Daily Archives: November 12, 2013

ನಾವು ಮಕ್ಕಳನ್ನು ಪ್ರೀತಿಸುತ್ತೇವೆಯೇ?


– ರೂಪ ಹಾಸನ


 

ನಾವು ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆಯೇ? ಇದು ನಾವೆಲ್ಲರೂ ನಮ್ಮ ಒಳ ಮನಸುಗಳನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಶಃ “ಹೌದು” ಎಂಬುದು ಬಹುತೇಕರ ಉತ್ತರ. ಆದರೆ ನಮ್ಮ ಸಮಾಜದಲ್ಲಿ ಅತಿ ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವವರು ಮಕ್ಕಳು. ಅವರನ್ನೂ ನಾವು ವ್ಯಕ್ತಿಗಳೆಂದು ಗುರುತಿಸಿಯೇ ಇಲ್ಲವಾದ್ದರಿಂದ ಅವರೆಡೆಗೆ ಗಮನ ಕೊಟ್ಟಿದ್ದೂ ಯಾವತ್ತೂ ಕಡಿಮೆಯೇ. ಹಾಗಿದ್ದರೆ ಮಕ್ಕಳೆಡೆಗಿನ ಪ್ರೀತಿ ಎಂದರೇನು? ಎಂಬುದು ಇನ್ನೊಂದು ಪ್ರಶ್ನೆ. ಮಕ್ಕಳು ಕೇಳಿದ್ದನ್ನು ಕೊಡಿಸುತ್ತೇವೆ. ಹೆಚ್ಚಿನ ಡೊನೇಶನ್ ಕೊಟ್ಟು, ಹೆಚ್ಚು ಫೀಸ್ ಕಟ್ಟಿ, ಒಳ್ಳೆಯ ಕಿಂಡರ್‌ಗಾರ್ಟನ್-ಡೇ ಕೇರ್ ಸೆಂಟರ್‌ಗೆ ಸೇರಿಸಿದ್ದೇವೆ. ಉಂಡುಡಲು ಯಾವ ಕೊರತೆಯೂ ಇಲ್ಲ. ಅದಕ್ಕಾಗಿಯೇ ಗಂಡ ಹೆಂಡತಿ ಇಬ್ಬರೂ ಹಗಲಿರುಳೂ ದುಡಿಯುತ್ತೇವೆ……..ಹೀಗೆ ಪೋಷಕರಿಂದ ವಿವರಣೆಗಳು ಮುಂದುವರೆಯುತ್ತದೆ.

ಪ್ರೀತಿಯನ್ನು ನಾವಿಂದು ಹಣದ ಮೌಲ್ಯದಲ್ಲಿ ಅಳೆಯಲು ಪ್ರಾರಂಭಿಸಿಬಿಟ್ಟಿದ್ದೇವೆ! Streetchildrenಮಕ್ಕಳ ಬೇಕು-ಬೇಡ, ಇಷ್ಟಾನಿಷ್ಟಗಳನ್ನು ಗುರುತಿಸಲು, ಅವರಿಗೆ ಅವಶ್ಯಕವಾಗಿ ನೀಡಬೇಕಾದಂತಾ ಗಂಭೀರ ಲಕ್ಷ್ಯ, ಪೋಷಣೆ ಹಾಗೂ ಕಾಳಜಿಗಾಗಿ ಕನಿಷ್ಠ 0-6 ವರ್ಷಗಳ ಮಕ್ಕಳೊಂದಿಗಾದರೂ ನಿಗದಿತ ಗುಣಾತ್ಮಕ ಸಮಯವನ್ನು ಕಳೆಯುವುದು ಮುಖ್ಯ ಎಂಬುದನ್ನೂ ನಾವಿಂದು ಮರೆತೇ ಬಿಟ್ಟಿದ್ದೇವೆ. ಅಥವಾ ಅದಕ್ಕೆಲ್ಲಾ ನಮಗೆ ಸಮಯವೇ ಇಲ್ಲ! ಬದಲಿಗೆ ಅದನ್ನು ವಸ್ತು ಆಧಾರಿತವಾದ ಸುಖಸಾಧನದಿಂದ ಅಳೆದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಆದರೆ ಮಕ್ಕಳಿಗೆ ನಿಜಕ್ಕೂ ನಮ್ಮಿಂದ ಬೇಕಾಗಿರುವುದೇನು? ಇದು ಪೋಷಕರು, ಸಮಾಜ, ಸರ್ಕಾರ ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ.

ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲವಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಇಂತಹ ಎಳೆಯ ಕಂದಮ್ಮಗಳಿಂದ ಹಿಡಿದು 5-6 ವರ್ಷಗಳವರೆಗಿನ ಮಕ್ಕಳನ್ನು ನೋಡಿಕೊಳ್ಳಲು ನಗರ ಪ್ರದೇಶಗಳಲ್ಲೆಲ್ಲಾ ಕ್ರಷ್, ಡೇ ಕೇರ್ ಸೆಂಟರ್‌ನಂತಹ ಮಕ್ಕಳ ಪಾಲನಾ ಕೇಂದ್ರಗಳು ಹುಟ್ಟಿಕೊಂಡಿವೆ. ಬಹಳಷ್ಟು ಕೇಂದ್ರಗಳು ಶ್ರದ್ಧೆ, ಕಾಳಜಿಯಿಂದಲೇ ಕಾರ್ಯ ನಿರ್ವಹಿಸುತ್ತವೆ ಕೂಡ. ಆದರೆ ಇಂತಹ ಪಾಲನ ಕೇಂದ್ರಗಳನ್ನು ಸರ್ಕಾರದಿಂದ ದಾಖಲಿಸುವ, ಕನಿಷ್ಟ ಅವಶ್ಯಕ ನಿಯಾಮಾವಳಿಗಳನ್ನು ಅವುಗಳಿಗೆ ರೂಪಿಸುವ ಕೆಲಸ ಸರ್ಕಾರದಿಂದ ಆಗಿಲ್ಲ. ಅತ್ಯಂತ ಚಿಕ್ಕ ಕೊಠಡಿಗಳಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಬೇಕಾದ ತಕ್ಕಷ್ಟು ಆಯಾಗಳಾಗಲಿ, ಅವರಿಗೆ ಕನಿಷ್ಠ ನಿಗದಿತ ತರಬೇತಿಯಾಗಲಿ, ಆಟಿಕೆಗಳಾಗಲಿ, ಶೌಚಾಲಯ, ಸ್ವಚ್ಛ ಹಾಸಿಗೆ ಹೊದಿಕೆ, ಶುದ್ಧ ಕುಡಿಯುವ ನೀರು, ಆಟದ ಬಯಲು ಇನ್ನಿತರ ಮೂಲಭೂತ ಸೌಕರ್ಯಗಳೂ ಇಲ್ಲದಂತಹ ಪಾಲನಾ ಸಂಸ್ಥೆಗಳ ಸಂಖ್ಯೆ ಇಂದು ಹೆಚ್ಚುತ್ತಿವೆ. ಸ್ವಚ್ಛಂದವಾಗಿ ಆಡಿ ನಲಿಯ ಬೇಕಾಗಿದ್ದ ಮಕ್ಕಳು ಉಸಿರುಗಟ್ಟಿಸುವ ವಾತಾವರಣದಲ್ಲಿ, ಪರಿಪೂರ್ಣವಾಗಿ ವಿಕಸಿತಗೊಳ್ಳದೆ ನಲುಗಿ ಹೋಗುತ್ತಿರುವಾಗ ಇದಕ್ಕಾಗಿ ಯಾರನ್ನು ದೂರುವುದು? ಮಕ್ಕಳ ಸಹಜ ಬಾಲ್ಯವನ್ನು ಕಸಿಯುತ್ತಿರುವ ಅಪರಾಧಿಗಳು ಯಾರು? ಯಾರನ್ನಿಲ್ಲಿ ಶಿಕ್ಷಿಸುವುದು?

ಮಧ್ಯಮ ವರ್ಗದವರ ಮಕ್ಕಳನ್ನು ನೋಡಿಕೊಳ್ಳಲು ನಗರ ಪ್ರದೇಶದಲ್ಲಿ ಇಂತಹ ವ್ಯವಸ್ಥೆಗಳಾದರೂ ಇವೆ. child-labourಆದರೆ ಗ್ರಾಮೀಣ ಪ್ರದೇಶಗಳ ಕೆಳ ಮಧ್ಯಮ ಹಾಗೂ ಬಡ ಕುಟುಂಬಗಳಲ್ಲಿ ದಂಪತಿಗಳಿಬ್ಬರೂ ಹೊರಗೆ ಹೋಗಿ ದುಡಿಯುತ್ತಿರುವ ಸಂದರ್ಭಗಳಲ್ಲಿ, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದಾಗ ಮಕ್ಕಳು ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೆಚ್ಚಿನ ಕೆಲಸದ ಕೇಂದ್ರಗಳಲ್ಲಿ ಮಕ್ಕಳನ್ನೂ ಪಾಲಕರು ತಮ್ಮೊಂದಿಗೆ ಕರೆತರುವುದನ್ನು ಒಪ್ಪುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿಯೋ ಸ್ವಲ್ಪ ದೊಡ್ಡವಾಗಿದ್ದರೆ ತಮ್ಮದೇ ಮನೆಗಳಲ್ಲಿಯೋ ಬಿಟ್ಟು ಹೋಗಬೇಕಾದಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಅನೇಕ ರೀತಿಯ ಅನಾರೋಗ್ಯಕ್ಕೆ, ಅಪಾಯಗಳಿಗೆ, ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಇಂತಹ ಕುಟುಂಬಗಳಲ್ಲಿಯೇ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಹೆಚ್ಚು ಮಕ್ಕಳ ಕಾರಣಕ್ಕೋ, ಹೆಣ್ಣು ಎಂಬ ಕಾರಣಕ್ಕೋ ಮಕ್ಕಳೆಡೆಗೆ ನಿಷ್ಕಾಳಜಿ ಹಾಗೂ ಗಂಡು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಅತ್ಯಂತ ಸಹಜವಾಗಿ ನಡೆಯುತ್ತಿದೆ. ಇಲ್ಲೆಲ್ಲಾ ಮಕ್ಕಳ ಹಕ್ಕು ಎಂಬ ಪರಿಕಲ್ಪನೆಯೇ ಅಪಹಾಸ್ಯಕ್ಕಿಡಾಗುತ್ತಿರುವುದನ್ನು ಸಂಕಟದಿಂದ ನೋಡಬೇಕಾಗಿದೆಯಷ್ಟೇ.

“ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದೇಶ ಭಾರತ. ಭಾರತದ ಸಂವಿಧಾನವು ದೇಶದ ಎಲ್ಲಾ ಮಕ್ಕಳಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿದೆ ಮತ್ತು ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸುವುದನ್ನು ಉತ್ತೇಜಿಸುತ್ತದೆ. Street_Child,_Srimangal_Railway_Stationಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳು ವಿಶೇಷವಾಗಿ ಮಕ್ಕಳ ಬಾಲ್ಯತನವನ್ನು ದುರುಪಯೋಗದಿಂದ ರಕ್ಷಿಸಲು ಮತ್ತು ಮಕ್ಕಳು ಸ್ವತಂತ್ರವಾಗಿ ಮತ್ತು ಗೌರವಯುತವಾದ ಆರೋಗ್ಯಕರವಾದ ವಾತಾವರಣದಲ್ಲಿ ಅಭಿವೃದ್ಧಿ ಹೊಂದಲು ಅವರಿಗೆ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸುವುದನ್ನು ಸೂಚಿಸುತ್ತದೆ. ಮಕ್ಕಳ ಬಾಲ್ಯ ಶೋಷಣೆಗೆ ಗುರಿಯಾಗದಂತೆ ಮತ್ತು ಅವರು ನೈತಿಕವಾಗಿ ಮತ್ತು ಐಹಿಕವಾಗಿ/ಪ್ರಾಪಂಚಿಕವಾಗಿ ಪಡೆಯಲೇ ಬೇಕಾದ ಸೌಲಭ್ಯಗಳಿಂದ ವಂಚಿತರಾಗದಂತೆ ರಕ್ಷಿಸಬೇಕು………

“ಮಕ್ಕಳು ದೇಶದ ‘ಅತ್ಯಂತ ಪ್ರಮುಖ ಆಸ್ತಿ’ ಎಂದು ರಾಷ್ಟ್ರೀಯ ಮಕ್ಕಳ ನೀತಿ 1974 ರಲ್ಲಿ ಘೋಷಿಸಿರುವ ಭಾರತ ಸರ್ಕಾರವು ತನ್ನ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಅಂತಾರಾಷ್ಟ್ರೀಯ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಒಪ್ಪುವ ಮೂಲಕ ಪುನರುಚ್ಚರಿಸಿದೆ. ಇವುಗಳಲ್ಲಿ ಮಕ್ಕಳ ಹಕ್ಕುಗಳ ಘೋಷಣೆ, ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳು ಸೇರಿವೆ. ಬಹಳ ಪ್ರಮುಖವಾಗಿ ಈ ಸಮಾಜವು ಕೊಡಮಾಡುವ ಎಲ್ಲ ರೀತಿಯ ಕೌಶಲ್ಯಗಳು, ಪ್ರೋತ್ಸಾಹ ಮತ್ತು ಪ್ರಚೋದನೆಯನ್ನು ಬಳಸಿಕೊಂಡು ಮಕ್ಕಳೆಲ್ಲರೂ ದೈಹಿಕವಾಗಿ ಮಾನಸಿಕವಾಗಿ ಚುರುಕಾಗಿರಬೇಕು, ನೈತಿಕವಾಗಿ ಆರೋಗ್ಯಕರವಾಗಿ ಸದೃಢ ನಾಗರೀಕರಾಗಿ ಬೆಳೆಯಬೇಕು. ಆ ಮೂಲಕ ಮಕ್ಕಳ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಗುರುತಿಸಿದೆ. ಬೆಳೆಯುತ್ತಿರುವ/ವಿಕಾಸ ಹೊಂದುತ್ತಿರುವ ಎಲ್ಲ ಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರತ್ತಲೂ ರಾಷ್ಟ್ರೀಯ ಮಕ್ಕಳ ನೀತಿ ಒತ್ತು ನೀಡುತ್ತದೆ.”

– ಇದು ರಾಷ್ಟ್ರೀಯ ಮಕ್ಕಳ ನೀತಿ 2013 ರ ಘೋಷ ವಾಕ್ಯ! ಕೇಳಲು ಎಷ್ಟು ಸುಂದರವಾಗಿದೆಯಲ್ಲವೇ? ನಮ್ಮ ದೇಶದ ಮಕ್ಕಳೆಲ್ಲರೂ ನಿಜಕ್ಕೂ ಇಂತಹ ಅಪೂರ್ವ ಅವಕಾಶಗಳನ್ನು ಪಡೆದು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವಂತಾದರೆ……… ಏನು ಮಾಡುವುದು? ನಮ್ಮ ದೇಶದ ಸಾಮಾಜಿಕ ಸಂದರ್ಭದಲ್ಲಿ ಕನಿಷ್ಠ ಅಂತಹ ದುಬಾರಿ ಕನಸು ಕೂಡ ಬೀಳುವುದಿಲ್ಲವಲ್ಲ! ಇನ್ನು ಮಕ್ಕಳ ದಿನಾಚರಣೆಯನ್ನು ಆಚರಿಸುವ ಸಂಭ್ರಮವನ್ನು ಎಲ್ಲಿಂದ ಕಡ ತರುವುದು?

ನಮ್ಮ ದೇಶದಲ್ಲಿ ಕಳೆದ ಒಂದೆರಡು ದಶಕದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಮಧ್ಯಮ ಆದಾಯವಿರುವ ದೇಶಗಳಿಗೆ ಹೋಲಿಸಿದರೆ ಬಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಮಕ್ಕಳ ಪೋಷಣೆ ವಿಚಾರದಲ್ಲಿ 1995 ರವರೆಗೆ ಭಾರತ ವಿಶ್ವದಲ್ಲಿಯೇ 12ನೇ ಸ್ಥಾನದಲ್ಲಿ ಇತ್ತು. ನಂತರದ ಇತ್ತೀಚೆಗಿನ ವರ್ಷಗಳಲ್ಲಿ ಅದು 112ನೇ ಸ್ಥಾನಕ್ಕೆ ಇಳಿದಿದೆ ಎಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ “ಸೇವ್ ದಿ ಚೈಲ್ಡ್” ಅಂತರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ತಿಳಿಸುತ್ತದೆ.

ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ. ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಈ ಪ್ರಗತಿ ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ ಎಂದು ಸಂಸ್ಥೆಯ ವರದಿ ತಿಳಿಸುತ್ತದೆ. ಮಕ್ಕಳನ್ನು ಉತ್ತಮವಾಗಿ ಪೋಷಣೆ ಮಾಡುವ ವಿಚಾರದಲ್ಲಿ ಜಪಾನ್ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‌ಲ್ಯಾಂಡ್, ಬ್ರಿಟನ್,ಮತ್ತು ನಾರ್ವೆ ದೇಶಗಳಿವೆ.

ಭಾರತದಲ್ಲಿ ಅದೇ ಮೊದಲ ಬಾರಿಗೆ ಜಾರಿಯಾದ 1974 ರ ಮಕ್ಕಳ ರಾಷ್ಟ್ರೀಯ ನೀತಿ, ಮಕ್ಕಳನ್ನೂ ವ್ಯಕ್ತಿಗಳೆಂದು ಗಣಿಸಿದ್ದಕ್ಕೊಂದು ಉದಾಹರಣೆ. ಅಲ್ಲಿಂದ ಮುಂದೆ 1986 ರ ರಾಷ್ಟ್ರೀಯ ಶಿಕ್ಷಣ ನೀತಿ, 1993 ರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ, 2000 ದ ರಾಷ್ಟ್ರೀಯ ಜನಸಂಖ್ಯಾ ನೀತಿ, 2003 ರ ರಾಷ್ಟ್ರೀಯ ಮಕ್ಕಳ ಶಾಸನಾಧಿಕಾರ, 2005 ರ ರಾಷ್ಟ್ರೀಯ ಮಕ್ಕಳ ಕಾರ್ಯಯೋಜನೆ, ಮತ್ತೆ ಇತ್ತೀಚೆಗಿನ 2013 ರ ರಾಷ್ಟ್ರೀಯ ಮಕ್ಕಳ ನೀತಿ……. ಎಲ್ಲವೂ ಮಕ್ಕಳ ವಿವಿಧ ರೋಗನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ 100 ಶೇಕಡಾ ಹಾಕಿಸಬೇಕೆಂದು, ಜನನ-ಮರಣ-ವಿವಾಹ ನೋಂದಣಿ, ಗರ್ಭಿಣಿ ಹಾಗು ಮಗುವಿನ ಸುರಕ್ಷತೆ, ಮಕ್ಕಳ ಶಿಕ್ಷಣ, ಹೆಣ್ಣುಭ್ರೂಣಹತ್ಯೆಯ ಸಂಪೂರ್ಣ ನಿಷೇಧ, ಹೆಣ್ಣುಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವುದು, ಬಾಲ್ಯವಿವಾಹ ನಿಷೇಧ, ಎಲ್ಲ ರೀತಿಯ ದೌರ್ಜನ್ಯ ನಿಷೇಧ, ಆರೈಕೆ, ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಸಲು ಸಂವಿಧಾನಾತ್ಮಕ ಹಕ್ಕುಗಳನ್ನಾಧರಿಸಿ ರೂಪಿಸಲಾಗಿದೆ. ಇದರಲ್ಲಿ ಸಾಮುದಾಯಿಕವಾದ ಮಕ್ಕಳೆಲ್ಲರ ಜೊತೆಗೆ ಬಡತನರೇಖೆಗಿಂತಾ ಕೆಳಗಿರುವ ಮಕ್ಕಳು, ಬೀದಿಮಕ್ಕಳು, ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಗುಡ್ಡಗಾಡಿನ ಮಕ್ಕಳು, ತಳಸಮುದಾಯದ ಮಕ್ಕಳ ಕುರಿತು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ……

ಇಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಬದುಕು ಅಪಾಯಕಾರಿಯಾಗುತ್ತಾ ಸಾಗಿದೆ. ಜನ್ಮ ನೀಡುವ ತಾಯಿ ಹಾಗೂ ನವಜಾತ ಶಿಶು ಇಬ್ಬರ ಪಾಲಿಗೂ ಭಾರತ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಭಾರತದಲ್ಲಿ ಹುಟ್ಟುವ ಪ್ರತಿ ಮೂರರಲ್ಲಿ ಒಂದು ಮಗು ಹುಟ್ಟಿದ ದಿನದಂದೇ ಅಸುನೀಗುತ್ತದೆಂದರೆ, ಈ ದೇಶದಲ್ಲಿ ಮಕ್ಕಳು ಸುಪುಷ್ಟರಾಗಿ, ಆರೋಗ್ಯವಾಗಿದ್ದಾರೆಂದು ಹೇಳಲು ಸಾಧ್ಯವೇ? ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ 3,09,000 ಶಿಶುಗಳು ಹುಟ್ಟಿದ ದಿನದಂದೇ ಸಾವಿಗೀಡಾಗುತ್ತಿವೆ. ಹುಟ್ಟಿದ ದಿನದಂದೇ ಶಿಶುಗಳು ಅತ್ಯಧಿಕವಾಗಿ ಸಾವನ್ನಪ್ಪುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದರೆ ಮಕ್ಕಳ ಪಾಲಿಗೆ ಇದಕ್ಕಿಂಥಾ ನಿಷ್ಕಾಳಜಿಯ ವಿಷಯ ಇನ್ಯಾವುದಿದೆ? ಹಾಗಾದರೆ ನಮ್ಮ ಮಕ್ಕಳ ಪರವಾದ ನೀತಿ, ಕಾಯ್ದೆ, ಕಾರ್ಯಕ್ರಮ, ಯೋಜನೆಗಳು, ಅದರ ಅನುಷ್ಠಾನಕ್ಕಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಚಿವಾಲಯ, ಇಲಾಖೆಗಳು, ಸಮಿತಿಗಳು, ಆಯೋಗಗಳು ಏನು ಮಾಡುತ್ತಿವೆ? ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮಕ್ಕಳ ರಕ್ಷಣೆ, ಪೋಷಣೆಗಾಗಿಯೇ ವ್ಯಯಿಸುತ್ತಿದ್ದರೂ ನಿರೀಕ್ಷಿತ ಫಲ ಇನ್ನೂ ಕಾಣಲಾಗಿಲ್ಲವೆಂದರೆ ಇದಕ್ಕಿಂತಾ ದುರಂತ ಬೇರೇನಿದೆ?

ಭಾರತದಲ್ಲಿ 0-6 ವರ್ಷದವರೆಗಿನ ಮಕ್ಕಳ ಪ್ರಮಾಣ 2001 ರಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 15.9 ರಷ್ಟಿದ್ದುದು ಈಗ 2011 ರ ಜನಗಣತಿಯ ಪ್ರಕಾರ ಅದು ಶೇಕಡಾ 13.1 ಕ್ಕೆ ಕುಸಿದಿದೆ. ಅಂದರೆ ಮಕ್ಕಳ ಜನನ ಪ್ರಮಾಣದಲ್ಲಿ ಈ ಹತ್ತು ವರ್ಷಗಳಲ್ಲಿ ತೀವ್ರ ಕುಸಿತ ಉಂಟಾಗಿದೆ. ಒಳ್ಳೆಯದೇ ಆಯ್ತು. ಕುಟುಂಬ ಯೋಜನೆಯ ಪ್ರತಿಫಲವಿರಬಹುದು ಎಂದು ಬೀಗುವಂತೆಯೂ ಇಲ್ಲ! ಈ ಸಮಸ್ಯೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿದ್ದರೆ ಪರವಾಗಿಲ್ಲ. ಆದರೆ ವಸ್ತುಸ್ಥಿತಿ ಅತ್ಯಂತ ಭೀಕರವಾಗಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 [ದುರ್ಬಳಕೆ ಮತ್ತು ತಡೆ] ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ ಅಪರಾಧ ಎಸಗಿದ ವೈದ್ಯರು ಶಿಕ್ಷೆಗೊಳಗಾಗುವುದು ಅಪರೂಪ. ಹೀಗಾಗಿ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಲಿಂಗ ಅನುಪಾತ ಅಸಮತೋಲನ ಮಿತಿಮೀರುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಕಳೆದೊಂದು ದಶಕದಲ್ಲಿ ನಡೆದ ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾಂನಿಂಗ್ ಸೇರಿ ಇತರೆ ಆಧುನಿಕ ಪರಿಕ್ಷಾ ವಿಧಾನಗಳಿಂದ ಭ್ರೂಣಲಿಂಗ ಪತ್ತೆ ಅಥವಾ ಆಯ್ಕೆ ಚಟುವಟಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಹೆಣ್ಣುಶಿಶುಗಳು ಗರ್ಭದಲ್ಲೇ ನಿಷ್ಕರುಣೆಯಿಂದ ಹತ್ಯೆಗೀಡಾಗುತ್ತಿವೆ. ಇದರಿಂದ ಗಂಡು ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಜನನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಟುಕರು ಯಾರು? ಎಂದರೆ ನಾವಲ್ಲ ಎಂಬ ಉತ್ತರ ಎಲ್ಲರಿಂದಲೂ ಬರುತ್ತದೆ. ಹಾಗಾದರೆ ಹೆಣ್ಣುಮಕ್ಕಳೇಕೆ ಮತ್ತು ಹೇಗೆ ಗರ್ಭದಲ್ಲೇ ಕರಗಿ ಹೋಗುತ್ತಿದ್ದಾರೆ?

ಪ್ರತಿ 1000 ಗಂಡುಮಕ್ಕಳಿಗೆ ನಮ್ಮ ರಾಜ್ಯದಲ್ಲಿ 1991 ರಲ್ಲಿ 960 ಹೆಣ್ಣುಮಕ್ಕಳಿದ್ದುದು, 2001 ರಲ್ಲಿ 946 ಕ್ಕೆ ಕುಸಿದಿದೆ. 2011 ರಲ್ಲಿ 943 ಆಗಿದೆ! ಹಾಗೇ ದೇಶದಲ್ಲಿ ಈ ಅನುಪಾತ 1991 ರಲ್ಲಿ 945 ಇದ್ದುದು 2001 ರಲ್ಲಿ 927 ಕ್ಕೆ ಇಳಿದು 2011 ರಲ್ಲಿ 914 ಕ್ಕೆ ಕುಸಿದಿದೆ. ಹೆಣ್ಣುಮಕ್ಕಳ ಪ್ರಮಾಣ ಹೀಗೇ ಕುಸಿಯುತ್ತಾ ಹೋದರೆ ಸಮಾಜದಲ್ಲಿ ಸಮತೋಲನ ಬರಲು ಹೇಗೆ ಸಾಧ್ಯ? ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಕುಟುಂಬ ಯೋಜನೆಯಿಂದಲ್ಲ ಬದಲಿಗೆ ಸಮಾಜದ ಕ್ರೌರ್ಯದಿಂದ ಎಂದು ಯಾವ ನಾಲಿಗೆಯಿಂದ ಹೇಳಿಕೊಳ್ಳೋಣ? ಭಾರತದಲ್ಲಿ ಪ್ರತಿ ವರ್ಷ ಅಂದಾಜು 6 ರಿಂದ 10 ಲಕ್ಷ ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಹೆಣ್ಣು ಜೀವಗಳನ್ನು ಭೂಮಿಗೇ ಕಾಲಿಡದಂತೆ ಹೊಸಕಿ ಹಾಕಲಾಗಿದೆ ಎಂದರೆ ಹೆಣ್ಣಿನ ಕುರಿತು ನಮ್ಮ ಸಮಾಜಕ್ಕಿರುವ ಮನೋಧೋರಣೆ ಬದಲಿಸಲು ಯಾವ ದೇವರಿಗೆ ಮೊರೆಯಿಡೋಣ? infant-mortalityಸದ್ಯ ಗಂಡು-ಹೆಣ್ಣಿನ ಅನುಪಾತ 100;84 ಕ್ಕೆ ಇಳಿದಿದ್ದು ಅದು ಸಮಾಜದಲ್ಲಿ ಅಸಮತೋಲನವನ್ನು ಸೃಷ್ಟಿಸಿ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಶೋಷಣೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದರೂ ನಮ್ಮ ಸರ್ಕಾರಗಳು ಇದನ್ನೊಂದು ಗಂಭೀರ ವಿಷಯವೆಂದೇ ಪರಿಗಣಿಸುತ್ತಿಲ್ಲವೆಂದರೆ ಮತ್ತೆ ಯಾರಲ್ಲಿ ನಾವು ನ್ಯಾಯ ಕೇಳಬೇಕು?

ಭ್ರೂಣಹತ್ಯೆಯ ತೂಗುಕತ್ತಿಯಿಂದ ಅಪ್ಪಿತಪ್ಪಿ ಮಕ್ಕಳು ಪಾರಾಗಿ ಬಂದರೂ ಅಸಮಾನ ಭಾರತದ ನೆಲದಲ್ಲಿ ಉಂಡುಡಲು ನೆಟ್ಟಗಿಲ್ಲದ ಮಕ್ಕಳು ಅಪೌಷ್ಠಿಕತೆ, ರಕ್ತಹೀನತೆಯಲ್ಲಿ ನರಳಿ ರೋಗಿಷ್ಟಗೊಳ್ಳುವ ಸಂದರ್ಭಗಳೂ ಹೆಚ್ಚಿವೆ. ಕೇಂದ್ರ ಸರ್ಕಾರದ ಯೋಜನೆಯಂತೆ 0-6 ವರ್ಷದ ಮಕ್ಕಳ ಪೋಷಣೆಗಾಗಿ ಕರ್ನಾಟಕ ರಾಜ್ಯದಲ್ಲಿ ಹಳ್ಳಿಗಳು ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ 64,518 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 39,54,292 ಮಕ್ಕಳು ದಾಖಲಾಗಿದ್ದಾರೆ. ಅದರಲ್ಲಿ 43,951 ಮಕ್ಕಳು ತೀವ್ರ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದರೆ, 10,86,820 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ! ಈ ಮಕ್ಕಳಿಗೆ ಬಿಸಿಯೂಟ, ಹಾಲಿನ ಜೊತೆಗೇ ಮೊಟ್ಟೆ ಕೂಡ ಕೊಡಲಾಗುತ್ತಿದೆ. ಆದರೂ ಅಧಿಕಾರಿಗಳ ಕಾರ್ಯಕ್ಷಮತೆ ಉತ್ತಮವಿದ್ದ ಕಡೆಗಳಲ್ಲಿ ಮಾತ್ರ ಇಂತಹ ಮಕ್ಕಳ ಪೋಷಣೆ ಸಮರ್ಥವಾಗಿ ನಡೆಯುತ್ತಿದ್ದು, ಮಿಕ್ಕ ಕಡೆಗಳಲ್ಲಿ ಹೆಚ್ಚಿನ ಲೋಪಗಳು ಕಂಡು ಬರುತ್ತಿವೆ. ಮೊನ್ನೆಯಷ್ಟೇ ಕೊಪ್ಪಳದಲ್ಲಿ ಇಂತಹ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ನೀಡುತ್ತಿರುವುದು ವರದಿಯಾಗಿದೆ. ನಿಗದಿತ ಪ್ರಮಾಣಕ್ಕಿಂತಾ ಕಡಿಮೆ ದರ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ಪೌಷ್ಟಿಕಾಂಶದಲ್ಲೂ ಲಾಭ ಮಾಡಿಕೊಳ್ಳುವ ಸರ್ಕಾರಿ ಬಕಾಸುರರಿಂದ ಅಸಹಾಯಕ ಮಕ್ಕಳನ್ನು ಕಾಪಾಡುವವರ್‍ಯಾರು?

ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಇಂದಿಗೂ ಮಕ್ಕಳ ತೂಕವನ್ನು ಅಳೆಯುವ ತೂಕದ ಯಂತ್ರವೇ ಇಲ್ಲ! ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ವಯಸ್ಸು ಮತ್ತು ತೂಕದ ಸಮೀಕರಣದ ನಕ್ಷೆಯನ್ನು ನೀಡಿದ್ದು ಅದನ್ನು ಅಂಗನವಾಡಿಗಳಿಗೆ ವಿತರಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಮಾನದಂಡ ಹೊಂದಿರುವ ಆ ನಕ್ಷೆಯ ಪ್ರಕಾರ ಮಕ್ಕಳ ತೂಕವನ್ನೇನಾದರೂ ಸರಿಯಾಗಿ ನೋಡಿ ದಾಖಲಿಸಿದರೆ, ಅಪ್ಪಟ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ ಮಕ್ಕಳ ಆರೋಗ್ಯ, ರಕ್ತಹೀನತೆ, ಅಪೌಷ್ಟಿಕತೆಯನ್ನು ಅಳೆದರೆ ಅನಾರೋಗ್ಯ ಹೊಂದಿದ ಮಕ್ಕಳ ಸಂಖ್ಯೆ ದುಪ್ಪಟ್ಟೋ, ಮೂರು ಪಟ್ಟೋ ಹೆಚ್ಚಾಗಬಹುದೇನೋ! ಈಗಲೂ ಕಾರ್ಯಕರ್ತೆಯರಿಗೆ ಅಳೆಯಲು ಬರುವುದಿಲ್ಲವೆಂದು ಮಕ್ಕಳ ಎತ್ತರವನ್ನು ಅಳೆಯುವ ಕೋಷ್ಟಕ ಅಂಗನವಾಡಿಗಳಲ್ಲಿ ಇಲ್ಲ. ಅಪರಿಪೂರ್ಣ ವಿಧಾನದಲ್ಲೇ ಇಂದಿಗೂ ಮಕ್ಕಳ ಪೌಷ್ಟಿಕತೆಯನ್ನು ಅಂದಾಜಿಸಲಾಗುತ್ತಿದೆಯಷ್ಟೇ ಹೊರತು ಸರಿಯಾದ ಸಮೀಕ್ಷೆಗಳು ಆಗಿಯೇ ಇಲ್ಲ. ೧೯೭೫ರಲ್ಲೇ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಯಾಗಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದರೂ ಇನ್ನೂ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯ ಮಟ್ಟದಲ್ಲಿ ನಿರೀಕ್ಷಿತ ಬದಲಾವಣೆಗಳಾಗಿಲ್ಲ. ಅಪೌಷ್ಟಿಕತೆಯಿಂದ ನಿತ್ರಾಣಗೊಂಡು ಮಕ್ಕಳು ಸಾವನ್ನಪ್ಪುವುದು ನಿಂತಿಲ್ಲ. ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಹೋಲಿಸಿ ಈ ವರ್ಷ ಸುಧಾರಿಸಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ ಮಕ್ಕಳ ಸಂಬಂಧಿತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು!

ಪೋಷಣೆಯ ಜೊತೆಗೆ ಅಂಗನವಾಡಿ ಕೇಂದ್ರಗಳು 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಜವಾಬ್ದಾರಿಯನ್ನೂ ಹೊತ್ತಿವೆ. ಆದರೆ ಇದಕ್ಕೆ ವಯೋಮಾನಕ್ಕೆ ತಕ್ಕಂತೆ, ಶಿಸ್ತುಬದ್ಧ ನಿಗದಿತ ನಮೂನೆಯ ಪಠ್ಯವಾಗಲಿ, ಪ್ರತ್ಯೇಕ ಶಾಲಾ ಕೊಠಡಿಯಾಗಲಿ ಇಲ್ಲ. ಹೀಗಾಗಿ ಅದೊಂದು ಪಾಲಿಸುವ, ಪೋಷಿಸುವ, ಆಡಿಸುವ ಮನೆಯಷ್ಟೇ! ಅದೇ ವಯಸ್ಸಿನ ಖಾಸಗಿ ಕಿಂಡರ್‌ಗಾರ್ಡನ್‌ನಲ್ಲಿ ಕಲಿಯುವ ಮಕ್ಕಳು ನರ್ಸರಿ, ಎಲ್‌ಕೆಜಿ, ಯುಕೆಜಿಗಳನ್ನು ಈ ಶಿಕ್ಷಣಕ್ಕಾಗಿಯೇ ಸಿಧ್ಪಡಿಸಿದ ನಿಗದಿತ ನಮೂನೆಯ ಪಠ್ಯವನ್ನಾಧರಿಸಿ ಶಿಸ್ತುಬದ್ಧವಾಗಿ ಕಲಿಯುತ್ತಾರೆ. ವಿಪರ್ಯಾಸವೆಂದರೆ ನಮ್ಮ 3-6 ವರ್ಷಗಳ ಮಕ್ಕಳ ವಿದ್ಯಾಭ್ಯಾಸದ ಕುರಿತು ಎಲ್ಲಿಯೂ ದಾಖಲಿಸಬೇಕಾದ ಅವಶ್ಯಕತೆ ಇಲ್ಲ! ಖಾಸಗಿಯವರು ತಾವೇ ಗುತ್ತಿಗೆ ಪಡೆದವರಂತೆ ನಡೆಸುತ್ತಿರುವ ಈ ಪೂರ್ವಪ್ರಾಥಮಿಕ ಹಂತದ ಶಿಕ್ಷಣ ಸಂಸ್ಥೆಗಳು ಸರ್ಕಾರದ ಯಾವುದೇ ಇಲಾಖೆಯಡಿಯೂ ನೋಂದಣಿಯಾಗುವ ಅವಶ್ಯಕತೆಯಿಲ್ಲ. ಯಾವ ಯಾರ ಒಪ್ಪಿಗೆಯನ್ನೂ ಪಡೆಯದೇ ಕನಿಷ್ಟ ಮೂಲಭೂತ ಸೌಲಭ್ಯಗಳೂ ಇಲ್ಲದೇ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಇಂತಹ ಖಾಸಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದರೂ ಕೇಳುವವರೇ ಇಲ್ಲ! ಇಲ್ಲಿ ಕಲಿಯುತ್ತಿರುವ ಲಕ್ಷಾಂತರ ಮಕ್ಕಳ ಪೌಷ್ಟಿಕತೆಯ ಬಗ್ಗೆಯಾಗಲಿ, ರಕ್ಷಣೆಯ ಬಗ್ಗೆಯಾಗಲಿ, ಶಿಕ್ಷಣದ ಬಗ್ಗೆಯಾಗಲಿ, ಮಕ್ಕಳ ಹಕ್ಕುಗಳ ಉಲ್ಲಂಘನೆಯ ಬಗ್ಗೆಯಾಗಲೀ ಸರ್ಕಾರ ಒಮ್ಮೆಯೂ ಯೋಚಿಸಿಯೇ ಇಲ್ಲ! 800px-Children_at_the_Bannu_Jail[1]ಇನ್ನು ಅಧ್ಯಯನ, ಸಮೀಕ್ಷೆ, ದಾಖಲೀಕರಣ ದೂರದ ಮಾತು! ಅಂತಹ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವೂ ಇಲ್ಲವೆಂದರೆ, ಇದನ್ನು ದುರಂತವೆನ್ನದೇ ಏನೆನ್ನೋಣ? ಖಾಸಗಿಯಲ್ಲಿ ಕಲಿಯುತ್ತಿರುವ ಮಕ್ಕಳು ಮಕ್ಕಳಲ್ಲವೇ? ಹಾಗಿದ್ದರೆ ಸರ್ಕಾರದ ನೀತಿ ನಿಯಮ ಯೋಜನೆಗಳು ಈ ಮಕ್ಕಳಿಗೇಕೆ ಅನ್ವಯವಾಗುವುದಿಲ್ಲ? ಅಪೌಷ್ಟಿಕತೆಯೂ ಸರ್ಕಾರ ನಡೆಸುವ ಅಂಗನವಾಡಿ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಖಾಸಗಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗಲ್ಲ ಎಂದು ಸರ್ಕಾರವೇ ನಿರ್ಧರಿಸಿಬಿಟ್ಟಿದೆ! ಅಲ್ಲಿಯೂ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವ ಸಾಧ್ಯತೆಗಳು ಖಂಡಿತಾ ಹೆಚ್ಚಿವೆ. ಈ ಅಸಮಾನತೆ ಎರಡೂ ನೆಲೆಗಳಲ್ಲಿ, ಶಿಕ್ಷಣ ಹಾಗೂ ಆರೋಗ್ಯ ಎರಡೂ ಕ್ಷೇತ್ರಗಳಲ್ಲಿ ಅತ್ಯಂತ ಸಹಜವೆಂಬಂತೆ ನಡೆಯುತ್ತಿದ್ದರೂ ಸರ್ಕಾರ ಕುರುಡಾಗಿದೆ. ಸಾರ್ವತ್ರಿಕವಾಗಿ ಎಲ್ಲ ಮಕ್ಕಳ ಆರೋಗ್ಯ,-ಶಿಕ್ಷಣದ ಬಗ್ಗೆ ಕೂಡ ಸರ್ಕಾರ ನಿಯಂತ್ರಣ ಹೊಂದುವುದು ಯಾವಾಗ?

ಹಾಗೆ ನೋಡಿದರೆ, ಮನೋವಿಜ್ಞಾನಿಗಳ ಪ್ರಕಾರ 5 ವರ್ಷದವರೆಗಿನ ಮಗುವಿಗೆ ಶಾಲೆಯೇ ಬೇಡ. ಈ ವಯಸ್ಸಿನಲ್ಲಿ ಮಗು ನಡವಳಿಕೆಯ ಶಿಕ್ಷಣ, ಶೌಚ ನಿಯಮ, ಆಹಾರ ತೆಗೆದುಕೊಳ್ಳುವ ಕ್ರಮ, ಸಣ್ಣಪುಟ್ಟ ಶಿಷ್ಟಾಚಾರವನ್ನು ಮಾತ್ರ ಕಲಿಯಬೇಕಿರುತ್ತದೆ. ಅದನ್ನು ಹಾಡುತ್ತಾ, ಆಡುತ್ತಾ, ಕಟ್ಟುತ್ತಾ ಮುರಿಯುತ್ತಾ ಮಗು ತನ್ನಷ್ಟಕ್ಕೆ ತಾನೇ ಕಲಿಯಬೇಕು. ಆದರೆ ಈಗ ಅದನ್ನು ಶಾಲಾ ಪೂರ್ವ ಅವಧಿಯ ಶಿಕ್ಷಣದಲ್ಲಿ ಶಿಕ್ಷೆ, ಗದರಿಸುವಿಕೆ, ಬಲವಂತದಿಂದ ಹೇರಲಾಗುತ್ತಿದೆ. ಬಲವಂತದ ಯಾವುದೇ ಶಿಕ್ಷಣ ಮಗುವಿನಲ್ಲಿ ಪ್ರೀತಿಯನ್ನು ಮೂಡಿಸುವ ಬದಲಿಗೆ ಮನೋದೈಹಿಕ ಸಮಸ್ಯೆಗಳಾಗಿ ಕಾಡಲಾರಂಭಿಸಿವೆ. ಅವುಗಳನ್ನು ನಿರ್ಲಕ್ಷಿಸಿದರೆ ಮಗು ಅಸ್ವಸ್ಥ ಮನಸಿನ ವ್ಯಕ್ತಿಯಾಗಿ ರೂಪುಗೊಂಡು ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗುತ್ತದೆ. ಇದನ್ನು ಪೋಷಕರಿಗೆ ಅರ್ಥ ಮಾಡಿಸುವುದಾದರು ಯಾರು? ಮತ್ತು ಹೇಗೆ? ಬಾಲ್ಯದಲ್ಲಿನ ಪ್ರೀತಿ ಕಾಳಜಿ, ಉತ್ತಮ ಗಮನಿಸುವಿಕೆಯಲ್ಲಿ ಬೆಳೆದ ಮಗು ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಅಂಥಹಾ ಪ್ರೀತಿ, ಕಾಳಜಿ, ಗಮನಿಸುವಿಕೆಗೆ ಈಗ ಸಮಯವಾದರೂ ಯಾರಿಗಿದೆ? ಇದೆಲ್ಲಾ ಮಾರುಕಟ್ಟೆಯಲ್ಲಿ ಸಿಕ್ಕುವಂತಿದ್ದರೆ, ಎಷ್ಟು ದರವಾದರೂ ಸರಿ ಉಳ್ಳವರು ಕೊಂಡು ತಂದು ಕೊಟ್ಟು ಬಿಡುತ್ತಿದ್ದರೇನೋ! ಇಂದು ಎಲ್ಲವೂ ವ್ಯಾಪಾರಿ ಮನೋಭಾವದ ಕೊಡು-ಕೊಳುವ ವ್ಯವಹಾರದ ಮಟ್ಟಕ್ಕೆ ಬಂದು ನಿಂತು ಬಿಟ್ಟಿರುವುದರಿಂದ ಮಕ್ಕಳೂ ಸರಕುಗಳಾಗಿ ಮಾತ್ರ ಕಾಣುತ್ತಿದ್ದಾರೆ! ಈ ಸ್ಥಿತಿಯಿಂದ ಅವರನ್ನು ಕಾಪಾಡುವವರ್‍ಯಾರು?

ಮಕ್ಕಳೆಂದರೆ ಅರಳಲು ಕಾದಿರುವ ಮೊಗ್ಗುಗಳು. ಅದಕ್ಕೆ ತಕ್ಕ ಗಾಳಿ ನೀರು ಬೆಳಕಿನ ಪೂರಕ ವಾತಾವರಣವನ್ನು ಮುಕ್ತವಾಗಿ, ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿ ಪೋಷಕರು, ಸಮಾಜ, ಸರ್ಕಾರದ ಮೇಲಿದೆ. ಈ ಹೊಣೆಯನ್ನು ಹೊತ್ತು ಕೊಂಡರೆ ಮಾತ್ರ, ‘ನಾವು ಮಕ್ಕಳನ್ನು ಪ್ರೀತಿಸುತ್ತೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದೇನೋ!