Daily Archives: April 4, 2013

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ?


– ಚಿದಂಬರ ಬೈಕಂಪಾಡಿ


 

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ ?- ಇಂಥ ಪ್ರಶ್ನೆ ಕೇಳುವ ಅನಿವಾರ್ಯತೆಗೂ ಕಾರಣವಿದೆ. ಮತಹಾಕುವ ಜನ ಬಾಯಿಬಿಟ್ಟು ಇಂಥದ್ದೇ ಪಕ್ಷಕ್ಕೆ ಎಂದಾಗಲೀ, ಈ ಅಭ್ಯರ್ಥಿಗೆ ಅಂತಾಗಲೀ ನಿರ್ದಿಷ್ಟವಾಗಿ ಹೇಳುವುದಿಲ್ಲ. ಯಾರು ಕೇಳಿದರೂ ನಿಮ್ಮ ಪಕ್ಷಕ್ಕೇ ನಮ್ಮ ಮತ ಅಂತಲೋ, ನಿಮಗೇ ನಮ್ಮವರ ಮತವೆಂದೋ ಹೇಳುತ್ತಾರೆ. ಆದರೆ ಅವರ ಆಯ್ಕೆ ಯಾವುದಾದರೂ ಒಂದು ಆಗಿರುತ್ತದೆ.

ಹಾಗೆಯೇ ರಾಜಕಾರಣಿಗಳು ಅಪ್ಪಿ ತಪ್ಪಿ ಜನರ ಸಮಸ್ಯೆಗಳನ್ನು ಆಧರಿಸಿ ಮತ ಕೇಳುವುದಿಲ್ಲ. ತಮ್ಮ ಪಕ್ಷ, ತಮ್ಮ ನಾಯಕರ ವರ್ಚಸ್ಸು, ಅವರ ಸಾಧನೆಯನ್ನು ಹೇಳಿಕೊಂಡು ಮತಯಾಚನೆ ಮಾಡುತ್ತಾರೆ.

ಜನರು ತಮ್ಮ ಮತ ಯಾರಿಗೆ ಎಂದು ಗುಟ್ಟು ಬಿಡದಿರುವುದಕ್ಕೆ ತನ್ನ ಮತದ ಪಾವಿತ್ರ್ಯತೆ ಉಳಿಸಿಕೊಳ್ಳುವುದು. ಆದರೆ ರಾಜಕಾರಣಿಗಳು ಜನರ ಸಮಸ್ಯೆಗಳ ಹಿನ್ನೆಲೆಯಲ್ಲಿ ಮತ ಕೇಳದಿರುವುದಕ್ಕೆ ಅವುಗಳನ್ನು ನಿವಾರಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟವಾದ ಅರಿವಿನಿಂದ. ಜನರಿಗೆ ಬೇಕಾಗಿರುವವರು ತಮ್ಮ ಸಮಸ್ಯೆಗಳಿಗೆ ಕಿವಿಯಾಗುವವರು, voteತಮಗೆ ಧ್ವನಿಯಾಗುವವರು. ಕಿವಿಯಾಗದವರು, ಧ್ವನಿಯಾಗದವರು ಕೇವಲ ಭಾಷಣ ಮಾಡಿಯೇ ರಾಜಕಾರಣದಲ್ಲಿ ಚಲಾವಣೆಯಲ್ಲಿರುತ್ತಾರೆ. ಆದರೆ ಇಂಥವರನ್ನು ಜನ ಒಂದಲ್ಲಾ ಒಂದು ಸಲ ಗುರುತಿಸಿ ಮನೆಗೆ ಕಳುಹಿಸುತ್ತಾರೆ. ಅಂಥ ಎಚ್ಚರಿಕೆ ಸಂದೇಶ ಚುನಾವಣೆಯ ಮೂಲಕ ರವಾನೆಯಾದಾಗ ಮಾತ್ರ ಜನ ನಿರೀಕ್ಷೆ ಮಾಡಲು ಅವಕಾಶವಾಗುತ್ತದೆ.

ರಾಜ್ಯದ 224 ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಜನ ನಿರ್ಧರಿಸುವ ಮುನ್ನವೇ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ಮುಖ್ಯಮಂತ್ರಿಯಾಗುತ್ತಾರೆಂದು ಮಾಧ್ಯಮಗಳು ಭವಿಷ್ಯ ನುಡಿದಿವೆ. ಚುನಾವಣೆಗೂ ಮುನ್ನವೇ ಬರುತ್ತಿರುವ ಇಂಥ ಜನಮತವನ್ನು ರಾಜಕೀಯ ಪಕ್ಷಗಳು ಯಾವರೀತಿ ಸ್ವೀಕರಿಸುತ್ತಿವೆ ಎನ್ನುವುದೂ ಮುಖ್ಯ.

ಜನಮತ ತಮ್ಮ ಪರವಾಗಿ ಬಂದಿದ್ದರೆ ಖುಷಿ ಪಡುತ್ತಾರೆ, ವಿರುದ್ಧವಾಗಿ ಬಂದಿದ್ದರೆ ಕೆಂಡಕಾರುತ್ತಾರೆ. ಮತದಾರನ ಮನದಾಳವನ್ನು ಮಾಧ್ಯಗಳು ಅರ್ಥಮಾಡಿಕೊಂಡಿರುವುದಾಗಿ ಹೇಳುತ್ತಿರುವುದು ಅದು ಆ ಮಾಧ್ಯಮಗಳ ವೈಯಕ್ತಿಕವಾದ ನಿಲುವು ಮತ್ತು ಅದು ನಿಜವಾದ ಜನಮತಕ್ಕೆ ಹತ್ತಿರವಿರಬಹುದು, ಇಲ್ಲದೆಯೂ ಇರಬಹುದು.
ರಾಜಕೀಯದಲ್ಲಿ ಟ್ರೆಂಡ್ ಎನ್ನುವ ಪದ ಬಹಳಷ್ಟು ಬಳಕೆಯಲ್ಲಿದೆ. ಟ್ರೆಂಡ್ ಶಾಶ್ವತವಲ್ಲ. ಕ್ಷಣ ಕ್ಷಣಕ್ಕೆ ಬದಲಾವಣೆಯಾಗುತ್ತಿರುತ್ತದೆ. ಒಂದು ದಿನದಲ್ಲಿ ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರ ಜನರಿಗಿರುವ ಒಲವು ಮತ್ತೊಂದು ದಿನದಲ್ಲೂ ಹಾಗೆಯೇ ಇರುವುದಿಲ್ಲ. ಏರಿಳಿತವಾಗಬಹುದು, ಏರಿಕೆಯೇ ಹೆಚ್ಚಾಗಿರಬಹುದು, ಇಳಿಕೆಯೇ ಅತಿಯಾಗಿರಬಹುದು. ಈ ಟ್ರೆಂಡ್ ಶಾಶ್ವತವಲ್ಲದ ಕಾರಣ ಅದನ್ನೇ ಪೂರ್ಣವಾಗಿ ನಂಬುವಂತಿಲ್ಲ.

ಈಗಿನ ರಾಜಕಾರಣದಲ್ಲಿ ಟ್ರೆಂಡ್‌ಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಂಬಿಯೇ ವಾಸ್ತವವನ್ನು ಮರೆತು ಭ್ರಮೆಗೆ ಒಳಗಾಗುತ್ತಾರೆ. INDIA-ELECTIONಈ ಭ್ರಮೆಗಳ ಭರಾಟೆ ರಾಜಕಾರಣಿಗಳು ಮೈಮರೆಯುವಂತೆ ಮಾಡುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಚುನಾವಣಾ ಪೂರ್ವ ಸಮೀಕ್ಷೆ ನಿರ್ದಿಷ್ಟವಾಗಿ ಒಂದು ಪಕ್ಷದ ಪರವಾಗಿ ಬಂದಿದ್ದರೂ ಅದು ಪ್ರೀಮೆಚೂರ್.

ನಿರ್ದಿಷ್ಟವಾಗಿ ಗೆಲ್ಲುವ, ಅಧಿಕಾರಕ್ಕೇರುವ ಪಕ್ಷವನ್ನು ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವನ್ನು ಮಾನದಂಡವಾಗಿಟ್ಟುಕೊಂಡು ಆ ದಿನ ಊಹಿಸಿದ್ದಾಗಿನ ಸ್ಥಿತಿ ಟಿಕೆಟ್ ಹಂಚಿಕೆ ಕಾಲಕ್ಕೆ ಬದಲಾಗಿದೆ. ಅಭ್ಯರ್ಥಿಗಳು ಕಣಕ್ಕಿಳಿಯುವ ತವಕದಲ್ಲಿರುವ ಈ ಹಂತದಲ್ಲಿ ಕಾಣುತ್ತಿರುವ ಟ್ರೆಂಡ್ ಆಧರಿಸಿ ಏನನ್ನೂ ಹೇಳುವಂತಿಲ್ಲ. ಯಾವುದೇ ಪಕ್ಷ ಗೆಲುವನ್ನು ಬಯಸುವುದು ತಪ್ಪಲ್ಲ. ಸ್ಪರ್ಧೆ ಮಾಡುವುದು ಗೆಲ್ಲಬೇಕು ಎನ್ನುವ ಉದ್ದೇಶದಿಂದಲೇ ಆದರೂ ಮತದಾರರು ಮನಸ್ಸು ಮಾಡಬೇಕು. ಮತದಾರನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವುದಾದರೆ ಅವನ ಮುಂದಿರುವ ಆಯ್ಕೆಯ ಮಾನದಂಡಗಳೇ ಬೇರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣಗಳನ್ನು ಬದಿಗಿಟ್ಟು ತನ್ನ ಆಯ್ಕೆ ಏನೆಂದು ನಿರ್ಧರಿಸಲು ಮತದಾರ ತಿಣುಕಾಡುತ್ತಿದ್ದಾನೆ. ಅವನ ಆಶೋತ್ತರಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಕಣದಲ್ಲಿದ್ದವರ ಪೈಕಿ ಅನಿವಾರ್ಯವಾಗಿ ಆಯ್ಕೆ ಮಾಡಬೇಕಾಗಿದೆ. ಅಂಥ ಮುಖಗಳು ಇನ್ನಷ್ಟೇ ಅನಾವರಣವಾಗಬೇಕಿದೆ. vote-participate-democracyಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೇಲೆ ಜನ ಒಲವು ತೋರಿಸಿರುವುದು ನಿಜವಾದರೂ ಆ ಒಲವಿನ ಹಿಂದೆ ತೀರಾ ಖಾಸಗಿತನವಿತ್ತು. ತನ್ನ ಪರಿಸರವನ್ನು ಗಮನದಲ್ಲಿಟ್ಟುಕೊಂಡೇ ಮತಚಲಾಯಿಸಿದ್ದ. ಆದರೆ ವಿಧಾನ ಸಭೆಯಲ್ಲಿ ಅಂಥ ಸ್ಥಿತಿ ಇಲ್ಲ. ಪಕ್ಷ, ಜಾತಿ, ಅಭ್ಯರ್ಥಿಯ ಪ್ರಭಾವಗಳೂ ಮುಖ್ಯವಾಗುತ್ತವೆ. ಬಿಜೆಪಿ, ಕೆಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‌ಆರ್, ಈ ಐದೂ ಪಕ್ಷಗಳು ತಮ್ಮ ತಮ್ಮ ಅಜೆಂಡಾವನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತವೆ. ಎಲ್ಲಾ ಪಕ್ಷಗಳಲ್ಲೂ ಬಂಡಾಯವಿದೆ, ಜೊತೆಗೆ ಪಕ್ಷೇತರರ ಸ್ಪರ್ಧೆಯೂ ಇದೆ. ಏಕಗಂಟಿನಲ್ಲಿ ಮತಗಳು ಯಾವ ಪಕ್ಷಕ್ಕೂ ಬೀಳುವುದಿಲ್ಲ. ಯಾಕೆಂದರೆ ಅವರ ಮುಂದೆ ಆಯ್ಕೆಗೆ ಹಲವು ಮುಖಗಳಿವೆ. ಜಾತಿ, ಧರ್ಮ, ಭಾಷೆ, ಹಣ, ಪಕ್ಷ ಇವುಗಳ ಆಧಾರದಲ್ಲಿ ಹಂಚಿಕೆಯಾಗುತ್ತವೆ. ಹೀಗಾಗಬಾರದು ಎನ್ನುವುದು ನಿರೀಕ್ಷೆಯಾದರೂ ಹಾಗೆ ಆಗುವುದು ಈಗಿನ ರಾಜಕೀಯದ ಅನಿವಾರ್ಯತೆ, ಪರಿಸ್ಥಿತಿಯ ಒತ್ತಡ. ಮತದಾರನ ಕಣ್ಣಮುಂದಿರುವ ಅಭ್ಯರ್ಥಿಗೆ ಗೆಲುವು ಅನಿವಾರ್ಯವಾದರೂ ಅವನಿಗೆ ಎಲ್ಲರೂ ಅನಿವಾರ್ಯವಲ್ಲ.

ಪಕ್ಷಕ್ಕೆ ಗೆದ್ದು ಅಧಿಕಾರಕ್ಕೇರುವುದೇ ಮುಖ್ಯಹೊರತು ಇಂಥವರೇ ಗೆಲ್ಲಬೇಕೆಂಬ ಸ್ವಾರ್ಥವಿಲ್ಲ. ಆದರೆ ನಾಯಕರಿಗೆ ತಮ್ಮದೇ ಆದ ಹಿಡನ್ ಅಜೆಂಡಾಗಳಿರುತ್ತವೆ. ತನ್ನ ಬೆಂಬಲಿಗರು ಗೆದ್ದು ಬರಬೇಕು ಎನ್ನುವ ಸ್ವಾರ್ಥ ಹೆಡೆಯೆತ್ತಿರುತ್ತದೆ. ಈ ಕಾರಣದಿಂದಲೇ ಪಕ್ಷಗಳಲ್ಲಿ ನಾಯಕರೊಳಗೇ ಆಂತರಿಕವಾದ ಲೆಕ್ಕಾಚಾರಗಳಿರುತ್ತವೆ. ಕೆಲವು ಆಯಕಟ್ಟಿನ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎನ್ನುವ ಅರಿವಿದ್ದೇ ಕಣಕ್ಕಿಳಿಸುವ ತಂತ್ರಗಾರಿಕೆಯೂ ಈಗಿನ ರಾಜಕೀಯದ ಒಳಸುಳಿ.

ಇಂಥ ತಾಜಾಸ್ಥಿತಿ ರಾಜಕೀಯದಲ್ಲಿರುವುದರಿಂದಲೇ ಮತದಾರ ಯಾರನ್ನು ಬೆಂಬಲಿಸುತ್ತಾನೆ ಎನ್ನುವುದು ಇನ್ನೂ ಅನಿಶ್ಚಿತ. ಟಿಕೆಟ್ ಹಂಚಿಕೆಯ ನಂತರದ ರಾಜಕೀಯ ಸ್ಥಿತಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಚುನಾವಣೆಯಲ್ಲೂ ಬಂಡಾಯ ಈಗಿನ ಟ್ರೆಂಡ್. ಅದು ಹುಟ್ಟುಹಾಕುವ ಅಲೆಗಳು ಪೂರ್ವನಿರ್ಧಾರಿತ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತದೆ. ಹೀಗಾಗುವುದು ರಾಜಕೀಯ ಪಕ್ಷಗಳ ನಾಯಕರುಗಳ ಸ್ವಯಂಕೃತ ಅಪರಾಧ ಹೊರತು ಮತದಾರ ಕೊಡುವ ತೀರ್ಮಾನವಲ್ಲ. ಮತದಾರನ ಇಂಗಿತವನ್ನು ಅರ್ಥಮಾಡಿಕೊಳ್ಳದ ರಾಜಕೀಯ ಪಕ್ಷ, ನಾಯಕರು ಸೋಲಿಗೆ ಕಾರಣರಾಗುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಬಂದಿರುವ ಪಕ್ಷೇತರರ ಸಂಖ್ಯೆ ಈ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿಯ ಟ್ರೆಂಡ್. ಬಂಡಾಯ ಎದ್ದಷ್ಟೂ ಅಪಾಯ ಆ ಪಕ್ಷಕ್ಕೆ. ಇದು ರಾಜಕೀಯ ಪಕ್ಷಗಳ ನಾಯಕರುಗಳಿಗೂ ಗೊತ್ತಿದೆ. ಆದರೂ ಜಾಣಕುರುಡುತನ ಪ್ರದರ್ಶಿಸುವುದು ಅವರ ಚತುರತೆಯಲ್ಲ.

ಗುಜರಾತ್ ಲೋಕಾಯುಕ್ತ ಕಾಯ್ದೆ ತಿದ್ದುಪಡಿ – ಲೋಕಾಯುಕ್ತ ದುರ್ಬಲಗೊಳಿಸುವ ಯತ್ನ

– ಆನಂದ ಪ್ರಸಾದ್

ಗುಜರಾತ್ ವಿಧಾನಸಭೆಯಲ್ಲಿ ಆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಅಧಿಕಾರಸ್ಥರ ಕೈಗೊಂಬೆಯನ್ನಾಗಿ ಮಾಡುವ ಪ್ರಯತ್ನ ಮುಖ್ಯಮಂತ್ರಿ ಮೋದಿಯವರಿಂದ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಖಾಲಿ ಬಿಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪಾರದರ್ಶಕ ಆಡಳಿತ ನೀಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಇದು ತದ್ವಿರುದ್ಧವಾಗಿದೆ. Narendra_Modiಮುಖ್ಯಮಂತ್ರಿಯ ಈ ನಿಲುವಿನಿಂದ ಬೇಸತ್ತ ಗುಜರಾತಿನ ರಾಜ್ಯಪಾಲರು ನೂತನ ಲೋಕಾಯುಕ್ತರನ್ನು ನೇಮಿಸಿದ್ದರೂ ಅದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ರಾಜ್ಯ ಸರ್ಕಾರದ ನಿಲುವನ್ನು ಅವೆರಡೂ ತಳ್ಳಿಹಾಕಿ ಲೋಕಾಯುಕ್ತರ ನೇಮಕ ಸಿಂಧು ಎಂದು ತೀರ್ಪು ನೀಡಿವೆ. ಈ ಮಧ್ಯೆ ಮೋದಿ ಸರ್ಕಾರ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದೆ. ಇದೀಗ ಲೋಕಾಯುಕ್ತರ ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದೆ.

ಲೋಕಾಯುಕ್ತ ಕಾಯ್ದೆಗೆ ತಂದಿರುವ ನೂತನ ತಿದ್ದುಪಡಿಯ ಪ್ರಕಾರ ಲೋಕಾಯುಕ್ತರ ನೇಮಕದ ಅಧಿಕಾರ ರಾಜ್ಯ ಸರ್ಕಾರದ ಪರಮಾಧಿಕಾರವನ್ನಾಗಿ ಮಾಡಲಾಗಿದೆ. ಲೋಕಾಯುಕ್ತರ ನೇಮಕ ಸಮಿತಿಯೊಂದರ ಮೂಲಕ ಮಾಡಲಾಗುತ್ತದೆ. ಅದಕ್ಕೆ ಸದಸ್ಯರಾಗಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆಯ ಸ್ಪೀಕರ್, ವಿರೋಧ ಪಕ್ಷದ ನಾಯಕ, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸೂಚಿಸುವ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ರಾಜ್ಯದ ವಿಜಿಲೆನ್ಸ್ ಕಮಿಷನರ್ ಹೀಗೆ ಆರು ಜನರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ನೂತನ ತಿದ್ದುಪಡಿಯ ಪ್ರಕಾರ ರಾಜ್ಯಪಾಲರ ಲೋಕಾಯುಕ್ತ ನೇಮಕದ ಅಧಿಕಾರವನ್ನು ತೆಗೆದುಹಾಕಲಾಗಿದೆ. ರಾಜ್ಯಪಾಲರು ಸಮಿತಿಯು ಸೂಚಿಸಿದ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ಮಾಡಬೇಕಾಗುತ್ತದೆ.

ಲೋಕಾಯುಕ್ತ ನೇಮಕ ಸಮಿತಿಯಲ್ಲಿ ರಾಜ್ಯ ಸರ್ಕಾರದ ಹಿಡಿತ ಅಧಿಕವಾಗಿದೆ ಹೇಗೆಂದರೆ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆ ಸ್ಪೀಕರ್ ಹೀಗೆ ಮೂರು ಜನ ಸೇರಿ 50% ಹಿಡಿತ ರಾಜ್ಯ ಸರ್ಕಾರದಲ್ಲಿರುತ್ತದೆ. ಅದಲ್ಲದೆ ರಾಜ್ಯ ವಿಜಿಲೆನ್ಸ್ ಕಮಿಷನರ್ ಕೂಡ ರಾಜ್ಯ ಸರ್ಕಾರದ ನೇಮಕವಾಗಿರುವ ಕಾರಣ ಈ ಹಿಡಿತ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನುಳಿದಿರುವುದು ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರು. ಇವರು ಅಲ್ಪಸಂಖ್ಯಾತರಾಗಿರುವ ಕಾರಣ ಬಹುಸಂಖ್ಯಾತ ಸದಸ್ಯರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಹೀಗೆ ಅಧಿಕಾರಸ್ಥರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಇವರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೀಗೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇದರ ಬದಲು ಹೈಕೋರ್ಟಿನ ನ್ಯಾಯಾಧೀಶರು, ವಿರೋಧ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿ graft-corruptionಹೀಗೆ ಮೂವರಿಗೂ ಒಪ್ಪಿಗೆಯಾಗುವ ವ್ಯಕ್ತಿ ಅಥವಾ ಈ ಮೂವರಲ್ಲಿ ಇಬ್ಬರಿಗೆ ಒಪ್ಪಿಗೆಯಾಗುವ ವ್ಯಕ್ತಿ ಲೋಕಾಯುಕ್ತರಾದರೆ ಅದನ್ನು ನಿಷ್ಪಕ್ಷಪಾತ ನೇಮಕ ಎಂದು ಹೇಳಬಹುದು. ಮೋದಿ ಸರ್ಕಾರದ ಕ್ರಮ ಇದಕ್ಕೆ ಪೂರಕವಾಗಿಲ್ಲ. ಹೀಗಾಗಿ ಮೋದಿ ಸರ್ಕಾರಕ್ಕೆ ನಿಷ್ಪಕ್ಷಪಾತ ನೇಮಕ ಬೇಕಾಗಿಲ್ಲ, ತನ್ನ ಕೈಗೊಂಬೆಯಾಗುವ ವ್ಯಕ್ತಿಯ ನೇಮಕ ಬೇಕಾಗಿದೆ ಎಂದು ಹೇಳಬಹುದು. ಕೇಂದ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐ ಅನ್ನು ಕೈಗೊಂಬೆಯ ರೀತಿ ಬಳಸುತ್ತದೆ ಎಂದು ವ್ಯಂಗ್ಯವಾಡುವ ಮೋದಿಯವರು ಅಥವಾ ಬಿಜೆಪಿಯವರು ಈಗ ಗುಜರಾತಿನಲ್ಲಿ ಮಾಡಲು ಹೊರಟಿರುವುದು ಇದನ್ನೇ ಅಲ್ಲವೇ? ಹೀಗಾದರೆ ಇವರಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡದೆ ಇರಲಾರದು.

ಗುಜರಾತಿನ ವಿಧಾನಸಭೆಯಲ್ಲಿ ಮಂಡಿಸಿದ 2009-2010 ಹಾಗೂ 2010-2011ನೇ ಸಾಲಿನ ಸಿಎಜಿ ವರದಿ ರಾಜ್ಯ ಸರ್ಕಾರ 17,000 ಕೋಟಿ ಅವ್ಯವಹಾರ ನಡೆಸಿದೆ ಹಾಗೂ ಬೊಕ್ಕಸಕ್ಕೆ ನಷ್ಟವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನು ನೋಡುವಾಗ ಮೋದಿ ಸರ್ಕಾರದಲ್ಲಿ ಅವ್ಯವಹಾರಗಳು ನಡೆದಿರುವ ಮತ್ತು ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತರ ನೇಮಕ ಮಾಡಲಾಗಿಲ್ಲ ಮತ್ತು ತಮ್ಮ ಕೈಗೊಂಬೆಯಾಗುವ ಲೋಕಾಯುಕ್ತರ ನೇಮಕ ಮೋದಿ ಸರ್ಕಾರಕ್ಕೆ ಬೇಕಾಗಿದೆ ಎಂಬ ಅಭಿಪ್ರಾಯ ಜನತೆಯಲ್ಲಿ ಮೂಡಿದರೆ ಅಚ್ಚರಿ ಇಲ್ಲ. ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಸಾಧ್ಯ ಎಂಬ ಪ್ರಚಾರ ಬಂಡವಾಳಶಾಹಿಗಳು ವ್ಯವಸ್ಥಿತವಾಗಿ ನಡೆಸುವ ಅಬ್ಬರದ ಪ್ರಚಾರ ಎಂದು ಇದರಿಂದ ಜನರಿಗೆ ಅನಿಸುವ ಸಾಧ್ಯತೆ ಹೆಚ್ಚಾಗಿದೆ.