Daily Archives: August 16, 2014

ರೆಡ್ ಕಾರಿಡಾರಿನಲ್ಲಿ ಪ್ರಜಾಸತ್ತೆಯ ಹೂಗಳು

Naveen Soorinje


– ನವೀನ್ ಸೂರಿಂಜೆ


ದೇಶದ ಪ್ರಭುತ್ವ ಮತ್ತು 1947 ರ ಸ್ವಾತಂತ್ರ್ಯವನ್ನು ಒಪ್ಪದ ನಕ್ಸಲ್ ಬಾಧಿತ ಗ್ರಾಮ ಎಂದು ಸರಕಾರದಿಂದ ಗುರುತಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರು ಗ್ರಾಮದ ಕಾಡಿನಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಗಿದೆ. ನಕ್ಸಲ್ ವಿರೋಧಿ ಪಡೆ ಪೊಲೀಸರ ಕೋವಿನ ನಳಿಗೆಯಂಚಿನಲ್ಲಿ ಬದುಕು ಸಾಗಿಸುತ್ತಿರುವ kuthloor-malekudiya-tribeಕುತ್ಲೂರಿಗೆ 47 ರ ಸ್ವಾತಂತ್ರ್ಯ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಕೆಂಪು ದ್ವಜಗಳು ಹಾರಾಡಿದ ನೆಲದಲ್ಲಿ ಆದಿವಾಸಿಗಳ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ನಕ್ಸಲ್ ಬೆಂಬಲಿಗನೆಂಬ ಆರೋಪದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಪತ್ರಿಕೋದ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನಿಂದಾಗಿ ಇಂದು ಕುತ್ಲೂರಿನಲ್ಲಿ ರಾಷ್ಟ್ರಧ್ವಜ ಹಾರುವಂತಾಗಿದೆ.

ಕುತ್ಲೂರಿನಲ್ಲಿ ರಾಷ್ಟ್ರಧ್ವಜ ಹಾರುವುದು ಎಂದರೆ ಸುಲಭದ ಮಾತಲ್ಲ. ನಾವು ಪೇಟೆಯ ಮೈದಾನದಲ್ಲೋ, ಗ್ರಾಮದ ಗದ್ದೆಯಲ್ಲೋ ಕಂಬ ನೆಟ್ಟು ಧ್ವಜ ಹಾರಿಸಿ ಸಿಹಿ ಹಂಚಿದಷ್ಟು ಸುಲಭದ ಮಾತಲ್ಲ. ಅದಕ್ಕೊಂದು ಸುಧೀರ್ಘವಾದ ಸದ್ದಿಲ್ಲದ ಹೋರಾಟವಿದೆ. ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ನಕ್ಸಲ್ ಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಿದೆ. ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಇದ್ದಿದ್ದನ್ನು ಅಲ್ಲಗಳೆಯುವಂತಿಲ್ಲ. ಕುತ್ಲೂರು ಗ್ರಾಮವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಪರಿವರ್ತಿಸಿದಾಗ ಮತ್ತು ಕಾಡುತ್ಪತ್ತಿಯನ್ನು ಸಂಗ್ರಹಿಸಿ ಬದುಕು ಸಾಗಿಸುತ್ತಿದ್ದ ಮಲೆಕುಡಿಯ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾದಾಗ ಇಲ್ಲಿನ ಯುವಕರು ನಕ್ಸಲ್ ಚಳುವಳಿಯತ್ತಾ ಆಕರ್ಷಿತರಾಗಿದ್ದುದು ಸುಳ್ಳಲ್ಲ. ಈ ಹಿನ್ನಲೆಯಲ್ಲಿ ಬಂದೂಕಿನ ಮೂಲಕ ಕ್ರಾಂತಿ ಮಾಡಬೇಕು ಮತ್ತು ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ನಕ್ಸಲ್ ಚಳುವಳಿ ಸೇರಿದ ಯುವಕರಲ್ಲಿ ದಿನಕರ್ ಎಂಬಾತ 2008 ರಲ್ಲಿ ಶೃಂಗೇರಿ ಬಳಿ ಪೊಲೀಸರ ಗುಂಡಿಗೆ ಬಲಿಯಾದ. ನಂತರ 2010 ರಲ್ಲಿ ಕುತ್ಲೂರಿನ ವಸಂತ ಪೊಲೀಸರ ಗುಂಡಿಗೆ ಹೆಣವಾದ. ಇದಾದ ನಂತರ ನಕ್ಸಲ್ ವಿರೋಧಿ ಪಡೆ ಪೊಲೀಸರು ಕುತ್ಲೂರಿನಲ್ಲಿ ಝುಂಡಾ ಊರಿದರು. ನಿತ್ಯ 500-600 ಪೊಲೀಸರು ಕುತ್ಲೂರಿನಲ್ಲಿ ಕೂಂಬಿಂಗ್ ನಡೆಸಲು ಶುರುವಿಟ್ಟುಕೊಂಡರು. ಆದಿವಾಸಿ ಯುವಕರು, ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಲ್ಲದೆ ಮಾನಸಿಕವಾಗಿ ಪೀಡಿಸಿದರು. ಇದು ಇಲ್ಲಿನ ಆದಿವಾಸಿಗಳು ಪ್ರಭುತ್ವವನ್ನು ಮತ್ತಷ್ಟೂ ದ್ವೇಷಿಸಲು ಕಾರಣವಾಗಿ ನಕ್ಸಲ್ ಚಳುವಳಿಗೆ ಬೆಂಬಲ ನೀಡುವ ಮನಸ್ಥಿತಿ ಬೆಳೆಸಿತು.

ಕಾಡಿನಲ್ಲಿರುವ ಕುತ್ಲೂರು ಗ್ರಾಮದ ಆದಿವಾಸಿಗಳು ವಾರಕೊಮ್ಮೆ ತಾವು ಸಂಗ್ರಹಿಸಿದ ಕಾಡುತ್ಪತ್ತಿಯನ್ನು ಸಂತೆಯಲ್ಲಿ ಮಾರಿ, ಅಡುಗೆ Anti-Naxal-Forceಸಾಮಾನು ಕೊಂಡೊಯ್ಯಲು ಸಂತೆಗೆ ಬರುತ್ತಾರೆ. ಹೀಗೆ ವಾರಕ್ಕೊಮ್ಮೆ ಪೇಟೆಗೆ ಬರುವ ಮಲೆಕುಡಿಯರು ತಮ್ಮ ಮನೆಯ ಸದಸ್ಯರ ಸಂಖ್ಯೆಗಣುಗುಣವಾಗಿ ಪದಾರ್ಥಗಳನ್ನು ಖರೀದಿ ಮಾಡಬೇಕು. ಉದಾಹರಣೆಗೆ ಒಂದು ಕುಟುಂಬದಲ್ಲಿ ಮೂವರಿದ್ದರೆ ಮೂರು ಮೀನುಗಳನ್ನಷ್ಟೇ ಖರೀದಿ ಮಾಡಬೇಕು. ಎಂಟೋ ಹತ್ತೋ ಮೀನು ಖರೀದಿಸಿ ಮನೆಗೆ ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಕೊಂಡೊಯ್ದರೆ ಕಾಡಿನ ಮಧ್ಯೆ ಎಎನ್ಎಫ್ ಪೊಲೀಸರು ತಡೆದು ಪರಿಶೀಲನೆ ಮಾಡುವಾಗ ಸಿಕ್ಕಿಬಿದ್ದರೆ ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಾರೆ. “ಮೂರೇ ಜನ ಇದ್ದರೂ ಆರು ಜನರಿಗಾಗುವಷ್ಟು ಖರೀದಿ ಮಾಡಿದ್ದಿ ಎಂದರೆ ಅದು ನಕ್ಸಲರಿಗೆ ಪೂರೈಕೆ ಮಾಡುವ ಉದ್ದೇಶದಿಂದಲೇ ಇರಬೇಕು” ಎಂಬುದು ಪೊಲೀಸರ ವಾದವಾಗಿರುತ್ತದೆ. ಪೊಲೀಸರು ಮಾಡುವ ತನಿಖೆಯಾದರೂ ಎಂಥದ್ದು ? ಇದೇ ರೀತಿ ಕುಟುಂಬ ಸದಸ್ಯರ ಲೆಕ್ಕಕ್ಕಿಂತ ಜಾಸ್ತಿ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದರು ಎಂಬ ಕಾರಣಕ್ಕಾಗಿ ಕುತ್ಲೂರಿನ ಪೂವಪ್ಪ ಮಲೆಕುಡಿಯನ್ನು ಬಂಧಿಸಿ ಮೂರು ದಿನ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ದರು. ನಂತರ ಪೂವಪ್ಪರನ್ನು ಮನೆಗೆ ಹೋಗೋ ದಾರಿಯಲ್ಲಿ ಬಿಟ್ಟಿದ್ದರು. ಈಗ ಪೂವಪ್ಪರಿಗೆ ನಡೆಯಲು ಮಾತ್ರ ಸಾಧ್ಯವಾಗುತ್ತದೆ. ಓಡಲು ಆಗೋದೆ ಇಲ್ಲ. ಪೂವಪ್ಪ ಓಡೋಕೆ ಸಾಧ್ಯವಾಗದ ರೀತಿಯಲ್ಲಿ ಮೊನಕಾಲಿಗೆ ಹೊಡೆದಿದ್ದರು.

ಕುತ್ಲೂರು ಗ್ರಾಮದಲ್ಲಿ 35 ಕುಟುಂಬಗಳು ವಾಸ ಮಾಡಿಕೊಂಡಿದ್ದವು. ಕುತ್ಲೂರನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿದ ನಂತರ ಸ್ವಯಂಪ್ರೇರಿತವಾಗಿ 14 10373489_336561873178407_7235343341327920427_nಕುಟುಂಬಗಳು ಒಕ್ಕಲೆದ್ದು ಹೋದವು. ಈಗ 21 ಕುಟುಂಬಗಳು ವಾಸ ಮಾಡುತ್ತಿವೆ. ಈ ಸ್ವಯಂಪ್ರೇರಿತ ಒಕ್ಕಲೇಳುವಿಕೆ ಎನ್ನುವುದು ತುಂಬಾನೇ ಸೂಪರ್ ಇದೆ. ಪಶ್ಚಿಮ ಘಟ್ಟದಲ್ಲಿ ಕೆಲವು ಎನ್ ಜಿ ಒ ಗಳು ಕಾರ್ಯಾಚರಣೆ ಮಾಡುತ್ತಿವೆ. ಹುಲಿ ಲೆಕ್ಕ ಮಾಡೋ ಎನ್ ಜಿ ಒ, ಹಾವು ಲೆಕ್ಕ ಮಾಡೋ ಎನ್ ಜಿ ಒ, ಚಿಟ್ಟೆ ಲೆಕ್ಕ ಮಾಡೋ ಎನ್ ಜಿ ಒ…. ಹೀಗೆ ಹಲವು ಎನ್ ಜಿ ಒ ಗಳು ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಲ್ಲಿ ವಿದೇಶಿ ಹಣದಲ್ಲಿ ಕೆಲಸ ಮಾಡುತ್ತಿದೆ. ಕಾಡಿನಂಚಿನಲ್ಲಿರುವ ಆದಿವಾಸಿಗಳು ಕಾಡು ಬೆಳೆಸುತ್ತಾರೆಯೇ ವಿನಃ ಕಾಡು ನಾಶ ಮಾಡುವುದಿಲ್ಲ ಎಂದು ಈ ಎನ್ ಜಿ ಒಗಳಿಗೆ ಗೊತ್ತಿದ್ದೂ ಆದಿವಾಸಿಗಳು ಕಾಡಿನಿಂದ ಒಕ್ಕಲೇಳಬೇಕು ಎಂದು ಈ ಎನ್ ಜಿ ಒ ಗಳು ಸರಕಾರದ ಜೊತೆ ಕೆಲಸ ಮಾಡುತ್ತದೆ. ಅದಕ್ಕಾಗಿ ಎಲ್ಲೆಲ್ಲೋ ಕಾಡಿನಿಂದ ಹೊರ ಬರೋ ಚಿರತೆ, ಹುಲಿ, ಕಾಳಿಂಗ ಸರ್ಪಗಳನ್ನು ಹಿಡಿದು ನೇರ ಕುತ್ಲೂರು ಆದಿವಾಸಿಗಳ ಮನೆ ಪರಿಸರದಲ್ಲಿ ಬಿಡಲು ಶುರು ಮಾಡಿದರು. ಇಲ್ಲಿಯವರೆಗೆ ಪಥ ಬಿಟ್ಟು ಸಂಚರಿಸದ ಹುಲಿ, ಚಿರತೆ, ಕಾಳಿಂಗ ಸರ್ಪಗಳು ಆದಿವಾಸಿಗಳ ಮನೆ ಪಕ್ಕ ಅಡ್ಡಾಡಲು ಶುರುವಿಟ್ಟುಕೊಂಡವು. ಮತ್ತೊಂದೆಡೆ ನಕ್ಸಲ್ ಕುಂಬಿಂಗ್ ಹೆಸರಲ್ಲಿ ನಿತ್ಯ ಆದಿವಾಸಿಗಳಿಗೆ ಕಿರುಕುಳ ನೀಡಲು ಶುರುವಿಟ್ಟುಕೊಂಡರು. ರಾತ್ರಿ ಹೊತ್ತು ಮನೆಗೆ ಬಂದೂಕುಧಾರಿ ನಕ್ಸಲರು ಬೇಟಿ ಕೊಡುವುದು. ಹಗಲೊತ್ತು ನಕ್ಸಲರನ್ನು ಮನೆಗೆ ಹುಡುಕಿಕೊಂಡು ಬರೋ ಶಸ್ತ್ರಾಸ್ತ್ರಧಾರಿ ಪೊಲೀಸರು. ಇದ್ಯಾವುದರ ಕಿರುಕುಳವೂ ಬೇಡ ಎಂದು ಸರಕಾರ ನೀಡಿದ್ದಷ್ಟು ಪರಿಹಾರ ತೆಗೆದುಕೊಂಡು ಹೊರಡಲು 14 ಕುಟುಂಬಗಳು ಸಿದ್ದವಾದವು. ಈ 14 ಕುಟುಂಬಗಳ ಪುನರ್ವಸತಿ ಮತ್ತು ಪರಿಹಾರ ನೀಡಿಕೆಗಾಗಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜು ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆ ನಡವಳಿಕೆಗಳನ್ನು ಗಮನಿಸಿದರೆ ನಿಮಗೆ ಆಶ್ಚರ್ಯವಾಗಬಹುದು.

ಜಿಲ್ಲಾಧಿಕಾರಿಗಳ ಕೋರ್ಟು ಹಾಲ್ ನಲ್ಲಿ 14 ಕುಟುಂಬಗಳ ಸಭೆ ನಡೆಸಲಾಗಿತ್ತು. ಒಂದು ಬದಿಯಲ್ಲಿ ಮಲೆಕುಡಿಯ ಕುಟುಂಬದ ಪ್ರಮುಖರು, ಮತ್ತೊಂದೆಡೆ ಕಂದಾಯ, ಪಿಡಬ್ಲ್ಯೂಡಿ, ತೋಟಗಾರಿಕೆ, ಕೃಷಿ, ಅರಣ್ಯ ಮತ್ತಿತರ ಅಧಿಕಾರಿಗಳು. ಮಧ್ಯದಲ್ಲಿ ಜಿಲ್ಲಾಧಿಕಾರಿಗಳು. ಸರದಿ ಪ್ರಕಾರ ಒಂದೊಂದೇ ಮನೆಯ ಪರಿಹಾರ ಕಡತಗಳನ್ನು ಕ್ಲೀಯರ್ ಮಾಡಲಾಗುತ್ತದೆ. ಉದಾಹರಣೆಗೆ ಬಾಬು ಮಲೆಕುಡಿಯನ ( ಕಲ್ಪಿತ ಹೆಸರು,ಸಂಖ್ಯೆಯನ್ನು ಉದಾಹರಣೆಗಾಗಿ ನೀಡಲಾಗಿದೆ) ಆಸ್ತಿ ಸರ್ವೆ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸುತ್ತಾರೆ. ಕಂದಾಯ ಅಧಿಕಾರಿ ಎದ್ದು ನಿಂತು ಬಾಬು ಮಲೆಕುಡಿಯನಿಗೆ ಮೂರು ಎಕರೆ ಆಸ್ತಿಯ ಪಹಣಿ ಇದ್ದು, ಸರಕಾರಿ ಮೌಲ್ಯಮಾಪನ ಪ್ರಕಾರ ಎಷ್ಟೋ ಲಕ್ಷಗಳಾಗುತ್ತದೆ ಎಂದು ಮಾಹಿತಿ ನೀಡುತ್ತಾನೆ. ನಂತರ ಪಿಡಬ್ಲ್ಯೂಡಿ ಅಧಿಕಾರಿ ಎದ್ದು ನಿಂತು ಬಾಬು ಮಲೆಕುಡಿಯನ ಮನೆ ಕಟ್ಟಡದ ಸರ್ವೆ ಮಾಡಿದ್ದು ಸರ್ವೆ ಪ್ರಕಾರ 1 ಲಕ್ಷ ನೀಡಬಹುದು ಎನ್ನುತ್ತಾನೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಪ್ರಕಾರ ಮೂರು ಎಕರೆಯಲ್ಲಿ ಬೆಳೆದಿರುವ ವಿವಿಧ ತೋಟಗಾರಿಕೆ, ವಾಣಿಜ್ಯ, ಕೃಷಿ ಬೆಳೆಯ ಪ್ರಕಾರ 10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ವರದಿ ನೀಡುತ್ತಾನೆ. ನಂತರ ಅರಣ್ಯ ಇಲಾಖೆಯವರು ಬಾಬು ಮಲೆಕುಡಿಯ ಮನೆ ಪರಿಸರದ ತನ್ನದೇ ಪಹಣಿಯಲ್ಲಿ ಬೆಳೆದಿರುವ ವಾಣಿಜ್ಯ ಮರಗಳ ಮೌಲ್ಯ 10 ಲಕ್ಷ ಎಂದು ವರದಿ ಸಲ್ಲಿಸುತ್ತಾನೆ. ಒಟ್ಟು ಬಾಬು ಮಲೆಕುಡಿಯನ ಮೂರು ಎಕರೆ ಅಧಿಕೃತ ಆಸ್ತಿಗೆ ಸರಕಾರದ ಪ್ರಕಾರ 25 ಲಕ್ಷ ರೂಪಾಯಿ ಮೌಲ್ಯ ಬರುತ್ತದೆ ಎಂದಿಟ್ಟುಕೊಳ್ಳಿ. ಇದನ್ನು ಜಿಲ್ಲಾಧಿಕಾರಿ ಘೋಷಣೆ ಮಾಡಿ ಬಾಬು ಮಲೆಕುಡಿಯನಲ್ಲಿ ಕೇಳುತ್ತಾರೆ “ನಾವು ನಿನ್ನನ್ನು ಬಲವಂತದಿಂದ ಒಕ್ಕಲೆಬ್ಬಿಸುತ್ತಿಲ್ಲ. ನಿನ್ನ ಆಸ್ತಿಯನ್ನು ಸರ್ವೆ ಮಾಡಲಾಗಿ ನಿನ್ನ ಆಸ್ತಿಯ ಸರಕಾರಿ ಮೌಲ್ಯ 25 ಲಕ್ಷ ರೂಪಾಯಿಯಾಗಿರುತ್ತದೆ. ಆದರೆ ಸರಕಾರದ ಯೋಜನೆಯ ಪ್ರಕಾರ ಪ್ರತೀ ಕುಟುಂಬಕ್ಕೆ ಪುನರ್ವಸತಿ ಪರಿಹಾರವಾಗಿ ನಾವು 10 ಲಕ್ಷವನ್ನಷ್ಟೇ ನೀಡಬಹುದು. ನೀನು ಸಿದ್ದನಿದ್ದೀ ತಾನೆ ?” ಎಂದು ಪ್ರಶ್ನಿಸುತ್ತಾರೆ. ಬಾಬು ಮಲೆಕುಡಿಯ ಕಣ್ಣು ತುಂಬಿಕೊಂಡು ತಲೆ ಅಲ್ಲಾಡಿಸುತ್ತಾನೆ. ಆತನಿಗೆ ಎಂಟು ಲಕ್ಷ ರೂಪಾಯಿಗಳನ್ನು ನೀಡಿ ಒಕ್ಕಲೆಬ್ಬಿಸುತ್ತೆ. ಹೀಗಿತ್ತು ಸರಕಾರದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುನರ್ವಸತಿ ಕಾರ್ಯ.

ಅನಕ್ಷರಸ್ಥರೇ ತುಂಬಿರುವ ಕುತ್ಲೂರಿನಲ್ಲಿ 35 ಕುಟುಂಬಗಳೂ ಈ ರೀತಿ ಕಾಡಿನಿಂದ ಹೊರಬರಲು ಸಿದ್ದರಿದ್ದರು. ಆದರೆ ಅದಕ್ಕೆ ತಡೆಯಾಗಿದ್ದು ವಿಠಲ ಮಲೆಕುಡಿಯ. Vittal Malekudiyaವಿಠಲ ಮಲೆಕುಡಿಯ ಯಾವಾಗ ಪಿಯುಸಿ ಪಾಸಾದನೋ ಆಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತೋರಿಸಿದ ಹಾಳೆಗಳಿಗೆ ಸಹಿ ಹಾಕುವುದನ್ನು ಮಲೆಕುಡಿಯರು ನಿಲ್ಲಿಸಿಬಿಟ್ಟರು. ಅಷ್ಟರಲ್ಲಿ ವಿಠಲ ಮಲೆಕುಡಿಯನಿಗೆ ಮುನೀರ್ ಕಾಟಿಪಳ್ಳ ಪರಿಚಯವಾಯಿತು. ಮುನೀರ್ ಪರಿಚಯವಾದ ನಂತರ ವಿಠಲ ಮಲೆಕುಡಿಯ ಎಷ್ಟು ಬದಲಾದನೆಂದರೆ ಮಲೆಕುಡಿಯರು ಬೀದಿ ಹೋರಾಟವನ್ನು ಶುರು ಹಚ್ಚಿಕೊಂಡು 21 ಕುಟುಂಬಗಳನ್ನು ಉಳಿಸಲು ಹೋರಾಟ ನಡೆಸುವಲ್ಲಿಗೆ ಮುಟ್ಟಿದ. ಮುನೀರ್ ಕಾಟಿಪಳ್ಳ ಜೊತೆ ಸೇರಿ ಆತ ಅಷ್ಟೂ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅರಿವು ಮತ್ತು ರಾಷ್ಟ್ರೀಯ ಉದ್ಯಾನವನ ಘೋಷಣೆಯ ಹಿಂದೆ ಇರುವ ಮಾಫಿಯಾವನ್ನು ಮನದಟ್ಟು ಮಾಡುವಲ್ಲಿ ಸಫಲನಾದ. ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರ, ಪೊಲೀಸರಿಗಿಂತ ನಕ್ಸಲ್ ವಾದ ಎಷ್ಟೊಂದು ಅಪಾಯಕಾರಿ ಎಂಬುದನ್ನು ವಿಠಲ ಮಲೆಕುಡಿಯ ಮತ್ತು ಮುನೀರ್ ಕಾಟಿಪಳ್ಳ ನಕ್ಸಲ್ ಪೀಡಿತ ಗ್ರಾಮಸ್ಥರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ನಕ್ಸಲ್ ಪೀಡಿತ ಗ್ರಾಮಸ್ಥರು ತಮ್ಮ ಗ್ರಾಮದ ಅಭಿವೃದ್ದಿಗೆ ನಕ್ಸಲರ ಹೋರಾಟವನ್ನು ನಿರೀಕ್ಷಿಸದೆ ಬೀದಿಗಿಳಿದರು. ಬೀದಿ ಹೋರಾಟದ ಮೂಲಕ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿ ಹಕ್ಕುಗಳನ್ನು ಗಿಟ್ಟಿಸಿಕೊಳ್ಳುವ ಮಟ್ಟಕ್ಕೆ ಬಂದರು.

ನಕ್ಸಲ್ ಚಳುವಳಿಯನ್ನು ಹತ್ತಿಕ್ಕಿದ್ದ ವಿಠಲ್ ಮಲೆಕುಡಿಯ ಮತ್ತು ಮುನೀರ್ ಕಾಟಿಪಳ್ಳರ ಚಳುವಳಿಗೆ ಸರಕಾರ ಪ್ರೋತ್ಸಾಹಿಸಬೇಕಾಗಿತ್ತು. ಆದರೆ ನಕ್ಸಲ್ ಚಳುವಳಿ ಕುತ್ಲೂರಿನಲ್ಲಿ ನಿಂತಿದೆ ಎಂಬುದು ಸರಕಾರಕ್ಕೆ ಇಷ್ಟವಿಲ್ಲದ ಸಂಗತಿಯಾಗಿತ್ತು. ನಕ್ಸಲ್ ಚಳುವಳಿಯನ್ನು ಹತ್ತಿಕ್ಕಲು ಸರಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದರೂ ಅವೆಲ್ಲಾ ನಾಟಕಗಳಷ್ಟೇ. ಕಾಡಿನಲ್ಲಿರುವ ಮಲೆಕುಡಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಸರಕಾರ ನಕ್ಸಲ್ ಗುಮ್ಮನನ್ನು ಬಳಸುತ್ತಿದೆ. ಕಾಡಿನ ಮೂಲನಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು ಎಂಬ ಸುಪ್ರಿಂ ಕೋರ್ಟು ಆದೇಶ ಹೊರಡಿಸಿದ್ದ ಹಿನ್ನಲೆಯಲ್ಲಿ ಸರಕಾರ ಈ ತಂತ್ರಗಾರಿಕೆಯ ಮೊರೆ ಹೋಗಿದೆ. ಕುತ್ಲೂರು ಗ್ರಾಮಸ್ಥರು ಹೊರಗಿನ ಸಮಾಜದೊಂದಿಗೆ ಗುರುತಿಸಿಕೊಂಡರೆ ಅವರನ್ನು ನಕ್ಸಲ್ ಬೆಂಬಲಿಗರೆಂದು ಹಣೆಪಟ್ಟಿ ಕಟ್ಟೋದು ಕಷ್ಟ. ನಕ್ಸಲ್ ಹಣೆಪಟ್ಟಿ ಕಟ್ಟಿ ಕಿರುಕುಳ ನೀಡದೇ ಇದ್ದರೆ ಒಕ್ಕಲೆಬ್ಬಿಸೋದಾದ್ರೂ ಹೇಗೆ ? ಆದರೆ ಈಗ ವಿಠಲ ಮಲೆಕುಡಿಯ, ಮುನೀರ್ ಕಾಟಿಪಳ್ಳ ಸಂಪರ್ಕದಿಂದಾಗಿ ಬಹಿರಂಗ ಹೋರಾಟದ ಸಂಪರ್ಕ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಎರಡು ವರ್ಷದ ಹಿಂದೆ ಮಾರ್ಚ್​ 2 ರಂದು ವಿಠಲ ಮಲೆಕುಡಿಯ ಮತ್ತು ಆತನ ತಂದೆಯನ್ನು ಪೊಲೀಸರು ನಕ್ಸಲರೆಂದು ಬಂಧಿಸುತ್ತಾರೆ. ದೇಶದ್ರೋಹದ ಕಾಯ್ದೆಯಡಿ ವಿಠಲ್ ಜೈಲು ಸೇರುತ್ತಾನೆ. ಒಬ್ಬ ನಕ್ಸಲ್ ಎಂದು ಬಂಧಿತ ವ್ಯಕ್ತಿ ವಿಠಲ್ ‌ನಿಂದ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳೆಂದರೆ ಚಾಹ ಪುಡಿ, ಸಕ್ಕರೆ ಮತ್ತು ಆಟದ ಬೆನಾಕ್ಯೂಲರ್ ! ನಂತರ ಡಿವೈಎಫ್ಐ ಮತ್ತು ಎಡಪಂಥೀಯ ಸಂಘಟನೆಗಳು ವಿಠಲ್ ಮಲೆಕುಡಿಯ ಪರವಾಗಿ ದೊಡ್ಡದಾದ ಹೋರಾಟವೇ ನಡೆದಿರುವುದು ಈಗ ಇತಿಹಾಸ. ನಂತರ ವಿಠಲ್ ಮಲೆಕುಡಿಯ ಮತ್ತು ಆತನ ತಂದೆ ಜುಲೈ 5 ರಂದು ಬಿಡುಗಡೆಯಾಗುತ್ತಾರೆ. ಇದೊಂದು ದೊಡ್ಡ ಕಥೆ.

ಈಗ ವಿಠಲ ಮಲೆಕುಡಿಯ ಪತ್ರಿಕೋಧ್ಯಮ ಪದವಿಯನ್ನು ಪೂರ್ಣಗೊಳಿಸಿದ್ದಾನೆ. ಪ್ರಖ್ಯಾತ ಪತ್ರಿಕೆಯಲ್ಲಿ ಇಂಟರ್ನ್ ಶಿಪ್ ಮುಗಿಸಿದ್ದಾನೆ. ಅವೆಲ್ಲಕ್ಕಿಂತ ಮುಖ್ಯವಾಗಿ ನಾಲ್ಕು Vithal-malekudiyaತಿಂಗಳು ಜೈಲಿನ ಇಂಟರ್ನ್ ಶಿಪ್ ಮುಗಿಸಿದ್ದಾನೆ. ಎಲ್ಲಾ ಪತ್ರಕರ್ತರಿಗೂ ಜೈಲಿನಲ್ಲಿ ಇಂಟರ್ನ್ ಶಿಪ್ ಮಾಡೋ ಅವಕಾಶ ಸಿಗೋದಿಲ್ಲ. ಜೈಲಿನಲ್ಲಿ ಇಂಟರ್ನ್ ಶಿಪ್ ಮಾಡಿದ ಪತ್ರಕರ್ತ ಹೆಚ್ಚು ಹೆಚ್ಚು ಮಾನವ ಹಕ್ಕಿನ ಪರವಾಗಿ, ಜನಪರವಾಗಿ, ಬದುಕಿನ ಬಗ್ಗೆ, ವ್ಯವಸ್ಥೆಯ ಬಗ್ಗೆ ಬರೆಯಬಲ್ಲ ಎಂದು ನನ್ನ ಅನಿಸಿಕೆ. ಮೊನ್ನೆ ಆಗಸ್ಟ್ 15 ರಂದು ಪ್ರಥಮ ಬಾರಿಗೆ ದಟ್ಟ ಕಾಡಿನಲ್ಲಿ ವಾಸವಾಗಿರುವ ಮಲೆಕುಡಿಯ ಆದಿವಾಸಿಗಳು ವಿಠಲ ಮಲೆಕುಡಿಯನ ಪ್ರೇರಣೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡರು. ನಕ್ಸಲರು ನಡೆದಾಡಿದ ಕಾಡಿನ ರೆಡ್ ಕಾರಿಡಾರಿನಲ್ಲಿ ರಾಷ್ಟ್ರಧ್ವಜದ ಹೂಗಳು ಬಿದ್ದಿದ್ದವು. ಅದು ಪ್ರಜಾಸತ್ತಾತ್ಮಕ ಹೋರಾಟದ ಹೂಗಳು.