Daily Archives: January 22, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 4)


– ಡಾ.ಎನ್.ಜಗದೀಶ ಕೊಪ್ಪ


ಜಿಮ್ ಕಾರ್ಬೆಟ್ ಸ್ವತಂತ್ರವಾಗಿ ನಡೆದಾಡುವಂತಾದ ಮೇಲೆ ಅವನಿಗೆ ನಿಸರ್ಗದ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು. ತನ್ನ ಪಾಲನೆಗಾಗಿ ನೇಮಕ ಮಾಡಿದ್ದ ಸೇವಕಿಯರ ಕಣ್ಣು ತಪ್ಪಿಸಿ ಒಮ್ಮೊಮ್ಮೆ ಮನೆಯಿಂದ ಬಹುದೂರದವರೆಗೆ ನಡೆದು ಹೋಗುತಿದ್ದ. ಇದು ಅವನ ಕುಟುಂಬದವರಿಗೆ ಆತಂಕದ ವಿಷಯವಾಗಿತ್ತು. ಆ ಕಾಲದಲ್ಲಿ ವಿಷಪೂರಿತ ಹಾವುಗಳು, ಮಲೇರಿಯ ಸೊಳ್ಳೆಗಳು ಮನೆಯ ಸುತ್ತಾ ಆವರಿಸಿದ್ದರಿಂದ ಆತನನ್ನು ಹೊರಗೆ ಕಳಿಸಲು ಮನೆಯವರು ಅಂಜುತ್ತಿದ್ದರು.

ಆ ಕಾಲದಲ್ಲಿ ನೈನಿತಾಲ್ ಪರ್ವತ ಪ್ರದೇಶದಲ್ಲಿ ಬೇಸಿಗೆಯಲ್ಲಿ ಎಂಟು ಅಡಿ ಎತ್ತರ ಬೆಳೆಯುತಿದ್ದ ದಟ್ಟವಾದ ಹುಲ್ಲು ಹಾಗೂ ಲಂಟಾನ ಗಿಡಗಳಿಂದ ಅರಣ್ಯ ಪ್ರದೇಶ ಆವೃತ್ತವಾಗಿರುತಿತ್ತು. ಆದರೆ ಚಳಿಗಾಲಕ್ಕೆ ಇವುಗಳು ಮುದುರಿಕೊಂಡು, ಕೇವಲ ದೇವದಾರು, ಓಕ್ ಮರಗಳು ಮಾತ್ರ ಕಾಣಸಿಗುತಿದ್ದವು. ಚಳಿಗಾಲದಲ್ಲಿ ಮರಗಳಿಂದ ಉದುರುವ ಎಲೆಗಳಿಂದಾಗಿ ಅರಣ್ಯ ಭೂಮಿಯಲ್ಲಿ ಹಾಸಿಗೆಯಂತಹ ದಟ್ಟ ಹೊದಿಕೆ ನಿರ್ಮಾಣವಾಗುತಿತ್ತು. ಇವುಗಳ ಅಡಿಯಲ್ಲಿ ಹುಳು ಹುಪ್ಪಟೆಗಳು, ಹಾವುಗಳು ಆಶ್ರಯ ಪಡೆಯುತಿದ್ದ ಕಾರಣ ಜಿಮ್ ಕಾಡಿಗೆ ಹೊರಟಾಗಲೆಲ್ಲಾ ಮನೆಯವರು ಅವನನ್ನು ತಡೆಯುತಿದ್ದರು.

ತಂದೆಯ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಣ್ಣ ಟಾಮ್ ಕಾರ್ಬೆಟ್‌ ಜಿಮ್‌ಗೆ ನಿರಾಸೆಗೊಳಿಸದೆ ಒಮ್ಮೊಮ್ಮೆ ಕಾಡಿಗೆ ಕರೆದೊಯ್ದು ಪ್ರಾಣಿ ಪಕ್ಷಿಗಳನ್ನ ತಮ್ಮನಿಗೆ ಪರಿಚಯಿಸುತಿದ್ದ.

ನೈನಿತಾಲ್ ಗೆ ಹೋಲಿಸಿದರೆ ತಪ್ಪಲಿನ ಕಲದೊಂಗಿಯ ಅರಣ್ಯ ಪ್ರದೇಶ ಸಮತಟ್ಟಾಗಿತ್ತು. ಜೊತೆಗೆ ಆ ಹಳ್ಳಿಯಲ್ಲಿ ಅನೇಕ ಆಂಗ್ಲ ಕುಟುಂಬಗಳು ವಾಸವಾಗಿದ್ದವು. ಇಲ್ಲಿ ನಿವಾಸಿಗಳ ಕೋರಿಕೆಯಂತೆ ಆಗಿನ ಅಧಿಕಾರಿ ರಾಮ್ ಸ್ಸೆ ಎಂಬಾತ ಹಳ್ಳಿಗೆ ಕಾಲುವೆಯೊಂದನ್ನು ನಿರ್ಮಿಸಿಕೊಟ್ಟಿದ್ದ. ಕಲದೊಂಗಿ ಮತ್ತು ಚೋಟಹಲ್ದಾನಿಗೆ ಹೊಂದಿಕೊಂಡಂತೆ ಇದ್ದ ಈ ಕಾಲುವೆಯಲ್ಲಿ ಮಕ್ಕಳು ಈಜಾಟವಾಡುವುದು ಸಾಮಾನ್ಯವಾಗಿತ್ತು. ಅಂತಹ ಸಮಯದಲ್ಲಿ ಹೆಣ್ಣು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗದಂತೆ ಕಾಲುವೆ ದಡದಲ್ಲಿ ಕಾರ್ಬೆಟ್ ಅವರ ಬಟ್ಟೆಗಳ ಸಹಿತ ಹೆಣ್ಣು ಮಕ್ಕಳನ್ನು ಕಾಯುತ್ತಾ ಕೂರುತಿದ್ದ. ನೈನಿತಾಲ್ ಮನೆಗಿಂತ ಕಲದೊಂಗಿಯ ಮನೆಯಲ್ಲಿ ಕಾರ್ಬೆಟ್‌ಗೆ ಹೊರಗೆ ತಿರುಗಾಡಲು ಹೆಚ್ಚಿನ ಸ್ವಾತಂತ್ರ್ಯ ಇತ್ತು. ಕಾಡಿನ ಅಂಚಿನಲ್ಲಿ ಅನೇಕ ಕುಟುಂಬಗಳು ವಾಸಿಸುತ್ತಿದ್ದರಿಂದ ಆ ಪ್ರದೇಶಗಳಿಗೆ ಬೇಟಿ ನೀಡಿ ಅವರ ಆಚಾರ, ವಿಚಾರಗಳನ್ನ ಕುತೂಹಲದಿಂದ ಗಮನಿಸುತಿದ್ದ. ಕಾಲುವೆ ಏರಿಯ ಮೇಲೆ ನಡೆದಾಡುತ್ತಾ ಪಕ್ಷಿಗಳ ಕೂಗು, ಅವುಗಳ ಚಲನ ವಲನ ಗಮನಿಸುತಿದ್ದ. ಕಲದೊಂಗಿ ಅರಣ್ಯ ಪ್ರದೇಶ ಕೂಡ ದಟ್ಟವಾದ ಹುಲ್ಲು ಮತ್ತು ಗಿಡಗಳಿಂದ ಕೂಡಿತ್ತು. (ಈ ಅರಣ್ಯ ಪ್ರದೇಶವನ್ನು ಈಗ ಉತ್ತರಾಂಚಲ ಸರ್ಕಾರ “ಕಾರ್ಬೆಟ್ ಅಭಯಾರಣ್ಯ” ಎಂದು ಘೋಷಿಸಿದೆ. ಇದರ ವಿಸ್ತೀರ್ಣ 18 ಸಾವಿರ ಚದುರ ಕಿ. ಮಿ.) ಇಲ್ಲಿ ಅನೇಕ ವಿಧದ ಮಂಗಗಳು, ನರಿ, ತೋಳ, ಆರು ಅಡಿ ಎತ್ತರವಿದ್ದ ಕರಡಿಗಳು, ಹುಲಿ, ಚಿರತೆ, ಆನೆಗಳು, ಬಗೆ ಬಗೆಯ ಪ್ರಾಣಿ ಪಕ್ಷಿಗಳು ಇದ್ದುದರಿಂದ ಬಾಲಕ ಕಾರ್ಬೆಟ್‌ಗೆ ಸದಾ ಈ ಅರಣ್ಯದ ಬಗ್ಗೆ ಕುತೂಹಲ ಮನೆಮಾಡಿರುತಿತ್ತು. ಅಲ್ಲಿನ ಜಿಂಕೆ ಮತ್ತು ನವಿಲುಗಳ ಬಗ್ಗೆ ಕಾರ್ಬೆಟ್ ಗಂಭೀರ ಆಸಕ್ತಿ ತಾಳಿದ್ದ. ಕಾಡು‍ಹಂದಿ, ಕಾಡುಕುರಿ, ಕಾಡುಕೋಳಿ, ಸಾರಂಗ ಮತ್ತು ಅವುಗಳ ಟಿಸಿಲೊಡೆದ ಕೊಂಬುಗಳು ಇವುಗಳ ಬಗ್ಗೆ ಅವನಿಗೆ ಅನೇಕ ಪ್ರಶ್ನೆಗಳಿದ್ದರೂ ಉತ್ತರಿಸಲು ಕಾರ್ಬೆಟ್ ಬಳಿ ಯಾರೂ ಇಲ್ಲದ್ದರಿಂದ ಎಲ್ಲವುಗಳನ್ನು ಮೌನವಾಗಿ ಮನದಣೀಯೆ ವೀಕ್ಷಿಸುತಿದ್ದ.

ಆ ಕಾಲದಲ್ಲಿ ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಶ್ರೀಮಂತರಿಗೆ ಮತ್ತು ರಾಜರಿಗೆ ಪ್ರತಿಷ್ಠೆಯ ಹವ್ಯಾಸವಾಗಿತ್ತು. ಅನೇಕ ಬ್ರಿಟೀಷ್ ಅಧಿಕಾರಿಗಳು ತಮ್ಮ ಬಿಡುವಿನ ವೇಳೆ ಕಲದೊಂಗಿ ಸಮೀಪದ ಅರಣ್ಯಕ್ಕೆ ಬಂದು ಹುಲಿ, ಚಿರತೆಗಳನ್ನು ಶಿಖಾರಿ ಮಾಡುತ್ತಿದ್ದರು. ತಾವು ಕೊಂದ ಪ್ರಾಣಿಗಳನ್ನು ವಿಶೇಷವಾಗಿ ಹುಲಿ, ಚಿರತೆಗಳನ್ನು ಅವುಗಳ ಮೂಗಿನಿಂದ ಬಾಲದವರೆಗೆ ಅಳೆದು ಅಳತೆ ನೋಡುವ ಪ್ರವೃತ್ತಿ ಇತ್ತು. ಆ ಪ್ರದೇಶದಲ್ಲಿ ಹತ್ತು ಅಡಿ, ನಾಲ್ಕು ಇಂಚು ಉದ್ದದ ಹುಲಿಯನ್ನು ಶಿಖಾರಿ ಮಾಡಿರುವುದು ಈವರೆಗೆ ದಾಖಲಾಗಿದೆ. ಬೇಟೆಯಾಡಿದ ಹುಲಿ, ಚಿರತೆ, ಜಿಂಕೆ, ಸಾರಂಗ ಇವುಗಳ ಚರ್ಮವನ್ನು ಸುಲಿದು, ಅವುಗಳ ತಲೆ ಮತ್ತು ಕೊಂಬುಗಳನ್ನು ತಮ್ಮ ಮನೆಗಳಲ್ಲಿ ಅಲಂಕಾರಿಕ ವಸ್ತುಗಳಂತೆ ಪ್ರದರ್ಶನಕ್ಕೆ ಇಡುವುದು ಶ್ರೀಮಂತರಿಗೆ, ಅಧಿಕಾರಿಗಳಿಗೆ ಹವ್ಯಾಸವಾಗಿತ್ತು.

ಇವೆಲ್ಲವನ್ನು ಗಮನಿಸುತಿದ್ದ ಕಾರ್ಬೆಟ್‍ಗೆ ಬಾಲ್ಯದಲ್ಲೇ ತಾನೂ ಶಿಖಾರಿಕಾರನಾಗಬೇಕೆಂಬ ಆಸೆ ಚಿಗುರಿತ್ತು. ಆದರೆ ಅವನ ವಯಸ್ಸು ಬಂದೂಕ ಹಿಡಿಯುವ ವಯಸ್ಸಾಗಿರಲಿಲ್ಲ. ಇಂತಹ ವೇಳೆ ಕಲದೊಂಗಿಗೆ ಬ್ರಿಟಿಷ್ ಸೇನಾಧಿಕಾರಿಯ ಮಗ ಬಂದದ್ದು ಕಾರ್ಬೆಟ್‌ನ ಶಿಖಾರಿಗೆ ನೆರವಾಯಿತು. ಡ್ಯಾನ್ಸೆ ಎಂಬ ಆ ಯುವಕ ತಾನು ಮಾಡಿದ ಯಾವುದೋ ಒಂದು ತಪ್ಪಿಗಾಗಿ ಮಿಲಿಟರಿ ಸೇವೆಯಿಂದ ವಜಾಗೊಂಡು ಕಲದೊಂಗಿಯ ತನ್ನ ಪೂರ್ವಿಕರ ಮನೆಗೆ ಬಂದಿದ್ದ. ಅವನ ಬಳಿ ಒಂದು ನಾಡ ಬಂದೂಕವಿದ್ದುದರಿಂದ ಹಗಲೆಲ್ಲಾ ಕಾಡು ಅಲೆದು ಶಿಖಾರಿ ಮಾಡುವುದು ಅವನ ಹವ್ಯಾಸವಾಗಿತ್ತು. ಕಾರ್ಬೆಟ್ ಕೂಡ ಕ್ಯಾಟರ್ಪಿಲ್ಲರ್ ಹಾಗೂ ಬಿಲ್ಲು ಬಾಣಗಳನ್ನ ತೆಗೆದುಕೊಂಡು ಅವನ ಜೊತೆ ಪಕ್ಷಿಗಳ ಬೇಟೆಗೆ ಹೊರಡುತಿದ್ದ. ಎಲೆಗಳಲ್ಲಿ ಗೂಡು ಕಟ್ಟಿಕೊಂಡಿರುವ ಕೆಂಜಿರುವೆಗಳನ್ನು ತಿನ್ನುವ ಕರಡಿ, ಆ ದಿನದ ಶಿಖಾರಿ ಮುಗಿಸಿ ಮೈಮರೆತು ಮರದ ಮೇಲೆ ಮಲಗಿರುವ ಚಿರತೆ, ಜಿಂಕೆಗಳ ಹಿಂಡು, ನವಿಲಿನ ನರ್ತನ ಇವುಗಳನ್ನ ನೋಡಿ ಕಾರ್ಬೆಟ್ ರೋಮಾಂಚಿತನಾಗುತಿದ್ದ. ಒಮ್ಮೆ ಗೆಳೆಯನನ್ನು ಕಾಡಿ ಬೇಡಿ ತಾನು ಎದೆಗೆ ಬಂದೂಕು ಒತ್ತಿ ಹಿಡಿದು ಎಡಗಾಲು ಮುಂದಿರಿಸಿ, ಬಲಗಾಲನ್ನು ಅಗಲಿಸಿ ನೆಲಕ್ಕೆ ಒತ್ತಿ ಮರದ ಮೇಲಿನ ಪಕ್ಷಿಗೆ ಬಂದೂಕಿನಿಂದ ಗುಂಡು ಹಾರಿಸಿದ. ಗುಂಡು ಚಿಮ್ಮಿದ ರಭಸಕ್ಕೆ ಕಾರ್ಬೆಟ್ ಮೂರು ಅಡಿ ಹಿಂದಕ್ಕೆ ಹಾರಿಬಿದ್ದ. ಬಂದೂಕ ಬಳಸಲು ದೈಹಿಕ ಶಕ್ತಿ ಮತ್ತು ಯುಕ್ತಿ ಎರಡೂ ಬೇಕು ಎಂಬುದನ್ನ ಆ ದಿನ ಕಾರ್ಬೆಟ್ ಅನುಭವದಿಂದ ಪಾಠ ಕಲಿತ.

ತಮ್ಮನ ಅಗಾಧ ಉತ್ಸಾಹವನ್ನು ನೋಡಿದ ಅಣ್ಣ ಟಾಮ್ ಕಡೆಗೆ ಎರಡು ಬಂದೂಕಗಳನ್ನು ಖರೀದಿಸಿ ಕಾರ್ಬೆಟ್‌ಗೆ ಒಂದನ್ನು ಉಡುಗೊರೆಯಾಗಿ ನೀಡಿದ. ಅಲ್ಲದೆ ಸಂಜೆ ವೇಳೆ ತಾನೂ ಅರಣ್ಯಕ್ಕೆ ಶಿಖಾರಿಗೆ ಹೊರಟು ನಿಂತ. ಅಣ್ಣ ಟಾಮ್, ಕಾರ್ಬೆಟ್‌ಗೆ ಕಾಡಿನಲ್ಲಿ ಪ್ರಾಣಿಗಳನ್ನು ಕೊಲ್ಲುವ ಬಗ್ಗೆ, ಬಂದೂಕವನ್ನು ಬಳಸುವ ಕುರಿತು ಶಿಕ್ಷಣ ನೀಡಿದ. ಆತ ಬ್ರಿಟಿಷ್ ಸೇನೆಯಲ್ಲಿ ಅಧಿಕಾರಿಯಾಗಿ ಆಪ್ಘನ್ ಗುಡ್ಡಗಾಡಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದರಿಂದ ಪರ್ವತಗಳನ್ನು ಹತ್ತಿ ಇಳಿಯುವುದು, ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮರ ಹತ್ತುವುದು ಹೀಗೆ ಎಲ್ಲವನ್ನು ತಮ್ಮ ಕಾರ್ಬೆಟ್‌ಗೆ ಮನವರಿಕೆ ಮಾಡಿಕೊಟ್ಟ. ಜೊತೆಗೆ ಯಾವ ಕಾರಣಕ್ಕೂ ಮೊಟ್ಟೆಗಳ ಮೇಲೆ ಕಾವು ಕುಳಿತಿರುವ ಅಥವಾ ಗೂಡಿನೊಳೆಗೆ ಮರಿಗಳನ್ನು ಸಲುಹುತ್ತಿರುವ ತಾಯಿ ಪಕ್ಷಿಗಳನ್ನು ಕೊಲ್ಲಬಾರದು, ಎಳೆಯ ಪ್ರಾಣಿಗಳನ್ನು ಬೇಟೆಯಾಡಬಾರದೆಂದು ಶಿಖಾರಿಯ ನಿಯಮಗಳನ್ನು ಹೇಳಿಕೊಟ್ಟ. ಪ್ರತಿದಿನ ಕಾಡಿಗೆ ಹೋಗುತಿದ್ದ ಅಣ್ಣ ತಮ್ಮ ಇಬ್ಬರೂ ಕಾಡು ಕೋಳಿಗಳನ್ನು ತಪ್ಪದೆ ಬೇಟೆಯಾಡಿ ತರುತಿದ್ದರು. ಹೀಗೆ ಕೇವಲ ಹನ್ನೊಂದನೇ ವಯಸ್ಸಿಗೆ ಕಾರ್ಬೆಟ್ ಬಂದೂಕ ಹಿಡಿಯುವುದನ್ನು ಮತ್ತು ಶಿಖಾರಿಯ ಅಲಿಖಿತ ನಿಯಮಗಳನ್ನು ಅಣ್ಣನಿಂದ ಕಲಿತ. ನಿಸರ್ಗದ ಬಗ್ಗೆ ಆಸಕ್ತಿ ಹುಟ್ಟುತಿದ್ದ ಇಂತಹ ಸಮಯದಲ್ಲಿ ಕಾರ್ಬೆಟ್ ನ್ಯೂಮೊನಿಯಾ ಜ್ವರಕ್ಕೆ ತುತ್ತಾಗಿ ತಿಂಗಳುಗಟ್ಟಲೆ ನಿತ್ರಾಣನಾಗಿ ಹಾಸಿಗೆ ಹಿಡಿದ. ಈ ಸಮಯದಲ್ಲಿ ಅವನ ಕುಟುಂಬದ ಸಂಬಂಧಿ ಸ್ಟೀಪನ್ ಡೀಸ್ ಎಂಬಾತ ಉತ್ತರ ಭಾರತದ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ಚಿತ್ರವುಳ್ಳ ಮಾಹಿತಿ ಪುಸ್ತಕವೊಂದನ್ನು ಪ್ರಕಟಿಸಿದ್ದ. ಕಾರ್ಬೆಟ್ ನನ್ನು ನೋಡಲು ಬಂದಾಗ ಈ ಪುಸ್ತಕವನ್ನು ಕಾಣಿಕೆಯಾಗಿ ನೀಡಿದ. ಅನಾರೋಗ್ಯದ ದಿನಗಳಲ್ಲಿ ಕಾರ್ಬೆಟ್ ಗೆ ಆ ಪುಸ್ತಕವೇ ನಿತ್ಯ ಸಂಗಾತಿಯಾಗಿತ್ತು.

ಅನಾರೋಗ್ಯದಿಂದ ಚೇತರಿಸಿಕೊಂಡ ಕಾರ್ಬೆಟ್ ಮತ್ತೆ ಅರಣ್ಯದತ್ತ ಮುಖ ಮಾಡಿದ. ಈ ಬಾರಿ ಅವನಿಗೆ ರಕ್ಷಣೆಗಾಗಿ ಅಣ್ಣ ಟಾಮ್ ಆಪ್ಘಾನಿಸ್ಥಾನದ ಕಾಬೂಲ್‌ನಿಂದ ತಂದಿದ್ದ ಎರಡು ನಾಯಿಗಳು ಸಂಗಾತಿಗಳಾದವು. ಆ ದಿನಗಳಲ್ಲಿ ಸಾಮಾನ್ಯವಾಗಿ ಬೇಟೆಗೆ ಹೊರಡುತಿದ್ದ ಶಿಖಾರಿಕಾರರು ಕಾಡುಪ್ರಾಣಿಗಳ ಅನಿರೀಕ್ಷಿತ ದಾಳಿಗಳಿಂದ ರಕ್ಷಣೆ ಪಡೆಯಲು ನಾಯಿಗಳನ್ನು ತಮ್ಮೊಂದಿಗೆ ಕರೆದೊಯ್ಯುವುದು ಸಾಮಾನ್ಯವಾಗಿತ್ತು. ಈ ಬಾರಿ ಕಾರ್ಬೆಟ್‌ಗೆ ಬೇಟೆಗಿಂತ ಪ್ರಾಣಿ ಪಕ್ಷಿಗಳ ಚಲನ ವಲನಗಳ ಅಧ್ಯಯನ ಮುಖ್ಯವಾಗಿತ್ತು. ಹಾಗಾಗಿ ಪುಟ್ಟದೊಂದು ನೋಟ್ ಬುಕ್ ಮತ್ತು ಪೆನ್ಸಿಲ್ ಹಿಡಿದು ಎಲ್ಲವನ್ನು ಗಮನಿಸುತ್ತಾ ಬರೆದುಕೊಳ್ಳತೊಡಗಿದ.

ನಿಸರ್ಗ, ಅಲ್ಲಿನ ಜೀವ ಜಾಲ ಕುರಿತಂತೆ ಅನೇಕ ಸಂಗತಿಗಳು ಕಾರ್ಬೆಟ್‌‍ಗೆ ಅರಿವಾಗತೊಡಗಿದವು. ಪಕ್ಷಿಗಳು ತಮ್ಮ ಸಂಗಾತಿಗಳನ್ನ ಆರ್ಕಷಿಸಲು ಹೇಗೆ ಧ್ವನಿ ಹೊರಡಿಸುತ್ತವೆ, ಹುಲಿ, ಚಿರತೆಯಂತಹ ಅಪಾಯಕಾರಿ ಪ್ರಾಣಿಗಳು ಸುಳಿದಾಗ ಇತರೆ ಪ್ರಾಣಿಗಳಿಗೆ ಹೇಗೆ ಸಂದೇಶ ರವಾನಿಸುತ್ತವೆ, ಪಕ್ಷಿಗಳ ಅಪಾಯದ ಸಂಕೇತಗಳನ್ನು ಗ್ರಹಿಸಿದ ಮಂಗಗಳು ತಕ್ಷಣ ಮರವೇರಿ ಇತರೆ ಪ್ರಾಣಿಗಳಿಗೆ ವಿಶೇಷವಾಗಿ ಜಿಂಕೆ, ಸಾರಂಗ, ಕಡವೆ, ಕಾಡಮ್ಮೆ, ಕಾಡುಕುರಿಗಳಿಗೆ ಹೇಗೆ ಎಚ್ಚರಿಕೆ ನೀಡುತ್ತವೆ ಎಲ್ಲವನ್ನು ಸೂಕ್ಷವಾಗಿ ಗ್ರಹಿಸತೊಡಗಿದಂತೆ, ಕಾಡಿನ ಹಾಗೂ ಅಲ್ಲಿನ ಜೀವ ಜಗತ್ತಿನ ಬಗ್ಗೆ ಅವನಲ್ಲೊಂದು ನಿರ್ಧಾರ ದೃಢವಾಗತೊಡಗಿತು. ಅದೇನೆಂದೆರೆ, ಕಾಡಿನ ಯಾವ ಪ್ರಾಣಿಗಳು ತಮಗೆ ತೊಂದರೆಯಾಗದ ಹೊರತು ಇನ್ನೊಂದು ಪ್ರಾಣಿಯ ಮೇಲೆ ದಾಳಿ ನಡೆಸುವುದಿಲ್ಲ ಎಂಬುದು. ಕಾರ್ಬೆಟ್ ತನ್ನ ಸತತ ಅಧ್ಯಯನದಿಂದ ಹಾವುಗಳು ಸೇರಿದಂತೆ ಬಹುತೇಕ ಪ್ರಾಣಿಗಳ ವರ್ತನೆ ಅವು ನಡೆದಾಡುವ ಜಾಡು, ವೈಖರಿ ಇವೆಲ್ಲವನ್ನು ಮನನ ಮಾಡಿಕೊಂಡ. ವಿಷಪೂರಿತ ಹಾವುಗಳಿಗಿಂತ ವಿಷವಿಲ್ಲದ ಹಾವುಗಳು ಹೆಚ್ಚು ವೇಗವಾಗಿ ಚಲಿಸುತ್ತವೆ ಎಂಬುದನ್ನ ಅರಿತ. ಚಿರತೆಗಳ ಪಾದಗಳು ಮೃದುವಾಗಿರುವ ಕಾರಣ ಅವು ಸಾಮಾನ್ಯವಾಗಿ ಇತರೆ ಪ್ರಾಣಿಗಳು ನಡೆದಾಡಿದ ಹಾದಿಯಲ್ಲಿ ಮಾತ್ರ ಕ್ರಮಿಸುತ್ತವೆ, ಅದೇ ರೀತಿ ಹುಲಿಗಳು ತಮ್ಮ ಬೇಟೆಯನ್ನು ಅರಸುವಾಗ ಪೊದೆಗಳನ್ನು ಆಶ್ರಯಿಸುತ್ತವೆ. ಇದಕ್ಕೆ ಕಾರಣ ತಮ್ಮ ಸುಳಿವು ಪಕ್ಷಿಗಳ ಮುಖಾಂತರ ಇತರೆ ಪ್ರಾಣಿಗಳಿಗೆ ತಿಳಿಯಬಾರದು ಎಂಬುದನ್ನ ಕಾರ್ಬೆಟ್ ಗ್ರಹಿಸಿದ. ಜಿಂಕೆ, ಸಾರಂಗಗಳು ತಮಗೆ ಅಪಾಯ ತಂದೊಡ್ಡುವ ಪ್ರಾಣಿಗಳನ್ನು ಕಂಡಾಗ ಅಸ್ತಮಾ ರೋಗಿಯಂತೆ ಏದುಸಿರು ಬಿಡುವುದು, ಕಾಡೆಮ್ಮೆ ಗುಟುರು ಹಾಕುವುದು, ಹುಲಿ ಘರ್ಜಿಸುವುದು, ಕಾಡುಕೋಳಿ ಎತ್ತರದ ದಿಬ್ಬವನ್ನೇರಿ ಕೂಗು ಹಾಕುವುದು, ಇವುಗಳನ್ನು ಗಮನಿಸುತ್ತಲೇ ಅವುಗಳ ಧ್ವನಿಯನ್ನು ಅನುಕರಿಸತೊಡಗಿದ. ವಯಸ್ಸಾದ ಪ್ರಾಣಿಗಳಿಗಿಂತ ಹೆಚ್ಚಾಗಿ ಮರಿಗಳು ತಮ್ಮ ಓಟದಲ್ಲಿ ನೆಲದ ಮೇಲಿನ ದೂಳನ್ನು ಎಬ್ಬಿಸುತ್ತವೆ ಎಂಬುದು ಕಾರ್ಬೆಟ್‌ಗೆ ಅರಿವಾಗತೊಡಗಿಂತೆ ಅವುಗಳ ವಯಸ್ಸನ್ನು ಅವನು ಅಂದಾಜಿಸಬಲ್ಲವನಾಗಿದ್ದ. ಹಲವು ವರ್ಷಗಳ ಕಾಲ ಕಡವೆ ಮತ್ತು ಕಾಡು‍ಹಂದಿಗಳನ್ನು ನಿಖರವಾಗಿ ಗುರುತಿಸುವಲ್ಲಿ ಕಾರ್ಬೆಟ್ ಗೊಂದಲಕ್ಕೊಳಗಾಗುತಿದ್ದ. ಸಾಮಾನ್ಯವಾಗಿ ಕಾಡುಹಂದಿಗಳಲ್ಲಿ ಮೈ ಮೇಲೆ ಚುಕ್ಕೆ ಇರುತಿದ್ದುದು ಇದಕ್ಕೆ ಕಾರಣವಾಗಿತ್ತು. ನಂತರ ಹಂದಿಯ ಕಾಲುಗಳು ಕಡವೆ ಕಾಲುಗಳಿಗಿಂತ ಉದ್ದವಾಗಿರುವುದನ್ನ ದೃಢಪಡಿಸಿಕೊಂಡು ಅವುಗಳನ್ನು ಗುರುತಿಸಲು ಆರಂಭಿಸಿದ. ಹೀಗೆ ಪ್ರತಿದಿನ ಅವನು ಪರ್ವತಗಳನ್ನು ಹತ್ತಿ ಇಳಿಯುವುದು, ಅರಣ್ಯದಲ್ಲಿ ಅಲೆಯುದರ ಮೂಲಕ ಪರಿಸರದ ಜೈವಿಕ ಚಟುವಟಿಗಳನ್ನು ಕರಗತ ಮಾಡಿಕೊಂಡ. ಕಾರ್ಬೆಟ್ ಈ ವಿಷಯದಲ್ಲಿ ಎಷ್ಟು ನಿಷ್ಣಾತನಾದನೆಂದರೆ, ತನ್ನ ಮನೆಯಲ್ಲಿ ಕುಳಿತುಕೊಂಡು ಇದು ಇಂತಹದ್ದೇ ಪಕ್ಷಿಯ ಧ್ವನಿ, ಅಥವಾ ಇಂತಹದ್ದೇ ಪ್ರಾಣಿಯ ಕೂಗು ಎಂದು ಅತ್ಯಂತ ನಿಖರವಾಗಿ ಗುರುತಿಸುತಿದ್ದ. ಅಷ್ಟೇ ಅಲ್ಲ ನೆಲದ ಮೇಲೆ ಬಿದ್ದ ತರಗೆಲೆಗಳ ಕೆಳಗೆ ಚಲಿಸುವ ಜಂತುಗಳನ್ನು ಎಲೆಗಳ ಕದಲುವಿಕೆಯಿಂದ ಗುರುತಿಸುವಷ್ಟು ಜ್ಞಾನವನ್ನು ಕಾರ್ಬೆಟ್ ತನ್ನದಾಗಿಸಿಕೊಂಡಿದ್ದ.

(ಮುಂದುವರೆಯುವುದು)