ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ

-ರೂಪ ಹಾಸನ

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಸರ್ಕಾರ ನಾಡಿನ ಜನರಿಗೆ ವಿಶೇಷ ಕೊಡುಗೆಯೊಂದನ್ನು ನೀಡಲು ಸಿದ್ಧತೆ ನಡೆಸಿದೆ. ಅದು ದಿಢೀರನೆ ರೂಪುಗೊಂಡ ಉಡುಗೊರೆಯಲ್ಲ. ವರ್ಷ ವರ್ಷವೂ ಇಷ್ಟಿಷ್ಟೆಂದು ಸದ್ದಿಲ್ಲದೇ ನೀಡುತ್ತ ಬಂದಿರುವ ಉಡುಗೊರೆಯಾಗಿದ್ದು, ಈ ಬಾರಿ ಅದು ಮೇಲ್ನೋಟಕ್ಕೆ ಕಾಣುವಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ಈ ಉಡುಗೊರೆಯ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗುವ ಸಾಧ್ಯತೆ ಇದ್ದು, ಅದರ ಪರಿಣಾಮದಿಂದ ಕನ್ನಡಕ್ಕೆ ಶಿಕ್ಷಣದಲ್ಲಿ ಉಳಿಗಾಲವೇ ಇಲ್ಲದಂತೆ ಸರ್ವನಾಶವಾಗುವಂತ ಕಾಲ ಸನ್ನಿಹಿತವಾಗಿದೆ.

ಇದೇ ಅಕ್ಟೋಬರ್ 28 ರೊಳಗೆ, ಐವರಿಗಿಂತಾ ಕಡಿಮೆ ಮಕ್ಕಳಿರುವ 617 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆ ಪ್ರದೇಶದ ಸುತ್ತಮುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಉತ್ತಮ ಸಾರಿಗೆ ಸಂಪರ್ಕ, ಜನವಸತಿ ಹಾಗೂ ಸಂಪನ್ಮೂಲ ಹೊಂದಿರುವ ಶಾಲೆಗಳಿಗೆ ವಿಲೀನಗೊಳಿಸುವಂತೆ  ಆದೇಶ ಹೊರಡಿಸಿರುವ ಸರ್ಕಾರ ಒಂದು ವೇಳೆ ಆ ಪ್ರದೇಶದ ಸುತ್ತಮುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಶಾಲೆಗಳು ಖಾಸಗಿ ಶಾಲೆಯಾದರೂ ಸರಿ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಹಾಗೆಯೇ ಮುಂದುವರೆಸಬೇಕು ಎಂದು ರಿಯಾಯಿತಿಯನ್ನೂ ಕೊಟ್ಟಿದೆ! ಶಾಲಾ ವಿಲೀನ ಸಮಿತಿಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಚಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಹಾಗೇ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿದ ಕೂಡಲೆ ಹತ್ತಕ್ಕಿಂತಾ ಕಡಿಮೆ ಮಕ್ಕಳಿರುವ 2557 ಶಾಲೆಗಳನ್ನು ಕೂಡ ಪಕ್ಕದ ಶಾಲೆಗಳಿಗೆ ವರ್ಗಾಯಿಸಲು ಕ್ರಮ ಕೈಗೊಂಡಿದೆ.

ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲೆ ಇದ್ದರೂ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಹೆಚ್ಚಾಗಿ ಬಡ ಹಾಗೂ ಕೆಳ ಸ್ತರದ ಮಕ್ಕಳು ಮಾತ್ರ. ಅದರಲ್ಲೂ ಹೆಚ್ಚಿನವರು ಹೆಣ್ಣುಮಕ್ಕಳೆಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಆ ಶಾಲೆಗಳೂ ಮುಚ್ಚಲ್ಪಟ್ಟರೆ ದೂರದ ಸರ್ಕಾರಿ ಶಾಲೆಗಳಿಗೆ ಅಥವಾ ದುಬಾರಿ ವಂತಿಗೆ ಹಾಗೂ ಫೀಸು ನೀಡಿ, ಖಾಸಗಿ ಶಾಲೆಗೆ ಕಳಿಸಲು ಸಾಧ್ಯವಾಗದೇ ಇಂತಹ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಉಚಿತ ಹಾಗೂ ಕಡ್ಡಾಯ ಶಿಕ್ಷಣದ ನಿಯಮವಿದ್ದರೂ ಇಂದಿಗೂ ಲಕ್ಷಾಂತರ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ಹೊರಗೇ ಇದ್ದಾರೆ. ಗ್ರಾಮೀಣ ಭಾಗದಲ್ಲಿ ಮೊದಲಿಗೇ ಶಾಲೆಗಳು ದೂರ ದೂರದಲ್ಲಿದ್ದು, ಇನ್ನೂ ಹೀಗೆ ಶಾಲೆಗಳನ್ನು ಮುಚ್ಚುತ್ತ ಹೋದರೆ ಎಲ್ಲರಿಗೂ ಶಿಕ್ಷಣ ಎಂಬ ಸಾಮಾಜಿಕ ನ್ಯಾಯದ ಮೂಲ ಕಲ್ಪನೆಯೇ ಬುಡ ಮೇಲಾಗುತ್ತದೆ.

ಶಿಕ್ಷಣವನ್ನು ಸಾರ್ವತ್ರಿಕವಾಗಿ, ಉಚಿತವಾಗಿ ಮತ್ತು ಕಡ್ಡಾಯವಾಗಿ ನೀಡಬೇಕೆಂಬ ನಿಯಮ ಸಂವಿಧಾನದಲ್ಲಿಯೇ ಸೂಚಿತವಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕೆಂದು 1993 ರಲ್ಲಿ ಸರ್ವೋಚ್ಚ ನ್ಯಾಯಾಲಯ ಘೋಷಿಸಿದ ನಂತರ ಈ ತೀರ್ಪಿನ ಆಧಾರವಾಗಿ ಸಂವಿಧಾನದ 86ನೇ ತಿದ್ದುಪಡಿಯಲ್ಲಿ ಈ ನಿಯಮವನ್ನೂ ಸೇರಿಸಿಕೊಂಡು, ಜೀವಿಸುವ ಹಕ್ಕಿನ ಜೊತೆಗೆ ಶಿಕ್ಷಣ ಪಡೆಯುವುದನ್ನೂ ಮೂಲಭೂತ ಹಕ್ಕೆಂದು ಹೇಳುವ ಹೊಸ ಪರಿಚ್ಛೇದ 21-ಎ ಯನ್ನು ಸೇರಿಸಲಾಗಿದೆ. ಈ ನಿಯಮ ಹಾಗೂ ನೂತನವಾಗಿ 2009ರಲ್ಲಿ ರೂಪಿತವಾದ ಶಿಕ್ಷಣ ಹಕ್ಕು ಕಾಯ್ದೆ [ಆರ್.ಟಿ.ಇ./RTE]ಯಡಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸಬೇಕು. ಅದರಂತೆ 6-14 ವರ್ಷ ವಯಸ್ಸಿನವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಹಾಗೂ ಮಗುವಿನ ವಾಸಸ್ಥಳದ ಹತ್ತಿರದಲ್ಲಿಯೇ ಶಿಕ್ಷಣವನ್ನು ಸರ್ಕಾರವೇ ನೀಡಬೇಕು. ಈ ಕಾಯ್ದೆಯ ಮೂಲ ನಿಯಮವನ್ನೇ ನಮ್ಮ ರಾಜ್ಯ ಸರ್ಕಾರ ಗಾಳಿಗೆ ತೂರಿ ನಿರಂತರವಾಗಿ ಶಾಲೆಗಳನ್ನು ಮುಚ್ಚುತ್ತಿರುವುದೇ ಸಂವಿಧಾನಕ್ಕೆ ವಿರುದ್ಧವಾದುದು.

ಈ ಶಾಲೆ ಮುಚ್ಚುವ ಕ್ರಿಯೆಯನ್ನು ಸರ್ಕಾರ ನಾಜೂಕಾದ ಭಾಷೆಯಲ್ಲಿ ಶಾಲೆ ಜೋಡಣೆ ಎಂದು ಕರೆಯುತ್ತಿದೆ. ನಿಜವಾಗಿ ನೋಡಿದರೆ ಇದು ಅಧಿಕೃತವಾಗಿ ಮತ್ತು ಶಾಶ್ವತವಾಗಿ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯೇ ಆಗಿದೆ. ಇಂತಹ ಶಾಲಾ ವಿಲೀನ ಕೆಲಸವು ನಿರಂತರ ಪ್ರಕ್ರಿಯೆ ಯಾಗಿದ್ದು ಅದನ್ನು ನಿಯತಕಾಲಿಕವಾಗಿ ಮಾಡಲಾಗುತ್ತದೆಂಬ ಎಚ್ಚರಿಕೆಯನ್ನೂ ಸರ್ಕಾರಿ ಆದೇಶದಲ್ಲಿ ಸೇರಿಸಲಾಗಿದೆ. ಹೀಗಾಗಿ ಇದು, ಸರ್ಕಾರಿ ಶಾಲೆಗಳೆಲ್ಲ ಮುಚ್ಚುವವರೆಗೂ ನಿರಂತರವಾಗಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯೆಂದು ನಾವು ತಣ್ಣಗೆ ಕುಳಿತಿರಬೇಕು!

ಇದು ದಿಢೀರನೆ ಈ ವರ್ಷ ತೋರಿರುವ ಹೊಸ ಸಮಸ್ಯೆಯಲ್ಲ. ಈಗಾಗಲೇ ಕಳೆದೊಂದು ದಶಕದಿಂದ ಸದ್ದಿಲ್ಲದೇ 10500 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಕಳೆದ 2009-2010ರಲ್ಲಿ 485 ಶಾಲೆಗಳನ್ನು ಮುಚ್ಚಲಾಗಿತ್ತು. ಅದರ ಹಿಂದಿನ ವರ್ಷ 500 ಶಾಲೆಗಳು ಮುಚ್ಚಿವೆ. ಶಾಲೆ ಮುಚ್ಚಲ್ಪಡುವ ಪ್ರಮಾಣ ಇನ್ನು ಮುಂದೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಮುಂದಿನ 10-15 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳೆಲ್ಲ ಮುಚ್ಚಲ್ಪಡುವುದು ನಿರ್ವಿವಾದ. ಬಹುಶಃ ಸರ್ಕಾರಕ್ಕೆ ಬೇಕಾಗಿರುವುದೂ ಇದೇ! ಮಾತೃಭಾಷಾ ಶಿಕ್ಷಣಕ್ಕೆ ಆಧ್ಯತೆ ನೀಡುತ್ತೇವೆ ಎಂದು ಹೇಳುತ್ತಿರುವ ನಮ್ಮ ಸರ್ಕಾರದ ಶಿಕ್ಷಣ ಖಾಸಗಿಕರಣ ಹಾಗೂ ಆಂಗ್ಲಭಾಷಾ ಪ್ರೀತಿಯ ಗೋಪ್ಯ ಪ್ರಣಾಳಿಕೆ ಈಗ ನಿಧಾನಕ್ಕೆ ಬೆಳಕಿಗೆ ಬರುತ್ತಿದೆಯಷ್ಟೇ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ, ಹಳ್ಳಿಗಳಲ್ಲೂ ತಲೆ ಎತ್ತಿರುವ  ಖಾಸಗಿ ಶಾಲೆಗಳಲ್ಲಿ ಈ ಮಕ್ಕಳು ದಾಖಲಾಗುತ್ತಿರುವುದು. ಅವುಗಳೆಲ್ಲ ಆಂಗ್ಲ ಮಾಧ್ಯಮ ಶಾಲೆಗಳೆಂದು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. 1994 ರಿಂದ ಈಚೆಗೆ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆಗೆ ಅವಕಾಶ ನೀಡಬಾರದೆಂಬ ಸರ್ಕಾರಿ ಆದೇಶವಿದೆ. ಆದರೆ ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದಿರುವ ಸಾವಿರಾರು ಶಾಲೆಗಳು ಬೋಧಿಸುತ್ತಿರುವುದು ಆಂಗ್ಲ ಮಾಧ್ಯಮದಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ಗುಟ್ಟು. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಹಾಗೂ ಸರ್ಕಾರದ ವಿವಿಧ ಹಂತದ ಅಧಿಕಾರಶಾಹಿಯ ನಡುವೆ ಅನೂಚಾನವಾಗಿ ನಡೆದು ಬಂದಿರುವ ಕೊಡು-ಕೊಳುವ ಒಳ ಒಪ್ಪಂದದಿಂದ ಹಾಗೂ ಹೆಚ್ಚಿನ ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರೂ ಮಠಾಧೀಶರು, ರಾಜಕಾರಣಿಗಳು, ಪ್ರತಿಷ್ಠಿತ ಅಧಿಕಾರಿಗಳು ಆಗಿರುವುದರಿಂದ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪರಿಸ್ಥಿತಿ ಇದಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅನುಮತಿ ಪಡೆದ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ಬೋಧಿಸದಂತೆ ತಡೆಯುವ ನೈತಿಕಶಕ್ತಿ ಹಾಗೂ ಇಚ್ಛಾಶಕ್ತಿಯನ್ನೇ ಕಳೆದುಕೊಂಡಿರುವ ನಮ್ಮ ಸರ್ಕಾರ, ಈಗ ಸರ್ಕಾರಿ ಶಾಲೆಗಳನ್ನೇ ಮುಚ್ಚುತ್ತಾ ಲಕ್ಷಾಂತರ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಮೂಲಕ, ಅವರ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದೆ.

ಮಕ್ಕಳ ಸೃಜನಶೀಲ-ಗುಣಾತ್ಮಕ ಶಿಕ್ಷಣದ ಕುರಿತು ಯೋಚಿಸುವ ಯಾವುದೇ ಸರ್ಕಾರ ಪ್ರಾಥಮಿಕ ಹಂತದಲ್ಲಾದರೂ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಸಾಮಾಜಿಕ ಅಸಮಾನತೆಯ ಮೂಲ ಬೇರುಗಳಿರುವುದು ಅಸಮಾನ ಶಿಕ್ಷಣದ ಹಂಚಿಕೆಯಿಂದಾದ್ದರಿಂದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ಯಾವುದೇ ಬೇಧವಿಲ್ಲದೇ ಎಲ್ಲರಿಗೂ ಸಮಾನವಾದ ಶಾಲಾ ವ್ಯವಸ್ಥೆಯನ್ನು ರೂಪಿಸಬೇಕು. ಇದನ್ನು ಸಾಧ್ಯವಾಗಿಸಲು ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ತುರ್ತಾಗಿ ಜಾರಿಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಷ್ಟೇ ಈಗ ಉಳಿದಿರುವ ದಾರಿ. ನಮ್ಮ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳು, ಶಿಕ್ಷಕರು, ಜನರೆಲ್ಲರೂ ಒಂದಾಗಿ ಕನ್ನಡ ಶಾಲೆಗಳನ್ನು ಉಳಿಸಲು, ಪ್ರತಿಯೊಂದು ಮಗುವಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಸಾರ್ವತ್ರಿಕವಾಗಿ ನೀಡುವಂತೆ ಸರ್ಕಾರದ ಮೇಲೆ ನೈತಿಕ ಒತ್ತಡವನ್ನು ತರಲು ಈಗಲಾದರೂ ಒಂದು ತೀವ್ರ ತೆರನಾದ ಜನಾಂದೋಲನವನ್ನು ರೂಪಿಸದಿದ್ದರೆ, ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಕನ್ನಡ ಮರೆಯಾಗಿ ಆಡು ಭಾಷೆಯಾಗಿ ಮಾತ್ರ ನಮ್ಮೊಂದಿಗಿರುತ್ತದಷ್ಟೇ. ಜೊತೆಗೆ ಲಕ್ಷಾಂತರ ಮಕ್ಕಳು ಮೂಲಭೂತ ಶಿಕ್ಷಣದ ಹಕ್ಕನ್ನು ಕಳೆದುಕೊಂಡು ಬೀದಿಪಾಲಾಗುತ್ತಾರೆ.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ವೆಬ್‌ಸೈಟ್)

1 thought on “ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ

Leave a Reply

Your email address will not be published.