Monthly Archives: March 2013

ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆ


– ಚಿದಂಬರ ಬೈಕಂಪಾಡಿ


 

ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದುಹೋಯಿತು. ಈಗ ಯಾರ ಗೆಲುವು- ಯಾರ ಸೋಲು ಎನ್ನುವ ಕುತೂಹಲ. ಅಧಿಕಾರಕ್ಕೆ ಏರಲು ಬೇಕಾಗುವಷ್ಟು ಸಂಖ್ಯಾಬಲ ಸಿಗುವುದೇ? ಒಂದು ವೇಳೆ ಸಿಗದಿದ್ದರೆ ಮುಂದೇನು? ಎನ್ನುವಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ನಾಯಕರು ಮುಂದಾಗುವ ಕಾಲ.

ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ನಿಜಕ್ಕೂ ಸೆಮಿಫೈನಲ್. ಇದರಲ್ಲಿ ಮತದಾರರ ನಾಡಿ ಮಿಡಿತ ಸಿಗಬಹುದೇ ಹೊರತು ಫಲಿತಾಂಶವಲ್ಲ. ಯಾಕೆಂದರೆ ಈಗ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾದವೀ ಕಲಹವೇ ಹೆಚ್ಚು ನಡೆದಿದೆ. ಒಂದೇ ಪಕ್ಷದವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದಾರೆ. ನಾಯಕರು ತಮ್ಮ ಅನುಕೂಲಕ್ಕೆ ತಮಗೆ ಬೇಕಾದವರನ್ನಿ ಬೆಂಬಲಿಸಿ, ತಮಗಾಗದವರನ್ನು ಸದೆ ಬಡಿಯಲು ಬಳಸಿಕೊಂಡಿರುವಂಥ ಸಾಧ್ಯತೆಯೂ ಇದೆ. voteಕೆಲವೊಮ್ಮೆ ತಮ್ಮೊಳಗೇ ಪೈಪೋಟಿ ನಡೆಸಿ ಜನರ ಮನ ಗೆಲ್ಲುವ ಸಾಹಸವನ್ನೂ ಮಾಡಿದ್ದಾರೆ. ಆದ್ದರಿಂದ ಇಲ್ಲಿ ಬರುವ ಫಲಿತಾಂಶ ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರಬಹುದು ನಿಶ್ಚಿತವಾಗಿಯೂ. ಆದರೆ ಸ್ಥಳೀಯ ಸಂಸ್ಥೆಯಲ್ಲಿ ಒಂದೇ ಪಕ್ಷದಿಂದ ಸ್ಪರ್ಧಿಸಿ ಸೋತವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸೋಲನ್ನು ಒಪ್ಪಿಕೊಂಡು ವಿಧಾನಸಭೆಗೆ ಸ್ಪರ್ಧಿಸುವವರಿಗೆ ಮನಸಾರೆ ಬೆಂಬಲಿಸುವರೇ ಎನ್ನುವುದೂ ಕೂಡಾ ಬಹಳ ಮುಖ್ಯವಾಗುತ್ತದೆ. ಈ ಕಾರಣದಿಂದ ಸೋತವರನ್ನು ಸಮಾಧಾನಪಡಿಸಿಕೊಂಡು ಹಿಡಿತದಲ್ಲಿಟ್ಟುಕೊಳ್ಳುವ ಕೆಲಸವನ್ನು ವಿಧಾನಸಭೆಗೆ ಸ್ಪರ್ಧಿಸುವವರು ಮೊದಲು ಮಾಡಬೇಕಾಗುತ್ತದೆ.

ಬಹುತೇಕ ಚರ್ಚೆ ಮಾಡದಿರುವ ಅಂಶವೆಂದರೆ ಸ್ಥಳೀಯ ಸಂಸ್ಥೆಯಲ್ಲಿ ಬರುವ ಫಲಿತಾಂಶದ ಹಿನ್ನೆಲೆ ಏನು ಎನ್ನುವುದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಣಬಲ, ತೋಳ್ಬಲ, ಅಧಿಕಾರ ಬಲ, ವೈಯಕ್ತಿಕ ವರ್ಚಸ್ಸು ಹೀಗೆ ಹಲವು ಆಯಾಮಗಳಲ್ಲಿ ಫಲಿತಾಂಶವನ್ನು ವಿಶ್ಲೇಷಿಸಬೇಕಾಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆ ಯಾವುದೇ ಪಕ್ಷದ ಮೂಲ ಸೈದ್ಧಾಂತಿಕ ನೆಲೆಯಲ್ಲಿ ನಡೆದಿಲ್ಲ. ಪಕ್ಷದ ಸೈದ್ಧಾಂತಿಕ ಚೌಕಟ್ಟಿನಿಂದ ಹೊರಗೆ ಕದನ ನಡೆದಿದೆ. ಪಕ್ಷದ ಸೈದ್ಧಾಂತಿಕ ನೆಲೆಗಟ್ಟಿನಲ್ಲೇ ಚುನಾವಣೆ ನಡೆದಿದ್ದರೆ ಅದನ್ನು ಮುಂದಿನ ವಿಧಾನಸಭಾ ಚುನಾವಣೆಯ ಪರಿಪೂರ್ಣ ಮುನ್ಸೂಚನೆ ಎನ್ನಬಹುದಿತ್ತು. ಹಾಗೆ ಆಗದಿರುವ ಕಾರಣ ಈ ಫಲಿತಾಂಶವನ್ನೇ ಗಟ್ಟಿಯಾಗಿ ಯಾವುದೇ ಪಕ್ಷ ಅಥವಾ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ ಅಪ್ಪಿಕೊಳ್ಳುವಂತಿಲ್ಲ. ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆ ತೀರಾ ವೈಯಕ್ತಿಕ ಪ್ರತಿಷ್ಠೆ, ಪ್ರಭಾವದ ರೂಪ. ಅದು ವಿಧಾನಸಭೆ ಚುನಾವಣೆ ಕಾಲಕ್ಕೆ ಬೇರೆಯೇ ರೂಪ ತಳೆಯಬಹುದು ಅಥವಾ ಪಲ್ಲಟವಾಗಲೂ ಬಹುದು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಜನರ ಭಾವನೆಗಳನ್ನು ಈ ಫಲಿತಾಂಶದ ಮೂಲಕ ಅರ್ಥಮಾಡಿಕೊಳ್ಳಬಹುದು ಎನ್ನುವ ಸ್ಥೂಲವಾದ ಅಂಶವನ್ನು ಬಿಟ್ಟರೆ ಅದೇ ಅಂತಿಮ ಎನ್ನುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ಮತಗಳು ಹರಿದು ಹಂಚಿಹೋಗುವುದರಿಂದ ಬಹುಮತ ಎನ್ನುವುದು ಸ್ಥಳೀಯವಾಗಿಯೇ ನಿರ್ಧಾರವಾಗುವ ಅನಿವಾರ್ಯತೆ ಬರುತ್ತದೆ. ನಿಚ್ಚಳ ಬಹುಮತವನ್ನು ಯಾವುದೇ ಪಕ್ಷ ನಿರೀಕ್ಷೆ ಮಾಡಬಹುದೇ ಹೊರತು ಬರದಿದ್ದರೆ ಆಘಾತಗೊಳ್ಳಬೇಕಾಗಿಲ್ಲ. ಯಾಕೆಂದರೆ ಈ ಚುನಾವಣೆಯ ಹಿನ್ನೆಲೆಯೇ ಆಗಿದೆ. ಹೀಗಾದಾಗ ಅನುಕೂಲಸಿಂಧು ರಾಜಕಾರಣವೇ ಮುಖ್ಯವಾಗುತ್ತದೆ. ಮೌಲ್ಯಾಧಾರಿತ ರಾಜಕಾರಣವನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೆ ಪಕ್ಷ ಮಾಡಿಲ್ಲ ಮತ್ತು ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಹಾಗಾದರೆ ಅಧಿಕಾರ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಮತ್ತೆ ಹೊಂದಾಣಿಕೆ ಸೂತ್ರಕ್ಕೆ ರಾಜಕೀಯ ಪಕ್ಷಗಳು ಮನಸ್ಸು ಮಾಡಬೇಕಾಗುತ್ತದೆ. ಯಾವುದೇ ಪಕ್ಷ ತನ್ನ ಮೌಲ್ಯ, ಸೈದ್ಧಾಂತಿಕ ನೆಲೆಗಟ್ಟನ್ನು ಇಟ್ಟುಕೊಂಡೇ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರಕ್ಕೇರುವುದು ಸಾಧ್ಯವಿಲ್ಲ. ಸಮಾನಮನಸ್ಕರು ಎನ್ನುವುದೂ ಕೂಡಾ ಸುಳ್ಳು ಮತ್ತು ಆತ್ಮವಂಚನೆಯ ಮಾತಾಗುತ್ತದೆ. ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು 20 ತಿಂಗಳು ಅಧಿಕಾರ ನಡೆಸಿದ್ದಾಗಲೇ ರಾಜಕೀಯದಲ್ಲಿ ಸೈದ್ಧಾಂತಿಕ ನೆಲೆಗಟ್ಟು ಎನ್ನುವುದು ಕೇವಲ ರಾಜಕೀಯ ಪಂಡಿತರ ವ್ಯಾಖ್ಯೆಗೆ ಮಾತ್ರ ಸೀಮಿತವೆನಿಸಿತು. ಆನಂತರದ ರಾಜಕೀಯ ಬೆಳವಣಿಗೆಗಳು, ಆಪರೇಷನ್ ಕಮಲ ರಾಜಕೀಯದ ಸೈದ್ಧಾಂತಿಕ ನೆಲೆಗಟ್ಟನ್ನೇ ಸುಳ್ಳು ಮಾಡಿದವು. ಸೆಕ್ಯೂಲರ್ ಎನ್ನುವ ಪದಕ್ಕೆ ಡಿಕ್ಷನರಿಯಲ್ಲಿ ಅರ್ಥ ಹುಡುಕಬೇಕೇ ಹೊರತು ರಾಜಕೀಯದಲ್ಲಿ ಅದನ್ನು ಮಾನದಂಡವಾಗಿ ಬಳಕೆ ಮಾಡಬಾರದು ಎನ್ನುವಷ್ಟರಮಟ್ಟಿಗೆ ಅರ್ಥ ಕಳಕೊಂಡಿತು. ‘ಸೂಡೋ ಸೆಕ್ಯೂಲರಿಸಂ’ ಎನ್ನುವ ಪದವನ್ನು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಅನೇಕ ವರ್ಷಗಳ ಕಾಲ ಬಳಸಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಅವರೂ ಈ ಪದವನ್ನು ಬಳಕೆ ಮಾಡುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಫಲಿತಾಂಶದ ನಂತರ ಯಾರು ಅಧಿಕಾರಕ್ಕೇರಬಹುದು ಎನ್ನುವ ಪ್ರಶ್ನೆ ಹಾಕಿಕೊಂಡರೆ ಯಾರು ಬೇಕಾದರೂ ಅಧಿಕಾರಕ್ಕೇರಲು ಸಾಧ್ಯ ಎನ್ನಬಹುದೇ ಹೊರತು ಇಂಥವರು ಮಾತ್ರ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೇರುತ್ತಾರೆ ಎನ್ನುವುದು ಅರ್ಥಹೀನ. ಆದ್ದರಿಂದ ಹೀಗೆಯೇ ಆಗುತ್ತದೆ, ಆಗಬೇಕು ಎನ್ನುವ ಊಹೆಯೇ ತಪ್ಪು ಈಗಿನ ರಾಜಕೀಯದಲ್ಲಿ. ಸೈದ್ಧಾಂತಿಕ ನೆಲೆಯನ್ನು ಹುಡುಕದೆ, ಈ ಕ್ಷಣದ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ಹೊಂದಾಣಿಕೆ ರಾಜಕೀಯ ಮೇಲುಗೈ ಸಾಧಿಸುತ್ತದೆ. ಇದನ್ನು ರಾಜಕೀಯದ ಅಪಮೌಲ್ಯ ಎಂದೂ ಕರೆಯಬಹುದು ಆದರೆ ಅದು ಅನಿವಾರ್ಯವಾಗಿತ್ತು ಎನ್ನುವ ಘಟ್ಟಕ್ಕೆ ಬಂದು ನಿಲ್ಲುತ್ತದೆ.

ಜನ ಕೂಡಾ ರಾಜಕೀಯ ಅಪಮೌಲ್ಯದ ಭಾಗವಾಗಿಯೋ, ಅನಿವಾರ್ಯವಾಗಿಯೋ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಬಿಟ್ಟಿದ್ದಾರೆ. ಅದು ಅವರಿಗೂ ಅನಿವಾರ್ಯ. election_countingಇಂಥ ಅನಿವಾರ್ಯತೆಯೇ ಅನಿಶ್ಚಿತ ರಾಜಕೀಯಕ್ಕೆ, ಫಲಿತಾಂಶಕ್ಕೆ ಕಾರಣವಾಗಿದೆ. ಹಣ, ಹೆಂಡವನ್ನು ಅನುಭವಿಸುತ್ತಲೇ ಅದರ ವಿರುದ್ಧ ಮಾತನಾಡುವುದು ಆತ್ಮವಂಚನೆ. ರಾಜಕೀಯದಲ್ಲಿ ಅಪವಿತ್ರ ಮೈತ್ರಿಯನ್ನು ಅನಿವಾರ್ಯತೆಯ ಹೆಸರಲ್ಲಿ ಒಪ್ಪಿಕೊಳ್ಳುವುದೂ ಕೂಡಾ ಅನೈತಿಕತೆ. ಆದ್ದರಿಂದ ಈ ಎಲ್ಲಾ ವ್ಯವಸ್ಥೆಗಳ ಉತ್ಪನ್ನವಾಗಿರುವ ಜನ, ರಾಜಕಾರಣಿಗಳು, ರಾಜಕಾರಣ, ಸಿದ್ಧಾಂತವನ್ನು ಬೇರ್ಪಡಿಸಿಕೊಂಡು ಬಿಡಿಬಿಡಿಯಾಗಿ ನೋಡುವುದು ಸಾಧ್ಯವಿಲ್ಲ. ಹೀಗಾಗಿ ಈ ಸ್ಥಳೀಯ ಸಂಸ್ಥೆಗೆಳ ಚುನಾವಣೆ ಫಲಿತಾಂಶದ ಮುಂದುವರಿದ ಭಾಗ ಅಧಿಕಾರ ಗ್ರಹಣ ಇಂಥದ್ದೇ ಸಮೀಕರಣಗಳ ಉಪಉತ್ಪನ್ನಗಳು ಎಂದಷ್ಟೇ ಕರೆಯಬಹುದು.

ನೀಚ ಪತ್ರಕರ್ತರು ಹೆಚ್ಚಾಗುತ್ತಲೇ ಇದ್ದಾರೆ

ರವಿ ಕೃಷ್ಣಾರೆಡ್ಡಿ

ಇಂದಿಗೆ ನವೀನ್ ಸೂರಿಂಜೆ ಜೈಲಿಗೆ ಹೋಗಿ ನಾಲ್ಕು ತಿಂಗಳಾಯಿತು. ಒಬ್ಬ ಅಯೋಗ್ಯ ಮತ್ತು ನ್ಯಾಯಪ್ರಜ್ಞೆ ಇಲ್ಲದ ಮುಖ್ಯಮಂತ್ರಿಯ ಕಾರಣದಿಂದಾಗಿ ಸೂರಿಂಜೆ ಇನ್ನೂ ಬಿಡುಗಡೆ ಆಗಿಲ್ಲ. ಅಮೇಧ್ಯದಲ್ಲಿ ಅಧಿಕಾರ ಮತ್ತು ದುಡ್ಡು ಸಿಕ್ಕರೂ ಅದನ್ನು ನಾಲಿಗೆಯಲ್ಲಿ ನೆಕ್ಕಿ ಬಾಚಿಕೊಳ್ಳುವವರೆಲ್ಲ ನಮ್ಮ ರಾಜಕೀಯ ನಾಯಕರಾಗಿರುವಾಗ ಬಹುಶಃ ಇದಕ್ಕಿಂತ ಬೇರೆಯದನ್ನು ನಿರೀಕ್ಷಿಸುವುದು ಅಸಮಂಜಸವೇನೊ.

ಇದೇ ಸಮಯದಲ್ಲಿ ರಾಜ್ಯದ ಪತ್ರಕರ್ತರ ಸಂಘಟನೆಗಳೂ ಮಾಡಬೇಕಾದಷ್ಟು ಮಾಡಲೇ ಇಲ್ಲ. naveen-soorinjeನಾಯಕತ್ವ ತೆಗೆದುಕೊಳ್ಳುವುದಕ್ಕೆ ಸಿದ್ದರಿಲ್ಲದವರೇ ಅಲ್ಲಿ ತುಂಬಿಕೊಂಡಿರುವಾಗ ಇನ್ನೇನನ್ನು ನಿರೀಕ್ಷಿಸಬಹುದು? ಹಾಗೆಂದು ಇವರ್ಯಾರಿಗೂ ಅಧಿಕಾರ ಇಲ್ಲವೆಂದಾಗಲಿ, ಸಂಪರ್ಕಜಾಲ ಇಲ್ಲವೆಂದಾಗಲಿ ಅಲ್ಲ. ಈ ಸಂಘಟನೆಗಳ ಅಧಿಕಾರ ಸ್ಥಾನದಲ್ಲಿರುವ ಬಹುತೇಕರು ಬಹಳ ಶಕ್ತಿಶಾಲಿಗಳು, ನೇರವಾಗಿ ಒಬ್ಬ ಮಂತ್ರಿ ಅಥವ ಮುಖ್ಯಮಂತ್ರಿಯ ಬಳಿಗೆ ಹೋಗಿ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡು ಬರುವವರು. ಆದರೆ, ತಮ್ಮವನೇ ಆದ ಒಬ್ಬ ಪತ್ರಕರ್ತ ನಿರಪರಾಧಿಯಾಗಿದ್ದರೂ ಜೈಲಿನಲ್ಲಿ ಕೊಳೆಯುತ್ತಿರುವಾಗ, ಆತನ ಮೇಲಿನ ಸುಳ್ಳು ಆರೋಪಗಳನ್ನು ಕ್ಯಾಬಿನೆಟ್ ಕೈಬಿಡುವ ನಿರ್ಧಾರ ಮಾಡಿದ ಮೇಲೂ ಮುಖ್ಯಮಂತ್ರಿ ಅದಕ್ಕೆ ನಾಮಕಾವಸ್ಥೆ ಸಹಿ ಮಾಡುವುದನ್ನು ಮಾಡದೇ ಇರುವಾಗ ಈ ಸಂಘಟನೆಗಳಿಗೆ ಮುಖ್ಯಮಂತ್ರಿಯ ಮೇಲೆ ಒತ್ತಡ ತರಲಾಗುವುದಿಲ್ಲ ಎಂದರೆ, ಅದು ಅವರಿಗೆ ಬೇಕಾಗಿಲ್ಲ ಎಂದೇ ಅರ್ಥ. ನಮ್ಮ ಸಮಾಜದಲ್ಲಿ ರಾಜಕೀಯ ಕ್ಷೇತ್ರ ಮಾತ್ರವೇ ಕೆಟ್ಟಿಲ್ಲ. ಸಮಾಜದ ಪ್ರತಿಯೊಂದು ವಿಭಾಗದಲ್ಲೂ ಅರ್ಬುದ ರೋಗ ಒಳಗಿನಿಂದಲೇ ಕೊಲ್ಲುತ್ತಿದೆ.

ಹಾಸನದ “ದಿ ಹಿಂದೂ” ಪತ್ರಿಕೆಯ ವರದಿಗಾರರಾದ ಸತೀಶ ಜಿ.ಟಿ. ನನಗೆ ವೈಯಕ್ತಿವಾಗಿಯೂ ಪರಿಚಿತರು. ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕ ಮತ್ತು ಆದರ್ಶವಾದಿ ಪತ್ರಕರ್ತ. ಈ ಹಿಂದೆ ಅವರು ಡೆಕ್ಕನ್ ಹೆರಾಲ್ಡ್‌ನಲ್ಲಿದ್ದಾಗ ಬಿಡಿಎದ ಅಕ್ರಮ ಜಿ-ಕೆಟಗರಿ ಸೈಟುಗಳ ಬಗ್ಗೆ, ಮನೆ-ಸೈಟು ಇರುವ ಶಾಸಕ-ಸಂಸದರೆಲ್ಲ ನಮಗೆ ಬೆಂಗಳೂರಿನಲ್ಲಿ ಮನೆ-ಸೈಟಿಗೆ ಗತಿ ಇಲ್ಲ ಎಂದು ಅಕ್ರಮ ಅಫಿಡವಿಟ್ ಸಲ್ಲಿಸಿ ನಾಲ್ಕೈದು ಕೋಟಿ ರೂಪಾಯಿ ಬೆಲೆಯ ಸೈಟುಗಳನ್ನು ಏಳೆಂಟು ಲಕ್ಷಗಳಿಗೆ ಹೊಡೆದುಕೊಂಡಿದ್ದರ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಉತ್ತರ ಕರ್ನಾಟಕದಲ್ಲಿ ಅಸಾಮಾನ್ಯವಾದ ಮಳೆ ಬಂದು ಪ್ರವಾಹ ಉಕ್ಕೇರಿ ಜನರ ಬದುಕುಗಳು ನೆರೆಯಲ್ಲಿ ಕೊಚ್ಚಿ ಹೋದಾಗ ಅದರ ಬಗ್ಗೆ ವಾರಗಟ್ಟಲೆ ಪ್ರವಾಸ ಮಾಡಿ ವರದಿ ಮಾಡಿದ್ದರು. ಈಗ ಸುಮಾರು ಎರಡು ವರ್ಷಗಳಿಂದ ಈ ಪ್ರತಿಭಾವಂತ ಪತ್ರಕರ್ತ ಹಾಸನದಲ್ಲಿದ್ದಾರೆ. ಇಂತಹ ಒಬ್ಬ ಪತ್ರಕರ್ತ ತಮ್ಮ ನಡುವೆ ಇರುವುದೇ ಒಂದು ಹೆಮ್ಮೆ ಎಂದು ಭಾವಿಸದ ಅಲ್ಲಿನ ಪತ್ರಕರ್ತರ ಸಂಘ ಮತ್ತು ಅದರ ಅಧ್ಯಕ್ಷರು ಸತೀಶ್ ತಮ್ಮ ವಿರುದ್ದ ಸಕಾರಣವಾಗಿ ನೀಡಿದ ದೂರಿನ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ಸಂಘವನ್ನು ದುರುಪಯೋಗಪಡಿಸಿಕೊಂಡು ನೋಟಿಸ್ ಕೊಡುತ್ತಾರೆ. ಸತ್ಯ ಹೇಳಿದ್ದಕ್ಕೆ ಬೇಷರತ್ತಾಗಿ ಕ್ಷಮೆ ಕೇಳಬೇಕು ಎನ್ನುತ್ತಾರೆ. Satish_GTಒಬ್ಬ ಪತ್ರಕರ್ತನಿಗೆ ಪತ್ರಿಕಾಗೋಷ್ಟಿಗೆ ಬರಬೇಡಿ ಎನ್ನುವ ಅಹಂಕಾರ ಮತ್ತು ದರ್ಪ ತೋರಿಸುತ್ತಾರೆ. ಬಹಿಷ್ಕಾರದ ಮಾತನ್ನಾಡುತ್ತಾರೆ. ಇವರೆಂತಹ ಪತ್ರಕರ್ತರು? ಈ ಮನೋಭಾವವೊಂದೇ ಸಾಕು ಈ ಅಧ್ಯಕ್ಷೆ ಪ್ಯಾಕೇಜ್-ನ್ಯೂಸ್, ಪೇಯ್ಡ್ ನ್ಯೂಸ್‌ನಲ್ಲಿ ಮುಂದಿದ್ದಾರೆ ಎಂದು ಭಾವಿಸಿಕೊಳ್ಳಲು. ಅಷ್ಟೇ ಅಲ್ಲ, ಇವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ಅದನ್ನು ಮತ್ತಷ್ಟು ಬಯಲುಗೊಳಿಸಿಕೊಳ್ಳದೇ ಪಶ್ಚಾತ್ತಾಪದ ಮೂಲಕವೇ ಸರಿಪಡಿಸಿಕೊಳ್ಳೋಣ ಎನ್ನುವ ಜ್ಞಾನವಿಲ್ಲದ ಮತಿಹೀನರೆಲ್ಲ ಸಂಘಗಳ ಮುಖ್ಯಸ್ಥರಾಗಿಬಿಡುತ್ತಾರೆ, ಪದಾಧಿಕಾರಿಗಳಾಗಿಬಿಡುತ್ತಾರೆ.

ಇನ್ನು ಈ ಹಾಸನದ ಪತ್ರಕರ್ತರ ಸಂಘದ ಉಳಿದ ಪದಾಧಿಕಾರಿಗಳಾದರೂ ಎಂತಹವರು? ಅವರೂ ತಮ್ಮ ಅಧ್ಯಕ್ಷೆಯ ಅಭಿಪ್ರಾಯವನ್ನು ಅನುಮೋದಿಸುವವರೇ ಆದರೆ, ಅವರೂ ನಾಚಿಕೆಪಟ್ಟುಕೊಳ್ಳಬೇಕು. ಹಾಗೆಯೇ, ಆ ಸಂಘದ ಸದಸ್ಯರು ಕಟು ಪ್ರತಿಭಟನೆಯ ಮೂಲಕ ಸಂಘದ ಅಯೋಗ್ಯ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಂದ ರಾಜೀನಾಮೆ ಕೊಡಿಸಿ ತಮ್ಮ ಪ್ರಾಮಾಣಿಕತೆ, ವೃತ್ತಿಪರತೆ, ನ್ಯಾಯಪರತೆಯನ್ನು ನಿರೂಪಿಸಬೇಕು. ಆ ಜವಾಬ್ದಾರಿ ಅಲ್ಲಿಯ ಸಂಘದ ಸದಸ್ಯರ ಮೇಲೆಯೇ ಇದೆ.

ಇನ್ನು, ವಿಷುಯಲ್ ಮೀಡಿಯಾದ ಪತ್ರಕರ್ತರ ಬಗ್ಗೆ. ನಮ್ಮ ಭಾಷೆಯ ಅನೇಕ ಟಿವಿ ನಿರೂಪಕರು ಅಹಂಕಾರಿಗಳು, ಅಜ್ಞಾನಿಗಳು, ಭ್ರಷ್ಟರು. ಇದು ಬಹುತೇಕರಿಗೆ ಗೊತ್ತಿರುವ ವಿಚಾರವೇ. ಆದರೆ ಇದಿಷ್ಟೇ ಅಲ್ಲ. ಇವರಲ್ಲಿ ಕೆಲವರು ಕೊಲೆ ಮಾಡಿಸಲು ಸುಪಾರಿ ಕೊಡುವಂತಹ ಕ್ರಿಮಿನಲ್‌ಗಳೂ ಇದ್ದಾರೆ. ಈ ವಿಚಾರ ನೆನ್ನೆಯ “ದಿ ಹಿಂದೂ” ಪತ್ರಿಕೆಯಲ್ಲಿ ಬಂದಿದೆ. ಅವರು ಆ ವ್ಯಕ್ತಿಯ ಹೆಸರು ಮತ್ತು ಆತ ಕೆಲಸ ಮಾಡುತ್ತಿದ್ದ ಚಾನಲ್‌ನ ಬಗ್ಗೆ ಹೇಳಿಲ್ಲ. ಆದರೆ ಈ ವಿಷಯ ಬಹುಶಃ ಕನ್ನಡದ ಯಾವುದೇ ಪತ್ರಿಕೆಯಲ್ಲಿ ಬಂದ ಹಾಗೆ ಕಾಣುವುದಿಲ್ಲ. ನಮ್ಮ ಕನ್ನಡ ಪತ್ರಿಕೆಗಳಿಗೆ ಏಕಿಷ್ಟು ಭಯವೋ ಅರ್ಥವಾಗುತ್ತಿಲ್ಲ.

ನನಗೆ ಗೊತ್ತಾದ ಹಾಗೆ ಆ ಕ್ರಿಮಿನಲ್ ಪತ್ರಕರ್ತನ ಕ್ರೌರ್ಯದ ಕೈಗಳು ಬಹಳ ಉದ್ದವಿವೆ. ಆತನಿಗೆ ಮಾಜಿ ಮುಖ್ಯಮಂತ್ರಿ, ಹಾಲಿ ಮಂತ್ರಿಗಳೆಲ್ಲ ಆಪ್ತರಂತೆ. ಈತನ ಅಪ್ಪನಿಗೆ ಈ ಪತ್ರಕರ್ತ ತಮ್ಮ ಚೇಲಾ ಎಂಬ ಕಾರಣಕ್ಕೆ, ತನ್ನ ಜಾತಿಯವ ಎನ್ನುವ ಕಾರಣಕ್ಕೆ ಮಾಜಿ hindu_tv_anchor_060313ಮುಖ್ಯಮಂತ್ರಿ ಜಿ-ಕೆಟಗರಿ ಸೈಟು ಕೊಟ್ಟು ಪುರಸ್ಕರಿಸಿದ್ದಾರಂತೆ. ಇಲ್ಲೆಲ್ಲ ನಾನು “ಅಂತೆ” ಎಂದು ಬರೆಯುತ್ತಿದ್ದರೂ ಇವೆಲ್ಲ ಅಂತೆಕಂತೆಗಳೇನೂ ಅಲ್ಲ. ಇಂತಹ ಕ್ರಿಮಿನಲ್ ಪತ್ರಕರ್ತ ನಮ್ಮ ರಾಜ್ಯದ ನಂಬರ್ ಒನ್ ಚಾನಲ್‌ನಲ್ಲಿ ಮುಖ್ಯ ನಿರೂಪಕನಾಗಿ ಕಾಣಿಸಿಕೊಳ್ಳುತ್ತಾನೆ ಎಂದರೆ ಅದು ನಮ್ಮ ಮಾಧ್ಯಮಲೋಕದ ಅಧೋಗತಿಗೆ ಸಾಕ್ಷಿ. ಈತ ಇಷ್ಟರಲ್ಲೇ ಸೆರೆ ಆಗಬಹುದು ಎನ್ನುತ್ತವೆ ಮೂಲಗಳು. ಆದರೆ ಆತ ಬಚಾವಾಗಲೂಬಹುದು, ಅಷ್ಟು ಪ್ರಭಾವಶಾಲಿ ಎನ್ನುತ್ತಾರೆ ನನಗೆ ತಿಳಿದವರು.

ನಮ್ಮ ರಾಜಕೀಯ ಕ್ಷೇತ್ರದ ಬಹುಶಃ ಇನ್ನೊಂದು ಐದು-ಹತ್ತು ವರ್ಷಗಳಲ್ಲಿ ಶುದ್ಧವಾಗಬಹುದು ಎನ್ನುವ ನಂಬಿಕೆ ನನಗಿದೆ. ಆದರೆ, ರಾಜ್ಯದ ಮಾಧ್ಯಮಲೋಕ ಶುದ್ದವಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಬಹುಶಃ ಇಲ್ಲಿಯೇ ವರ್ತಮಾನ.ಕಾಮ್‌ನ ಹೆಚ್ಚುವರಿ ಜವಾಬ್ದಾರಿ ಇದೆ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಲೋಕದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ನಮ್ಮಷ್ಟು ಕನ್ನಡಿ ಹಿಡಿದವರು ಯಾರೂ ಇರಲಿಕ್ಕಿಲ್ಲ. ಪ್ರಾಮಾಣಿಕ ಪತ್ರಕರ್ತರು ಸಾಂಘಿಕವಾಗಿ ಈ ಕೆಲಸಕ್ಕೆ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನೀಚ ಪತ್ರಕರ್ತರನ್ನು ವ್ಯವಸ್ಥೆಯಿಂದ ನಿವಾರಿಸಿಕೊಳ್ಳುವ ಅನಿವಾರ್ಯತೆ ಈ ಸಮಾಜಕ್ಕೆ ಸೃಷ್ಟಿಯಾಗಿದೆ.

ಸ್ಥಳೀಯ ಸಂಸ್ಥೆ : ಮತಗಟ್ಟೆಯತ್ತ ಮುಖ ಮಾಡಬೇಕು


-ಚಿದಂಬರ ಬೈಕಂಪಾಡಿ


 

ರಾಜ್ಯದ ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎನ್ನುವುದನ್ನು ನಿರ್ಧರಿಸಲು ಜನತೆಗೆ ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರ ಸಿಕ್ಕಿದೆ. ಅದನ್ನು ಈಗ ಚಲಾಯಿಸುವ ಹೊಣೆಗಾರಿಕೆ ಜನರದ್ದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಮ್ಮನ್ನು ಯಾರು ಆಳಬೇಕು ಎನ್ನುವುದನ್ನು ಮತದಾರ ಮತ ಚಲಾಯಿಸುವ ಮೂಲಕ ನಿರ್ಧರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಜನರ ದಿನನಿತ್ಯದ ಬದುಕಿಗೆ ತೀರ ಹತ್ತಿರವಾದವು. ವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಹೆಚ್ಚು ಜನರಿಗೆ ಹತ್ತಿರವಾದವು. ಜನಸಾಮಾನ್ಯರು ತಮ್ಮ ದೈನಂದಿನ ಆವಶ್ಯಕತೆಗಳಿಗೆ ಅವಲಂಬಿಸಿರುವುದೂ ಕೂಡಾ ಸ್ಥಳೀಯ ಸಂಸ್ಥೆಗಳನ್ನೇ. ಆದ್ದರಿಂದ ಈ ಚುನಾವಣೆಯನ್ನು ಅವಗಣನೆ ಮಾಡುವಂತಿಲ್ಲ.

ಮತದಾರರ ಮುಂದೆ ಅಭ್ಯರ್ಥಿಗಳು ಕಾಣಿಸಿಕೊಂಡಿದ್ದಾರೆ. ಹಿಂದಿನವರ್ಷವೂ ಇವರೇ ಕಾಣಿಸಿಕೊಂಡಿರಬಹುದು, voteಈ ವರ್ಷವೂ ಅವರೇ ಮತ್ತೆ ನಿಮ್ಮ ಮತಗಳಿಗಾಗಿ ಕಾತುರರಾಗಿರಬಹುದು. ಆದರೆ ಅವರ ಭವಿಷ್ಯ ನಿರ್ಧರಿಸುವವರು ನೀವು. ನಿಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲ, ನಿಮಗೆ ಸಾದಾ ನೆರಳಾಗಿ ನಿಲ್ಲಬಲ್ಲವರೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಜನ ಸಾಮಾನ್ಯರಿಗೆ ಬೇಕಾಗಿರುವುದು ಜನರ ಸೇವೆ ಮಾಡುವಂಥ ಉತ್ಸಾಹಿಗಳು. ಕುಡಿಯುವ ನೀರು, ನಡೆದಾಡಲು ವ್ಯವಸ್ಥಿತ ರಸ್ತೆ, ದಾರಿದೀಪ, ಚರಂಡಿ ವ್ಯವಸ್ಥೆ, ನೈರ್ಮಲ್ಯ ಕಾಪಾಡುವುದು ಹೀಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರೆ ಸಾಕು, ಜನ ಮತ್ತೇನನ್ನೂ ಕೇಳುವುದಿಲ್ಲ. ಕೇವಲ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವಂಥ ಸುಲಲಿತ ವ್ಯವಸ್ಥೆಗಳನ್ನು ಜನಪ್ರತಿನಿಧಿ ಮಾಡಿದರೆ ಜನ ನಿಶ್ಚಿತಕ್ಕೂ ಬೆಂಬಲಿಸುತ್ತಾರೆ, ಬೆಂಬಲಿಸಬೇಕು.

ಜನರಿಗೆ ಸದಾಕಾಲ ಬಯಸಿದಾಗ ಸಿಗುವಂಥ ಮನುಷ್ಯ ಜನರ ಒಲವು ಗಳಿಸುತ್ತಾನೆ. ಸಾಮಾನ್ಯವಾಗಿ ಮತದಾರ ಇಂಥ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅನಾಸಕ್ತಿಯೇ ಹೆಚ್ಚು. ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದೆಂದರೆ ಆಲಸ್ಯ. ಇದು ಕೇವಲ ಸ್ಥಳೀಯ ಸಂಸ್ಥೆಗಳಿಗೆ ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯಲ್ಲೂ ಇದನ್ನೇ ಕಾಣುತ್ತಿದ್ದೇವೆ. ಮತದಾರನ ನಿರಾಸಕ್ತಿಗೂ ಕಾರಣವಿರಬಹುದು. ಅದೇನೆಂದರೆ ತಮ್ಮ ಜನಸೇವೆ ಮಾಡುವವನು ಅಸಮರ್ಥ ಅಥವಾ ನಿರುಪಯುಕ್ತ ಎನ್ನುವ ಕಾರಣವೋ, ಅಭ್ಯರ್ಥಿಯನ್ನು ಬೆಂಬಲಿಸುವ ಬದಲು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು ಎನ್ನುವ ಕಾರಣವೋ ಏನೋ? ಅಂತೂ ಮತದಾರ ತಾನು ಚಲಾಯಿಸುವ ಮತದ ಬಗ್ಗೆ ಗಂಭೀರವಾಗಿ ಯೋಚಿಸದಿರುವುದು ಅಪಾಯಕಾರಿ.

ಯಾವುದೇ ಚುನಾವಣೆಯನ್ನು ಗಮನಿಸಿ ಚಲಾವಣೆಯಾಗುವ ಮತಗಳ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಮತದಾರರ ನಿರಾಸಕ್ತಿ ಅರಿವಿಗೆ ಬರುತ್ತದೆ. ಸರಾಸರಿ 55 ರಿಂದ 60 ಶೇ. ಮತದಾನವಾಗುವ ಪರಂಪರೆ ಅನೇಕ ದಶಕಗಳಿಂದ ಕಂಡು ಬರುತ್ತಿದೆ. ಸ್ಥಳೀಯ ಸಂಸ್ಥೆಯಾಗಲೀ, ವಿಧಾನಸಭೆ, ಲೋಕಸಭೆ, ಯಾವುದೇ ಚುನಾವಣೆಯಲ್ಲೂ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ. ಆದರೆ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮತದಾರರ ಸಂಖ್ಯೆಯ ಅನುಪಾತದಲ್ಲಿ ಮತದಾನ ಆಗದಿರುವುದು ಕಳವಳಕಾರಿ.

ಮತಗಟ್ಟೆ ಹೋಗಿ ಮತ ಚಲಾಯಿಸುವುದು ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡಾ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪರಮಾಧಿಕಾರವನ್ನು ಚಲಾಯಿಸದಿರುವುದೇ ಈಗಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ. ನಮಗೆ ಯಾರು ಹಿತವರು ಎನ್ನುವುದನ್ನು ಜನಸೇವೆಗೆ ಮುಂದಾಗುವವರಿಗೆ ತಿಳಿಸಿ ಹೇಳಲು ಇದೊಂದೇ ಸೂಕ್ತ ಅವಕಾಶ. ಯಾರೇ ಕಣಕ್ಕಿಳಿದರೂ, ಎಷ್ಟೇ ಆಮಿಷ ಒಡ್ಡಿದರೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುವ ಚುನಾವಣೆಯಲ್ಲಿ ಮತದಾರ ಮೌನವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಅಪಾಯವಿದೆ.

ಶೇ. 55 ಮಂದಿ ಮಾತ್ರ ಮತ ಚಲಾಯಿಸಿ ಶೇ.45 ರಷ್ಟು ಮಂದಿ ದೂರ ಉಳಿದರೆ ಅದು ಅನರ್ಹರು ಆಯ್ಕೆಯಾಗಲು ಕಾರಣವಾಗುತ್ತದೆ. ಅದಕ್ಕೆ ಆಯ್ಕೆಯಾದವನು ಹೊಣೆಯಲ್ಲ, ಮತ ಹಾಕದವರೇ ಹೊಣೆಯಾಗುತ್ತಾರೆ. ಮತದಾನ ಮಾಡದಿರುವುದರಿಂದ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವವರಿದ್ದಾರೆ. ತಾನೊಬ್ಬ ಮತ ಹಾಕದಿದ್ದರೆ ಅವನು ಗೆದ್ದು ಬರುವುದಿಲ್ಲವೇ? ಎನ್ನುವವರೂ ಇದ್ದಾರೆ. ಹೀಗೆಯೇ ಶೇ. 45 ರಷ್ಟು ಮಂದಿ ಯೋಚಿಸಿದರೆ ಪರಿಣಾಮ ಏನಾಗಬಹುದು ಊಹಿಸಿ.

ಪಕ್ಷ ವ್ಯಕ್ತಿಗಳನ್ನು ದೂರುವುದು ಸುಲಭ. ಆದರೆ ಅವರನ್ನು ಸರಿದಾರಿಗೆ ತರಬಲ್ಲ ಅಸ್ತ್ರ ಚುನಾವಣೆ, ಜನರಿಗಿರುವ ಮತದಾನದ ಹಕ್ಕು. ಅದನ್ನು ಚಲಾಯಿಸದಿದ್ದಾಗ ಸಹಜವಾಗಿಯೇ ಉತ್ತಮ ಅಭ್ಯರ್ಥಿ ಆರಿಸಿ ಬರದೇ ಹೋಗಬಹುದು, ಅದಕ್ಷ, ಅಪ್ರಾಮಾಣಿಕ ಆರಿಸಿ ಬರಬಹುದು. ಮತ್ತೆ ಐದು ವರ್ಷ ಅವರ ದುರಾಡಳಿತವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಜನರದ್ದಾಗುತ್ತದೆ.

18 ರಿಂದ 30 ರ ಒಳಗಿನ ಯುವಕ, ಯುವತಿಯರು ಈಗ ಮತಚಾಲಾಯಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. INDIA-ELECTION35 ರಿಂದ 45 ರೊಳಗಿನವರಲ್ಲಿ ನಿರಾಸಕ್ತಿಯೇ ಹೆಚ್ಚು. 50 ರ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸುತ್ತಾರೆ. ಅದರಲ್ಲೂ ಆತಂಕಕಾರಿ ಅಂಶವೆಂದರೆ ಸುಶಿಕ್ಷಿತರು, ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ ದುಡಿಯುವ ಮಧ್ಯಮವರ್ಗದ ಜನ ಮತಗಟ್ಟೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಮತದಾನ ಮಾಡಲೆಂದೇ ಕಚೇರಿಗಳಿಗೆ ರಜೆ ಸೌಲಭ್ಯವಿದ್ದರೂ ಆದಿನ ಮನೆಯಲ್ಲಿ ಆಯಾಗಿ ವಿಶ್ರಾಂತಿ ತೆಗೆದುಕೊಂಡು ಮೋಜು, ಮಸ್ತಿಯಲ್ಲಿ ಕಾಲ ಕಳೆಯಲು ಹಾತೊರೆಯುವಂಥ ಪ್ರವೃತ್ತಿ ಹೆಚ್ಚಾಗಿ ಕಾಣುತ್ತಿದೆ. ಮತದಾನಕ್ಕೆ ಸಿಕ್ಕ ರಜೆಯನ್ನು ಉಂಡು ಮಲಗುವುದಕ್ಕೆ ಬಳಕೆ ಮಾಡುವವರಿದ್ದಾರೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಈ ಪ್ರವೃತ್ತಿ ಅತ್ಯಂತ ಅಪಾಯಕಾರಿಯಾದುದು.

ಪಕ್ಷ, ಪಂಗಡವನ್ನು ಬೆಂಬಲಿಸುವುದು, ವ್ಯಕ್ತಿಯನ್ನು ಗುರುತಿಸುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದು ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕನ್ನು ಚಲಾಯಿಸದಿರುವುದು ಅನರ್ಹ ಆಯ್ಕೆಯಾಗುವುದಕ್ಕಿಂತಲೂ ಅಪಾಯಕಾರಿ. ಆದ್ದರಿಂದ ಈ ಸಲವಾದರೂ ಗರಿಷ್ಠ ಮತದಾನವಾಗಬೇಕು. ಜನ ಮತಗಟ್ಟೆಯತ್ತ ಮುಖಮಾಡಿದರೆ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯ.

ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ : ಅಸಹನೆ ಏಕೆ?

– ಎಚ್.ಕೆ.ಶರತ್

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ “ಜಾನಪದ ಕಲಾ ಉತ್ಸವ”ದ ವೇಳೆ ಹಂದಿ ಮಾಂಸ ಭೋಜನ ವ್ಯವಸ್ಥೆ ಮಾಡಿದ್ದಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಅಂತೆಲ್ಲ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಮಾಂಸಾಹಾರ ಅದರಲ್ಲೂ ಹಂದಿ ಮಾಂಸ ಸೇವಿಸುವುದು ಕೆಲವರ ಕಣ್ಣಿಗೆ ಅಸಹ್ಯಕರವಾಗಿ ಗೋಚರಿಸಬಹುದು. ಇದು ತಿನ್ನುವವರ ಸಮಸ್ಯೆಯಲ್ಲ. ಎಲ್ಲಾ ಬಗೆಯ ಆಹಾರ ಪದ್ಧತಿಯನ್ನೂ ಸಮಾನವಾಗಿ ಪರಿಗಣಿಸದೆ, ಸಸ್ಯಾಹಾರ ಶ್ರೇಷ್ಠವೆಂಬ ಸಂಕುಚಿತ ಮನಸ್ಥಿತಿ ಇಲ್ಲಿ ಪ್ರಭಾವ ಬೀರುತ್ತಿರುವುದು ಸ್ಪಷ್ಟ.

ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ ಸೇವನೆಗೆ ವೇದಿಕೆ ಕಲ್ಪಿಸಿಕೊಟ್ಟ ಕಾರ್ಯಕ್ರಮದ ಸಂಘಟಕರ ವಿರುದ್ಧ ದನಿ ಎತ್ತುತ್ತಿರುವವರ ಮನಸ್ಥಿತಿ ಎಂತಹದ್ದಿರಬಹುದು? ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿರುತ್ತದೆ. ಪರಿಷತ್ತಿನ ಆವರಣದಲ್ಲಿ ಸಸ್ಯಾಹಾರ ಸೇವನೆ ಸ್ವೀಕಾರಾರ್ಹ. ಅದೇ ಮಾಂಸಾಹಾರ ಸೇವಿಸಿದರೆ ಅದೊಂದು ಮಹಾ ಅಪರಾಧ ಎಂದು ಗುಲ್ಲೆಬ್ಬಿಸುತ್ತಿರುವವರ ಧೋರಣೆ ಆರೋಗ್ಯಕರವಾದುದಲ್ಲ.

ಮಾಂಸಾಹಾರ ಸೇವಿಸುವ ಕೆಲವರಲ್ಲೂ ಹಂದಿ ಮಾಂಸವೆಂದರೆ ಕೀಳೆಂಬ ಮನೋಭಾವ ಮನೆ ಮಾಡಿದೆ. pig_mutton_stallಹಂದಿ ಮಾಂಸ ಸೇವಿಸುವ ಎಷ್ಟೋ ಮಂದಿ, ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು, ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಶಾಲಾ ದಿನಗಳಲ್ಲಿ ನಾವೇನಾದರೂ ಮಾಂಸಾಹಾರವನ್ನು ಬಾಕ್ಸಿಗೆ ಹಾಕಿಕೊಂಡು ಹೋಗಿ ಮಧ್ಯಾಹ್ನ ತಿನ್ನಲು ಕುಳಿತರೆ, ಉಳಿದ ವಿದ್ಯಾರ್ಥಿಗಳೆಲ್ಲ, ನಾವೇನೊ ಮಾಡಬಾರದ್ದನ್ನು ಮಾಡುತ್ತಿದ್ದೇವೆ ಎಂಬಂತೆ ನೋಡುತ್ತಿದ್ದರು. ಕೆಲವರು ಹಂಗಿಸಿಯೂ ಮಾತನಾಡುತ್ತಿದ್ದರು. ಇಂದಿಗೂ ಅದೇ ಮನಸ್ಥಿತಿ ಕೆಲವರಲ್ಲಿ ಬೇರು ಬಿಟ್ಟಿರುವುದರಿಂದ ಮಾಂಸಾಹಾರ ಸೇವನೆ ಕುರಿತು ಈ ಪರಿ ಅಸಹನೆ ವ್ಯಕ್ತವಾಗುತ್ತಿದೆ.

ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಳಗೊಂಡಿರುವ ಮತ್ತು ಒಳಗೊಳ್ಳಬೇಕಾದ ಸಂಸ್ಥೆ. ಇದು ಯಾವುದೋ ಒಂದು ಜಾತಿಗೆ ಅಥವಾ ಮತಕ್ಕೆ ಸೀಮಿತವಾದ ಪವಿತ್ರ(?) ದೇಗುಲವಲ್ಲ. ಹೀಗಿರುವಾಗ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾಂಸಾಹಾರ ಸೇವಿಸಬಾರದೆಂದು ನಿರ್ಬಂಧ ವಿಧಿಸುವುದು ಪುರೋಹಿತಶಾಹಿ ಮನಸ್ಥಿತಿಯ ಹೇರಿಕೆಯಂತೆ ತೋರುತ್ತದೆ.

ಎಲ್ಲರಿಗೂ ತಮ್ಮದೇ ಆದ ಆಹಾರ ಪದ್ಧತಿ ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಸಸ್ಯಾಹಾರವೇ ಪರಮಶ್ರೇಷ್ಠವೆಂದು ಪ್ರತಿಪಾದಿಸುವ ಕೆಲ ಮೇಲ್ಜಾತಿಗಳಿಗೆ ಸೇರಿದವರು ಕೂಡ ಇಂದು ಮಾಂಸಾಹಾರ ಮಾಡುತ್ತಿದ್ದಾರೆ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಮಾಂಸಾಹಾರ ಸೇವಿಸುವಂತಿಲ್ಲ ಅಥವಾ ಸೇವಿಸಲೇಬೇಕೆಂಬ ನಿಯಮ ಪಾಲಿಸುವುದು, ವಿಧಿಸುವುದು ಮೂರ್ಖತನ.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿರುವವರು, ಹಂದಿ ಮಾಂಸ ಸೇವಿಸಿದ ಮಾತ್ರಕ್ಕೆ ಪರಿಷತ್ತಿನ ಪಾವಿತ್ರ್ಯತೆಗೆ “ಅದ್ಹೇಗೆ ಧಕ್ಕೆಯಾಯಿತು” ಎಂಬ ಕುರಿತು ಎಲ್ಲರಿಗೂ ಮನದಟ್ಟು ಮಾಡಿಕೊಡಬೇಕಿದೆ.

ಪ್ರಾಮಾಣಿಕ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಬಹಿಷ್ಕಾರ !?

– ದಿನೇಶ್ ಕುಮಾರ್ ಎಸ್.ಸಿ.

ಇದು ನನ್ನ ಮಟ್ಟಿಗಂತೂ ಬೆಚ್ಚಿಬೀಳಿಸುವ ಸುದ್ದಿ.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ “ದಿ ಹಿಂದೂ” ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಜಿ.ಟಿ.ಯವರಿಗೆ ನೋಟೀಸೊಂದು ಹೋಗಿದೆ. ನಿಮ್ಮನ್ನು ಸಂಘದ ಸದಸ್ಯತ್ವದಿಂದ ಉಚ್ಛಾಟಿಸಲಾಗುವುದು, ಯಾವುದೇ ಪತ್ರಿಕಾಗೋಷ್ಠಿ ವರದಿಗೆ ಕರೆಯಲಾಗುವುದಿಲ್ಲ ಮತ್ತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನಾಗಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂಬುದು ಈ ನೋಟೀಸಿನ ಒಟ್ಟು ತಾತ್ಪರ್ಯ.

“ದಿ ಹಿಂದೂ” ಪತ್ರಿಕೆ ರಾಷ್ಟ್ರಮಟ್ಟದಲ್ಲಿ ಪತ್ರಿಕಾಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. The_Hindu_logoಈ ಪತ್ರಿಕೆಯ ಬಹುತೇಕ ವರದಿಗಾರರು ಶುದ್ಧಹಸ್ತರಾಗಿಯೇ ಇರುತ್ತಾರೆ. ಸತೀಶ್ ಹಿಂದೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಕೆಲಸ ಮಾಡಿದವರು. ಗ್ರಾಮೀಣ ಭಾಗದ ವರದಿಗಾರಿಕೆಯ ಆಸಕ್ತಿಯಿಂದಾಗಿ ಈಗ ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಬರುವ ಪತ್ರಕರ್ತರೇ ಹೆಚ್ಚಿರುವ ಸಂದರ್ಭದಲ್ಲಿ ಸತೀಶ್ ಬೆಂಗಳೂರೆಂಬ ಮಾಯಾನಗರಿ ಬಿಟ್ಟು ಹಾಸನಕ್ಕೆ ತೆರಳಿದವರು. ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರಿಕೆ ಆರಂಭಿಸಿದಾಗಿನಿಂದ ಆ ಎರಡೂ ಜಿಲ್ಲೆಗಳ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಂತೆ ಬರೆದಿದ್ದಾರೆ. ಯಾರಿಗೂ ಅಂಜದೆ, ಅಳುಕದೆ ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿದ್ದಾರೆ.

ಇಂಥ ಸತೀಶ್ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾಕಾದರೂ ನೋಟೀಸು ಕೊಟ್ಟಿದೆ? Satish_GTಇದರ ಹಿನ್ನೆಲೆ ಏನು ಎಂಬುದಕ್ಕೆ ನೋಟೀಸಿನಲ್ಲೇ ಸ್ಪಷ್ಟ ಉತ್ತರವಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯೊಬ್ಬರ ವಿರುದ್ಧ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಅಪಮಾನಗೊಳಿಸಲಾಗಿದೆ ಎಂಬುದು ನೋಟೀಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸತೀಶ್ ಯಾಕಾಗಿ ಈ ದೂರನ್ನು ನೀಡಿದರು? ಆ ದೂರಿನಲ್ಲಿ ಏನಿದೆ ಎಂಬುದಕ್ಕೆ ಸತೀಶ್ ಕೊಟ್ಟ ದೂರೇ ಎಲ್ಲ ಉತ್ತರ ಹೇಳುತ್ತದೆ. ಸತೀಶ್ ನೀಡಿದ ದೂರು ಈ ಕೆಳಕಂಡಂತಿದೆ.

ಇಂದ.
ಸತೀಶ್ ಜಿ.ಟಿ.
ವರದಿಗಾರ,
ದಿ ಹಿಂದು,
ಹಾಸನ.

ಗೆ.
ಅಧ್ಯಕ್ಷರು,
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ,
ಬೆಂಗಳೂರು.

ಅಧ್ಯಕ್ಷರೆ,

ವಿಷಯ: ಹಾಸನದಲ್ಲಿ ಬೆಳಕಿಗೆ ಬಂದ ‘ಪ್ಯಾಕೆಜ್ ಸಂಸ್ಕೃತಿ’ ಮತ್ತು ಸಂಘದ ಪದಾಧಿಕಾರಿಯೊಬ್ಬರಿಂದ ಮುಖ್ಯವಾಹಿನಿ ಪತ್ರಿಕೆಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿಮಗೆ ದೂರು ಸಲ್ಲಿಸುವುದು.

‘ಭ್ರಷ್ಟರಿಂದ ಪತ್ರಿಕೋದ್ಯಮವನ್ನು ಮುಕ್ತ ಗೊಳಿಸುವುದು’ – ಈ ಸಂಘದ ಆಶಯಗಳಲ್ಲಿ ಒಂದು ಎಂದು ಭಾವಿಸಿ ಹಾಗೂ ನಾನು ಕೆಲಸ ಮಾಡುತ್ತಿರುವ “ದಿ ಹಿಂದು” ಪತ್ರಿಕೆಯ ಮ್ಯಾನೇಜ್‌ಮೆಂಟ್‌ನವರ ಸೂಚನೆ ಮೇರೆಗೆ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ.

ದಿನಾಂಕ ಅಕ್ಟೋಬರ್ 3 ರಂದು ಹಾಸನ ನಗರದಲ್ಲಿ ಕಾಂಗ್ರೆಸ್ ಪಕ್ಷ ಮಹಿಳಾ ಸಮಾವೇಶ ಆಯೋಜಿಸಿತ್ತು. ಸಮಾವೇಶದ ಬಗ್ಗೆ ಹಾಸನ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಶಿವರಾಂ ಕೆಲವೇ ದಿನಗಳ ಹಿಂದೆ ಪತ್ರಿಕಾ ಗೋಷ್ಟಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು.

ಸಮಾವೇಶದ ದಿನ (ಅಕ್ಟೋಬರ್ 3ರಂದು) ಬೆಳಗ್ಗೆ 11.01 ಗಂಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರು ದೂರವಾಣಿ ಮೂಲಕ (ಅವರ ದೂರವಾಣಿ ಸಂಖ್ಯೆ 94486 55043) ನನ್ನನ್ನು ಸಂಪರ್ಕಿಸಿ ‘ನೀವು ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ’ ಎಂದರು. ಅದಕ್ಕೂ ಮೊದಲು “ಕಾಂಗ್ರೆಸ್‌ನವರು ನನಗೆ ಮತ್ತು ಕೆಲ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರಷ್ಟೆ. ಆದರೆ ಸುದ್ದಿವಾಹಿನಿಯ ವರದಿಗಾರರು ಈ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ…” – ಹೀಗೆ ಹೇಳಿದರು. ಅವರ ಮಾತಿನ ಹಿನ್ನೆಲೆ ಗ್ರಹಿಸಲಾಗಲಿಲ್ಲ. ಆದರೆ ಕಾರ್ಯಕ್ರಮಕ್ಕೆ ದಯಮಾಡಿ ಬನ್ನಿ ಎಂದು ಹೇಳಿದ್ದು ಮಾತ್ರ ಸ್ಪಷ್ಟ.

ಇದೇ ರೀತಿ ಇನ್ನೊಂದು ಇಂಗ್ಲಿಷ್ ಪತ್ರಿಕೆ ವರದಿಗಾರನಿಗೂ ದೂರವಾಣಿ ಕರೆ ಮಾಡಿ, ಆ ವರದಿಗಾರ ರಜೆಯ ಮೇಲೆ ಊರಿಗೆ ತೆರಳಿದ್ದರೂ, “ಹೇಗಾದರೂ ಮಾಡಿ ಒಂದೇ ಒಂದು ಸಾಲಿನಷ್ಟಾದರೂ ಈ ಕಾರ್ಯಕ್ರಮದ ವರದಿ ನಿಮ್ಮ ಪತ್ರಿಕೆಯಲ್ಲಿ ಬರುವಂತೆ ಮಾಡು, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಲೀಲಾವತಿಯವರು ಗೋಗರೆದಿದ್ದರು. ವರದಿಗಾರ ಮಿತ್ರ ಈ ಸಂಗತಿಯನ್ನು ಆಪ್ತರ ಬಳಿ ಹಂಚಿಕೊಂಡಿದ್ದಾನೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೀಗೆ ಇವರು ಆಹ್ವಾನ ನೀಡಿದ್ದು ಮತ್ತು ಗೋಗರೆದಿದ್ದು ತೀರಾ ವಿಚಿತ್ರ ಎನಿಸಿತು. ಕೆಲವೇ ನಿಮಿಷಗಳ ನಂತರ ಈ ವರ್ತನೆ ಮೂಲ ಉದ್ದೇಶ ಸ್ಪಷ್ಟವಾಯಿತು.

ಸುದ್ದಿ ವಾಹಿನಿಯೊಂದರ ವರದಿಗಾರ ಮಿತ್ರನಿಗೆ, ಬಿ.ಶಿವರಾಂ ಪತ್ರಿಕಾಗೋಷ್ಟಿಗೆ ತಡವಾಗಿ ಬಂದಿದ್ದರ ಕಾರಣ, ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಹಿತಿ ಇರಲಿಲ್ಲ. ಸಮಾವೇಶದ ದಿನ ಹೈಸ್ಕೂಲ್ ಆವರಣದಲ್ಲಿ ಶಾಮಿಯಾನ ಹಾಕಿದ್ದನ್ನು ನೋಡಿ, ಅಲ್ಲಿಯೇ ಇದ್ದ ಹಾಸನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲಿತಮ್ಮನವರನ್ನು ವಿಚಾರಿಸಿದ್ದಾರೆ. ಆಗ ಅವರಿಂದ ಬಂದ ಉತ್ತರ, “ಯಾಕ್ರಿ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲವಾ? ನಿಮಗೆ ಕೊಡಬೇಕಾದ ಪ್ಯಾಕೇಜನ್ನೆಲ್ಲಾ ನಿಮ್ಮ ಸಂಘದ ಅಧ್ಯಕ್ಷೆ ಲೀಲಾವತಿಯವರಿಗೆ ಕೊಟ್ಟಿದ್ದೇವಲ್ಲ, ಅವರು ಹೇಳಲಿಲ್ಲವಾ? ಇನ್ನು ನಿಮಗೆ ಕೊಡಬೇಕಾದ್ದು ಏನಾದರೂ ಇದ್ದರೆ, ಬನ್ನಿ ತಗೊಂಡು ಹೋಗಿ ಸುದ್ದಿ ಮಾಡಿ..” ಎಂದು ದರ್ಪದಿಂದಲೇ ಮಾತನಾಡಿದ್ದಾರೆ.

ಯಾವ ಸುದ್ದಿಗೂ ಯಾವ ದಿನವೂ ಯಾರ ಬಳಿಯೂ ಪುಡಿಕಾಸು ಕೇಳದ ನಾವು ಪಕ್ಷವೊಂದರ ಸಮಾವೇಶದಲ್ಲಿ ಸಾರ್ವಜನಿಕವಾಗಿ ಹೀಗೆ ಅನ್ನಿಸಿಕೊಳ್ಳಬೇಕಾಯಿತಲ್ಲ ಎಂದು ಕ್ರುದ್ಧನಾದ ವರದಿಗಾರ ತಕ್ಷಣ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಏನಿದರ ಮರ್ಮ ಎಂದು ಕೇಳಿದ್ದಾನೆ. ತಾನು ಕೆಲಸ ಮಾಡುತ್ತಿರುವ ಸುದ್ದಿ ಸಂಸ್ಥೆ ಹೆಸರಿನಲ್ಲಿ ‘ಪ್ಯಾಕೇಜ್’ ಕೇಳುವ ಮತ್ತು ಆ ಮೂಲಕ ಚಾನೆಲ್‌ಗೆ ಮಸಿ ಬಳಿಯುತ್ತಿರುವ ಬಗ್ಗೆ ತನ್ನ ಸಿಟ್ಟು ವ್ಯಕ್ತ ಪಡಿಸಿದ್ದಾನೆ.

ಈ ಘಟನೆಯಿಂದ ವಿಚಲಿತನಾದ ವರದಿಗಾರ ಇತರೆ ಮಿತ್ರರೊಂದಿಗೆ ತನ್ನ ನೋವನ್ನು ಹಂಚಿಕೊಂಡಾಗ ಲೀಲಾವತಿಯವರು ಫೋನ್ ಮಾಡಿದ್ದರ ಹಿಂದಿನ ಉದ್ದೇಶ ಅರ್ಥವಾಯಿತು. ವರದಿಗಾರನೊಂದಿಗೆ ಸಂಭಾಷಣೆ ನಂತರ ಕಾಂಗ್ರೆಸ್ ನಾಯಕಿ ಶ್ರೀಮತಿ ಲಲಿತಮ್ಮನವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಯಾಕ್ರಿ ಯಾರಿಗೂ ನೀವು ಕಾರ್ಯಕ್ರಮದ ಬಗ್ಗೆ ಹೇಳಿಲ್ಲವೇ ಎಂದು ಕೇಳಿದ್ದಾರೆ. ಆ ನಂತರ ನನಗೂ ಮತ್ತು ಇನ್ನಿತರೆ ಮಿತ್ರರಿಗೂ ಲೀಲಾವತಿಯವರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆದಿದ್ದಾರೆ.

ಈ ಸನ್ನಿವೇಶಗಳನ್ನು ಗಮನಿಸಿದಾಗ ನಮ್ಮ (ದಿ ಹಿಂದು) ಪತ್ರಿಕೆಯನ್ನೂ ಸೇರಿದಂತೆ ಮುಖ್ಯವಾಹಿನಿಯ ಪತ್ರಿಕೆಗಳ ಹೆಸರುಗಳನ್ನು ಬಳಸಿಕೊಂಡು ಈ ಘನ ಸಂಘದ ಜಿಲ್ಲಾಧ್ಯಕ್ಷರು ‘ಪ್ಯಾಕೇಜ್’ ಸ್ವೀಕರಿಸಿರುವ ಅನುಮಾನ ಬರುತ್ತದೆ. ಅನುಮಾನಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಿಲತಮ್ಮನವರು ಸಮಾವೇಶದ ಸ್ಥಳದಲ್ಲಿ ಸುದ್ದಿ ವಾಹಿನಿಯ ವರದಿಗಾರನಿಗೆ ಹೇಳಿರುವ ಮಾತುಗಳು – ‘ಎಲ್ಲರಿಗೂ ಸೇರಿ ಪ್ಯಾಕೇಜನ್ನು ಈಗಾಗಲೇ ನಿಮ್ಮ ಅಧ್ಯಕ್ಷರಿಗೆ ನೀಡಿದ್ದೇವಲ್ಲ, ನಿಮಗೂ ಮತ್ತೇನಾದರೂ ಬೇಕಿದ್ದರೆ ತಗೊಂಡು ಹೋಗಿ ಸುದ್ದಿ ಮಾಡಿ..’ ಈ ಮಾತುಗಳನ್ನು ಕೇಳಿಸಿಕೊಂಡ ವರದಿಗಾರನ ಜೊತೆ ಕೆಮಾರಮನ್ ಕೂಡಾ ಇದ್ದರು. ರಾಷ್ಟೀಯ ಪಕ್ಷವೊಂದರ ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿರುವ ಮಾತನ್ನು ಅಲ್ಲಗಳೆಯಲಾದೀತೆ?

2. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಲೀಲಾವತಿಯವರು ನನಗೆ ಮತ್ತು ಇತರೆ ಪತ್ರಕರ್ತರಿಗೆ ದೂರವಾಣಿ ಕರೆಮಾಡಿ ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿದ್ದು. (ಇವರು ಪ್ಯಾಕೇಜ್ ಲಾಭ ಪಡೆಯದಿದ್ದರೆ ನಮಗೆ ಫೋನ್ ಮಾಡಿ ಆಹ್ವಾನಿಸಲು ಇವರ್ಯಾರು? ಅಥವಾ ಇವರೇನು ಕಾಂಗ್ರೆಸ್ ಕಾರ್ಯಕರ್ತರೆ?)

3. “ಕಾರ್ಯಕ್ರಮದ ವರದಿ ಒಂದು ಸಾಲಿನಷ್ಟಾದರೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೋ, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಸಂಘದ ಅಧ್ಯಕ್ಷರು ಕೋರುತ್ತಾರೆಂದರೆ ಅದರ ಹಿಂದಿನ ಮರ್ಮವೇನು? ಪತ್ರಕರ್ತರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕ್ರಮ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗುವಂತೆ ನೋಡಿಕೊಳ್ಳುತ್ತೇನೆಂದು ಪಕ್ಷದ ನೇತಾರರಿಗೆ ಭರವಸೆ ನೀಡಿದ್ದರೆ?

ರಾಷ್ಟ್ರಮಟ್ಟದಲ್ಲಿ ‘ಪೇಯ್ಡ್ ನ್ಯೂಸ್’ ವಿರುದ್ಧ ದನಿ ಎತ್ತಿರುವವರ ಪೈಕಿ ದಿ ಹಿಂದು ಪತ್ರಿಕೆ ಪ್ರಮುಖವಾದದ್ದು. ಪ್ರಸ್ತುತ ಘಟನೆಯಲ್ಲಿ ನಮ್ಮ ಪತ್ರಿಕೆಯ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಸಂಶಯಗಳಿವೆ. ಈ ಬಗ್ಗೆ ನಮ್ಮ ಸಂಸ್ಥೆಗೂ ಮಾಹಿತಿ ನೀಡಿದ್ದೇನೆ. ಅವರ ಸೂಚನೆ ಮೇರೆಗೆ ಈ ದೂರನ್ನು ನಿಮಗೆ ಸಲ್ಲಿಸುತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಿರೀಕ್ಷಿಸುತ್ತೇನೆ.

ಇತಿ,
ಸತೀಶ್ ಜಿ.ಟಿ
ಹಾಸನ
05-10-2012

• ದೂರು ನೀಡುತ್ತಿರುವುದು ನಮ್ಮ ಸಂಸ್ಥೆಯ ಸೂಚನೆ ಮೇರೆಗೆ. ಮಿತ್ರರು ಪ್ರತಿನಿಧಿಸುವ ಸಂಸ್ಥೆಗಳು ದೂರು ನೀಡುವ ನಿರ್ಧಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಗೊತ್ತಿಲ್ಲ. ಹಾಗಾಗಿ ನಾನು ಈ ಪತ್ರದಲ್ಲಿ ಉಲ್ಲೇಖಿಸಿರುವ ವರದಿಗಾರ ಮಿತ್ರರನ್ನು ಮತ್ತು ಅವರು ಪ್ರತಿನಿಧಿಸುವ ಸುದ್ದಿ ಸಂಸ್ಥೆಗಳನ್ನು ಹೆಸರಿಸಿಲ್ಲ.
• ಈ ದೂರಿನ ಪ್ರತಿಯನ್ನು ಹಾಸನ ಜಿಲ್ಲಾ ಸಂಘದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ಕಳುಹಿಸುತ್ತಿದ್ದೇನೆ. ಅಧ್ಯಕ್ಷರ ಮೇಲೆಯೇ ಆರೋಪ ಇರುವುದರಿಂದ, ಅವರಿಗೆ ಪ್ರತಿ ಕಳುಹಿಸುವುದು ಅರ್ಥಹೀನ ಎಂಬುದು ನನ್ನ ಅನಿಸಿಕೆ.

ಈ ದೂರನ್ನು ನೀಡಿರುವುದು 2012ರ ಅಕ್ಟೋಬರ್ 5ರಂದು. “ದಿ ಹಿಂದೂ” ನಂಥ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಪತ್ರಕರ್ತ ತಮ್ಮ ಹೆಸರಲ್ಲಿ, ತಮ್ಮ ಸಂಸ್ಥೆ ವಿಷಯದಲ್ಲಿ ಸುದ್ದಿಗಾಗಿ ಕಾಸು ಎತ್ತುತ್ತಿರುವುದು ಕಂಡುಬಂದರೆ ಏನನ್ನು ಮಾಡಬಹುದೋ ಅದನ್ನೇ ಸತೀಶ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕ್ರಮ ಕೈಗೊಳ್ಳುವುದಿರಲಿ, ದೂರು ತಲುಪಿರುವ ಕುರಿತು ಒಂದು ಸಾಲಿನ ಪ್ರತಿಕ್ರಿಯೆಯನ್ನೂ ಸತೀಶ್ ಅವರಿಗೆ ನೀಡಿಲ್ಲ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ಗಮನಿಸಿದರೆ ಇಂಥ ಪ್ರತಿಕ್ರಿಯೆ, ಕ್ರಮ ಕೈಗೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಅದು ಬೇರೆಯ ವಿಷಯ.

ತಮಾಶೆಯೆಂದರೆ ಈಗ ನಾಲ್ಕು ತಿಂಗಳ ಬಳಿಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸತೀಶ್ ಅವರ ಸದಸ್ಯತ್ವ ರದ್ದುಗೊಳಿಸುವುದಾಗಿ ಗುಟುರು ಹಾಕುತ್ತಿದೆ. ಪತ್ರಿಕಾಗೋಷ್ಠಿಗಳಿಗೆ ಸೇರಿಸುವುದಿಲ್ಲ ಎಂದು ಯಜಮಾನಿಕೆ ದರ್ಪ ಪ್ರದರ್ಶಿಸಿದೆ.

ಹಾಸನ ಜಿಲ್ಲೆಯ ಪತ್ರಿಕಾರಂಗದ ಇತಿಹಾಸ ದೊಡ್ಡದು. ಇಲ್ಲಿ ತಮ್ಮ ಇಡೀ ಜೀವನವನ್ನೇ ಪತ್ರಿಕಾವೃತ್ತಿಗೆ ಸಮರ್ಪಿಸಿದ ಕೃ.ನ,ಮೂರ್ತಿಯಂಥವರಿದ್ದರು. ಪತ್ರಿಕಾವೃತ್ತಿಯನ್ನೇ ಒಂದು ಚಳವಳಿಯನ್ನಾಗಿಸಿಕೊಂಡ ಆರ್.ಪಿ.ವೆಂಕಟೇಶ್ ಮೂರ್ತಿ, ಮಂಜುನಾಥ ದತ್ತ ಅಂಥವರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರು ಸೇರಿದಂತೆ ಬೇರೆಬೇರೆ ಕಡೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿದ್ದಾರೆ. ಶೇಷಾದ್ರಿ, ರಂಗನಾಥ್, ಎಚ್.ಬಿ.ಮದನ್ ಗೌಡ, ವೈ.ಪಿ.ರಾಜೇಗೌಡ, ಬಿ.ಜೆ.ಮಣಿ, ಮಂಜುನಾಥ್, ಕೆಂಚೇಗೌಡ, ಪ್ರಸನ್ನ ಕುಮಾರ್, ಬಾಳ್ಳು ಗೋಪಾಲ್, ಡಿ.ಜಿ.ರಾಜೇಶ್, ರವಿ ನಾಕಲಗೋಡು, ವೇಣು, ವೆಂಕಟೇಶ್, ರವಿಕುಮಾರ್, ಹರೀಶ್, ಬಿ.ಮಂಜು ಹೀಗೆ ನೆನಪಿಸಿಕೊಳ್ಳಲು ಹಾಸನದಲ್ಲಿ ಹತ್ತು ಹಲವಾರು ಹೆಸರುಗಳಿವೆ.

ಹೀಗಿರುವಾಗ ಇಂಥ ಅನೈತಿಕವಾದ, ಮುಖೇಡಿಯಾದ ತೀರ್ಮಾನವನ್ನು ಜಿಲ್ಲಾ ಪತ್ರಕರ್ತರ ಸಂಘ ತೆಗೆದುಕೊಳ್ಳುತ್ತದೆ ಎಂದು ನಂಬುವುದಾದರೂ ಹೇಗೆ? ಅಷ್ಟಕ್ಕೂ ಸಂಘದಿಂದ ಉಚ್ಛಾಟಿಸಿದ ಮಾತ್ರಕ್ಕೆ, ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿರ್ಬಂಧಿಸಿದ ಮಾತ್ರಕ್ಕೆ ಸತೀಶ್ ಅವರ ವೃತ್ತಿಜೀವನವನ್ನು ಕಸಿದುಕೊಳ್ಳಲಾದೀತೆ? ಒಂದು ವೇಳೆ ಸತೀಶ್ ವೃತ್ತಿಯನ್ನು ಕಸಿದುಕೊಳ್ಳುವುದು ಸಂಘದ ಹವಣಿಕೆಯಾದರೆ ಇದೆಂಥ ಸಂಘ?

ನಾನು ಹಲವು ವರ್ಷಗಳ ಕಾಲ ಇದೇ ಹಾಸನ ಜಿಲ್ಲೆಯಲ್ಲಿ ಪತ್ರಿಕಾ ವೃತ್ತಿ ನಡೆಸಿದವನು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ, ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಈ ನೋಟೀಸನ್ನು ಗಮನಿಸಿದಾಗ ನಿಜಕ್ಕೂ ನೋವಾಯಿತು. ಸತೀಶ್ ಅವರನ್ನು ಅವಮಾನಿಸುವ ಭರದಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ತನ್ನನ್ನು ತಾನು ಅಪಮಾನಿಸಿಕೊಂಡಿದೆ. ಕಾಸಿಗಾಗಿ ಸುದ್ದಿ ವಿರುದ್ಧ ಧ್ವನಿಯೆತ್ತಿದ ಪತ್ರಕರ್ತನ ನ್ಯಾಯಶೀಲತೆಯನ್ನು, ವೃತ್ತಿಧರ್ಮವನ್ನು ಗೌರವಿಸುವ, ಪ್ರಶಂಶಿಸುವ ಬದಲು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಾತಾಳಕ್ಕೆ ಇಳಿದಿದೆ.

ಮೇಲೆ ಉಲ್ಲೇಖಿಸಿದ, ಉಲ್ಲೇಖಿಸದೇ ಇರುವ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತ ಮಿತ್ರರಿಗೆ ನನ್ನದೊಂದು ಪ್ರೀತಿಯ ಮನವಿ. ಇದೊಂದು ಕಪ್ಪುಚುಕ್ಕೆ ಅಳಿಸುವುದು ನಿಮ್ಮ ಕೈಯಲ್ಲೇ ಇದೆ. ಸತೀಶ್ ಅವರಿಗೆ ಕಳುಹಿಸಿರುವ ನೋಟೀಸನ್ನು ಬೇಷರತ್ತಾಗಿ ಹಿಂದಕ್ಕೆ ಪಡೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಕಾಸಿಗಾಗಿ ಸುದ್ದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಪತ್ರಕರ್ತರು ಈ ನೋಟೀಸಿನ ಕಾರಣಕ್ಕೆ ತಲೆತಗ್ಗಿಸಿ ನಿಲ್ಲುವಂತಾಗಬಾರದು. ಸತೀಶ್ ಅವರಿಗೆ ತಮ್ಮ ವೃತ್ತಿಯನ್ನು ಯಾರ ಅಡ್ಡಿ, ಆತಂಕ, ಹಸ್ತಕ್ಷೇಪ, ಬೆದರಿಕೆಗಳು ಇಲ್ಲದಂತೆ ನಡೆಸಿಕೊಂಡು ಹೋಗುವಂತೆ ಸಹಕರಿಸಬೇಕು.

ಅದು ಸಾಧ್ಯವಾಗದೆ ಹೋದರೆ, ನಾಡಿನ ನ್ಯಾಯಪರವಾದ ಮನಸ್ಸುಗಳು ಅನಿವಾರ್ಯವಾಗಿ ಜಿಲ್ಲಾ ಪತ್ರಕರ್ತರ ಸಂಘದ ಎದುರೇ ಬಂದು ಧರಣಿ ನಡೆಸಿ, ನಿಮ್ಮ ಕಣ್ಣುಗಳನ್ನು ತೆರೆಸಬೇಕಾದೀತು. ವಿಷಯ ದೊಡ್ಡದಾಗುವ ಮುನ್ನ ಜಿಲ್ಲಾ ಪತ್ರಕರ್ತರು ಎಲ್ಲದಕ್ಕೂ ತೆರೆ ಎಳೆದಾರೆಂಬ ನಂಬಿಕೆ ನನ್ನದು. ಯಾಕೆಂದರೆ ಜಿಲ್ಲೆಯ ಪತ್ರಕರ್ತರು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಬಲಿ ತೆಗೆದುಕೊಳ್ಳುವಷ್ಟು ಅಮಾನವೀಯರು, ಹೇಡಿಗಳು, ಫ್ಯಾಸಿಸ್ಟ್‌ಗಳು ಅಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು.