ಕಲ್ಯಾಣ ರಾಜ್ಯದಲ್ಲಿ ನ್ಯಾಯದ ಬುನಾದಿಗಾಗಿ ಹುಡುಕಾಟ

– ಬಿ.ಶ್ರೀಪಾದ ಭಟ್

ಮೂವತ್ತರ ದಶಕದಲ್ಲಿ ಸಾರ್ವಜನಿಕವಾಗಿ ಸಂಕಿರಣಗಳಲ್ಲಿ ಭಾಗವಹಿಸಿ ಮಾತನಾಡುತ್ತ ಚಿಂತಕ ಜಾರ್ಜ ಅರ್ವೆಲ್, “ಸ್ವತಂತ್ರ ಚಿಂತನೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೊದಲ ಶತೃಗಳೆಂದರೆ ಮಾಧ್ಯಮಗಳು. ಕೆಲವೇ ಬಂಡವಾಳಶಾಹಿಗಳ ಹಿಡಿತದಲ್ಲಿರುವುದು, ರೇಡಿಯೋದ ಮೇಲೆ ಏಕಾಧಿಪತ್ಯ ಸಾಧಿಸುವುದು, ಅಧಿಕಾರಶಾಹಿ ಮತ್ತು ನಾಗರಿಕರು ಪುಸ್ತಕಗಳನ್ನು ಓದಲು ನಿರಾಕರಿಸುವುದು,” ಎಂದು ನಿರ್ಭಿಡೆಯಿಂದ ಹೇಳುತ್ತ ಲೇಖಕರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಅದನ್ನು ಸಮರ್ಥಿಸಬೇಕಾದ ಜನರಿಂದಲೇ ಎಂದು ಆತಂಕ ವ್ಯಕ್ತಪಡಿಸಿದ್ದ. ಇದಕ್ಕೆ ಉದಾಹರಣೆಯಾಗಿ George_Orwellಧಾರ್ಮಿಕ ಮತ್ತು ಕ್ಯಾಥೋಲಿಕ್ ಮೂಲಭೂತವಾದಿಗಳ ವಿರುದ್ಧ ಸೆಣೆಸಬೇಕಾದಂತಹ ಸಂದರ್ಭದಲ್ಲೇ ಕಮ್ಯನಿಷ್ಟರ ಸರ್ವಾಧಿಕಾರದ ವಿರುದ್ಧವೂ ಪ್ರತಿಭಟಿಸಬೇಕಾಗುವಂತಹ ಸಂದರ್ಭ ಸೃಷ್ಟಿಯಾಗಿರುವುದು ದುರಂತವೇ ಸರಿ ಎಂದು ಮರುಗಿದ್ದ. ಇದಕ್ಕೆ ಉಕ್ರೇನಿನ ಬರಗಾಲ, ಸ್ಪಾನಿಷ್‌ನ ಜನಾಂಗೀಯ ಯುದ್ಧ ಮತ್ತು ಪೋಲೆಂಡಿನ ಅಸಹಾಯಕತೆಯನ್ನು ಉದಾಹರಿಸಿದ್ದ. ಮಧ್ಯಯುಗೀನ ಧಾರ್ಮಿಕ ಆಳ್ವಿಕೆಯ ಕಾಲದಲ್ಲಿ ಹತ್ತಿಕ್ಕಲ್ಪಟ್ಟಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯವು ಏಕಚಕ್ರಾಧಿಪತ್ಯದ ಆಧುನಿಕ ಕಾಲದಲ್ಲೂ ಅಂಚಿಗೆ ತಳ್ಳಲ್ಪಟ್ಟಿರುವುದಕ್ಕೆ ವಿಷಾದಿಸಿದ್ದ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಆಧುನಿಕ ಏಕಚಕ್ರಾಧಿಪತ್ಯದ ಸಂದರ್ಭದಲ್ಲಿ ಸಿದ್ಧಾಂತಗಳು ಅಸ್ಥಿರವಾಗಿರುತ್ತವೆ, ಇದರ ಕಾರಣಕ್ಕಾಗಿಯೇ ಮರಳಿ ಮರಳಿ ಇತಿಹಾಸವನ್ನು ಪುನರಚಿಸಲು ಸುಳ್ಳುಗಳು ನಿರಂತರವಾಗಿ ಬದಲಾವಣೆಗೊಳ್ಳುತ್ತಿರುತ್ತವೆ ಎಂದು ಆರ್ವೆಲ್ ಪ್ರತಿಪಾದಿಸಿದ. ಇದು ನಂಬಿಕೆಯ ಕಾಲದ ಬದಲಾಗಿ ವಿಕ್ಷಿಪ್ತತೆಯ ಕಾಲದ ಹುಟ್ಟಿಗೆ ಕಾರಣವಾಗುತ್ತದೆ ಎಂದು ವಿವರಿಸಿದ. ಎಂಬತ್ತು ವರ್ಷಗಳ ಹಿಂದೆ ಜಾರ್ಜ ಅರ್ವೆಲ್ ಹೇಳಿದ ಮಾತುಗಳು: “ನಮ್ಮ ಕಾಲಘಟ್ಟದಲ್ಲಿ ಬೌದ್ಧಿಕ ಸ್ವಾತಂತ್ರ್ಯವು, ಒಂದು ದಿಕ್ಕಿನಲ್ಲಿ ಏಕಚಕ್ರಾಧಿಪತ್ಯದ ವಿರೋಧಿಗಳಾದ ಪ್ರಜಾಪ್ರಭುತ್ವವಾದಿಗಳಾದ ಅಕಡೆಮಿಕ್ ಬುದ್ಧಿಜೀವಿಗಳ ಮೂಲಕ, ಮತ್ತು ಮತ್ತೊಂದು ದಿಕ್ಕಿನಲ್ಲಿ ವ್ಯವಸ್ಥೆಯ ಭಾಗವಾಗಿರುವ ಅಧಿಕಾರಶಾಹಿ ಮತ್ತು ಸರ್ವಾಧಿಕಾರಿ ಆಡಳಿದಿಂದ ನಿರಂತರ ಹಲ್ಲೆಗೊಳಗಾಗುತ್ತಿರುತ್ತದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಕರ್ತ ಮತ್ತು ಲೇಖಕ ತನ್ನ ಐಡೆಂಟಿಟಿ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಸಕ್ರಿಯ ಹಿಂಸಾವಾದಿಗಳ ವಿರುದ್ಧಕ್ಕಿಂತಲೂ ಗೊತ್ತುಗುರಿಯಿಲ್ಲದ ಘೋಷಿತ ನಾಗರಿಕ ವ್ಯವಸ್ಥೆಯ ವಿರುದ್ಧ ಸೆಣಸಬೇಕಾಗುತ್ತದೆ.”

ತೃತೀಯ ಜಗತ್ತಿನ ತಲ್ಲಣಗಳು, ಬಿಕ್ಕಟ್ಟುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸಹ ಒಂದಾಗಿರುವುದು ನಾಗರಿಕತೆಯ ಮಿತಿಗಳನ್ನು ಸೂಚಿಸುತ್ತದೆ. ಸಾಕ್ರೆಟೀಸ್, ಗೆಲಿಲಿಯೋ ಸಂಬಂಧಿತ ದಮನಕಾರಿ ದಿನಗಳಿಂದ ಹಿಡಿದು, ಮುದ್ರಣಗಳ ಮೇಲೆ ನಿರ್ಬಂಧ ಹೇರಿದ ರೋಮನ್ ಕ್ಯಾಥೋಲಿಕ್‌ನ ಕಾಲವನ್ನು ಹಿಂದಿಕ್ಕಿ, ಬ್ರಿಟೀಷರ ವಸಾಹತುಶಾಹಿ ಆಳ್ವಿಕೆ ಶುರುವಾದಾಗಿನ ಕಾಲದಿಂದ ಇಂದಿನವರೆಗಿನ ಸುಮಾರು ಮುನ್ನೂರು ವರ್ಷಗಳ ಕಾಲಘಟ್ಟವನ್ನು ಅವಲೋಕಿಸಿದಾಗಲೂ ಅನೇಕ ಸ್ಥಿತ್ಯಂತರಗಳನ್ನು, ಆಳವಾದ ಪಲ್ಲಟಗಳನ್ನು ಕಾಣಬಹುದು. ಪೂರ್ವ ಮತ್ತು ಪಶ್ಚಿಮಗಳ ಸಂಗಮದ ಕಾಲಘಟ್ಟವೆಂದೇ ಕರೆಯಲ್ಪಡುವ ಮುನ್ನೂರು ವರ್ಷಗಳ ಈ ಪಯಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ತನ್ನ ಆಕೃತಿಯನ್ನು ಗಟ್ಟಿಗೊಳಿಸಲು, ಆಳದ ಪೊಳ್ಳುತನದಿಂದ ಹೊರಬಂದು ಸುಭದ್ರ ನೆಲೆಗೆ ಶಾಶ್ವತವಾಗಿ ನೆಲೆಯೂರಲು ಇಂದಿಗೂ ಸಾಧ್ಯವಾಗುತ್ತಿಲ್ಲ. ರಾಜರ ಆಳ್ವಿಕೆಯ ದಿನಗಳಿಂದ ಶುರುವಾಗಿ, ಬ್ರಿಟೀಷರ ವಸಾಹತುಶಾಹಿಯ ಸರ್ವಾಧಿಕಾರದ ಆಡಳಿತದ ಮೂಲಕ ಇಂದು ಜಗತ್ತಿನ ಬಲು ದೊಡ್ಡ ಪ್ರಜಾಪ್ರಭುತ್ವಗಳಲ್ಲೊಂದೆಂದು ಹೆಮ್ಮೆಯಿಂದ ಬೀಗುತ್ತಿರುವ ಇಂಡಿಯಾದ ಇಂದಿನ ವರ್ತಮಾನದ ದಿನಗಳವರೆಗೆ ಅಭಿವ್ಯಕ್ತಿ ಸ್ವಾತ್ರಂತ್ರ್ಯವು ಸದಾ ಕಾಲ ಅಭದ್ರತೆಯಿಂದ ನರಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ವಿದ್ಯಾಮಾನಗಳನ್ನು, ಅಲ್ಲಿನ ಸ್ಥಿತ್ಯಂತರಗಳನ್ನು ಚರ್ಚಿಸಲು ಬಳಕೆಗೊಂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯು ಕಾಲಕ್ರಮೇಣ ಪ್ರಜಾಪ್ರಭುತ್ವದ ಕುರೂಪಗಳಾದ ಭ್ರಷ್ಟಾಚಾರ, ವಂಶಾಡಳಿತದ ಹೆಳವಂಡಗಳು, ಕೋಮುವಾದದ ಕ್ರೌರ್ಯದ ಕುರಿತಾಗಿನ ಚರ್ಚೆಗಳವರೆಗೂ ಮುಂದುವರೆಯಿತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ದಮನಗೊಂಡಿದ್ದಕ್ಕೆ ವಿವರಣೆಗಳು ಮತ್ತು ಸಮಜಾಯಿಷಿಗಳು ಇರಬಹುದಾದರೂ ತದನಂತರ ಎಂಬತ್ತರ ದಶಕದಿಂದ ಶುರುವಾಗಿ ಇಲ್ಲಿನವರೆಗಿನ ಮಾನವ ಹಕ್ಕುಗಳ ದಮನಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ. ಇದಕ್ಕೆ ವ್ಯಕ್ತಿಗತ ಭಯವೇ ಮೂಲ ಕಾರಣವೆಂದು ಸಕಾರಣವಾಗಿ ಹೇಳಲಾಗುತ್ತಿದ್ದರೂ ನಿರ್ಭಿಡೆಯಿಂದ ವರ್ತಿಸಲು ಅನುಕೂಲಕರ ವಾತಾವರಣವನ್ನು ನಾವೆಲ್ಲಿ ನಿರ್ಮಿಸಿದ್ದೇವೆ? ಹಿಂಸೆ ಎನ್ನುವುದು ಹಲವಾರು ರೂಪಗಳಲ್ಲಿ ಸದಾ ಅಸ್ತಿತ್ವದಲ್ಲಿರುವಂತಹ ವಾಸ್ತವ ಸ್ಥಿತಿಯಲ್ಲಿ, ವ್ಯವಸ್ಥೆಯ ಅಮಾನವೀಯ, ಜೀವವಿರೋಧಿ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಾ ಸತ್ಯದ ಪರವಾಗಿ ನಿರಂತರವಾಗಿ ಅಹಿಂಸಾತ್ಮಕವಾಗಿ ಹೋರಾಡಲು ಸಮಾಜವು ಯಾವ ಕಾಲಕ್ಕೂ ಸಮ್ಮತಿಯನ್ನು ನೀಡುವುದಿಲ್ಲ. ಅಳಿದುಳಿದ ಅವಕಾಶಗಳನ್ನು ಸಹ ಹೆಚ್ಚೂಕಡಿಮೆ ನಿರ್ದಯವಾಗಿ ಅಳಿಸಿಹಾಕಿಬಿಡುತ್ತದೆ. ದಮನಿತರ ಪರವಾಗಿ ಸಂಘಟನೆಯನ್ನು ರೂಪಿಸಿ ಶೋಷಣೆಯ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸತೊಡಗಿದರೆ ತತ್‌ಕ್ಷಣದಲ್ಲಿ ಇನ್ನೊಂದು ಬಗೆಯ ವಿಶೇಷ ಕಾರ್ಯಪಡೆಗಳೆಂಬ ಸಮಿತಿಗಳು ಹುಟ್ಟಿಕೊಂಡು ನ್ಯಾಯ ಹಂಚಿಕೆಯ ಕುರಿತಾಗಿ ಮಾತನಾಡತೊಡಗುತ್ತವೆ. ಆಗ ಪ್ರಾಮಾಣಿಕ ಮತ್ತು ಅಪ್ರಾಮಾಣಿಕತೆಯ ನಡುವಿನ ಗೆರೆಯೇ ಅಳಿಸಿ ಹೋಗಿ ಪ್ರಜ್ಞಾವಂತರಿಗೆ ಯಾವ ಕಡೆಗೆ ವಾಲುವುದೆಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗುತ್ತಾರೆ, ನಂತರ ಕ್ರಮೇಣ ನಿಷ್ಕ್ರಿಯರಾಗುತ್ತಾರೆ.

ಹಿಂದೊಮ್ಮೆ ಡಿ.ಆರ್.ನಾಗರಾಜ್ ಅವರು ನ್ಯಾಯಕ್ಕೆ ಬುನಾದಿ ಯಾವುದು ಎಂದು ಮಾರ್ಮಿಕವಾಗಿ ಕೇಳಿದ್ದರು. DR nagarajಏಕೆಂದರೆ ಮೂಲಭೂತವಾಗಿ ಸಂಪ್ರದಾಯಸ್ಥವಾದ ಭಾರತೀಯ ಮನಸ್ಸು ಪ್ರಜ್ಞಾಪೂರ್ವಕವಾಗಿಯೇ ಎಳಸು ಎಳಸಾಗಿ ವರ್ತಿಸುತ್ತಾ ಅನೇಕ ಮೌಲಿಕ ವಿಚಾರಧಾರೆಗಳ ಪ್ರತಿರೋಧದ ನೆಲೆಗಳನ್ನು ಹೊಸಕಿ ಹಾಕುತ್ತದೆ. ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೆ ಸರಳ ಉತ್ತರಗಳಿದ್ದರೂ ಸಹ ಅದನ್ನು ಜಟಿಲಗೊಳಿಸಿಬಿಡುತ್ತದೆ ಭಾರತದ ಸಂಪ್ರದಾಯವಾದಿ ಮನಸ್ಸು. ನಮಗರಿವಿಲ್ಲದೆ ಇಂಡಿಯಾದ ನಾಗರಿಕನ ಹಕ್ಕುಗಳ ರಕ್ಷಣೆಯಾಗಿರುವ ಸಂವಿಧಾನವನ್ನೇ ತೆರೆಮೆರೆಗೆ ಸರಿಸಿ ನಿಷ್ಕ್ರಿಯಗೊಳಿಸಿಬಿಡುತ್ತದೆ. ಇಲ್ಲದಿದ್ದರೆ ಬಿನಾಯಕ್ ಸೇನ್ ಮೂರು ವರ್ಷಗಳ ಕಾಲ ಜೈಲಿನಲ್ಲಿರುತ್ತಿದ್ದರೇ?ಇಲ್ಲದಿದ್ದರೆ ಆದಿವಾಸಿ ಮಹಿಳೆ ಸೋನು ಸೂರಿ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದರೆ? ಇಲ್ಲದಿದ್ದರೆ ಸೂಕ್ಷ್ಮ ಹೆಣ್ಣುಮಗಳು ಖುಷ್ಬೂ ಕೋರ್ಟಗೆ ಅಲೆಯುವಂತಾಗುತ್ತಿತ್ತೆ? ಕಲಾವಿದ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿ ಅಲೆಯಬೇಕಾಗಿತ್ತೆ? 2002 ರ ಮುಸ್ಲಿಂರ ಹತ್ಯಾಕಾಂಡದ ವಿರುದ್ಧ ದನಿಯೆತ್ತಿದ ದಿಟ್ಟ ಮಹಿಳೆಯರಾದ ನಫೀಜ ಅಲಿ ಮತ್ತು ದಿವ್ಯ ಭಾಸ್ಕರ್ ಗುಜರಾತ್ ಸರ್ಕಾರದಿಂದ ಕಿರುಕುಳಕ್ಕೆ ಒಳಗಾಗಬೇಕಿತ್ತೆ? ಇಂದಿನವರೆಗೂ ಫಿಜಾ ಮತ್ತು ಪರ್ಜಾನಿಯ ಚಿತ್ರಗಳು ಗುಜರಾತ್‌ನಲ್ಲಿ ಬಿಡುಗಡೆಯ ಭಾಗ್ಯದ ಸೌಭಾಗ್ಯವಿಲ್ಲದೆ ಡಬ್ಬದಲ್ಲೇ ಉಳಿಯುತ್ತಿದ್ದವೇ?ರೋಹಿನ್ಟನ್ ಮಿಸ್ತ್ರಿ ಮತ್ತು ಎ.ಕೆ.ರಾಮಾನುಜನ್ ಪುಸ್ತಕಗಳು ನಿಷೇಧಿಸಲ್ಪಡುತ್ತಿದ್ದವೇ? ಶಹೀನ ಮತ್ತು ರೇಣು ಎನ್ನುವ ಮಹಾರಾಷ್ಟ್ರದ ತರುಣಿಯರು ಪತ್ರಕರ್ತರು ಜೈಲಿಗೆ ಹೋಗಬೇಕಿತ್ತೆ? ಇನ್ನೂ ನೂರಾರು ಉದಾಹರಣೆಗಳಿವೆ.

ಇಂದು ಪ್ರಾಮಾಣಿಕ ಪತ್ರಕರ್ತ ನವೀನ ಸೂರಿಂಜೆ ವ್ಯವಸ್ಥೆಯ ಮತ್ತು ಪಟ್ಟಭದ್ರರ ವಿರುದ್ಧ ನಿರ್ಭಿಡೆಯಿಂದ, ಪ್ರಾಮಾಣಿಕವಾಗಿ ಬರೆದಿದ್ದಕ್ಕೆ ಬಂಧಿತನಾಗಿ ಕಳೆದ ಮೂರು ತಿಂಗಳಿಂದ ಜೈಲಿನಲ್ಲಿರಬೇಕಾದಂತಹ ದುಸ್ಥಿತಿ ಬಂದೊದಿಗಿದೆ. ಇದಕ್ಕೆ ಮೂಲಭೂತ ಕಾರಣಗಳನ್ನು ಎಂಬತ್ತು ವರ್ಷಗಳ ಹಿಂದೆ ಸತ್ಯವನ್ನು ನುಡಿದ ಆರ್ವೆಲ್‌ನ ಮಾತುಗಳಲ್ಲಿ ಕಾಣಬಹುದು. ಪತ್ರಕರ್ತನಾಗಿ ಸೂರಿಂಜೆಯಂತಹವರು ತಮ್ಮ ಪ್ರಾಮಾಣಿಕ ಅಭಿವ್ಯಕ್ತಿಯನ್ನು Justiceದಾಖಲಿಸಲು ವ್ಯವಸ್ಥೆಯು ನಿರಂತರವಾಗಿ ಪ್ರತಿರೋಧ ತೋರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ದಶಕಗಳಲ್ಲಿ ಇಂತಹ ನೂರಾರು ಘಟನೆಗಳು ಜರುಗಿವೆ. ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಂತರವಾಗಿ ಚಾಲ್ತಿಯಲ್ಲಿಡಲು ಅನೇಕ ಕಾನೂನುಗಳು ಸೃಷ್ಟಿಯಾದರೂ ಇದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲು ನೂರಕ್ಕೂ ಮೇಲ್ಪಟ್ಟು ಕಾನೂನುಗಳು ಜಾರಿಯಲ್ಲಿವೆ. ಇಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಲು ಪ್ರತಿಯೊಬ್ಬ ನಾಗರೀಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಕಾನೂನುಗೊಳಿಸಲಾಗಿದ್ದರೂ ವಾಸ್ತವದಲ್ಲಿ ಅವನ ಪ್ರತಿಯೊಂದು ಮಾತುಗಳು ಮತ್ತು ನಡೆಗಳನ್ನು ಅಕ್ಷರಶಃ ತನಿಖೆಗೊಳಪಡಿಸಲಾಗುತ್ತದೆ ಮತ್ತು ಪ್ರಭುತ್ವವು ಕಾನೂನನ್ನು ತನ್ನ ಮೂಗಿನ ನೇರಕ್ಕೆ ತಿರುಚಿ ಸಂಬಂಧಪಟ್ಟ ವ್ಯಕ್ತಿಯನ್ನು ಹಿಂಸೆಗೆ, ಅವಮಾನಕ್ಕೆ ಒಳಪಡಿಸಲಾಗುತ್ತದೆ. ಕಾನೂನುಬದ್ಧವಾಗಿಯೇ ರಚಿಸಲ್ಪಟ್ಟ ಮಾನವ ಹಕ್ಕುಗಳ ಅಯೋಗವು ವರ್ಷಗಳ ಕಾಲ ಅಧ್ಯಕ್ಷನಿಲ್ಲದೆ ಕೊಳೆಯುತ್ತಿರುತ್ತದೆ. ಇದರ ಅರಿವೂ ಸಹ ನಾಗರಿಕ ಸಮಾಜಕ್ಕೆ ಇರುವುದಿಲ್ಲ. ಇದು ಮೇಲ್ನೋಟಕ್ಕೆ ಎಲ್ಲವೂ ಸುಗಮವಾಗಿರುವಂತೆ ಕಂಡರೂ ವ್ಯವಸ್ಥೆಯೊಳಗಡೆ ಒಂದು ಬಗೆಯಲ್ಲಿ ಅಗೋಚರವಾದ ಭಯದ ವಾತಾವರಣ ನಿರ್ಮಾಣಗೊಂಡಿರುತ್ತದೆ.ಇದಕ್ಕಾಗಿ ತುರ್ತುಪರಿಸ್ಥಿಯನ್ನು ಹೇರುವ, ಆ ಮೂಲಕ ಸೆನ್ಸಾರ್‌ಶಿಪ್ ಅನ್ನು ಜಾರಿಗೊಳಿಸುವ ಪರಿಸ್ಥಿತಿಯ ಅಗತ್ಯವೇ ಇರುವುದಿಲ್ಲ. ಪ್ರಜಾಪ್ರಭುತ್ವದ ಪರಿಧಿಯೊಳಗೇ ಇವೆಲ್ಲವೂ ನಿರ್ಮಾಣಗೊಂಡಿರುತ್ತವೆ ಮತ್ತು ನಿರ್ಮಾಣಗೊಳ್ಳುತ್ತಿರುತ್ತವೆ. ಈ ಬಗೆಯ ನಿರ್ಮಿತಿಯನ್ನೇ ಚೊಮೆಸ್ಕಿ “Friendly Fascism” ಎಂದು ಕರೆದ. ಇಲ್ಲಿ ಎಲ್ಲವೂ ಸುಸೂತ್ರವಾಗಿರುವಂತೆ ಭಾಸವಾದರೂ ಯಾವುದೂ ಸುಸಂಬದ್ಧವಾಗಿರುವುದಿಲ್ಲ. ಇದರ ಇನ್ನೊಂದು ಮುಖವೇ ಸಮಾಜದ ಕೋಮುವಾದಿ ಗುಂಪುಗಳಾದ ಫ್ಯಾಸಿಸ್ಟ್ ಮನೋಸ್ಥಿತಿಯ ಸಂಘ ಪರಿವಾರ, ಜಮಾತೆ, ತೊಗಾಡಿಯಾಗಳು, ಮೋದಿಗಳು, ಮುತಾಲಿಕ್‌ಗಳು, ಬುಖಾರಿಗಳು, ಅಕ್ಬರುದ್ದೀನ್ ಓವೈಸಿಗಳು, ಇತ್ಯಾದಿ ಮೂಲಭೂತವಾದಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ದ್ವೇಷದ ವಾತಾವರಣವನ್ನು ಹುಟ್ಟು ಹಾಕುವುದು ಮತ್ತು ಸಾವಿರಾರು ಸಾವುನೋವಿಗಳಿಗೆ ಕಾರಣಕರ್ತರಾಗುವುದು. ಇದನ್ನು ಉದಾಹರಿಸುತ್ತ ಕಡೆಗೆ ಇವನ್ನೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳೆಂದು ಕರೆದು ಒಂದೇ ಏಟಿಗೆ ಎಲ್ಲಾ ಬಗೆಯ ಕೈದೀಪಗಳನ್ನು ಒಡೆದು ಹಾಕುವ ಹುನ್ನಾರಗಳೂ ನಿರಂತರವಾಗಿ ಜಾರಿಗೊಳ್ಳುತ್ತಿರುತ್ತವೆ.

ಒಟ್ಟಾರೆ ಈ ಬಗೆಯ ಬಿಕ್ಕಟ್ಟಿಗೆ ಮೂಲಭೂತ ಕಾರಣಗಳನ್ನು ನಾವೆಲ್ಲಿ ಹುಡುಕಬೇಕು?

ಹೆಚ್ಚೂ ಕಡಿಮೆ ಪ್ರಜೆಗಳೇ ಪ್ರಭುಗಳೆಂಬ ಪರಿಕಲ್ಪನೆಯೇ ಅಳಿಸಿ ಹೋಗಿ ಹಣಬಲ, ತೋಳ್ಬಲವಿರುವ ಪ್ರಭುಗಳೇ ಪ್ರಭುತ್ವದ ವಾರಸುದಾರರೆನ್ನುವ ಕಟು ವಾಸ್ತವವು ಕೇಂದ್ರೀಕರಣಗೊಳ್ಳುತ್ತಿರುವ ವ್ಯವಸ್ಥೆಯೇ? ಅಧಿಕಾರಿಶಾಹಿಯ ಮಾತಿರಲಿ, ಜನಸಾಮಾನ್ಯರೂ ಸಹ ಇನ್ನೂ ರಾಷ್ಟ್ರಪ್ರಭುತ್ವದ, activism-alice-walkerರಾಜಧರ್ಮದ ಗುಂಗಿನಿಂದ ಹೊರಬರಲಾಗದಂತಹ ಗುಲಾಮಿ ಮನಸ್ಥಿತಿಯ ಬೌದ್ಧಿಕ ನೆಲೆಗಳೇ? ಬಾಹ್ಯದ ಜೀವನಕ್ರಮದಲ್ಲಿ ಆಧುನಿಕರಾಗುತ್ತಿದ್ದರೂ ಅಂತರ್ಯದಲ್ಲಿ ಪ್ರಗತಿಪರರಾಗಲು ನಿರಾಕರಿಸುವ ಅಕ್ಷರಸ್ತರ ಕಠೋರ, ಸನಾತನ ಮನಸ್ಸುಗಳೇ? ತಮ್ಮ ಮನಸ್ಸಿಗೆ ಮಂಪರು ಕವಿದಂತೆ ಆಡುತ್ತಿರುವ ಮಧ್ಯಮವರ್ಗದ ಪ್ರಜ್ಞಾವಂತರೇ? ರಾಜ್ಯಾಂಗ ಮತ್ತು ಕಾರ್ಯಾಂಗದ ಪ್ರತಿನಿಧಿಗಳು, ವಕ್ತಾರರು ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತಕ್ಕಾಗಿ ಪರಸ್ಪರ ಒಳ ಒಪ್ಪಂದದ ಮೂಲಕ ಬಹಿರಂಗವಾಗಿಯೇ ಸಂವಿಧಾನವನ್ನೇ ಧಿಕ್ಕರಿಸಿ ಇಡೀ ವ್ಯವಸ್ಥೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ ಬುದ್ಧಿಜೀವಿಗಳು, ಅಕಡೆಮಿಕ್ ಚಿಂತಕರು ಇದರ ವಿರುದ್ಧ ಹೇಗೆ ಮುಖಾಮುಖಿಯಾಗುತ್ತಾರೆ? ಈಗಿನಂತೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕೇವಲ ಭಾಷಣಗಳ, ಲೇಖನಗಳ ಮೂಲಕ ಸಮರ್ಥಿಸಿಕೊಳ್ಳುವುದರಲ್ಲೇ ಮೈಮರೆಯುತ್ತಾರೆಯೇ? ಅಥವಾ ಬೌದ್ಧಿಕ ಕಸರತ್ತನ್ನು ಚಣಕಾಲ ಕೈಬಿಟ್ಟು ಸಾರ್ವಜನಿಕವಾಗಿ ಸಕ್ರಿಯವಾಗುತ್ತ ಮುಖ್ಯ ಅಜೆಂಡಾಗಳನ್ನಿಟ್ಟುಕೊಂಡು ತಲೆಮಾರುಗಳನ್ನು ರೂಪಿಸುತ್ತಾರೆಯೇ? ತಮ್ಮ ಅಮೂರ್ತ ಪಾಂಡಿತ್ಯವನ್ನು ಬಳಸಿಕೊಂಡು, ಜನಸಾಮಾನ್ಯರೊಂದಿಗೆ ಬೆರೆಯುತ್ತಾ, ಮಾನವ ಹಕ್ಕುಗಳ ವ್ಯಾಪ್ತಿಯನ್ನು ಬಲಗೊಳಿಸುವತ್ತ ಧೃಢ ಹೆಜ್ಜೆಯನ್ನಿಡುತ್ತ ಸಂವಿಧಾನ ವಿರೋಧಿ ಶಕ್ತಿ ಕೇಂದ್ರಗಳನ್ನು ಅಸ್ಥಿರಗೊಳಿಸಲು ಅಹಿಂಸಾತ್ಮಕವಾಗಿ ಮುನ್ನುಗ್ಗುತ್ತಾರೆಯೇ?

2 thoughts on “ಕಲ್ಯಾಣ ರಾಜ್ಯದಲ್ಲಿ ನ್ಯಾಯದ ಬುನಾದಿಗಾಗಿ ಹುಡುಕಾಟ

  1. anand prasad

    ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಪ್ರಥಮ ಬಹುಮಾನ ಕೊಡಬಹುದು. ನವೀನ ಸೂರಿಂಜೆಯವರ ಬಂಧನ ತಪ್ಪು ಎಂದು ಉಪವಾಸ ಸತ್ಯಾಗ್ರಹದ ವೇಳೆ ರಾಜ್ಯದ ಗೃಹ ಸಚಿವರು ಒಪ್ಪಿಕೊಳ್ಳುತ್ತಾರೆ ಆದರೆ ಓರ್ವ ನಿರಪರಾಧಿಯ ಮೇಲಿನ ದುರುದ್ಧೇಶದ ಮೊಕದ್ದಮೆ ಹಿಂತೆಗೆದುಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಾರೆ. ಸಚಿವ ಸಂಪುಟದ ಸಭೆ ಕರೆದು ನಿರಪರಾಧಿಯನ್ನು ಬಿಡುಗಡೆ ಮಾಡಲು ಎಷ್ಟು ದಿನ ಬೇಕಾಗಬಹುದು? ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಬಿಜೆಪಿ ಹಾಗೂ ಸಂಘ ಪರಿವಾರದ ಈ ಹಲ್ಲೆ ಪಕ್ಷದ ಇಮೇಜಿನ ಮೇಲೆ ತೀವ್ರ ಋಣಾತ್ಮಕ ಪರಿಣಾಮ ಬೀರಲಿದೆ. ಅಧಿಕಾರದ ಮದದಲ್ಲಿ ಇದು ಬಿಜೆಪಿಗರಿಗೆ ಇಂದು ಕಾಣದೆ ಇರಬಹುದು ಆದರೆ ಇನ್ನು ಕೆಲವು ತಿಂಗಳುಗಳಲ್ಲಿ ಇದು ಅವರಿಗೆ ಚೆನ್ನಾಗಿ ತಿಳಿಯಲಿದೆ. ಸರ್ವಾಧಿಕಾರಿ ಮನೋಭಾವವನ್ನು ಜನಸಾಮಾನ್ಯರು ತಿಳಿದುಕೊಂಡು ಅದನ್ನು ಯಾವ ರೀತಿ ಸೋಲಿಸುತ್ತಾರೆ ಎಂಬುದನ್ನು 1975ರ ತುರ್ತು ಪರಿಸ್ಥಿತಿಯಿಂದ ತಿಳಿದುಕೊಳ್ಳದ ಮೂರ್ಖರಿಗೆ ಏನೆಂದು ಹೇಳುವುದು?

    Reply
  2. anand prasad

    ಸುದಿಪ್ತೋ ಮೊಂಡಲ್ ಎಂಬವರು ಬಂಧಿತ ನವೀನ ಸೂರಿಂಜೆಯವರ ಬಿಡುಗಡೆಗೆ ಒತ್ತಾಯಿಸಿ ಅಂತರ್ಜಾಲ ಅಭಿಯಾನವೊಂದನ್ನು ಆರಂಭಿಸಿದ್ದು ಈ ಕುರಿತು ನನಗೆ ಇ-ಮೇಲ್ ಕಳುಹಿಸಿರುತ್ತಾರೆ. ನಾನು ಇದಕ್ಕೆ ಸಹಿ ಹಾಕಿದ್ದೇನೆ. ವರ್ತಮಾನದ ಓದುಗರು ಈ ಅಭಿಯಾನದಲ್ಲಿ ಭಾಗಿಯಾಗಿ ನ್ಯಾಯದ ಪರವಾಗಿ ಧ್ವನಿ ಎತ್ತಿದರೆ ಉತ್ತಮ. ಬೇರಾವುದೋ ರಾಜ್ಯದ ಇವರು ನವೀನ ಸೂರಿಂಜೆಯವರ ಬಿಡುಗಡೆಗೆ ಒತ್ತಾಯಿಸಬೇಕಾಗಿ ಬಂದಿರುವುದು ನಮ್ಮ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಸುದಿಪ್ತೋ ಮೊಂಡಲ್ ಅವರ ಈ ನ್ಯಾಯಪರ ಮಾನವೀಯ ಕಾಳಜಿ ಅಭಿನಂದನೀಯ. ಈ ಕೆಳಗಿನ ವೆಬ್ ವಿಳಾಸದಲ್ಲಿ ಈ ಅಭಿಯಾನಕ್ಕೆ ಸಹಿ ಹಾಕಬಹುದು. https://www.change.org/en-IN/petitions/release-naveen-soorinje-and-drop-all-charges-against-him-naveensoorinje?utm_source=action_alert&utm_medium=email&utm_campaign=17103&alert_id=RFFkbbAtUI_YqFeANUptC

    Reply

Leave a Reply

Your email address will not be published. Required fields are marked *