Daily Archives: November 19, 2013

ಮೌಢ್ಯವನ್ನು ಪ್ರೀತಿಸುವ ಹರಕತ್ತಾದರೂ ಏನು..?


– ಡಾ.ಎಸ್.ಬಿ. ಜೋಗುರ


 

ಮೌಢ್ಯತೆಯ ವಿಷಯವಾಗಿ ಮತ್ತು ಅದರ ಬಗೆಗಿನ ಮಸೂದೆಯ ಮಂಡನೆಯ ಬಗೆಗೆ ಕಂಡಾಪಟ್ಟೆ ಚರ್ಚೆಯಾಗುತ್ತಿರುವ ನಡುವೆಯೇ ನುಸುಳಿರುವ ಕೆಲ ಹುಸಿ ವಿಚಾರವಾದಿಗಳು ಮೌಢ್ಯವನ್ನು ಬೇಕೂ ಬೇಕು.. ಬೇಡ ಬೇಡ.. ಎನ್ನುವಂತೆ ಚರ್ಚಿಸುವ ಮತ್ತು ಖುದ್ದಾಗಿ ಮೌಢ್ಯದ ಅಖಾಡದಲ್ಲಿದ್ದರೂ ನೆಪ ಮಾತ್ರಕ್ಕೆ ಇತರರ ಮೌಢ್ಯವನ್ನು ಕೆಣಕುವ, yellamma-neem-leaves-devadasiಪ್ರಶ್ನಿಸುವ ಗುಣುವುಳ್ಳವರು ತಮ್ಮ ದಿನಚರಿಯನ್ನು ಹಾಸಿಗೆಯಲ್ಲಿ ಕುಳಿತು, ಅಂಗೈ ಉಜ್ಜಿ ಕಣ್ಣಿಗಾನಿಸಿ ಯಾವುದೋ ಒಂದು ಮಂತ್ರವನ್ನು ಗುನುಗಿ ಘನವಂತರಾಗುವ ಪ್ರಭೃತಿಗಳು ಕೂಡಾ ಮೌಢ್ಯದ ವಿರೋಧವಾಗಿ ಸೊಲ್ಲೆತ್ತುತ್ತಿವೆ. ಅಯ್ಯಾ ಸ್ವಾಮಿ.., ನಿಮ್ಮ ದಿನಚರಿಯೇ ಹೀಗಿದೆಯಲ್ಲಾ..? ಎಂದರೆ ನಂಬುಗೆಯೇ ಬೇರೆ.. ಮೌಢ್ಯತೆಯೇ ಬೇರೆ. ನಂಬುಗೆಯಿಂದ ತಮಗೆ ಅಗಾಧವಾದ ಪ್ರಯೋಜನಗಳಾಗಿವೆ, ಆದರೆ ಮೌಢ್ಯದಿಂದಲ್ಲ ಎಂದು ಕೂದಲಲ್ಲಿ ತೂತು ಕೊರೆಯುವ ಕಸರತ್ತನ್ನು ತೋರುತ್ತಾರೆ. ಸದ್ಯ ಮೌಢ್ಯತೆ ಎನ್ನುವುದು ನಂಬುಗೆ ಮತ್ತು ಅಪನಂಬುಗೆಯನ್ನು ತೆಕ್ಕೆಗೆ ಹಾಕಿಕೊಳ್ಳದೇ ಸ್ಪಷ್ಟವಾಗಿ ಮೌಢ್ಯ ಎಂದೆನಿಸುವ ಆಚರಣೆಗಳನ್ನು ಕೈ ಬಿಡುವ ತುರ್ತಿನ ಬಗ್ಗೆ ಮಾತ್ರ ಯೋಚಿಸಬೇಕು.

ತೀರಾ ಹಿಂದುಳಿದ ಆದಿವಾಸಿ ನೆಲೆಗಳಲ್ಲಿ ಶಿಕ್ಷಣದ ಕೊರತೆ ಮತ್ತು ಅಜ್ಞಾನದ ಹಿನ್ನೆಲೆಯಲ್ಲಿ ಅಸಂಬದ್ಧವಾದ ಆಚರಣೆಗಳನ್ನು ಆ ಸಮುದಾಯದ ಜನ ತಮ್ಮ ಬದುಕಿನ ಅನೌಪಚಾರಿಕ ನಿಯಂತ್ರಣದ ಮಾರ್ಗ ಮತ್ತು ಕಟ್ಟಳೆಗಳಾಗಿ ಅನುಸರಿಸುತ್ತಾ ಬಂದರು. ಅತ್ಯಂತ ಅತಾರ್ಕಿಕವಾದ ಮತ್ತು ಯಾವುದೇ ಬಗೆಯ ತಳಬುಡವಿಲ್ಲದ ಅಂಧ ಆಚರಣೆಗಳನ್ನು ಅವರು ಮುಂದುವರೆಸಿದರು. ಉದಾಹರಣೆಗಾಗಿ ನಾಗಾ ಆದಿವಾಸಿಗಳಲ್ಲಿ ಮಾನವನ ತಲೆ ಬುರುಡೆಗಳನ್ನು ಹೆಚ್ಚು ಸಂಗ್ರಹಿಸಿದಾತನೇ ಆ ತಾಂಡಾದ ನಾಯಕ. ಹಾಗೆಯೇ ಓಂಗೇ ಆದಿವಾಸಿಗಳಲ್ಲಿ ಶವಗಳನ್ನು ಮನೆಯಲ್ಲಿಯೇ ಹೂಳುವ ಕ್ರಮವಿದೆ. ಅದಕ್ಕೆ ಕಾರಣ ಕೇಳಿದರೆ ಅದು ಅವರ ಪೂರ್ವಜರ ಆತ್ಮ ತಮ್ಮನ್ನು ಗಂಡಾಂತರಗಳಿಂದ ಕಾಯುತ್ತದೆ ಎಂದು ಹೇಳುವದಿದೆ. donkeys_wedding_rainsಇನ್ನು ಕೆಲ ಆದಿವಾಸಿಗಳು ಇಂದಿಗೂ ರೋಗ ರುಜಿನಗಳಿಗೆ ಒಳಗಾದವನನ್ನು ತಮ್ಮ ಕುಲದೇವರ ಮೂರ್ತಿಯ ಎದುರು ಮಲಗಿಸಿ ಅಸಂಬದ್ಧವಾದ ಕ್ರಿಯೆಗಳನ್ನು ಮಾಡುತ್ತಾರೆ. ಅವುಗಳಲ್ಲಿ ಕಾದ ಕಬ್ಬಿಣದ ಬರೆ ಎಳೆಯುವುದೂ ಒಂದು.

ಇದೆಲ್ಲಾ ಆದಿವಾಸಿಗಳಿಗೆ ಸೀಮಿತವಾಗಿದ್ದರೆ ಇಲ್ಲಿ ಆ ಬಗ್ಗೆ ಚರ್ಚೆಯೇ ಇರುತ್ತಿರಲಿಲ್ಲ. ಭಯಂಕರ ವಿಜ್ಞಾನಿಯೊಬ್ಬ ರಾಕೆಟ್ ಹಾರಿ ಬಿಡುವಾಗ ಅದನ್ನು ಪೂಜಿಸುವ, ಯಜ್ಞ ಮಾಡುವ ಕ್ರಮ ಆತನ ಅಜ್ಞಾನ ಮತ್ತು ಅನಕ್ಷರತೆಯ ಪರಿಣಾಮದಿಂದಾಗಿ ಮಾತ್ರ ಎಂದು ಯಾರೂ ಹೇಳಲಾರರು. ಅಂದರೆ ಅವನಿಗೆ ಅದರಲ್ಲಿಯ ಪೊಳ್ಳುತನದ ಬಗೆಗೂ ತಿಳುವಳಿಕೆಯಿದೆ ಎಂದರ್ಥ. ಹೊಸದಾಗಿ ಮನೆಗೆ ತಂದ ವಾಹನದ ಗಾಲಿಯ ಕೆಳಗಡೆ ಜಬ್ಬಿ ಹೋಗುವ ಲಿಂಬು ಹಣ್ಣಿನ ಮೂಲಕ ಸಮಾಧಾನ ಪಡುವ ಮನ:ಸ್ಥಿತಿಗೆ ರಸ್ತೆಯ ನಿಯಮಗಳು ಮತ್ತು ಡ್ರೈವಿಂಗ್ ಮಾಡುವ ಕ್ರಮಬದ್ಧತೆಯ ಬಗ್ಗೆ ತಿಳಿದಿರುವುದು ಮುಖ್ಯವಲ್ಲವೇ..? ಈ ಮೂಢನಂಬುಗೆಗಳ ಆದಿವಾಸೀಕರಣ ತಿಳಿಯದೇ ಆದದ್ದಂತೂ ಅಲ್ಲ. ಮೌಢ್ಯ ಕೆಲವರ ಪಾಲಿನ ಅಸಡ್ದೆಯಾದರೆ ಹಲವರ ಪಾಲಿನ ಜೀವನ ಮೂಲ. ಅಂಥಾ ಜೀವನಮೂಲವಾದ ಮಾರ್ಗವನ್ನು ನಿಷೇಧಿಸಿದರೆ ಅದನ್ನೆ ತಿಂದುಂಡು ಉಸಿರಾಡುತ್ತಾ ತಿರುಗುವವರ ಕತೆಯೇನಾಗಬೇಡ..?

ನೆರೆಯ ಮಹಾರಾಷ್ಟ್ರದಲ್ಲಿ ವಿಚಾರವಾದಿ ದಾಬೋಲಕರ್ ಹತ್ಯೆಯಾಯ್ತು. ಆದರೆ ಅವನ ವೈಚಾರಿಕತೆಯನ್ನು ಹತ್ಯೆ ಮಾಡುವ ಸಾಮರ್ಥ್ಯ ಯಾವ ಅತ್ಯಾಧುನಿಕ ಆಯುಧಕ್ಕೂ ಇರಲಿಲ್ಲ. ಹೀಗಾಗಿಯೇ ಕೊನೆಗೂ ಆತ ಬಯಸಿದ್ದ ಮೂಢನಂಬಿಕೆಯ ಬಗೆಗಿನ ಮಸೂದೆ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗಿ ಕೆಂದ್ರ ಸರಕಾರದ ಸ್ವೀಕೃತಿಗಾಗಿ ಕಾಯುತ್ತಿದೆ. ಹಾಗೆ ನೋಡಿದರೆ ಮಹಾರಾಷ್ಟ್ರ ಕ್ಯಾಬಿನೆಟ್ ಒಪ್ಪಿಕೊಂಡ ಈ ಮಸೂದೆ black-magic-indiaಇಡೀ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಮೊದಲು ಎನಿಸುತ್ತದೆ. ಮಹಾರಾಷ್ಟ್ರದ ಮಾದರಿಯಲ್ಲಿ ನಮ್ಮಲ್ಲೂ ಅದನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.

ಇನ್ನು ಯಾವುದೇ ಒಂದು ಮಸೂದೆ ಪಾಸಾಗಿ, ಶಾಸನವಾಗಿ ಜಾರಿಗೆ ಬಂದರೆ ಅಲ್ಲಿಗೆ ಮುಗಿಯಲಿಲ್ಲ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಬಗೆಯ ಶಾಸನಗಳಿವೆ. ಬಾಲ್ಯ ವಿವಾಹವಾಗಿರಬಹುದು, ವರದಕ್ಷಿಣೆ ಇರಬಹುದು, ಭ್ರೂಣ ಲಿಂಗ ಪತ್ತೆ ಗೆ ಸಂಬಂಧಿಸಿದ ಶಾಸನ, ಮಹಿಳೆಗೆ ಆಸ್ತಿ ಹಕ್ಕಿನ ಕಾಯ್ದೆ, ಮುಂತಾದವುಗಳು ಇರುವಾಗಲೂ ಗಂಟೆಗೊಂದು ವರದಕ್ಷಿಣೆಯ ಸಾವುಗಳಿವೆ, ಅರ್ಧ ಗಂಟೆಗೆ ಒಂದು ಅತ್ಯಾಚಾರದ ಪ್ರಕರಣಗಳಿವೆ. ಹೀಗೆ ಕಾನೂನು ಜಾರಿಯಾದರೆ ಅಲ್ಲಿಗೆ ಮುಗಿಯಿತು, ಆ ಸಮಸ್ಯೆಯ ಇತಿಶ್ರೀ ಹಾಡಿದಂತೆಯೇ ಎಂದು ಭಾವಿಸುವ ಅವಶ್ಯಕತೆಯಿಲ್ಲ. ಜನ ಜಾಗೃತಿ ಮತ್ತು ದಾಬೋಲ್ಕರ್ ಹುಟ್ಟು ಹಾಕಿರುವ ಅಂಧಶ್ರದ್ಧಾ ನಿರ್ಮೂಲನ ಕೇಂದ್ರದಂತಹ ಘಟಕಗಳನ್ನು ದೇಶದ ಉದ್ದಗಲಕ್ಕೂ ಸ್ಥಾಪಿಸುವ, ಕಾರ್ಯನಿರ್ವಹಿಸುವ ಅಗತ್ಯತೆಯಿದೆ. ಅಂದಾಗ ಮಾತ್ರ ಈ ಬಗೆಯ ಮಸೂದೆಗಳಿಗೆ ಒಂದು ಸತ್ತೆ ಸಾಧ್ಯವಾಗುತ್ತದೆ ಇಲ್ಲದಿದ್ದರೆ ಅನೇಕ ಶಾಸನಗಳ ಹಾಗೆ ಇದೂ ಒಂದು ಶಾಸನವಾಗಿ ಸಾಂದರ್ಭಿಕವಾಗಿ ಉಲ್ಲೇಖಿಸಿ ಹೇಳಬಹುದಾದ ಕಲಮಾಗಿ ಉಳಿಯುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ ಮಂಡಿಸಿರುವ ಮಸೂದೆಯಲ್ಲಿ ಈ ಕೆಳಗಿನ ಕೆಲವು ಪ್ರಮುಖ ಸಂಗತಿಗಳಿಗೆ ಸಂಬಂಧಿಸಿ ತೀರಾ ಒತ್ತುಕೊಡಲಾಗಿದೆ ನಮ್ಮ ದೇಶದ ಸಂದರ್ಭದಲ್ಲಿ ಈ ಕೆಲವು ಸಂಗತಿಗಳೇ ಸಾಮಾಜಿಕ ರೋಗಗ್ರಸ್ಥ ಅಂಶಗಳಾಗುವ ಅಪಾಯಗಳಿವೆ. ಇವುಗಳ ನಿಷೇಧವೇ ಮಹಾರಾಷ್ಟ್ರದ ಕರಡಿನಲ್ಲಿ ಮುಖ್ಯವಾಗಿವೆ.

  • ಬಾನಾಮತಿಯನ್ನು ನಿಷೇಧಿಸುವುದು
  • ಅತಿಮಾನುಷ ಶಕ್ತಿಯ ಸಾಧನೆಗಾಗಿ ತಂತ್ರ ಮಂತ್ರ ಮಾಡುವುದು
  • ದೆವ್ವ ಪಿಶಾಚಿಯನ್ನು ಓಡಿಸುವದಾಗಿ ಹೇಳಿ ಬೂದಿ, ತಾಯತ, ಲಿಂಬು ಹಣ್ನನ್ನು ಮಂತ್ರಿಸಿ ಕೊಡುವುದು
  • ಅಗಾಧವಾದ ಅತಿಮಾನುಷ ಶಕ್ತಿಯ ಸಾಧನೆಯ ಬಗ್ಗೆ ಜಾಹೀರಾತು
  • ದೇವರ ಹೆಸರಲ್ಲಿ ವಂಚಿಸುವುದು, ಪುನರ್ಜನ್ಮದ ಬಗ್ಗೆ ಹೇಳಿ ಹೆದರಿಸುವುದು.
  • ದೈವೀ ಶಕ್ತಿ ಅಥವಾ ದುಷ್ಟ ಶಕ್ತಿಯ ಮೇಲೆ ಸಾಧನೆಯ ಬಗೆಗೆ ಬೊಗಳೆ ಬಿಡುವುದು
  • ಮಾನಸಿಕ ಅಸ್ವಸ್ಥರನ್ನು ಪಿಶಾಚಿ ಪೀಡಿತರು ಎಂದು ಹಿಂಸಿಸುವುದು
  • ಅಘೋರಿ ಪದ್ಧತಿಯ ಅನುಸರಣೆ
  • ಮಾಟ ಮಂತ್ರದ ಹೆಸರಲ್ಲಿ ಜನರಲ್ಲಿ ಭೀತಿ ಹುಟ್ಟಿಸುವುದು
  • ಗಂಡು ಸಂತಾನಕ್ಕಾಗಿ ಗೋಪಾಲ ಸಂತಾನ ವಿಧಿ ಯಾಗ ಮಾಡುವುದು
  • ವೈದ್ಯಕೀಯ ಚಿಕಿತ್ಸೆಯ ಬದಲಾಗಿ ಅಘೋರಿ ಪದ್ಧತಿಯನ್ನು ಅನುಸರಿಸುವುದು
  • ಮಂತ್ರದ ಹರಳು, ತಾಯತ, ಬೂದಿ, ಬ್ರೆಸ್ಲೆಟ್ ಗಳನ್ನು ಮಾರುವುದು
  • ಹಾವು ಕಡಿತ ಮತ್ತು ನಾಯಿ ಕಡಿತದ ಚಿಕಿತ್ಸೆಗೆ ಮಾಟ ಮಂತ್ರ ಹಾಕುವುದು
  • ಸಂತಾನ ಫ಼ಲಿತತೆಗಾಗಿ ವೈದ್ಯ ವಿಜ್ಞಾನಕ್ಕೆ ಸವಾಲು ಹಾಕುವುದು

ಈ ಮೇಲಿನ ಯಾವುದೇ ಸಂಗತಿಗಳು ಅವನ್ನು ಅನುಸರಿಸುವ ಅಂದರೆ ಈ ಬಗೆಯ ಚಟುವಟಿಕೆಗಳಲ್ಲಿ ತೊಡಗಿ superstitionsಭಯವನ್ನೇ ಮಾರಾಟ ಮಾಡಿ ಬದುಕುವವರಿಗೆ ಪ್ರಯೋಜನವಿದೆಯೇ ಹೊರತು ಜನಸಾಮಾನ್ಯನಿಗಂತೂ ಇಲ್ಲ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮೌಢ್ಯತೆಯ ವಿರೋಧಿ ಮಸೂದೆಯನ್ನು ಒಪ್ಪಿಕೊಳ್ಳುವದರಿಂದ ಅಹಿತಕರವಾದುದನ್ನು ಬಿಟ್ಟು ನಾವು ಬೇರೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಮಹಾರಾಷ್ಟ್ರದ ಮಾದರಿಯಲ್ಲಿಯೇ, ಬೇಕಾದರೆ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮೌಢ್ಯ ವಿರೋಧಿ ಮಸೂದೆಯನ್ನು ಜಾರಿಗೊಳಿಸಬೇಕಿದೆ. ಇದು ಯಾವಾಗಲೋ ಆಗಬೇಕಿದ್ದ ಕೆಲಸ ತಡವಾಗಿಯಾದರೂ ಆಗುತ್ತಿದೆಯಲ್ಲ..! ಎಂದು ಸಮಾಧಾನ ಪಡಬೇಕಿದೆ. ಮೌಢ್ಯವನ್ನು ಪ್ರೀತಿಸುವ, ಒಪ್ಪುವ ಹರಕತ್ತು ಬಹುತೇಕರಿಗಂತೂ ಇರಲಿಕ್ಕಿಲ್ಲ.

ಹಾಸನದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದ ಕೆಲವು ವರದಿಗಳು

ನಮ್ಮ ವರ್ತಮಾನ ಬಳಗದ ಹಲವು ಸ್ನೇಹಿತರು ಸಕ್ರಿಯವಾಗಿ ಪಾಲ್ಗೊಂಡಿದ್ದ “ನಾವು ನಮ್ಮಲ್ಲಿ” ವಿಚಾರ ಸಂಕಿರಣದ ಮೊದಲ ದಿನದ ಕಾರ್ಯಕ್ರಮದ ಕೆಲವು ಪತ್ರಿಕಾ ವರದಿಗಳು ನಮ್ಮ ಓದುಗರಿಗಾಗಿ:

ಪ್ರಜಾವಾಣಿ:

navu-nammalli-hasana-1

 

ವಿಜಯ ಕರ್ನಾಟಕ:

navu-nammalli-hasana-2

ಜನತಾ ಮಾಧ್ಯಮ:

navu-nammalli-hasana-janathamadhyama-1
navu-nammalli-hasana-janathamadhyama-2
navu-nammalli-hasana-janathamadhyama-3
navu-nammalli-hasana-janathamadhyama-3