದಕ್ಕೆ ಗರಿ ಇಟ್ಟಂತೆ ಬೆಂಗಳೂರು ನಗರದ ಉಸ್ತುವಾರಿ ಮಂತ್ರಿಯ ಜವಾಬ್ದಾರಿ ದೊರೆತಾಗ ಆ ರಾಜ್ಯವು ಭೌತಿಕವಾಗಿಯೂ, ಸಾಂಸ್ಕೃತಿಕವಾಗಿಯೂ, ಬೌದ್ಧಿಕವಾಗಿಯೂ ಕೊಳೆತು ನಾರುತ್ತದೆ. ಇಂದಿನ ಕರ್ನಾಟಕ ಈ ಕೊಳೆತು ನಾರುವ ಸ್ಥಿತಿಗೆ ಜ್ವಲಂತ ಉದಾಹರಣೆ. ಸದರಿ ಗೃಹ ಮಂತ್ರಿಯ ಫ್ಯೂಡಲ್ ದಾಹವನ್ನು ತಣಿಸಲು ಉಪ ಮುಖ್ಯಮಂತ್ರಿಯ ಪಟ್ಟ ಬೇರೆ! ಇದಕ್ಕೆ ಪೂರಕವಾಗಿ ನಿಷ್ಕ್ರಿಯ ಮುಖ್ಯಮಂತ್ರಿ! ಈ ಸ್ವತಃ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಈ ಗೃಹ ಮಂತ್ರಿಗಳು ಪ್ರಮುಖವಾಗಿ ಹಾಗೂ ಇವರ ಸಚಿವ ಸಹೋದ್ಯೋಗಿಗಳು ಒಟ್ಟಾಗಿ ಇಡೀ ಕರ್ನಾಟಕ ರಾಜಕೀಯಕ್ಕೆ ಕೊಡುಕೊಳ್ಳುವಿಕೆಯ ಅನೈತಿಕ ಸಂಸ್ಕೃತಿಯ ಜಾಡ್ಯವನ್ನು ಅಂಟಿಸಿದ್ದಾರೆ. ಇವರಿಗೆ ಪೂರಕವಾಗಿಯೇ ವರ್ತಿಸುತ್ತಿರುವ ನಿಷ್ಕ್ರಿಯ ವಿರೋಧ ಪಕ್ಷಗಳ ಸಂಪೂರ್ಣ ದಿವಾಳಿತನ ಕಾಫ್ಕಾನ ಗ್ರೆಗರಿಯು ಬೆಳಗಾಗುವುದರೊಳಗೆ ಅಸಹ್ಯ ಹುಟ್ಟಿಸುವ ಕ್ರಿಮಿಯಂತೆ ರೂಪಾಂತರಗೊಂಡಂತೆ ಕರ್ನಾಟಕವನ್ನು ರೂಪಾಂತರಗೊಳಿಸಿದ್ದಾರೆ.

ಮಾತಿಗೊಮ್ಮೆ ತುರ್ತುಪರಿಸ್ಥಿಯ ದಿನಗಳ ದೌರ್ಜ್ಯನ್ಯವನ್ನು ನೆನಪಿಸುತ್ತ ತಾವು ಹುತಾತ್ಮರಂತೆ ಬಿಂಬಿಸಿಕೊಳ್ಳುತ್ತಿರುವ ಈ ಫ್ಯಾಸಿಸ್ಟ್ ಸಂಘಪರಿವಾರದವರು, ಇಂದಿನ ಬಿಜೆಪಿ ಪಕ್ಷ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಹೆಚ್ಚೂ ಕಡಿಮೆ ಆ ತುರ್ತುಪರಿಸ್ಥಿಯ ದಿನಗಳನ್ನು ನೆನಪಿಸುವಂತೆ ಅಟ್ಟಹಾಸದಿಂದ ವರ್ತಿಸಿ, ಪ್ರಜೆಯೊಬ್ಬನ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದ್ದರೆ, ಇವರನ್ನು ವಿರೋಧಿಸಿ ಮಹತ್ವದ ರಾಜಕೀಯ ಪ್ರಶ್ನೆಗಳನ್ನು ಎತ್ತದೆ ಮೂಕವಿಸ್ಮಿತರಾಗಿ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಅತ್ಯಂತ ಶ್ರದ್ಧೆಯಿಂದ ನಿಶ್ಚಲರಾಗಿ ಕುಳಿತಿರುವ ನಮ್ಮ ನಾಡಿನ ಬುದ್ಧಿಜೀವಿಗಳು ಮತ್ತು ಪ್ರಮುಖ ವಿರೋಧ ಪಕ್ಷಗಳು ಇವೆ. ಈ ಸಂದರ್ಭದಲ್ಲಿ ಈ ಎಲ್ಲರನ್ನೂ ಒಟ್ಟಾಗಿ ಏಕಾಂಗಿಯಾಗಿ ಎದುರಿಸುವಂತಹ ಅತ್ಯಂತ ಕಠಿಣ ಪರಿಸ್ಥಿತಿ ನಾಡಿನ ಪ್ರಜ್ಞಾವಂತರ ಮೇಲಿದೆ. ಡಿ.ಆರ್. ಹೇಳಿದ ಹಾಗೆ ಇಲ್ಲಿ ಚರಿತ್ರೆ ಹದ್ದಿನ ಹಾಗೆ ಕಣ್ಣು ಕುಕ್ಕಿ ಮಿಂಚಿನಂತೆ ಮಾಯವಾಗುತ್ತಿದೆ. ಆದರೆ ನಮ್ಮಲ್ಲಿ ಯಾವುದೇ ಸಿದ್ಧತೆಗಳಿಲ್ಲದೆ ಮೂಢರಂತೆ ಕುಳಿತಿರುವ ನಾವೆಲ್ಲ ಜಡತ್ವವನ್ನು ಕಳಚಿಕೊಳ್ಳದಿದ್ದರೆ ಈ ಅನಾಹುತಗಳ ಬಕಾಸುರನ ಚಕ್ರಕ್ಕೆ ಇಂದು ನವೀನ ಸೂರಂಜೆ ಬಲಿಯಾದರೆ ಮುಂದೆ ನಾವೆಲ್ಲ ಒಬ್ಬೊಬ್ಬರಾಗಿ ಕೈಕೋಳ ತೊಡಸಿಕೊಂಡು ನಿಲ್ಲಲೇಬೇಕಾಗುತ್ತದೆ. ಈ ಕೈ ಕೋಳ ತೊಡಿಸಲು ಸಂಘಪಾರಿವಾರ ಸರ್ಕಾರ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಸಹ ಇದರಲ್ಲಿ ಸಮಾನಮನಸ್ಕರು.

ತೀರ ಹಿಂದೆ ಬೇಡ, ಈ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಹಭಾಗಿತ್ವದ ಸರ್ಕಾರದಲ್ಲಿ ಪ್ರಗತಿಪರರ ಗೆಳೆಯರೆಂದೇ ಪ್ರಸಿದ್ಧರಾಗಿದ್ದ ದಿವಂಗತ ಎಂ.ಪಿ. ಪ್ರಕಾಶರು ಗೃಹ ಮಂತ್ರಿಗಳಾಗಿದ್ದಾಗ ಇವರ ಅನೇಕ ಪ್ರಗತಿಪರ ಬುದ್ಧಿಜೀವಿಗಳು ಮತ್ತು ರೈತ ನಾಯಕರ ಮೇಲೆ ನಕ್ಸಲ್ ಬೆಂಬಲಿತರೆಂದು ಆರೋಪ ಪಟ್ಟಿಯನ್ನು ತಯಾರಿಸಲಾಗಿತ್ತು. ಆಗ ಪೋಲೀಸ್ ಅಧಿಕಾರಿಯಾಗಿದ್ದ ಶಂಕರ ಬಿದರಿಯವರಿಗೆ ಇಂದು ಮತ್ತೊಬ್ಬ ಪ್ರಗತಿಪರ ಸ್ವಾಮಿಗಳಿಂದ ಬಸವಶ್ರೀ ಪ್ರಶಸ್ತಿ ದೊರಕಿದೆ. ನಮ್ಮೆಲ್ಲರ ಗ್ರಹಿಕೆಗಳಿಗೆ ಸುಲಭವಾಗಿ ದಕ್ಕದ ಇಂತಹ ಸಂಕೀರ್ಣತೆಯ ಸ್ವರೂಪವನ್ನು ನಾವೆಲ್ಲ ಸರಳವಾಗಿಯೇ ಬಗೆಹರಿಸಿಕೊಳ್ಳುಬೇಕಾಗಿದೆ. ಇಲ್ಲಿ ನಾವು ಯಾರೊಂದಿಗೆ ಗುರುತಿಸಿಕೊಳ್ಳಬೇಕೆಂಬುವ ಪ್ರಶ್ನೆಯನ್ನೇ ಕೈ ಬಿಟ್ಟು ಸಮಾನಮನಸ್ಕರೆಲ್ಲ ಒಟ್ಟಾಗಿ ಸಂಘಟಿತರಾಗಬೇಕಾಗಿದೆ. ಇದಕ್ಕೆ ಒಂದು ವಿಶಾಲವಾದ ತಾತ್ವಿಕ ನೆಲೆಯನ್ನು ಕಂಡುಕೊಳ್ಳಲೇಬೇಕು. ಇಲ್ಲಿ ನಮ್ಮನ್ನೆಲ್ಲ ಮುನ್ನಡೆಸುವ ನಾಯಕನಿಗಾಗಿ ಕಾಯುತ್ತ ಕೂರುವ ದರ್ದಂತೂ ಇಲ್ಲವೇ ಇಲ್ಲ. ಏಕೆಂದರೆ ಡಿ.ಆರ್. ಉಲ್ಲೇಖಿಸಿದ ಹಾಗೆ ಬ್ರೆಕ್ಟ್ ಹೇಳುತ್ತಾನೆ: ” ನಾಯಕನಿಗಾಗಿ ಕಾಯುವ ನಾಡಿಗೆ ದುರಂತ ಖಾತ್ರಿ.”

ಡಿ.ಆರ್. ಮುಂದುವರೆಯುತ್ತ, “ನಾಯಕನಿಗಾಗಿ ಕಾದು ಕಾದು ಹಂಬಲಿಸಿ ಕಡೆಗೆ ಹಿಟ್ಲರ್‌ನಂತಹ ಪಿಶಾಚಿಯನ್ನು ಆ ನಾಡು ಪಡೆಯಿತು. ಸಮಾಜದ ಉಳಿದೆಲ್ಲ ಅಂಗಗಳಿಗೆ ಲಕ್ವ ಹೊಡೆದ ಸ್ಥಿತಿಯಲ್ಲಿ ಮಾತ್ರ ನಾಯಕನೊಬ್ಬ ಹುಟ್ಟುತ್ತಾನೆ ಎಂದು ಜರ್ಮನಿ ಸಾಬೀತುಗೊಳಿಸಿತು,” ಎಂದು ಹೇಳುತ್ತಾರೆ. ಇಂದು ಕರ್ನಾಟಕದಲ್ಲಿ ಎಷ್ಟೊಂದು ಪಿಶಾಚಿಗಳು!! ಎಣಿಕೆಗೂ ಸಿಗದಷ್ಟು! ಮಾನಸಿಕ ನೈತಿಕತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳದಷ್ಟು ನಾವೆಲ್ಲ ಸೋತು ಹೋದೆವೇ ಎಂದು ಮರುಗುತ್ತ ಕೂಡಲಾಗದು. ನಮ್ಮ ಆದರ್ಶಗಳು ಪ್ರದರ್ಶನಪ್ರಿಯತೆಯ ಲಕ್ಷಣವನ್ನು ಪಡೆದುಕೊಳ್ಳದಂತೆ ಎಚ್ಚರವಹಿಸಿಕೊಳ್ಳಬೇಕಾಗಿರುವುದು ನಮ್ಮ ಮುಂದಿರುವ ಮೊದಲ ಪಾಠ. ವಿತಂಡವಾದಗಳನ್ನು ಕೈಬಿಡುವುದು ನಾವು ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರ. ನಮ್ಮ ಮಾತುಗಳು ಬೈಗುಳ ರೂಪವನ್ನು ಪಡೆದುಕೊಳ್ಳದೆ ವಿನಯವಾಗಿಯೇ, ಪ್ರಾಮಾಣಿಕವಾಗಿಯೇ ಪಿತೃಹತ್ಯೆಯ ಮಾರ್ಗಗಳನ್ನು ನಮ್ಮದಾಗಿಸಿಕೊಳ್ಳಬೇಕು. ಕಡೆಗೆ ವ್ಯಕ್ತಿಗತವಾದ ಆದರ್ಶಗಳನ್ನು ಕಡು ಪ್ರಾಮಾಣಿಕತೆಯಿಂದ ಸಾಮಾಜೀಕರಣಗೊಳಿಸುಕೊಳ್ಳುವುದೇ ಈಗ ಉಳಿದಿರುವ ಬಿಡುಗಡೆಯ ಮಾರ್ಗ.

ಇದನ್ನು ನಾವು ಸೃಷ್ಟಿಸಿಕೊಳ್ಳಲಾಗುವುದಿಲ್ಲ. ಏಕೆಂದರೆ ಇದು ನಮ್ಮ ಮುಂದೆಯೇ ಇದೆ. ನಮ್ಮ ನೋಡುವ ಕಣ್ಣುಗಳು ಬದಲಾಗಬೇಕಷ್ಟೆ. ಮಾನವೀಯ ಒಳನೋಟಗಳು ನಿರಂತರವಾಗಿ ಪೊರೆಯತ್ತಿದ್ದರೆ ಹಿಂದೆ ಮಲೆಕುಡಿಯ ವಿಠ್ಠಲ, ಇಂದು ನವೀನ್ ಸೂರಂಜೆ, ಮುಂದೆ ನಮ್ಮಲ್ಲೊಬ್ಬರು ಎಂಬಂತಹ ಪ್ರಶ್ನೆಗೆ ದಾರಿಗಳೂ ಸ್ಪಷ್ಟವಾಗತೊಡಗುತ್ತವೆ. ಬಲು ದೂರವಾದ ಕತ್ತಲ ದಾರಿಯನ್ನು ಮೊಟುಕೊಗೊಳಿಸುವುದೂ ನಮ್ಮ ಕೈಯಲ್ಲಿದೆ. ಏಕೆಂದರೆ ನಮ್ಮಲ್ಲಿ ಅಸಂಖ್ಯಾತ ಮಿಂಚು ಹುಳುಗಳಿವೆ.

2 thoughts on “ಅಸಹ್ಯ ಹುಟ್ಟಿಸುವ ಕ್ರಿಮಿಯಾಗಿ ರೂಪಾಂತರಗೊಂಡ ಗ್ರೆಗರ್ ಸಂಸ

  1. anand prasad

    ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬಂತೆ ಸಂಘವು ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲಾರಂಭಿಸಿದ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರದ ದಿನಗಳಿಂದ ಕರ್ನಾಟಕದಲ್ಲಿ ಫ್ಯಾಸಿಸ್ಟ್ ದೌರ್ಜನ್ಯ ಮೇರೆ ಮೀರಿದೆ. ಇದಕ್ಕೂ ಮೊದಲು ಕರ್ನಾಟಕದಲ್ಲಿ ಸರ್ಕಾರವನ್ನು ಎಷ್ಟೇ ಟೀಕಿಸಿದರೂ ಈ ರೀತಿಯ ದೌರ್ಜನ್ಯವನ್ನು ಕಾಂಗ್ರೆಸ್ ಆಗಲೀ, ದಳ ಸರಕಾರವಿದ್ದಾಗ ಆಗಲೀ ನಡೆಸಿದ ಉದಾಹರಣೆ ಇಲ್ಲ. ಸಂಘವು ಹಿಂದಿನ ಸೀಟಿನಲ್ಲಿ ಕುಳಿತು ಸರ್ಕಾರದ ಮೇಲೆ ಹಸ್ತಕ್ಷೇಪ ನಡೆಸಲಾರಂಭಿಸಿದ ಮೇಲೆ ಪ್ರಗತಿಶೀಲರ ಮೇಲೆ ಮೇರೆ ಮೀರಿದ ದೌರ್ಜನ್ಯ ಆರಂಭವಾಗಿದೆ. ಇದು ಸಂಘದ ಕುಮ್ಮಕ್ಕಿನಿಂದಲೇ ನಡೆಯುತ್ತಿರುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ಮುಖ್ಯಮಂತ್ರಿ ಶೆಟ್ಟರ್ ಅವರಿಗೆ ಸ್ವಂತ ಬುದ್ಧಿ ಎಂಬುದೇ ಇಲ್ಲವೆಂಬಂತೆ ಕಾಣುತ್ತದೆ, ಇದ್ದಿದ್ದರೆ ಇಂಥ ದೌರ್ಜನ್ಯಗಳು ನಡೆಯುತ್ತಿರುವಾಗಲೂ ಮೌನವಾಗಿ ಕುಳಿತಿರಲು ಸಾಧ್ಯವೇ ಇಲ್ಲ. ಕನಿಷ್ಠ ಮನುಷ್ಯತ್ವವೂ ನಮ್ಮ ಗೃಹ ಹಾಗೂ ಮುಖ್ಯಮಂತ್ರಿಗಳಲ್ಲಿ ಇಂದು ಉಳಿದಿಲ್ಲ ಎಂಬುದು ನವೀನ ಸೂರಿಂಜೆ ಮೇಲೆ ಸಂಘದ ದ್ವೇಷ ಸಾಧನೆಯ ಫಲವಾಗಿ ನಡೆಯುತ್ತಿರುವ ದೌರ್ಜನ್ಯ ನೋಡುವಾಗ ಕಂಡು ಬರುತ್ತದೆ. ಇದು ರಾಜ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಗುತ್ತದೆ ಎಂಬ ಪ್ರಜ್ಞೆಯೂ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಇಲ್ಲ.

    Reply
  2. naveenimerNaveen

    ನಮ್ಮ ಗೃಹ ಮಂತ್ರಿಗೆ ಇರುವ ಒಂದೇ ಒಂದು ಅರ್ಹತೆ ಎಂದರೆ ಸಾರಿಗೆ ಸಚಿವರಾಗಿರುವದು. ಯಾರೇ ಸಾರಿಗೆ ಸಚಿವರಾದರೂ ಅವರ ವರ್ಚಸ್ಸು ಮೇಲೇರುತ್ತದೆ ಕಾರಣ ಅವರ ಕೈಯ್ಯಲ್ಲಿರುವ ಕೆ.ಎಸ್.ಆರ್.ಟಿ ಸಿ. ಇದು ಇಂದು ದಕ್ಷ ಅಧಿಕಾರಿಗಳಿಂದ ಒಳ್ಳೇ ಲಾಭ ಗಳಿಸುತ್ತಾ ತಿಂಗಳಿಗೊಂದು ಹೊಸ ಬಸ್ಸು ಬಿಡುತ್ತಾ ಸಾರಿಗೆ ಸಚಿವರನ್ನು ಸದಾ ಸುದ್ದಿಯಲ್ಲಿಡುತ್ತದೆ. ಇದೊಂದನ್ನು ಬಿಟ್ಟರೆ ಬೇರೆ ಯಾವ ವರ್ಚಸ್ಸುಇಲ್ಲ. ಇದೆ ವರ್ಚಾಸ್ಸಿನಿಂದ ಗೃಹ ಖಾತೆ ಪಡೆದ ವ್ಯಕ್ತಿಯಿಂದ ಯಾವ ತರಹದ ಮೇಚುರಿಟೀ ನಿರೀಕ್ಷಿಸಲೂ ಸಾಧ್ಯ? ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕಾಯಕದಲ್ಲಿ ಪಾಲುದಾರರಾಗಬೇಕಾಗಿದ್ದ ಪತ್ರಕರ್ತರನ್ನೇ ವಿರೋಧಿಯ ಸ್ಥಾನದಲ್ಲಿರಿಸಿದ ಪೋಲೀಸ್ ಅಧಿಕಾರಿಗಳ ಬುಧಿಗೆ ಏನೆನ್ನಬೇಕು? ಅಷ್ಟಕ್ಕೂ ಪತ್ರಕರ್ತನನ್ನು ಬಂಧಿಸಿ ಸಾಧಿಸಿದ್ದಾದರೂ ಏನು? ಇದರಿಂದ ಯಾರಿಗೆ ಯಾವ ಎಚ್ಚರಿಕೆಯನ್ನು ನೀಡಬಯಸುತ್ತಾರೆ? ಇನ್ನೂ ಮುಂದೆ ಮಂಗಳೂರಿನಲ್ಲಿ ಪೋಲೀಸ್ರಿಗೆ ಪತ್ರಕರ್ತರ ಸಹಕಾರ ಸಾಧ್ಯವೇ? ಪತ್ರಕರ್ತರ ಬೆಂಬಲ ಸಹಕಾರವಿಲ್ಲದೇ ಪೋಲೀಸ್ ಕಾರ್ಯ ಹೇಗೆ ಸಾಧ್ಯ??

    Reply

Leave a Reply

Your email address will not be published. Required fields are marked *