Daily Archives: April 16, 2013

ಸಂವೇದನೆಗಳಿಗೆ ಸಂಖ್ಯಾಶಾಸ್ತ್ರದ ಅಳವಡಿಕೆಯೇ ಸಂಶೋಧನೆಯಲ್ಲ

-ಡಾ.ಎಸ್.ಬಿ.ಜೋಗುರ

kaalavve-vachanaಮಾ 15, 2013 ರ ಎಚ್.ಎಸ್.ಶಿವಪ್ರಕಾಶರ ಅಂಕಣದಿಂದ ದಿನಪತ್ರಿಕೆಯೊಂದರಲ್ಲಿ ಆರಂಭವಾದ ವಚನ ಚಳವಳಿ ಮತ್ತು ಜಾತಿವ್ಯವಸ್ಥೆಯ ಬಗೆಗಿನ ಚರ್ಚೆ ಇಲ್ಲಿಯವರೆಗೆ ಸಾಗಿಬಂದಿರುವದಾದರೂ ಅಲ್ಲಿ ಬಹುತೇಕ ಹೊಗೆ ಎಬ್ಬಿಸುವ ಯತ್ನಗಳಿವೆಯೇ ಹೊರತು ಬೆಳಕು ಮೂಡಿಸುವ ಪ್ರಯತ್ನಗಳು ಕಾಣಸಿಗುವದಿಲ್ಲ. ಅಷ್ಟಕ್ಕೂ ವಚನಗಳನ್ನು ಸಂಖ್ಯಾಶಾಸ್ತ್ರೀಯ ವಿಧಾನಕ್ಕೆ ಅಳವಡಿಸಿ, ಪ್ರತಿಶತದಲ್ಲಿ ಅಲ್ಲಿಯ ಜಾತಿ ವಿರೋಧಿ ನಿಲುವನ್ನು ಚರ್ಚಿಸಿರುವದು ಒಂದು ಹೊಸ ಬಗೆಯ ಪ್ರಯೋಗವೆನಿಸಿದರೂ ಮನುಷ್ಯ ಸಂವೇದನೆಗಳನ್ನು ಸ್ಕೇಲ್ ಮೂಲಕ ಅಳೆಯುವ ವಿಚಿತ್ರ ಬಗೆಯ ಯತ್ನ ಮತ್ತು ವಿತಂಡವಾದವಾಗಿ ಅದು ತೋರಿರುವಲ್ಲಿ ಸಂಶಯವಿಲ್ಲ. ಎಷ್ಟು ಪ್ರಮಾಣದ ವಚನಗಳು ಏನು ಮಾತನಾಡುತ್ತವೆ ಎನ್ನುವದು ಮುಖ್ಯವಲ್ಲ, ಅಲ್ಲಿಯ ಧ್ವನಿ ಜೀವಪರವಾಗಿದೆಯೋ ಇಲ್ಲವೋ ಎನ್ನುವದು ಮುಖ್ಯ. ಹೆರಿಗೆ ನೋವು ಎನ್ನುವ ತಲೆಬರಹದ ಕವಿತೆಯಲ್ಲಿರುವ ಇಪ್ಪತ್ತು ಸಾಲುಗಳಲ್ಲೂ ಆ ಪದ ಬಳಕೆಯಾಗಿಲ್ಲದ ಕಾರಣ ಅದು ಹೆರಿಗೆ ನೋವನ್ನು ಸಮರ್ಪಕವಾಗಿ ಗ್ರಹಿಸಿಲ್ಲ ಎಂದು ಹೇಳಬಲ್ಲಿರೇನು..? ಹಾಗೆ ಶರಾ ಎಳೆಯುವದೇ ಸಂಶೋಧನೆ ಎಂದುಕೊಳ್ಳುವದಾದರೆ ಇಂಥಾ ಸಂಶೋಧನೆ ಮಾಡದಿರುವದೇ ಒಳಿತು. ಅಷ್ಟಕ್ಕೂ ಚಾರಿತ್ರಿಕವಾದ ಸಂಗತಿಗಳನ್ನು ಆಧರಿಸಿ ಸಂಶೋಧನೆ ಮಾಡುವ ಸಂದರ್ಭದಲ್ಲಿ ಅಂತೆ-ಅಂತೆಗಳ ಬೊಂತೆ ತೀರಾ ಸಹಜ. ಇದೇ ಇಂಥಾ ಸಂಶೋಧಕರ ಪಾಲಿಗೆ ವರವಾಗಿದೆ. ಅಂದಾಜುಗಳನ್ನು. ಊಹೆಗಳನ್ನು, ತರ್ಕಗಳನ್ನು ಕರಾರುವಕ್ಕಾಗಿ ಮಾತನಾಡುವದೇ ಸಂಶೋಧನೆಯಲ್ಲ. ಜಾತಿಯಂಥ ಅಮೂರ್ತ, ಭಾವನಾತ್ಮಕ ವಿಷಯ 12 ನೇ ಶತಮಾನದಲ್ಲಿ ಹೊಂದಿರಬಹುದಾದ ಜಿಗುಟತನ, ಗಡಸುತನಗಳ ಎಳ್ಳಷ್ಟೂ ಅರಿವಿರದಿದ್ದರೂ ಅದನ್ನು ಸಂಖ್ಯಾಶಾಸ್ತ್ರೀಯವಾಗಿ ಪ್ರಮಾಣೀಕರಿಸಿ ಮಾತನಾಡುವದಿದೆಯಲ್ಲ.. ಅದೇ ಅತ್ಯಂತ ಅತಾರ್ಕಿಕವಾದುದು.

ಅಷ್ಟಕ್ಕೂ ಜಾತಿಯ ಬೇರು ನಮ್ಮ ಸಮಾಜದಲ್ಲಿ ತೀರಾ ಪ್ರಾಚಿನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಕ್ರಿ.ಪೂ. 300 ರ ಸಂದರ್ಭದಲ್ಲಿ ಈ ದೇಶಕ್ಕೆ ಭೇಟಿ ನೀಡಿದ ಗ್ರೀಕ್ ದೇಶದ ಮೆಗಾಸ್ತನಿಸ್ ಇಲ್ಲಿಯ ಜನಸಮೂಹ ವೃತ್ತಿಯಾಧಾರಿತ ಪ್ರತ್ಯೇಕಿತ ಸಮೂಹಗಳಲ್ಲಿ ಬದುಕುವ ಬಗ್ಗೆ ಉಲ್ಲೇಖಿಸಿದ್ದಾರೆ. ಆಯಾ ಕಸುಬುದಾರರು ಅವರವರ ಕಸುಬುದಾರಿಕೆಯ ಮನೆತನದ ಕನ್ಯೆಯನ್ನೇ ವಿವಾಹವಾಗುವ ಮಾತನಾಡಿರುವದನ್ನು ನೋಡಿದರೆ ಕುಲಕಸುಬುಗಳು, ಒಳಬಾಂಧವ್ಯ ವಿವಾಹಸಮೂಹಗಳು ಆಗಲೇ ಅಸ್ಥಿತ್ವದಲ್ಲಿ ಇದ್ದವು ಎನ್ನುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. [ಸೊಸೈಟಿ ಇನ್ ಇಂಡಿಯಾ-ಡೆವಿಡ್ ಮೆಂಡಲ್ ಬಾಮ್] ಡಾ.ಜಿ.ಎಸ್.ಘುರ್ರೆ ಹೇಳುವ ಹಾಗೆ “ಜಾತಿ ಎನ್ನುವದು ಇಂಡೊ-ಆರ್ಯನರ ಕೊಡುಗೆ. ಅವರು ಕ್ರಿ .ಪೂರ್ವ 2500 ರ ಸಂದರ್ಭದಲ್ಲಿ ಭಾರತದ ನೆಲವನ್ನು ಪ್ರವೇಶ ಮಾಡಿದ್ದೇ ದಾಸರು, ದಶ್ಯುಗಳು ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕುವ ಮೂಲಕ, ಜಾತಿ ವ್ಯವಸ್ಥೆಗೆ ಜನ್ಮ ನೀಡಿದರು.” [ಕಾಸ್ಟ್ ಆಂಡ್ ರೇಸ್ ಇನ್ ಇಂಡಿಯಾ -ಪು 162-163] ಜಾತಿಯ ಹುಟ್ಟಿನ ಬಗೆಗೆ ಯಾವುದೇ ರೀತಿಯ ಖಚಿತವಾದ ಆಧಾರಗಳಿಲ್ಲದಿದ್ದರೂ ಅದು ಪ್ರಾಚೀನಕಾಲದಿಂದಲೂ ನಮ್ಮೊಂದಿಗೆ, ನಮ್ಮ ಸಂಸ್ಕೃತಿ ಪರಂಪರೆಯ ಭಾಗವಾಗಿತ್ತು ಎನ್ನುವದನ್ನು ಅಲ್ಲಗಳೆಯಲಾಗದು.

ಇನ್ನು ಯೂರೋಪಿಯನ್ನರೇ ನಮಗೆ ಜಾತಿಯ ಮಾರಕ ಪರಿಣಾಮಗಳನ್ನು ತಿಳಿಸಿಕೊಟ್ಟರು ಎನ್ನುವ ವಿಚಾರದಲ್ಲಿ ಮಾತ್ರ ಯಾವುದೇ ಹುರುಳಿಲ್ಲ. ಯಾಕೆಂದರೆ ಇವತ್ತಿಗೂ ವಿದೇಶಿಯರಿಗೆ ಭಾರತವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲ. ಭಾರತ ಅಂದರೆ ಕೇವಲ ಹಿಂದು-ಮುಸ್ಲಿಂ ಧರ್ಮಗಳ ಸಾಂಸ್ಕೃತಿಕ ಸಂಘರ್ಷದ ನೆಲೆಯೆಂದೇ ಗ್ರಹಿಸಿರುವ ಅವರಿಗೆ, ಜಾತಿಯಂಥಾ ಸೂಕ್ಷ್ಮಾತಿಸೂಕ್ಷ್ಮ ಸಂಸ್ಥೆಯ ಗ್ರಹಿಕೆ ಅವರಿಗೆ ಸುಲಭಸಾಧ್ಯ ಎಂದು ನಂಬುವದೇ ಕಷ್ಟ. ಜಾತಿಯ ಬಗೆಗೆ ವಿದೇಶಿಯರು ನೀಡಿರುವ ವ್ಯಾಖ್ಯೆಗಳನ್ನೇ ಆ ದಿಸೆಯಲ್ಲಿ ಪರಿಶೀಲಿಸಬಹುದು. ಅಮೇರಿಕೆಯ ಸಿ.ಎಚ್.ಕೂಲೇ ಎನ್ನುವವರು “ವರ್ಗಗಳು ಯಾವಾಗ ಅನುವಂಶಿಯವಾಗಿ ಪರಿಣಮಿಸುತ್ತವೆಯೋ ಅದನ್ನೇ ಜಾತಿ ಎಂದು ಕರೆಯಬೇಕು” ಎನ್ನುತ್ತಾರೆ. ಈ ಕೂಲೇ ಅವರಿಗೆ ವರ್ಗ ಮತ್ತು ಜಾತಿಯ ನಡುವಿನ ಅಂತರಗಳ ಗ್ರಹಿಕೆಯೇ ಸಾಧ್ಯವಾದಂತಿಲ್ಲ. ಇನ್ನು ಮೆಕಾಯಿವರ್ ಪೇಜ್ ಎನ್ನುವ ಚಿಂತಕರು “ವ್ಯಕ್ತಿಯ ಅಂತಸ್ತು ಪೂರ್ವನಿರ್ಧರಿತವಾಗಿದ್ದು, ಅದನ್ನು ಬದಲಾಯಿಸುವ ಆಸೆ ವ್ಯಕ್ತಿಗೆ ಇಲ್ಲದಿದ್ದರೆ ಅದೇ ಜಾತಿ,” ಎಂದಿರುವದನ್ನು ನೋಡಿದರೆ ಬದಲಾಯಿಸುವ ಆಸೆ ವ್ಯಕ್ತಿಗೆ ಇದ್ದರೂ ಮೇಲ್ಮುಖ ಸಂಚಲನೆಗೆ ಅವಕಾಶಗಳಿಲ್ಲದಿರುವ ಬಗ್ಗೆ ಮೆಕಾಯಿವರ್ ಅವರ ಗ್ರಹಿಕೆಗೂ ಸಿಕ್ಕಂತಿಲ್ಲ ಎನ್ನುವದನ್ನು ಗಮನಿಸಿದರೆ ವಿದೇಶಿಯರಿಗೆ ಈ ಜಾತಿ ಎನ್ನುವ ಸಂಸ್ಥೆಯನ್ನೇ ಸರಿಯಾಗಿ ಗ್ರಹಿಸಲಾಗಿಲ್ಲ. ಕುರುಡರು ಕಂಡ ಆನೆಯ ವಿವರಣೆಯಂತಿರುವ ಅವರ ವಿಚಾರಧಾರೆಗಳನ್ನೇ ಸರಿ ಎನ್ನುವದು ಎಷ್ಟು ಸಮಂಜಸ..?

ಗಾಂಧೀಜಿಯವರು ಆಫ಼್ರಿಕಾದಲ್ಲಿ ವರ್ಣ ಭೇದ ನೀತಿಯ ವಿರುದ್ಧ ಹೋರಾಟ ಮಾಡಿದರು ಅಂದ ಮಾತ್ರಕ್ಕೆ ಅಲ್ಲಿಯವರೆಗೆ ಆಫ್ರಿಕನ್ನರಿಗೆ ವರ್ಣಬೇಧ ನೀತಿಯ ಅರಿವೇ ಇರಲಿಲ್ಲ, ಅದು ಸಾಧ್ಯವಾದದ್ದು ಗಾಂಧೀಜಿಯಿಂದ ಮಾತ್ರ ಎಂದಷ್ಟೇ ಮೇಲ್ ಮೇಲಿನ ವಿವರಣೆಯಾಗಿ ಜಾತಿ ಪದ್ಧತಿಯ ವಿಷಯವಾಗಿ ಯುರೋಪಿನ ಚಿಂತಕರನ್ನು ಕುರಿತು ತುತ್ತೂರಿ ಊದಿರುವಂತಿದೆ. ಇನ್ನೊಂದು ಆತ್ಯಂತಿಕವಾದ ಸಂಗತಿಯಿದೆ. ಜಾತಿ ಎನ್ನುವದು ಭಾರತೀಯ ಸಮಾಜದ ಏಕಮೇವ ಲಕ್ಷಣ. ಇದರ ಆಚರಣೆ, ಸಂಪ್ರದಾಯ, ಕಟ್ಟಳೆಗಳೇ ಇವತ್ತಿಗೂ ಇದನ್ನು ಅನುಸರಿಸುವ ಭಾರತೀಯರಿಗೇ ಸಷ್ಟವಾಗಿಲ್ಲ, ಅಂತಹದರಲ್ಲಿ ಹೊರಗಿನಿಂದ ಬಂದು, ಹೊರಗಿನಿಂದ ನಿಂತು ಈ ಜಾತಿ ಎನ್ನುವ ಸಂಕೀರ್ಣ ಸಂಸ್ಥೆಯನ್ನು ಗ್ರಹಿಸಲು ಸಾಧ್ಯವೇ ಇಲ್ಲ.

ವಚನಕಾರರ ಜೊತೆಗೆ ತಿರುಗಾಡಿ, ಅವರ ವಚನಗಳ ರಚನೆಗೆ ತಾವೇ ಖುದ್ದಾಗಿ ಒಂದು ಕಮ್ಮಟವನ್ನು ರಚಿಸಿ ನಿರ್ವಹಿಸಿದ್ದೇವೆ ಎನ್ನುವಂತೆ ಪ್ರತಿಶತದಲ್ಲಿ ಜಾತಿವಿರೋಧದ ನೆಲೆಯನ್ನು ಗುರುತಿಸುವ ಕುಖ್ಯಾತ ಸಂಶೋಧಕರು ಒಂದನ್ನು ತಿಳಿದಿರಬೇಕು. ಚಾರಿತ್ರಿಕವಾದ ಆಧಾರಗಳನ್ನು ಇಟ್ಟುಕೊಂಡು ಅಧ್ಯಯನ ಮಾಡಲಾಗುವ ಸಂಶೋಧನೆ, ಅಂಕಿ ಅಂಶಗಳನ್ನು ಲೇಪಿಸಿದ ಮಾತ್ರಕ್ಕೆ ಖಚಿತವಾಗುವದಿಲ್ಲ. ಬುದ್ದ ಮನೆ ಬಿಟ್ಟು ತೆರಳುವಾಗಿನ ಮಾನಸಿಕ ಸ್ಥಿತಿ ಕೇವಲ ಅವನಿಗೆ ಮಾತ್ರವಲ್ಲದೇ ಹೊರಗೆ ನಿಂತು ಗ್ರಹಿಸಿದ ಇನ್ಯಾರಿಗೂ ಸಾಧ್ಯವಿಲ್ಲ. ಅವಕಾಶ ಸಿಕ್ಕರೆ ಇಂಥಾ ಬುದ್ದನ ಮನ:ಸ್ಥಿತಿಯನ್ನೂ ಪ್ರತಿಶತದಲ್ಲಿ ಅಳತೆ ಮಾಡಿ ಮಾತನಾಡುವ ಖ್ಯಾತ ಸಂಶೋಧಕರು ಭವಿಷ್ಯದಲ್ಲಿ ಬಂದರೂ ಅಚ್ಚರಿ ಪಡಬೇಕಿಲ್ಲ. ಇನ್ನೊಂದು ಸಾರ್ವತ್ರಿಕ ಸತ್ಯವಿದೆ. ಯಾವುದೇ ಒಬ್ಬ ಲೇಖಕ ಇಲ್ಲವೇ ಸಂಶೋಧಕ ಏನೇ ಮಾತನಾಡಿದರೂ ಬರೆದರೂ ತನ್ನ ಮತಿಯ ಮಿತಿಯ ಒಳಗಡೆ ಮಾತ್ರ. ಯುರೋಪಿಯನ್ನರೇ ನಮಗೆ ಜಾತಿ ಎನ್ನುವದು ಒಂದು ಅನಿಷ್ಟ ಎನ್ನುವದನ್ನು ತೋರಿಸಿಕೊಟ್ಟರು, ತಿಳಿಸಿಕೊಟ್ಟರು ಎನ್ನುವದನ್ನು ಒಪ್ಪುವ, ತಿರಸ್ಕರಿಸುವ ಪ್ರಶ್ನೆಯೂ ನಮ್ಮ ನಮ್ಮ ಮತಿಯ ಮಿತಿಗೆ ಸಂಬಂಧಪಡುತ್ತದೆ.