Daily Archives: November 15, 2013

ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ

– ನಸೂ 

ಅಯಿಶಾ ಬಾನು. ಮಂಗಳೂರಿನ ಈ ಹೆಣ್ಣು ಮಗಳು ಇಡೀ ದೇಶದಲ್ಲಿ ಈಗ ಸುದ್ದಿಯಲ್ಲಿರುವ ಹೆಣ್ಣು. ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡಿ ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಗೆ ಬಾಂಬಿರಿಸಲು ಸಹಕರಿಸಿದ ಆರೋಪ ಹೊತ್ತು ಜೈಲು ಸೇರಿದ ಮಹಿಳೆ. Aysha-Banuಲವ್ ಜೆಹಾದ್‌ನ ಭಾಗವಾಗಿ ಮುಸ್ಲಿಂ ಯುವಕನೊಬ್ಬ ಈಕೆಯನ್ನು ಮದುವೆಯಾಗಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದ ಎಂಬುದು ಸಂಘಪರಿವಾರಿಗಳ ಆರೋಪ. ಆದರೆ ಈ ಆಯಿಶಾ ಬಾನು ಜೆಹಾದಿ ಅಲ್ಲವೇ ಅಲ್ಲ. ಆಕೆ ತನ್ನ ಮತ್ತು ಮಕ್ಕಳ ಹೊಟ್ಟೆಗಾಗಿ ತನ್ನ ಬದುಕಿನುದ್ದಕ್ಕೂ “ಜೆಹಾದಿ” ನಡೆಸಿದ ಓರ್ವ ತಾಯಿ.

ಸರಿಸುಮಾರು 5 ವರ್ಷಗಳ ಹಿಂದಿನ ಮಾತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಗೆಳೆಯ ಮುನೀರ್ ಕಾಟಿಪಳ್ಳ ಮತ್ತು ’ದ ಹಿಂದೂ’ ಪತ್ರಿಕೆಯ ಸುದೀಪ್ತೋ ಮೊಂಡಲ್ ಜೊತೆ ನಾನು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ನಿರ್ವಸಿತ ಕಾಲನಿಗೆ ಬೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸುತ್ತಿದ್ದೆವು. ಅಲ್ಲಿಂದ ಮರಳಿ ವಾಪಾಸ್ಸಾಗುವ ಸಂದರ್ಭ ಮುನೀರ್ ಕಾಟಿಪಳ್ಳ “ಹಿಂದೂ ಯುವತಿಯೊಬ್ಬಳು ಮತಾಂತರಗೊಂಡು ಪಡುತ್ತಿರುವ ಕಷ್ಟದ” ಬಗ್ಗೆ ವಿವರಗಳನ್ನು ನೀಡುತ್ತಿದ್ದರು. ಸಂಘಪರಿವಾರದ ಮಂದಿ “ಲವ್ ಜೆಹಾದ್” ಬಗ್ಗೆ ಆಂದೋಲನ ಶುರುವಿಟ್ಟುಕೊಂಡಿದ್ದ ದಿನಗಳವು. ಹಿಂದೂ ಯುವತಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಜೀವನ ನಡೆಸುತ್ತಿರುವ ಬಗ್ಗೆ ನಮಗೂ ಕುತೂಹಲಗಳಿದ್ದವು.Muneer Katipalla ಎಸ್‌ಇಝಡ್ ನಿರ್ವಸಿತ ಕಾಲನಿಯಿಂದ ಕೆಲವೇ ಕಿಮಿ ದೂರದಲ್ಲಿ ಹಿಂದೂ ಮತಾಂತರಿ ಯುವತಿಯ ಮನೆಯೂ ಇದ್ದಿದ್ದರಿಂದ ಅವಳ ಮನೆಗೆ ತೆರಳಿ ಮಾತಿಗೆ ಶುರುವಿಟ್ಟುಕೊಂಡೆವು.

ಆಕೆಯ ಹೆಸರು ಆಶಾ. ಕೊಡಗಿನ ವಿರಾಜಪೇಟೆ ತಾಲೂಕಿನ ದೇವಣಗೇರಿ ಗ್ರಾಮದವಳು. ದಲಿತ ಕುಟುಂಬಕ್ಕೆ ಸೇರಿದ ಆಶಾ 1995 ರಲ್ಲಿ ಮಂಗಳೂರಿನ ಬಜಪೆ ನಿವಾಸಿ ಜುಬೇರ್ ಮಹಮ್ಮದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆಶಾಳು ವಿರಾಜಪೇಟೆಯಲ್ಲಿ ಪಿಯುಸಿ ಪೂರೈಸಿ ಮಡಿಕೇರಿಯಲ್ಲಿ ಪದವಿ ಓದುತ್ತಿದ್ದಳು. ಈ ಸಂದರ್ಭ ಮಡಿಕೇರಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಮಂಗಳೂರಿನ ಜುಬೇರ್ ಮಹಮ್ಮದ್ ಪರಿಚಯವಾಗಿ ಪ್ರೀತಿ ಅಂಕುರಿಸಿತ್ತು. ಆದರೆ ಎರಡೂ ಮನೆಯವರಿಗೂ ಮದುವೆ ಇಷ್ಟವಿರಲಿಲ್ಲ. ಜುಬೇರ್ ತಂದೆ ಬೀಡಿ ಕಾಂಟ್ರಾಕ್ಟರ್ ಆಗಿದ್ದರು. ತಕ್ಕಮಟ್ಟಿಗೆ ಸಿರಿವಂತರಾಗಿದ್ದರು. ಆಶಾ ಮನೆಯವರು ಅಂತರ್‌ಮತೀಯ ಮದುವೆಗೆ ಸಿದ್ದವಿರಲಿಲ್ಲ. ಈ ಸಂದರ್ಭ ಇಬ್ಬರೂ ತಮ್ಮ ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿದ್ದರು.

ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಸಹಜವಾಗಿ ಪುರುಷನ ಧರ್ಮಕ್ಕೆ ಮಹಿಳೆ ಮತಾಂತರವಾಗುವುದು ಪುರುಷ ಪ್ರಧಾನ ಸಮಾಜದಲ್ಲಿರುವ ರೂಢಿ. ಅದರಂತೆ ಆಶಾಳನ್ನು ಇಸ್ಲಾಂಗೆ ಮತಾಂತರಗೊಳಿಸಿ ಆಯಿಶಾ ಬಾನು ಎಂದು ಮರುನಾಮಕರಣಗೊಳಿಸಲಾಯಿತು. ಸ್ನೇಹಿತರ ಸಹಕಾರದೊಂದಿಗೆ ಇಸ್ಲಾಂ ಪದ್ದತಿಯಂತೆ ಮದುವೆಯೂ ನಡೆಯಿತು. ನಂತರ ಜುಬೇರ್ ತನ್ನ ಪತ್ನಿ ಆಶಾಳನ್ನು ಮಂಗಳೂರಿನ ಬಜಪೆಗೆ ಕರೆದುಕೊಂಡು ಬಂದು ಬಾಡಿಗೆಗೆ ಮನೆ ಪಡೆದು ಸಂಸಾರ ಶುರುವಿಟ್ಟುಕೊಂಡ. ಆರಂಭದ ಮೂರು ನಾಲ್ಕು ವರ್ಷ ಅವರದ್ದು ಸುಖೀ ದಾಂಪತ್ಯ. ಈ ಮಧ್ಯೆ ಜುಬೇರ್‌ಗೆ ತಂದೆ ತಾಯಿಯ ಜೊತೆ ರಾಜಿಯಾಯಿತು. ತಂದೆ ತಾಯಿಯ ಮನೆಗೆ ಜುಬೇರ್ ನಿತ್ಯ ಹಾಜರಿ ಹಾಕತೊಡಗಿದ. ತನ್ನ ಹಿಂದೂ ಸೊಸೆ ಇಸ್ಲಾಂಗೆ ಮತಾಂತರ ಹೊಂದಿದ್ದರೂ ಆಕೆಯನ್ನು ಜುಬೇರ್ ತಂದೆ ತಾಯಿಗಳು ಸ್ವೀಕರಿಸಲು ಸುತರಾಂ ಸಿದ್ದರಿರಲಿಲ್ಲ. “ನೀನು ನಾನು ನೋಡಿದ ಮುಸ್ಲಿಂ ಹುಡುಗಿಯನ್ನೇ ಮದುವೆಯಾಗಬೇಕು” ಎಂದು ಜುಬೇರ್‌ಗೆ ಆತನ ತಂದೆ ತಾಯಿ ಒತ್ತಡ ಹೇರ ತೊಡಗಿದರು. ಕೊನೆಗೂ ಈ ಒತ್ತಡಕ್ಕೆ ಮಣಿದ ಜುಬೇರ್ ತಂದೆ ತಾಯಿ ನೋಡಿದ್ದ ಮುಸ್ಲಿಂ ಯುವತಿಯನ್ನೇ ಇನ್ನೊಂದು ಮದುವೆಯಾದ. ಆಕೆ ಜುಬೇರ್‌ನ ತಂದೆ ತಾಯಿಯ ಮುದ್ದಿನ ಸೊಸೆಯಾಗಿ ಅವರ ಜೊತೆಯೇ ಇರತೊಡಗಿದಳು.

ಇತ್ತ ಬಾಡಿಗೆ ಮನೆಯಲ್ಲಿದ್ದ ಆಶಾ ಯಾನೆ ಆಯಿಶಾಬಾನು ಒಂದು ಮಗುವಿನ ತಾಯಿಯಾಗಿದ್ದಳು. ತನ್ನ ಗಂಡನ ಎರಡನೇ ವಿವಾಹವನ್ನು ಅಸಹಾಯಕಳಾಗಿ ಸಹಿಸಿಕೊಂಡು ಗಂಡನೊಂದಿಗೆ ಹೊಂದಾಣಿಕೆಯಲ್ಲಿ ಸಂಸಾರ ನಡೆಸುತ್ತಿದ್ದಳು. ಈ ಮಧ್ಯೆ ಜುಬೇರ್ ಎರಡೂ ಕುಟುಂಬಗಳನ್ನು ನಿರ್ವಹಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ. ಆಯಿಶಾ ಬಾನು ಎರಡನೇ ಮಗುವಿನ ತಾಯಿಯಾದಳು. saudi-arabiaತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜುಬೇರ್ ಸೌದೀ ಅರೇಬಿಯಾಕ್ಕೆ ಹೊರಟು ನಿಂತ. ಆ ಸಂದರ್ಭದಲ್ಲಿ ಸೌದಿಗೆ ಹೋಗುವ ಖರ್ಚು ನಿಭಾಯಿಸಲು ಆಯಿಶಾ ಬಾನು ತನ್ನಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಮಾರಾಟ ಮಾಡಿ ಗಂಡನ ಕೈಗಿತ್ತಳು. ಜುಬೇರನು ಆಯಿಶಾ ಬಾನು ನೀಡಿದ ಹಣದಲ್ಲೇ ಸೌದಿಗೆ ತೆರಳಿದ.

ಸೌದಿಯಲ್ಲಿ ಉದ್ಯೋಗ ಶುರುವಿಟ್ಟುಕೊಂಡ ಜುಬೇರ್ ಕಾಲಕ್ರಮೇಣ ಆಯಿಶಾ ಬಾನುವಿನ ಸಂಪರ್ಕ ಕಡಿತಗೊಳಿಸತೊಡಗಿದ. ಆಯಿಶಾಳನ್ನು ಮರೆತುಬಿಡಬೇಕು ಎನ್ನುವ ತನ್ನ ತಂದೆ ತಾಯಿಯ ಒತ್ತಡಕ್ಕೆ ಆತ ನಿಧಾನವಾಗಿ ಪ್ರತಿಕ್ರಿಯಿಸತೊಡಗಿದ. ಬಜಪೆಯ ಬಾಡಿಗೆಯಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗಿದ್ದ ಆಯಿಶಾ ಬಾನು ಈಗ ಪೂರ್ಣ ಕಂಗಾಲಾಗಿದ್ದಳು. ಒಂದೆಡೆ ತನ್ನ ಹುಟ್ಟೂರು, ಧರ್ಮ, ತಂದೆ ತಾಯಿ, ಕುಟುಂಬವನ್ನು ತನ್ನ ಪ್ರೀತಿಗಾಗಿ ತೊರೆದು ಬಂದಿದ್ದಳು. ಈಗ ಅತ್ತಲೂ ಸಲ್ಲದೆ ಇತ್ತಲೂ ಸಲ್ಲದೆ ಪರದಾಡಲಾರಂಬಿಸಿದಳು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇಬ್ಬರು ಪುಟ್ಟ ಮಕ್ಕಳಿಗೆ ದಿನದ ತುತ್ತು ತಿನ್ನಿಸುವುದೂ ಕಷ್ಟವಾಗತೊಡಗಿತು. ಗಂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಂಡನ ಮನೆಯ ಬಳಿ ಹೋದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. ಅಕ್ಷರಶಃ ಬೀದಿಪಾಲಾದ ಆಯಿಶಾ ಇಬ್ಬರು ಮಕ್ಕಳೊಂದಿಗೆ ಹೇಗಾದರೂ ಬದುಕಬೇಕು ಎಂದು ಹಠಕ್ಕೆ ಬಿದ್ದಿದ್ದಳು.

ಇಬ್ಬರು ಪುಟ್ಟ ಮಕ್ಕಳ ಹೊಟ್ಟೆಗೆ ತುತ್ತಿಲ್ಲದೆ ಹೊಟ್ಟೆ ಬೆನ್ನಿಗಂಟಲಾರಂಭಿಸಿದಾಗ ಅಲ್ಲಿದ್ದ ಕೆಲ ಕಾಳಜಿಯ ಮನಸ್ಸುಗಳು ಆಯಿಶಾ ಬಾನುವಿಗೆ ಅಷ್ಟೋ ಇಷ್ಟೋ ಸಹಾಯಕ್ಕೆ ಧಾವಿಸಿದವು. ಬಜಪೆಯ ಬಾಡಿಗೆ ಮನೆಗೆ ಬಾಡಿಗೆ ನೀಡಲು ಸಾಧ್ಯವಾಗದೆ ಆಕೆಯನ್ನು ಬಾಡಿಗೆ ಮನೆಯಿಂದ ಹೊರದಬ್ಬಲಾಯಿತು. ಕೆಲವರ ಸಹಕಾರ ಪಡೆದುಕೊಂಡ ಆಯಿಶಾ ಬಾನು ತೀರಾ ಕಡಿಮೆ ಬಾಡಿಗೆಯ ಮನೆಯಂತಿರುವ ಪುಟ್ಟ ಗುಡಿಸಲಿಗೆ ಸ್ಥಳಾಂತರಗೊಂಡಳು. ಈ ಗುಡಿಸಲು ಸುರತ್ಕಲ್ ಸಮೀಪದ ಕುಳಾಯಿ ಎಂಬ ಪ್ರದೇಶ ರಸ್ತೆ ಬದಿಯಲ್ಲಿತ್ತು.

ಸುರತ್ಕಲ್‌ನ ಕುಳಾಯಿ ಪ್ರದೇಶ ಮತೀಯ ಶಕ್ತಿಗಳ ಕೇಂದ್ರ. ಈ ಭಾಗದಲ್ಲಿ ಮುಸ್ಲಿಂ ಹುಡುಗಿಯರು ಹೊರಗಡೆ ಕೆಲಸಕ್ಕೆ ಹೋಗುವುದನ್ನು ಈ ಮತೀಯವಾದಿಗಳು ಸಹಿಸುತ್ತಿರಲಿಲ್ಲ. ಒಂದೆಡೆ ಈಕೆ ಹಿಂದೂ ಎಂದು ಮನೆಯೊಳಗೆ ಸೇರಿಸದ ಅತ್ತೆ ಮಾವ. ಮತ್ತೊಂದೆಡೆ ಈಕೆ ಮುಸ್ಲಿಂ ಎಂದು ಮುಸ್ಲಿಂ ಕಟ್ಟುಪಾಡುಗಳನ್ನು ಈಕೆಯ ಮೇಲೆ ಹೇರಿ ಅನ್ನ ಕಸಿದುಕೊಳ್ಳುತ್ತಿದ್ದ ಮತೀಯವಾದಿ ಜನ. ಮತಾಂತರಗೊಂಡ ಹಿಂದೂ ಯುವತಿ ಎಂದು ಹಿಂದೂ ಮತೀಯವಾದಿಗಳ ಕಾಕದೃಷ್ಠಿಯಿಂದ ತಪ್ಪಿಸಿಕೊಳ್ಳಲು ನಿತ್ಯ ಹೆಣಗಾಟ. ಒಟ್ಟು ಈ ಆಯಿಶಾ ಭಾನುವಿಗೆ ಉರಿಯುವ ಒಲೆಯ ಮೇಲಿದ್ದ ಬಾಣಲೆಯಲ್ಲಿ ಬದುಕು ನಿರ್ವಹಿಸುವ ಸ್ಥಿತಿಯಾಗಿತ್ತು. ಕೊನೆಗೂ ಆಕೆ ತನ್ನ ಪುಟ್ಟ ಮಕ್ಕಳ ಹೊಟ್ಟೆ ತುಂಬಿಸಲು ಕೆಲಸ ಮಾಡಲು ನಿರ್ಧರಿಸಿದಳು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ಪಿಟ್ ಎಲೆಗಳ ಪ್ಯಾಕಿಂಗ್ ಫ್ಯಾಕ್ಟರಿಗೆ ತೆರಳಿ, ತಾನು ಮನೆಯಲ್ಲೇ ಪ್ಯಾಕಿಂಗ್ ಮಾಡಿ ನೀಡುವುದಾಗಿ ಕೆಲಸ ಕುದುರಿಸಿಕೊಂಡಳು. ಇಸ್ಪಿಟ್ ಎಲೆಗಳನ್ನು ಮನೆಗೆ ತಂದು ಪ್ಯಾಕ್ ಮಾಡಿ ನೀಡಿ ಸಂಬಳ ಪಡೆದು ಮಕ್ಕಳನ್ನು ಸಾಕತೊಡಗಿದಳು. ಅದು ಇಬ್ಬರು ಮಕ್ಕಳ ಒಂದೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ತೀರಾ ಕಡಿಮೆ ಬಾಡಿಗೆಯಾದರೂ ಬಾಡಿಗೆ ಕೊಡುವುದು ದೊಡ್ಡ ಸಾಹಸವಾಗತೊಡಗಿತ್ತು.

ಬಜಪೆಯ ಕೆಲವು ಸಹೃದಯೀ ಮುಸ್ಲಿಂ ಯುವಕರು ಆಗಾಗ ಅಕ್ಕಿ ಬೇಳೆ, ಸಕ್ಕರೆ ಕೊಟ್ಟು ಮಕ್ಕಳು ಉಪವಾಸ ಬೀಳುವುದನ್ನು ತಪ್ಪಿಸುತ್ತಿದ್ದರು. muslim-womanಈ ಮುಸ್ಲಿಂ ಯುವಕರು ಒಂಟಿಯಾಗಿದ್ದ “ಮುಸ್ಲಿಂ” ಮಹಿಳೆಯ ಮನೆಗೆ ಅಕ್ಕಿ ಬೇಳೆ ಹೊತ್ತುಕೊಂಡು ಬರುವುದು ಮುಸ್ಲಿಂ ಧರ್ಮ ರಕ್ಷಕ ಸಂಘಟನೆಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದೊಂದು ದಿನ ಅವರು ಆಯಿಶಾ ಬಾನುವಿನ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಪರಪುರಷರ ಜೊತೆ ಮಾತನಾಡಬಾರದು ಮತ್ತು ಪರಪುರಷರಿಂದ ಏನನ್ನೂ ಪಡೆದುಕೊಳ್ಳಬಾರದು ಎಂದು ಮುಸ್ಲಿಂ ಧರ್ಮ ರಕ್ಷಕರು ಫರ್ಮಾನು ಹೊರಡಿಸಿ ಹೊರಟಿದ್ದರು.

ಮುಸ್ಲಿಂ ಧರ್ಮರಕ್ಷಕರ ಈ ಕಾರ್‍ಯಾಚರಣೆ ಕುಳಾಯಿ ಪ್ರದೇಶದಲ್ಲಿದ್ದ ಜಾತ್ಯಾತೀತ ಮನೋಭಾವನೆಯ ಹಿಂದೂ-ಮುಸ್ಲಿಂ ಯುವಕರನ್ನು ಕೆರಳಿಸಿತ್ತು. ಆಯಿಶಾ ಬಾನುವಿನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ನೈತಿಕ ಪೋಲೀಸರ ಮೇಲೆ ಏರಿ ಹೋದರು. ನಂತರ ಈ ಯುವಕರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳರನ್ನು ಸಂಪರ್ಕಿಸಿ ಆಕೆಗೆ ಸಹಾಯ ಮಾಡುವಂತೆ ಕೇಳಿದರು. ಇದಿಷ್ಟೂ ಸಂಗತಿಯನ್ನು ಆಶಾ ಯಾನೆ ಆಯಿಶಾ ಬಾನು ಕಣ್ಣೀರು ಹಾಕುತ್ತಾ ನಮ್ಮ ಮುಂದೆ ಹೇಳಿದಳು.

ನಾವು ಅಸಹಾಯಕರಾಗಿದ್ದೆವು. ಮಹಿಳೆ ಮತ್ತು ಮಗು ಧರ್ಮದ ಸುಳಿಗೆ ಸಿಲುಕಿ ನರಳಾಡುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೆವು. ಮುನೀರ್ ಕಾಟಿಪಳ್ಳ ಮಾತ್ರ ದೈರ್ಯ ತೆಗೆದುಕೊಂಡು “ನೀನೇನೂ ಹೆದರಬೇಡ. ನಿನಗೆ ಏನೇ ತೊಂದರೆ ಆದರೂ ಫೋನ್ ಮಾಡು. ನಿನ್ನ ಗಂಡ ವಿದೇಶದಿಂದ ಬರುವ ದಿನಾಂಕ ಗೊತ್ತಾದರೆ ತಿಳಿಸು. ಅದಕ್ಕೂ ಮೊದಲು ನಿನ್ನ ಅತ್ತೆ ಮತ್ತು ಮಾವನನ್ನು ಭೇಟಿಯಾಗಲು ಯತ್ನಿಸುತ್ತೇನೆ” ಎಂದು ಆಕೆಗೆ ಧೈರ್ಯ ನೀಡಿದರು. “ನೀನು ಮರಳಿ ನಿನ್ನ ತಂದೆ ತಾಯಿಯ ಮನೆಗೆ ಹೋಗುವುದಾದರೂ ಅದಕ್ಕೂ ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ. ಒಟ್ಟು ನಿನ್ನ ಮತ್ತು ಮಕ್ಕಳ ಬದುಕು ಮುಖ್ಯವೇ ಹೊರತು ಧರ್ಮಗಳಲ್ಲ” ಎಂದು ಹೇಳಿದಾಗಲೂ ಆಕೆ ಮರಳಿ ತಂದೆ ತಾಯಿಯನ್ನು ಸೇರಲು ಧೈರ್ಯ ತೋರಲಿಲ್ಲ.

ನಾವು ಭೇಟಿ ನೀಡಿದ ಒಂದೆರಡು ತಿಂಗಳಲ್ಲಿ ಆಯಿಶಾ ಬಾನು ಮುನೀರ್ ಕಾಟಿಪಳ್ಳಗೆ ದೂರವಾಣಿ ಕರೆ ಮಾಡಿದ್ದಳು. ಮುಸ್ಲಿಂ ಮತೀಯವಾದಿಗಳು ಬಾಡಿಗೆ ಮನೆ ಮಾಲೀಕನಿಗೆ ಒತ್ತಡ ಹಾಕಿ ಆಯಿಶಾ ಬಾನುವನ್ನು ಮನೆಯಿಂದ ಹೊರ ಹಾಕಿಸಿದ್ದರು. ಬಾಡಿಗೆ ಮನೆ ಮಾಲೀಕನೂ ಮುಸ್ಲೀಮನಾಗಿದ್ದರಿಂದ ಆತ ಧರ್ಮ ರಕ್ಷಕರಿಗೆ ಹೆದರಿ ಅವರ ಆಜ್ಞೆಯನ್ನು ಪಾಲಿಸಿದ್ದ. ಒರ್ವ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ಬೀದಿ ಪಾಲಾಗಿದ್ದಳು.

ಆಕೆಯನ್ನು ಡಿವೈಎಫ್‌ಐ ಜಿಲ್ಲಾ ಕಚೇರಿ “ವಿಕಾಸ” ಕ್ಕೆ ಕರೆಸಿಕೊಂಡ ಮುನೀರ್ ಆಕೆಗೆ ವಸತಿ ವ್ಯವಸ್ಥೆ ಮಾಡುವ ಸಲುವಾಗಿ ತನ್ನ ಸಂಘಟನೆಯ ಕಾರ್‍ಯಕರ್ತರ ಬಳಿ ಸಮಾಲೋಚನೆ ನಡೆಸಿ ಕೂಳೂರಿನ ಪಂಜಿಮೊಗೇರಿನಲ್ಲಿ ಬಾಡಿಗೆ ಮನೆಯನ್ನು ಕೊಡಿಸಿದರು. ಪಂಜಿಮೊಗೆರು ಪ್ರದೇಶ ಕಮ್ಯೂನಿಷ್ಠರ ಭದ್ರ ಕೋಟೆ. ಇಲ್ಲಿನ ವಾರ್ಡ್ ಕಾರ್ಪೋರೇಟರ್ ಕೂಡ ಸಿಪಿಐಎಂನಿಂದ ಆಯ್ಕೆಗೊಂಡವರು. ಪಂಜಿಮೊಗರಿನಲ್ಲಿ ಯಾವುದೇ ಕೋಮುವಾದಿಗಳ ಆಟ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಯಿಶಾ ಬಾನು ಎರಡೂ ಕೋಮುವಾದಿಗಳಿಂದ ಸೇಫ್ ಆಗಿದ್ದಳು.

ಇಷ್ಟೆಲ್ಲಾ ಆಗುವಾಗ ಆಯಿಶಾಳ ಎರಡೂ ಮಕ್ಕಳು ಶಾಲೆಗೆ ಹೋಗುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಸಿಪಿಐಎಂ ಮತ್ತು ಡಿವೈಎಫ್‌ಐ ಕಾರ್‍ಯಕರ್ತರ ನೆರವಿನಲ್ಲಿ ಇಬ್ಬರು ಮಕ್ಕಳನ್ನು ಕೂಡಾ ಒಳ್ಳೆಯ ವಿದ್ಯಾಭ್ಯಾಸ ಸಿಗಲೆಂಬ ಕಾರಣಕ್ಕಾಗಿ ಖಾಸಗಿ ಶಾಲೆಗೆ ಸೇರಿಸಿದರು. ಖಾಸಗಿ ಶಾಲೆಯ ಫೀಸು ಕಟ್ಟುವ ಕೊನೆಯ ದಿನಾಂಕ ಸಮೀಪಿಸುತ್ತಿತ್ತು. ಈ ಸಂಧರ್ಭ ಡಿವೈಎಫ್‌ಐ ಮುಖಂಡ (ಈಗ ಕಾರ್ಪೋರೇಟರ್) ದಯಾನಂದ ಶೆಟ್ಟಿಯವರನ್ನು ಆಯಿಶಾ ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು. “ಗಂಡ ವಿದೇಶದಿಂದ ಊರಿಗೆ ಬಂದು ಹದಿನೈದು ದಿನಗಳಾಗಿದ್ದು ತನ್ನನ್ನು ಸಂಪರ್ಕಿಸಿಲ್ಲ” ಎಂದೂ ದಯಾನಂದ ಶೆಟ್ಟಿಯವರಲ್ಲಿ ದೂರಿಕೊಂಡಳು. ದಯಾನಂದ ಶೆಟ್ಟರು ಇದನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಗಮನಕ್ಕೆ ತಂದರು.

ಮುನೀರ್ ಕಾಟಿಪಳ್ಳರವರು ಬಜಪೆಯ ಸ್ಥಳೀಯ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆಗೂಡಿ ನೇರ ಆಯಿಶಾಳ ಪತಿ ಜುಬೇರ್ ಮನೆಗೆ ತೆರಳಿದರು. ಜುಬೇರ್ ಮಹಮ್ಮದ್ ಮನೆಯಲ್ಲಿರಲಿಲ್ಲ. ಆತನನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುನೀರ್ ಕಾಟಿಪಳ್ಳ “ಆಯಿಶಾ ಬಾನು ನಿನ್ನನ್ನು ನಂಬಿಕೊಂಡು ಜಾತಿ, ಧರ್ಮ, ತಂದೆ ತಾಯಿಯನ್ನು ಬಿಟ್ಟು ಬಂದಿದ್ದಾಳೆ. ಆಕೆ ಈಗ ಮರಳಿ ತವರಿಗೆ ಹೋಗುವುದು ಅಷ್ಟು ಸುಲಭವಲ್ಲ. ಆದುದರಿಂದ ಅವಳ ಬದುಕಿಗೊಂದು ವ್ಯವಸ್ಥೆಯಾಗಬೇಕು” ಎಂದು ವಿನಂತಿಸಿದರು. ಆದರೆ ಆತ ಈ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿ ದೂರವಾಣಿ ಕರೆಯನ್ನು ಕಡಿತಗೊಳಿಸಿದಾಗ ಮನೆಯಲ್ಲಿದ್ದ ಜುಬೇರ್‌ನ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಲಾಯಿತು. “ಆಯಿಶಾಳ ಇಡೀ ಬದುಕಿನ ಜವಾಬ್ದಾರಿ ಜುಬೇರ್‌ನದ್ದು. ಅದೆಲ್ಲಾ ಮತ್ತೆ ಚರ್ಚೆ ಮಾಡುವ. ಎಲ್ಲಕ್ಕಿಂತ ಮೊದಲು ನಾಳೆ ಬೆಳಿಗ್ಗೆ 10 ಗಂಟೆಯ ಒಳಗಾಗಿ ಆಕೆಯ ಪಂಜಿಮೊಗರಿನ ಮನೆಗೆ ತೆರಳಿ ಆಕೆಯ ಮಕ್ಕಳ ಸ್ಕೂಲ್ ಫೀಸ್ ಮತ್ತು ಮನೆ ಬಾಡಿಗೆ ನೀಡಬೇಕು. ಇಲ್ಲದೇ ಇದ್ದರೆ ಸಂಘಟನೆಯ ವತಿಯಿಂದ ನಿಮ್ಮ ಮನೆಯ ಎದುರು ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಲಾಯಿತು.

ಮಂಗಳೂರಿನಲ್ಲಿ ಡಿವೈಎಫ್‌ಐ ಹೋರಾಟದ ಹಿನ್ನಲೆ ಮತ್ತು ಶೋಷಣೆಗೊಳಗಾದ ವ್ಯಕ್ತಿಗಳ ಪರವಾಗಿ ನಡೆಸುತ್ತಿರುವ ನಿರಂತರ ಹೋರಾಟದ ಬಗ್ಗೆ ತಿಳಿದುಕೊಂಡ ಜುಬೇರ್ ಮಹಮ್ಮದ್ ಮರುದಿನ ಬೆಳಿಗ್ಗೆ 7 ಗಂಟೆಗೇನೇ ನೇರವಾಗಿ ತನ್ನ ಮೊದಲ ಪತ್ನಿ ಆಯೀಶಾಳ ಮನೆಗೆ ಭೇಟಿ ನೀಡಿ ಅವಳ ಜೊತೆ ಒಂದಿಷ್ಟು ಹೊತ್ತು ಪ್ರೀತಿಯಿಂದ ಕಳೆದಿದ್ದ. ನಂತರ ಹತ್ತು ಗಂಟೆಯ ವೇಳೆಗೆ ಮಕ್ಕಳನ್ನು ಆಯಿಶಾಳ ಜೊತೆ ಶಾಲೆಗೆ ಕರೆದುಕೊಂಡು ಹೋಗಿ ಬಾಕಿ ಉಳಿಸಿದ್ದ ಸ್ಕೂಲ್ ಫೀಸ್‌ಗಳನ್ನು ಪಾವತಿಸಿ ಅಲ್ಲಿಂದ ಆಯಿಶಾಳನ್ನು ಮಂಗಳೂರು ನಗರಕ್ಕೆ ಕರೆದೊಯ್ದು ಬಟ್ಟೆ ಬರೆ, ಮಕ್ಕಳ ಆಟಿಕೆ, ಮನೆ ಸಾಮಾಗ್ರಿ ಖರೀಸಿದ್ದ. ಕಷ್ಟ ಮತ್ತು ನೋವಿನಿಂದ ಕಂಗಾಲಾಗಿದ್ದ ಆಯಿಶಾ ಬಾನುವಿಗೆ ಇದು ಕನಸೆಂಬಂತೆ ಕಂಡಿರಬಹುದು. ಆದೇನೇ ಆದರೂ ಆಯಿಶಾ ಬಾನು ಕಷ್ಟದ ಜೀವನ ಮುಗಿದು ಪ್ರೀತಿ ಪ್ರೇಮದ ಎರಡನೇ ಭಾಗ ಆರಂಭವಾಯಿತೆಂದುಕೊಂಡಳು.

ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇರ್ ತಂದೆ ಇದೇ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಮಂಗಳೂರು ನಗರ ಮತ್ತು ಬಜಪೆಯಲ್ಲಿ ಉತ್ತಮ ಆದಾಯ ತರುತ್ತಿದ್ದ ಬೀಡಿ ಬ್ರಾಂಚುಗಳನ್ನು ಹೊಂದಿದ್ದ ಜುಬೇರ್ ತಂದೆಯ ಅಕಾಲಿಕ ಮರಣದ ನಂತರ ಬೀಡಿ ಬ್ರಾಂಚುಗಳನ್ನು ಮುಚ್ಚುವಂತಿರಲಿಲ್ಲ. beedi-workerಸೌದಿಗೆ ಹೋಗುವುದನ್ನು ರದ್ದುಪಡಿಸಿದ ಜುಬೇರ್ ಬೀಡಿ ಬ್ರಾಂಚಿನ ಉಸ್ತುವಾರಿ ವಹಿಸಿಕೊಂಡ. ಆಯಿಶಾ ಬಾನು ಜೊತೆಗೆನೇ ಸಂಸಾರ ಹೂಡಿಕೊಂಡ ಜುಬೇರ್, ಪತ್ನಿ ಆಯಿಶಾಳನ್ನೂ ಕೂಡಾ ಬೀಡಿ ಬ್ರಾಂಚಿನ ವ್ಯಾಪಾರದಲ್ಲಿ ತೊಡಗಿಸಿಕೊಂಡ. ಎರಡನೇ ಪತ್ನಿಯ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗಿ ಬರುತ್ತಿದ್ದ ಜುಬೇರ್ ಈ ಬಾರಿ ಎರಡೂ ಸಂಸಾರಗಳನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದಂತೆ ಕಂಡು ಬಂದ. ಎರಡು ಮೂರು ವರ್ಷ ಆಯಿಶಾ ಮತ್ತು ಜುಬೇರ್ ಸುಖೀ ಸಂಸಾರ. ವರ್ಷದ ಹಿಂದೆ ಗರ್ಭಿಣಿಯಾಗಿದ್ದ ಆಯಿಶಾಳಿಗೆ ನಾಲ್ಕು ತಿಂಗಳ ಹಿಂದೆ ಪುಟ್ಟ ಮಗುವೊಂದರ ಜನನವಾಗಿತ್ತು.

ಕಳೆದ ಒಂದು ವರ್ಷದಿಂದ ಆಯಿಶಾ ಮತ್ತು ಜುಬೇರ್ ಸಂಸಾರದಲ್ಲಿ ದಿಡೀರ್ ಬದಲಾವಣೆಗಳು ಕಾಣಲಾರಂಭಿಸಿದವು. ಬೀಡಿ ಕಾಂಟ್ರಾಕ್ಟರ್ ಆಗಿದ್ದ ಜುಬೇದ್‌ಗೆ ಎರಡೂ ಕುಟುಂಬ ನಿರ್ವಹಿಸಲು ತಕ್ಕಮಟ್ಟಿನ ಆರ್ಥಿಕತೆ ಇತ್ತು. ನಾವೂ ಎಲ್ಲರಂತೆ ಬದುಕಬೇಕು. ಕಾರು, ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಂತೆ ಜುಬೇರ್ ಮತ್ತು ಆಯಿಶಾ ದಂಪತಿಗಳಲ್ಲೂ ಇತ್ತು. ಹೇಗೋ ಹುಂಡಿ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಚಿಲ್ಲರೆ ಹಣ ಸಂಪಾದನೆಗೆ ತೊಡಗಿಕೊಂಡ. ಹವಾಲ ವ್ಯವಹಾರವನ್ನು ಮಂಗಳೂರಿನಲ್ಲಿ ಹುಂಡಿ ವ್ಯವಹಾರ ಎನ್ನುತ್ತಾರೆ. ಇದು ಕಾನೂನಿನ ಪ್ರಕಾರ ಕಾನೂನು ಬಾಹಿರವಾದರೂ ಗಲ್ಫ್ ರಾಷ್ಟ್ರಗಳಲ್ಲಿನ ಉದ್ಯೋಗವನ್ನೇ ನೆಚ್ಚಿಕೊಂಡಿರುವ ಮಂಗಳೂರಿನ ಮುಸ್ಲಿಂ ಸಮುದಾಯದಲ್ಲಿ ಹವಾಲ ವ್ಯವಹಾರ ತಪ್ಪು ಅನ್ನಿಸೋದೇ ಇಲ್ಲ. ಸೌದಿ ಆರೇಬಿಯಾ, ದುಬೈಗಳಲ್ಲಿ ಕೂಲಿ ಕೆಲಸ ಮಾಡುವ ಮಂಗಳೂರಿನ ಯುವಕರು ಅಷ್ಟೋ ಇಷ್ಟೋ ಸಂಪಾದಿಸಿದ್ದನ್ನು ಕಾನೂನು ರೀತಿಯಲ್ಲಿ ಮಂಗಳೂರಿನ ಹೆತ್ತವರಿಗೆ ಕಳುಹಿಸಿದರೆ ಕಳುಹಿಸಿದ ಹಣದ ಅರ್ಧದಷ್ಟು ಮಾತ್ರ ಹೆತ್ತವರ ಕೈಸೇರುತ್ತದೆ. ಪ್ರಾಮಾಣಿಕವಾಗಿ ದುಡಿದ ಹಣವನ್ನು ಈ ಪರಿ ತೆರಿಗೆಗಳನ್ನು ತಪ್ಪಿಸಲು ಹವಾಲಾ ಮೂಲಕ ಮಂಗಳೂರಿಗೆ ಹಣ ರವಾನೆ ಮಾಡುತ್ತಾರೆ. ಇದೇ ವ್ಯವಹಾರ ಶುರುವಿಟ್ಟುಕೊಂಡ ಜುಬೇರ್ ಮತ್ತು ಆಯಿಶಾ ಹವಾಲಾದಲ್ಲಿ ಬಂದ ಕಮಿಷನ್ ಹಣದಲ್ಲಿ ಒಂದು ಪುಟ್ಟ ಮನೆ ಖರೀದಿ ಮಾಡುತ್ತಾರೆ. ಬೀಡಿ ಬ್ರಾಂಚು ವ್ಯವಹಾರ, ಸುತ್ತಾಡಲೆಂದು ಕಾರು ಖರೀದಿಸುತ್ತಾರೆ. ಒಟ್ಟು ಆಯಿಶಾ ಮತ್ತು ಜುಬೇರ್ ಕಷ್ಟದ ದಿನಗಳು ಮುಗಿದು ತಕ್ಕಮಟ್ಟಿಗೆ ಐಶಾರಾಮಿಯಾಗಿಯೇ ಬದುಕಲಾರಂಭಿಸುತ್ತಾರೆ. ಆದರೆ ಕಮಿಷನ್ ಆಸೆಗಾಗಿ ತಾನು ಮಾಡುತ್ತಿದ್ದ ಹವಾಲಾ ದುಡ್ಡು ಯಾರೆಲ್ಲರ ಕೈ ದಾಟುತ್ತಿದೆ ಎಂಬುದು ಆಯಿಶಾಳಿಗಾಗಲೀ, ಜುಬೇರ್‌ಗಾಗಲೀ ಗೊತ್ತಿರಲಿಲ್ಲ.

ಬಿಹಾರದ ಪಾಟ್ನಾದಲ್ಲಿ ನರೇಂದ್ರ ಮೋದಿ ನಡೆಸಿದ್ದ ಹೂಂಕಾರ್ ರ್‍ಯಾಲಿಯಲ್ಲಿ ನಡೆದ patnablast_hunkar_rallyಸರಣಿ ಸ್ಪೋಟದ ಆರೋಪಿಗಳಿಗೆ ಹಣ ಸರಬರಾಜು ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಆಯಿಶಾ ಮತ್ತು ಆಕೆಯ ಪತಿ ಜುಬೇರ್‌ರನ್ನು ತಮ್ಮ ನಾಲ್ಕು ತಿಂಗಳ ಪುಟ್ಟ ಮಗುವಿನ ಜೊತೆ ಅರೆಸ್ಟ್ ಮಾಡಿದ್ದಾರೆ ಎಂಬುದು ಸುದ್ದಿ. ಆದರೆ ಪೊಲೀಸರು ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಬಿಹಾರದಲ್ಲಿ ಹವಾಲ ಹಣದ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದು, ಅವರ ಅಕೌಂಟ್‌ಗಳಿಗೆ ಆಯಿಶಾ 2 ಕೋಟಿ ಜಮೆ ಮಾಡಿದ್ದಾಳೆ. ಆಯಿಶಾಳ ಪತಿ ಜುಬೇರ್ ಎಕೌಂಟ್‌ನಿಂದ 5 ಕೋಟಿ ವ್ಯವಹಾರವಾಗಿದೆ ಎಂಬುದಷ್ಟೇ ಬಿಹಾರ ಪೊಲೀಸ್ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಹೇಳುತ್ತಾರೆ. ಆದರೆ ಯಾವ ಅಧಿಕಾರಿಯೂ ದೃಢೀಕರಿಸದೆ ಮಾಧ್ಯಮಗಳಲ್ಲಿ “ಆಯಿಶಾ ಭಯೋತ್ಪಾದಕಿ” ಎಂಬ ಸುದ್ದಿ ಹರಡಿದ್ದು ಹೇಗೆ ಎಂಬುದು ಮಾಧ್ಯಮಗಳಿಗೇ ಗೊತ್ತಿಲ್ಲ! ಆಯಿಶಾಳನ್ನು ಬಂಧಿಸಲು ಬಿಹಾರದಿಂದ ಇನ್ಸ್‌ಸ್ಪೆಕ್ಟರ್ ರಾಜ್ ಕಿಶೋರ್ ಮತ್ತು ಓರ್ವ ಕಾನ್ಸ್‌ಸ್ಟೇಬಲ್ ಮಾತ್ರ ಮಂಗಳೂರಿಗೆ ಬಂದಿದ್ದರು. ಒಂದು ಸರಳ ವಿಚಾರವೆಂದರೆ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಹಣ ಸರಬರಾಜು ಮಾಡಿದ ಅತೀ ಮುಖ್ಯ ಆರೋಪಿಯನ್ನು ಬಂಧಿಸಲು ಇಬ್ಬರು ಸಿವಿಲ್ ಪೊಲೀಸರು ಮಾತ್ರ ಬರುತ್ತಾರೆ ಎಂಬುದೇ ಆಶ್ಚರ್‍ಯಕರ. ಎನ್‌ಐಎ, ಎಟಿಎಸ್, ಐಬಿ ಮಟ್ಟದಲ್ಲಿ ನಡೆಯಬೇಕಾಗಿದ್ದ ಕಾರ್‍ಯಾಚರಣೆಯನ್ನು ಒಬ್ಬನೇ ಒಬ್ಬ ಇನ್ಸ್‌ಸ್ಪೆಕ್ಟರ್ ಮಾಡುತ್ತಾರೆ ಎಂದರೇ ಇಡೀ ಸುದ್ದಿಯ ಬಗ್ಗೆ ಅನುಮಾನಗಳಿವೆ. ಅಂತೂ ಇಂತೂ ಮಕ್ಕಳ ಹೊಟ್ಟೆ ತುಂಬಿಸಲು ಪ್ರತೀ ಗಳಿಗೇನೂ ಹರಸಾಹಸ ಪಡುತ್ತಿದ್ದ ತಾಯಿಯೊಬ್ಬಳು ಭಯೋತ್ಪಾದಕಿ ಎಂದು ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಘಟನೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸಬೇಕಿದೆ.