Daily Archives: August 17, 2014

ಕೆಟಿ ಶಿವಪ್ರಸಾದ್ : ಕಾಡುವ ಚಿತ್ರಗಳು

– ಪ.ಸ. ಕುಮಾರ್

[ಖ್ಯಾತ ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಇತ್ತೀಚೆಗೆ “ವರ್ಣಶಿಲ್ಪಿ ವೆಂಕಟಪ್ಪ ಕಲಾ ಪ್ರಶಸ್ತಿ”ಗೆ ಭಾಜನರಾಗಿದ್ದು ಅವರ ಕುರಿತು ಇನ್ನೊಬ್ಬ ಖ್ಯಾತ ಕಲಾವಿದ ಪ.ಸ.ಕುಮಾರ ಬರೆದಿರುವ ಒಂದಿಷ್ಟು ಮಾತುಗಳು.]

ನದಿ ದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ ಕಾಲುಗಳಿಗೆ ಮೀನ ಮರಿಗಳ ಹಿಂಡು ಮುತ್ತಿಡುವ ಕ್ರಿಯೆಗೆ ಮೈ ಒಂದು ಕ್ಷಣ ಜುಂ ಎಂದು ಮನಪುಲಕಗೊಳ್ಳುತ್ತದೆ. ಮೈಮನಸ್ಸಷ್ಟೇ ಅಲ್ಲ ಎದೆಗೂಡು ಹೊಟ್ಟೆಯೊಳಗೆಲ್ಲಾ ನುಣ್ಣನೆಯ ಮೀನ ಮರಿಗಳ ಸಾಲು ಹರಿದಾಡಿದಂತಾಗಿ ಜೀವ ಹಾಯೆನಿಸುತ್ತದೆ.

ಗಂಭೀರವಾಗಿ ಒಪ್ಪಾಗಿ ಟುಸ್ . . . ಟುಸ್ ಎಂದು ಸಣ್ಣಗೆ ಹೊಗೆ ಬಿಡುತ್ತಾ ನಿರುಪದ್ರವಿಯಂತೆ ರೈಲ್ವೆ ನಿಲ್ದಾಣದಲ್ಲಿ ನಿಂತಿರುವ ಹೊಗೆ ಬಂಡಿಯ ಹತ್ತಿರ ನಿಲ್ಲಿ. ಕರಿ ಇದ್ದಿಲಿನ ಹೊಗೆಯ ಕಮಟು ಘಾಟಿನ ನಾಟಿ ವಾಸನೆಯ ಪರಿಚಯ ಮಾಡಿಸುತ್ತದೆ. ಕ್ಷಣ ಕಳೆದಂತೆ ಅದರ ಒಡಲ ಬೆಂಕಿಯ ಶಾಖ ನಿಮ್ಮನ್ನು ಅವರಿಗೆ ತತ್ತರಿಸುವಂತೆ ಮಾಡುತ್ತದೆ.

ಈ ರೀತಿ ಒಂದರಲ್ಲಿ ತಂಗಾಳಿ ಒಡಲೊಳಗೆ ನುಗ್ಗಿದಂತಹ ಮುದ ಅನುಭವವಾದರೆ ಚರ್ಮ ಚುರುಮುರು ಕಿರ್ರೋ ಎನ್ನುವ ಅನುಭವ ಮತ್ತೊಂದರಲ್ಲಿ . kt_shivaprasad-art-familyಈ ತದ್ವಿರುದ್ದ ಅನುಭವಗಳನ್ನು ಆಗಿಂದ್ದಾಗ್ಗೆ ನಮಗೆ ನೀಡಬಲ್ಲ ಏಕೈಕ ವ್ಯಕ್ತಿಯೆಂದರೆ ಶಿವಪ್ರಸಾದ್ ಕೆ.ಟಿ. ಅಲಿಯಾಸ್ ಶಿವ. “ಶಿವ”. ಈ ಎರಡಕ್ಷರದ ಹಸ್ತಾಕ್ಷರವನ್ನು ಒಂದು ಬೃಹತ್ ಕಲಾಕೃತಿಯ ಕೆಳಭಾಗದಲ್ಲಿ ನಾನು ಗಮನಿಸಿ ಎರಡೂವರೆ ದಶಕ ಕಳೆದಿದೆ. ಆದರೆ ಆಕೃತಿ ನೀಡಿದ ಷಾಕ್ ಮಾತ್ರ ಇನ್ನೂ ನನ್ನಲ್ಲಿ ಹಸಿಯಾಗಿಯೇ ಇದೆ. ಸ್ಟಿಲ್ ಲೈಫ್, ಪೋರ್ಟ್‌ರೈಟ್, ಲ್ಯಾಂಡ್ ಸ್ಕೇಪ್, ಕಾಂಪೋಸಿಷನ್ ಇತ್ಯಾದಿ ಕೆಲವೇ ಪದಗಳ ಲಿಮಿಟೆಡ್ ಬೌಂಡರಿಯೊಳಗೆ ಬೆಳೆದ ನನ್ನ ಜ್ಝಾನಕ್ಕೆ ಆಕೃತಿಯ “Opening Ceremony of Bharati Factory” ಶೀರ್ಷಿಕೆ ಕನ್ನಡದಲ್ಲಿದ್ದ ಹಸ್ತಾಕ್ಷರ ವಿಸ್ಮಯ ಜೊತೆಗೆ ಆ ಕೃತಿಕಾರನ ಬಗ್ಗೆ ಕೂತೂಹಲ ಮೂಡಿಸಿತ್ತು. ಶಿವ ಎಂಬ ವ್ಯಕ್ತಿಯ ಬಗ್ಗೆ ವಿವರ ಸಂಗ್ರಹಿಸತೊಡಗಿದೆ. ವ್ಯಕ್ತಿ ಹಾಸನದವರು, ಬಾಂಬೆ ಜೆ.ಜೆ.ಕಲಾಶಾಲೆಯ ಪ್ರಾಡಕ್ಟ್ ಎಂದು ತಿಳಿಯಿತು. ಕರ್ನಾಟಕದ ಕಲಾವಿದರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಪರಿಚಯಿಸಿಕೊಳ್ಳುತ್ತಿದ್ದ ನನ್ನ ಪಟ್ಟಿಯಲ್ಲಿ ಈ ಹೆಸರೂ ಸೇರ್ಪಡೆಯಾಯಿತು.

ನಾನು ಮತ್ತು ಸಿ.ಚಂದ್ರಶೇಖರ್ ಕರ್ನಾಟಕ ಕಲಾಯಾತ್ರೆ ಕಾರ್ಯಕ್ರಮವನ್ನು ರೂಪಿಸಿದಾಗ ಶಿವ ನಮ್ಮ ತಂಡದಲ್ಲಿ ಬಂದರು. ಅಲ್ಲಿಂದ ಪ್ರಾರಂಭವಾದ ಗೆಳೆತನ ಇಂದಿಗೂ ಹಸಿರಾಗೇ ಉಳಿದಿದೆ. ಹಸಿರಾಗಿದೆ ಅಂದರೆ ಜೀವಂತವಾಗಿದೆ ಅಂತ ತಾನೇ? ಜೀವಂತಿಕೆ ಎಂದರೆ ಭಿನ್ನಾಭಿಪ್ರಾಯ, ಮುನಿಸು, ಹೊಗಳಿಕೆ, ತೆಗಳಿಕೆ, ಪಿನ್ನಿಂಗ್ ಎಲ್ಲಾ ಸೇರಿಕೊಂಡಿದೆ.

ಕಲಾಯಾತ್ರೆಯ ಪ್ರದರ್ಶನದಲ್ಲಿ ಶಿವನ ಒಂದು ಚಿತ್ರವಿತ್ತು ಅದು ನಗ್ನ ಪುರುಷನ ಚಿತ್ರ. ಆ ಚಿತ್ರದಲ್ಲಿ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಧಿಕ್ಕರಿಸಿ ತನ್ನ ಲೋಕಕ್ಕೆ ತಾನೇ ಒಡೆಯ ನೆಂಬ ಗತ್ತಿನಿಂದ ಕೂತಿದ್ದ ಆ ಪುರುಷ ಯಾರನ್ನೂ ಲೆಕ್ಕಿಸದೆ ರಸ್ತೆಯಲ್ಲಿ ನಿಂತಿದ್ದ ಗೂಳಿಯಂತಿದ್ದ ಇದು ಶಿವನ ಮನಃಸ್ಥಿತಿ ಕೂಡ.

ಜಾತಿವ್ಯವಸ್ಥೆಯ ವಿರುದ್ಧ ಸಿಡಿದೇಳೂವ ಈತನ ಮನಸ್ಸು ಡಾಂಭಿಕ ಲೌಕಿಕ ರೀತಿ ನೀತಿಗಳಿಗೆ ಧಿಕ್ಕರಿಸುತ್ತದೆ. ಈತ ಹೆಜ್ಜೆ ಇಟ್ಟ ಕಡೆ ದಿಕ್ಕು ಮೂಡತ್ತದೆ.

ಶ್ರೀಮಂತಿಕೆಯ ನೆರಳ ತೊರೆದು ಉರಿವ ಬೆಂಕಿಯನ್ನು ಪ್ರೀತಿಸಿದ್ದು ಇದೇ ಕಾರಣಕ್ಕೆ ಬಾಳ್ಳುಪೇಟೆಯ ದಲಿತರೊಡನೆ ರೈತರೊಡನೆ ಬದುಕಿ ಹದ ಹೊಂದಿದ ಅವನ ಮನಸ್ಸು ರೇಖೆಗಳಲ್ಲಿ ಹರಿಯುತ್ತದೆ. ಇದರಿಂದಾಗಿಯೇ ಈತನ ಕೈಯಲ್ಲಿ ಮೂಡುವ ರೇಖೆಗಳಿಗೆ ಲಾವಣ್ಯವಿರುವುದಿಲ್ಲ. ಒರಟುತನವಿರುತ್ತದೆ. ಕಾಯಿಸಿದ ತಮಟೆಯ ನಾದವಿರುತ್ತದೆ. ಜಾನಪದ ಸೂಕ್ಷ್ಮತೆಯ ನವಿರಿರುತ್ತದೆ. ನೋಡುಗನ ಎದೆಗೆ ಜಾಡಿಸಿ ಒದೆಯುತ್ತದೆ. ಇಲ್ಲಿ . . .ಇಲ್ಲಿ. . . ನಿನ್ನೊಡನೆ ದಲಿತನಿದ್ದಾನೆ. ಅವನ ಕಣ್ಣಲ್ಲಿರುವ ನೋವ ನೋಡು , ಸೇಡು ನೋಡು ಅವನ ಎಣ್ಣೆ ಮುಖದಲ್ಲಿ ಮಿಂಚುವ ಸಾವಿರ ಸೂರ್ಯನ ನೋಡು ಎಂದು ಕೆಣಕುತ್ತದೆ. ಶಿವನನ್ನು ಕಾಡಿದ ವ್ಯಕ್ತಿಗಳ ಚಿತ್ರಗಳಲ್ಲಿ ಆತ್ಮವಿರುತ್ತದೆ.

ಒಂದು ಹೂವಿನ ಸೌಂದರ್ಯ, ಮಗುವಿನ ಕಣ್ಣುಗಳಲ್ಲಿರುವ ಮುಗ್ಧತೆಯನ್ನು ಅರಿಯ ಬೇಕಾದರೆ ಯಾವ art history ಯನ್ನು ಓದಬೇಕಾಗಿಲ್ಲ. ಯಾವ aesthetic ಪಂಡಿತನಾಗಬೇಕಾಗಿಲ್ಲ. ನೋಡೋ ಕಣ್ಣು ಮಿಡಿಯೋ ಹೃದಯ ಎರಡೂ ಸರಿಯಾಗಿದ್ರೆ ಸಾಕು ತನ್ನಷ್ಟಕ್ಕೆ ತಾನೇ ಅರ್ಥವಾಗುತ್ತೆ ಎಂದು ವೈ.ಎನ್.ಕೆ. ಹೇಳಿದ ಮಾತಿನ ಮರ್ಮ ತಿಳಿಯ ಬೇಕಾದರೆ ಶಿವ ರಚಿಸಿದ ಫಾತೀಮಾ ಮತ್ತು ಮಗು ಚಿತ್ರದ ಎದುರು ನಿಲ್ಲಬೇಕಾಗುತ್ತದೆ. ಗರ್ಭಿಣಿ ಫಾತೀಮಾಳ ಕನ್ಣುಗಳನ್ನು ನೋಡಬೇಕು ಅವಳ ಸಆಂಸ್ಕೃತಿಕ ಜೀವನದ ಚಹರೆ ಪ್ರತ್ಯಕ್ಷವಾಗುತ್ತದೆ. ಮೂಲಭೂತವಾದೀತನದ ಸೆಳಕು, ಬಡತನದ ಕ್ರೌರ್ಯ ಇದರ ಮಧ್ಯೆ ಅನಿವಾರ್ಯದ ಬದುಕು , ಮಿಂಚುವ ತಾಯ್ತನ ಎಲ್ಲವನ್ನು ಒಟ್ಟಿಗೆ ಗಂಭೀರವಾಗಿ ಕಟ್ಟಿಕೊಡುವ ಕೃತಿ ಅದರಲ್ಲಿ ಫಾತೀಮಾಳ ಪಕ್ಕ ನಿಂತ ಹುಡುಗನ ಕಣ್ಣುಗಳ ಮುಗ್ಧತೆ ದಂಗು ಬಡಿಸುತ್ತದೆ. ಜಗತ್ತಿನ ಬೆರಗಿಗೆ ಬೆರಗುಗೊಂಡು ಅರಳಿದ ಹೂವ ಪಕಳೆಗಳಂತಿದೆ. ಆ ಕಣ್ಣುಗಳ ಕಡೆಗೆ ಬೆರಳು ಮಾಡಿ ನಾನು ಹೇಳಿದ್ದೆ. ‘ಈ Portion ತುಂಬಾ Sensitive ಆಗಿದೆ ಕಣೋ.’

ಅವನ ಕಣ್ಣುಗಳು ಅರಳಿತು. ‘ಲೇ ನಾಲ್ಕು ದಿನ ತಗೊಂಡಿದ್ದೀನೋ ದಿನಾ ಕಣ್ಣುಗಳನ್ನು ಬರೆಯೋದು ಅಳಿಸೋದು ಬೇಜಾರಾಗೋಯ್ತು. ಕೋಪ ಬಂದು ಕೈಯ್ಯಲಿದ್ದ ಬಟ್ಟೆಯನ್ನು ಜೋರಾಗಿ ಆ ರೇಖೆ ಮೇಲೆ ಎಸೆದು ಹೊರಗಡೆ ಬಂದು ಸಿಗರೇಟ್ ಸೇದ್ತಾ ಕುಳಿತುಕೊಂಡೆ. ಯಾಕೋ ಗೊತ್ತಿಲ್ಲ. ಕಣ್ಣುಗಳ ತುಂಬಾ ನೀರ್ ತುಂಬಿಕೊಂಡ್ ಬಿಡ್ತು ಕಣೋ . . . ಇವತ್ತಿಗೆ ಸಾಕು ಅಂತ ಅನಿಸಿ ಒಳಗೆ ಬಂದ್ ಕ್ಯಾನ್‌ವಾಸ್‌ನ ನೋಡ್ದೆ… ನನ್ನ ಕಣ್ಣನ್ನ ನಂಬಕಾಗಿಲ್ಲ. ನಾನು ಬಟ್ಟೆ ಎಸೆದ ರಭಸಕ್ಕೆ ಆ ರೇಖೆಗಳು smudge ಆಗಿ ಆ ಕಣ್ಣುಗಳಲ್ಲಿ innocence ಬಂದ್ ಬಿಟ್ಟಿತ್ ಕಣೋ’ ಎಂದು ಹೇಳುವಾಗ ktshivprasad-artಅವನ ಮುಖ ಕೆಂಪು ಕೆಂಪಾಗಿತ್ತು. ಕಣ್ಣಂಚಿನಲ್ಲಿ ನೀರಿನ ಸಣ್ಣ ರೇಖೆ ಮಿಂಚುತಿತ್ತು. ಕೃತಿ ರಚನಾ ಸಮಯದಲ್ಲಿನ ಕಾಳಜಿ, ಮನಸ್ಸಿನ ಆರ್ದ್ರತೆ ಮೈ ನರನರಗಳು ಭಾವನೆಗಳನ್ನು ಅಪೋಷಿಸಿರುವ ರೀತಿಯನ್ನು ಅವನ ಕೃತಿಗಳು ಪರಿಚಯಿಸುತ್ತವೆ. ಎಷ್ಟು ಕಲಾವಿದರಿಗೆ ಒಲಿದಿದೆ ಈ ಜೀವರಸ ಹರಿಸುವ ಸಿದ್ಧಿ? ಈ ರೀತಿಯ ತಲ್ಲೀನತೆ ಮುಗ್ಧತೆ ಇಲ್ಲದಿದ್ದಲ್ಲಿ ವಾಷ್ ಬೇಸನ್ನಿನ ಮೇಲಿನ ಕನ್ನಡಿಯಲ್ಲಿ ಆಕಾಶ ಆವರಿಸಿ ಕೊಳ್ಳುತ್ತಾ ತೊಗಲು ಗೊಂಬೆಗಳು ತಲೆಕೆಳಕಾಗಿ ಇಷ್ಟ ಬಂದಂತೆ ಕ್ಯಾನ್ ವಾಸ್ ತುಂಬಾ ಓಡಾಡುತ್ತಾ? ಓಡಾಡಲಿ ಬಿಡಿ ಎಷ್ಟಾದರೂ ಅದು ಮುಕ್ತತೆಯನ್ನು ಆರಾಧಿಸುವ ಕೃತಿಕಾರನ ಕೂಸುಗಳಲ್ಲವೆ?

ಶಿವನ ಮೇಲೆ ದಲಿತರು ರೈತರು, ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿಯವರ ಪ್ರಭಾವ ಸಾಮಾಜಿಕ ಪ್ರಜ್ಜೆ, ತರ್ಕ, ಜಾಗೃತ ಅವಸ್ಥೆಯನ್ನು ಮೂಡಿಸಿದ್ದರೆ ವಿದ್ಯಾರ್ಥಿ ಜೀವನ ಕಲಿಸಿದ ಪಾಠ ಮಾತ್ರ ಬೇರೆ. ಸಟ್ಟಾ ಸಾರಾಯಿ , ಜೂಜು. ಗಾಂಜಾ, ಗೂಂಡಾಗಿರಿ, ಅಫೀಮುಗಳ ಒಡನಾಟ ಅಸಲೀ ಜೀವನವನ್ನು ಪರಿಚಯಿಸಿದೆ. ಎಲ್ಲಾ ರೀತಿಯ ಪಟ್ಟುಗಳನ್ನು ಬಾಂಬೆ ಕಲಿಸಿದೆ. ಅದ್ದರಿಂದಲೇ ವ್ಯವಹಾರದಲ್ಲಿ ಚತುರತೆ, ತರ್ಕಬದ್ಧವಾದ ಮಾತು, ಕ್ಷಣದಲ್ಲಿ ಎದುರು ಕೂತವನ ಬಾಯಿಮುಚ್ಚಿಸುವ ನಾಜೂಕುತನ ಪಡೆಯಬೇಕೆಂಬುದನ್ನು ತನ್ನ ಪಾದದ ಬಳಗೇ ಬರುವಂತೆ ಮಾಡುವ ಮ್ಯಾಜಿಕ್ ಅವನ ಬೆಚ್ಚನೆಯ ಹೃದಯದೊಳಗೀ ನೇತಾಡುವ ಕಾಲೇಳೆಯುವ ಕುಶಲತೆಯಿದೆ.

ಅನ್ಯಾಯದ ವಿರುದ್ಧ ಸಿಡಿದೇಳುವ ಮಾನವೀಯತೆಗೆ ಮರಗುವ ಈತನ ಮನಸ್ಸು ಲಾಬಿ ಮಾಡಬೇಕಾದ ಸಂದರ್ಭದಲ್ಲಿ ಚತುರತೆಯಿಂದ ವರ್ತಿಸುತ್ತದೆ. ರೂಪಿಸುವ ತಂತ್ರ ಇಡುವ ಹೆಜ್ಜೆ ನೀಡುವ ಹೇಳಿಕೆಗಳು ಅಚಾರ್ತುಯಕ್ಕೆ ನಿದರ್ಶನ. ಇಷ್ಟೆಲ್ಲಾ ಯಾಕೆ ಹೇಳುತ್ತೇನೆಂದರೆ ಶಿವ ಎಂದೂ ಮಹಾತ್ಮನಂತೆ, ತ್ಯಾಗಿಯಂತೆ ಪೋಸು ಕೊಡುವುದಿಲ್ಲ. ಮಹಾತ್ಮನಾಗುವ ಹುಚ್ಚೂ ಆತನಿಗಿಲ್ಲ. ಪಾರದರ್ಶಕ ಪದರಗಳಲ್ಲಿ ಆತನ ಎಲ್ಲಾ ಗುಣಗಳು ಸ್ಪಷ್ಟವಾಗಿ ಕಾಣುತ್ತದೆ. ಇಷ್ಟೆಲ್ಲಾ ಗುಣಗಳೊಂದಿಗೆ ಅಳವಾದ ಅಧ್ಯಯನದ ಗಟ್ಟಿ ತಳಪಾಯ ಇರುವುದರಿಂದಲೇ ಈತನ ಗುಟುರಿಗೆ ಮೂಲಭೂತವಾದಿಗಳ ತೊಡೆ ನಡುಗುತ್ತದೆ. ಸಮಾಜ ಚಿಂತಕರು ಈತನ ವಾದಕ್ಕೆ ತಲೆದೂಗುತ್ತಾರೆ. ಕಲಾಕ್ಷೇತ್ರದಲ್ಲಿ ಈತನದು ಗಟ್ಟಿಗಳು, ಅದುದರಿಂದಲೇ ಆತ ಪ್ರೇರಕ ಪ್ರಚೋದಕ ಕ್ರಿಯಾತ್ಮಕತೆಯೊಂದಿಗೆ ವಿಶಿಷ್ಟ ಸಂವೇದನೆಯ ಕಲಾವಿದರಾಗಿ ಗುರುತಿಸಲ್ಪಟ್ಟಿರುವುದು.

ಸಂಬಂಧ ಅನುಬಂಧಗಳಿಗೆ ನಮ್ಮ ನಿಮ್ಮಂತೆ ಅಂಟಿಕೊಳ್ಳುವ ಅಭ್ಯಾಸವಿಲ್ಲ. ಶಿವನಿಗೆ ಕೂತ ಗೂಳಿ ಎದ್ದು ನಿಂತು ಮೈಯ್ಯ ಮೇಲಿನ ಧೂಳು ಕೊಡವುದಷ್ಟೇ dalit-entrepreneurship-10ಸಲೀಸಾಗಿ ಸಂಬಂಧಗಳನ್ನು ಕೊಡವಿಬಿಡುತ್ತಾನೆ. ಆದ್ದರಿಂದಲೇ ಪರಿಚಯಸ್ಥರು ಗೆಳೆಯರಾಗುವಂತೆ, ಗೆಳೆಯರೂ ಪರಿಚಯಸ್ಥರಾಗಿಯೇ ಉಳಿದುಬಿಡುತ್ತಾರೆ. ಹೆಣ್ಣುಗಳ ವಿಚಾರದಲ್ಲೂ ಅಷ್ಟೆ. ಪರಿಚಯಸ್ಥರು ಗೆಳತಿಯರಾಗುತ್ತಾರೆ, ಕೆಲವರು ಬಾಳ ಸಂಗಾತಿಗಳಾಗುತ್ತಾರೆ. ಮತ್ತೆ ಅವರು ಗೆಳತಿಯರಾಗಿ ಪರಿಚಯಸ್ಥರ ಸ್ಥಾನಕ್ಕೆ ಬಂದು ನಿಂತುಬಿಡುತ್ತಾರೆ. ವಿಚ್ಛೇದನ ಪಡೆದ ಕೆಲವೇ ತಿಂಗಳುಗಳು ಕಳೆದಿತ್ತು. ಮಾರ್ಥ ಮತ್ತು ಶಿವ ಕಲಾ ಪ್ರದರ್ಶನದಲ್ಲಿ ಹರಟೆ ಹೊಡೆಯುತ್ತಾ ನಿಂತಿದ್ದನ್ನು ನೋಡಿದ ಕಲಾವಿದೆಯೊಬ್ಬಳು ‘ನೀವು ಡೈವೋರ್ಸ್ ಮಾಡಿದ್ದೀರಾ ಅಂಥಾ ಕೇಳಿದ್ದು ಸುಳ್ಳಾ?’ ಎಂದು ಕಣ್ಣಗಲಿಸಿ ಕೇಳಿದ್ದಳು.

‘ನಾವಿಬ್ರು ಒಟ್ಟಾಗಿ ಇರಕ್ಕಾಗಲ್ಲ ಅನ್ಸ್ತು ಅದಕ್ಕೆ ಡೈವೋರ್ಸ್ ಮಾಡಿದ್ವಿ. ನಾವು simple human beings ರ್ರೀ, ಈಗ friends ಆಗಿದ್ದೀವಿ ಅದಕ್ಕೆ ಹರಟೆ ಹೋಡಿತಾ ಇದ್ದೀವಿ’ ಎಂದು ಗಂಭೀರವಾಗಿ ನಕ್ಕಿದ್ದನ್ನು ಕಂಡ ಕಲಾವಿದೆ ಕಕ್ಕಾಬಿಕ್ಕಿಯಾಗಿದ್ದಳು. ಇದು ಶಿವ ಹಾಕುವ ಪಟ್ಟಿನ ಒಂದು ಸ್ಯಾಂಪಲ್ ಮಾತ್ರ. ಪಟ್ಟು ಚೌಕಟ್ಟು ಇಲ್ಲದ ಜೀವನ ಎಲ್ಲಾದ್ರೂ ಇರುತ್ತಾ ಚೌಕಟ್ಟಿನಿಂದ ಸರಿಯೋದು ಮಾತ್ರ ಜಾಣರ ಲಕ್ಷಣ.

ಇಷ್ಟೆಲ್ಲಾ multi ಲಕ್ಷಣಗಳ ಆಗರವಾಗಿರುವ ಶಿವ ಪರಿಚಯಸ್ಥರಿಗೆ ಒಂಟಿ ಮುನಿ. ಈ ಮುನಿಗೆ ಅಂಟಿಕೊಂಡವರಿಗಿಂತ ದೂರ ನಿಂತವರೇ ಹೆಚ್ಚು. ಆಶ್ಚರ್ಯದ ಸಂಗತಿಯೆಂದರೆ ದೂರ ನಿಂತವರ ಮನದಲ್ಲೂ ಶಿವ ಗಟ್ಟಿಯಾಗಿ ಬೇರುಬಿಟ್ಟು ನಿಂತಿರುತ್ತಾನೆ. ದೂರನಿಂತವರೂ ತನ್ನನ್ನು ಪ್ರೀತಿಸುವಂತೆ ನೆನೆಯುವಂತೆ ಕ್ಷಮಿಸಿಬಿಡುವಂತೆ ಮಾಡುವಲ್ಲಿ ಸಫಲನಾಗುತ್ತಾನೆ.

ಇದೆಲ್ಲಾ ಏನೇ ಇರಲಿ ರಾಷ್ಟ್ರದ ಕಲಾಕ್ಷೇತ್ರದಲ್ಲಿ ಒಬ್ಬ ಧೀಮಂತ ಕಲಾವಿದ ಎನ್ನುವುದರಲ್ಲಿ ಯಾರಿಗೂ ಅನುಮಾನ ಕಾಡಬೇಕಿಲ್ಲ.

ಚಿಂತಕ ಅಧ್ಯಯನಶೀಲ ಹೋರಾಟಗಾರನಾಗಿರುವುದರ ಜೊತೆಗೆ ನಿರಂತರ ಪ್ರಯೋಗಶೀಲತೆಯನ್ನು ಕಾಪಾಡಿಕೊಂಡಿರುವ ಶಿವ Atheist ನಿಂದ Buddhisy ನಾಗುವವರೆಗೆ ನಡೆದ ಹಾದಿ ಮಾತ್ರ ರೋಚಕ. ಈತನ ಚಿಂತನೆಗಳನ್ನು ಆಸಕ್ತಿಗಳನ್ನು ಹಂಚಿಕೊಂಡ ಕೆಲವೇ ಕಲಾವಿದರಲ್ಲಿ ನಾನು ಒಬ್ಬ ಎನ್ನುವುದು ಮಾತ್ರ ನನಗೆ ಹೆಮ್ಮೆಯೆನಿಸಿದೆ.