Daily Archives: April 22, 2013

ಹರ್ಷ ಮಂದೇರ್ ಬರಹ – 3: ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರವೇಕೆ?

– ಹರ್ಷ ಮಂದೇರ್
ಅನುವಾದ: ಅರುಣ್ ಕಾಸರಗುಪ್ಪೆHarsha Mander

ಸರ್ಕಾರಗಳು ಆಗಾಗ ಎಚ್ಚೆತ್ತುಕೊಂಡಂತೆ ಮೈಕೊಡವಿಕೊಂಡು ಮೇಲೆದ್ದು ಭಿಕ್ಷುಕರ ಮೇಲೆ ಕತ್ತಿ ಛಳಪಿಸುವುದಿದೆ. ಕೈಯೊಡ್ಡುವುದನ್ನೇ ಬದುಕನ್ನಾಗಿಸಿಕೊಂಡ, ಸಮಾಜದ ಪಾಲಿಗೆ ಮೈಲಿಗೆಯಾದ ಈ ಮಂದಿ ಎಲ್ಲಾದರೂ ಸರ್ವಶಕ್ತ ಪ್ರಭುತ್ವದ ಎದುರು ನಿಂತು ಬಡಿದಾಡುವುದುಂಟೇ? ಅವಮಾನಗಳನ್ನು ಅರಗಿಸಿಕೊಳ್ಳುತ್ತಾ, ಇಂಥ ಸಾವಿರಾರು ಪ್ರಹಾರಗಳಿಗೆ ಒಡ್ಡಿಕೊಳ್ಳುತ್ತಾ, ಅವುಗಳನ್ನೇ ನುಂಗಿಕೊಂಡು ಬಂದ ಭಿಕ್ಷುಕ ಸಮುದಾಯ ತನ್ನದೇ ಆದ ಸಾಂಪ್ರದಾಯಿಕ ರಕ್ಷಣಾ ತಂತ್ರವೊಂದನ್ನು ಅಳವಡಿಸಿಕೊಂಡಿದೆ. ಅದೆಂದರೆ, ಸರ್ಕಾರದ ಆಟಾಟೋಪ ತಿಳಿಯಾಗುವ ತನಕ ಭೂಗತವಾಗಿ ತಣ್ಣಗಿದ್ದು ಬಳಿಕ ಮತ್ತೆ ಬೀದಿಗಿಳಿಯುವುದು. ಆ ಬಳಿಕ ಸಮಾಜದ ಎದುರು ಮತ್ತದೇ ಮಾಸಿದ ಕೈಗಳು, ದಯನೀಯ ಮುಖಗಳು. ಅದನ್ನು ಬಿಟ್ಟು ಅವರ ಪಾಲಿಗಿರುವ ದಾರಿಯಾದರೂ ಯಾವುದು?

ಪ್ರಭುತ್ವದ ಇಂಥ ಈ ಪ್ರಹಾರಕ್ಕೆ ಇನ್ನಿಲ್ಲದ ಬೆಂಬಲ ನೀಡುತ್ತಿರುವುದು ಸುಶಿಕ್ಷಿತ ಮಧ್ಯಮ ವರ್ಗ. ಈ ಕಳೆಗೆಟ್ಟ ಮುಖಗಳ, ನಾರುವ ಮೈಗಳ, ಜಿಡ್ಡುಗಟ್ಟಿದ ತಲೆಗಳ, ಕೊಳಕೇ ಮೈದಳೆದಂತಿರುವ ಬೀದಿ ಭಿಕಾರಿಗಳು, ನಿಂತಲೆಲ್ಲಾ ಕರುಣಾಜನಕವಾಗಿ ಪೀಡಿಸುವ ಆ ಕೊಳಕು ಕೈಗಳು ಸುಶಿಕ್ಷಿತ ಮಧ್ಯಮ ವರ್ಗಗಳಲ್ಲಿ ಹುಟ್ಟು ಹಾಕುವ ಅಸಮಾಧಾನ, ಅಸಹನೆ ಕೂಡ ಪ್ರಭುತ್ವದ ಈ ಪ್ರಹಾರಕ್ಕೆ ನೈತಿಕ ಬೆಂಬಲ ಒದಗಿಸುತ್ತವೆ. ಚಿತ್ರಮಂದಿರಗಳು, ಟ್ರಾಫಿಕ್ ಸಿಗ್ನಲ್ಗಳು, ಶಾಪಿಂಗ್ ಆರ್ಕೆಡ್ಗಳು, ದೇವಸ್ಥಾನಗಳು, ಹೀಗೆ ಎಲ್ಲೆಂದರಲ್ಲಿ ಕಣ್ಣಿಗೆ ಬೀಳುವ, ತಮ್ಮ ಇರುವಿಕೆಯಿಂದಲೇ ಮುಜುಗರವುಂಟು ಮಾಡುವ ಭಿಕ್ಷುಕರ ಬಗ್ಗೆ ಮಧ್ಯಮ ವರ್ಗದ ಮಂದಿಗೆ ಎಂದಿಗೂ ತೀರದ ಅಸಹನೆ. ಕಣ್ಣೆದುರು ಬೆತ್ತಲೆಯಾಗಿ ನಿಲ್ಲುವ ಈ ‘ನಡೆದಾಡುವ ದಾರಿದ್ಯ್ರತನ’ ತಂದೊಡ್ಡುವ ಮುಜುಗರದ ಜೊತೆ, ಇವರೆಲ್ಲಾ ದಿನದ ಕೂಳನ್ನೂ ದುಡಿಯಲಾಗದ ಸೋಮಾರಿಗಳು ಹಾಗೂ ಮಕ್ಕಳನ್ನು ಊನಗೊಳಿಸಿ ಭಿಕ್ಷೆಗಾಗಿ ಬೀದಿಗೆ ಬಿಡುವ ದುಷ್ಟರ ಪಡೆ ಎಂಬ ಪೂರ್ವಗ್ರಹೀತವೂ ಸೇರಿ ಭಿಕ್ಷುಕರು ಎಂದರೆ “ಕರುಣೆಗೆ ಅಯೋಗ್ಯರಾದ ಜೀವಹೇಡಿಗಳು” ಎಂದೇ ನಂಬಲಾಗುತ್ತದೆ. ಇವರೆಲ್ಲಾ ಸಭ್ಯ – ಸುಶಿಕ್ಷಿತರು ಎನ್ನಿಸಿಕೊಂಡ, ಕಾನೂನು ಪರಿಪಾಲಕ ಪ್ರಜಾವರ್ಗದ ಹಿತದೃಷ್ಟಿಯಿಂದ ನಾಗರಿಕ ಸಮಾಜಕ್ಕೆ ಸೋಂಕದಂತೆ ದೂರವಿಡಬೇಕಾದ ಅನಿಷ್ಠ ಕಳೆಗಳು ಎಂಬುದು ಮಧ್ಯಮ ವರ್ಗದ ಅಂಬೋಣ. ಇಂಥ ನಂಬಿಕೆಗಳನ್ನು ಈ ನೆಲದ ಕಾನೂನುಗಳು, ಪೊಲೀಸ್ ವ್ಯವಸ್ಥೆ, ಸಮಾಜ ಕಲ್ಯಾಣ ಇಲಾಖೆಗಳು ಹಾಗೂ ಮಾಧ್ಯಮಗಳು ತಮ್ಮ ನಡಾವಳಿಗಳ ಮೂಲಕ ಬಲಪಡಿಸುತ್ತಾ ಹೋಗುತ್ತವೆ.

ಹಾಗಾದರೆ ಇವರೆಲ್ಲಾ ಕೇವಲ ತೊಡಕುಗಳೇ?

ತಲೆಮಾರುಗಳಿಂದ ಜಾರಿಯಲ್ಲಿರುವ ಈ ಸಂಘರ್ಷವನ್ನು ಇನ್ನೊಂದು ವಿಪರೀತ ಘಟ್ಟಕ್ಕೆ ತಲುಪಿಸಿರುವ ದೆಹಲಿಯ ಸಂಚಾರಿ ಪೊಲೀಸರು ಟ್ರಾಫಿಕ್ ಸಿಗ್ನಲ್ಗಳಲ್ಲಿ ಇಂಥ ಬಿಕ್ಷುಕರಿಗೆ ಕಾಸು ಹಾಕುವ ಪ್ರತಿಯೊಬ್ಬರ ಮೇಲೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕನಿಷ್ಠ 1000 ರುಪಾಯಿಗಳ ಜುಲ್ಮಾನೆ ವಿಧಿಸುತ್ತಿದ್ದಾರೆ. ಆಮೂಲಕ, ಸಾಮಾಜಿಕ ಹಾಗೂ ಮಾನವೀಯ ದುರಂತದ ನಿದರ್ಶನವಾಗಬೇಕಾಗಿದ್ದ ಆದರೆ ಸಮಾಜದ ಕಣ್ಣಿನಲ್ಲಿ ‘ಹೇಸಿಗೆ’ಯಾಗಿದ್ದ ಭಿಕ್ಷುಕರು ಇಂದು ಕಾನೂನು ದೃಷ್ಟಿಯಲ್ಲೂ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ತೊಡಕುಗಳಾಗಿದ್ದಾರೆ. ಇಂಥದ್ದೊಂದು ಮನಸ್ಥಿತಿಯನ್ನು ನ್ಯಾಯಾಲಯಗಳೂ ತಮ್ಮ ತೀರ್ಪುಗಳ ಮೂಲಕ ಎತ್ತಿ ಹಿಡಿದಿವೆ. ನ್ಯಾಯವಾದಿಗಳ ಗುಂಪೊಂದು ಹೂಡಿದ “ಸಾರ್ವಜನಿಕ ಹಿತಾಸಕ್ತಿ” ಮೊಕದ್ದಮೆಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿರುವ ನ್ಯಾಯಪೀಠ, ದೆಹಲಿಯ ಸುಗಮ ಸಂಚಾರಿ ವ್ಯವಸ್ಥೆಗೆ ಅಡ್ಡಿಯುವುಂಟು ಮಾಡುವ ಈ ಭಿಕ್ಷುಕ ಸಮುದಾಯವನ್ನು ದೆಹಲಿಯ ಮುಖದಿಂದಲೇ ಒರೆಸಿ ಹಾಕಬೇಕು ಎಂದು ಅಭಿಪ್ರಾಯಪಟ್ಟಿತ್ತು. ಈ ತೀರ್ಪಿಗೆ ಕಾರಣವಾದ “ಸಾರ್ವಜನಿಕ ಹಿತಾಸಕ್ತಿ” ಮೊಕದ್ದಮೆಯಲ್ಲಿ ಬಳಸಲಾದ ನುಡಿಗಟ್ಟುಗಳು ಕೂಡ ಬಿಕ್ಷುಕರನ್ನು “ರಾಷ್ಟ್ರ ರಾಜ್ಯಧಾನಿಯ ಕೊಳಕು ಮುಖ” ಎಂದೇ ವ್ಯಾಖ್ಯಾನಿಸುತ್ತವೆ ಹಾಗೂ “ರಸ್ತೆ ರೇಜಿಗೆ”ಗೆ ಕಾರಣವಾಗುವ ಹಲವು ಅಂಶಗಳಲ್ಲಿ ಇದೂ ಎಂದು ಷರಾ ಹಾಕುತ್ತವೆ. ದೆಹಲಿಯ ಸಮಾಜ ಕಲ್ಯಾಣ ಇಲಾಖೆಯ ಪ್ರಕಾರ ಭಿಕ್ಷೆ ಹಾಕುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗುವುದಕ್ಕಿಂತ ಇನ್ಯಾವುದೇ ಅಪರಾಧಕ್ಕಿಂತ ಹೆಚ್ಚಿನ ಗುರುತರ ಅಪರಾಧ. ಕಳೆದ ವರ್ಷ ಕೆಲವು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ಜಾಹೀರಾತು ಸಮಾಜದ ಒಟ್ಟಾರೆ ದೃಷ್ಟಿಕೋನ, ಪೂರ್ವಾಗ್ರಹವೆಲ್ಲವಕ್ಕೂ ಕನ್ನಡಿ ಹಿಡಿಯುತ್ತದೆ. ಆ ಜಾಹೀರಾತು ಹೇಳುವಂತೆ, ಭಿಕ್ಷುಕರಿಗೆ ಅನುಕಂಪ ತೋರಿಸುವ ಮೂಲಕ ಸಾರ್ವಜನಿಕರು ನಗರದ ಟ್ರಾಫಿಕ್ ಜಾಮ್ಗಳು, ಅಫಘಾತಗಳು, ಅನಕ್ಷರತೆ, ಅಡಚಣೆ, ನಿರುದ್ಯೋಗ, ಬೀಡಿ, ಸಿಗರೇಟ್, ಮದ್ಯ, ಭಾಂಗ್, ಗಾಂಜಾ, ಚರಸ್, ಹೆರಾಯಿನ್…ಮ್ಯಾಂಡ್ರಾಕ್ಸ್, ರಾಬರಿ, ರೇಪ್, ಕಳ್ಳತನ, ಕೊಲೆ, ವೇಶ್ಯಾವಾಟಿಕೆ, ಅಂಗವಿಕಲತೆ, ಹೊಡೆದಾಟ, ಗೂಂಡಾಗಿರಿ” ಈ ಎಲ್ಲದಕ್ಕೂ ಕಾರಣರಾಗುತ್ತಿದ್ದಾರೆ. ಮಾತ್ರವಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಕೊಳಗೇರಿಗಳು, ಬಡತನ, ಸಾಲ, ಅಜ್ಞಾನ, ಆಕ್ರಮಣಕಾರಿ ಪ್ರವೃತ್ತಿ, ನೆಲಗಳ್ಳತನ, ಅತ್ಯಾಚಾರ, ದರೋಡೆ…” ಇವೆಲ್ಲವಕ್ಕೂ ಸಾರ್ವಜನಿಕರು ಭಿಕ್ಷುಕರೆಡೆಗೆ ಎಸೆಯುವ ಕಾಸೇ ಕಾರಣ ಎಂಬುದನ್ನು ಮನವರಿಕೆ ಮಾಡಿಕೊಡಲು ತನ್ನ ಶಕ್ತಿಮೀರಿ ಪ್ರಯತ್ನ ನಡೆಸಿತ್ತು.

ಪೂರ್ವಗ್ರಹೀತಗಳು

ಈ ಭಿಕ್ಷುಕ ಸಮುದಾಯದ ಕುರಿತು ಇರುವ ಪೂರ್ವಾಗ್ರಹಗಳು ಕೂಡ ಜನತೆಯ ಅಸಹನೆ, ತಿರಸ್ಕಾರಗಳಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತವೆ. ಅವುಗಳಲ್ಲಿ ಒಂದು ಈ ಭಿಕ್ಷುಕ ಮಾಫಿಯಾವನ್ನು ಕುರಿತದ್ದು. ಈ ಭಿಕ್ಷುಕ ಮಾಫಿಯಾಗಳು ಸಮಾಜದಲ್ಲಿ ಸಕ್ರಿಯವಾಗಿದ್ದು ಮಕ್ಕಳನ್ನು ಅಪಹರಿಸಿ, ಅವರನ್ನು ಅಂಗವಿಹೀನಗೊಳಿಸಿ ಅವರನ್ನು ಭಿಕ್ಷೆ ಬೇಡಲು ಬಳಸಿಕೊಳ್ಳುತ್ತಾರೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿದೆ. ಯಾರೂ ಈ ಬಗೆಯ ನಂಬಿಕೆಗಳನ್ನು ಪ್ರಶ್ನಿಸುವ ಗೊಡವೆಗೇ ಹೋಗುವುದಿಲ್ಲ ಹಾಗೂ ಇವ್ಯಾವಕ್ಕೂ ಯಾವುದೇ ಸಬೂತು ಹಾಗೂ ಪರಿಶೀಲನೆಗಳ ಅವಶ್ಯಕತೆಯೂ ಇರುವುದಿಲ್ಲ. ಹಾಗಿದ್ದೂ ಈ ಮಾಫಿಯಾಗಳ ಕುರಿತು ತನಿಖೆ ನಡೆಸುವಂತೆ ದಹೆಲಿಯ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿತ್ತು. ಹಾಗೆ ತನಿಖೆ ನಡೆಸಿದ ದೆಹಲಿಯ ಕ್ರೈಮ್ ಬ್ರಾಂಚ್ ಈ ರೀತಿಯ ಯಾವುದೇ ಮಾಫಿಯಾ ಅಸ್ಥಿತ್ವದಲ್ಲಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ವರದಿ ಒಪ್ಪಿಸಿತ್ತು. ಅಷ್ಟೆಲ್ಲಾ ವರ್ಷಗಳ ಕಾಲ ನಿರ್ಗತಿಕ ಜನರ ನಡುವೆ ಸಾಕಷ್ಟು ಓಡನಾಡಿದ ಹಾಗೂ ಕೆಲಸ ಮಾಡಿದ ನನಗೂ ಅಂಥದ್ದೊಂದು ಮಾಫಿಯಾ ಇರುವುದು ಗಮನಕ್ಕೆ ಬಂದಿಲ್ಲ. ಹಾಗೆಂದು ಬಲತ್ಕಾರವಾಗಿ ಮಕ್ಕಳನ್ನು ಈ ವೃತ್ತಿಗೆ ತಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಎಷ್ಟೋ ಬಾರಿ ತಂದೆ ತಾಯಿಯರು ತಮ್ಮ ಮಕ್ಕಳ ಹೊಟ್ಟೆ ಹೊರೆಯಲು ಸಾಧ್ಯವಾಗದೇ ಅವರನ್ನು ತಿರುಪೆ ಎತ್ತಲು ಬೀದಿಗೆ ತಳ್ಳಿದ ನಿದರ್ಶನಗಳಿಗೇನೂ ಬರವಿಲ್ಲ. ಅಷ್ಟೇ ಅಲ್ಲ, ಕಿತ್ತು ತಿನ್ನುವ ಬಡತನ, ಗಂಡನಿಂದ ದೂರವಾದ, ಸೂರಿಲ್ಲದ ತಾಯಿಯಂದಿರನ್ನು ಹೊಂದಿರುವ, ಮಾದಕ ವ್ಯಸನಿ, ರೋಗಿಷ್ಠ ಅಪ್ಪ-ಅಮ್ಮಂದಿರ ದೆಸೆಯಿಂದಾಗಿ ಅಥವಾ ಅಪ್ಪ-ಅಮ್ಮ ಇಲ್ಲದೇ ಅನಾಥರಾದ ಮಕ್ಕಳು ಹೀಗೆ ಬೀದಿಗಿಳಿದು ಭಿಕ್ಷೆ ಬೇಡಿ ಬದುಕಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ.

ಹಾಗಾದರೆ, ಇದಕ್ಕೆ ಪರಿಹಾರವೇ ಇಲ್ಲವೇ? ಇದೆ. ಬಾಲಕಾರ್ಮಿಕ ಸಮಸ್ಯೆಯ ನಿವಾರಣೆಗೆ ಸರ್ಕಾರ ಯಾವ ಹಾದಿ, ಕಾನೂನನ್ನು ಬಳಸಿಕೊಳ್ಳುತ್ತಿದೆಯೋ ಅದನ್ನೇ ಬಳಸಿಕೊಂಡು ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದೇ ವಿನಾ ಅಂಥ ಮಕ್ಕಳ ತಂದೆ ತಾಯಿಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಏನನ್ನೂ ಸಾಧಿಸಿದಂತಾಗುವುದಿಲ್ಲ. ಹಾಗೆಯೇ, ಎಲ್ಲಾ ನಗರಗಳಲ್ಲಿರುವ ನೂರಾರು ಮುಕ್ತ ರೆಸಿಡೆನ್ಷಿಯಲ್ ಶಾಲೆಗಳ ಮುಖೇನ ಶಿಕ್ಷಣದ ಮೂಲ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದೂ ಈ ಸಮಸ್ಯೆಯಿಂದ ಹೊರಬರಲು ನಮ್ಮೆದುರು ಇರುವ ಮತ್ತೊಂದು ಹಾದಿ. ಹಾಗೊಂದು ವೇಳೆ, ಮಕ್ಕಳನ್ನು ಭಿಕ್ಷಾವೃತ್ತಿಗೆ ತಳ್ಳುವ ಮಾಫಿಯಾ ಇದೆ ಎಂದಾದಲ್ಲಿ ಅದನ್ನು ಚಿವುಟಿ ಹಾಕಲು ಹೊಸ ಕಾನೂನಿನ ಅಗತ್ಯವೇನೂ ಇಲ್ಲ. ಈಗಾಗಲೇ ಅಸ್ಥಿತ್ವದಲ್ಲಿರುವ ಇಂಡಿಯನ್ ಪಿನಲ್ ಕೋಡ್ನ ಸೆಕ್ಷನ್ 363A, ಮಕ್ಕಳ ಅಪಹರಣ ಹಾಗೂ ಅಂಗವಿಕಲಗೊಳಿಸಿ ಬಲತ್ಕಾರದಿಂದ ಭಿಕ್ಷಾವೃತ್ತಿಗೆ ತಳ್ಳುವಂಥ ಸಮಸ್ಯೆಗಳಿಗೂ ಸೂಕ್ತ ಉತ್ತರವಾಗಬಲ್ಲದು.

ಭಿಕ್ಷಾವೃತ್ತಿಯನ್ನು ಒಂದು ದೊಡ್ಡ ಅಪರಾಧ ಎಂಬಂತೆ ನೋಡಲು ಮಾಫಿಯಾಗಳ ಕುರಿತು ಸಮಾಜದಲ್ಲಿ ಪ್ರಚಲಿತದಲ್ಲಿರುವ ಉತ್ಪ್ರೇಕ್ಷಿತ ನಂಬಿಕೆಗಳು ಮಾತ್ರ ಕಾರಣವಲ್ಲ. ದುಡಿಯಲಾಗದ, ಸಮಾಜಕ್ಕೆ ಹೊರೆಯಾದ ಮೈಗಳ್ಳರ ಕಟ್ಟ ಕಡೆಯ ಸೋಗು ಎಂಬ ಕಾರಣಕ್ಕೂ ಭಿಕ್ಷಾವೃತ್ತಿಯನ್ನು ಸಾಮಾಜಿಕ ಅಪರಾಧವೆಂಬಂತೆ ನೋಡಲಾಗುತ್ತದೆ. ಮನೆ-ಮಠ ಇಲ್ಲದ ನಿರ್ಗತಿಕ ಜನ ಸಮುದಾಯ ಅತ್ಯಂತ ಸುಲಭವಾಗಿ ಕೈಗೊಳ್ಳಬಹುದಾದ ವೃತ್ತಿ ಎಂದರೆ ತಿರುಪೆ ಎತ್ತುವುದು ಎಂಬ ನಂಬಿಕೆ ಸಮಾಜದಲ್ಲಿದೆ. ಆದರೆ ಇತ್ತೀಚೆಗೆ ಈ ಕುರಿತು ಅಧ್ಯಯನ ನಡೆಸಿದ ದೆಹಲಿಯ PUCL – CSDS ಸಂಘಟನೆಯ ಗಮನಕ್ಕೆ ಬಂದ ಸಂಗತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಆ ಸಮೀಕ್ಷೆಯ ಪ್ರಕಾರ ನಿರ್ಗತಿಕ ಮಕ್ಕಳಲ್ಲಿ ಬಿಕ್ಷಾಪಾತ್ರೆ ಹಿಡಿಯುತ್ತಿರುವವರು ಕೇವಲ ಶೇ.9 ರಷ್ಟು ಮಕ್ಕಳು ಮಾತ್ರ. ಹಾಗೆ ನೋಡಿದರೆ, ಭಿಕ್ಷೆ ಬೇಡುವುದಕ್ಕಿಂತ ದುಡಿಮೆ ಮಾಡಲು ಇಚ್ಛಿಸುವ ಮಕ್ಕಳೇ ಹೆಚ್ಚು. ಅದು ಕಸ ಆಯುವುದಾಗಿರಬಹುದು, ಹೊಟೇಲ್ಗಳಲ್ಲಿ ಟೀ ಸರಬರಾಜು ಮಾಡುವುದಾಗಿರಬಹುದು ಹಾಗೂ ಕಾನೂನು ವಿರೋಧಿ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಾಗಿರಬಹುದು, ಒಟ್ಟಿನಲ್ಲಿ ಭಿಕ್ಷೆ ಬೇಡುವುದಕ್ಕಿಂತ ಬೆವರು ಸುರಿಸುವುದರಲ್ಲಿಯೇ ಈ ಮಕ್ಕಳಿಗೆ ನಂಬಿಕೆ ಹೆಚ್ಚು. ಅಂದರೆ, ಒಟ್ಟು ಮಕ್ಕಳಲ್ಲಿ ಶೇ.10 ರಷ್ಟು ಮಕ್ಕಳು ಮಾತ್ರ ಭಿಕ್ಷಾವೃತ್ತಿಗೆ ಮೊರೆ ಹೋಗುತ್ತಿದ್ದಾರೆ. PUCL-CSDS ಸಮೀಕ್ಷೆಯ ಸಂದರ್ಭದಲ್ಲಿ ಗಮನಕ್ಕೆ ಬಂದ ಸಂಗತಿಗಳೆಂದರೆ, ದೆಹಲಿಯಂಥ ನಗರದಲ್ಲಿ ಶೇ.23 ರಷ್ಟು ನಿರ್ಗತಿಕ ಮಕ್ಕಳು ಕೇವಲ ಹದಿನೈದು ದಿನಗಳಲ್ಲಿಯೇ ಕೆಲಸ ಹುಡುಕಿಕೊಂಡರೆ ಇನ್ನು ಶೇ.33ರಷ್ಟು ಮಕ್ಕಳು 16 ರಿಂದ 25 ದಿನಗಳಲ್ಲಿಯೇ ಕೆಲಸ ಹುಡುಕಿಕೊಳ್ಳುತ್ತಾರೆ. ಸಶಕ್ತ, ಆರೋಗ್ಯವಂತ ವ್ಯಕ್ತಿಗಳು ಭಿಕ್ಷಾವೃತ್ತಿಗಿಳಿಯುವುದು ತೀರಾ ಕಡಿಮೆ. ಈಗ ರಸ್ತೆಯಲ್ಲಿ ಕಾಣಸಿಗುವ, ಪ್ರಾಪ್ತ ವಯೋಮಾನದ ಭಿಕ್ಷುಕರಲ್ಲಿ ಬಹುತೇಕ ಮಂದಿ ಕೆಲಸ ಮಾಡಲು ಸಾಧ್ಯವಾಗದಷ್ಟು ಅಂಗವೈಕಲ್ಯ ಹಾಗೂ ಕುಷ್ಠರೋಗ, ಬುದ್ಧಿಮಾಂದ್ಯತೆಯಿಂದ ಬಳಲುವವರೇ ಆಗಿದ್ದಾರೆ. ಭಿಕ್ಷೆ ಬೇಡುವ ಯಾವುದೇ ವ್ಯಕ್ತಿಗೆ ಸೂಕ್ತ ಕೆಲಸವನ್ನು ಒದಗಿಸಿದರೆ ಖುಷಿಯಿಂದ ಆ ಕೆಲಸವನ್ನು ಒಪ್ಪಿಕೊಂಡು ಅದರಲ್ಲಿ ತೊಡಗಿಸಿಕೊಳ್ಳುವವರನ್ನು ನಾನೇ ನನ್ನ ಅನುಭವದಲ್ಲಿ ಕಂಡಿದ್ದೇನೆ.

ಭಿಕ್ಷಾವೃತ್ತಿಯನ್ನು ಅಪರಾಧದಂತೆ ಬಿಂಬಿಸುವುದರ ಹಿಂದೆ ವಸಾಹತು ಮನಸ್ಥಿತಿ ಕೆಲಸ ಮಾಡುತ್ತದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮ್ಮದೇ ಸಾಂಪ್ರದಾಯಿಕ ಸಮಾಜಗಳು ಈ ಭಿಕ್ಷಾರ್ಥಿಗಳ ಕುರಿತು ಇಷ್ಟೊಂದು ಒರಟಾಗಿ ವರ್ತಿಸಿದ್ದು ಕಂಡುಬರುವುದಿಲ್ಲ. ಅದರಲ್ಲೂ ಬೌದ್ಧ ಧರ್ಮದಲ್ಲಿ ಭಿಕ್ಷೆಗೆ ಅದರದ್ದೇ ಆದ ಸ್ಥಾನವಿತ್ತು. ಅಲ್ಲಿ ಬರುವ ಮಹಾಮಹಿಮರೆಲ್ಲಾ ‘ಭಿಕ್ಕೆ’ ಬೇಡುವುದರ ಮೂಲಕವೇ ತಮ್ಮೊಳಗಿನ ಅಹಂ ಅನ್ನು ನೀಗಿಕೊಂಡವರು, ಆಮೂಲಕವೇ ಭೌತಿಕ ಜಗತ್ತಿನೊಂದಿಗಿನ ತಮ್ಮೆಲ್ಲಾ ಕರುಳು-ಬಳ್ಳಿ ಸಂಬಂಧಗಳನ್ನೂ ಕಡಿದುಕೊಂಡವರು. ಭಿಕ್ಷಾವೃತ್ತಿಯನ್ನು ಮೊದಲ ಬಾರಿಗೆ ಅಪರಾಧ ಎಂದು ಘೋಷಿಸಲಾಗಿದ್ದು ಬ್ರಿಟೀಷ್ ಆಡಳಿತಾವಧಿಯಲ್ಲಿ, 1920 ರಲ್ಲಿ. ಬಳಿಕ ಇದನ್ನೇ ಬಾಂಬೆ ಭಿಕ್ಷಾವೃತ್ತಿ ನಿಯಂತ್ರಣ ಕಾಯಿದೆಯ ರೂಪದಲ್ಲಿ 1959 ರಲ್ಲಿ ದೆಹಲಿಯೂ ಸೇರಿದಂತೆ ಸುಮಾರು 18 ರಾಜ್ಯಗಳಲ್ಲಿ ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ, ಭಿಕ್ಷೆ ಬೇಡುವಂಥ ‘ಗಂಭೀರ’ ಅಪರಾಧದಲ್ಲಿ ಪಾಲ್ಗೊಂಡವರಿಗೆ ಅವರಿಗೆಂದೇ ನಿರ್ಮಿಸಲಾದ ವಿಶೇಷ “ಭಿಕ್ಷುಕರ ಕೋರ್ಟ್” ನಲ್ಲಿ ವಿಚಾರಣೆ ನಡೆಸಲಾಗುತ್ತದೆ ಹಾಗೂ ಆರೋಪ ಸಾಬೀತಾದರೆ ಕನಿಷ್ಠ ಮೂರು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸುತ್ತದೆ. ಒಂದು ವೇಳೆ ಅಪರಾಧಿ ಮರಳಿ ಅಪರಾಧವೆಸಗಿದರೆ ಅಂಥ ‘ಅಪರಾಧಿಗೆ’ ಶಿಕ್ಷೆಯನ್ನು ಸುಮಾರು ಹತ್ತು ವರ್ಷಗಳಷ್ಟು ವಿಸ್ತರಿಸಲಾಗುತ್ತದೆ. ವಿಪರ್ಯಾಸವೆಂದರೆ, ಭಿಕ್ಷೆ ಬೇಡುವವರನ್ನು ಅಪರಾಧಿಯನ್ನಾಗಿಸಿದ ಇದೇ ಕಾನೂನು ಅಷ್ಟಕ್ಕೇ ನಿಲ್ಲದೇ ರಸ್ತೆ ಬದಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಹೊಟ್ಟೆ ಹೊರೆದುಕೊಳ್ಳುವ “ಹಾಡುಗಾರರು, ನೃತ್ಯ ಕಲಾವಿದರು, ಗಿಣಿಶಾಸ್ತ್ರದವರು, ಕಲಾಕೃತಿಗಳನ್ನು ಮಾರಾಟಗಾರರನ್ನು” ಕೂಡ ಅಪರಾಧಿಗಳು ಎಂದೇ ಪರಿಗಣಿಸುತ್ತದೆ. ಭಿಕ್ಷಾವೃತ್ತಿಯ ವ್ಯಾಖ್ಯಾನವೂ ಈ ಮೂಲಕ ಬದಲಾಗಿದೆ. ಅದರ ಪ್ರಕಾರ ಭಿಕ್ಷೆ ಬೇಡುವುದು ಎಂದರೆ ಅದರರ್ಥ “ಆಹಾರ ಸಂಪಾದನೆಯ ಯಾವುದೇ ಮೂಲವಿಲ್ಲದಿರುವುದು”. ಹಾಗೆ ಹೇಳುವ ಮೂಲಕ, ಬಡತನವನ್ನೇ ಅಪರಾಧದ ಮಟ್ಟಕ್ಕಿಳಿಸಿದ ಈ ಕಾನೂನು ಅವರೆಲ್ಲರೂ ಜೈಲಲ್ಲಿ ಇರುವುದಕ್ಕೇ ಯೋಗ್ಯ ಎಂಬಂತೆ ವರ್ತಿಸುತ್ತದೆ. ಅಲ್ಲದೇ, ಬಹುತೇಕ ಭಿಕ್ಷುಕರು ಕುಷ್ಠರೋಗ, ಬುದ್ಧಿಮಾಂದ್ಯತೆಯಿಂದ ಬಳಲುವುದರಿಂದ ಆ ಎಲ್ಲಾ ದೈಹಿಕ ನ್ಯೂನ್ಯತೆಗಳನ್ನೂ ಈ ಕಾನೂನು ಅಪರಾಧೀಕರಣಗೊಳಿಸಿದಂತಾಗುತ್ತದೆ. ಇವೆಲ್ಲವುಗಳಿಗೆ ಕಲಶವಿಟ್ಟಂತೆ, ಈ ಬಡತನ ಹಾಗೂ ಬಡವರ ವಿರೋಧಿಯಾದ ಈ ಕಾನೂನು ನಮ್ಮಗಳ ನಡುವೆ ತೀರಾ ಅಮಾನವೀಯವಾಗಿ ಹಾಗೂ ಕ್ಲಿಷ್ಟಕರ ರೀತಿಯಲ್ಲಿ ಜಾರಿಯಾಗುತ್ತಿದೆ. ಮಹಿಳಾ ಸಿಬ್ಬಂದಿಯನ್ನೂ ಒಳಗೊಂಡ ಪೊಲೀಸ್ ಪಡೆಗಳು ಕೈಯಲ್ಲಿ ಲಾಠಿ ಹಿಡಿದು ಗಸ್ತು ತಿರುಗುತ್ತಾ, ನಿರ್ಗತಿಕರು ಎನಿಸಿದ ಎಲ್ಲರ ಮೇಲೂ ದಾಳಿಯಿಡುತ್ತಾರೆ. ಹಾಗೆಂದು ಅವರೆಲ್ಲರೂ ಭಿಕ್ಷೆ ಬೇಡುತ್ತಿದ್ದರು ಎಂದು ಭಾವಿಸಬೇಕಾಗಿಲ್ಲ. ನಿರ್ಗತಿಕರಾಗಿ, ಕೈಯಲ್ಲಿ ಕಾಸಿಲ್ಲದೇ ಇರುವುದೇ ಹಾಗೂ ಮಾಸಲು ಬಟ್ಟೆ ಹಾಕಿಕೊಂಡಿರುವುದೇ ಅವರು ಮಾಡಿದ ಅತಿ ದೊಡ್ಡ ಅಪರಾಧ, ಅಷ್ಟೇ. ಅವರೆಲ್ಲರನ್ನೂ ಪೊಲೀಸ್ ವಾಹನಗಳಲ್ಲಿ ಕುರಿಗಳನ್ನು ತುಂಬಿದಂತೆ ತುಂಬಿಕೊಂಡು ಹೋಗಲಾಗುತ್ತದೆ. ಇಲ್ಲಿ ಕೈ-ಕಾಲಲ್ಲಿ ಶಕ್ತಿ ಇದ್ದು, ಸೂಕ್ತ ಸಮಯಕ್ಕೆ ಕಾಲಿಗೆ ಬುದ್ಧಿ ಹೇಳಬಲ್ಲವವನು ಮಾತ್ರ ಅದೃಷ್ಟವಂತ. ಹೀಗೆ ಬಂಧಿಸಲಾದ “ಅಪರಾಧಿ”ಗಳೆಲ್ಲರನ್ನೂ ಅವರಿಗೆಂದೇ ವಿಶೇಷವಾಗಿ ರಚಿಸಲಾದ ಭಿಕ್ಷುಕರ ಕೋರ್ಟ್ನಲ್ಲಿ, ಅವರ ಹಣೆಬರಹ ನಿರ್ಧರಿಸಲು ಸಿದ್ಧರಾಗಿರುವ ನ್ಯಾಯಮೂರ್ತಿಗಳ ಎದುರು ಹಾಜರುಪಡಿಸಲಾಗುತ್ತದೆ. ನ್ಯಾಯಮೂರ್ತಿಗಳು ಎಂದಿನಂತೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಹಲವಾರು ವರ್ಷಗಳಿಂದ ಈ ಕೋರ್ಟ್ಗಳ ವಿಚಾರಣೆಗಳನ್ನು ಗಮನಿಸುತ್ತಾ ಬಂದಿರುವ ಯಾರಿಗಾದರೂ ಈ ಇಡೀ ಕಾನೂನಿನ ಪ್ರಕ್ರಿಯೆಯಲ್ಲಿ ಮೂಲಭೂತ ಅಂಶಗಳೇ ನಾಪಥ್ಯೆಯಾಗಿರುವುದು ಗಮನಕ್ಕೆ ಬರುತ್ತದೆ. ಒಬ್ಬ ವ್ಯಕ್ತಿಯ ಅಪರಾಧ ಕಾನೂನು ಪ್ರಕ್ರಿಯೆಗಳ ಮುಖೇನ ಸಾಬೀತಾಗದ ಹೊರತು ಅಂಥ ವ್ಯಕ್ತಿಯನ್ನು ನಿರಪರಾಧಿ ಎಂದೇ ಪರಿಗಣಿಸಬೇಕಾಗುತ್ತದೆ ಹಾಗೂ ಆತನ ವಿರುದ್ಧದ ಸಾಕ್ಷಿಗಳನ್ನು ಕೋರ್ಟ್ಗೆ ಒದಗಿಸುವ ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ. ಆದರೆ, ಇಲ್ಲಿನ ವಾಸ್ತವವೇ ಬೇರೆ. ಒಬ್ಬ ವ್ಯಕ್ತಿ ಭಿಕ್ಷೆ ಬೇಡುತ್ತಿದ್ದ “ಅಪರಾಧ”ಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಒದಗಿಸಿದ ನಿದರ್ಶನಗಳು ತೀರಾ ಕಡಿಮೆ ಅಥವಾ ಅಂಥ ನಿದರ್ಶನಗಳೇ ಇಲ್ಲ ಎಂದೂ ಹೇಳಬಹುದು. ಎಷ್ಟೋ ಪ್ರಕರಣಗಳಲ್ಲಿ, ಸಾಕ್ಷಿಗಳ ಗೊಡವೆಗೇ ಹೋಗದೆ “ಆರೋಪಿ” ಸ್ಥಾನದಲ್ಲಿ ನಿಂತ ವ್ಯಕ್ತಿಯ ಮಾಸಲು ಬಟ್ಟೆ ಹಾಗೂ ನಿರ್ಗತಿಕತನದ ಆಧಾರದ ಮೇಲೆಯೇ ನ್ಯಾಯ ನಿರ್ಣಯವಾದದ್ದಿದೆ.

ಪರಿಸ್ಥಿತಿ ಹೀಗಿದ್ದಾಗಲೂ ಇಂಥ ಕಾನೂನನ್ನು ಇನ್ನಷ್ಟು ವಿಸ್ತೃತವಾಗಿ ಜಾರಿಗೆ ತರಲು ಆಗ್ರಹಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿ ಹಾಕಲಾಗಿತ್ತು. ಇದಕ್ಕೆ ಸ್ಪಂದಿಸಿದ ಹೈಕೋರ್ಟ್ ನ್ಯಾಯಪೀಠ ಈ ಕಾನೂನನ್ನು ಇನ್ನಷ್ಟು ವಿಸ್ತೃತ ನೆಲೆಯಲ್ಲಿ ಜಾರಿಗೆ ತರುವಂತೆ ಭಿಕ್ಷುಕರ ಸಂಚಾರಿ ಪೀಠಕ್ಕೆ ನಿರ್ದೇಶನ ನೀಡಿದೆ. ಆದರೆ, ಭಿಕ್ಷುಕರ ಕೋರ್ಟ್ನ ನ್ಯಾಯಮೂರ್ತಿಗಳು “ಆರೋಪಿ”ಗಳಿಗೆ ಸಂಬಂಧಿಸಿದಂತೆ ಮೃಧುಧೋರಣೆ ತಾಳಿದ್ದು, ಕಾನೂನು ಜಾರಿಯಲ್ಲಿ ಅನ್ಯಮನಸ್ಕತೆ ತೋರುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಕೋರ್ಟ್ಗೆ ದೂರು ಸಲ್ಲಿಸಿದ್ದರು. ಆದರೆ, ಎಲ್ಲಾ ಕಾಲದಲ್ಲೂ ಮಾನವೀಯ ಕಳಕಳಿಯುಳ್ಳ ಪ್ರತಿಭಟನೆಯ ದನಿ ಅಲ್ಲಲ್ಲಿ ಕ್ಷೀಣವಾಗಿ ಕೇಳುವುದುಂಟು. ಆ ತರದ “ಅಲ್ಪಸಂಖ್ಯಾತ” ದನಿಗಳಲ್ಲಿ ನ್ಯಾಯಮೂರ್ತಿ ಸರಿನ್ ಅವರದ್ದೂ ಒಂದು. ಭಿಕ್ಷುಕರನ್ನು ಬಂಧಿಸಿ, ಅವರನ್ನು ಶಿಕ್ಷಿಸುವುದು “ಅಮಾನವೀಯವಲ್ಲದೇ ಮತ್ತೇನೂ ಅಲ್ಲ. ಎಚ್ಚರಿಕೆ ಕೊಟ್ಟು ಕಳುಹಿಸಿದರೆ ಸಾಕು” ಎಂಬ ಅಭಿಪ್ರಾಯ ಸರಿನ್ ಅವರದ್ದು.

ನಿತ್ಯನಾರಕಿ ಬದುಕು

ಭಿಕ್ಷೆ ಬೇಡಿರುವ ಅಪರಾಧ ಸಾಬೀತಾದ ಬಳಿಕ ಅಂಥ ವ್ಯಕ್ತಿಗಳನ್ನು ಅಧಿಕೃತ ಬೆಗ್ಗರ್ಸ್ ಹೋಮ್ಗಳೆಂಬ ಸೆರೆಮನೆಯಲ್ಲಿಡಲಾಗುತ್ತದೆ. ಹತ್ತಾರು ನಗರಗಳಲ್ಲಿರುವ ಇಂಥ ಹಲವಾರು ಬೆಗ್ಗರ್ಸ್ ಹೋಮ್ಗಳಿಗೆ ನಾನು ಖುದ್ದಾಗಿ ಭೇಟಿ ನೀಡಿದ್ದೇನೆ. ಆದರೆ, ಅಲ್ಲಿನ ಸ್ಥಿತಿಯಂತೂ ಆ ದೇವರಿಗೇ ಪ್ರೀತಿ! ರಿಪೇರಿಯನ್ನೇ ಕಾಣದ, ಶುಚಿತ್ವದ ಸುಳಿವೇ ಇಲ್ಲದ ಇಂಥ ಬೆಗ್ಗರ್ಸ್ ಹೋಮ್ಗಳಿಗಿಂತ ಇನ್ನಿತರ ಗಂಭೀರ ಸ್ವರೂಪದ ಅಪರಾಧಗಳಲ್ಲಿ ಭಾಗಿಯಾದ ಕೈದಿಗಳನ್ನು ಇರಿಸುವ ಜೈಲುಗಳೇ ಸಾವಿರ ಪಾಲು ವಾಸಿ ಎನಿಸಿದ್ದಿದೆ. ಭಾರತೀಯ ಜೈಲುಗಳು ತಮ್ಮ ನರಕ ಸದೃಶ ಸ್ಥಿತಿಗಳಿಗೆ ಹೆಸರುವಾಸಿ. ಮನುಷ್ಯರೆನಿಸಿಕೊಂಡವರು ಅಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿಯಲ್ಲಿ ಅವಿರುತ್ತವೆ. ಅವೇ ಹಾಗಿರುತ್ತವೆ ಎಂದಾದರೆ, ಬಲಹೀನರಾದ, ಮೈ ತುಂಬಾ ಬಡತನವನ್ನೇ ಹೊದ್ದ, ಸಮಾಜದ ಕೊಳಕು ಎಂದೇ ಭಾವಿಸಲಾದ ಇಂಥ ಶಕ್ತಿಹೀನರಿಗೆ ಒದಗಿಸಲಾದ ಪುನರ್ವಸತಿಯ ಪರಿಸ್ಥಿತಿ ಹೇಗಿರಬಹುದು, ನೀವೇ ಊಹಿಸಿ. ಮಲಮೂತ್ರಗಳ ತಿಪ್ಪೆಗುಂಡಿಗಳಂತಿರುವ, ಗಾಳಿ, ಬೆಳಕಿಗೂ ಅವಕಾಶ ನೀಡದ ಕೋಣೆಗಳಿಂದ ಹೊರಗೆ ಕಾಲಿಡಲೂ ಆ ನತದೃಷ್ಟರಿಗೆ ಅವಕಾಶ ಮಾಡಿಕೊಡುವುದಿಲ್ಲ. ಅದೆಷ್ಟೋ ಮಂದಿ ತಮ್ಮ ಬದುಕಿನ ಒಂದು ಭಾಗವನ್ನೇ ಇಂಥ ದುರ್ಭರ ವಾತಾವರಣದಲ್ಲಿ ಕಳೆದು ಕಾಲರಾ, ಅಪೌಷ್ಠಿಕಾಂಶಗಳ ನೆಪದಿಂದ ಕೊನೆಯುಸಿರೆಳೆದಿದ್ದಾರೋ! ಇಂಥ ಭಿಕ್ಷುಕ ಕೇಂದ್ರಗಳ ಮುಖ್ಯ ಧ್ಯೇಯವೇ ಈ ಬಂಧಿತ ಅಬ್ಬೇಪಾರಿಗಳನ್ನು ಭಿಕ್ಷೆಗೆ ಹೊರತಾದ ಪರ್ಯಾಯ ಉದ್ಯೋಗಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಣಿಗೊಳಿಸುವುದು. ಹಾಗೆಂದು, ಸರ್ಕಾರಿ ದಾಖಲಾತಿಗಳಲ್ಲಿ ಹೇಳಲಾಗುತ್ತದೆ. ಆದರೆ, ನಾನು ಇಲ್ಲಿಯವರೆಗೆ ಭೇಟಿ ನೀಡಿದ ಯಾವುದೇ ಭಿಕ್ಷುಕ ಕೇಂದ್ರಗಳಲ್ಲೂ ಇಂಥದ್ದೊಂದು ಘನ ಉದ್ದೇಶ ಪ್ರಾಯೋಗಿಕವಾಗಿ ಜಾರಿಯಾಗಿದ್ದು ಕಾಣೆ.

ನಾಗಾಲೋಟದಲ್ಲಿರುವ ನಮ್ಮ ನಗರಗಳ ಥಳುಕಿನ ಬಿಳಿ ಬಟ್ಟೆಯ ಮೇಲೆ ಮೂಡಿರುವ ಕಪ್ಪು ಕಲೆಯಂತೆ ಕಂಡುಬರುವ ಈ ಬಡಜನತೆ ಈಗ ಟ್ರಾಫಿಕ್ ಸಿಗ್ನಲ್ಗೆ ಅಡ್ಡಿಯುಂಟು ಮಾಡುವ ಹಾಗೂ ಸಾರ್ವಜನಿಕ ಮುಜುಗರದ ಸಂಗತಿಯಾಗಿ ಮಾತ್ರ ಉಳಿದಿಲ್ಲ. 2010ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ತಯಾರಿಯಲ್ಲಿರುವ ದೆಹಲಿ ಸರ್ಕಾರಕ್ಕೆ ಇವರು ಹೊಸ ತಲೆನೋವಾಗಿ ಪರಿಣಮಿಸಿದ್ದಾರೆ. ದೇಶ-ವಿದೇಶಗಳಿಂದ ಬಂದಿಳಿಯುವ ವಿದೇಶಿಯರ ಎದುರು “ಜಾಗತಿಕ ಮಟ್ಟದ” ನಗರ ಎಂದೆಲ್ಲಾ ಕರೆಯಿಸಿಕೊಳ್ಳುವ ದೆಹಲಿಯ ಮಾನ – ಮರ್ಯಾದೆ ಟ್ರಾಫಿಕ್ ಸಿಗ್ನಲ್ಗಳಲ್ಲಿ, ರಸ್ತೆಗಳ ಬದಿಯಲ್ಲಿ ಹರಾಜಾಗುತ್ತದಲ್ಲಾ ಎಂಬ ಆತಂಕ ಆಳುವವರದ್ದು. ಬೀದಿ ಬೀದಿಗಳಲ್ಲಿ ಕೊಳಕು ದೇಹವನ್ನು ಹೊತ್ತುಕೊಂಡು ಭಿಕ್ಷೆ ಬೇಡುವ ಈ ಮಂದಿ ಈ ದೇಶದ ಕುರಿತು ವಿದೇಶಿಯರಲ್ಲಿ ಇನ್ನೆಂಥ ಅಭಿಪ್ರಾಯ ಮೂಡಿಸಲು ಸಾಧ್ಯ? ಹಾಗಾದರೆ, ತನ್ನದೇ ಪ್ರಜೆಗಳನ್ನು ಅಪರಾಧಿಗಳನ್ನಾಗಿಸುವ, ಮೇಲ್ನೋಟದ ಥಳುಕಿಗಾಗಿ ಅವರನ್ನೆಲ್ಲಾ ಊರಿನಿಂದಲೇ ಬಹಿಷ್ಕರಿಸುವ, ಸೆರೆಯಲ್ಲಿಡುವಷ್ಟು ಭಾವಹೀನ ಮಹತ್ವಾಕಾಂಕ್ಷಿ ನಗರವೇ ದೆಹಲಿ? ಮಡಿಲಿಗೆ ಬಂದವರನ್ನು ಪೊರೆಯುವ ಕರುಣೆಗೂ ಬರ ಬಂತೇ ಈ ನಾಡಿಗೆ?

ಅನುವಾದಕ: ಅರುಣ್ ಕಾಸರಗುಪ್ಪೆ.
ಸೊರಬ ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ಜನಿಸಿದ ಅರುಣ್ ತಮ್ಮ ಹೆಚ್ಚಿನ ಬಾಲ್ಯವನ್ನು ಕಳೆದದ್ದು ಸಾಗರದಲ್ಲಿ. ಕುವೆಂಪು ವಿವಿ, ಶಂಕರಘಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಬಳಿಕ ಬೆಂಗಳೂರಿನ “ದ ಸಂಡೆ ಇಂಡಿಯನ್” ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯಕ್ಕೆ, ಕಳೆದು ಎರಡು ವರ್ಷಗಳಿಂದ Google India ಕಂಪನಿಯಲ್ಲಿ ಭಾಷಾತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲವೇ ಕೆಲವರ ಸುಖ, ಹಲವರ ದುಃಖದ ಮೂಲವಾಗಬಾರದು

-ಡಾ.ಎಸ್. ಜಿ. ಜೋಗುರ

ಸಂಪತ್ತಿನ ಅಸಮಾನ ಹಂಚಿಕೆ ಎನ್ನುವದು ಅನೇಕ ಬಗೆಯ ಅವಕಾಶಗಳಲ್ಲಿಯೂ ಅಂತರಗಳನ್ನು ಸೃಷ್ಟಿಸಿದೆ. ಬೇಕು ಅನಿಸುವುದನ್ನು ತಕ್ಷಣವೇ ಕೊಂಡು ಬಳಸುವ ಸಾಮರ್ಥ್ಯವಿದ್ದದ್ದು ಕೇವಲ 15 ಪ್ರತಿಶತ ಜನರಿಗೆ ಮಾತ್ರ. ಮಿಕ್ಕ 85 ಪ್ರತಿಶತ ಜನರು ತಮ್ಮ ದುಡಿಮೆಯನ್ನು ನಿರಂತರವಾಗಿ ಒತ್ತೆಯಿಟ್ಟರೂ ಬೇಕು ಅನಿಸಿರುವದನ್ನು ಕೊಂಡುಕೊಳ್ಳಲು ಅನೇಕ ಬಗೆಯ ಸಾಹಸಗಳನ್ನು ಮಾಡಬೇಕಾಗುತ್ತದೆ. ಏನೋ ಒಂದನ್ನು ಪಡೆಯಲು ಏನೋ ಒಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸೂತ್ರ ಇವರ ಪಾಲಿಗೆ ಅಕ್ಷರಶಃ ಅನ್ವಯವಾಗುತ್ತದೆ. ಅನೇಕ ಬಾರಿ ಬೇಕು ಅನಿಸಿದ್ದು ಬರೀ ಕನಸಾಗಿ, ಕೈಗೆಟುಕದ ಪಾರಿಜಾತವಾಗಿ ಇಡೀ ಬದುಕಿನುದ್ದಕ್ಕೂ ಬಸವಳಿದರೂ ಅದು ದಕ್ಕುವದಿಲ್ಲ. ತನ್ನ ಕೈಲಿ ಆಗದಿದ್ದದ್ದು ತನ್ನ ಮಗ, ಮೊಮ್ಮಗನ ಕೈಯಿಂದಲಾದರೂ ಸಾಧ್ಯವಾಗಲಿ ಎನ್ನುವ ಆಶಯದೊಂದಿಗೆ ಆ ಜೀವ ಕಣ್ಣು ಮುಚ್ಚುವದಿದೆ.

ಬೇಸಿಗೆಯಲ್ಲಿ ನರಕ ಸದೃಶ ಬದುಕಿನ ಹತ್ತಿರದ ಪರಿಚಯವಾಗಬೇಕಿದ್ದರೆ ಉತ್ತರ ಕರ್ನಾಟಕದ ಬಯಲುಸೀಮೆಗಳಿಗೆ ಭೇಟಿ ನೀಡಿ. ಅವರ ಪ್ರತಿನಿತ್ಯದ ಚಡಪಡಿಕೆಗಳು ಯಾವುದೋ ಒಂದು ಸುಖಭೋಗದ ಭೌತಿಕ ವಸ್ತುವಿಗಾಗಿ ಇಲ್ಲ. ಬದಲಾಗಿ ಒಂದು ಕೊಡ ಕುಡಿಯುವ ನೀರಿಗಾಗಿ, ಒಂದಷ್ಟು ಹೊತ್ತಿನ ವಿದ್ಯುತ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಗಾಗಿ, ಕಚ್ಚಾ ರಸ್ತೆಗಾಗಿ, ತೀರಾ ಕನಿಷ್ಟ ವೈದ್ಯಕೀಯ ಸೌಲಭ್ಯಗಳಿಗಾಗಿದೆ. ಇವುಗಳ ನಡುವೆ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಒಂದು ಸಮಸ್ಯೆಯೇ ಅಲ್ಲ. ಬರೀ ಒಂದು ತಂಬಿಗೆ ನೀರು ಕುಡಿದು ಒಂದು ದಿನ ಬದುಕುತ್ತೇವೆ ಎನ್ನುವ ಇಚ್ಚಾಶಕ್ತಿ ಇರುವ ಈ ಜನರಿಗೆ ಬದುಕು ಎನ್ನುವುದು ನಿತ್ಯದ ಹೋರಾಟ, ಬವಣೆ. ಅನೇಕ ಬಗೆಯ ಕೊರತೆಗಳ ನಡುವೆಯೂ ಇವರು ಬದುಕಿದ್ದಾರೆ. ಹೇಗೆಂದು ಮಾತ್ರ ಕೇಳಬೇಡಿ. ಈ ಜನಸಮುದಾಯದ ಅಸ್ಥಿತ್ವವೇ ನಗಣ್ಯ ಎನ್ನುವಂತೆ ಇವರು ಬದುಕಿರುವುದಿದೆ. ಇವರು ಪ್ರಜಾಸತ್ತೆಯ ಭಾಗವಾದರೂ ತಮ್ಮ ಹಕ್ಕುಗಳ ಬಗ್ಗೆ, ಅವಕಾಶಗಳ ಬಗ್ಗೆ ಒಟ್ಟ್ತಾರೆಯಾಗಿ ಯೋಚಿಸದವರು. ಯಾವುದರಲ್ಲಿಯೂ ಅಪಾರವಾದ ನಂಬುಗೆಯನ್ನು ಉಳಿಸಿಕೊಂಡಿರದ ಈ ಜನ, ಸಿನಿಕರಾಗಿ ತೀರಾ ಯಥಾರ್ಥವಾಗಿಯೇ ಬದುಕುತ್ತಾರೆ. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವುದಂತೂ ದೂರ, ಇದ್ದ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿಯೇ ಹೈರಾಣಾಗಿ ಹೋಗಿರುತ್ತಾರೆ. ತಮ್ಮನ್ನು ಯಾರೋ ಉದ್ದರಿಸುತ್ತಾರೆ ಎನ್ನುವ ನಿರೀಕ್ಷೆ ಇವರಿಗಿಲ್ಲ. ವಾಸ್ತವದಲ್ಲಿ ಅವರಿಗಿರುವ ಎಲ್ಲ ಬಗೆಯ ಸಂದಿಗ್ದಗಳೇ ಅವರ ನಿಜವಾದ ಬದುಕಿನ ದಿನಚರಿ. ಅವರ ಮನೆಯ ಮಹಿಳೆಯರೊ, ಒಂದು ಕೊಡ ನೀರಿಗಾಗಿ ದೂರದ ದಾರಿಯನ್ನು ಕ್ರಮಿಸುವ, ಕಲಹ, ವೈಮನಸ್ಸುಗಳನ್ನು ಪ್ರದರ್ಶಿಸುವ  ಪರಿಪಾಠ ಸಾಮಾನ್ಯ ಎನ್ನುವ ಇಲ್ಲಿಯ ಬದುಕು ಅತ್ಯಂತ ಕಠೋರವಾದುದು. ಮಹತ್ವಾಕಾಂಕ್ಷೆ ಎನ್ನುವುದು ಇಲ್ಲಿ ಮಣ್ಣುಪಾಲಾಗಿದೆ. ಒಂದು ಕೊಡ ನೀರು ಆ ಕುಟುಂಬದ ಇಡೀ ದಿನದ ಕನವರಿಕೆಯಾಗಿರುವ ನೆಲಗಳಲ್ಲಿ ಅದು ಹೇಗೆ ಅವರಲ್ಲಿ ಮಹತ್ವಾಕಾಂಕ್ಷೆಯನ್ನು, ಹೋರಾಟದ ಹಾದಿಯನ್ನು ತೋರುವುದು..? ಹೀಗೆ ಒಂದು ಬೇಸಿಗೆಯ ನಿರ್ಗಮನವೆನ್ನುವುದು ಆ ಗ್ರಾಮದ ಜನತೆಯ ಒಟ್ಟು ಕಸುವನ್ನೆಲ್ಲಾ ಹಿಂಡಿ ಹಿಪ್ಪೆ ಮಾಡಿದ ಭೌಗೋಳಿಕ ಸ್ಥಿತಿ ಎನ್ನುವಂತಿರುತ್ತದೆ.
ಇನ್ನೊಂದು ಬದಿ ನಮ್ಮ ಕಣ್ಣೆದುರಲ್ಲಿಯೇ ಅಪಾರ ಪ್ರಮಾಣದ ನೀರು, ವಿಧ್ಯುತ್ ಪೋಲಾಗುತ್ತಿರುತ್ತದೆ. ಸಾರ್ವಜನಿಕ ನಲ್ಲಿಗೆ ಆರಂಭವಾಗುವುದು ಮಾತ್ರ ತಿಳಿದಿದೆ ಆದರೆ ಬಂದ್ ಆಗುವ ಕ್ರಿಯೆ ತಿಳಿದಿಲ್ಲ. ಹೀಗಾಗಿ ಧೋ..ಧೋ.. ಎಂದು ಸುರಿಯುವ ನಲ್ಲಿಯ ಟ್ಯಾಪ್ ನ್ನು ಬಂದ್ ಮಾಡಲು ಮನುಷ್ಯರಾದವರಿಗೆ ತಿಳಿಹೇಳಲು, ಮಂಗನ ಮೂಲಕ ಜಾಹೀರಾತನ್ನು ರೂಪಿಸಿ ತೋರಿಸಬೇಕಾಗುತ್ತದೆ. ಅವಶ್ಯವಿರುವಷ್ಟೇ ನೀರು, ವಿದ್ಯುತ್, ಆಹಾರ ಬಳಿಸುವ ತಿಳಿವಳಿಕೆ ಕಡ್ಡಾಯ ಹಾಗೂ ತೀರಾ ಸಾಮಾನ್ಯವಾದ ಬದುಕಿನ ಪಠ್ಯಕ್ರಮವಾಗಬೇಕು. ಮದುವೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ನೀರು ಆಹಾರ ಹಾಳಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ. ಮದುವೆಯಾಗುವ ಹುಡುಗ-ಹುಡುಗಿಯ ತಂದೆ-ತಾಯಿಗಳ ಅತಿ ಮುಖ್ಯವಾದ ಹೊಣೆಗಾರಿಕೆಗಳಲ್ಲಿ ಅದು ಮೊದಲನೆಯದಾಗಬೇಕು. ಈಚೆಗೆ ಆಂಗ್ಲ ದಿನಪತ್ರಿಕೆಯೊಂದು ಮಹಾನಗರಗಳಲ್ಲಿಯ ಸ್ಟಾರ್ ಹೊಟೆಲುಗಳು ವ್ಯಯಿಸುವ ವಿದ್ತ್ಯುತ್, ನೀರು ಮುಂತಾದವುಗಳ ಬಗ್ಗೆ ಸಮಗ್ರ ಬೆಳಕು ಚೆಲ್ಲುವ ಮೂಲಕ ಒಂದು ಸ್ಟಾರ್ ಹೊಟೇಲ್ ಎಷ್ಟು ಸಾಮಾನ್ಯ ಕುಟುಂಬಗಳ ಮನೆಯ ಬೆಳಕನ್ನು, ನೀರನ್ನು ನಿಗಟುತ್ತಿರುತ್ತದೆ ಎನ್ನುವದನ್ನು ಅಂಕಿ ಅಂಶಗಳ ಮೂಲಕ ತೋರಿಸಿಕೊಟ್ಟಿರುವದಿದೆ.
ಒಂದು ಸಾವಿರ ಮನೆಗಳಿಗೆ ಸಾಕಾಗಬಹುದಾದ ನೀರನ್ನು ಕೇವಲ ಒಂದು ಹೊಟೆಲ್ ಅನುಭೋಗಿಸುವುದನ್ನು ಆ ಪತ್ರಿಕೆ ಹೊರಹಾಕಿದೆ. ದೆಹಲಿಯ ಸುಮಾರು 35 ಸ್ಟಾರ್ ಹೊಟೆಲ್ ಗಳು ಬಳಸುವ ನೀರಿನ ಪ್ರಮಾಣ ಪ್ರತಿನಿತ್ಯ ಸುಮಾರು 15 ಮಿಲಿಯನ ಲೀಟರ್. ಅಷ್ಟು ನೀರಲ್ಲಿ ಪ್ರತಿದಿನ ದೆಹಲಿಯ ಒಂದು ವಿಶಾಲ ಪ್ರದೇಶಕ್ಕೆ ನೀರನ್ನು ಒದಗಿಸಬಹುದಾಗಿದೆ. ಸುಮಾರು 600 ಮನೆಗಳಿಗೆ ಸಾಧ್ಯವಾಗಬಹುದಾದ ವಿಧ್ಯುತ್ ನ್ನು ಕೆವಲ ಒಂದು ಸ್ಟಾರ್ ಹೊಟೆಲ್ ಬಳಸುವ ಬಗ್ಗೆಯೂ ಅದು ಹೇಳಿರುವದಿದೆ. ಒಂದು ಅಂದಾಜಿನಂತೆ ಸ್ಟಾರ್ ಹೊಟೆಲೊಂದು 15 ಸಾವಿರ ಇಲೆಕ್ಟ್ರಿಕ್ ಪಾಯಿಂಟ್ ಗಳನ್ನು ಹೊಂದಿರುವದಿದೆ ಅದರಲ್ಲಿ 3 ಸಾವಿರ ಬಲ್ಬುಗಳು ಅನಾವಶ್ಯಕವಾಗಿದ್ದರೂ ನಿರಂತರವಾಗಿ ಉರಿಯುತ್ತಿರುತ್ತವೆ. ಸುಮಾರು 14 ರಷ್ಟು ಸ್ಟಾರ್ ಹೊಟೇಲುಗಳು ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಬರೀ ವಿದ್ಯುತ್ ನ್ನೇ ಅವಲಂಬಿಸಿವೆ. ಇದರ ಜೊತೆಗೆ ಅಪಾರ ಪ್ರಮಾಣದ ಕಸವನ್ನು ಹೊರಗೆಸೆಯುತ್ತವೆ. ಆ ಮೂಲಕ ನಗರ ಪ್ರದೇಶದ ಕೊಳಗೇರಿಗಳ ವಿಸ್ತಾರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತವೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿ ಹನಿ ನೀರು, ಪ್ರತಿ ತುತ್ತು ಅನ್ನ, ಪೆಟ್ರೋಲ್ ಮತ್ತು ವಿಧ್ಯುತ್ ತುಂಬಾ ಅಮೂಲ್ಯವಾದವುಗಳು. ಇವುಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರತೆಯನ್ನು ಅನುಭವಿಸಬೇಕಾಗುತ್ತದೆ. ಇದು ಕೆವಲ ನಗರಪ್ರದೇಶದ ಹೊಟೆಲ್ ಗಳಿಗೆ ಮಾತ್ರ ಸಂಬಂಧಿಸಿರದೇ ನಾವು ನಿರ್ಮಿಸಿಕೊಳ್ಳುವ ಮನೆಗಳೂ ಈಗೀಗ ತೀರಾ ಐಷಾರಾಮಿಯಾಗಿರುತ್ತವೆ. ಅಲ್ಲಿಯೂ ಅಗತ್ಯಕ್ಕಿಂತಲೂ ಹೆಚ್ಚಿನ ಲೈಟ್ ಪಾಯಿಂಟ್ ಗಳಿರುತ್ತವೆ. ಮನೆಮಂದಿಯೆಲ್ಲಾ ಟಿ.ವಿ.ಯ ಎದುರಲ್ಲಿ ಕುಳಿತಿರುವಾಗಲೂ ಎಲ್ಲ ಕೋಣೆಗಳ ಲೈಟುಗಳು ಬಿಂದಾಸ್ ಆಗಿ ಉರಿಯುತ್ತಿರುತ್ತವೆ. ಹಾಗೆಯೇ ಮನೆ ಎದುರಿನ ನೀರಿನ ಟ್ಯಾಂಕ್ ತುಂಬಿ ಹೆಚ್ಚಾದ ನೀರು ಗಟಾರ್ ಸೇರುವ, ಇಲ್ಲವೇ ರಸ್ತೆಗೆ ಹರಿಯುವ ಕ್ರಿಯೆ ನಮ್ಮ ಕಣ್ಣ ಎದುರೇ ನಡೆದರೂ ನಾವು ಅಷ್ಟಾಗಿ ತಲೆ ಕೆಡಿಸಿಕೊಳ್ಳುವದಿಲ್ಲ. ನೀರು, ವಿದ್ಯುತ್, ಆಹಾರ ಇವೆಲ್ಲವೂ ಹಣ ಕೊಟ್ಟರೂ ಸಿಗದೇ ಇರುವ ಸಂಗತಿಗಳಾಗುವ ದಿನಗಳು ದೂರಿಲ್ಲ.
ದೇಶದ ಕೇವಲ 10 ಪ್ರತಿಶತ ಜನರ ಸುಖಕ್ಕಾಗಿ 90 ಪ್ರತಿಶತ ಜನರ ಅವಕಾಶಗಳನ್ನು, ಹಕ್ಕುಗಳನ್ನು ಕಸಿಯುವದು ಖಂಡಿತ ನ್ಯಾಯವಲ್ಲ. ಅಷ್ಟಕ್ಕೂ ಈ ಸ್ಟಾರ್ ಹೊಟೆಲುಗಳನ್ನು ನಂಬಿಕೊಂಡು ಒಂದು ದೇಶದ ಜನಸಮುದಾಯದ ಬದುಕನ್ನು ನಿರ್ಣಯಿಸುವಂತಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿ ನಾವು ಸಮಾನತೆಗೆ ಅವಕಾಶವನ್ನು ಕೊಡಬೇಕಿದೆ. ಆ ಮೂಲಕ ಮೂಲಭೂತ ಸೌಕರ್ಯಗಳು ಕೇವಲ ಉಳ್ಳವರ ಸ್ವತ್ತಾಗುವದನ್ನು ತಪ್ಪಿಸಬೇಕಿದೆ.