ಲಂಕೇಶ: ಅಳಿದ ಮೇಲೂ ಉಳಿದ ಪ್ರತಿಭೆ


– ಡಾ.ಎಸ್.ಬಿ. ಜೋಗುರ


ಲಂಕೇಶ ಆ ಹೆಸರೇ ಹಾಗೆ.. ಎರಡು ದಶಕಗಳ ಕಾಲ ಕನ್ನಡ ನಾಡಿನ ಮನ:ಸ್ಥಿತಿಯನ್ನು ಜಾಗೃತವಾಗಿಡುವಷ್ಟು ಶಕ್ತಿ ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರದು. ತನ್ನ ಹೆಸರಿನ ಪತ್ರಿಕೆಯೊಂದು ತನ್ನ ನಂತರವೂ ಇಷ್ಟು ಗಾಢವಾದ, ಅನೂಹ್ಯವಾದ ಪ್ರಭಾವವನ್ನು ಹೊಂದಿರಬಲ್ಲದು ಎನ್ನುವುದನ್ನು ಲಂಕೇಶ ಅರಿತಿದ್ದರೋ.. ಇಲ್ಲವೋ ಆ ಮಾತು ಬೇರೆ. ಇಂದಿಗೂ ಮಾಧ್ಯಮ ಜಗತ್ತಿನ ವಿಪರ್ಯಾಸಗಳನ್ನು ಕುರಿತು ಚರ್ಚಿಸುವಾಗ ಇಲ್ಲವೇ ಅಲ್ಲಿಯ ವಸ್ತುನಿಷ್ಟತೆ ಮತ್ತು ಖಚಿತತೆಯ ಬಗ್ಗೆ ಮಾತನಾಡುವಾಗ ಲಂಕೇಶರು ನೆನಪಾಗದೇ ಇರಲಾರರು. ಕೆಲವರು ಬದುಕಿರುವಾಗಲೇ ಸತ್ತಿರುತ್ತಾರೆ, ಮತ್ತೆ ಕೆಲವರು ಸತ್ತ ಮೇಲೆ ಬದುಕಿರುತ್ತಾರೆ ಆದರೆ ಬದುಕಿರುವಾಗಲೂ ಮತ್ತು ಸತ್ತ ಮೇಲೆಯೂ ಜೀವಂತವಾಗಿರುವ ಕೆಲವೇ ಕೆಲವರಲ್ಲಿ ಲಂಕೇಶರೂ ಒಬ್ಬರು. ನನ್ನ ಪ್ರಕಾರ ಲಂಕೇಶರು ಕರ್ನಾಟಕದ ಖುಶ್ವಂತಸಿಂಗ್ ಎನ್ನುವಲ್ಲಿ ಎರಡು ಮಾತಿಲ್ಲ. ಬದುಕನ್ನು ತನ್ನಿಷ್ಟದಂತೆಯೇ ಬದುಕಿದ ಅಪರೂಪದ ವ್ಯಕ್ತಿ. ತಾನು ಇಂದ್ರ.. ಚಂದ್ರ.. ಎಂದು ಬಡಾಯಿ ಕೊಚ್ಚಿಕೊಳ್ಳುವ ಜಾಯಮಾನವೇ ಅವರಲ್ಲಿ ಇರಲಿಲ್ಲ. ಹಾಗಾಗಿದ್ದರೆ ಹುಳಿ ಮಾವಿನ ಮರ ದಂತಹ ಅಪರೂಪದ ಆತ್ಮಕತೆಯೊಂದು ಹೊರಬರುತ್ತಿರಲಿಲ್ಲ. ತಮ್ಮ ಊರಾದ ಕೊನಗವಳ್ಳಿಯಲ್ಲಿ ಅವರ ಬಾಲ್ಯದಲ್ಲಿ ಊರಿನ ಕೆಲವು ಹಿರಿಯರು lankeshಈರಿ ಎನ್ನುವ ಓರ್ವ ಯುವತಿಯನ್ನು ಆಕೆ ನೀರಿಗೆ ಹೊರಟಾಗ ಹಾಗೇ ಚುಡಾಯಿಸುತ್ತಿದ್ದುದಿತ್ತು. ಅದರಲ್ಲಿ ಅವರ ತಂದೆಯವರೂ ಒಬ್ಬರು ಎನ್ನುವದನ್ನು ದಾಖಲಿಸಿರುವ ಲಂಕೇಶರು, ಅವರ ಮಗ ಇಂದ್ರಜಿತ್ ಹಿಂದೊಮ್ಮೆ ಬೆಂಗಳೂರಲ್ಲಿ ಒಂದು ಸಣ್ಣ ಅಪಘಾತದಲ್ಲಿ ಸಿಲುಕಿ ಲಂಕೇಶರ ಹೆಸರನ್ನು ಬಳಸಿ ಪಾರಾಗಿ ಬಂದಿರುವದಿತ್ತು. ಆಗ ಮೇಸ್ಟ್ರು ಇನ್ನೊಮ್ಮೆ ಇಂಥಾ ಕೆಲಸ ಮಾಡಿ ನನ್ನ ಹೆಸರನ್ನು ಎಲ್ಲೂ ಬಳಸತಕ್ಕದ್ದಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ ಲಂಕೇಶರು ಎಂದೂ ತಾನೊಂದು ಪತ್ರಿಕೆಯ ಸಂಪಾದಕ ಎಂದು ರಿಯಾಯತಿ ಪಡೆದವರಲ್ಲ. ಅತ್ಯಂತ ತತ್ವ, ನಿಷ್ಟೆಯ ಮೂಲಕ ಎರಡು ದಶಕಗಳಷ್ಟು ಕಾಲ ಯಾವುದೇ ಜಾಹೀರಾತುಗಳಿಲ್ಲದೆಯೂ ಲಂಕೇಶರು ಪತ್ರಿಕೆಯನ್ನು ನಡೆಸಿರುವದಿತ್ತು. ಅದು ಕೇವಲ ಪತ್ರಿಕೆಯಾಗಿರಲಿಲ್ಲ. ನಾಡಿನ ಪ್ರಜ್ಞಾವಂತ ಮನಸುಗಳ ಮೂರ್ತ ರೂಪವಾಗಿ ಪ್ರತಿವಾರವೂ ಓದುಗರ ಕೈ ಸೇರುತ್ತಿತ್ತು. ಪತ್ರಿಕೆಯ ದರವನ್ನು ತೀರಾ ಅಪರೂಪಕ್ಕೆ ಹೆಚ್ಚಿಸುವ ಪ್ರಮೇಯ ಬಂದಾಗ ಅದನ್ನು ನೇರವಾಗಿ ಹೆಚ್ಚಿಸಿ ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡದೆ ಆ ದರ ಹೆಚ್ಚಿಸುವ ಅನಿವಾರ್ಯತೆ ಯಾಕೆ ಬಂತು..? ಹೊಟೆಲನಲ್ಲಿ ಒಂದು ಪ್ಲೇಟ್ ಇಡ್ಲಿ ಒಂದು ಚಹಾ ದರ ಎಷ್ಟಿದೆ ಎನ್ನುವದನ್ನೆಲ್ಲಾ ಅತ್ಯಂತ ವಸ್ತುನಿಷ್ಟವಾಗಿ ವಿವರಿಸಿ ಒಂದು ರೂಪಾಯಿನೋ.. ಎರಡು ರೂಪಾಯಿನೋ ಹೆಚ್ಚಿಸುತ್ತಿದ್ದರು. ತೀರಾ ಸಾಮಾನ್ಯ ಬರವಣಿಗೆ ಎನ್ನುವುದು ಕೂಡಾ ಲಂಕೇಶ ಪತ್ರಿಕೆಯ ಸಹವಾಸಕ್ಕೆ ಬಂದದ್ದೇ ಅಗಾಧವಾದ ಪ್ರಚುರತೆಯನ್ನು ಪಡೆಯುತ್ತಿತ್ತು. ಲಂಕೇಶ ಪತ್ರಿಕೆಗೆ ಬರೆಯುವದೇ ಒಂದು ಹೆಮ್ಮೆ ಎನ್ನುವ ದಿನಮಾನಗಳಿದ್ದವು. ನಮ್ಮ ನಡುವೆಯೇ ಸಾಕಷ್ಟು ಪತ್ರಿಕಾ ಸಂಪಾದಕರುಗಳಿದ್ದಾರೆ ಇವರು ಇದ್ದರೂ ಇಲ್ಲದಿದ್ದರೂ ಏನೂ ಫ಼ರಕ್ ಬೀಳುವದಿಲ್ಲ ಎನ್ನುವಂತೆ ಇವರು ಬದುಕಿದವರು. ಲಂಕೇಶ ಹಾಗಿರಲಿಲ್ಲ. ಸರಿ ಇದ್ದದ್ದನ್ನು ಸರಿ ಎಂದು ಹೇಳುವ, ತಪ್ಪನ್ನು ತಪ್ಪು ಎಂದು ಹೇಳುವ ಧಾಡಸೀತನ ಲಂಕೇಶರಲ್ಲಿತ್ತು. ಓದುಗರನ್ನು ಹೊರತುಪಡಿಸಿ ಯಾರನ್ನೋ ಓಲೈಸಬೇಕು ಎನ್ನುವ ಕಾರಣಕ್ಕೆ ಲಂಕೇಶ ಎಂದೂ ಬರವಣಿಗೆಯನ್ನು ಮಾಡಲಿಲ್ಲ. ತನ್ನ ಓದುಗರು ಇಷ್ಟ ಪಡುತ್ತಾರೆ ಎನ್ನುವ ಕಾರಣಕ್ಕಾಗಿ ಕೆಲವೊಮ್ಮೆ ತಮ್ಮ ಖಾಸಗಿ ಬದುಕಿನ ಬಗ್ಗೆ ಬರೆದುಕೊಂಡಿರಬಹುದೇ ಹೊರತು ತಮ್ಮ ಬಗ್ಗೆ ಕೊಚ್ಚಿ ಕೊಂಡದ್ದು ಇಲ್ಲ.

ಲಂಕೇಶ ಮೂಲತ: ಅಧ್ಯಾಪಕರಾಗಿದ್ದವರು. ಅಪಾರವಾದ ಓದು, ವ್ಯಾಪಕವಾದ ಬರವಣಿಗೆಯ ಮೂಲಕ ಅವರು ಗುರುತಿಸಿಕೊಂಡಿದ್ದರೂ ಉತ್ತಮ ಬೋಧಕರಾಗಿ ಲಂಕೇಶ ವಿದ್ಯಾರ್ಥಿಗಳ ವಲಯದಲ್ಲಿ ಗಮನ ಸೆಳೆಯಲಿಲ್ಲ. ಆದರೆ ಒಬ್ಬ ನಾಟಕಕಾರರಾಗಿ, ಕವಿಯಾಗಿ, ಕ್ರೀಡಾ ಪ್ರೇಮಿಯಾಗಿ, ಚಿತ್ರ ನಿರ್ದೇಶಕನಾಗಿ [ನಟನಾಗಿ ಎನ್ನದಿದ್ದರೆ ಲಂಕೇಶರು ಕೋಪಿಸಿಕೊಳ್ಳಬಹುದೇನೋ..] ಹಾಗೆಯೇ ಒಬ್ಬ ವಿಮರ್ಶಕನಾಗಿ, ಕಾದಂಬರಿಕಾರರಾಗಿ, ಕತೆಗಾರರಾಗಿ, ಪತ್ರಿಕಾ ಸಂಪದಾಕರಾಗಿ ಹೀಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಆಸಕ್ತಿಯಿದ್ದ ಲಂಕೇಶರು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅವರು ಒಂದೆರಡು ಪೆಗ್ ಹಾಕಿ ಚರ್ಚೆಗೆ ಕುಳಿತರೆ ಅತ್ಯಂತ ಗಹನವಾದ ವಿಚಾರಗಳು ಬಿಚ್ಚಿಕೊಳ್ಳುತ್ತಿದ್ದವು. ಅವರು ಮತ್ತು ಡಿ.ಆರ್.ನಾಗರಾಜ ಜೊತೆಗಿನ ಸಹವಾಸವನ್ನು ಕುರಿತು ನಟರಾಜ ಹುಳಿಯಾರ ಈಚೆಗಷ್ಟೆ “ಇಂತಿ ನಮಸ್ಕಾರಗಳು” ಎನ್ನುವ ಕೃತಿಯನ್ನು ಹೊರತಂದಿರುವದಿದೆ. ಲಂಕೇಶರು ತಮ್ಮ ಅಪ್ರತಿಮವಾದ ಪ್ರತಿಭೆಯ ಮೂಲಕ ನಾಡಿನ ಬಹುತೇಕರಿಗೆ ಮೇಸ್ಟ್ರಾಗಿದ್ದಾರೆ. ಇದು ಬಹಳ ಮುಖ್ಯ. ಇವತ್ತು ಡಾಕ್ಟರೇಟ್ ಡಿಗ್ರಿ ಮಾಡಿಕೊಂಡು ಮೂರು ದಶಕ ಅಧ್ಯಾಪಕನೆಂದು ಪಾಠ ಮಾಡಿzವರನ್ನೇ ಅವರ ವಿದ್ಯಾರ್ಥಿಗಳು ಪ್ರೀತಿಯಿಂದ ನಮ್ಮ ಮೇಷ್ಟ್ರು ಎಂದು ಕರೆಯುವದಿಲ್ಲ ಹೀಗಿರಬೇಕಾದರೆ ಲಂಕೇಶರನ್ನು ಇಂದಿಗೂ ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡವರೆಲ್ಲಾ ಮೇಷ್ಟ್ರೆಂದೇ ಕರೆಯುವದಿದೆ. ಅವರ ಪತ್ರಿಕೆ ಬರೀ ಪತ್ರಿಕೆಯಾಗಿರಲಿಲ್ಲ ಎನ್ನುವುದನ್ನು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಮಾತುಗಳಲ್ಲಿ ಹೇಳುವದಾದರೆ ಒಂದು ಕಾಲವಿತ್ತು ಇಡೀ ರಾಜ್ಯದಲ್ಲಿ ಪ್ರಜ್ಞಾವಂತ ಮನಸುಗಳನ್ನು ರೂಪಿಸುವ ಮತ್ತು ನಿರ್ದೇಶಿಸುವ ಲಂಕೇಶ ಪತ್ರಿಕೆ ಎನ್ನುವುದೊಂದಿತ್ತು ಇಂಥಾ ಸಂದರ್ಭಗಳಲ್ಲಿ ಅದು ಅತ್ಯಂತ ವಸ್ತು ನಿಷ್ಟವಾಗಿ ತನ್ನ ಅಭಿಪ್ರಾಯಗಳನ್ನು ಹೊರಹಾಕುವುದು ಮಾತ್ರವಲ್ಲದೇ ಏನಾಗಬೇಕು ಎನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತಿತ್ತು. ಈಗ ಅಂಥಾ ಯಾವುದೇ ಪತ್ರಿಕೆಗಳು ನಮ್ಮಲ್ಲಿ ಆ ರೀತಿಯ ಖಂಡಿತವಾದವನ್ನು ಹುಟ್ಟುಹಾಕುವಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಅದನ್ನೇ ಪೂರ್ಣಚಂದ್ರ ತೇಜಸ್ವಿಯವರು, “ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆyou can throw anything.it will digest. ಹೀಗೆ ಒಟ್ಟು human situation DV develop ಆಗ್ತಾ ಬಂತು. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ಼್ಟಾದ್ದರಿಂದ ಹೊಸ ಛಾಲೆಂಜಗಳು ಎದುರಾದವು. ಅಲ್ಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು” [ಹೊಸ ವಿಚಾರಗಳು-ಪು-೭೩೬] ಹೀಗೆ ಲಂಕೇಶ ಮತ್ತು ಅವರ ಹೆಸರಿನ ಪತ್ರಿಕೆ ಈ ನಾಡಿಗೆ ಅಗಾಧವಾದ ಕೊಡುಗೆಯನ್ನು ನೀಡಿವೆ. ನನ್ನಂಥ ಅನೇಕರಿಗೆ ಆಗಾಗ ನಿಜವಾಗಿಯೂ ಲಂಕೇಶರು ಜ್ಞಾನಪೀಠಕ್ಕೆ ಅರ್ಹರಿದ್ದರಲ್ಲ..! ಎಂದು ಅನಿಸಿರುವದಿದೆ. ಆದರೆ ಅದಾವ ಮಾನದಂಡವೋ ಕಾಣೆ ಅವರನ್ನು ಈ ಪ್ರಶಸ್ತಿಯಿಂದ ವಂಚಿಸಿತು. ಯಾವುದೇ ಪ್ರಶಸ್ತಿ ಇರಲಿ ಅವುಗಳ ಗೌರವ ಹೆಚ್ಚಬೇಕಾದರೆ ಇಂಥವರಿಗೇ ಸಿಗಬೇಕು.

ಲಂಕೇಶ ಎನ್ನುವದು ಕೇವಲ ಒಂದು ವ್ಯಕ್ತಿಯಲ್ಲ ಅದೊಂದು ಪ್ರಜ್ಞೆ. ಶೋಷಿತರ, ದಮನಿತರ, ಕೆಳಸ್ತರಗಳ ಜನರಿಗಾಗುವ ಅನ್ಯಾಯವನ್ನು ಪ್ರಶ್ನಿಸುವ ಪ್ರಜ್ಞೆ. ಹಿಂದುಳಿದ ಸಮುದಾಯಗಳ ಬಗ್ಗೆ ಅಪಾರ ಕಳಿಕಳಿಯಿದ್ದ ಲಂಕೇಶರು ತಮ್ಮ ಬದುಕಿನುದ್ದಕ್ಕೂ ಅವರ ಪರವಾಗಿಯೇ ಯೋಚಿಸಿದವರು. ಆದರೆ ಅವರ ಹೆಸರನ್ನು ಹೇಳುತ್ತಾ ಸುಖಿಸುವ, ಬೀಗುವ ಕೆಲ ಅನುಯಾಯಿಗಳಲ್ಲಿ ಲಂಕೇಶರ ವಿಚಾರಗಳು, ಧೋರಣೆಗಳು ಪ್ರಾಮಾಣಿಕವಾಗಿ ಎದೆಯ ಒಳಗೆ ಇಳಿಯಲಿಲ್ಲ. ಬರೀ ಗಂಟಲ ಮಟ್ಟಕ್ಕೆ ಬಂದು ಗಕ್ಕನೇ ನಿಂತು ಬಿಡುತ್ತವೆ. ಬಸವನ ಹೆಸರು ಬಳಸಿಕೊಂಡು ಪ್ರತಿಷ್ಟೆ ಮೆರೆಯುವವರಿಗಿಂತಾ ಇವರು ಭಿನ್ನವಾಗಿ ಕಾಣುವದಿಲ್ಲ. ನಡೆ-ನುಡಿಯ ನಡುವೆ ಅಪಾರ ಅಂತರವಿದ್ದರೂ ತತ್ವ, ಸಿದ್ಧಾಂತ, ಬದ್ಧತೆ ಎನ್ನುವ ಬೂಸಾತನ ಮಾತ್ರ ಇವರು ಬಿಡುವದಿಲ್ಲ. ಇವರು ನಿಜವಾಗಿಯೂ ಲಂಕೇಶರಂಥವರ ಪಾಲಿಗೆ ಕಳಂಕಿತರು. ಸದ್ಯದ ಸಾಹಿತ್ಯಕ ವಾತಾವರಣ ಎಷ್ಟು ಕಲುಷಿತವಾಗಿದೆಯೆಂದರೆ, ಬದ್ಧತೆ ಎನ್ನುವದು ಅಳವಡಿಕೆಗಲ್ಲ, ಹೊಟ್ಟೆ ಪಾಡಿಗೆ ಮತ್ತು ಒಣ ಹೆಸರಿಗೆ ಎನ್ನುವ ಸಾಹಿತಿಗಳು ಹೆಚ್ಚಾಗಿದ್ದಾರೆ. ಬರೆದಂತೆ ಬದುಕಬೇಕು ಎಂದು ಎಲ್ಲಿದೆ..? ಅಂತ ಕೇಳುವ ಕುಭಂಡರೂ ಇದ್ದಾರೆ. ಎಲ್ಲ ವಲಯಗಳಲ್ಲಿ ಜಾತೀಯತೆ, ಸ್ವಜನಪಕ್ಷಪಾತ, ಪ್ರಾದೇಶಿಕತೆಯ ತರತಮಗಳು ಅವಕಾಶಗಳನ್ನು ಸಮರ್ಥರಿಗೆ ಹಂಚದೇ ಅನ್ಯಾಯವೆಸಗುವ ಸಂದರ್ಭದಲ್ಲಿ ಲಂಕೇಶರು ಬದುಕಿರಬೇಕಿತ್ತು ಎನಿಸುತ್ತದೆ. ಇಂದು ಮಾಧ್ಯಮಗಳಂತೂ ಪಕ್ಕಾ ಉದ್ದಿಮೆಗಳಾಗಿಯೇ ಮಾರ್ಪಟ್ಟ ರೀತಿಗೆ ಮೇಸ್ಟ್ರು ಅದು ಹೇಗೆ ಉತ್ತರಿಸುತ್ತಿದ್ದರೋ ಗೊತ್ತಿಲ್ಲ. ಲಂಕೇಶರು ಬದುಕಿರುವಷ್ಟು ದಿನ ಬಾಯಿ ಮುಚ್ಚಿ ಕುಳಿತವರು ಅವರು ಇಲ್ಲವಾದದ್ದೇ ಕಿಸಬಾಯಿ ದಾಸರಾದದ್ದೂ ಇದೆ. ದೊಡ್ಡ ಬಂಡೆಗಲ್ಲೊಂದು ಉರುಳಿದ ಮೇಲೆ ಅದರಡಿಯಲ್ಲಿರುವ ಸಣ್ಣ ಪುಟ್ಟ ಹುಳುಗಳು ಪುಟು ಪುಟು ನೆಗೆದು ಹೊರಬರುವಂಥ ಸ್ವಾತಂತ್ರ್ಯವನ್ನು ಇವರು ಅನುಭವಿಸುತ್ತಿದ್ದಾರೆ.

ಲಂಕೇಶರಂಥಾ ಗದ್ಯ ಬರಹಗಾರರು ಕನ್ನಡ ನಾಡಿನ ಬಹುದೊಡ್ದ ಆಸ್ತಿ. ಯಾವುದನ್ನೇ ಬರೆಯಲಿ ಅದರ ಪ್ರಕಾರದ ತಾತ್ವಿಕ ಚೌಕಟ್ಟಿಗೆ ತಕ್ಕ ಹಾಗೆಯೇ ಬರೆಯುವ ಲಂಕೇಶ ಎಲ್ಲೂ ವಿಮರ್ಶೆಯನ್ನು ತುತ್ತೂರಿ ಮಾಡಿ ಊದಿದವರಲ್ಲ, ಹಾಗೆಯೇ ಸಿನೇಮಾ ವಿಮರ್ಶೆ, ಟೀಕೆ ಟಿಪ್ಪಣಿ, ಕಂಡದ್ದು ಕಂಡ ಹಾಗೆ, ಮರೆಯುವ ಮುನ್ನ ಹೀಗೆ ಯಾವುದನ್ನೇ ಬರೆದರೂ ಓದುಗರು ಖುಷಿ ಪಡುವಂತೆ ಬರೆಯುತ್ತಿದ್ದರು. ಅವರು ಕಾಟಾಚಾರಕ್ಕೆ ಬರೆದವರಲ್ಲ. ಬೋದಿಲೇರ ನಂಥ ಫ಼್ರೆಂಚ್ ಕವಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ ರೀತಿಯೇ ಅನನ್ಯ. ಒಂದು ವಾರಪತ್ರಿಕೆಯನ್ನು ಪ್ರತಿ ಬುಧವಾರ ಸಂಜೆ ಬಸ್ ನಿಲ್ದಾಣದ ಬುಕ್ ಸ್ಟಾಲ್ ಗಳಲ್ಲಿ ನಿಂತು, ಕಾದು, ಖರೀದಿಸಿ ಕೊಂಡು ಓದುವ ಆರೋಗ್ಯಕರ ಪರಂಪರೆಯನ್ನು ಲಂಕೇಶ ಪತ್ರಿಕೆಯ ಹಾಗೆ ಮತ್ತಾವುದೂ ಬೆಳೆಸಲಿಲ್ಲ. ಈಗ ಲಂಕೇಶ ಪತ್ರಿಕೆಗಿಂತಲೂ ಹೆಚ್ಚು ಪ್ರಸರಣ ಇರುವ ವಾರಪತ್ರಿಕೆಗಳು ಇರಬಹುದು. ಮಸಾಲಾ ಸುದ್ಧಿಯನ್ನೇ ತುರುಕಿ ರೋಚಕವಾಗಿ ಬರೆದು ಓದುಗರನ್ನು ಹೊಂದಿರಬಹುದು ಆದರೆ ಕನ್ನಡ ನಾಡಿನ ಜಾಣ-ಜಾಣೆಯರನ್ನು ಸೃಷ್ಟಿಸುವ ಸೃಜನಶೀಲ ಗುಣ ಇರುವ ಪತ್ರಿಕೆಗಳು ಕಡಿಮೆ. ಇಂದು ಜಾಹೀರಾತನ್ನು ಓದಿ ಮಿಕ್ಕದ್ದನ್ನು ಓದಬೇಕೋ ಇಲ್ಲಾ ಸುದ್ದಿಯನ್ನು ಓದಿ ಜಾಹೀರಾತನ್ನು ಗಮನಿಸಬೇಕೋ ಎನ್ನುವಷ್ಟು ಪತ್ರಿಕೋದ್ಯಮ ಬದಲಾಗಿದೆ. ಲಂಕೇಶರ ಪ್ರಭಾವ ಅಷ್ಟು ಸುಲಭವಾಗಿ ಅಳಿಸಿಹಾಕುವಂಥದ್ದಲ್ಲ, ಹಾಗೆ ಮಾಡ ಹೋದರೆ ಇನ್ನಷ್ಟು ಗಟ್ಟಿಯಾಗುತ್ತ ಹೋಗುವ ಪ್ರಭಾವ. ಲಂಕೇಶ ತಮ್ಮ ಪತ್ರಿಕೆಯನ್ನು ಬೆಳೆಸುವ ಜೊತೆಗೆ ಅನೇಕ ಹೊಸ ಹೊಸ ಲೇಖಕರನ್ನೂ ಬೆಳೆಸಿದರು. ತುಸು ನಿಷ್ಟುರವಾದಿಯಾಗಿದ್ದ ಲಂಕೇಶ ಅನೇಕರನ್ನು ಮೂಗಿನ ನೇರಕ್ಕೆ ಮಾತಾಡಿ ಬೇಸರಿಸಿದ್ದೂ ಇದೆ. ಲಂಕೇಶರು ಎಲ್ಲ ವಿಷಯಗಳಲ್ಲಿ ಪರಿಪೂಣವಾದ ಮನುಷ್ಯ ಎಂದಲ್ಲ, ಅವರಲ್ಲಿಯೂ ಮನುಷ್ಯ ಸಹಜವಾದ ದೌರ್ಬಲ್ಯಗಳಿದ್ದವು ಆದರೆ ಆ ದೌರ್ಬಲ್ಯಗಳನ್ನು ಬಳಸಿ ಅವರು ಬೇರೆಯವರನ್ನು ಶೋಷಣೆ ಮಾಡಲಿಲ್ಲ. ಆ ದೌರ್ಬಲ್ಯಗಳಿಗೆ ತಮ್ಮನ್ನೇ ತಾವು ಒಗ್ಗಿಸಿಕೊಂಡರು. ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಕ್ರಿಯಾಶೀಲರಾಗಿರುತ್ತಿದ್ದ ಲಂಕೇಶ ಒಂದೇ ಒಂದು ವಾರವೂ ಕಳಪೆ ಪತ್ರಿಕೆಯನ್ನು ರೂಪಿಸಿದವರಲ್ಲ. ಇಂಥಾ ಲಂಕೇಶ ಅಮೂರ್ತವಾಗಿ ಅವರ ಆಲೋಚನೆಗಳನ್ನು, ಬರವಣಗೆಯನ್ನು ಇಷ್ಟ ಪಡುವ ಎಲ್ಲರೊಂದಿಗೆ ಸದಾ ಕಾಲ ಇದ್ದೇ ಇರುತ್ತಾರೆ. ಇಂಥವರು ಇಲ್ಲವಾದಾಗಲೇ ಹೆಚ್ಚೆಚ್ಚು ಮಹತ್ವ ಪಡೆಯುತ್ತಾರೆ. ಆದರೂ ಲಂಕೇಶರಂಥಾ ಚಿಂತಕರು ಅಷ್ಟು ಬೇಗ ಸಾಯಬಾರದಿತ್ತು ಎನ್ನುವ ನನ್ನ ಹಳಹಳಿಕೆ ಮತ್ತು ಬೇಸರ ಮಾತ್ರ ನಿರಂತರವಾಗಿ ಹಾಗೇ ಉಳಿದಿದೆ.

6 thoughts on “ಲಂಕೇಶ: ಅಳಿದ ಮೇಲೂ ಉಳಿದ ಪ್ರತಿಭೆ

  1. nagraj.harapanahalli

    ನಿಜ, ಜೋಗುರ್ ಅವರೇ, ಇವತ್ತಿಗೂ ನಮ್ಮನ್ನ ಎಚ್ಚರಿಸುವ ಮತ್ತು ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ಅರಿವಾಗಿ ಕಾಡುವ ಲಂಕೇಶ್ ರು ನಮ್ಮ ಜೊತೆ ಇದ್ದಾರೆ. ನಮ್ಮ ಪ್ರಜ್ಞೆಯ ಭಾಗವಾಗಿದ್ದಾರೆ. ಅನಂತಮೂರ್ತಿ ಮರೆಯಾದ ಸಮಯದಲ್ಲಿ ನಮಗೆ ನಿಜಕ್ಕೂ ಲಂಕೇಶರ ನಡೆ ಮತ್ತು ಅವರ ಎಚ್ಚರದ ಪ್ರಜ್ಞೆ ಮತ್ತು ಅಲೋಚಿಸುತ್ತಿದ್ದ ರೀತಿಯಲ್ಲಿ ಒಂದು ಘಟನೆಯನ್ನು ನಾವು ಇವತ್ತು ವಿಮರ್ಶಿಸುತ್ತೇವೆ. ಹಾಗಾಗಿ ಕರ್ನಾಟಕದ ಪ್ರತಿ ಬೆಳವಣಿಗೆ ಮತ್ತು ದೇಶದ ಇವತ್ತಿನ ಸನ್ನಿವೇಶದಲ್ಲಿ ಪ್ರಗತಿಪರರು ರಿಯಾಕ್ಟ ಮಾಡುವಾಗ , ಲಂಕೇಶ್ ನಮ್ಮಲ್ಲಿ ತುಂಬಿಕೊಂಡೇ ಇರುತ್ತಾರೆ..

    Reply
  2. M A Sriranga

    ಎಸ್ ಬಿ ಜೋಗುರ ಅವರಿಗೆ —— ಲಂಕೇಶರನ್ನು ಕುರಿತ ನಿಮ್ಮ ಲೇಖನದ ಬಗ್ಗೆ ——
    (೧)>>>ಬರೆದಂದಂತೆ ಬದುಕ ಬೇಕು ಎಂದು ಎಲ್ಲಿದೆ ಎಂದು ಕೇಳುವ ಕುಭಂಡರೂ ………. >>> ತಾವು ಪತ್ರಿಕೆ,ಸಾಹಿತ್ಯ ಹಾಗು ಒಂದು ವೃತ್ತಿಯನ್ನು ಕುರಿತಂತೆ ತುಂಬಾ ರೋಮಾಂಟಿಕ್ ಎಂಬಂತಹ ಕಲ್ಪನೆಯನ್ನು ಇಟ್ಟುಕೊಂಡಂತಿದೆ. ತನ್ನ ಪತ್ರಿಕೆಯಲ್ಲಿ, ಸಾಹಿತ್ಯದಲ್ಲಿ, ವೃತ್ತಿಯಲ್ಲಿ ಧೂಮಪಾನ, ಕುಡಿತ ಮತ್ತಿತರ ಚಟಗಳಿಂದ ಆಗಬಹುದಾದ ಹಾನಿಯನ್ನು ಕುರಿತು ಜನರಿಗೆ ಎಚ್ಚರಿಸುವ ಒಬ್ಬ ಪತ್ರಿಕಾಕರ್ತ, ಸಾಹಿತಿ ಹಾಗು ವೈದ್ಯನೇ ಅದಕ್ಕೆ ದಾಸನಾಗಿರಬಹುದು. ನಾವೆಲ್ಲರೂ ಸಹ ದೊಡ್ಡ ದೊಡ್ಡ ಆಸ್ಪತ್ರೆಗಳ ಹಿರಿಯ,ಕಿರಿಯ ವೈದ್ಯರೇ ಊಟದ ಸಮಯದಲ್ಲಿ ಆಸ್ಪತ್ರೆಯ ಹೊರಗೆ ಧೂಮಪಾನ ಮಾಡುವುದನ್ನು ನೋಡಿದ್ದೇವೆ. ಸ್ವತಃ ನಾನು ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆ ಗಳಲ್ಲಿ ಅಂತಹ ದೃಶ್ಯಗಳನ್ನು ಕಂಡಿದ್ದೇನೆ. ಈ ಹಿಂದೆಯೂ ಸಹ ನಮ್ಮ ಪತ್ರಿಕೆಗಳ ಸಂಪಾದಕರು,ಸಾಹಿತಿಗಳು ದುಶ್ಚಟಗಳನ್ನು ದೂರ ಇಟ್ಟವರಲ್ಲ. ಇಂದೂ ಸಹ ಇಂತಹವರು ಸಾಕಷ್ಟು ಮಂದಿ ಇದ್ದಾರೆ. ಮುಖ್ಯವಾದ ಮಾತೆಂದರೆ ನಮಗೆ ಬೇಕಾದ್ದು ಒಂದು ಪತ್ರಿಕೆಯ ಪ್ರಾಮುಖ್ಯತೆಯೋ?, ಸಾಹಿತ್ಯದ ಒಳ ನೋಟಗಳೋ? ಒಬ್ಬ ವೈದ್ಯನ ವಿದ್ವತ್ತೋ? ಒಬ್ಬ ವೈದ್ಯ,ಸರ್ಕಾರಿ ಅಧಿಕಾರಿ , ಸಂಗೀತಗಾರ ……….ಇವರುಗಳಿಗೆ ಇಲ್ಲದ /ಬೇಡವಾದ ಬದ್ಧತೆ ಪತ್ರಿಕಾಕರ್ತ ಅಥವಾ ಸಾಹಿತಿಯಲ್ಲಿ ನಿರೀಕ್ಷಿಸುವುದೇ ಇವರನ್ನು ಪೂಜಿಸುವ, ಆರಾಧಿಸುವ ಮಟ್ಟಕ್ಕೆ ನಮ್ಮನ್ನು ಇಳಿಸಿರುವುದು/ಇಳಿಸಬಹುದಾಗಿರುವುದು.
    (೨) >>>ಲಂಕೇಶರು ಬದುಕಿರುವಷ್ಟು ದಿನ ಬಾಯಿ ಮುಚ್ಚಿ ಕುಳಿತವರು …………. >>> ಲಂಕೇಶರು ಬದುಕಿದ್ದಾಗಲೂ ಅವರ ವಿರುದ್ಧದ ಸಾಕಷ್ಟು ದನಿಗಳು ಇದ್ದವು. ತಾವು ಗಮನಿಸಿದಂತೆ ಕಾಣುವುದಿಲ್ಲ. ಯಾವುದೇ ಒಂದು ವಿಚಾರಕ್ಕೆ ಪರ-ವಿರೋಧದ ದನಿಗಳು ಸದಾ ಇದ್ದೇ ಇರುತ್ತವೆ. ಲಂಕೇಶರ ಕಾಲದಲ್ಲಿ ಅವರಿಗಿದ್ದ ಒಂದು ಅನುಕೂಲಕರ ಸನ್ನಿವೇಶ ಎಂದರೆ 24X7 ಟಿ ವಿ ಸುದ್ದಿವಾಹಿನಿಗಳು, ಕ್ಷಣ ಕ್ಷಣದ breaking newsಗಳು ಇಲ್ಲದಿದ್ದದ್ದು. ಆದ್ದರಿಂದ ಲಂಕೇಶರ ವಿರುದ್ಧ ಇದ್ದ ದನಿಗಳು ತಮ್ಮ ಗಮನಕ್ಕೆ ಬಂದಿಲ್ಲ ಎನಿಸುತ್ತದೆ.
    (೩)>>>ಲಂಕೇಶರ ಪ್ರಭಾವ ಅಷ್ಟು ಸುಲಭವಾಗಿ ಅಳಿಸಿ ಹಾಕುವಂತಹುದಲ್ಲ ………. >>> ಯಾವುದೇ ಕ್ಷೇತ್ರವಿರಲಿ ಒಬ್ಬರು ನಮ್ಮಿಂದ ದೂರವಾದಾಗ ಆ ರೀತಿ ಅನಿಸುವುದು ಸಹಜ. ಆದರೆ ಕಾಲ ಕಳೆದಂತೆ ಅವರ ಪ್ರಭಾವವನ್ನು ಮಸುಕು ಮಾಡುವ ,ಅವರ ಸ್ಥಾನವನ್ನು ತುಂಬುವಂತಹವರು ಆಯಾ ಕ್ಷೇತ್ರದಲ್ಲಿ ಹುಟ್ಟಿಕೊಳ್ಳುವುದು ಪ್ರಕೃತಿ ಸಹಜವಾದ ಧರ್ಮ. ನಮ್ಮ ಕ್ರಿಕೆಟ್ ಕ್ಷೇತ್ರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ೮೦-೯೦ರ ದಶಕಗಲ್ಲಿ ಸೈಯದ್ ಕಿರ್ಮಾನಿ ಟೆಸ್ಟ್ ಗಳಲ್ಲಿ ವಿಕೆಟ್ ಕೀಪರ್ ಮಟ್ಟಕ್ಕೆ ಏರುವ ತನಕ ಪ್ರತಿ ಸಲ ಕ್ರಿಕೆಟ್ ಟೆಸ್ಟ್ ನಡೆದಾಗ ಇಂಗ್ಲೆಂಡ್ ನಿಂದ ಫರೂಕ್ ಇಂಜಿನಿಯರ್ ಎಂಬ ಒಬ್ಬ ವಿಕೆಟ್ ಕೀಪರ್ ಭಾರತದ ಪರ ಆಡಲು ಬರುತ್ತಿದ್ದರು . ತಮಗೆ ನೆನಪಿರಬಹುದು. ಇಂದು ಅವರ ಹೆಸರನ್ನೇ ಕೇಳದ ಸಾಕಷ್ಟು ಮಂದಿ ಯುವಕರು ನಮ್ಮಲ್ಲಿದ್ದಾರೆ. ಅದೇ ರೀತಿ ಗವಾಸ್ಕರ್,ವಿಶ್ವನಾಥ್,ಚಂದ್ರು,ಬೇಡಿ,ಪ್ರಸನ್ನ ……….. ಈ ಪಟ್ಟಿ ಮುಂದುವರಿಯುತ್ತದೆ. ಈಗ ಕಪಿಲ್ ದೇವ್ ,ಸಚಿನ್ ತೆಂಡೂಲ್ಕರ್, ಗಂಗೂಲಿ,ರಾಹುಲ್. ಸೆಹ್ವಾಗ್ , ಯುವರಾಜ್ ಸಿಂಗ್ ಇಲ್ಲದೆ ಇಂಗ್ಲೆಂಡ್ ನಲ್ಲಿ ಭಾರತದ ತಂಡ ಟೆಸ್ಟ್ ಸೀರೀಸ್ ಸೋತರೂ, ಒನ್ ಡೇ ನಲ್ಲಿ ಗೆದ್ದಾಗಿದೆ. ಇನ್ನುಳಿದಿರುವ ಒಂದು ಪಂದ್ಯ ಕೇವಲ ಫಾರ್ಮಾಲಿಟಿಗೋಸ್ಕರ ಅಷ್ಟೇ. ೨೦೧೫ರ ವಿಶ್ವಕಪ್ ಪಂದ್ಯ ತನ್ನ ಒಡಲೊಳಗೆ ಎಂತೆಂತಹ ಪ್ರತಿಭೆ ,ಬದಲಾವಣೆಗಳನ್ನು ಮುಚ್ಚಿಟ್ಟುಕೊಂಡಿದೆಯೋ?. ಇದು ಕೇವಲ ಭಾರತಕ್ಕೆ ಸೀಮಿತವಾದ ವಿದ್ಯಮಾನವಲ್ಲ. ಅದೇ ರೀತಿ ಸಾಹಿತ್ಯ,ಪತ್ರಿಕೋದ್ಯಮ ಮತ್ತಿತರ ಕ್ಷೇತ್ರಗಳಿಗೂ ಅನ್ವಯವಾಗುವಂತಹುದೇ. ಅದರಲ್ಲಿ ಅನುಮಾನವಿಲ್ಲ.

    ಎಂ ಎ ಶ್ರೀರಂಗ

    Reply
  3. Ananda Prasad

    ರಾಜ್ಯದಲ್ಲಿ ಪ್ರಗತಿಪರ ಮನೋಭಾವನೆಯನ್ನು ಬೆಳೆಸುವಲ್ಲಿ ಹಾಗೂ ಮೂಢನಂಬಿಕೆಗಳ ವಿರುದ್ಧ ಗಟ್ಟಿ ಧ್ವನಿಯಾಗಿದ್ದ ಲಂಕೇಶರು ಆರಂಭಿಸಿದ ಪತ್ರಿಕೆ ಅವರ ನಂತರ ಎರಡಾಗಿ ಒಡೆದು ಇಂದ್ರಜಿತ್ ಲಂಕೇಶ್ ಹಾಗೂ ಗೌರಿ ಲಂಕೇಶ್ ಎಂಬ ಸಾರಥ್ಯದಲ್ಲಿ ನಡೆಯುತ್ತಿರುವುದು ಅದರ ಸಾಮರ್ಥ್ಯವನ್ನು ಕುಂದಿಸಿದೆ. ಪತ್ರಿಕೆಯು ಮೊದಲಿನಂತೆ ಪ್ರಭಾವಶಾಲಿಯಾಗಿ ಉಳಿದಿರುವಂತೆ ಕಾಣುವುದಿಲ್ಲ. ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ಈ ಎರಡೂ ಲಂಕೇಶ್ ಪತ್ರಿಕೆಗಳು ಹೆಜ್ಜೆ ಹಾಕದೆ ಹಿಂದೆ ಉಳಿದಿವೆ. ಇಂದು ಮುದ್ರಣ ರೂಪದಲ್ಲಿ ಮಾತ್ರವಲ್ಲದೆ ಅಂತರ್ಜಾಲದಲ್ಲಿಯೂ ಪತ್ರಿಕೆ ಲಭ್ಯವಾಗುವಂತೆ ಮಾಡುವುದು ಪ್ರಪಂಚದಾದ್ಯಂತ ಓದುಗ ವರ್ಗವನ್ನು ಬೆಳೆಸುವ ನಿಟ್ಟಿನಲ್ಲಿ ಅಗತ್ಯ. ಲಂಕೇಶ್ ಪತ್ರಿಕೆಯು ಟ್ಯಾಬ್ಲಾಯ್ಡ್ ರೂಪದ ಪತ್ರಿಕೋದ್ಯಮವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸಿದ ಮುಂಚೂಣಿ ಪತ್ರಿಕೆಯಾದರೂ ಅಂತರ್ಜಾಲದಲ್ಲಿ ಹೆಜ್ಜೆ ಗುರುತು ಮೂಡಿಸುವುದರಲ್ಲಿ ಹಿಂದೆ ಬಿದ್ದಿದೆ. ಹತ್ತು ವರ್ಷಗಳ ಹಿಂದೆ ಆರಂಭವಾದ ಮಹಾದೇವ ಪ್ರಕಾಶ್ ಸಂಪಾದಕತ್ವದ ‘ಈ ಭಾನುವಾರ’ ವಾರಪತ್ರಿಕೆ ಹಾಗೂ ಹದಿನಾರು ವರ್ಷಗಳ ಹಿಂದೆ ಆರಂಭವಾದ ಅಗ್ನಿ ಶ್ರೀಧರ್ ನೇತೃತ್ವದಲ್ಲಿ ಆರಂಭವಾದ ‘ಅಗ್ನಿ’ ವಾರಪತ್ರಿಕೆ ಈಗಾಗಲೇ ಅಂತರ್ಜಾಲದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿವೆ ಹಾಗೂ ಉಚಿತವಾಗಿ ಲಭ್ಯ ಇವೆ (bhanuvara.com ಹಾಗೂ agniweekly.com). ಲಂಕೇಶ್ ಪತ್ರಿಕೆಗಳು ಕೂಡ ಇದೇ ರೀತಿ ಅಂತರ್ಜಾಲದಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಬೇಕಾಗಿದೆ ಹಾಗೂ ಪ್ರಗತಿಪರ ಕನ್ನಡ ಮನಸ್ಸುಗಳನ್ನು ರೂಪಿಸುವಲ್ಲಿ ಗಮನಹರಿಸಬೇಕಾಗಿದೆ. ಇದನ್ನು ಅಂತರ್ಜಾಲದಲ್ಲಿ ಉಚಿತವಾಗಿ ನೀಡಲು ಸಾಧ್ಯವಾಗದಿದ್ದರೆ ಹಣ ಪಡೆದು (ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ) ಓದುಗರಿಗೆ ತಮಗೆ ಬೇಕಾದ ಸಂಚಿಕೆಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಸಾಧ್ಯವಾಗುವಂತೆ ಮಾಡಲು ಸಾಧ್ಯವಿದೆ. ಇಂಟರ್ನೆಟ್ ಪ್ರತಿಗಳನ್ನು ಮುದ್ರಿತ ಪ್ರತಿಗಿಂತ ಬಹಳಷ್ಟು ಕಡಿಮೆ ಬೆಲೆಗೆ ನೀಡಲು ಸಾಧ್ಯವಿದೆ ಏಕೆಂದರೆ ಇಂಟರ್ನೆಟ್ ಪ್ರತಿಯಲ್ಲಿ ಮುದ್ರಣ ಕಾಗದದ ವೆಚ್ಚ, ಮುದ್ರಿಸುವ ವೆಚ್ಚ, ಪತ್ರಿಕೆ ವಿತರಿಸುವ ಏಜೆಂಟರ ವೆಚ್ಚ ಇರುವುದಿಲ್ಲ. ಕನ್ನಡದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಲಂಕೇಶ್ ಪತ್ರಿಕೆಯ ಈಗಿನ ಪೀಳಿಗೆ ಈ ಬಗ್ಗೆ ಈ ಮೊದಲೇ ಗಮನ ಹರಿಸಬೇಕಾಗಿತ್ತು. ಈಗಿನ ಪೀಳಿಗೆಯ ಓದುಗರನ್ನು ಸೆಳೆಯಲು ಪತ್ರಿಕೆಯ ಅಂತರ್ಜಾಲದಲ್ಲಿ ಸಿಗುವಂತೆ ಮಾಡುವುದು ಬಹಳ ಮುಖ್ಯ. ಈ ಬಗ್ಗೆ ಲಂಕೇಶರ ಈಗಿನ ಪೀಳಿಗೆಯ ಉದಾಸೀನ ಒಳ್ಳೆಯದಲ್ಲ ಎಂದಷ್ಟೇ ಹೇಳಬಹುದು.

    Reply
    1. Nagshetty Shetkar

      ಇಡೀ ನಾಡಿನ ಅಬ್ರಾಹ್ಮಣರ ಕಣ್ಣು ತೆರೆಸಿದ ಮಹಾತ್ಮ ನಮ್ಮ ಲಂಕೇಶಪ್ಪ. ಆದರೆ ಬಸವಧರ್ಮದ ಸಂಸ್ಕಾರಗಳನ್ನು ತಮ್ಮ ಮಕ್ಕಳಾದ ಗೌರಿ, ಕವಿತಾ, ಇಂದ್ರಜಿತ್ ಗಳಿಗೆ ಕೊಡದೇ ಹೋಗಿದ್ದು ಲಂಕೇಶ್ ಮಾಡಿದ ದೊಡ್ಡ ತಪ್ಪು. ತಂದೆಯ ಸಾಧನೆಗಳನ್ನೇ ಬಂಡವಾಳ ಮಾಡಿಕೊಂಡು ಬಂಡವಾಳಶಾಹಿಗಳಾಗಿದ್ದು ಲಂಕೇಶ್ ಮಕ್ಕಳ ಏಕೈಕ ಹೆಗ್ಗಳಿಕೆ. ಬಸವಧರ್ಮದಿಂದ ದೂರ ಸರಿದಷ್ಟೂ ಇವರ ವೈಯಕ್ತಿಕ ಹಿತಾಸಕ್ತಿಗಳಿಗೆ ಲಂಕೇಶ್ ಪತ್ರಿಕೆಯ ಲೆಗಸಿ ಬಲಿಯಾಯಿತು. ಲಂಕೇಶ್ ಮಕ್ಕಳು ಖಂಡಿತ ಲಂಕೇಶ್ ಅವರ ಮಾನಸ ಪುತ್ರರಲ್ಲ. ಬಹುಶ ದರ್ಗಾ ಸರ್, ಶೂದ್ರ ಶ್ರೀನಿವಾಸ, ಮೊದಲಾದವರು ಲಂಕೇಶ್ ತತ್ವಗಳನ್ನು ಅಳವಡಿಸಿಕೊಂದಷ್ಟು ಯಾರೂ ಅಳವಡಿಸಿಕೊಂದಿಲ್ಲ.

      Reply
      1. Nagshetty Shetkar

        “ಲಂಕೇಶ್ ಮಕ್ಕಳು ಖಂಡಿತ ಲಂಕೇಶ್ ಅವರ ಮಾನಸ ಪುತ್ರರಲ್ಲ. ಬಹುಶ ದರ್ಗಾ ಸರ್, ಶೂದ್ರ ಶ್ರೀನಿವಾಸ, ಮೊದಲಾದವರು ಲಂಕೇಶ್ ತತ್ವಗಳನ್ನು ಅಳವಡಿಸಿಕೊಂದಷ್ಟು ಯಾರೂ ಅಳವಡಿಸಿಕೊಂದಿಲ್ಲ.”

        ತಿದ್ದುಪಡಿ:

        ಲಂಕೇಶ್ ಮಕ್ಕಳು ಖಂಡಿತ ಲಂಕೇಶ್ ಅವರ ಮಾನಸ ಪುತ್ರರಲ್ಲ. ಬಹುಶ ದರ್ಗಾ ಸರ್, ಶೂದ್ರ ಶ್ರೀನಿವಾಸ, ಮೊದಲಾದವರು ಲಂಕೇಶ್ ತತ್ವಗಳನ್ನು ಅಳವಡಿಸಿಕೊಂದಷ್ಟು ಇವರು ಯಾರೂ ಅಳವಡಿಸಿಕೊಂಡಿಲ್ಲ.

        Reply
  4. Nagshetty Shetkar

    “ಬಸವನ ಹೆಸರು ಬಳಸಿಕೊಂಡು ಪ್ರತಿಷ್ಟೆ ಮೆರೆಯುವವರಿಗಿಂತಾ ಇವರು ಭಿನ್ನವಾಗಿ ಕಾಣುವದಿಲ್ಲ. ನಡೆ-ನುಡಿಯ ನಡುವೆ ಅಪಾರ ಅಂತರವಿದ್ದರೂ ತತ್ವ, ಸಿದ್ಧಾಂತ, ಬದ್ಧತೆ ಎನ್ನುವ ಬೂಸಾತನ ಮಾತ್ರ ಇವರು ಬಿಡುವದಿಲ್ಲ. ಇವರು ನಿಜವಾಗಿಯೂ ಲಂಕೇಶರಂಥವರ ಪಾಲಿಗೆ ಕಳಂಕಿತರು.’

    ಜೋಗುರ ಅವರೇ, ನಿಮ್ಮ ಈ ಸಾಲುಗಳು ಬಹಳ ಅಪಾಯಕಾರಿಯಾಗಿ ನನಗೆ ಕಂಡಿವೆ. ಇಂತಹ ಬೀಸು ಹೇಳಿಕೆಗಳಿಂದ ನೀವು ಧ್ವಂಸ ಮಾಡ ಹೊರಟಿರುವುದು ಯಾವುದನ್ನು? ಬಸವನ ಹೆಸರು ಬಳಸಿಕೊಂಡು ಪ್ರತಿಷ್ಠೆ ಮೆರೆಯುತ್ತಿರುವವರು ಯಾರು? ಅವರ ಹೆಸರನ್ನು ಹೇಳಿ ಅವರನ್ನು ಟೀಕಿಸಿ. ಅದು ಬಿಟ್ಟು ಬೀಸು ಹೇಳಿಕೆಗಳಿಂದ ಮುಸುಕಿನ ಯುದ್ಧ ನಡೆಸುವ ಈ ಯತ್ನ ನಾಚಿಕೆಗೇಡು. ಬಸವಾದ್ವೈತಕ್ಕೆ ನಿಷ್ಠರಾಗಿದ್ದು ವಚನಾಮೃತವನ್ನು ನಾಡಿನ ಸಮಸ್ತ ಶೋಷಿತರಿಗೆ ಹಂಚುತ್ತಿರುವ ಮಹನೀಯರ ಹೆಸರಿಗೆ ಕಪ್ಪು ಮಸಿ ಎರಚುವ ಕೆಲಸ ಬಿಡಿ.

    Reply

Leave a Reply to Nagshetty Shetkar Cancel reply

Your email address will not be published. Required fields are marked *