ಬಿಡುಗಡೆಯಾಗದ ನವೀನ್ : ರಾಜ್ಯಪಾಲರಿಗೆ ಮನವಿ ಪತ್ರ

ಕೋರ್ಟಿನ ಭಾಷೆ ಮತ್ತು ಸರ್ಕಾರದ ಕಡತಗಳ ಭಾಷೆ ಅಷ್ಟು ಸುಲಭವಾಗಿ ಅರ್ಥವಾಗುವಂತಹುದಲ್ಲ. ಸೋಮವಾರ ನವೀನ್ ಸೂರಿಂಜೆಯವರ ಕೇಸಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಎಲ್ಲರೂ ಅದು ಜಾಮೀನು ಮಂಜೂರಿಗೆ ಸಂಬಂಧಿಸಿದ್ದು ಎಂದು ಭಾವಿಸಿದ್ದರು. ನಾವೂ ಸಹ ಹಾಗೆಯೆ ವರದಿ ಮಾಡಿದ್ದೆವು. ಆದರೆ ಹೈಕೋರ್ಟ್ ಆದೇಶ ಹಾಗೆ ಇಲ್ಲ ಮತ್ತು ಸ್ಪಷ್ಟವಾಗಿಲ್ಲ ಎಂದು ಮಂಗಳೂರಿನ ಜೆ‌ಎಂ‌ಎಫ್‌ಸಿ ಬಾವಿಸಿದ ಕಾರಣ ಹೈಕೋರ್ಟ್ ಮತ್ತೆ ಸ್ಪಷ್ಟೀಕರಣ ನೀಡಬೇಕಾಯಿತು. ಇದೆಲ್ಲಾ ಆಗಿ ಈಗ ಮೊಕದ್ದಮೆ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಇದೆ. ಇವತ್ತಿನ ವರದಿಗಳ ಪ್ರಕಾರ ಕೇಸು ಮಂಗಳವಾರಕ್ಕೆ ಹೋಗಿದೆ. ಈ ಕಗ್ಗಂಟು ಬಿಚ್ಚುತ್ತ ಹೋದಷ್ಟು ಹೆಚ್ಚು ಸಿಕ್ಕುಸಿಕ್ಕಾಗುತ್ತಿದೆ. ಯಾಕೆಂದರೆ ಅದನ್ನು ಹಾಗೆ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ, ಹೊಸೆದು ಗಂಟು ಹಾಕಿದ್ದಾರೆ.

ಈ ನಡುವೆ ನವೀನ್ ಸೂರಿಂಜೆಯವರ ವಿರುದ್ಧ ಇರುವ ಆರೋಪಗಳನ್ನು ಕೈಬಿಡಬೇಕು ಮತ್ತು ಅವರ ಶೀಘ್ರ ಬಿಡುಗಡೆ ಆಗಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಡಗಳು ಬರುತ್ತಲೇ ಇವೆ. ನೆನ್ನೆ ಕೆಲವು ಸಾಹಿತಿಗಳ ಮತ್ತು ಪ್ರಗತಿಪರ ಸಂಘಟನೆಗಳ ಗುಂಪು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಆ ಮನವಿ ಪತ್ರದ ಪೂರ್ಣ ಪಾಠ ಕೆಳಗಿದೆ.

ಮನವಿ

23-11-2012

ಸನ್ಮಾನ್ಯ ಶ್ರೀ ಎಚ್.ಆರ್ ಹಂಸರಾಜ್ ಭಾರದ್ವಾಜ್
ಮಾನ್ಯ ರಾಜ್ಯಪಾಲರು
ಕರ್ನಾಟಕ ಸರ್ಕಾರ
ಬೆಂಗಳೂರು

ಮಾನ್ಯರೇ,

ಈ ಕೆಳಗೆ ಸಹಿಮಾಡಿದ ನಾವು ಕಸ್ತೂರಿ ಚಾನೆಲ್‌ನ ಒಬ್ಬ ಜವಾಬ್ದಾರಿಯುತ ಪತ್ರಕರ್ತರಾದ ಶ್ರೀ ನವೀನ್ ಸೂರಿಂಜೆ ಯವರನ್ನು ಜುಲೈ 28 2012 ರಂದು ಮಂಗಳೂರಿನ ಹೋಂ ಸ್ಟೇ ಒಂದರಲ್ಲಿ ಹುಟ್ಟುಹಬ್ಬದ ಸಮಾರಂಭವನ್ನು ನಡೆಸುತ್ತಿದ್ದ ಯುವಕ ಯುವತಿಯರ ಮೇಲೆ ಗುಂಪೊಂದು ನಡೆಸಿದ ಧಾಳಿಯ ಸಂಬಂಧವಾಗಿ ನವೆಂಬರ್ 7 2012 ರಂದು ಮಂಗಳೂರಿನಲ್ಲಿ ಬಂಧಿಸಿದ ವಿಷಯವನ್ನು ತಮ್ಮ ಗಮನಕ್ಕೆ ಈ ಮೂಲಕ ತರಬಯಸುತ್ತೇವೆ. ಚಾರ್ಜಶೀಟ್ ಮತ್ತು ವಿಚಾರಣಾ ದಾಖಲೆಗಳಲ್ಲಿ ಕಾನೂನು ಬಾಹಿರ ಕೃತ್ಯ ನಡೆದ ಸಮಯದಲ್ಲಿ ಆ ಸ್ಥಳದಲ್ಲಿ ಶ್ರೀ ನವೀನ್ ಸೂರಿಂಜೆಯವರು ಹಾಜರಿದ್ದರು ಎಂದು ಉಲ್ಲೇಖಿಸಲಾಗಿದೆ.

ಶ್ರೀ ನವೀನ್ ಸೂರಿಂಜೆಯವರು ತಿಳಿಸಿರುವಂತೆ ವಸ್ತುಸ್ಥಿತಿ ಏನೆಂದರೆ ಅವರು ಯಾವುದೇ ರೀತಿಯಲ್ಲಿಯೂ ದುಷ್ಕೃತ್ಯವೆಸಗಿದ ವ್ಯಕ್ತಿಗಳ ಜೊತೆ ಸೇರಿಕೊಂಡಿಲ್ಲ. ಮಾಹಿತಿದಾರರೊಬ್ಬರಿಂದ ವಿಷಯ ತಿಳಿದು ಘಟನೆ ನಡೆದ ಸ್ಥಳಕ್ಕೆ ಒಬ್ಬ ಪತ್ರಕರ್ತರಾಗಿ ತಮ್ಮ ಉದ್ಯೋಗದ ಕರ್ತವ್ಯವನ್ನು ನಿರ್ವಹಿಸಲು ಧಾವಿಸಿದ್ದರು. ನಿಜವೆಂದರೆ ಒಬ್ಬ ಜವಾಬ್ದಾರಿಯುತ ಪತ್ರಕರ್ತರಾಗಿ ಅವರು ಘಟನೆಯನ್ನು ಚಿತ್ರೀಕರಿಸಿದ ಕಾರಣದಿಂದಲೇ ಸಾರ್ವಜನಿಕರ ಗಮನಕ್ಕೆ ಅಲ್ಲಿ ನಡೆದ ದುಷ್ಕೃತ್ಯ ಬರಲು ಸಾಧ್ಯವಾಗಿತ್ತು.

ನಂತರದ ದಿನಗಳಲ್ಲಿ ಮಾಧ್ಯಮಗಳು, ನವೀನ್ ಸೂರಿಂಜೆಯವರು ಮತ್ತು ಘಟನೆಯಲ್ಲಿ ಧಾಳಿಗೆ ಒಳಗಾದ ಯುವಕ ಯುವತಿಯರ ಹೇಳಿಕೆಗಳು ಪೋಲಿಸ ರ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಡೆಕ್ಕನ್ ಹೆರಾಲ್ಡ್ (“Homestay attack took place in front of police” –Aug11, 2012) ಮತ್ತು ದಿ ಹಿಂದೂ (“Police were a few meters away” – July 30, 2012) ಪತ್ರಿಕೆಗಳ ಈ ಲೇಖನಗಳು ಯುವಕ ಯುವತಿಯರ ಮೇಲೆ ಗುಂಪು ದುಷ್ಕೃತ್ಯ ಎಸಗುವಾಗ ಆ ಘಟನಾ ಸ್ಥಳದಲ್ಲಿ ನಿಶ್ಚಯವಾಗಿಯೂ ಪೋಲಿಸರು ಹಾಜರಿದ್ದರು ಎಂದು ನಮೂದಿಸಿರುತ್ತಾರೆ.

ಆದ್ದರಿಂದ ಇದು ಪ್ರಜ್ಞಾಪೂರ್ವಕವಾಗಿ ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕಲು ಪೋಲೀಸರು ಹೆಣೆದ ಸುಳ್ಳು ಆರೋಪವೆಂದು ನಾವು ಅಭಿಪ್ರಾಯ ಪಡುತ್ತೇವೆ.

ಒಬ್ಬ ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಪತ್ರಕರ್ತರಾಗಿ ಮತ್ತು ಸಭ್ಯ ನಾಗರೀಕರಾಗಿ ಶ್ರೀ ನವೀನ್ ಸೂರಿಂಜೆಯವರು ಹೋಂ ಸ್ಟೇ ಆವರಣದಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ತಮಗೆ ತಿಳಿದ ತಕ್ಷಣ ಪೋಲೀಸರ ಗಮನಕ್ಕೆ ತರಲು ನಡೆಸಿದ ಪ್ರಯತ್ನ ವಿಫಲವಾಯಿತೆಂದು ಘಟನೆ ನಡೆದ ಮಾರನೇದಿನ ನವೀನ್ ಸೂರಿಂಜೆ ಯವರು ನೀಡಿದ ಸಾರ್ವಜನಿಕ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ನವೀನ್ ಸೂರಿಂಜೆಯವರು ಮತ್ತು ಅವರ ಸಹೋದ್ಯೋಗಿಯವರು ಪಡೀಲ್ ವ್ಯಾಪ್ತಿಯ ಪೋಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅಲ್ಲಿಂದ ಯಾವುದೇ ಪ್ರತ್ಯುತ್ತರ ಬರಲಿಲ್ಲವೆಂದು ತಿಳಿಸಿದ್ದಾರೆ. ಪೋಲೀಸರು, ಸರ್ಕಾರ, ರಾಜ್ಯ ಮಹಿಳಾ ಆಯೋಗ ಮತ್ತು ನ್ಯಾಯಾಲಯಗಳು ಪ್ರಕರಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿದ್ದೇ ಈ ವರದಿಗಾರರ ಚಿತ್ರೀಕರಣದ ಮೂಲಕವೇ.

ಅಲ್ಲದೇ ನಿನ್ನೆಯ ಪತ್ರಿಕೆಗಳಲ್ಲಿ ವರದಿಯಾದಂತೆ ವಿಚಾರಣಾದೀನ ಕೈದಿಗಳನ್ನು ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆದದ್ದಲ್ಲದೇ ಕೋಳ ತೊಡಿಸಿ ಕರೆತರಬಾರದೆಂಬ ದೇಶದ ಸರ್ವೋಚ್ಛ ನ್ಯಾಯಾಲಯ ದ ಆದೇಶವನ್ನೂ ಧಿಕ್ಕರಿಸಿ ಸೂರಿಂಜೆ ಮತ್ತು ಇತರ ರನ್ನು ಕೋಳ ತೊಡಿಸಿ ವಿಚಾರಣೆಗೆ ಮತ್ತು ಹಿಂದೆ ಸೆರೆಮನೆಗೆ ಕರೆದೊಯ್ಯಲಾಗಿದೆ. ವಾಸ್ತವದಲ್ಲಿ ಸೂರಿಂಜೆಯವರು ಸರ್ವೋಚ್ಛ ನ್ಯಾಯಾಲಯದ ಈ ಆದೇಶದ ಬಗ್ಗೆ ಪೋಲೀಸರ ಗಮನಕ್ಕೆ ತಂದರೂ ಅದನ್ನು ಪೋಲೀಸರು ಗಣನೆಗೆ ತೆಗೆದುಕೊಳ್ಳಲಿಲ್ಲ. ನ್ಯಾಯಾಲಯದಲ್ಲಿ ಹಾಜರು ಪಡಿಸುವಾಗ ಮಾತ್ರ ಕೈಕೋಳ ಸಡಿಲಿಸಲಾಗಿದೆ.

ಒಬ್ಬ ವ್ಯಕ್ತಿ ತಮ್ಮ ಕರ್ತವ್ಯವನ್ನು ಪಾಲಿಸಿದ್ದಕ್ಕೆ ಪೋಲೀಸರು ನೀಡಿದ ಈ ಕೊಡುಗೆಯ ಬಗ್ಗೆ ನಮಗೆ ಬೇಸರವಿದೆ. ಇದು ದೇಶದ ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿ ಎಂದು ನಾವು ಭಾವಿಸುತ್ತೇವೆ. ಪ್ರತಿಕಾ ಸ್ವಾತಂತ್ರವನ್ನು ಗೌರವಿಸುವ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ನಾವು ಈ ವಿಷಯದಲ್ಲಿ ತಮ್ಮ ಮಧ್ಯಪ್ರವೇಶವನ್ನು ಕೋರುತ್ತೇವೆ ಮತ್ತು..

  1. ನವೀನ್ ಸೂರಿಂಜೆ ಯವರು ಮತ್ತು ಇತರ ಪತ್ರಕರ್ತರ ಮೇಲೆ ಹೊರಿಸಿರುವ ಸುಳ್ಳು ಆರೋಪಗಳನ್ನು ಕೈ ಬಿಡಬೇಕು.
  2. ಶ್ರೀ.ನವೀನ್ ಸೂರೀಂಜೆಯವರ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಅವರನ್ನೂ ದುಷ್ಕೃತ್ಯ ಎಸಗಿದವರ ಸಾಲಿಗೆ ಸೇರಿಸಿ ಚಾರ್ಜಷೀಟ್ ಹಾಕಿದ ಮತ್ತು ಸುಪ್ರೀಂ ಕೋರ್ಟ ನ ಆದೇಶವನ್ನು ಧಿಕ್ಕರಿಸಿ ಕೈಕೋಳ ಹಾಕಿದ ಪೋಲೀಸ್ ಅಧಿಕಾರಿಗಳನ್ನು ಶಿಕ್ಷಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ವಿನಂತಿಸುತ್ತೇವೆ.

ವಂದನೆಗಳೊಂದಿಗೆ,

ಡಾ.ಬರಗೂರು ರಾಮಚಂದ್ರಪ್ಪ, ಪ್ರೋ.ಜಿ.ಕೆ.ಗೋವಿಂದ ರಾವ್, ಪ್ರೋ.ಎಸ್.ಜಿ.ಸಿದ್ದರಾಮಯ್ಯ, ಶ್ರೀಮತಿ.ಬಿ,ಟಿ. ಲಲಿತಾನಾಯಕ್, ಟಿ.ಸುರೇಂದ್ರ ರಾವ್, ವಿಮಲಾ.ಕೆ.ಎಸ್.,  ಕೆ.ಎಸ್.ಲಕ್ಷ್ಮಿ.

2 thoughts on “ಬಿಡುಗಡೆಯಾಗದ ನವೀನ್ : ರಾಜ್ಯಪಾಲರಿಗೆ ಮನವಿ ಪತ್ರ

  1. anand prasad

    ರಾಷ್ಟ್ರೀಯ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಟಿವಿ ವಾಹಿನಿಗಳು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಫೇಸ್ಬುಕ್ ಕಮೆಂಟ್ ವಿಚಾರದಲ್ಲಿ ನಡೆದುಕೊಂಡು ಯುವತಿಯರ ಕಾನೂನುಬಾಹಿರ ಬಂಧನಕ್ಕೆ ಕಾರಣರಾದ ಮಹಾರಾಷ್ಟ್ರ ಪೋಲೀಸರ ವಿರುದ್ಧ ಕ್ಷಿಪ್ರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ದೇಶಾದ್ಯಂತ ಪೋಲೀಸರ ಕ್ರಮದ ವಿರುದ್ಧ ಭಾರೀ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಕೊನೆಗೂ ಮಹಾರಾಷ್ಟ್ರ ಸರ್ಕಾರ ಕಾನೂನಿನ ದುರ್ಬಳಕೆ ಮಾಡಿದ ಪೋಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿ ಬಂದಿದೆ. ಕರ್ನಾಟಕದ ಮಾಧ್ಯಮಗಳ ಅದರಲ್ಲೂ ಟಿವಿ ಮಾಧ್ಯಮಗಳ ದುರವಸ್ಥೆ ನೋಡಿ. ತನ್ನ ಕರ್ತವ್ಯ ನಿರ್ವಹಿಸಿದ ವರದಿಗಾರನನ್ನೇ ಪೊಲೀಸರು ಕಾನೂನುಬಾಹಿರವಾಗಿ ಬಂಧಿಸಿರುವಾಗಲೂ ಇದನ್ನೊಂದು ಪ್ರಧಾನ ವಿಷಯವನ್ನಾಗಿ ಮಾಡಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುತ್ತಿರುವ ಮಂಗಳೂರು ಪೋಲೀಸರ ವಿರುದ್ಧ ರಾಜ್ಯಾದ್ಯಂತ ಜನಾಭಿಪ್ರಾಯ ಮೂಡಿಸುವಲ್ಲಿ ಯಾವುದೇ ಟಿವಿ ವಾಹಿನಿಗಳು ಮುಂದಾಗಿಲ್ಲ ಎಂದರೆ ರಾಜ್ಯ ಟಿವಿ ಮಾಧ್ಯಮಗಳ ನಿಷ್ಕ್ರಿಯತೆ ಖಂಡನೀಯವಾದದ್ದು. ಕೆಲವೊಂದು ಅನಗತ್ಯ ವಿಚಾರಗಳನ್ನು ಎತ್ತಿಕೊಂಡು ಗಂಟೆಗಟ್ಟಲೆ ನೇರ ಪ್ರಸಾರದಲ್ಲಿ ಚರ್ಚಿಸುವ ಕನ್ನಡ ಟಿವಿ ವಾಹಿನಿಗಳು ತಮ್ಮ ಸಹೋದ್ಯೋಗಿಯೊಬ್ಬ ಪೊಲೀಸರಿಂದ ಅನ್ಯಾಯವಾಗಿ ಬಂಧನಕ್ಕೊಳಗಾಗಿರುವಾಗ ನಡೆದುಕೊಳ್ಳುತ್ತಿರುವ ರೀತಿ ನಾಚಿಕೆಗೇಡಿನದು. ಟಿವಿ ವಾಹಿನಿಗಳು ಈ ವಿಚಾರದಲ್ಲಿ ಜನಜಾಗೃತಿ ಮೂಡಿಸಿದ್ದರೆ ಸರ್ಕಾರದ ಅನ್ಯಾಯದ ವಿರುದ್ಧ ಭಾರೀ ಜನಾಕ್ರೋಶ ಸ್ಪೋಟಗೊಳ್ಳುತ್ತಿತ್ತು ಹಾಗೂ ಸರ್ಕಾರ ಕಾನೂನು ದುರುಪಯೋಗಪಡಿಸಿಕೊಂಡ ಪೋಲೀಸರ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಬರುತ್ತಿತ್ತು. ರಾಜ್ಯದ ಟಿವಿ ಮಾಧ್ಯಮಗಳಿಗೆ ಬಡಿದಿರುವ ರೋಗವಾದರೂ ಏನು ಎಂಬ ಬಗ್ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು ಯೋಚಿಸಲೇಬೇಕಾಗಿದೆ.

    Reply
  2. nagraj.harapanahalli

    ಸ್ವಾತಂತ್ರ್ಯದ ಹಕ್ಕಿಯನ್ನ ಬಂಧಿಸಿಡಲು ಅಸಾಧ್ಯ .

    Reply

Leave a Reply

Your email address will not be published. Required fields are marked *