Monthly Archives: November 2011

ಜೀವನದಿಗಳ ಸಾವಿನ ಕಥನ – 11

– ಡಾ.ಎನ್. ಜಗದೀಶ್ ಕೊಪ್ಪ

ಅಣೆಕಟ್ಟು ಅಥವಾ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾದವರಿಗೆ ಆಯಾ ಸರ್ಕಾರಗಳು ನೀಡುತ್ತಿರುವ ಪರಿಹಾರವೆಂಬುದು ಕಪಟ ನಾಟಕ ಎನ್ನುವುದು ಜಗತ್ತಿನೆಲ್ಲೆಡೆ ಸ್ಥಳಪರೀಕ್ಷೆಯಿಂದ ಧೃಡಪಟ್ಟಿದೆ. ವಿಸ್ಮಯವೆಂತೆ  ಈ ಅಣೆಕಟ್ಟುಗಳ ತಾಯಿ ಎನಿಸಿದ ವಿಶ್ವ ಬಾಂಕ್ ಕೂಡ ಹಲವಾರು ಬಾರಿ ತನ್ನ ವಾರ್ಷಿಕ ವರದಿಯಲ್ಲಿ ಸತ್ಯಾಂಶವನ್ನು ಮರೆಮಾಚದೆ ಬಿಚ್ಚಿಟ್ಟಿದೆ.

1986ರಿಂದ 1996ರವರೆಗೆ ತಾನು ಸಾಲ ನೀಡಿರುವ ರಾಷ್ಟ್ರಗಳ ಅಣೆಕಟ್ಟು ಕಾಮಗಾರಿ ಮತ್ತು ಪರಿಹಾರ ಯೋಜನೆಗಳನ್ನು ಪರಾಮರ್ಶಿಸಲು ನೇಮಕಮಾಡಿರುವ ಆಯೋಗದ ವರದಿಯನ್ನು ಆಧರಿಸಿ, ವಿಶ್ವಬಾಂಕ್ ತನ್ನ ವೈಫಲ್ಯತೆಯನ್ನು ತಾನೇ ಎತ್ತಿ ತೋರಿಸಿದ್ದು, ಅದು ಹೀಗಿದೆ:
“ವಿಶ್ವಬ್ಯಾಂಕ್‌ನ ಮೂಲಭೂತ ಗುರಿಗಳಲ್ಲಿ ಅಣೆಕಟ್ಟುಗಳಿಂದ ಸಂತ್ರಸ್ತರಾಗುವ ಜನತೆಯ ಬದುಕನ್ನು ಉನ್ನತಿಗೊಳಿಸಬೇಕೆಂಬುದು ಬ್ಯಾಂಕ್‌ನ ಗುರಿಯಾಗಿತ್ತು. ಆದರೆ ದೊರೆತಿರುವ ಅಂಕಿ ಅಂಶಗಳಿಂದ ಬ್ಯಾಂಕ್ ಈ ದಿಶೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಲು ವಿಷಾಧವಾಗುತ್ತಿದೆ.”

ಬಹುತೇಕ ಕಡೆ ಸಂತ್ರಸ್ತರಾದವರ ಬಡತನ ಮತ್ತೆ ಶೇ.40ರ ಪ್ರಮಾಣದಷ್ಟು ಹೆಚ್ಚಿರುವುದನ್ನು ಬ್ಯಾಂಕ್ ತನ್ನ ಸಮೀಕ್ಷೆಯಲ್ಲಿ ಧೃಡಪಡಿಸಿದೆ.

1994ರವರೆಗೆ ಜಗತ್ತಿನಾದ್ಯಂತ ಬ್ಯಾಂಕ್ ನೆರವು ನೀಡಿದ್ದ 192 ಅಣೆಕಟ್ಟು ಯೋಜನೆಗಳಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ಕೇವಲ ಹಣದ ರೂಪದಲ್ಲಿ ನೀಡಲಾಗಿದೆಯೆ ಹೊರತು ಅವರಿಗೆ ಪರ್ಯಾಯವಾದ ಭೂಮಿ ಅಥವಾ ನಿವೇಶನವನ್ನು ನೀಡದಿರುವುದು ಕಂಡುಬಂದಿದೆ. ಶೇ.70 ಮಂದಿಗೆ ಪರಿಹಾರ ರೂಪದಲ್ಲಿ ಹಣ, ಶೇ.15 ಮಂದಿಗೆ ಭೂಮಿ ನೀಡಿದ್ದರೆ, ಉಳಿದ ಶೆ. 15ರಷ್ಟು ನಿರಾಶ್ರಿತರಿಗೆ ದಾಖಲೆಗಳ ಕೊರತೆಯಿಂದ ಏನನ್ನೂ ನೀಡಲಾಗಿಲ್ಲ ಎಂಬುದನ್ನು ಪರಿಶೀಲನಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಪರಿಹಾರಕ್ಕಿಂತ ಮತ್ತೊಂದು ದೊಡ್ಡ ವಂಚನೆ ನಡೆದಿರುವುದು ಅಣೆಕಟ್ಟು ಯೋಜನೆಗೆ ಮುನ್ನ. ನಿರಾಶ್ರಿತರಾಗುವವರ ಕುರಿತು ತಯಾರಿಸಿದ ವರದಿಯಲ್ಲಿ. 192 ಅಣೆಕಟ್ಟುಗಳಿಂದ ಸಂತ್ರಸ್ತರಾಗುವವರ ಸಂಖ್ಯೆ 1 ಕೋಟಿ 34 ಲಕ್ಷ ಎಂದು ತಿಳಿಸಲಾಗಿದೆ. ಆದರೆ ನೈಜವಾಗಿ ಸಂತ್ರಸ್ತರಾದವರ ಸಂಖ್ಯೆ 1 ಕೋಟಿ 96 ಲಕ್ಷದ 50 ಸಾವಿರ. ಇದು ಕೇವಲ ವಿಶ್ವಬ್ಯಾಂಕ್‌ನಿಂದ ಸಾಲದ ನೆರವು ಪಡೆದ ಯೋಜನೆಗಳ ಸಂತ್ರಸ್ತರ ಅಂಕಿ ಅಂಶ. ಆದರೆ ವಿಶ್ವಬ್ಯಾಂಕ್ ಹೊರತುಪಡಿಸಿ, ಇನ್ನಿತರೆ ಹಣಕಾಸು ಸಂಸ್ಥೆ ಹಾಗೂ ಕೆಲವು ಸರಕಾರಗಳು ಸ್ವತಃ ಬಂಡವಾಳ ಹೂಡಿ ನಡೆಸಿದ ಅಣೆಕಟ್ಟು ಯೋಜನೆಗಳಿಂದ ಸ್ಥಳಾಂತರಗೊಂಡವರು ಜಗತ್ತಿನಾದ್ಯಂತ 6 ಕೋಟಿ 25 ಲಕ್ಷ.

ಇಂತಹ ಸುಳ್ಳು ಅಂಕಿ ಅಂಶಗಳನ್ನು ನೀಡುವ ಹಿಂದೆ ಸರಕಾರಗಳ ದೊಡ್ಡ ಹುನ್ನಾರವೇ ಅಡಗಿದೆ. ಅಣೆಕಟ್ಟು ಯೋಜನೆಗಳಿಂದ ಆಗಬಹುದಾದ ಪರಿಣಾಮಗಳು ಅತ್ಯಲ್ಪ ಹಾಗೂ ಯೋಜನೆಗಳಿಂದ ಉಂಟಾಗುವ ಲಾಭವೇ ಅಪಾರ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಉದ್ದೇಶಗಳಿಂದಲೇ ಇಂತಹ ಪೊಳ್ಳು ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ಜನತೆಯ ಸ್ಥಳಾಂತರಕ್ಕಿಂತ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ವ್ಯವಸ್ಥಿತವಾಗಿ ಮರೆ ಮಾಚಲಾಗುತ್ತದೆ.

1984 ರಲ್ಲಿ ಆಫ್ರಿಕಾದ ರುವಾಂಡ ದೇಶದಲ್ಲಿ ನಿರ್ಮಿಸಿದ ರುಜಿಜಿ ಎಂಬ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾಗುವವರು ಕೇವಲ 137 ಮಂದಿ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ವಾಸ್ತವವಾಗಿ ಸಂತ್ರಸ್ತರಾದವರ ಸಂಖ್ಯೆ 15 ಸಾವಿರ ಮಂದಿ. ಅದೇ ರೀತಿ ಕೀನ್ಯಾದಲ್ಲಿ ಟಾನಾ ನದಿಗೆ ಕಟ್ಟಿದ ಅಣೆಕಟ್ಟಿನಿಂದ 1 ಸಾವಿರ ಮಂದಿ ನಿರ್ವಸತಿಗರಾಗುತ್ತಾರೆ ಎಂದು ಸರಕಾರ ತನ್ನ ವರದಿಯಲ್ಲಿ ತಿಳಿಸಿತ್ತು. ವಿಶ್ವಬ್ಯಾಂಕ್ ಪರಿಶಿಲನೆ ಮಾಡಿದಾಗ 7 ಸಾವಿರ ಜನ  ಸ್ಥಳಾಂತರಗೊಂಡಿದ್ದರು.

ಭಾರತದ ಯೋಜನೆಗಳನ್ನು ಅವಲೋಕಿಸಿದಾಗ, ವರದಿಯಲ್ಲಿ ಅಂದಾಜಿಸಿದ್ದ ಸಂಖ್ಯೆಗಿಂತ ಹೆಚ್ಚು ಮಂದಿ ಸ್ಥಳಾಂತರಗೊಂಡಿರುವುದನ್ನು ನಾವು ಕಾಣಬಹುದು.

ಅಂದಾಜು ಸಂಖ್ಯೆ  ಸ್ಥಳಾಂತರಗೊಂಡವರು
ಆಲಮಟ್ಟಿ ಜಲಾಶಯ – ಕರ್ನಾಟಕ 20,000 2,40,000
ಸರ್ದಾರ್ ಸರೋವರ –
ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್
33,000 3,20,000
ಶ್ರೀಶೈಲಂ ನೀರಾವರಿ ಯೋಜನೆ 63,000 1,50,000
ಮಧ್ಯಪ್ರದೇಶ ನೀರಾವರಿ ಯೋಜನೆ 8,000 19,000
ಗುಜರಾತ್ ನೀರಾವರಿ ಯೋಜನೆ 63,600 1,40,370
ಮಹಾರಾಷ್ಟ್ರ ನೀರಾವರಿ ಯೋಜನೆ 8,031 16,080

ವಾಸ್ತವ ಸಂಗತಿಗಳನ್ನು ಹೇಗೆ ಮರೆಮಾಚಬಲ್ಲರು ಎಂಬುದಕ್ಕೆ ಈ ಕೋಷ್ಟಕ ಸಾಕ್ಷಿಯಾಗಿದೆ.

ಅಣೆಕಟ್ಟುಗಳ ನಿರ್ಮಾಣದಿಂದ ಉದ್ಭವಿಸುವ ಸಮಸ್ಯೆ ಕೇವಲ ಪರಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಜಲಾಶಯಗಳು ಸೃಷ್ಟಿಸುತ್ತಿರುವ ಹಲವಾರು ಮಾರಕ ರೋಗಗಳು ಸಂತ್ರಸ್ತರು ಹಾಗೂ ಜಲಾಶಯದ ಸುತ್ತ ಮುತ್ತಲಿನ ಜನಗಳ ಪಾಲಿಗೆ ನರಕ ಸದೃಶವಾಗಿದೆ. ಹಾಗಾಗಿ ಅಣೆಕಟ್ಟುಗಳನ್ನು ಹಾಗೂ ಜಲಾಯಗಳನ್ನು ರೋಗ ರುಜಿನಗಳ ತೊಟ್ಟಿಲು ಎಂದು ಕರೆದರೂ ಅತಿಶಯೋಕ್ತಿಯಾಗಲಾರದು.

Three Gorges Dam

Three Gorges Dam

ಜನತೆಯ ಆರೋಗ್ಯಕ್ಕೆ ಮಾರಕವಾಗಿರುವ ರೋಗವೆಂದರೆ ಕಳೆದ 3 ದಶಕಗಳಿಂದ ಮನುಕುಲವನ್ನು ಬಾಧಿಸುತ್ತಿರುವ ಏಡ್ಸ್ ಮಹಾಮಾರಿ. ಅಣೆಕಟ್ಟುಗಳ ನಿರ್ಮಾಣದ ಜೊತೆಜೊತೆಗೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಏಡ್ಸ್ ಖಾಯಿಲೆಗೆ ಅಗ್ರ ಸ್ಥಾನ. ಸಾಮಾನ್ಯವಾಗಿ ಅಣೆಕಟ್ಟು ಕಾಮಗಾರಿ ಕೆಲಸಗಳಲ್ಲಿ ಶೇ.80ರಷ್ಟು ಮಂದಿ ಯಾವುದೇ ಕುಶಲ ಕಲೆಯಿಲ್ಲದೆ ದುಡಿಯುವ ಶ್ರಮ ಜೀವಿಗಳು. ಇವರು ದಿನಗೂಲಿ ಆಧಾರದ ಮೇಲೆ ದೇಶದ ವಿವಿಧ ಸ್ಥಳಗಳಿಂದ ಅಣೆಕಟ್ಟು ಸ್ಥಳಕ್ಕೆ ಬಂದು ಕಾರ್ಮಿಕರಾಗಿ ದುಡಿಯುತ್ತಾ ಒಟ್ಟಾಗಿ ವಸತಿ ಕಾಲೋನಿಗಳಲ್ಲಿ ವಾಸಿಸುವುದು ವಾಡಿಕೆ. ಇವರುಗಳು ವಿವಿಧ ವಾತಾವರಣದ ಪ್ರದೇಶಗಳಿಂದ ಬರುವ ಕಾರಣ ಯಾವ ವ್ಯಕ್ತಿ ಯಾವ ರೋಗವನ್ನು ಹೊತ್ತು ತಂದಿರುತ್ತಾನೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಸಾಮಾನ್ಯವಾಗಿ ಒಂದೆಡೆ ವಾಸಿಸುವ ಕಾರ್ಮಿಕರಲ್ಲಿ ಕಾಣ ಬರುವ ಖಾಯಿಲೆಗಳೆಂದರೆ, ಸಿಫಿಲಿಸ್(ಲೈಂಗಿಕ ರೋಗ), ಕ್ಷಯ, ಸಿಡುಬು, ಜ್ವರ ಮತ್ತು ಏಡ್ಸ್ ಖಾಯಿಲೆಗಳು ಪ್ರಮುಖವಾದವು.

ಅಣೆಕಟ್ಟು ಕಾಮಗಾರಿ ವರ್ಷಾನುಗಟ್ಟಲೆ ಜರುಗುವುದರಿಂದ ಈ ಕಾರ್ಮಿಕರು ಸ್ಥಳೀಯ ಜನರ ಜೊತೆ ಒಡನಾಟವಿರಿಸಿಕೊಳ್ಳುವುದು ಸಹಜ. ಇದರಿಂದಾಗಿ ಸ್ಥಳೀಯ ನಿವಾಸಿಗಳೂ ಕೂಡ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ 1978 ರಲ್ಲಿ ಬ್ರೆಜಿಲ್ – ಪೆರುಗ್ವೆ ಗಡಿಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಅಣೆಕಟ್ಟೊಂದರ ಕಾರ್ಮಿಕರ ಬಗ್ಗೆ ಸಮೀಕ್ಷೆ ಮಾಡಿ ವರದಿಯೊಂದನ್ನು ಸಿದ್ಧಪಡಿಸಿತ್ತು. ಕಾಮಗಾರಿ ಸ್ಥಳದಲ್ಲಿ 38 ಸಾವಿರ ಮಂದಿ ದುಡಿಯುತ್ತಿದ್ದು ಪ್ರತಿದಿನ 2 ಸಾವಿರದಷ್ಟು ಕಾರ್ಮಿಕರು ಒಳಹೋಗುವುದು ಅಥವಾ ಹೊರಬರುವುದನ್ನು ಸಮೀಕ್ಷಾ ವರದಿ ಧೃಡಪಡಿಸಿದೆ. ಜೊತೆಗೆ ಇವರೆಲ್ಲಾ ಕಿಕ್ಕಿರಿದ ಕೊಳಚೆಗೇರಿಗಳಂತಹ ಕಾಲೋನಿಗಳಲ್ಲಿ ವಾಸಿಸುತ್ತಿರುವುದನ್ನು ವರದಿ ಉಲ್ಲೇಖಿಸಿತ್ತು. ಇಂತಹ ಸ್ಥಳಗಳಲ್ಲಿ ದುಡಿಮೆಗಾಗಿ ತನ್ನ ಸಂಸಾರವನ್ನು ತೊರೆದು ಹಲವಾರು ತಿಂಗಳುಗಳ ಕಾಲ ಏಕಾಂಗಿಯಾಗಿ ಜೀವಿಸುತ್ತಾ ದುಡಿಯುವ ಕಾರ್ಮಿಕರು ಅತಿ ವೇಗದಲ್ಲಿ ಕುಡಿತ ಮತ್ತು ವೇಶ್ಯಾವಾಟಿಕೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ಏಡ್ಸ್ ರೋಗದ ತವರಾದ ಆಫ್ರಿಕಾ ಖಂಡದ ಹಲವಾರು ರಾಷ್ಟ್ರಗಳಲ್ಲಿ 1990ರ ದಶಕದಲ್ಲಿ ನಿರ್ಮಾಣ ಪ್ರಗತಿಯಲ್ಲಿದ್ದ ಅಣೆಕಟ್ಟು ಕಾರ್ಮಿಕರಲ್ಲಿ ಶೇ.30ರಷ್ಟು ಮಂದಿ ಏಡ್ಸ್ ಖಾಯಿಲೆಗೆ ತುತ್ತಾಗಿದ್ದರು. ಇದಲ್ಲದೆ ಕಾಮಗಾರಿ ಸ್ಥಳಗಳಲ್ಲಿ ನಡೆಯುವ ಅವಘಡಗಳಿಂದಾಗಿ ಅನೇಕ ಕಾರ್ಮಿಕರು ಮೃತಪಡುತ್ತಿದ್ದಾರೆ. ಇಂತಹ ದುರಂತಗಳು ಹೊರಲೋಕಕ್ಕೆ ಸುದ್ದಿಯಾಗುವ ಸಾಧ್ಯತೆ ಬಹುತೇಕ ಕಡಿಮೆ. ಇವರಿಗೆ ಸಿಗುವ ಪರಿಹಾರ ಕೂಡ ಶೂನ್ಯ. ಭಾರತದ ನಾಗಾರ್ಜುನಸಾಗರ ಜಲಾಶಯ ನಿರ್ಮಾಣದಲ್ಲಿ 154 ಮಂದಿ, 1983ರಲ್ಲಿ ಕೊಲಂಬಿಯಾದ ಅಣೆಕಟ್ಟಿನ ಮಣ್ಣಿನ ಕುಸಿತದಿಂದಾಗಿ 300 ಕಾರ್ಮಿಕರು, ಹೀಗೆ ವಾರ್ಷಿಕವಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅಣೆಕಟ್ಟುಗಳ ನಿರ್ಮಾಣದಲ್ಲಿ ತಮ್ಮ ಜೀವವನ್ನು ಬಲಿಕೊಡುತ್ತಿದ್ದಾರೆ. ದೊಡ್ಡ ಅಣೆಕಟ್ಟುಗಳ ಕುರಿತಂತೆ ಅಧ್ಯಯನ ನಡೆಸಿರುವ ಫ್ರಾನ್ಸ್ ಸಂಸ್ಥೆಯೊಂದರ ಪ್ರಕಾರ ಈವರೆಗೆ 2 ಲಕ್ಷ ಮಂದಿ  ಕಾರ್ಮಿಕರು ಅಣೆಕಟ್ಟು ನಿರ್ಮಾಣದಲ್ಲಿ ಅಸುನೀಗಿದ್ದಾರೆ.

ಅಣೆಕಟ್ಟುಗಳಲ್ಲಾಗುವ ಅವಘಡಗಳ ಸಾವಿಗಿಂತ ಭೀಕರವಾದ ಮತ್ತೊಂದು ಸಂಗತಿಯೆಂದರೆ, ಜಲಾಶಯಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಕ್ರಿಮಿ ಹಾಗೂ ಜಂತುಗಳು ತಂದು ಹರಡುತ್ತಿರುವ ಸಾಂಕ್ರಾಮಿಕ ಖಾಯಿಲೆಗಳು ಜಾಗತಿಕ ಮಟ್ಟದಲ್ಲಿ ಮನುಕುಲದ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

1977ರಿಂದ ವಿಶ್ವ ಆರೋಗ್ಯ ಸಂಘಟನೆ ನೀರಿನಿಂದ ಹರಡುವ ಖಾಯಿಲೆಗಳ ನಿಯಂತ್ರಣಕ್ಕೆ ಹಲವಾರು ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ವಿಶ್ವಸಂಸ್ಥೆ ಕೂಡ ಧನಸಹಾಯ ನೀಡುತ್ತಲೇ ಬಂದಿದೆ.

ನೀರಿನಲ್ಲಿ ಕೊಳೆತ ಪ್ರಾಣಿ, ಮರಗಳು ಮತ್ತು ಇನ್ನಿತರ ವಸ್ತುಗಳಿಂದ ಸೃಷ್ಟಿಯಾಗುವ ಹಲವಾರು ಜಂತುಗಳು ನೀರಿನಲ್ಲಿರುವ ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದು, ನೀರಿನ ಮೂಲಕ ಮನುಷ್ಯನ ದೇಹಕ್ಕೆ ಪ್ರವೇಶ ಪಡೆಯುತ್ತವೆ. ಇವುಗಳಲ್ಲಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಜಲಾಶಯದಲ್ಲಿ ಕಂಡುಬಂದಿರುವ ಸ್ಕಿಸ್ಟೊಸೇಮ ಹೆಮೆಟೋಬಿಯಮ್ ಹಾಗೂ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಾಣಿಸಿಕೊಂಡಿರುವ ಎಸ್.ಮನ್ಸೋನಿ ಎಂಬ ಬ್ಯಾಕ್ಟೀರಿಯಾಗಳು ಪ್ರಮುಖವಾದವು. ಈ ಹುಳುಗಳು ಮನುಷ್ಯನ ಜಠರ ಸೇರಿ ಅಲ್ಲಿ ಪ್ರೌಢವಸ್ಥೆಗೆ ಬಂದು ನಂತರ ದಿನವೊಂದಕ್ಕೆ 3 ಸಾವಿರ ಮೊಟ್ಟೆ ಇಡುವ ಶಕ್ತಿ ಹೊಂದಿವೆ. ಇದೇ ಜಂತು ಮನುಷ್ಯನ ಎಲ್ಲಾ ಅಂಗಾಂಗಳಿಗೆ ಪ್ರವೇಶ ಮಾಡುವುದರ ಜೊತೆಗೆ ಮತ್ತೆ ಆತ ವಿಸರ್ಜಿಸುವ ಮಲದ ಮೂಲಕ ಹೊರಬಂದು ನೀರಿನಲ್ಲಿ ಆಶ್ರಯ ಪಡೆದು, ಮತ್ತೆ ಬೇರೊಬ್ಬ ವ್ಯಕ್ತಿಯ ದೇಹ ಪ್ರವೇಶಿಸುತ್ತವೆ. ಇವುಗಳಿಂದ ಮನುಷ್ಯನ ಮೇಲೆ ಆಗುವ ನೇರ ಪರಿಣಾಮಗಳೆಂದರೆ ವಿವಿಧ ರೀತಿಯ ಅಲರ್ಜಿ, ಜ್ವರ, ಕೆಮ್ಮು, ಚರ್ಮದಖಾಯಿಲೆ, ಕಿಡ್ನಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು. ಈಗಾಗಲೇ ಜಗತ್ತಿನಾದ್ಯಂತ 37 ಕೋಟಿ ಜನರು ನೀರಿನಲ್ಲಿರುವ ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಹಲವು ಬಗೆಯ ರೋಗಕ್ಕೆ ತುತ್ತಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದಂತಹ ಉಷ್ಣ ಪ್ರದೇಶದಲ್ಲಿ ಈ ಖಾಯಿಲೆಗಳು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿಲ್ಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸಮಾಡುವ ಕಾರ್ಮಿಕರಿಂದಾಗಿ ಈ ರೋಗಗಳು ಸಣ್ಣ ಪ್ರಮಾಣದಲ್ಲಿ ಭಾರತದಲ್ಲೂ ಹರಡಿವೆ. ಭಾರತದಂತಹ ರಾಷ್ಟ್ರಗಳಿಗೆ ಅಣೆಕಟ್ಟಿನ ಪ್ರಭಾವದಿಂದ ಹರಡಿರುವ ಮಲೇರಿಯಾ ದೊಡ್ಡ ಸವಾಲಾಗಿದೆ.

ಜಾಗತಿಕ ಮಟ್ಟದಲ್ಲಿ ಮಲೇರಿಯಾ ರೋಗವನ್ನು ಹೋಗಲಾಡಿಸಲು, ವಿಶ್ವ ಆರೋಗ್ಯ ಸಂಘಟನೆ ಸಮರೋಪಾದಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ, ಈ ಪಿಡುಗು ಹಲವು ರೂಪದಲ್ಲಿ ಜಗತ್ತಿನಾದ್ಯಂತ ಜನರನ್ನು ಕಾಡುತ್ತಲೇ ಇದೆ. 1990ರ ದಶಕದಲ್ಲಿ 30ಕೋಟಿ ಜನ ಮಲೇರಿಯಾಕ್ಕೆ ತುತ್ತಾಗಿ, ಇದರಲ್ಲಿ 10 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇಂದಿಗೂ ಕೂಡ ಈ ಮಲೇರಿಯಾ ಖಾಯಿಲೆ ಜಗತ್ತಿನ ಒಂದು ದೊಡ್ಡ ಪಿಡುಗು ಎಂದು ವಿಶ್ವ ಆರೋಗ್ಯ ಸಂಘಟನೆಯ ತಜ್ಞ ಡಾ.ಹಿರೋಷಿವಕಜಿಮ ಅಭಿಪ್ರಾಯ ಪಡುತ್ತಾರೆ.

ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಯಿಂದ ಹರಡುವ ಈ ರೋಗದ ಲಕ್ಷಣಗಳು 1970ರಲ್ಲಿ ಮೊದಲಬಾರಿಗೆ ಕೀನ್ಯಾದಲ್ಲಿ ಕಾಣಿಸಿಕೊಂಡಿತು. ಕೀನ್ಯಾದ ನೈರುತ್ಯ ಭಾಗದಲ್ಲಿ ನಿರ್ಮಿಸಿರುವ ಅಣೆಕಟ್ಟುಗಳ ನೀರಾವರಿ ಪ್ರದೇಶಗಳಲ್ಲಿ ಸೊಳ್ಳೆಗಳ ಪ್ರಮಾಣ 4 ಪಟ್ಟು ಹೆಚ್ಚಿರುವುದು ತನಿಖೆಯಿಂದ ಧೃಡಪಟ್ಟಿದೆ.

ಅನಾಫಿಲಿಸ್ ಜಾತಿಗೆ ಸೇರಿದ ಸೊಳ್ಳೆಗಳಲ್ಲಿ 4 ವಿಧಗಳಿದ್ದು, ಇವುಗಳಲ್ಲಿ ಗ್ಯಾಂಬಿಯಾ ಎಂಬ ಸೊಳ್ಲೆ ಆಫ್ರಿಕಾದಲ್ಲಿ, ಅರಣ್ಯನಾಶದ ಫಲವಾಗಿ ಇಮ್ಮಡಿಗೊಂಡು ಹಲವಾರು ರಾಷ್ಟ್ರಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಸೂಡಾನ್ ಮೂಲಕ ಈಜಿಪ್ಟಿಗೂ ವ್ಯಾಪಿಸಿದ ಮಲೇರಿಯಾ 1 ಲಕ್ಷದ 30 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿದೆ.

ಗ್ಯಾಂಬಿಯಾ ಹೆಸರಿನ ಈ ಸೊಳ್ಳೆ ಸಾಮಾನ್ಯವಾಗಿ ಆಶ್ರಯ ಪಡೆಯುತ್ತಿದ್ದುದು ಅರಣ್ಯಗಳಲ್ಲಿ. ಇದು ಜಾನುವಾರು ಹಾಗು ಕಾಡಿನ ಪ್ರಾಣಿಗಳ ಶರೀರದಲ್ಲಿ ಆಶ್ರಯ ಪಡೆದು ಜೀವಿಸುತ್ತಿತ್ತು. ಯಾವಾಗ ಅರಣ್ಯಪ್ರದೇಶಗಳ ನಡುವೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳು ನಿರ್ಮಾಣವಾದವೋ ಆಗ ಹಿನ್ನೀರಿನ ಪ್ರದೇಶದಲ್ಲಿ ಮುಳುಗಿಹೋದ ಅರಣ್ಯ ಮತ್ತು ಜನವಸತಿ, ರಸ್ತೆ, ಕಾಲುವೆಗಳಿಗಾಗಿ ನೆಲಸಮವಾದ ಅರಣ್ಯ ಪ್ರದೇಶ, ಹೀಗೆ ಅರಣ್ಯ ನಾಶದಿಂದಾಗಿ ಅಂತಿಮವಾಗಿ ಈ ಸೊಳ್ಳೆ ಮಾನವನ ರಕ್ತವನ್ನು ಆಶ್ರಯಿಸಿತು. ಕೀನ್ಯಾ ಮತ್ತು ಶ್ರೀಲಂಕಾದಲ್ಲಿ ನಿರ್ಮಿಸಿದ ಅಣೆಕಟ್ಟುಗಳಿಂದಾಗಿ ವಿವಿಧ ಜಾತಿಯ ಸೊಳ್ಳೆಗಳಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಅವುಗಳು ಹಳದಿ ಜ್ವರ, ಡೆಂಗ್ಯೂ ಜ್ವರ ಮುಂತಾದ ರೂಪವನ್ನು ತಾಳುತ್ತಿದೆ. ಸೊಳ್ಳೆಗಳ ನಿರ್ಮೂಲನಕ್ಕೆ ಡಿ.ಡಿ.ಟಿ. ಪೌಡರ್ ಸಿಂಪಡಿಸುವ ಪ್ರಕ್ರಿಯೆ ಈಗ ವಿಫಲವಾಗಿದ್ದು, ಈ ಕೀಟನಾಶಕ ಪುಡಿಯನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಸೊಳ್ಳೆಗಳು ವೃದ್ಧಿಸಿಕೊಂಡಿವೆ.

ಇವುಗಳ ಜೊತೆ ನದಿ ಹಾಗೂ ಕಡಲ ತೀರದಲ್ಲಿನ ಸೊಳ್ಳೆಗಳಿಂದ ಹರಡುವ ಆನೆಕಾಲು ರೋಗ ಜಗತ್ತಿಗೆ ಸವಾಲಾಗಿದೆ. ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಜನತೆ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ.

ನೀರಿನಲ್ಲಿ ವಾಸಿಸುತ್ತಿರುವ ಬ್ಲಾಕ್ ಪೈ ಎಂಬ ಜಾತಿಯ ಸೊಳ್ಳೆಯಿಂದಾಗಿ ಕುರುಡುತನ ಆವರಿಸಿಕೊಳ್ಳುವ ಖಾಯಿಲೆಯೊಂದು ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡಿದೆ. ಅಲ್ಲಿನ 26 ರಾಷ್ಟ್ರಗಳಲ್ಲಿ 3 ಕೋಟಿ ಜನ ಈ ಖಾಯಿಲೆಗೆ ತುತ್ತಾಗಿದ್ದು, 16 ಲಕ್ಷ ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.

ಇದಕ್ಕಿಂತ ಭಿನ್ನವಾದ ಮತ್ತೊಂದು ಸಾಮಾನ್ಯ ಖಾಯಿಲೆಯೆಂದರೆ ಜಲಾಶಯದಲ್ಲಿ ಕೊಳೆತ ಪ್ರಾಣಿಗಳು ಹಾಗೂ ಮರಗಳಿಂದ ಕಲುಷಿತವಾದ ನೀರು ರಾಸಾಯನಿಕ ಸಿಂಪಡಿಸಿದ ಕೃಷಿ ಪ್ರದೇಶಗಳಲ್ಲಿ ಕಾಲುವೆ ಮೂಲಕ ಹಲವಾರು ನಗರಗಳಿಗೆ ಕುಡಿಯಲು ಬಳಕೆಯಾಗುತ್ತಿದ್ದು ಅನೇಕ ಮಂದಿ ಚರ್ಮ ರೋಗಗಳಿಗೆ ತುತ್ತಾಗಿದ್ದಾರೆ. ರಾಜಸ್ಥಾನದ ಒಣ ಪ್ರದೇಶದಲ್ಲಿ ಹರಿಯುತ್ತಿರುವ ಇಂದಿರಾಗಾಂಧಿ ಕಾಲುವೆಯ ನೀರು ಕುಡಿದ ಅಲ್ಲಿನ ಮಕ್ಕಳು ಕರುಳು ಬೇನೆಯಿಂದ ಬಳಲುತ್ತಿದ್ದಾರೆ. ಈ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಿದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯ ನೀರಿನಲ್ಲಿರುವ ಕಲ್ಮಶ ಹಾಗೂ ಮನುಷ್ಯನ ಮಲ ಮೂತ್ರಗಳು ಇದಕ್ಕೆ ಕಾರಣ ಎಂದು ತಿಳಿಸಿದೆ. ಇದೀಗ ನಿರ್ಮಾಣವಾಗುತ್ತಿರುವ ಸರದಾರ್ ಸರೋವರದ ಕುಡಿಯುವ ನೀರಿನ ಯೋಜನೆಗೆ ಇಂತಹದ್ದೇ ಭೀತಿ ಎದುರಾಗಿದೆ. ಒಟ್ಟಾರೆ ಜಲಾಶಯ ಮತ್ತು ಕಾಲುವೆಗಳೆಂದರೆ ಸಾಂಕ್ರಾಮಿಕ ರೋಗಗಳ ವಾಹಕಗಳು ಎಂಬಂತಾಗಿದೆ.

(ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ

ಕೊಡಗಿನಲ್ಲಿ ಅಕ್ರಮ ಅರಣ್ಯ ಲೂಟಿಗೆ ಪಾಲುದಾರನಾದ ಸರ್ಕಾರ

ವಿ. ಪ್ರಶಾಂತ್ ಮಿರ್ಲೆ
ವಕೀಲರು

ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಹೊಂದಿರುವ ಕೊಡಗು ಜಿಲ್ಲೆಯು, ನೆಚ್ಚಿನ ಪ್ರವಾಸತಾಣವಾಗಿ ನಿಸರ್ಗದ ರಸದೌತಣವನ್ನು ನೀಡುತ್ತಿದೆ. ಈ ಪ್ರದೇಶಗಳಲ್ಲಿ ಕಂಡುಬರುವ ಜಮ್ಮಾ ಮತ್ತು ಬಾಣೆ ಜಮೀನುಗಳು ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳಾಗಿರುತ್ತವೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಸಾಗುವಳಿದಾರರಿಗೆ ವಹಿಸಿಕೊಟ್ಟವುಗಳಾಗಿರುತ್ತವೆ, ಈ ಪ್ರದೇಶಗಳಲ್ಲಿ ನಿಯಮಗಳ ಅನುಸಾರವಾಗಿ ಸಾಗುವಳಿದಾರರಿಗೆ ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಉಪಯೋಗಿಸುವ ಅವಕಾಶವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಮಹಾರಾಜರೇ (ಅಂದರೆ ಸರ್ಕಾರವೇ) ಕಾಯ್ದಿರಿಸಿಕೊಂಡಿದ್ದರು. ಪ್ರತಿ ಸಾಗುವಳಿದಾರನ ಕೃಷಿ ಜಮೀನಿಗೆ ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಷ್ಟು ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಇಮ್ದು ಇಂತಹ ಅರಣ್ಯ ಪ್ರದೇಶಗಳಲ್ಲಿ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶವು ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಅದರಲ್ಲಿ ಸಾಕಷ್ಟು ಪ್ರದೇಶವು ಬೇರೆಯವರಿಗೆ ಪರಭಾರೆಯೂ ಆಗಿದೆ.

ಇದಕ್ಕೂ ಮಿಗಿಲಾಗಿ, ನೂರಾರು ಹೆಕ್ಟೆರ್ ಪ್ರದೇಶಗಳು ಜಮ್ಮಾ-ಬಾಣೆ ಜಮೀನಿನ ಹೆಸರಿನಲ್ಲಿ ಸಾಗುವಳಿದಾರರಿಂದಲೇ ಒತ್ತುವರಿಯಾಗಿ, ಆಸುಪಾಸಿನ ಹೇರಳ ಪ್ರಮಾಣದ ಅರಣ್ಯ ಪ್ರದೇಶವನ್ನು ಬರಿದು ಮಾಡಲು ಹೊರಟಿರುವುದು ಆಘಾತಕಾರಿ ಬೆಳವಣಿಗೆ!.

ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿದಾರರ ಗುಂಪಿನ ಹಕ್ಕೊತ್ತಾಯದಿಂದಾಗಿ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಪ್ರಸ್ತುತ ಸರ್ಕಾರವು ಸದರಿ ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಸಕ್ರಮಗೊಳಿಸಿ ಹಿಡುವಳಿದಾರರಿಗೆ ಹಕ್ಕನ್ನು ಪ್ರಾಪ್ತಿಮಾಡುವ ಹೊಸ ನಿಯಮವನ್ನು ಜಾರಿಗೆ ತರುವ ನಡೆ ಸಂಶಯಾಸ್ವದವಾಗಿದೆ. ಮುಖ್ಯವಾದ ಸಂಗತಿಗಳೆಂದರೆ, ರಾಜ್ಯದ ಭೂ ಸುಧಾರಣೆ ಕಾಯಿದೆಯ ಅಡಿಯಲ್ಲಿ ಸಾಮಾನ್ಯನು ಹೊಂದುವ ಗರಿಷ್ಟ ವ್ಯವಸಾಯದ ಭೂಮಿತಿಯು 54 ಎಕರೆಗಳು ; ಇದಕ್ಕಿಂತ ಹೆಚ್ಚಿನ ಭೂಮಿಯು ಸರ್ಕಾರಕ್ಕೆ ನಿಹಿತವಾಗುತ್ತದೆ. ಆದರೆ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಇದು ಸರ್ಕಾರ ಉಳ್ಳವರ ಪರವಾದ ಧೋರಣೆ ಅಲ್ಲವೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳು, ಪರಿಸರ ಕಾಳಜಿ ನಿಯಮಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಮಾಲಿನ್ಯಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದಕ್ಕೆ ಸರ್ಕಾರದ ಉತ್ತರವೇನು?

ಹಿಂದಿನ ಮಹಾರಾಜರಿಂದ ಇಂದಿನ ಸರ್ಕಾರಗಳು ತಮ್ಮ ಸ್ವಾಮ್ಯಕ್ಕೆ ಒಳಪಟ್ಟ ಅರಣ್ಯ ಪ್ರದೇಶಗಳನ್ನು ಜನರ ಅವಶ್ಯಕತೆಗಳನ್ನು ಮೀರಿ ದುರ್ಬಳಕೆ ಮಾಡದಂತೆ ತಡೆಯುವುದಕ್ಕಾಗಿ ಹಲವು ನಿಯಮಗಳನ್ನು ಜಾರಿಗೆ ತಂದಿವೆ. ಪ್ರಾದೇಶಿಕವಾಗಿ ತಮ್ಮ ಕೃಷಿ ಜಮೀನುಗಳಿಗೆ ಸುತ್ತುವರೆದ ಕಾಡು ಪ್ರದೇಶಗಳನ್ನು ಗುರ್ತಿಸಿ ಸೀಮಿತ ನಿರ್ಬಂಧಿತ ಹಕ್ಕುಗಳೊಂದಿಗೆ, ಅಂದರೆ 1) ಕಂದಾಯ ಮುಕ್ತವಾಗಿ,  2) ಜಾನುವಾರುಗಳ ಮೇವಿಗಾಗಿ,, 3) ಮರಗಳಿಂದ  ಎಲೆ ಗೊಬ್ಬರವನ್ನು  ತೆಗೆದುಕೊಳ್ಳಲು, 4) ಕೃಷಿ ಉತ್ಪನ್ನ  ಮತ್ತು ಗೃಹ ಉಪಯೋಗಕ್ಕಾಗಿ ಕಟ್ಟಿಗೆ  ಮತ್ತು  ಮರ ಮುಟ್ಟುಗಳನ್ನು  ತೆಗೆದುಕೊಳ್ಳುಲು ಕೃಷಿಕರಿಗೆ ಅವಕಾಶ, ಇವನ್ನು ಹೊರತುಪಡಿಸಿ ಅವುಗಳ ಮೇಲಿನ ಹಕ್ಕನ್ನು ಸರ್ಕಾರವೇ ಕಾಯ್ದಿರಿಸಿಕೊಂಡಿರುತ್ತದೆ. ಇಂತಹ  ಅರಣ್ಯ ಪ್ರದೇಶಗಳನ್ನು ನಮ್ಮ ರಾಜ್ಯದಲ್ಲಿ  ಪ್ರಾದೇಶಿಕವಾಗಿ ಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮ್ಕಿ, ಕಾನೆ ಮತ್ತು ಬಾಣೆ ಜಮೀನುಗಳೆಂತಲು; ಉತ್ತರ ಕನ್ನಡ  ಜಿಲ್ಲೆಯಲ್ಲಿ ಹಾಡಿ ಮತ್ತು ಬೆಟ್ಟದ ಜಮೀನು  ಜಮೀನುಗಳೆಂತಲೂ; ಮೈಸೂರು ಪ್ರದೇಶದಲ್ಲಿ ಕಾನೆ ಮತ್ತು ಸೊಪ್ಪಿನ ಬೆಟ್ಟದ ಜಮೀನುಗಳೆಂತಲೂ; ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳೆಂತಲೂ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೋತ್ಸಾಲ್ ಜಮೀನುಗಳೆಂತಲೂ ಅನ್ನುತ್ತಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ-1964ರ ಕಲಮು 79(2)ರ ಅಡಿಯಲ್ಲಿ ಈ ಅರಣ್ಯ ಪ್ರದೇಶಗಳ ಮೇಲಿನ ನಿಬಂಧಿತ ಉನ್ಮುಕ್ತಿಗಳ ಅನುಭೋಗವನ್ನು ಮಾನ್ಯಮಾಡಿದೆ.

ಪ್ರಸ್ತುತದಲ್ಲಿ, ರಾಜ್ಯದಲ್ಲಿ ಇರುವ 4,10,775 ಹೆಕ್ಟೆರ್ ಅರಣ್ಯಪ್ರದೇಶದಲ್ಲಿ ಸುಮಾರು 1/3 ರಷ್ಟು ಪ್ರದೇಶವ್ಯಾಪ್ತಿಯನ್ನು ಕೊಡಗು ಜಿಲ್ಲೆಯೇ ಹೊಂದಿದೆ. ಐತಿಹಾಸಿಕವಾಗಿ ಅವಲೋಕಿಸಿದಾಗ, ಹಿಂದಿನ ಕೊಡಗಿನ ಮಹಾರಾಜರು ಕಾಡುಗಳ ರಕ್ಷಣೆಯ ಹೊಣೆಯನ್ನು ಜಮ್ಮಾ ಸೇವಕರಿಗೆ, ಕೆಲಸದಾಳುಗಳಿಗೆ ನಂತರದ ಕಾಲದಲ್ಲಿ ಬ್ರಿಟಿಷರ ಆಡಳಿತದಲ್ಲಿ ತಮ್ಮ ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ದಾನವಾಗಿ ಅಥವಾ ಉಂಬಳಿಯಾಗಿ ಸಾಗು ಭೂಮಿಯನ್ನು ನೀಡಿ, ಅದರಲ್ಲೂ ಮುಖ್ಯವಾಗಿ ಸಾಗುವಳಿಗೆ (ಕೃಷಿಗೆ) ಒಳಪಟ್ಟ ಜಮೀನಿಗೆ ಒತ್ತಾಗಿ ಸುತ್ತುವರೆದಿರುವ ಕಾಡು ಪ್ರದೇಶವನ್ನು ಆಯಾ ಸಾಗುವಳಿದಾರರಿಗೆ ಮೇಲ್ವಿಚಾರಣೆ ನೀಡಿ ಆ ಪ್ರದೇಶಗಳನ್ನು ತಮ್ಮ ಸ್ವಂತ ಅಥವಾ ಗೃಹಕೃತ್ಯಗಳಿಗಷ್ಟೇ ಬಳಸಿಕೊಳ್ಳುವ ಅವಕಾಶವನ್ನು ಹೊರತುಪಡಿಸಿ ಮಿಕ್ಕ ಹಕ್ಕುಗಳನ್ನು  ಮಹಾರಾಜರೇ ಕಾಯ್ದಿರಿಸಿಕೊಂಡಿದ್ದರು. ಇಂದಿಗೂ ಸಹ ಇವುಗಳ ಹಕ್ಕುಗಳನ್ನು (ಸಾರ್ವಭೌಮಿಕೆಯನ್ನು) ಸರ್ಕಾರವೇ ಕಾಯ್ದಿರಿಸಿಕೊಂಡಿದೆ.

ಆದರೇ, ಇತ್ತೀಚಿನ ದಿನಗಳಲ್ಲಿ ಕಾಫಿ ಅಥವಾ ಕಾರ್ಡಮಾಮ್ (ಏಲಕ್ಕಿ) ಅಥವಾ ಇತರೇ ಬೆಳೆಗಳನ್ನು ಬೆಳೆಯುವ ಅತೀ ಆಸೆಯಿಂದ ತಮ್ಮ ಕೃಷಿ ಜಮೀನಿಗೆ ಸುತ್ತುವರೆದ ಜಮ್ಮಾ-ಬಾಣೆ ಪ್ರದೇಶಗಳನ್ನು ಸಾಗುವಳಿಗೆ ಪರಿವರ್ತಿಸುವ ಕಾರಣ ನೀಡಿ ಕಂದಾಯ ಇಲಾಖೆಯಿಂದ ಅಕ್ರಮವಾಗಿ ಪ್ರಮಾಣ ಪತ್ರಗಳನ್ನು (ಸಿ.ಆರ್.ಸಿ ಮತ್ತು ಸಿ.ಡಿ.ಆರ್.ಸಿ) ಪಡೆದು ಕರನಿರ್ಧರಣೆಗೆ ಒಳಪಡಿಸಿ ಕಂದಾಯ ಪಾವತಿಸುವ ಮೂಲಕ ಹಕ್ಕು ಸಾಧಿಸುವುದು ಮತ್ತು ಮಾರಾಟ ಮಾಡುವುದನ್ನು ಮಾಡಲಾಗಿದೆ. (ಕಾನೂನುಬದ್ದವಾಗಿ ಈ ಬಾಣೆ ಜಮೀನುಗಳನ್ನು ವರ್ಗಾಯಿಸುವಂತಿಲ್ಲ). ಹಲವುಬಾರಿ ಇಂತಹ ಅಕ್ರಮಗಳ ವಿರುದ್ದ ಪರಿಸರವಾದಿಗಳ ಪ್ರತಿಭಟನೆಗಳು ನಡೆದೂ ಇದ್ದವು.

ಕಾರಣ, ಜಮ್ಮಾ-ಬಾಣೆ ಜಮೀನುಗಳು ಸೇರಿದಂತೆ ಸುಮಾರು 1,34,657 ಹೆಕ್ಟೆರ್ ವಿಸ್ತೀರ್ಣದಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಜಮ್ಮಾ-ಬಾಣೆಗಳ ಹಿಡುವಳಿದಾರರಿಂದ ಸುಮಾರು 30.000 ಹೆಕ್ಟೆರ್‌ಗಳಷ್ಟು ಪ್ರದೇಶ ಅರಣ್ಯಪ್ರದೇಶದ ಕಾಫಿ ಬೆಳೆಯ ಹೆಸರಿನಲ್ಲಿ ಒತ್ತುವರಿಯಾಗಿದೆ. ಹಲವು ಸಂದರ್ಭಗಳಲ್ಲಿ, ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯ ಅಕ್ರಮ-ಸಕ್ರಮ ಮಾಡಿಸಿಕೊಳ್ಳುವ ಪ್ರಯತ್ನದಿಂದ, ಸರ್ಕಾರ ಮತ್ತು ಹಿಡುವಳಿದಾರರ ನಡುವೆ ಕಾನೂನು ಸಮರಗಳು ಏರ್ಪಟ್ಟು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಮ್ಮಾ-ಬಾಣೆ ಜಮೀನಿನ ಮೇಲಿನ ಸರ್ಕಾರದ ಹಕ್ಕನ್ನು ಧೃಡೀಕರಿಸಿವೆ. ಈ ತೀರ್ಪುಗಳ ಅನ್ವಯ ಸರ್ಕಾರ ಜಮ್ಮಾ-ಬಾಣೆ ಜಮೀನುಗಳ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಕಟ್ಟು-ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಿತು. ಉದಾಹರಣೆಗೆ ದಿನಾಂಕ 31.10.2006ರಲ್ಲಿ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು ಸುತ್ತೋಲೆಯನ್ನು ಹೊರಡಿಸಿ, “ಕೊಡಗು ಜಿಲ್ಲೆಯಲ್ಲಿನ ಬಾಣೆ  ಜಮೀನುಗಳ ಬಗ್ಗೆ ನೀಡಿರುವ ವಿಶೇಷಾಧಿಕಾರ ಸೀಮಿತವಾಗಿದ್ದು, ಈ ಜಮೀನುಗಳ ಪರಿವರ್ತನೆಗೆ ಅವಕಾಶವಿಲ್ಲ. ಆದ್ದರಿಂದ, ಈ ಜಮೀನುಗಳನ್ನು ಪರಿವರ್ತನೆಗಳನ್ನು ಕೋರಿ ಬರುವ ಪ್ರಸ್ತಾವನೆಗಳನ್ನು ಪರಿಗಣಿಸದಿರುವಂತೆ,” ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಆ ಜಿಲ್ಲೆಯ ಎಲ್ಲಾ ಸಂಬಂಧಿತ ಕಂದಾಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಬಾಣೆ ಜಮೀನುಗಳಿಗೆ ಈಗಾಗಲೇ ಅನುಮತಿಯನ್ನು ನೀಡಿದ್ದಲ್ಲಿ ಅದನ್ನು ರದ್ದುಪಡಿಸಿ ಆ ಜಮೀನುಗಳನ್ನು ಬಾಣೆ ಜಮೀನುಗಳನ್ನಾಗಿಯೆ ಮುಂದುವರೆಸಲೂ ಸಹ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು.

Karnataka High Court

Karnataka High Court

ಇಷ್ಟಲ್ಲದೆ, ಕರ್ನಾಟಕದ ಉಚ್ಛ ನ್ಯಾಯಾಲಯ ದಿನಾಂಕ 22-10-1993ರಂದು ನೀಡಿದ  ತೀರ್ಪನ್ನು ಉಲ್ಲೇಖಿಸುತ್ತಾ, ಜಮ್ಮಾ ಬಾಣೆ ಜಮೀನನ್ನು ಹೊದಿರುವವರು ಅದರ ಒಡೆಯರಾಗಲು ಸಾಧ್ಯವಿಲ್ಲ. ಆದ್ದರಿಂದ, ಅವರು ಬರೀ ವಿಶೇಷಾಧಿಕಾರಗಳಿಗೆ ಮಾತ್ರ ಅರ್ಹರು ಮತ್ತು ಸದರಿ ಬಾಣೆ ಜಮೀನನ್ನು ಮಾರಾಟ ಮಾಡುವ ಹಕ್ಕು ಅವರಿಗಿರುವುದಿಲ್ಲ. ಕರ್ನಾಟಕ ಭೂಕಂದಾಯ ಅಧಿನಿಯಮದ ಪರಿಛ್ಛೇದ 79 ರಲ್ಲಿಯೂ ಈ ವಿಶೇಷಾಧಿಕಾರಗಳನ್ನು ರಕ್ಷಿಸಲಾಗಿದ್ದು ಅನುಭವದಾರರು ಬಾಣೆ ಜಮೀನಿನ ಮಾಲೀಕತ್ವದ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಇದು ಕರ್ನಾಟಕದ ಉಚ್ಛ ನ್ಯಾಯಾಲಯದ ಪೂರ್ಣಪೀಠದ ತೀರ್ಪಾಗಿದ್ದು. ಇದನ್ನು ಯಾರೂ ಪ್ರಶ್ನಿಸಿಲ್ಲವಾದ್ದರಿಂದ ಇಂದಿಗೂ ನಿರ್ಣಾಯಕವಾಗಿದೆ ಎಂದು ಹೇಳಲಾಗಿತ್ತು.

ಆದರೂ, ಹಿಡುವಳಿದಾರರು ತಮ್ಮ ರಾಜಕೀಯ ಪ್ರಭಾವ ಬೀರಿ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಇದೇ ಸಮಯವನ್ನರಿತ ಕೆಲವು ಕೊಡವ ರಾಜಕಾರಣಿಗಳು ಈ ವಿಷಯವನ್ನು ರಾಜಕೀಯಗೊಳಿಸಿದರು. ಕೆಲವು ರಾಜಕಾರಣಿಗಳು ಕೊಡಗನ್ನು ಅರಣ್ಯ ಪ್ರದೇಶವಾಗಿ ಗುರ್ತಿಸಿ ಅಮೇರಿಕಾಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ ಎಂದು ತರ್ಕಕ್ಕೆ ನಿಲ್ಲದ ಹೇಳಿಕೆ ನೀಡಿ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಪ್ರತ್ಯೇಕ ರಾಜ್ಯದ ಬೇಡಿಕೆಗಳಿಗೆ ಈ ವಿಷಯವನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದರು, ಮತ್ತು ಈಗಲೂ ಪ್ರಯತ್ನಿಸುತ್ತ ಇದ್ದಾರೆ. ಇವುಗಳ ಪರಿಣಾಮವೆ ಕೊಡಗಿನಲ್ಲಿ 2006ನೇ ಇಸವಿಯ ನವೆಂಬರ್ ಒಂದರಂದು ನಡೆದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಘಟಿಸಿದ ಅನುಚಿತ ಘಟನೆಗಳು.

ಆದರೆ ಹಾಲಿ ಸರ್ಕಾರವು ಸಮಯಸಾಧಕನಂತೆ ತನ್ನ ಆಡಳಿತ ಅವಧಿಯ ಪ್ರಾರಂಭದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಜಮ್ಮಾ ಬಾಣೆಗೆ ಜಮೀನಿನ ಒಡೆತನ ಸರ್ಕಾರಕ್ಕೆ ಸೇರಿದೆ ಎಂದು ಹೊರಡಿಸಲಾಗಿರುವ ಸುತ್ತೋಲೆಯನ್ನು ರದ್ದುಗೊಳಿಸಿ ದಿನಾಂಕ 31.10.2006ಕ್ಕಿಂತ ಮುಂಚಿತವಾಗಿ ಪರಿವರ್ತಿಸಲ್ಪಟ್ಟ ಜಮೀನುಗಳಿಗೆ ಹಕ್ಕು ಪ್ರಾಪ್ತಿ ಮಾಡಿ ಸಕ್ರಮಗೊಳಿಸಿತ್ತು. ಈಗ, ಮತ್ತೂ ಮುಂದುವರಿದು ದಿನಾಂಕ 04.11.2011ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮಾ ಬಾಣೆ ಅರಣ್ಯ ಇಲಾಖೆಗೆ ಸೇರಿದ್ದಲ್ಲ: ಬದಲಿಗೆ ಹಿಡುವಳಿದಾರರಿಗೆ ಸೇರಿದ್ದು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿಯವರು ಕೊಡಗಿನ ಬೆ.ಜೆ.ಪಿ.ಯ ಶಾಸಕರ ಮತ್ತು ಅವರ ಬೆಂಬಲಿತ ಜಮ್ಮಾ ಬಾಣೆ ಹಿಡುವಳಿದಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು, ತಮ್ಮ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಎಳ್ಳು-ನೀರು ಬಿಟ್ಟಿದ್ದು, ಇದು ಸಂಪೂರ್ಣವಾಗಿ ಭೂಮಾಲೀಕರ ಹಿತಕಾಯುವ ವಿವೇಚನೆಯಿಲ್ಲದ ಕ್ರಮವಾಗಿದೆ. ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ಸರ್ಕಾರ ಸ್ವಷ್ಟ ಕಾರಣವಿಲ್ಲದೆ ಕೇವಲ ತಮ್ಮ ಬೆಂಬಲಿತ ಮತದಾರರ ಹಿತಕಾಯುವುದು, ಅದೂ ಅಕ್ರಮವೆಂದು ತೋರಿದ ಕ್ರಮದಿಂದ, ಎಷ್ಟು ಸರಿ?

ಇಲ್ಲಿ ಈಗ ಮುಖ್ಯವಾಗಿ, ಕಂದಾಯ ದಾಖಲೆಗಳಲ್ಲಿ ತೋರಿಸಿರುವ ವಿಸ್ತೀರ್ಣಕ್ಕಿಂತ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಪ್ರದೇಶದ ಹಿಡಿತವನ್ನು ತಪ್ಪಿಸಿ, ಅದರ ದುರ್ಬಳಕೆಯನ್ನು ರಕ್ಷಿಸಬೇಕಾಗಿದೆ. ಹಾಗೂ ಮುಖ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತಿರುವ ಬಾಣೆ ಜಮೀನುಗಳನ್ನು ಅಥವಾ ಅರಣ್ಯ ಪ್ರದೇಶಗಳನ್ನು ರೆಸಾರ್ಟ್‌ಗಳಿಗಾಗಿ, ಅಪಾರ್ಟ್‌ಮೆಂಟ್‌ಗಳಿಗಾಗಿ, ನಿವೇಶನಗಳಿಗಾಗಿ ಮತ್ತು ವಿಲ್ಲಾಸ್‌ಗಳಿಗಾಗಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಕೆಲವು ಜಾಗಗಳಲ್ಲಿ ಅಕ್ರಮವಾಗಿ ಗಣಿಗಾರಿಕೆಯನ್ನೂ ನೆಡೆಸುತ್ತಿದ್ದಾರೆ. ಇವುಗಳನ್ನು ಸಹ ನಿಯಂತ್ರಿಸಬೇಕಿದೆ.

ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಹೊಂದಿರಹುದಾದ ಕೃಷಿಭೂಮಿಯ ಭೂಮಿತಿಯು ಗರಿಷ್ಟ 54 ಎಕರೆಗಳನ್ನು ಮೀರುವಂತಿಲ್ಲ. ಆದರೆ, ಕೊಡಗಿನ ಪ್ರದೇಶದಲ್ಲಿ ಪ್ರತಿ ಸಾಗುವಳಿದಾರು ತನ್ನ ಕೃಷಿ ಜಮೀನಿಗೆ (ಕೃಷಿ ಜಮೀನನ್ನು ಹೊರತುಪಡಿಸಿ) ಒತ್ತಾಗಿ 50 ರಿಂದ 200 ಹೆಕ್ಟೆರ್‌ಗಳಿಗಿಂತ ಮಿಗಿಲಾಗಿ (ಅಂದರೆ 100 ರಿಂದ 500 ಎಕರೆಗಳಿಗೂ ಮಿಗಿಲಾಗಿ) ಜಮ್ಮಾ-ಬಾಣೆ ಜಮೀನುಗಳ ಹಿಡುವಳಿಯನ್ನು ಹೊಂದಿರುತ್ತಾರೆ. ಈ ಹಿಡುವಳಿಯನ್ನು ಕಾನೂನುಬದ್ದಗೊಳಿಸಿದಾಗ ನಿಯಮಬದ್ಧನಾಗಿ ರಾಜ್ಯದಲ್ಲಿ ಸಾಮಾನ್ಯನ ಹಿಡುವಳಿ ಹೊಂದುವ ಭೂಮಿಯ ಪ್ರಮಾಣಕ್ಕಿಂತ ಹೆಚ್ಚಾಗಿ ಇರುವುದರಿಂದ ಬಾಣೆ ಜಮೀನಿನ ಒಡೆತನ ಕಾನೂನಿಗೇ ವಿರುದ್ಢವಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದಲೇ, 100 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಹೊಂದಿರುವವರನ್ನು ಭೂಪರಿಮಿತಿಯಿಂದ ವಿನಾಯ್ತಿ ನೀಡಿ ಸಕ್ರಮಗೊಳಿಸುವ ಸರ್ಕಾರದ ಪ್ರಯತ್ನ ಎಷ್ಟು ಸರಿ?. ಜಮ್ಮಾ-ಬಾಣೆ ಪ್ರದೇಶಗಳನ್ನು ಪ್ಲಾಂಟೇಶನ್ ಹೆಸರಿನಲ್ಲಿ ಸಕ್ರಮ ಮಾಡುವುದಾದರೆ ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಯಾವುದೇ ಅಕ್ರಮ-ಸಕ್ರಮಗೊಳಿಸುವಲ್ಲಿ ಸೂಕ್ತ ಮಾನದಂಡಗಳನ್ನು, ನಿಯಮಗಳನ್ನು, ಪರಿಸರ ಸಂಬಂಧಿ ವಿಷಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಈ ಎಲ್ಲಾ ಅಕ್ರಮಗಳಿಗೆ  ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಇದು ಸರಿಯೇ?

(ಚಿತ್ರಕೃಪೆ: ವಿಕಿಪೀಡಿಯ)

ಪತ್ರಿಕೋದ್ಯಮವನ್ನು ಗುರಾಣಿ ಮಾಡಿಕೊಂಡವರ ನಡುವೆ…

– ಪರಶುರಾಮ ಕಲಾಲ್

ಪತ್ರಿಕೋದ್ಯಮ ಹಲವಾರು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಪತ್ರಕರ್ತರಿಗೆ ಉಸಿರುಗಟ್ಟಿಸುವ ವಾತಾವರಣ ಇದೆ. ಇದು ಅರ್ಧ ಸತ್ಯ ಮಾತ್ರ. ಉಳಿದ ಅರ್ಧ ಸತ್ಯವೆಂದರೆ ಅಲ್ಲೂ ಏನಾದರೂ ಮಾಡಬಹುದು. ಅದಕ್ಕೆ ಬದ್ಧತೆ ಬೇಕು. ಜೀವನ ಪ್ರೀತಿ ಇರಬೇಕು. ಜನರಿಗೆ ಏನಾದರೂ ಮಾಡಬೇಕು ಎನ್ನುವ ಕಾಳಜಿ ಇರಬೇಕು. ಆಗ ಹೊಸ ದಾರಿಗಳು ಗೋಚರಿಸುತ್ತವೆ. ಸಿನಿಕರಾಗಿ ಮಾತನಾಡಿದರೆ ಇರುವ ದಾರಿ ಮುಚ್ಚಿ ಹೋಗುತ್ತವೆ ಅಷ್ಟೇ.

ಹಣ ಮಾಡಬೇಕೆಂದವರು ಈ ಕ್ಷೇತ್ರ ಆಯ್ದುಕೊಳ್ಳಬಾರದು. ಬೇರೆ ಕ್ಷೇತ್ರಗಳ ಕಡೆ ಹೋಗಬೇಕು. ಇದು ಪತ್ರಿಕೋದ್ಯಮಕ್ಕೆ ಒಂದಿಷ್ಟು ಮಾನ ತರಬಲ್ಲದು. ಪತ್ರಿಕೋದ್ಯಮವನ್ನೇ ಗುರಾಣಿ ಮಾಡಿಕೊಂಡು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವವರು, ಡಿನೋಟಿಪೆಕೇಷನ್ ಮಾಡಿಸಿಕೊಂಡು ಕೋತಿ ತಾನು ತಿಂದು ಮೇಕೆಯ ಮೋತಿಗೆ ಒರೆಸಿದಂತೆ ಮಾಡುವವರ ನಡುವೆ ಇದು ಮಾನ ತರಬಲ್ಲ ಕೆಲಸವಾಗುವುದು. ಇಂತಹವರನ್ನು ಮಾಡೆಲ್ ಮಾಡಿಕೊಂಡು ಹಲಬುವುದನ್ನು ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಮೊಟ್ಟ ಮೊದಲು ಬಿಡಬೇಕು. ಇವರು ಯಾರು ಮಾಡೆಲ್ ಅಲ್ಲ. ಮಾಡೆಲ್ ಆಗಿ ಕಾಣುವವರು ನಮಗೆ ತುಂಬಾ ಜನ ಇದ್ದಾರೆ.

ಪತ್ರಿಕೋದ್ಯಮ ಇವತ್ತು ಹೊರಳುವ ಹಾದಿಯಲ್ಲಿದೆ. ಒಂದು ಕಡೆ ಅದು ದೃಶ್ಯ ಮಾಧ್ಯಮಗಳನ್ನು ಎದುರಿಸಬೇಕಿದೆ. ಮತ್ತೊಂದು ಕಡೆ ಪತ್ರಿಕೆಗಳ ಪೈಪೋಟಿಯನ್ನು ಎದುರಿಸಬೇಕಿದೆ. ಇದು ಎಲ್ಲಾ ಪತ್ರಿಕೆಗಳಿಗೆ ಅನ್ವಯಿಸುತ್ತಿದೆ. ಹಳೇಯ ಶೈಲಿಯಲ್ಲಿ ಇವತ್ತು ಪತ್ರಿಕೆಯನ್ನು ನಡೆಸಲು ಆಗುವುದಿಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಗೆ ಸಜ್ಜಾಗಬೇಕಿದೆ. ಈ ಪೈಪೋಟಿಯಲ್ಲಿ ತನ್ನತನ ಮರೆಯದೇ ಉಳಿಸಿಕೊಳ್ಳಬೇಕಿದೆ. ಇದು ಎಲ್ಲಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಆ ಮಾತು ಬೇರೆ.

ಕ್ಷಣ ಕ್ಷಣದ ಸುದ್ದಿಗಳನ್ನು ಲೈವ್ ಆಗಿ ಬಿತ್ತರಿಸುವ ದೃಶ್ಯ ಮಾಧ್ಯಮದ ಎದುರು ಪತ್ರಿಕೆಗಳ ಸುದ್ದಿಗಳು ತಂಗಳಾಗಿ ಬಿಟ್ಟಿರುತ್ತವೆ. ಇದನ್ನೇ ಉಣಬಡಿಸಿದರೆ ಓದುಗರು ಪತ್ರಿಕೆ ಯಾಕೆ ಓದಬೇಕು? ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ ಜೊತೆಗೆ ಅದನ್ನು ವಿಶ್ಲೇಷಣೆ ಮಾಡಲೇಬೇಕಾಗುತ್ತದೆ. ಈ ವಿಶ್ಲೇಷಣೆಯು ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವಂತೆ ಇರಬೇಕು. ಇಂತಹ ಸುದ್ದಿಗಳನ್ನು ಹೆಚ್ಚು ಮಾಡುವ ಮೂಲಕವೇ ದೃಶ್ಯ ಮಾಧ್ಯಮವನ್ನು ಎದುರಿಸುವ ಮೂಲಕ ಹೊಸ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಇದನ್ನು ಪತ್ರಿಕೆಗಳು ಅರ್ಥ ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ವಿನ್ಯಾಸ, ತಲೆಬರಹದಲ್ಲಿ ಅಕ್ಷರಗಳ ಆಟ ಆಡುವುದೇ ದೊಡ್ಡ ಪತ್ರಿಕೋದ್ಯಮ ಎಂದು ಕೆಲವರು ಭಾವಿಸಿದ್ದಾರೆ. ಇದು ತಪ್ಪಲ್ಲ, ಇದೇ ಪತ್ರಿಕೆಯ ಜೀವಾಳ ಆಗಲು ಸಾಧ್ಯವಿಲ್ಲ. ಕೆಲವು ಪತ್ರಿಕೆಗಳು ತಮ್ಮ ಭಾಷೆಯ ಶೈಲಿಯನ್ನು ಬದಲಿಸಿ, ಟ್ಯಾಬ್ಲಾಯ್ಡ್ ಪತ್ರಿಕೆಗಳ ಶೈಲಿಯಲ್ಲಿ ಬರೆಯಲು ಆರಂಭಿಸಿವೆ. ಇದು ಕೂಡಾ ಆಪಾಯವೇ. ಜನರಲ್ಲಿ ಗಾಢ ನಂಬಿಕೆಯನ್ನು ಕೊಡದೇ ಅವರ ನಂಬಿಕೆಯನ್ನು ಶಿಥಿಲಗೊಳಿಸುವ ಈ ಪ್ರಯತ್ನ ಸಿನಿಕರನ್ನು ಹೆಚ್ಚು ಮಾಡಬಹುದೇ ಹೊರತು ಅದು ಜನಾಭಿಪ್ರಾಯ ರೂಪಿಸಲಾರದು.

ಒಂದು ಪತ್ರಿಕೆಯು ತನ್ನನ್ನು ತಾನು ಮರುರೂಪಿಸಿಕೊಂಡು ಹೊಸ ಭಾಷೆಯಲ್ಲಿ, ಹೊಸ ಶೈಲಿಯಲ್ಲಿ ಕಾಣಿಸಿಕೊಂಡರೆ ಜನ ಅದನ್ನು ಖಂಡಿತ ಸ್ವೀಕರಿಸುತ್ತಾರೆ. ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಜಾಹಿರಾತು ಎನ್ನುವುದು ಕೂಡಾ ಅಡ್ಡಿಯಾಗುವುದಿಲ್ಲ. ಆದರೆ ಪತ್ರಿಕೆಗಳ ಸಂಪಾದಕರು ಯಾಕೋ ಮನಸ್ಸು ಮಾಡುತ್ತಿಲ್ಲ. ಮಾಲೀಕರು ಎಂದೂ ಅಡ್ಡಿ ಬರುವುದಿಲ್ಲ. ಕೆಲವು ಸುದ್ದಿಗಳಿಗೆ ಅಡ್ಡ ಬಂದರೂ ಈ ಬದಲಾವಣೆಗೆ ಖಂಡಿತ ಅಡ್ಡ ಬರಲಾರರು. ಪತ್ರಿಕೆಗಳು ಹೊಸ ಭಾಷೆಯಲ್ಲಿ ಜನರಿಗೆ ಹತ್ತಿರವಾಗುತ್ತಾ ಹೋದರೆ ಯಾವ ಮಾಲೀಕನಿಗೆ ಇಷ್ಟ ಆಗುವುದಿಲ್ಲ ಹೇಳಿ?

ಕೊರತೆ ಇರುವುದು, ಈ ಬಗ್ಗೆ ಪತ್ರಿಕೋದ್ಯಮದಲ್ಲಿ ಗಂಭೀರವಾಗಿ ಆಲೋಚಿಸುವ ಮನಸ್ಸುಗಳದ್ದು. ಎಲ್ಲರೂ ಒಂದು ಕಡೆ ಕುಳಿತು ಈ ಬಗ್ಗೆ ಯೋಚಿಸಲು ಆರಂಭಿಸುವುದು ಸಾಧ್ಯವಾಗಬೇಕು.

ಕುಶವಂತ್ ಸಿಂಗ್ ಇಲ್ಲ್‌ಸ್ಟ್ರೇಟೆಡ್ ವೀಕ್ಲಿ ಪತ್ರಿಕೆ ಸಂಪಾದಕರಾಗಿದ್ದಾಗ ಆ ಪತ್ರಿಕೆಯ ಸರ್ಕ್ಯೂಲೇಷನ್ ತುಂಬಾ ಏರಿತು. ಪ್ರೀತೀಶ್ ನಂದಿ ಸಂಪಾದಕರಾದಾಗ ಪತ್ರಿಕೆ ಸರ್ಕ್ಯೂಲೇಷನ್ ಇಳಿಯಿತು. ಆದರೆ ಪ್ರೀತೀಶ್ ನಂದಿ ಹೆಸರು ತುಂಬಾ ಏರಿತು. ಇದು ಸುಳ್ಳು, ಸತ್ಯವೋ ಗೊತ್ತಿಲ್ಲ. ಅದು ಏನೇ ಇರಲಿ, ಕನ್ನಡ ಪತ್ರಿಕೆಗಳ ಇವತ್ತಿನ ಅರ್ಭಟ ನೋಡಿದರೆ ಈ ಕಥೆ ನೆನಪಾಗುತ್ತದೆ.

ಸುದ್ದಿಮನೆಯ ದೋಸೆಯೂ ತೂತೆ

-ಹನುಮಂತ ಹಾಲಿಗೇರಿ

ಮೊನ್ನೆಯಷ್ಟೆ ಮಾಧ್ಯಮ ಕಚೇರಿಗಳ ಸುದ್ದಿ ಸಂಪಾದನೆ ವಿಭಾಗಗಳಲ್ಲಿ ಒಂದು ಸುದ್ದಿ ಬಿಸಿ ಬಿಸಿ ಚರ್ಚೆಗೀಡಾಗಿ ಅಷ್ಟೆ ವೇಗದಲ್ಲಿ ಬಿಸಿ ಕಳೆದುಕೊಂಡಿತು. ಉದಯವಾಣಿ ಪತ್ರಿಕೆಯ ವರದಿಗಾರ ಸುರೇಶ್ ಪುದವೆಟ್ಟು ಅವರು ಸಚಿವ ಮುರುಗೇಶ್ ನಿರಾಣಿಯವರ ಭ್ರಷ್ಟಾಚಾರದ ಬಗ್ಗೆ ಒಂದು ಲೇಖನ ಬರೆದಿದ್ದರು. ಇದು ನಿರಾಣಿಯವರ ಕಣ್ಣು ಕೆಂಪಗಾಗಲು ಕಾರಣವಾಗಿರಬೇಕು. ಸುರೇಶ್ ಅವರ ಹೆಂಡತಿ ಮಾನಸ ಪುದುವೆಟ್ಟ ನಿರಾಣಿ ಮಾಲಿಕತ್ವದ ಸಮಯ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಾರಣವಿಲ್ಲದೆ ದೂರದ ಗುಲ್ಬರ್ಗಕ್ಕೆ ವರ್ಗ ಮಾಡಲಾಯಿತು. ಅವರು ಗುಲ್ಬರ್ಗಕ್ಕೆ ಹೋಗಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದರು. ಎಂಥ ವಿಚಿತ್ರ ನೋಡಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಈ ಘಟನೆಯನ್ನು ಸಕ್ರಿಯ ಪತ್ರಕರ್ತರೆಲ್ಲರೂ ತಮ್ಮ ಆತ್ಮೀಯ ವಲಯಗಳಲ್ಲಿ ಗುಸು ಗುಸು ಮಾತಾಡಿದರು. ಒಂದು ಕ್ಷಣ, ಛೆ, ಹೀಗಾಗಬಾರದಿತ್ತು ಎಂದು ನಿಟ್ಟುಸಿರು ಬಿಟ್ಟರು.  ಮುಂದಿನ ಕ್ಷಣ ಕ್ಯಾಮರಾ, ಪೆನ್ನು ಪ್ಯಾಡು ಸೇರಿದಂತೆ ಸಾಮಾನು ಸರಂಜಾಮುಗಳನ್ನು ಹೆಗಲೇರಿಸಿಕೊಂಡು ಸುದ್ದಿಗಳ ಬೇಟೆಗೆ ನಡೆದುಬಿಟ್ಟರು. ಅಲ್ಲಿಗೆ ಭರಿ ಗದ್ದಲವೆಬ್ಬಿಸಬೇಕಾದ ಸುದ್ದಿಮನೆಯದೆ ಸುದ್ದಿಯೊಂದು ಹಳತಾಗಿ ಸತ್ತು ಹೋಯಿತು. ರವಿ ಕೃಷ್ಣಾರೆಡ್ಡಿಯವರು ತಮ್ಮ ವರ್ತಮಾನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಈ ಸುದ್ದಿ ಎಲ್ಲಿಯೂ ಸುದ್ದಿ ಮಾಡಲೆ ಇಲ್ಲ.

ಇಂಥ ಘಟನೆ ಯಾವುದೊ ಒಂದು ಕಾರ್ಖಾನೆಯ ಕಾರ್ಮಿಕನ ಮೇಲೆ ನಡೆದಿದ್ದರೆ ಅದರ ಸುದ್ದಿಯೇ ಬೇರೆಯಾಗಿರುತ್ತಿತ್ತು. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದು ಮಾಲಿಕರು ಕ್ಷಮೆ ಕೋರಿ ಮತ್ತೆ ತಮ್ಮ ಆದೇಶವನ್ನು ಹಿಂಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಿತ್ತು. ಆದರೆ ದಿನನಿತ್ಯ ಅಂತಹ ಹತ್ತಾರು ತರಹದ ಪ್ರತಿಭಟನೆಗಳಿಗೆ ಹಾಜರಾಗಿ ವರದಿ ಮಾಡುವ ನಮ್ಮ ಸುದ್ದಿ ಸಂಸ್ಥೆಗಳಿಗೆ ಏನಾಗಿದೆ? ದಿನನಿತ್ಯ ಇಂತಹ ದೌಜನ್ಯಗಳನ್ನು ಸಹಿಸಿ ಮನಸ್ಸು ಜಡಗೊಂಡಿದೆಯೆ? ಇಂಥ ಘಟನೆ ದೌರ್ಜನ್ಯವೆಂದು ಅನಿಸಲೆ ಇಲ್ಲವೆ?

ಕಡೆಪಕ್ಷ ಮಾಧ್ಯಮಗಳ ಮುಖ್ಯಸ್ಥರಾದರೂ ಈ ಬಗ್ಗೆ ದ್ವನಿ ಎತ್ತಬೇಕಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಮೇಯುತ್ತ ಕುಳಿತಿರುವ ಅವರ್ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಾರು. ಯಾರೇನೇ ಹೇಳಲಿ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೋಣದ ಬಗ್ಗೆ ತಲೆಕೆಡಿಸಿಕೊಳ್ಳುವವರ ತಟ್ಟೆಯಲ್ಲಿಯೆ ಕತ್ತೆ ಸತ್ತು ಬಿದ್ದಿದೆ. ಸುದ್ದಿ ಮನೆಯ ದೋಸೆಯೂ ತೂತೆ! ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಸದಾ ಎಚ್ಚರದ ಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕಾದ ಮಾಧ್ಯಮರಂಗವೇ ಕುಲಗೆಟ್ಟುಹೋಗಿದೆ. ಪರಿಶುದ್ಧಗೊಳಿಸಬೇಕಾದ ಗಂಗಾಜಲವೇ ಹೊಲಸುಗಬ್ಬೆದ್ದು ನಾರುತ್ತಿದೆ.

ಪತ್ರಿಕೆ ಎಂದೊಡನೆ ಬಹಳಷ್ಟು ಜನರಿಗೆ `ವಸ್ತುನಿಷ್ಟ’ಎಂಬ ಶಬ್ದ ತಟ್ಟನೆ ತಮ್ಮ ಸ್ಮತಿ ಪಟದಲ್ಲಿ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಪತ್ರಿಕೋದ್ಯಮ ಇನ್ನು ಬೆಳೆಯುವ ಹಂತದಲ್ಲಿಯೆ ಇರುವಾಗಲೆ ಡಿವಿಜಿಯವರು ಬರೆದಿರುವ `ವೃತ್ತಪತ್ರಿಕೆ’ ಎಂಬ ಪುಸ್ತಕವನ್ನು ಓದಿದರೆ ಪತ್ರಿಕೋದ್ಯಮಕ್ಕೂ ಶಬ್ದಕ್ಕೂ ಇರುವ ನಂಟಿನ ಅರಿವಾಗುತ್ತದೆ. ಪತ್ರಿಕೆಗಳಲ್ಲಿನ ಸುದ್ದಿ ವಸ್ತುನಿಷ್ಟ ಎನ್ನುವ ಕಾರಣಕ್ಕಾಗಿಯೆ ಬಹಳಷ್ಟು ಜನರು ನೂರಕ್ಕೆ ನೂರರಷ್ಟು ನಂಬಿ ಬಿಡುತ್ತಾರೆ. ಆದರೆ ನಂಬುತ್ತಾರೆ ಎಂದು ಗೊತ್ತಿದ್ದೂ ಸುದ್ದಿಕರ್ತರು ಸುಳ್ಳು ಸುದ್ದಿ ಸೃಷ್ಟಿಸುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ.

ಪತ್ರಿಕೋಧ್ಯಮದ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ವಿಜೃಂಭಿಸುವ `ವಸ್ತುನಿಷ್ಟತೆ’ಎನ್ನುವ ಶಬ್ದ, ವಿದ್ಯಾರ್ಥಿ ಮಾದ್ಯಮರಂಗಕ್ಕೆ ಪ್ರಾಯೋಗಿಕವಾಗಿ ಇಳಿದ ನಂತರ ನಿಧಾನಕ್ಕೆ ತನ್ನ ಮರೆಯಾಗುತ್ತಾ ಹೋಗುತ್ತದೆ. ಈ ಮರೆಯಾಗಿಸುವ ಕ್ರಿಯೆಯನ್ನು ಮರಿ ಪತ್ರಕರ್ತ ತನ್ನ ಹಿರಿ ಪತ್ರಕರ್ತರಿಂದಲೆ ಕಲಿಯುತ್ತಾ ಹೋಗುತ್ತಾನೆ. ವಾಸ್ತವ ಪತ್ರಿಕೋದ್ಯಮವೇ ಬೇರೆ, ವಾಸ್ತವವೇ ಬೇರೆ ಎಂದು ಮರಿ ಪತ್ರಕರ್ತನಿಗೆ ಅನಿಸತೊಡಗುತ್ತದೆ. ವೈದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯ ಬಗ್ಗೆ ಪ್ರಮಾಣ ಬೋಧಿಸುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಆ ಸಂಪ್ರದಾಯ ಪತ್ರಿಕೋದ್ಯಮ ಕಾಲೇಜುಗಳಿಗೂ ವಿಸ್ತರಣೆಯಾದಾರೆ ಒಳಿತು ಎನಿಸುತ್ತದೆ.

ಇರುವ ಸುದ್ದಿಗೂ ಮಾಧ್ಯಮಗಳಲ್ಲಿ ಬರುವ ಸುದ್ದಿಗೂ ಬಹುತೇಕ ಸಂದರ್ಭಗಳಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ವರದಿಗಾರನ ಮನೋಸ್ಥಿತಿ, ಹಿನ್ನೆಲೆ, ಪೂರ್ವಾಗ್ರಹಗಳು ಸ್ವಲ್ಪಮಟ್ಟಿಗಾದರೂ ಸುದ್ದಿ ಸಂಪಾದನೆಯಲ್ಲಿ ತಮ್ಮ ಮೂಗನ್ನು ತೂರಿಸಿಯೇ ಬಿಟ್ಟಿರುತ್ತವೆ. ಕೆಲವು ಸಂದರ್ಭದಲ್ಲಿ ವಸ್ತುನಿಷ್ಟತೆ ಸಂಪೂರ್ಣವಾಗಿ ತಿರುಚಲ್ಪಟ್ಟರೂ ಅಡ್ಡಿಯಿಲ್ಲ.

ವರದಿಗಾರ, ಹಿರಿಯ ವರದಿಗಾರ, ಸುದ್ದಿ ಸಂಪಾದಕ-ಸಂಪಾದಕನ ಮೂಲಕ ಹಾದು ಹೋಗುವ ಸುದ್ದಿಗಳು ಪ್ರತಿ ಹಂತದಲ್ಲಿಯೂ ಬದಲಾಗುತ್ತಾ ಹೋಗುತ್ತವೆ. ಕೆಲವೊಮ್ಮೆ ಆಯಾ ಸುದ್ದಿಗಳ ಮೇಲೆ, ಪತ್ರಿಕೆಯ ದೇಯೋದ್ದೇಶ, ಪತ್ರಿಕೆಯ ಮಾಲಿಕನ ಮರ್ಜಿ, ಪ್ರಸರಣ ವಿಭಗ, ಜಾಹಿರಾತು ವಿಭಾಗಗಳು ಪ್ರಭಾವ ಬೀರುತ್ತವೆ. ಈ ಎಲ್ಲ ಹಾದಿಗಳಲ್ಲಿ ಹಾದು ಬಂದ ಮೇಲೆ ಅಳಿದುಳಿದ ಸುದ್ದಿ ಕೆಲವೊಮ್ಮೆ ಸಣ್ಣದಾಗಿ ನಕಾರಾತ್ಮಕಾವಾಗಿಯೂ, ಹಲವೊಮ್ಮೆ ದೊಡ್ಡದಾಗಿ ಸಕಾರಾತ್ಮಕವಾಗಿಯೂ ಪ್ರಕಟನೆಯ ಹಂತಕ್ಕೆ ಬರುತ್ತದೆ. ಅದನ್ನು ಓದುಗ ಓದುತ್ತಾನೆ ಮತ್ತು ನಂಬುತ್ತಾನೆ.

ತಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ವಾಸ್ತವಾಂಶಗಳನ್ನು ಮುಚ್ಚಿಟ್ಟು ಸುದ್ದಿಗಳನ್ನು ಮಾಲಿಕರ, ಜಾಹಿರಾತುದಾರರ, ಸಂಪಾದಕರ ಮರ್ಜಿಗಳಂತೆ (ಓದುಗರ ಮರ್ಜಿಯನ್ನು ಹೊರತು ಪಡಿಸಿ) ತಿರುಚಿ ಬರೆಯುವ ಕೆಲವಾದರೂ ಪ್ರಾಮಾಣಿಕ ಪತ್ರಕರ್ತರಿಗೆ ಒಳಗೊಳಗೆ ಬೇಸರವಿದೆ. ಈ ಬಗ್ಗೆ ಮರುಕವಿದೆ. ಇಂಥವರು ಸುದ್ದಿ ಮನೆಯಿಂದ ಸುದ್ದಿಮನೆಗೆ ಅಲೆದಾಡುತ್ತಲೆ ಇರುತ್ತಾರೆ. ಆದರೆ ಎಲ್ಲ ಸುದ್ದಿ ಮನೆಗಳ ದೊಸೆಯೂ ತೂತೆ ಎಂದು ಅರಿವಾಗುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಆದಾಗ್ಯೂ ತಮ್ಮ ಮಿತಿಯಲ್ಲಿ ಏನಾದರೂ ಮಾಡಬೇಕು ಎಂಬ ತುಡಿತಕ್ಕೆ ಮಿಡಿಯುತ್ತಲೆ ಇರುತ್ತಾರೆ. ಇಂಥ ಪ್ರಾಮಾಣಿಕ ಪತ್ರಕರ್ತರಿಗೆ ಜಾಲತಾಣಗಳು, ಬ್ಲಾಗ್‌ಗಳು ಮರುಭೂಮಿಯಲ್ಲಿ ಕಂಡ ಒಯಸಿಸ್‌ಗಳಾಗಿ ಒದಗುತ್ತಿವೆ. ಸುದ್ದಿ ಮನೆಗಳಲ್ಲಿ ಸುಳ್ಳು-ಪಳ್ಳು ಬರೆದು ಪಾಪ ಮಾಡುವ ಪತ್ರಕರ್ತರು ಜಾಲತಾಣಗಳಲ್ಲಿ ಅನಾಮಧೇಯರ ಹೆಸರಿನನಲ್ಲಿ ಸತ್ಯ ಬರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ಸಂಪಾದಕೀಯ, ಕಾಲಂ 9, ವರ್ತಮಾನದಂತಹ ಕೆಲವು (ನನಗೆ ಗೊತ್ತಿರುವ) ಜಾಲತಾಣಗಳು ಮಾಧ್ಯಮರಂಗದ ಹುಳುಕುಗಳನ್ನು ಹೊರಗೆ ಹಾಕಲಿಕ್ಕೆ ಹುಟ್ಟಿಕೊಂಡಂತೆ ಕೆಲಸ ಮಾಡುತ್ತಿವೆ. ಇನ್ನು ಪತ್ರಿಕಗಳಲ್ಲಿ ತಮ್ಮ ಅಭಿರುಚಿ, ಆಸಕ್ತಿಗಳನ್ನು ತಣಿಸಿಕೊಳ್ಳಲಾಗದ ಹಲವು ಸೃಜನಶೀಲ ಪತ್ರಕರ್ತರು ತಮ್ಮದೊಂದು ಬ್ಲಾಗ್ ಸೃಷ್ಟಿಸಿ ಅವುಗಳಲ್ಲಿ ಕತೆ-ಕವಿತೆಗಳ ಶಿಲ್ಪ ಕೆತ್ತುವುದಕ್ಕೆ ಶುರು ಹಚ್ಚಿಕೊಂಡಿದ್ದಾರೆ.

ಸುದ್ದಿಮನೆ ದೊಸೆಯ ತೂತುಗಳನ್ನು ನೋಡಿ ನೋಡಿ ಬೇಸರಗೊಂಡ ಕೆಲವು ಪತ್ರಕರ್ತರು ಇಂಥದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮೂಗು ತೂರಿಸಲು ಹೋಗದೆ ಸುಮ್ಮನೆ ತಮಗೆ ವಹಿಸಿದ ಅಸೈನ್‌ಮೆಂಟ್‌ಗಳನ್ನು (ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯಂಥವು. ಪೊಲಿಟಿಕಲ್ ರಿಪೋರ್ಟರ್ಸ್ ಭಾಷೆಯಲ್ಲಿ ಹೇಳುವುದಾದರೆ ಚಿಲ್ರೆ ಪಲ್ರೆ ಅಸೈನ್‌ಮೆಂಟ್‌ಗಳು) ಮುಗಿಸಿ ರಂಗಭೂಮಿ, ಸಾಹಿತ್ಯದಂತಹ ಹವ್ಯಾಸಗಳಲ್ಲಿ ಕಳೆದುಹೋಗುತ್ತಾರೆ. ಇಂಥವರಿಗೆ ಹೊಟ್ಟೆ ಹೊರೆಯಲು ಇದೊಂದು ಉದ್ಯೋಗವಷ್ಟೆ. ಬಹುತೇಕ ನಾನು ಇಂಥವರ ಸಾಲಿಗೆ ಸೇರುತ್ತೇನೆ ಎಂದರೆ ಅಡ್ಡಿಯಿಲ್ಲ.