Daily Archives: January 24, 2012

ನಮ್ಮ ಪರಿಸರ – ನೆಲ ಜಲ : 3


-ಪ್ರಸಾದ್ ರಕ್ಷಿದಿ


ನಮ್ಮ ಪರಿಸರ – ನೆಲ ಜಲ : 1
ನಮ್ಮ ಪರಿಸರ – ನೆಲ ಜಲ : 2

ಕೃಷಿಯ ಜೊತೆಯಲ್ಲಿ ಇತರ ಪರ್ಯಾಯ ದುಡಿಮೆಗೆ ಅವಕಾಶಗಳೇ ಇಲ್ಲ. ಅಥವಾ ಇದ್ದರೂ ಅವೂ ಕೂಡಾ ಲಾಭದಾಯಕವಲ್ಲ. ಮಲೆನಾಡಿನ ವಿಚಾರವನ್ನೇ ಹೇಳುವುದಾದರೆ ಇಲ್ಲಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಅಡಿಕೆ, ಮೆಣಸು, ಬಾಳೆ, ಭತ್ತ, ಕಿತ್ತಳೆ ಯಾವುದೂ ಕೂಡಾ ಲಾಭದಾಯಕವಾಗಿಲ್ಲ. ಕೆಲವು ಸಾರಿ ಲಾಭದಾಯಕವಾದಂತೆ ಕಂಡರೂ ಇಂದಿನ ಊಹೆಗೂ ಮೀರಿದ ಬೆಲೆ ಏರಿಳಿತಗಳಿಂದಾಗಿ ಸಣ್ಣ ಮತ್ತು ಮಧ್ಯಮ ಕೃಷಿಕರು ಅದರ ಲಾಭವನ್ನು ಪಡೆಯಲಾಗುತ್ತಿಲ್ಲ. (ಉದಾ; ವೆನಿಲ್ಲಾ, ಕಾಫಿ, ಏಲಕ್ಕಿ ಬೆಲೆಗಳ ಏರಿಳಿತವನ್ನು ನೋಡಿ) ಬೇರೆ ಯಾವುದೇ ಉದ್ಯಮವಿಲ್ಲದ ದೊಡ್ಡ ಬೆಳೆಗಾರರೂ ಸಹ ಸಾಲದಲ್ಲಿ ಮುಳುಗಿರುವಾಗ, ಬ್ಯಾಂಕ್ ಸಾಲ ಸಿಗದ ಅಥವಾ ಈಗಾಗಲೇ ಸಾಲ ಪಡೆದು ಸುಸ್ತಿದಾರನಾಗಿರುವ ಸಣ್ಣ ಕೃಷಿಕರಿಗೆ ಉಳಿದಿರುವುದು ಮರ ಕಡಿದು ಮಾರುವುದೋ ಇಲ್ಲವೇ ಕಳ್ಳಬಟ್ಟಿ ದಂಧೆಗೆ ಇಳಿಯುವುದೋ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಮಾತ್ರ. ಹೀಗಾಗಿ ಹಳ್ಳಿಗಳಲ್ಲಿ ಊರೆಲ್ಲಾ ಪುಢಾರಿಗಿರಿ ಮಾಡುತ್ತ ಇಂಥದೇ ಕೃತ್ಯಗಳಲ್ಲಿ ಮುಳುಗಿ ರಾಜಕಾರಣಿಗಳ ಹಿಂದೆ ಸುತ್ತುತ್ತಿರುವ ಯುವಕರ ದಂಡೇ ಸಿದ್ಧವಾಗುತ್ತಿದೆ.

ಈಗ ಮತೊಮ್ಮೆ ಜಾಗತೀಕರಣದ ವಿಷಯಕ್ಕೆ ಬರೋಣ. ಭೂಸುಧಾರಣಾ ಕಾನೂನಿನಿಂದಾಗಿ ನಮ್ಮ ಹಿಡುವಳಿಗಳೆಲ್ಲಾ ಚಿಕ್ಕದಾಗಿ ಯಾವುದೇ ವೈಜ್ಞಾನಿಕ(?) ಕೃಷಿಗೆ ಅನುಕೂಲವಾಗುತ್ತಿಲ್ಲ ಇದರಿಂದಾಗಿ ಕೃಷಿಯಲ್ಲಿನ ಪ್ರಗತಿಗೂ ಅಡ್ಡಿಯಾಗಿದೆ, ಎಂಬ ವಾದವೊಂದು ಇತ್ತೀಚೆಗೆ ಪ್ರಚಾರಕ್ಕೆ ಬರುತ್ತಿದೆ.. ನಮ್ಮ ಮಾಜಿ ಪ್ರಧಾನಿಯೊಬ್ಬರು ಇದೇ ಅಭಿಪ್ರಾಯದ ಮಾತನ್ನಾಡಿದ್ದಾರೆ. ಜಾಗತೀಕರಣದ ಸಮರ್ಥಕರಂತೂ ಮೊದಲಿನಿಂದಲೂ ಈ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ನಮ್ಮಲ್ಲಿನ ಭೂಸುಧಾರಣೆಯನ್ನು ನೋಡುವುದಾದರೆ, ಇದು ಭಾರತದಾದ್ಯಂತ ಏಕಪ್ರಕಾರವಾಗಿ ನಡೆದಿಲ್ಲ. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಸ್ವಲ್ಪಮಟ್ಟಿಗೆ ಜಾರಿಯಾಗಿದೆ ಅಷ್ಟೆ. ಇನ್ನಿತರ ಅನೇಕ ರಾಜ್ಯಗಳಲ್ಲಿ ಹಳೆಯ ಜಮೀನ್ದಾರಿ ಪದ್ಧತಿಯೇ ಮುಂದುವರೆದಿದೆ. ಆಧುನಿಕ ಮಾರುಕಟ್ಟೆ ಸಂಸ್ಕೃತಿಯೂ ಈ ಜಮೀನ್ದಾರಿ (ಪಾಳೇಗಾರಿ) ಪದ್ಧತಿಯನ್ನು ಇಷ್ಟಪಡುವುದಿಲ್ಲ ಎನ್ನುವುದು ಬೇರೆಯೇ ವಿಷಯ.

ಜಾಗತೀಕರಣದ ಹಿನ್ನೆಲೆಯಲ್ಲಿ ಕೃಷಿ ಭೂಮಿಯ ಗಾತ್ರದ ಬಗೆಗಿನ ಮೇಲಿನ ಅಭಿಪ್ರಾಯವನ್ನು ಗಮನಿಸಿದರೆ, ಇದರ ಹಿಂದೆ ದೊಡ್ಡ ಉದ್ದಿಮೆದಾರರ-ಮಾರುಕಟ್ಟೆ ಉತ್ಪಾದಕರ ಹುನ್ನಾರವೇ ಕಾಣಿಸುತ್ತದೆ. ಕೃಷಿಯಲ್ಲಿ ಆಧುನಿಕ ದೊಡ್ಡ ಯಂತ್ರಗಳು ಜೊತೆಗೆ ಕಂಪ್ಯೂಟರ್ ನಿಂದ ರೋಬೋತನಕ ಎಲ್ಲವನ್ನೂ ಬಳಕೆ ಮಾಡಲು ಸಾಧ್ಯವಾಗಬೇಕಾದರೆ, ಮತ್ತು ಕೃಷಿಯಿಂದ ಉತ್ಪಾದನೆ ಆಗಬೇಕಾದರೆ, ಕೃಷಿ ಹಿಡುವಳಿಗಳು ದೊಡ್ಡದಾದಷ್ಟೂ ಒಳ್ಳೆಯದು. ಇವರಿಗೆ ಒಂದು ಜೊತೆ ಎತ್ತಿನ ರೈತನಿಗಿಂತ ಟ್ರ್ಯಾಕ್ಟರ್ ಮುಂತಾದ ಯಂತ್ರೋಪಕರಣಗಳನ್ನು ಇಟ್ಟುಕೊಳ್ಳಬಲ್ಲ ದೊಡ್ಡ ಹಿಡುವಳಿದಾರನೇ ಪ್ರೀತಿಪಾತ್ರ. ದೊಡ್ಡ ಪ್ರಮಾಣದ ನಿಯಂತ್ರಿತ ಉತ್ಪಾದನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟಗಳಿಗೆ ಸರಿಯಾಗಿ ನಾವು ಕೂಡಾ ನಮ್ಮ ಕೃಷಿ ಉತ್ಪನ್ನಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಹುದೆಂದು(?) ಇವರ ವಾದವಾಗಿದೆ.

ಮೊದಲನೆಯದಾಗಿ ಅಧಿಕ ಉತ್ಪಾದನೆಯಿಂದ ರೈತನ ಸಮಸ್ಯೆ ಬಗೆಹರಿಯುವುದಿಲ್ಲವೆಂದು ನಮಗೆ ಈಗಾಗಲೇ ಅನುಭವಕ್ಕೆ ಬಂದ ವಿಷಯವಾಗಿದೆ. ಅಧಿಕ ಉತ್ಪಾದನೆಯಾಗುತ್ತಿದ್ದಾಗಲೂ ವಿಯೆಟ್ನಾಮ್ ನ ಕಾಫಿ ಬೆಳೆಗಾರರ ಹಾಗೂ ನಮ್ಮಲ್ಲಿನ ಕಬ್ಬು ಬೆಳೆಗಾರರ ಪರಿಸ್ಥಿತಿ ಏನಾಯಿತೆಂಬ ವಿಚಾರ ನಮ್ಮ ಕಣ್ಣೆದುರೇ ಇದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯೆನ್ನುವುದು ಮುಂದುವರೆದ ದೇಶಗಳ ಮಾರುಕಟ್ಟೆಯಾಗಿದ್ದು, ಅವರು ಹೇಳುವ ಗುಣಮಟ್ಟಗಳು, ಮಾನದಂಡಗಳು ಇವೆಲ್ಲ ಅವರ ಮೂಗಿನ ನೇರಕ್ಕೆ ಇರುವಂತಹವುಗಳು. ಮತ್ತು ಅವರು ಎಲ್ಲೆಲ್ಲಿ ಮೂಗು ಹಾಯಿಸಬಲ್ಲರೋ ಅಲ್ಲೆಲ್ಲಾ ಜಾರಿಗೊಳಿಸಲು ಸಾಧ್ಯವಾಗುವಂತೆ ತಯಾರಾದಂತಹವುಗಳು. ಈ ಮಾನದಂಡಗಳು ಕೂಡಾ ಅವರ ಮರ್ಜಿಗೆ ತಕ್ಕಂತೆ ಬದಲಾಗುತ್ತಿರುತ್ತವೆ.

ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ನಮ್ಮ ಕಾಫಿ ಮಾರುಕಟ್ಟೆ. ಭಾರತದ ಕಾಫಿಯಂತೂ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವಂತಹ ಬೆಳೆ. ಇತ್ತೀಚೆಗೆ ಕಾಫಿಯ ಗುಣಮಟ್ಟವನ್ನು ಸುಧಾರಿಸುವ, ಅದನ್ನು ಅಂತಾರಾಷ್ಟ್ರೀಯ ಬೇಡಿಕೆಗಳಿಗೆ ಅನುಗುಣವಾಗಿ ಕಾಫಿ ಉತ್ಪಾದಿಸುವ- ಸಂಸ್ಕರಿಸುವ ಅಗತ್ಯವನ್ನು ಪದೇ ಪದೇ ಹೇಳಲಾಗುತ್ತಿದೆ. (ದೇಸಿ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಸಿಗುವ ಕಾಫಿಪುಢಿಯ ಗುಣಮಟ್ಟಕ್ಕೂ ಈ ಮೇಲೆ ಹೇಳಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೂ ಯಾವದೇ ಸಂಬಂಧವಿಲ್ಲ-ಗಮನಿಸಿ)

ಈ ಸಂದರ್ಭದಲ್ಲಿ ನಮ್ಮ ಕೃಷಿಕರು ಮತ್ತು ವ್ಯಾಪಾರಿಗಳ ದುರ್ಬುದ್ಧಿಯನ್ನು ಹೇಳದಿದ್ದರೆ ಅಪಚಾರವಾದೀತು. ಬೆಲೆ ಏರಿದಾಗೆಲ್ಲ ಕಾಫಿಗೆ ಕಸಕಡ್ಡಿ, ಮೆಣಸಿಗೆ ಪಪ್ಪಾಯಿ ಬೀಜ ಇತ್ಯಾದಿಗಳನ್ನು ಕಲಬೆರಕೆ ಮಾಡುವ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ವಂಚನೆಗಿಳಿಯುವ ಮೂಲಕ ಕೆಟ್ಟಹೆಸರು ಪಡೆಯುವ ನಮ್ಮವರು, ಅಂತಾರಾಷ್ಟ್ರೀಯ ಕುತಂತ್ರಗಳನ್ನು ವಿರೋಧಿಸುವ ಶಕ್ತಿಯನ್ನೂ-ನೈತಿಕಹಕ್ಕನ್ನೂ ಕಳೆದುಕೊಂಡು ಬಿಡುತ್ತಾರೆ. ಮತ್ತು ಈ ಪೀಡೆಗಳನ್ನು ಮುಂದುವರಿದ ದೇಶಗಳ ಬಲಿಷ್ಟರು ತಮ್ಮ ವ್ಯಾಪಾರೀ ಮಾನದಂಡಗಳನ್ನು ಸಮರ್ಥಿಸಿಕೊಳ್ಳಲು ಚೆನ್ನಾಗಿ ಬಳಸಿಕೊಳ್ಳುತ್ತಾರೆ.

ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಪಡೆಯಲು ಕಾಫಿಯನ್ನು ಬೆಳೆಯುವ ಹಂತದಲ್ಲೇ ಅನೇಕ ರೀತಿಯ ತಯಾರಿ ನಡೆಸಬೇಕಾಗುತ್ತದೆ. ಇದಕ್ಕಾಗಿಯೇ ಹಲವು ರೀತಿಯ Plant conditioner ,Foliar spray ಗಳು ಗಳು ಬಂದಿವೆ. ಕಾಫಿಬೀಜಗಳ ಗಾತ್ರ ಹೆಚ್ಚಿಸಲು ಅವುಗಳಲ್ಲಿ ಏಕರೂಪತೆ ತರಲು ಹೀಗೆ ಏನೇನೋ ಕಸರತ್ತುಗಳನ್ನು ಹೇಳುವ ತಜ್ಞರೆನಿಸಿಕೊಂಡವರ ಪಡೆಯೇ ಇದೆ. ಅವರು ಹೇಳುವ ರೀತಿಯ ಸಂಸ್ಕರಣೆಗಾಗಿ ಇದೀಗ ಕಾಫಿ ಹಣ್ಣನ್ನು ಸಾಂಪ್ರದಾಯಿಕವಾದ ಎರಡು ಬಾರಿಯ ಕೊಯ್ಲಿಗೆ ಬದಲಾಗಿ ಮೂರು ನಾಲ್ಕು ಬಾರಿ ಕೊಯ್ಲು ಮಾಡಬೇಕಾಗುತ್ತದೆ. ಹಣ್ಣನ್ನು ಪಲ್ಪಿಂಗ್ ಹಂತದಲ್ಲೇ ಗಾತ್ರಕ್ಕೆ ತಕ್ಕಂತೆ ಪ್ರತ್ಯೇಕಿಸಬೇಕಾಗುತ್ತದೆ. (ಈಗ ಅದಕ್ಕೂ ವಿಷೇಷ ಯಂತ್ರಗಳು ಆಮದಾಗಿ ಬಂದಿವೆ ಮತ್ತು ಇನ್ನಷ್ಟು ಭಾರಿ ಬಂಡವಾಳವನ್ನು ಬೇಡುತ್ತಿವೆ).

ಪಲ್ಪಿಂಗ್ ನಂತರ ಕಾಫಿ ಬೀಜಗಳನ್ನು ಹುದುಗು ಹಾಕಿ ನಂತರ ತೊಳೆದು ವಿಶೇಷ ರೀತಿಯಿಂದ ಒಣಗಿಸಿ ಹೊಸ ಗೋಣಿ ಚೀಲಗಳಲ್ಲಿ ತುಂಬಿ ಸಂಸ್ಕರಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಇಷ್ಟಾಗುವಾಗ ಕಾಫಿಯ ಉತ್ಪಾದನಾ ವೆಚ್ಚ ಸಾಕಷ್ಟು ಏರಿರುತ್ತದೆ. ಈ ಕಾಫಿ ಸಂಸ್ಕರಣಾ ಕೇಂದ್ರದಲ್ಲಿ ಹಲವು ಹಂತಗಳನ್ನು ಹಾದು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುತ್ತದೆ. ಅಲ್ಲಿ ಕಪ್ ಟೇಸ್ಟರುಗಳೆಂಬ ದೇವತಾ ಸ್ವರೂಪಿಗಳು ಈ ಕಾಫಿಯ ಕಷಾಯವನ್ನು ಕುಡಿದು ನೆಕ್ಕಿ ಚಪ್ಪರಿಸಿ ಅದರ ಹಣೆಬರಹವನ್ನು ನಿರ್ಧರಿಸುತ್ತಾರೆ. ಅಲ್ಲಿ ಆಯ್ಕೆಯಾದರೆ, ಆ ಮಾಲಿಗೆ ವಿಶೇಷ ಬೆಲೆ ದೊರೆಯುತ್ತದೆ. ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಚಾರ ದೊರೆಯುತ್ತದೆ. ಆಯ್ಕೆಯಾಗದ ಉಳಿದ ಮಾಲನ್ನು ಕಡಿಮೆ ಬೆಲೆಗೆ ಕೊಳ್ಳಲಾಗುತ್ತದೆ. ಅದ್ದರಿಂದ ಇಡೀ ಕಾಫಿ ಉದ್ಯಮವನ್ನು ಗಣನೆಗೆ ತೆಗೆದುಕೊಂಡರೆ, ಬರುವ ಆದಾಯ ಒಟ್ಟಾರೆಯಾಗಿ ಮೊದಲಿಗಿಂತ ಕಡಿಮೆಯಾಗುತ್ತದೆ. (ಇದಕ್ಕಾಗಿ ಪಡುವ ಹೆಚ್ಚಿನ ಶ್ರಮ ಮತ್ತು ಖರ್ಚನ್ನು ಗಮನಿಸಿ) ಜೊತೆಗೆ ಬೆಳೆಗಾರ ನಿರಂತರ ಒತ್ತಡದಲ್ಲೇ ಇರುತ್ತಾನೆ.

ಈ ಮಾರುಕಟ್ಟೆಯೂ ಹಾಗೇ, ಈ ವರ್ಷ ಚೆನ್ನಾಗಿ ತೊಳೆದು ಒಣಗಿಸಿದ ಕಾಫಿ ಒಳ್ಳೆಯ ಬೆಲೆ ಪಡೆದರೆ, ಇನ್ನೊಂದು ಬಾರಿ ಪಲ್ಪಿಂಗ್ನ ನಂತರ ಅಂಟನ್ನು ತೊಳೆಯದೆ ಹಾಗೇ ಒಣಗಿಸಿದ ಕಾಫಿ ಬೇಕು ಎನ್ನುತ್ತಾರೆ. ಅದೇಕೆಂದು ಕೇಳಿದರೆ, ಈ ಬಾರಿ ಮಾರುಕಟ್ಟೆಯ ಒಲವು ಹಾಗೂ ಬೇಡಿಕೆ ಹಾಗಿದೆ ಎನ್ನುತ್ತಾರೆ ನಮ್ಮ ಕಪ್ ಟೇಸ್ಟರ್ ಮಹಾಶಯರುಗಳು. ಬೆಳೆಗಾರ ಸಾಕಷ್ಟು ಹಣ ಖರ್ಚುಮಾಡಿ ಕಳೆದಬಾರಿಯಷ್ಟೇ ನವೀಕರಿಸಿದ ಯಂತ್ರಗಳ ಕಥೆಯನ್ನು ಯಾರೂ ಕೇಳುವುದಿಲ್ಲ.

ಇದುವರೆಗೂ ನಮ್ಮ ಸ್ಥಳೀಯ ವರ್ಕ್ ಶಾಪ್ ಗಳೇ  ಕಾಫಿ ಹಣ್ಣಿನ ಪಲ್ಪಿಂಗ್ಗೆ ಸಂಬಂಧಪಟ್ಟ ಹೆಚ್ಚಿನ ಎಲ್ಲಾ ಯಂತ್ರೋಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸಿಕೊಡುತ್ತಿದ್ದವು. ಈಗ ಅದೂ ಕೂಡಾ ಅಂತಾರಾಷ್ಟ್ರೀಯ ಗುಣಮಟ್ಟದ ಹೆಸರಿನಲ್ಲಿ ಆಮದಾಗುತ್ತಿವೆ. ಇನ್ನು ಕಾಫಿ ಬೆಳೆಯುವಾಗ ಗುಣಮಟ್ಟ ಸುಧಾರಣೆಗೆಂದು ಬಳಸಲಾಗುವ Soil condtioner,  Foliar spray,  wetting agent ಗಳು ಮುಂತಾದವೆಲ್ಲ ಮುಂದುವರೆದ ದೇಶಗಳಲ್ಲಿ ತಯಾರಾದವು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಪಡೆಯವ ಆಸೆಗೆ ಬಿದ್ದ ಕೃಷಿಕ  ತಾನು ಗಳಿಸಬಲ್ಲ ಹೆಚ್ಚುವರಿ ಲಾಭವನ್ನು ಮತ್ತೆ ವಿದೇಶಿ ವಸ್ತುಗಳಿಗೆ ಸುರಿಯ ಬೇಕಾದ ಅನಿವಾರ್ಯತೆಗೆ ಬಿದ್ದಿದ್ದಾನೆ.

ಈ ಕಪ್ ಟೇಸ್ಟಿಂಗ್ ಅನ್ನುವುದು, ವೈಯಕ್ತಿಕ ರುಚಿ ನಿರ್ಧಾರವಾಗಿದ್ದು ಪೂರ್ಣವಾಗಿ ವೈಜ್ಞಾನಿಕವೆನ್ನಲು ಸಾಧ್ಯವಿಲ್ಲ. ವಿಶ್ವದಲ್ಲಿ ಕಾಫಿ ಬೆಳೆಯುವುದೆಲ್ಲಾ (ಹೆಚ್ಚಿನ ಕೃಷಿ ಉತ್ಪನ್ನಗಳೆಲ್ಲವೂ) ಹಿಂದುಳಿದ ದೇಶಗಳಲ್ಲಿ. ಆದರೆ ಬಳಕೆದಾರರೆಲ್ಲ ಮುಂದುವರೆದ ದೇಶಗಳು. ಈ ದೇಶಗಳಿಗೆ ನಮ್ಮ ಉತ್ಪನ್ನಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಂಡುಕೊಳ್ಳುವುದಷ್ಟೇ ಗುರಿ. ಅದಕ್ಕಾಗಿಯೇ ಇಷ್ಟೆಲ್ಲಾ ಹುನ್ನಾರಗಳನ್ನು ನಡೆಸುತ್ತಾರೆ. ಈ ತಂತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ ಕೃಷಿಕನ ಮಟ್ಟಿಗೆ ದೇಶದ ಒಳಗೂ ಕೂಡಾ ಬಳಕೆಯಾಗುತ್ತಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಗುಣಮಟ್ಟ ನಿಯಂತ್ರಣ ಮುಂತಾದವುಗಳು ಅಭಿವೃದ್ಧಿಶೀಲ ದೇಶಗಳಿಗೆ ತೊಡಿಸುವ ಮೂಗುದಾರ ಅಷ್ಟೆ.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ  ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ.

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, ಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ  ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್ ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದರು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ.  ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಮತ್ತೊಮ್ಮೆ ಕಾಫಿಯದ್ದೇ ಉದಾಹರಣೆ ನೀಡುವುದಾದರೆ, ಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಲಿವೆ. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ   ಇವರೊಂದಿಗೆ  ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. ಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ  ಯಾವುದೇ ಜಾತಿಯ ಪ್ರಾಣಿಗೆ  ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು  ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಜಾಗತೀಕರಣದ ಸಮರ್ಥಕರು ಕೊಡುವ ಇನ್ನೊಂದು ಉದಾಹರಣೆಯೆಂದರೆ ದಕ್ಷಿಣಕೊರಿಯಾದ ಪ್ರಗತಿ ಹಾಗೂ ಚೀನಾದ ಉದಾರೀಕರಣ ಇತ್ಯಾದಿ, ಇದು ನಿಜವಿರಬಹುದು. ನಾಳೆ ನಾವು ಕೂಡಾ ಮುಂದುವರಿದ ದೇಶವಾಗಿಬಿಡಬಹುದು. ಆಗಲೂ ಜಗತ್ತಿನ ಇನ್ನಷ್ಟು ದೇಶಗಳಲ್ಲಿ ಬಡತನ ತಾಂಡವವಾಡುತ್ತಿರುತ್ತದೆ. ಮತ್ತು ಹಾಗೆಯೇ ಮುಂದುವರೆಯುತ್ತದೆ. ನಾವು ಮಾತ್ರ  ಗುಂಪು ಬದಲಾಯಿಸಿ ಈಚೆ ಗುಂಪಿಗೆ ಬಂದಿರುತ್ತೇವೆ ಅಷ್ಟೆ. ಜಾಗತೀಕರಣದ ಈ ವ್ಯವಸ್ಥೆಯಲ್ಲಿ ಕೆಲವು ದೇಶಗಳನ್ನು ಬಿಟ್ಟು ಉಳಿದವುಗಳು ನಿರಂತರ ಶೋಷಣೆಗೆ ಒಳಗಾಗುತ್ತಲೇ ಇರುತ್ತವೆ.

ಈಗಾಗಲೇ ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಕಂಪೆನಿಗಳು ವಿಧ್ಯುತ್ ಉತ್ಪಾದನೆ ಮುಂತಾದ ಯೋಜನೆಗಳ ನೆಪಗಳಲ್ಲಿ ನಮ್ಮ ಅರಣ್ಯಗಳ, ನದಿಗಳ ಮೇಲೆ ಹಕ್ಕುಗಳನ್ನು ಸ್ಥಾಪಿಸತೊಡಗಿವೆ. ಈ ರೀತಿಯ ಎಲ್ಲ ಯೋಜನೆಗಳಿಗೆ ಪಕ್ಷ ಬೇಧವಿಲ್ಲದೆ ನಮ್ಮ ಎಲ್ಲ ಸರ್ಕಾರಗಳು ಅತ್ಯುತ್ಸಾಹ ತೋರುತ್ತಿವೆ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ  ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರ  ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ಈ ಸಂದರ್ಭದಲ್ಲಿ ನಮ್ಮ ನೆಲ,ಜಲ-ಪರಿಸರಗಳನ್ನು ಉಳಿಸಿಕೊಳ್ಳುವ  ಬಗ್ಗೆ ಮಾತನಾಡುವಾಗ ಇರಬೇಕಾದ ಎಚ್ಚರ, ಮತ್ತು ಅದನ್ನು ಕಾರ್ಯಗತಗೊಳಿಸಬೇಕಾದ ಸಾಧ್ಯತೆಗಳು ಹಾಗೂ ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ   Think globally act locally  ಎಂಬ ಮಾತಿಗೆ ಬದಲಾಗಿ Think locally act globally  ಇರಬಹುದೇನೋ?

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ತುಂಬ ಪ್ರಚಾರಕ್ಕೆ ಬರುತ್ತಿರುವ ಸುಭಾಷ್ ಪಾಳೇಕರ್ ಮತ್ತು ಅಂತಹವರ ಚಿಂತನೆಗಳು ಕೆಲಮಟ್ಟಿಗೆ ಮಾರ್ಗಸೂಚಿಯಾಗಬಲ್ಲದು. ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ( ಪಾಳೇಕರ್ ಅವರ ಕೃಷಿವಿಧಾನಗಳ ಬಗ್ಗೆ ಅದರಲ್ಲಿ ಮುಖ್ಯವಾಗಿ ರೋಗ ನಿಯಂತ್ರಣ ಮತ್ತು ಕೀಟನಾಶಕಗಳ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ) ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು.a

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ.

ನಮ್ಮ ಎಲ್ಲ ದೇಶ ಜನಾಂಗಗಳ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ  ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

ಕೊಸರು : ಈಗ ಹಸು ಸಾಕುವುದು ಲಾಭದಾಯಕವಲ್ಲವೆಂದು ಅನೇಕರು ಸ್ವಾನುಭವದಿಂದ ಬರೆಯುತ್ತಿದ್ದಾರೆ. ಅದನ್ನು ಲಾಭದಾಯಕವಾಗಿಸಲು ಸಾಧ್ಯವೆಂದು ಕೂಡಾ ಅನೇಕರ ಸಲಹೆ ಸೂಚನೆಗಳು ಅದಕ್ಕೆ ಪರ-ವಿರೋಧಗಳೂ ನಮ್ಮ ಹಲವಾರು ಪತ್ರಿಕೆಗಳಲ್ಲಿ ಬರುತ್ತಿವೆ. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಂತೂ ಮಿಶ್ರತಳಿ ಹಸುಗಳ ಸಾಕಣೆ ಲಾಭದಾಯಕವಲ್ಲವೆಂಬುದು ನನ್ನ ಅನುಭವ ಕೂಡಾ. ಎಂಭತ್ತರ ದಶಕದಲ್ಲಿ ನಮ್ಮ ಸಕಲೇಶಪುರ ತಾಲ್ಲೂಕಿನಲ್ಲಿ ಸುಮಾರು ಒಂದೂವರೆ ಸಾವಿರ ಮಿಶ್ರತಳಿ ಹಸುಗಳಿದ್ದವು. ಈಗ 2006ನೇ ಇಸವಿಯ ವೇಳೆಗೆ ಅವುಗಳ ಸಂಖ್ಯೆ ಐನೂರನ್ನು ಮೀರುವುದಿಲ್ಲ. ಎಮ್ಮೆಗಳಂತೂ ಮಲೆನಾಡಿನಿಂದ ಸಂಪೂರ್ಣವಾಗಿ ಮಾಯವಾಗುತ್ತಿವೆ. ಈಗ ಹಳ್ಳಿಗಳು ಕೂಡಾ ಹೆಚ್ಚಾಗಿ ಪ್ಯಾಕೆಟ್ ಹಾಲನ್ನು ಅವಲಂಭಿಸಿವೆ.

ಇತ್ತೀಚೆಗೆ ಕೃಷಿ ಪತ್ರಿಕೆಯೊಂದರಲ್ಲಿ  ‘ಕಡಿಮೆ ಹಾಲಿನ ತಳಿಗಳೇ ರೈತರಿಗೆ ಹೆಚ್ಚು ಅನುಕೂಲವಾದ’ದ್ದೆಂದು   ಕೃಷಿಕರೊಬ್ಬರು ಅಭಿಪ್ರಾಯಪಟ್ಟಿದ್ದರು. ನಮ್ಮ ಪೂರ್ವಿಕರು ಬಯಸಿದ್ದು-ಮಾಡಿದ್ದು ಇದನ್ನೇ. ನಮ್ಮ ನಾಟಿ ತಳಿಗಳಾದ ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್-ಅಮೃತಮಹಲ್ ತಳಿಗಳನ್ನು ನೋಡಿ ಇವು ಯಾವುದೇ ರೋಗವಿಲ್ಲದೆ, ಕಾಡು ಹುಲ್ಲು ತೋಡು ನೀರನಲ್ಲಿ ಬದುಕಿ ಮನೆಯ ಅಗತ್ಯಕ್ಕೆ ತಕ್ಕಷ್ಟು ಹಾಲನ್ನು ಕೊಡುತ್ತಿದ್ದವು. ಸಾಕಷ್ಟು ಗೊಬ್ಬರವೂ ಸಿಗುವುದರೊಂದಿಗೆ ಎತ್ತುಗಳು ಎಲ್ಲ ಕೆಲಸಕ್ಕೂ ಬರುತ್ತಿದ್ದವು. ದಿನವೊಂದಕ್ಕೆ ಮೂವತ್ತು ಕಿ.ಮೀ. ದೂರ ಗಾಡಿ ಎಳೆಯುವ ಎತ್ತುಗಳ ಅದ್ಭುತ ಕಾರ್ಯಕ್ಷಮತೆಯನ್ನು ನೋಡಿ! ಸ್ವಲ್ಪ ಹೆಚ್ಚು ಹಾಲು ಕೊಟ್ಟೂ ಹೊರೆಯಾಗದ ಸಿಂಧಿ, ದೇವಣಿ ಹಸುಗಳನ್ನು ಗಮನಿಸಿ, ಈ ತಳಿಗಳೆಲ್ಲ ನಮ್ಮ ಆರ್ಥಿಕತೆಗೆ, ಅನುಕೂಲಕ್ಕೆ ತಕ್ಕಂತೆ ನೂರಾರು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಅಬಿವೃದ್ಧಿಯಾಗಿದ್ದವು.

ಇದೊಂದು ಉದಾಹರಣೆ ಮಾತ್ರ. ಹೀಗೆ ನೋಡುತ್ತಾ ಹೋದಲ್ಲಿ ನಮ್ಮ ಪಾರಂಪರಿಕ ಜ್ಞಾನದ ಅದ್ಭುತ ಸಂಗತಿಗಳು ನಮ್ಮ ಆಹಾರ, ವಸ್ತ್ರ, ಔಷಧ ಹೀಗೇ ಅನೇಕ ವಿಷಯಗಳಲ್ಲಿ ದೊರೆಯುತ್ತವೆ.

(ಮುಗಿಯಿತು.)