Daily Archives: August 15, 2014

ನದಿ ಮತ್ತು ಸೇತುವೆ : ಒಂದು ಅನುವಾದಿತ ಕತೆ

ಹಿಂದಿಯಲ್ಲಿ: ಮಹೀಪ್ ಸಿಂಗ್
ಇಂಗ್ಲಿಷಿನಿಂದ: ಜೆ.ವಿ.ಕಾರ್ಲೊ, ಹಾಸನ.

ರೈಲು ಲಾಹೋರಿನಿಂದ ಹೊರಡುತ್ತಿದ್ದಂತೆ ಒಂದು ತರದ ದುಗುಡ ಮೈಮನಸ್ಸನ್ನು ಆವರಿಸಿಕೊಂಡು ಎದೆ ಢವಗುಟ್ಟತೊಡಗಿತು. ನಾವು ಹಾದು ಹೋಗಲಿರುವ ಆ ಊರಿನಲ್ಲಿ ಕೇವಲ ಹದಿನಾಲ್ಕು ವರ್ಷಗಳ ಹಿಂದೆ ಹತ್ತಿದ್ದ ಒಂದು ಕೋಮು ಜ್ವಾಲೆಯ ಸಣ್ಣ ಕಿಡಿ ಭಯಾನಕ ಅಗ್ನಿ ಕುಂಡವಾಗಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತ್ತು. ಲಕ್ಷಾಂತರ ಜನರ ನೆನಪಿನಾಳದಲ್ಲಿ ಆ ಗಾಯಗಳಿನ್ನೂ ಮಾಸಿರಲಿಲ್ಲ. ರೈಲು ಕತ್ತಲು ಕವಿದ ಸುರಂಗದೊಳಗೆ ಓಡುತ್ತಿರುವಂತೆ ಭಾಸವಾಗತೊಡಗಿತು. ಸುತ್ತುವರೆಯುತ್ತಿದ್ದ ಕತ್ತಲು ನಮ್ಮನ್ನು ನುಂಗುತ್ತಿರುವಂತೆ ಅನಿಸತೊಡಗಿತು.

ರೈಲಿನಲ್ಲಿ ನಾವೊಂದು ಮುನ್ನೂರು ಜನ ಯಾತ್ರಿಕರಿದ್ದೆವು. ನಮ್ಮೊಂದಿಗೆ ಸಾಕಷ್ಟು ಹೆಂಗಸರೂ, ಮಕ್ಕಳೂ ಕೂಡ ಇದ್ದರು. ಲಾಹೋರಿನ ಎಲ್ಲಾ ಗುರುದ್ವಾರಗಳನ್ನು ನಾವು ಸಂದರ್ಶಿಸಿಯಾಗಿತ್ತು. ಲಾಹೋರಿನಲ್ಲಿ ನಮಗೆ ಅಭೂತಪೂರ್ವ ಸ್ವಾಗತ ದೊರಕಿತ್ತು. ಪಂಜಾಸಾಹೀಬದಲ್ಲೂ ಕೂಡ ಅದೇ ರೀತಿಯ ಅದ್ಭುತ ಸ್ವಾಗತ ಸಿಗುವುದರಲ್ಲಿ ಸಂದೇಹಗಳಿರಲಿಲ್ಲ. ಆದರೂ, ಮನುಷ್ಯರೊಳಗೆ ಅಡಗಿ ಕುಳಿತಿರುವ ರಾಕ್ಷಸ ಯಾವಾಗ ಎದ್ದು ಪೂತ್ಕರಿಸುತ್ತಾನೆಂದು ಬಲ್ಲವರಾರು?

ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿರುವಂತೆಯೇ ನನ್ನ ದೃಷ್ಟಿ ಅಮ್ಮನ ಕಡೆಗೆ ಹರಿಯಿತು. ಅವಳ ನೋಟ ಕಿಟಕಿಯಾಚೆ ನೆಟ್ಟಿತ್ತು. ಕಿಟಕಿಯನ್ನಾಧರಿಸಿದ್ದ ಅವಳ ಮುಂಗೈ ಮೇಲೆ ಅವಳು ಗದ್ದವನ್ನೂರಿದ್ದಳು. ಕೊಯ್ಲು ಮುಗಿದಿದ್ದ ಹೊಲಗಳು ಒಣಗಿ ಭಣಗುಟ್ಟುತ್ತಿದ್ದವು. ನನ್ನ ದೃಷ್ಟಿ ಇತರ ಯಾತ್ರಿಕರ ಮೇಲೆ ಹರಿಯಿತು. ಅವರ ಮುಖಗಳ ಮೇಲೂ ದುಗುಡದ ಛಾಯೆ ಕವಿದಿತ್ತು. ಒಮ್ಮಿಂದೊಮ್ಮೆಲೆ ಎಲ್ಲರ ಮೇಲೂ ಎಲ್ಲಿಂದಿಳಿಯಿತು ಈ ಭೀತಿಯ ಕಾರ್ಮೋಡ? ನನಗಾಶ್ಚರ್ಯವಾಯಿತು.

“ಅಮ್ಮಾ?” ಅವಳನ್ನು ಈ ಲೋಕಕ್ಕೆ ಎಳೆಯಲು ನಾನು ಮೌನವನ್ನು ಮುರಿದೆ. “ನೀನು ಈ ದಾರಿಯಲ್ಲಿ ಬಹಳಷ್ಟು ಸಲ ಓಡಾಡಿರಬೇಕಲ್ಲವೆ?”

ಅವಳು ಕನಸಿನಿಂದ ಎಚ್ಚೆತ್ತವಳಂತೆ ನನ್ನನ್ನು ನೋಡಿ ಮುಗುಳ್ನಕ್ಕಳು. ಅದು ಎಲ್ಲವನ್ನು ಕಳಕೊಂಡ ವೇದಾಂತಿ ನಗೆಯಾಗಿತ್ತು. ಅವಳೆಂದಳು: ಈ ದಾರಿಯಲ್ಲಿ ಸಿಗುವ ಎಲ್ಲಾ ಸ್ಟೇಶನ್‌ಗಳೂ ನನಗೆ ಗೊತ್ತು. ಆದರೆ, ಇವತ್ತು ಈ ದಾರಿ ಎಷ್ಟೊಂದು ನಿಗೂಢವಾಗಿ ಕಾಣಿಸುತ್ತಿದೆ! ಹದಿನಾಲ್ಕು ವರ್ಷಗಳ ನಂತರ ನಾನು ಈ ದಾರಿಯಲ್ಲಿ ಓಡಾಡುತ್ತಿದ್ದೇನೆ. ಹಿಂದೆಲ್ಲಾ ನಾನು ಈ ದಾರಿಯಲ್ಲಿ ಎಷ್ಟೊಂದು ಓಡಾಡುತ್ತಿದ್ದೆ. ಲಾಹೋರ್ ಬಿಡುತ್ತಿದ್ದಂತೆಯೇ ನನ್ನ ನರನಾಡಿಗಳಲ್ಲಿ ಅದಾವುದೋ ಚೈತನ್ಯ ತುಂಬಿಕೊಳ್ಳುತ್ತಿತ್ತು. ನನ್ನೂರಾದ ಸರಾಯ್ ಮುಟ್ಟುತ್ತಿದ್ದಂತೆ ಪ್ರತಿಯೊಬ್ಬರ ಮುಖವೂ ನನ್ನ ಮುಂದೆ ತೇಲಿ ಬರುತ್ತಿತ್ತು. ನನ್ನನ್ನು ಎದುರುಗೊಳ್ಳಲು ಅದೆಷ್ಟು ಜನ ಸ್ಟೇಶನಿನಲ್ಲಿ ಜಮಾಯಿಸುತ್ತಿದ್ದರು!

ಹಳೆಯ ನೆನಪುಗಳು ಪ್ರವಾಹದಂತೆ ನುಗ್ಗುತ್ತಾ ಅಮ್ಮನನ್ನು ಘಾಸಿಗೊಳಿಸಿದವು. ನನ್ನ ತಂದೆ ಹುಟ್ಟೂರನ್ನು ತೊರೆದು ಉತ್ತರಪ್ರದೇಶದಲ್ಲಿ ತಮ್ಮ ವ್ಯಾಪಾರವನ್ನು ಹಚ್ಚಿಕೊಂಡಿದ್ದರು. ನಾವೆಲ್ಲಾ ಪಂಜಾಬಿನ ಹೊರಗೇ ಹುಟ್ಟಿದವರು. ನನ್ನ ತಂದೆ ಎಲ್ಲೋ ವರ್ಷ ಎರಡುವರ್ಷಕ್ಕೊಮ್ಮೆ ಹುಟ್ಟೂರಾದ ಪಂಜಾಬಿಗೆ ಹೋದರೆ, ಅಮ್ಮ ವರ್ಷಕ್ಕೆ ಎರಡು-ಮೂರು ಭಾರಿಯಾದರೂ ಹೋಗಿಬರುತ್ತಿದ್ದಳು. ಅವಳೊಟ್ಟಿಗೆ ಕೊನೆಯ ಮಗು ಯಾವಾಗಲೂ ಜತೆಗಿರುತ್ತಿತ್ತು.

ಪಂಜಾಬಿನ ವಿಭಜನೆ, ಅವಳ ಪಂಚನದಿಗಳಲ್ಲಿ ಹರಿದ ನೆತ್ತರು ನನ್ನ ನೆನಪಿನಲ್ಲಿ ಇನ್ನೂ ಹಸಿಹಸಿಯಾಗಿಯೇ ಇದೆ. ಆದರೂ, ತಾನು ಅಲ್ಲಿಗೆ ಹೋಗಿ ಬರಲೇ ಬೇಕೆಂದು ಅಮ್ಮ ಹಟ ಹಿಡಿದಳು. ಯಾರ ಮಾತನ್ನೂ ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವಳು ಹೋಗೇ ಹೋದಳು! ಇಪ್ಪತ್ತು ದಿನಗಳ ನಂತರ ಮರಳಿ ಬಂದಳು. ಹಳ್ಳಿಯಿಂದ ನಮ್ಮ ಸಾಮಾನು ಸರಂಜಾಮುಗಳನ್ನು ಬೇರೊಂದೇ ರೈಲಿನಲ್ಲಿ ಕಳುಹಿಸಿದ್ದಳು. ತನ್ನ ಜತೆಯಲ್ಲಿ ಒಂದು ಚರಕ ಮತ್ತು ಮೊಸರು ಕಡೆಯುವ ಕೋಲನ್ನಷ್ಟೇ ತಂದಿದ್ದಳು.

ಕೋಮು ಜ್ವಾಲೆಯ ದಳ್ಳುರಿ ನಂತರದ ದಿನಗಳಲ್ಲಿ ಪಂಜಾಬಿನ ಉದ್ದಗಲಕ್ಕೂ ವ್ಯಾಪಕವಾಗಿ ಹರಡಿತು. ಹಳ್ಳಿ ನಗರಗಳು ಬೆಂಕಿಗೆ ಬೂದಿಯಾದವು. ಬೆಂಕಿ ಕೊನೆಗೂ ನಂದಿದಾಗ ಲಾಹೋರ್ ಮತ್ತು ಅಮೃತಸರದ ಮಧ್ಯೆ ಒಂದು ಆಳವಾದ ವಿಶಾಲ ಕಂದಕವೇರ್ಪಟ್ಟಿತ್ತು. ಕಂದಕದ ಆಚೆಯ ಭೂಮಿ ಬಹಳ ದೂರಕ್ಕೆ ಚಲಿಸಿದಂತಾಗಿತ್ತು. ನಮ್ಮ ಊರು ಕಂದಕದ ಆಚೆ ಬದಿಗಿತ್ತು ಎಂಬುದಾಗಲೀ, ಕಾಲುವೆಗುಂಟ ಒಂದು ಜಲ್ಲಿ ರಸ್ತೆಯಿತ್ತೆಂಬುದಾಗಲೀ, ತುಂಬು ಯೌವ್ವನೆಯಂತೆ ಬಳುಕಾಡುತ್ತಾ ಊರಿನೊಳಗೆ ಹರಿಯುತ್ತಿದ್ದ ಜೀಲಂ ನದಿ ಕೂಡ ಕ್ರಮೇಣ ನಮಗೆ ಮರೆತು ಹೋಗಿತ್ತು.

ಕೆಲವೇ ವರ್ಷಗಳ ಹಿಂದೆ ನಮ್ಮದೇ ಆಗಿದ್ದ ಊರನ್ನು ತಲುಪಲು, ನದಿಯ ಮೇಲೆ ರಾಜಕೀಯ ಕಾರಣಗಳಿಗಾಗಿ ನಿರ್ಮಿಸಿದ್ದ ಸೇತುವೆಯ ಮೆಲೆ ನಾನು ಮತ್ತು ಅಮ್ಮ ಇಂದು ಪ್ರಯಾಣಿಸುತ್ತಿದ್ದೆವು. ನಮ್ಮ ಊರು ಇಂದು ಪರದೇಶವಾಗಿತ್ತು.

“ಮಗಾ, ರೈಲು ಸರಾಯ್ ನಿಲ್ದಾಣದಲ್ಲಿ ನಿಲ್ಲುತ್ತದೆ ಅಲ್ಲವೇ?” ಯಾವುದೋ ಪುಸ್ತಕ ತಿರುವಿಹಾಕುತ್ತಿದ್ದ ನನಗೆ ಅಮ್ಮ ಕೇಳಿದಳು.

“ಹೌದಮ್ಮ.” ನಾನು ಯೋಚಿಸಿ ಹೇಳಿದೆ. “ಆದರೆ ರೈಲು ಸರಾಯ್ ತಲುಪುವುದು ಬೆಳಗಿನ ಝಾವ ಎರಡಕ್ಕೆ. ಆ ಹೊತ್ತಿನಲ್ಲಿ ನಮಗೆಲ್ಲಿ ಎಚ್ಚರವಿರುತ್ತದೆ? ಸರಾಯ್ ಬಂದು ಹೋಗಿರುವುದೇ ನಮಗೆ ಗೊತ್ತಾಗುವುದಿಲ್ಲ! ಅಲ್ಲದೆ, ನಮಗೆ ಸರಾಯ್ ಜೊತೆ ಏನು ಸಂಬಂಧ ಉಳಿದುಕೊಂಡಿದೆ ಅಂತ?”

ನನ್ನ ಉತ್ತರದಿಂದ ಅವಳಿಗೆ ಕಿರಿಕಿರಿಯಾಗಿರಬೇಕು. “ಸರಾಯ್ ಜೊತೆ ನಿನಗ್ಯಾವ ಸಂಬಂಧಗಳಿರಲಿಲ್ಲ ಬಿಡು.” ನನ್ನ ಮಾತು ಅವಳನ್ನು ನೋಯಿಸಿತ್ತು. ನಾನು ಸುಮ್ಮನಾಗಿ ಮತ್ತೆ ಪುಸ್ತಕದಲ್ಲಿ ಹುದುಗಿದೆ.

ನಿಧಾನವಾಗಿ ಕತ್ತಲು ಕವಿಯತೊಡಗಿತು. ಅಮ್ಮ ತಿಂಡಿಯ ಗಂಟನ್ನು ಬಿಚ್ಚತೊಡಗಿದಳು. ನಮ್ಮ ಜೊತೆ ದೂರದ ಬಂಧುವೊಬ್ಬರಿದ್ದರು. ತಿಂದ ಶಾಸ್ತ್ರ ಮುಗಿಸಿ ನಾವು ನಿದ್ದೆ ಹೋಗಲು ತಯಾರಿ ನಡೆಸತೊಡಗಿದೆವು. ಅಷ್ಟೊತ್ತಿಗಾಗಲೇ ಮಾವನ ಕಡೆಯಿಂದ ಗೊರಕೆಯ ಸದ್ದು ಕೇಳಿಬರತೊಡಗಿತು. ನಾನು ಮೇಲಿನ ಬರ್ತಿನ ಮೇಲೆ ಬಿದ್ದುಕೊಂಡೆ. ಅಮ್ಮ ಹಾಗೇ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತುಕೊಂಡಿದ್ದಳು.

ಸ್ವಲ್ಪ ಹೊತ್ತಿನ ಬಳಿಕ ನನಗೆ ಹಠಾತ್ತನೆ ಎಚ್ಚರವಾಯಿತು. ಅಮ್ಮ ಹಾಗೆಯೇ ಕುಳಿತಿದ್ದಳು. ಗಡಿಯಾರ ನೋಡಿದೆ. ಹತ್ತೂವರೆಯಾಗಿತ್ತು. “ಸ್ವಲ್ಪ ಹೊತ್ತು ಅಡ್ಡ ಬೀಳಬಾರದೇನಮ್ಮ?” ನಾನೆಂದೆ.

“ಸರಿ ಕಣಪ್ಪ” ಎನ್ನುತ್ತಾ ಅವಳು ಹಾಗೆಯೇ ಒರಗಿಕೊಂಡಳು. ಅರೆಸುಪ್ತಾವಸ್ಥೆಯ ಆ ಸ್ಥಿತಿಯಲ್ಲಿ ನನಗೊಂದು ಭಯಾನಕ ಕನಸು ಬಿದ್ದಿತು. ಪೂರ್ಣ ವಿವರಗಳು ನೆನಪಿಲ್ಲದಿದ್ದರೂ ಅದು ನನ್ನನ್ನು ತೀವ್ರವಾಗಿ ಕಂಗೆಡಿಸಿತು. ನಾನೊಂದು ಕೆಂಪು ನೀರಿನ ಹೊಂಡದಲ್ಲಿ ಬಿದ್ದು ಹೊರಳಾಡುತ್ತಿದ್ದೆ. ಆ ಕ್ಷಣದಲ್ಲೇ ಎಚ್ಚರಗೊಂಡು ಭಯ ವಿಹ್ವಲನಾದೆ. ಅಮ್ಮ ನನ್ನನ್ನು ಹಿಡಿದು ಎಚ್ಚರಿಸುತ್ತಿದ್ದಳು. ಅವಳು ಆತಂಕದಿಂದ ಸಣ್ಣಗೆ ಕಂಪಿಸುತ್ತಿದ್ದಳು.

“ಏನಮ್ಮಾ?” ನಾನು ಹೌಹಾರಿ ಎದ್ದು ಕುಳಿತೆ.

“ಹೊರಗೆ ಏನೋ ಗಲಾಟೆ ಕಣಪ್ಪ. ಸ್ವಲ್ಪ ವಿಚಾರಿಸು.” ಎಂದಳು ಭಯದಿಂದ.

ನಾನು ಕಿಟಕಿಯನ್ನು ಎತ್ತಿ ಹೊರಗೆ ಇಣುಕಿದೆ. ಯಾವುದೋ ಸಣ್ಣ ನಿಲ್ದಾಣದಲ್ಲಿ ರೈಲು ನಿಂತಿತ್ತು. ಒಂದೇ ಕಂಬದ ಮೇಲೆ ಮಿಣುಗುಟ್ಟುತ್ತಿದ್ದ ದೀಪವೊಂದು ಪ್ಲ್ಯಾಟ್‌ಫೋರ್ಮಿನ ಮೇಲೆ ಮಂದವಾಗಿ ಬೆಳಕನ್ನು ಚೆಲ್ಲಿತ್ತು. ವಾತಾವರಣದಲ್ಲಿ ಏನೋ ದುಗುಡ, ಕಾತುರತೆ, ಆತಂಕ ತುಂಬಿದಂತೆ ಭಾಸವಾಗುತ್ತಿತ್ತು. ಹದಿನಾಲ್ಕು ವರ್ಷಗಳ ಹಿಂದಿನ ಘಟನೆಗಳನ್ನು ನಾನು ಕೇಳಿದ್ದೆ. ಗಲಭೆಕೋರರು ರೈಲುಗಳನ್ನು ಹೀಗೆಯೇ ನಿಲ್ಲಿಸಿ ಎದುರು ಕೋಮಿನವರನ್ನು ಬಾಳೆಗಿಡಗಳಂತೆ ಕೊಚ್ಚಿ ಹಾಕುತ್ತಿದ್ದರು. ನನ್ನ ಬಂಧು ಬೆನ್ನ ಹಿಂದೆಯೇ ನಿಂತು ಆತಂಕದಿಂದ “ಏನಂತೆ?” ಎಂದರು.

ಹೊರಗಿನಿಂದ ಒಂದು ಗಟ್ಟಿಯಾದ ಸ್ವರ ಕೇಳಿಸಿತು.

“ಅರೇ… ರೈಲಿನೊಳಗೆ ಸರಾಯ್ ಊರಿನವರು ಯಾರಾದರೂ ಇದ್ದೀರಾ?”

“ಇದು ಯಾವ ಸ್ಟೇಶನಮ್ಮಾ?” ನಾನು ಕೇಳಿದೆ.

“ಇದು ನನ್ನೂರು… ಸರಾಯ್ ಕಣಪ್ಪ!” ಎಂದಳು. ಅವಳ ದನಿ ಕಂಪಿಸುತ್ತಿತ್ತು.

ಅದೇ ದನಿ ಗಟ್ಟಿಯಾಗಿ ಮತ್ತೊಮ್ಮೆ ಅರಚಿತು: “ಅರೇ, ಸರಾಯ್ ಊರಿನವರು ರೈಲಿನಲ್ಲಿ ಯಾರಾದ್ರೂ ಇದ್ದೀರಾ?”

ನಾನು ತಾಯಿಯ ಕಡೆಗೊಮ್ಮೆ ನೋಡಿದೆ. ಹೆಮ್ಮೆಯಿಂದ ಅವಳ ಮೊಗ ಮಿಂಚುತ್ತಿತ್ತು. “ಏನು ಸಮಾಚಾರ ಎಂದು ಕೇಳಪ್ಪ” ಎಂದಳು. ಕಿಟಕಿಯಿಂದ ನಾನು ತಲೆಯನ್ನು ಹೊರಹಾಕಿದೆ. ಜನ ರೈಲಿನುದ್ದಕ್ಕೂ ಸರಾಯ್‌ಯವರನ್ನು ಕೇಳಿಕೊಂಡು ಓಡುತ್ತಿದ್ದರು.

“ಏನಪ್ಪ ಸಮಾಚಾರ?” ನಾನೊಬ್ಬನನ್ನು ಕೇಳಿದೆ.

“ನಿಮ್ಮ ಜೊತೆ ಸರಾಯ್ ಊರಿನವರು ಯಾರಾದರೂ ಇದ್ದಾರಾ?” ಅವನು ಕೇಳಿದ.

“ಹೌದು. ನಾನು ಸರಾಯ್‌ಯವಳು”. ಎನ್ನುತ್ತಾ ಅಮ್ಮ ಮುಂದೆ ಬಂದಳು.

“ನೀವು ನಿಜವಾಗಿಯೂ ಸರಾಯ್‌ಯವರಾ?” ಅವನ ದನಿಯಲ್ಲಿ ಅನುಮಾನವಿತ್ತು. “ಹೌದು” ಎಂದಳು ಅಮ್ಮ. ಅವಳು ಹೇಳುತ್ತಿದ್ದಂತೆ, ನಮ್ಮ ಬೋಗಿಯ ಮುಂದೆ ದೊಡ್ಡ ನೂಕುನುಗ್ಗಲಾಯಿತು. ನೂರಾರು ಮಂದಿ ಒಮ್ಮೆಲೇ, “ನೀವು ನಿಜವಾಗಿಯೂ ಸರಾಯ್‌ನವರೇ?” ಎಂದು ಮುಗಿಬಿದ್ದರು.

“ಹೌದು. ನಾನು ಖಂಡಿತವಾಗಿಯೂ ಸರಾಯ್‌ನವಳೇ…”

ಹೊರಗೆ ಖುಷಿಯ ಹಾಹಾಕಾರ.

“ನೀವು ಯಾವ ಕುಟುಂಬಕ್ಕೆ ಸೇರಿದವರು?” ಯಾರೋ ಕೇಳಿದರು. ಅಮ್ಮ ನನ್ನ ಕಡೆಗೆ ನೋಡಿದಳು.

ನಾನು ಉತ್ತರಿಸಿದೆ: “ನನ್ನ ತಂದೆಯ ಹೆಸರು ಸರ್ದಾರ್ ಮೂಲಸಿಂಗ್. ಇವರು ನನ್ನ ತಾಯಿ.”

“ನೀವು ಸರ್ದಾರ್ ಮೂಲಸಿಂಗರ ಪುತ್ರನೇ?” ಹಲವಾರು ದನಿಗಳು ಒಕ್ಕೊರಲಿನಿಂದ ಉಲಿದವು. “ಮತ್ತು ನೀವು ಅವರ ಪತ್ನಿ? ಅಂದರೆ, ಸರ್ದಾರ್ ರಾವೆಲ್‌ಸಿಂಗರ ಅತ್ತಿಗೆ? ಅವರೆಲ್ಲಾ ಹೇಗಿದ್ದಾರೆ?..” ಎಲ್ಲರೂ ಒಟ್ಟಿಗೇ ಕೇಳುತ್ತಿದ್ದಂತೇ ಹಲವಾರು ಕೈಗಳು ಕಿಟಕಿಯೊಳಗೆ ತೂರಿಬಂದವು. ಆ ಕೈಗಳಲ್ಲಿ ಬಾದಾಮಿ, ಪಿಸ್ತಾ, ಆಕ್ರೋಟು, ಒಣ ದ್ರಾಕ್ಷಿಗಳ ಸಣ್ಣ ಸಣ್ಣ ಪೊಟ್ಟಣಗಳಿದ್ದವು. ಭಾವೋದ್ವೇಗದಿಂದ ನಮ್ಮಿಂದ ಮಾತುಗಳೇ ಹೊರಡಲಿಲ್ಲ. ಅವರಿತ್ತ ಕಾಣಿಕೆಗಳನ್ನು ಇಸಿದು ಸೀಟಿನ ಮೇಲೆ ಪೇರಿಸಿದೆವು. ಕ್ಷಣಾರ್ಧದಲ್ಲಿ ಅಲ್ಲೊಂದು ದೊಡ್ಡ ಗುಪ್ಪೆಯೇ ಆಯಿತು.

ನಾನು ಮೂಕವಿಸ್ಮಿತನಾಗಿದ್ದೆ. ಅಮ್ಮ ದುಪಟ್ಟಾವನ್ನು ತಲೆ ತುಂಬಾ ಹೊದ್ದು ಅವರಿಗೆಲ್ಲಾ ಕೈಮುಗಿದಳು. ಆನಂದಾತಿರೇಕದಿಂದ ಅವಳ ತುಟಿಗಳು ಕಂಪಿಸುತ್ತಿದ್ದವು. ಅವಳಿಂದ ಮಾತುಗಳೇ ಹೊರಡಲಿಲ್ಲ. ಅವಳ ಕಣ್ಣಾಲಿಗಳು ತುಂಬಿದ್ದವು.

ಅಲ್ಲಿಯೇ ನಿಂತಿದ್ದ ಗಾರ್ಡ್ ಹಸಿರು ಲಾಟೀನನ್ನು ಎತ್ತಿ ಜೇಬಿನಿಂದ ಶಿಳ್ಳೆಯನ್ನು ಹೊರತೆಗೆಯಲು ಕೈ ಹಾಕಿದ. ನಾಲ್ಕಾರು ಜನ ಅವನನ್ನು ಸುತ್ತುವರೆದು, “ಅರೇ ಬಾಬು, ಇನ್ನೊಂದೆರಡು ಗಳಿಗೆ ಸುಮ್ಮನಿರಪ್ಪ. ಈಕೆ ನಮ್ಮೂರಿನ ಸೊಸೆ!” ಎಂದು ಅವನಿಗೆ ದುಂಬಾಲು ಬಿದ್ದರು. ಯಾರೋ ಲಾಟೀನನ್ನು ಎತ್ತಿದ್ದ ಅವನ ಕೈಯನ್ನು ಬಲವಂತದಿಂದ ಕೆಳಗಿಳಿಸಿದ್ದ.

“ಅತ್ತಿಗೆ, ಸರ್ದಾರ್ಜಿ ಹೇಗಿದ್ದಾರೆ? ನಿಮ್ಮ ಜೊತೆ ಅವರ್‍ಯಾಕೆ ಪಂಜಾಸಾಹಿಬ್ ದರ್ಶನಕ್ಕೆ ಬರಲಿಲ್ಲ?” ಯಾರೋ ವಯಸ್ಸಾದ ವ್ಯಕ್ತಿ ಕೇಳಿದ. ಅಮ್ಮ, ದುಪ್ಪಟವನ್ನು ಮತ್ತೂ ಬಿಗಿಗೊಳಿಸುತ್ತಾ, ಸಣ್ಣ ದನಿಯಲ್ಲಿ “ಸರ್ದಾರ್ಜಿ ಇಹಲೋಕವನ್ನು ತ್ಯಜಿಸಿದ್ದಾರೆ.” ಎಂದಳು.

“ಏನೂ? ಸರ್ದಾರ್ಜಿ ತೀರಿಕೊಂಡರೆ! ಏನಾಗಿತ್ತು ಅವರಿಗೆ?” ಹಲವಾರು ಜನ ಒಮ್ಮೆಲೇ ಕೇಳಿದರು. ಅಮ್ಮ ಸುಮ್ಮನಾದಳು. ನಾನೇ ಹೇಳಿದೆ: “ಅವರಿಗೆ ಕರುಳಿನ ಹುಣ್ಣಾಗಿತ್ತು. ಒಂದು ದಿನ ಅದು ಒಡೆದು ಅಪ್ಪ ತೀರಿಕೊಂಡರು.”

“ಸರ್ದಾರ್ಜಿ ಒಳ್ಳೆಯ ಮನುಷ್ಯರಾಗಿದ್ದರು. ದೇವರು ಅವರನ್ನು ತನ್ನ ದರ್ಗದಲ್ಲಿ ಹಾಯಾಗಿರಿಸಲಿ.” ಯಾರೋ ಒಬ್ಬ ಪ್ರಾರ್ಥಿಸಿದ. ಕೆಲವು ಕ್ಷಣ ಅಲ್ಲಿ ಒಮ್ಮೆಲೆ ಗಾಢ ಮೌನ ಆವರಿಸಿತು.

“ಅತ್ತಿಗೆ, ನಿಮ್ಮ ಮಕ್ಕಳು ಹೇಗಿದ್ದಾರೆ?”

“ವಾಹೆ ಗುರೂಜಿಯವರ ಕೃಪೆಯಿಂದ ಮಕ್ಕಳೆಲ್ಲಾ ಸುಖವಾಗಿದ್ದಾರೆ.” ಎಂದಳು ಅಮ್ಮ.

“ಅಲ್ಲಾಹ್ ಅವರಿಗೆ ದೀರ್ಘ ಆಯಸ್ಸನ್ನು ಕರುಣಿಸಲಿ.” ಹಲವಾರು ದನಿಗಳು ಏಕ ಕಾಲಕ್ಕೆ ಮಂತ್ರೋಚ್ಛಾರದಂತೆ ಉಲಿದವು. ನಂತರ ಯಾರೋ ಕೇಳಿದರು. “ಅತ್ತಿಗೇ, ಒಮ್ಮೆ ಮಕ್ಕಳೊಂದಿಗೆ ಊರಿಗೆ ಬಂದು ಹೋಗಬಾರದೆ?”

ಮತ್ತೊಮ್ಮೆ ಹಲವಾರು ದನಿಗಳು “ಹೌದು ಅತ್ತಿಗೆ. ಖಂಡಿತಾ ಊರಿಗೆ ಬಂದು ಹೋಗಿ.” ಎಂದು ಪ್ರತಿಧ್ವನಿಸಿದವು. ನನ್ನ ಬೆನ್ನ ಹಿಂದೆ ನಿಂತಿದ್ದ ಬಂಧುಗಳು ಗೊಣಗುಟ್ಟಿದರು, “ಸೂ.. ಮಕ್ಕಳು! ನಮ್ಮನ್ನು ಬಡಿದು ಹೊರದಬ್ಬಿ ಈಗ ಊರಿಗೆ ಬನ್ನಿ ಎನ್ನುತ್ತಿದ್ದಾರೆ! ಕಳ್ರು!!”

ಮಾವನ ಮಾತು ಹೊರಗೆ ನಿಂತಿದ್ದ ಯಾರಿಗೂ ಕೇಳಿಸಲಿಲ್ಲ. ಅವರೆಲ್ಲಾ, “ಮಕ್ಕಳೊಟ್ಟಿಗೆ ಊರಿಗೆ ಬನ್ನಿ ಅತ್ತಿಗೆ. ನೀವು ಊರನ್ನು ಮರೆತಿಲ್ಲ ತಾನೆ? ಖಂಡಿತಾ ಬರಬೇಕು” ಎಂದು ಒಂದೇ ಸಮನೆ ಜಪಿಸುತ್ತಿದ್ದರು.

ಅಮ್ಮ ಮಾತು ಮರೆತಿದ್ದಳು. ದುಪ್ಪಟವನ್ನು ಸರಿಪಡಿಸುತ್ತಾ ಪ್ರತಿಯೊಬ್ಬರಿಗೂ ತಲೆ ಬಾಗಿಸುವ ಕಾಯಕದಲ್ಲೇ ಅವಳು ಮೈಮರೆತಿದ್ದಳು.

ಜನಸಂದಣಿಯಿಂದ ದೂರಸರಿದಿದ್ದ ಗಾರ್ಡು ಲಾಟೀನನ್ನು ಎತ್ತಿ ಶಿಳ್ಳೆಯನ್ನು ಊದಿದ. ರೈಲು ತಾನೂ ಶಿಳ್ಳೆಯನ್ನೂದುತ್ತಾ ಕದಲಲಾರಂಭಿಸಿತು. ಹೊರಗೆ ಜನ ನಮ್ಮ ಬೋಗಿಯ ಜತೆಯಲ್ಲೇ ನಡೆದುಕೊಂಡು ಬರತೊಡಗಿದರು. “ಆಯ್ತು ಅತ್ತಿಗೆ.. ನಮ್ಮ ಸಲಾಮುಗಳು.. ಸಲಾಮು ಕಣಪ್ಪ ಮಗಾ. ರಾವೆಲ್‌ಸಿಂಗನಿಗೂ ನಮ್ಮ ಸಲಾಮುಗಳನ್ನು ತಿಳಿಸಿ…”

ಅಮ್ಮ ಕೈಗಳನ್ನು ಜೋಡಿಸಿದ್ದ ಭಂಗಿಯಲ್ಲೇ ನಿಂತಿದ್ದಳು. ಅವಳು ಏನನ್ನೋ ಹೇಳುತ್ತಿದ್ದಳಾದರೂ, ಆ ಗಲಾಟೆಯಲ್ಲಿ ಏನೂ ಕೇಳಿಸುತ್ತಿರಲಿಲ್ಲ. ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆ ಜನ ದೂರವಾಗತೊಡಗಿದರು. ಅವರು ಕೈಬೀಸುತ್ತಲೇ ಇದ್ದರು.

ಅವರೆಲ್ಲಾ ಮರೆಯಾಗುತ್ತಿದ್ದಂತೆ ಸೀಟಿನ ಮೇಲೆ ಹರಡಿದ್ದ ಪೊಟ್ಟಣಗಳನ್ನು ಬದಿಗೆ ಸರಿಸಿ. ಅಮ್ಮನಿಗೆ ಏನೋ ಹೇಳಲು ನಾನು ಅತ್ತ ತಿರುಗಿದೆ. ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ದುಪಟ್ಟಾದಿಂದ ಒರೆಸುವ ವ್ಯರ್ಥ ಪ್ರಯತ್ನವೂ ನಡೆದಿತ್ತು.

ರೈಲು ಜೀಲಂ ನದಿಯ ಮೇಲಣ ಸೇತುವೆಯ ಮೇಲೆ ಓಡುತ್ತಿತ್ತು. ಸೇತುವೆಯನ್ನು ನೋಡಲು ನಾನು ಕಿಟಕಿಯಿಂದ ಹೊರಗೆ ಇಣುಕಿದೆ. ಅದು ಬಲಿಷ್ಟವಾದ ಸೇತುವೆ ಎಂದು ಕೇಳಿದ್ದೆ. ಸೇತುವೆಯ ಕೆಳಗೆ ದೃಷ್ಟಿಯನ್ನು ಬೀರಲು ಪ್ರಯತ್ನಿಸಿದೆ. ಆ ಗಾಢಾಂಧಕಾರದಲ್ಲಿ ನನಗೆ ಏನೂ ಕಾಣಿಸಲಿಲ್ಲ. ಆದರೂ ಕಲ್ಲು ಕಬ್ಬಿಣದಿಂದ ತಯಾರಾದ ಆ ಬೃಹತ್ ಸೇತುವೆಯ ಕೆಳಗೆ ಶುಭ್ರವಾದ, ತಂಪಾದ ಜೀಲಂ ನದಿ ಹರಿಯುತ್ತಿದೆ ಎಂದು ನನಗೆ ಗೊತ್ತಿತ್ತು.

(“ಅಶೋಕ್ ಭಳ್ಳಾ“ರವರ ಇಂಗ್ಲಿಷ್ ಅನುವಾದದಿಂದ)