Daily Archives: August 1, 2014

ವರ್ತಮಾನದ ಕಥೆಗಳು: ಪುಸ್ತಕ ಸಮೀಕ್ಷೆ

[ವರ್ತಮಾನ.ಕಾಮ್ ನಡೆಸಿದ “ಗಾಂಧಿ ಜಯಂತಿ ಕಥಾಸ್ಪರ್ಧೆ – 2013″ಕ್ಕೆ ಬಂದ ಹಲವು ಕತೆಗಳನ್ನು ಸೇರಿಸಿ “ವರ್ತಮಾನದ ಕಥೆಗಳು” ಸಂಕಲನವಾಗಿ ಪ್ರಕಟಿಸಿರುವುದು ತಮಗೆಲ್ಲ ತಿಳಿದಿದೆ. ಇದು ಅದೇ ಪುಸ್ತಕದ ಬಗೆಗಿನ ವಿಮರ್ಶೆ-ಸಮೀಕ್ಷೆ. ರವಿ]

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಆಧುನಿಕ ಕನ್ನಡ ಸಂದರ್ಭದ ಅಭಿವ್ಯಕ್ತಿ ಪ್ರಕಾರಗಳಲ್ಲಿ ಅತ್ಯಂತ ಪರಿಣಾಮಕಾರಿ ಮಾಧ್ಯಮಗಳಲ್ಲಿ ಸಣ್ಣಕಥೆಯೂ ಒಂದು. ಈ ಮಾದರಿಯ ಕಥೆಗಳನ್ನು ಕನ್ನಡದಲ್ಲಿ ಯಾರು ಮೊದಲು ಬರೆದರು, ಕನ್ನಡದಲ್ಲಿ ಈ ಪ್ರಕಾರದಲ್ಲಿ ಸಶಕ್ತವಾಗಿ ಬರೆದವರು ಮತ್ತು ಬರೆಯುತ್ತಿರುವವರು ಯಾರು ಎನ್ನುವ ಖ್ಯಾತನಾಮರ ಚರ್ಚೆಗಳನ್ನು ಕನ್ನಡ ವಿಮರ್ಶಾಜಗತ್ತು ಸಾಕಷ್ಟು ಬಾರಿ ಚರ್ಚಿಸಿದೆ ಮತ್ತು ತನ್ನದೇ ಆದ ತೀರ್ಮಾನಗಳನ್ನೂ ದಾಖಲಿಸಿದೆ. ಆದರೆ ಈ ಸಿದ್ಧಪ್ರಸಿದ್ಧರು ಹಾಕಿಕೊಟ್ಟ ಸಣ್ಣಕಥೆ ಪ್ರಕಾರದ ಚೌಕಟ್ಟಿನ ಗಂಭೀರ ಅಭ್ಯಾಸದ ಅಗತ್ಯವಿಲ್ಲದೆಯೂ, ಕಥೆಹೇಳುವ ತುಡಿತದಿಂದಾಗಿ ಕvartamaanada-kathegalu-2013-coverನ್ನಡದಲ್ಲಿ ಮತ್ತೆ ಮತ್ತೆ ಕಥೆಗಳು ಹುಟ್ಟುತ್ತಲೇ ಇವೆ. ಹೀಗೆ ಹುಟ್ಟುತ್ತಿರುವ ಬಹುಮಟ್ಟಿನ ಕಥೆಗಳು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳದ ಹೊರವರ್ತುಲದಿಂದಲೂ ಬರುತ್ತಿವೆ. ಕಥೆ ಹೇಳುವ ತುರ್ತಿನಲ್ಲಿ ಹುಟ್ಟುತ್ತಿರುವ ಈ ಕಥೆಗಳು ಅನೇಕ ವೇಳೆ ಕಲೆಗಾರಿಕೆಗಿಂತ ಎಲ್ಲವನ್ನೂ ಹೇಳಿಬಿಡುವ ಹಪಾಹಪಿಯಲ್ಲಿ ವಾಚ್ಯವಾಗುವುದನ್ನು ತಪ್ಪಿಸಿಕೊಳ್ಳಲಾರದ ಸಂಕಟವನ್ನು ಅನುಭವಿಸುವುದಿದೆ. ಆದರೆ ಈ ಕಥೆಗಳನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಅವುಗಳಲ್ಲಿ ತಮ್ಮ ಕಾಲದ ಆಗುಹೋಗುಗಳ ಬಗೆಗೆ ತಮ್ಮದೇ ಆದ ತಾತ್ವಿಕ ಹಾಗೂ ವೈಚಾರಿಕ ಖಚಿತತೆಯನ್ನೂ ತೋರಬಲ್ಲ ಗುಣಗಳಿವೆ. ಗಾಂಧಿ ಕಥಾಸ್ಪರ್ಧೆಯ ನೆವದಲ್ಲಿ ಟಿ.ರಾಮಲಿಂಗಪ್ಪ ಬೇಗೂರು ಹಾಗೂ ರವಿ ಕೃಷ್ಣಾರೆಡ್ಡಿ ಸಂಪಾದಿಸಿ, ಕಣ್ವ ಪ್ರಕಾಶವು ಬಿಡುಗಡೆ ಮಾಡಿದ ವರ್ತಮಾನದ ಕಥೆಗಳು ಸಂಕಲನದಲ್ಲಿನ ಕಥೆಗಳು ಈ ಎಲ್ಲಾ ಮಾತುಗಳಿಗೆ ಸಾಕ್ಷಿಯಂತಿವೆ.

ಈ ಸಂಕಲನದಲ್ಲಿನ ಎಲ್ಲಾ ಕಥೆಗಳು ಸ್ಪರ್ಧೆಯ ನಿಮಿತ್ತವಾಗಿ ಬರೆದ ಕಥೆಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಥಿತಿಯ ಕಥೆಗಾರರ ಕಥೆಗಳೂ ಹೌದು. ಹಾಗೆಂದ ಮಾತ್ರಕ್ಕೆ ಅವೆಲ್ಲವೂ ಯಾಂತ್ರಿಕವಾದ ಸ್ಪರ್ಧಾಪೇಕ್ಷೆಯಿಂದಷ್ಟೇ ಹುಟ್ಟಿದವುಗಳೆಂದೇನೂ ಅಲ್ಲ. ಈ ಕಥಾಸಂಕಲವನ್ನು ಅಚ್ಚುಕಟಾಗಿ ಸಂಪಾದಿಸಿ ಅರ್ಥಪೂರ್ಣವಾದ ಮುನ್ನುಡಿಯೊಂದನ್ನು ಬರೆಯುವ ಮೂಲಕ ರಾಮಲಿಂಗಪ್ಪ ಬೇಗೂರು ಅವರು ಈ ಕಥೆಗಳನ್ನು ಓದುವ ಓದುಗರಿಗೆ ಕಥೆಗಳ ಮಿತಿ ಮತ್ತು ಸಾಧ್ಯತೆಯನ್ನು ಕುರಿತ ಕೀಲಿಕೈಯೊಂದನ್ನೂ ಒದಗಿಸಿದ್ದಾರೆ. ಈ ನಡುವೆಯೂ ಈ ಸಂಕಲದ ಮೊದಲ ಓದಿಗೆ ದಕ್ಕಿದ ಕೆಲವು ಸಂಗತಿಗಳನ್ನು ಆಧರಿಸಿ ಒಟ್ಟು ಕಥೆಗಳನ್ನು ಕುರಿತು ಕೆಲವು ಮಾತುಗಳನ್ನು ಪ್ರಸ್ತಾಪಿಸಬಹುದೆಂದುಕೊಳ್ಳುತ್ತೇನೆ.

ರಾಮಲಿಂಗಪ್ಪ ಅವರು ಸರಿಯಾಗಿಯೇ ಗುರುತಿಸಿದಂತೆ ಈ ಸಂಕಲನದ ಕಥೆಗಾರರು ಮುಖ್ಯವಾಹಿನಿಯಲ್ಲಿ ಉದ್ಧರಣ ಚಿಹ್ನೆಯೊಳಗಿಟ್ಟು ಗುರುತಿಸಲ್ಪಟ್ಟ ಕಥೆಗಾರರಲ್ಲ. ಪ್ರಭಾವಳಿಯ ರಕ್ಷಣಾಕವಚದಲ್ಲಿ ಸುಭದ್ರವಾಗಿರುವ ಕಥೆಗಾರರೂ ಅಲ್ಲ. ಆ ಪ್ರಭಾವಳಿ ಇಲ್ಲದಿರುವಿಕೆಯು ಈ ಕಥೆಗಳ ಬಗೆಗೆ ಓದುಗರಿಗೆ ಮುಜುಗರವಿಲ್ಲದೆ ಮಾತನಾಡುವ ಒಂದು ಸ್ವಾತಂತ್ರ್ಯವನ್ನೂ ಒದಗಿಸುವುದರಿಂದ ಕಥೆಗಳ ಕುರಿತಂತೆ ವಸ್ತುನಿಷ್ಠವಾದ ಪ್ರತಿಕ್ರಿಯೆಯನ್ನು ಖಂಡಿತಾ ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಅವರೇ ಗುರುತಿಸುವಂತೆ ಇಲ್ಲಿ ಬಹುಮಟ್ಟಿನ ಕಥೆಗಳು ವಿಷಯದ ವ್ಯತ್ಯಾಸವನ್ನು ಹೊರತುಪಡಿಸಿ ಭಾಷೆಯ ನೆಲೆಯಲ್ಲಿ ಒಬ್ಬನೇ ಕಥೆಗಾರನ ಸಂಕಲನದಂತೆ ಭಾಸವಾದರೂ ಆಶ್ಚರ್‍ಯವಿಲ್ಲ. ಆ ಮಟ್ಟಿಗೆ ಅವು ಉತ್ತರಕರ್ನಾಟಕದ ಭಾಷಾಬನಿಯನ್ನು ಹೊತ್ತುಕೊಂಡೇ ಬಂದಿವೆ. ಅದರ ಜೊತೆಗೆ ಈ ಕಥೆಗಳಲ್ಲಿ ನಗರ-ಗ್ರಾಮ, ಮಧ್ಯಮವರ್ಗ-ತಳವರ್ಗ, ಮೇಲ್ಜಾತಿ-ಕೆಳಜಾತಿ ಇಂತಹ ಅವಳಿ ವೈರುಧ್ಯಗಳ ಸರಳ ಮುಖಾಮುಖಿಯಿದ್ದರೂ ಅಲ್ಲೊಂದು ಸಮಾಜಮುಖೀ ಧೋರಣೆಯಿದೆ. ಈ ಸಮಾಜಮುಖೀ ಗುಣದಿಂದಾಗಿಯೇ ಅನೇಕ ಬಾರಿ ಇಲ್ಲಿನ ಕಥೆಗಳು ವೈಚಾರಿಕ ಬಾರದಲ್ಲಿ ವಾಚ್ಯವಾಗುತ್ತವೆ. ಇನ್ನು ವಸ್ತುವಿನ ನೆಲೆಯಲ್ಲಿ ಇಲ್ಲಿನ ಬಹುಪಾಲು ಕಥೆಗಳು ಮನುಷ್ಯನ ಮೂಲಭಾವವಾದ ಲೈಂಗಿಕತೆಯನ್ನು ಒಂದಿಲ್ಲೊಂದು ನೆಲೆಯಲ್ಲಿ ಸ್ಪರ್ಶಿಸುತ್ತವೆ. ಅದರ ಜೊತೆಗೆ ಸಾಮಾಜಿಕ ಅನಿಷ್ಟಗಳಾದ ಜಾತಿ, ಊಳಿಗಮಾನ್ಯತೆ, ಲಿಂಗತಾರತಮ್ಯ ಹಾಗೂ ಸಾಂಸ್ಥಿಕವಂಚನೆಗಳನ್ನು ಬೇರೆ ಬೇರೆ ನೆಲೆಯಲ್ಲಿ ಒಳಕೊಂಡು ಬರುವ ಈ ಎಲ್ಲಾ ಕಥೆಗಳು ಒಂದಿಲ್ಲೊಂದು ಬಗೆಯಲ್ಲಿ ವ್ಯವಸ್ಥೆಯ ಲೋಪದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಹಾಗಾಗಿ ಇಲ್ಲೊಂದು ಅಸಹನೆ ಮತ್ತು ಸುಧಾರಣೆಯ ತುಡಿತವಿದೆ. ಈ ತುಡಿತವನ್ನು ಇಲ್ಲಿನ ಬಹುಪಾಲು ಕಥೆಗಳು ಘಟನಾಪ್ರಧಾನವಾದ ನೆಲೆಯಲ್ಲಿಯೇ ನಿರೂಪಿಸುತ್ತವೆ.

ಒಟ್ಟೂ ಕಥೆಗಳನ್ನು ಗಮನಿಸುವಲ್ಲಿ ಸಿನೀಮಿಯಾ ಮಾದರಿಯ ಬೆಳವಣಿಗೆ ಮತ್ತು ಅಂತ್ಯವಿರುವ ಕಥೆಗಳೇ ಹೆಚ್ಚಿವೆ. vartamaanada-kathegaluಕೆಲವು ಕಥೆಗಳಂತೂ ಮೊದಲೇ ನಿರ್ಧರಿಸಿಕೊಂಡ ಟೈಟಲ್‌ಗೆ ಜೋತುಬಿದ್ದಂತೆಯೂ ಕಾಣುತ್ತವೆ. ಹೀಗೆ ಶೀರ್ಷಿಕೆಯನ್ನು ನಿರ್ಧರಿಸಿಕೊಂಡು ಒಡಲು ತುಂಬಲುಹೋಗುವಲ್ಲಿ ಎದುರಾಗುವ ಸಂಕಟದಲ್ಲಿ ಇಲ್ಲಿಯ ಅನೇಕ ಕಥೆಗಳು ತೊಳಲುತ್ತವೆ. ಹೀಗಾಗಿ ಇಲ್ಲಿನ ಅನೇಕ ಕಥೆಗಳು ತಮ್ಮ ಸೊಗಸಾದ ಭಾಷೆ ಮತ್ತು ಕಥೆಹೇಳುವ ಗುಣಗಳ ನಡುವೆಯೂ ತಾವಾಗಿಯೇ ಬೆಳೆದ ಕಥೆ ಎನಿಸುವುದಿಲ್ಲ. ಸಿದ್ಧಚೌಕಟ್ಟಿನ ಕಥೆಯಾಗಿ ಗೆರೆಹಾಕಿಕೊಂಡಲ್ಲಿಯವರೆಗೆ ವಿಸ್ತರಿಸಿ ಕೊನೆಗೊಂಡಂತೆಯೇ ಭಾಸವಾಗುತ್ತವೆ. ಈ ನಡುವೆಯೂ ಈ ಸಂಕಲನದಲ್ಲಿ ನೆನಪಿನಲ್ಲುಳಿಯುವ ಕೆಲವು ಕಥೆಗಳಿವೆ. ಅದಕ್ಕೆ ಅವುಗಳ ಕಥನಗಾರಿಕೆಯ ಜೊತೆಗೆ ಸಾಮಾಜಿಕ ಕಾಳಜಿಯ ಕಾರಣವೂ ಇದೆ. ವ್ಯಕ್ತಿಕೇಂದ್ರಿತ ಹಾಗೂ ಸಮಾಜಿಮುಖೀ ಎರಡೂ ನೆಲೆಯ ಕಥೆಗಳನ್ನು ಹೊಂದಿರುವ ಈ ಸಂಕಲನದ ಬಹುಪಾಲು ಕಥೆಗಳಿಗೆ ವ್ಯಕ್ತಿತ್ವದ ಅಂತರಂಗವನ್ನು ಶೋಧಿಸಿಕೊಳ್ಳುವ ತೀವ್ರತೆಗಿಂತ ಲೋಕವನ್ನು ನೋಡಿ ಮಾತನಾಡುವ ಆಸಕ್ತಿಯೇ ಹೆಚ್ಚಿದೆ. ಹೀಗಾಗಿ ಇಲ್ಲಿ ಬಹಿರ್ಮುಖತೆಯ ಗುಣ ಹೆಚಿದೆ. ತಾವೇ ಆರೋಪಿಸಿಕೊಂಡ ವೈಚಾರಿಕ ಆಕೃತಿಯ ಅತಿಭಾರಕ್ಕೆ ಸಿಕ್ಕಿ ಅವು ಕಲಾತ್ಮಕತೆಯನ್ನು ಮರೆತು ಬಿಡುವುದೂ ಇದೆ.

ಈ ಸಂಕಲನದ ಮಹತ್ವದ ಕಥೆಗಳ್ಲೊಂದಾದ “ಮಹಾತ್ಮ”, ಗಾಂಧಿಯನ್ನು ಆವಾಹಿಸಿಕೊಳ್ಳುವ ಮಾದರಿಯ ಕಥೆ. ಸ್ವತಂತ್ರ ಭಾರತದ ಉದ್ದಕ್ಕೂ ದೇಶದ ಮನಸ್ಸುಗಳನ್ನು ಬೆಚ್ಚಗೆ ಕಾಡುವ ಗಾಂಧಿಯನ್ನು ಈ ಕಥೆಯೂ ತನ್ನೆದುರಿಗೆ ತಂದುಕೊಂಡು ಮುಖಾಮುಖಿ ಉಜ್ಜಿ ನೋಡಿಕೊಳ್ಳತ್ತದೆ. ಬೊಳುವಾರರ “ಪಾಪು ಗಾಂಧಿಯಾದ ಕಥೆ”ಯನ್ನು ಕಿಂಚಿತ್ ಹೋಲುವಂತೆ ಕಂಡರೂ ಇಲ್ಲಿ ಗಾಂಧಿಯನ್ನು ಆವಾಹಿಸಿಕೊಳ್ಳುವ ಮನಸ್ಸಿಗೆ ಬೇರೆಯದೇ ಆದ ಒಂದು ಹಿನ್ನೆಲೆ ಇರುವಂತಿದೆ. ಅದು ಗಾಂಧಿಯ ಕುರಿತಾದ ಪೂರ್ವಗ್ರಹಗಳಿಂದ ಕೂಡಿದ ಮನಸ್ಸು. ವರ್ತಮಾನದ ರಾಜಕೀಯ ಆವರಣದಲ್ಲಿರುವ vartamaanada-kathegalu-authours1ಗಾಂಧಿ ಕುರಿತ ನಕಾರಾತ್ಮಕ ರಾಜಕೀಯ ಸಂಕಥನವನ್ನೇ ಉಸಿರಾಡಿಕೊಂಡ ಮನಸ್ಸು. ಹಾಗಾಗಿ ಸ್ಪಷ್ಟವಾಗಿ ಅದು ಸಾಂಪ್ರದಾಯಿಕ ಶಕ್ತಿಗಳು ನಿರೂಪಿಸುವ ಗಾಂಧಿಯ ಚಿತ್ರಣವನ್ನು ತುಂಬಿಕೊಂಡ ಮನಸಾಗಿಯೇ ತನ್ನನ್ನು ತೆರೆದುಕೊಳ್ಳುತ್ತದೆ. ಇಂತಹ ಮನಸೊಂದು ತಾನು ತುಂಬಿಕೊಂಡ ಗಾಂಧಿಯ ಅಚ್ಚನ್ನು ಕನಸಿನ ಗಾಂಧಿಯ ಜೊತೆಗೆ ಮುಖಾಮುಖಿ ಮಾಡಿ ಪರಿಶೀಲಿಸಿಕೊಳ್ಳುವಲ್ಲಿ ಕಥೆಯ ಬೆಳವಣಿಗೆ ಇದೆ. ಈ ಕಥೆಯಲ್ಲಿ ಕೇವಲ ಗಾಂಧಿಯಷ್ಟೇ ಪರಿಶೀಲನೆಗೊಳಗಾಗುವುದಲ್ಲ. ನೆಹರೂ, ಜಿನ್ನಾ, ಘೋಡ್ಸೆ ಹೀಗೆ ಚರಿತ್ರೆಯ ಅನೇಕರು ವರ್ತಮಾನಕ್ಕೆ ಬಂದು ತಮ್ಮ ಮುಖತೋರಿಸಿ ಹೋಗುತ್ತಾರೆ. ಗಾಂಧಿಯೂ ಎಲ್ಲ ಪ್ರಶ್ನೆಗಳಿಗೂ ತರ್ಕಬದ್ಧವಾಗಿ ಉತ್ತರಿಸುವಂತೆ ಕಟ್ಟಲ್ಪಡುತ್ತಾರೆ. ಈ ಮೂಲಕ ಚರಿತ್ರೆಯ ಹೂರಣದ ಸರಿತಪ್ಪುಗಳ ವಿವೇಚನೆಗೆ ನಿಂತು ಬಿಡುವ ನಿರೂಪಕ ಮನಸ್ಸು, ಘೋಡ್ಸೆ ಕುರಿತಂತೆ ಹೊಂದಿರುವ ಸಂಕಥನದಿಂದ ಕೊನೆಗೂ ಬಿಡುಗಡೆಗೊಂಡಂತೆ ಅನ್ನಿಸುವುದೇ ಇಲ್ಲ. ಇದು ನಿರೂಪಕನ ಸಮಸ್ಯೆ ಅಷ್ಟೇ ಅಲ್ಲ. ಸ್ವತಂತ್ರ ಭಾರತದ, ವರ್ತಮಾನ ಭಾರತದ ವಾಸ್ತವವೂ ಹೌದು. ಗಾಂಧಿಗೆ ಬಿಡುಗಡೆ ಸಿಕ್ಕಿದೆಯೋ ಇಲ್ಲವೋ? ಆದರೆ ಕನಸಿನಲ್ಲಿ ಗಾಂಧಿಯನ್ನು ಎದುರಾಗುವ ಮನಸ್ಸು ವಾಸ್ತವದಲ್ಲಿ ತಾನು ಈಗಾಗಲೇ ತುಂಬಿಕೊಂಡ ದೇಶಭಕ್ತ ಘೋಡ್ಸೆಯಿಂದ ಬಿಡುಗಡೆ ಕಾಣದೇ ಉಳಿಯುತ್ತದೆ. ಇದಕ್ಕೂ, ಗಾಂಧಿಯ ಭಾವಚಿತ್ರವು ಮಾರ್ಜಾಲದ ಆಕ್ರಮಣದಲ್ಲಿ ಒಡೆದು ಹೋಗುವದಕ್ಕೂ ಅರ್ಥಪೂರ್ಣ ಸಾಂಗತ್ಯವೊಂದು ಏರ್ಪಡುವಲ್ಲಿಯೇ ಕತೆಯ ಯಶಸ್ಸಿದೆ. ಗಾಂಧಿಯ ನಡುವೆ ಘೋಡ್ಸೆಯನ್ನಿಟ್ಟುಕೊಂಡು ಈ ದೇಶ ಮತ್ತು ಗಾಂಧಿ ಎರಡರ ಕುರಿತಾದ ಅಖಂಡ ಸಂಕಥನವೊಂದು ಅಸಾಧ್ಯವೆಂಬುದನ್ನೇ ಪರೋಕ್ಷವಾಗಿ ಕತೆ ಮನವರಿಕೆ ಮಾಡುವಂತಿದೆ. ಈ ಧ್ವನಿಯನ್ನೂ ಹೊರಡಿಸುವ ಮೂಲಕ ಆರ್‌ಎಸ್‌ಎಸ್ ಪ್ರಣೀತ ಮನಸ್ಸಿನ ಪರ ನಿರೂಪಕನನ್ನು ಬಿಡುಗಡೆಗೊಳಿಸದೆಯೂ ಅನೇಕ ಆಯಾಮದಲ್ಲಿ ಒಂದು ಗುಣಾತ್ಮಕ ಕಥೆಯೆನಿಸುತ್ತದೆ.

“ರಾಮಭಟ್ಟನ ಮದುವೆ ಪ್ರಸಂಗ” ತಾನು ಆಯ್ದುಕೊಳ್ಳುವ ವಸ್ತುವಿನ ನೆಲೆಯಿಂದ ಮುಖ್ಯವೆನಿಸಬಹುದಾದ ಕಥೆ. ಹೆಣ್ಣು ಸಿಕ್ಕದೆ ಇನ್ನೆಲ್ಲಿಂದಲೋ ಹೆಣ್ಣು ತರುವ ಔದಾರ್‍ಯವೂ ತನ್ನ ಮೂಲಛಾಯೆಯನ್ನು ಬಚ್ಚಿಟ್ಟುಕೊಳ್ಳಲಾರದೆ ಬೆತ್ತಲಾಗುವುದನ್ನು ಕಥೆ ಸೊಗಸಾಗಿಯೇ ಚಿತ್ರಿಸುತ್ತದೆ. ವೈದಿಕ ಸಮುದಾಯದೊಳಗಿನ ಜಳ್ಳ್ಳುತನವನ್ನು ನವುರಾದ ಹಾಸ್ಯದಲ್ಲಿಯೇ ಹೇಳಿಕೊಂಡು ಹೋಗುವ ಇಲ್ಲಿನ ಕಥನಗಾರಿಕೆಗೆ ಜೀವಂತಿಕೆಯಿದೆ. ರಾಮಭಟ್ಟನ ವಂಚನೆಯನ್ನು ಅರ್ಥಮಾಡಿಕೊಂಡ ಮೇಲೆ ಅದನ್ನು ಅಷ್ಟೇ ಸಮರ್ಥವಾಗಿ ಮೌನದಲ್ಲಿಯೇ ಮೊನಚಾಗಿ ಇದಿರಿಸುವ ಸರೋಜ ಮತ್ತು ಶಾಂತಿ ಕಥೆಯಲ್ಲಿ ಅಮುಖ್ಯರೆನಿಸಿಯೂ ಮುಖ್ಯವೆನಿಸಿಕೊಳ್ಳುತ್ತಾರೆ. ಮಿಕ್ಕ ಕಥೆಗಳಾದ “ಮುಗಿಲ ಮಾಯೆಯ ಕರುಣೆ” ಗ್ರಾಮ ಬದುಕನ್ನು ಆಚ್ಛಾದಿಸಿಕೊಂಡ ಜಾತಿ ವ್ಯವಸ್ಥೆಯ ಇನ್ನೊಂದು ಮುಖವನ್ನು ಹೇಳುತ್ತದೆ. ರಾಜಕಾರಣದಿಂದ ಒಡೆದು ಹೋದ ಹಳ್ಳಿಗಳು ಎಲ್ಲದರಲ್ಲೂ ಒಡೆದುಕೊಂಡು, ಜೀವಬಲಿಗಾಗಿ ಹಪಾಹಪಿಸುವುದನ್ನು ಕಥೆ ತನ್ನ ಮಿತಿಯೊಳಗೆ ಸೊಗಸಾಗಿ ಮುಟ್ಟಿಸುತ್ತದೆ. “ಗಲೀಜು” ಕಥೆ ಗ್ರಾಮಬದುಕಿನ ಗಲೀಜಿಗಿಂತ ಹೆಚ್ಚಾಗಿ ಲೈಂಗಿಕತೆಯ ನೆಲೆಯ ಮಾನುಷ ವಿಕೃತಿಯನ್ನೇ ಅತಿ ವಿಜೃಂಭಿಸಿ ಹೇಳುವ ಕಥೆ. ಹೀಗಾಗಿ ವಾಸ್ತವಕ್ಕಿಂತ ಕಿಂಚಿತ್ ದೂರವೇ ಎನಿಸಬಲ್ಲ ಕಥೆಯೂ ಹೌದು. ಮುಜುಗರವಿಲ್ಲದ ಅದರ ಭಾಷೆ ಗಲೀಜನ್ನು ಸಮರ್ಥವಾಗಿ ತೋರುತ್ತದೆಯಾದರೂ ಇಡಿಯ ಆವರಣ ಅತಿರಂಜಿತವೆನಿಸುತ್ತದೆ. “ಮಠದ ಹೋರಿ” ಕಥೆ ಗೋಸಂಕಥನದ ಬೇರೆ ಬೇರೆ ಮುಖಗಳನ್ನು ಪರಿಚಯಿಸುವ ಏಕೋದ್ದೇಶದಲ್ಲಿ ತನ್ನ ವೈಚಾರಿಕ ಹೊರೆಯಿಂದ ಬಿಡುಗಡೆ ಪಡೆಯುವುದೇ ಇಲ್ಲ. “ಪುಷ್ಪ” ಕಥೆಯೂ ಇದೇ ತೆರನಾದುದು. ಆದರೆ “ಹುಲಿ ಸಾಕಣೆ” ಮತ್ತು vartamaanada-kathegalu-authours2“ಗುಲಾಬಿ ಚೀಟಿ” ಕಥೆಗಳು ಆಧುನಿಕ ಸಂದರ್ಭದ ಅವತರಣಿಕೆಗಳಾದ ಎನ್‌ಜಿಓ ಹಾಗೂ ಎಮ್‌ಎನ್‌ಸಿಗಳ ಸೋಗಲಾಡಿತನ ಮತ್ತು ವಂಚನೆಯನ್ನು ಪರಿಚಯಿಸುತ್ತವೆ. ಇದನ್ನೂ ಮೀರಿ “ಗುಲಾಬಿ ಚೀಟಿ” ಕಥೆ, ಬದುಕು ಮತ್ತು ಕೃಷಿಗಳೆರಡರಲ್ಲೂ ವಿದೇಶದ ಆಕರ್ಷಣೆ ಮತ್ತು ಅಸಲಿ ಅನುಭವಗಳನ್ನು ತಾಳೆಹಾಕಿಕೊಳ್ಳುವಂತೆ ಒತ್ತಾಯಿಸುತ್ತದೆ. ಹೀಗೆ ವಿದೇಶಿ ಒಲವಿನ ನಕಾರಾತ್ಮಕ ಫಲಿತವನ್ನು ಚಿತ್ರಿಸುವ ಕಥೆ ಗಾಂಧಿ ಚಿಂತನೆಯಾದ ದೇಶೀಯತೆಯ ಪರನಿಲ್ಲುತ್ತದೆ. “ಹಳೇಟ್ರಂಕು” ಗ್ರಾಮ ಬದುಕಿನ ಅಮೂಲ್ಯ ಮುಗ್ದತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ನಗರೀಕರಣದ ವಾಣಿಜ್ಯೀಕೃತ ಅವಸ್ಥೆಯ ಕರಾಳತೆಯನ್ನೂ, “ಬೆಂದಕಾಳೂರು” ನಗರಗಳು ರೂಪಿಸುತ್ತಿರುವ ಮಾನವೀಯ ಸಂಬಂಧದ ಸಂದುಗಡಿದ ಸ್ಥಿತಿಯನ್ನೂ ಹೇಳುವ ಮೂಲಕ ನಗರ ವಿಮುಖತೆಯ ಪರನಿಲ್ಲುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ “ಹೊತ್ತಿಗೊದಗಿದ ಮಾತು” ಕಥೆ ನಗರವನ್ನು ಬದುಕು ಕಟ್ಟಿಕೊಳ್ಳುವ ನೆಲೆಯಾಗಿಯೇ ಗುರುತಿಸುತ್ತದೆಯಾದರೂ, ಪುಟ್ಟ ಮಗುವಿನ ಒಂದು ಮಾತೇ ಬದುಕನ್ನು ಬದಲಾಯಿಸಿತು ಎಂಬುದನ್ನು ಹೇಳುವ ಕಾತರಕ್ಕೆ ಕುದಿದಂತೆ ಅಲ್ಲಿಗೇ ನಿಂತುಬಿಡುತ್ತದೆ. “ನಡುವೆ ಸುಳಿವಾತ್ಮ” ಹಾಗೂ “ಉಮಿಯೊಳಗಿನ ಬೆಂಕಿ” ಎರಡೂ ಆಸ್ತಿ ಅಂತಸ್ತಿಗೆ ಹಾತೊರೆಯುವ ಬದುಕುಗಳು ಕಡೆಗಣಿಸುವ ಮನುಷ್ಯ ಸಂಬಂಧದ ಮೇಲೆ ಬೆಳಕು ಚಲ್ಲುತ್ತವೆ. “ಅಂಬುಳೆ ಒಂದು ಕಥಾಂತರ” ತಲೆಮಾರುಗಳ ಅಂತರವನ್ನೂ, ಅವಿಭಕ್ತ ಕುಟುಂಬಗಳ ಯಜಮಾನಿಕೆಗಳು ಉಂಟುಮಾಡುವ ಪ್ರಮಾದಗಳನ್ನೂ ಹೇಳುವ ಮೂಲಕ ಕುಟುಂಬ ಪದ್ಧತಿಯ ಬಿರುಕುಗಳನ್ನು ಶೋಧಿಸುತ್ತದೆ.

ಈ ಸಂಕಲನದ ಕಥೆಗಳು ಹೊಸ ಕಥೆಗಾರರಿಂದ ಬರೆಯಲ್ಪಟ್ಟವಾಗಿದ್ದರೂ ಅವುಗಳಲ್ಲಿ ಕನ್ನಡದ ಮಹತ್ವದ ಕಥೆಗಾರರ ನೆರಳುಗಳು ಕಾಣಿಸಿದರೆ ಅಚ್ಚರಿಯಿಲ್ಲ. ಈ ನೆಲೆಯಲ್ಲಿ ‘ಹುಡುಕಾಟ’, ‘ಡಿಪ್ರೆಶನ್’ ಹಾಗೂ ‘ರಾಮಭಟ್ಟನ ಮದುವೆ ಪ್ರಸಂಗ’ಗಳೂ ವಿಭಿನ್ನ ಎಂದೆನಿಸುತ್ತವೆ. ‘ಹುಡುಕಾಟ ಕಥೆ’ ನವ್ಯದ ಕತೆಗಳನ್ನು ನೆನಪಿಸಿಬಿಡುವಂತಿದೆ. ಕಳೆದು ಹೋದ ತನ್ನಣ್ಣನನ್ನು ಜೀವಮಾನಪೂರ್ತಿ ಹುಡುಕುವ ವಾಸುದೇವ ಮಾಸ್ತರರ ಪತ್ತೇದಾರಿಕೆಯ ಮನಸ್ಸು ತನ್ನ ಗತ ಹಾಗೂ ವರ್ತಮಾನಗಳನ್ನು ಶೋಧನೆಗೊಡ್ಡುವ ಸ್ವರೂಪದಲ್ಲಿ ಈ ನವ್ಯತೆಯ ಗುಣವಿದೆ. ಡಿಪ್ರೆಶನ್ ಕಥೆ ವೈದೇಹಿ ಅವರ ಸೌಗಂಧಿಯ ಸ್ವಗತಕ್ಕೆ ಹತ್ತಿರವಾದಂತಿದೆ. ಲೈಂಗಿಕತೆಯನ್ನು ಹೆಣ್ಣ ಕಣ್ಣೋಟದಲ್ಲಿ ಕಾಣಲು ಯತ್ನಿಸುವ ಈ ಕಥೆ ಮನೋವ್ಯಾಪಾರದ ಶೋಧಕ್ಕಿಳಿಯುತ್ತದೆ. ರಾಮಭಟ್ಟನ ಮದುವೆ ಪ್ರಸಂಗವು ಆಂಶಿಕವಾಗಿ ಮಾಸ್ತಿಕಥೆಗಳನ್ನು ಹೋಲುವಂತೆಯೂ ಇದೆಯೆನಿಸುತ್ತದೆ. ಹೀಗೆ ಇಲ್ಲಿನ ಕಥೆಗಳು ಹಾಗೂ ಕಥೆಗಾರರನ್ನು ಹಿಂದಿನವರ ನೆರಳಾಗಿಯೇ ಗುರುತಿಸಬೇಕೆಂದೇನೂ ಇಲ್ಲ. ಬಹುಮಟ್ಟಿಗೆ ಇಲ್ಲಿನ ಬಹುಪಾಲು ಕಥೆಗಾರರು ಹೊಸಬರು ಮತ್ತು ಸಾಹಿತ್ಯದ ಶಿಸ್ತುಬದ್ಧ ಅಭ್ಯಾಸ ಮಾಡದೆಯೂ ಕನ್ನಡಕ್ಕೆ ಅಗತ್ಯವಿರುವ ಬೇರೆ ಬೇರೆ ಕ್ಷೇತ್ರಗಳ ಸಂವೇದನೆಗಳನ್ನು ತುಂಬುತ್ತಿರುವವರು. ಈ ಹಿನ್ನೆಲೆಯಲ್ಲಿ ಈ ಕಥೆಗಳ ಮಿತಿಗಳ ಕುರಿತಾದ ಮಾತುಗಳಾಗಲೀ, ಹೋಲಿಕೆಗಳ ಕುರಿತಾದ ಮಾತುಗಳಾಗಲೀ ಕಥೆಗಾರರಿಗೆ ತಮ್ಮ ಮುಂದಿನ ಕಥೆಗಳನ್ನು ರೂಪಿಸಿಕೊಳ್ಳಲು ಪೂರಕವಾದ ಸಲಹೆಗಳೆಂದೇ ಭಾವಿಸಬಹುದು.

 

ಗಾಜಾಪಟ್ಟಿಯಲ್ಲಿ ಬೆಂಕಿ ಆರಲಿ, ಹೂವು ಅರಳಲಿ


– ಡಾ.ಎಸ್.ಬಿ. ಜೋಗುರ


ಇಸ್ರೇಲ್ ಮತ್ತು ಗಾಜಾಪಟ್ಟಿ ನಿರಂತರವಾಗಿ ಹೊತ್ತಿ ಉರಿಯುತ್ತಿದೆ. ಶಾಂತಿ ಸಂಧಾನಕ್ಕಾಗಿ ಪ್ರಸ್ತಾಪವಾಗುವ ಯಾವ ಮಾತುಗಳೂ ಫಲಪ್ರದವಾಗುತ್ತಿಲ್ಲ. ಹಮಸ್ ನ ಮಿಲಿಟರಿ ಅಧಿಕಾರಿಗಳು ತಾವು ಸಾಯಲು ಕಾತರರಾಗಿದ್ದೇವೆ ಎನ್ನುವ ಮೂಲಕ ಇನ್ನಷ್ಟು ಬಂಡುಕೋರ ಚಟುವಟಿಕೆಗಳು ಅಲ್ಲಿ ಭುಗಿಲೇಳಲು ಕಾರಣವಾದಂತಾಗಿದೆ. ಫೆಲಿಸ್ತೆನಿಯನ್ನರ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಫೆಲಿಸ್ತೇನಿಯನ್ನರ ಜೊತೆಗೆ ಹೋಲಿಸಿದಾಗ ಇಸ್ರೇಲಿಯನ್ನರ ಸಾವಿನ ಪ್ರಮಾಣ ತೀರಾ ಕಡಿಮೆ. ಇಸ್ರೇಲಿಗಳು ಫೆಲಿಸ್ತೇನಿಯನ್ನರ ಮೇಲೆ ನಿರಂತರವಾಗಿ ಬಾಂಬಿನ ಸುರಿಮಳೆಗರೆಯುತ್ತಿದ್ದಾರೆ. ಈ ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಕಳೆದ ಆರೇಳು ದಶಕಗಳಿಂದಲೂ ಆಗಾಗ ಹೀಗೆ ಹಿಂಸಾ ಪ್ರಕರಣಗಳು ಜರುಗುತ್ತಲೇ ಇವೆ. ಇದು ಒಂದು ಶತಮಾನದ ಬಗೆಹರಿಯದ ಸಂಘರ್ಷದಂತಿದೆ. 1948 ರಿಂದಲೂ ಈ ಇಸ್ರೇಲಿಗಳು ಮತ್ತು ಫೆಲಿಸ್ತೇನಿಯನ್ನರು ಇರೋ 143 ಕಿಲೋಮೀಟರ್ ವ್ಯಾಪ್ತಿಯ ಈ ಗಾಜಾಪಟ್ಟಿಯಲ್ಲಿಯೇ ಮುಸುಕಿನ ಗುದ್ದಾಟ ಮಾಡುತ್ತಾ ಬಂದವರು. ಹಾಗೆ ನೋಡಿದರೆ ಈ ಫೆಲಿಸ್ತೇನಿಯನ್ನರು ತೀರಾ ದೂರದ ಪ್ರದೇಶಗಳಿಂದ ವಲಸೆ ಬಂದವರಲ್ಲ. israel.gazaಗಾಜಾ ಪಟ್ಟಿಯ ಸಮೀಪದ ನೆಲೆಗಳಿಂದಲೇ ಇವರು ವಲಸೆ ಬಂದವರು 1967 ರ ಸಂದರ್ಭದಲ್ಲಿ ಅವರು ಅಲ್ಲಿ ಉಳಿಯುವಲ್ಲಿ ಯಾವ ತಕರಾರೂ ಇಲ್ಲ ಎನ್ನುವಂತಹ ಕರಾರುಗಳು ಇರುವಾಗಲೂ ಪದೇ ಪದೇ ಮತ್ತೆ ಅಂತರರಾಷ್ಟ್ರೀಯ ಒಪ್ಪಂದಗಳು ಜರುಗಿದ ಮೇಲೂ ಇಲ್ಲಿ ಸಂಘರ್ಷ ಕೊನೆಯಾಗಿಲ್ಲ. ನಿನ್ನೆ ಮೊನ್ನೆಯಷ್ಟೇ ತಾತ್ಕಲಿಕವಾದ ಶಾಂತಿ ಏರ್ಪಡುವ ಮಾತುಗಳು ಕೇಳಿ ಬರುತ್ತಿರುವಂತೆ ಹಮಸ್‌ನ ಮಿಲಿಟರಿ ಕಮಾಂಡರ್ ಅದು ಸಾಧ್ಯವಿಲ್ಲ, ನಾವು ಸಾಯಲು ತಯಾರಾಗಿದ್ದೇವೆ ಎನ್ನುವ ಮೂಲಕ ಸುಮಾರು 32 ಫೆಲಿಸ್ತೇನಿಯನ್ನರು ಅರ್ಧ ದಿನದಲ್ಲಿಯೇ ಸಾವಿಗೀಡಾಗಲು ಕಾರಣನಾದ. ಕಳೆದ ಜುಲೈ 8 ರಿಂದ ಇಲ್ಲಿಯವರೆಗೆ ಸುಮಾರು 1200 ರಷ್ಟು ಫೆಲಿಸ್ತೆನಿಯನ್ನರು ಈ ಬಾಂಬ್ ಧಾಳಿಗೆ ತುತ್ತಾದರೆ ಕೇವಲ 55 ಇಸ್ರೇಲಿಯನ್ನರು ಸಾವಿಗೀಡಾಗಿದ್ದಾರೆ.

ಹಮಸ್ ಮಿಲಿಟರಿ ಪಡೆಯನ್ನು ಕೆರಳುವಂತೆ ಮಾಡಿದ ಇನ್ನೊಂದು ಘಟನೆ ಸಂಯುಕ್ತ ರಾಷ್ಟ್ರ ಸಂಘದವರು ನಿರಾಶ್ರಿತರ ನೆಲೆಯಲ್ಲಿ ಸ್ಥಾಪಿಸಲಾದ ಶಾಲೆಯ ಮೇಲೆ ಬಾಂಬ್ ಹಾಕಿ ಅದನ್ನು ದ್ವಂಸ ಮಾಡಿದ್ದಲ್ಲದೇ ಕಿಂಡರ್ಗಾರ್ಟನ್ ಶಾಲೆಗಳ ಮೇಲೆ, ಆಸ್ಪತ್ರೆಗಳ ಮೇಲೆಯೂ ಧಾಳಿ ಮಾಡುವ ಮೂಲಕ ಚಿಕ್ಕ ಮಕ್ಕಳ ಸಾವು ನೋವಿಗೂ ಕಾರಣವಾಗಿರುವುದು. ಇಲ್ಲಿಯವರೆಗೆ ಹೀಗೆ ಧಾಳಿಗೆ ಸಿಲುಕಿ ಗಾಯಗೊಂಡವರ ಪ್ರಮಾಣ ಸುಮಾರು gaza6700 ರಷ್ಟಾಗಿದೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿರುವದಿದೆ. ಹಮಸ್ ಲೀಡರ್ ಮೊಹ್ಮದ್ ಡೆಫ಼ ಹೇಳುವಂತೆ ಮಂಗಳವಾರ ಒಂದೇ ದಿನ ಸುಮಾರು 100 ರಷ್ಟು ಫೆಲಿಸ್ತೇನಿಯನ್ನರನ್ನು ಸಾಯಿಸಲಾಯಿತು. ಗಾಜಾ ಪಟ್ಟಿಯಲ್ಲಿಯ ವಿದ್ಯುತ್ ಘಟಕದ ಮೇಲೆ ಬಾಂಬ್ ಧಾಳಿ ಮಾಡುವ ಮೂಲಕ ಅದನ್ನು ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಾಹಿಸದಂತೆ ಮಾಡಲಾಗಿದೆ ಈಗ ಅಲ್ಲಿ ಬರೀ ಹೊಗೆ ಮಾತ್ರ ಏಳುತ್ತಿದೆ ಎನ್ನುವ ಹಮಸ್ ನಾಯಕರು ಯಾವುದೇ ಕಾರಣಕ್ಕೂ ತಾವು ಶಾಂತಿಗಾಗಿ ಮುಂದಾಗುವದಿಲ್ಲ ಎನ್ನುತ್ತಿದ್ದಾರೆ.

ನಿರಂತರವಾದ ಬಾಂಬ್ ಧಾಳಿಯ ನಡುವೆ ಲಕ್ಷಗಟ್ಟಲೆ ಜನರು ನಿರಾಶ್ರಿತರಾಗಿದ್ದಾರೆ. ಸುಮಾರು 2 ಲಕ್ಷ ಜನರನ್ನು ಸಂಯುಕ್ತ ರಾಷ್ಟ್ರ ಸಂಘ ನಿರಾಶ್ರಿತರ ಕೇಂದ್ರಗಳಲ್ಲಿ ಮೇಲ್ವಿಚಾರಣೆ ನಡೆಸುತ್ತಿದೆ. ಇಲ್ಲಿ ನೂರಾರು ಜನ ಅಧಿಕಾರಿಗಳು ಅವರ ಆರೈಕೆಯಲ್ಲಿ ತೊಡಗಿದ್ದಾರೆ. ಈ ಅಧಿಕಾರಿಗಳಲ್ಲಿ ಕೂಡಾ ಕೆಲವರು ಸಾವೀಗೀಡಾಗಿರುವದಿದೆ. ಇತ್ತ ಇಸ್ರೇಲ್‌ದ ಮಿಲಿಟರಿ ಅಧಿಕಾರಿಗಳು ಈ ಫೆಲಿಸ್ತೇನಿಯನ್ನರಿಗೆ ಒಂದು ಪಾಠ ಕಲಿಸುವದಿದೆ, ಅವರನ್ನು ಈ ಬಾರಿ ಮಟ್ಟ ಹಾಕದೇ ಬಿಡುವದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗೆ ಇಸ್ರೇಲ್ ಮತ್ತು ಫೆಲಿಸ್ತೆನಿಯನ್ನರ ನಡುವಿನ ಹಗ್ಗ ಜಗ್ಗಾಟದ ನಡುವೆ ಇನ್ನೂ ಅದೆಷ್ಟು ಅಮಾಯಕರು ಹೆಣವಾಗಬೇಕೋ ಗೊತ್ತಿಲ್ಲ. ಈ ಯುದ್ಧ ಸಂಘರ್ಷಗಳೇ ಹಾಗೆ. ಬಂದೂಕಿನ ನಳಿಕೆಯಲ್ಲಿ ಗೂಡು ಕಟ್ಟಿರುವ ಅಮಾಯಕ ಗುಬ್ಬಿಗಳನ್ನು gaza-arab-silentಬದುಕಲು ಬಿಡುವದಿಲ್ಲ. ಇತ್ತ ಗೂಡು ಬಿಟ್ಟು ಹಾರುವಂತೆಯೂ ಇಲ್ಲ ಅತ್ತ ನಳಿಕೆಯಲ್ಲಿ ಉಳಿಯುವಂತೆಯೂ ಇಲ್ಲ. ಅವು ಅನುಭವಿಸುವ ಮನ:ಸ್ಥಿತಿ ಮಾತ್ರ ಮನ ಕಲುಕುವಂಥದು. ಯುದ್ಧ, ಸಂಘರ್ಷ ಭೂಮಿಯ ಮೇಲೆ ಯಾವುದೇ ಭಾಗದಲ್ಲಿ ಜರುಗಿದರೂ ಅದರ ಪರಿಣಾಮ ಮಾತ್ರ ತುಂಬಾ ಕಹಿಯಾಗಿರುತ್ತದೆ. ಕೊನೆಗೂ ಅಲ್ಲಿ ಹರಿಯುವುದು ಮನುಷ್ಯರ ರಕ್ತ. ಮಾನವನ ಹಿರಿಮೆಯ ಬಿಳಿ ಗೋಡೆಯ ಮೇಲಿನ ವಿಕಾರವಾದ ಕಪ್ಪು ಚುಕ್ಕೆಯಂತೆ ಈ ಯುದ್ಧ ಮತ್ತು ಸಂಘರ್ಷಗಳಿವೆ. ಧರ್ಮ, ಜನಾಂಗ, ಗಡಿ, ಭಾಷೆಯ ವಿಷಯಗಳು ಆಗಾಗ ಮನುಕುಲಕ್ಕೆ ತೊಡಕಾಗುವಂಥಾ ಪರಿಣಾಮಗಳನ್ನು ಬೀರುವದಿದೆ. ಚರಿತ್ರೆ ನಮ್ಮ ಎದುರು ಈ ಬಗೆಯ ಸಂಘರ್ಷಗಳ ಪರಿಣಾಮಗಳನ್ನು ನಿಚ್ಚಳವಾಗಿ ಅನಾವರಣಗೊಳಿಸಿದ್ದರೂ ನಾವು ಅದರಿಂದ ಪಾಠ ಕಲಿಯಲಿಲ್ಲ. ಒಂದು ಶತಮಾನದ ಹಿಂದೆ ಜಾಗತಿಕ ಮಹಾಯುದ್ಧಗಳ ಮೂಲಕ ಆರಂಭವಾದ ಸಂಘರ್ಷ ಇವತ್ತಿಗೂ ನಿಂತಿಲ್ಲ. ಅದೊಂದು ಪ್ರಕ್ರಿಯೆಯಾಗಿ ಸಾಗಿ ಬಂದಿದೆ. ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಉಂಟು ಮಾಡಿದ ಆ ಪುಟ್ಟ ಅಣುಬಾಂಬ್ ಗಳ ಪರಿಣಾಮವನ್ನು ಇಡೀ ವಿಶ್ವವೇ ಮರೆತಿಲ್ಲ. ಇಂದು ಇಡೀ ವಿಶ್ವದಲ್ಲಿ ಶಾಂತಿಗಾಗಿ ಬಾಯಾರಿದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಕೊನೆಗೂ ಮನುಕುಲ ಉಳಿಯಬೇಕು ಮಾನವೀಯತೆ ಗೆಲ್ಲಬೇಕು ಯುದ್ಧ, ಹಿಂಸೆ, ಸಂಘರ್ಷ ಸೋಲಬೇಕು.

ಜಾಗತೀಕರಣದ ಸಂದರ್ಭದಲ್ಲಿ ವಿಶ್ವ ಮಾರುಕಟ್ಟೆಯ ಪ್ರಾಧಾನ್ಯತೆಯಷ್ಟೇ ಜಾಗತಿಕ ಶಾಂತಿ ಮುಖ್ಯವಾಗಬೇಕು. ಎಲ್ಲೋ ಗಾಜಾಪಟ್ಟಿಯಲ್ಲಿ ಜರುಗುವ ಹಿಂಸೆ, ಸಾವು ನೋವು ನಮಗೆ ಸಂಬಂಧಿಸಿಲ್ಲ ಎನ್ನುವ ಮನ:ಸ್ಥಿತಿಯೇ ಸರಿಯಲ್ಲ. ಇಡೀ ಜಗತ್ತು ಈ ಬಗೆಯ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಈ ಕುರಿತು ಸೂಕ್ತ ತೀರ್ಮಾನಗಳನ್ನು ತಗೆದುಕೊಳ್ಳಬೇಕು. ಜಾಗತಿಕ ಸಮ್ಮತಿಯನ್ನು ನಿರಾಕರಿಸುವ ರಾಷ್ಟ್ರಗಳ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಬೇಕು. ಹಿಂಸೆ ಮತ್ತು ಸಂಘರ್ಷದ ಕಾರಣಗಳನ್ನು ವಸ್ತು ನಿಷ್ಟವಾಗಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಬೇಕು. ಜಾಗತೀಕರಣದ ಸಂದರ್ಭದಲ್ಲಿ ಒಳಿತಿಗಾಗಿ ಕೈ ಜೋಡಿಸುವ ಕ್ರಮಗಳೂ ಮುಖ್ಯವಾಗಬೇಕು.