Monthly Archives: November 2012

ಪ್ರಳಯ ಮತ್ತು ಟಿವಿ ಚಾನಲ್‌ಗಳ ಮಹಾದ್ರೋಹ

– ರಮೇಶ್ ಕುಣಿಗಲ್

ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಬಾಲಕಿಯೊಂದಿಗೆ ಇತ್ತೀಚೆಗೆ ಮಾತನಾಡುತ್ತಿದ್ದೆ. “ನೀನು ಮುಂದೆ ಏನು ಓದ್ತಿಯ? ನಿಂಗೆ ಏನು ಆಗಬೇಕು ಅಂತ ಆಸೆ?” ಎಂದು ಕೇಳಿದೆ. ಬಾಲಕಿ, “ನನಗೆ ಏನೂ ಆಸೆ ಇಲ್ಲ. ನಾನು ಏನೂ ಆಗೊಲ್ಲ” ಎಂದಳು. ಯಾಕಮ್ಮ ಎಂದರೆ, “ಡಿಸೆಂಬರ್‌ನಲ್ಲಿ ಪ್ರಳಯ ಆಗುತ್ತಲ್ಲ, ಆಮೇಲೆ ನಾವೆಲ್ಲಿ ಇರ್ತೀವಿ?” – ಉತ್ತರಿಸಿದಳು. ಗಾಬರಿಯಾಯಿತು.

ಟಿವಿ ಚಾನೆಲ್‌ಗಳು ಪ್ರಳಯದ ಭೀತಿ ಸೃಷ್ಟಿಸಿರುವ ಪರಿಣಾಮ ಇದು. ಟಿಆರ್‌ಪಿಗಾಗಿ ಪ್ರಳಯದ ಕೌಂಟ್‌ಡೌನ್ ಚಾನೆಲ್‌ಗಳಲ್ಲಿ ಆರಂಭವಾಗಿದೆ. ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ, ಅನೇಕ ರೋಗಿಗಳು ತಮ್ಮ ಆಪರೇಶನ್ ದಿನಾಂಕವನ್ನು ಮುಂದೂಡಿದ್ದಾರೆ. ಪ್ರಳಯ ಸಂಭವಿಸುವುದೇ ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾದರೂ ಏಕೆ ಎನ್ನುವುದು ಅವರ ವಾದ. ಒಂದು ಪಕ್ಷ ನಿಗದಿತ ದಿನದಂದು ಪ್ರಳಯ ನಡೆಯದೆ ಬದುಕುಳಿದರೆ ಚಿಕಿತ್ಸೆ ಮಾಡಿಸಿಕೊಂಡರಾಯಿತು – ಅವರ ಲೆಕ್ಕಾಚಾರ.

ಯಾವುದು ಸಾಧ್ಯ ಅಲ್ಲವೋ, ಯಾವುದು ಅಸತ್ಯವೋ.. ಅಂತಹವುಗಳನ್ನು ನಂಬಿಸುವುದು ಈ ಕಾಲದಲ್ಲಿ ಬಹು ಸಲೀಸು. ಪಂಡಿತ ಎಂದು ಕರೆಸಿಕೊಳ್ಳುವ ಒಬ್ಬನನ್ನು ತಂದು ಕೂರಿಸಿ ಅವನಿಂದ ಎಲ್ಲಾ ಸುಳ್ಳುಗಳನ್ನು, ಆಧಾರ ರಹಿತ ಮಾಹಿತಿಯನ್ನು ಬಿತ್ತರಿಸಿದರೆ ಸಾಕು, ಜನ ಬೇಸ್ತು ಬೀಳುತ್ತಾರೆ ಮತ್ತು ನಂಬುತ್ತಾರೆ.

ಇದೇ ರೀತಿ 1999 ರ ಅಂತ್ಯದಲ್ಲೂ ಪ್ರಳಯ ಆಗುತ್ತೆ ಅಂತ ನರೇಂದ್ರ ಎಂಬ ಪ್ರಳಯಾಂತಕ ಪುಸ್ತಕ ಬರೆದು ಪ್ರಚಾರ ಗಿಟ್ಟಿಸಿದ್ದರು. ‘ತರಂಗ’ ಎಂಬ ವಾರ ಪತ್ರಿಕೆ ಪ್ರಳಯದ ಬಗ್ಗೆ ವಿಶೇಷ ಸಂಚಿಕೆಯನ್ನು ಹೊರತಂದು ಲಾಭ ಮಾಡಿಕೊಂಡಿತ್ತು. ಅದರ ಪ್ರತಿಗಳು ನಿಗದಿತ ದರಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚಿನ ರೇಟಿಗೆ ಮಾರಾಟವಾಗಿದ್ದವು. ಆದರೆ ಪ್ರಳಯ ಆಯಿತೆ? ಊಹ್ಞುಂ. ಲಾಭ ಆಯಿತು – ’ತರಂಗ’ದ ಮಾಲೀಕರಿಗೆ.

ಸಾವಿನ ಬಗ್ಗೆ ಆತಂಕ ಇಟ್ಟುಕೊಂಡಿರುವ ಜನರಿಗೆ ಇಂತಹ ಸಂಗತಿಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ಲಾಭವನ್ನಾಗಿ ಪರಿವರ್ತಿಸುವ ಉದ್ದೇಶ ಈ ಚಾನೆಲ್‌ಗಳದ್ದು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕಾದ ಇವರು ಹೀಗೆ ಅಜ್ಞಾನದ ಕೂಪಕ್ಕೆ‍ ತಳ್ಳುತ್ತಿದ್ದಾರೆ.

ಈಗಷ್ಟೆ ಶಾಲೆಗೆ ಹೋಗುವ ಮಕ್ಕಳಲ್ಲೂ ಪ್ರಳಯದ ಭೀತಿ.ಇಂತಹ ಸುದ್ದಿಗಳ ಪರಿಣಾಮ ಏನು ಎನ್ನುವುದರ ಪ್ರಜ್ಞೆ ಕಿಂಚಿತ್ತೂ ಚಾನೆಲ್‌ನವರಿಗೆ ಇದ್ದಂತಿಲ್ಲ. ಸರ್ಜರಿ ಮುಂದೂಡಿದವರ ಆರೋಗ್ಯ ಸ್ಥಿತಿ ಎಷ್ಟು ಹದಗೆಟ್ಟೀತು ಎಂಬುದರ ಕಲ್ಪನೆಯೂ ಇವರಿಗೆ ಇದ್ದಂತಿಲ್ಲ.

ಇವರಿಗೆ ಜವಾಬ್ದಾರಿಯಿಂದ ವರ್ತಿಸುವಂತೆ ತಿಳಿಸುವವರಾರು?

ಪ್ರಜಾ ಸಮರ – 11 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

1980 ರಲ್ಲಿ ಪೆದ್ದಿಶಂಕರನ ಹತ್ಯೆಯಿಂದಾಗಿ ಮಹಾರಾಷ್ಟ್ರದಲ್ಲಿ ಹತ್ತಿಕೊಂಡ ನಕ್ಸಲ್ ಚಟುವಟಿಕೆ ಮತ್ತು ಹಿಂಸಾಚಾರದ ಕಿಡಿ ಮೂರು ದಶಕಗಳ ನಂತರವೂ ಆರದ ಬೆಂಕಿಯಾಗಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಗಡಿಭಾಗದ ಜಿಲ್ಲೆಗಳಾದ ಗಡ್‌ಚಿರೋಲಿ, ಚಂದ್ರಾಪುರ, ಗೊಂಡಿಯ ಮತ್ತು ಭಂಡಾರ ಜಿಲ್ಲೆಗಳಲ್ಲಿ ಇವೊತ್ತಿಗೂ ಹತ್ತಿ ಉರಿಯುತ್ತಿದೆ. ಇವುಗಳನ್ನು ನಕ್ಸಲ್ ಪೀಢಿತ ಜಿಲ್ಲೆಗಳೆಂದು ಅಲ್ಲಿನ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಗಡ್‌ಚಿರೋಲಿ ಜಿಲ್ಲೆಯ 120 ಆದಿವಾಸಿಗಳ ಹಳ್ಳಿಗಳನ್ನು ನಕ್ಸಲರ ತಾಣಗಳೆಂದು ಗುರುತಿಸಲಾಗಿದ್ದು ಈ ಪ್ರದೇಶಕ್ಕೆ ಪೊಲೀಸರು ಕಾಲಿಡಲು ಹೆದರುತ್ತಾರೆ. ಇಲ್ಲಿನ ಹಿಂಸಾಚಾರಕ್ಕೆ ಬಲಿಯಾದ ನಕ್ಸಲಿಯರು ಮತ್ತು ಪೊಲೀಸರಲ್ಲಿ ಶೇಕಡ ಎಂಬತ್ತರಷ್ಟು ಮಂದಿ ಸ್ಥಳಿಯ ಆದಿವಾಸಿಗಳಾದ ಗೊಂಡ ಮತ್ತು ಚೆಂಚು ಜನಾಂಗದವರಾಗಿದ್ದಾರೆ. ಹಿಂಸೆ ಹೇಗೆ ಹಲವು ರೂಪಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಇಲ್ಲಿನ ಜನರನ್ನು ಕಾಡುತ್ತಿದೆ ಎಂಬುದಕ್ಕೆ 1997 ರಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಆದಿವಾಸಿ ಜನಾಂಗದ ಪ್ರಭಾಕರ ಟೆಕವಾಡೆ ಮತ್ತು ಪಂಡುಅಲಂ ಇಬ್ಬರೂ ಬಾಲ್ಯದಿಂದಲೂ ಸಹಪಾಠಿಗಳು ಮತ್ತು ಗೆಳೆಯರು. ಮಹಾರಾಷ್ಟ್ರ ಸರ್ಕಾರ ಗಿರಿಜನ ಮಕ್ಕಳಿಗಾಗಿ ಗಡ್‌ಚಿರೋಲಿ ಜಿಲ್ಲೆಯ ಬ್ರಹ್ಮಗಡ್ ಎಂಬಲ್ಲಿ ಸ್ಥಾಪಿಸಿದ್ದ ಲೋಕ್ ಬಿರದಾರಿ ಎಂಬ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೂ ಒಟ್ಟಿಗೆ ಓದಿದವರು. ಶಿಕ್ಷಣದ ನಂತರ ಪಂಡು ಅಲಂ ಮಹರಾಷ್ಟ್ರ ಪೊಲೀಸ್ ಪಡೆಗೆ ಸೇರಿದ ನಂತರ ನಕ್ಸಲ್ ನಿಗ್ರಹ ಪಡೆ ಕೋಬ್ರಾ ತಂಡಕ್ಕೆ ಕಮಾಂಡೊ ಆಗಿ ನಿಯೋಜಿತನಾದರೆ, ಆತನ ಗೆಳೆಯ ಪ್ರಭಾಕರ ಟೆಕವಾಡೆ ನಕ್ಸಲ್ ಸಂಘಟನೆ ಸೇರಿ ದಳಂ ಹೆಸರಿನ ತಂಡವೊಂದರಲ್ಲಿ ಜುರು ಎಂಬ ಹೆಸರಿನಲ್ಲಿ ನಾಯಕನಾದ.

ತನ್ನ ಹುಟ್ಟೂರಾದ ಜಾಂಡಿಯ ಎಂಬ ಹಳ್ಳಿಗೆ ತನ್ನ ಸಂಬಂಧಿಕರ ಮದುವೆ ಬಂದಿದ್ದ ಪ್ರಭಾಕರ ಅಲಿಯಾಸ್ ಜುರು ಬಗ್ಗೆ ಅವನ ಒಂದು ಕಾಲದ ಗೆಳೆಯನೇ ಆದ ಪಂಡು ಆಲಂ ತಾನು ಸೇವೆ ಸಲ್ಲಿಸುತಿದ್ದ ಪೊಲೀಸ್ ಕಮಾಂಡೊ ಗುಂಪಿನ ಕೋಬ್ರಾ ಪಡೆಗೆ ಮಾಹಿತಿ ರವಾನಿಸಿ ಪ್ರಭಾಕರನನ್ನು ಗುಂಡಿಟ್ಟು ಕೊಲ್ಲಲು ಸಹಕರಿಸಿದ. ಇದಕ್ಕೆ ಪ್ರತಿಯಾಗಿ ನಕ್ಸಲರು ಪಂಡುವನ್ನು ನೆಲ ಬಾಂಬ್ ಸ್ಪೋಟಿಸುವುದರ ಮೂಲಕ ಕೊಂದು ಹಾಕಿದರು. ಈ ಇಬ್ಬರೂ ಬಾಲ್ಯದ ಗೆಳೆಯರು ಮೂರು ತಿಂಗಳ ಅವಧಿಯಲ್ಲಿ ಮೃತ ಪಟ್ಟಾಗ ಇವರುಗಳ ವಯಸ್ಸು ಮುವತ್ತೈದನ್ನು ದಾಟಿರಲಿಲ್ಲ.

ಇಂತಹ ಘಟನೆಗಳಲ್ಲದೆ, ಪೊಲೀಸ್ ಮಾಹಿತಿದಾರರೆಂದು ನಕ್ಸಲಿಯರ ಕೈಯಲ್ಲಿ ಮತ್ತು ನಕ್ಸಲ್ ಬೆಂಬಲಿಗರೆಂದು ಪೊಲೀಸರ ಹಿಂಸೆಯಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ಆದಿವಾಸಿಗಳು ಗಡ್‌ಚಿರೋಲಿ ಜಿಲ್ಲೆಯಲ್ಲಿ ಅಸುನೀಗುತಿದ್ದಾರೆ. ಇದನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ವತಃ ಒಪ್ಪಿಕೊಂಡಿದ್ದಾರೆ.

ನಿರಂತರ ಹಿಂಸಾತ್ಮಕ ಚಟುವಟಿಕೆಗಳ ಕಾರಣದಿಂದಾಗಿ ಮಹಾರಾಷ್ಟ್ರದ ಗೊಂಡಿಯ, ಗಡ್‌ಚಿರೋಲಿ, ಚಂದ್ರಾಪುರ, ಭಂಡಾರ ಜಿಲ್ಲೆಗಳಲ್ಲಿ ಯಾವುದೇ ಕೈಗಾರಿಕೆ ಅಥವಾ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗದೇ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿ ಉಳಿದಿವೆ. ಚಂದ್ರಾಪುರ ಜಿಲ್ಲೆಯಲ್ಲಿ ನೆರೆಯ ಛತ್ತೀಸ್‌ಗಡ ರಾಜ್ಯದಿಂದ ಬರುವ ಕಚ್ಛಾ ಕಲ್ಲಿದ್ದನ್ನು ಸಂಸ್ಕರಿಸುವ 24 ಕ್ಕೂ ಹೆಚ್ಚು ಘಟಕಗಳಿದ್ದು ಇವೆಲ್ಲವೂ ಬಹುತೇಕ ರಾಜಕಾರಣಿಗಳ ಒಡೆತನದಲ್ಲಿವೆ. ಇನ್ನೂ ಗ್ರಾಮೀಣಾಭಿವೃದ್ಧಿಯಂತೂ ಇಲ್ಲಿನ ಜನತೆಯ ಪಾಲಿಗೆ ಕನಸಿನ ಮಾತಾಗಿದೆ. ಮಹಾರಾಷ್ಡ್ರ ಮತ್ತು ಛತ್ತೀಸ್ ಗಡ ಗಡಿಭಾಗದ 231 ಹಳ್ಳಿಗಳ 40 ಚದುರ ಕಿಲೊಮೀಟರ್ ವ್ಯಾಪ್ತಿ ಪ್ರದೇಶವನ್ನು ರೆಡ್ ಏರಿಯಾ ಎಂದು ಘೋಷಿಸಲಾಗಿದೆ. ಈ ಪ್ರದೇಶಕ್ಕೆ ನಕ್ಸಲ್ ನಿಗ್ರಹ ಪಡೆ ಕೋಬ್ರಾ ಕೂಡ ಕಾಲಿಡಲು ಸಾಧ್ಯವಾಗಿಲ್ಲ. ಈ ಪ್ರದೇಶದ ಹಳ್ಳಿಗಳಲ್ಲಿ ಮಾವೋವಾದಿ ನಕ್ಸಲರಿಂದ ಜನಾತನ್ ಸರ್ಕಾರ ಎಂಬ ಪರ್ಯಾಯ ಸರ್ಕಾರ ಅಸ್ಥಿತ್ವದಲ್ಲಿದೆ. ಈ ಅರಣ್ಯ ಪ್ರದೇಶದಲ್ಲಿ ನಕ್ಸಲ್ ತರಬೇತಿ ಕೇಂದ್ರ, ಮದ್ದುಗುಂಡುಗಳ ತಯಾರಿಕಾ ಕೇಂದ್ರ, ಮತ್ತು ಮುದ್ರಣ ಘಟಕಗಳಿದ್ದು, ನಕ್ಸಲಿಯರೇ ಹಲವು ಹಳ್ಳಿಗಳಲ್ಲಿ ಶಾಲೆ ನಡೆಸುತಿದ್ದಾರೆ. ಗೊಂಡಿ ಭಾಷೆಗೆ ಲಿಪಿ ಇಲ್ಲದ ಕಾರಣ ತೆಲುಗು ಭಾಷೆಯಲ್ಲಿ ನಕ್ಸಲರು ಮಕ್ಕಳಿಗೆ ಶಿಕ್ಷಣ ನೀಡುತಿದ್ದಾರೆ.

ಗಡ್‌ಚಿರೋಲಿ ಜಿಲ್ಲೆಯಲ್ಲಿ ತಲಾ 10 ರಿಂದ 12 ಸದಸ್ಯರಿರುವ 20 ಕ್ಕೂ ಹೆಚ್ಚು ದಳಂ ಹೆಸರಿನ ತಂಡಗಳಿದ್ದು ಇವರಿಗೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಆದಿವಾಸಿ ಯುಕ, ಯುವತಿಯರು ಸಮವಸ್ತ್ರವಿಲ್ಲದೆ ನಕ್ಸಲ್ ಕಾರ್ಯಕರ್ತರಾಗಿ ದುಡಿಯುತಿದ್ದಾರೆ. ಈ ಪ್ರದೇಶದಲ್ಲಿರುವ ಮಾವೋವಾದಿ ಸಕ್ಸಲ್ ಸಂಘಟನೆಗೆ ಪ್ರಸಿದ್ಧ ಸಿಗರೇಟ್ ತಯಾರಿಕಾ ಕಂಪನಿಯಾದ ಐ.ಟಿ.ಸಿ. ಕಂಪನಿ ಒಡೆತನಕ್ಕೆ ಸೇರಿದ ಬಲ್ಲಾಪುರ್ ಕಾಗದ ತಯಾರಿಕಾ ಕಂಪನಿ ಮತ್ತು ಕಲ್ಲಿದ್ದಲು ಘಟಕಗಳು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸುತ್ತಿವೆ. ಅರಣ್ಯದ ನಡುವೆ ಇರುವ ನಕ್ಸಲ್ ತಂಡಗಳಿಗೆ ಧವಸ, ಧಾನ್ಯಗಳನ್ನು ಆದಿವಾಸಿಗಳು ನೀಡುತಿದ್ದಾರೆ. ನಕ್ಸಲ್ ಚಟುವಟಿಕೆಗೆ ಬೆಂಬಲ ನೀಡದಿರುವ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದರೂ ಸಹ ಆದಿವಾಸಿಗಳು ಅಸಹಾಯಕರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ನಕ್ಸಲಿಯರೇ ಆದಿವಾಸಿಗಳಿಗೆ ಆಪತ್‌ಬಾಂಧವರಾಗಿದ್ದಾರೆ. ಪೊಲೀಸರ, ಅರಣ್ಯಾಧಿಕಾರಿಗಳ ಮತ್ತು ದಲ್ಲಾಳಿಗಳ ಕಿರುಕುಳ ತಪ್ಪಿದೆ. ಆದಿವಾಸಿಗಳು ಸಂಗ್ರಹಿಸುವ ಅರಣ್ಯದ ಕಿರು ಉತ್ಪನ್ನಗಲಿಗೆ ಯೋಗ್ಯ ಬೆಲೆ ದೊರಕುತ್ತಿದೆ. ನಕ್ಸಲರ ಆರ್ಭಟಕ್ಕೆ ಹೆದರಿರುವ ಬೀಡಿ ತಯಾರಿಕೆಯ ಎಲೆಯಾದ ತೆಂಡು ಮತ್ತು ಕಾಗದ ತಯಾರಿಕೆಗೆ ಬಳಸಲಾಗುವ ಬಿದರಿನ ಬೊಂಬಿಗೂ ಸಹ ದಲ್ಲಾಳಿಗಳು ಉತ್ತಮ ಬೆಲೆ ನೀಡುತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆದಿವಾಸಿಗಳು ಸದ್ಯಕ್ಕೆ ಅಭಿವೃದ್ಧಿಯಿಂದ ವಂಚಿತರಾದರೂ ನಕ್ಸಲೀಯರ ನೆಪದಿಂದಾಗಿ ನೆಮ್ಮದಿಯಿಂದ ಇದ್ದಾರೆ. ಗಡ್‌ಚಿರೋಲಿ ಜಲ್ಲೆಯ ಎರಡು ತಾಲೂಕುಗಳಲ್ಲಿ ಜಮೀನ್ದಾರರ ವಶವಾಗಿದ್ದ 20 ಸಾವಿರ ಸಾವಿರ ಎಕರೆ ಕೃಷಿ ಭೂಮಿಯನ್ನು ವಾಪಸ್ ಪಡೆದು ಆದಿವಾಸಿಗಳಿಗೆ ಹಂಚಲಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಗಡ್‌ಚಿರೋಲಿ ಜಿಲ್ಲೆಯ ಅಹೇರಿ ತಾಲೂಕಿನ ಹಳ್ಳಿಯೊಂದರಲ್ಲಿ ಅರಣ್ಯಾಧಿಕಾರಿಗಳು ತನ್ನ ಅಪ್ಪನಿಗೆ ನೀಡುತಿದ್ದ ಕಿರುಕುಳ ಸಹಿಸಲಾಗದೆ ನಕ್ಸಲ್ ಸಂಘಟನೆಗೆ ಸೇರಿದ್ದ ಆದಿವಾಸಿ ಯುವತಿಯೊಬ್ಬಳು ಇಂದು ಈ ಪ್ರಾಂತ್ಯದ ಮಹಿಳಾ ಕಮಾಂಡರ್ ಆಗಿ ಬೆಳೆದು ನಿಂತಿದ್ದಾಳೆ. ಯಮುನಕ್ಕ ಎಂಬ ಹೆಸರಿನ ಈಕೆ ಆದಿವಾಸಿಗಳಿಗೆ ಕಿರುಕುಳ ನೀಡುವ ಅಧಿಕಾರಿಗಳನ್ನು ಹಿಡಿದು ತಂದು ಹಳ್ಳಿಗಳ ನಡುವಿನ ಮರಕ್ಕೆ ಕಟ್ಟಿ ಹಾಕಿ ಎಲ್ಲಾ ಹೆಂಗಸರಿಂದ ಮುಖಕ್ಕೆ ಉಗುಳಿಸುವ ಕಾರ್ಯಕ್ರಮ ಹಮ್ಮಿಕೊಂಡ ನಂತರ ಮಹಿಳೆಯರ ಮೇಲಿನ ಅಪರಾಧದ ಚಟುವಟಿಕೆ ಕೂಡ ಕಡಿಮೆಯಾಗಿದೆ.

ವರ್ತಮಾನದ ನಕ್ಸಲ್ ಇತಿಹಾಸದ ವಿಪರ್ಯಾಸವೆಂದರೆ, ಗಡ್‌ಚಿರೋಲಿ ಜಿಲ್ಲೆಯಷ್ಟೆ ಅಲ್ಲ, ಇಡೀ ದಂಡಕಾರಣ್ಯದಲ್ಲಿ ನಕ್ಸಲ್ ಚಟುವಟಿಕೆ ಈಗ ಆದಿವಾಸಿ ಯುವಕರ ಕೈಯಲ್ಲಿದೆ. ಕಳೆದ ಎರಡು ಮೂರು ದಶಕದಿಂದ ನಕ್ಸಲ್ ಹೋರಾಟದಲ್ಲಿ ಬೆಳೆದು ಬಂದ ಇವರೆಲ್ಲಾ ಈಗ ನಾಯಕರಾಗಿ ಹೊರ ಹೊಮ್ಮಿದ್ದಾರೆ. ವಾಸ್ತವವಾಗಿ ಇವರೆಲ್ಲಾ ಅನಕ್ಷಸ್ತರಾಗಿದ್ದು ನಕ್ಸಲ್ ಚಳುವಳಿಯ ಮೂಲ ತತ್ವ ಮತ್ತು ಸಿದ್ಧಾಂತಗಳಿಂದ ವಿಮುಖರಾಗಿದ್ದಾರೆ. ಒಂದು ಕಾಲದಲ್ಲಿ ಮಾವೋ, ಲೆನಿನ್, ಮಾರ್ಕ್ಸ್ ವಿಚಾಧಾರೆಗಳ ಆಧಾರದ ಮೇಲೆ ಹೋರಾಟವನ್ನು ಹುಟ್ಟು ಹಾಕಿದ ಆಂಧ್ರ ಮೂಲದ ಮಾವೋವಾದಿ ನಕ್ಸಲ್ ನಾಯಕರು ವೃದ್ಧಾಪ್ಯದಿಂದ ನಿವೃತ್ತಿ ಹೊಂದಿದ್ದಾರೆ, ಇಲ್ಲವೇ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ನಗರಗಳಲ್ಲಿ ಕುಳಿತು ಮಾವೋವಾದಿಗಳ ಹೋರಾಟವನ್ನು ಕುರಿತು ಇಲ್ಲವೇ ಅವರ ಪರವಾಗಿ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಕೂಡ ನಕ್ಸಲ್ ಬೆಂಬಲಿಗರ ಆತ್ಮವಂಚನೆಯ ಮಾತುಗಳಾಗಿ ಪರಿವರ್ತನೆ ಹೊಂದುತ್ತಿವೆ.

ಛತ್ತೀಸ್‌ಗಡ, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ಮುಂದುವರಿಸುತ್ತಿರುವ ಬುಡಕಟ್ಟು ಜನಾಂಗದ ನಾಯಕರು ಗಣಿ ಕಂಪನಿಗಳಿಂದ ಬೆದರಿಕೆಯ ಮೂಲಕ ಸಂಪಾದಿಸುತ್ತಿರುವ ಹಣದಲ್ಲಿ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಏಕೆಂದರೆ, ಇವರಿಗೆಲ್ಲಾ ನಕ್ಸಲ್ ಹೋರಾಟದ ಮೂಲ ಆಶಯವಾಗಲಿ, ಚಿಂತನೆಗಳಾಗಲಿ, ಇವುಗಳ ಗಂಧ-ಗಾಳಿ ಕೂಡ ತಿಳಿದಿಲ್ಲ. ತತ್ವ ಮತ್ತು ಸಿದ್ಧಾಂತ ಕೊರತೆಯಿಂದಾಗಿ ಗಡ್‌ಚಿರೋಲಿ ಜಿಲ್ಲೆಯಲ್ಲಿ ಇತೀಚೆಗಿನ ವರ್ಷಗಳಲ್ಲಿ ನಕ್ಸಲಿಯರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಾಗತೊಡಗಿದೆ.

2003 ಆಗಸ್ಟ್ 29 ರಂದು ಅರಣ್ಯದಲ್ಲಿ ಗಸ್ತು ತಿರುಗುತಿದ್ದ ಪೊಲೀಸ್ ಜೀಪನ್ನು ನೆಲಬಾಂಬ್ ಮೂಲಕ ಸ್ಪೋಟಿಸಿದರ ಪರಿಣಾಮ ಐವರು ಪೊಲೀಸರು ಮೃತಪಟ್ಟರು. 2004 ರ ಮಾರ್ಚ್ ತಿಂಗಳಿನಲ್ಲಿ ಚಂದ್ರಾಪುರ ಜಿಲ್ಲೆಯಲ್ಲಿ ಆಂಧ್ರ ಗಡಿಭಾಗಕ್ಕೆ ಸಮೀಪವಿರುವ ಮೊಕಾಡಿ ಎಂಬ ರೈಲ್ವೆ ನಿಲ್ದಾಣವನ್ನು ಸ್ಪೋಟಿಸಲಾಯಿತು. 2005 ರ ಪೆಬ್ರವರಿಯಲ್ಲಿ ಬ್ರಹ್ಮಘಡ್ ಪೊಲೀಸ್ ಠಾಣೆಯ ಪೊಲೀಸ್ ವಾಹನವನ್ನು ನೆಲಬಾಂಬ್ ಮೂಲಕ ಧ್ವಂಸಗೊಳಿಸಿದ್ದರಿಂದ ಏಳು ಮಂದಿ ಪೊಲೀಸರು ಮೃತಪಟ್ಟರೆ, ಅದೇ ವರ್ಷದ ಮೇ ತಿಂಗಳಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಗೊಂಡಿಯ ಜಿಲ್ಲೆಯಲ್ಲಿ ಇಬ್ಬರು ನಾಗರೀಕರು ಮತ್ತು ಐವರು ಪೊಲೀಸರು ಅಸುನೀಗಿದರು. 2009 ರ ಅಕ್ಟೋಬರ್ ತಿಂಗಳಿನಲ್ಲಿ ಗಡ್‌ಚಿರೋಲಿ ಅರಣ್ಯದ ಬಳಿ ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ನಸುಕಿನ ಜಾವ ನಡೆಸಿದ ಧಾಳಿಯಲ್ಲಿ ನಿದ್ರೆಯಲ್ಲಿದ್ದ ಸಿಬ್ಬಂದಿ ಸೇರಿದಂತೆ 17 ಮಂದಿ ಪೊಲೀಸರು ನಕ್ಸಲಿಯರ ಹಿಂಸೆಗೆ ಬಲಿಯಾದರು.

ಜಗತ್ತಿನಲ್ಲಿ ಹಿಂಸೆ ಎಂಬುದು ಅದು ಪೊಲೀಸರ ಕೃತ್ಯವಾಗಿರಲಿ ಅಥವಾ ನಕ್ಸಲಿಯರ ಕೃತ್ಯವಾಗಿರಲಿ ಅದು ಮನುಕುಲದ ವಿರೋಧಿ ನೀತಿ ಎಂಬುದನ್ನು ಮರೆಯಬಾರದು. ಇದನ್ನು ಪ್ರೋತ್ಸಾಹಿಸುವುದು ಇಲ್ಲವೇ ನಿಗ್ರಹದ ನೆಪದಲ್ಲಿ ಪರೋಕ್ಷವಾಗಿ ಮುಂದುವರಿಸುವುದು ಮನುಷ್ಯರು ಮಾಡಬಹುದಾದ ಕ್ರಿಯೆ ಅಲ್ಲ. ಇದನ್ನು ನಾಗರೀಕ ಜಗತ್ತು ಎಂದಿಗೂ ಸಮರ್ಥಿಸಿವುದಿಲ್ಲ, ಜೊತೆಗೆ ಸಮರ್ಥಿಸಲೂಬಾರದು.

(ಮುಂದುವರಿಯುವುದು)

ಪತ್ರಿಕಾ ಸ್ವಾತ್ರಂತ್ರ್ಯ ಮತ್ತು ಪ್ರಜ್ಞಾವಂತ ಸಮಾಜ

– ತೇಜ ಸಚಿನ್ ಪೂಜಾರಿ

ನಮ್ಮ ಶಾಸಕ ಹಾಗೂ ಸಂಸದರಿಗೆ ಶಾಸನ ಸಭೆಗಳಿಗೆ ಸಂಬಂಧಪಟ್ಟ ಹಾಗೆ ಒಂದು ವಿಶೇಷ ಸಾಂವಿಧಾನಿಕ ಸವಲತ್ತು ಇದೆ. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಅವರ ಒಟ್ಟಾರೆ ನಡವಳಿಕೆಯು ಹೊರಗಿನ ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ಸುಪರ್ದಿಗೆ ಬರುವುದಿಲ್ಲ. ಅಲ್ಲಿ ಸಭಾಧ್ಯಕ್ಷರೇ ಅಂತಿಮ ನ್ಯಾಯಾಧೀಶರು. ಶಾಸಕರು ನಿರ್ಭೀತ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದ ಕಾರ್ಯನಿರ್ವಹಿಸಲು ಅನುವಾಗುವಂತೆ ನಮ್ಮ ಸಂವಿಧಾನ ನಿರ್ಮಾತೃಗಳು ಇಂತಹ ವ್ಯವಸ್ಥೆಯೊಂದನ್ನು ರೂಪಿಸಿದಾರೆ. ಇದು, ನಮ್ಮ ಪ್ರಜಾಪ್ರತಿನಿಧಿಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸಿದೆ. ಹೊರಗಿನ ಪೋಲಿಸರು ಸದನದ ಒಳಗಿನ ಅವರ ಕೃತ್ಯಗಳಿಗೆ ಸಂಬಂಧ ಪಟ್ಟಹಾಗೆ ಮಾನನಷ್ಟ ಮೊಕದ್ಧಮೆ ಹಲ್ಲೆ ದರೋಡೆ ಮೊದಲಾದ ಪ್ರಕರಣಗಳನ್ನು ದಾಖಲಿಸುವುದು ಅಸಾದ್ಯ. ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಸ್ವಾತಂತ್ರ್ಯ ಮೂಲಭೂತ ಅವಶ್ಯಕತೆಯಾಗಿರುತ್ತದೆ. ಅಂತಹ ಸ್ವಾತಂತ್ರ್ಯದ ರಕ್ಷಣೆಯ ಹಕ್ಕನ್ನು ನಮ್ಮ ಘನ ಸಂವಿಧಾನವು ಶಾಸಕರಿಗೆ ನೀಡಿದೆ.

ಇದೇ ಚೌಕಟ್ಟಿನಲ್ಲಿ ಯೋಚಿಸಿದಾಗ ಪತ್ರಕರ್ತರು ಅನುಭವಿಸಬೇಕಾದ ವಿಪತ್ಪರಂಪರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಪತ್ರಕರ್ತರು ಕರ್ತವ್ಯ ನಿರ್ವಹಿಸುವುದು ಶಾಸನ ಸಭೆಯಂತಹ ಸರ್ವರಕ್ಷಿತ ವ್ಯವಸ್ಥೆಯಲ್ಲಿ ಅಲ್ಲ. ಅವರ ಕ್ರಿಯಾಶಿಲತೆಯ ವೇದಿಕೆ ಹೊರಗಿನ ಸಮಾಜವೇ ಆಗಿದೆ. ಹೀಗಾಗಿ ಅವರು ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ನೇರ ಸುಪರ್ದಿಯಲ್ಲಿ ಬರುತ್ತಾರೆ. ಇದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಅವರ ನಿಷ್ಕಾಮ ಹಾಗೂ ನಿರ್ಭೀತ ಸೇವೆಗೆ ಮಿತಿಗಳನ್ನು ಹೇರುತ್ತದೆ.

ಪೋಲಿಸ್ ವ್ಯವಸ್ಥೆಯು ಸರಕಾರದ ಅಡಿಯಾಳು. ಹೀಗಾಗಿ ಆಯಾ ಸಂಧರ್ಭದಲ್ಲಿ ಆಡಳಿತ ಸೂತ್ರ ಹಿಡಿದಿರುವ ರಾಜಕೀಯ ಪಕ್ಷವು ಪ್ರತಿಪಾದಿಸುತ್ತಿರುವ ಒಟ್ಟು ಮೌಲ್ಯವ್ಯವಸ್ಥೆಯನ್ನು ಧಿಕ್ಕರಿಸುವುದು ಸಾಮಾನ್ಯ ಪತ್ರಕರ್ತನಿಗೆ ಕಷ್ಟಸಾಧ್ಯ. ಜೊತೆಗೆ ಆಡಳಿತ ಪಕ್ಷವೇ ಮಾತ್ರವಲ್ಲದೇ ಆಯಾ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಮತ್ತು ಸರ್ವಪಕ್ಷಗಳಿಂದಲೂ ಸಮಾನ ಗೌರವನ್ನು ಪಡೆಯುತ್ತಿರುವ ಸಾಂಸ್ಕೃತಿಕ ಯಾಜಮಾನ್ಯವನ್ನು ಎದುರು ಹಾಕಿಕೊಳ್ಳುವುದು ಕೂಡಾ ಬಂಧನವನ್ನು ಆಹ್ವಾನಿಸಿದಂತೆಯೆ ಆಗಿರುತ್ತದೆ. ಪತ್ರಕರ್ತ ನವೀನ್ ಸೂರಿಂಜೆ ಇಂತಹ ಇಬ್ಬಗೆಯ ವೈರತ್ವವನ್ನು ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಅವರ ಜೈಲುಪರ್ವ ಮತ್ತೆ ಮತ್ತೆ ಮುಂದುವರಿಯುತ್ತಲೇ ಇದೆ.

***

ಪತ್ರಿಕಾ ಸ್ವಾತ್ರಂತ್ರ್ಯ ಇಂದು ಕೇವಲ ಘೋಷಣೆಯಾಗಿಯೇ ಉಳಿದಿದೆ. ಕನಸುಗಳು ಹಾಗೂ ಮೌಲ್ಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬಾರದೆ ಕೇವಲ ಆದರ್ಶ ಮಾತ್ರವೇ ಆಗಿ ಉಳಿಯುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ವೈಫಲ್ಯವಾಗಿದೆ. ಮೂಲಭೂತ ಹಕ್ಕುಗಳು, ಸಮಾನತೆ, ಜಾತಿ ನಿರ್ಮೂಲನೆ, ಸಮಾಜವಾದ ಇಂತಹ ಮೌಲ್ಯಗಳು ಇನ್ನೂ ನಿಲುಕದ ಊರಿನಾಚೆಗೇ ಇವೆ. ಹಾಗೆಯೆ “ಪತ್ರಿಕಾ ಸ್ವಾತ್ರಂತ್ರ್ಯ.”

ನವೀನ್ ಪತ್ರಿಕಾ ಸ್ವಾತ್ರಂತ್ರ್ಯದ ಮಿಥ್ಯೆಗೆ ಸಾಕ್ಷಿಯಾಗಿ ನಿಂತಿದ್ದಾರೆ. ಪತ್ರಕರ್ತರ ಸ್ವಾತಂತ್ರ್ಯವನ್ನೂ ಹಕ್ಕುಗಳನ್ನೂ ಉಳಿಸಬೇಕಾದವರು ಯಾರು ಎಂಬ ಅಂಶವೇ ಸದ್ಯಕ್ಕೆ ತಿಳಿಯುತ್ತಿಲ್ಲ. ಪೋಲಿಸರು ಹೋಂಸ್ಟೇ ದಾಳಿಕೋರರ ಮೇಲೆ ಹೊರಿಸಿದ ಅಷ್ಟೂ ಆರೋಪಗಳನ್ನು ನವೀನ್ ಸೂರಿಂಜಿಯವರ ಮೇಲೂ ದಾಖಲಿಸಿದ್ದಾರೆ. ದರೋಡೆ, ಅಕ್ರಮ ಪ್ರವೇಶದಂತಹ ಮೊಕದ್ಧಮೆಗಳು ಕೂಡಾ ಇವೆ. ಕ್ರಿಯಾಶೀಲ ಪತ್ರಕರ್ತನೊಬ್ಬನ ಮೇಲೆ ಇಂತಹ ಕಠಿಣ ಕೇಸುಗಳನ್ನು ದಾಖಲಿಸಿದರೆ ಆತ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು ಸಾದ್ಯವೇ? ದಾಳಿಮಾಡಲು ಹೋದವರನ್ನೂ ವರದಿಮಾಡಲು ಹೋದ ಪತ್ರಕರ್ತನ್ನೂ ಒಂದೇ ತಕ್ಕಡಿಯಲ್ಲಿ ನೋಡುವುದು ನ್ಯಾಯವೇ? ದುರಾದೃಷ್ಟವಶಾತ್, ವ್ಯವಸ್ಥೆ ನ್ಯಾಯ ಅನ್ಯಾಯ ಅಥವಾ ಧರ್ಮ-ಅರ್ಧಮದ ಮಿತಿಗಳನ್ನು ಮೀರಿಯೇ ಕಾರ್ಯನಿರ್ವಹಿಸುತ್ತದೆ. ಅಂತಹ ಮಹಿಷಾಸುರ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿ ನಲುಗುತ್ತಿರುವ ಹಾವಿನಂತೆ ಇರುವ ಪತ್ರಿಕಾಸ್ಯಾತಂತ್ರ್ಯದ ಕ್ಷೀಣ ದನಿಯಂತೆ ನವೀನ್ ಕಾಣಿಸುತ್ತಿದ್ದಾರೆ.

***

ನವೀನ್ ಪ್ರಕರಣದಲ್ಲೂ ಒಂದು ತಾತ್ವಿಕ ಪ್ರಶ್ನೆ ಇದೆ. ಅದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಗೆ ಸಂಬಂಧಪಟ್ಟ ಪ್ರಶ್ನೆಯಾಗಿದೆ. ಅದು ದಾಳಿ ಯಾ ಹೊಡೆದಾಟದಂತಹ ಆಕಸ್ಮಿಕದ ಸಂಧರ್ಭಗಳಲ್ಲಿ ವರದಿಗಾರ ಯಾವ ರೀತಿ ವರ್ತಿಸಬೇಕು ಎಂಬ ಕುರಿತದ್ದಾಗಿದೆ. ಅಂತಹ ವಿಷಮ ಸಂಧರ್ಭದಲ್ಲಿ ಪತ್ರಕರ್ತ ಘಟನೆಯ ವರದಿ ಮಾತ್ರವೇ ಮಾಡುತ್ತಿರಬೇಕೇ ಅಥವಾ ಸಂಕಷ್ಟಕೀಡಾದವರ ನೆರವಿಗೆ ಹೋಗಬೇಕೇ ಎಂಬ ವಿಚಾರ. ಇದು ಪೂರ್ಣವಾಗಿ ಮೌಲ್ಯ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದೆ. ಇದನ್ನು ಚರ್ಚಿಸಿ ಒಂದು ಮೌಲ್ಯವಾಗಿ ರೂಪಿಸಿಕೊಳ್ಳಬೇಕಾಗಿರುವುದು ಸಮಾಜವೇ ಹೊರತು ಕಾನೂನು ಅಥವಾ ಪೋಲಿಸ್ ವ್ಯವಸ್ಥೆಗಳಲ್ಲ್ಲ. ಪತ್ರಕರ್ತರ ವ್ಯಾಪಕತೆಯಿಂದಾಗಿ ಇಂತಹ ಪ್ರಕರಣಗಳು ಇಂದು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ ಮತ್ತು ಚರ್ಚೆಯಾಗುತ್ತಿವೆ. ವ್ಯವಸ್ಥೆಯು ವಾರಂಟ್-ಬಂಧನಗಳಂತಹ ತನ್ನೆಲ್ಲ ಅಹಂಕಾರ ಧೋರಣೆಯನ್ನು ಬಿಟ್ಟು ಸಾಮಾಜಿಕ ಚರ್ಚೆಗೆ ಅವಕಾಶ ಮಾಡಿಕೊಡುವುದು ಇಲ್ಲಿ ಅನಿವಾರ್ಯ.

***

ನವೀನ್ ಪ್ರತಿನಿಧಿಸುವ ಪತ್ರಿಕಾ ಸ್ಯತ್ರಂತ್ರ್ಯವನ್ನು ರಕ್ಷಿಸುವಲ್ಲಿ ಸಮಾಜದ ಜವಾಬ್ದಾರಿಯೂ ಇದೆ. ಆದರೆ ನಮ್ಮ ಸಮಾಜ ಇಲ್ಲೇ ಎಡವಿದೆ. ಬಂಧನದ ವಿರುದ್ದ ನಡೆಯಬೇಕಾಗಿದ್ದ ಹೋರಾಟ ಪ್ರತಿಭಟನೆಗಳು ಆರಂಭಗಳ ದಿನಗಳಿಗಷ್ಟೇ ಮೀಸಲಾದವು. ಇಂತಹ ಆರಂಭಶೂರತ್ವದ ವ್ಯಾಧಿಯು ಪತ್ರಕರ್ತರ ವಲಯಕ್ಕೂ ವ್ಯಾಪಿಸಿದೆ. ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಪತ್ರಿಕೆಗಳೂ, ಚಾನೆಲ್‌ಗಳೂ ಇದ್ದಾಗ್ಯೂ ಒಬ್ಬ ಪತ್ರಕರ್ತನನ್ನೂ, ಆತನ ಸ್ವಾತಂತ್ರ್ಯವನ್ನೂ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅವರ ನಿರ್ವೀರ್ಯತೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಕ್ರಿಯಾಶಿಲತೆಗೆ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತ್ಯ ಹಾಗೂ ಬೌದ್ದಿಕ ವಲಯವೂ ಕೂಡಾ ನವೀನ್ ವಿಚಾರದಲ್ಲಿ ಮೌನಕ್ಕೆ ಶರಣಾಗಿ ಕುಳಿತಿದೆ. ಸಾಹಿತ್ಯಿಕ ಕೂಡುಗೆಗಳನ್ನೆಲ್ಲ ಬಿಟ್ಟು ನೋಡಿದಲ್ಲಿ ಒಬ್ಬ ಪುಂಡು ಕೋಮುವಾದಿಯಂತೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಡಾ| ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲು ರಾಜ್ಯಪಾಲರು ನಿರಾಕರಿಸಿದಾಗ ಅದನ್ನು ಪ್ರತಿಭಟಿಸುವ ಸಲುವಾಗಿಯೇ ಅನಂತಮೂರ್ತಿಯವರು ದೈಹಿಕ ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮಾವೇಶದಲ್ಲಿ ಭಾಗವಹಿಸಿದ್ದರು. ಮತ್ತು ರಾಜ್ಯಪಾಲರ ನಿಲುವನ್ನು ಕಠಿಣ ಮಾತುಗಳಿಂದ ಖಂಡಿಸಿದ್ದರು. ಆದರೆ ಅವರೂ ಸೇರಿದಂತೆ ಕನ್ನಡದ ಹಲವು ಸಾಹಿತ್ಯ ಪ್ರತಿಭೆಗಳು ನವೀನ್ ಬಂಧನದ ಕೆಲವೇ ದಿನಗಳಲ್ಲಿ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಅದೇ ಸಮಯದಲ್ಲಿ ಅಲ್ಲೇ ಮಂಗಳೂರಿನ ಜೈಲಿನಲ್ಲಿ ಕೊಳೆಯುತ್ತಿದ್ದ ಸಾಮಾಜಿಕ ಕಳಕಳಿಯ ಪತ್ರಕರ್ತ ನವೀನ್ ಸೂರಿಂಜೆಯ ಬಂಧನವನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡುವಂತಹ ದೊಡ್ಡಮನಸ್ಸನ್ನು ಕನ್ನಡದ ಯಾವ ಜ್ಞಾನಪೀಠವೂ ತೋರಲಿಲ್ಲ ಎಂಬುವುದು ನಮ್ಮ ಸಾಮಾಜಿಕ ಸಂಧರ್ಭದ ನಿರೀಕ್ಷತ ದುರ್ದೈವವಾಗಿದೆ! ಮೌಲಿಕ ಸಾಹಿತ್ಯದ ದೌರ್ಬಲ್ಯವೇ ಇದು. ಒಂದೋ ಅದು ವ್ಯವಸ್ಥೆಯ ಪಾದಸೇವೆ ಮಾಡುತ್ತಿರುತ್ತದೆ ಇಲ್ಲವೇ ಗಾಂಧಾರಿ ಸಿಂಡ್ರೋಮ್‌ನಿಂದ ಬಳಲುತ್ತಿರುತ್ತದೆ. ಅನಂತಮೂರ್ತಿಯವರು ತಮ್ಮ ನುಡಿಸಿರಿ ಭಾಷಣದಲ್ಲಿ ಇತ್ತೀಚಿಗೆ ತಾವು ದಕ್ಷಿಣ ಕನ್ನಡದವರೇ ಆದ ಸೇಡಿಯಾಪು ಕೃಷ್ಣಭಟ್ಟರ ಕೃತಿಗಳು ಓದುತ್ತಿದ್ದೇನೆ ಎಂದು ಹೇಳಿದ್ದಾರೆ. ಬಹುಶಃ ಅವರು ಅದೇ ದಿನಗಳಲ್ಲಿ ದಕ್ಷಿಣ ಕನ್ನಡದ ವಾರ್ತೆಗಳನ್ನು ಕೇಳಬೇಕಿತ್ತೋ ಏನೋ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲು ನವೀನ್ ಯಾವ ಕಾರ್ಪೊರೇಟ್ ಪತ್ರಕರ್ತನೂ ಅಲ್ಲ; ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಲು ಠಾಕ್ರೆಯಂತಹ ರುದ್ರ ಭಯಂಕರನೂ ಅಲ್ಲ. ಒರ್ವ ಬಡಪಾಯಿ ಪತ್ರಕರ್ತನಷ್ಟೇ. ದೌರ್ಜನ್ಯದ ವ್ಯವಸ್ಥೆಯೊಂದರ ರೌರವ ಕ್ರೌರ್ಯಕ್ಕೆ ಕನ್ನಡಿ ಹಿಡಿದದ್ದಷ್ಟೇ ಅವರ ಅಪರಾದ. ಚಕ್ಕಳ ಹಾಕಿಸಿ ಮುಂದೆ ಕೂರಿಸಿಕೊಂಡು ತನ್ನನ್ನು ಧಿಕ್ಕರಿಸುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಹದಮಾಡುವ ಕಲೆ ವ್ಯವಸ್ಥೆಗೆ ಯಾವತ್ತೋ ಸಿದ್ದಿಸಿದೆ. ಅಂತಹ ಅಪಾಯಕ್ಕೆ ನವೀನ್ ಸಿಲುಕದಂತೆ ನೋಡಿಕೊಳ್ಳುವುದು ಕ್ರಿಯಾಶೀಲ ಸಮಾಜದ ಕರ್ತವ್ಯವಾಗಿದೆ.

ತಲೆ ಮರೆಸಿಕೊಂಡಿದ್ದರಿಂದ ಜಾಮೀನು ಇಲ್ಲ. ಇದು ಎಷ್ಟು ನಿಜ?

– ರವಿ ಕೃಷ್ಣಾರೆಡ್ಡಿ

ಈ ಕೋರ್ಟ್‌ಗಳ ತೀರ್ಪಿನ ಪರ-ವಿರುದ್ಧ ಎಷ್ಟು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ. ನ್ಯಾಯಾಲಯಗಳೇ ಹಸಿ ಸುಳ್ಳುಗಳನ್ನು ಹೇಳಿಬಿಟ್ಟರೆ ಅಥವ ಪುರಸ್ಕರಿಸಿಬಿಟ್ಟರೆ ಏನು ಮಾಡುವುದು?

ಮಂಗಳವಾರದಂದು  (27/11/12) ಕೊಟ್ಟ ತೀರ್ಪಿನಲ್ಲಿ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ನವೀನ್ ಸೂರಿಂಜೆಯವರ ಜಾಮೀನು ಮನವಿಯನ್ನು ನಿರಾಕರಿಸಿದ್ದರು. ಅವರು ಕೊಟ್ಟ ಕಾರಣ, ’ಸೆಪ್ಟೆಂಬರ್ 25 ರಂದು ಪೋಲಿಸರು ಚಾರ್ಜ್‌ಷೀಟ್ ಹಾಕಿದಂದಿನಿಂದ ತಲೆಮರೆಸಿಕೊಂಡಿದ್ದರು’ ಎನ್ನುವುದು? (ಇದರ ಬಗ್ಗೆ’ ’ದಿ ಹಿಂದು’ ಪತ್ರಿಕೆ ಮಾತ್ರ ಮುಖಪುಟದಲ್ಲಿ ವರದಿ ಮಾಡಿತ್ತು.)

ಹರ ಕೊಲ್ಲಲ್ ಪರ ಕಾಯ್ವನೇ?

ಇಂದಿನ ’ದಿ ಹಿಂದು’ ಪತ್ರಿಕೆಯಲ್ಲಿ ಈ ತೀರ್ಪಿನ ಬಗ್ಗೆ ಮತ್ತೊಂದು ವರದಿ ಇದೆ.  ನೆನ್ನೆ ಮಂಗಳೂರಿನ ಜೈಲಿನಲ್ಲಿ ನವೀನ್ ಸೂರಿಂಜೆಯವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ರಾಜ್ಯ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಮ್.ಎಫ್. ಸಲ್ದಾನಾರವರು ನವೀನ್ ಸೂರಿಂಜೆ ಜಾಮೀನು ವಿಚಾರದಲ್ಲಿ ಅಲ್ಲಿಯ ಎರಡೂ ಅಧೀನ ನ್ಯಾಯಾಲಯಗಳು ತಪ್ಪೆಸಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೋಲಿಸರ ಕೃತ್ಯಕ್ಕೆ ನ್ಯಾಯಾಲಯ ಮೊಹರು ಒತ್ತುವುದು ಕೆಟ್ಟದ್ದು ಎಂದಿರುವ ಅವರು ಘಟನೆಗೆ ಸಂಬಂಧಪಟ್ಟ ವಾಸ್ತವಾಂಶಗಳ ಬಗ್ಗೆ ಗಮನ ಹರಿಸದೆ (without applying their mind to the facts of the case) ನ್ಯಾಯಾಧೀಶರುಗಳು ಪೋಲಿಸರ ಹೇಳಿಕೆಗಳನ್ನಷ್ಟೆ ಅವಲಂಬಿಸಿ ತೀರ್ಪು ನೀಡಿದ್ದಾರೆ ಎಂದು ಕಟುವಾಗಿ ವಿಮರ್ಶಿಸಿದ್ದಾರೆ.

ಇನ್ನು ಜಿಲ್ಲಾ ನ್ಯಾಯಾಲಯ ಅಭಿಪ್ರಾಯಪಟ್ಟಂತಹ “ತಲೆಮರೆಸಿಕೊಂಡ/ತಪ್ಪಿಸಿಕೊಂಡು ಓಡಾಡುತ್ತಿದ್ದ” ವಿಷಯ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ? ನೆನ್ನೆಯಿಂದ ನನ್ನನ್ನು ತೀವ್ರವಾಗಿ ಕಾಡಿದ, ಬಾಧಿಸಿದ, ಆಕ್ರೋಶ ಮೂಡಿಸಿದ ಹೇಳಿಕೆ ಇದು. ನನಗೆ ಮೊದಲಿನಿಂದಲೂ ಗೊತ್ತಿರುವ ಹಾಗೆ ನವೀನ್ ಎಲ್ಲೂ ತಲೆತಪ್ಪಿಸಿಕೊಂಡಿರಲಿಲ್ಲ. ಅವರ ಪಾಡಿಗೆ ಅವರು ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ತಮ್ಮ ಕೆಲಸದಲ್ಲಿ ದಿನನಿತ್ಯ  ತೊಡಗಿಸಿಕೊಂಡಿದ್ದರು. ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಖುದ್ಡಾಗಿ ವರದಿ ಮಾಡಿದ್ದರು. ನನಗೆ ಗೊತ್ತಿದ್ದಂತೆ ಮಂಗಳೂರಿನ ಪೋಲಿಸ್ ಕಮೀಷನರ್‌ರ ಸುದ್ಧಿಗೋಷ್ಠಿಗೂ ಹೋಗಿ ಮುಂದಿನ ಸಾಲುಗಳಲ್ಲಿ ಕುಳಿತು ಬಂದು ವರದಿ ಮಾಡಿದ್ದರು. ಎಲ್ಲಿಯೂ ತಪ್ಪಿಸಿಕೊಂಡಿರಲಿಲ್ಲ ಮತ್ತು ಬಂಧಿಸಬೇಕಾದ ಪೋಲಿಸರೇ ಅವರು ಎದುರಿದ್ದಾಗಲೂ  ಬಂಧಿಸಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸತ್ಯ. ಈ ವಿಚಾರದಲ್ಲಿ ಯಾರದಾದರೂ ತಪ್ಪಿದ್ದರೆ ಅದು ಪೋಲಿಸರದೇ ಹೊರತು ನವೀನರದಂತೂ ಅಲ್ಲವೇ ಅಲ್ಲ. ತಲೆಮರೆಸಿಕೊಂಡಿದ್ದ ಎಂದು ಯಾರಾದರೂ ಅದು ಹೇಗೆ ವಾದಿಸಿದರು ಮತ್ತು ಅದನ್ನು ನ್ಯಾಯಾಲಯ ಹೇಗೆ ಪುರಸ್ಕರಿಸಿತು ಎನ್ನುವುದು ರಾಜ್ಯದ  ನ್ಯಾಯಾಂಗ ವಲಯದಲ್ಲಿ ಚರ್ಚೆಯಾಗಬೇಕಾದ ವಿಷಯ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಬೇಕು ಎಂದಾದರೆ ನಮ್ಮ ನ್ಯಾಯಾಂಗ ಪ್ರಾಮಾಣಿಕವಾಗಿರಬೇಕು, ನಿಷ್ಪಕ್ಷಪಾತವಿರಬೇಕು, ಮತ್ತು ನ್ಯಾಯಪರವಿರಲೇಬೇಕು. ಇವತ್ತು ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ, ಅನಾಚಾರ, ದುರಾಡಳಿತ, ಅಪ್ರಾಮಾಣಿಕತೆ ತುಂಬಿರುವುದಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆಯೂ ಒಂದು ಕಾರಣ ಮತ್ತು ಅದರಲ್ಲಿ ಅದೂ ಭಾಗಿ ಎನ್ನುವುದು ಸಮಾಜವನ್ನು ಅವಲೋಕಿಸುವವರಿಗೆ ಎಂದೋ ಮನದಟ್ಟಾಗಿದೆ.

ಮತ್ತೆ ಇನ್ನೊಂದು ವಿಷಯ. ಸೋನಿಯಾ ಗಾಂಧಿ ಅಕ್ಟೋಬರ್ 18 ರಂದು ಮಂಗಳೂರಿಗೆ ಭೇಟಿ ನೀಡಿ ಅಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಅದೇ ಸಭೆಗೆ ವರದಿಗಾರಿಕೆಗೆಂದು ನವೀನ್ ಸೂರಿಂಜೆ ಸಹ ಹೋಗಿದ್ದರು. ಮತ್ತು ಅವರಿಗೆ ಆ ಸಭೆಯ ವರದಿಗಾರಿಕೆ ಮಾಡಲು ಪೋಲಿಸ್ ಪಾಸ್ ಬೇಕು. ನವೀನರಿಗೆ ಅದನ್ನು ಕೊಡಲಾಗಿತ್ತು. ಕೊಟ್ಟಿದ್ದದ್ದು ಮಂಗಳೂರಿನ ಪೋಲಿಸ್ ಕಮೀಷನರ್ ಕಚೇರಿ. ಈ ಹಿನ್ನೆಲೆಯಲ್ಲಿ, ನವೀನ್ ಎಲ್ಲಿ ಯಾವಾಗ ತಲೆಮರೆಸಿಕೊಂಡಿದ್ದರು ಅನ್ನುವುದನ್ನು ಅಲ್ಲಿಯ ಪೋಲಿಸರು ಹೇಳಬೇಕು. ಈ ವಿಷಯದಲ್ಲಿ ಪೋಲಿಸರು ನ್ಯಾಯಾಲಯದ ದಿಕ್ಕುತಪ್ಪಿಸಿರುವುದು ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯ ತಾನೆ ಯಾಕೆ ದಿಕ್ಕುತಪ್ಪಬೇಕು? ಅದಕ್ಕೇ ಸಾಲ್ಡಾನಾ ಹೇಳಿರುವುದು: “The courts had gone by what was placed before them by the police, without applying their mind to the facts of the case. It is wrong to rubber stamp police action.”

ನವೀನ್ ಅಮಾಯಕರೂ ಅಲ್ಲ, ಸಮಾಜಕ್ಕೆ ಅಪರಿಚಿತರೂ ಅಲ್ಲ. ಈ ಕೇಸಿಗೆ ಸಂಬಂಧಪಟ್ಟಂತೆ ಒಂದು ಮಟ್ಟದಲ್ಲಾದರೂ ಜನರಿಗೆ ವಿಷಯ ಗೊತ್ತಾಗುತ್ತಿದೆ ಮತ್ತು ನವೀನರ ಬೆಂಬಲಕ್ಕೆ ಒಂದಷ್ಟು ಜನರಾದರೂ ಇದ್ದಾರೆ. ಮತ್ತು ನನ್ನಂತೆ, ನಿಮ್ಮಂತೆ ನೈತಿಕ ಬೆಂಬಲ ನೀಡುವ ನೂರಾರು ಜನರೂ  ಇದ್ದಾರೆ. ಅದರೂ ಅವರಿಗೆ ಹೀಗೆ ಆಗುತ್ತಿದೆ.  ನನ್ನ ಆತಂಕ ಅದಲ್ಲ. ನವೀನರಿಗೆ ಇರುವ ಬೆಂಬಲ ಮತ್ತು ಪರಿಚಿತತೆ ಇಲ್ಲದ ನಿರಪರಾಧಿ ಜನಸಾಮಾನ್ಯನೊಬ್ಬ ಇಂತಹ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡರೆ ಈ ವ್ಯವಸ್ಥೆ ಮತ್ತು ನ್ಯಾಯಾಲಯಗಳಿಂದ ಯಾವ ಪರಿ ಅನ್ಯಾಯಕ್ಕೆ ಒಳಗಾಗಬಹುದು ಎಂಬ ಆಲೋಚನೆಯೇ ನನ್ನನ್ನು ಬೆಚ್ಚಿಬೀಳಿಸುತ್ತಿದೆ.

ಮರಣದಂಡನೆ ಮತ್ತು ಹ್ಯಾಂಗ್‌ಮನ್‌ಗಳು

– ಬಸವರಾಜು

ಭಾರತದ 1.2 ಬಿಲಿಯನ್ ಜನರಲ್ಲಿ ಎಲ್ಲಾ ತರಹದ ಕೆಲಸಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲಿ ಒಂದು ಕೆಲಸ ಖಾಲಿ ಇದೆ. ಆದ್ರೆ ಅದನ್ನು ಮಾಡೋಕೆ ಯಾರೂ ಮುಂದೆ ಬರುತ್ತಿಲ್ಲ. ಅದು ಗಲ್ಲಿಗೇರಿಸುವ ಕೆಲಸ!

2004ರಲ್ಲಿ ಅಸ್ಸಾಂ ಗಲ್ಲಿಗೇರಿಸುವ ಕೆಲಸಕ್ಕೆ ಆಸಕ್ತರನ್ನು ಕರೆದಿತ್ತು. ಈ ವೇಳೆ ಯಾರೊಬ್ಬರೂ ಅತ್ತ ಕಡೆ ತಲೆ ಹಾಕಿರಲಿಲ್ಲ. ಇಂದು ದೇಶದಾದ್ಯಂತ ಗಲ್ಲಿಗೇರಿಸುವ ಕೆಲಸ ಮಾಡುತ್ತಿರುವವರು ಕೆಲವೇ ಕೆಲವು ಮಂದಿ ಮಾತ್ರ. ಬಹುತೇಕರು ನಿವೃತ್ತಿ ತೆಗೆದುಕೊಂಡು ಮನೆಯಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿದ್ದ ಗಲ್ಲಿಗೇರಿಸುವ ಕೆಲಸಗಾರ ಜಾಧವ್ 1995ರಲ್ಲಿ ನಿವೃತಿಯಾದ. ತಿಹಾರ್ ಜೈಲ್ನಲ್ಲಿ ಅಂತಿಮ ಬಾರಿಗೆ 1989ರಲ್ಲಿ ಗಲ್ಲಿಗೇರಿಸಿದ್ದು. ಇಂದಿರಾ ಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೆಹಾರ್ ಸಿಂಗ್ರನ್ನು ಗಲ್ಲಿಗೇರಿಸಲಾಯ್ತು. ಇವರನ್ನು ಗಲ್ಲಿಗೇರಿಸಿದ್ದು ಕಲ್ಲು ಹಾಗೂ ಫಕೀರ್ ಎಂಬ ಹ್ಯಾಂಗ್ಮ್ಯಾನ್ಗಳು. ಅವರೀಗ ಇಲ್ಲ.

ಆದ್ರೆ ಕಲ್ಲು ಅವರ ಮಗ ಮಾಮು ಸಿಂಗ್ ಮೀರತ್ ಜೈಲಿನಲ್ಲಿ ಹ್ಯಾಂಗ್‌ಮ್ಯಾನ್  ಆಗಿ ಕೆಲಸ ಮಾಡುತ್ತಿದ್ದರು. ಇವರು 1997ರಲ್ಲಿ 10 ಮಂದಿಯ ಕುತ್ತಿಗೆಗೆ ನೇಣು ಬಿಗಿದಿದ್ದಾರೆ. ಆದರೆ, 1995 ರಿಂದಲೂ ಬಿಹಾರ, ಅಸ್ಸಾಂ, ಮಹಾರಾಷ್ಟ್ರ ಒಳಗೊಂಡು ಹಲವಾರು ರಾಜ್ಯದ ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳ ಕೆಲಸ ಖಾಲಿಯಿದೆ. ಬಹುಶಃ ಇದಕ್ಕೆ ಅವರಿಗೆ ಸಿಗುವ ಕೇವಲ 150 ರೂಪಾಯಿ ಕೂಲಿ, ತಾತ್ಕಾಲಿಕವಾದ ಕೆಲಸ, ಪಾಪಪ್ರಜ್ಞೆಯ ಕೀಳರಿಮೆ, ಇವೆಲ್ಲವೂ ಇರಬಹುದು.

ಇಷ್ಟಕ್ಕೂ, ಗಲ್ಲಿಗೇರಿಸುವ ದಿನ ಹ್ಯಾಂಗ್‌ಮ್ಯಾನ್ ಏನ್ ಕೆಲಸ ಮಾಡ್ಬೇಕು? ಆತ ಬೆಳಗ್ಗೆ 5 ಗಂಟೆಗೆ ಏಳಬೇಕು. ಗಲ್ಲುಗೇರುವವನಿಗೆ ಚಹ ನೀಡಿ, ಅವನ ಮೆಚ್ಚುಗೆಯ ಪವಿತ್ರ ಗ್ರಂಥವನ್ನು ಓದಲು ಕೊಡಬೇಕು. ಅಲ್ಲದೇ ಕೊನೆಯ ಆಸೆಯನ್ನೂ ಫೂರೈಸಲು ಮುಂದಾಗಬೇಕು.

ಮತ್ತು, ಗಲ್ಲಿಗೇರಿಸುವುದೂ ಒಂದು ಕಲೆ. ನೇಣಿಗೇರಿಸುವ ಪ್ರಕ್ರಿಯೆ ಸರಳವಾಗುವ ನಿಟ್ಟಿನಲ್ಲಿ ಹಗ್ಗ ತಯಾರಿಸಲು ಕೆಲವು ಹಂತಗಳ ತಯಾರಿ ಅಗತ್ಯವಿರುತ್ತದೆ. ಯಾವುದೇ ವ್ಯಕ್ತಿಯನ್ನು ಗಲ್ಲಿಗೆ ಹಾಕುವ ಮೊದಲು ಮಾರ್ಜಕ, ತುಪ್ಪ ಮತ್ತು ಇತರ ದ್ರವ್ಯಗಳನ್ನು ಹಗ್ಗಕ್ಕೆ ಲೇಪಿಸುತ್ತಾರೆ. ಮತ್ತು ನೇಣಿಗೆ ಹಾಕುವ ವ್ಯಕ್ತಿ ಅಪರಾಧಿಯನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಸ್ವತಃ ದೃಢ ಮನೋಭಾವವನ್ನು ಹೊಂದಿರುವುದು ಅಗತ್ಯ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಈ 65ರ ಮಾಮು ಸಿಂಗ್ ನೇರ ಅಥವಾ ಪರೋಕ್ಷವಾಗಿ ಪಾತಕಿಗಳನ್ನು ಗಲ್ಲಿಗೆ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಬಂದಿದ್ದರು.

ಇಷ್ಟರವರೆಗೆ ಮಾಮು ಸಿಂಗ್ ಹಲವು ರಾಜ್ಯಗಳಲ್ಲಿ 10 ಮಂದಿಯನ್ನು ನೇಣಿಗೇರಿಸಿದ್ದಾರೆ. ಅವರ ಪ್ರಕಾರ ತನ್ನ ಅನುಭವವನ್ನು ಪರಿಗಣಿಸಿ ಸರಕಾರವು ತನ್ನನ್ನೇ ಕಸಬ್ ನೇಣಿಗೆ ಹಾಕಲು ಕರೆಸುತ್ತದೆ. ಹಾಗೆ ಮಾಡಿದಲ್ಲಿ ನನಗೆ ಅತೀವ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದರು. ಆದ್ರೆ ಕಸಬ್ನನ್ನು ಗಲ್ಲಿಗೇರಿಸುವ ಮುಂಚೆಯೇ ಮಾಮು ಸಿಂಗ್ ಸತ್ತರು.

2009ರಲ್ಲಿ ದೇಶದ ಕೊನೆಯ ಹ್ಯಾಂಗ್‌ಮ್ಯಾನ್‌ ಅನಿಸಿಕೊಳ್ಳುತ್ತಿದ್ದ ನಾಥಾ ಮಲ್ಲಿಕ್ ಕೂಡ ಇಲ್ಲವಾದ. ಈ ಮೂಲಕ ರಾಷ್ಟ್ರದ ಹಲವು ಜೈಲುಗಳಲ್ಲಿ ಗಲ್ಲಿಗೇರಿಸುವ ಹುದ್ದೆ ಖಾಲಿಯಾಯ್ತು. 1995ರಿಂದ ಇಲ್ಲಿಯವರೆಗೂ ಒಬ್ಬರೂ ಆ ಕೆಲಸಕ್ಕೆ ಸ್ವಯಂಪ್ರೇರಿತರಾಗಿ ಸೇರಿಕೊಳ್ಳಲಿಲ್ಲ. ಇವತ್ತು ರಾಷ್ಟ್ರದ ಹಲವು ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳೇ ಇಲ್ಲ. ಆದರೆ ಗಲ್ಲು ಶಿಕ್ಷೆಗೆ ಒಳಪಟ್ಟ 300 ಮಂದಿ ಖೈದಿಗಳಿದ್ದಾರೆ. ಈಗಾಗಿಯೇ, ಕಸಬ್‌ನನ್ನು ಅನಿವಾರ್ಯವಾಗಿ ಸ್ವತಃ ಜೈಲಿನ ಜೈಲರ್ ಗಲ್ಲಿಗೇರಿಸಬೇಕಾಯಿತು.

ಮರಣದಂಡನೆಯನ್ನು ರದ್ದು ಪಡಿಸಬೇಕೆಂದು ಜಾಗತಿಕ ಮಟ್ಟದಲ್ಲಿ ಮತ್ತು ಮುಂದುವರೆದ ದೇಶಗಳಲ್ಲಿ ಜನಾಭಿಪ್ರಾಯ ರೂಪುಗೊಳ್ಳುತಿರುವಾಗ ಬಹುಶಃ ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳು ಇಲ್ಲವಾಗಬಹುದೇನೊ.