Daily Archives: August 12, 2014

ಕೆ.ಪಿ.ಎಸ್.ಸಿ ನೇಮಕಾತಿ ರದ್ದು: ಹಿಂದುಳಿದವರಿಗೆ ಅನ್ಯಾಯ?

– ಹೊರಳಳ್ಳಿ ಸುಂದರೇಶ್

ಕರ್ನಾಟಕದ ಕೆಲವು ಪ್ರಜ್ಞಾವಂತ, ಪ್ರಗತಿಪರ ಚಿಂತಕರು ಕೆ.ಪಿ.ಎಸ್.ಸಿ ನೇಮಕಾತಿ ಪಟ್ಟಿಯನ್ನು ರದ್ದು gonal-bhimappaಮಾಡಿದ ಸರಕಾರದ ತೀರ್ಮಾನವನ್ನು ಅಹಿಂದ ವರ್ಗಗಳಿಗೆ ಆದ ಅನ್ಯಾಯ ಎಂದು ವಾದಿಸುತ್ತಿದ್ದಾರೆ. ಆ ಮೂಲಕ ಸಾಮಾಜಿಕ ತಾಲಗಳಲ್ಲಿ, ಆಪ್ತ ವಲಯಗಳಲ್ಲಿ ತಮ್ಮ ಅಭಿಪ್ರಾಯಕ್ಕೆ ಸಹಮತ ವ್ಯಕ್ತ ಉಂಟಾಗುವಂತೆ ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಇದುವರೆಗೆ ನೆಡೆದಿರುವ ಎಲ್ಲಾ ನೇಮಕಾತಿಗಳ ಪೈಕಿ ಅತಿಹೆಚ್ಚು ಹಿಂದುಳಿದವರು, ದಲಿತರು ಆಯ್ಕೆಯಾಗಿದ್ದು ಇದೇ ಮೊದಲು ಎಂಬ ವಾದವನ್ನೂ ಮುಂದಿಡುತ್ತಿದ್ದಾರೆ. ಅದರರ್ಥ ಈ ಮೊದಲಿನ ನೇಮಕಾತಿ ಪ್ರಕ್ರಿಯೆಯಲ್ಲಾದರೂ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿದೆ ಎಂಬುದನ್ನು ಒಪ್ಪಿಕೊಂಡಾಯ್ತಲ್ಲ. ಹಾಗಾದರೆ ಇವರೇಕೆ ಇದುವರೆಗೂ 1998, 1999 ಮತ್ತು 2004 ರ ನೇಮಕಾತಿಗಳನ್ನು ರದ್ದು ಮಾಡಬೇಕೆಂದು ದನಿ ಎತ್ತುತ್ತಿಲ್ಲ. ಆ ನೇಮಕಾತಿಗಳಲ್ಲಿ ಅಂಕಗಳ ಮರುಹೊಂದಾಣಿಕೆ, ಸಂದರ್ಶನದ ಅಂಕಗಳನ್ನು ನೀಡುವಾಗಿನ ಅವ್ಯವಹಾರ ಎಲ್ಲವೂ ಬಹಿರಂಗವಾಗಿದ್ದು, ನ್ಯಾಯಾಲಯವೂ ಈ ಬಗ್ಗೆ ಆಕ್ಷೇಪ ಎತ್ತಿದೆ. ಆದರೂ ಏಕೆ ಆ ಪಟ್ಟಿಗಳನ್ನು ಸರಕಾರ ತಿರಸ್ಕರಿಸಬೇಕೆಂದು ಕೇಳುತ್ತಿಲ? ಆಗ ನೇಮಕಗೊಂಡವರು ಇಂದು ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾದರೆ, ಈ ಕೆಲ ಪ್ರಗತಿಪರರು (ಎಲ್ಲರೂ ಅಲ್ಲ) ಏಕೆ ದನಿ ಎತ್ತುತ್ತಿಲ್ಲ? ಅವರ ನಿಷ್ಠೆ ಯಾರಿಗೆ?

ಭ್ರಷ್ಟಾಚಾರದಿಂದ ಕೂಡಿದ ನೇಮಕಾತಿ ಪ್ರಕ್ರಿಯೆಗಳು ಯಾವುದೇ ಇರಲಿ, ಅಲ್ಲಿ ಅನ್ಯಾಯವಾಗುವುದು ದೀನ ದಲಿತರಿಗೆ ಎಂಬುದು ಸಾಮಾನ್ಯ ತಿಳವಳಿಕೆ. ಇಲ್ಲಿಯೂ ಹಾಗೇ ಆಗಿರುವುದು. ದೇವೇಗೌಡ, ಕುಮಾರಸ್ವಾಮಿ ಮತ್ತಿತರ ಮುಂದುವರಿದ ಜನಾಂಗದ ಮುಖಂಡರು ಪ್ರತಿಭಟನೆ ಬೆಂಬಲ ವ್ಯಕ್ತಪಡಿಸುತ್ತಿರುವುದರ ಹಿನ್ನೆಲೆ ಬೇರೆ ಇರಲು ಸಾಧ್ಯವೇ? ಈ ಮುಖಂಡರು ಎಂದಾದರೂ, KPSC-bribe-ratesದಲಿತರ ಜೀತ ಪ್ರಕರಣಗಳಿಗೆ, ದಲಿತರ ಮೇಲೆ ನಡೆಯುವ ದಬ್ಬಾಳಿಕೆ ವಿಚಾರವಾಗಿ ಬೀದಿಗೆ ಬಂದು ಕಣ್ಣೀರು ಹಾಕಿದ ಉದಾಹರಣೆಗಳಿವೆಯೇ?

ಎಲ್ಲರಿಗೂ ಗೊತ್ತಿರುವ ಸಂಗತಿ ಈ ಹಿಂದಿನ ಕೆ.ಪಿ.ಎಸ್.ಸಿ ಅಧ್ಯಕ್ಷ ಗೋನಾಳ ಭೀಮಪ್ಪನವರನ್ನು ನೇಮಕ ಮಾಡಿದ್ದು ಕುಮಾರಸ್ವಾಮಿ ಸರಕಾರ. ಅಂದು ಎಚ್.ಡಿ.ರೇವಣ್ಣರು ಹೊಂದಿದ್ದ ಇಂಧನ ಇಲಾಖೆಯಲ್ಲಿ ಮುಖ್ಯ ಹುದ್ದೆಯಲ್ಲಿದ್ದ ಗೋನಾಳ ಭೀಮಪ್ಪ ಅಧ್ಯಕ್ಷರಾಗಿ ನೇಮಕ ಆದರು. ಆ ನಂತರ ಆಯೋಗ ನಡೆಸಿದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾರಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ ಎನ್ನುವುದು ಗೊತ್ತಾಗುತ್ತದೆ. ಮಂಡ್ಯ, ಮೈಸೂರು, ಹಾಸನ ಭಾಗಗಳ ನೂರಾರು ಯುವಕರು ಪ್ರಮುಖ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗಿದ್ದು ಇದೇ ಕಾರಣಕ್ಕೆ ಎಂಬುದು ಇತ್ತೀಚೆಗೆ ಪದವಿ ಪಡೆದು ಕೆ.ಪಿ.ಎಸ್.ಸಿ ನಡೆಸುವ ಒಂದಲ್ಲ ಒಂದು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಲಕ್ಷಾಂತರ ಯುವಕರಿಗೆ ಈ ಸತ್ಯ ಗೊತ್ತು. ಆದರೂ, ಕೆಲ ಬುದ್ಧಿಜೀವಿಗಳು ಹೀಗೆ ಸುಳ್ಳು ಹೇಳಿ ಯಾರ ಕಣ್ಣಿಗೆ ಮಣ್ಣು ಎರಚಲು ಯತ್ನಿಸುತ್ತಿದ್ದಾರೆ?

ಇನ್ನು ಕೆಲವರು ಪ್ರಾಮಾಣಿಕವಾಗಿ ಆಯ್ಕೆಗೊಂಡು, ಈ ಪಟ್ಟಿ ತಿರಸ್ಕೃತಗೊಂಡ ಕಾರಣ ತೀವ್ರ ದು:ಖದಲ್ಲಿದ್ದಾರೆ. ಅವರಿಗೆ ಅನ್ಯಾಯವಾಗಿರುವುದು ನಿಜ. ಆದರೆ, ಅಂತಹವರ ಸಂಖ್ಯೆ ತುಂಬಾ ಕಡಿಮೆ. ಪಟ್ಟಿಯಲ್ಲಿದ್ದ ಎಲ್ಲರೂ ಪ್ರಾಮಾಣಿಕವಾಗಿ ಆಯ್ಕೆಗೊಂಡಿದ್ದೇ ಆಗಿದ್ದರೆ, ಸಿಐಡಿ ವರದಿ ಬೇರೆಯೇ ಆಗಿರಬೇಕಿತ್ತು. KPSC-loksatta-met-governorಪ್ರತಿಭಟನೆ ಹಾಗೂ ಟಿವಿ ಸಂದರ್ಶನಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ವಾದ ಮಂಡಿಸುತ್ತಿರುವ ಅನೇಕ ಅಭ್ಯರ್ಥಿಗಳ ಹಿನ್ನೆಲೆ ಕೆಲವು ವೀಕ್ಷಕರಿಗಾದರೂ ಗೊತ್ತು. ಅವರಲ್ಲಿ ಕೆಲವರು ತಮ್ಮ ಹುದ್ದೆಗಾಗಿ ಸೈಟು ಮಾರಿಕೊಂಡವರಿದ್ದಾರೆ. ಅವರಲ್ಲಿ ಅನೇಕರು ಸಾಕಷ್ಟು ಆಸ್ತಿ ಹೊಂದಿದವರಾಗಿದ್ದರೂ, ಟಿವಿ ಸ್ಟುಡಿಯೋಗಳಲ್ಲಿ ಕೂತು ಕೂಲಿಕಾರನ ಮಗ, ಜೀತಮಾಡುವವರ ಮಗ ಎಂದು ಸುಳ್ಳೇ ಹೇಳುತ್ತಿದ್ದಾರೆ. ಮನೆಯಲ್ಲಿ ನಡೆದ ದು:ಖದ ಘಟನೆಗಳನ್ನು ಎಳೆತಂದು ಕಣ್ಣೀರು ಹಾಕುತ್ತಿದ್ದಾರೆ. ಅದಾವುದಕ್ಕೂ ನೇಮಕಾತಿಗೂ ಸಂಬಂಧವಿಲ್ಲ. ಹೀಗೆ ಸಾರ್ವಜನಿಕವಾಗಿ ವರ್ತಿಸುವ ಮಂದಿ ಮುಂದೊಂದು ದಿನ ನ್ಯಾಯಾಲಯದ ತೀರ್ಪಿನ ಸಲುವಾಗಿಯೋ, ಅಥವಾ ಇನ್ನಾವುದೋ ಕಾರಣಕ್ಕೆ ಇವರುಗಳು ತಮ್ಮ ಹುದ್ದೆಯನ್ನು ಪಡೆದರೆ ವೃತ್ತಿ ಹೇಗೆ ನಿಭಾಯಿಸುತ್ತಾರೆ ಎಂದು ಆತಂಕವಾಗುತ್ತದೆ.