Daily Archives: January 8, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ-2)

-ಡಾ. ಎನ್. ಜಗದೀಶ್ ಕೊಪ್ಪ

ಜಿಮ್ ಕಾರ್ಬೆಟ್‌ ಭಾರತದಲ್ಲಿ ಹುಟ್ಟಿ ಅಪ್ಪಟ ಭಾರತೀಯನಂತೆ ಬದುಕಿದ. ಇಲ್ಲಿನ ಗ್ರಾಮೀಣ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಕಾರ್ಬೆಟ್‌ ಹಿಂದಿ ಒಳಗೊಂಡಂತೆ ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಈತನ ಪೂರ್ವಿಕರು ಇಂಗ್ಲೆಂಡ್‌ನ ಆಳ್ವಿಕೆಯಲ್ಲಿದ್ದ ಐರ್ಲೆಂಡ್ ದೇಶದಿಂದ ಸಿಪಾಯಿ ದಂಗೆಗೆ ಮುನ್ನ ಭಾರತದಲ್ಲಿದ್ದ ಬ್ರಿಟಿಷರ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಬಂದವರು.

ಅದು 18ನೇ ಶತಮಾನದ ಅಂತ್ಯದ ಕಾಲ. ಆಗತಾನೆ ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಯತ್ತ ಹೆಜ್ಜೆ ಇಡುತಿತ್ತು. ಅಂದಿನ ದಿನಗಳಲ್ಲಿ ಇಂಗ್ಲೆಂಡ್ ಸೇರಿದಂತೆ ಐರ್ಲೆಂಡ್ ದೇಶದಲ್ಲಿ ಜನಸಾಮಾನ್ಯರು ಬದುಕುವುದು ದುಸ್ತರವಾಗಿತ್ತು. ಇದೇ ವೇಳೆಗೆ ಜಗತ್ತಿನಾದ್ಯಂತ ಇಂಗ್ಲೆಂಡ್ ಸಾಮ್ರಾಜ್ಯ ವಿಸ್ತರಿಸುತಿತ್ತು. ಬ್ರಿಟಿಷ್ ವಸಾಹತುಶಾಹಿ ಪ್ರದೇಶಗಳಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಜೊತೆ ಸಂವಹನದ ಕೊರತೆ ಇದ್ದ ಕಾರಣ ಬ್ರಿಟಿಷರು ಬಹುತೇಕ ಜವಾಬ್ದಾರಿ ಹುದ್ದೆಗಳಿಂದ ಹಿಡಿದು, ಸೈನಿಕ ವೃತ್ತಿಗೂ ತಮ್ಮವರನ್ನೇ ನೇಮಕ ಮಾಡಿಕೊಳ್ಳುತ್ತಿದರು. ಜೊತೆಗೆ ತಮ್ಮ ವಸಾಹತು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳಿಗೆ ತಮ್ಮ ಜನರನ್ನು ಪ್ರೊತ್ಸಾಹಿಸುತಿದ್ದರು. ಹಿಗಾಗಿಯೇ ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಬ್ರಿಟಿಷರು ನೆಲೆಯೂರಲು ಸಾಧ್ಯವಾಯಿತು.

ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಭ್ರಮೆಯಲ್ಲಿ ಓಲಾಡುತಿದ್ದ ಇಂಗ್ಲೆಂಡ್ ಮತ್ತು ಅಲ್ಲಿನ ಜನತಗೆ ತಾವು ಹುಟ್ಟಿರುವುದು ಜಗತ್ತನ್ನು ಆಳುವುದಕ್ಕೆ ಎಂಬ ನಂಬಿಕೆಯಿತ್ತು. ತಾವು ಈ ನೆಲದ ಮೇಲಿನ ದೊರೆಗಳು, ಉಳಿದವರು ನಮ್ಮ ಸೇವೆ ಮಾಡುವುದಕ್ಕಾಗಿ ಹುಟ್ಟಿದ ಸಂಸ್ಕೃತಿಯಿಲ್ಲದ ಗುಲಾಮರು ಎಂಬ ಭ್ರಮೆ ಅವರಲ್ಲಿ ಬಲವಾಗಿ ಬೇರೂರಿತ್ತು.

ಇಂತಹದ್ದೇ ಸಂದರ್ಭದಲ್ಲಿ ಕಾರ್ಬೆಟ್‌ನ ತಾತ ಹಾಗೂ ಅಜ್ಜಿ ಜೊಸೆಪ್ ಮತ್ತು ಹ್ಯಾರಿಯೆಟ್ ಎಂಬುವರು 1814ರ ಜುಲೈ 26ರಂದು ಐರ್ಲೆಡಿನಿಂದ ರಾಯಲ್ ಜಾರ್ಜ್ ಎಂಬ ಹಡಗಿನ ಮೂಲಕ ಪ್ರಯಾಣ ಆರಂಭಿಸಿ, 1815ರ ಪೆಬ್ರವರಿ 7 ರಂದು ಭಾರತದ ನೆಲಕ್ಕೆ ಕಾಲಿಟ್ಟರು. ಬರುವಾಗಲೇ ಈ ಯುವ ದಂಪತಿಗಳಿಗೆ ಒಂದು ವರ್ಷದ ಎಲಿಜಾ ಎಂಬ ಹೆಣ್ಣು ಮಗುವಿತ್ತು. 1796 ರಲ್ಲಿ ಐರ್ಲೆಂಡಿನ ಬೆಲ್ಫಾಸ್ಟ್ ನಗರದಲ್ಲಿ ಜನಿಸಿದ್ದ ಜೋಸೆಪ್ ಅಲ್ಲಿ ಕೆಲ ಕಾಲ ಕ್ರೈಸ್ತ ಸನ್ಯಾಸಿಯಾಗಿ ಕಾರ್ಯ ನಿರ್ವಹಿಸಿದ್ದ. ಅವನು ತನ್ನ ಪತ್ನಿ ಹ್ಯಾರಿಯೆಟ್ ಜೊತೆ ಐರ್ಲೆಂಡ್ ತೊರೆಯುವ ಮುನ್ನವೇ ಅಂದರೆ 1814 ಜೂನ್ 15 ರಂದು ಭಾರತದ ಬ್ರಿಟಿಷ್ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಉದ್ಯೋಗ ಪತ್ರ ಪಡೆದುಕೊಂಡಿದ್ದರಿಂದ ಇಲ್ಲಿಗೆ ನೇರವಾಗಿ ಬಂದವನೇ ಸೇನೆಯಲ್ಲಿ ಸೇರ್ಪಡೆಯಾದ. ಕೇವಲ ಎರಡು ವರ್ಷಗಳಲ್ಲಿ ಭಡ್ತಿ ಪಡೆದು, ಅಶ್ವರೋಹಿ ಪಡೆಗೆ ವರ್ಗವಾಗಿ ಮೀರತ್ ನಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸುತಿದ್ದಾಗಲೇ ತನ್ನ 33ನೇ ವಯಸ್ಸಿನಲ್ಲಿ ಅಂದರೆ, 1830ರ ಮಾಚ 28ರಂದು ಅಸುನೀಗಿದ. ಈ ವೇಳೆಗಾಗಲೇ ಜೋಸೆಪ್ ಮತ್ತು ಹ್ಯಾರಿಯೆಟ್ ದಂಪತಿಗಳಿಗೆ ಒಂಬತ್ತು ಮಂದಿ ಮಕ್ಕಳಿದ್ದರು. ಇವರಲ್ಲಿ ಆರನೇಯವನಾಗಿ 1822ರಲ್ಲಿ ಮೀರತ್ ನಲ್ಲಿ ಜನಿಸಿದವನು ಕ್ರಿಸ್ಟೋಪರ್ ವಿಲಿಯಮ್ ( ಜಿಮ್ ಕಾರ್ಬೆಟ್‌ ತಂದೆ).

ಈತ ಕೂಡ ತಂದೆಯಂತೆ ಸೇನೆಯಲ್ಲಿ ವೈದ್ಯಕೀಯ ಚಿಕಿತ್ಸಕನ ಸಹಾಯಕನಾಗಿ ಸೇರ್ಪಡೆಯಾಗಿ ಮಸ್ಸೂರಿಯಲ್ಲಿ ಕಾರ್ಯನರ್ವಹಿಸುತಿದ್ದ. ತನ್ನ 20 ನೇ ವಯಸ್ಸಿಗೆ ಉಪ ಶಸ್ತ್ರಚಿಕಿತ್ಸಕನಾಗಿ ಭಡ್ತಿ ಪಡೆದು ಆಘ್ಪಾನಿಸ್ಥಾನದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ, ಸ್ಥಳೀಯ ಬುಡಕಟ್ಟು ಜನಾಂಗದೊಡನೆ ಬ್ರಿಟಿಷರು ನಡೆಸಿದ ಯುದ್ಧದಲ್ಲಿ ಪಾಲ್ಗೊಂಡು ತನ್ನ ಸೇವೆಗಾಗಿ ಪದಕವನ್ನೂ ಪಡೆದ. ಯುದ್ದ ಮುಗಿದ ಬಳಿಕ ಕ್ರಿಸ್ಟೋಪರ್ ವಿಲಿಯಮ್‌ನನ್ನು ಸರ್ಕಾರ ಮಸ್ಸೂರಿ ಬಳಿಯ ಡೆಹರಾಡೂನ್‌ಗೆ ವರ್ಗಾವಣೆ ಮಾಡಿತು. ಈ ವೇಳೆಯಲ್ಲಿ ಅಂದರೆ, 1845 ರಲ್ಲಿ ಮಸ್ಸೂರಿಯಲ್ಲಿ ಬೇಟಿಯಾದ ಮೇರಿ ಆನ್ನ್‌ಳನ್ನು ಮೊದಲ ನೋಟದಲ್ಲೇ ಮೋಹಗೊಂಡು ಪ್ರೀತಿಸಿ ಡಿಸೆಂಬರ್ 19 ರಂದು ಮದುವೆಯಾದ. ಅವನ ಮಧುಚಂದ್ರ ಮುಗಿಯುವುದರೊಳಗೆ ಬ್ರಿಟಿಷ್ ಸೇನೆ ಅವನನ್ನು ಮತ್ತೇ ಪಂಜಾಬ್‌ಗೆ ವರ್ಗ ಮಾಡಿತು. ಅಲ್ಲಿ ಸಿಖ್ಖರೊಡನೆ ನಡೆಯುತಿದ್ದ ಸಂಘರ್ಷದಲ್ಲಿ ಹಲವಾರು ಸೈನಿಕರು ಗಾಯಗೊಂಡ ಕಾರಣ ಕ್ರಿಸ್ಟೋಪರ್ ಸೇವೆ ಅಲ್ಲಿ ಅಗತ್ಯವಾಗಿತ್ತು. ಈತನನ್ನು 18ನೇ ವಯಸ್ಸಿಗೆ ಮದುವೆಯಾಗಿದ್ದ ಮೇರಿ ಆನ್ನ್ ಎರಡು ಮಕ್ಕಳಿಗೆ ಜನ್ಮ ನೀಡಿ ತನ್ನ 20ನೇ ವಯಸ್ಸಿಗೆ ಆಕಸ್ಮಿಕವಾಗಿ ಮರಣ ಹೊಂದಿದಳು. ತನ್ನ ಎರಡು ಮಕ್ಕಳೊಂದಿಗೆ ಪಂಜಾಬ್ ಬಂಗಾಳ ದೆಹಲಿ ಮುಂತಾದ ಕಡೆ ಕಾರ್ಯನಿರ್ವಹಿಸಿ, 1857ರಲ್ಲಿ ನಡೆದ ಸಿಪಾಯಿ ದಂಗೆ ಯುದ್ಧದಲ್ಲಿ ಬ್ರಿಟಿಷ್ ಸೇನೆ ಪರ ಶೌರ್ಯ ಪ್ರದರ್ಶಿಸಿ ಪದಕಗಳನ್ನು ಪಡೆದ ಕ್ರಿಸ್ಟೋಪರ್ 1858ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು,1959ರಲ್ಲಿ ಮಸ್ಸೂರಿಯ ಅಂಚೆ ಇಲಾಖೆಗೆ ಪೊಸ್ಟ್ ಮಾಸ್ಠರ್ ಆಗಿ ಸೇರ್ಪಡೆಗೊಂಡ. ಅಲ್ಲಿನ ಚರ್ಚ್ ಒಂದರ ಸಮಾರಂಭದಲ್ಲಿ ಬೇಟಿಯಾದ ನಾಲ್ಕು ಮಕ್ಕಳ ತಾಯಿ ಹಾಗೂ ವಿಧವೆ ಮೇರಿ ಜೇನ್‌ ಡೋಯಲ್‌ಳನ್ನು ಮರು ವಿವಾಹವಾದ. ಈ ವೇಳೆಗೆ ಕ್ರಿಸ್ಟೋಪರ್ ವಿಲಿಯಮ್‌ಗೆ ಇಬ್ಬರು, ಆಕೆಗೆ ನಾಲ್ವರು ಒಟ್ಟು ಆರು ಮಕ್ಕಳಿದ್ದರು. (ಇವರಲ್ಲಿ ಆಕೆಯ ಮೂರು ಮಕ್ಕಳು ಅಸು ನೀಗಿ ಏಕೈಕ ಹೆಣ್ಣು ಮಾತ್ರ ಉಳಿಯಿತು.)

ಮೇರಿ ಜೇನ್ ಡೊಯಲ್‌ಳದು ಒಂದು ರೀತಿ ಹೋರಾಟದ ಬದುಕು. ತನ್ನ 14ನೇ ವಯಸ್ಸಿಗೆ ಮಿಲಿಟರಿಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತಿದ್ದ ಡಾ. ಚಾರ್ಲ್ಸ್ ಜೇಮ್ಸ್ ಎಂಬಾತನ ಜೊತೆ ವಿವಾಹವಾಗಿ ಆಗ್ರಾ ನಗರದಲ್ಲಿ ನೆಮ್ಮದಿಯ ಜೀವನ ನಡೆಸುತಿದ್ದಳು.1857ರಲ್ಲಿ ಸಂಭವಿಸಿದ ಸಿಪಾಯಿ ದಂಗೆ ಹೋರಾಟದ ಸಮಯದಲ್ಲಿ ದೆಹಲಿಯಲ್ಲಿ ಭಾರತೀಯರು ನಡೆಸಿದ ಬ್ರಿಟಿಷರ ನರಮೇಧದಿಂದ ಎಚ್ಚೆತ್ತುಕೊಂಡ ಆಗ್ರಾ ಬ್ರಿಟಿಷರ ಸೇನೆ ತಮ್ಮ ಹೆಂಗಸರು ಮತ್ತು ಮಕ್ಕಳನ್ನು ಕೋಟೆಯೊಳೆಗೆ ಸುರಕ್ಷಿತ ಜಾಗದಲ್ಲಿರಿಸಿ ಭಾರತೀಯ ಸಿಪಾಯಿಗಳ ಜೊತೆ ಹೋರಾಟ ನಡೆಸಿತು. ಈ ಸಮಯದಲ್ಲಿ ಸೇನಾ ತುಕಡಿಯ ಕಮಾಂಡರ್ ಆಗಿದ್ದ ಈಕೆಯ ಪತಿ ಡಾ. ಚಾರ್ಲ್ಸ್ ಜೇಮ್ಸ್ ಭಾರತೀಯರ ಧಾಳಿಗೆ ತುತ್ತಾಗಿ ಅಸುನೀಗಿದ. ಈ ವೇಳೆಯಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಮೇರಿ ತನ್ನ ಮಕ್ಕಳೊಂದಿಗೆ ಸೀರೆಯ ಸಹಾಯದಿಂದ ಆಗ್ರಾ ಕೋಟೆಯನ್ನು ಹಾರಿ ಯಮುನಾ ನದಿ ತೀರದುದ್ದಕ್ಕೂ ನಡೆದು, ನಂತರ ಯುರೋಪಿಯನ್ ಮಹಿಳೆಯರೊಂದಿಗೆ ಭಾರತದ ಸಿಪಾಯಿಗಳ ದಾಳಿಗೆ ಸಿಲುಕದೆ, ಕಾಲು ನಡಿಗೆಯಲ್ಲಿ ಬ್ರಿಟಿಷರ ಸುರಕ್ಷಿತ ಸ್ಥಳವಾದ ಮಸ್ಸೂರಿ ತಲುಪಿದ ದಿಟ್ಟ ಹೆಂಗಸು ಆಕೆ.

ಮೇರಿ ಕ್ರಿಸ್ಟೋಪರ್‌ನನ್ನು ಮದುವೆಯಾಗುವವರೆಗೂ ಬ್ರಿಟಿಷ್ ಸರ್ಕಾರ ತನ್ನ ಮೃತ ಗಂಡನಿಗೆ ನೀಡುತಿದ್ದ ಜೀವನಾಂಶದಲ್ಲಿ ತನ್ನ ಮಕ್ಕಳೊಂದಿಗೆ ಮಸ್ಸೂರಿಯಲ್ಲಿ ಬದುಕು ದೂಡುತಿದ್ದಳು.

ಈ ಇಬ್ಬರೂ ಮರು ವಿವಾಹವಾದ ನಂತರ ದಂಪತಿಗಳು ಎರಡು ವರ್ಷ ಮಸ್ಸೂರಿಯಲ್ಲಿದ್ದರು. ನಂತರ 1862ರಲ್ಲಿ ಕ್ರಿಸ್ಟೋಪರ್ ವಿಲಿಯಮ್ಸ್ ಶಾಶ್ವತವಾಗಿ ನೈನಿತಾಲ್ ಗಿರಿಧಾಮದ ಅಂಚೆಕಚೇರಿಗೆ ವರ್ಗವಾದ ಕಾರಣ ಕಾರ್ಬೆಟ್ ಕುಟುಂಬ ಇಲ್ಲಿ ನೆಲೆಯೂರಲು ಸಾಧ್ಯವಾಯಿತು. ಇವರು ನೈನಿತಾಲ್‌ಗೆ ಬಂದಾಗ ಈ ಗಿರಿಧಾಮ ಆಗ ತಾನೆ ಹೊರಜಗತ್ತಿಗೆ ತನ್ನನ್ನು ತಾನು ತೆರೆದುಕೊಳ್ಳುತಿತ್ತು.

ಕುಮಾವನ್ ಪರ್ವತಗಳ ಶ್ರೇಣಿಗಳ ನಡುವೆ 6800 ಅಡಿ ಎತ್ತರದಲ್ಲಿ ಇದ್ದ ನೈನಿ ಎಂಬ ಪರಿಶುದ್ಧ ತಿಳಿನೀರಿನ ಸರೋವರವನ್ನು ಕಂಡುಹಿಡಿದ ಕೀರ್ತಿ ಬ್ರಿಟಿಷ್ ವರ್ತಕ ಬ್ಯಾರನ್ ಎಂಬಾತನದು. ಶಹಜಾನ್ಪುರದಲ್ಲಿ ವರ್ತಕನಾಗಿದ್ದ ಈತನಿಗೆ ಬಿಡುವು ಸಿಕ್ಕಾಗಲೆಲ್ಲಾ ಗುಡ್ಡ ಕಣಿವೆಗಳನ್ನು ಹತ್ತಿ ಇಳಿಯುವ ಹವ್ಯಾಸ. 1841ರಲ್ಲಿ ಒಮ್ಮೆ ಅಲ್ಮೋರ ಬಳಿಯ ಕೋಸಿ ನದಿ ತೀರದ ಕಣಿವೆಯಲ್ಲಿ ಅಡ್ಡಾಡುತಿದ್ದಾಗ ಎತ್ತರದ ಪರ್ವತವನ್ನೇರಿ ಈ ಸರೋವರವನ್ನು ಗುರುತಿಸಿದ. ಮತ್ತೊಮ್ಮೆ ಸೇನೆಯ ಇಂಜಿನೀಯರ್ ಕ್ಯಾಪ್ಟನ್ ವೆಲ್ಲರ್ ಹಾಗೂ ಕುಮಾವನ್ ಪ್ರಾಂತ್ಯದ ಅಧಿಕಾರಿ ಲುಷಿಂಗ್ಟನ್ ಇವರನ್ನ ಕರೆದೊಯ್ದು ಅವರಿಗೆ ಬೇಸಿಗೆಯಲ್ಲಿ ಯುರೋಪಿಯನ್ನರು ವಾಸಿಸಲು ಇದು ಪ್ರಶಸ್ತವಾದ ಸ್ಥಳ ಎಂದು ಮನದಟ್ಟು ಮಾಡಿಕೊಟ್ಟ.

1842 ರಲ್ಲಿ ಅಧಿಕಾರಿ ಲುಷಿಂಗ್ಟನ್ ಅಲ್ಲಿನ ಜಾಗವನ್ನು ಗುರುತಿಸಿ, ವಾಸಸ್ಥಳದ ರೂಪುರೇಷೆಗಳನ್ನು ವಿನ್ಯಾಸಗೊಳಿಸಿದ. ವಾಸಸ್ಥಳಕ್ಕಾಗಿ ಗುರುತಿಸಿದ ಸ್ಥಳಗಳನ್ನು ಈ ಗಿರಿಧಾಮದಲ್ಲಿ ವಾಸಿಸಲು ಬರುವವರಿಗೆ (ಬ್ರಿಟಿಷರಿಗೆ ಮಾತ್ರ) ಎಕರೆಗೆ 12 ಆಣೆಗಳಂತೆ ( ಮುಕ್ಕಾಲು ರೂಪಾಯಿ ಅಂದರೆ ಈಗಿನ 75 ಪೈಸೆ) ಮಾರಲಾಯಿತು. ಈ ಸ್ಥಳವನ್ನು ಕಂಡು ಹಿಡಿದ ಬ್ಯಾರನ್ ತಾನೂ ಜಮೀನು ಖರೀದಿಸಿ ಅಲ್ಲಿ ಪ್ರವಾಸಿಗರಿಗಾಗಿ ವಸತಿಗೃಹ ಪ್ರಾರಂಭಿಸಿದ. ಕೇವಲ 10 ವರ್ಷಗಳಲ್ಲಿ ಈ ಗಿರಿಧಾಮ ಯುರೋಪಿಯನ್ನರ ಮೆಚ್ಚಿನ ತಾಣವಾಯಿತು. 1857ರ ಸಿಪಾಯಿ ದಂಗೆಯ ಸಮಯದಲ್ಲೂ ಕೂಡ ಸುರಕ್ಷಿತವಾಗಿದ್ದ ಕಾರಣ, ಸಮೀಪದ ರಾಮ್‌ಪುರ್, ಮುರದಾಬಾದ್,  ರಾಯ್‌ಬರೇಲಿ ಮುಂತಾದ ಊರುಗಳಲ್ಲಿ ವಾಸವಾಗಿದ್ದ ಬ್ರಿಟಿಷರು ಇಲ್ಲಿಗೆ ಬರಲು ಆರಂಭಿಸಿದರು.

1862ರಲ್ಲಿ ಜಿಮ್ ಕಾರ್ಬೆಟ್ ತಂದೆ ಕ್ರಿಸ್ಟೋಪರ್ ವಿಲಿಯಮ್ಸ್ ಹಾಗೂ ತಾಯಿ ಮೇರಿಜನ್ ಡೊಯಲ್ ನೈನಿತಾಲ್ ಬರುವ ವೇಳೆಗೆ ಅದು ಪ್ರವಾಸ ತಾಣ ಪಟ್ಟಣವಾಗಿ ರೂಪುಗೊಂಡಿತ್ತು. ಪಾರಂಭದಲ್ಲಿ ಮಲ್ಲಿ ಎಂಬ ಸರೋವರದ ಬಳಿ ಬಾಡಿಗೆ ಮನೆಯಲ್ಲಿದ್ದು ನಂತರ ತಾವು ಕೂಡ ಒಂದು ನಿವೇಶನ ಖರೀದಿಸಿ ಸ್ವಂತ ಮನೆ ಮಾಡಿಕೊಂಡರು. ಕ್ರಿಸ್ಟೋಪರ್ ವಿಲಿಯಮ್ಸ್ ಪೋಸ್ಟ್ ಮಾಸ್ಟರ್ ಆಗಿದ್ದ ಕಾರಣ ಎಲ್ಲರ ಜೊತೆ ನಿಕಟ ಸಂಬಂಧ ಹೊಂದಿದ್ದ. ಜೊತೆಗೆ ನಿವೃತ್ತ ಸೇನಾಧಿಕಾರಿಯಾಗಿದ್ದ. ಆತ ಆಗಿನ ಜಿಲ್ಲಾಧಿಕಾರಿ ಸರ್ ಹೆನ್ರಿ ರಾಮ್ಸೆ ಅವರ ಮನವೊಲಿಸಿ ನೈನಿತಾಲ್ ತಪ್ಪಲಿನ ಚೋಟ ಹಲ್ದಾನಿ ಮತ್ತು ಕಲದೊಂಗಿ ಹಳ್ಳಿಗಳ ನಡುವೆ 10 ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡ. ನೈನಿತಾಲ್ ಬೇಸಿಗೆಗೆ ಹೇಳಿ ಮಾಡಿಸಿದ ಪ್ರಶಸ್ತ ಸ್ಥಳವಾದರೂ, ಚಳಿಗಾಲದ ನವೆಂಬರ್‌ನಿಂದ ಫೆಬ್ರವರಿವರೆಗೆ ಅಲ್ಲಿ ಚಳಿ ತಡೆಯಲು ಅಸಾಧ್ಯವಾಗಿತ್ತು. ಹಾಗಾಗಿ ಕ್ರಿಸ್ಟೋಪರ್ ತನ್ನ ಕುಟುಂಬದ ಚಳಿಗಾಲಕ್ಕಾಗಿ ಕಲದೊಂಗಿಯಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡ.

1860 ಕ್ಕೂ ಮುನ್ನವೆ ಈ ಎರಡು ಹಳ್ಳಿಗಳು ಅಸ್ತಿತ್ವದಲ್ಲಿದ್ದವು. ಸುತ್ತ ಮುತ್ತಲಿನ ಅರಣ್ಯ ಪ್ರದೇಶದಿಂದ ಆವರಿಸಿಕೊಂಡಿದ್ದ ಈ ಹಳ್ಳಿಗಳು ಮಲೇರಿಯಾ ಸೊಳ್ಳೆಗಳ ವಾಸಸ್ಥಾನವಾಗಿದ್ದವು. ಆದರೂ ಕೂಡ ಚಳಿಗಾಲದ ವಾಸಕ್ಕೆ ಕಲದೊಂಗಿ ಹಳ್ಳಿ ಕಾರ್ಬೆಟ್ ಕುಟುಂಬಕ್ಕೆ ಅನಿವಾರ್ಯವಾಗಿತ್ತು.

ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಆಗತಾನೆ ದೇಶದುದ್ದಕ್ಕೂ ರೈಲ್ವೆ ಮಾರ್ಗ ಹಾಕಲು ಆರಂಭಿಸಿತ್ತು. ರೈಲ್ವೆ ಹಳಿಗಳನ್ನು ತಯಾರು ಮಾಡುವ ಇಂಗ್ಲೆಂಡ್ ಮೂಲದ ಡೆವಿಸ್ ಅಂಡ್ ಕೋ ಎಂಬ ಕಂಪನಿ ಈ ಹಳ್ಳಿಯಲ್ಲೇ ಕಬ್ಬಿಣದ ಹಳಿಗಳನ್ನು ತಯಾರು ಮಾಡುತಿತ್ತು. ಕಬ್ಬಿಣದ ಅದಿರನ್ನು ಕಾಯಿಸಲು ಬೇಕಾದ ಮರದ ಇದ್ದಿಲು ತಯಾರು ಮಾಡುವ ಅನೇಕ ಘಟಕಗಳು ಇಲ್ಲಿ ಕಾರ್ಯ ನಿರ್ವಹಿಸುತಿದ್ದವು. ಇದ್ದಿಲು ಸುಡುವುದಕ್ಕಾಗಿ ಮರಗಳನ್ನು ಅಪಾರ ಪ್ರಮಾಣದಲ್ಲಿ ಕಡಿಯುತಿದ್ದರಿಂದ ಮುಂದಿನ ದಿನಗಳಲ್ಲಿ ಈ ಘಟಕಗಳನ್ನು ಮುಚ್ಚಿಹಾಕಲಾಯಿತು. ಅಷ್ಟರ ವೇಳೆಗಾಗಲೆ ಕಲದೊಂಗಿ ಸುತ್ತಮುತ್ತಲಿನ ನಗರಗಳ ಪಾಲಿಗೆ ಸಂಪರ್ಕ ಕೇಂದ್ರವಾಗಿತ್ತು. ರೈಲ್ವೆ ಹಳಿಗಳನ್ನು ಸಾಗಿಸಲು ಬ್ರಿಟಿಷ್ ಸರ್ಕಾರ ಮುರದಾಬಾದ್‌ನಿಂದ ಕಲದೊಂಗಿಯವರೆಗೆ ರೈಲು ಮಾರ್ಗವನ್ನು ಸಹ ನಿರ್ಮಿಸಿತ್ತು. ಆದರೆ ಕಲದೊಂಗಿಯಿಂದ ನೈನಿತಾಲ್‌ಗೆ ಹೋಗಿ ಬರುವ ಮಾರ್ಗ ಮಾತ್ರ ದುರ್ಗಮವಾಗಿತ್ತು. ಹೆಂಗಸರು ಮತ್ತು ಮಕ್ಕಳನ್ನು ಡೋಲಿ ಇಲ್ಲವೆ ಕುದುರೆಯ ಮೇಲೆ ಕೂರಿಸಿ, ಗಂಡಸರು ನಡೆಯಬೇಕಾದ ಸ್ಥಿತಿ. ಜೊತಗೆ ಅರಣ್ಯದ ನಡುವೆ ಹುಲಿ, ಚಿರತೆ ಮತ್ತು ಡಕಾಯಿತರ ಕಾಟ. ಇದರಿಂದ ತಮ್ಮ ಜೊತೆ ಹಲವಾರು ಹಳ್ಳಿಗರನ್ನು ದಿನಗೂಲಿ ಆಧಾರದ ಮೇಲೆ ರಕ್ಷಣೆಗಾಗಿ ತಮ್ಮ ಜೊತೆ ಕರೆದೊಯ್ಯುವುದು ಕಾರ್ಬೆಟ್ ಕುಟುಂಬಕ್ಕೆ ಅನಿವಾರ್ಯವಾಗಿತ್ತು.

1862 ರ ನಂತರ ನೈನಿತಾಲ್‌ನಲ್ಲಿ ಶಾಶ್ವತವಾಗಿ ನೆಲೆ ನಿಂತ ಕ್ರಿಸ್ಟೋಪರ್ ಮತ್ತು ಮೇರಿ ದಂಪತಿಗಳಿಗೆ ತಮ್ಮ ಮರು ವಿವಾಹದ ನಂತರ ಒಂಬತ್ತು ಮಕ್ಕಳು ಜನಿಸಿದರು. ಮೇರಿ ತನ್ನ ಮೊದಲ ಪತಿಯಿಂದ ನಾಲ್ಕು, ಎರಡನೆ ಪತಿ ಕ್ರಿಸ್ಟೋಪರ್‌ನಿಂದ ಒಂಬತ್ತು, ಒಟ್ಟು ಹದಿಮೂರು ಮಕ್ಕಳ ತಾಯಿಯಾದರೆ, ಕಾರ್ಬೆಟ್ ನ ತಂದೆ ಕ್ರಿಸ್ಟೋಪರ್ ತನ್ನ ಮೊದಲ ಪತ್ನಿಯಿಂದ ಎರಡು ಹಾಗೂ ಮೇರಿಯಿಂದ ಪಡೆದ ಒಂಬತ್ತು ಮಕ್ಕಳು ಒಟ್ಟು ಹನ್ನೊಂದು ಮಕ್ಕಳ ತಂದೆಯಾದ. ಇವರಲ್ಲಿ ಮೇರಿಯ ಮೂರು ಮಕ್ಕಳು ಅಕಾಲಿಕ ಮರಣಕ್ಕೆ ತುತ್ತಾದುದರಿಂದ ಹನ್ನೆರಡು ಮಕ್ಕಳ ದೊಡ್ಡ ಕುಟುಂಬ ಇವರದಾಗಿತ್ತು. ಇವರಲ್ಲಿ ನಮ್ಮ ಕಥಾನಾಯಕ ಜಿಮ್ ಕಾರ್ಬೆಟ್ ಎಂಟನೆಯವನು.

ಬಹುತೇಕ ಯುರೋಪಿಯನ್ ಕುಟುಂಬಗಳು ಬ್ರಿಟಿಷ್ ಸರ್ಕಾರದಲ್ಲಿ ತಮ್ಮ ಸೇವಾವಧಿ ಮುಗಿದ ನಂತರ ತಾಯ್ನಾಡಿನ ಸೆಳೆತದಿಂದ ಇಂಗ್ಲೆಂಡ್‌ಗೆ ತೆರಳಿದರೆ, ಕಾರ್ಬೆಟ್ ಕುಟುಂಬ ಮಾತ್ರ ಭಾರತೀಯರಾಗಿ ಬದಕಲು ಇಚ್ಚಿಸಿ ನೈನಿತಾಲ್‌ನಲ್ಲೇ ಉಳಿದುಕೊಂಡಿತು. ಹಾಗಾಗಿ ಜಿಮ್ ಕಾರ್ಬೆಟ್ ನ ವ್ಯಕ್ತಿತ್ವ ಅಪ್ಪಟ ಭಾರತೀಯವಾಗಿ ರೂಪುಗೊಳ್ಳಲು ಕಾರಣವಾಯಿತು.

(ಮುಂದುವರೆಯುವುದು.)

(ಚಿತ್ರಗಳು: ವಿಕಿಪೀಡಿಯ ಮತ್ತು ಲೇಖಕರದು)