ಹೆಸರಾಯಿತು ಕರ್ನಾಟಕ.. ಉಸಿರಾಗಲಿಲ್ಲ ಕನ್ನಡ..!


– ಡಾ.ಎಸ್.ಬಿ. ಜೋಗುರ


 

 

ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಾಪದಂ ವಸು
ಧಾವಲಯವಿಲೀನ ವಿಶದ ವಿಷಯ ವಿಶೇಷಂ

ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವಿಸ್ತರಿಸಿತ್ತು ಎನ್ನುವುದನ್ನು ಕವಿ ನೃಪತುಂಗ ವರ್ಣಿಸಿರುವ ಹಾಗೆ ಚಾರಿತ್ರಿಕವಾಗಿ ಮಾತನಾಡುವದಾದರೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂದ್ರಪ್ರದೇಶ ಮುಂತಾದ ರಾಜ್ಯಗಳ ಗಡಿ ಭಾಗಗಳಲ್ಲಿ ಕನ್ನಡದ ಸೀಮೆಗಳಿರುವುದು ವಿಧಿತವಾಗುತ್ತದೆ. ಅದರ ಪರಿಣಾಮವಾಗಿಯೇ ನಾವು ಇವತ್ತಿನವರೆಗೂ ಕನ್ನಡ ಭಾಷೆಯನ್ನು ಗಟ್ಟಿಯಾಗಿ ಬೆಳೆಸುವ ಬಗ್ಗೆ ಆಲೋಚಿಸುವ, ಮಾತನಾಡುವ ಸ್ಥಿತಿ ಎದುರಾಗಿದೆ. ಕರ್ನಾಟಕದ ಏಕೀಕರಣದ ಸಂದರ್ಭದಿಂದಲೂ ಒಂದಿಲ್ಲಾ ಒಂದು ರೀತಿಯ ಅಪಸ್ವರಗಳು ನಾಡಿನ ಏಕೀಕರಣದ ಬಗ್ಗೆ ಮತ್ತು ಮೈಸೂರು ರಾಜ್ಯ ಇದ್ದದ್ದು ಕರ್ನಾಟಕವಾಗಿ ಮರು ನಾಮಕರಣಗೊಳ್ಳುವವರೆಗಿನ ಬೆಳವಣಿಗೆಗಳು ಮಾತ್ರವಲ್ಲದೇ, ಸದ್ಯದ ಜಾಗತೀಕರಣದ ಸಂದರ್ಭದಲ್ಲಿಯೂ ನಾವು ನಾಡ Karnataka mapನುಡಿಯ ಸಂರಕ್ಷಣೆ ಬಗ್ಗೆ ಆಲೋಚಿಸಬೇಕಾಗಿದೆ. ನವಂಬರ್ ೧-೧೯೫೬ ರ ಸಂದರ್ಭದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯ ಎನ್ನುವ ಹೆಸರಿನಲ್ಲಿ ಕನ್ನಡ ರಾಜ್ಯ ಉದಯವಾಯಿತು. ಆ ಸಂದರ್ಭದಲ್ಲಿ ಕನ್ನಡದ ಕಟ್ಟಾಳು ಎಂದೇ ಕರೆಯಿಸಿಕೊಳ್ಳುತ್ತಿದ್ದ ಕೃಷ್ಣ ಕುಮಾರ ಕಲ್ಲೂರ ಅವರು ಪಾಟೀಲ ಪುಟ್ಟಪ್ಪನವರಿಗೆ ಒಂದು ಪತ್ರ ಬರೆದಿದ್ದರು [ ಸಮಗ್ರ ಪಾಪು ಪ್ರಪಂಚ- ಸಂಪುಟ ೩ ಪುಟ ೨೧೩] ‘ಕರ್ನಾಟಕ ಎನ್ನುವ ಹೆಸರಿಲ್ಲದ, ಹಂಪೆಯು ರಾಜಧಾನಿಯಲ್ಲದ, ಈ ರಾಜ್ಯವು ನನಗೆ ಕರ್ನಾಟಕವೇ ಅಲ್ಲ. ಎಲ್ಲಿಯೋ ನಿಮ್ಮಂಥ ಕೆಲವರು, ಪಂಡರೀಕನಿಗೋಸುಗ ಪರಿತಪಿಸುವ ಮಹಾಶ್ವೇತೆಯಂತೆ, ಕರ್ನಾಟಕ ಎಂದು ಬಡಬಡಿಸುತ್ತ ಕುಳಿತಿದ್ದೀರಿ’ ಎಂದು ಬರೆದಿದ್ದರು. ಈ ಬಗೆಯ ಅಸಮಾಧಾನ ಅನೇಕರಲ್ಲಿ ಇದ್ದ ಕಾರಣದಿಂದಲೇ ೧೯೭೩ ರ ಸಂದರ್ಭದಲ್ಲಿ “ಕರ್ನಾಟಕ” ಎಂದು ಮರು ನಾಮಕರಣವಾಯಿತು. ಆ ನಾಮಕಾರಣಕ್ಕಾಗಿ ದಾವಣಗೇರಿಯ ಕೆ.ಎಮ್.ರುದ್ರಪ್ಪನಂಥವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೂ ಅದರ ಕೊಡುಗೆ ಸಂದದ್ದು ಆಗಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರಿಗೆ. ಕರ್ನಾಟಕ ಎಂಬ ಹೆಸರಿನ ಬಗ್ಗೆ ಅಷ್ಟಕ್ಕಷ್ಟೇ ಮನಸಿದ್ದ ದೇವರಾಜ ಅರಸರಿಗೆ ಆ ಕ್ರೆಡಿಟ್ ಹೋದ ಬಗ್ಗೆಯೂ ಪಾಟೀಲ ಪುಟ್ಟಪ್ಪ ತಮ್ಮ ಕೃತಿಯಲ್ಲಿ ವಿಷಾದ ವ್ಯಕ್ತ ಪಡಿಸಿರುವದಿದೆ. ಕರ್ನಾಟಕದ ಏಕೀಕರಣ ಚಳುವಳಿ ಜರುಗಿ ಆರು ದಶಕಗಳಾದರೂ ಇಂದಿಗೂ ನಾವು ಕನ್ನಡದ ಸ್ಥಿತಿ ಗತಿಯ ಬಗ್ಗೆ ಮತ್ತು ಕನ್ನಡ ನಾಡು-ನುಡಿಯ ಬಲಸಂವರ್ಧನೆಯ ಬಗೆಗಿನ ಮಾತುಗಳು ಕೇಳಿ ಬರುತ್ತಿವೆ ಎನ್ನುವುದೇ ಬಹು ದೊಡ್ಡ ವಿಪರ್ಯಾಸ. ಯಾವ ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಬಲಗೊಳ್ಳಬೇಕೋ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲವೇ ಗಡಿ ಭಾಗಗಳಲ್ಲಿ ಕುತ್ತು ಬರಲಿದೆ ಎಂದಾಗ ಒಂದಷ್ಟು ಕನ್ನಡದ ಕಟ್ಟಾಳುಗಳು ಮಾತಾಡುವುದು, ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟರೆ ಮಿಕ್ಕಂತೆ ಮತ್ತೆ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಮತ್ತು ಚರ್ಚೆ ಮತ್ತೊಂದು ರಾಜ್ಯೋತ್ಸವದ ಸಂದರ್ಭದಲ್ಲಿಯೇ.. ಅಷ್ಟಕ್ಕೂ ನಮ್ಮ ನೆಲದ ಭಾಷೆಯ ಬಗ್ಗೆ, ಅದರ ಸಂರಕ್ಷಣೆಯ ಬಗೆಗೆ ತನ್ನದೇ ನೆಲದಲ್ಲಿ ಹೀಗೆ ಉಳಿವು, ಬಲ ಸಂವರ್ಧನೆಯ ಬಗ್ಗೆ ಮಾತಾಡಬಂದದ್ದು ಕನ್ನಡ ಭಾಷೆಯ ಬಹುದೊಡ್ದ ವ್ಯಂಗ್ಯವೂ ಹೌದು. ಶಾಸ್ತ್ರೀಯ ಸ್ಥಾನಮಾನ ಸಿಕ್ಕನಂತರ ಭಯಂಕರ ಬದಲಾವಣೆಗಳಾಗುತ್ತವೆ. ಒಂದು ಹೊಸ ಬಗೆಯ ಪುಷ್ಟಿ ಕನ್ನಡ ಭಾಷೆಗೆ ದೊರೆಯುತ್ತದೆ ಎನ್ನುವ ಮಾತುಗಳೀಗ ಕನ್ನಡ ಭಾಷೆ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದೆ ಎನ್ನುವಂತಾಗಿದೆ. ಯಾವುದೇ ಒಂದು ಪ್ರಾದೇಶಿಕ ಭಾಷೆ ಬಲಗೊಳ್ಳುವುದು ಅದರ ದೈನಂದಿನ ವ್ಯವಹಾರಿಕ ಬಳಕೆಯ ಮಹತ್ವದ ಮೂಲಕವೇ ಹೊರತು ಭಾಷಣಗಳ ಮೂಲಕ..ಘೋಷಣೆಗಳ ಮೂಲಕವಲ್ಲ.

ಕನ್ನಡಕ್ಕೆ ಆಧುನಿಕ ಸಂದರ್ಭಲ್ಲಿ ಇನ್ನಷ್ಟು ತೊಡಕುಗಳು ಎದುರಾದಂತಿವೆ. ಜಾಗತೀಕರಣದ ಸಂದರ್ಭದಲ್ಲಿ ಈ ಪ್ರಾದೇಶಿಕ ಭಾಷೆಗಳು ಕೇವಲ ಅವರವರ ಮನೆಗೆ ಮಾತ್ರ ಸೀಮಿತವಾಗಿ ಉಳಿಯುವ ಸ್ಥಿತಿ ಬಂದೊದಗಿದೆ. ಜಾಗತೀಕರಣ ಆಂಗ್ಲ ಭಾಷೆ ಬಲ್ಲವರನ್ನು ಮಾತ್ರ ಎತ್ತಿಕೊಳ್ಳುತ್ತದೆ ಎನ್ನುವದನ್ನು ಮತ್ತೆ ಮತ್ತೆ ಎತ್ತಿ ಹೇಳಲಾಗುತ್ತದೆ. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಮಿತಿಗಳಿವೆ ಎನ್ನುವ ಮೂಲಕ ಪರೊಕ್ಷವಾಗಿ ಈ ಭಾಷೆಯನ್ನು ಮನೆಯ ಹೊರಗಡೆ ಬೆಳೆಸುವ ಯತ್ನಗಳು ಅಷ್ಟಾಗಿ ನಡೆಯುತ್ತಿಲ್ಲ. ಇನ್ನು ಕಾನ್ವೆಂಟ್ ಶಿಕ್ಷಣ ಪಡೆಯುವ ಒಂದು ದೊಡ್ಡ ತಲೆಮಾರಿಗೆ ಕನ್ನಡದ ಬಗ್ಗೆ ಅಲರ್ಜಿ. ಅವರಿಗೆ ನಾಲ್ಕು ಕನ್ನಡ ಲೇಖಕರ ಹೆಸರುಗಳ ಬಗ್ಗೆಯಾಗಲೀ, ಅವರ ಕೃತಿಗಳ ಬಗ್ಗೆಯಾಗಲೀ ತಿಳಿದಿಲ್ಲ. ಅವರು ಕನ್ನಡದಲ್ಲಿ ಮಾತಾಡುವುದೇ ಕನಿಷ್ಟ ಎಂದು ತಿಳಿದವರು.

ನಗರ ಪ್ರದೇಶಗಳಲ್ಲಿ ದೈಹಿಕ ಪರಿಶ್ರಮದ ವ್ಯವಹಾರಗಳನ್ನು ಅವಲಂಬಿಸಿರುವವನು ಕೂಡಾ ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ಅಗತ್ಯವಿದೆಯೇ..? Flag_of_Karnatakaಅಷ್ಟಕ್ಕೂ ಅವನು ವ್ಯವಹರಿಸುತ್ತಿರುವುದು ತನ್ನದೇ ನೆಲದ ಜನರೊಡನೆ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಕೆಲ ಕಡೆಗಳಲ್ಲಿ ನಮ್ಮ ಪ್ರಾದೇಶಿಕತೆಯ ಒಳಗಡೆಯೇ ಜನ್ಮ ಪಡೆದ ತೀರಾ ಸಣ್ಣ ಪುಟ್ಟ ಸ್ಥಳೀಯ ಭಾಷೆಗಳು ಕೂಡಾ ಕನ್ನಡ ಭಾಷೆಗೆ ತಕ್ಕ ಮಟ್ಟಿಗೆ ತೊಡಕಾಗಿವೆ.. ಆಗುತ್ತಿವೆ. ಉದಾಹರಣೆಗೆ ಮಂಗಳೂರು ಭಾಗದಲ್ಲಾದರೆ ತುಳು ಮತ್ತು ಕೊಂಕಣಿ, ಕಾರವಾರದಲ್ಲಿ ಕೊಂಕಣಿ, ಬೆಳಗಾವಿಯಲ್ಲಿ ಮರಾಠಿ, ಗುಲಬರ್ಗಾ ಮತ್ತು ಬಿಜಾಪುರ ಭಾಗದಲ್ಲಿ ಉರ್ದು, ಬಳ್ಳಾರಿಯಲ್ಲಿ ತೆಲುಗು, ಬೆಂಗಳೂರಲ್ಲಿ ನೆರೆಯ ರಾಜ್ಯದ ತಮಿಳು, ತೆಲುಗು ಹೀಗೆ ಇತರೆ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುವ ಮೂಲಕ ಅದರ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತಗೊಳಿಸಲಾಗುತ್ತಿದೆ. ಈ ನಮ್ಮದೇ ನೆಲದ ಸಣ್ಣ ಪುಟ್ಟ ಭಾಷೆಗಳಾದ ಕೊಂಕಣಿ, ತುಳು, ಕೊಡವ ಮುಂತಾದ ಭಾಷೆಗಳನ್ನು ಉಳಿಸಿಕೊಂಡು ಕನ್ನಡವನ್ನು ಬೆಳೆಸುವ ಬಗ್ಗೆ ಯೊಚಿಸಬೇಕಾಗಿದೆ. ೧೮೯೦ ರ ಸಂದರ್ಭದಲ್ಲಿ ಕನ್ನಡಕ್ಕಾಗಿಯೇ ಕೈ-ಮೈ ಎತ್ತಲು ಜನ್ಮ ತಳೆದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಅಂದಿನಿಂದ ಇಂದಿನವರೆಗೂ ಕನ್ನಡ ನಾಡು-ನುಡಿಯ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತ ಬಂದಿದೆ. ಅದು ಹುಟ್ಟುವದಕ್ಕಿಂತಾ ಎರಡು ದಶಕಗಳ ಮುಂಚೆಯೇ ಡೆಪ್ಯುಟಿ ಚನ್ನಬಸಪ್ಪನಂಥವರು ಕನ್ನಡದ ಶ್ರೇಯೋಭಿವೃದ್ಧಿಗಾಗಿ ಕಂಕಣ ಕಟ್ಟಿದ್ದರು. ಹುಯಿಲಗೋಳ ನಾರಾಯಣರಾವ, ಆಲೂರ ವೆಂಕಟರಾಯ, ಅಂದಾನಪ್ಪ ದೊಡ್ದಮೇಟಿ, ಅದರಗುಂಚಿ ಶಂಕರಗೌಡ, ರಾ.ಹ.ದೇಶಪಾಂಡೆ ಮುಂತಾದವರು ನಾಡು ನುಡಿಗಾಗಿ ಹಗಲಿರುಳು ಶ್ರಮಿಸಿದವರು.

ಕನ್ನಡ ಭಾಷೆ ಶಿಕ್ಷಣ ಮತ್ತು ಉದ್ಯೋಗದ ಭಾಷೆಯಾಗಬೇಕೆನ್ನುವ ಕೂಗು ಇಂದು ನೆನ್ನೆಯದಲ್ಲ. ೧೯೩೯ ರ ಸಂದರ್ಭದಲ್ಲಿ ಅಂದಿನ ವಿದ್ಯಾಂಮತ್ರಿಗಳಾಗಿದ್ದ ಡಾ ಸುಬ್ಬರಾಯ ಅವರು ಮಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಭಾಗವಾಹಿಸಿ ಮಾತನಾಡುತ್ತಾ ‘ಸ್ಥಳೀಯ ಭಾಷೆಯೇ ಶಿಕ್ಷಣ ಭಾಷೆಯಾಗಬೇಕು. ದಕ್ಷಿಣ ಕನ್ನಡದ ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಶಿಕ್ಷಣ ಭಾಷೆಯಾಗಿ ಸ್ವೀಕರಿಸಬೇಕು. ಈ ನಿಯiಕ್ಕೆ ತಾತ್ಕಾಲಿಕವಾಗಿ ಅಪವಾದಗಳನ್ನು ತರಬಹುದಾಗಿದ್ದರೂ ಇಂದಲ್ಲದಿದ್ದರೆ ನಾಳೆ ಕನ್ನಡವನ್ನು ಒಪ್ಪಿಕೊಳ್ಳಲು ಸಕಲರೂ ಸಿದ್ಧರಿರಬೇಕು’ ಎಂದು ಕರಾರುವಕ್ಕಾಗಿ ಮಾತನಾಡಿದ್ದರು [ಕಡೆಂಗೋಡ್ಲು ಲೇಖನಗಳು -ಪು ೩೬೨] ನಾವು ಅತಿ ಮುಖ್ಯವಾಗಿ ವಾಸ್ತವದಲ್ಲಿ ನಿಂತು ಕನ್ನಡವನ್ನು ಕಟ್ಟುವ ಬಗ್ಗೆ ಆಲೋಚಿಸಬೇಕಿದೆ. ಕನ್ನಡ ಎನ್ನುವುದು ಉದ್ಯೋಗದ ಭಾಷೆಯಾಗಬೇಕು.ನಾಡಿನ ಯಾವುದೇ ಇಲಾಖೆಯ ಹುದ್ದೆಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಪ್ರಥಮ ಪ್ರಾಶಸ್ತ್ಯ ಕೊಡುವಂತಾಗಬೇಕು. ಒಂದು ಭಾಷೆ ಕೇವಲ ಸೆಂಟಿಮೆಂಟಲ್ ಆಗಿ ಬೆಳೆಸಲು ನೋಡುವುದು ಆ ಭಾಷೆಯ ಜಡತ್ವಕ್ಕೆ ಕಾರಣವಾಗಬಹುದಾದ ಸಾಧ್ಯತೆಗಳಿವೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಪಾಟೇಲ ಪುಟ್ಟಪ್ಪ ಜೂನ್ ೧೧-೧೯೮೬ ರ ಸಂದರ್ಭದಲ್ಲಿಯೇ ನಾನು ಮೇಲೆ ಚರ್ಚಿಸಿದ ಭಾಷೆ ಮತ್ತು ಉದ್ಯೋಗದ ವಿಷಯವಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಪತ್ರ ಬರೆದಿರುವದಿz. ಅದರ ಒಕ್ಕಣಿಕೆ ಹೀಗಿತ್ತು [ ಕನ್ನಡ ಕಾವಲು-ಸಂ ಡಾ.ಗುರುಲಿಂಗ ಕಾಪಸೆ ಪು-೯]

ಪ್ರಿಯ ಶ್ರೀ ರಾಮಕೃಷ್ಣ ಹೆಗಡೆಯವರಿಗೆ,

ಸಪ್ರೇಮ ವಂದನೆಗಳು.

ಆಡಳಿತದಲ್ಲಿ ಕನ್ನಡವನ್ನು ತರಬೇಕೆಂದು ಸರ್ಕಾರ ಉದ್ದೇಶಪಟ್ಟು ಆದೇಶಗಳನ್ನು ಹೊರಡಿಸಿದೆ.ಆದರೆ ಇದಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾದ ಅನೇಕ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇನ್ನೂ ಬಾಕಿ ಉಳಿದಿದೆ. ಸರ್ಕಾರದ ನೇಮಕಾತಿ ಸಮಿತಿಗಳ ಮೂಲಕ ಎಲ್ಲಾ ಇಲಾಖೆಗಳಿಗೆ ಜನರನ್ನು ಆಯ್ಕೆ ಮಾಡಲಾಗುತ್ತಿದೆ. ಈರೀತಿ ಆಯ್ಕೆಯಾಗುವ ಜನರು ಕನ್ನಡ ಜ್ಞಾನವನ್ನು ಹೊಂದಿರಲೇಬೆಕೆಂಬ ನಿಬಂಧನೆ ಏನೂ ಇಲ್ಲ. ಈ ನೇಮಕಾತಿ ನಿಯಮಗಳಲ್ಲಿ ಈಕುರಿತು ನೀವು ಸೂಕ್ತ ಬದಲಾವಣೆಗಳನ್ನು ಮಾಡಿ ಕನ್ನಡದ ಜ್ಞಾನವು ಅತ್ಯಗತ್ಯವಾಗಿ ಇರಲೇಬೇಕೆಂದು ನೀವು ಅವುಗಳನ್ನು ಮಾರ್ಪಡಿಸಬೇಕು. ಇದು ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗೂ ಅನ್ವಯವಾಗಬೇಕು. ನೀವು ಈ ವಿಷಯವನ್ನು ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ಮಾಡಿ ಸಂಬಂಧಪಟ್ಟ ನೇಮಕಾತಿ ಸಮಿತಿಗಳಿಗೆ ಕೂಡಲೇ ಸೂಕ್ತ ತಿದ್ದುಪಡಿ ಮಾಡುವದರ ಕುರಿತು ಕ್ರಮ ಕೈಗೊಳ್ಳಬೇಕು. ಇದು ಯಾವುದೇ ಕಾರಣದಿಂದಲೂ ವಿಳಂಬ ಆಗಕೂಡದೆಂದು ನಾನು ನಿಮ್ಮನ್ನು ಪುನ: ಒತ್ತಾಯ ಮಾಡುತ್ತಿದ್ದೇನೆ.

ಪ್ರೀತಿ ಗೌರವಾದರಗಳೊಂದಿಗೆ
ನಿಮ್ಮವ
ಪಾಟೀಲ ಪುಟ್ಟಪ್ಪ

ಇಂಥಾ ಸಾವಿರಾರು ಪತ್ರಗಳನ್ನು ಕನ್ನಡದ ವಿಷಯವಾಗಿ ಪಾಪು ಬರೆದಿದ್ದಾರೆ. ೧೯೮೨ ರ ಸಂದರ್ಭದಲ್ಲಿ ಆರಂಭವಾದ ಗೋಕಾಕ ಚಳುವಳಿಯಂತೂ ಕನ್ನಡದ ಬಗೆಗಿನ ಅಭಿಮಾನದ ಮರುಹುಟ್ಟಿಗೆ ಕಾರಣವಾಯಿತು. ಕನ್ನಡದ ಧೀಮಂತ ಕವಿಗಳು, ಸಾಹಿತಿಗಳು, ಸಂಘಟನೆಗಳು, Kavi_kannadaಕ್ರಿಯಾ ಸಮಿತಿಗಳು, ಪ್ರಾಧಿಕಾರಗಳು ನಿರಂತರವಾಗಿ ಕನ್ನಡವನ್ನು ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವರಾದರೂ ಮತ್ತೂ ಪ್ರಯತ್ನ ಸಾಲದು ಎನ್ನುವ ಭಾವ ಬರುವಂತಾಗಲು ಕಾರಣ ತಳಮಟ್ಟದ ಯತ್ನಗಳ ಕೊರತೆಯೇ ಆಗಿದೆ. ಕನ್ನಡ ಭಾಷೆ ಸಾವಿರಾರು ವರ್ಷಗಳ ಚರಿತ್ರೆಯನ್ನು ಹೊಂದಿದ್ದರೂ ಅದು ಬಲಗೊಳ್ಳಲು ಆ ಭಾಷೆಯನ್ನು ಮಾತನಾಡುವ ಜನರಿಗೆ ದೊರಕಬೇಕಾದ ಭಾಷೀಕರಣದ ದೀಕ್ಷೆ ಅಚ್ಚುಕಟ್ಟಾಗಿ ಜರುಗದಿರುವದು ಕೂಡಾ ಅದಕ್ಕೆ ಇನ್ನೊಂದು ಕಾರಣ. ಯಾವುದೇ ಒಂದು ಭಾಷೆ ಜನಾಸಮುದಾಯದ ದೈನಂದಿನ ಅಗತ್ಯವಾಗಿ ಪರಿಣಮಿಸಿದರೆ ಮಾತ್ರ ಅದು ಬಲಗೊಳ್ಳಲು ಸಾಧ್ಯ, ಇಲ್ಲದಿದ್ದರೆ ಕೇವಲ ಆ ಹೊತ್ತಿನ ಒಂದು ಅಗತ್ಯವಾಗಿ ವಾರ್ಷಿಕ ದಿನಾಚರಣೆಯ ಚರ್ಚೆಯ ಭಾಗವಾಗಿ ಉಳಿಯುವ ಸಾಧ್ಯತೆಯಿದೆ. ಆ ದಿಸೆಯಲ್ಲಿ ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಮಹತ್ತರವಾದ ಕೆಲಸಗಳನ್ನು ಮಾಡಿದಂತಿಲ್ಲ. ಜಾತ್ರೆಗಳ ರೂಪದಲ್ಲಿ ಸಮ್ಮೇಳನ ಸಂಘಟಿಸುವದನ್ನು ಹೊರತು ಪಡಿಸಿದರೆ ನಾಡು-ನುಡಿಗಾಗಿ ಒಂದು ಚಾರಿತ್ರಿಕವಾಗಿ ಗುರುತಿಸಬಹುದಾದ ಕೆಲಸಗಳನ್ನು ಮಾಡಿದ್ದು ತೀರಾ ಅಪರೂಪವೇನೋ..? ಕನ್ನಡ ಭಾಷೆ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಅನೇಕ ಬಗೆಯ ಸವಾಲುಗಳಿಗೆ ಒಡ್ಡಿಕೊಳ್ಳುತ್ತಲೇ ಬೆಳೆಯುವ, ಗಟ್ಟಿಗೊಳ್ಳುವ ದಿಶೆಯತ್ತ ಹೆಜ್ಜೆಹಾಕಬೇಕಿದೆ. ಅತಿ ಮುಖ್ಯವಾಗಿ ಕಲಿಕಾ ಮಧ್ಯಮವೊಂದು ವ್ಯಾಪಕವಾಗಿ ಕನ್ನಡ ಮಾಧ್ಯಮವಾಗಿಬಿಟ್ಟರೆ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಾತಿನಿಧಿಕ ಸಂಸ್ಥೆಗಳಿಗೆ ಟಾನಿಕ್ ನ ಅವಶ್ಯಕತೆಯಿಲ್ಲ.

Leave a Reply

Your email address will not be published. Required fields are marked *